ಮಂಗಳವಾರ, ಮಾರ್ಚ್ 30, 2010

ಬೆಂಗಳೂರು ಆಶ್ರಮ, ಮಾರ್ಚ್ ೩೦ (ಸೋಮವಾರ) ರಾತ್ರಿ ೯.೪೫:

ರಾತ್ರಿ ೯ ಗಂಟೆಯವರೆಗೂ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದ ಗುರೂಜಿಯವರು ಮಾತುಕೊಟ್ಟಂತೆ ರಾತ್ರಿ ೯.೧೨ಕ್ಕೆ ಸತ್ಸಂಗಕ್ಕೆ ಆಗಮಿಸಿದರು. ಶ್ರೀ ಶ್ರೀಯವರಿಗಾಗಿ ಕಾತರದಿಂದ ಕಾಯುತ್ತಿದ್ದ ನೂರಾರು ಜನರಿಗೆ ಅಚ್ಚರಿ, ಆನಂದಗಳೆರಡೂ ಏಕಕಾಲದಲ್ಲಿ ಉಂಟಾದವು.

ಕಿವಿಗಡಚಿಕ್ಕುವ ಚಪ್ಪಾಳೆಯ ನಡುವೆ ಗುರೂಜಿಯವರು "ಈಗ ಪ್ರಚಲಿತವಿರುವ ಒಂಭತ್ತು ದಿನಗಳನ್ನು ನವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನಗಳನ್ನು ಜಗನ್ಮಾತೆಗಾಗಿ ಮೀಸಲಿರಿಸಲಾಗಿದೆ. ಇಂದು ನಾಲ್ಕನೆಯ ದಿನ. ರಾಮ ನವಮಿಯವರೆಗಿನ ಒಂಭತ್ತು ದಿನಗಳು ತುಂಬ ಶುಭಕರವಾದ ಕಾಲ. ರಾಮ ನವಮಿಯು ಶ್ರೀರಾಮನು ಹುಟ್ಟಿದ ದಿನ. ನಾವು ಆಶ್ರಮದಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬರುವ ಎರಡನೇ ನವರಾತ್ರಿಯನ್ನು ಆಚರಿಸುತ್ತೇವೆ. ಈ ಮೊದಲನೆ ನವರಾತ್ರಿಯು ವಸಂತಾಗಮನವನ್ನು ಸೂಚಿಸುತ್ತದೆ" ಎಂದು ಹೇಳಿದರು.
ನಂತರ ಗುರೂಜಿಯವರು ಹುಟ್ಟು ಹಬ್ಬ ಹಾಗೂ ವಾರ್ಷಿಕೋತ್ಸವಗಳ ಬಗೆಗೆ ವಿಚಾರಿಸಿದರು. ಆಶ್ರಮದ ಸತ್ಸಂಗದಲ್ಲಿ ಆ ದಿನದ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇರುವ ಭಕ್ತರನ್ನು ಆಶೀರ್ವದಿಸುವ ವಾಡಿಕೆಯನ್ನು ಶ್ರೀ ಶ್ರೀಯವರು ನಡೆಸಿಕೊಂಡು ಬಂದಿದ್ದಾರೆ.

ಐದು ವರ್ಷದ ಬಾಲಕಿಯೊಬ್ಬಳು ಹೂಗಳನ್ನು ಬೊಗಸೆಯಲ್ಲಿ ತುಂಬಿಕೊಂಡು ವೇದಿಕೆಯ ಮೇಲೆ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಿ ಬಂದಳು. "ಇಂದು ನಿನ್ನ ಹುಟ್ಟುಹಬ್ಬವೇನಮ್ಮ?" ಎಂದು ಪ್ರೀತಿಯಿಂದ ಮಾತನಾಡಿಸಿ ಹೂಗಳನ್ನು ಸ್ವೀಕರಿಸಿ "ನಿನಗೂ ಒಂದು ಹಾರ ಬೇಕಲ್ಲವಾ" ಎನ್ನುತ್ತಾ ಆಕೆಯ ಕೊರಳಿಗೆ ಹಾರತೊಡಿಸಿದಾಗ ಪುಟ್ಟ ಬಾಲಕಿ ಪುಳಕಿತಳಾದಳು.

ಗುರೂಜಿಯವರ ಆಗಮನದ ಮೊದಲು ಸೀಮೆಸುಣ್ಣದ ಪುಡಿ ಮತ್ತು ಸಂಗೀತದ ಒಂದು ಪ್ರಯೋಗವನ್ನು ಮಾಡಿ ತೋರಿಸಲಾಗಿತ್ತು. ಹಿನ್ನಲೆಯಲ್ಲಿ ವಿವಿಧ ರೀತಿಯ ಸಂಗೀತವನ್ನು ನುಡಿಸುತ್ತಿದ್ದಂತೆ ಸೀಮೆಸುಣ್ಣದ ಪುಡಿಗಳು ಸುಂದರನಾದ ವಿನ್ಯಾಸದಲ್ಲಿ ಜೋಡಿಸಿಕೊಳ್ಳುತ್ತವೆ. ಈ ಪ್ರಯೋಗದ ಕುರಿತು ಶ್ರೀ ಶ್ರೀಯವರು ನಾಲ್ಕು ದಿನಗಳ ಹಿಂದೆಯೇ ವಿವರಿಸಿದ್ದರು. ಅಂದು ಈ ವಿಶಯವನ್ನು ಪ್ರಸ್ತಾಪಿಸುತ್ತಾ ಇದೇ ರೀತಿ ಸಂಗೀತವು ದೇಹದ ಅಂಗಾಂಗಗಳ ಮೇಲೆಯೂ ಪ್ರಭಾವ ಬೀರುತ್ತದೆ. ಕಣ ಕಣಗಳ ನದುವಣ ಸಾಮರಸ್ಯವು ನಾದದಿಂದ ಜನಿಸುತ್ತದೆ. ಅದಕ್ಕಾಗಿಯೇ ಸತ್ಸಂಗಕ್ಕೆ ಅಷ್ಟು ಮಹತ್ವವಿದೆ. ಇದು ನಿಮ್ಮ ದೇಹದ ಕಣ ಕಣಗಳನ್ನೂ ಬದಲಾಯಿಸಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡುತ್ತದೆ ಎಂದರು.

ಏ ಮಾತುಗಳ ಪ್ರಾಯೋಗಿಕ ಅನುಭವವೆಂಬಂತೆ ಅಂದು ಸೇರಿದ ೭೫೦ಕ್ಕೂ ಹೆಚ್ಚು ಜನರು ಹಾಡಿ ಕುಣಿದು, ಧ್ಯಾನ ಮಾಡಿ ಸಂಜೆಯ ಸತ್ಸಂಗದ ಆನಂದವನ್ನು ಪಡೆದರು. ಅವರ ದೇಹದ ಕಣ ಕಣಗಳೂ ಆನಂದವನ್ನು ಅನುಭವಿಸಿದವು.