ಮಂಗಳವಾರ, ಏಪ್ರಿಲ್ 1, 2014

ನಮ್ಮನ್ನು ಕುಗ್ಗಿಸುವ ಕಾರಣಗಳಿವು

ಎಪ್ರಿಲ್ ೧, ೨೦೧೪
ಬೆಂಗಳೂರು, ಭಾರತ

ಜ್ಞಾನವು ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ ಮತ್ತು ಶಾಂತಿಯನ್ನು ತರುತ್ತದೆ. ಸಂತೋಷವಾಗಿರಿ ಮತ್ತು ಇತರರಲ್ಲಿ ತಪ್ಪುಗಳನ್ನು ಹುಡುಕುತ್ತಾ ಇರಬೇಡಿ.

ಇವತ್ತು ನಿಶ್ಚಿತಾರ್ಥವಾದವರಿಗೆ ನನ್ನ ಸಲಹೆಯಿದೆ. ನಿಮ್ಮ ಪ್ರೀತಿಪಾತ್ರರ ಪ್ರೇಮದ ಬಗ್ಗೆ ಯಾವತ್ತೂ ಪ್ರಶ್ನೆ ಮಾಡಬೇಡಿ. "ನೀನು ನನ್ನನ್ನು ಎಷ್ಟು ಪ್ರೀತಿಸುವೆ?" ಎಂದು ಅವರಲ್ಲಿ ಕೇಳಬೇಡಿ. ಅವರ ಪ್ರೀತಿಯು ಸ್ವಲ್ಪ ಕಡಿಮೆಯೆಂದು ನಿಮಗೆ ಕಂಡುಬಂದರೆ, ಆಗ ಅವರಲ್ಲಿ, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಹೇಳಿ.

ನೆನಪಿನಲ್ಲಿಡಿ, ಬೇಡಿಕೆಯು ಪ್ರೀತಿಯನ್ನು ನಾಶಪಡಿಸುತ್ತದೆ. ಆದುದರಿಂದ ಯಾವತ್ತೂ ಬೇಡಿಕೆಯನ್ನೊಡ್ಡಬೇಡಿ. ನೀವಿಲ್ಲಿರುವುದು ಕೇವಲ ಕೊಡಲು ಮಾತ್ರ.

ಸಂಬಂಧದಲ್ಲಿರುವ ಇಬ್ಬರು ಸಂಗಾತಿಗಳೂ ಅದನ್ನು ನೆನಪಿನಲ್ಲಿಡಬೇಕು, ಸಂಗಾತಿಗೆ ನನ್ನನ್ನು ೧೦೦% ಕೊಡಲು ನಾನಿಲ್ಲಿದ್ದೇನೆ. ನೀವಿದನ್ನು ಮಾಡಿದರೆ, ಆಗ ಸಂಬಂಧವು ಆರೋಗ್ಯಕರವಾಗಿಯೂ ದೀರ್ಘಕಾಲ ಉಳಿಯುವಂತಹುದೂ ಆಗಿರುವುದನ್ನು ನೀವು ಕಾಣುವಿರಿ.

ಬದಲಾಗಿ, ನಾವೇನು ಮಾಡುತ್ತೇವೆ? ನಾವು ಬೇಡಿಕೆಯನ್ನೊಡ್ಡುತ್ತಾ ಇರುತ್ತೇವೆ ಮತ್ತು "ನೀನು ಯಾಕೆ ನನಗೆ ಇದನ್ನು ಮಾಡಲಿಲ್ಲ?" ಎಂದು ಕೇಳುತ್ತಾ ಇರುತ್ತೇವೆ. ನೀವು ಯಾವುದಕ್ಕಾದರೂ ಬೇಡಿಕೆಯನ್ನೊಡ್ಡಿದರೆ, ಪ್ರೀತಿಯು ಕಡಿಮೆಯಾಗತೊಡಗುತ್ತದೆ. ಆದುದರಿಂದ, ಬೇಡಿಕೆಯನ್ನೊಡ್ಡುವುದಲ್ಲ, ಕೇವಲ ಪರಸ್ಪರರಿಗೆ ಸಹಯೋಗ ನೀಡುವುದು.
ನನಗೇನೂ ಬೇಡ, ನಾನು ಕೇವಲ  ಸಹಯೋಗ ನೀಡಲು ಮಾತ್ರ ಬಯಸುತ್ತೇನೆ ಎಂಬ ಭಾವನೆಯೊಂದಿಗೆ ಹೋಗಿ. ನನ್ನ ಜೀವನವಿರುವುದು ಕೊಡಲು. ಈ ಮನೋಭಾವದೊಂದಿಗೆ ನೀವು ಒಂದು ಸಂಬಂಧವನ್ನು ಪ್ರವೇಶಿಸಿದರೆ, ನಿಮಗೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ವ್ಯತ್ಯಾಸವು ಕಂಡುಬರುವುದು.

ಪ್ರಶ್ನೆ: ಜನ್ಮಾಂತರಗಳ ನಡುವೆ ಕೂಡಾ ಮನಸ್ಸು, ತನ್ನ ವಿಕಾಸದ ಪ್ರಕ್ರಿಯೆಯನ್ನು ಮುಂದುವರಿಸಬಲ್ಲದೇ? ತನ್ನ ವಿಕಾಸಕ್ಕಾಗಿ ಅದಕ್ಕೆ ಒಂದು ಶರೀರ ಹಾಗೂ ಪರಿಸ್ಥಿತಿಗಳ ಅಗತ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಅದಕ್ಕೊಂದು ಶರೀರದ ಅಗತ್ಯವಿದೆ. ಮಾನವ ಶರೀರವು ಬಹಳ ಅಮೂಲ್ಯವಾದುದು ಅದಕ್ಕಾಗಿಯೇ.

ನಿಮಗೆ ಗೊತ್ತಾ, ದೈನಂದಿನ ಜೀವನದಲ್ಲಿ, ನೀವು ಕೆಲಸಗಳನ್ನು ಮಾಡುವಾಗ ಕೆಲವೊಮ್ಮೆ ನೀವು ಶಕ್ತಿಯನ್ನು ಕಳೆದುಕೊಳ್ಳುತ್ತೀರಿ. ಶಕ್ತಿಯು ಕಡಿಮೆಯಾಗುವಾಗ, ಮನಸ್ಸು ಕೂಡಾ ಶಕ್ತಿಗುಂದುತ್ತದೆ. ನಿಮಗೆ ಈ ಅನುಭವವಾಗಿಲ್ಲವೇ?

(ಸಭಿಕರು ’ಹೌದು’ ಎನ್ನುತ್ತಾರೆ)

ಕೆಲವೊಮ್ಮೆ ನಿಮಗೆ ಅಚ್ಚರಿಯಾಗುತ್ತದೆ, ನನ್ನ ಮನಸ್ಸು ಯಾಕೆ ಶಕ್ತಿಗುಂದುತ್ತಿದೆ? ಎಂದು. ಹಲವು ಜನರು ಈ ಪ್ರಶ್ನೆಯನ್ನು ಕೇಳುತ್ತಾರೆ.

’ನನಗೆ ಬಹಳ ಖಿನ್ನವಾದಂತೆ ಹಾಗೂ ಶಕ್ತಿಗುಂದಿದಂತೆ ಅನ್ನಿಸುತ್ತಿದೆ. ಯಾವುದೂ ಆಸಕ್ತಿಕರವಾಗಿ ಅನ್ನಿಸುತ್ತಿಲ್ಲ’ ಎಂದು ನೀವು ಯೋಚಿಸುತ್ತೀರಿ. ಒಂದು ರೀತಿಯ (ಮಾನಸಿಕ) ಶಕ್ತಿಹೀನತೆ ಆಗುತ್ತದೆ ನಿಮಗೆ. ಇದಾಗುವುದು ಕೆಲವು ಕಾರಣಗಳಿಂದಾಗಿ:

ಕಾರಣಗಳಲ್ಲಿ ಒಂದು ಸಮಯವಾಗಿದೆ. ಪ್ರತಿಯೊಬ್ಬರ ಜೀವನಚಕ್ರದಲ್ಲಿ ಒಂದು ನಿರ್ದಿಷ್ಟವಾದ ಸಮಯವಿರುತ್ತದೆ. ಆಗ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೇ ಮನಸ್ಸಿನ ಶಕ್ತಿಯು ಕುಂದುತ್ತದೆ.

ಎರಡನೆಯ ಕಾರಣವೆಂದರೆ, ಅತಿಯಾಗಿ ಚಿಂತಿಸುವುದು ಮತ್ತು ಹಲವಾರು ಬಯಕೆಗಳು. ಮನಸ್ಸು ಮಹತ್ವಾಕಾಂಕ್ಷೆ ಮತ್ತು ಹಲವಾರು ಬಯಕೆಗಳಿಂದ ಮುಚ್ಚಿ ಹೋಗಿರುವಾಗ, ಅದು ಖಂಡಿತವಾಗಿಯೂ ಖಿನ್ನತೆಯನ್ನುಂಟುಮಾಡುವುದು.
ಮನಸ್ಸು ತನ್ನೆಲ್ಲಾ ಶಕ್ತಿಯನ್ನು ಕೇವಲ ಯೋಚಿಸುವುದರಲ್ಲಿ, ಕನಸು ಕಾಣುವುದರಲ್ಲಿ ಮತ್ತು ಅದಕ್ಕಾಗಿ ಇದಕ್ಕಾಗಿ ಆಸೆ ಪಡುವುದರಲ್ಲೇ ಕಳೆದುಕೊಳ್ಳುತ್ತದೆ. ಇದರಿಂದಾಗಿ ಅದು ಶಕ್ತಿಗುಂದುತ್ತದೆ.

ಹೀಗಾಗಿ ಹಲವಾರು ಬಯಕೆಗಳಿರುವುದು ಮನಸ್ಸು ಶಕ್ತಿಗುಂದುವುದಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ಖಿನ್ನತೆಯನ್ನು ವಿರೋಧಿಸಲು ವೈರಾಗ್ಯವು ಆವಶ್ಯಕ. ನಿಮ್ಮಲ್ಲಿ ವೈರಾಗ್ಯವಿದ್ದರೆ, ನೀವು ಖಿನ್ನರಾಗಿರಲು ಸಾಧ್ಯವಿಲ್ಲ. ವೈರಾಗ್ಯದ ಕೊರತೆಯು ಖಿನ್ನತೆಯನ್ನುಂಟುಮಾಡುತ್ತದೆ. ಹೀಗೆ, ಮಹತ್ವಾಕಾಂಕ್ಷೆ ಮತ್ತು ಹಲವಾರು ಬಯಕೆಗಳು ನಿಮ್ಮ ಮನಸ್ಸಿನ ಶಕ್ತಿಯನ್ನು ಬರಿದುಮಾಡುತ್ತವೆ ಮತ್ತು ನೀವು ಖಿನ್ನತೆಯನ್ನು ಅನುಭವಿಸುತ್ತೀರಿ.

ಮೂರನೆಯ ಕಾರಣವೆಂದರೆ, ಶರೀರದಲ್ಲಿ ಶಕ್ತಿ ಕಡಿಮೆಯಿರುವಾಗ; ಶರೀರವು ಬಲಹೀನವಾಗಿರುವಾಗ. ನಿಮ್ಮಲ್ಲಿ ಅಷ್ಟೊಂದು ಶಕ್ತಿಯಿಲ್ಲದಿರುವಾಗ ಅಥವಾ ನೀವು ರೋಗಪೀಡಿತರಾಗಿರುವಾಗ ಮನಸ್ಸು ಶಕ್ತಿಗುಂದುತ್ತದೆ.

ದೇಹದ ಕ್ಷಮತೆ, ಶಕ್ತಿ ಮತ್ತು ದ್ರವಗಳಿಗೆ ಸಂಬಂಧಿಸಿಕೊಂಡು, ಮನಸ್ಸು ಶಕ್ತಿಗುಂದುತ್ತದೆ. ಅದು ಯಾವುದಾದರೂ ರೋಗದ ಮೂಲಕ ಆಗಬಹುದು ಅಥವಾ ಒಂದು ತಪ್ಪು ಆಹಾರದ ಕಾರಣದಿಂದ ಆಗಬಹುದು. ಕೆಲವೊಮ್ಮೆ ನೀವು, ನಿಮ್ಮ ಶರೀರಕ್ಕೆ ಸರಿಹೊಂದದ ಯಾವುದಾದರೂ ಆಹಾರವನ್ನು ತಿನ್ನುತ್ತೀರಿ ಅಥವಾ ನೀವು ಅತಿಯಾಗಿ ತಿನ್ನುತ್ತೀರಿ. ಆಗ ಕೂಡಾ ನಿಮಗೆ ಖಿನ್ನತೆಯುಂಟಾಗುತ್ತದೆ, ಮತ್ತು ಇದೊಂದು ವಿಷವರ್ತುಲವಾಗಿದೆ. ಖಿನ್ನರಾಗಿರುವುದರಿಂದ ಜನರು ಹೆಚ್ಚು ತಿನ್ನುತ್ತಾರೆ, ಮತ್ತು ಅವರು ಹೆಚ್ಚು ತಿಂದುದರಿಂದಾಗಿ ಅವರು ಖಿನ್ನರಾಗುತ್ತಾರೆ.

ಹೀಗಾಗಿ, ನಿಮಗೆ ಶಕ್ತಿ ಕಡಿಮೆಯಾದಂತೆ ಅನ್ನಿಸಿದರೆ, ಅಥವಾ ಖಿನ್ನತೆಯುಂಟಾದರೆ, ಕೆಲವು ದಿನಗಳ ಕಾಲ ನಿಮ್ಮನ್ನು ಆಹಾರದಿಂದ ತುಂಬಿಸುವುದನ್ನು ನಿಲ್ಲಿಸಿ. ಯಾವುದಾದರೂ ಲಘು ಆಹಾರ ಅಥವಾ ಹಣ್ಣುಗಳನ್ನು ತಿನ್ನಿ, ಮತ್ತು ಇದ್ದಕ್ಕಿದ್ದಂತೆ ನಿಮ್ಮ ಶಕ್ತಿಯು ಮೇಲೇರುವುದು ನಿಮ್ಮ ಅನುಭವಕ್ಕೆ ಬರುತ್ತದೆ.

ಅತಿಯಾಗಿ ಉಪವಾಸ ಮಾಡಬೇಡಿ, ಅದು ಕೂಡಾ ಒಳ್ಳೆಯದಲ್ಲ. ಒಂದು ನಿರ್ದಿಷ್ಟ ಮಿತಿಯವರೆಗೆ ಉಪವಾಸ ಒಳ್ಳೆಯದು.
ಹೀಗೆ, ಲಘು ಆಹಾರವನ್ನು ತಿನ್ನುವುದು, ಮಾನಸಿಕ ಶಕ್ತಿಯನ್ನು ಮೇಲೆತ್ತುವಲ್ಲಿ ಸಹಾಯಕವಾಗಿದೆ.

ಇದರ ಬಗ್ಗೆ ನಿಮ್ಮಲ್ಲಿ ಅರಿವಿರಬೇಕು. ನಿಮಗೆ ಏಕಾಂಗಿತನದ ಅಥವಾ ಖಿನ್ನತೆಯ ಭಾವನೆಯುಂಟಾಗುವಾಗ, ಹೆಚ್ಚು ಆಹಾರವನ್ನು ನಿಮ್ಮೊಳಗೆ ತುಂಬಿಸಿಕೊಳ್ಳುವ ಪ್ರವೃತ್ತಿ ನಿಮ್ಮಲ್ಲಿರುತ್ತದೆ, ಮತ್ತು ನೀವು ಹೆಚ್ಚು ಆಹಾರವನ್ನು ತಿಂದಷ್ಟೂ ನಿಮಗೆ ಹೆಚ್ಚು ಖಿನ್ನತೆಯುಂಟಾಗುತ್ತದೆ. ನಿಮಗೆ ಖಿನ್ನತೆಯುಂಟಾದುದರಿಂದಾಗಿ ನೀವು ತಿನ್ನುತ್ತಾ ಇರುತ್ತೀರಿ, ಹೀಗೆ ನೀವೊಂದು ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ.

ನೀವು ಆಹಾರದ ಕಡೆಗೆ ಗಮನ ಹರಿಸಿ, ಸರಿಯಾದ ಪ್ರಮಾಣದ ಆಹಾರವನ್ನು ಮತ್ತು ಸರಿಯಾದ ರೀತಿಯ ಆಹಾರವನ್ನು ಸರಿಯಾದ ಸಮಯದಲ್ಲಿ ತಿಂದರೆ, ಆಗ ಮನಸ್ಸಿನ ಶಕ್ತಿಯು ಹೆಚ್ಚಾಗಬಲ್ಲದು. ಅದು ಖಿನ್ನತೆಯನ್ನು ವಿರೋಧಿಸುವ ಇನ್ನೊಂದು ಮಾರ್ಗವಾಗಿದೆ.

ನಾಲ್ಕನೆಯ ಕಾರಣವೆಂದರೆ, ಸಂಪೂರ್ಣ ಕ್ರಿಯಾಶೂನ್ಯತೆ. ನೀವು ಅತಿಯಾಗಿ ಕ್ರಿಯಾಶೀಲರಾಗಿದ್ದರೆ, ಆಗ ನಿಮಗೆ ಖಿನ್ನತೆಯುಂಟಾಗುತ್ತದೆ. ಅಥವಾ ನೀವು ಸಂಪೂರ್ಣವಾಗಿ ಕ್ರಿಯಾಶೂನ್ಯರಾಗಿದ್ದರೆ, ಮತ್ತು ಏನನ್ನೂ ಮಾಡದಿದ್ದರೆ; ಅಥವಾ ಇತರರಿಗಾಗಿ ಏನನ್ನಾದರೂ ಮಾಡುವ ಒಂದು ಗುರಿ ಅಥವಾ ಒಂದು ಕನಸಿಲ್ಲದೆಯೇ, ನಿಮಗಾಗಿ ಮಾತ್ರ ಕೆಲಸ ಮಾಡಿದರೆ (ಸೇವಾ ಮನೋಭಾವದ ಕೊರತೆ), ಅದು ಖಂಡಿತವಾಗಿಯೂ ಖಿನ್ನತೆಯನ್ನು ತರುತ್ತದೆ.

ಹಿಂದಿನ ಕಾಲದಲ್ಲಿ, ಆಶ್ರಮಗಳಲ್ಲಿ, ಜನರನ್ನು ಯಾವಾಗಲೂ ಯಾವುದಾದರೂ ಸೇವೆಯನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದುದು ಅದಕ್ಕಾಗಿಯೇ. ಕೊಳೆಗೇರಿಗೆ ಹೋಗಿ, ನೆಲವನ್ನು ಗುಡಿಸಿ ಅಥವಾ ಗಿಡಗಳಿಗೆ ನೀರೆರೆಯಿರಿ ಮತ್ತು ಎಲ್ಲವನ್ನೂ ಅಚ್ಚುಕಟ್ಟಾಗಿರಿಸಿ.

ನಿಮ್ಮನ್ನು ವ್ಯಸ್ತರನ್ನಾಗಿರಿಸಿ. ನೀವು ನಿಮ್ಮನ್ನು ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, ಅದು ಕೂಡಾ ಖಿನ್ನತೆಯನ್ನು ತಡೆಯುವ ಇನ್ನೊಂದು ಮಾರ್ಗವಾಗಿದೆ.  

ಹೀಗೆ ಇಲ್ಲಿ, ಅತಿಯಾಗಿ ಬಹಿರ್ಗಾಮಿಯಾಗಿರುವ ಒಬ್ಬನು ಅಥವಾ ಶಾರೀರಿಕವಾಗಿ ಯಾವುದೇ ಕೆಲಸವನ್ನು ಮಾಡದೇ, ಯಾವತ್ತೂ ಕುಳಿತುಕೊಂಡು ಮಾನಸಿಕ ಸರ್ಕಸ್ಸಿನಲ್ಲಿ ತೊಡಗಿರುವ ಒಬ್ಬನು ಖಿನ್ನತೆಗೊಳಗಾಗುತ್ತಾನೆ. ಹೀಗಾಗಿ, ಅದರಿಂದ ಹೊರಬರಲು ಮಧ್ಯದ ದಾರಿಯು ಸರಿಯಾದ ಮಾರ್ಗವಾಗಿದೆ. ಕಾಲಕಾಲಕ್ಕೆ ಆಳವಾದ ಧ್ಯಾನಕ್ಕೆ ಹೋಗಿ, ಮತ್ತು ನಂತರ ಹೊರಬಂದು, ’ಇದರಿಂದ ನನಗೇನು ಸಿಗುವುದು’ ಎಂದು ಯೋಚಿಸದೆಯೇ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ.
ಪ್ರಪಂಚದಲ್ಲಿ ಯಾವುದನ್ನೆಲ್ಲಾ ಮಾಡುವುದು ಆವಶ್ಯಕವೋ, ಅದನ್ನು ಮಾಡಿ. ಯಾವುದನ್ನು ನೀವು ಮಾಡಬೇಕಾದುದು ಆ ಸಮಯದ ಮತ್ತು ಸ್ಥಳದ ಅಗತ್ಯವಾಗಿರುವುದೋ, ಅದನ್ನು ಮಾಡುವುದು ಸೇವೆಯಾಗಿದೆ. ನಿಮ್ಮ ಮಾನಸಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕೂಡಾ ಇದು ಸಹಾಯ ಮಾಡುವುದು.

ಐದನೆಯ ವಿಷಯವೆಂದರೆ, ನೀವೆಲ್ಲರೂ ಹಾಡುತ್ತಿರುವಿರಿ, ನರ್ತಿಸುತ್ತಿರುವಿರಿ, ಮಂತ್ರೋಚ್ಛಾರಣೆಯನ್ನು ಕೇಳುತ್ತಿರುವಿರಿ, ಪೂಜೆಗಳಲ್ಲಿ ಕುಳಿತುಕೊಳ್ಳುತ್ತೀರಿ, ಇದೆಲ್ಲಾ ಕೂಡಾ ನಿಮ್ಮ ಶಕ್ತಿಯನ್ನು ಮೇಲೆತ್ತುತ್ತದೆ.

’ನಾನು ಕೇವಲ ಪೂಜೆಯಲ್ಲಿ ಕುಳಿತುಕೊಂಡು ಮಂತ್ರೋಚ್ಛಾರಣೆ ಮಾಡಲು ಬಯಸುತ್ತೇನೆ ಮತ್ತು ಇದನ್ನು ಮಾತ್ರ ಮಾಡುತ್ತೇನೆ’ ಎಂದು ನೀವು ಹೇಳಲು ಸಾಧ್ಯವಿಲ್ಲ. ಇಲ್ಲ, ಅದರಿಂದ ಪ್ರಯೋಜನವಾಗದು. ಅಥವಾ, ’ನನಗೆ ಎಷ್ಟು ಬೇಕೋ ಅಷ್ಟು ತಿನ್ನುತ್ತೇನೆ ಮತ್ತು ನಂತರ ಬಂದು ಪೂಜೆಗೆ ಕುಳಿತುಕೊಳ್ಳುತ್ತೇನೆ’, ಅದರಿಂದ ಪ್ರಯೋಜನವಿಲ್ಲ.

’ನಾನು ಇಡೀ ದಿನ ಕುಳಿತುಕೊಂಡು ಧ್ಯಾನ ಮಾಡುತ್ತೇನೆ ಮತ್ತು ಬೇರೇನನ್ನೂ ಮಾಡುವುದಿಲ್ಲ’ ಎಂದು ನೀವು ಹೇಳಿದರೆ, ಆಗ ನೀವು ನಿಮ್ಮ ಸಮಯವನ್ನು ವ್ಯರ್ಥ ಮಾಡಿದಂತೆ, ಯಾಕೆಂದರೆ ಆಗ ನಿಮ್ಮ ಧ್ಯಾನವು ಆಳವಾಗುವುದಿಲ್ಲ. ಅದಕ್ಕಾಗಿಯೇ ನೀವೆಲ್ಲರೂ ಯಾವತ್ತೂ ಭಗವದ್ಗೀತೆಯ ಈ ಶ್ಲೋಕವನ್ನು ನೆನಪಿಟ್ಟುಕೊಳ್ಳಬೇಕು,

’ಯುಕ್ತಾಹಾರವಿಹಾರಸ್ಯ ಯುಕ್ತ ಚೇಷ್ಟಸ್ಯ ಕರ್ಮಸು I
ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಃ II’

ಕ್ರಿಯೆ ಮತ್ತು ವಿಶ್ರಾಂತಿಗಳ ನಡುವೆ ಯಾವತ್ತೂ ನೀವು ಆ ಒಂದು ಸಮತೋಲನವನ್ನು ಹೊಂದಿರಬೇಕು.
ಸರಿಯಾದ ಪ್ರಮಾಣದ ಆಹಾರ, ಸರಿಯಾದ ಪ್ರಮಾಣದ ಕ್ರಿಯೆ, ಮತ್ತು ಸರಿಯಾದ ಪ್ರಮಾಣದ ಸೇವೆ ಆವಶ್ಯಕವಾಗಿದೆ. ನೀವಿದನ್ನು ಅನುಸರಿಸುವಾಗ, ದುಃಖವೆಲ್ಲವೂ ಓಡಿ ಹೋಗುತ್ತದೆ. ಈ ಷರತ್ತುಗಳನ್ನು ನೀವು ಅನುಸರಿಸಿದಾಗ ನೀವು ವಿಶ್ವ ಚೇತನದೊಂದಿಗೆ ಒಂದಾಗುತ್ತೀರಿ, ಮತ್ತು ಆಗ ದುಃಖ ಓಡಿ ಹೋಗುತ್ತದೆ ಹಾಗೂ ನೀವು ನಗುತ್ತೀರಿ!

ಪ್ರಶ್ನೆ: ನೀವು ದಯವಿಟ್ಟು ಕಾಲ ಭೈರವನ ಬಗ್ಗೆ ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ಕಾಲ ಭೈರವನೆಂದರೆ ಸಮಯದ ದೇವತೆ. ಕಾಲವೇ ದೈವತ್ವವಾಗಿದೆ. ಕಾಲ ಭೈರವನ ವಾಹನ ಯಾವುದೆಂದು ನಿಮಗೆ ಗೊತ್ತೇ? ಅದು ಶ್ವಾನ. ಶ್ವ ಎಂದರೆ ನಿನ್ನೆ ಅಥವಾ ನಾಳೆ, ನ ಎಂದರೆ ಅಲ್ಲ ಎಂದು. ಹೀಗಾಗಿ, ಶ್ವಾನ ಎಂದರೆ, ನಿನ್ನೆಯೂ ಅಲ್ಲ ನಾಳೆಯೂ ಅಲ್ಲ; ಅಂದರೆ, ಈಗ. ಹೀಗಾಗಿ, ಕಾಲ ಭೈರವನು ಎಲ್ಲಿ ವಾಸಿಸುತ್ತಾನೆ? ಈಗ ಎಂಬಲ್ಲಿ.