ಶನಿವಾರ, ಏಪ್ರಿಲ್ 5, 2014

ಸೇವಾ ತತ್ಪರತೆ

ಎಪ್ರಿಲ್ ೫, ೨೦೧೪
ಪುಣೆ, ಮಹಾರಾಷ್ಟ್ರ

ನರು ನನ್ನಲ್ಲಿ, "ಗುರುದೇವ, ಇದು ಈಗ ಚುನಾವಣೆಯ ಸಮಯ, ನೀವು ಯಾಕೆ ಮಹಾರಾಷ್ಟ್ರಕ್ಕೆ ಹೋಗುತ್ತಿರುವಿರಿ?" ಎಂದು ಹೇಳುತ್ತಾರೆ. ನಾನವರಿಗೆ, ಚುನಾವಣೆಯ ಸಮಯವಾಗಿರಲಿ ಅಲ್ಲದಿರಲಿ, ನನಗೆಲ್ಲವೂ ಒಂದೇ. ಎಲ್ಲಾ ಸಮಯಗಳೂ ಒಂದೇ ಎಂದು ಹೇಳಿದೆ.

ಈ ಚುನಾವಣೆಯ ಕಾಲದಲ್ಲಿ, ಇಲ್ಲಿಗೆ ಬಂದು, ಮುಂದಕ್ಕೆ ಹೆಜ್ಜೆಯಿಟ್ಟು ದೇಶಕ್ಕಾಗಿ ಏನನ್ನಾದರೂ ಮಾಡುವಂತೆ ಜನರಲ್ಲಿ ಅರಿವನ್ನು ಮೂಡಿಸುವುದು ನನಗೆ ಇನ್ನೂ ಹೆಚ್ಚು ಪ್ರಾಮುಖ್ಯವಾಗಿದೆ.

ನೀವು ಇವತ್ತು ನೋಡಿದಂತೆ, ನಾನು ’ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ’ ತಂಡದ ಸ್ವಯಂಸೇವಕರನ್ನು ಭೇಟಿಯಾದೆ. ಸ್ವಯಂಸೇವಕರು ಮಾಡಿರುವ ಉತ್ತಮ ಕೆಲಸ ನೋಡಲು ಚೆನ್ನಾಗಿತ್ತು. ಪುಣೆಯಲ್ಲಿಯೇ ಅವರು ಐವತ್ತನಾಲ್ಕು ಸಾವಿರ ಹೊಸ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಾರೆ. ನಮ್ಮ ಯುವಕರು ಮುಂದೆ ಬಂದು ದೇಶದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಬಹಳ ಸಂತೋಷದ ಒಂದು ವಿಷಯ.

ಕಳೆದ ತಿಂಗಳು ರೈತರಿಗೊಂದು ದೊಡ್ದ ಹಿನ್ನಡೆಯಾಯಿತು. ಇಲ್ಲಿ, ಮಹಾರಾಷ್ಟ್ರದಲ್ಲಿ ಒಂದು ನೈಸರ್ಗಿಕ ವಿಕೋಪವಾಯಿತು. ಅಂತಹ ಒಂದು ವಿಕೋಪದ ಬಗ್ಗೆ ಯಾರೂ ಮೊದಲು ಯಾವತ್ತೂ ಕೇಳಿರಲಿಲ್ಲ. ಪ್ರಬಲವಾದ, ಆಲಿಕಲ್ಲು ಸಹಿತ ಬಿರುಗಾಳಿ ಬಂತು, ಅದರಿಂದಾಗಿ ಎಲ್ಲಾ ಬೆಳೆಗಳು ನಾಶವಾದವು. ನಾನು ಚಿತ್ರಗಳನ್ನು ನೋಡಿದಾಗ, ಮಹಾರಾಷ್ಟ್ರವು ಕಾಶ್ಮೀರದಂತೆ (ಮಂಜಿನಿಂದ ಅವೃತವಾದಂತೆ) ಕಾಣಿಸುತ್ತಿತ್ತು. ಈ ನೈಸರ್ಗಿಕ ವಿಕೋಪವು ನಮಗೆ, ಸರಿಯಾಗಿಲ್ಲದೇ ಇರುವುದನ್ನೇನೋ ನಾವು ಪರಿಸರಕ್ಕೆ ಮಾಡುತ್ತಿದ್ದೇವೆ ಎಂಬ ಒಂದು ಎಚ್ಚರಿಕೆಯನ್ನು ನೀಡಿದೆ. ನಾವು ಪರಿಸರದ ಕಡೆಗೆ ಗಮನವನ್ನು ನೀಡುತ್ತಿಲ್ಲ.

ನಾವು ಹಲವು ಜಾಗಗಳಲ್ಲಿ ಪ್ಲಾಸ್ಟಿಕ್‍ಗಳನ್ನು ಸುಡುತ್ತಿದ್ದೇವೆ. ಒಂದು ಪ್ಲಾಸ್ಟಿಕ್ ಚೀಲವನ್ನು ಸುಡುವುದರಿಂದ ಉತ್ಪತ್ತಿಯಾಗುವ ವಿಷವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ತರಿಸಲು ಸಾಕಾಗುತ್ತದೆ. ನಾವು ಬಹಳಷ್ಟು ಕಾಳಜಿ ವಹಿಸಬೇಕು.

ನಾವು ವಿಷಯುಕ್ತ ಕೀಟನಾಶಕಗಳನ್ನು ಹೊಲಗಳಲ್ಲಿ ಹಾಕುತ್ತಿದ್ದೇವೆ ಮತ್ತು ಭೂಮಿಯು ಹಾಳಾಗುತ್ತಿದೆ. ಜಲಸ್ತರದ ಮೇಲೆ ಕೂಡಾ ಪರಿಣಾಮವಾಗುತ್ತಿದೆ.

ಇವತ್ತು ಭಾರತೀಯ ಮಣ್ಣು ರಕ್ತಹೀನತೆಯಿಂದ ಬಳಲುತ್ತಿದೆ. ಅನೀಮಿಯಾ ಎಂದರೇನು ಎಂದು ನಿಮಗೆ ಗೊತ್ತಾ? ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯು ಮಾನವ ಶರೀರದಲ್ಲಿ ಅನೀಮಿಯಾವನ್ನುಂಟುಮಾಡುತ್ತದೆ. ಅದೇ ರೀತಿ ಹೈಡ್ರೋಕಾರ್ಬನ್‌ಗಳ ಅಭಾವದಿಂದ ಭೂಮಿಯೂ ಅನೀಮಿಯಾಕ್ಕೊಳಗಾಗುತ್ತಿದೆ. ಸರಾಸರಿಯಾಗಿ, ಭಾರತೀಯ ಮಣ್ಣು ಕೇವಲ ೦.೩ ರಿಂದ ೦.೪ ಶೇಕಡಾದಷ್ಟು ಹೈಡ್ರೋಕಾರ್ಬನ್‌ಗಳನ್ನು ಹೊಂದಿದೆ. ವಿದೇಶಗಳಲ್ಲಿ ಹೈಡ್ರೋಕಾರ್ಬನ್‌ನ ಅಂಶವು ೫ರಿಂದ ೬ ಶೇಕಡಾದಷ್ಟು ಅಧಿಕವಾಗಿದೆ. ಇದರರ್ಥ, ನಮ್ಮ ಭೂಮಿಯು ಅನೀಮಿಯಾದಿಂದ ಬಳಲುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವೆಲ್ಲರೂ ಪ್ರಯತ್ನಪಡಬೇಕಾಗಿದೆ. ನಾವು ಪರಿಸ್ಥಿತಿಗಳನ್ನು ಬದಲಾಯಿಸಬೇಕಾಗಿದೆ. ನಾವು ನಮ್ಮ ಪರಿಸರದ ಬಗ್ಗೆ ಗಮನ ಹರಿಸಬೇಕು ಮತ್ತು ಅದರ ಬಗ್ಗೆ ಕಾಳಜಿ ವಹಿಸಬೇಕು. ಇದು ಮೊದಲನೆಯ ಮುಖ್ಯವಾದ ಸಂಗತಿ.

ನಾವು ಎದುರಿಸುತ್ತಾ ಬಂದಿರುವ ಎರಡನೆಯ ಸಮಸ್ಯೆಯೆಂದರೆ ಭ್ರಷ್ಟಾಚಾರ. ಭ್ರಷ್ಟಾಚಾರವನ್ನು ದೇಶದಿಂದ ತೊಲಗಿಸಬೇಕಾಗಿದೆ. ಒಳ್ಳೆಯ ಜನರ ಧ್ವನಿಗಳು ಕೇಳಿಸಬೇಕು.

ಕೇವಲ ಕೆಲವು ಕಾನೂನುಗಳನ್ನು ಜಾರಿಗೆ ತರುವುದರಿಂದ ಭ್ರಷ್ಟಾಚಾರವು ಕೊನೆಯಾಗದು. ಭ್ರಷ್ಟಾಚಾರದ ವಿರುದ್ಧ ಕಾನೂನುಗಳು ಖಂಡಿತವಾಗಿಯೂ ಮುಖ್ಯವಾದುದು, ಆದರೆ ಹೆಚ್ಚಿನ ಜನರು ಆಧ್ಯಾತ್ಮಿಕರಾಗುವಾಗ ಮತ್ತು ನಾವು ಯಾವುದೇ ರೀತಿಯ ಲಂಚವನ್ನು ಕೊಡುವುದೂ ಇಲ್ಲ ತೆಗೆದುಕೊಳ್ಳುವುದೂ ಇಲ್ಲವೆಂದು ನಾವು ದೃಢವಾಗಿ ನಿರ್ಧರಿಸಿದಾಗ ಮಾತ್ರ ಈ ದೇಶದಲ್ಲಿ ಪರಿಸ್ಥಿತಿಯು ಬದಲಾಗುವುದು. ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ ಭ್ರಷ್ಟಾಚಾರವು ಆರಂಭವಾಗುತ್ತದೆ. ಹೀಗಾಗಿ, ಭ್ರಷ್ಟಾಚಾರವನ್ನು ಕೊನೆಗೊಳಿಸಲು ನಾವು ದೇಶದಲ್ಲಿ ಆಧ್ಯಾತ್ಮದ ಒಂದು ಅಲೆಯನ್ನು ತರಬೇಕಾಗಿದೆ. ಇದು ಅಗತ್ಯವಾಗಿದೆ. ಇವತ್ತು ನಮ್ಮ ದೇಶದಲ್ಲಿ ಬಹಳಷ್ಟು ಹಿಂಸಾಚಾರವಿದೆ. ಜನರಲ್ಲಿ ಈ ಹಿಂಸಾಚಾರ ಪ್ರವೃತ್ತಿಗಳಿರುವುದು ಯಾಕೆ? ಸೇವಾ ಮನೋಭಾವ ಮಾಯವಾಗುವಾಗ ಹಿಂಸಾ ಪ್ರವೃತ್ತಿಯು ಹಿಡಿತ ಸಾಧಿಸುತ್ತದೆ. ಒಬ್ಬರು ಇತರರ ಸೇವೆಯಲ್ಲಿ ಅಥವಾ ಯಾವುದೇ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಾಗ, ಸಂತೋಷದ ಮತ್ತು ಪರಮಾನಂದದ ಅಲೆಗಳು ಅವರ ಜೀವನದಲ್ಲಿ ಬರುತ್ತವೆ.

ಇದು ಯುವಕರಿಗೆ ಆವಶ್ಯಕವಾಗಿದೆ. ದೇಶ ಸೇವೆ ಮಾಡುವ ಸಲುವಾಗಿ ನೀವು ಪ್ರತಿದಿನವೂ ಒಂದು ಗಂಟೆಯನ್ನು ನೀಡಬೇಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ನೀಡಿದರೆ, ಸಮಾಜಕ್ಕಾಗಿ ನಾವು ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಬಹುದು. ಹೀಗಾಗಿ, ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡಿರಿ. ನಮ್ಮ ಸುತ್ತಲಿನ ಜನರಲ್ಲಿ ನಾವು ಈ ಅರಿವನ್ನು ತರಬೇಕಾಗಿದೆ. ಇದನ್ನು ಮಾಡಲು ನಾವೆಲ್ಲರೂ ಸಿದ್ಧರಾಗಿರುವೆವೇ? ಎಷ್ಟು ಮಂದಿ ಸಿದ್ಧರಾಗಿರುವಿರಿ?

(ಸಭಿಕರಲ್ಲಿ ಹಲವರು ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ನಾನು ನಿಮಗೊಂದು ಮಂತ್ರವನ್ನು ನೀಡುವೆನು, ಅದನ್ನು ನೀವು ಪ್ರತಿದಿನವೂ ಉಚ್ಛರಿಸಬೇಕು. ಆ ಮಂತ್ರವೆಂದರೆ, ’ಅನ್ನದಾತ ಸುಖೀ ಭವಃ’. ಇದರರ್ಥ, ’ಈ ಆಹಾರವನ್ನು ನನಗೆ ನೀಡಿದವರು ಸಂತೋಷವಾಗಿಯೂ ತೃಪ್ತರಾಗಿಯೂ ಇರಲಿ’ ಎಂದು. ಹೀಗಾಗಿ ನೀವು ನಿಮ್ಮ ಊಟವನ್ನು ಪ್ರಾರಂಭಿಸುವ ಮುನ್ನ, ’ಅನ್ನದಾತ ಸುಖೀ ಭವಃ’ ಎಂದು ಉಚ್ಛರಿಸಿ. ಈ ಮಂತ್ರದ ಮೂಲಕ ನಾವು ರೈತರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ರೈತನು ದುಃಖಿತನಾಗಿದ್ದರೆ, ಅವನು ಉತ್ಪಾದಿಸುವ ಬೆಳೆಯು ಆರೋಗ್ಯದಾಯಕವಾಗಿರದು. ಆಗ ಆ ಆಹಾರವನ್ನು ತಿನ್ನುವವರು ಕೂಡಾ ಅನಾರೋಗ್ಯವಂತರಾಗುತ್ತಾರೆ. ಹೀಗಾಗಿ ನಾವು, ’ಅನ್ನದಾತ ಸುಖೀ ಭವಃ’ ಎಂದು ಹೇಳಬೇಕು. ಈ ದೇಶದ ರೈತರು ಸಂತೋಷವಾಗಿಯೂ ಸಮೃದ್ಧರಾಗಿಯೂ ಇರಲಿ!

ನಾನು ನಿಮಗೆ ಹೇಳಲು ಬಯಸುವ ಮುಂದಿನ ವಿಷಯವೆಂದರೆ, ನಮ್ಮ ದೇಶದಲ್ಲಿನ ವ್ಯಾಪಾರ ಮತ್ತು ಆರ್ಥಿಕತೆಯ ಬಗ್ಗೆ.

ನಿಮಗೆ ಗೊತ್ತಾ, ದೇಶದ ಉದ್ಯಮಿಗಳು ದುಃಖಿತರಾಗಿರುವಾಗ ಮಾತ್ರ ಅವರು ಭ್ರಷ್ಟಾಚಾರ ಮತ್ತು ಇತರ ತಪ್ಪು ಕೆಲಸಗಳಿಗೆ ಮೊರೆ ಹೋಗುವುದು. ವ್ಯಾಪಾರಿಗಳು ಕಲಬೆರಕೆಯಲ್ಲಿ ಭಾಗಿಯಾಗುವುದು ಯಾಕೆ? ಈ ದಿನಗಳಲ್ಲಿ ಬಹಳಷ್ಟು ಕಲಬೆರಕೆಗಳಾಗುತ್ತಿವೆ. ವ್ಯಾಪಾರಿಗಳಿಗೆ ’ಸದ್ಬುದ್ಧಿ’ ನೀಡಿ ಹರಸಬೇಕೆಂದು ನಾವು ದೇವರಲ್ಲಿ ಪ್ರಾರ್ಥಿಸಬೇಕು.

ಕಲಬೆರಕೆಯಿಂದುಂಟಾಗುವ ಹಾನಿಯನ್ನು ಅವರು ಅರ್ಥೈಸಿಕೊಳ್ಳಬೇಕು ಮತ್ತು ಅಂತಹ ಕೆಟ್ಟ ಅಭ್ಯಾಸಗಳಿಗೆ ಮೊರೆ ಹೋಗಬಾರದು.

ಮಹಾರಾಷ್ಟ್ರದಲ್ಲಾದರೂ ಪರಿಸ್ಥಿತಿ ಉತ್ತಮವಾಗಿದೆ. ನೀವು ದಿಲ್ಲಿಗೆ ಹೋದರೆ, ಕಲಬೆರಕೆಯ ಸಮಸ್ಯೆಯು ಬಹಳ ವ್ಯಾಪಕವಾಗಿದೆ. ಆಹಾರದ ಕಲಬೆರಕೆಯು ಅಲ್ಲಿ ಎಷ್ಟಿದೆಯೆಂದರೆ, ನಿಮಗೆ ಸಿಹಿತಿಂಡಿಗಳನ್ನು ತಿನ್ನಲು ಕೂಡಾ ಭಯವಾದೀತು.

ಅಲ್ಲಿ ಹಾಲಿನ ಕೊರತೆ ಬಹಳಷ್ಟಿರುವುದರಿಂದ ಅವರು ಸಿಹಿತಿಂಡಿಗಳೊಂದಿಗೆ ಯೂರಿಯಾ ಹಾಗೂ ಕೃತಕವಾದ ರಾಸಾಯನಿಕಗಳನ್ನು ಕಲಬೆರಕೆ ಮಾಡುತ್ತಿದ್ದಾರೆ.

ಹೀಗೆ, ನಮ್ಮ ಉದ್ಯಮಿಗಳು ಮತ್ತು ವ್ಯಾಪಾರಿಗಳು ಸಂತೋಷವಾಗಿರಬೇಕು. ಅವರು ಸಂತೋಷವಾಗಿದ್ದರೆ ಅವರು ಯಾವುದೇ ತಪ್ಪನ್ನು ಮಾಡಲಾರರು. ಸಂತೋಷವಾಗಿರುವ ಒಬ್ಬ ವ್ಯಕ್ತಿಯು ಇತರರೊಂದಿಗೆ ಜಗಳವಾಡುವುದಿಲ್ಲ.

ದುಃಖಿತನಾಗಿರುವ ಹಾಗೂ ತೃಪ್ತನಾಗಿಲ್ಲದಿರುವ ಒಬ್ಬನು, ತನಗೆ ತಾನೇ ಹಾಗೂ ತನ್ನ ಸುತ್ತಲಿರುವ ಇತರರಿಗೆ ಹಾನಿಯನ್ನುಂಟುಮಾಡುತ್ತಾನೆ.

ನಾನು ಹೇಳಲಿರುವ ಮೂರನೆಯ ವಿಷಯವೆಂದರೆ, ನಮ್ಮ ದೇಶದಲ್ಲಿನ ಮಹಿಳೆಯರ ಬಗ್ಗೆ. ನಮ್ಮ ದೇಶದ ಮಹಿಳೆಯರು ದುಃಖಿತರಾಗಿರುವಾಗ, ಇಡೀ ದೇಶವೇ ದುಃಖಿತವಾಗಿರುವುದು. ಮನೆಯ ಹೆಂಗಸು ದುಃಖಿತಳಾಗಿದ್ದರೆ, ಇಡೀ ಕುಟುಂಬವೇ ತೊಂದರೆಗೀಡಾಗುವುದು. ಹೀಗಾಗಿ, ಮನೆಯಲ್ಲಿ ಅಡುಗೆ ಮಾಡಿ ನಮಗೆ ಬಡಿಸುವ ಸ್ತ್ರೀಯು ಸಂತೋಷವಾಗಿರಬೇಕೆಂದು ನಾವೆಲ್ಲರೂ ಪ್ರಾರ್ಥಿಸಬೇಕು. ಆದುದರಿಂದ ನೀವು, ’ಅನ್ನದಾತ ಸುಖೀ ಭವಃ’ ಎಂದು ಉಚ್ಛರಿಸಿ ಸ್ತ್ರೀಯರನ್ನು ಹರಸಬೇಕು.
ನಮ್ಮ ರಾಷ್ಟ್ರದ ಸಬಲೀಕರಣಕ್ಕಾಗಿ ನಾವೆಲ್ಲರೂ ನಮ್ಮ ಮನಸ್ಸಿನಲ್ಲಿ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ನಮ್ಮ ದೇಶದಲ್ಲಿ ನೂರು ಶೇಕಡಾ ಮತದಾನವಾಗಬೇಕು. ಚುನಾಯಿಸಿ ಒಳ್ಳೆಯ ಜನರನ್ನು ಅಧಿಕಾರಕ್ಕೆ ತರುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಾಮಾಣಿಕರು ಚುನಾಯಿತರಾಗಬೇಕು.

ಇವತ್ತು ಕೂಡಾ ಒಳ್ಳೆಯ ಜನರಿದ್ದಾರೆ, ಹೀಗಾಗಿ ಅವರನ್ನು ಚುನಾಯಿಸಿ. ಅಪರಾಧಿಗಳಿಗೆ ಮತ್ತು ಭ್ರಷ್ಟ ಜನರಿಗೆ ಮತ ಹಾಕಬೇಡಿ. ನೀವು ಇದರ ಬಗ್ಗೆ ಜಾಗರೂಕರಾಗಿದ್ದರೆ, ನಮ್ಮ ದೇಶವು ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಅದು ತೊಡೆದುಹಾಕಬಲ್ಲದು.

ನಮ್ಮ ದೇಶದ ಆರ್ಥಿಕತೆಯು ಅಪಾಯದಲ್ಲಿದೆ. ನಾವು ಅದರಿಂದ ಹೊರಬರಲು ಬಯಸುವುದಾದರೆ, ಒಂದು ಬಲಿಷ್ಠವಾದ ಸರಕಾರವು ಅಧಿಕಾರಕ್ಕೆ ಬರಬೇಕು. ಅದು ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡಬಲ್ಲದು. ಹೀಗಾಗಿ ನಾವೆಲ್ಲರೂ ಇದಕ್ಕಾಗಿ ಕೆಲಸ ಮಾಡಬೇಕು.

ಆಧ್ಯಾತ್ಮಿಕ ವ್ಯಕ್ತಿಗಳು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿರುವುದಿಲ್ಲ. ಅವರು ಎಲ್ಲರಿಗೂ ಸೇರಿದವರು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಒಂದು ಪಕ್ಷಕ್ಕೆ ಸೇರಿರುತ್ತಾರೆಯೇ? ಒಂದೇ ಒಂದು ನಿರ್ದಿಷ್ಟ ಪಕ್ಷವನ್ನು ಬೆಂಬಲಿಸುವ ಜನರಿಗೆ ಮಾತ್ರ ಒಬ್ಬ ವೈದ್ಯನು ಚಿಕಿತ್ಸೆ ನೀಡುತ್ತಾನೆಯೇ? ಒಬ್ಬ ವೈದ್ಯನು ಒಂದು ಪಕ್ಷಕ್ಕೆ ಸೇರಿದವನಾಗಿದ್ದರೆ, ಆಗ ಇತರ ಪಕ್ಷಗಳ ಜನರು ಚಿಕಿತ್ಸೆಗಾಗಿ ಅವನ ಬಳಿಗೆ ಹೇಗೆ ಹೋಗುವರು? (ನಗು) ಹಾಗೆಯೇ, ಆಧ್ಯಾತ್ಮಿಕ ವ್ಯಕ್ತಿಗಳು ಎಲ್ಲರಿಗಾಗಿರುವರು. ಹೆಚ್ಚಾಗಿ ಜನರು ನನ್ನ ಬಳಿ ಬಂದು, "ಗುರುದೇವ, ನಿಮ್ಮ ಕೆಲಸವು ಆಧ್ಯಾತ್ಮವನ್ನು ಕಲಿಸುವುದಾಗಿದೆ.

ನೀವು ಯಾಕೆ ಭ್ರಷ್ಟಾಚಾರ ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಷ್ಟೊಂದು ಚರ್ಚಿಸುತ್ತೀರಿ?" ಎಂದು ಕೇಳುತ್ತಾರೆ.
ಹಲವಾರು ಜನರು ಈ ಪ್ರಶ್ನೆಯನ್ನು ಕೇಳುತ್ತಾರೆ. ನಾನವರಿಗೆ, ತನ್ನ ದೇಶಕ್ಕಾಗಿರುವ ಪ್ರೇಮ ಮತ್ತು ದೇವರಿಗಾಗಿರುವ ಪ್ರೇಮವು ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳುತ್ತೇನೆ.

ಅದು ಹಾಗಲ್ಲವಾಗಿರುತ್ತಿದ್ದರೆ, ಸಮರ್ಥ್ ರಾಮದಾಸ್ ಅವರು ಶಿವಾಜಿ ಮಹಾರಾಜರನ್ನು ನ್ಯಾಯಕ್ಕಾಗಿ ಹೋರಾಡುವಂತೆ ಯಾಕೆ ಪ್ರೇರೇಪಿಸುತ್ತಿದ್ದರು? ರಾಮದಾಸ್ ಅವರು ಶಿವಾಜಿ ಮಹಾರಾಜರಿಗೆ ಸ್ಫೂರ್ತಿ ನೀಡಿರಲಿಲ್ಲವೇ? ಯುಗಗಳಿಂದಲೂ ಇದು ನಮ್ಮ ಸಂಪ್ರದಾಯವಾಗಿತ್ತು.

ಸಮಾಜದಲ್ಲಿ ಸಮಸ್ಯೆಗಳಿದ್ದಾಗ ಮತ್ತು ನೈತಿಕತೆಯು ಕುಸಿಯಲು ಆರಂಭವಾದಾಗಲೆಲ್ಲಾ, ಆಧ್ಯಾತ್ಮಿಕ ಕ್ಷೇತ್ರದಿಂದ ಜನರು ಮುಂದೆ ಬಂದು ನಿಯಂತ್ರಣವನ್ನು ಕೈಗೆ ತೆಗೆದುಕೊಂಡರು.

ಹೀಗಾಗಿ ಇದು ನನ್ನ ಕರ್ತವ್ಯವಾಗಿದೆ ಮತ್ತು ನಾನದನ್ನು ಮಾಡುವೆನು.

ಯಾವಾಗೆಲ್ಲಾ ಧರ್ಮದಲ್ಲೊಂದು ಕುಸಿತವಾಗುವುದೋ, ಆಧ್ಯಾತ್ಮಿಕ ಮುಖಂಡರು ಅದರ ವಿರುದ್ಧ ಎದ್ದುನಿಂತು ತಮ್ಮ ದನಿಯೆತ್ತುವರು. ಅವರಿದನ್ನು ಹಿಂದೆ ಮಾಡಿದ್ದಾರೆ ಮತ್ತು ಮುಂದೆಯೂ ಹೀಗೆ ಮಾಡುವುದನ್ನು ಮುಂದುವರಿಸುವರು. ಅಂತಹ ಸಾಮಾಜಿಕ ಸಮಸ್ಯೆಗಳು ಏಳುವಾಗಲೆಲ್ಲಾ ಅವರು ಎದ್ದುನಿಂತು ಮಾತನಾಡುವರು.