ಭಾನುವಾರ, ಏಪ್ರಿಲ್ 22, 2012

ಸಮಾಧಿಯ ಕ್ಷಣವೊ೦ದರಲ್ಲಿ ದಶಲಕ್ಷ ವರ್ಷಗಳ ವಿಶ್ರಾ೦ತಿಯಿದೆ

ಧ್ಯಾನದ ರಹಸ್ಯಗಳು - ದಿನ ೩
೨೨ ಎಪ್ರಿಲ್ ೨೦೧೨
ನಾವು ಕಳೆದೆರಡು ದಿನಗಳಲ್ಲಿ ಏನೆಲ್ಲಾ ಮಾಡಿದೆವೋ ಅದನ್ನು ಮರುಸಮೀಕ್ಷೆ ಮಾಡೋಣ, ಧ್ಯಾನವು ವಿವಿಧ ರೀತಿಗಳಲ್ಲಿ ಹೇಗೆ ಆಗುತ್ತದೆಂದು.
ಧ್ಯಾನವೆಂಬುದು ಒಂದು ಆಗುವಿಕೆ, ಇದು ಮೊದಲನೆಯ ಅಂಶ.
ಎರಡನೆಯದು, ಧ್ಯಾನವು ಪ್ರಯತ್ನವಿಲ್ಲದೆ ಆಗುವುದು. ಧ್ಯಾನ ಮಾಡಲು ಪ್ರಮುಖವಾದುದೆಂದರೆ ಪ್ರಯತ್ನ ಪಡದಿರುವುದು. ಅದು ಏನನ್ನಾದರೂ ಮಾಡುವುದಲ್ಲ ಆದರೆ ಏನೂ ಮಾಡದಿರುವುದು ಮತ್ತು ಅದು ಧ್ಯಾನ. ನೀವು ನಿಜವಾಗಿ ಏನೂ ಮಾಡದಿರಲು ಸಾಧ್ಯವಾಗುವ ಒಂದು ಪರಿಸ್ಥಿತಿಯನ್ನು ಸೃಷ್ಟಿಸುವುದರ ಬಗ್ಗೆ ತಿಳಿಯುವುದೇ ತುಂಬಾ ಮುಖ್ಯವಾದುದು. ಹಾಗಾದರೆ ಇದು ಹೇಗೆ ಆಗಲು ಸಾಧ್ಯ? ನಾವು ಹಲವಾರು ವಿಧಾನಗಳನ್ನು ಅಥವಾ ಹಲವಾರು ಮಾರ್ಗಗಳನ್ನು ನೋಡಿದೆವು.
ಆಸನಗಳ ಮೂಲಕ, ಯೋಗ, ತೈ-ಚಿ, ಇವುಗಳೆಲ್ಲಾ ನಿರ್ದಿಷ್ಟ ಪ್ರಮಾಣದಲ್ಲಿ ಮನಸ್ಸಿಗೆ ಶಾಂತಿಯನ್ನು ತರಬಹುದು. ವ್ಯಾಯಾಮ ಮತ್ತು ಆಸನಗಳಿಂದ ಸಂಪೂರ್ಣವಾಗಿಯಲ್ಲದಿದ್ದರೂ ಒಂದು ನಿರ್ದಿಷ್ಟ ಪ್ರಮಾಣದ ಧ್ಯಾನಾವಸ್ಥೆಯು ಬರಬಹುದು.
ಎರಡನೆಯದು ಪ್ರಾಣಾಯಾಮ. ಇದು ಇನ್ನೂ ಹೆಚ್ಚು ಮುಖ್ಯವಾದುದು ಯಾಕೆಂದರೆ ನಮಗೆ ಐದು ಶರೀರಗಳಿವೆ (ಪಂಚಕೋಶ). ಒಂದನೆಯದು ಭೌತಿಕ ಶರೀರ, ನಂತರ ಪ್ರಾಣ ಶರೀರ; ಇದು ಜೈವಿಕ ಲಯಬದ್ಧ ಶಕ್ತಿ ಅಥವಾ ಜೈವಿಕ ವಿದುತ್ಕಾಂತೀಯ ಶಕ್ತಿ. ನಂತರ ನಮ್ಮಲ್ಲಿರುವುದು ಮನಸ್ಸು ಅಥವಾ ಪ್ರಜ್ಞೆ, ನಂತರ ಅಂತಃಸ್ಫುರಣ ಶರೀರ; ಇದು ಇನ್ನೂ ಸಂಸ್ಕರಿಸಲ್ಪಟ್ಟ ಪ್ರಜ್ಞೆ ಮತ್ತು ನಂತರ ಪರಮ ಸುಖದ ಶರೀರ. ಸಾಧಾರಣವಾಗಿ ನಾವು, ಮನಸ್ಸು ಶರೀರದ ಒಳಗಡೆಯಿದೆಯೆಂದು ಯೋಚಿಸುತ್ತೇವೆ ಆದರೆ ಅದು ಇದಕ್ಕೆ ವಿರುದ್ಧವಾಗಿರುವುದು. ಶರೀರವು ಮನಸ್ಸಿನ ಒಳಗಿದೆ. ನಾನು ಸಾಧಾರಣವಾಗಿ ಫ್ಯಾಂಟಮ್ ಆರ್ಮ್ ನ ಉದಾಹರಣೆಯನ್ನು ಕೊಡುತ್ತೇನೆ. ಕೈಯನ್ನು ಕತ್ತರಿಸಿ ತೆಗೆಯಲಾಗಿದ್ದರೂ ಆ ವ್ಯಕ್ತಿಯು, ಕೈಯು ಇನ್ನೂ ಅಲ್ಲೇ ಇರುವಂತೆ ಅನುಭವಿಸುತ್ತಾನೆ; ಅಂದರೆ ಆ ಸೂಕ್ಷ್ಮ ಶರೀರವು ಇನ್ನೂ ಅಲ್ಲೇ ಇರುತ್ತದೆ. ಆದುದರಿಂದ ಉಸಿರಾಟದ ತಂತ್ರಗಳು ಮತ್ತು ಉಸಿರಾಟದ ವ್ಯಾಯಾಮಗಳ ಮೂಲಕ ಮನಸ್ಸು ತುಂಬಾ ಶಾಂತ ಮತ್ತು ಸಂತೋಷಗೊಳ್ಳುತ್ತದೆ.
ನಂತರ, ಐದು ಇಂದ್ರಿಯ ಜ್ಞಾನಗಳಲ್ಲಿ ಯಾವುದಾದರೂ ಒಂದರ ಮೂಲಕ ಮನಸ್ಸು ಧ್ಯಾನಕ್ಕೆ ಹೋಗಬಹುದು. ರುಚಿ, ವಾಸನೆ, ದೃಷ್ಟಿ, ಶಬ್ದ ಮತ್ತು ಸ್ಪರ್ಶ.
ನಂತರ ಭಾವನೆಗಳ ಮೂಲಕ; ಉನ್ನತವಾದ ಸಂಸ್ಕರಿಸಲ್ಪಟ್ಟ ಭಾವನೆಗಳು. ಪ್ರೀತಿ, ದಯೆ, ಸೇವಾ ಭಾವನೆ ಇವುಗಳೆಲ್ಲವೂ ಮನಸ್ಸಿಗೆ ಒಂದು ನಿರ್ದಿಷ್ಟ ಪ್ರಮಾಣದ ಪ್ರಶಾಂತತೆಯನ್ನು ತರಬಲ್ಲವು. ಮನಸ್ಸು ತುಂಬಾ ಶಾಂತ ಮತ್ತು ಧ್ಯಾನಸ್ಥವಾಗುತ್ತದೆ. ಭಾವನೆಗಳ ಮೂಲಕ ನಿಮಗೆ ಅದೇ ರೀತಿಯ ಧ್ಯಾನಾವಸ್ಥೆಯನ್ನು ಹೊಂದಬಹುದು.
ನಂತರ, ಬೌದ್ಧಿಕ ತಿಳುವಳಿಕೆಯ ಮೂಲಕ. ನಾನು ನೀಡಿದ ಒಂದು ಉದಾಹರಣೆಯೆಂದರೆ, ನೀವು ಒಂದು ಬಾಹ್ಯಾಕಾಶ ವಸ್ತು ಸಂಗ್ರಹಾಲಯಕ್ಕೆ ಹೋದಾಗ ಅಥವಾ ಬಾಹ್ಯಾಕಾಶ ಸಿನೆಮಾವನ್ನು ನೋಡಿದಾಗ, ನೀವು ವಿಶ್ವದ ಮುಂದೆ ಭೂಮಿಯನ್ನು ಹೋಲಿಸಿ ನೋಡಿದಾಗ, ಈ ಭೂಮಿಯು ಎಷ್ಟು ಚಿಕ್ಕದೆಂದು ಹಾಗೂ ನೀವೆಲ್ಲಿರುವಿರೆಂದೂ, ಈ ವಿಶ್ವವೆಂದರೇನೆಂದೂ ತಿಳಿಯುತ್ತೀರಿ. ಬುದ್ಧಿಯ ಆ ಪ್ರಚೋದನೆಯು ಜೀವನಕ್ಕೆ ಒಂದು ವಿಭಿನ್ನ ಅರ್ಥವನ್ನು ತೋರಿಸುತ್ತದೆ ಮತ್ತು ಮನಸ್ಸನ್ನು ಧ್ಯಾನಸ್ಥವಾಗಿಸುತ್ತದೆ. ಆ ಚಿಕ್ಕ, ಹರಟೆ ಮಾಡುವ ಮನಸ್ಸು ಹಾಗೆಯೇ ನಿಂತು ಬಿಡುತ್ತದೆ. ಮನಸ್ಸು ಎಲ್ಲಾ ಸಮಯದಲ್ಲೂ ಹರಟುತ್ತಿರುತ್ತದೆ; ಇತರರಲ್ಲಿ ಅಥವಾ ತನ್ನಲ್ಲೇ ತಪ್ಪು ಹುಡುಕುತ್ತಾ ಇರುತ್ತದೆ ಮತ್ತು ಅಚಾನಕ್ಕಾಗಿ, ವಿಶ್ವದ ಮತ್ತು ಈ ಅಸ್ಥಿತ್ವದ ವೈಶಾಲ್ಯತೆಗೆ ಹೋಲಿಸಿದರೆ ಈ ಎಲ್ಲಾ ಸಂಗತಿಗಳು ಮುಖ್ಯವಲ್ಲವೆಂಬುದು ನಿಮಗೆ ತಿಳಿಯುತ್ತದೆ. ಈ ಅಸ್ಥಿತ್ವದ ಬಗೆಗಿನ ತಿಳುವಳಿಕೆಯು ಕೂಡಲೇ ನಿಮ್ಮನ್ನು ಪ್ರಶಾಂತತೆಯ, ನಿಶ್ಚಲತೆಯ ಇನ್ನೊಂದು ಮಟ್ಟಕ್ಕೆ ಕರೆದೊಯ್ಯುತ್ತದೆ. ಆದುದರಿಂದ ಬೌದ್ಧಿಕ ಪ್ರಚೋದನೆಯ ಮೂಲಕ ಕೂಡಾ ಧ್ಯಾನವಾಗುತ್ತದೆ.
ಪ್ರಶ್ನೆ: ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕಾಗಿ ಅಹಂಕಾರವನ್ನು ಭಕ್ತಿಯು ಹೇಗೆ ಪರಿವರ್ತನೆಗೊಳಿಸಬಲ್ಲದು ಎಂಬುದರ ಬಗ್ಗೆ ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿಶಂಕರ್
: ಕೇಳಿ, ಭಕ್ತಿಯೆಂದರೇನು? ಅದು ಪ್ರೀತಿಯ ಒಂದು ಸ್ಥಿತಿ. ಅಹಂಕಾರವೆಂದರೇನು? ಅದು ಬೇರ್ಪಡಿಕೆಯ ಮತ್ತು ಒಂದು ಸೀಮೆಯ; ಒಂದು ಗೋಡೆಯ; ಒಂದು ಭಿನ್ನ ಗುರುತಿನ ಭಾವನೆ. ಪ್ರೀತಿಯು ಗುರುತನ್ನು ಕರಗಿಸಲು ನೋಡುತ್ತದೆ, ಪ್ರೀತಿಯು ವಿಲೀನಗೊಳ್ಳಲು ನೋಡುತ್ತದೆ. ಅಹಂಕಾರವು ಏಕಪಕ್ಷೀಯತೆಯನ್ನು ಪಾಲಿಸಲು ನೋಡುತ್ತದೆ. ಆದುದರಿಂದ ಅವುಗಳು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತವೆ ಮತ್ತು ಅವುಗಳು ಬೇರೆ ಬೇರೆ ಸಮಯಗಳಲ್ಲಿ ಜೊತೆಯಲ್ಲಿರಬಹುದು. ಆದುದರಿಂದ ಪ್ರೀತಿಯಿರುವ ಕ್ಷಣದಲ್ಲಿ ಅಹಂಕಾರವಿರುವುದಿಲ್ಲ ಮತ್ತು ಅಹಂಕಾರವಿರುವ ಕ್ಷಣದಲ್ಲಿ ಪ್ರೀತಿಯಿರುವುದಿಲ್ಲ. ನೀವೊಂದು ಸವಾಲನ್ನು ಸ್ವೀಕರಿಸಬೇಕಾದಾಗ, ಪ್ರೀತಿಯು ಕೆಲಸ ಮಾಡುವುದಿಲ್ಲ, ಅಹಂಕಾರವು ಕೆಲಸ ಮಾಡುತ್ತದೆ. ಅಹಂಕಾರವು ಸವಾಲುಗಳನ್ನು ಸ್ವೀಕರಿಸಬಲ್ಲದು ಆದರೆ ನೀವು ವಿಶ್ರಾಂತಿ ತೆಗೆದುಕೊಂಡು ಮೋಜು ಮಾಡಲು ಬಯಸುವಾಗ, ಆ ಸಮಯದಲ್ಲಿ, ಅಹಂಕಾರವು ಕೆಲಸ ಮಾಡುವುದಿಲ್ಲ, ಪ್ರೀತಿಯು ಕೆಲಸ ಮಾಡುತ್ತದೆ. ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ತಿಳಿಯುತ್ತಿದೆಯೇ? ಅದಕ್ಕಾಗಿಯೇ ಪ್ರಕೃತಿಯು ಎರಡನ್ನೂ ನಿಮ್ಮಲ್ಲಿ ಹಾಕಿರುವುದು, ಅದು ಪ್ರೀತಿಯನ್ನೂ ಹಾಕಿದೆ ಮತ್ತು ಅಹಂಕಾರವನ್ನು ಕೂಡಾ ಹಾಕಿದೆ. ಆದರೆ ನೀವು ಅಹಂಕಾರದಲ್ಲಿ ಸಿಕ್ಕಿಹಾಕಿಕೊಂಡರೆ, ಅದು ನೀವು ನಿಮ್ಮ ಬೂಟ್ಸಿನಲ್ಲಿ ಯಾವಾಗಲೂ ಸಿಕ್ಕಿಹಾಕಿಕೊಂಡಂತೆ. ನಿಮಗೆ ಅದನ್ನು ನಿಮ್ಮ ಕಾಲುಗಳಿಂದ ಹೊರತೆಗೆಯುವುದು ಹೇಗೆಂದು ತಿಳಿಯದು. ನಂತರ ನೀವು ಅವುಗಳನ್ನು ಹಾಕಿಕೊಂಡೇ ಸ್ನಾನ ಮಾಡುತ್ತೀರಿ, ಅವುಗಳನ್ನು ಹಾಕಿಕೊಂಡೇ ಮಲಗುತ್ತೀರಿ. ನಿಮ್ಮ ಬೂಟ್ಸನ್ನು ಯಾವಾಗ ತೆಗೆದು ಆರಾಮವಾಗಿರಬೇಕು ಎಂಬುದು ನಿಮಗೆ ತಿಳಿದಿರಬೇಕು.
ಪ್ರೀತಿಯೆಂಬುದು ಜೀವನದಲ್ಲಾದ ಮೊದಲ ಸಂಗತಿ. ಒಂದು ಮಗುವು ಹುಟ್ಟಿ ಅದರ ಕಣ್ಣುಗಳನ್ನು ತೆರೆದು ತನ್ನ ತಾಯಿಯ ಕಡೆಗೆ ನೋಡಿದ ಕೂಡಲೇ ಅಲ್ಲಿ ಪ್ರೀತಿಯಿರುತ್ತದೆ. ಆ ಮೊದಲ ನೋಟದಲ್ಲೇ ಅದು ತಾಯಿಯಿಂದ ಪ್ರೀತಿಯನ್ನು ಪಡೆಯುತ್ತದೆ ಮತ್ತು ತಾಯಿಗೆ ಪ್ರೀತಿಯನ್ನು ಕೊಡುತ್ತದೆ. ಆದರೆ ಅಹಂಕಾರವು ಬರುವುದು ಮೂರನೆಯ ವಯಸ್ಸಿನಲ್ಲಿ. ಮೂರನೆಯ ವರ್ಷದ ನಂತರ ಗುರುತು ತುಂಬಾ ಶಕ್ತಿಯುತವಾಗುತ್ತದೆ ಮತ್ತು ನಂತರ ಅದು ಬೆಳೆಯುತ್ತದೆ. ಕೆಲವೊಮ್ಮೆ ಒಬ್ಬನು ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಆದರೆ ನಿಮಗೆ ತುಂಬಾ ವಯಸ್ಸಾದಾಗ; ಹಲವು ಹಿರಿಯ ನಾಗರಿಕರನ್ನು ನೀವು ನೋಡಿದರೆ, ಅವರಲ್ಲಿ ಅಹಂಕಾರವಿರುವುದಿಲ್ಲ. ಅವರು ಪುನಃ ಮಗುವಿನಂತಾಗುತ್ತಾರೆ. ೯೦ ವರ್ಷಗಳ ಬಳಿಕ ಅಹಂಕಾರವನ್ನು ಉಳಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಮೂರು ವರ್ಷ ವಯಸ್ಸಿನ ಮೊದಲು ಅದು ನಿಮ್ಮಲ್ಲಿರಲು ಸಾಧ್ಯವಿಲ್ಲ ಮತ್ತು ತೊಂಭತ್ತು ವರ್ಷ ವಯಸ್ಸಿನ ಬಳಿಕ ಅದು ನಿಮ್ಮಲ್ಲಿರಲು ಸಾಧ್ಯವಿಲ್ಲ. ಅದು ಬಹುತೇಕ ಸಂಭೋಗದಂತೆ; ಅದಕ್ಕೊಂದು ವಯಸ್ಸಿದೆ, ಅದರ ನಂತರ ಸಾಧ್ಯವಿಲ್ಲ ಮತ್ತು ಅದರ ಮೊದಲೂ ಸಾಧ್ಯವಿಲ್ಲ. ಆದರೆ ಅವುಗಳೆಲ್ಲದಕ್ಕೂ ಅವುಗಳದ್ದೇ ಆದ ಪಾತ್ರವಿದೆ.
ಪ್ರಶ್ನೆ: ನಮಸ್ಕಾರ ಶ್ರೀ ಶ್ರೀಯವರೇ, ನನ್ನ ಕೆಲವು ಸ್ನೇಹಿತರ ಅನ್ನಿಸಿಕೆಯ ಪ್ರಕಾರ, ಅತಿಜನಸಂಖ್ಯೆ ಮತ್ತು ಸಾಗರ, ಮಳೆಕಾಡು ಪ್ರದೇಶಗಳಂತಹ ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಈ ಭೂಮಿಯು ಅಧಃಪತನ ಹೊಂದಿದೆ. ಹಲವಾರು ಜನರು ಹತಾಶರಾಗಿದ್ದಾರೆ. ಎಲ್ಲಾ ಅಸ್ತವ್ಯಸ್ತತೆಗಳ ನಡುವೆ ಒಂದು ಸಂಪೂರ್ಣ ದೈವಿಕ ನಿಯಮ ಇದೆಯೆಂದು ನಾನು ಅವರಿಗೆ ಹೇಳುತ್ತೇನೆ. ಆದುದರಿಂದ ನನ್ನ ಪ್ರಶ್ನೆಯೇನೆಂದರೆ, ನಾನು ಯಾವುದೇ ಆಧಾರವಿಲ್ಲದೆಯೇ ಅತಿಶಯೋಕ್ತಿ ಮಾಡುತ್ತಿದ್ದೇನೆಯೇ ಅಥವಾ ಭೂಮಿ ಮತ್ತು ಜನಸಂಖ್ಯೆಯು ಚೆನ್ನಾಗಿರಬಹುದೆಂದು ನಿಮಗನಿಸುತ್ತದೆಯೇ?
ಶ್ರೀ ಶ್ರೀ ರವಿಶಂಕರ್: ಕಳಕಳಿಯಿಂದಿರುವುದು ಒಳ್ಳೆಯದು ಆದರೆ ಭ್ರಮೆಯಿಂದಿರುವುದಲ್ಲ. ಅಲ್ಲಿ ಒಂದು ವ್ಯತ್ಯಾಸವಿದೆ. ನೀವು ಭ್ರಮೆಗೊಳಗಾದರೆ ನಿಮಗೆ ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಮತ್ತು ನೀವು ನಿಮ್ಮ ಮನಃಶಾಂತಿಯನ್ನು ಕಳೆದುಕೊಳ್ಳುತ್ತೀರಿ. ಆದರೆ ಅದೇ ಸಮಯದಲ್ಲಿ, "ದೇವರು ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ನಾವು ಮಾಡುತ್ತಿರುವುದನ್ನು ಮುಂದುವರಿಸಿಕೊಂಡು ಹೋಗೋಣ" ಎಂದು ಕೂಡಾ ನೀವು ಹೇಳಲು ಸಾಧ್ಯವಿಲ್ಲ. "ನಾವು ಈ ಭೂಮಿಯನ್ನು ಇನ್ನು ಸ್ವಲ್ಪ ಹೆಚ್ಚು ಶೋಷಣೆ ಮಾಡಿದರೂ ದೇವರು ನಮಗೆ ಎಲ್ಲವನ್ನೂ ಒದಗಿಸುತ್ತಾನೆ, ಪ್ರಕೃತಿಯು ಹೇಗಾದರೂ ಮಾಡಿ ಹೆಚ್ಚು ಒದಗಿಸುತ್ತದೆ" ನೀವು ಈ ರೀತಿ ಹೇಳುವಂತಿಲ್ಲ. ನಾವು ಖಂಡಿತವಾಗಿಯೂ ಭೂಮಿಯ ಬಗ್ಗೆ ಕಾಳಜಿ ವಹಿಸಬೇಕು. ನೋಡಿ, ಅಧಃಪತನದತ್ತ ತಲಪುತ್ತಿದ್ದಂತೆ, ಇದರ ಬಗ್ಗೆ ಕಳಕಳಿಯೂ ಬಂದಿದೆ. ಪ್ರಕೃತಿ ಅಥವಾ ಆ ದೊಡ್ಡ ಮನಸ್ಸು ಲಕ್ಷಾಂತರ ಜನರ ಮನಸ್ಸಿನಲ್ಲಿ ಈ ಕಳಕಳಿಯನ್ನು ಹಾಕಿದೆ.
ಇವತ್ತು ಹೆಚ್ಚು ಹೆಚ್ಚು ಜನರು ಮೊದಲೆಂದೂ ಇರದಂತೆ ಪರಿಸರದ ಬಗ್ಗೆ ಕಳಕಳಿ ಹೊಂದಿದ್ದಾರೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಇವತ್ತು ಚಿಕ್ಕ ಹಳ್ಳಿಗಳಲ್ಲಿರುವ ಜನರು ಕೂಡಾ ಕಳಕಳಿ ಹೊಂದಿದ್ದಾರೆ. ಪ್ರಪಂಚದ ದೂರದ ಮೂಲೆಗಳಲ್ಲಿ ಅವರು ಭೂಮಿಯನ್ನು ಉಳಿಸುವ ಬಗ್ಗೆ, ಸಾವಯವ ಕೃಷಿಯ ಬಗ್ಗೆ ಮತ್ತು ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದೆ ಇರುವುದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಕಳಕಳಿಯು ದೂರದ ಪ್ರದೇಶಗಳಲ್ಲಿ ಇವತ್ತು ಅಂತರ್ವ್ಯಾಪಿಸಿದೆ. ಅದೇ ಸಮಯದಲ್ಲಿ ಜನರು ಇದರ ಬಗ್ಗೆ ತುಂಬಾ ಭ್ರಮೆಗೊಳಗಾಗಿದ್ದಾರೆ, ಕೋಪಗೊಂಡಿದ್ದಾರೆ ಮತ್ತು ಕಳವಳಗೊಂಡಿದ್ದಾರೆ; "ಓಹ್, ನಾವು ಭೂಮಿಯನ್ನು ನಾಶಗೊಳಿಸುತ್ತಿದ್ದೇವೆ". ನಾನು ಹೇಳುವುದೇನೆಂದರೆ, ಆರಾಮವಾಗಿರಿ. ಭ್ರಮೆಗೊಳಗಾಗಬೇಡಿ ಆದರೆ ಕಳಕಳಿಯಿಂದಿರಿ.
ಪ್ರಶ್ನೆ: ಸಮಾಧಿಯೆಂದರೇನು?
ಶ್ರೀ ಶ್ರೀ ರವಿಶಂಕರ್:
"ಧಿ" ಎಂದರೆ ತಿಳಿದುಕೊಳ್ಳುವ ಶಕ್ತಿ ಮತ್ತು "ಸಮಾಧಿ" ಎಂದರೆ ಎಲ್ಲಿ ಮನಸ್ಸು ಸಂಪೂರ್ಣ ಸ್ಥಿಮಿತದಲ್ಲಿರುತ್ತದೋ; ಎಲ್ಲಿ ನಿಮ್ಮ ಇಡಿಯ ವ್ಯವಸ್ಥೆಯು ಸಂಪೂರ್ಣ ಸಮತೋಲನದಲ್ಲಿರುತ್ತದೋ ಅದನ್ನು ಸಮಾಧಿಯೆಂದು ಕರೆಯುತ್ತಾರೆ. ಶರೀರ, ಮನಸ್ಸು, ಆತ್ಮ ಎಲ್ಲವೂ ಅಷ್ಟೊಂದು ಸಹಕಾರದಿಂದ ಮತ್ತು ಪ್ರಶಾಂತವಾಗಿ ಇರುತ್ತವೆ.
ವಿವಿಧ ರೀತಿಯ ಸಮಾಧಿಗಳಿವೆ. ಒಂದು ಲಯ ಸಮಾಧಿ ಎಂದು ಕರೆಯಲ್ಪಡುತ್ತದೆ. ಅದು, ಯಾವುದಾದರೂ ಸಂಗೀತ ಕೇಳುತ್ತಿರುವಾಗ ನೀವು ಅದರಲ್ಲೇ ಸಂಪೂರ್ಣವಾಗಿ ಕರಗಿ ಹೋಗುವಂತೆ. ನೀವಿದ್ದೀರೆಂದು ನಿಮಗೆ ತಿಳಿದಿರುತ್ತದೆ ಆದರೆ ನೀವು ಎಲ್ಲಿದ್ದೀರೆಂದು ನಿಮಗೆ ತಿಳಿದಿರುವುದಿಲ್ಲ.
ನಂತರ ಪ್ರಜ್ಞಾ ಸಮಾಧಿ, ಅಸಂಪ್ರಜ್ಞಾತ ಸಮಾಧಿ ಮೊದಲಾದವುಗಳಿವೆ ಹಾಗೂ ಯೋಚನೆಗಳಿರುವ, ಕಲ್ಪನೆಗಳಿರುವ ಆದರೆ ನೀವು ತುಂಬಾ ಶಾಂತವಾಗಿರುವ ಒಂದು ಸಮಾಧಿಯಿದೆ. ಇನ್ನೊಂದು ಸಮಾಧಿಯಿದೆ, ಅಲ್ಲಿ ಯಾವುದೇ ಯೋಚನೆಗಳಿರುವುದಿಲ್ಲ, ಕೇವಲ ಒಂದು ಭಾವನೆಯಿರುತ್ತದೆ. ಹಾಗೆ, ಹಲವಾರು ವಿಭಿನ್ನ ರೀತಿಯ ಸಮಾಧಿಗಳಿವೆ.
ಸಮಾಧಿಯಲ್ಲಿರುವ ಆನಂದವು ಈ ರೀತಿ ವಿವರಿಸಲ್ಪಟ್ಟಿದೆಯೆಂದು ಹೇಳಲಾಗಿದೆ - ಒಂದು ಕ್ಷಣದ ಸಮಾಧಿಯಲ್ಲಿ ಕೋಟಿ ವರ್ಷಗಳ ವಿಶ್ರಾಂತಿಯಿದೆ. "ಕೋಟಿ ಕಲ್ಪ ವಿಶ್ರಾಮ್" - ಒಂದು ಕ್ಷಣದಲ್ಲಿ ಕೋಟಿ ವರ್ಷಗಳ ವಿಶ್ರಾಂತಿ. ಅದು ಸಮಾಧಿ. ಒಂದು ಕ್ಷಣದ ಸಮಾಧಿಯಲ್ಲಿ ಸಿಗುವ ಸುಖವು, ಒಂದು ಸಾವಿರ ಘಟಕಗಳಷ್ಟು ಸಂಭೋಗದಿಂದ ಸಿಗುವ ಸುಖಕ್ಕೆ ಸಮಾನವಾದುದೆಂದು ಕೂಡಾ ವಿವರಿಸಲಾಗುತ್ತದೆ. ಆದುದರಿಂದ ಒಬ್ಬ ಯೋಗಿಗೆ ಬ್ರಹ್ಮಚರ್ಯವು ಸ್ವಾಭಾವಿಕವಾಗಿ ಆಗುತ್ತದೆ. ಬ್ರಹ್ಮಚಾರಿಯಾಗಲು ನೀವು ಪ್ರಯತ್ನ ಪಡಬೇಕೆಂದಿಲ್ಲ; ಭಾವಪರವಶರಾಗಲು, ನಿಮ್ಮನ್ನು ಉಜ್ಜಿಕೊಳ್ಳಲು ನಿಮಗೆ ಇನ್ನೊಂದು ಶರೀರದ ಅಗತ್ಯವಿಲ್ಲ. ನೀವು ಕೇವಲ ಕುಳಿತುಕೊಂಡರೆ ಸಾಕು ಮತ್ತು ಉನ್ನತವಾದ ಆನಂದ ಹಾಗೂ ಪರಮಸುಖವು ನಿಮ್ಮೊಳಗೆ ತುಂಬುತ್ತದೆ. ಆದುದರಿಂದಲೇ ಬ್ರಹ್ಮಚರ್ಯವೆಂಬುದು ನೀವು ಮಾಡುವಂತಹ ಒಂದು ಅಭ್ಯಾಸವಲ್ಲ; ನಿಮ್ಮ ಶರೀರದ ಪ್ರತಿಯೊಂದು ಕೋಶವೂ ಪುಳಕ ಮತ್ತು ಪರಮಸುಖದ ಸ್ಥಿತಿಯಲ್ಲಿರುವ ಒಂದು ಆಗುವಿಕೆ ಮತ್ತು ಪರಮಸುಖವನ್ನೇ ಸಂಭೋಗದಲ್ಲಿ ಗಳಿಸಲು ನೀವು ಪ್ರಯತ್ನಿಸುವುದು. ನಾನು ಕೇಳಿರುವ ಪ್ರಕಾರ ಕೆಲವೊಮ್ಮೆ ಒಬ್ಬರಿಗೆ ಆ ಪರಮಸುಖವು ಸಿಗುತ್ತದೆ ಮತ್ತು ಕೆಲವೊಮ್ಮೆ ಸಿಗುವುದಿಲ್ಲ, ಆದರೆ ಜನರಿಗೆ ಆಯಾಸವಂತೂ ಆಗುತ್ತದೆ. ಅದು ನಾನು ಕೇಳಿರುವುದು. ಆದರೆ ಸಮಾಧಿಯಲ್ಲಿ ಆನಂದದ ಆಳವಾದ ಅನುಭವವಾದರೂ ನಿಮಗೆ ಆಯಾಸವಾಗುವುದಿಲ್ಲ. ಅಲ್ಲಿ ಉದ್ರೇಕವಿಲ್ಲ, ಆತಂಕವಿಲ್ಲ, ಆಯಾಸವಿಲ್ಲ ಆದರೆ ನಿಮ್ಮನ್ನು ಪ್ರತಿಕ್ಷಣವೂ ಚೈತನ್ಯಗೊಳಿಸುವಂತಹ ಒಂದು ಮೇಲೆತ್ತುವಿಕೆ ಇರುತ್ತದೆ. ಅದಕ್ಕೇ ಬ್ರಹ್ಮಚರ್ಯ ಆಗುವುದು.
ಪ್ರಶ್ನೆ: ಅತೀ ಹತ್ತಿರದವರೊಬ್ಬರು ತೀರಿಕೊಂಡಾಗ ಒಬ್ಬರು ದುಃಖದಿಂದ ಹೊರಬರಲು ಧ್ಯಾನವು ಸಹಾಯ ಮಾಡುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಹೌದು, ಅದು ಸಹಾಯ ಮಾಡುತ್ತದೆ. ಅತೀ ಹತ್ತಿರದವರೊಬ್ಬರು ಇನ್ನೊಂದು ಬದಿಗೆ ದಾಟಿ ಹೋದಾಗ ದುಃಖದಿಂದ ಹೊರಬರಲು ಧ್ಯಾನವು ಖಂಡಿತಾ ಸಹಾಯ ಮಾಡುತ್ತದೆ. ನೋಡಿ, ಸಾವೆಂಬುದು ತುಂಬಾ ಖಚಿತವಾದ ಸಂಗತಿ. ಕಂಡಿತವಾಗಿಯೂ ಸಾವಿಗಿಂತ ಹೆಚ್ಚು ಖಚಿತವಾದುದು ಯಾವುದೂ ಇಲ್ಲ. ನೀವು ನಿಮ್ಮ ಜೀವನವನ್ನು ಹೇಗೇ ಜೀವಿಸಿದ್ದರೂ, ನೀವು ಸಾಯುತ್ತೀರಿ. ಯಶಸ್ವಿಯಾಗಿದ್ದರೂ ಯಶಸ್ವಿಯಾಗಿಲ್ಲದಿದ್ದರೂ, ನೀವು ಸಾಯುತ್ತೀರಿ. ಖ್ಯಾತರಾಗಿದ್ದರೂ ಕುಖ್ಯಾತರಾಗಿದ್ದರೂ, ನೀವು ಸಾಯುತ್ತೀರಿ. ಶ್ರೀಮಂತರಾಗಿದ್ದರೂ ಬಡವರಾಗಿದ್ದರೂ, ನೀವು ಸಾಯುತ್ತೀರಿ. ಆರೋಗ್ಯವಂತರಾಗಿದ್ದರೂ ರೋಗಿಷ್ಠರಾಗಿದ್ದರೂ, ನೀವು ಸಾಯುತ್ತೀರಿ. ರೋಗಿಗಳಾಗಿರುವ ಜನರು ಮಾತ್ರವಲ್ಲ ಸಾಯುವುದು, ಆರೋಗ್ಯವಂತ ಜನರೂ ಸಾಯುತ್ತಾರೆ. ಪ್ರತಿಯೊಬ್ಬರೂ ಒಂದು ದಿನ ಸಾಯುತ್ತಾರೆ. ಆದುದರಿಂದ ಸಾವೆಂಬುದು ತುಂಬಾ ಖಚಿತವಾದುದು. ಈ ಸತ್ಯವನ್ನು, ವಾಸ್ತವವನ್ನು ನೀವು ಸ್ವೀಕರಿಸಿಕೊಂಡು, "ಓ, ನೀನು ಹೋಗಿಬಿಟ್ಟೆ, ಈಗ ವಿದಾಯ ಹೇಳುತ್ತೇನೆ. ನಾನು ನಿನ್ನನ್ನು ಕೆಲವು ದಿನಗಳ ನಂತರ ನೋಡುತ್ತೇನೆ" ಎಂದು ಹೇಳಬಹುದು. ಧ್ಯಾನವು, ದುಃಖದಿಂದ ಹೊರಬರಲು ಖಂಡಿತಾ ನಿಮಗೆ ಸಹಾಯ ಮಾಡುತ್ತದೆ. ಇದು ಮಾತ್ರವಲ್ಲ, ನೀವು ಧ್ಯಾನ ಮಾಡುವಾಗ ಕಂಪನಗಳು ಅವರನ್ನು ತಲಪುತ್ತವೆ ಮತ್ತು ಅವರು ಶಾಂತಿಯನ್ನು ಅನುಭವಿಸುತ್ತಾರೆ.


ಪ್ರಶ್ನೆ: ಒಂದು ಕಷ್ಟಕರ ಸನ್ನಿವೇಶವಿರುವಾಗ, ನಾನು ಅದನ್ನು ಹಾಗೇ ಸ್ವೀಕರಿಸಬೇಕೇ ಅಥವಾ ಹೋರಾಡಬೇಕೇ?
ಶ್ರೀ ಶ್ರೀ ರವಿಶಂಕರ್:
ನಿನಗೆ ಅನ್ನಿಸಿದರೆ ಹೋರಾಡು. ನೀನು ನಿನ್ನ ೧೦೦% ಮಾಡಿದ್ದೀಯೆಂದು ನಿನಗನ್ನಿಸಿದರೆ ಮತ್ತು ನೀನು ಯಾವುದೇ ರೀತಿಯಲ್ಲಿ ಹೋರಾಡಲು ಸಾಧ್ಯವಿಲ್ಲವಾದರೆ, ಆಗ ಪ್ರಾರ್ಥನೆ ಮಾಡು. ಸಹಾಯಕ್ಕಾಗಿ ಪ್ರಾರ್ಥನೆ ಮಾಡು! ಮೊದಲು ನೀನು ಆ ಸನ್ನಿವೇಶವನ್ನು ಅದು ಇದ್ದಂತೆಯೇ ಸ್ವೀಕರಿಸು ಮತ್ತು ನಂತರ ಹೋರಾಡು. ಹೋರಾಡಿದ ಬಳಿಕ ಪುನಃ ಸ್ವೀಕರಿಸು. ಒಂದು ಹೋರಾಟವು ಸ್ವೀಕಾರಗಳ ನಡುವೆ ಸ್ಯಾಂಡ್ ವಿಚ್ ಆಗಿರಬೇಕು ಮತ್ತು ಇದುವೇ ಯೋಗದ ಸಾರ. ಯೋಗವೆಂದರೇನು? ಸ್ವೀಕಾರ ಮತ್ತು ಪ್ರಶಾಂತತೆಯೊಂದಿಗೆ ಕಾರ್ಯ ನಿರ್ವಹಿಸುವುದು; ಸಂಪೂರ್ಣ ಪ್ರಜ್ಞೆಯೊಂದಿಗೆ ಕಾರ್ಯ ನಿರ್ವಹಿಸುವುದು.
ಪ್ರಶ್ನೆ: ಸಾವಿನ ನಂತರ ಆತ್ಮಕ್ಕೆ ಏನಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಅದು ಪುನಃ ತಿರುಗಿ ಬರಲು ಸಿದ್ಧವಾಗುತ್ತದೆ. ಅದು ಹೋಗಿ ಇನ್ನೊಂದು ಶರೀರಕ್ಕಾಗಿ ಸಾಲಿನಲ್ಲಿ ನಿಲ್ಲುತ್ತದೆ. ಭೂಮಿಗೆ ತಿರುಗಿ ಬರಲು ಕೋಟ್ಯಾಂತರ ಆತ್ಮಗಳು ಕಾಯುತ್ತಿವೆ. ಅದಕ್ಕಾಗಿಯೇ, ಆತ್ಮಹತ್ಯೆ ಪ್ರವೃತ್ತಿಯಿರುವವರಿಗೆ ಮತ್ತು ತಮ್ಮನ್ನೇ ಕೊಲ್ಲಲು ಬಯಸುವವರಿಗೆ ಅದನ್ನು ಮಾಡಬಾರದೆಂದು ನಾನು ಹೇಳುವುದು. ಒಂದು ಶರೀರ ಸಿಗಲು ನೀವು ತುಂಬಾ ಸಮಯ ಮತ್ತು ಉದ್ದದ ಸಾಲಿನಲ್ಲಿ ಕಾದಿದ್ದೀರಿ, ಆದುದರಿಂದ ಅದನ್ನು ನಾಶ ಮಾಡಬೇಡಿ. ಅದು ತುಂಬಾ ಅಮೂಲ್ಯವಾದುದು.
ಪ್ರಶ್ನೆ: ಈ ಶರೀರಕ್ಕೆ ಬರುವ ಮೊದಲು ನಾನು ಎಲ್ಲಿದ್ದೆ?
ಶ್ರೀ ಶ್ರೀ ರವಿಶಂಕರ್:
ತುಂಬಾ ಒಳ್ಳೆಯ ಪ್ರಶ್ನೆ! ಈ ಶರೀರ ಸಿಗುವ ಮೊದಲು ನಾನೆಲ್ಲಿದ್ದೆ? ಪ್ರಜ್ಞೆಯು ತುಂಬಾ ಪುರಾತನವಾದುದು; ಮನಸ್ಸು ಕಲ್ಲುಗಳಿಗಿಂತ ಹಳೆಯದು. ನಾನು ಹೇಳುವುದೇನೆಂದರೆ, ಈ ಪ್ರಶ್ನೆಯನ್ನು ಇಟ್ಟುಕೋ. ಇದು ತುಂಬಾ ಮುಖ್ಯವಾದ ಪ್ರಶ್ನೆ. ಉತ್ತರ ಪಡೆಯಲು ಅವಸರ ಮಾಡಬೇಡ. ಈ ಪ್ರಶ್ನೆಯಲ್ಲೇ ನಿನಗೆ ಉತ್ತರ ಸಿಗಬಹುದು ಮತ್ತು ನೀನು ಧ್ಯಾನದಲ್ಲಿ ಆಳಕ್ಕೆ ಹೋಗುವಿ ಮತ್ತು ಇನ್ನೂ ಬಹಳವಿದೆ. ನಾನು ಈಗ ಇಲ್ಲಿದ್ದೇನೆ, ಆದರೆ ಎಲ್ಲಾ ಕಡೆಗಳಲ್ಲಿಯೂ ಇದ್ದೇನೆ.
ಪ್ರಶ್ನೆ: ಧ್ಯಾನದಿಂದ ಹೊರಬರಲು ಅಲಾರ್ಮ್ ಇಡಬೇಕಾದ ಅಗತ್ಯವಿದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ, ಸಾಧಾರಣವಾಗಿ ಇಲ್ಲ ಯಾಕೆಂದರೆ ಅದು ತುಂಬಾ ಕರ್ಕಶವಾಗಬಹುದು. ಆದರೆ ನೀವು, ನಾನು ೨೦ ನಿಮಿಷ ಅಥವಾ ಅರ್ಧ ಗಂಟೆ ಧ್ಯಾನ ಮಾಡುತ್ತೇನೆ ಎಂಬ ಉದ್ದೇಶವನ್ನು ಇರಿಸಿಕೊಂಡರೆ, ಆಗ ನಿಮ್ಮ ಕಣ್ಣುಗಳು ತೆರೆಯುತ್ತವೆ. ನಿಮ್ಮೊಳಗೆ, ನಿಮ್ಮ ಸಂಕಲ್ಪದೊಂದಿಗೆ ಕೆಲಸ ಮಾಡುವ ಒಂದು ಗಡಿಯಾರವಿದೆ. ನೀವೆಲ್ಲರೂ ಈ ಒಳಗಿನ ಯಾಂತ್ರಿಕ ವ್ಯವಸ್ಥೆಯನ್ನು ಪ್ರಯತ್ನಿಸಿ ನೋಡಿದ್ದೀರಾ? ನಾನು ಬೆಳಗ್ಗೆ ೫ ಗಂಟೆಗೆ ಏಳಬೇಕೆಂಬ ಒಂದು ಸಂಕಲ್ಪವನ್ನು ನಿಮ್ಮ ಮನಸ್ಸಿನಲ್ಲಿ ಹಾಕಿನೋಡಿ ಮತ್ತು ಸರಿಯಾಗಿ ಬೆಳಗ್ಗೆ ೫ ಗಂಟೆಗೆ ನಿಮ್ಮ ಕಣ್ಣುಗಳು ತೆರೆಯುತ್ತವೆ. ನಿಮ್ಮ ಒಳಗಡೆ ಒಂದು ಗಡಿಯಾರವಿದೆ, ಅದನ್ನು ಉಪಯೋಗಿಸಿ!
ಧ್ಯಾನ ಮಾಡಲು ೨೦ ನಿಮಿಷ ಕುಳಿತುಕೊಳ್ಳಿ. ತುಂಬಾ ಮೊದಲಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ, ಧ್ಯಾನದಿಂದ ಹೊರಬಂದಾಗ ನಿಮಗೆ ನಿಮ್ಮ ಮನೆಯೆಲ್ಲಿದೆ ಮತ್ತು ನಿಮ್ಮ ಕಾರಿನ ಕೀಗಳು ಎಲ್ಲಿವೆ ಎಂಬುದು ಮರೆತು ಹೋಗಬಹುದು! ಆದುದರಿಂದ ನಾನು, ಮೊದಲಲ್ಲಿ ೨೦ ನಿಮಿಷಗಳು ಅಥವಾ ಅರ್ಧ ಗಂಟೆ ಧ್ಯಾನ ಮಾಡಲು ಶಿಫಾರಸು ಮಾಡುತ್ತೇನೆ, ಅದಕ್ಕಿಂತ ಹೆಚ್ಚಲ್ಲ. ಅದಕ್ಕಿಂತ ಹೆಚ್ಚು ಕಾಲ ಕುಳಿತುಕೊಳ್ಳಲು ಸಾಧ್ಯವೂ ಇಲ್ಲ. ನೀವು ತುಂಬಾ ಹೊತ್ತು ಕುಳಿತುಕೊಂಡರೆ, ತನ್ನಿಂತಾನೇ ನಿಮ್ಮ ಕಣ್ಣುಗಳು ತೆರೆಯುತ್ತವೆ ಮತ್ತು ಚಡಪಡಿಕೆಯಾಗಲು ಶುರುವಾಗುತ್ತದೆ. ತುಂಬಾ ಹೊತ್ತು ಕುಳಿತುಕೊಳ್ಳಲು ನಿಮಗೆ ನೀವೇ ಬಲವಂತ ಮಾಡಬೇಡಿ; ೨೦ ನಿಮಿಷ ಕನಿಷ್ಠ ಮತ್ತು ಅರ್ಧ ಗಂಟೆ ಗರಿಷ್ಠ.
ಪ್ರಶ್ನೆ: ನಾನು ಧ್ಯಾನ ಮಾಡುವಾಗ ನನಗೆ ನೋವಾದ ಅನುಭವ ಯಾಕಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ನಿನಗೆ ನೋವಿನ ಅನುಭವ ಯಾಕಾಗುತ್ತದೆಯೆಂದು ಗೊತ್ತಾ? ಯಾಕೆಂದರೆ ಧ್ಯಾನವು ನಿನ್ನೊಳಗಿರುವ ಪ್ರೀತಿಯ ಜಾಗವನ್ನು ಪ್ರಚೋದಿಸುತ್ತದೆ. ಅದು ನಿನ್ನೊಳಗೆ ಆಳದಲ್ಲಿರುವ ಪ್ರೀತಿಯನ್ನು ಮೇಲೆ ತರುತ್ತಿರುತ್ತದೆ. ಪ್ರೀತಿಯು ನೋವಿನೊಂದಿಗೆ ಸಂಬ್ಬಂಧ ಹೊಂದಿದೆ; ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ತಿಳಿಯುತ್ತಿದೆಯೇ? ಆದುದರಿಂದ ನಿಮಗೆ ದುಃಖದ ಅನುಭವವಾಗಬಹುದು, ಕೆಲವು ಭಾವನೆಗಳು ಮೇಲೆ ಬಂದು ಕಣ್ಣೀರು ತುಂಬಿದ ಅನುಭವವಾಗಬಹುದು. ಅವುಗಳ ಬಗ್ಗೆ ಆ ಸಮಯದಲ್ಲಿ ತೀರ್ಮಾನಿಸಬೇಡಿ, ಅವುಗಳೊಂದಿಗೆ ಹಾಗೇ ಇರಿ. ಅದು ತುಂಬಾ ಸಹಿಸಲಸಾಧ್ಯವಾದರೆ, ಆಗ ಕೆಲವು ದೀರ್ಘ ಉಸಿರನ್ನು ತೆಗೆದುಕೊಳ್ಳಿ. ಆ ಸಮಯದಲ್ಲಿ ಸ್ವಲ್ಪ ಪ್ರಾಣಾಯಾಮ, ಉಸಿರಾಟದ ವ್ಯಾಯಾಮ ಮಾಡಿ ಮತ್ತು ಆಗ ಹಿತವಾಗುತ್ತದೆ.
ಪ್ರಶ್ನೆ: ಒಂದು ಸದುದ್ದೇಶಕ್ಕಾಗಿ ಕೆಲಸ ಮಾಡುವಾಗ ಜೀವನವನ್ನು ಸಮತೋಲನವಾಗಿರಿಸುವುದು ಹೇಗೆ
ಶ್ರೀ ಶ್ರೀ ರವಿಶಂಕರ್:
ಹೌದು, ಅದೊಂದು ಸವಾಲು. ನೀವು ಅದನ್ನು ಸಂಕಲ್ಪಿಸಿದಾಗ, ಅದರ ಬಗ್ಗೆ ಯೋಚಿಸಿದಾಗ ಮತ್ತು ಎರಡನ್ನೂ ಮಾಡಬಲ್ಲೆ ಎಂದು ಹೇಳಿದಾಗ, ಅವುಗಳು ಪರಸ್ಪರ ವಿರೋಧಾತ್ಮಕವಾಗಿವೆಯೆಂದು ಕಂಡುಬಂದರೂ, ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ನಿಮ್ಮ ಸದುದ್ದೇಶದಲ್ಲಿ ಯಶಸ್ವಿಯಾಗುತ್ತೀರಿ. "ನನ್ನ ನೌಕರಿಗಿಂತ ಶ್ರೇಷ್ಠವಾದ ಒಂದು ಧ್ಯೇಯ ನನಗಿದೆ", ಇದನ್ನು ನೀವು ತಿಳಿದುಕೊಂಡಾಗ ನೀವು ಎರಡನ್ನೂ ಮಾಡಬಲ್ಲಿರಿ. ಧ್ಯೇಯದ ಕಡೆಗಿರುವ ನಿಮ್ಮ ಅನುರಾಗವು ನೌಕರಿಯ ಕಡೆಗಿರುವ ಕಳಕಳಿಯನ್ನು ಹಿಂದಿಕ್ಕಿದರೆ ನೀವು ಹೇಳುವಿರಿ, "ಇಲ್ಲ, ನಾನು ನನ್ನ ನೌಕರಿಯನ್ನು ದೂರ ಬಿಸಾಕುತ್ತೇನೆ, ನಾನು ನನ್ನ ಧ್ಯೇಯವನ್ನು ಮುಂದುವರಿಸುತ್ತೇನೆ". ಇದು ನಡೆಯಲು ಒಂದು ಕಷ್ಟಕರವಾದ ದಾರಿ ಆದರೆ ಅದು ಹಲವಾರು ಫಲಗಳನ್ನು ಕೊಡುತ್ತದೆ. ಆ ನಿಟ್ಟಿನಲ್ಲಿ ಇದು ಹೆಚ್ಚು ತೃಪ್ತಿಕರ. ಯಾವುದೇ ದೊಡ್ಡ ಸಾಧನೆಯಲ್ಲಿ ಎಲ್ಲಾದರೂ ಸ್ವಲ್ಪ ತ್ಯಾಗದ ಅವಶ್ಯಕತೆಯಿರುತ್ತದೆ. ನೀವು ಒಂದು ಸೌಕರ್ಯ ವಲಯದಲ್ಲಿರಲು ಬಯಸುವುದಾದರೆ ಎರಡು ಕೊನೆಗಳನ್ನೂ ಸಮತೋಲನವಾಗಿರಿಸಿ. ಆದರೆ ನೀವು, "ನಾನು ಸೌಕರ್ಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇದು ನನ್ನ ಬಲವಾದ ಅನುರಾಗ ಮತ್ತು ನಾನೊಂದು ಮಹತ್ತಾದ ಧ್ಯೇಯವನ್ನು ಹೊಂದಲು ಬಯಸುತ್ತೇನೆ" ಎಂದು ಹೇಳಿದರೆ, ಆಗ ನೀವು ಅದಕ್ಕೆ ಜಿಗಿಯಬೇಕು. 
ಪ್ರಶ್ನೆ: ಹಾಡುವಿಕೆಯು ಧ್ಯಾನಕ್ಕೆ ಹೇಗೆ ಸಹಾಯಕವಾಗುತ್ತದೆ?
ಶ್ರೀ ಶ್ರೀ ರವಿಶಂಕರ್:
ಹಾಡುವಿಕೆಯು ಸಹಾಯ ಮಾಡುತ್ತದೆ. ಹಾಡುವಿಕೆಯು ಒಂದು ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತದೆ ಮತ್ತು ಪ್ರಾಣವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಧ್ಯಾನದಲ್ಲಿ ಆಳಕ್ಕೆ ಹೋಗಲು ಸಹಾಯ ಮಾಡುತ್ತದೆ. ಆದುದರಿಂದ ಹಾಡುವಿಕೆಯು ಧ್ಯಾನಕ್ಕೊಂದು ಸಹಾಯಿ. ಇಂಗ್ಲಿಷ್ ಭಾಷೆಯ ೭೦% ಸಂಸ್ಕೃತವೆಂದು ನಿಮಗೆ ಗೊತ್ತಿದೆಯಾ? ನಿಮ್ಮಲ್ಲಿ ಎಷ್ಟು ಮಂದಿ ಇದರ ಬಗ್ಗೆ ಕೇಳಿದ್ದೀರಿ? ’ಸಿಸ್ಟರ್’ ಎಂದರೆ ಸ್ವಸ; ’ಡಾಟರ್’ ಎಂದರೆ ದುಹಿತ; ’ಗೋ’ ಎಂದರೆ ಗಚ್ಛಾ. ಇಂಗ್ಲಿಷ್ ಭಾಷೆಯ ಮೂಲವು ಸಂಸ್ಕೃತವಾಗಿದೆ.
ಪ್ರಶ್ನೆ: ಅವನು ಜೀವನವನ್ನು ಯಾಕೆ ಸೃಷ್ಟಿಸಿದನು?
ಶ್ರೀ ಶ್ರೀ ರವಿಶಂಕರ್:
ಅವನು ಜೀವನವನ್ನು ಯಾಕೆ ಸೃಷ್ಟಿಸಬಾರದು? ನೀನು ಈ ಪ್ರಶ್ನೆಯನ್ನು ಕೇಳಲಿಯೆಂದೇ ಅವನು ಜೀವನವನ್ನು ಸೃಷ್ಟಿಸಿದನು. ಅವನು ಸೃಷ್ಟಿಸಿದ್ದಿಲ್ಲವಾದರೆ, ನೀನು ಈ ಪ್ರಶ್ನೆಯನ್ನು ಕೇಳಲು ಸಾಧ್ಯವಾಗುತ್ತಿರಲಿಲ್ಲ! ನನಗೆ ತಿಳಿಯದು, ನನಗೆ ಕಲ್ಪನೆಯೇ ಇಲ್ಲ. ದೇವರಿಗೆ ಉತ್ತಮ ಸಲಹೆಗಾರರ ಅಗತ್ಯವಿದೆಯೆಂದು ನನಗನಿಸುತ್ತದೆ. ಅವನು ವಿಷಯಗಳನ್ನು ತುಂಬಾ ಸಂಕೀರ್ಣವಾಗಿ ಮಾಡಿದ್ದಾನೆ.
ಪ್ರಶ್ನೆ: ವರ್ತಮಾನದ ಕ್ಷಣವನ್ನು ಸ್ವೀಕರಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್:
ಈಗಿನಂತೆ, ಈ ಕ್ಷಣ ನಾನು ನಿನ್ನ ಪ್ರಶ್ನೆಯನ್ನು ಸ್ವೀಕರಿಸಿದ್ದೇನೆ ಮತ್ತು ನಾನೀಗ ಇಲ್ಲಿದ್ದೇನೆ. ತಿಳಿಯಿತಾ? ಅದು ಸ್ವಯಂ-ಪ್ರಚೋದಿತ. ವರ್ತಮಾನದ ಕ್ಷಣವು ಅನಿವಾರ್ಯವಾದುದು. ಅಸ್ಥಿತ್ವದಲ್ಲಿರುವುದೆಲ್ಲಾ ವರ್ತಮಾನದ ಕ್ಷಣದಲ್ಲಿರುವುದು. ಒಂದು ಭವಿಷ್ಯದ ಯೋಚನೆಯೂ ಕೂಡಾ ವರ್ತಮಾನದ ಕ್ಷಣದಲ್ಲಿರುವುದು. ನಿಮ್ಮ ಭವಿಷ್ಯದ ಚಿಂತೆಯು ಭವಿಷ್ಯಕಾಲದಲ್ಲಿಲ್ಲ, ಅದು ವರ್ತಮಾನ ಕಾಲದಲ್ಲಿದೆ. ಹಿಂದಿನ ನೆನಪುಗಳು ಕೂಡಾ ವರ್ತಮಾನದಲ್ಲಿದೆ. ನೀವು ವರ್ತಮಾನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭೂತಕಾಲದ ಬಗೆಗಿನ ನಿಮ್ಮ ಚಿಂತೆಯೂ ಕೂಡಾ ವರ್ತಮಾನದಲ್ಲಿದೆ. ನೀವು ಕೇವಲ ಎದ್ದು ನೋಡಬೇಕು, ವರ್ತಮಾನವು ಅನಿವಾರ್ಯವಾದುದೆಂದು, ಅಷ್ಟೆ.
ಪ್ರಶ್ನೆ: ಕೋಪವು ಒಳ್ಳೆಯದೇ?
ಶ್ರೀ ಶ್ರೀ ರವಿಶಂಕರ್:
ನೀವು ಕೋಪವನ್ನು ಯಾವುದಕ್ಕಾದರೂ ಉಪಯೋಗಿಸಲು ಬಯಸಿದರೆ ಮತ್ತು ಅದು ನಿಮ್ಮ ನಿಯಂತ್ರಣದಲ್ಲಿದ್ದರೆ, ಆಗ ಅದು ಒಳ್ಳೆಯದು. ಕೋಪವು ನಿಮ್ಮನ್ನು ನಿಯಂತ್ರಿಸಿದರೆ, ಆಗ ನೀವು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತೀರಿ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯಾ? ನೀವು ಕೋಪವನ್ನು ಒಂದು ಸಲಕರಣೆಯಾಗಿ ಉಪಯೋಗಿಸಬಹುದು ಆದರೆ ಕೋಪವು ನಿಮ್ಮನ್ನು ಉಪಯೋಗಿಸಲು ತೊಡಗಿದರೆ, ಆಗ ನೀವು ಎಲ್ಲವನ್ನೂ ಕಳೆದುಕೊಳ್ಳುತ್ತೀರಿ; ಸದುದ್ದೇಶವೂ ನಾಶವಾಗುತ್ತದೆ. ಹೆಚ್ಚಿನ ಜನರು ಇದನ್ನು ಮಾಡುತ್ತಾರೆ, ಅವರು ಅನ್ಯಾಯದ ವಿರುದ್ಧ  ಹೋರಾಡಬೇಕಾದಾಗ, ತಮ್ಮ ಉದ್ದೇಶವನ್ನು ಕಳಕೊಳ್ಳುತ್ತಾರೆ ಮತ್ತು ಯಾವ ಕಾರಣಕ್ಕಾಗಿ ಅವರು ಹೋರಾಡುತ್ತಾರೋ ಅದು ಸೋಲುತ್ತದೆ.
ತೃತೀಯ ಜಗತ್ತಿನ ದೇಶಗಳಲ್ಲಿ ಮತ್ತು ಪ್ರಪಂಚದ ಎಲ್ಲೆಡೆಗಳಲ್ಲಿ ಬಸ್ಸುಗಳನ್ನು ಹೊತ್ತಿಸುತ್ತಾರೆ, ರೈಲುಗಳನ್ನು ಹೊತ್ತಿಸುತ್ತಾರೆ ಮತ್ತು ತುಂಬಾ ಹಾನಿಯನ್ನುಂಟುಮಾಡುತ್ತಾರೆ. ಪ್ರತಿಯೊಂದು ಗಲಭೆಯ ಹಿಂದೆ, ಅವರು ತಾವು ಅನ್ಯಾಯದ ವಿರುದ್ಧ ಹೋರಾಡುತ್ತಿರುವುದೆಂದು ಯೋಚಿಸುತ್ತಾರೆ; ಯಾವುದೇ ಗಲಭೆಯಿರಲಿ, ಪ್ರಪಂಚದಲ್ಲಿ ಎಲ್ಲಿಯೇ ಇರಲಿ. ಯುದ್ಧ ಎಂಬುದಕ್ಕೆ ನನ್ನ ವ್ಯಾಖ್ಯಾನವೆಂದರೆ - ಕಾರಣಕ್ಕಿರುವ ಕೆಟ್ಟ ಕ್ರಿಯೆ (ಡಬ್ಲ್ಯೂ.ಎ.ಆರ್. (ವಾರ್=ಯುದ್ಧ) - ವರ್ಸ್ಟ್ ಆಕ್ಟ್ ಆಫ್ ರೀಸನ್). ನೀವು ಯುದ್ಧ ಮಾಡಲು ಹೋಗುವುದಕ್ಕೆ ಒಂದು ಕಾರಣವಿರುತ್ತದೆ. ಯುದ್ಧಕ್ಕೆ ಹೋಗುವ ಯಾರೇ ಆದರೂ ಅದನ್ನು ಸಮರ್ಥಿಸುತ್ತಾರೆ. ಆದರೆ ಅದು ಬಹಳ ಹಾನಿಯನ್ನುಂಟುಮಾಡುತ್ತದೆ ಮತ್ತು ನಿಮಗೆ ಏನನ್ನೂ ಕೊಡುವುದಿಲ್ಲ. ಆದುದರಿಂದಲೇ ಒಬ್ಬನು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅಗತ್ಯವಿದೆ. ಶಾಂತಿಯುತವಾದ, ಅಹಿಂಸಾ ರೀತಿಯ ಪ್ರದರ್ಶನವು ಉತ್ತಮವಾದುದು, ಗಾಂಧಿಯ ತತ್ವಗಳಂತೆ. ಇದನ್ನು ನಾವು ಭಾರತದಲ್ಲಿ ಈಗ ಅಗಸ್ಟ್ ನಲ್ಲಿ ಮಾಡಿದೆವು. ನೀವು ವಾರ್ತಾಪತ್ರಿಕೆಗಳಲ್ಲಿ ಇದರ ಬಗ್ಗೆ ಕೇಳಿರಬಹುದು. ಐ.ಎ.ಸಿ. - ಇಂಡಿಯಾ ಅಗೈನ್ಸ್ಟ್ ಕರಪ್ಷನ್ (ಭ್ರಷ್ಟಾಚಾರದ ವಿರುದ್ಧ ಭಾರತ), ನಾವು ಇದರ ಸಂಸ್ಥಾಪಕ ಸದಸ್ಯರು. ನಾವು ಈ ಚಳುವಳಿಯನ್ನು ದೇಶದಲ್ಲೆಲ್ಲೂ ಒಂದೇ ಒಂದು ಹಿಂಸಾ ಕೃತ್ಯ ಅಥವಾ ಗಲಭೆಯಿಲ್ಲದೆಯೇ ಮಾಡಿದೆವು. ಜೀವನ ಕಲೆಯು ಪ್ರಧಾನ ಪೋಷಕ, ಪ್ರಧಾನ ಮೂಲವಾಗಿತ್ತು ಹಾಗೂ ನಮ್ಮೆಲ್ಲಾ ಸ್ವಯಂ-ಸೇವಕರು, ಯಾವುದೇ ಸಮಾಜ-ವಿರೋಧಿ ಅಂಶಗಳು ಈ ಭ್ರಷ್ಟಾಚಾರ-ವಿರೋಧಿ ಚಳುವಳಿಯನ್ನು ಪ್ರವೇಶಿಸದಂತೆ ಜಾಗರೂಕತೆ ವಹಿಸಿದರು. ಭ್ರಷ್ಟಾಚಾರ ಮತ್ತು ಹಿಂಸೆಯ ವಿರುದ್ಧ ಎದ್ದು ನಿಲ್ಲುವುದು - ಇದು ವೈಪರೀತ್ಯಕ್ಕೆ ತಿರುಗುವ ಸಾಧ್ಯತೆಯಿತ್ತು. ಜನರು ಮನೆಗಳನ್ನು ಹೊತ್ತಿಸಿರುತ್ತಿದ್ದರು ಅಥವಾ ಎಲ್ಲಾ ರೀತಿಯ ತೊಂದರೆಗಳನ್ನು ಮಾಡಿರುತ್ತಿದ್ದರು. ಆದರೆ ಇಲ್ಲ, ಅವರು ಅಹಿಂಸೆಗೆ ಬದ್ಧರಾಗಿದ್ದರು ಮತ್ತು ಅಚಾನಕ್ಕಾಗಿ ಇಡಿಯ ಸಮಯದಲ್ಲಿ, ದೇಶದಲ್ಲಿನ ಅಪರಾಧದ ಪ್ರಮಾಣವು ಕಡಿಮೆಯಾಗಿತ್ತು. ಪ್ರತಿಯೊಬ್ಬರೂ ಒಂದು ಸದುದ್ದೇಶಕ್ಕಾಗಿ ಎದ್ದು ನಿಂತಿದ್ದರು.
ಪ್ರಶ್ನೆ: ಪಾಪವೆಂದರೇನು?
ಶ್ರೀ ಶ್ರೀ ರವಿಶಂಕರ್:
ಪಾಪವೆಂದರೆ, ಯಾವುದು ನಿಮಗೆ ಹಾಗೂ ಇತರರಿಗೆ ದೀರ್ಘಕಾಲೀನ ಬಳಲುವಿಕೆಯನ್ನು ತಂದೊಡ್ಡುತ್ತದೋ ಅದು. ಯಾವುದು ನಿಮಗೆ ಅಲ್ಪಾವಧಿಯ ಸುಖವನ್ನು ಕೊಡುತ್ತದೆಯೋ ಆದರೆ ನಿಮ್ಮ ಉಳಿದ ಜೀವಮಾನದಲ್ಲಿ ಬಳಲುವಿಕೆಯನ್ನು ತಂದೊಡ್ಡುತ್ತದೆಯೋ ಅದು ಪಾಪ. ಆದರೆ ಯಾವುದು ಮೊದಲಿಗೆ ನೋವಿನಂತೆ ಕಾಣಿಸಿಕೊಂಡರೂ ದೀರ್ಘಾವಧಿಯಲ್ಲಿ ನಿಮ್ಮನ್ನು ಮೇಲೆತ್ತುತ್ತದೆಯೋ ಅದು ಪುಣ್ಯ.
ಪ್ರಶ್ನೆ: ಧ್ಯಾನದ ರಹಸ್ಯವೇನು?
ಶ್ರೀ ಶ್ರೀ ರವಿಶಂಕರ್:
ಮೂರು ರೀತಿಯ ಆಕಾಶಗಳಿವೆ. ಒಂದನೆಯದು ಎಲ್ಲಾ ನಾಲ್ಕು ತತ್ವಗಳಿರುವ ಬಾಹ್ಯ ಆಕಾಶ. ಎರಡನೆಯ ರೀತಿಯ ಆಕಾಶವೆಂದರೆ, ಆಲೋಚನೆಗಳು ಮತ್ತು ಭಾವನೆಗಳು ಉದ್ಭವಿಸುವಂತಹ ಒಳಗಿನ ಆಕಾಶ; ಇದು ಚಿತ್ ಆಕಾಶ ಎಂದು ಕರೆಯಲ್ಪಡುತ್ತದೆ ಮತ್ತು ಮೂರನೆಯ ರೀತಿಯ ಆಕಾಶವಿದೆ, ಅಲ್ಲಿ ಪರಮಸುಖ ಮಾತ್ರವಿದೆ. ಈ ಮೂರು ಆಕಾಶಗಳು ಜೋಡಲ್ಪಟ್ಟಿವೆ - ಬಾಹ್ಯಾಕಾಶ, ಯೋಚನೆಗಳ ಮಧ್ಯವರ್ತಿ ಆಕಾಶ ಅಥವಾ ಸೂಕ್ಷ್ಮ ಶರೀರ ಹಾಗೂ ಪರಮಸುಖ ಮತ್ತು ಪ್ರೀತಿಯ ಕಾರಣಾರ್ಥಕ ಶರೀರ. ಆದುದರಿಂದ, ಪ್ರತಿ ಸಮಯದಲ್ಲೂ ನೀವು ಸ್ವಲ್ಪ ಪ್ರೀತಿ ಅಥವಾ ಸ್ವಲ್ಪ ಸಂತೋಷ ಅಥವಾ ಸ್ವಲ್ಪ ಶಾಂತಿಯನ್ನು ಅನುಭವಿಸುವಾಗ, ನೀವು ಆ ಆಂತರಿಕ ಆಕಾಶದೊಂದಿಗೆ ಸಂಪರ್ಕದಲ್ಲಿರುತ್ತೀರಿ. ನೀವು ಕೇವಲ ಅದನ್ನು ಸ್ಪರ್ಶಿಸಿ ಹೋದರೂ ಅದು ನಿಮ್ಮೊಳಗೆ ಆ ಚೈತನ್ಯವನ್ನು ತುಂಬುತ್ತದೆ. ಆದುದರಿಂದ, ಚೈತನ್ಯದ ವರ್ಧನೆಯಾದಂತೆ ಧ್ಯಾನವು ಆಗುತ್ತದೆ ಮತ್ತು ಧ್ಯಾನವು ಕೂಡಾ ಚೈತನ್ಯವನ್ನು ವರ್ಧಿಸುತ್ತದೆ, ಅದು ಒಂದಕ್ಕೊಂದು ಪೂರಕ. ನಿಮ್ಮ ಚೈತನ್ಯವು ಮೇಲಕ್ಕೆತ್ತಲ್ಪಟ್ಟಾಗ ಧ್ಯಾನವಾಗುತ್ತದೆ.
ಪ್ರಶ್ನೆ: ನಮಗೆ ನಾವೇ ಸಹಾನುಭೂತಿ ತೋರುವುದು ಒಂದು ಸವಾಲಾಗುತ್ತದೆ, ಯಾಕೆ?
ಶ್ರೀ ಶ್ರೀ ರವಿಶಂಕರ್:
ಯಾಕೆಂದರೆ ನಮ್ಮಲ್ಲಿ ನಮ್ಮನ್ನೇ ದೂಷಿಸುವ ಪ್ರವೃತ್ತಿಯಿದೆ. ಆಧ್ಯಾತ್ಮಿಕ ಪಥದಲ್ಲಿರುವ ಮೊದಲನೆಯ ನಿಯಮವೆಂದರೆ ನಿಮ್ಮನ್ನು ನೀವೇ ದೂಷಿಸುವುದನ್ನು ನಿಲ್ಲಿಸಬೇಕು. ಇದೊಂದು ನಿಯಮ. ನೀವು ಈ ನಿಯಮವನ್ನು ಪಾಲಿಸಿದರೆ, ಆಗ ನೀವು ಆಧ್ಯಾತ್ಮಿಕ ಪಥದಲ್ಲಿ ಬಹಳ ಚೆನ್ನಾಗಿ ಪ್ರಗತಿ ಹೊಂದುತ್ತೀರಿ. ನೋಡಿ, ಆಧ್ಯಾತ್ಮವೆಂದರೇನು? ಆಧ್ಯಾತ್ಮಿಕ ಪಥವೆಂದರೇನು? ಅದು ನಿಮ್ಮೊಂದಿಗೆ, ನಿಮ್ಮ ಮೂಲದೊಂದಿಗೆ ನೀವು ಸಂಪರ್ಕಿಸುವುದು. ನಿಮ್ಮೊಂದಿಗೆ ಸಂಪರ್ಕಿಸಲು ಒಳಗೆ ಹೋಗುವುದು. ನೀವು ನಿಮ್ಮನ್ನೇ ದೂಷಿಸುತ್ತಾ ಇದ್ದರೆ, ನೀವು ನಿಮ್ಮ ಸಮೀಪಕ್ಕೆ ಹೋಗಲು ಹೇಗೆ ಸಾಧ್ಯ? ದೂಷಿಸುವ ಒಬ್ಬರ ಜೊತೆಯಿರಲು ನೀವು ಬಯಸಲಾರಿರಿ. ಧ್ಯಾನಕ್ಕಿರುವ ಅತ್ಯಂತ ದೊಡ್ಡ ಅಡ್ಡಿಯೆಂದರೆ ಸ್ವಯಂ-ದೂಷಣೆ. ನೀವು ನಿಮ್ಮನ್ನೇ ದೂಷಿಸಿಕೊಳ್ಳುವಾಗ ನಿಮಗೆ ಶಾಂತವಾಗಿರಲು ಸಾಧ್ಯವಿಲ್ಲ, ನಿಮಗೆ ಒಳಗೆ ಧುಮುಕಲು ಸಾಧ್ಯವಿಲ್ಲ ಮತ್ತು ನಿಮಗೆ ಮುಂದುವರಿಯಲು ಸಾಧ್ಯವಿಲ್ಲ. ಆದುದರಿಂದ ನಿಮ್ಮನ್ನು ನೀವೇ ದೂಷಿಸಬೇಡಿ.
ಪ್ರಶ್ನೆ: ನೃತ್ಯವು ಯಾವುದನ್ನು ವ್ಯಕ್ತಪಡಿಸುತ್ತದೆ?
ಶ್ರೀ ಶ್ರೀ ರವಿಶಂಕರ್:
ಹೌದು, ನೀವು ಸಂತೋಷವಾಗಿರುವಾಗ, ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯೂ ಒಂದು ನೃತ್ಯವಾಗುತ್ತದೆ. ನೀವು ನೃತ್ಯ ಮಾಡುತ್ತಾ ನಿಮ್ಮ ಜೀವನದ ಮೂಲಕ ಸಾಗುತ್ತೀರಿ. ಜ್ಞಾನವು, ನೀವು ಎಲ್ಲಾ ಸಂದರ್ಭಗಳನ್ನೂ ನೃತ್ಯ ಮಾಡುತ್ತಾ ಹಾದು ಹೋಗುವಂತೆ ಮಾಡುತ್ತದೆ. ಲಯದಲ್ಲಿ ವಿಸ್ತರಿಸಲ್ಪಟ್ಟ ಒಂದು ಚಲನೆಯು ನೃತ್ಯವಾಗಿದೆ. ಲಯದಲ್ಲಿ ವಿಸ್ತರಿಸಲ್ಪಟ್ಟ ಶಬ್ದವು ಸಂಗೀತವಾಗಿದೆ. ವಿಸ್ತರಿಸಲ್ಪಟ್ಟ ಜೀವನವು ಆಚರಣೆಯಾಗಿದೆ!
ಪ್ರಶ್ನೆ: ಏಕ-ಸರಕಾರ ಪ್ರಪಂಚ ಮತ್ತು ಏಕ-ಕುಟುಂಬ ಪ್ರಪಂಚಗಳ ಬಗ್ಗೆ ನಿಮ್ಮ ವಿಚಾರಗಳೇನು?
ಶ್ರೀ ಶ್ರೀ ರವಿಶಂಕರ್:
ಈಗ ಅತೀ ಹೆಚ್ಚು ಪ್ರಾಯೋಗಿಕವಾಗಿರುವುದು ಏಕ-ಕುಟುಂಬ ಪ್ರಪಂಚ. ಏಕ-ಸರಕಾರ ಪ್ರಪಂಚದ ಬಗ್ಗೆ ಚಿಂತಿಸುವುದನ್ನು ನಾನು ರಾಜಕಾರಣಿಗಳಿಗೆ ಬಿಡುತ್ತೇನೆ. ಅವರು ವರ್ಲ್ಡ್ ಬ್ಯಾಂಕನ್ನು ಸ್ಥಾಪಿಸಿದ್ದಾರೆ, ಆದರೆ ಈಗಿನ ಪ್ರಕಾರ ಒಂದು ಏಕ-ಸರಕಾರ ಪ್ರಪಂಚಕ್ಕೆ ಯಾವುದೇ ರಾಜಕಾರಣಿಯು ಸಿದ್ಧರಾಗುವರೆಂದು ನನಗನಿಸುವುದಿಲ್ಲ. ಆದರೆ ಕನಿಷ್ಠಪಕ್ಷ ಸಂಯುಕ್ತ ದೇಶಗಳು, ಹಿಂದೆ ಉಳಿಯುವ ಬದಲಾಗಿ, ಹೆಚ್ಚು ಬಲಶಾಲಿ ಮತ್ತು ಹೆಚ್ಚು ಜಾಗೃತವಾದರೆ ಅದು ಭೂಮಿಗೆ ಒಳ್ಳೆಯದು.
ಪ್ರಶ್ನೆ: (ಪ್ರೇಕ್ಷಕರಲ್ಲೊಬ್ಬರು ಮೈಕ್ ಹಿಡಿಯದೇ ಅಚಾನಕ್ಕಾಗಿ ಒಂದು ಪ್ರಶ್ನೆಯನ್ನು ಕೇಳಿದರು ಮತ್ತು ಪ್ರಶ್ನೆ ಕೇಳಿಸುತ್ತಿರಲಿಲ್ಲ)
ಶ್ರೀ ಶ್ರೀ ರವಿಶಂಕರ್:
ಕೇಳು, ನೀನು ಉಸಿರಾಡುತ್ತಿದ್ದೀಯಾ? ಹೌದು, ನೀನು ಉಸಿರಾಡುತ್ತಿದ್ದಿ! ಖಂಡಿತಾ. ನಿನಗೆ ಅದು ಗೊತ್ತಿದೆ, ನನಗೆ ಅದು ಗೊತ್ತಿದೆ ಮತ್ತು ಎಲ್ಲರಿಗೂ ಅದು ಗೊತ್ತಿದೆ. ಏನಗುತ್ತಿದೆ? ಗಾಳಿಯು ನಿನ್ನ ಶರೀರವನ್ನು ಪ್ರವೇಶಿಸುತ್ತಿದೆ ಮತ್ತು ಅದೇ ಗಾಳಿಯು ನಿನ್ನ ಶರೀರದಿಂದ ಹೊರಗೆ ಹೋಗಿ ಇಡೀ ಪ್ರಪಂಚವನ್ನು ಸುತ್ತುತ್ತಿದೆ. "ಇದು ನನ್ನ ಗಾಳಿ" ಎಂದು ನಿನಗೆ ಹೇಳಲು ಸಾಧ್ಯವೇ? ಸೂಕ್ಷ್ಮವಾಗಿ ಹೋದಷ್ಟೂ ನೀನು ಅದನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಅದನ್ನು ಸ್ವಂತದ್ದಾಗಿಸಿಕೊಳ್ಳಲು ಸಾಧ್ಯವಿಲ್ಲ. ಸ್ಥೂಲದ ಮಟ್ಟದಲ್ಲಿ ನೀನು ಹೇಳಬಹುದು, "ಇದು ನನ್ನ ಶರೀರ", ಖಂಡಿತಾ! ಆಗಲೂ ಕೂಡಾ, ನಿಮ್ಮ ಶರೀರವು ಎಲ್ಲಾ ಸಮಯದಲ್ಲೂ ಕಂಪನಗಳನ್ನು ಅಥವಾ ಚೈತನ್ಯವನ್ನು ಹೊರಸೂಸುತ್ತಿರುತ್ತದೆ. ನೀವು ಬ್ರಹ್ಮಾಂಡದಿಂದ ಚೈತನ್ಯವನ್ನು ಪಡೆಯುತ್ತಿರುತ್ತೀರಿ ಮತ್ತು ಕಳೆದುಕೊಳ್ಳುತ್ತಿರುತ್ತೀರಿ. ಅಲ್ಲೊಂದು ನಿರಂತರವಾದ ಪ್ರವಾಹವಿರುತ್ತದೆ ಮತ್ತು ನಿಮ್ಮ ಶರೀರದಲ್ಲಿರುವ ಪ್ರತಿಯೊಂದು ಕೋಶವೂ ಬದಲಾಗುತ್ತಿರುತ್ತದೆ. ನೀವು ಎಲ್ಲಾ ಸಮಯದಲ್ಲೂ ಚೈತನ್ಯವನ್ನು ಅದಲು ಬದಲು ಮಾಡುತ್ತಿರುತ್ತೀರಿ. ನೀವೊಂದು ನಿರ್ದಿಷ್ಟ ಕಂಪನ, ಒಂದು ತರಂಗ, ಒಂದು ಫ್ರೀಕ್ವೆನ್ಸಿ (ಆವರ್ತನ) ಅಲ್ಲದೆ ಬೇರೇನೂ ಅಲ್ಲ. ಒಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಸೂಸನ್ ಎಂದು ಕರೆಯಲ್ಪಡುತ್ತದೆ, ಇನ್ನೊಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಜೆಫ್ರಿ ಎಂದು ಕರೆಯಲ್ಪಡುತ್ತದೆ ಮತ್ತು ಇನ್ನೊಂದು ನಿರ್ದಿಷ್ಟ ಫ್ರೀಕ್ವೆನ್ಸಿಯು ಮೈಕೆಲ್ ಎಂದು ಕರೆಯಲ್ಪಡುತ್ತದೆ. ನೀವು ಬಹುತೇಕ ಒಂದು ನಿರ್ದಿಷ್ಟ ಟಿವಿ ಚ್ಯಾನೆಲ್ ನಂತೆ. ಅದು, ಒಂದು ಗೋಪುರದಿಂದ ವಿಭಿನ್ನ ಚ್ಯಾನೆಲ್ ಗಳು ಪ್ರಸಾರವಾಗುವಂತೆ ಮತ್ತು ಯಾರದ್ದೇ ಮನೆಯಲ್ಲಿರುವ ಯಾವುದೇ ಟಿವಿಯಿಂದ ಆ ಚ್ಯಾನೆಲ್ ಗಳನ್ನು ಹಿಡಿಯಲು ಸಾಧ್ಯವಾಗುವಂತೆ. "ಬಿಬಿಸಿ ಯು ನನ್ನ ಟಿವಿಯಲ್ಲಿ ಬರುತ್ತಿದೆ, ಅದು ಪಕ್ಕದ ಮನೆಯವರ ಟಿವಿಯಲ್ಲಿ ಬರಲು ಹೇಗೆ ಸಾಧ್ಯ?" ಎಂದು ನೀವು ಹೇಳಲು ಸಾಧ್ಯವಿಲ್ಲ. ಅವುಗಳು ಅದೇ ತರಂಗಗಳು.
ನಿಮ್ಮ ಪ್ರಜ್ಞೆ ಕೂಡಾ ಒಂದು ತರಂಗ ಮತ್ತು ಅದಕ್ಕೆ ಹಲವಾರು ಸಾಧ್ಯತೆಗಳಿವೆ, ಹಲವಾರು ದಾರಿಗಳಿವೆ. ಅದು ಸೂರ್ಯನಂತೆ. ಸೂರ್ಯನು ಸಂಪೂರ್ಣವಾಗಿ ನಿಮ್ಮ ಕಿಟಿಕಿಯೊಳಗೆ ಬಂದಾಗ ನೀವು, "ಓ, ಸೂರ್ಯನು ನನ್ನ ಕಿಟಿಕಿಯೊಳಗೆ ಬಂದಿದ್ದಾನೆ, ನಾನು ಸೂರ್ಯನನ್ನು ಹಿಡಿದಿದ್ದೇನೆ!" ಎಂದು ಹೇಳುವಂತಿಲ್ಲ. ಇಲ್ಲ, ಅದೇ ಸೂರ್ಯನು ಪಕ್ಕದ ಮನೆಯವರ ಕಿಟಿಕಿಯಲ್ಲಿ ಹಾಗೂ ಪ್ರಪಂಚದೆಲ್ಲೆಡೆಗಳಲ್ಲೂ ಕೂಡಾ ಸಂಪೂರ್ಣವಾಗಿ ಇರುತ್ತಾನೆ. ಇದು ಗೋಳಾತ್ಮಕ ಚಿಂತನೆ. ನಾವು ರೇಖಾತ್ಮಕ ಚಿಂತನೆಯಲ್ಲಿ ತರಬೇತಿ ಪಡೆದಿದ್ದೇವೆ. ಏನಾದರೊಂದು ಹುಟ್ಟಿದರೆ ಅದು ಸಾಯಲೇಬೇಕು - ಇದು ರೇಖಾತ್ಮಕ ಚಿಂತನೆ. ಗೋಳಾತ್ಮಕವಾಗಿ ಚಿಂತಿಸಿ. ವೇದಾಂತವು ನಿಮಗೆ ಗೋಳಾತ್ಮಕ ಚಿಂತನೆಯನ್ನು ನೀಡುತ್ತದೆ. ಪ್ರಾಚೀನ ಜನರು ಗೋಳಾತ್ಮಕ ಚಿಂತನೆಯನ್ನು ಅರಿತಿದ್ದರು ಮತ್ತು ಅದಕ್ಕೇ ಅವರು ’ಬಹುಶಃ’ ಎಂಬ ಪದವನ್ನು ಬಳಸುತ್ತಿದ್ದರು; ಬಹುಶಃ ಇದು ಮತ್ತು ಬಹುಶಃ ಅದು. ಜೈನ ಧರ್ಮ ಮತ್ತು ಜೈನ ತತ್ವಜ್ಞಾನದಲ್ಲಿ ಕೂಡಾ ’ಬಹುಶಃ’ ಎಂಬುದನ್ನು ಬಳಸುತ್ತಾರೆ. ಇದು ತಿಳಿಯಲು ಒಂದು ತುಂಬಾ ಆಸಕ್ತಿಕರ ವಿಷಯ. ಗೋಳಾತ್ಮಕ ಚಿಂತನೆಯೊಂದಿಗೆ ಬುದ್ಧಿಯು ಪ್ರಚೋದಿಸಲ್ಪಡುತ್ತದೆ ಮತ್ತು ಅದು ಸೀಮಿತವಾದುದರ ಆಚೆಗೆ ಹೋಗಿ ಸತ್ಯವನ್ನು ಅರಿಯಲು ಶಕ್ತಿಯನ್ನು ಪಡೆಯುತ್ತದೆ.
ಆದುದರಿಂದ ಸೂರ್ಯನು ಇಲ್ಲಿ ಸಂಪೂರ್ಣವಾಗಿದ್ದಾನೆ ಮತ್ತು ಅಲ್ಲಿಯೂ ಸಂಪೂರ್ಣವಾಗಿದ್ದಾನೆ ಹಾಗೂ ನೀವು ಕೇವಲ ಒಂದು ಕಂಪನ. ಶರೀರವಾಗಿ ನೀವು ಎಲ್ಲಾ ಕಡೆಗಳಲ್ಲೂ ಇರಲಾರಿರಿ, ಆದರೆ ಪ್ರಜ್ಞೆಯಾಗಿ ನೀವು ಹಲವು ಜಾಗಗಳಲ್ಲಿ ಇರಬಲ್ಲಿರಿ. ನೀವೊಂದು ಹೂವನ್ನು ಸ್ಪರ್ಶಿಸಿದರೆ, ನಿಮ್ಮ ಕಂಪನಗಳು ಆ ಹೂವಿಗೆ ಹೋಗುತ್ತವೆ. ನೀವು ಬಯೋಮೆಟ್ರಿಕ್ ಬೀಗಗಳ ಬಗ್ಗೆ ಕೇಳಿದ್ದೀರಾ? ಅವುಗಳು, ನೀವು ಅವುಗಳನ್ನು ಮುಟ್ಟಿದಾಗ ಮಾತ್ರ ತೆರೆಯುವ ಬೀಗಗಳು. ಈ ಬೀಗಗಳ ಬಗ್ಗೆ ನೀವು ೨೦ ರಿಂದ ೨೫ ವರ್ಷಗಳ ಮೊದಲು ಮಾತನಾಡಿದ್ದರೆ, ಜನರು ನಿಮ್ಮನ್ನು ನೋಡಿ ನಗುತ್ತಿದ್ದರು ಮತ್ತು ನಿಮಗೆ ತಲೆ ಸರಿಯಿಲ್ಲವೆಂದು ಅಂದುಕೊಳ್ಳುತ್ತಿದ್ದರು. ಎಲ್ಲವೂ ಸಾಧ್ಯವಿದೆ.
ಆದುದರಿಂದ ಎಲ್ಲವೂ ಕೇವಲ ಒಂದು ತರಂಗ ಕ್ರಿಯೆ. ಇಡಿಯ ವಿಶ್ವವು ಒಂದು ತರಂಗ; ಪ್ರಜ್ಞೆಯ ಒಂದು ಕ್ಷೇತ್ರ.
ಪ್ರಶ್ನೆ: ಔಷಧೋಪಚಾರವನ್ನು ನಿರಾಕರಿಸುವುದನ್ನು ಆತ್ಮಹತ್ಯೆಯೆಂದು ಪರಿಗಣಿಸಲಾಗುತ್ತದೆಯೇ?
ಶ್ರೀ ಶ್ರೀ ರವಿಶಂಕರ್:
ಇಲ್ಲ! ಯಾರಾದರೂ ಔಷಧೋಪಚಾರವನ್ನು ನಿರಾಕರಿಸಿ, ಶರೀರವು ಅದರ ನೈಸರ್ಗಿಕ ನಿಯಮವನ್ನು ಅನುಸರಿಸಲಿ ಎಂದು ಬಯಸಿದರೆ ಅದು ಆತ್ಮಹತ್ಯೆಯಲ್ಲ. ಅದು ಪರವಾಗಿಲ್ಲ. ಆದರೆ ಯಾರಾದರೂ ಕ್ಲೇಶದಿಂದ ತಮ್ಮನ್ನು ತಾವೇ ಕುತ್ತಿಗೆ ಹಿಸುಕಲು ಪ್ರಯತ್ನ ಪಟ್ಟು ತಮ್ಮ ಜೀವನವನ್ನು ಕೊನೆಗೊಳಿಸಿದರೆ, ನನ್ನ ದೃಷ್ಟಿಯಿಂದ ಆಗ ಅದು ಆತ್ಮಹತ್ಯೆ. ಅದನ್ನು ನಾನು ಆತ್ಮಹತ್ಯೆಯೆಂದು ಕರೆಯುತ್ತೇನೆ. ಕೆಲವೊಮ್ಮೆ ಕೋಮದಲ್ಲಿರುವವರಿಗೆ ಬಲವಂತವಾಗಿ ಆಹಾರ ತಿನ್ನಿಸಲಾಗುತ್ತದೆ ಅಥವಾ ದೀರ್ಘಕಾಲದ ವರೆಗೆ ಅವರನ್ನು ಒಂದು ಯಂತ್ರದಲ್ಲಿರಿಸಲಾಗುತ್ತದೆ. ಅಂಥಹವರಿಗೆ ನಾನು ಹೇಳುವುದೇನೆಂದರೆ, ಅವರನ್ನು ಸಹಜವಾಗಿ ಹೋಗಲು ಬಿಡಿ, ಅವರಿಗೆ ಬಲವಂತವಾಗಿ ಉಣ್ಣಿಸಬೇಡಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಆದರೆ ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಒಬ್ಬರು ಬದುಕುಳಿಯಲಾರರು ಮತ್ತು ಮೊದಲಿನ ಸಹಜ ಸ್ಥಿತಿಗೆ ಬರಲಾರರು ಎಂದು ನಿಮಗೆ ತಿಳಿದಿರುವಾಗ ಅವರನ್ನು ಒಂದು ತರಕಾರಿಯಂತೆ ಜೀವಂತವಾಗಿರಿಸುವುದರಲ್ಲಿ ಅರ್ಥವಿಲ್ಲ. ನಾನು ಹೇಳುವುದೇನೆಂದರೆ, ಎಲ್ಲಾ ಕೊಳವೆಗಳನ್ನು ತೆಗೆದುಬಿಡಿ ಮತ್ತು ಪ್ರಕೃತಿಗೆ ಅದರ ಕಾರ್ಯವನ್ನು ಮುಂದುವರಿಸಲು ಬಿಡಿ.