ಶನಿವಾರ, ಮಾರ್ಚ್ 1, 2014

ಜ್ಞಾನಿಯ ಲಕ್ಷಣ

ಮಾರ್ಚ್ ೦೧, ೨೦೧೪
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ಕುಟುಂಬವನ್ನು ನಿರ್ವಹಿಸುವುದು ಹೆಚ್ಚು ಕಷ್ಟವಾಗುತ್ತಾ ಹೋಗುವುದು ಯಾಕೆ? ನಾನು ಪ್ರೀತಿಸುವವರನ್ನು ಹೊರತುಪಡಿಸಿ ಉಳಿದವರೆಲ್ಲರನ್ನೂ ನಾನು ನಿರ್ವಹಿಸಬಲ್ಲೆನು ಮತ್ತು ಪ್ರಭಾವಿತಗೊಳಿಸಬಲ್ಲೆನು. ನನ್ನಲ್ಲಿ ಏನು ಕೊರತೆಯಿದೆ? 

ಶ್ರೀ ಶ್ರೀ ರವಿ ಶಂಕರ್: ನೀನದನ್ನು ಪರೋಕ್ಷವಾಗಿ ಮಾಡಬೇಕು. ನಿನ್ನ ಕುಟುಂಬಕ್ಕೆ ಸನಿಹವಾಗಿರುವ ಒಬ್ಬರಲ್ಲಿ ನೀನು ಹೇಳಬೇಕು ಮತ್ತು ಕುಟುಂಬವನ್ನು ಅವರ ಮೂಲಕ ಪ್ರಭಾವಿತಗೊಳಿಸಬೇಕು.
ಬಹುಶಃ ಅವರಿಗೆ ನಿನ್ನನ್ನು ತುಂಬಾ ಚೆನ್ನಾಗಿ ಗೊತ್ತು!

ನೀನು ಅಷ್ಟೊಂದು ಕೇಂದ್ರಿತನಾಗಿದ್ದರೆ ಮತ್ತು ನೀನು ಜ್ಞಾನವನ್ನು ನೂರು ಶೇಕಡಾ ಜೀವಿಸುವುದಾದರೆ, ಆಗ ನೀನವರನ್ನು ಪ್ರಭಾವಿತಗೊಳಿಸಲು ಪ್ರಯತ್ನಿಸಬೇಕಾಗಿಲ್ಲ, ಅವರೇ ಆಗಿ ಪ್ರಭಾವಿತಗೊಳ್ಳುವರು ಎಂಬುದು ನಿನಗೆ ಕಾಣಿಸುವುದು.

ನಿನಗೆ ಅತ್ಯಂತ ನಿಕಟರಾಗಿರುವ ಜನರು ನಿನ್ನ ಮೇಲೆ ಅತ್ಯಂತ ಹೆಚ್ಚಿನ ಗೌರವವನ್ನು ಹೊಂದಿರುವಾಗ ಅದು, ನೀನು ಜ್ಞಾನದಲ್ಲಿ ಚೆನ್ನಾಗಿ ಸ್ಥಾಪನೆಯಾಗಿರುವುದನ್ನು ಸೂಚಿಸುತ್ತದೆ, ಯಾಕೆಂದರೆ ಅವರಿಗೆ ನಿನ್ನನ್ನು ತಿಳಿದಿರುತ್ತದೆ. ನೀನು ಪ್ರತಿಯೊಂದು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸುವೆ ಮತ್ತು ಪ್ರತಿಯೊಂದು ಪರಿಸ್ಥಿತಿಯಲ್ಲೂ ನೀನು ಹೇಗೆ ಶಾಂತನಾಗಿರುವೆ ಎಂಬುದನ್ನು ಅವರು ನೋಡುತ್ತಾರೆ.

ಹೀಗಾಗಿ ನಿಮ್ಮ ನಿಕಟವರ್ತಿಗಳು ನಿಮ್ಮನ್ನು ಹೊಗಳಿದರೆ, ಅದರರ್ಥ ನೀವು ನಿಜಕ್ಕೂ ಅರಳಿರುವಿರಿ ಎಂದು. ಅದರರ್ಥ, ನಿಮಗಿನ್ನು ಮುಂದುವರಿಯುವುದು ಸ್ವಲ್ಪ ಮಾತ್ರ ಬಾಕಿಯಿದೆ. ಉನ್ನತ ಜ್ಞಾನವನ್ನು ಹೊಂದಿದ್ದಾಗ ನಿಮ್ಮ ಸಮೀಪವರ್ತಿಗಳನ್ನು ಹೊರತುಪಡಿಸಿ, ಉಳಿದವರ ಮೇಲೆ ಪ್ರಭಾವ ಬೀರಬಹುದು, ಹಾಗಾಗುತ್ತದೆ.

ಪ್ರಶ್ನೆ: ಗುರುದೇವ, ೪೦-೪೫ ವರ್ಷಗಳವರೆಗೆ ಆಧ್ಯಾತ್ಮಿಕ ಪಥದಲ್ಲಿದ್ದ ಅಮೇರಿಕಾದ ಒಬ್ಬ ರಾಯಭಾರಿಯನ್ನು ಭೇಟಿಯಾಗುವ ಸಂದರ್ಭ ನನಗೆ ಒದಗಿ ಬಂತು. ಕೆಲವು ಸಂತರಿಗೆ ದೇವರ ರಾಜ್ಯದ ದರ್ಶನಗಳಾದುವೆಂದೂ, ಅದು ನೀಲಿಯಾಗಿರುವುದೆಂದೂ, ದೇವರ ರಾಜ್ಯದೊಳಕ್ಕೆ ಪ್ರವೇಶಿಸಲು ಲಕ್ಷಗಟ್ಟಲೆ ಆತ್ಮಗಳು ಸುತ್ತುತ್ತಿರುತ್ತವೆ, ಆದರೆ ಅದು ಒಬ್ಬರು ಗುರುವಿನ ಮೂಲಕ ಮಾತ್ರ ಸಾಧ್ಯ ಎಂದೂ ಅವನು ಹೇಳಿದನು. ಇದೆಲ್ಲವೂ ನಿಜವೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ಗೀತೆಯಲ್ಲಿ ಕೂಡಾ ಹೀಗೆಂದು ಹೇಳಲಾಗಿದೆ: ಲಕ್ಷಗಟ್ಟಲೆ ಜನರಲ್ಲಿ ಕೇವಲ ಕೆಲವರು ಮಾತ್ರ ಪಥದಲ್ಲಿ ನಡೆಯುವರು, ಮತ್ತು ಪಥದಲ್ಲಿ ನಡೆಯುವ ಕೆಲವರಲ್ಲಿ ಕೇವಲ ಕೆಲವರು ಮಾತ್ರ ನನ್ನನ್ನು ಚೆನ್ನಾಗಿ ತಿಳಿಯುವರು.

ಭೂಮಿಯ ಮೇಲಿರುವ ಈ ೮.೪ ದಶಲಕ್ಷ ರೀತಿಯ ಜೀವಿಗಳಲ್ಲಿ, ಮಾನವ ಜೀವಿಯು ಒಂದೇ ಒಂದು. ೮.೪ ದಶಲಕ್ಷ ಶರೀರಗಳ ನಂತರ, ನಿಮಗೆ ಮಾನವ ಶರೀರವು ದೊರೆಯುತ್ತದೆ. ಸುಮ್ಮನೇ ಕಲ್ಪಿಸಿಕೊಳ್ಳಿ, ೮.೪ ದಶಲಕ್ಷ ಶರೀರಗಳು!

ಬ್ಯಾಕ್ಟೀರಿಯಾ, ಪಕ್ಷಿಗಳು, ಪ್ರಾಣಿಗಳು, ಮೊದಲಾದವುಗಳಿಂದ, ೮.೪ ದಶಲಕ್ಷ ಜೀವನಗಳ ನಂತರ ಒಂದು ಮಾನವ ಜನ್ಮ ಬರುತ್ತದೆ. ಈ ಮಾನವ ಜೀವನದಲ್ಲಿ, ಕೆಲವರಿಗೆ ನಿಜವಾದ ಆಧ್ಯಾತ್ಮಿಕ ಪಥವನ್ನು ತಿಳಿಯುವ ಅವಕಾಶ ದೊರೆಯುತ್ತದೆ. ಮತ್ತು ಇವರಲ್ಲಿ, ಪಥದ ಮೇಲೆ ನಡೆಯುವ ಕೆಲವರು ಭಾಗ್ಯಶಾಲಿಗಳು. ಇದು ಹೊಸತೇನೂ ಅಲ್ಲ.

ಆದಿಶಂಕರರು ಕೂಡಾ ಹೀಗೆಂದು ಹೇಳಿದ್ದಾರೆ: ಮಾನವು ಜನ್ಮವು ಸಿಗುವುದು ಬಹಳ ಕಷ್ಟ. ಮಾನವ ಜನ್ಮ ಲಭಿಸಿದ ಬಳಿಕ, ಆಧ್ಯಾತ್ಮಿಕ ಪಥದ ಮೇಲೆ ನಡೆಯಬೇಕೆಂಬ ಬಯಕೆ ಸಿಗುವುದು ಬಹಳ ಕಷ್ಟ. ಕೆಲವು ಜನರಿಗೆ ಇದು ಸಿಗುತ್ತದೆ. ಈ ಬಯಕೆ ಬಂದ ನಂತರವೂ ಆಧ್ಯಾತ್ಮಿಕ ಪಥದ ಮೇಲೆ ನಡೆಯುವ ಅವಕಾಶ ಕೆಲವೇ ಕೆಲವರಿಗೆ ಸಿಗುತ್ತದೆ; ಅವರಿಗೆ ಸರಿಯಾದ ದಾರಿ ಸಿಗುತ್ತದೆ.

ಆಧ್ಯಾತ್ಮಿಕ ಪಥದ ಮೇಲೆ ನಡೆಯಲು ಬಯಸುವ ಹಲವಾರು ಜನರು, ಒಂದು ದಿನ ಜಗತ್ತು ನಾಶವಾಗಲಿದೆಯೆಂಬ ಅಥವಾ ಪ್ರಳಯವಾಗಲಿದೆಯೆಂಬ ಈ ಎಲ್ಲಾ ತಪ್ಪು ಕಲ್ಪನೆಗಳಲ್ಲಿ ಸಿಕ್ಕಿಬೀಳುತ್ತಾರೆ. ಮತ್ತು ಹೀಗಾಗಿ ಈ ಜನರು ಭಯದಿಂದಾಗಿ ಪ್ರಾರ್ಥಿಸುತ್ತಾರೆ. ಭಯ ಮತ್ತು ಅಪರಾಧಿ ಮನೋಭಾವಗಳ ಅಚ್ಚನ್ನುಂಟುಮಾಡುವ ಪಥಗಳನ್ನು ಅವರು ಸೇರುತ್ತಾರೆ. ನೋಡಿ, ನೀವು ನಿಮ್ಮೊಳಗೆ ಆಳವಾಗಿ ಹೋಗಲು ಅನುಮತಿಸದಿರುವ ಎರಡು ವಿಷಯಗಳಾಗಿವೆ - ಭಯ ಮತ್ತು ಅಪರಾಧಿ ಮನೋಭಾವ. ಮತ್ತು ಇದನ್ನೇ (ಆಧ್ಯಾತ್ಮಿಕ) ಪಥಗಳೆಂದು ಕರೆಯಲ್ಪಡುವ ಈ ಕೆಲವು ಪಥಗಳು ಮಾಡುವುದು. ಕೆಲವು ಆಧ್ಯಾತ್ಮಿಕ ಪಥಗಳು ನರಕ ಮತ್ತು ಸ್ವರ್ಗ ಹಾಗೂ ಇತರ ವಿಷಯಗಳ ಭಯವನ್ನು ಸೃಷ್ಟಿಸುತ್ತವೆ ಮತ್ತು ಜನರನ್ನು ಅಪರಾಧಿ ಮನೋಭಾವ ಹಾಗೂ ಭಯಗಳ ಎಂತಹ ಒಂದು ಕೋಲಾಹಲದಲ್ಲಿ ಹಾಕುತ್ತವೆಯೆಂದರೆ, ಮನಸ್ಸು ಯಾವತ್ತೂ ಶಾಂತವಾಗಲು ಸಾಧ್ಯವಾಗುವುದಿಲ್ಲ. ಧ್ಯಾನವು ಯಾವತ್ತೂ ಆಗಲು ಸಾಧ್ಯವಿಲ್ಲ. ಇದು ಬಹಳ ದುರದೃಷ್ಟಕರ. ಹೀಗೆ ಈ ಜನರು ಮಹತ್ವಾಕಾಂಕ್ಷಿಗಳಾಗಿದ್ದರೂ ಸಹ, ಅವರಿಗೆ ಪಥವು ಸಿಗುವುದಿಲ್ಲ. ಮತ್ತೆ, ಇದೊಂದು ದೊಡ್ಡ ಭಾಗ್ಯವಾಗಿದೆ.

ಈ ಜನರಿಗೆ ಜ್ಞಾನಕ್ಕೆ ಪ್ರವೇಶ ಸಿಗುವುದಿಲ್ಲ: ’ಹೇ, ಮನಸ್ಸು ಒಂದು ನದಿಯಂತೆ, ನೀನು ಯಾವುದಕ್ಕೆ ತಗಲು ಹಾಕಿಕೊಂಡಿರುವೆ? ಅದಕ್ಕೆ ತಗಲುಹಾಕಬೇಡ. ಎಲ್ಲಾ ಘಟನೆಗಳು ಆಗಿಹೋದವು. ಅದನ್ನು ಬಿಟ್ಟುಬಿಡು ಮತ್ತು ಮುಂದುವರಿ. ವರ್ತಮಾನದ ಕ್ಷಣದಲ್ಲಿ ಜೀವಿಸು’ - ಈ ಜ್ಞಾನವು ಹಲವು ಜನರಿಗೆ ಲಭ್ಯವಿಲ್ಲ (ಆಧ್ಯಾತ್ಮಿಕ ಪಥದಲ್ಲಿ ನಡೆಯಲು ಬಯಸುವವರಿಗೆ). ಅವರು ತಪ್ಪಿತಸ್ಥ ಭಾವನೆಯನ್ನು ಅನುಭವಿಸುತ್ತಾ, ಭೂತಕಾಲದ ಬಗ್ಗೆ ಮರುಗುತ್ತಾ ಹೋಗುತ್ತಾರೆ ಮತ್ತು ಮನಸ್ಸು ಅಸ್ತವ್ಯಸ್ತವಾಗುತ್ತದೆ. ಖಂಡಿತಾ, ಅವರು ಪ್ರಾರ್ಥಿಸುತ್ತಾರೆ. ಅವರ ಪ್ರಾರ್ಥನೆಗಳು ಸಹಾಯ ಮಾಡುತ್ತವೆ ಮತ್ತು ಅವರು ಸ್ವಲ್ಪ ಆಶೀರ್ವಾದವನ್ನು ಪಡೆಯುತ್ತಾರೆ. ಆಶೀರ್ವಾದವು ಎಲ್ಲರ ಬಳಿಗೂ ಬರುತ್ತದೆ, ಅದರಲ್ಲಿ ಸಂಶಯವಿಲ್ಲ, ಆದರೆ ಜ್ಞಾನ, ಸರಿಯಾದ ಪಥ ಮತ್ತು ಮೋಕ್ಷ - ಇವುಗಳು ಅವರಿಗೆ ಒಂದು ದೂರದ ಕನಸಾಗಿ ಉಳಿಯುತ್ತವೆ. ಅವರ ಜೀವನದಲ್ಲಿ ಶಾಂತಿಯುಂಟಾಗುವುದಿಲ್ಲ. ಒಂದು ದಿನ ತಾವು ಸ್ವರ್ಗಕ್ಕೆ ಹೋಗುವೆವೆಂಬ ಆಸೆಯೊಂದಿಗೆ ಅವರು ಕುಳಿತುಕೊಳ್ಳುತ್ತಾರೆ. ಮತ್ತು ಹೀಗಾಗಿ ಈ ಆತ್ಮಗಳು, ಭಯ ಮತ್ತು ಬಯಕೆಗಳೊಂದಿಗೆ ಸಿಕ್ಕಿಹಾಕಿಕೊಳ್ಳುತ್ತವೆ.

ಇದೆಲ್ಲದರಿಂದ ಮುಕ್ತವಾಗಲಿಕ್ಕಾಗಿ ಅವರು ಮಾನವ ಜೀವನಕ್ಕೆ ಬಂದಿದ್ದಾರೆ, ಮತ್ತು ದೇವರು ಒಂದು ದಿನ ನಮ್ಮನ್ನು ಬಿಡುಗಡೆಗೊಳಿಸುತ್ತಾರೆ ಎಂದು ಅವರು ಯೋಚಿಸುತ್ತಾರೆ. ಆದರೆ ಈ ಎಲ್ಲಾ ವಿಷಯಗಳನ್ನು ಕಾರ್ಯಗತ ಮಾಡಲು ಅವರು ಮತ್ತೆ ಮರಳಿ ಬರಬೇಕಾಗುತ್ತದೆ. ಪುನಃ ಅವರು ಧ್ಯಾನವನ್ನು ಪಡೆಯುವರು.

ಆದುದರಿಂದ, ಒಂದು ಮಾನವ ಜನ್ಮ, ಒಂದು ಪಥಕ್ಕಾಗಿರುವ ಬಯಕೆಗಳು, ಮತ್ತು ಅವರಿಗೆ ಪಥವು ಲಭ್ಯವಾಗಿರುವುದು (ಮಹಾಪುರುಷ ಸನ್ನಿಧೋ: ಒಬ್ಬರು ಆಧ್ಯಾತ್ಮಿಕ ಗುರುವನ್ನು ಪಡೆಯುವುದು) - ಈ ಮೂರು ಸಂಗತಿಗಳು ವಿರಳ ಮತ್ತು ಪಡೆಯಲು ಕಷ್ಟವಾದದ್ದು. ನೀವು ಎಲ್ಲಾ ಮೂರನ್ನು ಹೊಂದಿದ್ದರೆ, ನೀವು ಭಾಗ್ಯವಂತರು. ಇದನ್ನೇ ಹೇಳಲಾಗಿರುವುದು.
ಆದರೆ ಚಿಂತಿಸಬೇಡಿ, ನೀವು ಸುತ್ತುಹಾಕುತ್ತಾ ಇಲ್ಲ. ನೀವು ಈಗಾಗಲೇ ಪಥದಲ್ಲಿರುವಿರಿ ಮತ್ತು ನೀವು ಸಂತೋಷವಾಗಿಯೂ, ನಿರಾಳವಾಗಿಯೂ ಇರುವಿರಿ.

ಪ್ರಶ್ನೆ: ಗುರುದೇವ, ನಾವು ಯುವಜನರು ಆಧ್ಯಾತ್ಮಿಕ ಪಥವನ್ನು ಹಿಡಿಯುತ್ತಿರುವುದನ್ನು ನೋಡಿ ಹಲವು ಜನರು ಹೆದರುತ್ತಾರೆ. ಪ್ರತಿಯೊಂದು ಆತ್ಮಕ್ಕೂ ಇದೊಂದು ಹರಸಲ್ಪಟ್ಟ ಪಥ ಮತ್ತು ವಾಸ್ತವವಾಗಿ ಒಂದು ಸೌಭಾಗ್ಯ ಎಂಬುದಾಗಿ ಅವರನ್ನು ನಾವು ಒಪ್ಪಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅವರನ್ನು ಒಪ್ಪಿಸಲು ಪ್ರಯತ್ನಿಸಬೇಡ. ಸುಮ್ಮನೇ ನೀನಾಗಿಯೇ ಇರು ಮತ್ತು ಅವರು ಒಪ್ಪುವರು. ಅದು ತನ್ನಿಂತಾನೇ ಆಗುವುದು. ನೀನು ಅವರನ್ನು ಒಪ್ಪಿಸಲು ಪ್ರಯತ್ನಿಸುವುದು, ಅದನ್ನು ಇನ್ನಷ್ಟು ಬಿಗಡಾಯಿಸುವುದು. ಅದು ಸುಮ್ಮನೆ ನಿನ್ನ ವರ್ತನೆಯಲ್ಲಿ; ನಿನ್ನ ಪ್ರೀತಿ ಮತ್ತು ಕರುಣೆಗಳಲ್ಲಿ ಕಾಣಿಸಬೇಕು.

ಪ್ರಶ್ನೆ: ಪ್ರೀತಿಯ ಗುರುದೇವ, ಓಂ ಎಂಬುದು ಮೌನದಿಂದ ಉತ್ಪತ್ತಿಯಾಯಿತೇ ಅಥವಾ ಮೌನವು ಓಂನಿಂದ ಉತ್ಪತ್ತಿಯಾಯಿತೇ? ಮೂಲ ಯಾವುದು, ಓಂ ಎಂಬುದೇ ಅಥವಾ ಎನೂ ಇಲ್ಲದಿರುವಿಕೆಯೇ?

ಶ್ರೀ ಶ್ರೀ ರವಿ ಶಂಕರ್: ಓಂ ಎಲ್ಲದರ ಮೂಲವಾಗಿದೆ.

ಅದು ಎಲ್ಲದರ ಮೂಲವೆಂದು ಕರೆಯಲ್ಪಡುವುದಾದರೆ, ಓಂ ಎಂಬುದು ಮೌನದಿಂದ ಉತ್ಪತ್ತಿಯಾಗಲು ಹೇಗೆ ಸಾಧ್ಯ? ಮೌನವೆಂಬುದು ಶಬ್ದ ಇಲ್ಲದಿರುವಿಕೆಯಾಗಿದೆ, ಆದರೆ ಓಂ ಮೌನವನ್ನು ಮೀರಿದುದು. ಎಲ್ಲಾ ಶಬ್ದಗಳು ಮೌನದಿಂದ ಬರುತ್ತವೆ, ಆದರೆ ಓಂ ಎಂಬುದು ಇತರ ಎಲ್ಲಾ ಶಬ್ದಗಳಂತೆ ಒಂದು ಶಬ್ದವಲ್ಲ. ಓಂ ಎಂಬುದು ಇಡೀ ಅಸ್ತಿತ್ವದ ಕಂಪನವೇ ಆಗಿದೆ, ಅದಕ್ಕಾಗಿಯೇ ಅದು ಒಂದು ಕೈಯ ಚಪ್ಪಾಳೆಯ ಶಬ್ದವೆಂದು ಕರೆಯಲ್ಪಡುತ್ತದೆ; ಅನಹದ್. ಎರಡು ಕೈಗಳ ಹೊಡೆತದಿಂದ ಆದಂತಹದ್ದಲ್ಲ ಅದು. ಅದು ಆಕಾಶವನ್ನು ಮೀರಿದುದು ಮತ್ತು ಕಾಲವನ್ನು ಮೀರಿದುದು  ಹಾಗೂ ಪದಗಳನ್ನು ಮೀರಿದುದು ಆಗಿದೆ. ಓಂ ಎಂಬುದು ಸೃಷ್ಟಿಯ ಪ್ರಾರಂಭಿಕ ಕಂಪನವಾಗಿದೆ.

ಪ್ರಶ್ನೆ: ಗುರುದೇವ, ಒಂದು ದೊಡ್ಡ ಮಟ್ಟಿಗೆ ಧರ್ಮವನ್ನು ಅನುಸರಿಸುವುದು ಕೆಲವೊಮ್ಮೆ ಒಬ್ಬ ವ್ಯಕ್ತಿಯನ್ನು ನಿಷ್ಠುರನನ್ನಾಗಿಸುತ್ತದೆ. ಕೆಲವು ಜನರು ನ್ಯಾಯವಂತರಾಗುತ್ತಾರೆ, ಆದರೆ ಅಂತಿಮವಾಗಿ ಅವರು ದುಃಖವನ್ನು ಅನುಭವಿಸುತ್ತಾರೆ ಮತ್ತು ಸುತ್ತಲಿರುವ ಇತರರು ಕೂಡಾ ಬಳಲುತ್ತಾರೆ. ನಾವು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿರುವೆವೇ?

ಶ್ರೀ ಶ್ರೀ ರವಿ ಶಂಕರ್: ಅದೇ! ನೀನದನ್ನು ಸರಿಯಾಗಿ ಹೇಳಿದೆ. ನಾವು ಧರ್ಮವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೇವೆ. ಈಗ ನಾವು ಧರ್ಮದಿಂದ ಆಧ್ಯಾತ್ಮದ ಕಡೆಗೆ ಹೋಗಬೇಕಾಗಿದೆ. ಬುದ್ಧಿವಂತರು ಹಾಗೆ ಮಾಡುವರು.

ಬುದ್ಧಿವಂತರು ಧಾರ್ಮಿಕ ಭಾವುಕತೆಗಳಲ್ಲಿ ಸಿಕ್ಕಿಹಾಕಿಕೊಳ್ಳರು. ನಾವು ಧಾರ್ಮಿಕ ಭಾವುಕತೆಗಳನ್ನು ಮೀರಿದ್ದೇವೆ. ನಾವು ಆಧ್ಯಾತ್ಮಿಕ ಆಯಾಮದೊಳಕ್ಕೆ ಚಲಿಸಬೇಕು.

ಪ್ರಶ್ನೆ: ನಾನು ಸಂಶೋಧನಾ ಕ್ಷೇತ್ರದಿಂದ ಬಂದಿರುವೆನು. ಹೊಸ ವಿಷಯಗಳನ್ನು ಕಂಡುಹಿಡಿಯುವುದು ಮತ್ತು ಹೊಸ ಸಂಶೋಧನೆ ಮಾಡುವುದು ನನಗೆ ಬಹಳ ಕಷ್ಟವಾಗುತ್ತದೆ. ನಾವು ನಮ್ಮ ಸೃಜನಾತ್ಮಕ ಪ್ರತಿಭೆಯನ್ನು ವರ್ಧಿಸಲು ಸಾಧ್ಯವಾಗುವುದಕ್ಕೆ, ನನ್ನಂತಹ ಸಂಶೋಧಕರಿಗೆ ನೀವು ಯಾವ ಸಲಹೆಯನ್ನು ನೀಡಬಲ್ಲಿರಿ? 

ಶ್ರೀ ಶ್ರೀ ರವಿ ಶಂಕರ್: ನೀವು ನಿಯಮಿತವಾಗಿ ಧ್ಯಾನ ಮಾಡಬೇಕು. ಧ್ಯಾನ ಮತ್ತು ವೈರಾಗ್ಯಗಳು ನಿಜಕ್ಕೂ ಇದರಲ್ಲಿ ಸಹಕಾರಿಯಾಗುವುವು.

ಆಗಾಗ್ಗೆ, ನೀವು ಸುಮ್ಮನೆ ಕುಳಿತುಕೊಂಡು, ಈ ಸಂಪೂರ್ಣ ಜಗತ್ತು ಕೇವಲ ಒಂದು ಕನಸಿನಂತೆ ಎಂಬುದನ್ನು ಅರಿತುಕೊಳ್ಳಬೇಕು. ಈ ಸಂಪೂರ್ಣ ಜಗತ್ತು ಒಂದು ದಿನ ಕೊನೆಯಾಗಲಿದೆ. ನಿಮಗೆ ಇಲ್ಲಿಂದ ತೆಗೆದುಕೊಂಡು ಹೋಗಲು ಏನೂ ಇಲ್ಲ. ಇದನ್ನೇ ನೀವು ಮತ್ತೆ ಮತ್ತೆ ನಿಮ್ಮ ಅರಿವಿಗೆ ತರಬೇಕು. ಇದು ನಿಮ್ಮ ವೈರಾಗ್ಯವನ್ನು ಬಲಪಡಿಸುವುದು. ನೀವು ವೈರಾಗ್ಯದಲ್ಲಿ ಬೆಳೆದಂತೆ, ಧ್ಯಾನದಲ್ಲಿ ಇನ್ನೂ ಆಳಕ್ಕೆ ಹೋಗಲು ನಿಮಗೆ ಸಾಧ್ಯವಾಗುತ್ತದೆಯೆಂಬುದು ನಿಮಗೆ ಕಂಡುಬರುವುದು.

ಪ್ರಶ್ನೆ: ಗುರುದೇವ, ಧ್ಯಾನದ ಸಂದರ್ಭದಲ್ಲಿ, ನಮ್ಮ ಕಣ್ಣುಗಳನ್ನು ಕೇವಲ ಐದರಿಂದ ಹತ್ತು ಶೇಕಡಾ ತೆರೆದಿಡುವುದರಿಂದ ಆಗುವ ಲಾಭವೇನು? ಭಗವಾನ್ ಬುದ್ಧನ ಹಲವಾರು ಪ್ರತಿಮೆಗಳಲ್ಲಿ ಮತ್ತು ಮೂರ್ತಿಗಳಲ್ಲಿ,  ಅವನನ್ನು ಹೆಚ್ಚಾಗಿ, ಅವನ ಕಣ್ಣುಗಳು ಅರ್ಧ ಮುಚ್ಚಿರುವಂತೆ ಬಿಂಬಿಸಲಾಗಿದೆ. ಇದರ ಬಗ್ಗೆ ದಯವಿಟ್ಟು ನಮಗೆ ಸ್ವಲ್ಪ ಹೇಳಿ. 

ಶ್ರೀ ಶ್ರೀ ರವಿ ಶಂಕರ್: ನಾವು ನಮ್ಮ ಕಣ್ಣುಗಳನ್ನು ಮುಚ್ಚುವಾಗ ನಾವು, ಮನೋರಾಜ್ಯವೆಂದು ಕರೆಯಲ್ಪಡುವ, ನಮ್ಮ ಮನಸ್ಸಿನ ಪ್ರಪಂಚದೊಳಕ್ಕೆ, ನಮ್ಮ ಯೋಚನೆಗಳು ಮತ್ತು ಭಾವನೆಗಳೊಳಕ್ಕೆ ಹೋಗಿ ಬಿಡುತ್ತೇವೆ. ನಮ್ಮ ಕಣ್ಣುಗಳು ತೆರೆದಿರುವಾಗ, ನಾವು ಹೊರಜಗತ್ತಿನಲ್ಲಿ ತೊಡಗಿರುತ್ತೇವೆ. ಹೀಗೆ, ನೀವು ನಿಮ್ಮ ಕಣ್ಣುಗಳನ್ನು ಕೇವಲ ಪಾರ್ಶ್ವವಾಗಿ ಮುಚ್ಚುವಾಗ, ಮನಸ್ಸು ಯೋಚನೆಗಳು ಮತ್ತು ಭಾವನೆಗಳ ಆಂತರಿಕ ಜಗತ್ತಿನಲ್ಲಿ ಸಿಕ್ಕಿಬೀಳುವುದೂ ಇಲ್ಲ. ಹೊರಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುವುದೂ ಇಲ್ಲ.  ನಂತರ ಮನಸ್ಸು ನಿಧಾನವಾಗಿ ಸ್ಥಿರವಾಗುತ್ತದೆ ಮತ್ತು ಒಂದು ವಿಶ್ರಾಂತಿಯ ಸ್ಥಿತಿಗೆ ಬರುತ್ತದೆ. ತಮ್ಮ ಕಣ್ಣುಗಳನ್ನು ಮುಚ್ಚಿ ಕನಸುಗಳ ಲೋಕಕ್ಕೆ ತೇಲಿ ಹೋಗುವವರಿಗೆ ಇದೊಂದು ಬಹಳ ಲಾಭದಾಯಕವಾದ ತಂತ್ರವಾಗಿದೆ. ಇದೊಂದು ಸಿದ್ಧೌಷಧಿಯಂತೆ.

ಪ್ರಶ್ನೆ: ಗುರುದೇವ, ನಾನು ದೇವರಿಗೆ ಸಮೀಪವಾಗಿರುವೆನೆಂದು ಅನ್ನಿಸುವ ಕೆಲವು ಸಮಯಗಳಿರುತ್ತವೆ ಮತ್ತು ಇತರ ಸಮಯಗಳಲ್ಲಿ ದೇವರು ಬಹಳ ದೂರದಲ್ಲಿರುವನೆಂದು ನನಗನಿಸುತ್ತದೆ. ಈ ಏರಿಳಿತ ಯಾಕೆ?

ಶ್ರೀ ಶ್ರೀ ರವಿ ಶಂಕರ್: ನಿನಗೆ ಕುಳಿತುಕೊಂಡು, ನೀನು ಸಮೀಪವಾಗಿರುವೆಯೇ ಅಥವಾ ಇಲ್ಲವೇ ಎಂದು ನಿನ್ನ ಬಗ್ಗೆಯೇ ಯೋಚಿಸಲು ಅತಿಯಾದ ಸಮಯವಿದೆಯೆಂದು ನನಗನಿಸುತ್ತದೆ. ಹೊರಗೆ ಹೋಗು ಮತ್ತು ಪ್ರಪಂಚಕ್ಕಾಗಿ ಕೆಲಸ ಮಾಡು. ಸಮಾಜಕ್ಕಾಗಿ ಏನಾದರೂ ಮಾಡು. ನಿನ್ನನ್ನು ವ್ಯಸ್ತನಾಗಿರಿಸು.

ನೀವು ಸೇವೆ ಮಾಡುವಾಗ, ನಿಮಗೆ ಪುಣ್ಯ ಸಿಗುತ್ತದೆ ಮತ್ತು ಪುಣ್ಯದ ಕಾರಣದಿಂದಾಗಿ ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬಹುದು. ಅವುಗಳೆಲ್ಲವೂ ಸಂಬಂಧ ಹೊಂದಿವೆ. ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ.