ಶುಕ್ರವಾರ, ಏಪ್ರಿಲ್ 4, 2014

ವಿದ್ಯಮಾನ ನಿಮಿತ್ತ, ಪ್ರಕೃತಿ ಅನಂತ

ಎಪ್ರಿಲ್ ೪, ೨೦೧೪
ವಿದರ್ಭ, ಮಹಾರಾಷ್ಟ್ರ

ಒಂದು ಸರ್ವೋಚ್ಛ ಶಕ್ತಿಯಿದೆಯೆಂದೂ, ಮತ್ತು ನಾವೆಲ್ಲರೂ ಆ ದೈವಿಕ ಶಕ್ತಿಯ ಸಾಗರದಲ್ಲಿ ತೇಲುತ್ತಿರುವೆವೆಂದೂ ನಾವು ಯಾವಾಗಲೂ ನೆನಪಿನಲ್ಲಿಡಬೇಕು. ಅದು ನಮ್ಮೊಳಗೆ ಹಾಗೂ ನಮ್ಮ ಹೊರಗೆ ಎರಡು ಕಡೆಯೂ ಇದೆ.

ಈ ವಿಶ್ವಾಸವು ಒಳಗಿನಿಂದ ಉದಯಿಸುವಾಗ, ಪ್ರಪಂಚದಲ್ಲಿರುವ ಯಾವುದಕ್ಕೂ ನಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ನಮಗೆ ವಿಶ್ವಾಸ ಬಂದಾಗ, ಜೀವನವು ಅಷ್ಟೊಂದು ಹೆಚ್ಚಿನ ಆಂತರಿಕ ಶಕ್ತಿಯನ್ನು ಗಳಿಸುತ್ತದೆ.

ಒಬ್ಬ ವ್ಯಕ್ತಿಯು ಒಳಗಿನಿಂದ ಬಲಶಾಲಿಯಾಗುವಲ್ಲಿಯವರೆಗೆ ಮತ್ತು ಬಲಶಾಲಿಯಾಗದೆ, ಅವನು ಯಾವತ್ತೂ ಸಂತೋಷವಾಗಿರಲಾರ. ಅವನು ದುಃಖಿತನಾಗಿರುವುದು ಮತ್ತು ದಯನೀಯನಾಗಿರುವುದು ಮುಂದುವರಿಯುವುದು. ಹೀಗಾಗಿ ಒಳಗಿನಿಂದ ಶಕ್ತಿಶಾಲಿಯಾಗುವುದು ಬಹಳ ಮುಖ್ಯವಾಗಿದೆ. ಎಲ್ಲವನ್ನೂ ನೋಡಿಕೊಳ್ಳುತ್ತಿರುವ ಒಂದು ಸರ್ವೋಚ್ಛ ಶಕ್ತಿಯಿದೆ ಮತ್ತು ನಾವು ಯಾವತ್ತೂ ಒಬ್ಬಂಟಿಯಲ್ಲ ಎಂಬ ಈ ವಿಶ್ವಾಸದಿಂದ ಮಾತ್ರ ಆ ಆಂತರಿಕ ಶಕ್ತಿ ಬರಲು ಸಾಧ್ಯ.

’ದೇವರಿದ್ದಾರೆ ಮತ್ತು ಸದಾಕಾಲವೂ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ನಂಬಿ. ಈ ನಂಬಿಕೆಯೊಂದಿಗೆ ನೀವು ನಿಮ್ಮಲ್ಲಿ ಬಹಳಷ್ಟು ಆತ್ಮವಿಶ್ವಾಸವನ್ನು ಕೂಡಾ ಪಡೆಯುವಿರಿ. ಆಗ ನೀವು, ’ಸೃಷ್ಟಿಯ ಸೃಷ್ಟಿಕರ್ತನು ನನ್ನೊಳಗೆ ವಾಸಿಸುತ್ತಿರುವಾಗ, ಜೀವನದಲ್ಲಿ ಚಿಕ್ಕಪುಟ್ಟ ಹಾಗೂ ಕ್ಷುಲ್ಲಕ ವಿಷಯಗಳಿಗಾಗಿ ಅಳುವುದು ಯಾಕೆ?’ ಎಂದು ಯೋಚಿಸುವಿರಿ. ಈ ವಿಶ್ವಾಸವು ನಮ್ಮೊಳಗೆ ಹೆಚ್ಚಿನ ಉತ್ಸಾಹ ಮತ್ತು ತಾಳ್ಮೆಯನ್ನು ತರುತ್ತದೆ.

ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆಗಳು ಬರುತ್ತವೆ. ಯಾರು ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ? ಕೃಷ್ಣ ಪರಮಾತ್ಮ, ಭಗವಾನ್ ರಾಮ, ಭಗವಾನ್ ಬುದ್ಧ ಮತ್ತು ಪ್ರವಾದಿ ಮೊಹಮ್ಮದ್- ಇವರೆಲ್ಲರೂ ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಿದರು. ಆದರೆ ಸಮಸ್ಯೆಗಳ ಹೊರತಾಗಿಯೂ, ನೀವು ದೇವರಲ್ಲಿ ಈ ಸಂಪೂರ್ಣ ವಿಶ್ವಾಸವನ್ನು ಹೊಂದಿರುವಾಗ, ಯಾವುದೇ ಸಮಸ್ಯೆಯೂ ನಿಮಗೆ ನಿಜಕ್ಕೂ ಜಯಿಸಲಾರದಂತಹ ಒಂದು ಸಮಸ್ಯೆಯೆಂದು ಕಂಡುಬರುವುದಿಲ್ಲ.

ನಮ್ಮ ರೈತರಿಗೆ ತಾವು ಅಸಹಾಯಕರೆಂದು ಅನ್ನಿಸುವಂತೆ ಮಾಡಿದ, ಮಹಾರಾಷ್ಟ್ರದಲ್ಲಿ ನಡೆದ ಒಂದು ಘಟನೆಯ ಬಗ್ಗೆ ನನಗೆ ತಿಳಿದು ಬಂತು. ಒಂದು ಪ್ರಕೃತಿ ವಿಕೋಪದಿಂದಾಗಿ ಅವರ ಬೆಳೆಗಳು ನಾಶವಾದವು. ನೀವು ನಿಮ್ಮ ವಿಶ್ವಾಸವನ್ನು ಇಟ್ಟುಕೊಳ್ಳಬೇಕಾದುದು ಮತ್ತು ಆ ನಂಬಿಕೆಯಿಂದ ಇರಬೇಕಾದುದು ಈ ಸಮಯದಲ್ಲೇ.

ಇದರಿಂದಾಗಿ ಭರವಸೆಯನ್ನು ಮತ್ತು ಆಂತರಿಕ ಶಕ್ತಿಯನ್ನು ಕಳೆದುಕೊಳ್ಳಬೇಡಿರೆಂದು ನಾನು ರೈತರಲ್ಲಿ ಹೇಳಲು ಬಯಸುತ್ತೇನೆ. ನಡೆಯುವ ಘಟನೆಗಳಿಗಿಂತ ಜೀವನವು ಎಷ್ಟೋ ಹೆಚ್ಚಿನದು.

ಐದು ರೈತರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡರೆಂದು ನಾನು ಕೇಳಿದೆ. ಈ ವೇದಿಕೆಯ ಮೂಲಕ ರೈತರಿಗೆ, ನೀವು ಹೀಗೆ ಮಾಡಬಾರದೆಂಬ ಈ ಸಂದೇಶವನ್ನು ನೀಡಲು ನಾನು ಬಯಸುತ್ತೇನೆ. ನಂಬಿಕೆ ಮತ್ತು ವಿಶ್ವಾಸದೊಂದಿಗೆ ಸುಮ್ಮನೆ ಮುಂದೆ ಸಾಗಿ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ.

ದೇಶದಲ್ಲಿ ಆಧ್ಯಾತ್ಮಿಕತೆಯು ಬೆಳೆಯುವಾಗ, ಪ್ರಕೃತಿ ಕೂಡಾ ಸಂತೋಷವಾಗಿ ಹಾಗೂ ಶಾಂತವಾಗಿ ಇರುತ್ತದೆ. ಪ್ರಕೃತಿಯ ಈ ಕೋಪದ ಸ್ಪೋಟವಾಗುವುದು ಯಾಕೆಂದರೆ, ದೇಶದಲ್ಲಿ ಹೆಚ್ಚುತ್ತಿರುವ ಅನ್ಯಾಯ ಹಾಗೂ ಕೆಟ್ಟ ಕೆಲಸಗಳಿಂದಾಗಿ.

ಮಣ್ಣಿಗೆ ಹಾನಿಯುಂಟುಮಾಡುವುದನ್ನು, ನಮ್ಮ ದೇಶದ ವಾಯು ಹಾಗೂ ನೀರಿನ ಸಂಪನ್ಮೂಲಗಳ ಮಾಲಿನ್ಯವನ್ನು ನಾವು ಮುಂದುವರಿಸಿದರೆ, ಆಗ ಪ್ರಕೃತಿಯು ಕೋಪದಿಂದ ಪ್ರತಿಕ್ರಿಯಿಸುವುದನ್ನು ಮುಂದುವರಿಸುವುದು. ಇದರ ಫಲಿತಾಂಶವಾಗಿ ಇಂತಹ ವಿಪತ್ತುಗಳು ಉಂಟಾಗುವುದು.

ಕೇವಲ ಒಂದು ಪ್ಲಾಸ್ಟಿಕ್ ಚೀಲವನ್ನು ಸುಡುವುದರಿಂದ ಉತ್ಪಾದಿಸಲ್ಪಡುವ ವಿಷಕಾರಿ ಡಯಾಕ್ಸಿನ್‌ನ ಪ್ರಮಾಣವು, ೧೦೦೦ ಜನರಲ್ಲಿ ಕ್ಯಾನ್ಸರನ್ನು ಹುಟ್ಟುಹಾಕಲು ಸಾಕು ಎಂಬುದು ನಿಮಗೆ ತಿಳಿದಿತ್ತೇ? ನಾವು ನಮ್ಮ ವಾತಾವರಣದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ಗಮನ ಹರಿಸಬೇಕು. ಸಾಧ್ಯವಾದಷ್ಟರ ಮಟ್ಟಿಗೆ ನಾವೆಲ್ಲರೂ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ಇವತ್ತಿನ ಸಮಯದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ, ಆದರೆ ನಾವದನ್ನು ಸಾಧ್ಯವಿರುವಷ್ಟರ ಮಟ್ಟಿಗೆ ಕಡಿಮೆ ಮಾಡಲು ಖಂಡಿತವಾಗಿ ಪ್ರಯತ್ನಿಸಬಹುದು. ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಗಳಲ್ಲಿ ಎಸೆಯುವುದು ಅಥವಾ ಅವುಗಳನ್ನು ತೆರೆದ ಸ್ಥಳದಲ್ಲಿ ಸುಡುವುದನ್ನು ಖಂಡಿತವಾಗಿಯೂ ನಾವು ತಡೆಯಬೇಕು.
ಇವತ್ತು, ದೇಶದಲ್ಲಿನ ಪ್ರಾಣಿ ಕಸಾಯಿಖಾನೆಗಳ ಸಂಖ್ಯೆಯು ಬಹಳಷ್ಟು ಹೆಚ್ಚಾಗಿದೆ. ಭಾರತವು ಸ್ವತಂತ್ರವಾದಾಗ, ದೇಶದ ಒಟ್ಟು ಪ್ರಾಣಿ ಸಂಪತ್ತು ೧೨೦ ದಶಲಕ್ಷವಾಗಿತ್ತು ಹಾಗೂ ನಮ್ಮ ಜನಸಂಖ್ಯೆಯು ಕೇವಲ ೩೦ ದಶಲಕ್ಷವಾಗಿತ್ತು ಎಂಬುದು ನಿಮಗೆಲ್ಲರಿಗೂ ತಿಳಿದಿದೆಯೆಂದು ನನಗೆ ಖಾತ್ರಿಯಿದೆ.

ಆ ಸಮಯದಲ್ಲಿ, ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ನಾಲ್ಕು ಹಸುಗಳನ್ನು ಹೊಂದಿದ್ದನು. ಇವತ್ತು ಸ್ಥಿತಿಯು ವಿರುದ್ಧವಾಗಿದೆ; ದೇಶದಲ್ಲಿನ ಜನಸಂಖ್ಯೆಯು ೧೨೦ ದಶಲಕ್ಷಗಳಿಗೆ ಏರಿದೆ ಮತ್ತು ನಮ್ಮ ಪ್ರಾಣಿ ಸಂಪತ್ತು ಕೇವಲ ೨೦ ದಶಲಕ್ಷಗಳಿಗೆ ಇಳಿದಿದೆ.
ಇದರಿಂದಾಗಿ ಭಾರತವು ಒಂದು ದೊಡ್ಡ ನಷ್ಟವನ್ನು ಅನುಭವಿಸಿದೆ. ಪ್ರತಿವರ್ಷವೂ ನಾವು ೬.೫ ಲಕ್ಷ ಟನ್ನುಗಳಷ್ಟು ಗೋಮಾಂಸವನ್ನು ರಫ್ತು ಮಾಡುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ, ಹಾಲಿನ ಬಗ್ಗೆ ಕೇವಲ ಪುಸ್ತಕಗಳಲ್ಲಷ್ಟೇ ಓದುವ, ಆದರೆ ನಿಜಕ್ಕೂ ಅದನ್ನು ಕುಡಿಯಲು ಸಾಧ್ಯವಿಲ್ಲದಿರುವ ಒಂದು ದಿನ ಬರಲೂಬಹುದು. ನಮ್ಮ ಮುಂಬರುವ ಪೀಳಿಗೆಗಳಿಗೆ ಇದೊಂದು ಬಹಳ ದುರಂತದ ಪರಿಸ್ಥಿತಿಯಾಗಬಹುದು.

ನಿಮಗೆ ಗೊತ್ತಾ, ಒಂದು ಹಸುವು ಒಂದು ಎಕರೆಯಷ್ಟು ಜಮೀನನ್ನು ಫಲವತ್ತಾಗಿಸಲು ಸಾಕು. ನಮ್ಮ ಮಣ್ಣಿನಲ್ಲಿ ಹೈಡ್ರೋಕಾರ್ಬನ್ ಹಾಗೂ ನೈಟ್ರೋಕಾರ್ಬನ್‌ಗಳ ಶೇಕಡಾವಾರು ಬಹಳ ಕಡಿಮೆಯಾಗಿದೆಯೆಂಬುದು ನಿಮಗೆಲ್ಲರಿಗೂ ಗೊತ್ತಿದೆಯೇ? ಅಂತರರಾಷ್ಟ್ರೀಯ ಗುಣಮಟ್ಟದ ಪ್ರಕಾರ, ಒಂದು ಆರೋಗ್ಯಕರವಾದ ಫಲವತ್ತಾದ ಮಣ್ಣಿನಲ್ಲಿ ಬೇಕಾದ ಹೈಡ್ರೋಕಾರ್ಬನ್‌ನ ಪ್ರಮಾಣವು ಶೇ. ೬ ಎಂದು ಅಂದಾಜಿಸಲಾಗಿದೆ. ವಿದೇಶಗಳಲ್ಲಿ, ಈ ಪ್ರಮಾಣವು ಶೇ. ೪ ರಿಂದ ೫ರ ನಡುವೆಯಿದೆ. ಆದರೆ ಭಾರತದಲ್ಲಿ, ಮಣ್ಣಿನಲ್ಲಿನ ಇದರ ಪ್ರಮಾಣವು ಕೇವಲ ಶೇ. ೦.೨ ರಿಂದ ೦.೩ಕ್ಕೆ ಇಳಿದಿದೆ.
ರಕ್ತದಲ್ಲಿ ಕಬ್ಬಿಣದ ಅಂಶವು ಕಡಿಮೆಯಾಗುವುದರಿಂದ ನಮ್ಮಲ್ಲಿ ಅನೀಮಿಯಾ (ರಕ್ತಹೀನತೆ) ಉಂಟಾಗುವಂತೆಯೇ, ನಮ್ಮ ಭಾರತೀಯ ಮಣ್ಣು ಕೂಡಾ ಅಂತಹುದೇ ಒಂದು ಅನೀಮಿಯಾದಿಂದ ಬಳಲುತ್ತಿದೆ. ಇದು ಯಾಕೆ ಹೀಗೆ? ಇದು ಯಾಕೆಂದರೆ ನಾವು ನಮ್ಮ ಫಲವತ್ತಾದ ಮಣ್ಣುಗಳನ್ನು ವಿಷಕಾರಿ ರಾಸಾಯನಿಕಗಳು ಮತ್ತು ಕೃತಕ ಗೊಬ್ಬರಗಳಿಗೆ ಒಳಪಡಿಸುತ್ತಿದ್ದೇವೆ. ಇದು ನಮ್ಮ ರೈತರು ಎಚ್ಚೆತ್ತುಕೊಳ್ಳುವ ಸಮಯವಾಗಿದೆ! ರಾಸಾಯನಿಕ-ಮುಕ್ತ ಕೃಷಿ ತಂತ್ರಗಳನ್ನು ನಿಮ್ಮಲ್ಲಿ ಪ್ರತಿಯೊಬ್ಬರೂ ಸ್ವೀಕರಿಸಿಕೊಳ್ಳಬೇಕೆಂದು ನಾನು ಬಲವಾಗಿ ಕೇಳಿಕೊಳ್ಳುತ್ತೇನೆ.

ವಿದೇಶೀ ಬೀಜಗಳ ವಿಧಗಳನ್ನು ಹಾಗೂ ರಾಸಾಯನಿಕ ಕೃಷಿ ತಂತ್ರಗಳನ್ನು ಬಳಸಿ ಬೆಳೆಸಿದ ಗೋಧಿ ಸಸ್ಯವು ಸುಮಾರು ೫೦-೬೦ ಬೀಜಗಳನ್ನು ಹೊಂದಿದೆ, ಆದರೆ ಅದೇ ಗೋಧಿ ಸಸ್ಯವನ್ನು ಸ್ಥಳೀಯ ಭಾರತೀಯ ಬೀಜಗಳು ಮತ್ತು ಸಾವಯವ ಕೃಷಿ ವಿಧಾನಗಳನ್ನು ಬಳಸಿ ಬೆಳೆಸಿದಾಗ, ಅದರಲ್ಲಿ ಒಂದು ಸಸ್ಯದಲ್ಲಿ ೧೨೦ ಗೋಧಿ ಧಾನ್ಯದ ಬೀಜಗಳಿವೆ. ಸ್ಥಳೀಯ ಬೀಜದ ವಿಧಗಳನ್ನು ಮತ್ತು ರಾಸಾಯನಿಕ-ಮುಕ್ತ ಕೃಷಿಯನ್ನು ಬಳಸಿ, ಆರು ಅಡಿಗಳಷ್ಟು ಉದ್ದದ ಸೋರೆಕಾಯಿಗಳನ್ನು ಬೆಳೆಸಲು ರೈತರಿಗೆ ಸಾಧ್ಯವಾಗಿದೆ.

ಈ ಎಲ್ಲಾ ವಾಸ್ತವಗಳನ್ನು ನಿಮಗೆ ಹೇಳುವುದರಿಂದ, ನೀವೆಲ್ಲರೂ ರಾಸಾಯನಿಕ ಕೃಷಿ ತಂತ್ರಗಳನ್ನು ತ್ಯಜಿಸಬೇಕೆಂದು ನಾನು ನಿಮ್ಮಲ್ಲಿ ಕೇಳಿಕೊಳ್ಳಲು ಬಯಸುತ್ತೇನೆ ಹಾಗೂ ನಮ್ಮ ಸ್ಥಳೀಯ ಬೀಜದ ವಿಧಗಳು ಮತ್ತು ಸಾವಯವ ಕೃಷಿಯ ಒಳಿತಿನ ಬಗ್ಗೆ ನಿಮಗೆ ಭರವಸೆಯನ್ನು ಕೊಡಲು ಬಯಸುತ್ತೇನೆ.

ನಾವು ಯಾವಾಗಲೂ ನಮ್ಮ ಹೊಲಗಳಲ್ಲಿ ಬಹುದಳ ಧಾನ್ಯಗಳನ್ನು ಬಿತ್ತುತ್ತಿದ್ದೆವು, ಅಂದರೆ, ಒಂದೇ ಭೂಮಿಯ ತುಂಡಿನಲ್ಲಿ ನಾವು ಎರಡು ಅಥವಾ ಮೂರು ವಿವಿಧ ಫಸಲುಗಳನ್ನು ಬೆಳೆಯುತ್ತಿದ್ದೆವು. ಇದರಿಂದ ಮಣ್ಣು ಆರೋಗ್ಯಕರವಾಗಿಯೂ ಫಲವತ್ತಾಗಿಯೂ ಇರುವಂತೆ ಹಾಗೂ ಒಂದು ಆರೋಗ್ಯವಂತ ಬೆಳೆ ಬೆಳೆಯುವಂತೆ ಕೂಡಾ ಇದು ನೋಡಿಕೊಳ್ಳುತ್ತಿತ್ತು.
ಹಾಗೆಯೇ, ಒಂದು ಬೆಳೆಯು ನಾಶವಾದರೂ, ನಮ್ಮ ಸ್ವಂತ ಆವಶ್ಯಕತೆಗಳಿಗೆ  ಬೇಕಾದಷ್ಟು ಇತರ ಎರಡು ಬೆಳೆಗಳಿಂದ ಸಿಗುತ್ತಿತ್ತು.

ಎಲ್ಲಿ ಮಾನವ ಶಕ್ತಿ ಮತ್ತು ಸಂಪನ್ಮೂಲಗಳ ಕೊರತೆಯಿರುವುದೋ ಅಂತಹ ಸ್ಥಳಗಳಲ್ಲಿ ಈ ಏಕ ಬೆಳೆ ವಿಧಾನಗಳು (ನೆಲದಿಂದ ಕೇವಲ ಒಂದು ರೀತಿಯ ಬೆಳೆಯನ್ನು ಪಡೆಯುವುದು ಅಥವಾ ನೆಡುವುದು) ಬಳಸಲ್ಪಡುತ್ತವೆ. ನಮ್ಮ ಭಾರತೀಯ ಮಣ್ಣಿಗೆ ಇದು ಸೂಕ್ತವೇ ಅಲ್ಲ.

ನೈಸರ್ಗಿಕ ವಿಪತ್ತುಗಳು ಸಂಭವಿಸುವುದನ್ನು ನಾವು ತಡೆಗಟ್ಟಬೇಕಾದರೆ, ಎಲ್ಲೆಡೆಯೂ ನಿಯಮಿತವಾಗಿ ಸತ್ಸಂಗಗಳು ನಡೆಯುವಂತೆ ನಾವೆಲ್ಲರೂ ನೋಡಿಕೊಳ್ಳಬೇಕೆಂದು ಮತ್ತೊಮ್ಮೆ ನಾನು ನಮ್ಮ ದೇಶದ ರೈತರಲ್ಲಿ ಕೇಳಿಕೊಳ್ಳುತ್ತೇನೆ. ನಮ್ಮ ಹೊಲಗಳು ಮತ್ತು ಹಳ್ಳಿಗಳಲ್ಲಿ ಪವಿತ್ರ ಮಂತ್ರಗಳ ಪಠಣ ಮಾಡುವುದನ್ನು ನಾವು ಪ್ರೋತ್ಸಾಹಿಸಬೇಕು.

ನಮ್ಮ ಧರ್ಮಗ್ರಂಥಗಳಲ್ಲಿ ಇದನ್ನು ಶಿಫಾರಸು ಮಾಡಲಾಗಿದೆ ಮತ್ತು ಇದನ್ನು ನಾನು ನನ್ನ ಸ್ವಂತ ಅನುಭವದಿಂದ ನೋಡಿದ್ದೇನೆ. ಎಲ್ಲೆಲ್ಲಾ ’ರುದ್ರಂ’ ಹಾಗೂ ಇತರ ಮಂತ್ರಗಳ ಪಠಣ ಮಾಡಲಾಗುವುದೋ, ಅಲ್ಲಿ ಪರಿಸರವು ಬಹಳ ಧನಾತ್ಮಕವಾದ ಕಂಪನಗಳಿಂದ ಶಕ್ತಿಯುತವಾಗುತ್ತದೆ ಮತ್ತು ಅದರ ಫಲವಾಗಿ ಬೆಳೆಗಳು ಆರೋಗ್ಯವಂತವಾಗಿಯೂ, ಹಾಗೆಯೇ ಸಮೃದ್ಧವಾಗಿಯೂ ಇರುತ್ತವೆ.

ನಿಮಗೆ ಗೊತ್ತಾ, ದಕ್ಷಿಣ ಅಮೇರಿಕಾಗಳಂತಹ ದೇಶಗಳು, ತ್ರಯಂಬಕಂ ಹೋಮ ಮತ್ತು ಅಗ್ನಿಹೋತ್ರಗಳಂತಹ ನಮ್ಮ ಪ್ರಾಚೀನ ತಂತ್ರಗಳನ್ನು ಸ್ವೀಕರಿಸಿವೆ. ಅವರದನ್ನು ತಮ್ಮ ಬೇಸಾಯದಲ್ಲಿ ಪ್ರಯೋಜನಕಾರಿಯಾಗಿ ಬಳಸುತ್ತಿದ್ದಾರೆ. ನಾವು ಯಾಕೆ ಹಿಂದೆ ಬೀಳಬೇಕು ಹಾಗೂ ಅದನ್ನೇ ಯಾಕೆ ಅಂಗೀಕರಿಸಬಾರದು? ಇದು ನಮ್ಮ ಸ್ವಂತ ಸಾಂಸ್ಕೃತಿಕ ಪರಂಪರೆಯಾಗಿದೆ.

ಭರವಸೆಯನ್ನು ಕಳಕೊಳ್ಳಬಾರದೆಂದೂ ಧೈರ್ಯಗುಂದಬೇಡಿರೆಂದೂ ನಾನು ಇಲ್ಲಿರುವ ರೈತರಲ್ಲಿ ಕೇಳಿಕೊಳ್ಳುತ್ತೇನೆ. ಇವತ್ತು ಕೂಡಾ ನಮ್ಮ ದೇಶದಲ್ಲಿ ಬಹಳಷ್ಟು ಮಾನವೀಯತೆಯಿದೆ. ನೀವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ.

ಯಾರಿಗಾದರೂ ಆತ್ಮಹತ್ಯೆಯ ಯೋಚನೆ ಬರುತ್ತಿರುವುದಾದರೆ, ಅವರನ್ನು ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಬಳಿಗೆ ಕರೆದುಕೊಂಡು ಹೋಗಿ ಅಥವಾ ಅವರನ್ನು ಬಂದು ಭೇಟಿಯಾಗುವಂತೆ ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಲ್ಲಿ ಕೇಳಿಕೊಳ್ಳಿ. ಕೇವಲ ಎರಡೇ ದಿನಗಳಲ್ಲಿ ಅವರು ಅವರನ್ನು ಗುಣಪಡಿಸುವರು. ವಾಸ್ತವವಾಗಿ ಎರಡು ದಿನಗಳೂ ಅಲ್ಲ, ಅವರದನ್ನು ಕೇವಲ ಒಂದೇ ದಿನದಲ್ಲಿ ಮಾಡುವರೆಂದು ನಾನು ಹೇಳುತ್ತೇನೆ.

ಮೊದಲು ಕೂಡಾ, ಇಲ್ಲಿ ಮಹಾರಾಷ್ಟ್ರದಲ್ಲಿ, ವಿದರ್ಭ ಪ್ರದೇಶದ ಭಾಗದಲ್ಲಿ ರೈತರ ಆತ್ಮಹತ್ಯೆಯ ಹಲವಾರು ಘಟನೆಗಳಾಗಿದ್ದವು. ನಮ್ಮ ಆರ್ಟ್ ಆಫ್ ಲಿವಿಂಗ್ ಶಿಕ್ಷಕರು ಕಾರ್ಯನಿರತರಾದರು ಮತ್ತು ಅಲ್ಲಿನ ರೈತರ ಪರಿಸ್ಥಿತಿಯನ್ನು ಸುಧಾರಿಸಲು ೧೧೮ ಹಳ್ಳಿಗಳಲ್ಲಿ ಕೆಲಸ ಮಾಡಿದರು.

ಅವರ ಒಳ್ಳೆಯ ಪ್ರಯತ್ನಗಳಿಗಾಗಿ ನಾನು ಅವರೆಲ್ಲರನ್ನು ಅಭಿನಂದಿಸಲು ಬಯಸುತ್ತೇನೆ. ಆ ಎಲ್ಲಾ ಹಳ್ಳಿಗಳು ಈಗ ಬಹಳ ಚೆನ್ನಾಗಿವೆಯೆಂದು ಹಾಗೂ ಅದರ ನಂತರ ಆ ಹಳ್ಳಿಗಳಲ್ಲಿ ಯಾವುದೇ ಆತ್ಮಹತ್ಯೆಯ ಘಟನೆಗಳು ನಡೆದಿಲ್ಲವೆಂದು ನನಗೆ ತಿಳಿದು ಬಂತು.

ಆತ್ಮಹತ್ಯೆಗಳನ್ನು ಮತ್ತು ಅಪರಾಧಗಳನ್ನು ನಿಲ್ಲಿಸುವ ಶಕ್ತಿಯಿರುವುದು ಆಧ್ಯಾತ್ಮಿಕತೆಗೆ ಮಾತ್ರ.