ಸೋಮವಾರ, ಮಾರ್ಚ್ 24, 2014

ವ್ಯಕ್ತಿತ್ವಕ್ಕನುಗುಣವಾದ ಜ್ಞಾನದ ಮಟ್ಟ

೨೪ ಮಾರ್ಚ್ ೨೦೧೪
ಬಾದ್ ಅಂತೋಗಸ್ಟ್, ಜರ್ಮನಿ

ವಿವೇಕದ ಕೊರತೆಯಿರುವ ಜನರು ಇತರರ ತಪ್ಪುಗಳನ್ನು ದೊಡ್ಡದಾಗಿ ಮತ್ತು ತಮ್ಮ ಸ್ವಂತ ತಪ್ಪುಗಳನ್ನು ಸಣ್ಣದಾಗಿ ಕಾಣುತ್ತಾರೆ. ಸ್ವಲ್ಪ ಹೆಚ್ಚಿನ ಬುದ್ಧಿವಂತಿಕೆಯ ಜನರು ತಮ್ಮ ಸ್ವಂತ ತಪ್ಪುಗಳನ್ನು ದೊಡ್ಡದಾಗಿ ಮತ್ತು ಇತರರ ತಪ್ಪುಗಳನ್ನು ಸಣ್ಣದಾಗಿ ಕಾಣುತ್ತಾರೆ. ಸಂಪೂರ್ಣ ಜ್ಞಾನವಿರುವ ಜನರು ತಪ್ಪುಗಳನ್ನು ತಮ್ಮದೂ ಅಲ್ಲ, ಇತರರದ್ದೂ ಅಲ್ಲವೆಂಬುದಾಗಿ ನೋಡುತ್ತಾರೆ.’ ಅವರು ತಪ್ಪುಗಳನ್ನು, ಯಾರಿಂದಲೂ ನಿಯಂತ್ರಿಸಲು ಸಾಧ್ಯವಿಲ್ಲದಿರುವ ಒಂದು ಸಂಭವವನ್ನಾಗಿ ನೋಡುತ್ತಾರೆ. ಇವುಗಳು ಮೂರು ದರ್ಜೆಗಳಾಗಿವೆ, ಅಷ್ಟೇ.
ಕಡಿಮೆ ಬುದ್ಧಿವಂತಿಕೆ: ನನ್ನ ತಪ್ಪು ಏನೂ ಅಲ್ಲ, ಇತರರ ತಪ್ಪು ದೊಡ್ಡದು.
ಸ್ವಲ್ಪ ಹೆಚ್ಚು ಬುದ್ಧಿವಂತಿಕೆ: ನನ್ನ ತಪ್ಪು ತುಂಬಾ ದೊಡ್ಡದು, ಇತರರ ತಪ್ಪು ಸಣ್ಣದು.
ನಿಜವಾದ ಜ್ಞಾನ: ತಪ್ಪು ನನ್ನದೂ ಅಲ್ಲ, ಇತರರದ್ದೂ ಅಲ್ಲ. ಅದೊಂದು ಘಟನೆ.

ಪ್ರಶ್ನೆ: ನಿರಂತರವಾಗಿ ನನ್ನನ್ನು ನೋಡಿಕೊಳ್ಳುತ್ತಿರುವುದಕ್ಕಾಗಿ, ನನಗೆ ಸಲಹೆ ನೀಡುತ್ತಿರುವುದಕ್ಕಾಗಿ, ದಾರಿ ತೋರಿಸುತ್ತಿರುವುದಕ್ಕಾಗಿ ಮತ್ತು ಸಹಾಯ ನೀಡುತ್ತಿರುವುದಕ್ಕಾಗಿ ನಿಮಗೆ ಧನ್ಯವಾದಗಳು ಗುರುದೇವ. ನಾನು ಬಹಳಷ್ಟನ್ನು ಸಾಧಿಸುತ್ತಿದ್ದೇನೆ. ನಾನು ನಿಮಗಾಗಿ ಮಾಡಬಹುದಾದಂತಹದ್ದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ನಾವೆಲ್ಲರೂ ಸಂತೋಷದ ಸಮೀಕ್ಷೆಯನ್ನು ಮಾಡಬಹುದೆಂದು ನನಗನ್ನಿಸುತ್ತದೆ. ನಾವು ಮನೆಮನೆಗೆ ಹೋಗಬೇಕು ಮತ್ತು ಜನರಲ್ಲಿ, "ನೀವು ಸಂತೋಷವಾಗಿರುವಿರೇ? ಇಲ್ಲವಾದರೆ, ಕಾರಣವೇನು?" ಎಂದು ಕೇಳಬೇಕು.
ನಮ್ಮಲ್ಲೊಂದು ಸಂತೋಷದ ಸಮೀಕ್ಷೆಯಿದೆ; ನೀವು ಇಬ್ಬರು ಅಥವಾ ಮೂವರು ಜೊತೆಸೇರಿಕೊಂಡು, ನಿಮ್ಮ ಪ್ರದೇಶದಲ್ಲಿರುವ ಜನರನ್ನು ಭೇಟಿಯಾಗಿ, ಅವರ ಬಾಗಿಲನ್ನು ಬಡಿದು, "ನಾವೊಂದು ಸಣ್ಣ ಸಮೀಕ್ಷೆಯನ್ನು ಮಾಡಲು ಬಯಸುತ್ತೇವೆ. ನೀವು ಸಂತೋಷವಾಗಿರುವಿರೇ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ. ಇಲ್ಲವಾದರೆ, ನಿಮ್ಮ ಅಸಂತೋಷಕ್ಕಿರುವ ಕಾರಣಗಳೇನು?" ಎಂದು ಹೇಳಿ.
ಅವರು ಸಂತೋಷವಾಗಿದ್ದರೆ, ಆಗ ಅವರಲ್ಲಿ, "ನೀವು ಎಷ್ಟು ಹೊತ್ತು ಸಂತೋಷವಾಗಿರುತ್ತೀರಿ? ((ಶೇ. ೭೦ರಷ್ಟು ಸಮಯ, ಶೇ. ೮೦ರಷ್ಟು ಸಮಯ, ಶೇ. ೨೦ರಷ್ಟು ಸಮಯ)" ಎಂದು ಕೇಳಿ. ಈ ಪ್ರಶ್ನೆಗಳೊಂದಿಗೆ ಸುಮಾರು ಏಳೆಂಟು ಪ್ರಶ್ನೆಗಳಿವೆ.
ಕಳೆದ ಕೆಲವು ತಿಂಗಳುಗಳಲ್ಲಿ ನಾವು ಈ ಸಂತೋಷದ ಸಮೀಕ್ಷೆಯನ್ನು ಮುಂದಿಟ್ಟಾಗ, ಜನರಿಗೆ ಅದ್ಭುತ ಅನುಭವಗಳಾಗಿವೆ. ಸಂದರ್ಶಕನಿಗೆ ಒಂದು ಅದ್ಭುತವಾದ ಅನುಭವವಾಗಿದೆ, ಮತ್ತು ಸಂದರ್ಶನ ಮಾಡಲ್ಪಟ್ಟವರಿಗೆ ಕೂಡಾ ಸಂತೋಷವಾಗಿದೆ. ನೀವು ಸಮೀಕ್ಷೆಯನ್ನು ಮಾಡುವಾಗ, ತಮ್ಮ ಬಗ್ಗೆ ಕಾಳಜಿ ವಹಿಸಲಾಗುತ್ತಿದೆಯೆಂದು ಜನರಿಗೆ ಅನ್ನಿಸುತ್ತದೆ ಮತ್ತು ಅವರಿಗೆ ಅದರ ಬಗ್ಗೆ ಬಹಳ ಹಿತವೆನಿಸುತ್ತದೆ.
ಕೆಲವು ಜನರು, "ನಾನು ಸಂತೋಷವಾಗಿರುವೆನೇ? ನನ್ನ ಅಸಂತೋಷಕ್ಕೆ ಕಾರಣವೇನು? ಎಂಬುದಾಗಿ ಯಾರೋ ಬಂದು ನನ್ನಲ್ಲಿ ಕೇಳಿದುದು ಇದು ಮೊದಲನೇ ಸಾರಿ" ಎಂದರು.
ಅರುವತ್ತರ ವಯಸ್ಸಿನಲ್ಲಿದ್ದ ಒಬ್ಬಳು ಮಹಿಳೆಯು, "ಇಷ್ಟೊಂದು ವರ್ಷಗಳಲ್ಲಿ, ನಾನು ಯಾಕೆ ಅಸಂತೋಷವಾಗಿರುವೆನೆಂದು ಒಬ್ಬನೇ ಒಬ್ಬ ವ್ಯಕ್ತಿಯೂ ನನ್ನಲ್ಲಿ ಕೇಳಿರಲಿಲ್ಲ. ಪ್ರಪಂಚದಲ್ಲಿ ಕಾಳಜಿ ವಹಿಸುವ ಜನರು ಹೆಚ್ಚಿದ್ದಾರೆಂದು ನನಗೆ ಈಗ ಅನ್ನಿಸುತ್ತದೆ" ಎಂದು ಹೇಳಿದಳು.
ನೀವೆಲ್ಲರೂ ಧ್ಯಾನ ಮಾಡುವವರು; ನೀವೆಲ್ಲರೂ ಯೋಗ, ಪ್ರಾಣಾಯಾಮ, ಧ್ಯಾನ ಮಾಡುತ್ತೀರಿ ಮತ್ತು ನೀವು ನಿಮ್ಮೊಂದಿಗೆ ಒಂದು ಧನಾತ್ಮಕ ಹೊಳಪು, ಒಂದು ಶಕ್ತಿಯನ್ನು ಒಯ್ಯುತ್ತೀರಿ. ಹೀಗಾಗಿ ನೀವು ಹೋಗಿ ಜನರೊಂದಿಗೆ ಮಾತನಾಡುವಾಗ, ಅದಾಗಲೇ ಸ್ವಲ್ಪ ಶಕ್ತಿಯು ಅವರಿಗೆ ವರ್ಗಾವಣೆಯಾಗಿರುವುದು ಅವರಿಗೆ ಅನುಭವವಾಗುತ್ತದೆ. ಅದಾಗಲೇ ಅವರು ಸಂತೋಷವನ್ನು ಅನುಭವಿಸುತ್ತಾರೆ. ಒಂದು ರೀತಿಯಲ್ಲಿ ನಾವು ಸಂತೋಷವನ್ನು ಹರಡುತ್ತಿದ್ದೇವೆ. ಎಷ್ಟು ಜನರು ಸಂತೋಷವಾಗಿಲ್ಲ ಮತ್ತು ಹೇಗೆ ನಾವು ಅವರಿಗೆ ಸಂತೋಷವನ್ನು ತರಬಹುದು ಎಂಬುದು ಕೂಡಾ ನಮಗೆ ತಿಳಿಯುತ್ತದೆ.
ಕೊನೆಯಲ್ಲಿ, ನಾವು ಆರ್ಟ್ ಆಫ್ ಲಿವಿಂಗ್‌ನ ಆನಂದದ ಅನುಭೂತಿ ಕಾರ್ಯಕ್ರಮ(ಹ್ಯಾಪ್ಪಿನೆಸ್ ಪ್ರೋಗ್ರಾಮ್)ವನ್ನು (ನಮ್ಮ ಅನುಭವದ ವಿವರಗಳನ್ನು) ಹಂಚಿಕೊಳ್ಳಬೇಕು. ಅವರು ಅದನ್ನು ಮಾಡಲು ಬಯಸುವುದಾದರೆ, ಅವರು ನೋಂದಾಯಿಸಿಕೊಂಡು ಕೋರ್ಸನ್ನು ಕೂಡಾ ಮಾಡಬಹುದು.
ಒಂದು ಪ್ರಾಪಂಚಿಕ ಸ್ಥರದಲ್ಲಿ, ಇದು ಜನರನ್ನು ತಲುಪಲಿರುವ ಮತ್ತು ಜೋಡಲಿರುವ ಒಂದು ಮಾರ್ಗ; ಅವರು ನಿಮ್ಮನ್ನು ತಿಳಿಯಲು ಇದೊಂದು ಬಹಳ ಒಳ್ಳೆಯ ಮಾರ್ಗವಾಗಿದೆ.
ನಿಮ್ಮ ಮುಖದ ಮೇಲೆ ಬಾಗಿಲನ್ನು ಬಡಿಯುವ ಕೆಲವು ಜನರು ಇರಲೂಬಹುದು, ಪರವಾಗಿಲ್ಲ. ನಗುನಗುತ್ತಾ ಹೊರಟುಹೋಗಿ; ಅದು ನಿಮ್ಮ ಅಹಂಕಾರವನ್ನು ಒಡೆಯುವ ಪ್ರಕ್ರಿಯೆಯಾಗಿದೆ.
ನೋಡಿ, ಯಾರಾದರೂ ನಿಮ್ಮನ್ನು ಇಷ್ಟಪಡದೇ ಇದ್ದರೂ ಸಹ, ಅದು ನಿಮಗೆ ತೊಂದರೆಯನ್ನುಂಟುಮಾಡುವುದಿಲ್ಲ, ಅದು ನಿಮಗೊಂದು ದೊಡ್ಡ ವಿಷಯವೇ ಅಲ್ಲ. ಒಂದು ಸಂತೋಷವಾದ ಹಾಗೂ ನಗುಮುಖದೊಂದಿಗೆ ಮುಂದಿನ ಜಾಗಕ್ಕೆ ಹೋಗಿ. ನೀವು ಹತ್ತು ಜನರನ್ನು ಭೇಟಿಯಾದರೆ, ಕೆಲವು ಜನರು ಆ ರೀತಿ ಇರಲೂಬಹುದು (ನಿಮ್ಮ ಮುಖದ ಮೇಲೆ ಬಾಗಿಲನ್ನು ಬಡಿಯುವ), ಆದರೆ ನೀವು ಯಾರೊಂದಿಗೆ ಮಾತನಾಡುವಿರೋ, ಅವರು ನಿಮ್ಮ ಮೇಲೆ ಬಹಳ ಕೃತಜ್ಞರಾಗಿರುತ್ತಾರೆ. ನೀವು ಅವರನ್ನು ಕೇಳಿದಿರಿ, ನೀವು ಅವರ ಬಗ್ಗೆ ಕಾಳಜಿ ವಹಿಸಿದಿರೆಂದು ಅವರು ಬಹಳ ಕೃತಜ್ಞರಾಗಿರುವರು. ನೀವೇನು ಹೇಗೆ ಳುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿಗೆ ಈ ಯೋಚನೆ ಇಷ್ಟವಾಯಿತು?
ನಾವು ಕೋರ್ಸನ್ನು ಬಿಟ್ಟುಹೋಗುವ ಮೊದಲು, ಎಲ್ಲಾ ಭಾಷೆಗಳಲ್ಲೂ ನಾವು ಹಲವಾರು ಅರ್ಜಿಗಳನ್ನು ಮಾಡೋಣ. ನೀವು ಸಂತೋಷದ ಸಮೀಕ್ಷೆಯನ್ನು ಮಾಡಿ ಮತ್ತು ಅವುಗಳನ್ನು ನನಗೆ ಕಳುಹಿಸಿ. ನಾವು ಅಂಕಿ ಅಂಶಗಳನ್ನು ವಿಶ್ಲೇಶಿಸಿ ಒಂದು ನಕ್ಷೆಯನ್ನು ಮಾಡೋಣ ಮತ್ತು ಪ್ರತಿಯೊಂದು ಪ್ರದೇಶದಲ್ಲಿ ಎಷ್ಟು ಜನರು ಸಂತೋಷವಾಗಿರುವರು ಮತ್ತು ಪ್ರತಿಯೊಂದು ವಯೋಮಾನದ ಗುಂಪಿನಲ್ಲಿ ಅಸಂತೋಷಕ್ಕಿರುವ ಕಾರಣಗಳೇನು ಎಂದು ನೋಡೋಣ. ಇದೊಂದು ಒಳ್ಳೆಯ ಉಪಾಯ!

ಪ್ರಶ್ನೆ: ಪ್ರೀತಿಯ ಗುರುದೇವ, ಶಿಕ್ಷಣದ ಭವಿಷ್ಯದ ಬಗ್ಗೆ ನೀವು ಮಾತನಾಡಬಲ್ಲಿರಾ? ನಮ್ಮ ಪಠ್ಯಕ್ರಮವು ಹಳೆಯ ಮಾದರಿಯದ್ದು, ಕೆಲಸಕ್ಕೆ ಉಪಯೋಗವಿಲ್ಲದ್ದು ಮತ್ತು ಪ್ರಪಂಚದಲ್ಲಿ ಶಾಂತಿಯನ್ನು ಬೆಂಬಲಿಸುವುದಿಲ್ಲವೆಂದು ತೋರುತ್ತದೆ. ಇದು ಬದಲಾಗುವುದೇ ಮತ್ತು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಹೌದು, ನೀನು ಹೇಳುವುದು ಖಂಡಿತವಾಗಿಯೂ ಸರಿ! ಇದು ಬದಲಾಗಬೇಕು ಹಾಗೂ ನೀನು ಮತ್ತು ನಾನು ಅದನ್ನು ಬದಲಾಯಿಸಬೇಕು. ಅದನ್ನು ಬದಲಾಯಿಸಲು ನಾವು ನಮ್ಮೆಲ್ಲಾ ಪ್ರಯತ್ನಗಳನ್ನು ಹಾಕಬೇಕು.
ಭಾರತದಲ್ಲಿ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ನಮ್ಮ ಶಾಲೆಗಳಿಗಾಗಿ ಹೊಸ ಶೈಕ್ಷಣಿಕ ಪದ್ಧತಿಗಳನ್ನು ಅಭಿವೃದ್ಧಿಪಡಿಸಿದೆ. ನಾವು ಭಾರತದಲ್ಲಿ ಸುಮಾರು ೭೦-೮೦ ಶುಲ್ಕ ಸಹಿತ ಶಾಲೆಗಳು ಮತ್ತು ೪೦೦ಕ್ಕಿಂತಲೂ ಹೆಚ್ಚು ಉಚಿತ ಶಾಲೆಗಳನ್ನು ಹೊಂದಿದ್ದೇವೆ. (ದಿನಕ್ಕೊಂದು ಯುರೋ ಮತ್ತು ದಿನಕ್ಕೊಂದು ಡಾಲರ್ ಯೋಜನೆಗಳ ಮೂಲಕ, ೪೦೪ ಉಚಿತ ಶಾಲೆಗಳನ್ನು ನಡೆಸಲಾಗುತ್ತಿದ್ದು ೪೦,೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದಾರೆ.) ಮಕ್ಕಳಲ್ಲಿ ಪರಿವರ್ತನೆಯನ್ನು ನೋಡುವುದು ಎಂತಹ ಒಂದು ಆನಂದ.
ನಾವೊಂದು ಹೊಸ ರೀತಿಯ ಕಲಿಸುವಿಕೆಯನ್ನು ಸ್ವೀಕರಿಸಿದ್ದೇವೆ. ಅವರು ತಮ್ಮ ಚೀಲಗಳಲ್ಲಿ ಪುಸ್ತಕಗಳ ಒಂದು ದೊಡ್ಡ ಹೊರೆಯನ್ನು ಹೊತ್ತೊಯ್ಯುವುದಿಲ್ಲ. ಸೃಜನಶೀಲರಾಗಿರುವುದನ್ನು, ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದನ್ನು ನಾವು ಅವರಿಗೆ ಕಲಿಸುತ್ತೇವೆ.  
ಹೌದು, ಅದೇ ರೀತಿಯಲ್ಲಿ ನಾವು ಯುರೋಪಿನಲ್ಲಿ ಕೂಡಾ ಏನನ್ನಾದರೂ ಮಾಡಬೇಕು. ನೋಡೋಣ.

ಪ್ರಶ್ನೆ: ಗುರುದೇವ, ಪ್ರಪಂಚವು ಯಾಕೆ ಸೃಷ್ಟಿಸಲ್ಪಟ್ಟಿತು?

ಶ್ರೀ ಶ್ರೀ ರವಿ ಶಂಕರ್: ನೀನು ಈ ಪ್ರಶ್ನೆಯನ್ನು ಕೇಳಲೆಂದು! ಅದು ಸೃಷ್ಟಿಸಲ್ಪಡದೇ ಇರುತ್ತಿದ್ದರೆ, ನೀನು ಈ ಪ್ರಶ್ನೆಯನ್ನಾದರೂ ಹೇಗೆ ಕೇಳುತ್ತಿದ್ದೆ?
ನಾವೆಲ್ಲರೂ ಪ್ರಪಂಚದ ಸೃಷ್ಟಿಯ ಬಗ್ಗೆ ಯೋಚಿಸುತ್ತಿದ್ದೇವೆ. ಒಂದು ಮರೀಚಿಕೆ ಸೃಷ್ಟಿಸಲ್ಪಟ್ಟಿದೆಯೇ? ಅದು ಯಾವಾಗ ಸೃಷ್ಟಿಸಲ್ಪಟ್ಟಿತು?
ಒಂದು ಮರೀಚಿಕೆ (ಬಿಸಿಲ್ಗುದುರೆ) ಅಂದರೇನು ಎಂಬುದು ನಿನಗೆ ಗೊತ್ತೇ? ಒಂದು ಬಿಸಿಯಾದ ಸೆಖೆಗಾಲದಲ್ಲಿ, ಮರುಭೂಮಿಯಲ್ಲಿ, ನೀರಿನಂತೆ ಕಾಣಿಸುವುದನ್ನು ನೀನು ನೋಡುವೆ, ಆದರೆ ಅದು ನೀರಲ್ಲ. ಅದೊಂದು ಮರೀಚಿಕೆ. ಯಾರಾದರೊಬ್ಬರು, "ಈ ನೀರು ಯಾವಾಗ ಸೃಷ್ಟಿಸಲ್ಪಟ್ಟಿತು?" ಎಂದು ಕೇಳಿದರೆ, ನೀನು, "ಇದು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಇದು ಕೇವಲ ಕಾಣುತ್ತದೆ" ಎಂದು ಹೇಳುವೆ. ಹಾಗೆಯೇ, ಈ ಪ್ರಪಂಚವು ಯಾವತ್ತೂ ಸೃಷ್ಟಿಸಲ್ಪಡಲಿಲ್ಲ, ಅದು ಕಾಣುವುದಾಗಿದೆ.
ಇದೊಂದು ಉನ್ನತ ಜ್ಞಾನವಾಗಿದೆ, ಇದು ಯೋಗ ವಸಿಷ್ಠದ ಜ್ಞಾನವಾಗಿದೆ. ಅದು ತಲೆಯ ಮೇಲಿಂದ ಹೋಗುವುದಾದರೆ, ಪರವಾಗಿಲ್ಲ! ನಾವದನ್ನು ಮುಂದೆ ಯಾವತ್ತಾದರೂ ಚರ್ಚಿಸಬಹುದು. ಸತ್ಯವೇನೆಂದರೆ, ಈ ಪ್ರಪಂಚವು ಯಾವತ್ತೂ ಸೃಷ್ಟಿಸಲ್ಪಟ್ಟಿಲ್ಲ, ಅದು ಕೇವಲ ತೋರುತ್ತದೆ.
ನಾನು ನಿಮಗೆ ಇದರ ಬಗ್ಗೆ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ, ಇದೊಂದು ಅತ್ಯಂತ ಗುಪ್ತ ರಹಸ್ಯವಾಗಿದೆ.

ಪ್ರಶ್ನೆ: ಗುರುದೇವ, ನಾನು ನನ್ನ ಜೀವನದಲ್ಲಿ ಎಲ್ಲದಕ್ಕೂ ಕೃತಜ್ಞನಾಗಿದ್ದೇನೆ; ನನ್ನ ಹೆತ್ತವರು, ಶಿಕ್ಷಣ, ಕೆಲಸ, ಉದ್ಯೋಗ. ನಾನು ಭೇಟಿಯಾಗಿರುವ ಪ್ರೇಮಮಯ, ಕಾಳಜಿವಹಿಸುವ ಮತ್ತು ಕರುಣಾಮಯ ಜನರಿಗಾಗಿ ನಾನು ಕೃತಜ್ಞನಾಗಿದ್ದೇನೆ. 

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ಇದು ಜೀವನವನ್ನು ಪ್ರಾರಂಭಿಸಲಿರುವ ಒಂದು ಬಹಳ ಒಳ್ಳೆಯ ರೀತಿಯೆಂದು ನನಗನ್ನಿಸುತ್ತದೆ. ಒಂದು ಕಮಲದ ಹೂವಾಗಿರುವ ರೀತಿ ಇದು, ಕೃತಜ್ಞನಾಗಿರುವ ಮೂಲಕ. ನಿಮ್ಮಲ್ಲಿರುವ ಎಲ್ಲದಕ್ಕೂ ಕೃತಜ್ಞರಾಗಿರಿ. ನಾವು ಹೆಚ್ಚು ಕೃತಜ್ಞರಾದಷ್ಟೂ, ಜೀವನವು ಎಷ್ಟೋ ಹೆಚ್ಚು ಸುಲಭವಾಗುತ್ತದೆ, ಉತ್ತಮವಾಗುತ್ತದೆ. ನಾವು ಹೆಚ್ಚು ಗೊಣಗಿದಷ್ಟೂ, ಜೀವನವು ಒಂದು ಕಲ್ಲಿನಂತೆ ನಮಗೆ ಹೆಚ್ಚು ಭಾರವೆನಿಸುತ್ತದೆ.

ಪ್ರಶ್ನೆ: ಗುರುದೇವ, ಈ ಸುಂದರವಾದ ಜ್ಞಾನವನ್ನು ನಾವು ಪ್ರಪಂಚಕ್ಕೆ ಹರಡುವುದು ಹೇಗೆ? ಈಗಾಗಲೇ ಕೋರ್ಸನ್ನು ಮಾಡಿರುವ, ಆದರೆ ಕ್ರಿಯಾಶೀಲರಾಗಿಲ್ಲದಿರುವ ಜನರನ್ನು ನಾವು ಮರಳಿ ತರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಹ್ಯಾಪ್ಪಿನೆಸ್ ಸರ್ವೇಯು(ಸಂತೋಷದ ಸಮೀಕ್ಷೆ) ಒಂದು ವಿಧಾನವಾಗಿದೆ.
ಇನ್ನೊಂದು ವಿಧಾನವೆಂದರೆ, ಒಂದು ಭೌತಿಕವಾದ ಕೇಂದ್ರವನ್ನು ಹೊಂದಿರುವುದು; ಆಗ ಜನರು ಮರಳಿ ಬರುತ್ತಿರುತ್ತಾರೆ. ಪ್ಯಾರಿಸ್‌ನಲ್ಲಿ ಹಲವಾರು ವರ್ಷಗಳವರೆಗೆ ನಮ್ಮಲ್ಲಿ ಇದೇ ಪ್ರಶ್ನೆಯಿತ್ತು. ಇವತ್ತು, ನಾವು ಪ್ಯಾರಿಸ್ ಕೇಂದ್ರವನ್ನು ಹೊಂದಿದಂದಿನಿಂದ, ಅದು ಬಹಳಷ್ಟು ಚಟುವಟಿಕೆಯಿಂದ ಝೇಂಕಾರ ಮಾಡುತ್ತಿದೆಯೆಂದು ನನ್ನಲ್ಲಿ ಹೇಳಲಾಯಿತು. ಅದೊಂದು ಬದಲಾವಣೆಯನ್ನು ಮಾಡುತ್ತದೆಯೆಂದು ನನಗನ್ನಿಸುತ್ತದೆ.
ಮೇಲಾಗಿ, ಶಿಕ್ಷಕರು ಕೇಂದ್ರಗಳನ್ನು ಹೆಚ್ಚು ಆಸಕ್ತಿಕರವಾಗಿ ಮಾಡಬೇಕು. ಕೇವಲ ಅವರು ಕ್ರಿಯೆಯನ್ನು ಮಾಡಿ ಮನೆಗೆ ಮರಳಿ ಹೋಗುವಂತೆ ಮಾಡುವುದಲ್ಲ, ಆದರೆ ಪ್ರತಿಯೊಬ್ಬರನ್ನೂ ಯಾವುದಾದರೂ ರೀತಿಯ ಸೇವಾಕಾರ್ಯದಲ್ಲಿ ತೊಡಗುವಂತೆ ಮಾಡುವುದು.
ಅವರೆಲ್ಲರನ್ನೂ ಒಂದು ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿ, ಜನ್ಮದಿನಗಳನ್ನು ಆಚರಿಸಿ. ನಿಮ್ಮೆಲ್ಲಾ ಹಳೆಯ ಭಾಗಿಗಳ ಒಂದು ಪಟ್ಟಿ ಮಾಡಿ ಮತ್ತು ಯಾರೆಲ್ಲಾ ಧ್ಯಾನ ಹಾಗೂ ಸತ್ಸಂಗಗಳಿಗೆ ಬರುವುದಿಲ್ಲವೆಂಬುದನ್ನು ನೋಡಿ. ಅವರ ಜನ್ಮದಿನಗಳನ್ನು ನೋಡಿ ಮತ್ತು ಅವುಗಳನ್ನು ಆಚರಿಸಿ. ನೀವು ಇದೆಲ್ಲವನ್ನು ಮಾಡಿದರೆ, ಆಗ ಅವರು ಯಾಕೆ ಬರುವುದಿಲ್ಲ?
ನಿಮ್ಮಲ್ಲಿ ಕೆಲವರು ಒಂದು ಜನ್ಮದಿನದ ಕೇಕ್ ತೆಗೆದುಕೊಂಡು, ಅವರಿಗೆ ದೂರವಾಣಿ ಕರೆಯನ್ನು ಮಾಡಿ, "ನಾವು ಬಂದು ನಿಮಗೆ ಶುಭಾಶಯಗಳನ್ನು ಕೋರಲಿದ್ದೇವೆ" ಎಂದು ಹೇಳಬೇಕು. ನೀವು ಬೆರೆಯುವುದು ಹೀಗೆ. ಮುಂದಿನ ಸಲ ಬೇರೊಬ್ಬರ ಜನ್ಮದಿನವಿರುವಾಗ, ಅವರು ಬಂದು ನಿಮ್ಮೊಂದಿಗೆ ಸೇರುವರು. ಅದನ್ನು ಮಾಡಲಿರುವ ಇನ್ನೊಂದು ವಿಧಾನ ಇದೆಂದು ನನಗನ್ನಿಸುತ್ತದೆ.

ಪ್ರಶ್ನೆ: ಗುರುದೇವ, ಅಹಂಕಾರವು ನಮಗೆ ಸಾಧನೆ ಮಾಡಲು ಸಹಾಯ ಮಾಡುವುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಮೊದಲನೆಯ ಹಂತಗಳಲ್ಲಿ, ನಂತರ ಅದು ನಿಮ್ಮ ಕುತ್ತಿಗೆಯ ಸುತ್ತಲಿನ ಒಂದು ಕುಣಿಕೆಯಾಗುತ್ತದೆ. ಏನನ್ನಾದರೂ ಸಾಧಿಸಲು ಅದು ಆರಂಭದಲ್ಲಿ ಇರಬೇಕು, ಆದರೆ ನಂತರ ಅದರಿಂದ ಹೊರಬರುವುದು ಹೇಗೆಂಬುದು ಕೂಡಾ ನಿಮಗೆ ತಿಳಿದಿರಬೇಕು.

ಪ್ರಶ್ನೆ: ಗುರುದೇವ, ಮಹಿಳೆಯರು ಮೇಕಪ್ ಧರಿಸುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಅವರು ಆ ರೀತಿ ಮಾಡಲ್ಪಟ್ಟಿದ್ದಾರೆ!
ಮಹಿಳೆಯರು ಮೇಕಪ್ ಬಳಸುವುದರಿಂದಾಗಿ, ಹಲವಾರು ಜನರಿಗೆ ಉದ್ಯೋಗ ದೊರಕುತ್ತಿದೆ ಮತ್ತು ಕರಾಳ ಆರ್ಥಿಕ ಸ್ಥಿತಿಯ ದಿನಗಳಲ್ಲೂ ಕೂಡಾ ಸಂಪೂರ್ಣ ಉದ್ಯಮವು ಸಮೃದ್ಧವಾಗಿರುತ್ತದೆ. ಆರ್ಥಿಕ ಸ್ಥಿತಿಯು ಕೆಳಮುಖವಾಗುವಾಗ, ಒಂದು ಉದ್ಯಮವು ತನ್ನನ್ನು ತಾನೇ ಮೇಲೆ ಇಟ್ಟುಕೊಳ್ಳುತ್ತದೆ, ಅದು ಮೇಕಪ್! ಅದು ಎಲ್ಲ ಕೊರತೆಗಳನ್ನೂ ಮುಚ್ಚುತ್ತದೆ.


ಚಲಿಸುವ ಚಿತ್ರಗಳ ರೂಪದಲ್ಲಿ ಇದನ್ನು ನೋಡಲು ಲಿಂಕ್:

Three degrees of wisdom