ಸೋಮವಾರ, ಮಾರ್ಚ್ 31, 2014

ಅಪೇಕ್ಷೆಗಳನ್ನು ತ್ಯಜಿಸಿ ನಿರಾಳವಾಗಿರಿ

೩೧ ಮಾರ್ಚ್ ೨೦೧೪
ಬೆಂಗಳೂರು, ಭಾರತ

ನಾವು ಭೂತಕಾಲದಿಂದ ಪಾಠಗಳನ್ನು ತೆಗೆದುಕೊಳ್ಳಬೇಕು ಮತ್ತು ಭೂತಕಾಲದಿಂದ ಆಘಾತವನ್ನಲ್ಲ.
ಸಾಮಾನ್ಯವಾಗಿ, ಜನರು ಭೂತಕಾಲದ ನಕಾರಾತ್ಮಕತೆಗಳನ್ನು ಹಿಡಿದಿಟ್ಟುಕೊಂಡಿರುತ್ತಾರೆ ಮತ್ತು ಭವಿಷ್ಯದ ಬಗ್ಗೆ ಅನಿಶ್ಚಿತತೆ, ಆತಂಕ ಮತ್ತು ಭಯಗಳನ್ನು ಅನುಭವಿಸುತ್ತಾರೆ. ಇದು ಜೀವಿಸುವ ಮೂರ್ಖ ವಿಧಾನವಾಗಿದೆ. ಜ್ಞಾನಿಗಳು, ಬುದ್ಧಿವಂತ ಜನರು ತದ್ವಿರುದ್ಧವಾಗಿ ಮಾಡುತ್ತಾರೆ. ಅವರು ಭೂತಕಾಲದಿಂದ ಪಾಠವನ್ನು ಕಲಿಯುತ್ತಾರೆ ಮತ್ತು ಭವಿಷ್ಯಕ್ಕಾಗಿ ಭರವಸೆ ಹಾಗೂ ಉತ್ಸಾಹಗಳನ್ನು ಇಟ್ಟುಕೊಳ್ಳುತ್ತಾರೆ, ಆತಂಕವನ್ನಲ್ಲ. ಹಾಗಾದರೆ ನೀವೆಲ್ಲರೂ ಬುದ್ಧಿವಂತ ಜನರು, ಅಲ್ಲವೇ?

ಪ್ರಶ್ನೆ: ಗುರುದೇವ, ಪ್ರೀತಿಯು ಕಹಿಯಾಗಿ ಮಾರ್ಪಾಡಾಗುವಾಗ ಏನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ಸುಮ್ಮನೆ ಕಾಯುತ್ತಿರು, ಪ್ರತಿಕ್ರಿಯಿಸಬೇಡ, ಕಹಿತನವು ಮತ್ತೆ ಪ್ರೀತಿಯಾಗಿ ತಿರುಗುವುದು. ನೀವು ಹೆಚ್ಚಾಗಿ ನೋಡುವುದೇನೆಂದರೆ, ಯಾವ ಜನರಿಗಾಗಿ ನೀವು ಬಹಳಷ್ಟನ್ನು ಮಾಡಿರುವಿರೋ ಅವರು ಕಹಿಯಾಗುತ್ತಾರೆ! ಮತ್ತು ನೀವು, ಎಲ್ಲರೂ ಒಂದು ಜ್ಞಾನೋದಯದ ಸ್ಥಿತಿಯಲ್ಲಿರಬೇಕೆಂದು ನಿರೀಕ್ಷಿಸುತ್ತೀರಿ, ಜಗತ್ತಿನಲ್ಲಿ ಅದು ಸಾಧ್ಯವಿಲ್ಲ.
ಎಲ್ಲರೂ ನಗುತ್ತಾ, ನಿಮ್ಮನ್ನು ನೀವಿರುವಂತೆಯೇ ಸ್ವೀಕರಿಸುವುದಿಲ್ಲ ಮತ್ತು ಬೇಷರತ್ತಾಗಿ ಪ್ರೀತಿಸುವ ಹಾಗೂ ಕೊಡುವ ಜಾಗದಲ್ಲಿರುವುದಿಲ್ಲ. ಅದು ಸಾಧ್ಯವಿಲ್ಲ. ನೀವು ಪ್ರತಿಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ನೀವದನ್ನು ಎದುರಿಸಬೇಕು, ಅಷ್ಟೇ.

ಪ್ರಶ್ನೆ: ಗುರುದೇವ, ವೀಕ್ಷಕನು ಯಾರು? ನಮ್ಮ ಗುರಿಯು ವೀಕ್ಷಕನೊಂದಿಗೆ ವಿಲೀನಗೊಳ್ಳುವುದೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ಗುರಿಯಿಲ್ಲ, ವಿಲೀನವಾಗಲು ಏನೂ ಇಲ್ಲ. ಅದು ಅಲ್ಲಿದೆ, ಅಷ್ಟೇ. ತಿಳಿಯಿತೇ? ಅಲ್ಲೇನಿರುವುದೋ ಅದು ಅಲ್ಲಿದೆ. ವರ್ತಮಾನದ ಕ್ಷಣದಲ್ಲಿ ಅದು ಯಾವತ್ತೂ ಇದೆ; ಸಾಕ್ಷಿಯು ಅಲ್ಲಿದೆ. ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆ, ಅದು ಸಾಕ್ಷಿಯಾಗಿದೆ.
ನೀನು ಮಾಡಬೇಕಾಗಿರುವುದು ಏನೆಂದರೆ, ಮನಸ್ಸು ಒಂದರ ನಂತರ ಒಂದರಂತೆ ಬಯಕೆಗಳಿಂದ ಮುಚ್ಚಿಕೊಳ್ಳುತ್ತಾ ಇದೆ ಎಂಬುದನ್ನು ತಿಳಿಯುವುದು. ಬಯಕೆಗಳ ಈ ಸುರಿಮಳೆಯು, ನೀನು ಯಾವ ಶುಭ್ರ ಆಕಾಶವಾಗಿರುವೆಯೋ ಅದನ್ನು ನೋಡಲು ನಿನಗೆ ಬಿಡುವುದಿಲ್ಲ. ಹೀಗಾಗಿ, ಬಯಕೆಗಳನ್ನು ಎಸೆದುಬಿಡು.
’ವಿಹಾಯ ಕಾಮನ್ ಯಃ ಸರ್ವಾನ್ ಪುಮಾಂಶ್ಚರತಿ ನಿಃಸ್ಪೃಹಃ  I
ನಿರ್ಮಮೋ ನಿರಹಂಕಾರಃ ಸ ಶಾಂತಿಮಧಿಗಚ್ಛತಿ II’ (೨.೭೧)
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳಿರುವನು, ’ಬಯಕೆಗಳನ್ನು ಎಸೆ, ಮತ್ತು ನಂತರ ನಿನಗೆ ವಿಶ್ರಾಮ ದೊರೆಯುವುದು.’ ಇಲ್ಲದಿದ್ದರೆ, ಒಂದಲ್ಲ ಒಂದಕ್ಕಾಗಿ ಸುಡುವ ಬಯಕೆಯಿರುತ್ತದೆ, ಮತ್ತು ಇದು ನಿಮ್ಮನ್ನು ಓಡಿಸಿಕೊಂಡಿರುತ್ತದೆ.
ನೀವು ಟ್ರೆಡ್‌ಮಿಲ್‌ನ ಮೇಲೆ ಓಡುತ್ತಿರುವವರೆಗೆ (ಅಂದರೆ ಬಯಕೆಗಳ ಹಿಂದೆ), ವಿಶ್ರಾಮವಿಲ್ಲ. ಎಲ್ಲೋ ಒಂದುಕಡೆ ನೀವು ’ನಿಲ್ಲು’ ಎಂಬ ಗುಂಡಿಯನ್ನು ಅದುಮಿ ಕುಳಿತುಕೊಳ್ಳಬೇಕಾಗುತ್ತದೆ! ಇದನ್ನೇ ನಾವು ಮಾಡುತ್ತಿರುವುದು. ಟ್ರೆಡ್‌ಮಿಲ್‌ನ ಮೇಲೆ ಓಡುವುದು ಮತ್ತು ನಾಗಾಲೋಟದಿಂದ ಓಡುವುದು ನಿಮ್ಮನ್ನು ಎಲ್ಲಿಗೂ ಕರೆದೊಯ್ಯುವುದಿಲ್ಲ. ಕಾಲದಿಂದ ಕಾಲಕ್ಕೆ ನೀವು ಮತ್ತೆ ಮತ್ತೆ ವಿಶ್ರಾಮ ಮಾಡುವಾಗ, ನಿಮಗೆ ಸತ್ಯದ ಅರಿವಾಗುತ್ತದೆ. ಆದರೆ ಆ ಸ್ಥಿತಿ ಕೂಡಾ ಯಾವತ್ತೂ ಇರಲು ಸಾಧ್ಯವಿಲ್ಲ. ಪುನಃ ಇನ್ನೊಂದು ಯೋಚನೆ, ಇನ್ನೊಂದು ಬಯಕೆ ಬರುವುದು.
ಯೋಗಿ ಅಂದರೆ ಏನರ್ಥ? ಯಾರಿಗೆ ಒಂದು ವರ್ಷದಲ್ಲಿ ಒಂದು ಬಯಕೆ ಬರುವುದೋ ಅವನು.
ಅಯೋಗಿ ಅಂದರೆ ಏನರ್ಥ? ಯಾರಿಗೆ ಪ್ರತಿಕ್ಷಣದಲ್ಲೂ, ಪ್ರತಿದಿನವೂ ಒಂದು ದಶಲಕ್ಷ ಬಯಕೆಗಳು ಬರುವುವೋ ಅವನು.
ಹೀಗಾಗಿ ನಿಮ್ಮ ಬಯಕೆಗಳನ್ನು ಕಡಿಮೆಮಾಡಿಕೊಳ್ಳಿ. ತಿಳಿಯಿತೇ?
ಈಗ ನೀವು ಕೇಳಲೂಬಹುದು, "ನಾನು ನನ್ನ ಬಯಕೆಗಳನ್ನು ಹೇಗೆ ಕಡಿಮೆಮಾಡಿಕೊಳ್ಳಬಹುದು?" ಎಲ್ಲವೂ ಮುಕ್ತಾಯವಾಗಲಿದೆ ಎಂಬುದನ್ನು ತಿಳಿಯಿರಿ! ಅಷ್ಟೇ. ಇದು ವೈರಾಗ್ಯ, ಮತ್ತು ಇದಕ್ಕಾಗಿ ನಿಮಗೆ ಯಾವುದೇ ಅಭ್ಯಾಸದ ಅಗತ್ಯವಿಲ್ಲ.
ಎಲ್ಲವೂ ಮುಕ್ತಾಯವಾಗಲಿದೆ! ಈ ಒಂದು ಯೋಚನೆಯು ಬಯಕೆಗಳಿಗಿರುವ ಪ್ರತಿವಿಷವಾಗಿದೆ. ಎಲ್ಲವೂ ಮುಕ್ತಾಯಗೊಳ್ಳಲಿದೆ. ಇದು ಧ್ಯಾನವಾಗಿದೆ. ವೈರಾಗ್ಯವಿಲ್ಲದೆ, ಧ್ಯಾನವು ಅಸಾಧ್ಯಕ್ಕೆ ಹತ್ತಿರವೆಂದು ಹೇಳಬಹುದು!
   
ಪ್ರಶ್ನೆ: ಗುರುದೇವ, ದೇವರೇ ಒಂದು ತೊಂದರೆಯಾಗಿರುವಾಗ, ಮಾಡುವುದೇನು?

ಶ್ರೀ ಶ್ರೀ ರವಿ ಶಂಕರ್: ದೇವರಿಗೆ ಒಂದು ತೊಂದರೆಯಾಗಬೇಡ!
ದೇವರು ನಿಮಗೆ ಒಂದು ತೊಂದರೆಯೆಂದು ನೀವು ಯೋಚಿಸುವಾಗ, ನೀವು ದೇವರಿಗೆ ಒಂದು ತೊಂದರೆಯಾಗಿರುತ್ತೀರಿ! ಇದೊಂದು ಸಮಸ್ಯೆಯಾಗುತ್ತದೆ.
ಒಮ್ಮೆ ಜೆಮ್ಶದ್‌ಪುರದಲ್ಲೋ ಅಥವಾ ಎಲ್ಲೋ ಒಬ್ಬಳು ಮಹಿಳೆಯು ೮ ದಿನಗಳವರೆಗೆ ಉಪವಾಸ ಮಾಡಿದಳು ಮತ್ತು ತಾನು ಗುರುದೇವರೊಂದಿಗೆ ಮಾತನಾಡುವಲ್ಲಿಯವರೆಗೆ ಆಹಾರ ತೆಗೆದುಕೊಳ್ಳುವುದಿಲ್ಲವೆಂದು ಅವಳು ಹೇಳಿದಳು.
ನಾನಂದೆ, "ಇದೊಂದು ದೊಡ್ಡ ಸಮಸ್ಯೆ". ನಾನು ಪ್ರಪಂಚದ ಸುತ್ತಲೂ ಪ್ರಯಾಣ ಮಾಡುತ್ತಿರುತ್ತೇನೆ, ಕೆಲವು ಸ್ಥಳಗಳಲ್ಲಿ ದೂರವಾಣಿ ಸಂಪರ್ಕ ಸಾಧ್ಯವಾಗುತ್ತದೆ, ಮತ್ತು ಇತರ ಸ್ಥಳಗಳಲ್ಲಿ ಸಂಪರ್ಕ ಸಾಧ್ಯವಾಗುವುದಿಲ್ಲ. ಜನರು ಈ ರೀತಿ ಯೋಚಿಸಲು ತೊಡಗಿದರೆ, ಆಗ ಅಲ್ಲೊಂದು ದೊಡ್ಡ ಸಮಸ್ಯೆಯಾಗುವುದು!
ನಂತರ ನಾನು ಅವಳಿಗೆ ಬೈದು ಹೀಗೆಂದು ಹೇಳಬೇಕಾಯಿತು, "ಈ ರೀತಿ ಮಾಡಬೇಡ, ಮೊದಲು ಆಹಾರ ತಿನ್ನು".
ನನಗೆ ನಾನೇ ಹೇಳಿಕೊಂಡೆ, "ಇದೊಂದು ಸೇವೆಯಲ್ಲ, ಬದಲಾಗಿ ಇದು ನಾನು ಸೇವೆ ಮಾಡುವಂತೆ ಮಾಡುವುದಾಗಿದೆ!" ನಾನು ಸೇವೆ ಮಾಡಲು ಸಿದ್ಧನಾಗಿದ್ದೇನೆ, ಆದರೆ ಇದು ನನಗೊಂದು ತಲೆನೋವಾಗುತ್ತದೆ! "ಈ ರೀತಿಯ ವಿಷಯಗಳಲ್ಲಿ ನನಗೆ ನಂಬಿಕೆಯಿಲ್ಲ" ಎಂದು ನಾನಂದೆ.
ದೇವರು ನಿಮಗೊಂದು ಸಮಸ್ಯೆಯಾಗಿರುವರು ಎಂದು ನೀವು ಯಾವತ್ತೂ ಹೇಳಬಾರದು. ದೇವರಿಗಾಗಿ ಅಥವಾ ನಿಮ್ಮ ಗುರುವಿಗಾಗಿ ನಿಮ್ಮ ಹೃದಯವು ಹಾತೊರೆಯುತ್ತಿದ್ದರೆ, ಆಗ ಅದು ಒಳ್ಳೆಯದು. ಇದು ನಿಮ್ಮನ್ನು ಪ್ರಗತಿಯ ಪಥದಲ್ಲಿ ಕರೆದೊಯ್ಯುತ್ತದೆ. ಆ ಹಾತೊರೆತ ಇಲ್ಲದಿದ್ದರೆ, ಆಗ ಜೀವನದಲ್ಲಿ ಯಾವುದೇ ರಸವಿರುವುದಿಲ್ಲ.
ಹಾತೊರೆತ ಕೊನೆಗೊಂಡ ದಿನ ಜೀವನದಲ್ಲಿ ಶುಷ್ಕತೆ ಬರಲು ಆರಂಭವಾಗುತ್ತದೆ. ಜನರು ಐಹಿಕ ಪ್ರಪಂಚಕ್ಕಾಗಿ ಹಂಬಲಿಸುತ್ತಿರುತ್ತಾರೆ, ಐಹಿಕ ವಸ್ತುಗಳಿಗಾಗಿ ಜನರು ಹಾತೊರೆಯುತ್ತಾರೆ ಮತ್ತು ಅವರು ಸಾಯುತ್ತಾರೆ. ಆದರೆ ನೀವು ದೇವರಿಗಾಗಿ ಹಾತೊರೆಯಬೇಕು, ಆಗ ನೀವು ಜ್ಞಾನೋದಯವನ್ನು ಹೊಂದುವಿರಿ. ನೀವು ಉನ್ನತಿ ಹೊಂದುವಿರಿ ಮತ್ತು ಜೀವನದಲ್ಲಿ ಎಲ್ಲವನ್ನೂ ಗಳಿಸುವಿರಿ, ದೇವರಿಗಾಗಿರುವ ಹಾತೊರೆತವು ಅಂತಹುದಾಗಿರಬೇಕು.

ಪ್ರಶ್ನೆ: ಗುರುದೇವ, ಆತ್ಮವು ಶಾಶ್ವತವಾದುದು, ಶುದ್ಧ ಹಾಗೂ ಪುರಾತನವಾದುದಾಗಿದೆ. ಹಾಗಾದರೆ ತನ್ನನ್ನು ತಾನೇ ತನ್ನ ನಿಜವಾದ ಸ್ವಭಾವದಲ್ಲಿ ತಿಳಿಯದಷ್ಟು ಅದು ಹೇಗೆ ವಿಭ್ರಾಂತಗೊಂಡಿತು? 

ಶ್ರೀ ಶ್ರೀ ರವಿ ಶಂಕರ್: ಇದು ಅತಿಪ್ರಶ್ನ ಎಂದು ಕರೆಯಲ್ಪಡುತ್ತದೆ, ಅಂದರೆ, ನಿನ್ನನ್ನು ನಿಜಕ್ಕೂ ಚಿಂತೆಗೊಳಪಡಿಸದಿರುವ ಪ್ರಶ್ನೆ ಮತ್ತು ಕೇಳುವುದು ಅತಿಯಾಯ್ತು.
ಹಾಗಾದರೆ ಮೊದಲ ಅಜ್ಞಾನವು ಯಾಕೆ ಸಂಭವಿಸಿತು? - ಈ ಪ್ರಶ್ನೆಗಳನ್ನು ಯಾವತ್ತಿಗೂ ಉತ್ತರಿಸಲಾಗಿಲ್ಲ. ಧರ್ಮಗ್ರಂಥಗಳಲ್ಲಿ ಕೂಡಾ, ಇದು ಅತಿಪ್ರಶ್ನ ಎಂದು ಹೇಳಲಾಗಿದೆ. ಅದನ್ನು ತಿಳಿಯುವುದರಿಂದ ನೀನೇನು ಮಾಡಲಿರುವೆ? ಯಾರಾದರೊಬ್ಬರು, "ಸರಿ, ಇದು ಎರಡು ಬಿಲಿಯನ್ ವರ್ಷಗಳ ಮೊದಲು ಸಂಭವಿಸಿತು" ಎಂದು ಹೇಳಿದರೂ ಕೂಡಾ, ಏನು ಪ್ರಯೋಜನ? ಅದರಿಂದ ನೀನೇನು ಸಾಧಿಸಲಿರುವೆ ಅಥವಾ ಬಗೆಹರಿಸಲಿರುವೆ?
ತಿಳಿಯಲು ಬೇರೆ ಹಲವಾರು ವಿಷಯಗಳಿವೆ. ಮೊದಲು ನೀನು ಯಾರು ಎಂಬುದನ್ನು ತಿಳಿ, ಮತ್ತು ನಂತರ, ಮೊದಲ ಅಜ್ಞಾನವು ಹೇಗೆ ಬಂತು ಎಂಬುದನ್ನು ನೀನು ಹೇಳಬಹುದು.

ಪ್ರಶ್ನೆ: ಗುರುದೇವ, ನಾನು ಸಾಕಷ್ಟು ಸಂಘಟಿತ ವ್ಯಕ್ತಿ, ಆದರೆ ನನ್ನ ಪತ್ನಿ ಮತ್ತು ಮಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದಾರೆ. ಕೆಲವೊಮ್ಮೆ ನಾನು ಕೋಪಗೊಳ್ಳುವ ಕಾರಣಗಳಲ್ಲಿ ಇದು ಒಂದಾಗಿದೆ. ನಾನು ಅವರನ್ನು ಸರಿಪಡಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಪರವಾಗಿಲ್ಲ, ಅವರು ಹೆಚ್ಚು ಸಂಘಟಿತರಾಗಿರುವುದನ್ನು ಕಲಿಯುವುದಕ್ಕಾಗಿ ನೀನು ಇದನ್ನು ಮಾಡಿಕೊಂಡಿರಬೇಕು. ಇಲ್ಲದಿದ್ದರೆ ಜೀವನದಲ್ಲಿ ಯಾವುದೇ ವಿನೋದವಿಲ್ಲ! ಒಬ್ಬರು ಕೋಪಿಸಬೇಕು, ಒಬ್ಬರು ಒಲಿಸ ಬೇಕು ಮತ್ತು ಸಮಾಧಾನ ಮಾಡಬೇಕು. ಇಲ್ಲದಿದ್ದರೆ ಬಹಳ ಬೇಜಾರೆನಿಸುವುದು; ಘಟನಾರಹಿತ, ನೀರಸ, ರುಚಿಯಿಲ್ಲದ ಜೀವನವಾಗುವುದು. ಆದರೆ ಅದನ್ನು ಅತಿಯಾಗಿ ದೂರಕ್ಕೆ ಒಯ್ಯಬೇಡ! ಕೆಲವೊಮ್ಮೆ ಪರವಾಗಿಲ್ಲ.