ಭಾನುವಾರ, ಏಪ್ರಿಲ್ 29, 2012

ಆಧ್ಯಾತ್ಮದ ಮೂಲಕ ನಿಮ್ಮನ್ನು ನೀವು ಅರಿಯಿರಿ


ನಾರ್ವೆ


ನೋಡಿ ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ, ನಿಮ್ಮನ್ನು ನೀವೇ ತುಂಬಾ ತೂಗಿ ನೋಡಬೇಡಿ. ನಮ್ಮಲ್ಲಿ ಈ ಪ್ರವೃತ್ತಿಯಿದೆ, ನಾವು ನಮ್ಮನ್ನೇ ತುಂಬಾ ತೂಗಿ ನೋಡುತ್ತೇವೆ  ಅಥವಾ ಇತರರನ್ನು ತೂಗಿ ನೋಡುತ್ತೇವೆ. ಒಂದೋ ನೀವು ನಿಮ್ಮನ್ನೇ ದೂಷಿಸಲು ತೊಡಗುತ್ತೀರಿ, ಅಥವಾ ಬೇರೆ ಯಾರನ್ನಾದರೂ ದೂಷಿಸುತ್ತೀರಿ. ಒಂದೋ ನೀವು ಸರಿಯಿಲ್ಲವೆಂದು ಅಂದುಕೊಳ್ಳುತ್ತೀರಿ, ಅಥವಾ ಬೇರೆ ಯಾರದರೂ ಸರಿಯಿಲ್ಲವೆಂದು ಅಂದುಕೊಳ್ಳುತ್ತೀರಿ. ನೀವು ಎಚ್ಚೆತ್ತುಕೊಳ್ಳಬೇಕು ಮತ್ತು ತೂಗಿ ನೋಡುವುದನ್ನು ನಿಲ್ಲಿಸಬೇಕು.
ನಿಮ್ಮ ಮೇಲೇ ನೀವೇ ತುಂಬಾ ಕಠಿಣವಾಗಿ ವರ್ತಿಸಬೇಡಿ. ನೀವು ಆಗುಹೋಗುಗಳ ಒಂದು ಭಾಗ. ಮರಗಳಿರುವಂತೆ, ನದಿಗಳಿರುವಂತೆ, ಪಕ್ಷಿಗಳಿರುವಂತೆ ನೀವು ಕೂಡಾ ಇಲ್ಲಿದ್ದೀರಿ. ಹಲವಾರು ಪಕ್ಷಿಗಳು ಹುಟ್ಟುತ್ತಿವೆ, ಹಲವಾರು ಪಕ್ಷಿಗಳು ಸಾಯತ್ತಿವೆ, ಅಲ್ಲವೇ? ಹಲವಾರು ಮರಗಳು ಮೇಲೇಳುತ್ತವೆ ಮತ್ತು ಅವುಗಳೆಲ್ಲಾ ಮಾಯವಾಗುತ್ತವೆ. ಈ ರೀತಿಯಲ್ಲಿ, ಹಲವಾರು ಜನರು, ಹಲವಾರು ಶರೀರಗಳು ಬಂದಿವೆ ಮತ್ತು ಅವುಗಳೆಲ್ಲಾ ಮಾಯವಾಗುತ್ತವೆ. ನಂತರ ಹೊಸ ಜನರು ಬರುತ್ತಾರೆ ಮತ್ತು ಅವರು ಮಾಯವಾಗುತ್ತಾರೆ.
ಈ ಭೂಮಿಯು ಕೋಟ್ಯಾಂತರ ವರ್ಷಗಳಿಂದ ಇದೆ. ನಿಮ್ಮ ಜೀವನವನ್ನು ಒಂದು ದೊಡ್ಡ ಹಿನ್ನೆಲೆಗೆ ಹೋಲಿಸಿ ನೋಡಿ, ಆಗ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸುವಿರಿ. ಆಧ್ಯಾತ್ಮಿಕ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸಬೇಕು. ಯಾಕೆಂದರೆ, ನೀವು ಯಾರನ್ನು ದೂಷಿಸುತ್ತೀರೋ ಅವರೊಂದಿಗಿರಲು ನೀವು ಇಷ್ಟಪಡುತ್ತೀರಾ? ನಿಮಗೆ ಯಾರ ಬಗ್ಗೆ ಅಸಮಾಧಾನವಿದೆಯೋ ಅವರೊಂದಿಗಿರಲು ನೀವು ಇಷ್ಟಪಡುತ್ತೀರಾ? ಇಲ್ಲ! ಆದುದರಿಂದ, ನೀವು ನಿಮ್ಮನ್ನೇ ದೂಷಿಸಿಕೊಂಡರೆ, ನಿಮಗೆ ನಿಮ್ಮೊಂದಿಗಿರಲು ಸಾಧ್ಯವಿಲ್ಲ. ಆಧ್ಯಾತ್ಮವೆಂದರೆ, ನಿಮ್ಮೊಂದಿಗೆ ನಿಮ್ಮದೇ ಭೇಟಿ. ಆದುದರಿಂದ ಆಧ್ಯಾತ್ಮಿಕ ಪಯಣ ಅಥವಾ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನೀವು ನಿಮ್ಮನ್ನೇ ದೂಷಿಸುವುದನ್ನು ನಿಲ್ಲಿಸುವುದು. ಈಗ, "ಓಹ್! ಅದರರ್ಥ ನಾನೀಗ ಇತರರನ್ನು ದೂಷಿಸಬಹುದು" ಎಂದು ಹೇಳಬೇಡಿ. ಇಲ್ಲ! ಪ್ರತಿ ಸಲವೂ ನೀವು ಯಾರನ್ನಾದರೂ ದೂಷಿಸಿದಾಗ, ನೀವು ಅವರನ್ನು ಯಾಕೆ ದೂಷಿಸಿದಿರೆಂದು ಒಂದು ವಿಶಾಲ ದೃಷ್ಟಿಕೋನದಿಂದ ನೋಡಿದಾಗ, ಅದು ತಪ್ಪೆಂದು ಮತ್ತು ಅದು ನಿಷ್ಪ್ರಯೋಜಕವಾದುದೆಂದು ನಿಮಗೆ ತಿಳಿಯುತ್ತದೆ. ಈಗ, ನಿಮ್ಮ ನಿರ್ಣಯಗಳು ತಪ್ಪೆಂಬುದು ನಿಮಗೆ ತಿಳಿದಾಗ, ಕೂಡಲೇ ನೀವು ನಿಮ್ಮನ್ನೇ ದೂಷಿಸಲು ತೊಡಗಬಹುದು. ಆದುದರಿಂದ, ಇತರರನ್ನು ದೂಷಿಸಬೇಡಿ ಎಂದು ನಾನು ನಿಮಗೆ ಹೇಳುವುದು. ಯಾಕೆಂದರೆ, ನೀವು ಇತರರನ್ನು ದೂಷಿಸಿದರೆ, ಅದು ನಿಮ್ಮ ಮೇಲೆ ತಿರುಗಿ ಬೀಳಲಿದೆ. ನೀವು ಯಾರನ್ನೂ ದೂಷಿಸಬಾರದು. ಈ ಇಡೀ ೫೬ ವರ್ಷಗಳಲ್ಲಿ ನಾನು ಯಾರಿಗೂ ಒಂದೇ ಒಂದು ಕೆಟ್ಟ ಶಬ್ದವನ್ನು ಹೇಳಿಲ್ಲ. ನನ್ನ ಬಾಯಿಯಿಂದ ಹೊರಬಂದ ಅತೀ ಕೆಟ್ಟ ಶಬ್ದವೆಂದರೆ "ಮೂರ್ಖ", ಇದಕ್ಕಿಂತ ಹೆಚ್ಚಿನದೇನೂ ಅಲ್ಲ. ನಾನು ಯಾವತ್ತೂ ಯಾರನ್ನೂ ದೂಷಿಸಿಲ್ಲ ಅಥವಾ ಯಾವತ್ತೂ ಯಾವುದೇ ಕೆಟ್ಟ ಶಬ್ದಗಳನ್ನು ಹೇಳಿಲ್ಲ. ಅದು ನನ್ನಿಂದ ಬರಲೇ ಇಲ್ಲ. ಹಾಗಾಗಲು ನಾನೇನೂ ಮಾಡಿಲ್ಲ; ಇದು ಪ್ರಾರಂಭದಿಂದಲೇ ಸ್ವಾಭಾವಿಕವಾಗಿ ಹಾಗಿತ್ತು. ನನಗೆ ಯಾರನ್ನೂ ನಿಂದಿಸಲು ಆಗುತ್ತಿರಲಿಲ್ಲ; ಮಾತಿನಿಂದ  ಅಥವಾ ಇತರ ಯಾವುದೇ ರೀತಿಯಲ್ಲಿ. ನೀವು ಇದರ ಬಗ್ಗೆ ಗಮನ ಕೊಟ್ಟಾಗ, ನೀವು ಕೆಟ್ಟ ಪದಗಳನ್ನುಪಯೋಗಿಸುವುದನ್ನು ನಿಲ್ಲಿಸಿದಾಗ, ನಿಮ್ಮ ಮಾತಿಗೆ ಆಶೀರ್ವದಿಸುವ ಶಕ್ತಿ ಸಿಗುತ್ತದೆ ಮತ್ತು ನಿಮ್ಮ ಆಶೀರ್ವಾದಗಳು ಕೆಲಸ ಮಾಡುತ್ತವೆ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ? ಆದುದರಿಂದ, ನಿಮ್ಮನ್ನು ನೀವೇ ದೂಷಿಸುವುದನ್ನು ನಿಲ್ಲಿಸಿ ಮತ್ತು ಇತರರನ್ನು ದೂಷಿಸುವುದನ್ನು ನಿಲ್ಲಿಸಿ. ಎಲ್ಲವೂ ಅವುಗಳಿರುವ ರೀತಿಯಲ್ಲೇ ಇವೆ, ಕೇವಲ ಮುಂದೆ ಸಾಗಿ ಮತ್ತು ಅಷ್ಟೆ.
ಕೆಲವೊಮ್ಮೆ ಜನರನ್ನುತ್ತಾರೆ, "ಓಹ್! ಇವನೊಬ್ಬ ಮೋಸಗಾರ. ಅವನು ಪ್ರಾಮಾಣಿಕನಲ್ಲ". ಆದರೆ, ಯಾವುದು ಪ್ರಾಮಾಣಿಕತೆ ಯಾವುದು ಮೋಸ ಎಂದು ಹೇಳಲು ಒಬ್ಬರಲ್ಲಿ ಏನಾದರೂ ಮಾನದಂಡಗಳಿರಬೇಕು. ಹಲವು ಸಲ, ಒಬ್ಬರ ಬಗ್ಗೆ ನಿರ್ಣಯಿಸಲು ನಿಮ್ಮಲ್ಲಿ ಯಾವುದೇ ಮಾನದಂಡ ಕೂಡಾ ಇರುವುದಿಲ್ಲ, ನೀವು ಸುಮ್ಮನೇ ಒಬ್ಬರನ್ನು ದೂಷಿಸುತ್ತೀರಿ, "ಓಹ್! ಅವನೊಬ್ಬ ಮೋಸಗಾರ" ಮತ್ತು ಅಷ್ಟೆ, ಮುಗಿಯಿತು.
ಇತರರನ್ನು ಮತ್ತು ತಮ್ಮನ್ನು ತಾವೇ ದೂಷಿಸುವುದು ಹಾಗೂ ನಂತರ ಅದರ ಬಗ್ಗೆ ತಪ್ಪಿತಸ್ಥ ಅಭಿಪ್ರಾಯ ಪಡುವುದು - ಇದು ಸಮಾಜದಲ್ಲಿ ಬೆಳೆದಿರುವ ಒಂದು ಪ್ರಜ್ಞೆಯಿಲ್ಲದ ಪ್ರವೃತ್ತಿ. ಆಧ್ಯಾತ್ಮ ಪಯಣವಿರುವುದು ಇದನ್ನು ತೆಗೆದುಹಾಕಿ ಇದಕ್ಕೆ ವ್ಯತಿರಿಕ್ತವಾದುದನ್ನು ಮಾಡಲು. ಇದು ಅಷ್ಟೊಂದು ಸೂಕ್ಷ್ಮ ಸಂಗತಿ. ಇದರರ್ಥ ನೀವು ಮಾಡಿದ ತಪ್ಪುಗಳನ್ನೆಲ್ಲಾ ನೀವು ಸರಿಯೆಂದು ಸಾಧಿಸಬಹುದೆಂದಲ್ಲ. ನೀವು ಏನಾದರೂ ತಪ್ಪು ಮಾಡಿದಾಗ, ನೀವು, "ಓಹ್, ನಾನು ಆಧ್ಯಾತ್ಮಿಕ ಪಥದಲ್ಲಿದ್ದೇನೆ, ನಾನು ನನ್ನ ತಪ್ಪನ್ನು ಸ್ವೀಕರಿಸಲು ಸಾಧ್ಯವಿಲ್ಲ ಮತ್ತು ನಾನು ನನ್ನನ್ನೇ ದೂಷಿಸಲು ಸಾಧ್ಯವಿಲ್ಲ. ಆದುದರಿಂದ ನಾನು ಮಾಡಿದ್ದೆಲ್ಲಾ ಸರಿ" ಎಂದು ಹೇಳುತ್ತೀರಿ, ಇಲ್ಲ! ಅದು ಅಷ್ಟೊಂದು ಸೂಕ್ಷ್ಮ ಸಮತೋಲನ. ಅದು ನಿಮ್ಮ ತಪ್ಪನ್ನು ಸರಿಯೆಂದು ಸಾಧಿಸುವುದಲ್ಲ ಆದರೆ ನಿಮ್ಮ ತಪ್ಪನ್ನು ಗುರುತಿಸಿ, ಅದೇ ಸಮಯದಲ್ಲಿ  ನಿಮ್ಮನ್ನು ನೀವೇ ದೂಷಿಸದಿರುವುದು.
ನೀವು ನಿಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳನ್ನು ಗುರುತಿಸದಿದ್ದರೆ ನಿಮ್ಮಲ್ಲಿ ಸುಧಾರಣೆಯಾಗಲು ಸಾಧ್ಯವಿಲ್ಲ. ಅಲ್ಲಿಗೆ ಕಥೆ ಮುಗಿಯಿತು. ಅದೇ ಸಮಯದಲ್ಲಿ, ನೀವು ನಿಮ್ಮ ತಪ್ಪನ್ನು ಗುರುತಿಸಿ, ತುಂಬಾ ತಪ್ಪಿತಸ್ಥ ಅಭಿಪ್ರಾಯ ಪಟ್ಟು, ನಿಮ್ಮನ್ನು ನೀವೇ ದೂಷಿಸುತ್ತಾ ಇದ್ದರೆ, ಆಗ ಕೂಡಾ ಅದೊಂದು ನಿರಾಶಾದಾಯಕ ವಿಷಯವಾಗುತ್ತದೆ. ಆದುದರಿಂದ ನಿಮ್ಮಲ್ಲಿ ಆ ಬಹಳ ಸೂಕ್ಷ್ಮ ಸಮತೋಲನವಿರಬೇಕಾದ ಅಗತ್ಯವಿದೆ. ಬ್ಲೇಡಿನ ಮೊನೆಯಲ್ಲಿ ನಡೆಯಬೇಕು, ಈ ಬದಿಯೂ ಅಲ್ಲ ಆ ಬದಿಯೂ ಅಲ್ಲ.
ಪ್ರಶ್ನೆ: ನಾವು ಮುಖ್ಯವಲ್ಲದಿದ್ದರೆ, ಈ ಶಿಬಿರದಲ್ಲಿ ನಮಗಾಗಿ ಇಷ್ಟೊಂದು ಹಣ, ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಉಪಯೋಗಿಸುತ್ತಿರುವುದು ಯಾಕೆ? ನಮ್ಮಲ್ಲಿ ಪ್ರತಿಯೊಬ್ಬರೂ ಲೆಕ್ಕಕ್ಕಿಲ್ಲದಿದ್ದರೆ, ನಾವು ಆಧ್ಯಾತ್ಮಿಕರೆಲ್ಲಾ ಯಾಕಾಗಬೇಕು? ಇತರರು ಲೆಕ್ಕಕ್ಕಿಲ್ಲದಿದ್ದರೆ, ನಾವು ಒಳ್ಳೆಯವರಾಗಿರುವ ಮೂಲಕ ಯಾರಿಗೆ ಸಹಾಯ ಮಾಡುತ್ತಿದ್ದೇವೆ?
ಶ್ರೀ ಶ್ರೀ ರವಿಶಂಕರ್:
ನಿನಗೆ ಈ ಪ್ರಶ್ನೆಗೆ ಉತ್ತರ ಬೇಕಾ? ಅದೂ ಲೆಕ್ಕಕ್ಕಿಲ್ಲ! ನೀನು ಈ ಪ್ರಶ್ನೆಯ ಬಗ್ಗೆ ಯಾಕೆ ತಲೆಕೆಡಿಸಿಕೊಂಡಿದ್ದೀಯಾ? ಅದು ಒಂದು ವಿಷಯವಲ್ಲ!
ಕೇಳು; ಅಸ್ಥಿತ್ವದಲ್ಲಿ ಹಲವಾರು ಮಟ್ಟಗಳಿವೆ, ಆದರೆ ಜ್ಞಾನದ ಎರಡು ಮಟ್ಟಗಳಿವೆ. ಒಂದು ಅನ್ವಯಿಸುವ ಜ್ಞಾನ ಮತ್ತು ಇನ್ನೊಂದು ಶುದ್ಧ ಜ್ಞಾನ. ಶುದ್ಧ ವಿಜ್ಞಾನ (ಪ್ಯೂರ್ ಸಯನ್ಸ್) ಮತ್ತು ಅನ್ವಯಿಸುವ ವಿಜ್ಞಾನ (ಅಪ್ಲೈಡ್ ಸಯನ್ಸ್). ಶುದ್ಧ ವಿಜ್ಞಾನವೆಂದರೇನು? ಈ ಕೋಣೆಯಲ್ಲಿ ಎಲ್ಲವೂ ಮರದಿಂದ ಮಾಡಲ್ಪಟ್ಟಿದೆ. ಸೋಫವು ಮರ, ಮೇಜು ಮರ ಮತ್ತು ಬಾಗಿಲು ಮರವಾಗಿದೆ. ಆದುದರಿಂದ ಇದೆಲ್ಲವೂ ಮರ. ಇನ್ನೂ ಹೆಚ್ಚು ನಿಖರವಾಗಿ ಹೇಳಬೇಕಾದರೆ ಎಲ್ಲವೂ ಪರಮಾಣುಗಳು! ಏನದು? ಎಲ್ಲವೂ ಪರಮಾಣುಗಳು! ಆದುದರಿಂದ ಎಲ್ಲವೂ ಮರದಿಂದ ಮಾಡಲ್ಪಟಿವೆ ಅಥವಾ ಎಲ್ಲವೂ ಪರಮಾಣುಗಳು - ಇದು ಶುದ್ಧ ವಿಜ್ಞಾನ. ಎಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿದ್ದರೂ ಕೂಡಾ, ನೀವು ಸೋಫವನ್ನು ಬಾಗಿಲಾಗಿ ಅಥವಾ ಬಾಗಿಲನ್ನು ಸೋಫವಾಗಿ ಉಪಯೋಗಿಸಲು ಸಾಧ್ಯವಿಲ್ಲ. ನಿಮಗೆ ಅರ್ಥವಾಯಿತಾ?
ನೋಡಿ, ವಜ್ರ ಮತ್ತು ಇದ್ದಿಲುಗಳು ಒಂದೇ ವಸ್ತುವಿನಿಂದ ಮಾಡಲ್ಪಟ್ಟಿವೆ. ಅವುಗಳು ವಸ್ತುತಃ ಒಂದೇ. ಆದರೆ ಇದ್ದಿಲನ್ನು ನೀವು ನಿಮ್ಮ ಕಿವಿಗಳಲ್ಲಿ ನೇತಾಡಿಸಲು ಸಾಧ್ಯವಿಲ್ಲ ಮತ್ತು ವಜ್ರವನ್ನು ಒಲೆಯಲ್ಲಿ ಹಾಕಲು ಸಾಧ್ಯವಿಲ್ಲ, ಸರಿಯಾ?!
ಆದುದರಿಂದ, ಒಂದು ಹಂತದಲ್ಲಿ ಅವುಗಳು ಬೇರೆ ಬೇರೆ. ಅದು, ಮಂಜುಗಡ್ಡೆ ಮತ್ತು ನೀರು ಒಂದೇ ಎಂದು ಹೇಳುವಂತೆ, ಅದು ಕೇವಲ H2O. ಆದರೆ ನೀವು ನೀರಿನಿಂದ ಚಾ ತಯಾರಿಸಬಹುದು, ಮಂಜುಗಡ್ಡೆಯಿಂದ ಚಾ ತಯಾರಿಸಲು ಸಾಧ್ಯವಿಲ್ಲ. ಮಂಜುಗಡ್ಡೆಯು ನೀರಾಗಬೇಕು, ಆಮೇಲೆ ಮಾತ್ರವೇ ನೀವು ಅದರಿಂದ ಚಾ ತಯಾರಿಸಬಹುದು. ಅಲ್ಲವೇ? ಆದುದರಿಂದ ಅದು ಅನ್ವಯಿಸಿದ ಜ್ಞಾನ.
ಆದುದರಿಂದ, ಶುದ್ಧ ಜ್ಞಾನದಲ್ಲಿ, ನೀವು ಮುಖ್ಯವಲ್ಲ ಎಂದು ಹೇಳಲಾಗಿದೆ. ಯಾಕೆ? ಯಾಕೆಂದರೆ, ಅಚಾನಕ್ಕಾಗಿ ನೀವು ನಿಮ್ಮ ಜೀವನವನ್ನು ವಿಶ್ವಕ್ಕೆ ಹೋಲಿಸಿ ನೋಡುತ್ತೀರಿ. ಅದರರ್ಥ ನೀವು ತಿನ್ನಬಾರದೆಂದಲ್ಲ. ನೀವು ಮುಖ್ಯವಲ್ಲದಿದ್ದರೆ, ಮತ್ತೆ ಯಾಕೆ ಅಸ್ಥಿತ್ವದಲ್ಲಿರಬೇಕು? ಯಾಕೆ ತಿನ್ನಬೇಕು? ಯಾಕೆ ನಿದ್ರಿಸಬೇಕು? ಏನನ್ನಾದರೂ ಯಾಕೆ ಮಾಡಬೇಕು? ಸರಿಯಾ?! ನೀವು ಅದೆಲ್ಲವನ್ನೂ ಮಾಡಬೇಕು, ಮತ್ತು ಆದುದರಿಂದ ನೀವು ಶಿಬಿರದಲ್ಲಿ ಕೂಡಾ ಇರಬೇಕು. ತಿಳಿಯಿತಾ?
ಇಲ್ಲಿರುವುದರಿಂದ ಏನಾಗುತ್ತದೆ? ಮನಸ್ಸು ಶಕ್ತಿಯುತವಾಗುತ್ತದೆ, ಶರೀರ ಶಕ್ತಿಯುತವಾಗುತ್ತದೆ ಮತ್ತು ಜ್ಞಾನವು ನಿಮ್ಮಲ್ಲಿ ಮನೆಮಾಡುತ್ತದೆ. ಹಲವಾರು ಸಂಗತಿಗಳು ಆಗುತ್ತವೆ.
ಪ್ರಶ್ನೆ: ಧ್ಯಾನ ಮಾಡುವಾಗ ಮತ್ತು ವಿಶ್ರಾಂತಿ ತೆಗೆದುಕೊಳ್ಳುವಾಗ ಅಳುವುದು ಸರಿಯೇ?
ಶ್ರೀ ಶ್ರೀ ರವಿಶಂಕರ್:
ಅತ್ತರೆ ಪರವಾಗಿಲ್ಲ. ಒಂದು ಅಥವಾ ಎರಡು ಸಲ ಪರವಾಗಿಲ್ಲ ಆದರೆ ಎಲ್ಲಾ ಸಮಯದಲ್ಲೂ ಆ ಅಭ್ಯಾಸವನ್ನು ಪ್ರೋತ್ಸಾಹಿಸಬೇಡ. ವಿಶೇಷವಾಗಿ, ಎಲ್ಲರೂ ಧ್ಯಾನ ಮಾಡುತ್ತಿರುವಾಗ ಮತ್ತು ಅಲ್ಲಿ ನಿಶ್ಯಬ್ದತೆಯಿರುವಾಗ, ಆ ಸಂವೇದನೆಗಳನ್ನು ಗಮನಿಸಿ ಅವುಗಳನ್ನು ಹೋಗಲು ಬಿಡುವುದು ಒಳ್ಳೆಯದು.
ಪ್ರಶ್ನೆ: ಹಗಲು ಹೊತ್ತಿನಲ್ಲಿ ಒಂದು ಹಗುರವಾದ ನಿದ್ರೆ ಮಾಡುವುದು ಸರಿಯೇ?
ಶ್ರೀ ಶ್ರೀ ರವಿಶಂಕರ್:
ನೀವು ೪೫ ವರ್ಷ ವಯಸ್ಸನ್ನು ದಾಟಿದ್ದರೆ ಸರಿ, ಆದರೆ ಅದರ ಮೊದಲಲ್ಲ.
ಪ್ರಶ್ನೆ: ನನಗೆ ಏನೂ ಅನ್ನಿಸದೇ ಇದ್ದರೆ ಏನು?
ಶ್ರೀ ಶ್ರೀ ರವಿಶಂಕರ್:
  ನಿನಗೆ ಖಾಲಿತನ ಅನುಭವವಾಗುತ್ತಿದೆಯೇ? ಅದೂ ಏನೋ ಒಂದು! ಕೆಲವೊಮ್ಮೆ ನೀವು ಅನುಭವಿಸಲು ಬಯಸುತ್ತೀರಿ. ನೀವು ಇತರರ ಅನುಭವಗಳ ಬಗ್ಗೆ ಕೇಳುತ್ತೀರಿ ಮತ್ತು ಕುಳಿತುಕೊಂಡು ಅವುಗಳನ್ನು ಅನುಭವಿಸಲು ಬಯಸುತ್ತೀರಿ ಹಾಗೂ ಆಗಲೇ ಅದು ಆಗದಿರುವುದು. ಏನಾದರೂ ಅನುಭವಿಸಬೇಕೆಂದಿರುವ ಬಯಕೆಯನ್ನು ಬಿಟ್ಟು ಬಿಡಿ. ನೀವು ನನ್ನೊಂದಿಗಿದ್ದೀರಾ?
ನೋಡಿ, ಒಂದು ನಿರೀಕ್ಷೆ ಅಥವಾ ಅತೀ ಹೆಚ್ಚಿನ ಜಾಗರೂಕತೆಯು ನಿಮ್ಮನ್ನು ಮೆದುಳಿನ ಮುಂಭಾಗದ ಹಾಲೆಯಲ್ಲಿರಿಸುತ್ತದೆ ಮತ್ತು ನೀವು ತುಂಬಾ ಜಾಗರೂಕರಾಗಿರುತ್ತೀರಿ. ಆ ಸಮಯದಲ್ಲಿ, ನಿಮಗೆ ನಿದ್ರೆ ಮಾಡಲು ಸಾಧ್ಯವಿಲ್ಲ, ನಿಮಗೆ ಆರಾಮವಾಗಿರಲು ಸಾಧ್ಯವಿಲ್ಲ ಮತ್ತು ನಿಮಗೆ ಆಳಕ್ಕೆ ಹೋಗಿ ಏನನ್ನಾದರೂ ಅನುಭವಿಸಲು ಕೂಡಾ ಸಾಧ್ಯವಿಲ್ಲ. ಆದುದರಿಂದ ಅದು ಒಂದು ಸಾಧ್ಯತೆ.
ಎರಡನೆಯದು, ನಿಮ್ಮಲ್ಲಿ ಹಲವರು ಕೇಳಿದ್ದೀರಿ, "ನಾನು ಏನು ಮಾಡಲಿ, ಎಲ್ಲಾ ಸಮಯವೂ ನಾನು ನಿದ್ರಿಸುತ್ತೇನೆ". ನಾವು ನಮ್ಮ ವ್ಯವಸ್ಥೆಯನ್ನು, ಅದಕ್ಕೆ ಅಗತ್ಯವಿದ್ದ ನಿದ್ರೆಯಿಂದ ವಂಚಿಸಿರಬೇಕು ಮತ್ತು ಆದುದರಿಂದ ಶರೀರವು ಅದನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಸಕ್ಕರೆಯ ಅಂಶವು ಕಡಿಮೆ ಅಥವಾ ಹೆಚ್ಚಿದ್ದರೆ, ನೀವು ಆಗಾಗ್ಗೆ ನಿದ್ದೆ ಹೋಗುವಿರಿ, ಇದು ಒಂದನೆಯ ಅಂಶ. ಎರಡನೆಯದು, ಶರೀರದಲ್ಲಿ ಬೇಕಾದಷ್ಟು ಪ್ರಾಣವಿಲ್ಲದಿದ್ದರೆ, ಆಗ ಕೂಡಾ ನೀವು ನಿದ್ದೆ ಹೋಗುವಿರಿ. ಆದುದರಿಂದ ಸ್ವಲ್ಪ ಪ್ರಾಣಾಯಾಮವು ಸಹಾಯಕವಾಗಬಹುದು. ಧ್ಯಾನಕ್ಕಿಂತ ಸ್ವಲ್ಪ ಮೊದಲು ಕೆಲವು ದೀರ್ಘ ಶ್ವಾಸಗಳನ್ನು ತೆಗೆದುಕೊಳ್ಳುವುದು ಸಹಾಯವಾಗಬಹುದು ಮತ್ತು ಖಂಡಿತವಾಗಿ ಶರೀರದಲ್ಲಿರುವ ಖನಿಜಗಳು ಮತ್ತು ಸಕ್ಕರೆ ಪ್ರಮಾಣಗಳ ಬಗ್ಗೆ ಗಮನವಿರಿಸಿ. ಕೆಲವೊಮ್ಮೆ ನಿಮ್ಮಲ್ಲಿ ಅವುಗಳ ಕೊರತೆಯಿರುವಾಗಲೂ ನೀವು ಆ ಪೆಚ್ಚುತನವನ್ನು ಅನುಭವಿಸುತ್ತೀರಿ ಮತ್ತು ನಿದ್ದೆ ಹೋಗುತ್ತೀರಿ. ಇನ್ನೊಂದು ಸಾಧ್ಯತೆಯೆಂದರೆ ಶರೀರವು ತುಂಬಾ ಸುಸ್ತಾಗಿರುವುದು. ನಿಮಗೆ ಆಯಾಸವಾಗಿರುವ ಹಾಗೂ ನಿದ್ದೆ ಬರುವಂತಾಗುವ ಕೆಲವು ಸಮಯಗಳಿವೆ. ಕೆಲವು ಸಲ ನಿಮಗೆ ಆಯಾಸವಾಗಿರುತ್ತದೆ ಮತ್ತು ನಿಮಗೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ? ನಿಮಗೆ ಆಯಾಸವಾಗುತ್ತದೆ ಆದರೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಧ್ಯಾನದಲ್ಲಿ ಈ ಸಂಗತಿಗಳು ತದ್ವಿರುದ್ಧವಾಗುತ್ತವೆ ಮತ್ತು ಅದು ನೀವು ಧ್ಯಾನದ ಸಮಯದಲ್ಲಿ ಹಾಗೇ ನಿದ್ದೆ ಹೋಗಲು ಒಂದು ಕಾರಣ. ಆದರೆ ಚಿಂತಿಸಬೇಡಿ.
ಪ್ರಶ್ನೆ: ನನ್ನ ತಲೆಯು ಯಾಕೆ ಯಾವಾಗಲೂ ಹಾಡುತ್ತಿರುತ್ತದೆ?
ಶ್ರೀ ಶ್ರೀ ರವಿಶಂಕರ್:
ಯಾವಾಗಲೂ ಎಂದು ಹೇಳಬೇಡ. ಅದು ಯಾವಾಗಲೂ ಹಾಡುತ್ತಿರುತ್ತದೆಯೆಂದು ನನಗನಿಸುವುದಿಲ್ಲ. ನೀನು ನಿನ್ನ ಮೆದುಳಿನ ಆ ಭಾಗವನ್ನು ಜಾಸ್ತಿ ಉಪಯೋಗಿಸಿರಬೇಕು; ಅಂದರೆ ನಿನ್ನ ಮೆದುಳಿನ ಬಲ ಭಾಗವನ್ನು. ಆದುದರಿಂದ ನಿನಗೆ ಸಂಗೀತವು ಸಹಜವಾಗಿ ಬರುತ್ತದೆ.
ಇನ್ನೊಂದು ಪರ್ಯಾಯವೆಂದರೆ ಒಗಟುಗಳನ್ನು ಬಿಡಿಸುವುದರಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದು, ಪದಬಂಧದಂತಹದು, ಆಗ ನೀನು ಮೆದುಳಿನ ಇನ್ನೊಂದು ಭಾಗವನ್ನು ಉಪಯೋಗಿಸುತ್ತಿ. ನೀನು ಕುಳಿತುಕೊಂಡು ಸಂಖ್ಯೆಗಳನ್ನು ಎಣಿಸಬಹುದು; ಸ್ವಲ್ಪ ಲೆಕ್ಕ ಮಾಡು ಅಥವಾ ಹಣವನ್ನು ಎಣಿಸು. ಮೆದುಳಿನ ಇನ್ನೊಂದು ಭಾಗವನ್ನು ಸರಿದೂಗಿಸಬಲ್ಲ ಚಟುವಟಿಕೆಗಳನ್ನು ಮಾಡು ಅಥವಾ ಏನಾದರೂ ಓದು ಅಥವಾ ಜ್ಞಾನದ ಮಾತು ಕೇಳು. ಈಗ ನೀನು ಜ್ಞಾನದ ಮಾತನ್ನು ಕೇಳಿಸುತ್ತಿದ್ದೀಯಾ ಮತ್ತು ನಿನ್ನ ಮನಸ್ಸು ಹಾಡುತ್ತಿಲ್ಲ. ಆದುದರಿಂದ ಓದುವುದು, ಕೇಳುವುದು, ಲೆಕ್ಕ ಹಾಕುವುದು ಇವುಗಳೆಲ್ಲಾ ನಿಮಗೆ ಎಡ ಮೆದುಳನ್ನು ಕೂಡಾ ಕ್ರಿಯಾತ್ಮಕವಾಗಿಸಲು ಸಹಾಯ ಮಾಡುತ್ತವೆ.
ಪ್ರಶ್ನೆ: ನಾವೆಲ್ಲರೂ ಉಸಿರಿನೊಂದಿಗೆ ಮತ್ತು ಎಲ್ಲಾ ಜ್ಞಾನದೊಂದಿಗೆ ಹುಟ್ಟಿದ್ದೇವೆ. ಹಾಗಾದರೆ, ಎಲ್ಲರೂ ನಿಮ್ಮಂತೆ ಗುರುಗಳಲ್ಲ ಯಾಕೆ? ಜ್ಞಾನವನ್ನುಪಯೋಗಿಸಿ ನೀವು ಗುರುವಾದದ್ದು ಯಾಕೆ?
ಶ್ರೀ ಶ್ರೀ ರವಿಶಂಕರ್:
ನಿಮಗೆ ಗೊತ್ತಿದೆಯಾ, ಒಂದು ದೊಡ್ಡ ವಿನ್ಯಾಸದ ಪ್ರಕಾರ ನಾವೆಲ್ಲರೂ ಇಲ್ಲಿಗೆ ಒಂದು ದೊಡ್ಡ ಯೋಜನೆಯೊಂದಿಗೆ ಬಂದಿದ್ದೇವೆ. ಇದು ಹೇಗೆಂದರೆ - ನೀನು ಇದನ್ನು ಮಾಡು, ನೀನು ಇದನ್ನು ಮಾಡು ಮತ್ತು ನೀನು ಅದನ್ನು ಮಾಡು. ನೋಡಿ, ಈ ಕಟ್ಟಡ ಕಟ್ಟುವಾಗ, ಎಲ್ಲಾ ವಸ್ತುಗಳನ್ನು ಎಲ್ಲೋ ಇಡಲಾಗಿತ್ತು. ಆದರೆ ಆಗ ಆರ್ಕಿಟೆಕ್ಟ್ ಹೇಳಿದರು, "ಕಿಟಿಕಿಯು ಇಲ್ಲಿ ಬರುತ್ತದೆ ಮತ್ತು ಅಲ್ಲಿ ಬಾಗಿಲು ಬರುತ್ತದೆ ಮತ್ತು ಅದು ಮಾಡಾಗಲಿದೆ". ಆರ್ಕಿಟೆಕ್ಟ್ ಎಲ್ಲವನ್ನೂ ಯೋಜಿಸಿದರು ಮತ್ತು ಎಲ್ಲವನ್ನೂ ಅಲ್ಲಿ ಹಾಕಿದರು, ಸರಿಯಾ? ಅದೇ ರೀತಿಯಲ್ಲಿ, ನಮ್ಮೆಲ್ಲರ ಜೀವನವಿರುವುದು ಹಾಗೆಯೇ! ಒಂದು ದೊಡ್ಡ ಯೋಜನೆಯು ಹೇಳಿತು, "ನೀನು ಅಲ್ಲಿ ಹುಟ್ಟುತ್ತಿ ಮತ್ತು ನೀನು ಅಲ್ಲಿ ಹುಟ್ಟುತ್ತಿ ಮತ್ತು ನೀನು ಇಲ್ಲಿ ಹುಟ್ಟುತ್ತಿ". ಆದುದರಿಂದ, ನಾವೆಲ್ಲರೂ ಪ್ರಪಂಚದ ವಿವಿಧ ಭಾಗಗಳಲ್ಲಿ ಹುಟ್ಟುತ್ತೇವೆ ಮತ್ತು ಒಂದು ನಿರ್ದಿಷ್ಟ ಸಮಯದಲ್ಲಿ ನಾವೆಲ್ಲರೂ ಇಲ್ಲಿ ಜೊತೆಗೂಡುತ್ತೇವೆ.
ವಾಸ್ತವಕ್ಕೆ ಇಣುಕಿ ನೋಡುವುದು ತುಂಬಾ ಆಕರ್ಷಕವಾದುದು. ಅದು ನಾವು ಈ ಪ್ರಪಂಚದಲ್ಲಿ ಪರಿಗಣಿಸುವುದಕ್ಕಿಂತ ಎಷ್ಟೋ ಹೆಚ್ಚಿನದು. ನಾವು ಇಲ್ಲಿ ನೋಡುತ್ತಿರುವುದು ಹಿಮಗುಡ್ಡದ ಕೇವಲ ಒಂದು ತುದಿಯಷ್ಟೆ ಮತ್ತು ನಾವಂದುಕೊಳ್ಳುತ್ತೇವೆ ಇದುವೇ ಇಡಿಯ ಪ್ರಪಂಚವೆಂದು. ನಾವು, ಬಾವಿಯಲ್ಲಿ ಕುಳಿತುಕೊಂಡು ಅದನ್ನೇ ಇಡಿಯ ಸಮುದ್ರವೆಂದು ಅಂದುಕೊಳ್ಳುವ ಕಪ್ಪೆಯಂತೆ. ನಾವು ಅದನ್ನು ಬಹಳವಾಗಿ ಹೋಲುವ ಜೀವನವನ್ನು ಜೀವಿಸುತ್ತೇವೆ. ನಾವು ಎಚ್ಚೆತ್ತುಕೊಂಡು, ಪ್ರಪಂಚವು ಬಾವಿಗಿಂತಲೂ ಆಚಿನದು ಎಂಬುದನ್ನು ತಿಳಿದುಕೊಂಡರೆ, ಆಗ ಹಲವು ವಿಷಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ ಮತ್ತು ಹಲವು ವಿಷಯಗಳು ಅರ್ಥವಾಗಲು ತೊಡಗುತ್ತವೆ. ಆದುದರಿಂದ, ಸೂಕ್ಷ್ಮ ಪ್ರಪಂಚದಲ್ಲಿ ಎಲ್ಲಾ ಯೋಜನೆಗಳು ಈಗಾಗಲೇ ಮಾಡಿಯಾಗಿದೆ. ಯಾರಾದರೊಬ್ಬರು ವೈದ್ಯರಾಗಬೇಕಿದ್ದಲ್ಲಿ, ಅದು ಆಗಲೇ ಆಗಿದೆ. ಈಗ ನೀವು ನನ್ನನ್ನು ಕೇಳಬಹುದು, "ಹಾಗಾದರೆ ಮುಕ್ತ ಆಯ್ಕೆಯೇ ಇಲ್ಲವೇ?". ಹೌದು, ಇದೆ! ಜೀವನವೆಂಬುದು ಒಂದು ಸ್ಥಿರವಾದ ವಿಧಿ ಮತ್ತು ಸ್ವಲ್ಪ ಮುಕ್ತ ಆಯ್ಕೆಗಳ ಒಂದು ಸಂಯೋಗ.
ಪ್ರಶ್ನೆ: ನನ್ನ ಸಹೋದರಿಯು ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಅವಳು ನಮ್ಮ ಶಕ್ತಿಯನ್ನು ಇಳಿಸಿ ನಮ್ಮನ್ನು ಕಂಗೆಡಿಸುತ್ತಾಳೆ. ನನಗೆ ಸಾಧ್ಯವಾದಷ್ಟೂ ನಾನು ಅವಳಿಂದ ದೂರವಿರುತ್ತೇನೆ. ಆದರೆ ಅವಳು ಬಹಳ ಏಕಾಂಗಿ. ಇತರರ ಕಡೆಗಿರುವ ಜವಾಬ್ದಾರಿ ಮತ್ತು ತನ್ನದೇ ಕಡೆಗಿರುವ ಜವಾಬ್ದಾರಿಯ ಮಧ್ಯೆ ಸಮತೋಲನವನ್ನು ಕಂಡುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಒಬ್ಬರು ರೋಗಿಗಳೆಂದು ನಿಮಗೆ ತಿಳಿದಿರುವಾಗ ನೀವು ಅವರು ಹೇಳುವುದನ್ನು ಕೇಳಬೇಡಿ. ಕಿವಿಗೆ ಬೆಣೆ (ಪ್ಲಗ್) ಹಾಕಿಕೊಂಡು ಅವರೊಂದಿಗಿರಿ. ನೀವು ಕಂಗೆಡುವುದು ಯಾಕೆಂದರೆ, ನೀವು ಅವರ ಮಾತುಗಳನ್ನು ಮತ್ತು ವರ್ತನೆಗಳನ್ನು ನಿಮ್ಮ ತಲೆಯೊಳಕ್ಕೆ ತೆಗೆದುಕೊಳ್ಳುತ್ತೀರಿ. ನೀವು ಇತರರಿಂದ ವಿಷಯಗಳನ್ನು ಹೀರಿಕೊಳ್ಳದಂತೆ ನಿಮ್ಮ ತಲೆಯನ್ನು ಮೂರ್ಖ-ನಿರೋಧಕವನ್ನಾಗಿಸಬೇಕು ಹಾಗೂ ಸಾಧ್ಯವಾದಾಗಲೆಲ್ಲಾ ಅವರಿಗೆ ಸಹಾಯ ಮಾಡಬೇಕು.
ಒಂದು ಪ್ರಾಚೀನ ಗಾದೆಯಿದೆ, "ಸುಖ ಅಥವಾ ನೋವನ್ನು ಕೊಡುವವರು ಯಾರೂ ಇಲ್ಲ". ನೀವು ನೋವಿನಿಂದ ನರಳುತ್ತಿದ್ದರೆ, ಅದು ನಿಮ್ಮಿಂದಲೇ ಆದುದು; ಅದನ್ನು ಯಾರೋ ನಿಮಗೆ ಕೊಟ್ಟಿದ್ದಲ್ಲ ಮತ್ತು ನೀವು ಮೋಜು ಮಾಡುತ್ತಾ ಇದ್ದರೆ, ಸಂತೋಷವಾಗಿದ್ದರೆ, ಆ ಸಂತೋಷವನ್ನು ಕೂಡಾ ತರುವುದು ನಿಮ್ಮದೇ ಯೋಗ್ಯತೆಗಳು. ನೀವು ಇದನ್ನು ತಿಳಿದುಕೊಂಡಾಗ, ನಿಮ್ಮ ಸಂತೋಷ ಅಥವಾ ದುಃಖಕ್ಕೆ ನೀವು ಇತರರನ್ನು ಹೊಣೆಯಾಗಿಸುವುದಿಲ್ಲ. ಯಾಕೆಂದರೆ, ನೀವು ಯಾರಿಂದಲೋ ಸಂತೋಷವನ್ನು ಪಡೆದರೆ, ನಿಮಗೆ ಬೇಕಾದಾಗಲೆಲ್ಲಾ ಅವರು ಅದನ್ನು ಕೊಡದೆ ಇದ್ದಾಗ ನೀವು ಅವರನ್ನು ದೂಷಿಸುತ್ತೀರಿ. ನಾನು ಹೇಳುತ್ತಿರುವುದು ನಿಮಗೆ ತಿಳಿಯುತ್ತಿದೆಯೇ?
ಪ್ರೀತಿಯು ದ್ವೇಷವಾಗಿ ಯಾಕೆ ಬದಲಾಗುತ್ತದೆ? ಯಾಕೆಂದರೆ ನೀವು ಒಬ್ಬರನ್ನು ಪ್ರೀತಿಸುತ್ತೀರಿ, ಅವರು ನಿಮಗೆ ಬಹಳ ಸಂತೋಷವನ್ನು ನೀಡುತ್ತಾರೆ ಮತ್ತು ನಂತರ ನೀವು ಅವರ ಮೇಲೆ ಕೋಪಗೊಳ್ಳುತ್ತೀರಿ ಯಾಕೆಂದರೆ ನೀವು ಆ ಸಂವೇದನೆಗೆ ಒಂದು ರೀತಿಯಲ್ಲಿ ದಾಸರಾಗಿರುತ್ತೀರಿ. ಆದುದರಿಂದ ಅವರು ನಿಮಗೆ ಆ ಸಂತೋಷವನ್ನು ಕೊಡದಿರುವಾಗ ನೀವು ಅವರನ್ನು ದೂಷಿಸುತ್ತೀರಿ, ಅವರ ಮೇಲೆ ಕೋಪಿಸುತ್ತೀರಿ, ಅವರನ್ನು ದ್ವೇಷಿಸುತ್ತೀರಿ ಮತ್ತು ಇಡಿಯ ಸಂಬಂಧವು ಹಾಳಾಗುತ್ತದೆ. ಅಲ್ಲವೇ? ಆದುದರಿಂದ, ನಿಮ್ಮ ಆನಂದ, ನಿಮ್ಮ ಸಂತೋಷ ನಿಮ್ಮ ಬಳಿಗೆ ಬರುವುದು ನಿಮ್ಮದೇ ಯೋಗ್ಯತೆಯಿಂದ ಎಂಬುದನ್ನು ತಿಳಿಯಿರಿ. ಇತರರು ಕೇವಲ ಅಂಚೆಯವರಂತೆ ಅದನ್ನು ನಿಮಗೆ ತಲುಪಿಸುತ್ತಾರೆ. ಅವರಿಗೆ ಧನ್ಯವಾದವನ್ನು ಅರ್ಪಿಸಿ! ಆಗ ಸುತ್ತಲಿರುವವರೊಂದಿಗೆಲ್ಲಾ ನಿಮ್ಮ ಸಂಬಂಧವು ಯಾವತ್ತೂ ಒಳ್ಳೆಯದಾಗಿರುತ್ತದೆ.
ಪ್ರಶ್ನೆ: ದಯವಿಟ್ಟು ಜೀವನದಲ್ಲಿ ನನ್ನ ದಾರಿಯನ್ನು ಕಂಡುಕೊಳ್ಳಲು ನನಗೆ ಆಶೀರ್ವಾದ ಮಾಡಿ.
ಶ್ರೀ ಶ್ರೀ ರವಿಶಂಕರ್:
  ನೀನು ಈಗಾಗಲೇ ನಿನ್ನ ಪಥದಲ್ಲಿದ್ದೀಯಾ! ನೀನು ಸರಿಯಾದ ಜಾಗದಲ್ಲಿದ್ದೀಯಾ. ನಾನು ಹೇಳುತ್ತೇನೆ, ಆರಾಮವಾಗಿರು!
ನೋಡಿ, ನೀವು ಒಂದು ರೈಲು ಅಥವಾ ವಿಮಾನ ಹತ್ತುವಲ್ಲಿ ವರೆಗೆ ಮಾತ್ರ ಪ್ರಯತ್ನ ಪಡಬೇಕಾಗಿರುವುದು. ಒಮ್ಮೆ ನೀವು ವಿಮಾನದ ಒಳಹೋದ ಮೇಲೆ, ಅದರೊಳಗೆ ಆಚೆ ಈಚೆ ಓಡುವುದರಲ್ಲಿ ಅರ್ಥವಿಲ್ಲ. ವಿಮಾನವು ಅದಕ್ಕಿಂತ ವೇಗವಾಗಿ ತಲುಪಲು ಸಾಧ್ಯವಿಲ್ಲ. ಕಲ್ಪನೆ ಮಾಡಿ ನೋಡಿ, ಒಬ್ಬರು ರೈಲಿನೊಳಗೆ ಹತ್ತಿ ತಮ್ಮ ಚೀಲಗಳನ್ನು ಹಿಡಿದುಕೊಂಡು, "ನಾನು ಎಲ್ಲರಿಗಿಂತ ಮೊದಲು ತಲುಪ ಬಯಸುತ್ತೇನೆ" ಎಂದು ಹೇಳುತ್ತಾ ಓಡುತ್ತಾರೆ. ಆರಾಮವಾಗಿರಿ! ನಿಮ್ಮ ಚೀಲಗಳನ್ನು ಕೆಳಗಿಡಿ. ನೀವು ಪಥದಲ್ಲಿದ್ದೀರಿ, ನೀವು ಧ್ಯಾನ ಮಾಡುತ್ತೀರಿ.
ನೀವು ಸಹಜ ಸಮಾಧಿ ಧ್ಯಾನವನ್ನು ಕಲಿತಿಲ್ಲದಿದ್ದರೆ, ಅದನ್ನು ಕಲಿಯಿರಿ. ಅಷ್ಟಾವಕ್ರ ಗೀತಾ ವನ್ನು ಕೇಳಿರಿ. ಇಲ್ಲಿ ಎಷ್ಟು ಮಂದಿ ಅಷ್ಟಾವಕ್ರ ಗೀತಾವನ್ನು ಕೇಳಿದ್ದೀರಿ? ಅದು ನಿಮ್ಮ ಜೀವನದಲ್ಲಿ ಒಂದು ಬದಲಾವಣೆಯನ್ನು ತಂದಿದೆಯೇ? ಉಳಿದವರು, ಯಾರು ಅದನ್ನು ಕೇಳಿಲ್ಲವೋ ಅವರು ಅದನ್ನು ಕೇಳಿ. ನೀವು ಅದನ್ನು ಕೇಳಬೇಕು, ಅದರ ಬಗ್ಗೆ ಚರ್ಚೆ ಮಾಡಬೇಕು ಮತ್ತು ಅದರಲ್ಲೇ ನೆಲೆಸಿರಬೇಕು. ಪ್ರತಿದಿನವೂ ಜ್ಞಾನದಲ್ಲಿ ಕೆಲವು ನಿಮಿಷಗಳನ್ನು ಕಳೆಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ನಿಮ್ಮಲ್ಲಿ, ಮೌನದ ಮಾರ್ದನಿ ಮತ್ತು ಆತ್ಮೀಯರಿಗೊಂದು ಕಿವಿ ಮಾತು ಪುಸ್ತಕಗಳಿವೆ. ಈ ಪುಸ್ತಕಗಳನ್ನು ತೆಗೆದುಕೊಳ್ಳಿ ಮತ್ತು ಅವುಗಳ ಪುಟ ತಿರುಗಿಸುತ್ತಾ ಇರಿ. ಅದು ನಿಮ್ಮ ಚಿಂತನೆಯ ಮಾರ್ಗವನ್ನು ಮತ್ತು ಸಮಸ್ಯೆಗಳನ್ನು ನೀವು ನಿಭಾಯಿಸುವ ಮಾರ್ಗವನ್ನು ಹಾಗೆಯೇ ಬದಲಾಯಿಸುತ್ತದೆ. ಅದು ಖಂಡಿತಾ ನಿಮಗೆ ಸಹಾಯಕವಾಗುತ್ತದೆ.
ಪ್ರಶ್ನೆ: ನಾನು ಒಬ್ಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರಲು ಇಚ್ಛಿಸುವುದಿಲ್ಲವಾದರೆ, ನಾನು ಅವರೊಂದಿಗಿನ ಸಂಪರ್ಕವನ್ನು ಕಡಿಯುವುದು ಅಥವಾ ಅವರಿಗೆ ನೋವುಂಟುಮಾಡದೆ, ಆದರೆ ಸ್ಪಷ್ಟವಾಗಿ, ಪ್ರೀತಿಯಿಂದ, ಕಾಳಜಿಯಿಂದ ಅವರಿಗೆ ಇದನ್ನು ತಿಳಿಯಪಡಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
  ನಿನಗೆ ಬೇಕಾದಾಗ ನೀನು ಯಾವಾಗ ಬೇಕಿದ್ದರೂ ಅದನ್ನು ಮಾಡಬಹುದು. ಅದೊಂದು ದೊಡ್ಡ ವಿಷಯವಲ್ಲ. ನೀನು ಅದನ್ನು ತುಂಬಾ ನವಿರಾಗಿ ಹೇಳಬಹುದು.
ನೀವು ಎಲ್ಲವನ್ನೂ ಶಬ್ದಗಳ ಮೂಲಕ ಹೇಳಬೇಕೆಂದಿಲ್ಲ. ಜೀವನವು ತುಂಬಾ ವೇಗವಾಗಿ ಚಲಿಸುತ್ತದೆ. ನೀವು ಯಾಕೆ ಹಪ ಹಪಿಸುತ್ತೀರಿ? ನನಗಿವತ್ತು ಹೀಗನ್ನಿಸುತ್ತಿದೆ; ನನಗೆ ನಿನ್ನೆ ಹಾಗನ್ನಿಸಿತು. ನಿಮ್ಮ ಅನ್ನಿಸಿಕೆಗಳ ಬಗ್ಗೆ ಯಾರು ಕೇಳುತ್ತಾರೆ? ನಿಮ್ಮ ಸಂತೋಷದ ಬಗ್ಗೆ ಯಾರು ಕೇಳುತ್ತಾರೆ? ಜೀವನವು ಅಷ್ಟೊಂದು ವೇಗದ ಗತಿಯಲ್ಲಿ ಚಲಿಸುತ್ತಿದೆ. ಭೂಮಿಯು ಅಷ್ಟೊಂದು ವೇಗವಾಗಿ ತಿರುಗುತ್ತಿದೆ, ಅದು ಸೂರ್ಯನ ಸುತ್ತಲೂ ಅಷ್ಟೊಂದು ವೇಗವಾಗಿ ಸುತ್ತುತ್ತಿದೆ.
ಎಲ್ಲವೂ ಬದಲಾಗುತ್ತಿದೆ. ಎಲೆಗಳು ಉದುರುತ್ತಿವೆ ಮತ್ತು ಹೊಸ ಎಲೆಗಳು ಬರುತ್ತಿವೆ. ಒಂದು ಮರದಿಂದ ಎಷ್ಟು ಎಲೆಗಳು ಉದುರಿವೆಯೆಂದು ಯಾರು ಲೆಕ್ಕ ಹಾಕುತ್ತಾರೆ? ಆದುದರಿಂದ ನಿಮಗೇನನ್ನಿಸುತ್ತಿದೆ ಮತ್ತು ನಿಮಗೇನನ್ನಿಸುತ್ತಿಲ್ಲವೆಂಬುದರ ಬಗ್ಗೆ ನೀವು ಯಾಕೆ ಚಿಂತಿಸುತ್ತೀರಿ? ನೀವು ನಿಮ್ಮೆಲ್ಲಾ ಅನ್ನಿಸಿಕೆಗಳನ್ನು ಮೂಟೆ ಕಟ್ಟಿ ಸಮುದ್ರಕ್ಕೆ ಎಸೆಯಬೇಕು ಮತ್ತು ಆರಾಮವಾಗಿರಬೇಕು. ಯಾರು ಕೇಳುತ್ತಾರೆ?! ನಿಮ್ಮ ಭಾವನೆಗಳು ಎಲ್ಲಾ ಸಮಯದಲ್ಲೂ ಬದಲಾಗುತ್ತಿರುತ್ತವೆ. ಅದು ಹಾಗಲ್ಲವೇ?
ನಿಮ್ಮ ಭಾವನೆಗಳು ಎಷ್ಟು ಸಲ ಬದಲಾಗಿವೆ? ಎಷ್ಟು ಸಮಯಕ್ಕೊಮ್ಮೆ ಅವುಗಳು ಬದಲಾಗಿವೆ? ಅದರಲ್ಲಿ ದೊಡ್ಡ ಸಂಗತಿಯೇನಿದೆ? ನಾವು ನಮ್ಮ ಭಾವನೆಗಳನ್ನು ತುಂಬಾ ದೊಡ್ಡ ವಿಷಯ ಮಾಡುತ್ತೇವೆ. ನನಗೆ ಹೀಗೆ ಅನ್ನಿಸುತ್ತದೆ, ನನಗೆ ಹಾಗೆ ಅನ್ನಿಸುತ್ತಿದೆ. ಯಾರಿಗೆ ಬೇಕು? ಸುಮ್ಮನೇ ಎದ್ದು ನಿಲ್ಲಿ! ನೀವು ಈ ಪ್ರಪಂಚದಲ್ಲಿ ಏನು ಮಾಡಲು ಬಯಸುತ್ತೀರೋ, ಸುಮ್ಮನೇ ಅದನ್ನು ಮಾಡಿ ಮತ್ತು ಅದನ್ನು ಮುಗಿಸಿ. ಅಷ್ಟೆ. ಸಮಯವು ಹಾಗೆ ಓಡುತ್ತದೆ.
ಜೀವನ ಕಲೆಗೆ ೩೦ ವರ್ಷಗಳಾಯಿತು. ನಾವು ಜೀವನ ಕಲೆಯನ್ನು ೧೯೮೨ ರಲ್ಲಿ ಪ್ರಾರಂಭಿಸಿದೆವು, ಆದರೆ ನಾವು ನಮ್ಮ ಸಂಸ್ಥೆಯನ್ನು ಅದಕ್ಕಿಂತ ಕೆಲವು ತಿಂಗಳುಗಳ ಮೊದಲು ಶುರು ಮಾಡಿದೆವು. ನಾವು ನಮ್ಮ ವೇದ ವಿಜ್ಞಾನ ಮಹಾ ವಿದ್ಯಾಪೀಠ, ಬೆಂಗಳೂರು ಆಶ್ರಮವನ್ನು ೧೩ ನವೆಂಬರ್ ೧೯೮೧ ರಲ್ಲಿ ನೋಂದಾಯಿಸಿದೆವು. ಏನಾಯಿತು? ಆಗಲೇ ೩೦ ವರ್ಷಗಳು ಉರುಳಿದವು. ಮಾರ್ಚ್ ೧೯೮೨ ರಲ್ಲಿ ನಾವು ಮೊದಲ ಬೇಸಿಕ್ ಕೋರ್ಸನ್ನು ಪ್ರಾರಂಭಿಸಿದೆವು. ನಾವು ಈಗಾಗಲೇ ೩೦ ನೆಯ ವರ್ಷಕ್ಕೆ ಕಾಲಿರಿಸಿದ್ದೇವೆ. ಸಮಯವು ಕಳೆಯಿತು! ನನಗನಿಸುತ್ತದೆ ಇದು ಈ ತಿಂಗಳಿನಲ್ಲಿ ನನ್ನ ೧೪ನೆಯ ನಿಲ್ದಾಣವೆಂದು. ಎಪ್ರಿಲ್ ೧ ರಿಂದ ಇವತ್ತಿನ ವರೆಗೆ ನಾನು ಪ್ರಪಂಚದ ೧೪ ನಗರಗಳಿಗೆ ಭೇಟಿ ನೀಡಿದ್ದೇನೆ. ಎಲ್ಲ ಕಡೆಗಳಲ್ಲಿಯೂ ಬಹಳ ಸಂತೋಷ ಮತ್ತು ಉತ್ಸಾಹಗಳನ್ನು ನಾನು ನೋಡುತ್ತಿದ್ದೇನೆ.
ನಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಅಥವಾ ನಮ್ಮ ಜೀವನವನ್ನು ವ್ಯಕ್ತಪಡಿಸಲು ಸಮಯವಿಲ್ಲ, ಕುಳಿತುಕೊಂಡು ನಮಗೆ ಹೇಗನಿಸುತ್ತದೆ ಮತ್ತು ಹೇಗನಿಸುತ್ತಿಲ್ಲವೆಂದು ಚಿಂತಿಸಲು ಸಮಯವೆಲ್ಲಿದೆ? ಪ್ರಪಂಚದಲ್ಲಿ ಮಾಡಲು ಬೇಕಾದಷ್ಟಿದೆ ಮತ್ತು ಆದರೂ ಮಾಡಲು ಏನೂ ಇಲ್ಲ. ಅವುಗಳು ಜೊತೆಯಲ್ಲಿ ಸಾಗುತ್ತವೆ. ಮಾಡಲು ಬೇಕಾದಷ್ಟಿದೆ ಮತ್ತು ಆದರೂ ನೀವು ಮಾಡಬೇಕಾದುದು ಏನೂ ಇಲ್ಲ. ಅದನ್ನೆಲ್ಲಾ ಮಾಡಿಯಾಗಿದೆ; ಸಂಪೂರ್ಣ ತೃಪ್ತಿ.
ಪ್ರಶ್ನೆ: ಆತ್ಮವು, ಅಸ್ಥಿತ್ವದ ಇತರ ಆರು ಪದರಗಳಿಲ್ಲದೆಯೇ ಅಸ್ಥಿತ್ವದಲ್ಲಿರಬಲ್ಲದೇ?
ಶ್ರೀ ಶ್ರೀ ರವಿಶಂಕರ್:
ಹೌದು, ಖಂಡಿತವಾಗಿ! ಇತರ ಎಲ್ಲಾ ಆರು ಪದರಗಳು ಅದರದ್ದೇ ಬಿಂಬ. ಜೇಡನಂತೆ - ಅದು ಇಡೀ ಬಲೆಯನ್ನು ತನ್ನ ಎಂಜಲಿನಿಂದ ಹೆಣೆಯುತ್ತದೆ. ಆದರೆ, ಜೇಡನು ತನ್ನ ಬಲೆಯಿಲ್ಲದೆಯೂ ಇರಬಹುದು. ಒಂದು ಪ್ರಜ್ಞೆಯು ಎಲ್ಲಾ ಪದರಗಳನ್ನು ಸೃಷ್ಟಿಸಿದೆ, ಆದರೂ ಅದು ಅವುಗಳಲ್ಲಿ ಯಾವುದೇ ಪದರಗಳಿಲ್ಲದೆಯೂ ಅಸ್ಥಿತ್ವದಲ್ಲಿರಬಹುದು.
ಪ್ರಶ್ನೆ: ಮೌನವು ನನ್ನ ಬ್ಯಾಟರಿಗಳನ್ನು ತುಂಬಿಸಲು ಇರುಂತಹುದು ಎಂದು ನನಗೆ ತಿಳಿದಿದೆ. ಆದರೆ, ನನಗೆ ಈ ಏಕಾಂಗಿತನದ ಅನುಭವ ಯಾಕಾಗುತ್ತದೆ? ಹಲವಾರು ಜನರೊಂದಿಗೆ ಎಷ್ಟೊಂದು ಹಂಚಿಕೊಳ್ಳಲಿದೆ!
ಶ್ರೀ ಶ್ರೀ ರವಿಶಂಕರ್: ಈ ಏಕಾಂಗಿತನದ ಅನುಭವವು ಕೇವಲ ಒಂದು ತಾತ್ಕಾಲಿಕವಾದ, ಮಧ್ಯೆ ಬರುವಂತಹ ಘಟ್ಟ. ನೀವು ಈ ಪ್ರಪಂಚಕ್ಕೆ ಬಂದಾಗ ನಿಮಗೆ ಏಕಾಂಗಿತನದ ಅನುಭವವಾಗಲಿಲ್ಲ. ನೀವು ಒಬ್ಬಂಟಿಯಾಗಿ ಬಂದಿರಿ. ನೀವು ಅವಳಿ ಜವಳಿಯಾಗಿ ಬಂದಿದ್ದರೂ ಸಹ, ಆಗಲೂ ಅದು ನೀವು ಈ ಪ್ರಪಂಚಕ್ಕೆ ಒಬ್ಬಂಟಿಯಾಗಿ ಬಂದಂತೆಯೇ. ನಾವು ಹೋಗುವಾಗ, ಇಲ್ಲಿಂದ ನಾವು ಒಬ್ಬಂಟಿಯಾಗಿಯೇ ಹೋಗುತ್ತೇವೆ. ನೀವು ಕುಳಿತುಕೊಂಡು, "ನನಗೆ ಒಬ್ಬಂಟಿಯನ್ನಿಸುತ್ತಿದೆ, ನನಗೆ ಒಬ್ಬಂಟಿಯನ್ನಿಸುತ್ತಿದೆ" ಎಂದು ಹೇಳುತ್ತಾ ಇದ್ದರೆ, ಇಲ್ಲ! ಅದನ್ನು ಬಿಟ್ಟುಬಿಡಿ. ಇನ್ನೊಂದು ಎಂಬುದಿಲ್ಲ ಎಂಬ ಭಾವನೆಯ ಒಳಗೆ ಆಳಕ್ಕೆ ಹೋಗಿ.
ಪ್ರಶ್ನೆ: ಗುರೂಜಿ, ನಾನು ಯಶಸ್ವಿಯಾಗುವುದು ಮತ್ತು ಸಂತೋಷ ಹೊಂದುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಯಶಸ್ವಿಯಾಗಲು ನಿಮಗೆ ಮೂರು ವಿಷಯಗಳ ಅವಶ್ಯಕತೆಯಿದೆ.
೧. ಕುಶಲತೆ
೨. ಶಕ್ತಿ, ಮತ್ತು
೩. ಕ್ರಿಯಾಶೀಲತೆ
ನಿಮ್ಮಲ್ಲಿ ಕುಶಲತೆಯಿದ್ದರೆ, ನಿಮ್ಮಲ್ಲಿ ಶಕ್ತಿಯಿದ್ದರೆ ಮತ್ತು ನೀವು ಏನನ್ನೂ ಮಾಡದೇ ಇದ್ದರೆ, ಆಗ ನೀವು ಯಶಸ್ವಿಯಾಗಲು ಸಾಧ್ಯವಿಲ್ಲ. ನೀವು, ಕುಶಲತೆಯಿಲ್ಲದೆ ಸುಮ್ಮನೇ ಕೆಲಸಗಳನ್ನು ಮಾಡುತ್ತಾ ಇದ್ದರೆ, ಆಗಲೂ ಅದು ಪ್ರಯೋಜನವಾಗುವುದಿಲ್ಲ. ಅದರಂತೆಯೇ, ನಿಮ್ಮಲ್ಲಿ ಕುಶಲತೆ ಮತ್ತು ಕ್ರಿಯಾಶೀಲತೆಗಳಿದ್ದು, ಶಕ್ತಿಯಿಲ್ಲದಿದ್ದರೆ, ಆಗಲೂ ಕೂಡಾ ಯಶಸ್ಸು ಬರುವುದಿಲ್ಲ. ಯಶಸ್ಸು ಬರಲು ಅಗತ್ಯವಿರುವುದೆಂದರೆ, ಕುಶಲತೆ, ಶಕ್ತಿ ಮತ್ತು ಕ್ರಿಯಾಶೀಲತೆ. ನೀವು ಕ್ರಿಯಾಶೀಲರಾಗಿರಬೇಕು. ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಎಲ್ಲಾ ಮೂರು ವಿಷಯಗಳ ಅಗತ್ಯವಿದೆ!
ಕೆಲವು ಜನರು ಕುಳಿತುಕೊಂಡು ಯೋಜನೆ ಹಾಕುತ್ತಾರೆ, ಹಾಕುತ್ತಾರೆ. ಅವರು ತಮ್ಮ ಜೀವನವನ್ನೆಲ್ಲಾ ಯೋಜನೆ ಹಾಕುವುದರಲ್ಲೇ ಕಳೆಯುತ್ತಾರೆ ಆದರೆ ಏನೂ ಮಾಡುವುದಿಲ್ಲ. ಸುಮಾರು ೧೫ರಿಂದ ೨೦ ವರ್ಷಗಳ ಮೊದಲು ಒಬ್ಬ ಯುವಕನು ಬೆಂಗಳೂರಿನಲ್ಲಿ ನಮ್ಮ ಸತ್ಸಂಗಕ್ಕೆ ಬರುತ್ತಿದ್ದ. ಅವನು ಪ್ರತಿ ತಿಂಗಳೂ, ಯಶಸ್ವಿಯಾಗುವುದು ಹೇಗೆ ಮತ್ತು ಹಣ ಮಾಡುವುದು ಹೇಗೆ ಎಂಬುದರ ಬಗ್ಗೆಯಿರುವ ಸುಮಾರು ೨೫ ಪತ್ರಿಕೆ (ಮ್ಯಾಗಜಿನ್)ಗಳನ್ನು ಕೊಂಡುಕೊಳ್ಳುತ್ತಿದ್ದ, ಅವುಗಳನ್ನು ಓದುತ್ತಲಿದ್ದ ಮತ್ತು ಯೋಜನೆಗಳನ್ನು ಹಾಕುತ್ತಾ ಇದ್ದ. ಅವನು ಪ್ರತಿ ಸಲವೂ ಬಂದು ಹೇಳುತ್ತಿದ್ದ, "ನನ್ನಲ್ಲಿ ಈ ಒಳ್ಳೆಯ ಪತ್ರಿಕೆ ಇದೆ, ನನಗೆ ಈ ಒಳ್ಳೆಯ ಕಲ್ಪನೆ ಬಂದಿದೆ. ದಯವಿಟ್ಟು ನನ್ನನ್ನು ಆಶೀರ್ವದಿಸಿ". ನಾನು ಹೇಳಿದೆ, "ಸರಿ! ಹೋಗಿ ಅದನ್ನು ಮಾಡು". ಮುಂದಿನ ವಾರ ಅವನು ಇನ್ನೊಂದು ಪತ್ರಿಕೆಯೊಂದಿಗೆ ಬರುತ್ತಿದ್ದ ಮತ್ತು ಅದೇ ರೀತಿಯ ಆಶೀರ್ವಾದವನ್ನು ಕೇಳುತ್ತಿದ್ದ. ಒಂದು ವರ್ಷ ಕಳೆಯಿತು; ನಾನೂ ತಾಳ್ಮೆಯಲ್ಲಿದ್ದೆ ಮತ್ತು ಯೋಚಿಸಿದೆ, ಒಂದು ದಿನ ಅವನು ಏನನ್ನಾದರೂ ಶುರು ಮಾಡಬಹುದು ಎಂದು. ಆದರೆ ಅವನು ಏನನ್ನೂ ಶುರು ಮಾಡಲೇ ಇಲ್ಲ. ಅವನು ಕೇವಲ ಪತ್ರಿಕೆಗಳನ್ನು ಕೊಂಡುಕೊಳ್ಳುತ್ತಲಿದ್ದ, ನನ್ನನ್ನು ಸಲಹೆಗಾಗಿ ಕೇಳುತ್ತಾ ಇದ್ದ ಮತ್ತು ದೊಡ್ಡ ಯೋಜನೆಗಳನ್ನು ಹಾಕುತ್ತಾ, ಅವುಗಳನ್ನೆಲ್ಲಾ ಕಂಪ್ಯೂಟರಿನಲ್ಲಿ ಟೈಪ್ ಮಾಡುತ್ತಾ ಇದ್ದ, ಅಷ್ಟೆ.
ನಮಗೆ ಬೆಂಗಳೂರು ಆಶ್ರಮದಲ್ಲಿ ಬೇಸಾಯಕ್ಕೆಂದು ೧೦೦ ಎಕ್ರೆ ಜಮೀನಿದೆ. ಈ ಮತ್ತೊಬ್ಬ ವ್ಯಕ್ತಿ, ಅವನು ಕಂಪ್ಯೂಟರಿನಲ್ಲಿ ಕುಳಿತುಕೊಂಡು, ಅವನು ಎಲ್ಲೆಲ್ಲಿ ಯಾವ ಯಾವ ಬೀಜಗಳನ್ನು ಬಿತ್ತುವನೆಂದೂ ಮತ್ತು ಹೇಗೆ ಬೆಳೆ ಬೆಳೆಸುವನೆಂದೂ ಯೋಜನೆಗಳನ್ನು ಹಾಕುತ್ತಿದ್ದ. ಅವನು ತೋಟಗಾರಿಕೆ ವಿಭಾಗಕ್ಕೆ ಮುಖ್ಯಸ್ಥನಾಗಿದ್ದ. ಆಶ್ರಮದಲ್ಲಿದ್ದ ಇತರ ಎಲ್ಲರೂ ಹೇಳುತ್ತಿದ್ದರು, "ಅವನು ಬೇಸಾಯ ಮಾಡುವುದು ಕಂಪ್ಯೂಟರಿನಲ್ಲಿ ಮಾತ್ರ". ಅವನು ಕೋಣೆಯಲ್ಲಿ ಕುಳಿತುಕೊಂಡು ಯೋಜನೆ ಹಾಕುತ್ತಿದ್ದ. ಬೀಜವನ್ನು ಬಿತ್ತಲು ಗದ್ದೆಗೆ ಹೋಗಲೇ ಇಲ್ಲ.
ಅದೇ ರೀತಿಯಲ್ಲಿ, ಒಬ್ಬನು ಎಲ್ಲಾ ಪತ್ರಿಕೆಗಳನ್ನು ಕೊಂಡು ಓದುತ್ತಿದ್ದನು. ಒಂದು ದಿನ ನಾನು ಅವನನ್ನು ಕರೆದು ಹೇಳಿದೆ, "ನೋಡು, ಇನ್ನು ಆಶೀರ್ವಾದ ಮಾಡುವುದಿಲ್ಲ. ನಾನು ನನ್ನ ಆಶೀರ್ವಾದಗಳು ವ್ಯರ್ಥವಾಗಿ ಹೋಗುವುದನ್ನು ಬಯಸುವುದಿಲ್ಲ. ನೀನು ಪ್ರಯತ್ನ ಬಂದಾಗ ಮಾತ್ರ ಆಶೀರ್ವಾದಗಳು ಕೆಲಸ ಮಾಡುತ್ತವೆ. ಆದುದರಿಂದ ನೀನು ಆ ಎಲ್ಲಾ ಪತ್ರಿಕೆಗಳನ್ನು ಬದಿಗಿರಿಸು. ಇನ್ನು ಪತ್ರಿಕೆಗಳನ್ನು ಕೊಂಡುಕೊಳ್ಳಬೇಡ ಮತ್ತು ಓದಬೇಡ. ಒಂದು ವಿಷಯವನ್ನು ತೆಗೆದುಕೊಂಡು ಅದರ ಮೇಲೆ ಕೆಲಸ ಮಾಡು ಮತ್ತು ನೀನು ಯಶಸ್ವಿಯಾಗುತ್ತಿ".
ನಾನು ಇದನ್ನು ಯಾಕೆ ಹೇಳಿದೆನೆಂದರೆ, ಕೆಲವೊಮ್ಮೆ ಒಳ್ಳೆಯ ಕಲ್ಪನೆಯಿರುವ ಜನರು ಅದನ್ನು ಪ್ರಾಯೋಗಿಕ ಕ್ಷೇತ್ರಕ್ಕೆ ತರುವುದಿಲ್ಲ ಮತ್ತು ಇನ್ನು ಕೆಲವರಿದ್ದಾರೆ, ಅವರು ಸರಿಯಾಗಿ ಯೋಚಿಸದೆ ಹಾಗೂ ಯೋಜನೆ ಹಾಕಿಕೊಳ್ಳದೆ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ಕೂಡಾ ಯಶಸ್ವಿಯಾಗಲು ಸಾಧ್ಯವಿಲ್ಲ. ಆದುದರಿಂದ ನೀವು ಎರಡನ್ನೂ ಮಾಡಬೇಕು.
ಆಶೀರ್ವಾದಗಳಿಲ್ಲದೆ ವಿಷಯಗಳು ಮುಂದಕ್ಕೆ ಹೋಗುವುದಿಲ್ಲ, ನನಗೆ ತಿಳಿದಿದೆ. ಆಶೀರ್ವಾದಗಳು ಅಗತ್ಯ, ಆದರೆ ಆಶೀರ್ವಾದಗಳು ಮಾತ್ರ ಕೆಲಸ ಮಾಡುವುದಿಲ್ಲ, ಯಾಕೆಂದರೆ ಒಬ್ಬರು ಕೆಲಸ ಕೂಡಾ ಮಾಡಬೇಕಾಗುತ್ತದೆ. ಹೌದು! ಆಶೀರ್ವಾದಗಳೊಂದಿಗೆ ಕೆಲಸ, ಇದು ನಿಮ್ಮನ್ನು ಯಶಸ್ವಿಯಾಗಿಸುತ್ತದೆ. ನಾನು ಹೇಳುವುದೇನೆಂದರೆ, ನೀವು ಶ್ರಮಪಟ್ಟು ಕೆಲಸ ಮಾಡಿ ಯಶಸ್ಸನ್ನು ಪಡೆದ ಬಳಿಕ ಕೂಡಾ, ನಿಜವಾದ ಯಶಸ್ಸು ಇರುವುದು ನಿಮ್ಮ ವಿಶ್ವಾಸದಲ್ಲಿ. ನಿಜವಾದ ಯಶಸ್ಸೆಂಬುದು ನೀವೆಷ್ಟು ವಿಶ್ವಾಸ ಹೊಂದಿದ್ದೀರಿ, ನೀವೆಷ್ಟು ನಗು ನಗುತ್ತಾ ಇರುತ್ತೀರಿ ಮತ್ತು ನೀವೆಷ್ಟು ದೈರ್ಯವಾಗಿ ನಡೆಯಬಲ್ಲಿರಿ ಎಂಬುದರ ಮೇಲಿದೆ. ಅದು ನಿಮ್ಮ ಯಶಸ್ಸನ್ನು ಸೂಚಿಸುತ್ತದೆ.
ಪ್ರಶ್ನೆ: ನಾನು, ಪಾರ್ಟ್ ೧ ಕೋರ್ಸ್ ಮತ್ತು ಎರಡು ಸಾರಿ ಮೌನ ಶಿಬಿರವನ್ನು ಮಾಡಿದ್ದೇನೆ. ಕಳೆದ ಒಂದು ವರ್ಷದಿಂದ ನಾನು ನನ್ನ ಸ್ಥಳದಲ್ಲಿ ಸೇವೆ ಮಾಡುತ್ತಿದ್ದೇನೆ. ನನ್ನ ಸ್ಥಳದಲ್ಲಿ ಶಿಕ್ಷಕರಿಲ್ಲ, ಆದುದರಿಂದ ನಾನು ಒಬ್ಬ ಶಿಕ್ಷಕನಾಗಬಹುದೇ?
ಶ್ರೀ ಶ್ರೀ ರವಿಶಂಕರ್:
ಖಂಡಿತಾ! ನನಗೆ ಈಗ ಇನ್ನೂ ಹೆಚ್ಚು ಹೆಚ್ಚು ಶಿಕ್ಷಕರ ಅಗತ್ಯವಿದೆ. ಎಷ್ಟು ಸಾಧ್ಯವೋ ಅಷ್ಟು ಶಿಕ್ಷಕರು ಯಾಕೆಂದರೆ ನಾವು ಬಹಳ ಜನರನ್ನು ತಲಪಬೇಕು. ನಿಮ್ಮಲ್ಲಿ ಎಷ್ಟು ಮಂದಿ ಶಿಕ್ಷಕರಾಗಲು ಬಯಸುತ್ತೀರಿ? ಹೌದು, ನೀವೆಲ್ಲರೂ ಶಿಕ್ಷಕರಾಗಬೇಕು. ನೀವು ಸುತ್ತಲಿರುವ ಜನರಿಗಾಗಿ ಬಹಳಷ್ಟು ಮಾಡಬಹುದು. ತುಂಬಾ ಒಳ್ಳೆಯದು!