ಶನಿವಾರ, ಏಪ್ರಿಲ್ 5, 2014

ಸಮರ್ಪಣಾ ಭಾವ

೫ ಎಪ್ರಿಲ್ ೨೦೧೪
ಪುಣೆ, ಮಹಾರಾಷ್ಟ್ರ

(’ಸೇವಾ ತತ್ಪರತೆ’ ಲೇಖನದ ಮುಂದುವರಿದ ಭಾಗ)

ಮ್ಮ ಸಮಾಜದ ಸುಧಾರಣೆಗಾಗಿ ಕೆಲಸ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ’ನಾವು ತೋಟಗಾರನನ್ನು (ದೇವರು) ಪ್ರೀತಿಸುತ್ತೇವೆ, ಆದರೆ ನಾವು ಅವನ ತೋಟವನ್ನು (ಸಮಾಜ) ಇಷ್ಟಪಡುವುದಿಲ್ಲ’ ಎಂದು ನಾವು ಹೇಳಲು ಸಾಧ್ಯವಿಲ್ಲ. ಯಾರಿಗೂ ಇದನ್ನು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿಯೇ, ಜನಸೇವೆಯೇ ಜನಾರ್ಧನ ಸೇವೆ. ಹೀಗಾಗಿ ನಾವು ಸೇವೆಯಲ್ಲಿ ನಿರತರಾಗಿರಬೇಕು. ಯಾರಿಗೆಲ್ಲಾ ಒಂದು ಸ್ಥಾನವನ್ನು ನೀಡಲಾಗಿದೆಯೋ ಅವರು, ಕುರ್ಚಿಯಿರುವುದು ಜನರ ಸೇವೆ ಮಾಡುವುದಕ್ಕಾಗಿ ಮತ್ತು ಸ್ವಾರ್ಥಪರವಾದ ವೈಯಕ್ತಿಕ ಲಾಭಗಳಿಗಾಗಿಯಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ದೇಶದ ನಾಯಕರು ನಮ್ರತೆಯೊಂದಿಗೆ ಜೀವಿಸಬೇಕು ಮತ್ತು ಒಬ್ಬ ಸೇವಕನು ಮಾಡುವಂತೆಯೇ ಸಮರ್ಪಣಾ ಭಾವದೊಂದಿಗೆ ಸೇವೆ ಮಾಡಬೇಕು.

ದೇವರನ್ನು ’ದಾಸಾನುದಾಸ’ ಎಂದು ಹೇಳಲಾಗುತ್ತದೆ, ಅಂದರೆ ದಾಸರ ದಾಸ ಎಂದು. ಭಗವಾನ್ ಹರಿಯು ದಾಸರ ದಾಸ ಎಂದು ಕರೆಯಲ್ಪಡುತ್ತಾನೆ. ದೇವರು ತನ್ನ ಭಕ್ತರಿಗೆ  ಅತ್ಯಂತ ನಮ್ರತೆ ಮತ್ತು ಪ್ರೇಮದಿಂದ ಸೇವೆ ಮಾಡುತ್ತಾನೆ. ಹೀಗಾಗಿ ನಾವು ಕೂಡಾ ಒಬ್ಬ ದಾಸನಂತಿರಬೇಕು (ಯಾವತ್ತೂ ಸೇವೆ ಮಾಡಲು ಸಿದ್ಧರಾಗಿ); ದೇವರಂತೆ, ಆದರೆ ನಾವು ಉದಾಸರಾಗಿರಬಾರದು.

ಕೆಲವು ಜನರು ಎಲ್ಲರೂ ಭ್ರಷ್ಟರೆಂದು ಭಾವಿಸುತ್ತಾರೆ. ಇದು ಸರಿಯಲ್ಲ. ಇವತ್ತು ಕೂಡಾ ಎಲ್ಲೆಡೆಯೂ ಹಲವಾರು ಒಳ್ಳೆಯ ಜನರಿದ್ದಾರೆ.

ದ್ವಾಪರ ಯುಗದಲ್ಲಿ ಐದು ಪಾಂಡವರು ಮತ್ತು ನೂರು ಕೌರವರಿದ್ದರು. ನಿಮಗೆ ಗೊತ್ತಾ, ಕಲಿಯುಗದಲ್ಲಿ ನೂರು ಪಾಂಡವರು (ಇಲ್ಲಿ ಒಳ್ಳೆಯ ಜನರು ಎಂದು ಅರ್ಥ) ಮತ್ತು ಕೇವಲ ಐದು ಕೌರವರಿರುವರು (ಇಲ್ಲಿ ದುಷ್ಟರ ಬಗ್ಗೆ ಉಲ್ಲೇಖಿಸುತ್ತಾ).
ತೊಂದರೆಗಳನ್ನುಂಟುಮಾಡುವ ಜನರು ಇರುವುದು ಕೇವಲ ಒಂದು ಹಿಡಿಯಷ್ಟು ಮಾತ್ರ. ಆದರೆ ಒಳ್ಳೆಯ ಜನರ ಮೌನವು, ಅವರ ಪೀಡೆಯು ಮುಂದುವರಿಯುವುದಕ್ಕೆ ಅನುಮತಿಸಿದೆ.

ಸಮಾಜದ ಎಲ್ಲಾ ಒಳ್ಳೆಯ ಜನರು ಮೌನವಾಗಿರುತ್ತಾರೆ. ಹಲವು ಜನರು ಮತದಾನದ ಹಕ್ಕು ಚಲಾಯಿಸಲು ಕೂಡಾ ಹೋಗುವುದಿಲ್ಲ. "ಓ, ಬಹಳ ಸೆಖೆ" ಅಥವಾ "ಮಳೆ ಬರುತ್ತಿದೆ, ಹೋಗಿ ಮತದಾನ ಮಾಡುವ ತೊಂದರೆ ಯಾಕೆ? ಮನೆಯಲ್ಲಿದ್ದು ಹಾಯಾಗಿರೋಣ" ಎಂದು ಅವರು ಯೋಚಿಸುತ್ತಾರೆ.

ಈ ಮನೋಭಾವದೊಂದಿಗೆ ಅವರು ಮತ ಹಾಕಲು ಹೋಗುವುದಿಲ್ಲ. ಈ ರೀತಿ ಯೋಚಿಸಬಾರದೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನೀವು ಖಂಡಿತವಾಗಿಯೂ ಹೋಗಿ ಮತ ಹಾಕಬೇಕು.

ಈ ಪ್ರದೇಶದ ಮತದಾನದ ಶೇಕಡಾವಾರನ್ನು ನಾನು ವೈಯಕ್ತಿಕವಾಗಿ ಪರಿಶೀಲಿಸುವೆನು. ನಮ್ಮಲ್ಲಿ ಶೇ. ೧೦೦ರಷ್ಟು  ಮತದಾನವಾಗಬೇಕು ಮತ್ತು ನೀವೆಲ್ಲರೂ ಇದು ಸಾಧ್ಯವಾಗುವಂತೆ ಮಾಡಬೇಕು.

ಇವತ್ತು ಮಹಾರಾಷ್ಟ್ರದಲ್ಲಿ ಹಲವಾರು ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ. ಮೊದಲು ಅವರು ಯಾವತ್ತೂ ಹಾಗೆ ಮಾಡುತ್ತಿರಲಿಲ್ಲ.

ದ್ವಿತೀಯ ಮಹಾಯುದ್ಧದಲ್ಲಿ, ಒಂದು ಲಕ್ಷ ಭಾರತೀಯ ಸೈನಿಕರು ತಮ್ಮ ಜೀವವನ್ನು ಕಳಕೊಂಡರು. ಅವರಲ್ಲಿ ಹಲವರು ಮಹಾರಾಷ್ಟ್ರದವರಾಗಿದ್ದರು. ಅದೇ ಸಮಯದಲ್ಲಿ, ಇಡೀ ದೇಶವು ಪ್ಲೇಗಿನ ಹಿಡಿತದಲ್ಲಿತ್ತು. ಆಗ ಕೂಡಾ ಯಾರೂ ಆತ್ಮಹತ್ಯೆ ಮಾಡಲಿಲ್ಲ. ಈಗ ಜನರು, ಕೇವಲ ಒಂದು ಬೆಳೆಯ ಕಟಾವಿನ ನಷ್ಟದಿಂದಾಗಿ ಹೀಗೆ ಮಾಡಲು ತೊಡಗಿದ್ದಾರೆ. ಕಳೆದ ವಾರ ಐದು ಜನರು ಆತ್ಮಹತ್ಯೆ ಮಾಡಿಕೊಂಡರು ಎಂದು ನನಗೆ ತಿಳಿದುಬಂತು. ದೇಶದ ಸುತ್ತಲೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ನಾನು ಹೋಗುತ್ತಾ ಇರುವ ಕಾರಣಗಳಲ್ಲಿ ಒಂದು ಇದು, ಚಿಂತಿಸಬೇಡಿರೆಂದು ರೈತರಲ್ಲಿ ಹೇಳಲು. ಈಗಲೂ ಕೂಡಾ ಈ ಜಗತ್ತಿನಲ್ಲಿ ಮಾನವೀಯತೆಯಿದೆ. ನಾನು ನಿಮ್ಮೊಂದಿಗಿದ್ದೇನೆ. ಎಲ್ಲಾ ಆರ್ಟ್ ಆಫ್ ಲಿವಿಂಗ್ ಶಿಕ್ಷಕರು ಮತ್ತು ಸ್ವಯಂಸೇವಕರು ನಿಮ್ಮೊಂದಿಗಿದ್ದಾರೆ. ನೀವು ಆತ್ಮಹತ್ಯೆ ಮಾಡಲು ನಾವು ಬಿಡೆವು. ನೀವು ಹಾಗೆ ಮಾಡಬೇಕಾಗಿಲ್ಲ. ನಾವು ನಿಮ್ಮೊಂದಿಗೆ ಜೊತೆಯಲ್ಲಿ ನಿಲ್ಲುತ್ತೇವೆ ಮತ್ತು ನಾವು ನಿಮಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡುವೆವು.

ನಾವೆಲ್ಲರೂ ನಮ್ಮಲ್ಲಿ ಬಾಂಧವ್ಯ, ಮಾನವೀಯತೆ ಮತ್ತು ಪ್ರೇಮವನ್ನು ಹೊಂದಿದ್ದೇವೆ. ಇದನ್ನು ಬಲವಾಗಿ ಹೊರತರುವ ಸಮಯವು ಇದಾಗಿದೆ. ನಾವು ಜನರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡಬೇಕಾಗಿದೆ. ನಾವು ನಮ್ಮ ಸಮಾಜದಲ್ಲಿ ಆನಂದದ ಒಂದು ಅಲೆಯನ್ನು ತರಬೇಕಾಗಿದೆ. ಇವತ್ತು, ಹೆಚ್ಚು ಮುಖ್ಯವಾಗಿರುವುದು ಜಿ.ಡಿ.ಪಿ. (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್; ಅಂದರೆ ಒಟ್ಟು ದೇಶೀಯ ಉತ್ಪನ್ನ) ಅಲ್ಲ, ಆದರೆ ಜಿ.ಡಿ.ಹೆಚ್. (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್; ಅಂದರೆ ಒಟ್ಟು ದೇಶೀಯ ಸಂತೋಷ) ಎಂಬುದನ್ನು ವಿಶ್ವಸಂಸ್ಥೆ ಕೂಡಾ ಅನುಮೋದಿಸಿದೆ. ನಾವಿದನ್ನು ಕಡೆಗಣಿಸಲು ಸಾಧ್ಯವಿಲ್ಲ; ಸಂತೋಷವು ಒಂದು ಪ್ರಮುಖವಾದ ಅಂಶವಾಗಿದೆ. ಜನರು ಸಂತೋಷವಾಗಿದ್ದಾರಾ? ಅವರು ತೃಪ್ತರಾಗಿದ್ದಾರಾ? ಈಗ ಈ ಅಂಶಗಳು ಕೂಡಾ ಅಳೆಯಲ್ಪಡುತ್ತವೆ.

ಕಳೆದ ತಿಂಗಳು ನಾನು ವಿಯೆನ್ನಾದಲ್ಲಿದ್ದೆ. ಅಲ್ಲಿ ಇಂಟರೇಕ್ಷನ್ ಕೌನ್ಸಿಲ್ (ಐ.ಎ.ಸಿ.) ಎಂಬ ಒಂದು ಸಮ್ಮೇಳನವಿತ್ತು. ೫೦ ದೇಶಗಳ ಮಾಜಿ ಪ್ರಧಾನ ಮಂತ್ರಿಗಳು ಅದರಲ್ಲಿ ಹಾಜರಿದ್ದರು. ಅವರೆಲ್ಲರೂ ಜಗತ್ತಿನಲ್ಲಿನ ಭ್ರಷ್ಟಾಚಾರದ ಬಗ್ಗೆ ಚಿಂತಿತರಾಗಿದ್ದರು. ಭ್ರಷ್ಟಾಚಾರ, ಭಯೋತ್ಪಾದನೆ, ಹಿಂಸಾಚಾರ, ಈ ಎಲ್ಲಾ ಸಮಸ್ಯೆಗಳನ್ನು ಅಲ್ಲಿ ವಿವರವಾಗಿ ಚರ್ಚಿಸಲಾಯಿತು.

ಜಪಾನ್ ಮತ್ತು ಕೆನಡಾಗಳ ಪೂರ್ವ ಪ್ರಧಾನಮಂತ್ರಿಗಳು ಕೂಡಾ ಅಲ್ಲಿದ್ದರು. ಕಳೆದ ೨೦ ವರ್ಷಗಳಲ್ಲಿ, ನಮ್ಮ ಭಾರತೀಯ ಪ್ರಧಾನ ಮಂತ್ರಿಗಳಲ್ಲಿ ಯಾರೂ ಈ ಸಮ್ಮೇಳನಕ್ಕೆ ಹಾಜರಾಗಿಲ್ಲ. ಇದಕ್ಕೆ ಹಾಜರಾಗಬಹುದಿದ್ದ ಕೆಲವರು ಹಿಂದೆ ಅಸ್ವಸ್ಥರಾಗಿದ್ದರು, ಹೀಗಾಗಿ ಅವರಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾರತವು ಯಾವುದೇ ಪ್ರಾತಿನಿಧ್ಯವನ್ನು ಹೊಂದಿರಲಿಲ್ಲ.

ಪರಿಷತ್ತು ನನ್ನನ್ನು ಯಾಕೆ ಆಮಂತ್ರಿಸಿತೆಂದು ನನಗೆ ತಿಳಿಯದು. ಸಮಾಜವು ಇವತ್ತು ಎಲ್ಲೆಡೆಯೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಲ್ಲಿ ನಾವು ಹಲವಾರು ಚರ್ಚೆಗಳನ್ನು ಮಾಡಿದೆವು. ನಾನು ಕೂಡಾ ನನ್ನ ಅಂಶಗಳನ್ನು ಮುಂದಿಟ್ಟೆ.

ಅಲ್ಲಿ ಜನರು ನನ್ನಲ್ಲಿ, "ಗುರುದೇವ, ನಮ್ಮ ದೇಶದಲ್ಲಿ ಕೂಡಾ ಬಹಳಷ್ಟು ಭ್ರಷ್ಟಾಚಾರವಿದೆ. ಐದಾರು ವರ್ಷಗಳಲ್ಲಿ ಒಂದು ಅಥವಾ ಎರಡು ಹಗರಣಗಳಾಗುತ್ತವೆ. ಆದರೆ ನಿಮ್ಮಲ್ಲಿ ಪ್ರತಿ ತಿಂಗಳೂ ಐದರಿಂದ ಆರು ಹಗರಣಗಳಾಗುವುದು ಹೇಗೆ?" ಎಂದು ಕೇಳಿದರು.

ನಾನಂದೆ, "ನೋಡಿ, ಭಾರತವು ಬೃಹತ್ ಜನಸಂಖ್ಯೆಯನ್ನು ಹೊಂದಿದೆ. ಜನರು ಈಗ ಬಹಳ ಜಾಗೃತರಾಗಿದ್ದಾರೆ ಮತ್ತು ದೇಶದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಅರಿತಿದ್ದಾರೆ."

ಮುಂಬರುವ ವರ್ಷಗಳಲ್ಲಿ, ಭಾರತವು ಮತ್ತೊಮ್ಮೆ ಪ್ರಗತಿಯ ಎಷ್ಟೊಂದು ಎತ್ತರಕ್ಕೆ ಏರುವುದೆಂದರೆ ಅದು ಇಡೀ ಜಗತ್ತನ್ನು ನಿಬ್ಬೆರಗುಗೊಳಿಸುವುದು.

ಭಾರತವು ಯಾವತ್ತೂ ಅಧಿಕಾರವನ್ನು ಹೊಂದಿತ್ತು, ಮತ್ತು ಅದು ಭಾರತದ ಆಧ್ಯಾತ್ಮದ ಕಾರಣದಿಂದ. ಒಂದು ಸುರಕ್ಷಿತ ಮತ್ತು ಬಲವಾದ ದೇಶವಾಗಿ ನಾವು ನಮ್ಮ ದೇಶದ ಚಿತ್ರಣವನ್ನು ಮುಂದಕ್ಕೆ ತರಬೇಕಾಗಿದೆ.

ಭಾರತದಲ್ಲಿ ಬಹಳಷ್ಟು ಬಲಾತ್ಕಾರಗಳಾಗುತ್ತಿವೆ ಮತ್ತು ಸ್ತ್ರೀಯರು ಸುರಕ್ಷಿತರಾಗಿಲ್ಲ ಎಂದು ಜನರು ಇವತ್ತು ಹೇಳುತ್ತಾರೆ. ನಮ್ಮ ದೇಶದಲ್ಲಿ ಸ್ತ್ರೀಯರ ಈ ಅಸುರಕ್ಷತೆಯ ಪ್ರಧಾನ ಕಾರಣವೆಂದರೆ ಕುಡಿತ. ಸ್ತ್ರೀಯರ ವಿರುದ್ಧ ಅಪರಾಧಗಳನ್ನು ನಡೆಸಿದ ಜನರಲ್ಲಿ ಹೆಚ್ಚಿನವರು ಮಾದಕದ್ರವ್ಯದ ಪ್ರಭಾವಕ್ಕೊಳಗಾಗಿದ್ದರು. ನಾವು ನಮ್ಮ ಸಮಾಜವನ್ನು ಈ ಮಾದಕದ್ರವ್ಯಗಳಿಂದ ಮುಕ್ತಗೊಳಿಸುವಲ್ಲಿಯವರೆಗೆ, ಸ್ತ್ರೀಯರ ವಿರುದ್ಧ ಹಿಂಸಾಚಾರಗಳು ಮುಂದುವರಿಯುವುವು. ಈ ಘಟನೆಗಳಲ್ಲಿ ಕೆಲವು ವಾರ್ತಾಪತ್ರಿಕೆಗಳಲ್ಲಿ ವರದಿಯಾಗುತ್ತವೆ. ಆದರೆ ಗ್ರಾಮಗಳಲ್ಲಿ ಹಲವಾರು ನಡೆಯುತ್ತವೆ ಮತ್ತು ಅವುಗಳು ವರದಿಯಾಗುವುದಿಲ್ಲ.

ಒಬ್ಬ ಪತಿಯು ಕುಡಿದು ಮನೆಗೆ ಬರುತ್ತಾನೆ ಮತ್ತು ತನ್ನ ಪತ್ನಿಯನ್ನು ಹೊಡೆಯುತ್ತಾನೆ. ಬೆಳಗ್ಗೆ ಮದ್ಯದ ಪ್ರಭಾವವು ಕಡಿಮೆಯಾದಾಗ, ಅದೇ ಪತಿಯು ಅವಳ ಕಾಲುಗಳಿಗೆ ಬಿದ್ದು ಕ್ಷಮೆ ಕೇಳುತ್ತಾನೆ. ಮತ್ತು ಆ ಸ್ತ್ರೀಯು ಅವನನ್ನು ಕ್ಷಮಿಸುತ್ತಾಳೆ ಕೂಡಾ, ಯಾಕೆಂದರೆ ಅವಳು ಕರುಣೆಯಿಂದ ತುಂಬಿದ ಹೃದಯವುಳ್ಳವಳು. ಇವತ್ತು ಈ ಪರಿಸ್ಥಿತಿಯನ್ನು ಬದಲಾಯಿಸಲು ನಾವು ಆಧ್ಯಾತ್ಮದ ಒಂದು ದೊಡ್ಡ ಅಲೆಯನ್ನು ತರಬೇಕಾಗಿದೆ.

ವಾಲ್ಯುಂಟಿಯರ್ ಫಾರ್ ಎ ಬೆಟರ್ ಇಂಡಿಯಾದ (ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ)  ಸ್ವಯಂಸೇವಕರು ಹಳ್ಳಿಯಿಂದ ಹಳ್ಳಿಗೆ ಹೋಗಿ ಜನರೊಂದಿಗೆ ಕುಳಿತುಕೊಳ್ಳಬೇಕು, ಅವರಿಗೆ ಸ್ಫೂರ್ತಿ ನೀಡಬೇಕು ಮತ್ತು ಅವರಲ್ಲಿ ಉತ್ಸಾಹವನ್ನು ತುಂಬಬೇಕು. ಎಲ್ಲೆಲ್ಲಾ ಸಾಧ್ಯವೋ ಅಲ್ಲೆಲ್ಲಾ ಸತ್ಸಂಗಗಳನ್ನು ಮಾಡಬೇಕು.

ಆಧ್ಯಾತ್ಮದ ಒಂದು ಅಲೆಯನ್ನು ತರುವುದರಿಂದ ಮಾತ್ರ ಈ ಬದಲಾವಣೆಯನ್ನು ಮಾಡಲು ಸಾಧ್ಯ.
ಪರಿವರ್ತನೆಯು ಈಗಾಗಲೇ ಆರಂಭವಾಗಿದೆ ಮತ್ತು ಅತ್ಯಾವಶ್ಯಕವಾಗಿರುವ ಬದಲಾವಣೆ ಕೂಡಾ ಎಲ್ಲೆಡೆಯೂ ಆಗತೊಡಗಿದೆ.

ನಾನು ನಮ್ಮ ಎಲ್ಲಾ ಯುವಾಚಾರ್ಯರನ್ನು ಮತ್ತು ಆರ್ಟ್ ಆಫ್ ಲಿವಿಂಗ್ ಶಿಕ್ಷಕರನ್ನು ಅಭಿನಂದಿಸುತ್ತೇನೆ. ಅವರು ಸಾಯುತ್ತಿದ್ದ ಐದು ನದಿಗಳಿಗೆ ಜೀವ ನೀಡಿದ್ದಾರೆ. ಈ ನದಿಗಳು ಹರಿಯುವುದನ್ನು ನಿಲ್ಲಿಸಿದ್ದವು. ನಿಮ್ಮೆಲ್ಲರೊಂದಿಗೆ ನಾನು ಅತೀ ಹೆಮ್ಮೆಯಿಂದ ಹಂಚಿಕೊಳ್ಳುವ ಸಾಧನೆಗಳಾಗಿವೆ ಇವು. ಕರ್ನಾಟಕದಲ್ಲಿನ ಕುಮುದ್ವತಿ ನದಿ, ಮಹಾರಾಷ್ಟ್ರದಲ್ಲಿನ ಧರಣಿ ನದಿ, ಇವುಗಳು ಕೆಲವು ಉತ್ತಮ ಉದಾಹರಣೆಗಳಾಗಿವೆ.

ಶೋಲಾಪುರದ ಕೆರೆಯಲ್ಲಿ ಬಹಳಷ್ಟು ಪಾಚಿ ಬೆಳೆದಿತ್ತು. ವಿ.ಬಿ.ಐ.ಯ ಎಲ್ಲಾ ಯುವಜನರು ಅಲ್ಲಿಗೆ ಹೋಗಿ, ಒಟ್ಟು ಸೇರಿ ಅದನ್ನು ಸ್ವಚ್ಛಗೊಳಿಸಿದರು. ಈಗ ನೀರು ಮತ್ತೊಮ್ಮೆ ಶುದ್ಧವಾಗಿದೆ. ಇದು, ಒಳ್ಳೆಯ ಕೆಲಸವನ್ನು ಮುಂದುವರಿಸಲು ನಮಗೆ ಮತ್ತೂ ಸ್ಫೂರ್ತಿ ನೀಡಿದೆಯಷ್ಟೆ. ಮಹಾರಾಷ್ಟ್ರದಿಂದ ಸ್ಫೂರ್ತಿಯನ್ನು ಪಡೆದು, ವಿ.ಬಿ.ಐ.ಯು ಕರ್ನಾಟಕದಲ್ಲಿ ಕೂಡಾ ಮೂರು ನದಿಗಳಿಗೆ ಜೀವ ನೀಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಅವರು ದಿಲ್ಲಿಯೊಂದರಲ್ಲೇ ಒಂದು ಸಾವಿರಗಳಷ್ಟು ಯೋಜನೆಗಳನ್ನು ಪೂರ್ತಿಗೊಳಿಸಿದ್ದಾರೆ. ಬದಲಾವಣೆಯನ್ನು ತರುವ ಈ ಶಕ್ತಿ ನಮ್ಮಲ್ಲಿದೆ, ಹೀಗಾಗಿ ನಾವು ಬದಲಾವಣೆಯನ್ನು ತರಬೇಕು.

ಇವತ್ತು ಕೂಡಾ ಸಮಾಜದಲ್ಲಿ ಒಳ್ಳೆಯ ಜನರಿದ್ದಾರೆ ಎಂಬ ಈ ವಿಶ್ವಾಸ ನಮ್ಮಲ್ಲಿರಬೇಕು. ನಮ್ಮ ಸಮಾಜವು ಎತ್ತಿಹಿಡಿಯಲ್ಪಟ್ಟಿರುವುದು ಒಳ್ಳೆಯ ಜನರಿಂದಾಗಿಯೇ. ಎಲ್ಲರೂ ಕೆಟ್ಟವರು ಅಥವಾ ಎಲ್ಲರೂ ಅಪ್ರಾಮಾಣಿಕರು ಎಂದು ಯೋಚಿಸಬೇಡಿ. ಇವತ್ತು ಕೂಡಾ ಹಲವಾರು ಒಳ್ಳೆಯ ಜನರಿದ್ದಾರೆ. ಎಲ್ಲಾ ಜನರು ವಂಚಕರೆಂದು ನಾವು ಯೋಚಿಸುವಾಗ, ನಾವು ನಮಗೇ ಆ ರೀತಿಯಾಗಿರಲು ಒಂದು ಪರವಾನಗಿಯನ್ನು ಕೊಡುತ್ತೇವೆ. ಇದು ಯಾಕೆಂದರೆ, ನಾವು, "ಓ, ಎಲ್ಲರೂ ಹೀಗಿದ್ದಾರೆ, ಹೀಗಾಗಿ ನಾನು ಕೂಡಾ ಒಬ್ಬ ವಂಚಕನಂತೆ ವರ್ತಿಸುವೆ. ನಾನು ಯಾಕೆ ಬೇರೆಯವರಿಗಿಂತ ವಿಭಿನ್ನವಾಗಿ ವರ್ತಿಸಬೇಕು?" ಎಂದು ಭಾವಿಸುತ್ತೇವೆ.

ಎಲ್ಲರೂ ತಪ್ಪು ಎಂದು ಹೇಳುವುದೇ ತಪ್ಪು. ಎಲ್ಲರೂ ಕೆಟ್ಟವರಾಗಿರಲು ಸಾಧ್ಯವಿಲ್ಲ.

ನಮ್ಮಲ್ಲಿರಬೇಕಾದ ಇನ್ನೊಂದು ರೀತಿಯ ವಿಶ್ವಾಸವೆಂದರೆ, ದೇವರಲ್ಲಿ; ಜಗತ್ತಿನಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿರುವ ಒಂದು ಸರ್ವೋಚ್ಛ ಶಕ್ತಿಯಲ್ಲಿ ವಿಶ್ವಾಸ. ದೇವರು ನಿಮಗೆ ಸೇರಿದವರು ಮತ್ತು ನಿಮ್ಮನ್ನು ಬಹಳಷ್ಟು ಪ್ರೀತಿಸುತ್ತಾರೆಂಬ ಈ ವಿಶ್ವಾಸವನ್ನು ಹೊಂದಿ. ಆಗ ನಿಮ್ಮ ಜೀವನವು ಅರಳುವುದನ್ನು ನೀವು ನೋಡುವಿರಿ ಮತ್ತು ಹೋದಲ್ಲೆಲ್ಲಾ ನೀವು ಸುವಾಸನೆಯನ್ನು ಹರಡುವಿರಿ. ನಿಮ್ಮಲ್ಲಿ ಈ ವಿಶ್ವಾಸವಿರುವಾಗ, ನೀವು ಏನನ್ನೆಲ್ಲಾ ಬಯಸುವಿರೋ ಅದಾಗಲು ತೊಡಗುವುದು.

ಇಲ್ಲಿರುವ ಭಕ್ತರಲ್ಲಿ ನಾನು ಕೇಳಲು ಬಯಸುತ್ತೇನೆ. ಪಥಕ್ಕೆ ಬಂದ ಬಳಿಕ, ನೀವು ಏನನ್ನೆಲ್ಲಾ ಬಯಸಿರುವಿರೋ ಅದಾಗಲು ತೊಡಗುವುದೆಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ನಿಮ್ಮ ಕೈಗಳನ್ನೆತ್ತಿ.

(ಸಭಿಕರಲ್ಲಿ ಹಲವರು ಕೈಗಳನ್ನೆತ್ತುತ್ತಾರೆ)

ನಾನು ನಿಮ್ಮಲ್ಲಿ, "ನನಗೆ ಬೇಕಾದುದೆಲ್ಲವೂ ಆಗುತ್ತದೆ" ಎಂದು ಹೇಳಿದರೆ ನೀವು, "ಓ ಗುರುದೇವ, ಆದರೆ ನೀವು ಬೇರೆ" ಎಂದು ಹೇಳುವಿರಿ. ನೋಡಿ, ದೈವಿಕತೆಯು ಎಲ್ಲರಿಗೂ ಒಂದೇ. ದೇವರು ಎಲ್ಲೆಡೆಯೂ ಇರುವನೆಂದು ನಾವು ಹೇಳುವಾಗ, ಅವನು ನಿಮ್ಮಲ್ಲಿಯೂ ಇರುವನು, ಅಲ್ಲವೇ? ಮತ್ತು ದೇವರು ಎಲ್ಲರಿಗೂ ಸೇರಿರುವಾಗ, ಅವನು ಖಂಡಿತವಾಗಿಯೂ ನಿಮಗೂ ಸೇರಿದವನು. ದೇವರು ಯಾವತ್ತೂ ಇದ್ದನು ಮತ್ತು ಇರುವುದನ್ನು ಮುಂದುವರಿಸುವನು, ಸದಾ ಕಾಲವೂ. ದೇವರು ಸರ್ವಶಕ್ತನು ಮತ್ತು ನನ್ನ ಜೀವನದಲ್ಲಿನ ಎಲ್ಲಾ ಯಾತನೆಗಳನ್ನು ಹಾಗೂ ಯಾವುದೇ ಕೊರತೆಯನ್ನು ತೆಗೆದುಹಾಕಲು ಅವನು ಸಮರ್ಥನು ಎಂಬ ಈ ದೃಢ ವಿಶ್ವಾಸವನ್ನು ಯಾವತ್ತೂ ಹೊಂದಿರಿ.

ಹೀಗೆ, ದೈವತ್ವವು ನನಗೆ ಸೇರಿದುದು ಮತ್ತು ಅದು ಯಾವತ್ತೂ ನನ್ನಲ್ಲಿ ವಾಸಿಸುತ್ತಿದೆ ಎಂದು ಭಾವಿಸಿ. ಇದನ್ನು ತಿಳಿಯುವುದು ಮತ್ತು ಈ ವಿಶ್ವಾಸದಲ್ಲಿ ಆಳವಾದ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಧ್ಯಾನವಾಗಿದೆ.

ಪ್ರತಿದಿನವೂ ಈ ದೃಢವಿಶ್ವಾಸದೊಂದಿಗೆ ನೀವು ಧ್ಯಾನ ಮಾಡಿದರೆ ನಿಮಗೆ ಯಾವ ಲಾಭಗಳು ಸಿಗುವುವು? ನಿಮ್ಮ ಇಚ್ಛಾಶಕ್ತಿಯು ಬಲವಾಗುವುದು. ಇತರರನ್ನು ಹರಸಲು ಹಾಗೂ ಅವರ ಬಯಕೆಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುವುದು.

ನಮ್ಮಲ್ಲಿ ಈ ವಿಶ್ವಾಸವಿರುವಾಗ, ಜೀವನದಲ್ಲಿ ಯಾವುದೇ ಪರಿಸ್ಥಿತಿಯಿಂದ ನಾವು ಹೊರಬರಬಲ್ಲೆವು. ಹೀಗಾಗಿ, ಹೋಗಿ ಈ ಸಂದೇಶವನ್ನು ಹರಡುವಂತೆ ನಾನು ನಿಮ್ಮಲ್ಲಿ ಕೇಳಿಕೊಳ್ಳುವೆನು. ಈ ಸಂದೇಶವನ್ನು ನಮ್ಮ ರೈತರಿಗೆ, ಯುವ ಜನತೆಗೆ ಮತ್ತು ನಮ್ಮ ವಿದ್ಯಾರ್ಥಿಗಳಿಗೆ ಹರಡಿ. ನಮ್ಮ ಜೀವನವು ಒಂದು ಬೆಳೆಗಿಂತ ಎಷ್ಟೋ ಹೆಚ್ಚು ಮುಖ್ಯವಾದುದು. ಒಂದು ಬೆಳೆಯು ನಾಶವಾಯಿತೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡುವುದು ಒಂದು ಬುದ್ಧಿವಂತಿಕೆಯ ಕೆಲಸವಲ್ಲ. ಜೀವನವು ಇದಕ್ಕಿಂತ ಎಷ್ಟೋ ಹೆಚ್ಚು ಅಮೂಲ್ಯವಾದುದು. ನೀವಿದನ್ನು ಅವರಿಗೆ ಮನದಟ್ಟು ಮಾಡಿಸಬೇಕು.