ಶನಿವಾರ, ಏಪ್ರಿಲ್ 28, 2012

ಶಾ೦ತಿ ಪಥದಲ್ಲಿ ಆರ೦ಭದ ಹೆಜ್ಜೆಯಿಟ್ಟು ದೇವನೊಲುಮೆಯನ್ನು ಸ೦ಪಾದಿಸಿ


28
2012............................... ಬಾಡ್ ಆಂತೋಗಾಸ್ತ್, ಜರ್ಮನಿ
Apr

ಪ್ರಶ್ನೆ ಬುಟ್ಟಿಯಲ್ಲಿನ ಪ್ರಶ್ನೆಗಳನ್ನು ನೋಡುತ್ತಾ ಶ್ರೀಶ್ರೀಗಳು ಹೇಳುತ್ತಾರೆ, ’ಆರಂಭಿಸಲು ಉತ್ತಮವಾದ ಪ್ರಶ್ನೆಯೊಂದನ್ನು ಹುಡುಕುತ್ತಿದ್ದೇನೆ”.
ಎಲ್ಲ ಪ್ರಶ್ನೆಗಳೂ ಒಂದೇ. ವಾಸ್ತವವಾಗಿ, ಸರಿಯಾದ ಉತ್ತರ ಕೇಳಿದಾಗ, ಪ್ರತಿಯೊಂದು ಪ್ರಶ್ನೆಯು ಒಂದೇ ಪರಿಣಾಮವನ್ನುಂಟು ಮಾಡುತ್ತದೆ.
ಸರಿಯಾದ ಉತ್ತರ ಆಲಿಸಿದಾಗ, ಏನು ಹೇಳುವಿರಿ? ‘ಹೌದು, ನಾನು ಒಪ್ಪುತ್ತೇನೆ.’
ಸರಿಯಲ್ಲದಿದ್ದರೆ, ‘ಹೌದು, ನಾನು ಒಪ್ಪುತ್ತೇನೆ’ ಎಂದು ನೀವು ಹೇಳಲಾಗುವುದಿಲ್ಲ, ನೀವೇನೆನ್ನುವಿರಿ, ‘ಇಲ್ಲ, ಅದು ತಪ್ಪು ಉತ್ತರ’ ಎಂದು.
ಆದರೆ ಎಂದಾದರೂ ನಿಮಗೆ ಉತ್ತರ ದೊರೆತರೆ ಏನೆನ್ನುವಿರಿ? ‘ಹೌದು’ ಎನ್ನುವಿರಿ.
ಆದ್ದರಿಂದ, ಅದು ಸರಿಯಾದ ಉತ್ತರವಾಗಿದ್ದರೆ, ಪ್ರತಿಯೊಂದು ಉತ್ತರವೂ ‘ಹೌದು’ ಎನ್ನುವ ಮನಸ್ಸನ್ನು ಕರೆತರಬೇಕು. ಆದರೆ ಪ್ರತಿಯೊಂದು ಉತ್ತರವೂ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದರೆ, ಆಗ ಅದು ಅಂತ್ಯವಿಲ್ಲದ ಪ್ರಯಾಣವಾಗುವುದು.
ಒಂದು ರೀತಿಯಲ್ಲಿ, ಇದು ಒಳ್ಳೆಯದೇ ಏಕೆಂದರೆ ಇದೊಂದು ಬೌದ್ಧಿಕ ಕಸರತ್ತು, ಆದರೆ ಅದರಿಂದಾಚೆಗೆ ಏನೂ ಇಲ್ಲ. ಸ್ವಲ್ಪ ಮನೋರಂಜನೆಯಷ್ಟೇ, ಇನ್ನೇನೂ ಇಲ್ಲ.
ಆದರೆ ಪ್ರಶ್ನೆಗಳೇ ಇರಬಾರದೇ? ಇಲ್ಲ, ಅದರ ಅವಶ್ಯಕತೆಯಿದೆ. ಬೌದ್ಧಿಕ ಪ್ರಚೋದನೆ ಅತ್ಯಗತ್ಯ. ಬುದ್ಧಿಯು ಬಹು ಮುಖ್ಯವಾದ ಭಾಗ. ಅತ್ಯಂತ ಪುರಾತನ ಗ್ರಂಥವಾದ ಭಗವದ್ಗೀತೆಯಲ್ಲೂ ಶ್ರೀಕೃಷ್ಣನು ಜ್ಞಾನವನ್ನೆಲ್ಲಾ ನೀಡಿದ ಮೇಲೆ ಕೊನೆಯಲ್ಲಿ ಹೇಳುತ್ತಾನೆ, ‘ನಿಮಗೆ ಯಾವುದು ಉತ್ತಮವೆಂದು ಯೋಚಿಸಿ, ವಿವೇಚಿಸಿ ಮತ್ತು ನಿರ್ಣಯಿಸಿ.’
ನಂತರ ಭಗವಂತನು ನುಡಿಯುತ್ತಾನೆ, ’ಆದರೆ ಒಂದು ವಿಷಯ ನೆನಪಿನಲ್ಲಿಡಿ, ನಿಮಗೆ ಯಾವುದು ಒಳ್ಳೆಯದೋ ಅದನ್ನೇ ತಿಳಿಸುವೆ, ನಾನು ಹೇಳುವುದನ್ನೇ ನೀವು ಸ್ವೀಕರಿಸಿ’
ಗುರು ಮತ್ತು ಶಿಷ್ಯರ ನಡುವಿನ ಈ ಸಂಭಾಷಣೆ ಬಹಳ ಸ್ವಾರಸ್ಯಕರವಾಗಿದೆ. ಪ್ರತಿಯೊಬ್ಬರೂ ಜೀವನದಲ್ಲಿ ಒಂದು ಸಲವಾದರೂ ಇದನ್ನು ಓದಬೇಕು.
ಐನ್ ಸ್ಟೀನ್ನ್ನೊಳಗೊಂಡಂತೆ ಜಗತ್ತಿನಲ್ಲಿರುವ ಮಹಾನ್ ವಿಜ್ಞಾನಿಗಳು ಇದನ್ನು ಓದಿದಾಗ ಅವರ ಜೀವನ ಪರಿವರ್ತಿತವಾಯಿತೆಂದು ಹೇಳಿದರು, ಏಕೆಂದರೆ ಪ್ರಶ್ನೆಗಳನ್ನು ಕೇಳಬಾರದೆಂದು ಅವರಿಗೆ ಸದಾ ಹೇಳಲಾಗಿತ್ತು. ಧರ್ಮ ಮತ್ತು ಶ್ರದ್ಧೆ ಯಾವಾಗಲೂ ಪ್ರಶ್ನೆಗಳನ್ನು ಕೇಳಬಾರದೆಂದು ಉದ್ದೇಶ ಹೊಂದಿದ್ದು, ಅಂಧಶ್ರದ್ಧೆಯಂತೆ ಅನುಸರಿಸಲು ಸೂಚಿಸಲಾಗಿದೆ. ಆದರೆ ಯೋಗ ವೇದಾಂತ ಶಾಸ್ತ್ರವು ಹೀಗೆ ಹೇಳುವುದಿಲ್ಲ. ಅದು ಬುದ್ಧಿಯನ್ನು ತೊರೆಯುವುದಿಲ್ಲ. ಅದರಲ್ಲಿ ಹೀಗೆ ತಿಳಿಸಿದೆ, ‘ಬುದ್ಧಿಯನ್ನು ಬಳಸಿ. ಸಂಪೂರ್ಣವಾಗಿ ಉಪಯೋಗಿಸಿ, ಆದರೆ ಬುದ್ಧಿಯೇ ಸರ್ವಸ್ವವಲ್ಲ ಎಂಬ ಅರಿವಿರಲಿ. ಸತ್ಯವು ಅದಕ್ಕೆ ಅತೀತವಾದುದು; ಒಂದು ಹೆಜ್ಜೆ ಮುಂದಿರುವುದು.’
ಆದ್ದರಿಂದ ಬುದ್ಧಿಯಲ್ಲಿ ಸಿಕ್ಕಿಹಾಕಿಹೊಳ್ಳಬೇಡಿ, ಹಾಗೆಯೇ ಖಂಡಿತವಾಗಲೂ ಬುದ್ಧಿಯನ್ನು ಪ್ರಕಾಶಗೊಳಿಸಿ. ಬುದ್ಧಿಯನ್ನು ತೃಪ್ತಿ ಪಡಿಸುವ ಮೂಲಕ ಅದನ್ನು ಮೀರಿ ಸಾಗುವುದೇ ಭಕ್ತಿ ಮತ್ತು ಪ್ರೀತಿ.
ಪ್ರ: ಅನೇಕ ಜನರು ಚಿಕ್ಕ ವಯಸ್ಸಿನಲ್ಲೇ ವೈದ್ಯರು, ಇಂಜಿನಿಯರ್, ಅಧ್ಯಾಪಕರು ಇತ್ಯಾದಿಯಾಗುವ ಹಂಬಲದ ಬಗ್ಗೆ ಮನಸ್ಸಿನಲ್ಲಿ ಸ್ಪಷ್ಟತೆಯನ್ನು ಹೊಂದಿರುತ್ತಾರೆ ಹಾಗೂ ಅದಕ್ಕೆ ಬದ್ಧರಾಗಿರುತ್ತಾರೆ. ದುರಾದೃಷ್ಟಕರವೆಂದರೆ, ನನಗೆ ಆ ರೀತಿಯ ಸ್ಪಷ್ಟತೆಯಿಲ್ಲ. ನಾನಿನ್ನೂ ಯುವಕನಲ್ಲ ಮತ್ತು ಮಾರ್ಗದರ್ಶನದ ಕೊರತೆಯು ಭಯಗೊಳಿಸುತ್ತದೆ. ನಾನೇನು ಮಾಡಲಿ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಚಿಂತಿಸಬೇಡಿ. ಜೀವನವೆಲ್ಲವೂ ರೂಪುಗೊಂಡಿದೆ.
ಏನು ಮಾಡಬೇಕೆಂದು ಸ್ಪಷ್ಟತೆಯಿಲ್ಲದಿದ್ದರೆ, ಧ್ಯಾನ ಮಾಡಿ ಮತ್ತು ನಿಮ್ಮ ಅಂತರ್ದೃಷ್ಟಿಯಂತೆ ಮುನ್ನಡೆಯಿರಿ.
ಎಲ್ಲಾ ವೃತ್ತಿಗಳೂ ಒಂದೇ ಎಂದು ನಮ್ಮ ಅಭಿಪ್ರಾಯ. ಯಾವ ಉದ್ದಿಮೆಯಲ್ಲಿರುವವರೂ ಸಂತೋಷವಾಗಿಲ್ಲ.  ವೈದ್ಯರನ್ನು ನೋಡಿ, ಅವರೆಷ್ಟು ಸಂಕಟಪಡುತ್ತಾರೆ, ಏಕೆಂದರೆ ಜೀವನವಿಡೀ ರೋಗಿಗಳೊಡನೆ ಕಳೆಯಬೇಕು. ದಿನದ ೧೫ ಗಂಟೆಗಳ ಕಾಲ ಅಸ್ವಸ್ಥರೊಡನೆ ಕಳೆದು, ಅವರ ಎಲ್ಲ್ಲಾ ತೊಂದರೆಗಳನ್ನು ಆಲಿಸಬೇಕಾಗುತ್ತದೆ, ಹಾಗೂ ಅವರಿಗೆ ಚಿಕಿತ್ಸೆ ನೀಡಿದರೂ ಕೇಳಿದ ಪ್ರಶ್ನೆಗಳನ್ನೇ ಮತ್ತೆ ಮತ್ತೆ ಕೇಳುತ್ತಾರೆ.
ಯಾರಿಗದರೂ ನಿಮಗೆ ಯಾವ ರೋಗವೂ ಇಲ್ಲ, ಸ್ವಸ್ಥರಾಗಿದ್ದೀರ ಎಂದು ಹೇಳಿದರೆ, ಆಗಲೂ ಅವರು ನಿಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವರು. ಅದಕ್ಕಾಗಿ ವೈದ್ಯರು ನೀವು ಆರೋಗ್ಯವಾಗಿದ್ದರೂ, ‘ಇಲ್ಲ, ನೀವು ಆರೋಗ್ಯವಾಗಿಲ್ಲ’ ಎನ್ನಬೇಕಾಗುತ್ತದೆ. ಅದರಿಂದ ಅವರಿಗೆ ಸಂತೋಷವಾಗುತ್ತದೆ. ಆಗ ಈ ವೈದ್ಯರು ಸರಿಯಾದ ವೈದ್ಯರೆಂದು ಅಭಿಪ್ರಾಯಪಡುತ್ತೀರ. ಅವರಿಗೆ ನನ್ನ ಸಮಸ್ಯೆ ತಿಳಿದಿದೆ, ಸರಿಯಗಿ ತಪಾಸಣೆ ಮಾಡಿದ್ದಾರೆ.
ವೈದ್ಯರ ಪರಿಸ್ಥಿತಿಯೂ ಆರಾಮದಾಯಕವಾಗಿಲ್ಲ; ರಜೆ ತೆಗೆದುಕೊಂಡು ಹೊರಗಡೆ ಹೋಗುವುದು ಸಾಧ್ಯವಿಲ್ಲ. ಮಧ್ಯರಾತ್ರಿಯಲ್ಲಿ ಭೇಟಿ ನೀಡಬೇಕಾಗುತ್ತದೆ. ಊಹಿಸಿ ಔಷಧಿಯನ್ನು ಕೊಡಬೇಕಾಗುತ್ತದೆ. ನಂತರ ಇಡೀ ರಾತ್ರಿ ಅಧೀರರಾಗಿರುತ್ತಾರೆ. ಇವೆಲ್ಲ ಆ ವೃತ್ತಿಯ ರಹಸ್ಯಗಳು. ನಿಮಗೆ ತಲೆನೋವಿದ್ದರೆ, ಆಸ್ಪ್ರಿನ್ ಕೊಡಬಹುದು, ಆದರೆ ಎಲ್ಲಾ ಸಮಸ್ಯೆಗಳಿಗೆ ಯಾವ ಔಷಧವನ್ನು ನಿರ್ದೇಶಿಸಬೇಕೆಂದು ಸದಾ ತಿಳಿದಿರುವುದಿಲ್ಲ. ಕೆಲವೊಮ್ಮೆ ಊಹಿಸಬೇಕಾಗುತ್ತದೆ.
ಇಂಜಿನಿಯರ್ ರನ್ನು ನೋಡಿ. ಹಗಲು ರಾತ್ರಿ ಯಂತ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಾ ಅವರೂ ಯಂತ್ರದಂತೆ ಆಗಿರುತ್ತಾರೆ. ಆಗಲೇಬೇಕು. ಅವರೇ ಹೇಳುತ್ತಾರೆ, ನಾನು ಹೇಳುವುದಲ್ಲ. ಸ್ವತಃ ಇಂಜಿನಿಯರ್ ಗಳೇ ಹೇಳುತ್ತಾರೆ, ‘ಓಹ್, ಎಷ್ಟು ಬೇಸರವಾಗುತ್ತದೆ. ದಿನವಿಡೀ ಯಂತ್ರಗಳು, ಯಂತ್ರಗಳು ಮತ್ತು ಯಂತ್ರಗಳು.’ ಕನಸಿನಲ್ಲೂ ಯಂತ್ರಗಳನ್ನೇ ಕಾಣುತ್ತಾರೆ.
ಕಾರ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಕಾರ್ ಗಳನ್ನೇ ಕನಸಿನಲ್ಲಿ ಕಾಣುತ್ತಾರೆ. ಜನರಹಿತ ಚಲಿಸುತ್ತಿರುವ ಕಾರ್ ಗಳನ್ನು ಕಾಣುತ್ತಾರೆ.
ಇಲ್ಲಿ ಕಾರ್ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವವರೊಬ್ಬರು ಹೇಳಿದರು, ‘ಪ್ರತಿದಿನ ರಾತ್ರಿ ಕನಸಿನಲ್ಲಿ ಕನ್ ವೇಯರ್ ಬೆಲ್ಟ್ ಮೇಲೆ ಅಥವಾ ಟ್ರಕ್ ನಲ್ಲಿ ಚಲಿಸುತ್ತಿರುವ ಕಾರ್ ಗಳನ್ನು ಕಾಣುತ್ತೇನೆ. ಅದರಲ್ಲಿ ಜನರಿರುವುದಿಲ್ಲ!’
ವಕೀಲರು; ಅವರ ಸ್ಥಿತಿಯನ್ನು ಕೇಳುವುದಕ್ಕೇ ಆಗದು. ಬದುಕುವುದಕ್ಕಾಗಿ ಎಲ್ಲದೠ ಏನದೠ ಸಮಸ್ಯೆಯುಂಟಾಗಲು ಹುಡುಕುತ್ತಿರುತ್ತಾರೆ. ಎಲ್ಲವೂ ಶಾಂತಿಯುತವಾಗಿದ್ದರೆ, ವಕೀಲರಿಗೆ ಬದುಕಲು ಸಾಧ್ಯವಿಲ್ಲ. ಅಣ್ಣ ತಮ್ಮಂದಿರಲ್ಲಿ ಜಗಳವಾದರೆ, ವಕೀಲರಿಗೆ ತುಂಬಾ ಸಂತೋಷವಾಗುತ್ತದೆ, ನಗುತ್ತಿರುತ್ತಾರೆ. ‘ಆಗಲಿ, ಅವರು ನನ್ನ ಹತ್ತಿರ ಬರಲಿ, ನಾನು ಹಣ ಸಂಪಾದಿಸಬಹುದು.’ ಅದೃಷ್ಟವಶಾತ್, ಅವರೇನೂ ಹೆಚ್ಚು ಚಿಂತಿಸಬೇಕಾಗಿಲ್ಲ ಏಕೆಂದರೆ ಪ್ರಪಂಚದಲ್ಲಿ ಈಗಾಗಲೇ ಸಾಕಷ್ಟು ಕದನಗಳು ನಡೆಯುತ್ತಿವೆ. ಎಲ್ಲರೂ ಅವರ ಬಳಿಗೇ ಹೋಗಬೇಕಾಗಿದೆ. ‘ಬನ್ನಿ, ನಾನು ನಿಮ್ಮ ಸಮಸ್ಯೆಯನ್ನು ಬಗೆಹರಿಸುವೆನು’ ಎನ್ನುವರು. ಅದರೆ ಅದು ಬೇಗನೆ ಬಗೆಹರಿಯುವುದಿಲ್ಲ. ಅದನ್ನು ಮುಂದೂಡುತ್ತಾರೆ. ಯಾವ ವಕೀಲನೂ ಬೇಗನೇ ಕೇಸುಗಳನ್ನು  ಪರಿಹರಿಸುವುದಿಲ್ಲ. ಏಕೆ ಮಾಡುತ್ತಾರೆ? ಕೇಸು ದೀರ್ಘ ಕಾಲ ಮುಂದೆ ಹೋದಷ್ಟು ಅವರಿಗೇ ಒಳಿತು. ಪ್ರತಿಯೊಂದು ಹಾಜರಿಯನ್ನೂ ಕಕ್ಷಿದಾರರಿಗೆ ಚಾರ್ಜ್ ಮಾಡಬಹುದು. ಕೇಸು ಹಾಗೆಯೇ ಹೊರಟು ಹೋಗುವಂತೆ ಮಾಡಲು ಅವರೇನು ದಡ್ಡರಲ್ಲ.
ಯಾವುದೇ ವೃತ್ತಿಯನ್ನು ತೆಗೆದುಕೊಂಡರೂ ಅದರಲ್ಲಿ ನ್ಯೂನತೆಗಳು ಇರುವುದು.
ಧಾರ್ಮಿಕ ವ್ಯಕ್ತಿಗಳು, ಅವರ ಸಮಸ್ಯೆ ಮತ್ತಷ್ಟು ದೊಡ್ಡದು.
ರಾಮಾಯಣದಲ್ಲಿ ಒಂದು ಕತೆಯಿದೆ, ಅದನ್ನು ಕೇಳುತ್ತೀರ?
ಅದೊಂದು ಬೀದಿ ನಾಯಿ ರಸ್ತೆಯಲ್ಲಿ ಓಡಾಡುತ್ತಿದ್ದಾಗ ಯಾರೋ ಅದರತ್ತ ಒಂದು ಕಲ್ಲು ಹೊಡೆದು, ಅದನ್ನು ಅಟ್ಟಿಸಿಕೊಂಡು ಹೋದರು. ಹೀಗಾಗಿ ಆ ನಾಯಿಯು ನ್ಯಾಯಾಲಯಕ್ಕೆ ಹೋಯಿತು.
ಶ್ರೀರಾಮನ ಆಸ್ಥಾನದಲ್ಲಿ ಎಲ್ಲರಿಗೂ ನ್ಯಾಯ ದೊರಕುತ್ತಿತ್ತು, ಪ್ರಾಣಿಗಳಿಗೂ ಸಹ ಎಂದು ಹೇಳುತ್ತಾರೆ.
ರಸ್ತೆಯು ಎಲ್ಲರಿಗಾಗಿ ಇರುವುದೆಂದು ನಾಯಿಯು ಹೇಳಿತು. ಅದು, ’ರಸ್ತೆಯಲ್ಲಿ ಎಲ್ಲೂ, ಇಲ್ಲಿ ನಾಯಿಗಳಿಗೆ ಪ್ರವೇಶವಿಲ್ಲವೆಂದು ಬರೆದಿಲ್ಲ.  ನಾನು ರಸ್ತೆಯಲ್ಲಿ ಅಡ್ಡಾಡುತ್ತಿದ್ದೆ, ಈ ಮನುಷ್ಯ ನನಗೆ ಏಟು ಮಾಡಿದ; ಇವನಿಗೆ ಶಿಕ್ಷೆ ನೀಡಬೇಕು’ ಎಂದು ಹೇಳಿತು.
ಶ್ರೀರಾಮನು ಅದು ನಿಜವೇ ಎಂದು ಆ ಮನುಷ್ಯನನ್ನು ಕೇಳಿದನು. ಅವನು ಸುಳ್ಳು ನುಡಿಯಲಾರದೆ ತಾನು ಆ ನಾಯಿಯನ್ನು ಹೊಡೆದುದಾಗಿ ಒಪ್ಪಿಕೊಂಡನು.
ಆ ಕಾಲದಲ್ಲಿ ದೋಷಿಗೆ ಯಾವ ಶಿಕ್ಷೆಯನ್ನು ಕೊಡಬೇಕೆಂದು ನೊಂದವನನ್ನೇ ಕೇಳುತ್ತಿದ್ದರು.
ಆದ್ದರಿಂದ ಆ ನಾಯಿಯನ್ನು, ಅದಕ್ಕೆ ಕಲ್ಲಿನಿಂದ ಹೊಡೆದ ಆ ಮನುಷ್ಯನಿಗೆ ಯಾವ ಶಿಕ್ಷೆಯನ್ನು ನೀಡುವುದೆಂದು ಕೇಳಿದಾಗ, ಅದು, ’ಮಠಾಧೀಶನನ್ನಾಗಿ ಮಾಡಿ. ಆಶ್ರಮವೊಂದರ ಗುರುಗಳನ್ನಾಗಿ ನೇಮಿಸಿ’ ಎಂದಿತು.
ಇದನ್ನು ಜನರು ವಿಚಿತ್ರ ಶಿಕ್ಷೆಯೆಂದು ಭಾವಿಸಿದರು.
ನಾಯಿಯು ಹೇಳಿತು, ’ಏಕೆ ಕೇಳುತ್ತಿದ್ದೀರಿ? ಹಾಗೆ ನೇಮಿಸಿ ಆಷ್ಟೇ. ಹಿಂದಿನ ಜನ್ಮದಲ್ಲಿ ನಾನೂ ಸಹ ಒಬ್ಬ ಗುರುವಾಗಿದ್ದೆನು. ಈಗ ನೋಡಿ ಏನಾಗಿದೆಯೆಂದು! ಬಳಿಕ ಸಾಯುವ ಮೊದಲು ನಾನು ಯೋಚಿಸಿದೆ, ಗುರುವಾಗುವ ಬದಲು ಬೀದಿ ನಾಯಿಯಾಗಿದ್ದರೆ ಎಷ್ಟೋ ಮೇಲಾಗುತ್ತಿತ್ತು. ನೋಡಿ, ಅದಕ್ಕೇ ನಾನು ಬೀದಿ ನಾಯಿಯಾಗಿದ್ದೇನೆ. ಅನೇಕ ತೊಂದರೆಗಳಿದ್ದವು. ಇವನೂ ಕೂಡ ಆಶ್ರಮದ ಗುರುವಾಗಬೇಕು, ನಂತರ ಜೀವನದಲ್ಲಿ ಕಷ್ಟಗಳೆಂದರೇನು, ನೋವು ಮತ್ತು ದುಃಖವೆಂದರೇನೆಂದು ಅನುಭವವಾಗುವುದು.
ಈ ಭೂಮಿಯಲ್ಲಿ ಪ್ರತಿಯೊಂದು ಕೆಲಸ, ಪ್ರತಿಯೊಂದು ವೃತ್ತಿಯೂ ಸುಲಭವಲ್ಲ. ಪ್ರತಿಯೊಂದು ವೃತ್ತಿಯೂ ಕಠಿಣವಾಗಿಯೇ ಇರುತ್ತದೆ. ಯಾವ ಕೆಲಸವೂ ಸುಲಭವಲ್ಲ. ಧಾರ್ಮಿಕ ಸಂಸ್ಥೆಯ ಪೀಠಾಧಿಕಾರಿಯಾದರೆ ಇನ್ನೂ ಕಷ್ಟಕರವಾದುದು ಏಕೆಂದರೆ ಎಲ್ಲರ ಬಗ್ಗೆಯೂ ಗಮನಹರಿಸಬೇಕು.
ಯಾರನ್ನಾದರು ನೋಡಲಿಲ್ಲವೆಂದರೆ, ಆ ವ್ಯಕ್ತಿಯು ನನ್ನನ್ನು ನೀವು ನೋಡಲಿಲ್ಲವೆಂದು ದೂರು ನೀಡುವನು. ನೆನ್ನೆ ನೀವು ನನಗೆ ಬೇಜಾರು ಮಾಡಿದಿರಿ. ಎಲ್ಲರನ್ನೂ ಖುಷಿಪಡಿಸಬೇಕೆಂದು ಬಂದಿರಿ ಆದರೆ ಆ ಸಂದರ್ಭದಲ್ಲಿ ಯಾರನ್ನೋ ದುಃಖಗೊಳಿಸಿದಿರಿ.
ನೀವು ಅವರ ಕಡೆಗೆ ನೋಡಿದಾಗ ಅವರಿನ್ನೆಲ್ಲೋ ನೋಡುತ್ತಿರುತ್ತಾರೆ, ಆದರೆ ಅವರು ನಿಮ್ಮತ್ತ ನೋಡಿದಾಗ ಮಾತ್ರ ನೀವು ಅವರ ಕಡೆಗೆ ನೋಡಬೇಕೆಂದು ಅಪೇಕ್ಷಿಸುತ್ತಾರೆ; ಇಲ್ಲದಿದ್ದರೆ ಅವರು ದುಃಖಿತರಾಗುವರು! ಏನು ಮಾಡುವುದು? ತಾಂತ್ರಿಕತೆಯು ಮತ್ತಷ್ಟು ಹದಗೆಡಿಸಿದೆ! ನನಗೆ ಎಷ್ಟು ಇ-ಮೇಲ್ ಗಳು ಸ್ವೀಕೃತವಾಗಿದೆಯೆಂದು ಬಲ್ಲಿರಾ? ಈ ಕೆಲವು  ವಾರಗಳಲ್ಲಿ ೧೦೧,೦೦೦, ಎಲ್ಲವನ್ನೂ ಓದಬೇಕು.  ವಾರಕ್ಕೆ ೧೦,೦೦೦ ಇ-ಮೇಲ್ ಗಳು ಬರುತ್ತವೆ. ಕೆಲವೊಮ್ಮೆ ೮,೦೦೦ ಇನ್ನು ಕೆಲವು ಬಾರಿ ೨,೦೦೦, ಏರುಪೇರಾಗುತ್ತಿರುತ್ತದೆ, ಆದರೆ ಎಲ್ಲವೂ ಸೇರಿ ರಾಶಿಯಾಗಿರುತ್ತದೆ.
ಆದ್ದರಿಂದ ಯಾವ ವೃತ್ತಿಯ ಬಗ್ಗೆಯೂ ಚಿಂತಿಸಬೇಡಿ. ಎಲ್ಲವೂ ಒಂದೇ. ನಿಮ್ಮ ಜೀವನ ಜೀವಂತವಾಗಿರುವಂತೆ ಯಾವುದಾದರೊಂದು ಕೆಲಸವನ್ನು ಹುಡುಕಿರಿ. ದುರಾಸೆಪಡಬೇಕಾಗಿಲ್ಲ ಮತ್ತು ಕೊರತೆಯ ಭಾವ ಬೇಡ. ನಮ್ಮ ಮನಸ್ಸಿನಲ್ಲಿ, ನಮ್ಮ ಹೃದಯದಲ್ಲಿ  ಸಮೃದ್ಧಿಯ ಭಾವವಿರಬೇಕು. ಹಣವು ಎಂದಿಗೂ ಸಾಕೆಂದೆನಿಸುವುದಿಲ್ಲ.
ನೋಡಿ, ಬಿಲಿಯನೇರ್ ಗಳೂ ಕೂಡ ತಮ್ಮ ಹಣವನ್ನು ಹೇಗೆ ಎರಡು ಪಟ್ಟು, ನಾಲ್ಕು ಪಟ್ಟು ಹೆಚ್ಚಿಸಿಕೊಳ್ಳುವುದೆಂದು ಯೋಚಿಸುತ್ತಿರುತ್ತಾರೆ. ಈ ಓಟ ಎಂದಿಗೂ ಅಂತ್ಯ ಕಾಣದು.
ಈ ವರ್ಷ ಡಾವೋಸ್ ನಗರದಲ್ಲಿದ್ದೆ. ಅಲ್ಲಿ ಎಲ್ಲ ಮಲ್ಟಿ-ಬಿಲಿಯನೇರ್ ಗಳು ಸೇರಿದ್ದರು. ಅವರ ಕಣ್ಣು ಹಾಗು ಮುಖಗಳನ್ನು ನೋಡಿ, ಅಲ್ಲಿ ತೃಪ್ತಿಯಿಲ್ಲ, ಸಂತೋಷವಿಲ್ಲ, ಸಮಾಧಾನವಿಲ್ಲ ಮತ್ತು ಉನ್ನತ ಭಾವವಿಲ್ಲ.
ನಾನು ಹೇಳುತ್ತಿರುವುದು ತಿಳಿಯುತ್ತಿದೆಯೇ? ಒಂದು ಚಿಕ್ಕ ಗುಡಿಸಿಲಿನಲ್ಲಿ ಮುಗುಳ್ನಗೆಯನ್ನು ಕಾಣಬಹುದು, ಆದರೆ ಅದನ್ನು ಅರಮನೆಯಲ್ಲಿ ಕಾಣಲು ಸಾಧ್ಯವಾಗದೇ ಇರಬಹುದು. ಪ್ರಶಾಂತವಾದ ಮನಸ್ಸನ್ನು ನೀವು ಅರಮನೆಯಲ್ಲಿ ಕಾಣದೇ ಇರಬಹುದು.
ಪ್ರ: ನಮ್ಮ ದುಷ್ಕರ್ಮಗಳನ್ನು ಹೇಗೆ ತೊಡೆದುಹಾಕುವುದು? ನಾನು ತುಂಬಾ ಸ್ವಯಂ-ತೀರ್ಮಾನಿಸುವಂತೆ ಭಾಸವಾಗುತ್ತದೆ. ನನ್ನನ್ನು ನಾನು ಪ್ರೀತಿಸಲು ಹೇಗೆ ಕಲಿಯಲಿ?ಶ್ರೀ ಶ್ರೀ ರವಿಶಂಕರ್: ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುತ್ತಾನೆ ನೀವು ನಿಮ್ಮ ಕರ್ಮಗಳನ್ನು ಕಳೆಯಲು ಸಾಧ್ಯವಿಲ್ಲ. ನಾನು ನಿಮಗಾಗಿ ಅದನ್ನು ಮಾಡುತ್ತೇನೆ.
ನೀವು ನಿಮ್ಮ ಕೆಲಸವನ್ನು ಮಾಡಿ. ನಿಮ್ಮ ದುಷ್ಕರ್ಮದ ಬಗ್ಗೆ ಚಿಂತಿಸಬೇಡಿ. ಅದಕ್ಕೆಂದೇ ಗುರುವಿದ್ದಾರೆ. ಹಿಂದಿನ ದುಷ್ಕರ್ಮಗಳನ್ನು ತೊಡೆಯುವುದರ ಬಗ್ಗೆ ಚಿಂತಿಸಬೇಡಿ. ನೀವು ಜ್ಞಾನದಲ್ಲಿದ್ದರೆ, ಸತ್ಸಂಗದಲ್ಲಿದ್ದರೆ, ಧ್ಯಾನದಲ್ಲಿದ್ದರೆ ಮತ್ತು ಸುದರ್ಶನ ಕ್ರಿಯೆ ಮಾಡುತ್ತಿದ್ದರೆ, ಅದು ತಾನಾಗಿಯೇ ಕಳೆಯುವುದು.
ಇವೆಲ್ಲವನ್ನು ಏಕೆ ಮಾಡುತ್ತೀರಿ? ಇವೆಲ್ಲವೂ ನಿಮ್ಮ ದುಷ್ಕರ್ಮವನ್ನು ತೊಡೆದುಹಾಕುವುದು. ದುಷ್ಕರ್ಮವೆಂದರೇನು? ನಿಮ್ಮ ಮನಸ್ಸಿನಲ್ಲಿರುವ ಕೆಟ್ಟ ಸಂಸ್ಕಾರಗಳು; ಪ್ರಜ್ಞೆಯಲ್ಲಿರುವ ಕೆಟ್ಟ ಸಂಸ್ಕಾರಗಳು. ಆದರೂ ನಿಮಗೆ ಗೊಂದಲವಾಗುತ್ತಿದ್ದರೆ, ’ಗುರೂಜೀ, ಈ ಸಮಸ್ಯೆಗಳನ್ನು ನಿಮಗೆ ಕೊಡುತ್ತೇನೆ. ದಯವಿಟ್ಟು ಇವುಗಳನ್ನು ನೋಡಿಕೊಳ್ಳಿ’ ಎಂದು ಹೇಳಿ. ಅವೆಲ್ಲವೂ ಹೊರಟುಹೋಗುವವು, ಸರಿಯೇ!
ಪ್ರ: ನಿಮಗಿಷ್ಟೊಂದು ಕರುಣೆಯೇಕೆ? ಅದೇ ತಪ್ಪನ್ನು ಪುನರಾವರ್ತಿಸಿ ನಿಮ್ಮನ್ನು ನಿರಾಸೆಗೊಳಿಸಿದ್ದರೂ ನನ್ನ ಮೇಲೆ ನಿಮಗೇಕೆ ಕೋಪ ಬರುವುದಿಲ್ಲ. ನನ್ನ ಮೇಲೆ ನನಗೇ ಬೇಸರವಾಗಿದೆ.ಶ್ರೀ ಶ್ರೀ ರವಿಶಂಕರ್: ಚಿಂತಿಸಬೇಡಿ. ಕಳೆದುಹೋದುದರ ಬಗ್ಗೆ ಕುಳಿತು ಆಲೋಚಿಸುವುದು ಬೇಡ.
ನೋಡಿ, ಮಗುವು ನಡೆಯಲು ಆರಂಭಿಸಿದಾಗ ಅನೇಕ ಸಲ ಬೀಳುವುದು. ಆದರೆ ಹತ್ತು ಸಲ ಬಿದ್ದ ಮಾತ್ರಕ್ಕೆ ಅದು ನಿಂತುಕೊಳ್ಳುವುದನ್ನು ಬಿಡುವುದಿಲ್ಲ. ನಿಂತುಕೊಳ್ಳುವ ತನಕ ಅದು ತನ್ನ ಪರಿಶ್ರಮವನ್ನು ಬಿಡುವುದಿಲ್ಲ.
ಆದ್ದರಿಂದ ನಾನು ಹೇಳುವುದೇನೆಂದರೆ ನೀವು ಸಮರ್ಪಕವಾಗಿ  ನಡೆಯುತ್ತಿದ್ದೀರ, ಹಾಗೆಯೇ ನಡೆಯುತ್ತಿರಿ. ನಿಮ್ಮ ತಪ್ಪಿನ ನೋವಾದರೂ ನಿಮಗಿದೆ; ಇದು ನಿಮ್ಮನ್ನು ಮತ್ತೆ ಮತ್ತೆ ತಪ್ಪು ಮಾಡುವುದನ್ನು ತಪ್ಪಿಸುತ್ತದೆ.
ನೀವು ತಪ್ಪು ಮಾಡುವುದೇಕೆಂದು ಗೊತ್ತೇ? ಅದಕ್ಕೆ ಕಾರಣ ಅದರಿಂದ ಏನೋ ಸುಖವನ್ನು  ಪಡೆಯುತ್ತಿರುವಿರಿ. ಮಾದಕ ವಸ್ತುಗಳ ಸೇವನೆ, ಮದ್ಯಪಾನ ಅಥವಾ ಧೂಮಪಾನ ಸೇವನೆ ಕೆಟ್ಟದ್ದು ಹಾಗೂ ಹಾನಿಕಾರಕ ಆದರೂ ಸೇವಿಸುತ್ತೀರಿ, ಏಕೆ? ಏಕೆಂದರೆ ಅದರಿಂದೇನೋ ಸುಖ ಸಿಗುತ್ತಿದೆಯೆಂಬ ಭಾವನೆಯಿಂದ. ಹಾಗೆ ನೋಡಿದರೆ, ಅದು ನಿಮಗೆ ಸುಖ ನೀಡುವುದಿಲ್ಲ, ಕೇವಲ ಸುಖದ ಆಶ್ವಾಸನೆಯನ್ನಷ್ಟೇ ನೀಡುವುದು.
ಇನ್ನೊಂದು ಕತೆಯಿದೆ. ಸಜ್ಜನರೊಬ್ಬರು ಮಾರುಕಟ್ಟೆಗೆ ಹೋಗಿ ಒಬ್ಬ ಸಾಧುವಿನಿಂದ ಒಂದು ಶಂಖವನ್ನು ಆಶೀರ್ವಾದವಾಗಿ ಪಡೆದರು. ಅದೊಂದು ವಿಶಿಷ್ಠವಾದ ಶಂಖ, ನೀವು ಏನ್ನನ್ನದರೂ ಬೇಡಿದರೆ, ಅದನ್ನು ದಯಪಾಲಿಸುತ್ತಿತ್ತು.
ಈ ಸಜ್ಜನರ ಸ್ನೇಹಿತರೊಬ್ಬರು ಶಂಖವನ್ನು ನೋಡಿ ಅತ್ಯುತ್ಸಾಹಗೊಂಡರು. ಅವರಿಗೂ ಅಂತಹ ಶಂಖ ಬೇಕೆನಿಸಿತು.
ಎಷ್ಟೋ ಸಾರಿ ನಿಮಗೆ ಅಗತ್ಯವಿದೆಯೆಂದು ವಸ್ತುವನ್ನು ಕೊಳ್ಳುವುದಿಲ್ಲ, ಬೇರೆಯವರ ಬಳಿಯಿದೆಯೆಂಬ ಕಾರಣಕ್ಕಾಗಿ ಕೊಳ್ಳುವಿರಿ. ನಿಮ್ಮ ಸ್ನೇಹಿತರು ಕೊಂಡುಕೊಂಡರು ಅದಕ್ಕೋಸ್ಕರ ನಿಮಗೂ ಅದನ್ನು ಪಡೆಯುವ ಇಚ್ಛೆ. ನಿಮ್ಮ ಸ್ನೇಹಿತರು ಆಡಿ ಅಥವಾ ಬೆಂಜ್ ಕಾರ್ ಕೊಂಡರೆ, ನಿಮಗೂ ಆಡಿ ಅಥವಾ ಬೆಂಜ್ ಕೊಳ್ಳುವ ಆಸೆ. ಅದರಿಂದುಟಾಗುವ ವ್ಯತ್ಯಾಸವಾದರೂ ಏನು? ನಿಮಗೆ ಓಡಾಡಲು ಒಂದು ಕಾರ್ ಬೇಕು, ಅಷ್ಟೇ.
ಆದರೆ ನಿಮ್ಮ ಸ್ನೇಹಿತರು ಒಂದು ದೊಡ್ಡ ಕಾರ್ ಕೊಂಡಿರುವುದರಿಂದ ನೀವೂ ಒಂದು ಉತ್ತಮ ಕರ್ ಕೊಳ್ಳಲು ಬಯಸುವಿರಿ.
ಆದ್ದರಿಂದ ಅವನು ಶಂಖ ಕೊಳ್ಳಲು ಮಾರುಕಟ್ಟೆಗೆ ಹೋದನು. ಅಂಗಡಿಯವನು ಶಂಖವೊಂದನ್ನು ತೋರಿಸಿ, ಏನು ಕೇಳಿದರೂ ಅದರ ಎರಡರಷ್ಟನ್ನು ನೀಡುವುದೆಂದು ಅದರ ವಿಶಿಷ್ಠತೆಯನ್ನು ತಿಳಿಸಿದನು.
ಒಂದು ವೇಳೆ ನಿಮಗೆ ಒಂದು ಕಾರ್ ಬೇಕೆನಿಸಿದರೆ, ಶಂಖವು ಒಂದೇ ಏಕೆ, ಎರಡು ತೆಗೆದುಕೊಳ್ಳಬಹುದು ಎಂದು ಹೇಳುವುದು.
ಯಾರಾದರೂ ಈ ಕತೆಯನ್ನು ಕೇಳಿದ್ದೀರ? ಇಲ್ಲವೇ? ನನ್ನ ಪುಸ್ತಕಗಳನ್ನು ಓದುತ್ತಿಲ್ಲ ಅಥವಾ ನನ್ನ ಟೇಪುಗಳನ್ನು ಕೇಳುತ್ತಿಲ್ಲ?!
ಆದ್ದರಿಂದ ಅವನು ಆ ಶಂಖವನ್ನು ಕೊಂಡು ಮನೆಗೆ ಹೋದನು. ಆ ಶಂಖದ ಬಳಿ ಒಂದು ಕೇಜಿ ಚಿನ್ನ ಬೇಡಿದನು. ಆ ಶಂಖವು, ’ಒಂದು ಕೇಜಿ ಏಕೆ, ಎರಡು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಸರಿ, ನನಗೆ ಎರಡು ಕೇಜಿ ಕೊಡು’ ಎಂದನು.
ಶಂಖವು,’ ’ಎರಡು ಕೇಜಿ ಏಕೆ, ನಾಲ್ಕು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಆಗಲಿ, ನಾಲ್ಕು ಕೇಜಿ ಕೊಡು’ ಎಂದನು.
ಶಂಖವು,’ ’ನಾಲ್ಕು ಕೇಜಿ ಏಕೆ, ಎಂಟು ತೆಗೆದುಕೋ’ ಎಂದಿತು.
ಅದಕ್ಕೆ ಅವನು, ’ಆಗಲಿ, ನನಗೆ ಎಂಟು ಕೇಜಿ ಕೊಡು, ಅದಕ್ಕಿಂತ ಹೆಚ್ಚಿಗೆ ಬೇಡ’ ಎಂದನು.
ಶಂಖವು,’ ’ಎಂಟು ಕೇಜಿ ಏಕೆ, ಹದಿನಾರು ತೆಗೆದುಕೋ’ ಎಂದಿತು.
ಅದು ಗುಣಿಸುತ್ತಾ ಹೋಯಿತು ಆದರೆ ಏನನ್ನೂ ಕೊಡಲಿಲ್ಲ. ’ಏನಾದರು ಕೊಡು’ ಎಂದು ಕೇಳಿದನು.
ಅದಕ್ಕೆ ಆ ಶಂಖವು,’ಏನಾದರು ಏಕೆ, ಬಹಳಷ್ಟು ತೆಗೆದುಕೋ’ ಎಂದಿತು. ಅದಕ್ಕೆ ಅವನು ತನ್ನ ಕಿವಿಗಳನ್ನು ಎಳೆದು, ’ವಾವ್!’ ಎಂದನು.
ಚಟಗಳು ನಿಮಗೆ ಇದನ್ನೇ ನೀಡುವುದು. ಅದು ನಿಮಗೆ ಕೇವಲ ಸುಖದ ಆಶ್ವಾಸನೆಯನ್ನು ನೀಡುತ್ತದೆ, ಆದರೆ ಎಂದೂ ಸುಖವನ್ನು ನೀಡುವುದಿಲ್ಲ.
ದುಶ್ಚಟಗಳನ್ನು ಹೊಡೆದೋಡಿಸಲು ನಿಮಗೆ ಈ ಮೂರರಲ್ಲಿ ಒಂದರ ಅವಶ್ಯಕತೆಯಿರುತ್ತದೆ – ಪ್ರೀತಿ, ಭಯ ಮತ್ತು ದುರಾಸೆ.
ಯಾವುದರ ಮೇಲಾದರೂ ಗಾಢವಾದ ಪ್ರೀತಿ ಅಥವಾ ಪ್ರೀತಿಪಾತ್ರರಿಗೆ ಆ ಹಾದಿಯನ್ನೆಂದೂ ಹಿಡಿಯುವುದಿಲ್ಲವೆಂಬ ಭರವಸೆ ನಿಮ್ಮನ್ನು ದುಶ್ಚಟಗಳಿಂದ ಹೊರತರುವುದು.
ವೈದ್ಯರು ನೀವು ಮದ್ಯಪಾನ ಮಾಡಿದರೆ ನಿಮ್ಮ ಪಿತ್ತಕೋಶ ಕೆಟ್ಟು, ನೀವು ಸಾಯುವಿರೆಂದು ಹೇಳಿದಾಗ ನೀವು ಅದನ್ನು ಮುಟ್ಟುವುದಿಲ್ಲ.
ಅದೇ ಯಾರಾದರೂ ನೀವು ೪೦ ದಿನಗಳವರೆಗೆ ಮದ್ಯಪಾನ ಮಾಡದ್ದಿದ್ದರೆ ಒಂದು ಮಿಲಿಯನ್ ಡಾಲರ್ ಗಳನ್ನು ಕೊಡುವರೆಂದು ಹೇಳಿದರೆ, ನೀವು, ’೪೦ ದಿನಗಳೇಕೆ, ಯಾವುದಕ್ಕೂ ಮುಂಜಾಗ್ರತೆ ವಹಿಸಿ ೪೫ ದಿನಗಳವರೆಗೆ  ಅದರಿಂದ ದೂರವಿರುತ್ತೇನೆ’ ಎನ್ನುವಿರಿ.
ಆದ್ದರಿಂದ ದುರಾಸೆ, ಭಯ ಅಥವಾ ಪ್ರೀತಿ ನಿಮ್ಮನ್ನು ದುಶ್ಚಟಗಳಿಂದ ಬಿಡುಗಡೆಗೊಳಿಸುವುದು.
ನನ್ನ ಸ್ವಭಾವವು ಕರುಣಾಮಯಿಯಾಗಿ ಇರಬೇಕಾದುದೇ. ಇಷ್ಟು ವರ್ಷ, ಎಂದರೆ ಸುಮಾರು ೫೬ ವರ್ಷಗಳಿಂದ ಯಾರಿಗೂ ಒಂದು ಕೆಟ್ಟ ಮಾತನ್ನಾಡಿಲ್ಲ. ಅದು ಸಾಧನೆಯೇನಲ್ಲ. ಈ ಶರೀರ ಹಾಗೆ ಮಾಡಲ್ಪಟ್ಟಿದೆ. ನಾನು ಹಾಗೆ ಮಾಡಲ್ಪಟ್ಟಿರುವೆ.
ನಾನು ಪ್ರಕ್ಷುಬ್ಧಗೊಂಡಿದ್ದರೂ ಕೆಟ್ಟ ಮಾತುಗಳನ್ನು ಆಡಲಾಗುವುದಿಲ್ಲ. ಕೇವಲ, ’ಏ ಮೂರ್ಖ’ ಎನ್ನಬಹುದು, ಇದಕ್ಕಿಂತ ಹೆಚ್ಚಿಗೆಯಿಲ್ಲ.
ಅದನ್ನೂ ಕೇವಲ ಏಳು ಅಥವಾ ಎಂಟು ಬಾರಿ ಹೇಳಿರಬಹುದು; ಬೆರಳೆಣಿಸಬಹುದು. ಪರರನ್ನು ಬಯ್ಯುವುದು, ಶಪಿಸುವುದು ಅಥವಾ ನಿಂದಿಸುವುದು ನನ್ನಿಂದ ಸಾಧ್ಯವಿಲ್ಲ. ನಾನೆಂದಿಗೂ ಹಾಗೆ ಮಾಡಿಲ್ಲ. ಎಂದಿಗೂ ಯಾರನ್ನೂ ಕೆಟ್ಟ ಮಾತುಗಳಿಂದ ನೋಯಿಸಿಲ್ಲ. ಆದರೂ ಕೆಲವರಿಗೆ ನನ್ನಿಂದ ನೋವಾಗಿದ್ದರೆ, ಅದು ಅವರ ಸಮಸ್ಯೆ, ನಾನೇನು ಮಾಡಲು ಸಾಧ್ಯ?
ಪ್ರ: ನನ್ನ ಜೊತೆಯಲ್ಲಿ ನಾಲ್ಕು ವರ್ಷಗಳಿಂದಿರುವ ನನ್ನ ಪ್ರಿಯತಮೆಯು ಬೇರೊಬ್ಬನನ್ನು ಪ್ರೀತಿಸುತ್ತಿದ್ದಾಳೆಂದು ಹೇಳುತ್ತಿದ್ದಾಳೆ. ಅವನನ್ನು ಐದು ತಿಂಗಳ ಹಿಂದೆ ಭೇಟಿ ಮಾಡಿದ್ದಳು. ನಾನೇನು ಮಾಡಲಿ? ಅವಳನ್ನು ತುಂಬಾ ಪ್ರೀತಿಸುತ್ತೇನೆ, ಅವಳನ್ನು ಕಳೆದುಕೊಳ್ಳಲಾರೆ. ಅವಳು ಯೋಚಿಸಿ ನಿರ್ಧರಿಸುವ ತನಕ ನನಗೆ ಕಾಯಬೇಕೆಂದು ಹೇಳಿದ್ದಾಳೆ. ಅವಳಿಗಾಗಿ ನಾನು ಕಾಯುವುದೆ ಅಥವಾ ಅವಳನ್ನು ಬಿಟ್ಟುಬಿಡುವುದೇ?ಶ್ರೀ ಶ್ರೀ ರವಿಶಂಕರ್: ಒಂದು ವಿಧದಲ್ಲಿ ನಿನ್ನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಇನ್ನೊಂದು ವಿಧದಲ್ಲಿ ಇದರ ಬಗ್ಗೆ ನನಗೆ ಯಾವ ಅನುಭವವೂ ಇಲ್ಲ. ಆದ್ದರಿಂದ ನಿನಗೆ ನಾನು ಉಪದೇಶಿಸಲಾರೆ.
ಸ್ವಲ್ಪ ಸಮಯ ತೆಗೆದುಕೊಂಡು, ಮೌನವಾಗಿರು ಎಂದು ಹೇಳಬಹುದಷ್ಟೆ. ನಿನ್ನ ಜೀವನದ ಬಗ್ಗೆ ಯೋಚಿಸು, ಹಿಂದೆ ಹೇಗಿತ್ತೆಂದು ಆಲೋಚಿಸು.
ಆ ವ್ಯಕ್ತಿಯು ನಿನ್ನ ಜೀವನದಲ್ಲಿ ಇಲ್ಲದ್ದಿದ್ದಾಗಲೂ ನೀನು ಸಂತೋಷವಾಗಿದ್ದೆಯಲ್ಲವೇ? ಅವಳೇನಾದರೂ ನಿನ್ನ ಜೀವನದಲ್ಲಿ ಮಿಂಚೊಂದನ್ನು ಹೊತ್ತಿಸಿದ್ದರೆ, ಪ್ರೀತಿಯನ್ನು ಅನುಭವಿಸುವಂತೆ ಮಾಡಿದ್ದರೆ, ಕೃತಜ್ಞತೆಯನ್ನು ಅರ್ಪಿಸು. ಭವಿಷ್ಯದಲ್ಲಿ ಅವಳಿಲ್ಲದಿದ್ದರೂ ನಿನ್ನ ಬದುಕು ಮುಂದುವರೆಯುವುದು.
ನೀನು ಮೇಲೇರುವಿಯೆಂದು ನಾನು ಹೇಳುವೆ. ಆ ವ್ಯಕ್ತಿಯು ಹೊರಟು ಹೋದರೆ ಅವಳಿಗಿಂತ ಉತ್ತಮ ವ್ಯಕ್ತಿ ನಿನಗೆ ಸಿಗುವಳು. ಇದು ಖಂಡಿತ. ನೀನು ಕೇಂದ್ರಬಿಂದುವೆಂದು ತಿಳಿ, ಸರಿಯೇ!
ಇನ್ನೊಬ್ಬರಲ್ಲಿ ನಿನ್ನ ಆತ್ಮವನ್ನು ಸ್ಥಾಪಿಸಡಬೇಡ, ನಿನ್ನೊಳಗೇ ಇರಿಸಿಕೋ. ಆ ವ್ಯಕ್ತಿಯೇನಾದರೂ ಮತ್ತೆ ಬಂದರೆ, ಒಳ್ಳೆಯದು, ಇಲ್ಲದಿದ್ದರೆ ಮುಂದೆ ಸಾಗು.
ಈ ಜ್ಞಾನವು, ಪ್ರೀತಿಯನ್ನು ದ್ವೇಷಕ್ಕೆ ತಿರುಗದಂತೆ ಸಹಕಾರಿಯಾಗಿದೆ.
ಅನೇಕ ಬಾರಿ ಜನರು ಇನ್ನೊಬ್ಬರನ್ನು ಪ್ರೀತಿಸುತ್ತಾರೆ, ಅದು ಎಂತಹ ಕಹಿ ಮತ್ತು ದ್ವೇಷಕ್ಕೆ ಮಾರ್ಪಾಡಾಗುವುದೆಂದರೆ ನಂಬಲಾರ್ಹವಾದುದು. ಆದ್ದರಿಂದ ಹಾಗಾಗದಂತೆ ನೋಡಿಕೊಳ್ಳಿ.
ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಬಿಟ್ಟುಬಿಡಿ. ಅದು ನಿಮ್ಮದಾಗಿದ್ದರೆ, ಹಿಂದಿರುಗಿ ಬರುತ್ತದೆ. ಅದು ಹಿಂದಿರುಗದ್ದಿದ್ದರೆ, ಅದೆಂದೂ ನಿಮ್ಮದಾಗಿರಲಿಲ್ಲ. ಇದನ್ನರಿತು ಮುಂದೆ ನಡೆಯಿರಿ.
ಪ್ರ: ದೇವರು ಜೀವಂತವಾಗಿಲ್ಲವೆಂಬ ಪರಿಕಲ್ಪನೆಯೊಡನೆ ನಾನು ಬೆಳೆದಿರುವೆ. ಈಗ ತಮ್ಮನ್ನು ಭೇಟಿ ಮಾಡಿರುವೆನು, ಸುಂದರವಾದ ಜ್ಞಾನವನ್ನು ಆಲಿಸಿರುವೆನು ಹಾಗೂ ಒಬ್ಬ ಜೀವಂತ ದೇವರನ್ನು ಕಂಡಂತೆ ಭಾಸವಾಗುತ್ತಿದೆ.
ಆದರೂ ದೇವರು ಜೀವಂತವಾಗಿರಲಾರ. ನನ್ನ ಮನಸ್ಸಿಗೆ ಅರ್ಥವಾಗುತ್ತಿಲ್ಲ. ಜ್ಞಾನ ಹಾಗೂ ಪ್ರೀತಿಯ ಮೂಲಕ ನೀವಿರುವಿರೆಂದು ತಿಳಿದಿದ್ದೇನೆ, ಆದರೂ ನೀವು ವ್ಯಕ್ತಿ ಸ್ವರೂಪನಾಗಿರುವವರೆಗೂ ನಿಮ್ಮನ್ನು ಸಂಪೂರ್ಣವಾಗಿ ಸ್ವೀಕರಿಸಲಾರೆ.
ದೈವೀಕತೆಯನ್ನು ನೋಡಬಹುದಾಗಿದೆ, ಅನುಭವಿಸಬಹುದಾಗಿದೆ, ನೋವೂ ಉಂಟಾಗುತ್ತಿದೆ. ಆದರೆ ನನಗೆ ಅರ್ಥವಾಗುತ್ತಿಲ್ಲ.
ದಯವಿಟ್ಟು ಉಪದೇಶಿಸಿ.
ಶ್ರೀ ಶ್ರೀ ರವಿಶಂಕರ್: ದೇವರೇ ಪ್ರೀತಿ, ಪ್ರೀತಿಯೇ ದೇವರು. ಅವನು ನಮ್ಮೆಲ್ಲರಲ್ಲೂ ಇದ್ದಾನೆ. ದೇವರು ಇಲ್ಲವೆನ್ನುವ ವಸ್ತುವೇ ಇಲ್ಲ ಏಕೆಂದರೆ ಇಡೀ ಸೃಷ್ಠಿಯೇ ಪ್ರೀತಿಯಿಂದ ರಚಿಸಲ್ಪಟ್ಟಿದೆ. ಆದ್ದರಿಂದ ದೇವರು ವ್ಯಕ್ತಿಯಲ್ಲ, ಅದೊಂದು ಕ್ಷೇತ್ರ. ಅದು ಎಲ್ಲೆಡೆಯೂ ಇದೆಯೆಂದರೆ ನಿಮ್ಮಲ್ಲೂ  ಇರುವುದು. ಸದಾ ಕಾಲ ಅದು ಇರುವುದಾದರೆ, ಈಗ ಇಲ್ಲಿಯೂ ಇರುವುದು.
ನೀವು ಸರಿಯಾಗಿ ಹೇಳಿದಿರಿ; ಕೆಲವರು ದೇವರನ್ನು ಯಾರೋ ಸ್ವರ್ಗದಲ್ಲಿರುವನೆಂದು ತಿಳಿದಿದ್ದಾರೆ. ಎಲ್ಲವನ್ನೂ ಸೃಷ್ಠಿಸಿ ಈಗ ಸತ್ತು ಹೋಗಿದ್ದಾನೆ. ಮೃತರಾದವರಿಗೆ ನೀವು ಕೃತಜ್ಞತೆಗಳನ್ನು ಅರ್ಪಿಸುವಂತೆ, ದೇವರನ್ನು ಅಳಿದವನಂತೆ ಭಾವಿಸಿ, ಕೃತಜ್ಞತೆಗಳನ್ನು ಸಮರ್ಪಿಸುತ್ತೀರ.
ಜನರಿಗೆ ಅರ್ಥವಾಗುವುದಿಲ್ಲ; ದೇವರು ಸಜೀವ ಸನ್ನಿಧಾನ, ಈಗ ಮತ್ತು ಇಲ್ಲಿಯೇ ಜೀವಂತವಾಗಿರುವನು. ಮೌನದ ಆಳದಲ್ಲಿ ಮಾತ್ರ ಇದನ್ನು ಅನುಭವಿಸಲು ಸಾಧ್ಯ.
ಮನಸ್ಸು ಶಾಂತವಾಗಿದ್ದಾಗ ಮತ್ತು ’ನನಗೇನೂ ಬೇಡ’ ಎಂದಾಗ ಎಲ್ಲವೂ ನೀವೇ ಆಗುವಿರಿ. ಈ ಭಾವದೊಂದಿಗೆ ನೀವು ಧ್ಯಾನಕ್ಕೆ ಕುಳಿತಾಗ, ಇಲ್ಲಿ ಮತ್ತು ಈಗ ಇರುವ ಆ ಶಕ್ತಿ, ಮೌನ ಹಾಗು ಪ್ರೀತಿಯನ್ನು ಅನುಭವಿಸುವಿರಿ.
ಆದ ಕಾರಣ ಜನರು ಬುದ್ಧನ ಬಳಿಗೆ ಹೋದಾಗ ದೇವರ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವನು ಏನನ್ನೂ ಹೇಳಲಿಲ್ಲ, ಮೌನವಾಗಿದ್ದನು.
ದೇವರ ಬಗ್ಗೆ ಬುದ್ಧನು ಎಂದೂ ಮಾತನಾಡಲಿಲ್ಲ. ಅವನ ಸತ್ಸಂಗದಲ್ಲಿ ಜನರು ದೇವರ ಕುರಿತು ಪ್ರಶ್ನೆಗಳನ್ನು ಕೇಳಬಾರದೆಂಬ ನಿಯಮವೊಂದಿತ್ತು.
ಹನ್ನೊಂದು ಪ್ರಶ್ನೆಗಳು ಅಲ್ಲಿ ಬಹಿಷ್ಕೃತವಾಗಿತ್ತು. ದೇವರ ಕುರಿತ ಪ್ರಶ್ನೆ ಅದರಲ್ಲೊಂದಾಗಿತ್ತು. ನೀವು ಕೇಳಿದರೂ ಅವನು ಉತ್ತರಿಸುತ್ತಿರಲಿಲ್ಲ, ಏಕೆಂದರೆ ಜನರಿಗೆ ಪರಿಕಲ್ಪನೆಗಳಿರುತ್ತವೆ ಹಾಗೂ ದೇವರ ಬಗ್ಗೆ ತಮಗೆ ತುಂಬಾ ತಿಳಿದಿದೆಯೆಂದು ಯೋಚಿಸುತ್ತಾರೆ. ತಮಗೆ ತಿಳಿದಿದೆಯೆಂದುಕೊಂಡು ವಾದ ಮಾಡುತ್ತಾರೆ.
ದೇವರನ್ನು ಅವನ ಪಾಡಿಗೆ ಅವನನ್ನು ಬಿಡುವುದು ಉತ್ತಮ. ಅವನಿಗೆ ವಿರಾಮದ ಅಗತ್ಯವಿದೆ. ಸ್ವಲ್ಪ ವಿಶ್ರಾಮವನ್ನು ಬಯಸುತ್ತಾನೆ. ಭಾರತದಲ್ಲಿ ದೇವರು ಹಾವಿನ ಮೇಲೆ ಆನಂದದಿಂದ ವಿಶ್ರಮಿಸುತ್ತಿರುವಂತೆ ಹಾಗೂ ಸೃಷ್ಠಿಯು ಮುಂದುವರೆಯುವುದೆಂದು ವರ್ಣಿಸುತ್ತಾರೆ.
ಆದ್ದರಿಂದ ಒಳ್ಳೆಯ ಮನುಷ್ಯರಾಗಿ ಮತ್ತು ಆಗಾಗ್ಗೆ ಮೌನವಾಗಿದ್ದು ಆಂತರ್ಯದ ಶಾಂತಿಯನ್ನು ಅನುಭವಿಸಿ. ರಹಸ್ಯಗಳಲ್ಲಿ ರಹಸ್ಯವಾದುದನ್ನು ಕಾಣುವಿರಿ; ಬಾಗಿಲುಗಳು ಸಹಜವಾಗಿ ತೆರೆದುಕೊಳ್ಳುವವು. ಆಗ ನಿಮಗೆ ಅರಿವಾಗುವುದು ಎಲ್ಲ ಕಡೆಯೂ ಜನರು ಯಾವುದರ ಬಗ್ಗೆ ಮಾತನಾಡುತ್ತಿದ್ದರೆಂದು; ಇದನ್ನೇ ಎಲ್ಲ ಧರ್ಮಗ್ರಂಥಗಳಲ್ಲಿ ಹೇಳಿರುವುದು. ಬೈಬಲ್, ಖುರಾನ್ ಅಥವಾ ವೇದಗಳು ಎಲ್ಲದರಲ್ಲೂ ಇದನ್ನೇ ಹೇಳುವುದು. ಇದು ಸತ್ಯ, ಅದು ಇಲ್ಲೇ ಮತ್ತು ಈಗಲೇ ನಿನ್ನಲ್ಲಿರುವುದು; ಆ ಅರಿವು.
ಪುನಃ ಒಂದು ದಿನ ಅರಿವುಂಟಾಗುವುದೆಂದು ಆಲೋಚಿಸಬೇಡಿ. ಅದು ಈಗಲೇ ಇದೆ! ಶಾಂತರಾಗಿ. ದೇವರ ಕಡೆಗೆ ಮೊದಲ ಹೆಜ್ಜೆ ಶಾಂತಿ. ಎರಡನೆಯದು ಸುಖ ಮತ್ತು ಸಂತೋಷ. ಮೂರನೆಯದು ಪ್ರೀತಿ. ದೇವರ ಆಲಯಕ್ಕೆ ಇವೇ ಮೂರು ಹೆಜ್ಜೆಗಳು.