ಶನಿವಾರ, ಮಾರ್ಚ್ 22, 2014

ಗುರುವಿನ ದೃಶ್ಯಾದೃಶ್ಯ ಸ್ವರೂಪ

೨೨ ಮಾರ್ಚ್ ೨೦೧೪
ಬಾದ್ ಅಂತೋಗಸ್ಟ್, ಜರ್ಮನಿ

ಸ್ವಿಟ್ಜರ್‌ಲ್ಯಾಂಡ್‌ನಿಂದ ಬಂದಿರುವ ಶ್ರೀಲಂಕಾದ ದೇವಾಲಯದ ಸದಸ್ಯರನ್ನು ನಾವು ಸ್ವಾಗತಿಸುತ್ತೇವೆ. ಅವರೊಂದು ಬಹಳ ಒಳ್ಳೆಯ ಪ್ರಾಚೀನವಾದ ತಮಿಳು ಹಾಡನ್ನು ಹಾಡಿದರು. ಅದಕ್ಕೊಂದು ಸುಂದರವಾದ ಅರ್ಥವಿದೆ.
ತಮಿಳು ಒಂದು ಬಹಳ ಹಳೆಯ ಭಾಷೆಯಾಗಿದೆ, ಬಹುಶಃ ೧೦,೦೦೦-೧೫,೦೦೦ ವರ್ಷಗಳಷ್ಟು ಹಳೆಯದು. ತಮಿಳು ಮತ್ತು ಸಂಸ್ಕೃತ, ಎರಡೂ ಸುಮಾರು ಒಂದೇ ಯುಗದವು. ನಿಮಗೆ ಗೊತ್ತೇ, ಜಪಾನೀ ಭಾಷೆಯಲ್ಲಿ ಬಹಳಷ್ಟು ತಮಿಳು ಇದೆ. ಜಪಾನೀ ಭಾಷೆಯಲ್ಲಿ ಸುಮಾರು ೭೦ ಶೇಕಡಾ ತಮಿಳು ಇದೆಯೆಂದು ನನಗೆ ಹೇಳಲಾಯಿತು. ತಮಿಳು ಭಾಷೆಯು ಇಂಡೋನೇಶ್ಯಾ ಮತ್ತು ಆ ಭಾಗದ ಇತರ ಜಾಗಗಳಲ್ಲಿ ಕಂಡುಬರುತ್ತದೆ ಹಾಗೂ ಹವಾಯಿಯವರೆಗೂ ತಲುಪಿದೆ. ಯು.ಎಸ್.ಎ.ಯಲ್ಲಿ ಕೂಡಾ, ಅವರು ಹಲವಾರು ತಮಿಳು ಹೆಸರುಗಳನ್ನು ಹೊಂದಿದ್ದಾರೆ.
ಇವರು ಈಗಷ್ಟೇ ಹಾಡಿದ ಹಾಡು ಬಹಳ ಪುರಾತನವಾದುದು. ಈ ಹಾಡಿನಲ್ಲಿ ಅವರು ಹೇಳುತ್ತಿರುವುದೇನೆಂದರೆ:
ಗುರುವು ತಾಯಿಯಂತೆ; ಅವರು ನಿಮ್ಮನ್ನು ತಾಯಿಯಂತೆ ಆಲಿಂಗಿಸುತ್ತಾರೆ. ಗುರುವು ತಂದೆಯಂತೆಯೂ ಕೂಡಾ; ಮಕ್ಕಳು ಆಟವಾಡಿ ಬಿದ್ದಾಗ, ಅವರು ಬರುತ್ತಾರೆ, ಅವರನ್ನು ಎತ್ತುತ್ತಾರೆ, ಅವರ ಬೆನ್ನು ತಟ್ಟುತ್ತಾರೆ ಮತ್ತು ಅವರನ್ನು ಪ್ರೋತ್ಸಾಹಿಸುತ್ತಾರೆ.
ಗುರುವು ಒಬ್ಬಳು ತಾಯಿಯಂತೆ ಪ್ರೀತಿಸುತ್ತಾರೆ, ಒಬ್ಬ ತಂದೆಯಂತೆ ಸಂರಕ್ಷಿಸುತ್ತಾರೆ ಮತ್ತು ಒಬ್ಬ ಮಿತ್ರನಂತೆ ಆಟವಾಡುತ್ತಾರೆ. ಅವರೊಬ್ಬ ಸಖ, ಅಂದರೆ, ಜೊತೆಗಾರ ಅಥವಾ ಮಿತ್ರ.
ಒಬ್ಬರು ಗುರುವನ್ನು ಹೊಂದಿರುವ owns ಯಾರೇ ಆದರೂ, ಅವರಿಗೆ ಅವರೊಬ್ಬ(ಗುರು) ಮಗುವಿನಂತೆ.
ಗುರುವು ತಂದೆಯಂತೆ, ತಾಯಿಯಂತೆ, ಮಿತ್ರನಂತೆ, ಜೊತೆಗಾರನಂತೆ ಮತ್ತು ಒಂದು ಮಗುವಿನಂತೆ (ಗುರುವನ್ನು ಯಾರು ಸ್ವಂತದವರನ್ನಾಗಿಸುವರೋ ಅವರಿಗೆ); ಆ ಗುರುವನ್ನು ನಾನು ಆರಾಧಿಸುತ್ತೇನೆ.  
ಗುರು ತತ್ವವು ಎಲ್ಲಿದೆ? ಗುರುವು ನಿಮ್ಮ ಜೀವನದೊಳಕ್ಕೆ ಹೇಗೆ ಬರುತ್ತಾರೆ? ಗುರುವು ಉರುವೈಯಲ್ಲಿ, ಅರುವೈಯಲ್ಲಿ ಬರುತ್ತಾರೆ; ಅಂದರೆ, ಆಕಾರದಲ್ಲಿ ಮತ್ತು ನಿರಾಕಾರದಲ್ಲಿ. ಅವರು ನಿಮ್ಮ ಬುದ್ಧಿಯಾಗಿ ನಿಮ್ಮ ಬಳಿಗೆ ಬರುತ್ತಾರೆ. ಗುರುವು ನಿಮ್ಮ ಬಳಿಗೆ ಪ್ರಕಾಶವಾಗಿ, ಜ್ಞಾನವಾಗಿ ಬರುತ್ತಾರೆ. ಹೀಗೆ ಈ ಹಾಡಿನಲ್ಲಿ ಹಲವಾರು ವಿಷಯಗಳಿವೆ.
ಗುರುವು, ಯಾವುದಿರುವುದೋ ಅದಾಗಿ ಮತ್ತು ಯಾವುದಿಲ್ಲವೋ ಅದಾಗಿ ಬರುತ್ತಾರೆ.
ಇದಕ್ಕೊಂದು ಬಹಳ ಆಳವಾದ ಅರ್ಥವಿದೆ. ಗುರುವು ನಿಮ್ಮ ಬಳಿಗೆ, ಯಾವುದಿರುವುದೋ ಅದಾಗಿ ಮತ್ತು ಯಾವುದಿಲ್ಲವೋ ಅದಾಗಿ ಬರುತ್ತಾರೆ, ಅಂದರೆ, ಇಲ್ಲದಿರುವ ಪ್ರಪಂಚವಾಗಿ ಹಾಗೂ ಇರುವ ದೇವರಾಗಿ. ’ಯಾವುದು ಇರುವುದೋ’ ಎಂಬುದರ ಅರ್ಥ, ’ಯಾವುದು ಶಾಶ್ವತವಾಗಿ ಇರುವುದೋ ಅದು’ ಎಂದು.
ಗುರುವಿನ ಸ್ವಭಾವವು ಕಾಣಿಸುತ್ತದೆ; ಒಂದು ರತ್ನದಂತೆ ಮತ್ತು ಅದು ಕಾಣಿಸುವುದಿಲ್ಲ; ಪ್ರಜ್ಞೆಯಂತೆ. ಅದೊಂದು ಹೂವಿನಂತೆ ಹಗುರವಾದುದು ಮತ್ತು ಬೆಳಕಿನಂತೆ ಪ್ರಕಾಶಮಾನವಾದುದು.
ಹಾಡು ಹೀಗೆಂದು ಹೇಳುತ್ತದೆ:
ದೈವತ್ವವು ಈ ಎಲ್ಲಾ ರೂಪಗಳಲ್ಲಿದೆ, ಮತ್ತು ನೀನು ನನ್ನ ಬಳಿಗೆ ಒಬ್ಬ ಗುರುವಿನ ರೂಪದಲ್ಲಿ ಬರುತ್ತಿರುವೆ; ನನ್ನ ಮೇಲೆ ಕೃಪೆ ತೋರಲು ಮತ್ತು ನನ್ನನ್ನು ಆಶೀರ್ವದಿಸಲು.
ಆಕಾರದಲ್ಲಿ ಮತ್ತು ನಿರಾಕಾರದಲ್ಲಿರುವ, ಕಾಣಿಸುವ ಮತ್ತು ಕಾಣಿಸದೇ ಇರುವುದರಲ್ಲಿರುವ, ಒಂದು ಹೂವಿನಷ್ಟು ಹಗುರವಾಗಿರುವ ಮತ್ತು ಒಂದು ಬೆಳಕಿನಷ್ಟು ಪ್ರಕಾಶಮಾನವಾಗಿರುವ, ಒಬ್ಬ ಗುರುವಾಗಿ ನನ್ನ ಜೀವನಕ್ಕೆ ಬಂದು ನನ್ನನ್ನು ಆಶೀರ್ವದಿಸುವ, ನನ್ನ ಮೇಲೆ ಕೃಪೆದೋರುವ ಆ ಒಂದು ದೇವರು, ನನಗೆ ಆಶೀರ್ವಾದ ನೀಡು.
ಪ್ರಾಚೀನ ದಿನಗಳಲ್ಲಿ ಜನರು ಇದನ್ನು ತಮಿಳಿನಲ್ಲಿ ಬರೆದಿರುವರು. ಆ ದಿನಗಳಲ್ಲಿ ಶಿವ ತತ್ವವನ್ನು ಬರೆದ ೬೪ ಸಂತರಿದ್ದರು, ಮತ್ತು ವಿಷ್ಣು ತತ್ವವನ್ನು ಬರೆದ ೧೪ ಸಂತರಿದ್ದರು, ಎಲ್ಲವೂ ತಮಿಳಿನಲ್ಲಿ. ಅವರು ಬರೆದಿರುವುದು ಅಷ್ಟೊಂದು ಮಹತ್ತರವಾದ ಜ್ಞಾನವನ್ನು ಒಳಗೊಂಡಿದೆ. ಶಿವನ ಬಗ್ಗೆ ಅವರು ಹೀಗೆ ಹೇಳಿದರು, ಶಿವನು ಹೇಗಿರುವನು? ಶಿವನು ಆಂತರಿಕ ಆಕಾಶದಂತೆ ಚಿದಂಬರನು. ಶಿವನು ಪ್ರಜ್ಞೆಯ ಆಂತರಿಕ ಆಕಾಶವಾಗಿರುವನು.
ಒಬ್ಬರು ಗುರು ಯಾರು? ಯಾರು ನಿಮಗೆ ಪ್ರಜ್ಞೆಯ ಮಾಲೆಯನ್ನು ಕೊಡುವರೋ; ಆಕಾಶದ ಮಣಿಗಳನ್ನು ಕೊಡುವರೋ ಅವರು. ಇದೊಂದು ವಿರೋಧಾಭಾಸವಾಗಿದೆ, ಅವುಗಳು ಎರಡು ಬೇರೆ ಬೇರೆ ವಿಷಯಗಳಾಗಿವೆ; ಮಣಿಗಳು ಸೀಮಿತವಾದವು, ಆಕಾಶವು ಅನಂತವಾದುದು.
ಅನಂತತೆಯು ಮಣಿಗಳಂತೆ ಕೊಡಲ್ಪಡುತ್ತದೆ, ಅಂದರೆ, ಧ್ಯಾನ ! ಮೂಲತಃ, (ಗುರುವೆಂದರೆ) ಯಾರು ನಿಮಗೆ ಧ್ಯಾನವನ್ನು ಕೊಡುವರೋ (ಧ್ಯಾನದ ಅನುಭವವನ್ನು) ಅವರು.
ಸಂರಕ್ಷಿಸಲಾದ ಒಂದು ಸುಂದರವಾದ ಹಾಡಾಗಿದೆ ಇದು. ಇದನ್ನು ಶತಮಾನಗಳ ಕಾಲ ಸಂರಕ್ಷಿಸಿದ ಶ್ರೀಲಂಕಾದವರಿಗೆ ನಾವು ಧನ್ಯವಾದವನ್ನರ್ಪಿಸಬೇಕು. ಭಾರತದಲ್ಲಿ ಸಹ, ಜನರು ಇದನ್ನು ಕಳೆದುಕೊಂಡಿದ್ದಾರೆ. ಇದನ್ನು ಸಂರಕ್ಷಿಸಿರುವುದು ಶ್ರೀಲಂಕಾದ ತಮಿಳರಾಗಿರುವರು.
೨೦ ವರ್ಷಗಳ ಹಿಂದೆ, ಶ್ರೀಲಂಕಾದಲ್ಲಿ ಒಂದು ಜನಾಂಗೀಯ ಶುದ್ಧೀಕರಣವಿದ್ದಾಗ, ತಮಿಳರಲ್ಲಿ ಹಲವರು ಯುರೋಪಿಗೆ ವಲಸೆ ಹೋದರು, ಮತ್ತು ಯುರೋಪಿಗೆ ಬಂದರೂ ಕೂಡಾ, ಅವರು ತಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿದರು. ಇದೊಂದು ಬಹಳ ಒಳ್ಳೆಯ ವಿಷಯ. ಯುರೋಪಿನ ವಿವಿಧ ಭಾಗಗಳಲ್ಲಿ ಸುಮಾರು ೧,೦೦,೦೦೦ ಶ್ರೀಲಂಕಾದ ಜನರು ವಾಸಿಸುತ್ತಿದ್ದಾರೆ, ಆದರೂ ಅವರು ತಮ್ಮ ಸಂಪ್ರದಾಯವನ್ನು ಸಂರಕ್ಷಿಸಿದ್ದಾರೆ. ಅವರ ಯುವಜನತೆ ಕೂಡಾ ಅದನ್ನು ಸಂರಕ್ಷಿಸಿಡಬೇಕು; ಯುವಜನರು ಕೂಡಾ ಕಲಿಯಬೇಕೆಂದು ನನಗನ್ನಿಸುತ್ತದೆ. ಇದೊಂದು ಬಹಳ ಶ್ರೀಮಂತವಾದ ಭಾಷೆ ಮತ್ತು ಸಂಸ್ಕೃತಿಯಾಗಿದೆ.
ಪ್ರಾಚೀನ ಸಂಪ್ರದಾಯದಲ್ಲಿ ಹಲವಾರು ಸಂತರು ಮತ್ತು ಗುರುಗಳಿದ್ದರು. ಅವರ ವೈಯಕ್ತಿಕ ಹೆಸರುಗಳು ಅಥವಾ ಅವರ ಪ್ರತಿಮೆಗಳನ್ನು ಹಾಕುವ ಬದಲು, ಅವರು ಕೇವಲ ಒಂದು ಚಿಹ್ನೆಯನ್ನು ಮಾಡಿದರು ಮತ್ತು ಅದನ್ನು ಬಳಸಿದರು.
ಅವರು ಮಾಡಿದುದೇನೆಂದರೆ, ಅವರು ಕೈಯಲ್ಲಿ ಒಂದು ಕೋಲನ್ನು ಹಿಡಿದಿರುವ ಒಬ್ಬ ಯುವಕನ ಚಿಹ್ನೆಯನ್ನು ಮಾಡಿದರು ಮತ್ತು ಅವರು ಅದನ್ನು ಮುರುಗ (ಅಥವಾ ಕಾರ್ತಿಕೇಯ) ಎಂದು ಕರೆದರು; ಶಿವನ ಮಗ. ಅವರು ಅವನನ್ನು (ಕಾರ್ತಿಕೇಯ), ಎಲ್ಲಾ ಗುರುಗಳನ್ನು ಪ್ರತಿನಿಧಿಸುವವನಂತೆ ಸಂಕೇತಿಸಿದರು ಮತ್ತು ಹೀಗಾಗಿ ಅವರು, ಎಲ್ಲಾ ಸಂತರು ಹಾಗೂ ಗುರುಗಳಿಗಾಗಿ ಈ ಒಂದು ಸಂಕೇತವನ್ನು ಬಳಸುವರು.
ದಕ್ಷಿಣ ಭಾರತದಲ್ಲಿ, ಮುರುಗ ಅಥವಾ ಕಾರ್ತಿಕೇಯ ದೇವಸ್ಥಾನಗಳಲ್ಲಿ, ಒಬ್ಬ ಸಂತನ; ಓರ್ವ ಸಿದ್ಧನ; ಒಬ್ಬ ಜ್ಞಾನೋದಯಗೊಂಡ ವ್ಯಕ್ತಿಯ ಶರೀರವಿರುತ್ತದೆ ಮತ್ತು ಅವನ ಸಮಾಧಿಯ ಮೇಲೆ ಈ ಪ್ರತಿಮೆ (ಒಂದು ಕೋಲಿನೊಂದಿಗಿರುವ ಯುವಕ) ಇರುತ್ತದೆ. ಹೀಗೆ, ಕಂಪನಗಳು (ದೇವಸ್ಥಾನದಲ್ಲಿ) ಬಹಳ ಶಕ್ತಿಯುತವಾಗಿರುತ್ತವೆ.
ಕೆಲವೊಮ್ಮೆ, ಒಂದು ಯಂತ್ರ; ಅಂದರೆ ಒಂದು ರೇಖಾಚಿತ್ರವನ್ನು ದೇವಸ್ಥಾನಗಳಲ್ಲಿ ಇಡಲಾಗುತ್ತದೆ. ನೀವೊಂದು ರೇಡಿಯೋವನ್ನು ತೆರೆದರೆ, ಒಂದು ವಿನ್ಯಾಸವನ್ನೊಳಗೊಂಡ ಒಂದು ಬಿಲ್ಲೆ (ಚಿಪ್) ಅಲ್ಲಿರುತ್ತದೆ. ನಿಮ್ಮ ಸೆಲ್ ಫೋನಿನಲ್ಲಿ ಕೂಡಾ ಒಂದು ಬಿಲ್ಲೆಯಿರುತ್ತದೆ. ಬಿಲ್ಲೆಯಲ್ಲೊಂದು ಸಣ್ಣ ವಿನ್ಯಾಸವಿರುತ್ತದೆ; ಅದನ್ನು ನೀವು ಮತ್ತು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಿದ್ದರೂ, ನೀವು ಆ ಬಿಲ್ಲೆಯನ್ನು ಹಾಕಿದಾಗ, ಕೇವಲ ಆ ಸಂಖ್ಯೆ ಮಾತ್ರ ನಿಮ್ಮ ಸೆಲ್ ಫೋನಿನಲ್ಲಿ ಬರುತ್ತದೆ.
ಅದೇ ರೀತಿಯಲ್ಲಿ ಈ ಯಂತ್ರಗಳು ಜಾಗತಿಕ ಚೈತನ್ಯದ ರೇಖಾಚಿತ್ರಗಳಾಗಿದ್ದವು, ಕಾಸ್ಮಿಕ್ ಚೈತನ್ಯದ ರೇಖಾಚಿತ್ರಗಳಾಗಿದ್ದವು. ಹಲವಾರು ಯಂತ್ರಗಳಿವೆ; ಅವುಗಳಲ್ಲಿ ಒಂದು ಸ್ಟಾರ್ ಆಫ್ ಡೇವಿಡ್ ; ಅದನ್ನು ಯಹೂದಿ ಸಂಪ್ರದಾಯದಲ್ಲಿ ಬಳಸಲಾಗುತ್ತದೆ.
ಈ ಯಂತ್ರಗಳನ್ನು ಚಾರ್ಜ್ ಮಾಡಿ ಇಡಲಾಗುತ್ತದೆ (ದೇವಸ್ಥಾನಗಳಲ್ಲಿ), ಮತ್ತು ಪ್ರತಿಮೆಗಳನ್ನು ಈ ಯಂತ್ರಗಳ ಮೇಲೆ ಇರಿಸಲಾಗುತ್ತದೆ. ಪ್ರತಿಮೆಯು ಮುಖ್ಯವಲ್ಲ. ಆದರೆ ಅಡಿಯಲ್ಲಿರುವ ಈ ಯಂತ್ರ, ಈ ರೇಖಾಚಿತ್ರವು ಅತ್ಯಂತ ಮುಖ್ಯವಾಗಿದೆ.
ಮಂತ್ರ, ಯಂತ್ರ ಮತ್ತು ತಂತ್ರಗಳಿವೆ. ತಂತ್ರ; ಅಂದರೆ, ಯಂತ್ರ, ರೇಖಾಚಿತ್ರವನ್ನು ಹೇಗೆ ಚೈತನ್ಯಭರಿತಗೊಳಿಸುವುದು; ಅದನ್ನು ಮಾಡಲಿರುವ ವಿಧಾನವು ತಂತ್ರವಾಗಿದೆ. ಇದಕ್ಕಾಗಿಯೇ ನಮ್ಮಲ್ಲಿ ಯಜ್ಞಗಳಿರುವುದು (ಪಂಚಭೂತಗಳ ಮೂಲಕ ಕಾಸ್ಮಿಕ್ ಚೈತನ್ಯವನ್ನು ಕೆಳತರಲು ಉಪಯೋಗಿಸುವ ತಂತ್ರಗಳಲ್ಲೊಂದು). ಎಷ್ಟು ಗಿಡಮೂಲಿಕೆಗಳನ್ನು ತೆಗೆದುಕೊಳ್ಳಬೇಕು, ಅವುಗಳನ್ನು ಹೇಗೆ ತೆಗೆದುಕೊಳ್ಳಬೇಕು, ಮಂತ್ರೋಚ್ಛಾರಣೆಯನ್ನು ಹೇಗೆ ಮಾಡಬೇಕು ಎಂಬುದು ಒಬ್ಬನಿಗೆ ತಿಳಿದಿರಬೇಕು.
ಒಂದು ಯಜ್ಞದಲ್ಲಿ, ಮಂತ್ರೋಚ್ಛಾರಣೆಯ ಮೂಲಕ ಚೈತನ್ಯವನ್ನು ಆಕಾಶ ತತ್ವದಿಂದ ವಾಯು ತತ್ವಕ್ಕೆ; ನಂತರ ಅಗ್ನಿ ತತ್ವಕ್ಕೆ; ನಂತರ ಅಗ್ನಿಯಿಂದ ಜಲಕ್ಕೆ ಮತ್ತು ಜಲದಿಂದ ಯಂತ್ರ; ರೇಖಾಚಿತ್ರಕ್ಕೆ (ಪೃಥ್ವಿ ತತ್ವ) ಕೆಳತರಲಾಗುತ್ತದೆ. ಹೀಗೆ ಯಜ್ಞಗಳಲ್ಲಿ, ಈ ಶಕ್ತಿಯನ್ನು ಸೂಕ್ಷ್ಮದಿಂದ ಸ್ಥೂಲಕ್ಕೆ ಕೆಳತರಲಾಗುತ್ತದೆ; ಇದು ಇಡೀ ತಂತ್ರವಾಗಿದೆ.
ಈ ಸಂಪ್ರದಾಯದ, ಈ ತಂತ್ರದ ಶುದ್ಧತೆಯೆಲ್ಲಾ ಕಳೆದುಹೋಗುತ್ತಾ ಇತ್ತು, ಆದರೆ ನಾವು ಅದನ್ನು ನಮ್ಮ ಬೆಂಗಳೂರಿನ ಆಶ್ರಮದಲ್ಲಿ ಪುನರುಜ್ಜೀವನಗೊಳಿಸಿದೆವು. ನೀವು ಆಶ್ರಮದಲ್ಲಿ ವೇದ ಆಗಮ ಹುಡುಗರನ್ನು ನೋಡಿರಬಹುದು; ಅವರು ಈ ಪ್ರಾಚೀನ ಸಂಪ್ರದಾಯವನ್ನು ಕಲಿಯುತ್ತಿದ್ದಾರೆ, ಅಧ್ಯಯನ ನಡೆಸುತ್ತಿದ್ದಾರೆ ಮತ್ತು ಪುನರುಜ್ಜೀವನಗೊಳಿಸುತ್ತಿದ್ದಾರೆ, ಇಲ್ಲದಿದ್ದರೆ ಅದು ಬಹುತೇಕ ಹೋಗಿತ್ತೆಂದೇ ಹೇಳಬಹುದು.
ನಾವು ಈ ಶಾಲೆಯನ್ನು (ವೇದ ಪಾಠಶಾಲಾ) ೧೯೮೧ರಲ್ಲಿ ಆರಂಭಿಸಿದೆವು; ಬಹುತೇಕ ನಾವು ದಿ ಆರ್ಟ್ ಆಫ್ ಲಿವಿಂಗ್‌ನ್ನು ಆರಂಭಿಸಿದ ಸಮಯದಲ್ಲೇ. ಈ ಸಾಯುತ್ತಿರುವ ಸಂಪ್ರದಾಯವನ್ನು ಸಂರಕ್ಷಿಸಲು ನಾವು ಈ ಶಾಲೆಯನ್ನು ಆರಂಭಿಸಿದೆವು.
ಆ ಸಮಯದಲ್ಲಿ, ಈ ಜ್ಞಾನವಿದ್ದ ಹಲವಾರು ವಯಸ್ಸಾದ ವ್ಯಕ್ತಿಗಳನ್ನು ನಾವು ಕರೆದೆವು ಮತ್ತು ಅದನ್ನು ಯುವಜನರಿಗೆ ವರ್ಗಾಯಿಸುವಂತೆ ಅವರಲ್ಲಿ ಕೇಳಿಕೊಂಡೆವು. ಇದೊಂದು ವಿಶ್ವ ಪರಂಪರೆಯಾಗಿದೆ, ಅದು ಕಳೆದುಹೋಗುವುದನ್ನು ನಾವು ಬಯಸುವುದಿಲ್ಲ. ನಿಜವಾಗಿ, ವೈದಿಕ ಜ್ಞಾನದಲ್ಲಿ ಹೆಚ್ಚಿನದು ಕಳೆದುಹೋಗಿದೆ.
ಆಯುರ್ವೇದವನ್ನು ಈಗ ಪುನರುಜ್ಜೀವನಗೊಳಿಸಲಾಗುತ್ತಿದೆ. ೧೯೮೧ರಲ್ಲಿ, ಆಯುರ್ವೇದ ಕೂಡಾ ಬಹುತೇಕ ಕಳೆದುಹೋಗುತ್ತಲಿತ್ತು. ಇದೆಲ್ಲಾ; ಶಿರೋಧಾರ ಮತ್ತು ಇತರ ಕೆಲವು ಚಿಕಿತ್ಸೆಗಳು ಕೇರಳದ ಒಂದು ಸಣ್ಣ ಹಳ್ಳಿಯಲ್ಲಿ ಮಾತ್ರ ಇತ್ತು; ನೀವು ಊಹಿಸಬಲ್ಲಿರೇ? ಉತ್ತರ ಭಾರತದಲ್ಲಿ, ಜನರಿಗೆ ಅದರ ಬಗ್ಗೆ ತಿಳಿದೂ ಇರಲಿಲ್ಲ! ದಿಲ್ಲಿಯಲ್ಲಿ, ಶಿರೋಧಾರ ಎಂದರೇನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಅದರ ಬಗ್ಗೆ ದಿಲ್ಲಿಯಲ್ಲೇ ತಿಳಿದಿರಲಿಲ್ಲ ಎಂದ ಮೇಲೆ, ಪ್ರಪಂಚದಲ್ಲಿ ಬೇರೆ ಯಾರಾದರೂ ತಿಳಿದಿರುವುದು ಹೇಗೆ? ಮೊದಲ ಆಯುರ್ವೇದ ಸಮ್ಮೇಳನವನ್ನು ನಾವು ದಿಲ್ಲಿಯಲ್ಲಿ ಆಯೋಜಿಸಿದೆವು. ನಾವು ಈ ಎಲ್ಲಾ ಜನರನ್ನು ಹಳ್ಳಿಗಳಿಂದ ಕರೆತಂದೆವು ಮತ್ತು ಎಲ್ಲರಿಗೂ ಕಲಿಸುವಂತೆ ಅವರಲ್ಲಿ ಕೇಳಿಕೊಂಡೆವು. ಈಗ, ಕಳೆದ ೩೫ ವರ್ಷಗಳಲ್ಲಿ ಆಯುರ್ವೇದವು ಹೇಗೋ ಮುನ್ನಡೆಯುತ್ತಿದೆ.
ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯಗಳಂತಹ ಇತರ ಹಲವಾರು ವೈದಿಕ ಜ್ಞಾನವು ಕಳೆದುಹೋಗಿದೆ. ನಮ್ಮಲ್ಲಿ ಈಗ ವಾಸ್ತು ಶಾಸ್ತ್ರದ ಎಲ್ಲಾ ಗ್ರಂಥಗಳಿಲ್ಲ.
ವೇದಗಳು ಕೂಡಾ; ಸಾಮವೇದದ ೧,೦೦೦ ಶಾಖೆಗಳಿದ್ದವು ಎಂದು ಹೇಳಲಾಗಿದೆ, ಇವತ್ತು ಕೇವಲ ಮೂರು ಮಾತ್ರ ಲಭ್ಯವಾಗಿವೆ, ಉಳಿದವು ಹೋಗಿವೆ. ಋಗ್ವೇದದಲ್ಲಿ ೨೧ ಶಾಖೆಗಳಿದ್ದವು, ಆದರೆ ಇವತ್ತು ಒಂದೇ ಒಂದು ಲಭ್ಯವಿದೆ.
ಬಹಳಷ್ಟು ಜ್ಞಾನವು ಮಧ್ಯಯುಗಗಳಲ್ಲೇ ಕಳೆದುಹೋಗಿತ್ತು. ಒಬ್ಬ ಬಹಳ ಹುಚ್ಚ ಮೊಗಲ್ ರಾಜನಿದ್ದ, ಅವನು, ಎಲ್ಲಾ ಗ್ರಂಥಗಳನ್ನು ಹಾಗೂ ವಿಶ್ವವಿದ್ಯಾಲಯಗಳನ್ನು ಸುಟ್ಟುಹಾಕುವಂತೆ ಜನರಿಗೆ ಆಜ್ಞೆ ನೀಡಿದ. ಕೆಲವು ಜನರು ಈ ಗ್ರಂಥಗಳಲ್ಲಿ ಹಲವನ್ನು ಬಾಯಿಪಾಠ ಮಾಡಿದ್ದರು. ಈಗ, ಅದು ಕೂಡಾ ಕಳೆದುಹೋಗುತ್ತಲಿತ್ತು. ಹಾಗಾಗಿ ನಾವು, "ಇಲ್ಲ, ನಾವಿದನ್ನು ಸಂರಕ್ಷಿಸಬೇಕು" ಎಂದು ಹೇಳಿದೆವು! ತಮಿಳುನಾಡಿನಲ್ಲಿ, ಅವರು ಇದನ್ನೆಲ್ಲಾ ಸಂರಕ್ಷಿಸಿಟ್ಟಿದ್ದಾರೆ, ಅದು ಕಳೆದುಹೋಗಿಲ್ಲ. ಸಂಸ್ಕೃತದಲ್ಲಿ, ಅದರಲ್ಲಿ ಹೆಚ್ಚಿನದು ಕಳೆದುಹೋಗಿತ್ತು. ಹೀಗಾಗಿ ಶ್ರೀಲಂಕಾದವರಿಗೆ ಧನ್ಯವಾದಗಳು, ಅವರಲ್ಲಿ ಈ ಎಲ್ಲಾ ಜ್ಞಾನವಿದೆ.
ಹಾಗೆಯೇ ಶ್ರೀಲಂಕಾದಲ್ಲಿ ಒಂದು ವಿಭಿನ್ನ ವೈದ್ಯಕೀಯ ಪದ್ಧತಿಯಿದೆ, ಇದು ಸಿದ್ಧ ಔಷಧಿ ಎಂದು ಕರೆಯಲ್ಪಡುತ್ತದೆ; ಅದು ಬಹುತೇಕ ಮಸುಕಾಗಿ ಹೋಗುತ್ತಿದೆ. ಸಿದ್ಧ ಔಷಧಿಯು ಆಯುರ್ವೇದದ ಹಾಗೆಯೇ, ಆದರೂ ವಿಭಿನ್ನವಾದುದು. ನಾವದನ್ನು ಪುನಶ್ಚೇತನಗೊಳಿಸಬೇಕಾಗಿದೆ. ಜನರು ಈಗ ಈ ಜ್ಞಾನವನ್ನು ಸ್ವೀಕರಿಸುವಲ್ಲಿ ಹೆಚ್ಚು ತೆರೆದ ಮನಸ್ಸಿನವರಾಗಿದ್ದಾರೆಂದು ನನಗನ್ನಿಸುತ್ತದೆ; ಅವರದನ್ನು ಅರ್ಥಮಾಡಿಕೊಳ್ಳಲು ಮತ್ತು ಅದರ ಲಾಭಗಳನ್ನು ಅರಿತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಚೈನಾದ ಔಷಧಿ ಕೂಡಾ ಆಯುರ್ವೇದದ ಒಂದು ಶಾಖೆಯಾಗಿದೆ; ಅದು ಚೈನಾಕ್ಕೆ ಭಾರತದಿಂದ, ಬೌದ್ಧಧರ್ಮದೊಂದಿಗೆ ಹೋಯಿತು. ಅದು ಕೂಡಾ ಅದೇ ನಾಡಿ ಪರೀಕ್ಷೆಯನ್ನು ಆಧರಿಸಿದೆ. ಚೈನಾದಲ್ಲಿ ಹಲವಾರು ವಿಭಿನ್ನ ಗಿಡಮೂಲಿಕೆಗಳು ಲಭ್ಯವಿದ್ದವು. ಜಾಗ ಮತ್ತು ಆಹಾರ ಅಭ್ಯಾಸಗಳಿಗೆ ಸರಿಹೊಂದಲು ಅವರಲ್ಲಿ ವಿವಿಧ ಬದಲಿ ಔಷಧಿಗಳಿದ್ದವು. ಚೈನಾದ ಔಷಧಿಯು ಅಲ್ಲಿ ಅಭಿವೃದ್ಧಿ ಹೊಂದಿತು, ಆದರೆ ಅದರ ಬೇರುಗಳು ಮೂಲತಃ ಭಾರತದಲ್ಲಿವೆ.
ಅದೇ ರೀತಿಯಲ್ಲಿ, ನಾವು ಸಿದ್ಧ ಔಷಧಿಯ ಬಗ್ಗೆ ಕೂಡಾ ಏನನ್ನಾದರೂ ಮಾಡಬೇಕು. ಅದು ಕರ್ಪೂರದ ಮೇಲೆ ಆಧಾರಿತವಾದುದು ಮತ್ತು ಅದರಲ್ಲಿ ಹೆಚ್ಚಿನದು ಒಂದು ಹಿಟ್ಟು ಆಗಿದೆ; ಜಾಮ್‌ನ ಹಾಗೆ ಸ್ವಲ್ಪ. ಅವರದನ್ನು ಬ್ರೆಡ್ಡಿನ ಮೇಲೆ ಹಾಕಿ ತಿನ್ನಬಹುದು. ಅದರಲ್ಲಿ ಹೆಚ್ಚಿನದಕ್ಕೆ ಒಂದು ಕರ್ಪೂರದ ವಾಸನೆಯಿರುತ್ತದೆ.
ಅದು ಚರಿತ್ರೆ!
ಎಲ್ಲರೂ ಸಂತೋಷವಾಗಿರುವಿರೇ? ಕೇವಲ ಎರಡು ದಿನಗಳ ಹಿಂದೆ, ವಿಶ್ವ ಸಂತೋಷದ ದಿನವಾಗಿತ್ತು. ನಮಗೆ, ಪ್ರತಿದಿನವೂ ಒಂದು ಸಂತೋಷದ ದಿನವಾಗಿದೆ. ನಾವು ಮಾಡಬೇಕಾದ ಮುಖ್ಯ ಸಂಗತಿಯೆಂದರೆ, ಒಂದು ವಿಷಯವನ್ನು ಗೌರವಿಸುವುದು. ಆ ಒಂದು ವಿಷಯ ಯಾವುದು? ಅದು ಏನೂ ಇಲ್ಲ! ನೀವು ಏನೂ ಇಲ್ಲದಿರುವುದನ್ನು ಗೌರವಿಸಲು ಕಲಿಯಬೇಕು!
ಏನನ್ನಾದರೂ ಮಾಡುವ ಮೊದಲು, ಅಲ್ಲಿ ಏನೂ ಇರುವುದಿಲ್ಲ. ಏನನ್ನಾದರೂ ಮಾಡಿದ ಬಳಿಕ, ಅಲ್ಲಿ ಏನೂ ಇರುವುದಿಲ್ಲ. ಹೀಗಾಗಿ, ಎನೂ ಇಲ್ಲದಿರುವುದೇ ನಿಜಕ್ಕೂ ಎಲ್ಲವೂ ಆಗಿದೆ! ಎಲ್ಲವೂ ಆಗಿರುವ ಆ ಏನೂ ಇಲ್ಲದಿರುವುದನ್ನು ಗೌರವಿಸಿ! ಅದು ನಿರ್ವಾಣ! ಅದು ಯೇಸುಕ್ರಿಸ್ತನ ಮುಕ್ತಿ! ಅದು ಬುದ್ಧನ ನಿರ್ವಾಣ! ಅದು ವೇದ ಸಂಪ್ರದಾಯದ ಶಂಕರಾಚಾರ್ಯರ ಮುಕ್ತಿ ಅಥವಾ ಮೋಕ್ಷ!
ಯಾವುದೇ ಭಾವನೆಯ ಮೊದಲು, ಅಲ್ಲಿ ಏನೂ ಇಲ್ಲ. ಯಾವುದೇ ಭಾವನೆಯ ನಂತರ, ಅಲ್ಲಿ ಏನೂ ಇಲ್ಲ. ಯಾವುದು ಯಾವತ್ತೂ ಅಲ್ಲಿರುವುದೋ ಅದು ಏನೂ ಇಲ್ಲ!
ನೋಡಿ ನೀವು ಎಷ್ಟು ಸಂತೋಷಗೊಂಡಿರಿ! ಎಲ್ಲವೂ ಏನೂ ಅಲ್ಲ!
ಕೆಲವು ಹಿತಕರ ವಿಷಯಗಳು ಜೀವನದಲ್ಲಿ ಸಂಭವಿಸುತ್ತವೆ, ಕೆಲವು ಅಹಿತಕರ ವಿಷಯಗಳು ಜೀವನದಲ್ಲಿ ಸಂಭವಿಸುತ್ತವೆ; ಕೆಲವು ಜನರು ನಿಮ್ಮನ್ನು ಬೈಯುತ್ತಾರೆ, ಕೆಲವು ಜನರು ನಿಮ್ಮನ್ನು ಹೊಗಳುತ್ತಾರೆ, ಆದರೆ ಅಂತಿಮವಾಗಿ, ಎಲ್ಲವೂ ಏನೂ ಅಲ್ಲ!
ಹಲವು ಸಂಬಂಧಗಳು ಬರುತ್ತವೆ ಮತ್ತು ಹಲವು ಸಂಬಂಧಗಳು ಹೋಗುತ್ತವೆ, ಅಂತಿಮವಾಗಿ, ಎಲ್ಲವೂ ಏನೂ ಅಲ್ಲ! ಅರ್ಥವಾಯಿತೇ?
ಜೀವನವು ಏನೂ ಇಲ್ಲದಿರುವುದರಿಂದ ಪ್ರತ್ಯಕ್ಷವಾಗಿದೆ, ಮತ್ತು ಏನೂ ಇಲ್ಲದಿರುವುದಕ್ಕೆ ಮರಳಿ ಹೋಗುತ್ತದೆ. ಅದಕ್ಕಾಗಿ ಇದಕ್ಕಾಗಿ ಹಂಬಲಿಸುವುದು ಯಾಕೆ? ಹೇಗಿದ್ದರೂ ಎಲ್ಲವೂ ಮಾಡಲ್ಪಡುತ್ತದೆ. ಎಲ್ಲವೂ ಏನೂ ಅಲ್ಲ!
ಭಗವಾನ್ ಬುದ್ಧನು ಇದನ್ನು ಹೃದಯ ಸೂತ್ರ ಎಂದು ಕರೆದನು; ಅದು ಯಾವುದೆಂದರೆ, ’ಎಲ್ಲವೂ ಏನೂ ಅಲ್ಲ!’
ಎಲ್ಲವೂ ಏನೂ ಅಲ್ಲವೆಂಬುದನ್ನು ನೀವು ತಿಳಿದಾಗ, ನಿಮ್ಮಲ್ಲಿ ಪ್ರೇಮವು ಉದಯಿಸುತ್ತದೆ. ಇಲ್ಲದಿದ್ದರೆ, "ನನಗೆ ಇದು ಬೇಕು! ನಾನಿದನ್ನು ಹಿಡಿದಿಡಲು ಬಯಸುತ್ತೇನೆ!", ಆಗ ಅಹಂಕಾರವು ಬರುತ್ತದೆ. ಎಲ್ಲವೂ ಏನೂ ಅಲ್ಲವೆಂಬುದನ್ನು ನೀವು ಅರಿತುಕೊಂಡಾಗ, ಅಹಂಕಾರವು ಕರಗುತ್ತದೆ. ಅಹಂಕಾರವು ಕರಗಿದಾಗ, ಪ್ರೇಮವು ಏಳುತ್ತದೆ ಮತ್ತು ಅದು ನೀವು ಈಗಾಗಲೇ ಆಗಿರುವಿರಿ!
ಸಾರ್ವತ್ರಿಕವಾದ, ಶಾಶ್ವತವಾದ ಒಂದು ಪ್ರೇಮ; ಇದುವೇ ಪ್ರತಿಯೊಬ್ಬ ಮನುಷ್ಯನ ಉತ್ಕಟ ಇಚ್ಛೆ, ಮತ್ತು ನೀವದನ್ನು ಹೃದಯ ಸೂತ್ರದ ಮೂಲಕ ಪಡೆದುಕೊಳ್ಳಬಹುದು. ಹೃದಯ ಸೂತ್ರ ಯಾವುದು? ಎಲ್ಲವೂ ಏನೂ ಅಲ್ಲ ಎಂಬುದನ್ನು ನೀವು ಅರಿತುಕೊಂಡಾಗ!
ನೀವೊಂದು ಕಮಲದಂತಿರಬೇಕು ಎಂದು ಹೇಳಲಾಗಿದೆ, ಯಾಕೆಂದು ನಿಮಗೆ ಗೊತ್ತಾ? ಕಮಲವು ಒಂದು ಕೆಸರಿನ ಕೊಳದಲ್ಲಿದ್ದರೂ, ಕೆಸರಿನ ಒಂದು ಹನಿಯೂ, ಒಂದು ಚಿಟಿಕೆ ಕೆಸರು ಕೂಡಾ ಕಮಲದ ಎಲೆಗೆ ಅಥವಾ ಹೂವಿಗೆ ಅಂಟಿಕೊಳ್ಳುವುದಿಲ್ಲ. ಕಮಲದ ಎಲೆಯು ನೀರಿನಲ್ಲಿರುತ್ತದೆ, ಆದರೆ ನೀವೊಂದು ಹನಿ ನೀರನ್ನು ಅದರ ಮೇಲೆ ಹಾಕಿದರೆ, ಅದೊಂದು ರತ್ನದಂತೆ ನಿಲ್ಲುತ್ತದೆ, ಅದು ಎಲೆಗೆ ಅಂಟಿಕೊಳ್ಳುವುದಿಲ್ಲ. ಆದುದರಿಂದ, ಈ ಪ್ರಪಂಚದಲ್ಲಿ ಒಂದು ಕಮಲದ ಎಲೆಯಂತಿರಿ ಅಂದರೆ, ಇಲ್ಲಿರಿ (ಪ್ರಪಂಚದಲ್ಲಿ) ಆದರೆ ಯಾವುದಕ್ಕೂ ಅಂಟಿಕೊಳ್ಳಬೇಡಿ ಎಂದು ಅರ್ಥ. ಎಲ್ಲಾ ಕೆಲಸ ಮಾಡಿ, ಆದರೆ ಅದನ್ನು ನಿಮ್ಮ ತಲೆಯೊಳಕ್ಕೆ ಒಯ್ಯಬೇಡಿ.
ಅದು ಸುಂದರವಾಗಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಈ ಯೋಚನೆಯನ್ನು ಇಷ್ಟಪಡುತ್ತೀರಿ? ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿಟ್ಟುಕೊಳ್ಳುವ ವಿಧಾನ ಇದು. ನಾವು ಮಕ್ಕಳಾಗಿದ್ದಾಗ ನಮಗೆ ನೀಡಲಾಗಿದ್ದ ಸಲಹೆ ಅದು; ನಾವೊಂದು ಕಮಲದ ಎಲೆಯಂತಿರಬೇಕು.