ಶುಕ್ರವಾರ, ಏಪ್ರಿಲ್ 27, 2012

ದ್ವೇಷ ಸಲ್ಲದು

27
2012............................... ಬಾಡ್ ಆಂತೋಗಾಸ್ತ್, ಜರ್ಮನಿ
Apr

ಜ್ಞಾನದಲ್ಲಿ ನೀವು ಹಾಡಿ, ಕುಣಿದು, ನೆಲೆಗೊಳ್ಳಬೇಕು. ಜ್ಞಾನವೆಂದರೆ ಕೇವಲ ಮಾಹಿತಿಯಲ್ಲ, ಪುಸ್ತಕವನ್ನೋದಿ ಮಾಹಿತಿ ಪಡೆಯುವಂತಹುದಲ್ಲ. ಅದು ಜ್ಞಾನವಲ್ಲ. ಜ್ಞಾನವೆಂದರೆ ವಾಸ್ತವಾಂಶವನ್ನು ಹಾಗೆಯೇ ಅನುಭವಿಸುವುದು. ಜ್ಞಾನವು ನಮ್ಮ ಪ್ರಜ್ಞೆಯಲ್ಲಿ ಅಚಲವಾಗಿ ಸ್ಥಾಪಿತವಾದಾಗ ವಿವೇಕ ಎನ್ನುವರು. ವಿವೇಕವೆಂದರೆ ಆತ್ಮನಲ್ಲಿ ಜ್ಞಾನವು ಉತ್ತಮವಾಗಿ ನೆಲೆಗೊಂಡಿರುವುದು. ಅದು ನಿಮ್ಮನ್ನು ವಿವೇಕಿಗಳನ್ನಾಗಿಸುತ್ತದೆ. ಎಲ್ಲರಿಗೂ ವಿವೇಕವಿದೆ. ಕೆಲವರಿಗೆ ಸ್ವಲ್ಪ, ಕೆಲವರಿಗೆ ಹೆಚ್ಚು. ಜೀವನವು ನಿಮ್ಮನ್ನು ಅಲ್ಪ ವಿವೇಕದಿಂದ ಅಧಿಕ ವಿವೇಕಕ್ಕೆ ಕರೆದೊಯ್ಯಲು ಹೆಚ್ಚು ಸಮಯ ಬೇಕಿಲ್ಲ.
ಪದಗಳು ವ್ಯರ್ಥವೆನಿಸುವುದು. ಆದರೂ ಕೆಲವು ಸಾರಿ ಉಪಯೋಗಿಸಬೇಕಾದುದರಿಂದ ಉಪಯೋಗಿಸುತ್ತೇವೆ. ಆಸ್ಪತ್ರೆಗೆ ಹೋಗುತ್ತೀರ, ’ಹೇಗಿದ್ದೀರ?’ ಎಂದು ಯಾರನ್ನೋ ಕೇಳುತ್ತೀರ. ಅವರಿಗೆ ಹುಷಾರಿಲ್ಲವೆಂದು ತಿಳಿದ್ದಿದ್ದರೂ ಕೇಳುವಿರಿ, ’ಹೇಗಿದ್ದೀರ?’ ಎಂದು. ’ಚೆನ್ನಾಗಿದ್ದೇನೆ’ ಎನ್ನುವರು. ಅವರಿಗೂ ತಾವು ಚೆನ್ನಾಗಿಲ್ಲವೆಂದು ತಿಳಿದ್ದಿದ್ದರೂ, ’ಚೆನ್ನಾಗಿದ್ದೇನೆ’ ಎನ್ನುವರು. ನೀವೆಲ್ಲರೂ ಇಲ್ಲಿ ಎಷ್ಟು ಸಂತೋಷವಾಗಿದ್ದೀರ, ಆದರೂ, ನೀವು ಚೆನ್ನಾಗಿದ್ದೀರ?’ ಎಂದು ಕೇಳುವೆನು. ನಿಮ್ಮ ಮುಖಗಳಲ್ಲಿ ತುಂಬಾ ಸಂತೋಷ ಹಾಗೂ ಕಾಂತಿಯನ್ನು ನಾವು ನೋಡಬಹುದಾಗಿದೆ. ಇದು ಇನ್ನೊಂದು ಮಟ್ಟದ ಸಂವಾದದಲ್ಲಿ ತೊಡಗಲು ಸಹಕಾರಿಯಷ್ಟೇ.
ವಿವೇಕಿಗಳು ಮೊದಲು ಹೃದಯದಿಂದ ಹಾಗೂ ಆತ್ಮನಿಂದ, ನಂತರ ಬಾಹ್ಯ ಮಟ್ಟದ ಸಂವಾದದಲ್ಲಿ ತೊಡಗುತ್ತಾರೆ, ಕೇವಲ ಸಂಪರ್ಕವನ್ನು ಹೊಂದಿರಲು. ಅಜ್ಞಾನಿಗಳು ಬಾಹ್ಯ ಮಟ್ಟದ ಸಂಪರ್ಕವನ್ನು ಆಶ್ರಯಿಸಿರುತ್ತಾರೆ. ತಾಯಿ ಮತ್ತು ಮಗುವಿನ ನಡುವೆ, ಮಗು ಏನು ಮಾತನಾಡಿದರೂ, ಅದು ಅಮುಖ್ಯ, ಏಕೆಂದರೆ ಮಗುವು ಭಾಷೆಯನ್ನೇ ಕಲಿತಿರುವುದಿಲ್ಲ. ಆದರೆ ತಾಯಿಯು ಮಗುವಿನೊಂದಿಗೆ ಆಳವಾದ ಮಟ್ಟದಲ್ಲಿ ಸಂವಾದಿಸುತ್ತಾಳೆ. ಭಾಷೆ ಕಲಿಯುವುದಕ್ಕಿಂತ ಮೊದಲೇ ನೀವು ನಿಮ್ಮ  ತಾಯಿಯೊಂದಿಗೆ ಸಂವಾದಿಸಲು ಪ್ರಾರಂಭಿಸುತ್ತೀರ ಮತ್ತು ನಿಮ್ಮ ತಾಯಿಯೂ ನಿಮ್ಮೊಂದಿಗೆ ಸಂವಾದಿಸಲು ತೊಡಗುತ್ತಾಳೆ. ಇದು ಆಳವಾದ ಸಂಪರ್ಕದ ಮಟ್ಟ.
ಹಾಗೆಯೇ, ನೀವು ನಾಯಿ ಅಥವಾ ಬೆಕ್ಕುಗಳೊಡನೆ ಮಾತನಾಡಬೇಕಾದರೆ ಅತ್ಯಂತ ಸೂಕ್ಷ್ಮ ಮಟ್ಟದಲ್ಲಿ , ಗಾಢವಾದ ಮಟ್ಟದಲ್ಲಿ ತೊಡಗುತ್ತೀರ. ಇದು ಭಾಷೆಯಲ್ಲ. ಆಮೇಲೆ ಅದರ ತಲೆಯಲ್ಲಿ ಸ್ವಲ್ಪ ಭಾಷೆಯನ್ನು ತುಂಬಲು ಎಷ್ಟೊಂದು ಸಾಹಸಪಡುತ್ತೀರ. ಅವುಗಳಿಗೆ ಭಾಷೆಯ ಅಗತ್ಯವಿಲ್ಲ. ಶಬ್ದ ಮಾಡಿದರೆ ಸಾಕು ನಿಮ್ಮ ಹತ್ತಿರ ಬರುತ್ತವೆ. ನೀವೇನು, ’ಬಾ, ಬಾ, ಬಾ’ ಎನ್ನುವ ಅವಶ್ಯಕತೆಯಿಲ್ಲ. ಯಾವುದಾದರೊಂದು ಶಬ್ದ ಮಾಡಿದರೆ, ಅವು ಬರುತ್ತವೆ.
ಭಾಷೆಯೊಂದಿಗೆ ನಿಮ್ಮನ್ನು ಗುರುತಿಸುವುದಿಲ್ಲ.
ಇದರಂತೆ ಸಂಪೂರ್ಣ ಸೃಷ್ಠಿಯು ನಿಮ್ಮೊಂದಿಗೆ ಸಂಬಂಧ ಕಲ್ಪಿಸುತ್ತಿದೆ; ಮರಗಳು, ಗಾಳಿ; ಎಲ್ಲ ಜೀವ-ಜಂತುಗಳು ನಿಮ್ಮ ಜೊತೆ ಸಂಪರ್ಕಿಸುತ್ತಿವೆ. ಸೂಕ್ಷ್ಮ ಮಟ್ಟದಲ್ಲಿ, ಗಾಢವಾದ ಮಟ್ಟದಲ್ಲಿ ಖಚಿತವಾದ ಸಂವಾದವುಂಟಾಗುತ್ತಿದೆ.
ಸಂಸ್ಕೃತದಲ್ಲಿ ಒಂದು ಗಾದೆಯಿದೆ, ’ವಕಾರಂಭನಾರ್ಹ ವಿಕಾರೋ ನಾಮಧೇಯ’, ಎಂದರೆ ಮಾತುಗಳು ಸತ್ಯದ ವಿಕೃತ ರೂಪ. ಈಗಾಗಲೇ ಒಂದು ಸಂವಾದ ನಡೆಯುತ್ತಿದೆ. ಮಾತುಗಳಿಂದ ಅದನ್ನು ಸ್ವಲ್ಪ ವಿಕೃತಗೊಳಿಸುತ್ತಿದ್ದೀರ.
ಪದಗಳನ್ನು ಬಳಸಲೇಬಾರದೆಂದು ನಾವು ಹೇಳುತ್ತಿಲ್ಲ. ಅವುಗಳ ಅಗತ್ಯವಿದೆ. ಆದರೆ ಪದಗಳ ಹಿಂದೆ ಆ ಭಾವವಿರಬೇಕು. ನೀವು ಯಾರಿಗೋ, ’ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!’ ಎಂದು ಹೇಳಬಹುದು. ಆದರೆ ಅದರ ಹಿಂದೆ ಆ ಭಾವವಿರಬೇಕು.
ಸುಮ್ಮನೆ ಬಹಿರ್ಮುಖವಾಗಿ, ’ಓಹ್, ನಾನು ನಿಮ್ಮನು ತುಂಬಾ ಪ್ರ‍ೀತಿಸುತ್ತೇನೆ’ ಎನ್ನಬೇಡಿ.
ಆದ್ದರಿಂದ ಜ್ಞಾನಿಗಳು ಯಾವಾಗಲೂ ಸೂಕ್ಷ್ಮ ಮಟ್ಟದಲ್ಲಿ ಸಂಭಾಷಿಸುತ್ತಾರೆ, ನಂತರ ಅದಕ್ಕೆ ಪೂರಕವಾಗಿ ಪದಗಳನ್ನು ಬಳಸುತ್ತಾರೆ. ಆದರೆ ಅಜ್ಞಾನಿಗಳು ಬಾಹ್ಯ ಸಂವಾದವನ್ನು ಅವಲಂಬಿಸಿರುತ್ತಾರೆ. ಆದ್ದರಿಂದಲೇ ಬದುಕಿನಲ್ಲಿ ತಪ್ಪು ಗ್ರಹಿಕೆಗಳು ಬರುತ್ತವೆ. ಏಕೆ ಈ ತಪ್ಪು ಗ್ರಹಿಕೆಗಳು ತಲೆದೋರುತ್ತವೆ? ಕಾರಣ ಆಂತರ್ಯದ ಸಂಪರ್ಕ ಹೊಂದಿಲ್ಲದೇ ಇರುವುದು. ನೀವೇನೋ ಹೇಳುತ್ತೀರ, ಅದನ್ನು ಇತರರು ಮತ್ತೊಂದು ರೀತಿಯಲ್ಲಿ ಅರ್ಥೈಸುತ್ತಾರೆ.
ಒಮ್ಮೆ ನೀವು ನಿಮ್ಮ ಸ್ವಂತ ಜೀವನವನ್ನು ಹಿಂತಿರುಗಿ ನೋಡಿ. ನೀವು ನಿರ್ಣಯಿಸುತ್ತಿದ್ದಿರಿ,  ನಿರ್ಣಯಿಸುತ್ತಿದ್ದಿರಿ ಮತ್ತು ನಿರ್ಣಯಿಸುತ್ತಿದ್ದಿರಿ. ಅವರ ಬಗ್ಗೆ, ಇವರ ಬಗ್ಗೆ ಕೆಟ್ಟದ್ದನ್ನು  ಆಲೋಚಿಸುತ್ತಾ, ಆ ಕೋಪ ಎಷ್ಟು ತೀವ್ರವಾಗಿತ್ತು. ಸ್ವಲ್ಪ ಕಾಲದ ನಂತರ, ಕೆಲವು ತಿಂಗಳು ಅಥವಾ ಒಂದು ವರ್ಷವಾದ ತರುವಾಯ, ನಿಮ್ಮ ಮೇಲೆ ನಿಮಗೇ ನಗು ಬರಲು ಶುರುವಾಗುತ್ತದೆ, ’ಓಹ್, ನಾನೇಕೆ ಇಷ್ಟೊಂದು ಚಿಂತಿಸುತ್ತಿದ್ದೆ! ಇದೆಲ್ಲ  ವ್ಯರ್ಥ. ಅನವಶ್ಯಕವಾಗಿ ಚಿಂತಿಸುತ್ತಿದ್ದೆನಲ್ಲ.’
ಒಂದು ದಿನ ಮಹಿಳೆಯೊಬ್ಬಳು ಬಂದು, ’ಓಹ್, ನನ್ನ ಸಂಬಂಧವು ತುಂಬಾ ಹದಗೆಟ್ಟಿದೆ. ನನ್ನ ಪ್ರಿಯತಮನು ಕೋಪಗೊಂಡಿದ್ದು ನನ್ನನ್ನು ಬಿಟ್ಟು ಹೋಗುತ್ತಿದ್ದಾನೆ. ನಾನು ಅತ್ಯಂತ ತಳಮಳಗೊಂಡಿದ್ದೇನೆ’ ಎಂದು ಹೇಳಿದಳು. ಅವಳು ಅಳುತ್ತಲೇ ಇದ್ದಳು.
ಅದೇ ಮಹಿಳೆಯು ಎರಡು ತಿಂಗಳ ಬಳಿಕ, ’ಓಹ್, ಅದು ಅಂತ್ಯಗೊಂಡಿದ್ದು ಒಳ್ಳೆಯದೇ ಆಯಿತು. ನಾನೆಷ್ಟು ಕುರುಡಿಯಾಗಿದ್ದೆ. ಅವನಿಂದ ಬಂಧಿತಳಾಗಿದ್ದೆ. ಈಗ ಆ ಸಂಬಂಧವು ಇನ್ನೆಂದಿಗೂ ಇಲ್ಲ, ನಾನು ಸಂತೋಷವಾಗಿದ್ದೇನೆ.’
ಆದ್ದರಿಂದ, ಎಷ್ಟೋ ಬಾರಿ ನಮಗೇನು ಬೇಕು ಮತ್ತು ಯಾವ ಆಶೀರ್ವಾದವನ್ನು ಕೇಳಬೇಕೆಂದು ನಮಗೇ ತಿಳಿದಿರುವುದಿಲ್ಲ. ಅದಕ್ಕಾಗಿಯೇ, ಸದಾ ಅಲ್ಲದ್ದಿದ್ದರೂ, ಒಮ್ಮೊಮ್ಮೆಯಾದರೂ ಹಿಂತಿರುಗಿ ನಿಮ್ಮ ಮನಸ್ಸು ಎಲ್ಲಿ ಸ್ಥಾಪಿತವಾಗಿತ್ತು ಮತ್ತು ಹೇಗೆ ಚಲಿಸುತ್ತಿದೆಯೆಂದು ಪರಿಶೀಲಿಸಿ.
ಹೀಗೆ ಪದೇ ಪದೇ ಹಿಂದೆ ತಿರುಗಿ ನಿಮ್ಮ ಮನಸ್ಸನ್ನು ಶೋಧಿಸಿದರೆ ಎಂತಹ ತೃಪ್ತಿ ಮತ್ತು ಸಮಾಧಾನ ದೊರೆಯುವುದು. ಒಂದು, ಭೂತದಿಂದ ಏನ್ನನ್ನೋ ಕಲಿತಿರುವಿರೆಂದು ಸಮಾಧಾನ ಮತ್ತು ಎರಡನೆಯದಾಗಿ, ಏನು ಆಗಿದೆಯೋ ಅದು ಒಂದು ಕಾರಣದಿಂದಾಗಿದೆ. ಅದು ನಿಮ್ಮನ್ನು ಹೆಚ್ಚು ಸಂಪನ್ನಗೊಳಿಸಿದೆ, ಬುದ್ಧಿವಂತರನ್ನಾಗಿಸಿದೆ ಮತ್ತು ಗಾಢತೆಯನ್ನು ನೀಡಿದೆ. ಕನಿಷ್ಠ ಪಕ್ಷ ಈ ತಿಳುವಳಿಕೆಯಾದರೂ ನಿಮ್ಮಲ್ಲಿ ಮೂಡುವುದು.
ನೀವೇನು ಹೇಳುವಿರಿ? ಎಷ್ಟು ಜನರಿಗೆ ಹೀಗೆ ಅನಿಸುತ್ತದೆ?
ಮತ್ತೆ ಮತ್ತೆ ಕಳೆದುಹೋದ ಘಟನೆಗಳನ್ನು ನಾವು ಹಿಂತಿರುಗಿ ನೋಡದಿದ್ದರೆ, ಆಗ ಅದೇ ತಪ್ಪುಗಳನ್ನು ಮುಂದುವರೆಸುತ್ತೇವೆ, ಅದರಿಂದ ಏನನ್ನೂ ಕಲಿಯುವುದಿಲ್ಲ.
ಜೈನ ಸಂಪ್ರದಾಯದಲ್ಲಿ ಇದನ್ನು ’ಪ್ರತಿಕ್ರಮಣ’ ಎನ್ನುತ್ತಾರೆ, ಅಂದರೆ, ಪುನಃ ಹೋಗುವುದು, ಆ ಕರ್ಮಗಳನ್ನು ತೊಡೆದುಹಾಕುವುದು ಹಾಗೂ ಅದರಿಂದ ಕಲಿತು ಮುನ್ನಡೆಯುವುದು.
ಜೈನ ಸಾಧುಗಳು ದಿನನಿತ್ಯ ಕೆಲವು ಗಂಟೆಗಳ ಕಾಲ ಕುಳಿತು ಆತ್ಮಶೋಧನೆಯಲ್ಲಿ ನಿರತರಾಗುತ್ತರೆ. ನಿಜವಾಗಿಯೂ ಅವರಿಗೆ ಅಷ್ಟೊಂದು ಶೋಧನೆಯ ಅಗತ್ಯವಿಲ್ಲ ಏಕೆಂದರೆ ಅವರು ಅಷ್ಟಾಗಿ ಕೆಲಸ-ಕಾರ್ಯಗಳಲ್ಲಿ ತೊಡಗುವುದಿಲ್ಲ. ಯಾರು ಹೆಚ್ಚು ಕೆಲಸ-ಕಾರ್ಯಗಳಲ್ಲಿ ತೊಡಗಿರುತ್ತಾರೋ ಅವರು ಇದನ್ನು ಹೆಚ್ಚು ಹೆಚ್ಚು ಮಾಡಬೇಕು. ಪ್ರತಿದಿನ ಕನಿಷ್ಠ  ಹತ್ತು ನಿಮಿಷಗಳಾದರೂ ಕುಳಿತು ವೀಕ್ಷಿಸಬೇಕು – ನಾನೇನು ಮಾಡಿದೆ? ಜೀವನದಿಂದ ಏನನ್ನು ಕಲಿತಿರುವೆ? ಈ ದಿನ ಹೇಗಿತ್ತು? ನಡೆದ ಘಟನೆಯಿಂದ ಏನನ್ನು ಕಲಿಯಬಹುದಾಗಿದೆ?
ಪುನಃ ನೀವು ಏನನ್ನು ಕಲಿತಿರುವಿರೋ ಅದನ್ನೇ ಹಿಡಿದುಕೊಳ್ಳಬೇಕಾಗಿಲ್ಲ. ಕೆಲವು ಸಾರಿ ನೀವು ಯಾವುದನ್ನು ಕಲಿತಿರುವಿರೋ ಅದು ಸರಿಯಾಗಿ ಇರಬೇಕೆಂದೇನಿಲ್ಲ. ಆದ್ದರಿಂದಲೇ ಪೊಳ್ಳು ಮತ್ತು ಖಾಲಿಯಾಗಿರುವುದು ಅತಿ ಮುಖ್ಯ. ಎಲ್ಲ ಪರಿಕಲ್ಪನೆಗಳನ್ನು ಕೊನೆಗೊಳಿಸಿ ನಿಮ್ಮನ್ನು ಮುಕ್ತರನ್ನಾಗಿಸುತ್ತದೆ.
ಪ್ರ: ಪ್ರೀತಿಯ ಗುರೂಜೀ, ರಕ್ತದಾನ ಮಾಡುವುದು ಒಳ್ಳೆಯದೇ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಒಳ್ಳೆಯದು. ೨೪ ಗಂಟೆಗಳಲ್ಲಿ ಚೇತರಿಸಿಕೊಳ್ಳುವಿರಿ. ನಮ್ಮ ಶರೀರವು ಒಂದು ರಕ್ತ ತಯಾರಿಸುವ ಯಂತ್ರ. ರಕ್ತದಾನದಿಂದ ಜೀವಗಳನ್ನು ಉಳಿಸಬಹುದು.
ಪ್ರ: ಪ್ರೀತಿಯ ಗುರೂಜೀ, ತಾಳೆಗರಿ ನಾಡಿಶಾಸ್ತ್ರದ ಕುರಿತು ದಯವಿಟ್ಟು ಮಾತನಾಡುವಿರಾ?ಶ್ರೀ ಶ್ರೀ ರವಿಶಂಕರ್: ಪ್ರಾಚೀನ ಭಾರತದಲ್ಲಿ ಋಷಿಗಳು ಅತೀಂದ್ರಿಯರಿಗೆ ತರಬೇತಿ ನೀಡಲು ಶಾಲೆ ಅಥವಾ ವಿಶ್ವವಿದ್ಯಾನಿಲಯಗಳಿದ್ದವು. ಅತೀಂದ್ರಿಯನೆಂದರೆ ಭವಿಷ್ಯವನ್ನು ನೋಡುವವನು ಎಂದು. ಆದ್ದರಿಂದ ಹನ್ನೆರಡು ಇಲ್ಲವೇ ಹದಿಮೂರು ವರ್ಷಗಳ ಕಾಲ ಅಲ್ಲಿಯೇ ಉಳಿದುಕೊಂಡು, ಧ್ಯಾನದಲ್ಲಿ ಆಳವಾಗಿ ಹೋದಾಗ ಗುರುಗಳು ಅವರಿಗೆ ಒಂದು ಕೆಲಸವನ್ನು ಕೊಡುತ್ತಿದ್ದರು. ಅವರು ಹೇಳುತ್ತಿದ್ದರು, ’೨೦೧೫ರಲ್ಲಿ ಇಂತಹ ದಿನ ಇಂತಹ ನಿಮಿಷ ಯಾರೋ ಜನಿಸುವರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಲೆಕ್ಕ ಹಾಕಿ ಅವರ ಜೀವನ ಹೇಗಿರುವುದೆಂದು ತಿಳಿಸಿರಿ.’
ಇದು ಎರಡು ವಿಚಾರಗಳನ್ನು ಒಳಗೊಂಡಿದೆ – ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳು ಮತ್ತು ಆಕಾಶ ಹಾಗೂ ಕಾಲದ ಅಂತರ್ದೃಷ್ಟಿ. ಇದನ್ನೇ ಅವರು ಮಾಡುತ್ತಿದ್ದುದು.
ಆದರೂ ಸಹ ಇದನ್ನು ಶಿಷ್ಯರು ಬರೆದಿರುವುದರಿಂದ, ನೂರು ಪ್ರತಿಶತ ನಿಜವೆಂದು ನಂಬಲು ಸಾಧ್ಯವಿಲ್ಲ. ಶಿಷ್ಯರು ತಪ್ಪುಗಳನ್ನು ಮಾಡಬಹುದು. ಎಪ್ಪತ್ತು ಅಥವಾ ಎಂಬತ್ತು ಪ್ರತಿಶತ ಸರಿಯಿರಬಹುದು. ಕೆಲವು ಸಂಗತಿಗಳು ಭವಿಷ್ಯದಲ್ಲಿ ನಿಜವಾಗಲಾರದು. ಇದೊಂದು ಸಾಧ್ಯತೆಯಿದೆ. ಎರಡನೆಯದಾಗಿ, ಹೀಗೆ ಆಗಬಹುದು ಎಂದು ಸಾಧ್ಯತೆಯನ್ನು ನೀಡಬಹುದು ಅಷ್ಟೆ. ನೀವು ಧ್ಯಾನ ಮಾಡುವವರಾಗಿದ್ದು, ಆಧ್ಯಾತ್ಮದ ಹಾದಿಯಲ್ಲಿದ್ದರೆ ನಿಮ್ಮ ವಿಧಿಯನ್ನು ಬದಲಾಯಿಸುತ್ತಿರುತ್ತೀರ, ಏಕೆಂದರೆ ನಿಮ್ಮ ಜೀವನದಲ್ಲಿ ಹೆಚ್ಚು ಧನಾತ್ಮಕತೆಯನ್ನು ಕರೆತರುತ್ತೀರ.
ಈ ತಿಂಗಳ (ಏಪ್ರಿಲ್ ೨೦೧೨ರ) ಮೂರನೇ ತಾರೀಖು ಏನು ನಡೆಯಿತೆಂಬುದನ್ನು ನಿಮಗೆ ಹೇಳಬೇಕು. ಚೀನಾದಿಂದ ಒಬ್ಬ ಸನ್ಯಾಸಿ ಬಂದಿದ್ದರು. ಅವರು ಮಹಾನ್ ಅತೀಂದ್ರಿಯ ಪ್ರಜ್ಞೆಯುಳ್ಳವರು. ದಿನನಿತ್ಯ ಅವರ ಬಳಿ ಎರಡರಿಂದ ಮೂರು ಸಾವಿರ ಜನ ಹೋಗುವರು.
ನಾನು ಇಂಡೋನೇಷಿಯಾದಲ್ಲಿದ್ದಾಗ ಅವರು ನಮ್ಮ ಕಾರ್ಯಕರ್ತರೊಬ್ಬರನ್ನು ಕರೆದು ಗುರೂಜೀಯವರ ಬಳಿ ಬಂದು ಆಶೀರ್ವಾದ ಪಡೆಯಲು ಬಯಸುತ್ತೇನೆ ಎಂದರು.  ಅವರು, ’ಜ್ಞಾನೋದಯವು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.  ನಾನು ಬೌದ್ಧ ಧರ್ಮದವನು. ಆದರೆ ಅದು ಗಣನೆಗೆ ಬರುವುದಿಲ್ಲ. ಗುರೂಜೀಯವರು ಈ ಭೂಮಿಗೆ ಬಂದಿರುವುದು ಮತ್ತು ಅನೇಕ ಜನರಿಗೆ ಅವರಿಂದ ಲಾಭವಾಗುವುದೆಂದು ನನಗೆ ತಿಳಿದಿದೆ. ಅವರ ಆಶೀರ್ವಾದ ಪಡೆಯಲು ನಾನು ಬಯಸುತ್ತೇನೆ. ತುಂಬಾ ಸಮಯದ ನಂತರ ಬಂದಿದ್ದಾರೆ; ಅನೇಕ ಸಾವಿರ ವರ್ಷಗಳಾಗಿವೆ. ನನಗೆ ಖಂಡಿತವಾಗಿ ಅವರ ಆಶೀರ್ವಾದದ ಅವಶ್ಯಕತೆಯಿರುವುದು.
ಅವರು ಅತ್ಯಂತ ಸ್ನೇಹಪರರು, ಸಭ್ಯ ಆತ್ಮ. ಅವರು ಬಂದು, ಸ್ವಲ್ಪ ಸಮಯ ಮೌನವಾಗಿ ಕುಳಿತಿದ್ದು, ಆಶೀರ್ವಾದ ತೆಗೆದುಕೊಂಡು ಮುಂದಿನ ಫ್ಲೈಟ್ನಲ್ಲಿ ಹೊರಟುಹೋದರು.
ಕುತೂಹಲ ಸ್ವಭಾವದವರಾದ ಅಭಿಮಾನಿಯೋಬ್ಬರು, ‘ಆರ್ಟ್ ಆಫ್ ಲಿವಿಂಗ್ ಮತ್ತು ಗುರೂಜೀಯವರಿಗೆ ಮುಂದೆ ಏನಾಗುವುದೆಂದು ಭವಿಷ್ಯ ನುಡಿಯಬೇಕು.’
ಅವರು ಹೇಳಿದರು, ’ಇಲ್ಲ, ನನ್ನಿಂದ ಸಾಧ್ಯವಿಲ್ಲ. ಮುಕ್ತರಾದವರ ಬಗ್ಗೆ ನನ್ನಿಂದ ಭವಿಷ್ಯ ಹೇಳಲು ಆಗುವುದಿಲ್ಲ. ಮನಸ್ಸು ಬಂಧನಕ್ಕೆ ಸಿಲುಕ್ಕಿದ್ದರೆ ಮಾತ್ರ ಭವಿಷ್ಯ ತಿಳಿಸಬಹುದು. ಮನಸ್ಸೇ ಇಲ್ಲದವರ (no mind) ಬಗ್ಗೆ ತಿಳಿಸಲಾರೆ.’
ನನಗೂ ಅನಿಸಿತು ಏನು ನಡೆಯುವುದೆಂದು ನಾನೂ ಕೇಳೋಣ ಎಂದು.
ಅವರು ಹೀಗೆಂದರು, ‘ಎಲ್ಲಿ ಮನಸ್ಸಿನ ಅಸ್ಥಿತ್ವವೇ ಇಲ್ಲವೋ (no mind), ಅಲ್ಲಿ ಕೇವಲ ಆಕಾಶವೊಂದೇ ಇರುವುದು, ನನ್ನಿಂದ ಭವಿಷ್ಯ ಹೇಳಲಾಗದು. ಗುರೂಜೀಯವರು ಕೇವಲ ಆಕಾಶದಿಂದ ಕೂಡಿರುವರು, ನನ್ನಿಂದ  ಭವಿಷ್ಯ ನುಡಿಯಲಾಗದು.’
ನೀವು ಜಪ, ಧ್ಯಾನ ಮತ್ತು ಪ್ರಾಣಾಯಾಮ ಮಾಡುತ್ತಿದ್ದರೆ, ನಿಮ್ಮ ಇಚ್ಛಾ ಸ್ವಾತಂತ್ರ್ಯ ಹೆಚ್ಚುತ್ತದೆ. ಜೀವನದಲ್ಲಿ ಕೆಲವು ಘಟನೆಗಳಿಂದ ಬಂಧಿತರಾಗುವುದಿಲ್ಲ.
ಹೀಗೆ ಹೇಳುತ್ತಾರೆ, ‘ಇಂತಹ ಸಮಸ್ಯೆಗಳು ಬರಬಹುದು, ಆದ್ದರಿಂದ ಜಾಗೃತರಾಗಿರಿ.’
ವೈದ್ಯರು ಹೇಳುವ ಹಾಗೆ, ‘ನಿಮಗೆ ತುಂಬಾ ಕೊಲೆಸ್ಟ್ರಾಲ್ ಇದೆ, ಗಮನವಹಿಸಿ, ವ್ಯಾಯಾಮ ಮಾಡಿ.’ ಎಂದು. ಹಾಗೆಯೇ, ನಿಮಗೆ ಮಧುಮೇಹವಿದ್ದರೆ, ನೀವು ಜಾಗ್ರತೆವಹಿಸಬೇಕು.
ಅವರ ಸಲಹೆಗಳು ನಿಮಗೆ ಯಾವ ವೈದ್ಯಕೀಯ ಸಮಸ್ಯೆಯಿದೆಯೆಂಬುದರ ಮೇಲೆ ಆಧರಿಸಿದ್ದು, ಅದಕ್ಕೆ ಔಷಧಿಯನ್ನು ನೀಡುವರು – ಇದನ್ನು ನೀವು ಮಾಡಿದರೆ ತೊಂದರೆಯಾಗುವುದಿಲ್ಲ.
ಅದರಂತೆ, ಜ್ಯೋತಿಷಿಗಳೂ ಕೂಡ ಹೇಳುತ್ತಾರೆ, ‘ಓಹ್, ಎಂಟನೆಯ ಮನೆಗೆ ಗುರು ಬರುವುದರಿಂದ ನಿಮ್ಮ ಮನಸ್ಸು ಅಸ್ತವ್ಯಸ್ತವಾಗುವುದು. ನಿಮ್ಮ ನಂಬಿಕೆ-ವಿಶ್ವಾಸಗಳೆಲ್ಲವೂ ಹೊರಟು ಹೋಗುವವು. ನಿಮ್ಮ ಮೇಲೆ ನಿಮಗೇ ವಿಶ್ವಾಸವಿರುವುದಿಲ್ಲ, ಯಾರ ಮೇಲೂ ವಿಶ್ವಾಸವಿರುವುದಿಲ್ಲ, ನೀವು ಮಾಡುವ ಕೆಲಸ ಬಗ್ಗೆ ವಿಶ್ವಾಸವಿರುವುದಿಲ್ಲ. ನೀವು ಚಿಂತೆಗೊಳಗಾಗುವಿರಿ. ಒಂದು ಪೂರ್ಣ ವರ್ಷ ಹೀಗೆಯೇ ಮುಂದುವರೆಯುವುದು, ಆದರೆ ಈ ನಾಲ್ಕರಿಂದ ಐದು ತಿಂಗಳು ಅತ್ಯಂತ ಕಷ್ಟಕರವಾಗಿರುವುದು. ಆದ್ದರಿಂದ ನೀವು ಧ್ಯಾನ, ಪ್ರಾಣಾಯಾಮ ಮತ್ತು ಪ್ರಾರ್ಥನೆಗಳನ್ನು ನಿತ್ಯ ಪೂರೈಸುವುದರಿಂದ ಈ ಹಂತವನ್ನು ದಾಟಲು ಸಹಾಯವಾಗುವುದು. ಹಾಗೂ ಈ ಸಮಯದಲ್ಲಿ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಡಿ.’
ಹೀಗೆ ಮನೋಗತಿಯ ಬಗ್ಗೆ ಕೆಲವು ಮುನ್ನೆಚರಿಕೆಗಳನ್ನು ಹೇಳುವರು.
ಪ್ರ: ನನ್ನ ಪ್ರಶ್ನೆಯೇನೆಂದರೆ ಈ ಭೂಮಿಗೆ ನಾನು ಬಂದಿರುವ ಉದ್ದೇಶವೇನು? ಯಾವ ಕೆಲಸವನ್ನು ಮಾಡಬೇಕು? ನನಗೆ ತುಂಬಾ ಗೊಂದಲವಾಗಿದೆ. ನನಗೆ ಅನೇಕ ಸಾಮರ್ಥ್ಯಗಳಿವೆ ಆದರೆ ನನ್ನ ಸಾಮರ್ಥ್ಯಗಳ ಬಗ್ಗೆ ನನಗೆ ವಿಶ್ವಾಸವಿಲ್ಲ. ಈಗ ನಾನು ಯೋಚಿಸುತ್ತಿದ್ದೇನೆ, ’ಯಾರು ಈ ಪ್ರಶ್ನೆಯನ್ನು ಕೇಳುತ್ತಿರುವುದು?’ ಪುನಃ ನನಗೆ ತಿಳಿಯದು. ಈ ಅರಿವಿಲ್ಲದೇ ಇರುವ ಬಗ್ಗೆ ನನಗೆ ಬೇಸರವಾಗಿದೆ.ಶ್ರೀ ಶ್ರೀ ರವಿಶಂಕರ್: ಈಗ ನಾನೇನಾದರು ನಿನಗೆ ಉತ್ತರಿಸಿದರೆ, ಅದಕ್ಕೂ, ’ಯಾರು ಕೇಳುತ್ತಿರುವುದು?’ ಎಂದು ಅಚ್ಚರಿಪಡುವೆ. ತುಂಬಾ ಸ್ವಯಂ ಪರೀಕ್ಷೆ ಬೇಡ. ಇದೊಂದು ಗೀಳಾಗಬಹುದು. ಸದಾ ಕಾಲ, ’ಯಾರು ಕೇಳುತ್ತಿರುವುದು? ಯಾರು ಸಾಕ್ಷಿಯಾಗಿರುವುದು? ನಾನು ಸಾಕ್ಷಿಯಾಗಿದ್ದರೆ, ಆ ನಾನು ಯಾರು? ಯಾರು ಮಾತನಾಡುತ್ತಿರುವುದು?’ ಈ ಸ್ವಯಂಶೋಧನೆ ಒಳ್ಳೆಯದು. ಸ್ವಯಂಶೋಧನೆಯ ಅಗತ್ಯವಿದೆ, ಆದರೆ ಅದು ಅತಿಯಾದರೂ ನಿಮ್ಮನ್ನು ಅನಗತ್ಯ ಗೊಂದಲಕ್ಕೀಡು ಮಾಡುತ್ತದೆ ಮತ್ತು ಅಶಾಂತರನ್ನಾಗಿಸುತ್ತದೆ. ನೀವು ಶಿಬಿರದಲ್ಲಿದ್ದಾಗ ಅಥವಾ ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಂಡಾಗ ಮಾತ್ರ ಈ ಶೋಧವನ್ನು ಮಾಡಬೇಕು. ನಂತರ ನೀವು ಕೇಳಬಹುದು, ‘ನಾನು ಯಾರು? ವಿಶ್ವವೆಂದರೇನು? ೨೪ ಗಂಟೆಯೂ ಸ್ವಯಂಶೊಧನೆಯು ಸಾಧ್ಯವಿಲ್ಲ. ಇಲ್ಲದಿದ್ದರೆ ಜಗತ್ತಿನಲ್ಲಿ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ.
ಸ್ನಾನದ ಹಾಗೆ ಇದು. ೨೪ ಗಂಟೆಯೂ ಸ್ನಾನ ಮಾಡಲಾಗದು. ಆಗ ನೀವು ನೀರಿನಲ್ಲಿರುವ ಮೀನಾಗಬೇಕಾಗುತ್ತದೆ! ಆದ್ದರಿಂದ, ನೀವು ಹೀಗೆ ಪ್ರತಿ ಹೆಜ್ಜೆಗೂ ಪರಿಶೀಲಿಸುತ್ತಲೇ, ಪರೀಕ್ಷಿಸುತ್ತಲೇ ಇದ್ದರೆ, ನೀರಿನಿಂದಾಚೆಯಿರುವ ಮೀನಿನ ಹಾಗಾಗುತ್ತೀರ.
ನಿಮ್ಮ ಕೆಲಸ ಮಾಡಿ. ಯಾವ ಕೆಲಸ ಮಾಡುತ್ತೀರೆಂಬುದು ಮುಖ್ಯವಲ್ಲ. ಜೀವನೋಪಾಯಕ್ಕಾಗಿ ಯಾವ ಕೆಲಸವನ್ನಾದರೂ ಮಾಡಿ. ಬದುಕಲು ಯಾವ ಕೆಲಸವಾದರೂ ಸರಿ, ಯಾವ ಕೆಲಸವು ಚೆನ್ನಾಗಿ ಹಣ ನೀಡುವುದೋ ಅದು.
ಈಗ ನಿಮಗೆ ತಿಳಿದಿರಬಹುದು, ನಿಮ್ಮ ಕೆಲಸ ಬೇರೆ, ಸೇವೆ ಬೇರೆ ಮತ್ತು ಮನೋರಂಜನೆ ಅಥವಾ ಹವ್ಯಾಸ ಬೇರೆ. ಇವೆಲ್ಲವನ್ನೂ ಒಂದುಗೂಡಿಸಲು ಯತ್ನಿಸಿದರೆ, ಆಗ ಅದು ಸವಾಲಾಗಿ ಪರಿಣಮಿಸುತ್ತದೆ. ನಿಮ್ಮ ಕೆಲಸವನ್ನು ಹವ್ಯಾಸವನ್ನಾಗಿ ಪರಿವರ್ತಿಸುವುದಾದರೆ, ಅದನ್ನೇ ಅನೇಕರು ಮಾಡುವುದು, ಅವರು ಕೆಲಸ ಕಳೆದುಕೊಳ್ಳುವರು!
ನಿಮ್ಮ ಮನೋರಂಜನೆಯನ್ನು ಕೆಲಸವನ್ನಾಗಿ ಮಾರ್ಪಾಡಿಸಿಕೊಳ್ಳಬೇಕಾದರೆ, ಸಾಕಷ್ಟು ಹಣ ಮಾಡಿಕೊಳ್ಳಲಾರಿರಿ ಹಾಗೂ ಸದಾ ಕೊರತೆಯ ಭಾವವಿರುವುದು. ಹಣದ ಅಭಾವವಿರುವುದು. ಆದ್ದರಿಂದ ನಿರ್ಧಾರ ಮತ್ತು ವಿವೇಕ ಎರಡೂ ನಿಮಗಿರಬೇಕು.
ಜೀವನದಲ್ಲಿ ಜವಾಬ್ದಾರಿಗಳಿದ್ದಾಗ, ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯಿದ್ದಾಗ, ಸ್ಥಿರವಾದ, ಸಾಕಷ್ಟು ಹಣ ಮತ್ತು ಸಮಯವನ್ನು ನೀಡುವ ಕೆಲಸವನ್ನು ಆಯ್ಕೆ ಮಾಡಿರಿ. ಒಮ್ಮೆ ಇದನ್ನು ನಿರ್ವಹಿಸಿದ ನಂತರ ಮತ್ತೆ ಅದರ ಬಗ್ಗೆ ಚಿಂತಿಸಬೇಡಿ. ಆದರೆ ಅದಕ್ಕಿಂತ ಉತ್ತಮವಾದುದು ಸಿಕ್ಕರೆ, ಅದಕ್ಕೆ ಹೋಗಬಹುದು, ತೊಂದರೆಯಿಲ್ಲ.
ನಂತರ, ಸ್ವಲ್ಪ ಸಮಯ ತೆಗೆದುಕೊಂಡು ಸಮಾಜಸೇವೆ ಮಾಡಿ. ನಿಮ್ಮ ಜೀವನವಿಡೀ ಜೀವನೋಪಾಯಕ್ಕಾಗಿ ದುಡಿಯುತ್ತಿದ್ದರೆ, ಬದುಕು ನಿರರ್ಥಕವೆನಿಸುವುದು.
ಏನು ಮಾಡುತ್ತೀರ? ಸಂಪಾದಿಸು, ಸಂಪಾದಿಸು, ಸಂಪಾದಿಸು ಮತ್ತು ಒಂದು ಆಡಿ ಅಥವಾ ಬೆಂಜ್ ಕಾರ್ ಕೊಳ್ಳುವುದು. ಮನೆ ಮತ್ತು ಒಡವೆಯನ್ನು ಕೊಳ್ಳುವಿರಿ, ಅಷ್ಟೇ! ಇದರಿಂದ ತೃಪ್ತಿ ಸಿಗುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಂಡು ಯಾವುದಾದರೂ ಸಮಾಜಸೇವೆಯಲ್ಲಿ ನಿರತರಾಗಿ. ಬನ್ನಿ, ಆರ್ಟ್ ಆಫ್ ಲಿವಿಂಗ್ ಪರಿವಾರದ ಸದಸ್ಯರಾಗಿ.
ಒಬ್ಬರೇ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ಹತ್ತು ಅಥವಾ ಹದಿನೈದು ಜನ ಸೇರಿ ಒಂದು ಯೋಜನೆಯನ್ನು ಕೈಗೆತ್ತಿಕೊಳ್ಳಿ. ನಿಮ್ಮ ಸಹಾಯದ ಅಗತ್ಯವಿರುವ ಮಕ್ಕಳಿದ್ದಾರೆ. ನಿಮಗೆ ಸಮಯ ನೀಡಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲೊಂದು ಡಬ್ಬಿಯಿಟ್ಟು, ಕೆಲವು ಯೂರೋಗಳನ್ನು, ನಿಮಗೆ ಎಷ್ಟು ಸಾಧ್ಯವೋ ಅಷ್ಟನ್ನು ಅದರೊಳಗೆ ಹಾಕಿ. ಅದು ಯಾವುದಾದರೊಂದು ಸಮಾಜಸೇವೆಗೆ ವಿನಿಯೋಗವಾಗುವುದು.
ಜರ್ಮನಿ ಮತ್ತು ಇತರ ಯೂರೋಪಿಯನ್ ದೇಶಗಳಿಂದ ಅನೇಕ ಜನರು ಶಾಲೆಗಳಿಗೆ ಸಹಾಯ ಮಾಡುತ್ತಿದ್ದಾರೆ. ಸದ್ಯಕ್ಕೆ ಭಾರತದಲ್ಲಿ ೧೮೫ ಶಾಲೆಗಳನ್ನು ನಡೆಸುತ್ತಿದ್ದೇವೆ. ಪ್ರತಿದಿನ ಒಂದು ಯೂರೋ ದಾನದಿಂದ ಸುಮಾರು ೨೫,೦೦೦ ಮಕ್ಕಳು ಒಳ್ಳೆಯ ಆಹಾರ, ಶಿಕ್ಷಣ ಮತ್ತು ವೈದ್ಯಕೀಯ ನೆರವನ್ನು ಪಡೆಯುತ್ತಿದ್ದಾರೆ.
ಹೀಗೆ ಯಾವುದಾದರೂ ಸಮಾಜ ಸೇವೆಯಲ್ಲಿ ನಿರತರಾಗಿ. ಅದರಿಂದ ತೃಪ್ತಿ ದೊರೆಯುವುದು, ‘ಓಹ್, ನಾನು ಈ ಕಾರ್ಯಕ್ಕಾಗಿ ನೆರವು ನೀಡುತ್ತಿದ್ದೇನೆ. ನಾನೊಂದು ಯೋಜನೆಯ ಭಾಗವಾಗಿದ್ದೇನೆ.’
ನೀವೊಂದು ಯೋಜನೆಯನ್ನು ನಡೆಸುತ್ತಿದ್ದರೆ, ಒಳ್ಳೆಯದು. ನೀವು ನಡೆಸಲಾಗದಿದ್ದರೆ, ಕನಿಷ್ಠ ಅದರ ಒಂದು ಭಾಗವಾದರೂ ಆಗಬಹುದು. ಕಟ್ಟಡದ ಒಂದು ಇಟ್ಟಿಗೆಯಾಗಬಹುದು. ಒಂದು ಇಟ್ಟಿಗೆಗೆ ನೆರವು ನೀಡಿ. ಅದು ತೃಪ್ತಿ ಕೊಡುತ್ತದೆ.
ನಂತರ, ಧ್ಯಾನ ಮಾಡಲು ಮತ್ತು ನಿಮ್ಮ ಆತ್ಮೋನ್ನತಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ, ಈಗ ಸಮಯ ತೆಗೆದುಕೊಂಡಿರುವ ಹಾಗೆ (ಶಿಬಿರದಲ್ಲಿ ಭಾಗವಹಿಸುತ್ತಿರುವವರನ್ನು ಉದ್ದೇಶಿಸಿ). ನೀವು ಹಿಂದಿರುಗಿದ ಮೇಲೆ ಸಂಪೂರ್ಣವಾಗಿ ಲವಲವಿಕೆಯಿಂದ ಕೂಡಿರುತ್ತೀರ. ಎಷ್ಟು ಜನರಿಗೆ ಹಿಂದಿರುಗಿದ ನಂತರ ಚೈತನ್ಯದಾಯಕವೆನಿಸುತ್ತದೆ? ಇದನ್ನು ಅನುಭವಿಸಿದ್ದೀರಾ?
ವರ್ಷಕ್ಕೆ ಎರಡು ಬಾರಿಯಾದರೂ ಮಾನಸಿಕ ಮತ್ತು ಚೈತನ್ಯದ ಪುನರುಜ್ಜೀವನಕ್ಕೆ ಒಳ್ಳೆಯದು. ಅದು ತುಂಬಾ ಮುಖ್ಯ.
ಇದನ್ನು ಮಾಡಿ, ನಂತರ ನಲವತ್ತು, ಐವತ್ತು ಅಥವಾ ಅರವತ್ತು ವರ್ಷಗಳಾದ ಮೇಲೆ ನಿವೃತ್ತರಾಗಿ ಬನ್ನಿ, ಸಂಪೂರ್ಣವಾಗಿ  ಜ್ಞಾನದಲ್ಲಿರಿ. ಉನ್ನತ ಜ್ಞಾನಕ್ಕಾಗಿ, ಉನ್ನತ ವಿವೇಕದ ಸಲುವಾಗಿ ಅಥವಾ ಸಮಾಜ ಸೇವೆಗಳಿಗಾಗಿ ನಿಮ್ಮನ್ನು ಸಮರ್ಪಿಸಿಕೊಳ್ಳಿರಿ. ಸಮಾಜದಲ್ಲಿ ಒಳ್ಳೆಯ ಕೆಲಸವನ್ನು ಮಾಡಿ. ಆಮೇಲೆ ಜೀವ ಹೊರಟುಹೋಗಿರುವುದು! ಒಂದು ದಿನ ನೀವು ತೆರಳುವಿರಿ (ಬೆರಳಿನಿಂದ ಚಿಟಿಕೆ ಹಾಕುತ್ತಾ), ನಿಮಗೆ ಗೊತ್ತೇ ಆಗುವುದಿಲ್ಲ! ಇತರರು ನಿಮ್ಮ ದೇಹವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡುತ್ತಾರೆ. ಮುಗಿಯಿತು!
ಒಂದು ದಿನ, (ಕೈಗಳನ್ನು ಜೋಡಿಸುತ್ತಾ) ‘ಅವರ ಆತ್ಮವು ಶಾಂತಿಯಿಂದ ನೆಲೆಸಲಿ’  ಎಂದು ಸ್ಮರಣಾರ್ಥಕ ಕಾರ್ಯಗಳನ್ನು ಮಾಡುವರು. ಅಷ್ಟರೊಳಗಾಗಲೇ ನೀವು ಶಾಂತಿಯಿಂದ ನೆಲೆಸಿರುವಿರಿ! ಅವರ ಹಾರೈಕೆಯು ನಂತರ ಬರುವುದು.
ಒಮ್ಮೆ ನಮ್ಮ ಶರೀರವನ್ನು ಬಿಟ್ಟ ಮೇಲೆ ಶಾಂತರಾಗಿರುವೆವು, ಆಗ ವಿನೋದವಿರುವುದಿಲ್ಲ. ಬದುಕಿರುವಾಗಲೇ ಶಾಂತರಾಗಿರಬೇಕು ಹಾಗೂ ನಮ್ಮ ನೆರೆಹೊರೆಯವರಿಗೆ ಸಹಾಯಕರಾಗಿರಬೇಕು. ಏನೆನ್ನುತ್ತೀರಿ? ಅಲ್ಲವೇ?
ಅದೇ ವಿವೇಕ. ವಿವೇಕದಿಂದ ಈಗ ಮತ್ತು ಇಲ್ಲಿಯೇ ಸಂತೋಷ ಸಿಗುವುದು.
‘ಹತ್ತು ದಿನ ಅಥವಾ ಹತ್ತು ವರ್ಷ ಯಾವುದನ್ನೋ ಮಾಡಿ ನಂತರ ಒಂದು ದಿನ ನಿಮಗೆ ಸಂತೋಷ ದೊರೆಯುವುದೆಂದು ಹೇಳುತ್ತಿಲ್ಲ.’
ಹಾಗಿದೆಯೇ? ಇಲ್ಲ.
ನಮ್ಮ ಬಳಿ ಎರಡು ಅಸ್ತ್ರಗಳಿವೆ – ಸೋ ಹಮ್ ಮತ್ತು ಸೋ ವಾಟ್ (ಆದರೇನು). ಎಲ್ಲವೂ ಬದಲಾಗುತ್ತಿರುತ್ತದೆ.
ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಸ್ನೇಹಿತರು ಶತ್ರುಗಳಾಗುವರು ಮತ್ತು ಶತ್ರುಗಳು ಸ್ನೇಹಿತರಾಗುವರು. ಇದೇ ಪ್ರಪಂಚದಲ್ಲಿ ನಡೆಯುವುದು, ಅಲ್ಲವೇ?
ಯಾರು, ‘ನಿನ್ನನ್ನು ಬಿಟ್ಟಿರಲಾರೆ’ ಎನ್ನುವರೋ ಅವರೇ ತರುವಾಯ, ‘ನಿನ್ನನ್ನು ಸಹಿಸಿಕೊಳ್ಳಲಾಗದು’ ಎನ್ನುವರು.
ಇದು ಅನೇಕ ಸಲ ನಡೆಯುವಂತಹುದು. ಒಂದು ಬಾರಿಯಲ್ಲ, ಆದರೆ ಎರಡು, ಮೂರು, ನಾಲ್ಕು ಬಾರಿಯಾಗುವುದು.
ಪ್ರೀತಿಯು ಹೇಗೆ ಕೆಲಸ ಮಾಡುವುದೆಂದು ಒಬ್ಬ ಮಹಿಳೆಯು ವಿಚಾರಗೋಷ್ಠಿಯಲ್ಲಿ ತಿಳಿಸುತ್ತಿದ್ದಳು. ಆ ಮಹಿಳೆಯು ಏಳು ಬಾರಿ ವಿಚ್ಛೇದಿತಳಾಗಿದ್ದಳು! ನಾನು ಹೇಳಿದೆ, ‘ಅವಳು ಅತ್ಯಂತ ಅರ್ಹಳು ಏಕೆಂದರೆ ಏಳು ಬಾರಿ ಅದು ಹೇಗೆ ಕೆಲಸ ಮಾಡಲಿಲ್ಲವೆಂದು ತಿಳಿದಿದ್ದಾಳೆ. ಈಗ ಅದನ್ನು ಹಂಚಿಕೊಳ್ಳಬಹುದು!’ ಎಂದು.
ನೋಡಿ, ಪ್ರಪಂಚದಲ್ಲಿ ಸ್ನೇಹಿತರನ್ನು ಹುಡುಕಲು  ಹೊರಟಾಗ ನಮಗೆ ಒಬ್ಬ ಒಳ್ಳೆಯ ಸ್ನೇಹಿತ ಸಿಗುವುದಿಲ್ಲ. ಆದರೆ, ನಿಮ್ಮೊಳಗೇ  ಹುಡುಕಲು ಪ್ರಾರಂಭಿಸಿದರೆ, ನಿಮ್ಮ ಉನ್ನತ ಆತ್ಮದೊಂದಿಗೆ, ನಿಮ್ಮ ಆಂತರ್ಯದೊಂದಿಗೆ ಸ್ನೇಹ ಬೆಳೆಸಿದರೆ, ಸಹಜವಾಗಿಯೇ ನಿಮ್ಮೊಳಗಿನಿಂದ ಸ್ನೇಹ ಹೊರಹೊಮ್ಮುವುದು.
ನೀವು ಸ್ನೇಹಮಯಿಯಾಗಿದ್ದಾಗ, ಇಡೀ ಜಗತ್ತು ನಿಮ್ಮ ಸ್ನೇಹಿತರಾಗುವುದು. ಎಲ್ಲರೂ ನಿಮ್ಮತ್ತ ಧಾವಿಸುವರು. ನಿಮ್ಮ ಶತ್ರುಗಳೂ ಕೂಡ ನಿಮ್ಮೆದುರು ಸ್ನೇಹಿತರಂತೆ ವರ್ತಿಸುವರು. ನೀವು ಹೋದ ಮೇಲೆ ನೀವು ಅವರ ಶತ್ರುವೆಂದು ತಿಳಿಯಬಹುದು.
ಹೃದಯಪೂರ್ವಕವಾಗಿ ಯಾರೊಡನೆಯೂ ದ್ವೇಷವನ್ನು ಸಾಧಿಸಬೇಡಿ. ಅದು ನನ್ನ ನೀತಿ. ನನ್ನ ಕಡೆಯಿಂದ, ನನಗೆ ಯಾರೂ ಶತ್ರುಗಳಿಲ್ಲ.
ನಾನು ಚಿಕ್ಕವನಾಗಿದ್ದಾಗ, ವೇದದಿಂದ ಒಂದು ಸಂಸ್ಕೃತ ಶ್ಲೋಕವನ್ನು ಕಲಿತಿದ್ದೆ, ’ಅಜಾತಶತ್ರು ಅಜರಸ್ವರ್ವರ್ತಿ.’ ಅಂದರೆ ’ನಾನೆಂದೂ ವೃದ್ಧನಾಗುವುದಿಲ್ಲ ಏಕೆಂದರೆ ನಾನು ನನ್ನ ಆಂತರ್ಯದಲ್ಲಿ ನೆಲೆಸಿದ್ದೇನೆ. ನನಗೆ ಆಗ ಹತ್ತು ಅಥವಾ ಹನ್ನೆರಡು ವರ್ಷವಿರಬಹುದು. ಹತ್ತು ಸಾವಿರ  ಶ್ಲೋಕಗಳಲ್ಲಿ ಈ ಶ್ಲೋಕ ನನ್ನ ಗಮನ ಸೆಳೆಯಿತು.
ನೀವು ನಿಮ್ಮ ಆಂತರ್ಯದಲ್ಲಿ ನೆಲೆಸಿದ್ದರೆ, ಎಂದಿಗೂ ವೃದ್ಧರಾಗುವುದಿಲ್ಲ. ವಯಸ್ಸಾಗುವುದೆಂದರೆ ಸುಸ್ತಾಗುವುದು, ನಿರುತ್ಸಾಹ, ಯಾವುದೂ ಸರಿಯಿಲ್ಲವೆಂದೆನಿಸುವುದು, ನಿರಾಶಾದಾಯಕ ಭಾವ; ಮನಸ್ಸಿನಲ್ಲಿ ಋಣಾತ್ಮಕ ಸಂವಾದಗಳು, ’ಓಹ್, ನನಗೆಲ್ಲ ಗೊತ್ತಿದೆ. ನಾನೆಲ್ಲ ನೋಡಿದ್ದೇನೆ’ – ಈ ರೀತಿಯ ಮನೋಭಾವ. ನವೀನತೆಯಿಲ್ಲ, ಜೀವಂತಿಕೆಯಿಲ್ಲ.
ಅಜರ  ಎಂದರೆ ಜೀರ್ಣವಾಗದಿರುವುದು ಅಥವಾ ವೃದ್ಧನಾಗದಿರುವುದು. ನಿಮಗೆ ಗೊತ್ತಿದೆಯೇ, ಅತ್ಯಂತ ಉತ್ಸಾಹ ಹಾಗೂ ಚಟುವಟಿಕೆಯಿಂದಿರು ವೃದ್ಧರಿದ್ದಾರೆ.
ನಾನು ತೈವಾನ್ ಗೆ ಹೋಗಿದ್ದೆ. ೮೦೦೦ ಜನರಿಂದ ತುಂಬಿರುವ ಕ್ರೀಡಾಂಗಣದಲ್ಲಿ ಮಹಾಸತ್ಸಂಗವಿತ್ತು. ಜನರು ತುಂಬಾ ಸಂತೋಷವಾಗಿದ್ದರು. ನಂತರ ನನ್ನ ವಸತಿಗೆ ಹಿಂದಿರುಗಿದಾಗ, ೮೦ ವರ್ಷದ ವೃದ್ಧ ಸಜ್ಜನರು ಬಂದರು. ಅತ್ಯಂತ ಉತ್ಸಾಹವುಳ್ಳವರಾಗಿದ್ದರು. ಅವರೆಂದರು, ’ಇದು ಮಹತ್ತರವಾದುದು! ನಾನು ಸ್ವಲ್ಪ ಕೆಲಸ ಮಾಡಲು  ಬಯಸುತ್ತೇನೆ. ಈ ಜ್ಞಾನವನ್ನು ಹರಡಲು ಬಯಸುತ್ತೇನೆ. ಚೀನಾದ ಮುಖ್ಯಪ್ರದೇಶದಲ್ಲಿ ಅನೇಕ ಮಿಲಿಯನ್ ಜನರು ಕ್ಯಾನ್ಸರ್ ಮತ್ತಿತರ ರೋಗಗಳಿಂದ ಬಳಲುತ್ತಿದ್ದಾರೆ. ಗುರೂಜೀ, ನಾನು ನಿಮ್ಮನ್ನು ಚೀನಾದ ಮುಖ್ಯಪ್ರದೇಶಕ್ಕೆ ಕರೆದುಕೊಂಡು ಹೋಗಲು ಬಯಸುತ್ತೇನೆ. ಅದಕ್ಕೆ ಏರ್ಪಾಡು ಮಾಡುತ್ತೇನೆ..’
ಅವರಿಗೆ ೮೦ರ ಪ್ರಾಯ, ಎಲ್ಲಿಗಾದರೂ ಪ್ರಯಾಣ ಮಾಡಲು ಸಿದ್ಧರಿದ್ದಾರೆ. ನೋಡಲು ದುರ್ಬಲರಂತೆ ಕಂಡರೂ, ಅವರ ಉತ್ಸಾಹ ಎಷ್ಟು ಅಧಿಕವಾಗಿದೆ! ಅವರಷ್ಟೇ ಪ್ರಾಯದ ತಮ್ಮ ಸ್ನೇಹಿತರೊಬ್ಬರನ್ನು ಕರೆದುಕೊಂಡು ಬಂದರು. ಅವರೆಂದರು, ’ನಾವು ನಿಮ್ಮ ಸೈನಿಕರು!’ ಮೊದಲನೇ ಸಲ ನನ್ನನ್ನು ನೋಡುತ್ತಿದ್ದರು.
ಹಾಗೆಯೇ, ಜಪಾನಿನಲ್ಲಿ ಸುಮರು ೭೮ ವರ್ಷದ ವೃದ್ಧರು ತುಂಬು ಉತ್ಸಾಹಿಗಳಾಗಿದ್ದರು. ನಾನು ಮಾತನಾಡಲು ಕಾರ್ಯಕ್ರಮವೊಂದನ್ನು ಏರ್ಪಡಿಸಿದರು ಮತ್ತು ಅನೇಕ ಜನರನ್ನು ಆಹ್ವಾನಿಸಿದರು. ಅವರು, ’ಓಹ್, ನನಗೆ ವಯಸ್ಸಾಗಿದೆ. ನಾನೇನು ಮಾಡಲು ಸಾಧ್ಯವಿಲ್ಲ’ ಎನ್ನಲಿಲ್ಲ. ಇಲ್ಲ, ಆ ರೀತಿ ಹೇಳಲಿಲ್ಲ, ಬದಲಿಗೆ ಅವರು ಅತ್ಯಂತ ಉತ್ಸಾಹಿಗಳಾಗಿದ್ದರು.
’ಇಡೀ ಜಪಾನಿಗೆ ಈ ಜ್ಞಾನದ ಅವಶ್ಯಕತೆಯಿದೆ’ ಎಂದು ಘೋಷಿಸಿದರು. ಅವರು ಅತ್ಯಂತ ಯಶಸ್ವಿಯಾದ ಸಜ್ಜನರು.
ಪ್ರತಿ ವರ್ಷ ಜಪಾನಿನಲ್ಲಿ  ಮೂವತ್ತು ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದು ಭಾರೀ ಸಂಖ್ಯೆಯಾಯಿತು. ಇಂದು ಸಂತೋಷದ ಅಲೆಯೊಂದರ ಅವಶ್ಯಕತೆಯಿದೆ. ಜಪಾನಿನಲ್ಲಿ ಜಿಡಿಪಿ ಅತಿ ಹೆಚ್ಚಿದೆ. ವಿಮಾನ ನಿಲ್ದಾಣದಿಂದ ಮನೆಗೆ ಹೋಗಲು ಐವತ್ತು ಡಾಲರ್ ಗಳನ್ನು ರಸ್ತೆ ತೆರಿಗೆಗಾಗಿ ವೆಚ್ಚ ಮಾಡಬೇಕಾಗಿದೆ. ಊಹಿಸಲು ಸಾಧ್ಯವೇ? ಎರಡು ಬಾರಿ ಹೋಗಿ ಬಂದರೆ, ನೀವಾಗಲೇ ಇನ್ನೂರು ಡಾಲರ್ ಗಳನ್ನು  ವೆಚ್ಚ ಮಾಡಿರುತ್ತೀರಿ. ಯಾರನ್ನೋ ವಿಮಾನ ನಿಲ್ದಾಣದಿಂದ ಕರೆತರಲು ಹೋಗಿದ್ದು, ನಂತರ ಅವರನ್ನು ಇಳಿಸಲು, ನೂರು ಡಾಲರ್ ಗಳನ್ನು ಖರ್ಚು ಮಾಡಿರುತ್ತೀರ. ಅಷ್ಟು ದೂರದಲ್ಲಿರುತ್ತದೆ. ಅಲ್ಲಿ ಬದುಕುವುದು ತುಂಬಾ ದುಬಾರಿ. ಜಪಾನಿನಲ್ಲಿ ಬದುಕುವುದು ಅಮೇರಿಕನ್ನರಿಗೆ ದುಬಾರಿಯೆನಿಸುವುದು. ಜನರು ಹಣ ಸಂಪಾದಿಸುತ್ತಾರೆ ಆದರೆ ಸುಖವಿಲ್ಲ.
ಕೇವಲ ಜಪಾನ್ ಒಂದೇ ಅಲ್ಲ. ಇಂದು ಜಗತ್ತಿನಲ್ಲಿ ಅನೇಕ ದೇಶಗಳು ಈ ರೀತಿಯ ಲಕ್ಷಣಗಳನ್ನು ತೋರುತ್ತಿವೆ, ಸುಖವಿಲ್ಲ. ನಗುವುದಿಲ್ಲ ಮತ್ತು ಶಾಂತಿಯಿಲ್ಲ. ಆನಂದದ ಅಲೆಯೊಂದನ್ನು ಸೃಷ್ಠಿಸುವ ಅವಶ್ಯಕತೆಯಿದೆ, ಅದು ಕೇವಲ ವಿವೇಕ, ಜ್ಞಾನ ಮತ್ತು ಜೀವನದ ಬಗ್ಗೆ ವಿಸ್ತಾರವಾದ  ದೃಷ್ಠಿಕೋನದಿಂದ ಸಾಧ್ಯ. ಅದುವೇ ಆರ್ಟ್ ಆಫ್ ಲಿವಿಂಗ್.
ಆರ್ಟ್ ಆಫ್ ಲಿವಿಂಗ್ ಎಂಬುದು ಒಂದು ಸಿದ್ಧಾಂತವಲ್ಲ. ಒಂದು ಪರಿಕಲ್ಪನೆಗಳ ಸಮೂಹ ಅಥವಾ ಕೆಲವು ಅಭ್ಯಾಸಗಳಲ್ಲ. ಆರ್ಟ್ ಆಫ್ ಲಿವಿಂಗ್ ಎಂದರೆ ಜೀವನದ ದೃಷ್ಠಿಕೋನವನ್ನು ವಿಸ್ತಾರಗೊಳಿಸುವುದು ಮತ್ತು ಜೀವನವನ್ನು ಸಂಭ್ರಮದಿಂದ ಆಚರಿಸುವುದು.  ಇದೇ ಮೂಲ ಉದ್ದೇಶ.
ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ, ’ಜನರ ಹೃದಯದಲ್ಲಿ ಸಂತೋಷವನ್ನುಂಟು ಮಾಡುವುದೇ ದೇವರಿಗೆ ನಿಜವಾದ ಪೂಜೆ.’ ಯೇನ ಕೇನ ಪ್ರಕರೇಣ ಯಸ್ಯ ಕಸ್ಯಾಪಿ ದೇಹಿನಃ │ ಸಂತೋಷಂ ಜಾನಯೇತ್ ಪ್ರಾಜ್ಞ್ಯಾ ತದೇವೇಶ್ವರಪೂಜನಮ್ – ಜನರ ಹೃದಯದಲ್ಲಿರುವ ಆನಂದವೇ ದೈವದ ನಿಜವಾದ ಪೂಜೆ.
ಹಿಂದಿನ ಕಾಲದಲ್ಲಿ ಎಷ್ಟು ಮಹತ್ತರವಾದ ಜ್ಞಾನ, ಎಂತಹ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅದಕ್ಕಾಗಿಯೇ ಅದು ಕಾಲಾತೀತ ಜ್ಞಾನ. ಯಾರು ಬರೆದಿದ್ದಾರೆಂದು ತಿಳಿಯುವುದಿಲ್ಲ. ಅದರಲ್ಲಿ ಅವರ ಸಹಿಯನ್ನು ಹಾಕಿಲ್ಲ ಆದರೆ ನಮ್ಮ ಜೀವನಕ್ಕೆ ಈ ರತ್ನಗಳನ್ನು ನೀಡಿದ್ದಾರೆ. ಇದು ಆರ್ಟ್ ಆಫ್ ಲಿವಿಂಗ್; ಪ್ರಾಚೀನ ಸಂಪ್ರದಾಯಗಳನ್ನು ಗೌರವಿಸುವುದು, ಭವಿಷ್ಯದಲ್ಲಿ ಆಧುನಿಕ ವಿಜ್ಞಾನದತ್ತ ದೃಷ್ಠಿ ಹರಿಸುವುದು ಮತ್ತು  ಇವೆರಡನ್ನೂ ಒಟ್ಟಾಗಿ ಪರಿಗ್ರಹಿಸುವುದು.
ವಿಜ್ಞಾನ ಮತ್ತು ಆಧ್ಯಾತ್ಮ ಎಂದಿಗೂ ವಿರುದ್ಧವಾಗಿಲ್ಲ. ಅವೆರಡೂ ಒಟ್ಟಿಗೆ ಸಾಗುತ್ತವೆ. ಬಹಳ ದೀರ್ಘ ಕಾಲದಿಂದಲೂ ಧರ್ಮ ಮತ್ತು ವಿಜ್ಞಾನ ಘರ್ಷಣೆಯಲ್ಲಿದೆ, ಆದರೆ ಅದರ ಪ್ರಾಯೋಗಿಕ ಭಾಗವಾದ ಆಧ್ಯಾತ್ಮವಲ್ಲ. ಆದ್ದರಿಂದಲೇ ನಾನು ಹೇಳುವುದು ವೈಜ್ಞಾನಿಕ ಮನಸ್ಸು ಮತ್ತು ಪುರಾತನ ಹೃದಯದಿಂದ ವೀಕ್ಷಿಸಬೇಕೆಂದು; ಒಂದು ತಾಜಾ ಮನಸ್ಸು ಮತ್ತು ಪ್ರೀತಿಸುವ ಹೃದಯ.
ಇದು ನಮಗೆ ಬೇಕು. ಹಾಗೆನಿಸುವುದಿಲ್ಲವೇ?
ಜಗತ್ತು ತುಂಬಾ ಕೌತುಕವಾದುದು! ಆದ್ದರಿಂದ ಈ ಜಗತ್ತಿನಲ್ಲಿರಿ, ಆನಂದಿಸಿರಿ ಆದರೆ ಬಂಧಿತರಾಗದೇ ಇಲ್ಲವೇ ಮುಳುಗದೇ. ನಿಮ್ಮನ್ನು ನೀವು ಸ್ವಲ್ಪ ದೂರದಲ್ಲಿ ನೆಲೆಗೊಳಿಸಿ.   ಬಾಹ್ಯ ಘಟನೆಗಳಿಂದ ಪ್ರಭಾವಿತರಾಗದೇ ನಿಮ್ಮ ಆತ್ಮವನ್ನು ರಕ್ಷಿಸಿಕೊಳ್ಳಿ, ನಿಮ್ಮ ಮನಸ್ಸನ್ನು ರಕ್ಷಿಸಿಕೊಳ್ಳಿ, ನಿಮ್ಮ ಚೈತನ್ಯವನ್ನು ರಕ್ಷಿಸಿಕೊಳ್ಳಿ ಹಾಗೂ ನಿಮ್ಮ ಆನಂದವನ್ನು ರಕ್ಷಿಸಿಕೊಳ್ಳಿ. ಪ್ರಾಪಂಚಿಕ ಘಟನೆಗಳಿಂದ ಗೊಂದಲಕ್ಕೊಳಗಾಗಬೇಡಿ, ನಾನು ಹೇಳುತ್ತಿರುವುದು ತಿಳಿಯುತ್ತಿದೆಯೇ?
ಇತರರು ಅಥವಾ ಯಾವುದೇ ಘಟನೆಯು ನಿಮ್ಮ ಸ್ವಾತಂತ್ರ್ಯ, ಸಂತೋಷ ಮತ್ತು ಆಂತರ್ಯದ  ನೆಮ್ಮದಿಯನ್ನು ಕಸಿದುಕೊಳ್ಳಲು ಬಿಡಬೇಡಿ. ಇದು ಆರ್ಟ್ ಆಫ್ ಲಿವಿಂಗ್.
ಇದು ಮಹತ್ತರವಾದ ಕಾರ್ಯ. ಇದೊಂದು ಸವಾಲು. ಅಷ್ಟು ಸುಲಭವಲ್ಲ. ಸುಲಭವೆಂದು ನಾನು ಹೇಳುತ್ತಿಲ್ಲ. ಹೂವಿನಂತೆ, ಬೆಣ್ಣೆಯಂತೆ ಇಲ್ಲ! ಜೀವನ ಹೂವಿನಂತಿಲ್ಲ, ಬೆಣ್ಣೆಯಂತಿಲ್ಲ. ಅನೇಕ ಸವಾಲುಗಳಿವೆ, ಆದರೆ ವಿವೇಕ ಅಥವಾ ಜ್ಞಾನ ಸವಾಲುಗಳನ್ನೆದುರಿಸಲು ಸಜ್ಜುಗೊಳಿಸುತ್ತದೆ.
ಜೀವನದಲ್ಲಿ ಸವಾಲುಗಳೇ ಇರಬಾರದೆಂದು ಯೋಚಿಸಿದರೆ ಕಷ್ಟವಾಗುವುದು. ಆಗ ಸವಾಲುಗಳು ಮತ್ತಷ್ಟು ದೊಡ್ಡದೆಂದೆನಿಸುವುದು. ಜೀವನದಲ್ಲಿ ಸವಾಲುಗಳಿರುತ್ತವೆ, ಆದರೆ ಜ್ಞಾನವು ಅವುಗಳನ್ನು ಎದುರಿಸಲು ಸಿದ್ಧಪಡಿಸುತ್ತದೆ.