ಶನಿವಾರ, ಮಾರ್ಚ್ 27, 2010

ಧ್ಯಾನದ ಅಭ್ಯಾಸವಿರುವವರ ಜವಾಬ್ದಾರಿ ದ್ವಿಗುಣವಾಗುತ್ತದೆ

ಬೆಂಗಳೂರು ಆಶ್ರಮ, ಮಾರ್ಚ್ ೨೭ ( ಶುಕ್ರವಾರ ) ಸಂಜೆ ೮:೧೫

" ಪ್ರತಿಯೊಬ್ಬರೂ ಜೀವನದಲ್ಲಿ ಸಂತೋಷದಿಂದಿರಲು ಬಯಸುತ್ತಾರೆ. ಆದರೆ ಸಾಮನ್ಯತಃ ದು:ಖಿಗಳಾಗಿರುತ್ತಾರೆ " ಎಂದು ಗುರೂಜಿಯವರು ಆಶ್ರಮದ ಸತ್ಸಂಗದಲ್ಲಿ ನೆರೆದಿದ್ದ ೫೦೦೦ ಜನರನ್ನು ಉದ್ದೇಶಿಸಿ ಹೇಳಿದರು. ದೇಶದ ಬಹುಭಾಗದಲ್ಲಿ ಹೊಸವರ್ಷದ ದಿನವನ್ನಾಗಿ ಆಚರಿಸಿದ ಈ ದಿನದಂದು ಆಶ್ರಮದಲ್ಲಿ ವಿಶೇಷ ಸತ್ಸಂಗವು ಬಯಲು ರಂಗಮಂದಿರದಲ್ಲಿ ನಡೆಯಿತು.

ನಮ್ಮ ದು:ಖಕ್ಕೆ ಕಾರಣವಾಗುವ ಮೂರು ಆಯಾಮಗಳು
೧. ಗೊಂದಲ
೨. ಭಯ
೩. ಬಡತನ
ಇವುಗಳನ್ನು ತೊಡೆದು ಹಾಕುವುದು ಹೇಗೆ?
ನಿಸ್ವಾರ್ಥ ಮನೋಭಾವವು ಗೊಂದಲವನ್ನು ನಿವಾರಿಸುತ್ತದೆ.
ವಿರಕ್ತಿಯು (ನಿರ್ಮೋಹ) ಭಯವನ್ನು ಅಳಿಸಿಹಾಕುತ್ತದೆ
ಲೋಭದಿಂದ ನಿವೃತ್ತಿಹೊಂದಿದರೆ ಬಡತನ ದೂರವಗುತ್ತದೆ.

ನಮ್ಮ ಭಾವನೆಗಳು ತೀವ್ರವಾದಷ್ಟು ಈ ಸವಾಲುಗಳನ್ನು ಶೀಘ್ರವಾಗಿ ಪರಿಹರಿಸಬಹುದು.
ಇಂದು ಹೊಸವರ್ಷ ಪ್ರಾರಂಭವಾಗಿದೆ, ಪ್ರತಿ ಹೊಸವರ್ಷಕ್ಕೂ ಒಂದೊಂದು ಹೊಸ ಹೆಸರು. ಈ ವರ್ಷದ ಹೆಸರು ವಿರೋಧಿ - ಸಂಘರ್ಷಗಳ ವರ್ಷ.

ಸಾಧಕರು ಮತ್ತು ಜ್ಞಾನಾರ್ಥಿಗಳು ಪರಸ್ಪರ ವಿರೋಧವಾಗಿರುವ ಶಕ್ತಿಗಳನ್ನು ಶಾಂತಗೊಳಿಸಬೇಕು. ದುರ್ಜನರು ಸಂಘರ್ಷಗಳನ್ನು ಇನ್ನೂ ಹೆಚ್ಚು ಮಾಡುತ್ತಾರೆ, ಸಜ್ಜನರು ಅವುಗಳನ್ನು ಶಮನಗೊಳಿಸುತ್ತಾರೆ.  ಈ ವರ್ಷ ನಿಮ್ಮ ಗುಣನಡತೆಗಳನ್ನು ಪರೀಕ್ಷೆ ಮಾಡುವ ಕಾಲ.

ಈ ವಿರೊಧೀ ಭಾವನೆಗಳನ್ನು ತೊಡೆದು ಹಾಕಲು ನಾವು ಯುಕ್ತಿಯನ್ನು ಬಳಸಬೇಕು. ಕೆಲವು ಸಂಧರ್ಭಗಳಲ್ಲಿ ಸರಿಯಾಗಿ ತಿಳಿಯುವುದರಿಂದ, ಕರುಣೆಯಿಂದ ಅಥವಾ ಜ್ಞಾನದಿಂದ ಕಾರ್ಯ ಸಾಧಿಸಬಹುದು.
ವಿರೋಧ ಜೀವನಕ್ಕೆ ಅವಶ್ಯಕ. ಅನ್ಯಾಯದ ವಿರುದ್ಧ ಸೆಟೆದು ನಿಲ್ಲಲು ವಿರೋಧವೇ ಪ್ರಾರಂಭವಾಗಬೇಕು. ಸಂಘರ್ಷಗಳಿಗೂ ಜೀವನದಲ್ಲಿ ಸ್ಥಾನವಿದೆ. ನಮ್ಮ ದೇಹದಲ್ಲಿ ಕಾಯಿಲೆಗಳನ್ನು ಎದುರಿಸುವ ಬ್ಯಾಕ್ಟೀರಿಯಾಗಳಿರುವುದರಿಂದಲೇ ನಾವು ಆರೋಗ್ಯವಾಗಿರುತ್ತೇವೆ. ಅನ್ಯಾಯದ ವಿರುದ್ಧ ಹೋರಾಟವನ್ನು ದಮನ ಮಾಡಬಾರದು. ಪಿಡುಗುಗಳ ವಿರುದ್ಧ ನಾವು ಎದ್ದು ನಿಲ್ಲಬೇಕೆಂದಿದ್ದರೆ ಈ ವರ್ಷ ಅದಕ್ಕೆ ಪ್ರಶಸ್ತ ಕಾಲ.
ಭಾರತದಲ್ಲಿ ಚುನಾವಣೆಗಳು ಸಮೇಪಿಸುತ್ತಿವೆ. ಭ್ರಷ್ಟಾಚಾರವನ್ನು ವಿರೋಧಿಸಿ. ಪ್ರತಿಯೊಂದು ಅನ್ಯಾಯವನ್ನು ಎದುರಿಸಿ. "ಬೇರೆಯವರ ಮನೆಗೆ ಬೆಂಕಿ ಬಿದ್ದಿರುವುದು - ನಾನೇಕೆ ಯೋಚಿಸಲಿ? " ಎಂದು ತಿಳಿಯ ಬೇಡಿ.  ಬೆಂಕಿಯ ನಾಲಗೆ ನಿಮ್ಮ ಮನೆಗೆ ಚಾಚುವುದಕ್ಕೆ ಹೆಚ್ಚು ಸಮಯ ಬೇಡ. 

ಈ ವರ್ಷದಲ್ಲಿ ನೀವು ಹತ್ತು ತರಹದ ಸಂಘರ್ಷಗಳನ್ನು ಎದುರಿಸ ಬಹುದು. ಮೊದಲನೆಯದು ಸಂಶಯ, ನಿಮ್ಮ ಮೇಲೇ ಸಂಶಯ, ಜನರ ಮೇಲೆ, ದೇಶದ ಬಗ್ಗೆ, ಧರ್ಮದ ಬಗ್ಗೆ ಸಂಶಯ. ಅನುಮಾನಗಳು ಮೊಳೆತಾಗ, ಇದು ಅಶಾಶ್ವತ ಎಂಬ ಅರಿವು ನಿಮ್ಮಲ್ಲಿರಲಿ, ಸ್ವಲ್ಪ ಸಮಯದಲ್ಲೆ  ಸಂಶಯ ದೂರವಾಗುತ್ತದೆ.
ಎಲ್ಲ ಧ್ಯಾನಸಕ್ತರಿಗೂ ಈ ವರ್ಷ ಜವಾಬ್ದಾರಿ ದ್ವಿಗುಣವಾಗಿದೆ. ನಮ್ಮ ಮಾನಸಿಕ ಸಮತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ತೊಂದರೆಯಲ್ಲಿರುವವರಿಗೂ ಸಮತೋಲನವನ್ನು ಸಾಧಿಸಲು ಸಹಾಯ ಮಾಡಬೇಕು. ಜ್ಞಾನ, ಸೇವೆ ಹಾಗೂ  ಭಕ್ತಿಯಲ್ಲಿ ನಿರತರಾಗಲು ಇದು ಸೂಕ್ತ ಸಮಯ. " ನಾನು ಆತ್ಮಜ್ಞಾನವನ್ನು ಪಡೆದುಕೊಳ್ಳಬೇಕು"  ಎಂಬುದೇ ನಮ್ಮ ಮನಸ್ಸಿನಲ್ಲಿ ಏಳುವ ಪ್ರಥಮ ಬಯಕೆಯಾಗಿರಬೇಕು.
ದೇವರು ಸರ್ವಾಂತರ್ಯಾಮಿ. ಅವನೇ ಸತ್ಯ, ಅವನೇ ಸೌಂದರ್ಯ, ಅವನೇ ಚೈತನ್ಯ. ಅವನು ನಿಮ್ಮೊಳಗೂ, ಎಲ್ಲರ ಒಳಗೂ ನೆಲೆಸಿರುವಾಗ ನಾವು ವೈಯಕ್ತಿಕವಾಗಿ ಅವನನ್ನು ಕಾಣಲು ಏಕೆ ಸಾಧ್ಯವಾಗುವುದಿಲ್ಲ? ಇದಕ್ಕೆ ೫ ಕಾರಣಗಳಿವೆ.
೧. ಮೌಢ್ಯ
೨. ಅಹಂಕಾರ
೩. ಬಯಕೆಗಳು
೪. ಹೇವರಿಕೆ ( ಜಿಗುಪ್ಸೆ )
೫. ಭಯ
ಈ ಐದು ಕಾರಣಗಳು ಮಾಯವಾದಾಗ ನೀವು ದೈವತ್ವದ ಹಾದಿಯಲ್ಲಿ  ಮುನ್ನಡೆಯುತ್ತೀರಿ. ಈ ಹೊಸವರ್ಷದಂದು ಮೌಢ್ಯತೆ ಕಡಿಮೆಯಾಗಿದೆಯೇ? ಎಂದು ಯೋಚಿಸಿ. ಮೊತ್ತ ಮೊದಲು ಭಾಗ - ೧ ಶಿಬಿರದ ನಂತರದ ಉನ್ನತ ಧ್ಯಾನ ಶಿಬಿರದ ಬಗ್ಗೆ ಯೊಚಿಸಿ.
ಮೌಢ್ಯತೆ ಕಡಿಮೆಯಾಗಿದೆಯೇ?
ನೀವು ಮೊದಲಿಗಿಂತ ಹೆಚ್ಚು ಸಹಜವಾಗಿ ವರ್ತಿಸುತ್ತಿದ್ದೀರಾ?
ನಿಮಗೆ ಅವಮಾನಗಳನ್ನು  ಸಹಿಸಿಕೊಳ್ಳುವುದು ಸಾಧ್ಯವಾಗುತ್ತಿದೆಯೇ?
ಬೇರೆಯವರು ನಿಮ್ಮೊಂದಿಗೆ ಅಸಮಧಾನಗೊಂಡಾಗಲೂ ನಿಮಗೆ ಮುಗುಳ್ನಗೆ ಹೊಂದಲು ಸಾಧ್ಯವಿದೆಯೇ?
ನಿಮ್ಮ ಭಯ ಕಡಿಮೆಯಗಿದೆಯೇ?

ಉತ್ತರ ಇಲ್ಲವೆಂದಾದಲ್ಲಿ ಇನ್ನು ಹೆಚ್ಚು ಧ್ಯಾನಮಾಡಿ. ಈ ಎಲ್ಲ ಕಾರಣಗಳು ಕ್ಷೀಣಿಸುವುದನ್ನು ಗಮನಿಸಬಹುದು. ಧ್ಯಾನ, ಪ್ರಾಣಾಯಾಮ, ಸುದರ್ಶನ ಕ್ರಿಯೆ, ಪದ್ಮ ಸಾಧನಾ ಮತ್ತು ಸೇವೆ ಈ ಕಾರಣಗಳನ್ನು ಕಡಿಮೆ ಮಾಡಿ ನಿಮ್ಮನ್ನು ಜ್ಞಾನ ಮಾರ್ಗದಲ್ಲಿ ಮುನ್ನಡೆಸುತ್ತವೆ. ದೇವರು ಮತ್ತು ಸಾಮನ್ಯ ಜೀವಜಂತುಗಳ ನಡುವೆ ಇರುವ ವ್ಯತ್ಯಾಸವೇನೆಂದರೆ ದೇವರಲ್ಲಿ ಈ ಐದು ಕಾರಣಗಳಿರುವುದಿಲ್ಲ. ಜ್ಞಾನಿಗಳಲ್ಲಿ ಇವು ಅಲ್ಪ ಪ್ರಮಾಣದಲ್ಲಿ ಉಳಿದುಕೊಂಡಿದ್ದರೆ ಮೂಢರಲ್ಲಿ ಇವೇ ಪ್ರಧಾನವಾಗಿರುತ್ತವೆ.

ಪ್ರತಿ ಹೊಸ ವರ್ಷದಂದೂ ಈ ಐದು ಆಯಾಮಗಳು ಕಡಿಮೆಯಾಗಿದೆಯೇ ಎಂದು ಗಮನಿಸಿ ನೋಡಿ.ಖಂಡಿತವಾಗಿಯೂ ನಿಮ್ಮಲ್ಲಿ ಪ್ರಗತಿಯುಂಟಾಗಿರುವುದನ್ನು ನೇವು ಗಮನಿಸುತ್ತೀರಿ.