ಸೋಮವಾರ, ಏಪ್ರಿಲ್ 30, 2012

ಮಾನವರು ಬುದ್ಧಿವಂತಿಕೆಯಲ್ಲಿ ಅತಿ ಹೆಚ್ಚಿನ ಮುನ್ನಡೆ ಹೊ೦ದಿರುತ್ತಾರೆ

ನಾರ್ವೆ

ನಿಮಗೆ ಗೊತ್ತಾ, ನಾವು ಪದಾರ್ಥ ಮತ್ತು ಚೈತನ್ಯ ಎರಡರಿಂದಲೂ ಮಾಡಲ್ಪಟ್ಟಿದ್ದೇವೆ. ನಮ್ಮ ಶರೀರವು ಕಾರ್ಬೋಹೈಡ್ರೇಟ್, ಖನಿಜಗಳು, ಪ್ರೊಟೀನ್ ಮುಂತಾದವುಗಳಿಂದ ಮಾಡಲ್ಪಟ್ಟಿದೆ ಮತ್ತು ಆತ್ಮವು ಶುದ್ಧ ಚೈತನ್ಯದಿಂದ ಮಾಡಲ್ಪಟ್ಟಿದೆ; ಪ್ರೀತಿ, ದಯೆ, ಕಾಂತೀಯತೆ - ಇವುಗಳೆಲ್ಲಾ ಚೈತನ್ಯದ ಸ್ವಭಾವಗಳು. ಪ್ರಾಚೀನ ಕಾಲದಲ್ಲಿ ಅದನ್ನು ಎರಡು ಶಬ್ದಗಳನ್ನುಪಯೋಗಿಸಿ ಕರೆದರು; ಪ್ರಕೃತಿ ಮತ್ತು ಪುರುಷ (ಅಂದರೆ ಶಕ್ತಿ); ಎರಡು ವಿಷಯಗಳು, ಪ್ರಜ್ಞೆ ಮತ್ತು ಪದಾರ್ಥ. ಆದರೆ ನಂತರ ಒಂದು ಹೆಜ್ಜೆ ಮುಂದೆ ಹೋಗಿ ಅವರಂದರು, "ಎರಡಿಲ್ಲ, ಇದೆಲ್ಲಾ ಒಂದೇ". ಚೈತನ್ಯ ಮತ್ತು ಪದಾರ್ಥಗಳು ಎರಡು ಬೇರೆ ಬೇರೆಯಾದವುಗಳಲ್ಲ, ಆದರೆ ಪ್ರಜ್ಞೆಯು ನಾಲ್ಕು ರೀತಿಗಳಲ್ಲಿ ಕೆಲಸ ಮಾಡುತ್ತದೆ; ಒಂದು ಪ್ರಜ್ಞೆಗೆ ನಾಲ್ಕು ಕೆಲಸಗಳಿವೆ: ಒಬ್ಬ ವ್ಯಕ್ತಿಯಂತೆ, ಒಬ್ಬ ವ್ಯಕ್ತಿಯು ಕಛೇರಿಗೆ ಹೋಗುವಾಗ ಅವನು ಅಧಿಕಾರಿಯಾಗಿರುತ್ತಾನೆ, ಅದೇ ವ್ಯಕ್ತಿಯು ಮಾರ್ಕೆಟಿಗೆ ಹೋಗುವಾಗ ಅವನು ಕೊಂಡುಕೊಳ್ಳುವವನು ಅಥವಾ ಮಾರುವವನಾಗಿರುತ್ತಾನೆ ಮತ್ತು ಅದೇ ವ್ಯಕ್ತಿಯು ಒಂದು ಕ್ಲಾಸಿನಲ್ಲಿ ಕುಳಿತಿರುವಾಗ ವಿದ್ಯಾರ್ಥಿಯಾಗಿರುತ್ತಾನೆ. ಸರಿಯಾ? ಮತ್ತು ಮನೆಯಲ್ಲಿ ಅವನೊಬ್ಬ ತಂದೆ ಅಥವಾ ಒಬ್ಬ ಗಂಡ ಅಥವಾ ಒಬ್ಬ ಮಗ, ಏನಾದರೂ ಆಗಿರುತ್ತಾನೆ. ಅವನು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾನೆ. ಅದೇ ರೀತಿಯಲ್ಲಿ, ಈ ಒಂದು ಪ್ರಜ್ಞೆ, ಅದು ನಾಲ್ಕು ಪ್ರಧಾನ ಪಾತ್ರಗಳನ್ನು ನಿರ್ವಹಿಸುತ್ತದೆ. ಅವುಗಳಲ್ಲಿ ಒಂದು ಪಾತ್ರವೆಂದರೆ ಮನಸ್ಸು. ನೀವೆಲ್ಲರೂ ಇಲ್ಲಿದ್ದೀರಾ? ಕೇಳುತ್ತಿದ್ದೀರಾ? ನೀವಿಲ್ಲಿದ್ದು ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದರೆ, ನಿಮಗೆ ಕೇಳಲು ಸಾಧ್ಯವಿಲ್ಲ. ನಿಮ್ಮ ಕಿವಿಗಳು ತೆರೆದಿರುತ್ತವೆ, ಆದರೆ ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದರೆ, ನಿಮಗೆ ಕೇಳಲು ಸಾಧ್ಯವಿಲ್ಲ. ನೀವು ನನ್ನ ಕಡೆಗೆ ನೋಡುತ್ತಿದ್ದೀರಾ? ನೀವಿಲ್ಲಿದ್ದುಕೊಂಡು, ನಿಮ್ಮ ಮನಸ್ಸು ಬೇರೆ ಎಲ್ಲಾದರೂ ಇದ್ದಾಗ, ನಿಮ್ಮ ಕಣ್ಣುಗಳು ನನ್ನನ್ನು ನೋಡುತ್ತಿದ್ದರೂ ಸಹಾ, ನೀವು ನನ್ನನ್ನು ನೋಡುತ್ತಿಲ್ಲ. ಆದುದರಿಂದ ಮನಸ್ಸೆಂದರೆ, ಜ್ಞಾನೇಂದ್ರಿಯಗಳು ಯಾವುದರ ಮೂಲಕ ಗ್ರಹಿಸುತ್ತವೆಯೋ ಮತ್ತು ಅನುಭವಿಸುತ್ತವೆಯೋ, ಪ್ರಜ್ಞೆಯ ಆ ಒಂದು ರೂಪ. ಇದು ಎಲ್ಲಾ ಜೀವಿಗಳಲ್ಲೂ ಇದೆ. ಒಂದು ಜಿರಳೆಯಲ್ಲಿ ಕೂಡಾ, ಮನಸ್ಸು ಅದರ ಮೀಸೆಯಲ್ಲಿಯೂ ಇರುತ್ತದೆ. ಅವುಗಳಿಗೆ ಉದ್ದನೆಯ ಮೀಸೆಗಳಿರುತ್ತವೆ. ಅವುಗಳ ಮೂಲಕ ಜಿರಳೆಗಳು ಗ್ರಹಿಸುತ್ತವೆ. ಅವುಗಳು ಮೀಸೆಗಳ ಮೂಲಕ ಅನುಭವವನ್ನು ಪಡೆಯುತ್ತವೆ. ನಾನು ಮೊದಲೇ ಹೇಳಿದಂತೆ, ಮನಸ್ಸು ಶರೀರದ ಒಳಗಿಲ್ಲ, ಶರೀರವು ಮನಸ್ಸಿನ ಒಳಗಿದೆ. ಮೇಣದ ಬತ್ತಿಯಲ್ಲಿ ಜ್ಯೋತಿಯು ಬತ್ತಿಯ ಸುತ್ತಲಿರುವಂತೆ, ಅಲ್ಲವೇ? ಶರೀರವು ಮೇಣದ ಬತ್ತಿಯ ಬತ್ತಿಯಂತೆ, ಮನಸ್ಸು ಜ್ಯೋತಿಯಂತೆ. ಕೆಲವು ಸಾರಿ ಕರ್ಲಿಯನ್ ಮತ್ತು ಇತರ ಛಾಯಾಗ್ರಹಣಗಳ ಮೂಲಕ ನೀವು ಪ್ರಭೆಯನ್ನು ಕೂಡಾ ನೋಡಬಹುದು. ಆದುದರಿಂದ ಮನಸ್ಸು ಶರೀರದ ಸುತ್ತಲೂ ಹಾಗೂ ಶರೀರದ ಒಳಗೆ ಇದೆ. ಹಾಗಿದ್ದರೂ ಮನಸ್ಸೆಂಬುದು ಗ್ರಹಿಸುವುದು; ಕಿವಿಗಳ ಮೂಲಕ, ಕಣ್ಣುಗಳ ಮೂಲಕ, ಸ್ಪರ್ಶದ ಮೂಲಕ, ವಾಸನೆಯ ಮೂಲಕ; ಆಗ ಅದನ್ನು ನಾವು ಮನಸ್ಸೆಂದು ಕರೆಯುತ್ತೇವೆ. ನಂತರ ಅದೇ ಪ್ರಜ್ಞೆಯು, ಇದನ್ನು ಗ್ರಹಿಸಿದ ನಂತರ, ಅದಕ್ಕೆ ಒಂದು ಲೇಬಲ್ ಕೊಡುತ್ತದೆ, ಇದು ಒಳ್ಳೆಯದು, ಇದು ಒಳ್ಳೆಯದಲ್ಲ, ಇದು ಸುಂದರವಾಗಿದೆ, ಇದು ಸುಂದರವಾಗಿಲ್ಲ, ಇದು ಸರಿ, ಇದು ತಪ್ಪು. ಇದು ಬುದ್ಧಿ - ಪ್ರಜ್ಞೆಯ ಒಂದು ತುಂಬಾ ಪ್ರಧಾನವಾದ ಕೆಲಸ. ಒಂದು ಗ್ರಹಿಸುವಿಕೆ ಮತ್ತು ಇನ್ನೊಂದು ಅರ್ಥ ಮಾಡಿಕೊಳ್ಳುವಿಕೆ, ಅಂದರೆ ಬುದ್ಧಿ: ತೂಗುವುದು, ವ್ಯತ್ಯಾಸ ತಿಳಿಯುವುದು, ಅರ್ಥ ಮಾಡಿಕೊಳ್ಳುವುದು. ನೀವೀಗ ಹೌದು ಎಂದು ಹೇಳುತ್ತಿದ್ದೀರಾ? ಆದು ಬುದ್ಧಿ. ನೀವು ಇಲ್ಲ, ನಾನು ಒಪ್ಪುವುದಿಲ್ಲ ಎಂದು ಹೇಳುತ್ತಿದ್ದೀರಾ? ಪರವಾಗಿಲ್ಲ. ನೀವು ಹೇಳಬಹುದು, ನಾನು ಒಪ್ಪುವುದಿಲ್ಲ, ಆದರೆ ನೀವು ಹಾಗೆ ಹೇಳುತ್ತಿದ್ದೀರೆಂಬುದು ನಿಮಗೆ ತಿಳಿದಿದ್ದರೆ, ಅದು ಬುದ್ಧಿ ಮತ್ತು ಇದು ಎರಡನೆಯ ತುಂಬಾ ಪ್ರಧಾನವಾದ ಕೆಲಸ. ಮಾನವರಿಗೆ ಅತೀ ಹೆಚ್ಚು ಮುಂದುವರಿದ ಬುದ್ಧಿಯಿದೆ. ಇದೊಂದು ಕೊಡುಗೆ. ಪ್ರಾಚೀನ ಕಾಲದ ಅತೀ ಪವಿತ್ರ ಮಂತ್ರಗಳಲ್ಲೊಂದಾದ ಗಾಯತ್ರಿ ಮಂತ್ರವು ಹೇಳುತ್ತದೆ, ಈ ಬುದ್ಧಿಯು ಬುದ್ಧಿಗಿಂತ ಆಚೆಗಿರುವ ಏನೋ ಒಂದರಿಂದ, ದೈವಿಕತೆಯಿಂದ ಸ್ಫೂರ್ತಿಗೊಳ್ಳಲಿ. ಆದು ಪ್ರಾರ್ಥನೆ, ನನ್ನ ಬುದ್ಧಿಯು ದೈವಿಕತೆಯಿಂದ ಸ್ಫೂರ್ತಿಗೊಳ್ಳಲಿ. ಆದರರ್ಥ, ನಾನು ಮಾಡುವುದೆಲ್ಲವೂ ಸಂಪೂರ್ಣವಾಗಲು ಶುದ್ಧವಾದ ಯೋಚನೆಗಳು ಬರಲಿ, ನನ್ನ ಬುದ್ಧಿಯ ಮೂಲಕ ಸರಿಯಾದ ನಿರ್ಣಯಗಳು ಬರಲಿ, ನನ್ನಲ್ಲಿ ಅಂತಃಸ್ಫುರಣವು ಅಭಿವೃದ್ಧಿಯಾಗಲಿ. ಒಂದು ತಡೆಯಾಗುವುದು ಬುದ್ಧಿಯೇ; ಸಂಶಯವನ್ನು ಸೃಷ್ಟಿಸುವುದು ಬುದ್ಧಿಯೇ; ಅದುವೇ ನಿಮಗೆ ತಪ್ಪು ಕಲ್ಪನೆಗಳನ್ನು ಕೊಡುವುದು ಮತ್ತು ಅಂತಃಸ್ಫುರಣವನ್ನು ಆವರಿಸುವುದು. ನಿಮಗೆ ಒಂದು ಒಳ್ಳೆಯ ಅಂತಃಸ್ಫುರಣವಿದೆಯೆಂದಿಟ್ಟುಕೊಳ್ಳಿ ಮತ್ತು ನೀವು ಸ್ವೀಡನ್ನಿನಲ್ಲಿ ಒಬ್ಬರನ್ನು ಭೇಟಿಯಾಗಬೇಕೆಂದು ಹೇಳುತ್ತೀರಿ. ನೀವು ಹೇಳುತ್ತೀರಿ, ಸರಿ, ನಾನು ಆ ವ್ಯಕ್ತಿಯನ್ನು ಭೇಟಿಯಾಗುತ್ತೇನೆ. ನಿಮಗೊಂದು ಒಳ್ಳೆಯ ಉದ್ದೇಶವಿರುತ್ತದೆ ಆದರೆ ಬುದ್ಧಿಯು ಬಂದು ಹೇಳುತ್ತದೆ, ಇಲ್ಲ, ಅದು ಸಾಧ್ಯವಾಗಲಿಕ್ಕಿಲ್ಲ. ನಮಗೆ ಅದನ್ನು ಮಾಡಲು ಸಾಧ್ಯವಾಗದು. ಆದುದರಿಂದ ನಿಮ್ಮ ಬುದ್ಧಿಯು ಅಂತಃಸ್ಫುರಣವನ್ನು ಮುಚ್ಚುತ್ತದೆ ಮತ್ತು ಅದರ ಮನಸ್ಸನ್ನು ಹಾಕುತ್ತದೆ ಮತ್ತು ಆಗಲೇ ನಾವು ತಪ್ಪುಗಳನ್ನು ಮಾಡುವುದು. ನೀವಂದುಕೊಳ್ಳುತ್ತೀರಿ ಈ ವ್ಯಕ್ತಿಯು ಒಳ್ಳೆಯವನಲ್ಲ, ಅಥವಾ ಆ ವ್ಯಕ್ತಿಯು ಒಳ್ಳೆಯವನೆಂದು. ಬುದ್ಧಿಯು ಅಂತಃಸ್ಫುರಣದಿಂದ ಅಥವಾ ಆಂತರಿಕ ಪ್ರಜ್ಞೆಯಿಂದ ಬಿಡಿಸಿಕೊಂಡರೆ, ಈ ಎಲ್ಲಾ ನಿರ್ಣಯಗಳು ವಾಸ್ತವವಾಗಿರಬೇಕೆಂದೇನೂ ಇಲ್ಲ. ಆದನ್ನು ಚಿತ್ತ ಎಂದು ಕರೆಯುತ್ತಾರೆ, ಪ್ರಜ್ಞೆ. ಮನಸ್ಸು, ಬುದ್ಧಿ, ಮತ್ತು ನಂತರ ಬರುವುದು ನೆನಪು. ನಮ್ಮ ಮನಸ್ಸು ಹೆಚ್ಚಾಗಿ ನೆನಪುಗಳಲ್ಲಿ ಸಿಕ್ಕಿಹಾಕಿಕೊಂಡಿರುತ್ತದೆ. ನೀವು ಯಾವುದಾದರೂ ಒಳ್ಳೆಯದನ್ನು ನೋಡಿದರೆ, ನಿಮಗೆ ಹಿಂದೆ ನೋಡಿದ ಏನೋ ಒಂದು ನೆನಪಾಗುತ್ತದೆ. ಯಾವುದಾದರೂ ಕೆಟ್ಟದನ್ನು ನೀವು ನೋಡಿದರೆ, ನಿಮಗೆ ಹಿಂದಿನ ಏನೋ ಒಂದು ಕೆಟ್ಟದು ನೆನಪಿಗೆ ಬರುತ್ತದೆ. ಆದುದರಿಂದ ಮನಸ್ಸು ನೆನಪಿನೊಳಗೆ ಕೂಡಿ ಹಾಕಲ್ಪಡುತ್ತದೆ, ಅಥವಾ ನಿಮ್ಮ ನೆನಪು ಅಧಿಕಾರ ನಡೆಸುತ್ತಿದ್ದರೆ, ಅದುವೇ ಆಗುವುದು. ನೆನಪು ಪ್ರಧಾನವಾದುದು. ಇದು ಮೂರನೆಯ ಕೆಲಸ. ನಂತರ ಇರುವುದು ಅಹಂಕಾರ - ನಾನು, ಅದು ನಾಲ್ಕನೆಯ ಕೆಲಸ. ಇವುಗಳು ಒಂದು ಪ್ರಜ್ಞೆಯ ನಾಲ್ಕು ವಿಭಿನ್ನ ಕೆಲಸಗಳು. ಆದರೂ ಪ್ರಜ್ಞೆಯು ಆ ಎಲ್ಲಾ ನಾಲ್ಕಕ್ಕಿಂತಲೂ ಆಚಿನದು. ಆದುದರಿಂದಲೇ ಅದು ಮಹತ್ ಎಂದು ಕರೆಯಲ್ಪಡುವುದು; ಅದರರ್ಥ ಮಹತ್ತಾದುದು ಎಂದು. ಆದುದರಿಂದ ನೀವು ಅಹಂಕಾರವನ್ನು ದಾಟಿ ಹೋಗಲು ಸಾಧ್ಯವಾದರೆ, ಆಗ ನಿಮ್ಮಲ್ಲಿ ಬದಲಾಗದೇ ಇರುವ ಆ ಏನೋ ಒಂದು, ಯಾವುದು ಎಲ್ಲಾ ಕಡೆಯೂ ಇದೆಯೋ ಆದರೆ ಎಲ್ಲೂ ಇಲ್ಲವೋ; ನೀವು ಅದನ್ನು ಅನುಭವಿಸುತ್ತೀರಿ ಮತ್ತು ನೀವು ಮಹತ್ತಾಗುತ್ತೀರಿ. ನೀವು ಮಹಾತ್ಮರಾಗುತ್ತೀರಿ. ನೀವು ಮಹಾತ್ಮಾ ಗಾಂಧಿಯ ಬಗ್ಗೆ ಕೇಳಿದ್ದೀರಾ? ಮಹಾತ್ಮಾ ಎಂಬುದು ಗಾಂಧಿಗೆ ಜನರು ನೀಡಿದ ಒಂದು ಬಿರುದು. ಪ್ರತಿಯೊಬ್ಬ ಸಂತನೂ ಮಹಾತ್ಮಾ ಎಂದು ಕರೆಯಲ್ಪಡುತ್ತಾನೆ, ಅಂದರೆ ಅವನು ಅಹಂಕಾರವನ್ನು ದಾಟಿ ಹೋಗಿದ್ದಾನೆ. ಅವನು ಮನಸ್ಸು, ಬುದ್ಧಿ, ನೆನಪು, ಅಹಂಕಾರದಿಂದ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ, ಮಹತ್; ಅಂದರೆ, ಅವನು ಎಲ್ಲರೊಂದಿಗೂ ನಿಸ್ಸಂಕೋಚದಿಂದುರುತ್ತಾನೆ. ಅದು ಆತ್ಮಸಾಕ್ಷಾತ್ಕರ- ನೀವು ಎಲ್ಲರೊಂದಿಗೂ ಅನಾಯಾಸವಾಗಿ ಬೆರೆಯುವಿರಿ; ನಿಮಗೆ ಬೇರೆಯವರು ಎಂದಿಲ್ಲ. ನೀವು ಪುನಃ ಮಕ್ಕಳಂತಾಗುತ್ತೀರಿ ಮತ್ತು ಆ ಕ್ಷಣದಲ್ಲಿ ಜೀವಿಸುತ್ತೀರಿ. ಯಾವುದೂ ನಿಮಗೆ ನೋವುಂಟುಮಾಡುವುದಿಲ್ಲ; ಎಲ್ಲವೂ ನಿಮ್ಮ ಭಾಗವಾಗಿರುತ್ತದೆ, ಉದಾರತೆ ಮತ್ತು ಸಂಪೂರ್ಣ ಶಾಂತಿ. ನೀವು ಶರೀರ ನನ್ನದೆಂದು ಮಾತ್ರ ಹೇಳುವುದಿಲ್ಲ ಆದರೆ ಆ "ನಾನು" ಎಲ್ಲಾ ಕಡೆಯೂ ಇರುತ್ತದೆ. ಇದು ಕೇವಲ ಒಂದು ಶಬ್ದ ಪ್ರಯೋಗ. ನೋಡಿ, ಟಿವಿಯಲ್ಲಿ ನೀವು ಒಂದು ಚ್ಯಾನೆಲ್ಲನ್ನು ನೋಡುತ್ತೀರಿ ಅಥವಾ ನೀವು ಬಿಬಿಸಿ ಯನ್ನು ನೋಡುತ್ತಿರುತ್ತೀರಿ. ನೀವು ಬಿಬಿಸಿ ಯನ್ನು ಆ ಚಿಕ್ಕ ಪೆಟ್ಟಿಗೆಯಲ್ಲಿ ನೋಡುತ್ತಿದ್ದರೂ ಸಹಾ, ಬಿಬಿಸಿಯು ಆ ಪೆಟ್ಟಿಗೆಯಲ್ಲಿ ಮಾತ್ರವೇ ಇರುವುದೇ? ಈಲ್ಲ, ಬಿಬಿಸಿ ಚ್ಯಾನೆಲ್, ಆ ಕಂಪನ, ಆ ತರಂಗವು ಕೋಣೆಯಲ್ಲೆಲ್ಲ್ಲಾ ಇದೆ, ಅದು ಎಲ್ಲೆಡೆಯೂ ಇದೆ. ನೀವು ಟಿವಿಯನ್ನು ನಿಲ್ಲಿಸಿದರೂ, ಆಗಲೂ ಬಿಬಿಸಿ ತರಂಗಗಳು ಎಲ್ಲೆಡೆಯೂ ಇರುತ್ತವೆ. ಆದರೆ ಟಿವಿಯು ಅದನ್ನು ಅಭಿವ್ಯಕ್ತಗೊಳಿಸುತ್ತದೆ ಮತ್ತು ಅದನ್ನು ತುಂಬಾ ಚೆನ್ನಾಗಿ ಪ್ರದರ್ಶಿಸುತ್ತದೆ. ಅದೇ ರೀತಿಯಲ್ಲಿ ನಮ್ಮ ಶರೀರಗಳು ಕೇವಲ ಟಿವಿ ಪೆಟ್ಟಿಗೆಗಳು. ನೀವು ನನ್ನೊಂದಿಗಿದ್ದೀರಾ? ನಿಮ್ಮ ಶರೀರವು ಒಂದು ಟಿವಿ ಸೆಟ್. ನಿಮ್ಮ ಪ್ರಜ್ಞೆಯು ಆ ತರಂಗ. ಆದುದರಿಂದ, ಇದು ಹೇಗೆಂದರೆ, ನೀನು ಬಿಬಿಸಿ, ಅವಳು ಸಿ.ಯನ್.ಯನ್, ಮತ್ತು ಆ ವ್ಯಕ್ತಿಯು ಎಫ್.ಒ.ಎಕ್ಸ್ ಮತ್ತು ಇನ್ನೊಬ್ಬರು ಮನರಂಜನಾ ಚ್ಯಾನೆಲ್. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಿಮ್ಮದೇ ಆದ ಫ್ರೀಕ್ವೆನ್ಸಿಯಿದೆ, ಆದರೆ ಅದರರ್ಥ ನಾವು ಇಲ್ಲಿಯೇ ಸಿಕ್ಕಿಹಾಕಿಕೊಂಡಿದ್ದೇವೆಂದಲ್ಲ. ಇದು ಕೇವಲ ಒಂದು ಪಡೆಯುವ ಸೆಟ್ ಅಥವಾ ಕಳುಹಿಸುವ ಸೆಟ್. ಆದರೆ ತರಂಗಗಳು ಎಲ್ಲೆಡೆಯಿವೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಆದುದರಿಂದ ನಮ್ಮ ಪ್ರಜ್ಞೆಯು ಎಲ್ಲೆಡೆಯಿದೆ. ನಾನು ನಿನ್ನೆ ಹೇಳಿದಂತೆ, ಶುದ್ಧ ವಿಜ್ಞಾನ ಮತ್ತು ಅನ್ವಯಿಸಲಾದ ವಿಜ್ಞಾನ ಎಂದಿವೆ. ನಮ್ಮಲ್ಲಿ ಎರಡೂ ಇರಬೇಕು. ಅವುಗಳು ಪರಸ್ಪರ ಪೂರಕವಾಗಿವೆ. ಶುದ್ಧ ವಿಜ್ಞಾನವೆಂದರೆ, ಈ ಒಂದು ಪ್ರಜ್ಞೆಯನ್ನು ತಿಳಿಯುವುದು - "ನಾನು ಅದು" ಮತ್ತು ಆರಾಮವಾಗಿರುವುದು, ವಿಶ್ರಾಂತಿ ತೆಗೆದುಕೊಳ್ಳುವುದು - ಅದು ಧ್ಯಾನ ಮತ್ತು ಅದು ಯೋಗ. ನಿಮ್ಮೊಂದಿಗೇ ಪುನಃ ಒಂದುಗೂಡುವುದು ಯೋಗ. ಅದು, ನೀವಲ್ಲದ ಏನೋ ಒಂದರ ಜೊತೆ ಒಂದುಗೂಡುವುದಲ್ಲ. ಅದು ಕೇವಲ ನಿಮ್ಮ ಕಡೆಗೆ ಬಗ್ಗುವುದು - ಪುನಃ ಒಂದುಗೂಡುವುದು. ಆ ವೃತ್ತವನ್ನು ಪೂರ್ಣಗೊಳಿಸುವುದೇ ಯೋಗ. ಮಕ್ಕಳಾಗಿ ನೀವೆಲ್ಲರೂ ಯೋಗಿಗಳಾಗಿದ್ದಿರಿ. ಪ್ರತಿಯೊಂದು ಮಗುವೂ ಒಂದು ಯೋಗಿ. ನಾವು ಎಲ್ಲಾ ಯೋಗಾಸನಗಳನ್ನು ಮಾಡಿದ್ದೆವು, ನಾವು ವರ್ತಮಾನದ ಕ್ಷಣದಲ್ಲಿ ಜೀವಿಸಿದ್ದೆವು ಮತ್ತು ಒಂದು ಮಗುವಾಗಿ ನಮ್ಮ ಮನಸ್ಸು ತಾಜಾ ಹಾಗೂ ಜೀವಂತಿಕೆಯಿಂದ ಕೂಡಿತ್ತು. ನಾವು ತುಂಬಾ ಜೋಡಲ್ಪಟ್ಟ ಭಾವನೆಯನ್ನು ಹೊಂದಿದ್ದೆವು ಮತ್ತು ಹಾಯಾಗಿದ್ದೆವು, ತುಂಬಾ ಪ್ರೀತಿಯಿಂದ ತುಂಬಿದ್ದೆವು. ಎಲ್ಲೋ ಸಾಲಿನಲ್ಲಿ ಒಂದು ಕಡೆ ನಾವು ಹೊರಗೆ, ಹೊರಗೆ ಮತ್ತು ಹೊರಗೆ ಹೋಗಲು ಶುರು ಮಾಡಿದೆವು. ಉಪನಿಷತ್ತುಗಳಲ್ಲೊಂದರಲ್ಲಿ ಋಷಿಗಳೊಬ್ಬರು ಹೇಳುತ್ತಾರೆ, "ಇಂದ್ರಿಯ ಜ್ಞಾನಗಳು ಹೊರಗೆ ಮಾತ್ರ ಹೋಗುವಂತೆ ಮಾಡಿ ದೇವರು ಒಂದು ದೊಡ್ಡ ಪ್ರಮಾದ ಮಾಡಿದ್ದಾರೆ. ನಮ್ಮ ಇಂದ್ರಿಯ ಜ್ಞಾನಗಳು ಹೊರಗಡೆ ಮಾತ್ರ ಹೋಗುತ್ತವೆ. ಆದರೆ, ಒಂದೊಂದು ಸಾರಿ ಕೆಲವು ಧೈರ್ಯವಂತ ಜನರು ಇಂದ್ರಿಯ ಜ್ಞಾನಗಳನ್ನು ಒಳಮುಖವಾಗಿ ತಿರುಗಿಸಿಕೊಂಡು ವಾಸ್ತವ ಸತ್ಯವನ್ನು ಕಂಡುಹಿಡಿಯುತ್ತಾರೆ", ಮತ್ತು ಅದು ಯೋಗವೆಂದು ಅವರು ಹೇಳುತ್ತಾರೆ. ಅದು ತುಂಬಾ ಸತ್ಯ! ನಮ್ಮ ಮನಸ್ಸು ಹೊರಗೆ ಹೋಗುವಂತೆ ಮಾಡಲಾಗಿದೆ. ಆದರೆ ಕೆಲವು ಸಾರಿ ನೀವು ಅದನ್ನು ಒಳಮುಖವಾಗಿ ತಿರುಗಿಸಬೇಕು. ಈಗ ಹೆಚ್ಚು ಹೆಚ್ಚು ಜನರು ಕಲಿಯುತ್ತಿದ್ದಾರೆ ಮತ್ತು ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಅಂತರ್ಮುಖಿಗಳಾಗಿ ಅಲ್ಲಿ ಶಾಂತಿಯನ್ನು ಪಡೆಯುವುದು ಹೇಗೆಂದೂ, ಅದು ಹೊರಗಡೆಯಿಂದ ಸಿಗುವಂತಹದ್ದಲ್ಲವೆಂದೂ ತಿಳಿದಿದ್ದಾರೆ. ಆದುದರಿಂದ ಪ್ರತಿಯೊಂದು ಮಗುವೂ ಒಂದು ಯೋಗಿಯಾಗಿದೆ ಮತ್ತು ನಾವು ಹುಟ್ಟು-ಯೋಗಿಗಳಾಗಿದ್ದೇವೆ. ಎಲ್ಲೋ ನಾವು ಆ ಮುಗ್ಧತೆಯನ್ನು ಕಳೆದುಕೊಂಡಿದ್ದೇವೆ. ಅದಕ್ಕೆ ಮರಳಿ ಹೋಗಲು, ಆ ಸರಳತೆಯನ್ನು, ನಾವಾಗಿರುವ ಆ ಮುಗ್ಧತೆಯನ್ನು ಪುನಃ ಪಡೆಯಲು ನಾವು ಈ ಎಲ್ಲಾ ವ್ಯಾಯಾಮಗಳನ್ನು, ಧ್ಯಾನವನ್ನು ಮಾಡುತ್ತೇವೆ. ಈಗ, ಅದನ್ನು ಸಾಧಿಸಲು ಹಲವಾರು ಮಾರ್ಗಗಳಿವೆ. ನಾನು ಅವುಗಳನ್ನು ವಿವರಿಸಲು ಹೋಗುವುದಿಲ್ಲ. ಒಬ್ಬ ಆರಂಭಿಗನ ಮೇಲೆ ಪರಿಣಾಮ ಬೀರುವುದೆಂದರೆ, ಖಂಡಿತವಾಗಿ, ಪರಿಸರ - ಒಂದು ಉತ್ತಮ ಶಾಂತ ವಾತಾವರಣದಲ್ಲಿರುವುದು ಒಳ್ಳೆಯದು ಮತ್ತು ಆಹಾರದ ಬಗ್ಗೆಯೂ ಗಮನ ಕೊಡುವುದು ಒಳ್ಳೆಯದು. ಆಹಾರವು ಕೂಡಾ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಆಯುರ್ವೇದವೆಂಬುದು, ಯಾವ ರೀತಿಯ ಜನರಿಗೆ ಯಾವ ರೀತಿಯ ಆಹಾರ ಸರಿ ಹೋಗುತ್ತದೆ ಎಂದು ಹೇಳುವ ಒಂದು ಉತ್ತಮ ವಿಜ್ಞಾನ. ನಿಮ್ಮ ವಾತ, ಪಿತ್ತ ಮತ್ತು ಕಫಗಳೇನು ಮತ್ತು ಯಾವ ರೀತಿಯ ಆಹಾರ ನಿಮಗೆ ಒಳ್ಳೆಯದು - ಇದರ ಬಗ್ಗೆ ಒಂದು ಸಂಪೂರ್ಣ ವಿಜ್ಞಾನವಿದೆ. ಜೈನ ಪದ್ಧತಿ ಕೂಡಾ ಆಹಾರದ ಬಗ್ಗೆ ಬಹಳ ಸಂಶೋಧನೆ ಮಾಡಿದೆ. ಆದರೆ ಅದು ಅಂತ್ಯವಿಲ್ಲದುದು. ನೀವು ಅದನ್ನು ವಿವರವಾಗಿ ತಿಳಿಯಲು ಹೋದರೆ, ನೀವು ನಿಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಆದುದರಿಂದ ನಾನು ಹೇಳುವುದೆಂದರೆ, ನಾವು ಇದನ್ನು ಅತಿಯಾಗಿ ಮಾಡಬಾರದು. ನಾವು ಸಮತೋಲನವುಳ್ಳವರಾಗಿರಬೇಕು. ಒಂದು ಕಡೆಯಲ್ಲಿ ತಾವೇನು ತಿನ್ನುತ್ತಿರುವರೆಂಬುದರ ಬಗ್ಗೆ ಕಾಳಜೆ ವಹಿಸದ ಜನರಿದ್ದಾರೆ ಮತ್ತು ಅವರು ಸುಮ್ಮನೇ ಎಲ್ಲವನ್ನೂ ಹೊಟ್ಟೆಗೆ ತುಂಬಿಸಿ ನರಳುತ್ತಾರೆ. ಇನ್ನೊಂದು ಕಡೆಯಲ್ಲಿ, ಎಲ್ಲಾ ಸಮಯದಲ್ಲೂ ಹೆಕ್ಕಿ, ಆಯ್ಕೆ ಮಾಡುವ ಜನರಿದ್ದಾರೆ, ಎಲ್ಲಾ ಸಮಯದಲ್ಲೂ ಹೆಕ್ಕುವುದು, "ಓ, ಇದು ಸಕ್ಕರೆ, ನಾನು ಇದನ್ನು ತಿನ್ನಲು ಸಾಧ್ಯವಿಲ್ಲ ಮತ್ತು ನಾನು ಅದನ್ನು ತಿನ್ನಲು ಸಾಧ್ಯವಿಲ್ಲ" ಮತ್ತು ಹಗಲು ರಾತ್ರಿ ಅವರು ತಮ್ಮ ಆಹಾರದ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಅದು ಕೂಡಾ ಒಳ್ಳೆಯದಲ್ಲ ಯಾಕೆಂದರೆ ನಿಮ್ಮ ಶರೀರಕ್ಕೆ ಅನಂತವಾದ ಬಗ್ಗುವ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವಿದೆ. ಆದುದರಿಂದ ನೀವು, ಕೆಲವು ಅಹಾರಗಳು ನಿಮಗೆ ಒಳ್ಳೆಯದಲ್ಲ ಎಂದು ಯೋಚಿಸಿದರೆ ಮತ್ತು ನೀವು ಅವುಗಳನ್ನು ತಿನ್ನದಿದ್ದರೆ, ಆಗ ನಿಮ್ಮ ಶರೀರವು ಅದೇ ರೀತಿ ಕೆಲಸ ಮಾಡುತ್ತದೆ. ಅದು ಅದರ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ ನೀವು ಎಲ್ಲಾ ಸಮಯದಲ್ಲೂ ತುಂಬಾ ಪೂರಕ (ಸಪ್ಲಿಮೆಂಟ್)ಗಳನ್ನು ಬಳಸುತ್ತಿದ್ದರೆ ಅದು ಕೂಡಾ ಒಳ್ಳೆಯದಲ್ಲ! ಪೂರಕಗಳು ಕೆಲವು ಸಲ ಬಳಸಲು ಒಳ್ಳೆಯದು. ನಿಮಗೆ ಗೊತ್ತಿದೆಯಾ, ಜನರು ನನಗಾಗಿ ಹಲವಾರು ಪೂರಕಗಳನ್ನು ತರುತ್ತಾರೆ. ನೀವು ನನ್ನ ಪೆಟ್ಟಿಗೆಯನ್ನು ನೋಡಿದರೆ, ಅಲ್ಲಿ ಹಲವಾರು ಪೂರಕಗಳಿರುತ್ತವೆ, ಆದರೆ ನಾನು ಪೂರಕಗಳನ್ನು ತೆಗೆದುಕೊಳ್ಳುವುದರಲ್ಲಿ ಹಿಂದೆ. ನಾನು ಅದನ್ನು ಪ್ರತಿದಿನವೂ ಉಪಯೋಗಿಸುವುದಿಲ್ಲ. ಕೆಲವೊಮ್ಮೆ ನಾನು ಈ ಪೂರಕಗಳನ್ನು ಮತ್ತು ಕೆಲವೊಮ್ಮೆ ಆ ಪೂರಕಗಳನ್ನು ತೆಗೆದುಕೊಳ್ಳುತ್ತೇನೆ. ಜನರನ್ನುತ್ತಾರೆ, ಕಿಣ್ವಗಳು ಒಳ್ಳೆಯದು, ಖನಿಜಗಳು ಒಳ್ಳೆಯದೆಂದು. ಹೌದು, ಅವುಗಳು ಒಳ್ಳೆಯದು ಆದರೆ ನನಗನಿಸುತ್ತದೆ, ನಾವು ಅತಿಯಾಗಿ ಪೂರಕಗಳನ್ನು ತೆಗೆದುಕೊಳ್ಳಬಾರದೆಂದು. ಪೂರಕಗಳು ಅಗತ್ಯವಾಗಿವೆ ಯಾಕೆಂದರೆ ಇವತ್ತು ಅಹಾರವನ್ನು ಬೆಳೆಯುವ ರೀತಿಯು ಬಹಳ ವ್ಯತ್ಯಸ್ತವಾಗಿದೆ. ಆಹಾರವನ್ನು ಬೆಳೆಯುವ ಮೂಲ ರೀತಿ ಇದಾಗಿರಲಿಲ್ಲ. ನಾನೆಲ್ಲೋ ಓದಿದ್ದೇನೆ, ಇವತ್ತಿನ ಬಾಳೆಹಣ್ಣುಗಳಲ್ಲಿ, ೧೯ನೆಯ ಶತಮಾನದ ಆರಂಭದಲ್ಲಿದ್ದ ಬಾಳೆಹಣ್ಣುಗಳಲ್ಲಿದ್ದುದರ ಹನ್ನೆರಡರಲ್ಲಿ ಒಂದು ಭಾಗದಷ್ಟು ಮಾತ್ರ ಪೋಷಕಾಂಶಗಳಿವೆಯೆಂದು. ಆದುದರಿಂದ, ಈ ಎಲ್ಲಾ ತರಕಾರಿ ಮತ್ತು ಹಣ್ಣುಗಳು ಹೆಚ್ಚು ಬೆಳೆದು ದೊಡ್ಡದಾಗಿ ಕಾಣಿಸುತ್ತಿದ್ದರೂ ಕೂಡಾ, ಪೌಷ್ಟಿಕತೆಯು ತುಂಬಾ ಕಡಿಮೆಯಾಗಿದೆ. ಅವುಗಳು ಸಾವಯವವಲ್ಲ, ಯಾಕೆಂದರೆ ಮಣ್ಣು ಸವಕಳಿಗೊಂಡಿದೆ. ನೋಡಿ, ನಾವೆಲ್ಲರೂ ತಿನ್ನುವ ಹೊಸ ಗೋಧಿಬೀಜದಲ್ಲಿ, ಹಳೆ ಗೋಧಿಯಲ್ಲಿರುತ್ತಿದ್ದಷ್ಟು ಫೋಲಿಕ್ ಆಸಿಡ್ ಇಲ್ಲ. ಭಾರತದ ಪಂಜಾಬಿನಲ್ಲಿ ಡಾಕ್ಟರ್ ಒಬ್ಬರು ಸಂಶೋಧನೆ ಮಾಡಿದ್ದರು. ಅವರು ಕೆಲವು ಹಳೆಯ ಗೋಧಿಗಳನ್ನು ಪರೀಕ್ಷಿಸಿದರು, ಮೂಲ ಗೋಧಿ ಮತ್ತು ಅದರಲ್ಲಿ ತುಂಬಾ ಫೋಲಿಕ್ ಆಸಿಡ್ ಇದೆಯೆಂದು ಹೇಳಿದರು. ಇವತ್ತು ಜನರು ಹೃದಯದ ತೊಂದರೆ ಮತ್ತು ಇಂತಹ ಇತರ ಸಮಸ್ಯೆಗಳಿಂದ ನರಳುತ್ತಿದ್ದಾರೆ ಯಾಕೆಂದರೆ, ಅವರು ತಿನ್ನುವ ಆಹಾರಗಳಲ್ಲಿ ಬೇಕಾದಷ್ಟು ಫೋಲಿಕ್ ಆಸಿಡ್ ಇಲ್ಲ. ಆದುದರಿಂದ ಪೂರಕಗಳು ಅವಶ್ಯವಾಗಿವೆ. ಆದರೆ ಪುನಃ, ಅದಕ್ಕೇ ಗಂಟು ಬೀಳುವುದು, ಅದರ ಬಗ್ಗೆ ತುಂಬಾ ಚಿಂತೆ ಮಾಡುವುದು ಒಳೆಯದಲ್ಲ. ನಮ್ಮ ಮೆದುಳು, ನಮ್ಮ ವ್ಯವಸ್ಥೆಯು ಹಲವಾರು ಪದಾರ್ಥಗಳನ್ನು ಸ್ವಂತವಾಗಿ ಉತ್ಪಾದಿಸಬಲ್ಲದು. ಆದುದರಿಂದ ಆಹಾರವು ಪ್ರಭಾವ ಬೀರುತ್ತದೆ, ಆದರೆ ನಿಮ್ಮ ಪ್ರಜ್ಞೆಯು ಆಹಾರಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ. ಪ್ರಶ್ನೆ: ಗುರೂಜಿ, ಈ ವಿಶ್ವದ ಸರ್ವೋಚ್ಛ ಶಕ್ತಿ ಯಾವುದು? ಶ್ರೀ ಶ್ರೀ ರವಿಶಂಕರ್: ಸರ್ವೋಚ್ಛ ಶಕ್ತಿಯು ಸರಳವಾದ ಶಕ್ತಿಯಾಗಿದೆ. ನೋಡಿ, ಪರಮಾಣು ಎಲ್ಲೆಡೆಯೂ ಇದೆ, ಸರಿಯಾ? ಇಡಿಯ ವಿಶ್ವವು ಪರಮಾಣುಗಳಿಂದ ಆವರಿಸಲ್ಪಟ್ಟಿದೆ. ಏಲ್ಲವೂ ಪರಮಾಣುಗಳಿಂದ ಮಾಡಲ್ಪಟ್ಟಿವೆ, ಆದರೆ ಒಂದು ಪರಮಾಣು ಶಕ್ತಿ ಕೇಂದ್ರವು ವ್ಯತ್ಯಸ್ತವಾದುದು. ಅದೇ ರೀತಿಯಲ್ಲಿ, ಸರ್ವೋಚ್ಛ ಶಕ್ತಿಯು ಎಲ್ಲದಕ್ಕಿಂತ ಸರಳವಾದುದು, ತುಂಬಾ ಸುಲಭವಾಗಿ ಸಿಗುವಂತಹುದು, ಅತೀ ಕಡಿಮೆ ಬೆಲೆಯ ಪದಾರ್ಥವಾಗಿದೆ. ನೀವಿದನ್ನು ಪದಾರ್ಥವೆಂದು ಕೂಡಾ ಕರೆಯುವಂತಿಲ್ಲ; ಅದು ಸಂಪೂರ್ಣ ಅಸ್ಥಿತ್ವದ ಅಡಿಪಾಯವಾಗಿದೆ. ಆದು ಅಲ್ಲಿ ಮೇಲೆಲ್ಲೋ ಇಲ್ಲ. ಆದು ಆಕಾಶದಂತೆ, ಕ್ಷೇತ್ರದಂತೆ. ಭೂಮಿಯ ಕಾಂತೀಯ ಕ್ಷೇತ್ರವೆಲ್ಲಿದೆಯೆಂದು ನೀವು ನನ್ನನ್ನು ಕೇಳಿದರೆ, ಅದು ಎಲ್ಲೆಡೆಯೂ ಇದೆ! ಅದು ಎಲ್ಲಾ ಕಡೆಯೂ ಇರುವ ಕಾಂತೀಯ ಕ್ಷೇತ್ರಕ್ಕಿಂತಲೂ ಹೆಚ್ಚು ಸೂಕ್ಷ್ಮವಾದುದು, ಅದೂ ಎಲ್ಲಾ ಸಮಯದಲ್ಲೂ ಮತ್ತು ಒಂದೇ ತೀವ್ರತೆಯೊಂದಿಗೆ. ಅದು, ಸರ್ವೋಚ್ಛ ಶಕ್ತಿಯು ಅಲ್ಲೆಲ್ಲಿಯೋ ಇದೆ ಎಂದಲ್ಲ. ಆದನ್ನು ಸರ್ವೋಚ್ಛ ಶಕ್ತಿಯೆಂದು ಕರೆಯುವುದರ ಬದಲು ನಾವು ಅದನ್ನು ಮೂಲಭೂತಶಕ್ತಿ, ಅಸ್ಥಿತ್ವ ಎಂದು ಹೇಳಬೇಕು. ಪ್ರಾಚೀನ ಜನರು ಅದನ್ನು ಕರೆದುದು ಹಾಗೆಯೇ - ಅಸ್ಥಿತ್ವ. 'ಸತ್' ಯಾವುದು ಇದೆಯೋ ಮತ್ತು 'ಚಿತ್ತ' - ಯಾವುದು ಪ್ರಜ್ಞೆಯಾಗಿದೆಯೋ ಮತ್ತು ಪರಮಸುಖವಾಗಿದೆಯೋ ಅದು. ನೀವು ಆ ಸರ್ವೋಚ್ಛ ಶಕ್ತಿಯ ಅಥವಾ ವಿಶ್ವದ ತಳಹದಿಯ ಪರಮಸುಖವನ್ನು ಅನುಭವಿಸುವುದು ಹೇಗೆ? ಮೌನವಾಗಿದ್ದುಕೊಂಡು ನಿಮ್ಮ ಮನಸ್ಸನ್ನು ಒಳಮುಖವಾಗಿ ತಿರುಗಿಸಿಕೊಳ್ಳುವ ಮೂಲಕ. ಆಭ್ಯಾಸದ ಮೂಲಕ ಪರಮಸುಖವು ಮೇಲ್ಮೈಗೆ ಬರುತ್ತದೆ. ಪ್ರಶ್ನೆ: ಗುರೂಜಿ, ಚಂದ್ರ, ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳು ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆಯೇ? ಹೌದಾದರೆ, ಹೇಗೆ? ಶ್ರೀ ಶ್ರೀ ರವಿಶಂಕರ್: ಹೌದು. ಚಂದ್ರನ ಪ್ರಭಾವವು ಸಮುದ್ರದ ಮೇಲಿದೆಯೆಂಬುದು ನಿಮಗೆ ತಿಳಿದಿದೆಯೇ? ಹುಣ್ಣಿಮೆಯ ದಿನ ಅಲೆಗಳು ಎತ್ತರಕ್ಕೇರುತ್ತವೆ. ಚಂದ್ರನು ಭೂಮಿಯ ಮೇಲೆ ಪ್ರಭಾವ ಬೀರುತ್ತಾನೆ - ಇದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಶರೀರವು ನೀರಿನಿಂದ ಮಾಡಲ್ಪಟ್ಟಿದೆ. ನಮ್ಮ ಶರೀರದ ೬೦% ಕ್ಕೆ ಹತ್ತಿರದಷ್ಟು ನೀರಿನಿಂದ ಮಾಡಲ್ಪಟ್ಟಿದೆ ಮತ್ತು ಸಮುದ್ರದಂತೆ ಅದರಲ್ಲಿ ಉಪ್ಪಿನಂಶವಿದೆ. ಆದುದರಿಂದ ನಿಮ್ಮ ಶರೀರವು ಸಮುದ್ರ ನೀರಿನ ಒಂದು ಚಿಕ್ಕ ಕ್ಯಾಪ್ಸೂಲ್ ನಂತೆ. ನೀವೊಂದು ಪೊಟ್ಟಣ. ನಿಮ್ಮ ಶರೀರದಿಂದ ದ್ರವಾಂಶವನ್ನು ಹೊರಗೆ ತೆಗೆದರೆ, ನೀವು ಕುಗ್ಗುತ್ತೀರಿ. ನೀವು ಸಮುದ್ರ ನೀರಿನ ಒಂದು ಪೊಟ್ಟಣ ಕೆಲವು ಕಡೆ ಕೆಂಪು, ಕೆಲವು ಕಡೆ ನೀಲಿ, ಕೆಲವು ಕಡೆ ವಿಭಿನ್ನ ಬಣ್ಣಗಳು, ಎಲ್ಲವೂ ಒಂದು ಪೊಟ್ಟಣದೊಳಗೆ. ಆದುದರಿಂದ ನಿಮ್ಮ ಶರೀರವು ೬೦% ನೀರು. ಆದುದರಿಂದ ಚಂದ್ರನ ಪ್ರಭಾವವು ಶರೀರದ ಮೇಲಿದೆ. ಯಾವುದು ಶರೀರದ ಮೇಲೆ ಪ್ರಭಾವ ಬೀರುತ್ತದೋ ಅದು ಮನಸ್ಸಿನ ಮೇಲೆ ಕೂಡಾ ಪ್ರಭಾವ ಬೀರುತ್ತದೆ. ಆದುದರಿಂದ ಮನಸ್ಸಿನ ಮೇಲೆ ಚಂದ್ರನ ಪ್ರಭಾವವಿದೆ. ಆದುದರಿಂದಲೇ ಹುಚ್ಚು ಹಿಡಿದ ಜನರನ್ನು ಲ್ಯುನಾಟಿಕ್ಸ್ (ಲೂನಾರ್= ಚಂದ್ರನಿಗೆ ಸಂಬಂಧಿಸಿದ) ಎಂದು ಕರೆಯುವುದು. ಆ ಶಬ್ದವೇ ಲ್ಯುನಾಟಿಕ್ಸ್ ಎಂದು ಹೇಳುತ್ತದೆ. ಅದೇ ರೀತಿಯಲ್ಲಿ ಇತರ ಆಕಾಶಕಾಯಗಳೂ ಕೂಡಾ ನಮ್ಮ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತವೆ. ನೋಡಿ, ಚೈತನ್ಯದ ಕ್ಷೇತ್ರವು ತುಂಬಾ ಆಸಕ್ತಿದಾಯಕವಾದುದು. ನೀವೊಂದು ಟ್ರಾನ್ಸಿಸ್ಟರ್ ರೇಡಿಯೋದ ಒಳಗೆ ನೋಡಿದರೆ, ಅಲ್ಲಿ ಒಂದು ಲೋಹದ ತುಂಡಿನ ಮೇಲೆ ಕೆಲವು ತಂತಿಗಳನ್ನು ರೇಖಾಚಿತ್ರಾಕಾರದಲ್ಲಿ ಹಾಕಿರುತ್ತಾರೆ ಮತ್ತು ಅದು ಎಷ್ಟೊಂದು ದೊಡ್ಡ ಬದಲಾವಣೆಯನ್ನು ತರುತ್ತದೆ ನೋಡಿ! ಅಲ್ಲವೇ? ಒಂದು ಸೆಲ್ ಫೋನಿನೊಳಗಿರುವ ಚಿಪ್ ನೋಡಿದ್ದೀರಾ? ಅದರಲ್ಲೊಂದು ನಿರ್ದಿಷ್ಟ ರೇಖಾಚಿತ್ರವಿರುತ್ತದೆ. ಸೆಲ್ ಫೋನಿನ ಚಿಪ್ ಭಿನ್ನವಾಗಿದ್ದರೆ, ಅದು ಬೇರೆ ನಂಬರಿಗೆ ಹೋಗುತ್ತದೆ. ಪ್ರತಿಯೊಂದು ಚಿಕ್ಕ ರೇಖಾಚಿತ್ರವು ಕೂಡಾ ಒಂದು ನಿರ್ದಿಷ್ಟ ವಿದ್ಯುನ್ಮಾನ (ಎಲೆಕ್ಟ್ರೋನಿಕ್) ಶಕ್ತಿಯನ್ನು, ನಿರ್ದಿಷ್ಟ ಕಂಪನಗಳನ್ನು ಗ್ರಹಿಸುತ್ತದೆ. ಅದೇ ರೀತಿಯಲ್ಲಿ ನಮ್ಮ ಶರೀರವು ಒಂದು ಎಲೆಕ್ಟ್ರೋನಿಕ್ ಸರ್ಕ್ಯೂಟು ಮತ್ತು ಇಡಿಯ ಬ್ರಹ್ಮಾಂಡದೊಂದಿಗೆ ತುಂಬಾ ಸಂಬಂಧ ಹೊಂದಿದೆ. ಬ್ರಹ್ಮಾಂಡದಲ್ಲಿರುವ ಪ್ರತಿಯೊಂದೂ ಪರಸ್ಪ ಜೋಡಲ್ಪಟ್ಟಿವೆ ಮತ್ತು ಪರಸ್ಪರ ಸಂಬಂಧ ಹೊಂದಿವೆ. ಪ್ರಾಚೀನ ಜನರಿಗೆ ಇದು ತಿಳಿದಿತ್ತು. ಆವರು ಪರಮಾಣು ಮತ್ತು ಬ್ರಹ್ಮಾಂಡಗಳನ್ನು ಹೇಗೆ ಜೋಡಿಸಿದರೆಂಬುದು ತುಂಬಾ ಬೆರಗಾಗಿಸುವ ವಿಷಯ. ಸೂರ್ಯನ ಸಂಬಂಧ ಕಣ್ಣುಗಳೊಂದಿಗಿದೆ. ಮನಸ್ಸು ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಮಂಗಳ ಗ್ರಹದ ಸಂಬಂಧ ಪಿತ್ತಕೋಶದೊಂದಿಗಿದೆ. ಶನಿ ಗ್ರಹವು ಹಲ್ಲುಗಳೊಂದಿಗೆ ಸಂಬಂಧ ಹೊಂದಿದೆ. ಆದುದರಿಂದ ಶರೀರದ ಬೇರೆ ಬೇರೆ ಭಾಗಗಳು ಗ್ರಹಗಳ ಬೇರೆ ಬೇರೆ ತರಂಗಾಂತರಗಳೊಂದಿಗೆ ಅಥವಾ ಫ್ರೀಕ್ವೆನ್ಸಿಗಳೊಂದಿಗೆ ಸಂಬಂಧ ಹೊಂದಿವೆ. ಅವುಗಳು ಯಾವುದರ ಜೊತೆ ಸಂಬಂಧ ಹೊಂದಿವೆ? ಅವುಗಳು ಒಂದು ನಿರ್ದಿಷ್ಟ ಕಾಳಿನೊಂದಿಗೆ, ಒಂದು ಬಣ್ಣದೊಂದಿಗೆ ಮತ್ತು ಒಂದು ಪಕ್ಷಿ ಅಥವಾ ಒಂದು ಜೀವಿಯೊಂದಿಗೆ ಕೂಡಾ ಸಂಬಂಧ ಹೊಂದಿವೆ. ಮಂಗಳ ಗ್ರಹವು ನಿಮ್ಮ ಪಿತ್ತಕೋಶದೊಂದಿಗೆ ಸಂಬಂಧ ಹೊಂದಿರುವ ರೀತಿಯಲ್ಲಿ ಅದು ಕುರಿ ಮತ್ತು ಕಡಲೆಕಾಳಿನೊಂದಿಗೆ ---- ಸಂಬಂಧ ಹೊಂದಿದೆ. ಕಡಲೆಕಾಳುಗಳು, ಮಂಗಳ ಗ್ರಹ, ಕುರಿ, ಮೇಕೆ ಮತ್ತು ಪಿತ್ತಕೋಶ ಎಲ್ಲವೂ ಜೋಡಲ್ಪಟ್ಟಿವೆ. ಆದುದರಿಂದ ಅವರು ಈ ಎಲ್ಲಾ ವಸ್ತುಗಳ ನಡುವೆ ಒಂದು ಸಂಬಂಧವನ್ನು ಕಂಡುಕೊಂಡರು; ಪರಮಾಣುವಿನಿಂದ ಬ್ರಹ್ಮಾಂಡದ ವರೆಗೆ. ಇದು ತುಂಬಾ ಆಸಕ್ತಿಕರವಾದ ವಿಜ್ಞಾನ; ಸಂಪೂರ್ಣವಾಗಿ ಆಸಕ್ತಿಕರ ಮತ್ತು ಅತ್ಯಾಕರ್ಷಕ. ನೀವು ಆ ಸಂಶೋಧನೆಯಲ್ಲಿ ಆಳವಾಗಿ ಹೋಗಬೇಕು. ಅದೇ ರೀತಿಯಲ್ಲಿ ಶನಿಯು ಎಳ್ಳಿನೊಂದಿಗೆ ಸಂಬಂಧವನ್ನು ಹೊಂದಿದೆ; ಅದು ಕಾಗೆಗಳು ಮತ್ತು ನಿಮ್ಮ ಹಲ್ಲುಗಳೊಂದಿಗೆ ಸಂಬಂಧವನ್ನು ಹೊಂದಿದೆ. ಅದು ಆಸಕ್ತಿಕರ! ನಾನು ಹೇಳುತ್ತೇನೆ, ತುಂಬಾ ಆಸಕ್ತಿಕರ! ನೀವು ಚಿಟ್ಟೆಗಳ ಪ್ರಭಾವದ ಬಗ್ಗೆ ಕೇಳಿರಬಹುದು. ದಕ್ಷಿಣ ಅಮೆರಿಕಾದ ಮಳೆಕಾಡು ಪ್ರದೇಶದಲ್ಲಿ ತನ್ನ ರೆಕ್ಕೆಗಳನ್ನು ಬಡಿಯುವ ಒಂದು ಚಿಟ್ಟೆಯು, ಚೈನಾದಲ್ಲಿರುವ ಮೋಡಗಳ ಮೇಲೆ ಪ್ರಭಾವ ಬೀರುತ್ತದೆ! ಒಂದು ಚಿಟ್ಟೆಯ ಚಲನೆಯು ಹೇಗೆ ಚೈನಾದ ಮೋಡಗಳ ಮೇಲೆ ಪರಿಣಾಮ ಬೀರುತ್ತದೆ, ತುಂಬಾ ಆಸಕ್ತಿಕರ. ಆದುದರಿಂದಲೇ ಸಂಸ್ಕೃತದಲ್ಲಿ ಒಂದು ಮಾತಿದೆ, ’ಯತ್ ಪಿಂಡೆ ತತ್ ಬ್ರಹ್ಮಾಂಡೆ’, ಅಂದರೆ ವಿಶ್ವದಲ್ಲಿ ಏನೆಲ್ಲಾ ಇದೆಯೋ ಅದೆಲ್ಲಾ ಒಂದು ಕ್ಯಾಪ್ಸೂಲ್ ರೂಪದಲ್ಲಿದೆ. ನಿಮ್ಮ ಶರೀರವು ಒಂದು ಚಿಕ್ಕ ವಿಶ್ವ ಯಾಕೆಂದರೆ ಅದು ಅಲ್ಲಿರುವ ಎಲ್ಲದರೊಂದಿಗೂ ಜೋಡಲ್ಪಟ್ಟಿದೆ. ನೀವೊಂದು ದ್ವೀಪವಲ್ಲ. ನೀವು ಸಮಾಜದೊಂದಿಗೆ ಜೋಡಲ್ಪಟ್ಟಿದ್ದೀರಿ ಮತ್ತು ಕೇವಲ ಸಮಾಜದೊಂದಿಗಲ್ಲ, ಸಂಪೂರ್ಣ ಗೋಳದೊಂದಿಗೆ! ನೀವು ಜೋಡಲು ಬಯಸದೆಯೇ ನೀವು ಆಗಲೇ ಜೋಡಲ್ಪಟ್ಟಿದ್ದೀರಿ. ನೀವು ಭೂಮಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೂ ಜೋಡಲ್ಪಟ್ಟಿದ್ದೀರಿ. ನೀವು ಅದನ್ನು ಅರ್ಥ ಮಾಡಿಕೊಳ್ಳುತ್ತೀರೋ, ಅದಕ್ಕೆ ಮನ್ನಣೆ ನೀಡುತ್ತೀರೋ ಇಲ್ಲವೋ ಅದು ವಿಷಯವಲ್ಲ. ನೀವು ಈಗಾಗಲೇ ಜೋಡಲ್ಪಟ್ಟಿದ್ದೀರಿ. ಪ್ರಶ್ನೆ: ಗುರೂಜಿ, ದಯವಿಟ್ಟು ನೀವು ಅವಿದ್ಯೆ ಮತ್ತು ಮಾಯೆಯ ಪರಿಕಲ್ಪನೆಯ ಬಗ್ಗೆ ವಿವರಿಸುತ್ತೀರಾ? ಶ್ರೀ ಶ್ರೀ ರವಿಶಂಕರ್: ಮಾಯೆಯೆಂದರೆ ಯಾವುದನ್ನೆಲ್ಲಾ ಅಳತೆ ಮಾಡಲು ಸಾಧ್ಯವಿದೆಯೋ ಅದು. ಇಂಗ್ಲೀಷಿನ ಮೆಶರ್ (=ಅಳೆಯು) ಎಂಬ ಶಬ್ದವು ಸಂಸ್ಕೃತದ ಮಾಯಾ ಎಂಬ ಶಬ್ದದಿಂದ ಬಂದಿದೆ. ’ಮಿಯತೆ ಅನಯ ಇತಿ ಮಾಯಾ’. ಮಿಯತೆ ಎಂದರೆ ಅಳೆಯಲ್ಪಡಬೇಕಾಗಿರುವುದು. ಅಳೆಯಲ್ಪಡಬಹುದಾದುದೆಲ್ಲ ಮಾಯೆ. ಪಂಚಭೂತಗಳನ್ನು ಅಳೆಯಬಹುದು. ಪೃಥ್ವಿ, ಜಲ, ಅಗ್ನಿ, ವಾಯು, ಈಥರ್; ಅವುಗಳನ್ನೆಲ್ಲಾ ಅಳೆಯಬಹುದು. ಆದುದರಿಂದ ಪಂಚಭೂತಗಳಿಂದ ಮಾಡಲ್ಪಟ್ಟ ಪ್ರಪಂಚವೆಲ್ಲಾ ಮಾಯೆಯಾಗಿದೆ, ಯಾಕೆಂದರೆ ಅವುಗಳನ್ನೆಲ್ಲಾ ಅಳೆಯಬಹುದು. ಯಾವುದನ್ನು ಅಳೆಯಲು ಸಾಧ್ಯವಿಲ್ಲ? ದಯೆ, ಪ್ರೀತಿಯನ್ನು ಅಳೆಯಲು ಸಾಧ್ಯವಿಲ್ಲ. ಈ ವ್ಯಕ್ತಿಯಲ್ಲಿ ಮೂರು ಔನ್ಸ್ ಪ್ರೀತಿಯಿದೆ ಮತ್ತು ಆ ವ್ಯಕ್ತಿಯಲ್ಲಿ ಐದು ಔನ್ಸ್ ಪ್ರೀತಿಯಿದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಸತ್ಯವನ್ನು ಅಳೆಯಲು ಸಾಧ್ಯವಿಲ್ಲ, ಸೌಂದರ್ಯವನ್ನು ಅಳೆಯಲು ಸಾಧ್ಯವಿಲ್ಲ. ಈ ಮಹಿಳೆಯಲ್ಲಿ ಐದು ಘಟಕಗಳಷ್ಟು ಸೌಂದರ್ಯವಿದೆ ಮತ್ತು ಆ ಮಹಿಳೆಯಲ್ಲಿ ಮೂರು ಘಟಕಗಳಷ್ಟು ಸೌಂದರ್ಯವಿದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಸೌಂದರ್ಯವು ಅಳೆಯಲು ಸಾಧ್ಯವಿಲ್ಲದುದು. ಪ್ರೀತಿ, ಸೌಂದರ್ಯ, ದಯೆ, ಸತ್ಯ, ಸಮಗ್ರತೆ, ಪ್ರಾಮಾಣಿಕತೆ; ಆತ್ಮದ ಈ ಎಲ್ಲಾ ಗುಣಗಳು ಅಳೆಯಲು ಸಾಧ್ಯವಿಲ್ಲದುದು. ಆದುದರಿಂದ, ಅವುಗಳು ಮಾಯೆಯಲ್ಲ. ಅವುಗಳು ಮಹೇಶ್ವರ - ಆತ್ಮದ ಸ್ವಭಾವ. ಮಾಯೆಯೆಂದರೆ ಯಾವುದೆಲ್ಲಾ ಬದಲಾಗುತ್ತದೆಯೋ ಮತ್ತು ಯಾವುದನ್ನು ಅಳೆಯಬಹುದೋ ಅದು ಎಂಬ ಅರ್ಥವೂ ಇದೆ; ಮತ್ತು ಅಳತೆಗಳು ಬದಲಾಗುತ್ತವೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ಬದಲಾವಣೆಗೆ ಒಳಗಾಗುತ್ತದೆ. ಆದುದರಿಂದ ಮಾಯೆಯೆಂಬುದರ ಒಂದು ಅರ್ಥವೆಂದರೆ, ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವೂ ಬದಲಾಗುತ್ತಿರುತ್ತದೆ. ಪ್ರಪಂಚದಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅಳೆಯಬಹುದು, ಇದು ಇನ್ನೊಂದು ಅರ್ಥ. ಯಾವುದು ಬದಲಾಗುವುದಿಲ್ಲವೋ ಮತ್ತು ಯಾವುದನ್ನು ಅಳೆಯಲು ಸಾಧ್ಯವಿಲ್ಲವೋ ಅದು ಪ್ರಜ್ಞೆ, ಆತ್ಮ, ಬ್ರಹ್ಮ ಅಥವಾ ವಿಶ್ವ ಚೈತನ್ಯ. ಅವಿದ್ಯೆಯೆಂದರೆ ಈ ಬದಲಾವಣೆಯ, ವಸ್ತುಗಳನ್ನು ಅಳೆಯುವ ಅಧ್ಯಯನ. ಎರಡು ವಿಷಯಗಳಿವೆ: ವಿದ್ಯೆ ಮತ್ತು ಅವಿದ್ಯೆ. ವಿದ್ಯೆಯೆಂದರೆ ಪ್ರಜ್ಞೆಯ ಅಧ್ಯಯನ ಮತ್ತು ಅವಿದ್ಯೆಯೆಂದರೆ ಪ್ರಪಂಚದ, ಚಿಕ್ಕ ವಸ್ತುಗಳ ಅಧ್ಯಯನ. ಪ್ರಶ್ನೆ: ಗುರೂಜಿ, ಮುಕ್ತಿಯೆಂದರೇನು? ಜನರು ಅದನ್ನು ಯಾಕೆ ಹುಡುಕುತ್ತಾರೆ, ಮತ್ತು ಜನರು ಯಾವುದರಿಂದ ಮುಕ್ತಿಯನ್ನು ಹುಡುಕುತ್ತಾರೆ? ಶ್ರೀ ಶ್ರೀ ರವಿಶಂಕರ್: ನಿನ್ನನ್ನು ಒಂದು ಕುರ್ಚಿಯ ಮೇಲೆ ೧೦ ಗಂಟೆ ಕೂರಿಸುತ್ತಾರೆ ಮತ್ತು ನಿನಗೆ, "ನೀನು ಕುರ್ಚಿಯಿಂದ ಏಳಬಾರದು" ಎಂಬ ಆಜ್ಞೆಯನ್ನು ಕೊಡಲಾಗುತ್ತದೆ ಎಂದಿಟ್ಟುಕೋ. ನೀನು ಹೇಳುತ್ತಿ, "ದಯವಿಟ್ಟು, ನನ್ನ ಕಾಲುಗಳು ಮಲಗಿವೆ. ದಯವಿಟ್ಟು ಅವುಗಳನ್ನು ನಾನು ಎಬ್ಬಿಸಬಹುದೇ?" ನೀವಿದನ್ನು ಹೇಳುತ್ತೀರೇ ಇಲ್ಲವೇ? ಅದು ಮುಕ್ತಿಯನ್ನು ಹುಡುಕುವುದು. ನೀವು ಮಕ್ಕಳನ್ನು ಅವರ ಪರೀಕ್ಷೆಗಳು ಮುಗಿದ ದಿನ ಸುಮ್ಮನೇ ಕೇಳಿ, "ನಿನಗೆ ಹೇಗನ್ನಿಸುತ್ತಿದೆ?" ಅವರು ಮನೆಗೆ ಬರುತ್ತಾರೆ, ಅವರ ಪುಸ್ತಕಗಳನ್ನು ಸೋಫದ ಮೇಲೆ ಎಸೆದು, ಸೋಫದ ಮೇಲೆ ಕುಳಿತುಕೊಂಡು ಟಿವಿ ನೋಡುತ್ತಾರೆ. ನೀವು, "ನಿನಗೆ ಹೇಗೆ ಅನ್ನಿಸುತ್ತಿದೆ?" ಎಂದು ಕೇಳುತ್ತೀರಿ. ಅವರು, "ಆಹ್! ಮುಕ್ತಿ ಸಿಕ್ಕಿತು! ಮುಗಿಯಿತು!" ಎಂದು ಹೇಳುತ್ತಾರೆ. ಮುಕ್ತಿಯೆಂದರೆ, "ನನಗೆ ಮಾಡಿಯಾಯಿತು! ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದೆ, ಮುಗಿಯಿತು!" ಎಂಬ ಭಾವನೆ. ಸಂಪೂರ್ಣ ತೃಪ್ತಿ; ಸಂಪೂರ್ಣ ಸ್ವಾತಂತ್ರ್ಯ; ಅಲ್ಲಿ ಇನ್ನೂ ಮಾಡಲು ಏನೂ ಇಲ್ಲ, ಯಾವುದನ್ನೂ ಬಲವಂತವಾಗಿ ಮಾಡಬೇಕಾದುದಿಲ್ಲ. "ನನಗೆ ಏನು ಬೇಕೋ ಅದನ್ನು ನಾನು ಸಾಧಿಸಿದ್ದೇನೆ. ಒಳಗಡೆ ನಾನು ಸ್ವಾತಂತ್ರವನ್ನು ಅನುಭವಿಸುತ್ತಿದ್ದೇನೆ". ಮುಕ್ತಿಯು ಯಾವಾಗಲೂ ಬಂಧನದೊಂದಿಗೆ ಜೋಡಿರುತ್ತದೆ. ಬಂಧನವಿರುವಾಗ, ಆ ಬಂಧನದಿಂದ ಪಾರಾಗಲು ಅಲ್ಲಿ ಮುಕ್ತಿಯಿದೆ. ನಾವು ನಮ್ಮದೇ ಮನಸ್ಸಿನಿಂದ, ನಮ್ಮದೇ ಆಸೆಗಳಿಂದ, ನಮ್ಮದೇ ಬಯಕೆಗಳಿಂದ, ನಮ್ಮ ತಿರಸ್ಕಾರಗಳಿಂದಾಗಿ ಹುಟ್ಟುತ್ತೇವೆ. ಬಯಕೆಗಳು ಮತ್ತು ತಿರಸ್ಕಾರಗಳು ಇಲ್ಲವಾದಾಗ ನೀವು ಒಳಗಿನಿಂದ ಆ ಮುಕ್ತಿಯನ್ನು, ಆ ಸರಳತೆಯನ್ನು ಅನುಭವಿಸುತ್ತೀರಿ! ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಸ್ವಲ್ಪ ಮಟ್ಟಿಗೆ ಮುಕ್ತಿಯನ್ನು ಅನುಭವಿಸಿದ್ದಾರೆ. ಆದರೆ ಅದು ಜೀವನದಲ್ಲಿನ ಒಂದು ಖಾಯಂ ವಾಸ್ತವವಾದಾಗ, ನಿಮ್ಮ ಸಂಪೂರ್ಣ ಚೈತನ್ಯವು ಬದಲಾಗುತ್ತದೆ ಮತ್ತು ಯಾವುದೂ ನಿಮಗೆ ತೊಂದರೆಯನ್ನುಂಟು ಮಾಡುವುದಿಲ್ಲ. ಯಾರಿಗೂ ನಿಮ್ಮಿಂದ ನಿಮ್ಮ ನಗುವನ್ನು ದೂರ ಮಾಡಲು ಸಾಧ್ಯವಿಲ್ಲ. ಯಾರಿಗೂ ನಿಮ್ಮನ್ನು ಯಾವುದೇ ಉತ್ತೇಜಕಗಳಿಂದ ಬದಲಾಯಿಸಲು ಸಾಧ್ಯವಿಲ್ಲ. ಯಾರಿಗೂ ನಿಮ್ಮನ್ನು ಕಿರಿಕಿರಿಗೊಳಿಸಲು ಸಾಧ್ಯವಿಲ್ಲ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಕಿರಿಕಿರಿಗೊಳಿಸಲು ಏನೂ ಉಳಿದಿರುವುದಿಲ್ಲ. ಅಲ್ಲವಾದರೆ, ಜೀವನದಲ್ಲಿ ನಮ್ಮ ಗುಂಡಿಗಳು ಚಿಕ್ಕ ಚಿಕ್ಕ ವಿಷಯಗಳಿಂದ ಒತ್ತಲ್ಪಡುತ್ತಾ ಇರುತ್ತವೆ. ಒಂದು ಚಿಕ್ಕ ವಿಷಯ ಸರಿಯಾಗದೇ ಹೋದರೆ, ಅಷ್ಟೇ ಮತ್ತೆ! ಪ್ರಶ್ನೆ: ಗುರೂಜಿ, ನನ್ನ ಗೆಳೆಯ ತುಂಬಾ ಅಸೂಯೆ ಪಡುತ್ತಾನೆ. ನಾನು ಅವನನ್ನು ಉಸಿರಾಟದ ಕಲೆಗೆ ಪರಿಚಯಿಸಿದೆ ಆದರೆ ನಂತರ ಅವನು ಪುನಃ ತುಂಬಾ ಅಸೂಯೆ ಪಟ್ಟ. ಒಂದು ರಾತ್ರಿ ಅವನು ನನಗೆ ಹೊಡೆದ ಬಳಿಕ ನಾನು ದೂರ ಹೋದೆ ಮತ್ತು ಒಂದು ತಿಂಗಳು ಅವನಲ್ಲಿ ಮಾತನಾಡುವುದನ್ನು ನಿಲ್ಲಿಸಿದೆ. ಈಗ ಅವನನ್ನುತ್ತಿದ್ದಾನೆ, ಕ್ರಿಯೆಯನ್ನು ಪ್ರತಿದಿನವೂ ಮಾಡಿದ ಬಳಿಕ ಅವನು ಬದಲಾಗಿದ್ದಾನೆಂದು. ಅವನು ಇಲ್ಲಿ ಮೌನ ಶಿಬಿರದಲ್ಲಿ ಕೂಡಾ ಇದ್ದಾನೆ. ಅವನು ಬದಲಾದಂತೆ ಕಾಣುತ್ತಿದ್ದಾನೆ. ನಾನು ಅವನಿಗೆ ಇನ್ನೊಂದು ಅವಕಾಶ ಕೊಡಬೇಕೆಂದು ಅವನು ಬಯಸುತ್ತಾನೆ. ನಾನು ಏನು ಮಾಡಬೇಕು? ಶ್ರೀ ಶ್ರೀ ರವಿಶಂಕರ್: ಹೌದು, ನೀನು ಖಂಡಿತವಾಗಿ ಅವನಿಗೆ ಒಂದು ಅವಕಾಶವನ್ನು ಕೊಡಬೇಕು ಮತ್ತು ಈ ಶಿಬಿರವು ನಿಜವಾಗಿ ಒಂದು ಬದಲಾವಣೆಯನ್ನು ಮಾಡಿರಬಹುದು. ನೋಡು, ಎಲ್ಲರಲ್ಲೂ ಒಳ್ಳೆಯತನವು ಅಡಗಿರುತ್ತದೆ. ಆ ಒಳ್ಳೆಯತನವನ್ನು ಆವರಿಸಿರುವುದು ಒತ್ತಡ ಮತ್ತು ಅಜ್ಞಾನ. ಆದುದರಿಂದ, ಈ ಕೋಣೆಯಲ್ಲಿ, ಟೊಳ್ಳು ಮತ್ತು ಖಾಲಿ ಧ್ಯಾನ ಹಾಗೂ ಎಲ್ಲಾ ಧ್ಯಾನಗಳೊಂದಿಗೆ ನಾವು, ಒಳ್ಳೆಯತನವು ಮೇಲೆ ಬರಲು ಅದನ್ನು ತೆರೆಯುತ್ತಿದ್ದೇವೆ. ಅದು ಅರಳುತ್ತದೆ, ಹೂಬಿಡುತ್ತದೆ. ಪ್ರಶ್ನೆ: ನಾನು ನನ್ನ ತಂದೆಗೆ ಅವರ ಋಣಾತ್ಮಕ ಭಾವನೆಗಳ ನಿರ್ವಹಣೆಯನ್ನು ಕಲಿಯುವುದರಲ್ಲಿ ಸಹಾಯ ಮಾಡುವುದು ಹೇಗೆ? ಹಾಗೂ, ಕೆಲಸದಲ್ಲಿ ಅವರು ಮಾಡುವ ಅಸ್ತವ್ಯಸ್ತತೆಗಳನ್ನು ಸ್ವೀಕರಿಸುವುದು ಹೇಗೆ, ಯಾಕೆಂದರೆ ನಾನು ಅವರೊಂದಿಗೆ ಕೆಲಸ ಮಾಡುತ್ತೇನೆ. ಶ್ರೀ ಶ್ರೀ ರವಿಶಂಕರ್: ಅದೊಂದು ಕಷ್ಟಕರ ಕೆಲಸ. ಬೇರೆ ಬೇರೆ ತಲೆಮಾರಿನವರು ಕೆಲಸ ಮಾಡುವ ಶೈಲಿ ಬೇರೆ ಬೇರೆಯಾಗಿರುತ್ತದೆ. ಅವರೊಂದಿಗೆ ಸಂಪರ್ಕಿಸುವಾಗ ನಿನ್ನಲ್ಲಿ ತುಂಬಾ ತಾಳ್ಮೆ ಮತ್ತು ಕುಶಲತೆಯಿರಬೇಕು. ಕೆಲವೊಮ್ಮೆ ಹಿರಿಯ ತಲೆಮಾರಿನವರಿಗೆ ಕೆಲಸವನ್ನು ನಿಯೋಜಿಸುವುದು ಹೇಗೆಂದು ತಿಳಿದಿರುವುದಿಲ್ಲ. ಅವರು ಪರಿಪೂರ್ಣತೆಯಲ್ಲಿ ಎಷ್ಟು ನಂಬುತ್ತಾರೆಂದರೆ, ಎಲ್ಲವನ್ನೂ ತಾವೇ ಮಾಡಲು ಬಯಸುತ್ತಾರೆ. ಅದು ಕಿರಿಯ ತಲೆಮಾರಿನವರಿಗೆ ಒಂದು ಸಮಸ್ಯೆಯಾಗಿ ಪರೊಣಮಿಸುತ್ತದೆ. ಆದುದರಿಂದ ಒಂದು ಕೆಲಸ ಮಾಡು, ಅವರು ಋಣಾತ್ಮಕವಾದಾಗ, ನೀನು ಸುಮ್ಮನೇ ಮೌನವಾಗಿ ಅಲ್ಲಿಂದ ದೂರ ಜಾರು. ವಾದಿಸಬೇಡ. ಅಲ್ಲಿ ವಾದವು ಕೆಲಸ ಮಾಡುವುದೇ ಇಲ್ಲ. ನೀನು ಏನು ಹೇಳುತ್ತೀಯೋ ಅದೆಲ್ಲಾ ಸರಿಯಿದ್ದರೂ ಅವರು ಅದನ್ನು ತೆಗೆದುಕೊಳ್ಳುವುದಿಲ್ಲ. ಅವರು ತಮ್ಮ ಸ್ಥಾನಕ್ಕೆ ಗಂಟುಬಿದ್ದಿರುತ್ತಾರೆ ಮತ್ತು ಅವರು ಅದನ್ನು ಬಿಡುವುದಿಲ್ಲ. ಅದು ಕಷ್ಟ, ಆದರೆ ಕುಶಲತೆಯಿಂದ ನೀನು ನಿನ್ನ ಆಲೋಚನೆಗಳನ್ನು ಮುಂದಿಡಬೇಕು. ಅಲ್ಲಿ ನಿನಗೆ ತುಂಬಾ ತಾಳ್ಮೆಯ ಅಗತ್ಯವಿದೆ ಮತ್ತು ಮೌನವೆಂಬುದು ಎಲ್ಲಾ ಕುಶಲತೆಗಳ ತಾಯಿ. ನೋಡಿ, ನೀವು ನನ್ನನ್ನು ಕೇಳಬಹುದು, "ನಾನು ಬಂದು ಮೂರು ದಿನಗಳವರೆಗೆ ಮೌನವಾಗಿ ಯಾಕೆ ಇರಬೇಕು ಗುರೂಜಿ, ಅದರಿಂದ ಪ್ರಯೋಜನವೇನು? ನನಗೆ ಮಾತನಾಡಲು ಬಿಡಿ". ನೀವು ಮೌನವಾಗಿರುವಾಗ, ನೀವು ಕುಶಲತೆಗಳ ಮೂಲವನ್ನು ತಟ್ಟುತ್ತೀರಿ ಮತ್ತು ಆ ಕುಶಲತೆಗಳು ನಿಮ್ಮಲ್ಲಿ ಮೇಲೇಳುತ್ತವೆ. ಪ್ರಶ್ನೆ: ಸಕಾರಗೊಳಿಸುವಿಕೆ (ಮ್ಯಾನಿಫೆಸ್ಟೇಶನ್) ಯ ಹಿಂದಿರುವ ರಹಸ್ಯವೇನು? ಧ್ಯಾನ ಮಾಡುವಾಗ, ನನ್ನ ತಲೆಯು ಮುಂದಕ್ಕೆ ಬಾಗುತ್ತದೆ ಮತ್ತು ಕೆಲವೊಮ್ಮೆ ನನ್ನ ಇಡಿಯ ಶರೀರ ಮುಂದಕ್ಕೆ ಬಾಗುತ್ತದೆ. ಅದು ಪರವಾಗಿಲ್ಲವೇ ಅಥವಾ ನಾನು ಅದನ್ನು ತಡೆದು ಪುನಃ ನೇರವಾಗಿ ಕುಳಿತುಕೊಳ್ಳಬೇಕೇ? ಶ್ರೀ ಶ್ರೀ ರವಿಶಂಕರ್: ನಾವು ನೇರವಾಗಿ ಕುಳಿತುಕೊಳ್ಳುತ್ತೇವೆ ಮತ್ತು ನಂತರ ನಾವು ಬಿಟ್ಟು ಬಿಡುತ್ತೇವೆ. ಧ್ಯಾನದಲ್ಲಿ ನಿಮ್ಮ ತಲೆ ಕೆಳಗೆ ಬಂದರೆ ಅಥವಾ ನಿಮ್ಮ ಶರೀರ ಕೆಳಕ್ಕೆ ಬಾಗಿದರೆ, ಚಿಂತಿಸಬೇಡಿ, ಅದು ಪರವಾಗಿಲ್ಲ, ಅದು ಒಳ್ಳೆಯದು. ಈಗ, ನಾನು ಸಾಕಾರಗೊಳಿಸುವುದು ಹೇಗೆ? ನೀನು ನಿನ್ನ ಆಶಯವನ್ನು ಹಾಕಿದಾಗ, ಅದು ಖಂಡಿತವಾಗಿ ಸಾಕಾರಗೊಳ್ಳುತ್ತದೆ. ಒಂದು ಆಶಯ ಮತ್ತು ಅದರ ಮೇಲೆ ಸ್ವಲ್ಪ ಗಮನ, ಆಗ ಅದು ಸಾಕಾರವಾಗುತ್ತದೆ. ಇದು ಸಂಕಲ್ಪವೆಂದು ಕರೆಯಲ್ಪಡುತ್ತದೆ. ನಿಮಗೆ ಜೀವನದಲ್ಲಿ ಬೇಕಾಗಿರುವುದು ಏನು? ಅದನ್ನು ನಿಮ್ಮ ಮನಸ್ಸಿನಲ್ಲಿ ದೃಢ ಮಾಡಿಕೊಳ್ಳಿ ಮತ್ತು ಅದರ ಮೇಲೆ ಒಂದು ಸೌಮ್ಯವಾದ ಆಶಯವನ್ನು ಹಾಕಿ. ಅದಕ್ಕಾಗಿ ಹಂಬಲಿಸಬೇಡಿ ಅಥವಾ ಅದಕ್ಕೇ ಗಂಟು ಬೀಳಬೇಡಿ. ನಿಮ್ಮಲ್ಲಿ ಒಂದು ಆಶಯವಿಟ್ಟು, ನಂತರ ಅದನ್ನು ಸುಮ್ಮನೇ ಬಿಟ್ಟು ಬಿಡಿ ಮತ್ತು ಆರಾಮವಾಗಿರಿ. ಅದು ಪ್ರಕಟಗೊಳ್ಳುತ್ತದೆ. ಆಶಯ ಮತ್ತು ಬಯಕೆಗಳ ನಡುವೆ ಒಂದು ವ್ಯತ್ಯಾಸವಿದೆ. ಬಯಕೆಯೆಂದರೆ ಅದಕ್ಕೇ ಗಂಟು ಬೀಳುವುದು. ನೀವು ಇಲ್ಲಿಂದ ಗೋತನ್ ಬರ್ಗ್ ಗೆ ಹೋಗಬೇಕು ಎಂದಿಟ್ಟುಕೊಳ್ಳೋಣ. ನೀವು, "ನಾನು ಗೋತನ್ ಬರ್ಗ್ ಗೆ ಹೋಗಬೇಕು, ನಾನು ಹೋಗಬೇಕು, ನಾನು ಹೋಗಬೇಕು" ಎಂದು ಹೇಳುತ್ತಾ ಇದ್ದರೆ, ನೀವು ಇಂತಹ ಚಡಪಡಿಕೆಯೊಂದಿಗೆ ಕಾರು ಚಲಾಯಿಸಿದರೆ ನೀವು ಗೋತನ್ ಬರ್ಗ್ ಗೆ ತಲಪುವುದಿಲ್ಲ, ನೀವು ಬೇರೆಲ್ಲಿಗಾದರೂ ತಲಪುವಿರಿ. ಆದರೆ ನಿಮ್ಮಲ್ಲಿ ಸುಮ್ಮನೇ ಒಂದು ಆಶಯವಿದ್ದರೆ, ನಾನು ಗೋತನ್ ಬರ್ಗ್ ಗೆ ಹೋಗುತ್ತಿದ್ದೇನೆ, ಅಷ್ಟೆ; ನೀವು ಕಾರು ಚಲಾಯಿಸುತ್ತೀರಿ, ನೀವು ಇಲ್ಲಿ ಅಲ್ಲಿ ನಿಲ್ಲಿಸುತ್ತೀರಿ, ಪುನಃ ಚಲಾಯಿಸುತ್ತೀರಿ ಮತ್ತು ತಲಪುತ್ತೀರಿ. ಇದು ಆಶಯ. ಬಯಕೆಯೆಂದರೆ ನಿರಂತರವಾಗಿ ಅದರ ಮೇಲಿರುವುದು ಮತ್ತು ಅದು ನಿರಾಶೆಯನ್ನು ಮಾತ್ರ ತರುತ್ತದೆ. ಪ್ರಶ್ನೆ: ನೀವು ಬಳಿಯಿರುವಾಗ ಇಷ್ಟೊಂದು ಭಿನ್ನ ಭಾವನೆಗಳು ಯಾಕಿವೆ? ನಾನು ಶಾಂತಿ ಮತ್ತು ಚಡಪಡಿಕೆಯನ್ನು ಹಾಗೂ ಪ್ರೀತಿ ಮತ್ತು ಮಾತ್ಸರ್ಯವನ್ನು ಒಂದೇ ಸಮಯದಲ್ಲಿ ಅನುಭವಿಸುತ್ತೇನೆ. ಶ್ರೀ ಶ್ರೀ ರವಿಶಂಕರ್: ಅಷ್ಟೆ! ಮಾನವ ಜೀವನವೆಂಬುದು ಭಾವನೆಗಳ ಒಂದು ರೋಲರ್ ಕೋಸ್ಟರ್. ಈ ಎಲ್ಲಾ ಭಾವನೆಗಳು ಬರುತ್ತವೆ. ಭಾವನೆಗಳು ಮೇಲಕ್ಕೇರುವಾಗ ಅವುಗಳು ಧನಾತ್ಮಕ ಮತ್ತು ಅವುಗಳು ಕೆಳ ಬರಲು ಶುರುವಾಗಿವಾಗ ಅವುಗಳು ಋಣಾತ್ಮಕ. ಆದರೆ, ಅವುಗಳೆಲ್ಲಾ ಬರುತ್ತವೆ ಮತ್ತು ಹೋಗುತ್ತವೆಯೆಂಬುದನ್ನು ನೀನು ಅರ್ಥ ಮಾಡಿಕೊಂಡಿದ್ದೀಯಾ, ಅದು ಒಳ್ಳೆಯದು. ನೀನು ಕೇವಲ ಒಂದು ಸಾಕ್ಷಿಯಾಗಿರು. ಪ್ರಶ್ನೆ: ನಾವು ಕೇವಲ ಯೋಜನೆ ಹಾಕುವುದರ ಮತ್ತು ಮಾತನಾಡುವುದರ ಬದಲು, ನಮ್ಮನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುವುದು ಹೇಗೆ? ಶ್ರೀ ಶ್ರೀ ರವಿಶಂಕರ್: ಒಳ್ಳೆಯದು, ನೀನು ಮುಂದಾಳು, ನೀನು ಮುನ್ನಡೆಸು. ಒಬ್ಬ ಮುಂದಾಳುವು ಕ್ರಿಯಾಶೀಲವಾಗಿರಲು ಬಯಸುತ್ತಾನೆ, ಕೇವಲ ಮಾತನಾಡುವುದನ್ನಲ್ಲ. ಆದುದರಿಂದ ನೀನು ಏಳು ಮತ್ತು ಮುನ್ನಡೆಸಲು ಶುರು ಮಾಡು. ಎಲ್ಲರೂ ಚಲಿಸುವಂತೆ ಮಾಡು. ಜನರನ್ನು ಗುಂಪಿಗೆ ಸೇರಲು ಹೇಳು. ಅವರು ಸೇರದಿದ್ದರೆ, ಆಗ ನೀನು ಒಬ್ಬಂಟಿಯಾಗಿ ನಡೆ. ಇದು ನಮ್ಮ ನೀತಿಯಾಗಿರಬೇಕು - ನಾವು ಎಲ್ಲರನ್ನೂ ಜೊತೆಯಲ್ಲಿ ಬರಲು ಮತ್ತು ಜೊತೆಯಲ್ಲಿ ಸಾಗಲು ಹೇಳುವುದು, ಆದರೆ ಯಾರೂ ಬರಲಿಲ್ಲವೆಂದಿಟ್ಟುಕೊಳ್ಳಿ, ಚಿಂತಿಸಬೇಡಿ, ನೀವು ಬಿಡಬೇಡಿ, ನೀವು ಒಬ್ಬಂಟಿಯಾಗಿ ನಡೆಯಿರಿ. ಆಗ, ಅಚಾನಕ್ಕಾಗಿ ನೀವು ಹಿಂದೆ ತಿರುಗಿ ನೋಡಿದಾಗ, ಹಲವರು ನಿಮ್ಮ ಜೊತೆ ನಡೆಯುತ್ತಿರಬಹುದು. ಪ್ರಶ್ನೆ: ದಯವಿಟ್ಟು ನೀವು ಕರ್ಮದ ಪರಿಕಲ್ಪನೆಯ ಬಗ್ಗೆ ನಮಗೆ ತಿಳಿಸುವಿರಾ? ಇದರ ಬಗ್ಗೆ ಆಳವಾಗಿ ತಿಳಿಯಲು ನಾವು ಯಾವುದನ್ನು ಓದಬಹುದು? ಶ್ರೀ ಶ್ರೀ ರವಿಶಂಕರ್: ಈಗ, ಕರ್ಮವೆಂದರೇನು? ನೀವು ಕರ್ಮದ ಬಗ್ಗೆ ಬಹಳಷ್ಟು ಕೇಳಿದ್ದೀರಿ. ಕರ್ಮದ ನಿಜವಾದ ಅರ್ಥವೆಂದರೆ ಕ್ರಿಯೆ. ಕ್ರಿಯೆಯನ್ನು ಮೂರು ವಿಧವಾಗಿ ವಿಂಗಡಿಸಬಹುದು: ಭೂತ, ವರ್ತಮಾನ ಮತ್ತು ಭವಿಷ್ಯ. ಹಿಂದಿನ ಕ್ರಿಯೆಗಳು ಅಚ್ಚೊತ್ತಿರುತ್ತವೆ, ಭವಿಷ್ಯದ ಕ್ರಿಯೆಗಳು ಕೂಡಾ ಅಚ್ಚುಗಳು ಮತ್ತು ವರ್ತಮಾನದ ಕ್ರಿಯೆಗಳು ಕರ್ಮವಾಗಿದೆ. ಅದು ನಿಮಗೆ ಈಗ ಫಲಗಳನ್ನು ಕೊಡುತ್ತಿದೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಆದುದರಿಂದ ಕರ್ಮವೆಂದರೆ ಭೂತಕಾಲದ ವಾಸನೆಗಳು (ಅಚ್ಚುಗಳು). ಅದು ಭವಿಷ್ಯದಲ್ಲಿ ಅದೇ ರೀತಿಯ ಪರಿಸ್ಥಿತಿಗಳನ್ನು ಸೆಳೆಯುತ್ತದೆ ಮತ್ತು ಅದು ಭವಿಷ್ಯ ಕರ್ಮ. ನೀವು ಮಾಡುತ್ತಿರುವ ವರ್ತಮಾನದ ಕ್ರಿಯೆಯು ನಿಮ್ಮ ಮನಸ್ಸಿನಲ್ಲಿ ಒಂದು ವಾಸನೆಯನ್ನು ಸೃಷ್ಟಿಸುತ್ತದೆ ಮತ್ತು ಅದು ಕೂಡಾ ಕರ್ಮವೆಂದು ಕರೆಯಲ್ಪಡುತ್ತದೆ. ನೀವು ಆತ್ಮೀಯರಿಗೊಂದು ಕಿವಿಮಾತು ಪುಸ್ತಕವನ್ನು ತೆಗೆದುಕೊಂಡರೆ, ನಾನು ಮಾಡಿದ ಮೊದಲನೆಯ ಜ್ಞಾನದ ಹಾಳೆಯೇ ಕರ್ಮದ ಬಗ್ಗೆ. ಹೇಗೆ, ನಾವು ಬದಲಾಯಿಸಬಹುದಾದಂತಹ ನಿರ್ದಿಷ್ಟ ಕರ್ಮಗಳಿವೆ, ನೀವು ಬದಲಾಯಿಸಲು ಸಾಧ್ಯವಿಲ್ಲದಂತಹ ಮತ್ತು ನೀವು ಅನುಭವಿಸಬೇಕಾದಂತಹ ನಿರ್ದಿಷ್ಟ ವಾಸನೆಗಳಿವೆ. ನಾನು ನಿಮಗೊಂದು ಸರಳವಾದ ಉದಾಹರಣೆಯನ್ನು ಕೊಡುತ್ತೇನೆ. ನಿಮ್ಮಲ್ಲಿ ಎಷ್ಟು ಮಂದಿಗೆ ಬೆಳಗ್ಗೆ ಮೊದಲನೆಯದಾಗಿ ಕಾಫಿ ಕುಡಿಯುವ ಅಭ್ಯಾಸವಿದೆ? ನಿಮ್ಮಲ್ಲಿ ಎಷ್ಟು ಮಂದಿಗೆ ಕಾಫಿ ಕುಡಿಯದಿದ್ದರೆ ತಲೆನೋವಾಗುತ್ತದೆ? (ಹಲವರು ಕೈ ಮೇಲೆತ್ತುತ್ತಾರೆ) ನೋಡಿ, ಇದು ಕಾಫಿ ಕರ್ಮ. ನೀವು ಕಾಫಿ ಕುಡಿಯುತ್ತಾ ಇದ್ದ ಕಾರಣ, ಅದು ಪ್ರಜ್ಞೆಯಲ್ಲಿ ನಿರ್ದಿಷ್ಟ ಅಚ್ಚುಗಳನ್ನು ಮಾಡಿದೆ ಮತ್ತು ಒಂದು ದಿನ ನೀವು ಕಾಫಿ ಕುಡಿಯದಿದ್ದರೆ, ನಿಮಗೆ ತಲೆನೋವಾಗುತ್ತದೆ. ಅದು ಕಾಫಿ ಕರ್ಮ. ಇದರಿಂದ ಹೊರಬರಲು ಎರಡು ಮಾರ್ಗಗಳಿವೆ. ಒಂದನೆಯದು, ನೀವು ಕಾಫಿ ಕುಡಿಯಿರಿ ಮತ್ತು ತಲೆನೋವಿನಿಂದ ಪಾರಾಗಿ, ಅಥವಾ, ನೀವು ಅದನ್ನು ತಡೆಯಿರಿ. ನೀವು ಹೇಳಿ, "ಅದು ನೋವಾಗುತ್ತಿದ್ದರೆ ಪರವಾಗಿಲ್ಲ, ನೋವಾಗಲಿ", ಮತ್ತು ನೀವು ಅದರ ಮೂಲಕ ಸಾಗಿ. ಎರಡು ಅಥವಾ ಮೂರು ದಿನಗಳ ವರೆಗೆ ನೋವಾಗಬಹುದು ಮತ್ತು ನಂತರ ನೋವಾಗುವುದು ನಿಲ್ಲುತ್ತದೆ, ಯಾಕೆಂದರೆ ಕರ್ಮಗಳು ಯಾವಾಗಲೂ ಸಮಯಕ್ಕೆ ಕಟ್ಟು ಬಿದ್ದಿರುತ್ತವೆ. ನಿಮಗೆ ಒಂದು ಅಪಘಾತದ ಕರ್ಮವಿದೆಯೆಂದಿಟ್ಟುಕೊಳ್ಳೋಣ. ಅದು ಕೇವಲ ಸಮಯಕ್ಕೆ ಕಟ್ಟುಬಿದ್ದಿರುತ್ತದೆ. ನೀವು ಆ ಸಮಯವನ್ನು ದಾಟಿದರೆ, ಆಗ ಆ ಕ್ರಿಯೆಯು ದೂರ ಹೋಗುತ್ತದೆ. ನಿಮಗೆ ಬೆಳಗ್ಗೆ ಕಾಫಿ ಕುಡಿಯದೆ ಬಂದಂತಹ ತಲೆನೋವಿನಂತೆ. ಅದು ಕೆಲವು ಗಂಟೆಗಳ ವರೆಗೆ ನೋಯುತ್ತದೆ, ನಂತರ ನೀವು ನೀರು ಕುಡಿಯುತ್ತೀರಿ, ತಿನ್ನುತ್ತೀರಿ ಮತ್ತು ಬೇರೆ ಏನನ್ನಾದರೂ ಮಾಡುತ್ತೀರಿ ಹಾಗೂ ತಲೆನೋವು ಮಾಯವಾಗುತ್ತದೆ. ನಿಮಗೆ ಅರ್ಥವಾಗುತ್ತಿದೆಯೇ? ಇದು, ಕರ್ಮದ ಬಗ್ಗೆ ಮಾತನಾಡಲು ನಾವು ಉಪಯೋಗಿಸಬಹುದಾದ ಒಂದು ಸರಿಯಾದ ಉದಾಹರಣೆ. ಅದೇ ರೀತಿಯಲ್ಲಿ ಜೀವನದಲ್ಲಿ, ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ನೀವು ತುಂಬಾ ಚಡಪಡಿಕೆಯನ್ನು ಅನುಭವಿಸುತ್ತೀರಿ ಅಥವಾ ನೀವೇನು ಮಾಡಿದರೂ ನಿಮಗೆ ಸಂತೋಷವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನೀವೇನೇ ಮಾಡುತ್ತಿದ್ದರೂ ನೀವು ತುಂಬಾ ಸಂತೋಷವನ್ನು ಅನುಭವಿಸುತ್ತೀರಿ. ಇದು ನಿಮಗಾಗಿಲ್ಲವೇ? ನೀವು ಗಮನಿಸಿದರೆ, ಒಂದು ವರ್ಷದ ಚಕ್ರದಲ್ಲಿ, ಫೆಬ್ರುವರಿಯಲ್ಲಿರಬಹುದು ಅಥವಾ ಡಿಸೆಂಬರ್ ನಲ್ಲಿರಬಹುದು ಅಥವಾ ಜನವರಿಯಲ್ಲಿರಬಹುದು, ಎಲ್ಲೋ ಕೆಲವು ಕಾಲಚಕ್ರದಲ್ಲಿ , ಒಂದು ನಿರ್ದಿಷ್ಟ ವಾರ ಅಥವಾ ಒಂದು ತಿಂಗಳು ಅಥವಾ ಒಂದು ಪಕ್ಷ ನೀವು ದುಃಖವನ್ನನುಭವಿಸುತ್ತೀರಿ ಮತ್ತು ನಂತರ ಒಂದು ನಿರ್ದಿಷ್ಟ ಚಕ್ರದಲ್ಲಿ ನೀವು ತುಂಬಾ ಸಂತೋಷವನ್ನು ಅನುಭವಿಸುತ್ತೀರಿ ಯಾಕೆಂದರೆ, ಮನಸ್ಸು, ಸಮಯ ಮತ್ತು ಕರ್ಮ, ಇವುಗಳೆಲ್ಲಾ ಜೋಡಲ್ಪಟ್ಟಿವೆ. ಆದುದರಿಂದ ಆ ಸಮಯದಲ್ಲಿ ಏನು ಮಾಡಬೇಕು? ಕೇವಲ ಅದನ್ನು ತಿಳಿಯುವುದರಿಂದಲೇ ನೀವು ಅದರಿಂದ ಮೇಲೆತ್ತಲ್ಪಡುತ್ತೀರಿ ಎಂದು ಹೇಳುತ್ತಾರೆ. "ಓಹ್, ಇದು ಫೆಬ್ರುವರಿ, ಪ್ರತಿ ವರ್ಷವೂ ಈ ತಿಂಗಳಿನಲ್ಲಿ ನನಗಿದು ಆಗುತ್ತಾ ಇದೆ. ಹೇಗಿದ್ದರೂ, ನಾನಿದನ್ನು ದಾಟಿ ಹೋಗುತ್ತೇನೆ. ನಾನು ಹೆಚ್ಚು ಧ್ಯಾನ, ಸತ್ಸಂಗಗಳು ಮತ್ತು ಹಾಡುವುದನ್ನು ಮಾಡುತ್ತೇನೆ". ಯೋಗ ಮಾಡುವುದು, ಜ್ಞಾನದ ಚರ್ಚೆಗಳಲ್ಲಿ ಕುಳಿತುಕೊಳ್ಳುವುದು, ಇವುಗಳೆಲ್ಲಾ ಈ ಶಕ್ತಿಯನ್ನು ಬದಲಾಯಿಸುತ್ತವೆ. ಇದೆಲ್ಲಾ ಸಮಯಕ್ಕಿಂತ ಮೇಲಿದೆ ಮತ್ತು ಅದಕ್ಕಾಗಿಯೇ ಸಾಧನೆ - ಯಾವುದು ನಿಜವಾದ ಸಂಪತ್ತು ಎಂದು ಕರೆಯಲ್ಪಡುತ್ತದೋ ಅದು - ನಿಮ್ಮನ್ನು ಆಕಾಶ, ಸಮಯ ಮತ್ತು ಕರ್ಮ ಸಂಕೀರ್ಣದಿಂದ ಮೇಲಕ್ಕೊಯ್ಯುತ್ತದೆ. ಆದುದರಿಂದಲೇ ಸಾಧನೆಯ ಮೂಲಕ ಕರ್ಮವನ್ನು ಕಡಿಮೆ ಮಾಡಬಹುದು, ಸಮಯದ ಕೆಟ್ಟ ಪರಿಣಾಮಗಳನ್ನು ಇಲ್ಲವಾಗಿಸಬಹುದು ಮತ್ತು ನಿಮ್ಮ ಚೈತನ್ಯವನ್ನು ಉದ್ಧರಿಸಬಹುದು. ಅದಕ್ಕಾಗಿಯೇ ಅದು ಸಾಧನೆಯೆಂದು ಕರೆಯಲ್ಪಡುತ್ತದೆ. ಆದರೆ ವಿಷಯವೇನೆಂದರೆ ನೀವು ಅದನ್ನು ಆ ಸಮಯದಲ್ಲಿ ಮಾಡಲು ಬಯಸುವುದಿಲ್ಲ! ನಿಮಗೆ ನಿಜವಾಗಿ ಅದರ ಅಗತ್ಯವಿರುವಾಗ ನೀವು ಅದನ್ನು ಮಾಡಲು ಬಯಸುವುದಿಲ್ಲ. ಇದು ತುಂಬಾ ಸಂಕೀರ್ಣವಾದುದು. ಅದು ಹೇಗೆಂದರೆ, ಒಬ್ಬರಿಗೆ ರೋಗ ಬಂದಿರುತ್ತದೆ ಮತ್ತು ಆ ಸಮಯದಲ್ಲೇ ಅವರು ಔಷಧಿಯನ್ನು ತೆಗೆದುಕೊಳ್ಳಲು ಬಯಸದೆ ಇರುವುದು. ಒಬ್ಬರಿಗೆ ತುಂಬಾ ಛಳಿಯಾಗುತ್ತಿರುತ್ತದೆ ಮತ್ತು ನೀವು ಅವರಿಗೆ ಹೇಳುತ್ತೀರಿ, "ಬಾ, ಇದು ತುಂಬಾ ಒಳ್ಳೆಯ ಉಣ್ಣೆಯ ಜಾಕೆಟ್". ಅವರನ್ನುತ್ತಾರೆ, "ಇಲ್ಲ, ನಾನು ಅದನ್ನು ಧರಿಸಲು ಬಯಸುವುದಿಲ್ಲ, ನನಗೆ ಛಳಿಯಾಗುತ್ತಿದೆ". ಆಗ ನೀವು ಅವರಿಗೆ ಏನು ಹೇಳಲು ಸಾಧ್ಯ?! ಇದು ಕರಾರುವಕ್ಕಾಗಿ ಹೀಗೆಯೇ ಇರುವುದು. ನಮಗೆ ನಿಜವಾಗಿ ಅದರ ಅಗತ್ಯವಿರುವಾಗ, ನಮ್ಮ ಮನಸ್ಸು ತಡೆಯೊಡ್ಡುತ್ತದೆ. ಆದುದರಿಂದ ನಮ್ಮ ಮನಸ್ಸು ನಮ್ಮ ಉತ್ತಮ ಸ್ನೇಹಿತ ಮತ್ತು ಕೆಟ್ಟ ವೈರಿ. ನಿಮಗೆ ಹೊರಗೆ ಯಾವುದೇ ವೈರಿಯಿಲ್ಲ, ಅದು ಕೇವಲ ಇಲ್ಲಿದೆ. ಆದುದರಿಂದ ನಿಮ್ಮದೇ ಮನಸ್ಸಿನೊಂದಿಗೆ ಉತ್ತಮ ಸ್ನೇಹವನ್ನು ಬೆಳೆಸಿಕೊಳ್ಳಿ ಮತ್ತು ಅದನ್ನೇ ನಾವಿಲ್ಲಿ ಮಾಡುತ್ತಿರುವುದು, ಅದಕ್ಕೆ ಹೊಳಪು ಕೊಡುತ್ತಿರುವುದು. ಪ್ರಶ್ನೆ: ನಾನು ಈ ಪಥದಲ್ಲಿ ಹತ್ತು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಇದ್ದೇನೆ ಮತ್ತು ನಾನು ಇದರಿಂದ ತುಂಬಾ ಸಂತೋಷಗೊಂಡಿದ್ದೇನೆ. ಹೀಗೇ ಯೋಚಿಸುತ್ತಿದ್ದೆ, ನಿಜವಾಗಿ ತುಂಬಾ ಸಮಯ ಇರುವಂತೆ ತೋರುವ ತಡೆಗಳನ್ನು ಏನು ಮಾಡುವುದು? ನನ್ನ ಕೆಳ ಚಕ್ರದಲ್ಲಿನ ಶಕ್ತಿಯು ಕಡಿಮೆಯಿದೆ. ವಿಷಯಗಳು ಒಳ್ಳೆಯದಾಗಲು ಇನ್ನೂ ಅವಕಾಶವಿದೆಯೇ? ಶ್ರೀ ಶ್ರೀ ರವಿಶಂಕರ್: ಹೌದು, ಖಂಡಿತವಾಗಿ. ನೀನು ಸಂತೋಷವಾಗಿದ್ದರೆ, ಆಗ ವಿಷಯಗಳು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತಿದೆ. ಕೆಳಗಿನ ಚಕ್ರವು ಹೆಚ್ಚು ಸಕ್ರಿಯವಾಗುವುದರ ಬಗ್ಗೆ ಚಿಂತಿಸಬೇಡ. ಅದನ್ನು ಹೆಚ್ಚು ಸಕ್ರಿಯವಾಗಿಸಲು ಯಾಕೆ ಬಯಸುತ್ತೀಯಾ? ಸುಮ್ಮನೇ ಅದನ್ನು ಹಾಗೇ ಇರಲು ಬಿಡು, ಅದನ್ನು ಪ್ರಕೃತಿಗೆ ನೋಡಿಕೊಳ್ಳಲು ಬಿಡು. ಪ್ರಶ್ನೆ: ನಾವು ಜೀವನ ಕಲೆಯಲ್ಲಿ ಮಾಡುತ್ತಿರುವುದೆಲ್ಲವೂ, ಎಚ್ಚೆತ್ತು ಸಾಕ್ಷಾತ್ಕಾರ ಪಡೆದುಕೊಳ್ಳಲಿರುವುದೇ ಅಥವಾ ಕೇವಲ ಹಿತವನ್ನನುಭವಿಸಲೇ? ವೈಯಕ್ತಿಕವಾಗಿ, ನಾನು ಎಚ್ಚೆತ್ತುಕೊಳ್ಳಲು ಇಷ್ಟ ಪಡುತ್ತೇನೆ. ಶ್ರೀ ಶ್ರೀ ರವಿಶಂಕರ್: ಇಲ್ಲಿ, ಇದೊಂದು ಸಮುದ್ರವಿದ್ದಂತೆ, ಎಲ್ಲವೂ ಲಭ್ಯವಿದೆ. ನೀನು ಕೇವಲ ಸಮುದ್ರ ತೀರದಲ್ಲಿ ನಡೆಯಲು ಬಯಸಿದರೆ, ನಿನಗೆ ಸ್ವಾಗತ. ನೀನು ಆಳಕ್ಕೆ ಹೋಗಿ ಎಣ್ಣೆಯನ್ನು ಹುಡುಕಲು ಬಯಸಿದರೆ, ಅದೂ ಲಭ್ಯವಿದೆ. ಈ ಪಥವು ಒಂದು ಸಮುದ್ರದಂತೆ, ನೀವು ಉಪ್ಪನ್ನು ತೆಗೆದುಕೊಳ್ಳಬಹುದು, ನೀವು ಎಣ್ಣೆಯನ್ನು ತೆಗೆದುಕೊಳ್ಳಬಹುದು, ನೀವು ಮೀನು ಹಿಡಿಯಲು ಹೋಗಬಹುದು ಮತ್ತು ನೀವು ದಶಲಕ್ಷ ಕಾರಣಗಳಿಗಾಗಿ ಹೋಗಬಹುದು. ಖಂಡಿತವಾಗಿ, ಆತ್ಮ ಸಾಕ್ಷಾತ್ಕಾರವು ತಳದಲ್ಲಿದೆ. ನೀನು ಅದನ್ನು ಪಡೆಯಲು ಬಯಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಜನರು ಅದನ್ನು ಪಡೆಯಲು ಹೋಗಬೇಕೆಂದು ನಾನು ಬಯಸುತ್ತೇನೆ. ನಿನಗೆ ಇದು ಬೇಕೆಂಬ ಬಯಕೆಯಿರುವುದು ನನಗೆ ತುಂಬಾ ಇಷ್ಟವಾಗಿದೆ; ನೀನು ಇಲ್ಲಿರುವುದು ಕೇವಲ ಸೌಕರ್ಯಕ್ಕಾಗಿಯಲ್ಲ. ಅದು ತುಂಬಾ ಒಳ್ಳೆಯದು. ಬನ್ನಿ, ನಮಗೆ ಮಾಡಲು ತುಂಬಾ ಕೆಲಸಗಳಿವೆ.