ಗುರುವಾರ, ಮಾರ್ಚ್ 13, 2014

ಏಳು ಅಂಶದ ಆರ್ಥಿಕ ಪ್ರಗತಿ

ಮಾರ್ಚ್ ೧೩, ೨೦೧೪
ಅಲಾಹಾಬಾದ್, ಉತ್ತರ ಪ್ರದೇಶ

ಸಂಗಮದ (ಗಂಗಾ, ಯಮುನಾ ಮತ್ತು ಸರಸ್ವತಿ - ಈ ಮೂರು ಪವಿತ್ರ ನದಿಗಳು ಸೇರುವ ಸ್ಥಳವಾದ, ಅಲಾಹಾಬಾದ್‌ ನಗರದಲ್ಲಿನ ಜಾಗದ ಹೆಸರು) ನಗರವು, ಭಕ್ತಿ, ಜ್ಞಾನ ಮತ್ತು ಕರ್ಮಗಳ ಒಂದು ಸಂಗಮಕ್ಕೆ ಸಾಕ್ಷಿಯಾಗುತ್ತಿದೆ.

ನಾವೆಲ್ಲರೂ ಜೊತೆಯಲ್ಲಿ ಹಾಡುವಾಗ ಎಷ್ಟು ಅದ್ಭುತವಾಗಿರುತ್ತದೆ, ಅಲ್ಲವೇ? ಸಂಸ್ಕೃತದಲ್ಲಿ ಒಂದು ಮಾತಿದೆ: ’ಶಬ್ದ ಬ್ರಹ್ಮಣೆ ನಿಷ್ಣಾತ ಪರಬ್ರಹ್ಮಾದಿ ಗಚ್ಛತಿ’ (ಪವಿತ್ರ ಗ್ರಂಥವಾದ ’ಶತಪಥ ಬ್ರಾಹ್ಮಣ’ದಿಂದ. ’ಶಬ್ದಬ್ರಹ್ಮ’ ಎಂದರೆ, ಸೃಷ್ಟಿಯ ಆದಿಸ್ವರೂಪದ, ಅತೀಂದ್ರಿಯ ಶಬ್ದವಾಗಿದೆ. ಅಕ್ಷರಶಃ ಅರ್ಥವೆಂದರೆ, ಎಲ್ಲದರ ಮೂಲ ಎಂದು.)
ಇದರರ್ಥವೇನೆಂದರೆ, ಶಬ್ದ ಬ್ರಹ್ಮ(ಓಂ)ನಲ್ಲಿ ಸಂಪೂರ್ಣವಾಗಿ ಮುಳುಗಿರುವವನೊಬ್ಬನು ಅನಾಯಾಸವಾಗಿ ಪರಬ್ರಹ್ಮನನ್ನು(ಸರ್ವೋಚ್ಚವಾದ, ಎಲ್ಲಾ ಕಡೆ ವ್ಯಾಪಿಸಿರುವ ಏಕ ಚೇತನ) ಪಡೆಯುತ್ತಾನೆ.

ಹೀಗಾಗಿ, ಯಾವಾಗೆಲ್ಲಾ ಭಜನೆಗಳನ್ನು ಹಾಡಲಾಗುತ್ತವೆಯೋ ಮತ್ತು ಕೀರ್ತನೆಗಳು ಆಗುತ್ತಿರುತ್ತವೋ, ಆಗ ನಾವು ಸೇರಿಕೊಂಡು ತುಂಬು ಹೃದಯದಿಂದ ಹಾಡಬೇಕು. ಅಷ್ಟೊಂದು ಸಂಪೂರ್ಣವಾಗಿ ತನ್ಮಯರಾಗಿರುವುದರಿಂದ ನಮ್ಮೆಲ್ಲಾ ಚಿಂತೆಗಳು ಮತ್ತು ದುಃಖಗಳು ಮಾಯವಾಗುತ್ತವೆ, ಜೀವನದಲ್ಲಿರುವ ಯಾವುದೇ ಅಸಾಮರಸ್ಯ ಇಲ್ಲವಾಗುತ್ತದೆ ಮತ್ತು ಜೀವನವು ಮತ್ತೆ ಆನಂದ ಹಾಗೂ ಸಾಮರಸ್ಯಗಳಿಂದ ತುಂಬುತ್ತದೆ.

ಜೀವನದಲ್ಲಿ ಅಸಾಮರಸ್ಯ ಇರುವುದು ಯಾಕೆಂದರೆ, ಒತ್ತಡ, ಚಡಪಡಿಕೆ ಮತ್ತು ಮನಸ್ಸಿನಲ್ಲಿರುವ ರಾಗ-ದ್ವೇಷಗಳಿಂದಾಗಿ ಬರುವ ಜ್ವರತೆಗಳಿಂದಾಗಿ. ಈ ನಕಾರಾತ್ಮಕತೆಗಳಿಂದ ಮುಕ್ತರಾಗಲು ನಾವೆಲ್ಲರೂ ಪ್ರತಿದಿನವೂ ಕೆಲವು ನಿಮಿಷಗಳ ಕಾಲ ಅದ್ಭುತವಾದ ಸಂಗೀತವನ್ನು ಆಲಿಸಬೇಕು. ನಾವೆಲ್ಲರೂ ಹಾಡಬೇಕು, ನಮಗೆ ಸರಿಯಾಗಿ ಹಾಡಲು ತಿಳಿದಿದ್ದರೂ ಅಥವಾ ಇಲ್ಲವಾದರೂ; ಅದೇನು ಪರವಾಗಿಲ್ಲ.

ಇವತ್ತು ಇಂತಹ ಒಂದು ಅದ್ಭುತವಾದ ಪ್ರದರ್ಶನವನ್ನು ನೀಡಿದ, ಇಲ್ಲಿ ಕುಳಿತಿರುವ ಯುವಜನರನ್ನು ನಾವೆಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸಿಸಬೇಕು. ಅವರು ಬೆಳೆದು ದೊಡ್ಡವರಾಗುವಾಗ, ತಮ್ಮ ಪ್ರತಿಭೆಯಿಂದ ಈ ದೇಶ ಹೆಮ್ಮೆ ಪಡುವಂತೆ ಮಾಡುವರು. ನಮ್ಮ ದೇಶದ ಶಾಸ್ತ್ರೀಯ ಸಂಗೀತಕ್ಕೆ ಅವರು ಮಹತ್ತರವಾದ ವೈಭವವನ್ನು ತರುವರು. ಇದನ್ನು ನೋಡಲು ನನಗೆ ನಿಜಕ್ಕೂ ಸಂತೋಷವಾಗುತ್ತಿದೆ.

ಭಾರತವು ಏಳು ಮಹತ್ತರವಾದ ಹಾಗೂ ಸರಿಸಾಟಿಯಿಲ್ಲದ ಸಂಪ್ರದಾಯಗಳಿಗೆ ತವರಾಗಿದೆ. ಅವುಗಳು ಯಾವುವು?
ಮೊತ್ತಮೊದಲನೆಯದು, ಭಾರತದ ಆಧ್ಯಾತ್ಮ. ಜನರ ಹೃದಯವನ್ನು ಗೆಲ್ಲಬಲ್ಲ ಹಾಗೂ ಅವರು ಒಳಗಿನಿಂದ ಅರಳುವಂತೆ ಮಾಡಬಲ್ಲ, ಇಂತಹ ಅಗಾಧವಾದ ಹಾಗೂ ಆಳವಾದ ಆಧ್ಯಾತ್ಮಿಕತೆಯು ನಿಮಗೆ ಪ್ರಪಂಚದಲ್ಲಿ ಬೇರೆಲ್ಲೂ ಕಾಣಸಿಗದು. ಜೀವನವನ್ನು ಅಷ್ಟೊಂದು ಸಂಪೂರ್ಣವಾಗಿ ಪರಿವರ್ತಿಸಲು ಸಾಧ್ಯವಾಗುವ ಇಂತಹ ಅನನ್ಯ ಗುಣವು ಕೇವಲ ಭಾರತೀಯ ಆಧ್ಯಾತ್ಮಿಕತೆಗೆ ಮಾತ್ರ ಸೇರುತ್ತದೆ. ಭಾರತವು ಇದರ ಬಗ್ಗೆ ಬಹಳ ಹೆಮ್ಮೆ ಪಡಬೇಕು. ಭಾರತೀಯ ಆಧ್ಯಾತ್ಮಿಕತೆಯು ಎಲ್ಲವನ್ನೂ ಒಳಗೊಂಡಿದೆ; ಯೋಗ, ವೇದಾಂತ ತತ್ವಶಾಸ್ತ್ರ, ಮೊದಲಾದಂತಹವು.

ಎರಡನೆಯದು ಭಾರತೀಯ ಆಯುರ್ವೇದ. ೨೧ನೆಯ ಶತಮಾನದ ಔಷಧೀಯ ಪದ್ಧತಿಗಳು ಮಸುಕಾಗಲು ತೊಡಗಿವೆ. ಇನ್ನೊಂದು ಕಡೆಯಲ್ಲಿ, ಭಾರತೀಯ ಆಯುರ್ವೇದವು ಎಂತಹ ಒಂದು ಅನನ್ಯವಾದ ಪದ್ಧತಿಯೆಂದರೆ, ಅದರಲ್ಲಿ ಔಷಧಿಗಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲ ಮತ್ತು ಕೇವಲ ಒಬ್ಬರ ಆರೋಗ್ಯ ಹಾಗೂ ಒಟ್ಟು ಯೋಗಕ್ಷೇಮವನ್ನು ಸಂರಕ್ಷಿಸಲು ಹಾಗೂ ವರ್ಧಿಸಲು ಮಾತ್ರ ಕೆಲಸ ಮಾಡುತ್ತವೆ.

ಇವತ್ತು ಜಗತ್ತಿನಾದ್ಯಂತ ಯೋಗ ಮತ್ತು ಆಧ್ಯಾತ್ಮಿಕತೆಗಳಿಗೆ ಪ್ರಚಂಡವಾದ ಗೌರವವನ್ನು ನೀಡಲಾಗುತ್ತದೆ. ರಾಷ್ಟ್ರಭೇದವಿಲ್ಲದೆ, ಎಲ್ಲೆಡೆಯಿರುವ ಜನರು ಯೋಗವನ್ನು ತಮ್ಮ ಜೀವನದಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಿದ್ದಾರೆ ಮತ್ತು ಒಂದಾಗಿಸುತ್ತಿದ್ದಾರೆ.

ನೀವು ನೋರ್ವೇಯಲ್ಲಿನ ಟ್ರೋಮ್ಸೆ ಎಂಬ ನಗರಕ್ಕೆ ಹೋದರೆ, ಅದು ದೇಶದ ಕೊನೆಯ ಜಾಗವಾಗಿದೆ, ಅದು ಆರ್ಕ್ಟಿಕ್ ವೃತ್ತಕ್ಕೆ ಅತ್ಯಂತ ಸಮೀಪದಲ್ಲಿದೆ. ಅಲ್ಲಿ ಒಂದು ವರ್ಷದಲ್ಲಿ ಕೇವಲ ಎರಡು ತಿಂಗಳುಗಳಷ್ಟು ಕಾಲ ಮಾತ್ರ ಸೂರ್ಯನು ಪ್ರಕಾಶಿಸುವುದು. ಆದರೆ ಅಲ್ಲಿ ಕೂಡಾ, ಜನರು ಪ್ರಾಣಾಯಾಮವನ್ನು ಅಭ್ಯಸಿಸುತ್ತಿದ್ದಾರೆ ಮತ್ತು ಧ್ಯಾನ ಮಾಡುತ್ತಿದ್ದಾರೆ. ಅಂತಹ ದೂರದ ಜಾಗದಲ್ಲಿ ಕೂಡಾ ’ಓಂ ನಮಃ ಶಿವಾಯ’ ಮಂತ್ರೋಚ್ಛಾರಣೆಗಳು ಅನುರಣಿಸುತ್ತಿವೆ.

ಅದೇ ರೀತಿಯಲ್ಲಿ, ಭೂಮಿಯ ದಕ್ಷಿಣ ಗೋಳಾರ್ಧದಲ್ಲಿ ಕಡೆಯ ನಗರವಾಗಿದೆ ಟಿಯೆರಾ ಡೆಲ್ ಫಿಗೋ. ಅದರ ನಂತರ ಅಂಟಾರ್ಕ್ಟಿಕ್ ವೃತ್ತವು ಪ್ರಾರಂಭವಾಗುತ್ತದೆ; ಅಲ್ಲಿ ಕೂಡಾ ’ಓಂ ನಮಃ ಶಿವಾಯ’ವನ್ನು ಉಚ್ಛರಿಸಲು ಮತ್ತು ಸುದರ್ಶನ ಕ್ರಿಯೆಯನ್ನು ಅಭ್ಯಾಸ ಮಾಡಲು ಸಾವಿರಾರು ಜನರು ಒಟ್ಟುಸೇರಿರುವುದು ನಿಮಗೆ ಕಾಣಿಸುತ್ತದೆ. ಇದು ಪ್ರಪಂಚಕ್ಕೆ ಭಾರತದ ಕೊಡುಗೆಯಾಗಿದೆ.

ಪ್ರಪಂಚದಲ್ಲಿ ಪ್ರತಿಯೊಂದು ಮನೆಯಲ್ಲೂ ಭಾರತವು ತನಗಾಗಿ ಒಂದು ಸ್ಥಾನವನ್ನು ಮಾಡಿಕೊಂಡಿದೆ (ಭಾರತೀಯ ಆಧ್ಯಾತ್ಮಿಕತೆಯ ಕಾರಣದಿಂದ). ನಮ್ಮ ಋಷಿಗಳು ಹೀಗೆಂದು ಹೇಳಿದ್ದಾರೆ, ’ಕೃಣವಂತೋ ವಿಶ್ವಂ ಆರ್ಯಂ’. ಇದರರ್ಥ, ’ನಾವು ಬೆಳೆಯುವೆವು ಮತ್ತು ವೈಭವದಿಂದ ಪ್ರಪಂಚದ ಮೂಲಕ ಹರಡುವೆವು.’ ಅವರ ಕನಸು ಇವತ್ತು ನನಸಾಗಿ ಮಾರ್ಪಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ.

ಮೂರನೆಯ ಉಜ್ವಲವಾದ ಪದ್ಧತಿಯೆಂದರೆ ನಮ್ಮ ಭಾರತೀಯ ಸಂಗೀತ. ಭಾರತವು ಹಲವಾರು ವಿವಿಧ ರೀತಿಗಳ ಮತ್ತು ಶಾಖೆಗಳ ಸಂಗೀತಕ್ಕೆ ತವರಾಗಿದೆ. ಸಂಗೀತ ಮತ್ತು ನೃತ್ಯಗಳಲ್ಲಿ ಇಂತಹ ಒಂದು ಶ್ರೀಮಂತ ವೈವಿಧ್ಯತೆಯು ನಿಮಗೆ ಪ್ರಪಂಚದಲ್ಲಿ ಬೇರೆಲ್ಲೂ ಕೂಡಾ ಕಂಡುಬರದು.

ಅನಾದಿ ಕಾಲದಿಂದಲೂ ನಾವು ಸಂಗೀತ ಮತ್ತು ನೃತ್ಯಗಳನ್ನು ನಮ್ಮ ಸಂಸ್ಕೃತಿಯ ಮತ್ತು ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದೇವೆ. ಸರಸ್ವತಿ ದೇವಿಯು ತನ್ನ ವೀಣೆಯಿಂದ ದೈವಿಕ ನುಡಿಗಳನ್ನು ಬಾರಿಸಿದಾಗ ಭಗವಾನ್ ಶಿವನೇ ತಾಂಡವವನ್ನಾಡಿದನು. ಭಗವಂತನು ಆನಂದಪರವಶನಾಗಿ ನರ್ತಿಸುವುದನ್ನು ನೋಡಿ, ನಂದಿ, ಭೃಂಗಿಯರಂತಹ ಅವನ ಭಕ್ತರೂ ಕೂಡಾ ನರ್ತಿಸಲು ಪ್ರಾರಂಭಿಸಿದರು. ಹೀಗೆ, ನಮ್ಮ ಸಂಸ್ಕೃತಿಯಲ್ಲಿ ಸಂಗೀತಕ್ಕೆ ಯಾವತ್ತೂ ಒಂದು ಬಹಳ ಮುಖ್ಯವಾದ ಸ್ಥಾನವನ್ನು ಕೊಡಲಾಗಿದೆ.

ಭಾರತದ ನಾಲ್ಕನೆಯ ಮಹಾನ್ ಪದ್ಧತಿಯೆಂದರೆ ನಮ್ಮ ಭಾರತೀಯ ಆಹಾರ ಮತ್ತು ಅಡುಗೆಯ ಶೈಲಿಗಳು. ದೇಶದುದ್ದಕ್ಕೂ ನಾವು ಅಷ್ಟೊಂದು ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತೇವೆ. ಕೆಲವು ವರ್ಷಗಳ ಹಿಂದೆ ಅಹಮದಾಬಾದ್‌ನಲ್ಲಿ, ಅನ್ನಂಬ್ರಹ್ಮಂ ಎಂಬ ಒಂದು ನಮ್ಮ ಕಾರ್ಯಕ್ರಮವಿತ್ತು. ಅದು ಭಾರತೀಯ ಆಹಾರದ ವೈವಿಧ್ಯತೆಯ ಒಂದು ಆಚರಣೆಯಾಗಿತ್ತು. ಕಾರ್ಯಕ್ರಮಕ್ಕಾಗಿ ಸುಮಾರು ೫೭೦೦ ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಆ ಖಾದ್ಯಗಳನ್ನು ತಯಾರಿಸಲು ನಮ್ಮ ಸ್ವಯಂಸೇವಕರಿಂದ ೨೬೫ ಅಡುಗೆಮನೆಗಳಲ್ಲಿ, ಏಳು ಟನ್ನುಗಳಷ್ಟು ಆಹಾರ ಪದಾರ್ಥಗಳು ಮತ್ತು ಧವಸ ಧಾನ್ಯಗಳನ್ನು ಬಳಸಲಾಗಿತ್ತು. ಪ್ರಪಂಚದಲ್ಲೆಲ್ಲೂ ಯಾರೂ ಅಷ್ಟೊಂದು ಸಂಖ್ಯೆಯ ಖಾದ್ಯಗಳ ಬಗ್ಗೆ ಕೇಳಿರಲಿಕ್ಕೂ ಇಲ್ಲ.

ಇದು ಭಾರತದ ಒಂದು ವಿಶೇಷತೆಯಾಗಿದೆ. ಈ ದಿನಗಳಲ್ಲಿ ನಾವೇನು ಮಾಡುತ್ತಿರುವೆವು ಎಂಬುದು ನಿಮಗೆ ಗೊತ್ತೇ? ಈ ದಿನಗಳಲ್ಲಿ ನಾವು ಪಿಡ್ಝಾ ಹಟ್‌ಗೆ ಹೋಗುವುದಕ್ಕೆ ಆದ್ಯತೆ ಕೊಡುತ್ತೇವೆ. ಆಹಾರದಲ್ಲಿನ ನಮ್ಮ ಶ್ರೀಮಂತ ಪರಂಪರೆಯನ್ನು ನಾವು ಮರೆತುಬಿಟ್ಟಿದ್ದೇವೆ. ಪಿಡ್ಝಾದ ಕಥೆಯು ನಿಮಗೆ ಗೊತ್ತೇ? ಪಿಡ್ಝಾವು ಹೇಗೆ ಹುಟ್ಟಿಕೊಂಡಿತು ಎಂಬುದು ನಿಮಗೆ ಗೊತ್ತೇ? ಇಟೆಲಿಯಲ್ಲಿ ಅವರು, ಉಳಿದ ಎಲ್ಲಾ ಹಿಟ್ಟು ಮತ್ತು ತರಕಾರಿಗಳನ್ನು ಉಪಯೋಗಿಸಿ ಪಿಡ್ಝಾವನ್ನು ಮಾಡಿದರು. ಇಟೆಲಿಯಲ್ಲಿನ ಜನರು, ತಮ್ಮ ಊಟವನ್ನು ಮುಗಿಸಿದ ಬಳಿಕ ಕೆಲಸದವರಿಗೆ ಪಿಡ್ಝಾವನ್ನು ಆಹಾರವಾಗಿ ನೀಡುತ್ತಿದ್ದರು.

ನಮ್ಮದೇ ದೇಶಕ್ಕೆ ಸೇರಿರುವ ಆಹಾರದ ಶ್ರೀಮಂತ ವೈವಿಧ್ಯತೆಗಳನ್ನು ನಾವು ಮರೆತುಬಿಟ್ಟಿದ್ದೇವೆ. ನಮ್ಮ ಹೊಟ್ಟೆ ಮತ್ತು ಕರುಳುಗಳಿಗೆ ತೊಂದರೆಯನ್ನುಂಟುಮಾಡುವ ಮೈದಾದಿಂದ ಮಾಡಲ್ಪಟ್ಟಿರುವ ಪಿಡ್ಝಾಗಳಂತಹ ಆಹಾರ ಪದಾರ್ಥಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ.

ನೀವು ತ್ರಿಪುರಕ್ಕೆ ಹೋದರೆ, ಅಲ್ಲಿ ತಯಾರಿಸಲಾಗುವ ಆಹಾರ ಪದಾರ್ಥಗಳ ವೈವಿಧ್ಯತೆಯನ್ನು ನೋಡಿ ನೀವು ಅಚ್ಚರಿಪಡುವಿರಿ. ಇವತ್ತು ಮೂರು ರಾಜ್ಯಗಳಲ್ಲಿ ಪ್ರವಾಸ ಮಾಡಿದ ಬಳಿಕ ನಾನು ಇಲ್ಲಿಗೆ ಬಂದಿದ್ದೇನೆ. ಬೆಳಗ್ಗೆ ನಾನು ಬಿಹಾರ್ ರಾಜ್ಯದ ಬೋಧ್ ಗಯಾ ನಗರವನ್ನು ಸಂದರ್ಶಿಸಿದೆ. ಮಧ್ಯಾಹ್ನ ನಾನು ಪಶ್ಚಿಮ ಬಂಗಾಳದಲ್ಲಿದ್ದೆ ಮತ್ತು ಈಗ ಸಂಜೆ ನಾನು ಉತ್ತರ ಪ್ರದೇಶಕ್ಕೆ ಬಂದಿದ್ದೇನೆ. ಪ್ರತಿಯೊಂದು ಪ್ರಾಂತ್ಯವೂ ವೈವಿಧ್ಯಮಯ ಆಹಾರ ಖಾದ್ಯಗಳನ್ನು ಹೊಂದಿದೆ. ಆಹಾರದಲ್ಲಿನ ಈ ವೈವಿಧ್ಯತೆಯು ನಮ್ಮ ಸಾಂಸ್ಕೃತಿಕ ಗುರುತಿನ ಒಂದು ಅನನ್ಯ ಭಾಗವಾಗಿದೆ ಮತ್ತು ನಾವದನ್ನು ಪ್ರಚಾರಗೊಳಿಸಬೇಕು.
ಭಾರತದ ಐದನೆಯ ಮಹತ್ತರವಾದ ಪದ್ಧತಿಯೆಂದರೆ, ಭಾರತೀಯ ವಸ್ತ್ರ ಮತ್ತು ಪೋಷಾಕಿನ ವೈವಿಧ್ಯತೆ.

ನೀವು ವಿದೇಶಕ್ಕೆ ಹೋದರೆ, ಜನರು ಧರಿಸುವ ಬಟ್ಟೆಗಳು ಸಾಮಾನ್ಯವಾಗಿ, ಯಾವುದೇ ವೈವಿಧ್ಯತೆಯಿಲ್ಲದೆ, ಒಂದೇ ಅಥವಾ ಸುಮಾರಾಗಿ ಒಂದೇ ರೀತಿಯ ಬಣ್ಣಗಳದ್ದು ಎಂಬುದು ನಿಮಗೆ ಕಾಣಿಸುತ್ತದೆ; ಆದರೆ ಭಾರತದಲ್ಲಿ, ಬಹಳಷ್ಟು ವೈವಿಧ್ಯಮಯ ಬಟ್ಟೆಗಳು ಮತ್ತು ಉಡುಪಿನ ಶೈಲಿಗಳನ್ನು, ಹಾಗೂ ಅವುಗಳೊಂದಿಗೆ ಧರಿಸಲಾಗುವ ವಿವಿಧ ಆಭರಣಗಳು ಮತ್ತು ಉಪಸಾಧನಗಳನ್ನು ಕೂಡಾ ನೀವು ಕಾಣಬಹುದು. ಯುಗಗಳಿಂದ ಇದು ರೂಢಿಯಲ್ಲಿದೆ.

ಭಾರತೀಯ ದೇವಾಲಯಗಳಲ್ಲಿರುವ ಪ್ರತಿಮೆಗಳು ಕೂಡಾ ಶೃಂಗರಿಸಲ್ಪಡುತ್ತವೆ- ಪ್ರತಿದಿನವೂ ಅವುಗಳಿಗೆ ಬಹಳ ಸುಂದರವಾಗಿ ಉಡುಪು ತೊಡಿಸಿ ಅಲಂಕರಿಸಲಾಗುತ್ತದೆ. ಈ ಗುಣ ಮತ್ತು ಸಂಪ್ರದಾಯಗಳು ಹಲವಾರು ಯುಗಗಳಿಂದ ನಮ್ಮ ಸಂಸ್ಕೃತಿಯ ಇನ್ನೊಂದು ಮುಖ್ಯವಾದ ಭಾಗವಾಗಿದೆ.

ಮುಂದಿನದೆಂದರೆ, ಭಾರತೀಯ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ವೃತ್ತಿಯು ಭಾರತದಲ್ಲಿ; ವಿಶೇಷವಾಗಿ ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದಾಗ; ಅಷ್ಟೊಂದು ಚೆನ್ನಾಗಿ ಯಾಕೆ ಬೆಳೆಯಿತು ಎಂಬುದನ್ನು ತಿಳಿಯಲು ಲಂಡನ್ನಿನ ಸಂಶೋಧಕರಿಂದ ಇತ್ತೀಚೆಗೆ ಒಂದು ಅಧ್ಯಯನವನ್ನು ನಡೆಸಲಾಯಿತು. ಭಾರತೀಯ ಭಾಷೆಗಳ ಬೇರುಗಳು ಸಂಸ್ಕೃತದಲ್ಲಿವೆ ಎಂಬುದನ್ನು ಅವರು ಕಂಡುಹಿಡಿದರು. ನಂತರ ಅವರು ಸಂಸ್ಕೃತ ಭಾಷೆಯನ್ನು ಆಳವಾಗಿ ಪರೀಕ್ಷಿಸಿದರು ಮತ್ತು ಅಧ್ಯಯನ ನಡೆಸಿದರು. ನಮ್ಮ ಮೆದುಳಿನ ನರ-ಭಾಷಾಧ್ಯಯನ (ನ್ಯೂರೋ-ಲಿಂಗ್ವಿಸ್ಟಿಕ್) ಕ್ರಿಯೆಗೆ ಒಂದು ಭಾಷೆಯಾಗಿ ಸಂಸ್ಕೃತವು ಅತ್ಯಂತ ಹೆಚ್ಚು ಸಹಾಯಕ ಎಂಬುದಾಗಿ ಅವರು ಕಂಡುಹಿಡಿದರು. ಮೆದುಳಿನ ನರ-ಭಾಷಾ ಅಂಗಗಳು ಚೆನ್ನಾಗಿ ಬೆಳೆಯಲು ಮತ್ತು ಮಾಹಿತಿಗಳನ್ನು ವೇಗವಾಗಿ ಹಾಗೂ ಸರಿಯಾಗಿ  ಗ್ರಹಿಸಲು ಸಂಸ್ಕೃತವು ಅನುಮತಿಸುತ್ತದೆ.

ಹೀಗೆ, ಈ ಸಂಶೋಧನೆ ನಡೆದು ೨೦ ವರ್ಷಗಳ ಬಳಿಕ, ಇಂಗ್ಲೇಂಡ್‌ನಲ್ಲಿ ಮೂರು ಶಾಲೆಗಳಲ್ಲಿ ಅವರು ಸಂಸ್ಕೃತವನ್ನು ಒಂದು ಕಡ್ಡಾಯವಾದ ವಿಷಯವನ್ನಾಗಿ ಮಾಡಿದ್ದಾರೆ. ನೀವು ಇದರ ಬಗ್ಗೆ ಕೇಳಿರಬೇಕು; ಅಥವಾ ವಾರ್ತಾಪತ್ರಿಕೆಗಳಲ್ಲಿ ಇದರ ಬಗ್ಗೆ ಓದಿರಬೇಕು. ಕಂಪ್ಯೂಟರ್‌ಗಳನ್ನು ಪ್ರೋಗ್ರಾಮ್ ಮಾಡಲು ಸಂಸ್ಕೃತವು ಅತ್ಯಂತ ಸೂಕ್ತ ಭಾಷೆಯೆಂಬುದಾಗಿ ಕಂಡುಹಿಡಿಯಲ್ಪಟ್ಟಿದೆ, ಮತ್ತು ನಮ್ಮೆಲ್ಲಾ ಭಾರತೀಯ ಭಾಷೆಗಳು ಸಂಸ್ಕೃತವನ್ನು ಆಧರಿಸಿವೆ. ನಾವು ಸಂಸ್ಕೃತವನ್ನು ಅಥವಾ ನಮ್ಮ ಭಾರತೀಯ ಭಾಷೆಗಳಲ್ಲಿ ಯಾವುದನ್ನಾದರೂ ಮಾತನಾಡುವಾಗ, ಮೆದುಳಿನ ನರ-ಭಾಷಾಧ್ಯಯನ ಕ್ರಿಯೆಗಳು ಕೂಡಾ ಸಮರಸವಾಗಿ ಪ್ರತಿಕ್ರಿಯಿಸುತ್ತವೆ ಮತ್ತು ಬೆಳವಣಿಗೆ ಹೊಂದುತ್ತವೆ. ಇದನ್ನೇ ಇಂದಿನ ವಿಜ್ಞಾನಿಗಳು ಹೇಳಿರುವುದು.

ಭಾರತೀಯ ಪ್ರವಾಸೋದ್ಯಮವು ಭಾರತದ ಸಂಪ್ರದಾಯದ ಏಳನೆಯ ಮಹತ್ತರವಾದ ಅಂಶವಾಗಿದೆ. ಭಾರತದಲ್ಲಿ ಸಂದರ್ಶಿಸಲು ಒಬ್ಬರಿಗೆ ಸಿಗಬಹುದಾದ ಪ್ರವಾಸಿ ತಾಣಗಳ ಬೃಹತ್ ಸಂಖ್ಯೆಯೊಂದಿಗೆ ಪ್ರಪಂಚದ ಇತರ ಯಾವುದೇ ದೇಶಕ್ಕೆ ಸ್ಪರ್ಧಿಸಲು ಸಾಧ್ಯವಿಲ್ಲ. ಒಮ್ಮೆ, ಆರ್ಟ್ ಆಫ್ ಲಿವಿಂಗ್‌ನ ಒಂದು ಕಾರ್ಯಕ್ರಮದ ಮುಕ್ತಾಯವಾದ ಬಳಿಕ ನಾನು ಗ್ರೀಸ್‌ನ ಒಂದು ಪ್ರವಾಸಕ್ಕೆ ಹೋದೆ. ಭಾರತದಿಂದಲೂ ಕೆಲವರು ಅಲ್ಲಿ ನನ್ನ ಜೊತೆಗಿದ್ದರು. ಅವರು ನನ್ನಲ್ಲಿ ಹೀಗೆಂದು ಹೇಳಿದರು, "ಗುರುದೇವ, ಇಲ್ಲಿ ನೋಡಲಿರುವುದು ಸ್ವಲ್ಪ ಮಾತ್ರ; ಈ ದೊಡ್ಡ ಕಲ್ಲಿನ ಕಂಬಗಳು ಮಾತ್ರ. ಆದರೂ ಇಡೀ ಪ್ರಪಂಚವೇ ಅವುಗಳನ್ನು ನೋಡಲು ಹಿಂಡು ಹಿಂಡಾಗಿ ಬರುತ್ತದೆ. ನಮ್ಮದೇ ದೇಶದಲ್ಲಿ ನೋಡಲು ಎಷ್ಟೋ ಹೆಚ್ಚಿದೆ." ಆದರೆ ದುರದೃಷ್ಟವಶಾತ್ ನಮ್ಮ ದೇಶದ ಪ್ರವಾಸಿ ತಾಣಗಳನ್ನು ಮತ್ತು ಪರಂಪರೆಯನ್ನು ನಾವೊಂದು ಸರಿಯಾದ ರೀತಿಯಲ್ಲಿ ಪ್ರಪಂಚದ ಮುಂದಿಟ್ಟಿಲ್ಲ ಮತ್ತು ಪ್ರಚಾರ ಮಾಡಿಲ್ಲ.

ಗ್ರೀಸ್ ಒಂದು ಚಿಕ್ಕ ದೇಶವಾಗಿದೆ, ಮತ್ತು ಹಾಗಿದ್ದರೂ ಅದರ ಪರಂಪರೆಯ ಸ್ಥಳಗಳನ್ನು ಮತ್ತು ಪ್ರವಾಸಿ ತಾಣಗಳನ್ನು ನೋಡಲು ಸುಮಾರು ೧೨ ದಶಲಕ್ಷ ಜನರು ಗ್ರೀಸಿಗೆ ಪ್ರಯಾಣಿಸುತ್ತಾರೆ; ಅದೇ ವೇಳೆಗೆ, ಭಾರತವು ಕೇವಲ ನಾಲ್ಕು ದಶಲಕ್ಷ ಜನರನ್ನು ಮಾತ್ರ ವಾರ್ಷಿಕವಾಗಿ ಪ್ರವಾಸಿಗಳಾಗಿ ಸ್ವಾಗತಿಸುತ್ತದೆ. ನಮ್ಮ ಶ್ರೀಮಂತವಾದ ಮತ್ತು ವೈವಿಧ್ಯಮಯವಾದ ಸಾಂಸ್ಕೃತಿಕ ಪರಂಪರೆಯನ್ನು ಪ್ರಪಂಚದ ಮುಂದೆ ಪ್ರಸ್ತುತ ಪಡಿಸಲು ನಾವು ಪ್ರಯತ್ನ ಪಟ್ಟಿಲ್ಲ. ನಾವಿನ್ನೂ ನಮ್ಮ ದೇಶದಲ್ಲಿ ಸರಿಯಾದ ಮೂಲಭೂತ ಸೌಕರ್ಯ ಹಾಗೂ ಇತರ ಹಲವಾರು ಸೌಲಭ್ಯಗಳಲ್ಲಿ ಹಿಂದಿದ್ದೇವೆ.

ಈ ಏಳು ಅಂಶಗಳ ಬಗ್ಗೆ ನಿಜಕ್ಕೂ ಭಾರತವು ಹೆಮ್ಮೆ ಪಡಬಹುದು. ಈ ಏಳು ಅಂಶಗಳನ್ನು ನಾವು ಗೌರವಿಸಿದರೆ ಮತ್ತು ಚೆನ್ನಾಗಿ ಅಭಿವೃದ್ಧಿಪಡಿಸಿದರೆ, ಭಾರತದ ಆರ್ಥಿಕತೆಯು ನಿಜಕ್ಕೂ ಸುಧಾರಿಸುವುದನ್ನು ಮತ್ತು ಮತ್ತೊಮ್ಮೆ ಬೆಳೆಯಲು ತೊಡಗುವುದನ್ನು ನೀವು ನೋಡುವಿರಿ. ಇದು ನನ್ನ ನಂಬಿಕೆ. ನಾನು ಮಾತನಾಡಿದ ಈ ಏಳು ವಿಷಯಗಳನ್ನು ನೀವೆಲ್ಲರೂ ಜ್ಞಾಪಕದಲ್ಲಿಡುವಿರೇ?

ಮೊದಲನೆಯದು ಭಾರತೀಯ ಆಧ್ಯಾತ್ಮ; ಅದು ಎಲ್ಲರ ಹೃದಯಗಳಲ್ಲೂ ಆನಂದವನ್ನು ಮತ್ತು ಅಂತಹ ಒಂದು ಅಲ್ಲಾಡಿಸಲು ಸಾಧ್ಯವಿಲ್ಲದ ಮುಗುಳ್ನಗೆಯನ್ನು ತರುತ್ತದೆ. ನಮ್ಮ ಆಧ್ಯಾತ್ಮಿಕತೆಯು ಪುಸ್ತಕದ ಜ್ಞಾನವಲ್ಲ ಮತ್ತು ಗ್ರಂಥಗಳಿಗೆ ಮಾತ್ರ ಸೀಮಿತವಾದುದಲ್ಲ, ಅದು ಬಹಳ ಪ್ರಾಯೋಗಿಕ ಮತ್ತು ವೈಜ್ಞಾನಿಕವಾದುದು ಹಾಗೂ ನಮ್ಮ ದೈನಂದಿನ ಜೀವನಗಳಲ್ಲಿ ಅಳವಡಿಸಿಕೊಳ್ಳಬಹುದು. ಒಬ್ಬನ ಜೀವನವನ್ನು ಅಷ್ಟೊಂದು ಸಂಪೂರ್ಣವಾಗಿ ಪರಿವರ್ತಿಸುವ ಸಾಮರ್ಥ್ಯವು ಇದಕ್ಕಿದೆ. ಜೀವನದ ಎಲ್ಲಾ ದೆಸೆಗಳಲ್ಲೂ ನೀವು ಅರಳುವಂತೆ ಅದು ಮಾಡಬಲ್ಲದು.

ಕೆಲವು ದಿನಗಳ ಹಿಂದೆ ನಾನು ಬಿಹಾರದಲ್ಲಿದ್ದೆ. ವಿವಿಧ ಗ್ರಾಮಗಳಿಂದ ಮತ್ತು ಗ್ರಾಮೀಣ ಪ್ರದೇಶಗಳಿಂದ ಸುಮಾರು ೧೦೦ ಯುವಕರು ನನ್ನನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು.

ಮೂರು ವಾರಗಳ ಹಿಂದೆ, ಅವರೆಲ್ಲರೂ ಆರ್ಟ್ ಆಫ್ ಲಿವಿಂಗ್ ಆನಂದದ ಅನುಭೂತಿ ಶಿಬಿರವನ್ನು (ಹ್ಯಾಪ್ಪಿನೆಸ್ ವರ್ಕ್‌ಶಾಪ್) ಹಾಜರಾಗುವ ಮೊದಲು, ತಮ್ಮ ಹಕ್ಕುಗಳನ್ನು ಬಲದಿಂದ ಪಡೆಯಲಿಕ್ಕಾಗಿ ಬಂದೂಕುಗಳನ್ನು ಹಾಗೂ ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಅವರು ನಿರ್ಧರಿಸಿದ್ದರು. ಮಾವೋವಾದಿಗಳ ಜೀವನಶೈಲಿಯನ್ನು ಸ್ವೀಕರಿಸಿಕೊಳ್ಳಲು ಅವರು ನಿರ್ಧರಿಸಿದ್ದರು.
ಆನಂದದ ಅನುಭೂತಿ   ಶಿಬಿರದಲ್ಲಿ ಅವರು ಪ್ರಾಣಾಯಾಮವನ್ನು ಅಭ್ಯಸಿಸಿದರು, ಅವರು ಧ್ಯಾನ ಮಾಡಿದರು ಮತ್ತು ಅವರು ತಮ್ಮ ಜೀವನಗಳಲ್ಲಿ ಹಾಗೂ ತಮ್ಮ ದೃಷ್ಟಿಕೋನದಲ್ಲಿ ಅಷ್ಟೊಂದು ದೊಡ್ಡ ಬದಲಾವಣೆಯನ್ನು ಅನುಭವಿಸಿದರು. ಕಾರ್ಯಾಗಾರವನ್ನು ಮುಗಿಸಿದ ಬಳಿಕ, ಅವರೆಲ್ಲರೂ ನನ್ನನ್ನು ಭೇಟಿಯಾಗಲು ಬಂದರು. ಅವರ ಕಣ್ಣುಗಳು ಒದ್ದೆಯಾಗಿದ್ದವು ಮತ್ತು ಅವರು ಹೀಗೆಂದು ಹೇಳಿದರು, "ಗುರುದೇವ, ನಾವು ಮತ್ತೆಂದೂ ಶಸ್ತ್ರಗಳನ್ನು ಮತ್ತು ಹಿಂಸೆಯನ್ನು ಕೈಗೆತ್ತಿಕೊಳ್ಳೆವು. ನಾವು ನಮ್ಮೆಲ್ಲಾ ಶಸ್ತ್ರಗಳನ್ನು ನಿಮ್ಮ ಪಾದಗಳಲ್ಲಿ ಸಮರ್ಪಿಸುತ್ತೇವೆ."

ಅವರಲ್ಲಿ ಬಂದಿದ್ದ ಬದಲಾವಣೆಯನ್ನು ನೋಡಿ ಯಾರ ಕಣ್ಣುಗಳಾದರೂ ಕಣ್ಣೀರಿನಿಂದ ತುಂಬುತ್ತಿತ್ತು. ಅವರೆಲ್ಲರೂ ಅಷ್ಟೊಂದು ಸಹೃದಯಿ ಜನರಾಗಿದ್ದರು, ಆದರೆ ಅವರು ತಪ್ಪು ದಾರಿ ಹಿಡಿದಿದ್ದರು. ಯಾಕೆಂದು ನಿಮಗೆ ಗೊತ್ತೇ? ಇದು ಯಾಕೆಂದರೆ, ಹಾಗೆ ಮಾಡಬಾರದೆಂದು ಯಾರೂ ಅವರಿಗೆ ಸಲಹೆ ನೀಡಲಿಲ್ಲ, ಮತ್ತು ಅವರು ಯಾವತ್ತೂ ಅಂತಹ ಶಾಂತಿ ಮತ್ತು ಆನಂದವನ್ನು ತಮ್ಮ ಜೀವನಗಳಲ್ಲಿ ಅನುಭವಿಸದೇ ಇದ್ದ ಕಾರಣದಿಂದ. ಜ್ಞಾನ, ಧ್ಯಾನ ಮತ್ತು ಗಾನ (ಇಲ್ಲಿ ಸತ್ಸಂಗ ಎಂದು ಅರ್ಥ)ಗಳ ಸಿಹಿಯಾದ ಅಮೃತವನ್ನು ಅವರು ಸವಿದಿರಲಿಲ್ಲ.

ನಮ್ಮ ಆಧ್ಯಾತ್ಮಿಕತೆಯ ಮೂರು ಪ್ರಧಾನ ಅಂಶಗಳು ಇವುಗಳಾಗಿವೆ: ಜ್ಞಾನ, ಗಾನ ಮತ್ತು ಧ್ಯಾನ.

ಆಧುನಿಕ ವಿಜ್ಞಾನವು ಇವುಗಳನ್ನು ಎಡ ಮೆದುಳಿನ ಚಟುವಟಿಕೆ (ಜ್ಞಾನ), ಬಲ ಮೆದುಳಿನ ಚಟುವಟಿಕೆ (ಗಾನ) ಮತ್ತು ಸುಸಂಬದ್ಧ ಚಟುವಟಿಕೆ (ಧ್ಯಾನ) ಎಂದು ಕರೆಯುತ್ತದೆ. ಭಾರತೀಯ ಆಧ್ಯಾತ್ಮವು ಎಲ್ಲಾ ಮೂರನ್ನು ಒಳಗೊಂಡಿದೆ ಮತ್ತು ಅದಕ್ಕಾಗಿಯೇ ಸಮಾಜದಲ್ಲಿ ಅಷ್ಟೊಂದು ಮಹತ್ತರವಾದ ಪರಿವರ್ತನೆಯನ್ನು ತರುವ ಸಾಮರ್ಥ್ಯವು ಅದಕ್ಕಿರುವುದು. ದುರದೃಷ್ಟವಶಾತ್, ನಾವು ನಮ್ಮ ದೇಶದಲ್ಲಿ ಆಧ್ಯಾತ್ಮವನ್ನು ಅಲಕ್ಷಿಸಿದ್ದೇವೆ; ಅಥವಾ ನಾವದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ.