೦೨ ಜನವರಿ ೨೦೧೩
ಬರ್ಲಿನ್, ಜರ್ಮನಿ
ಪ್ರ: ತಾವು ಸರ್ವವ್ಯಾಪಿ ಮತ್ತು ಸರ್ವಜ್ಞಾನಿಗಳೆಂದು ಹಲವಾರು ಕತೆಗಳಿಂದ ತಿಳಿದಿದ್ದೇನೆ. ಇದು ಕೆಲವೊಮ್ಮೆ ನನಗೆ ಭಯ ಹುಟ್ಟಿಸುತ್ತದೆ ಏಕೆಂದರೆ ನಾನು ಮಾಡುವ ತಪ್ಪುಗಳೆಲ್ಲವನ್ನು ತಿಳಿಯುವಿರೆಂದು. ನನ್ನ ತಪ್ಪುಗಳ ಬಗ್ಗೆ ನಿಮ್ಮ ನಿಲುವೇನು? ನಾನು ಮತ್ತೆ ಮತ್ತೆ ತಪ್ಪು ಮಾಡಿದರೆ ನಿಮಗೆ ಕೋಪವೇ?ಶ್ರೀಶ್ರೀರವಿಶಂಕರ್: ಖಂಡಿತ ಇಲ್ಲ.
ಗುರುಗಳಿಗಿಂತ ಭಕ್ತರು ಹೆಚ್ಚು ಬಲಶಾಲಿಗಳೆಂದು ನಿಮಗೆ ಗೊತ್ತೆ? ಹೌದು, ಅದು ಹಾಗೆಯೇ.
ನೀವು ಗುರುವಿನ ಹಲವಾರು ಕತೆಗಳನ್ನು ಕೇಳಿರಬಹುದು, ಆದರೆ ನನ್ನ ಬಳಿ ಅನೇಕ ಭಕ್ತರ ಕತೆಗಳಿವೆ. ಅವುಗಳಲ್ಲಿ ಒಂದನ್ನು ನಿಮ್ಮೊಂದಿಗೀಗ ಹಂಚಿಕೊಳ್ಳುತ್ತೇನೆ.
ನವಂಬರ್ ತಿಂಗಳ ಕಡೆಯ ವಾರದಲ್ಲಿ ಮಹಾರಾಷ್ಟ್ರದ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದೆನು, ಎಂದೂ ಭೇಟಿ ನೀಡಿರದ ಕೆಲವು ಹಳ್ಳಿ ಮತ್ತು ಜಿಲ್ಲೆಗಳು. ಬಹಳಷ್ಟು ಜನ ನನ್ನನ್ನು ಭೇಟಿ ಮಾಡಲು ಬಂದರು.
ಒಂದು ಹಳ್ಳಿಯಲ್ಲಿ ನನ್ನ ಕಾರ್ಯದರ್ಶಿಗೆ ಹೇಳಿದೆ, ‘ಮೂವರು ತಮ್ಮ ಮೊಬೈಲ್‍ಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅವರೆಲ್ಲರೂ ಬಡವರು. ಆದ್ದರಿಂದ ನನ್ನ ಬ್ಯಾಗಿಗೆ ಮೂರು ಹೊಸ ಮೊಬೈಲ್‍ಗಳನ್ನು ಹಾಕು.’
ಹೀಗೆ ನಾನು ಮೂರು ಹೊಸ ಮೊಬೈಲ್‍ಗಳನ್ನು ತೆಗೆದುಕೊಂಡಿದ್ದೆ, ಏಕೆಂದರೆ ಅವರೆಲ್ಲರೂ ಫ಼ೋನ್‍ಗಳನ್ನು ಕಳೆದುಕೊಂಡಿದ್ದಾರೆಂದು.
ಕಾರ್ಯಕ್ರಮದ ನಂತರ ಸ್ವಯಂಸೇವಕರನ್ನು ಭೇಟಿ ಮಾಡುವ ಸಮಯದಲ್ಲಿ, ನಾನು ಹೇಳಿದೆ, ‘ಇಲ್ಲಿ ಕೆಲವರು ನಿಮ್ಮ ಮೊಬೈಲ್‍ಗಳನ್ನು ಕಳೆದುಕೊಂಡಿದ್ದೀರ. ನನಗೆ ತಿಳಿದಿದೆ. ಯಾರು ಯಾರು ಫ಼ೋನ್‍ಗಳನ್ನು ಕಳೆದುಕೊಂಡಿದ್ದಾರೋ ಎದ್ದು ನಿಲ್ಲಿ.’ ಮೂವರು ಮಾತ್ರ ಎದ್ದು ನಿಂತರು.
ಅವರಲ್ಲಿ ಒಬ್ಬ ಮಹಿಳೆಯು ಎದ್ದು ನಿಂತಿದ್ದಳು. ನಾನು ಅವಳಿಗೆ ಹೇಳಿದೆ, ‘ನೋಡು, ಕಳೆದ ಗುರುವಾರ ನನ್ನ ಫ಼ೋಟೋ ಮುಂದೆ ನಿಂತು ನೀನು ಅಳುತ್ತಿದ್ದೆ. ಏನು ಮಾಡಬೇಕೆಂದು ತಿಳಿದಿರಲಿಲ್ಲ, ಹೇಗೆ ಮನೆಯವರಿಗೆ ಮುಖ ತೋರಿಸುವುದು ಏಕೆಂದರೆ ದುಬಾರಿಯ ಫ಼ೋನ್ ಕಳೆದುಕೊಂಡಿದ್ದೆ, ಎರಡು-ಮೂರು ತಿಂಗಳ ಆದಾಯದಷ್ಟಿರಬಹುದು. ತೊಗೋ, ಈ ಹೊಸದನ್ನು.’
ನಾನು ಹೀಗೆ ಮಾಡುತ್ತಿರುವಾಗ, ಒಂದು ಗುಂಪಿನಿಂದ ಹುಡುಗನೊಬ್ಬ ಬಂದು ತನ್ನ ಕತೆಯನ್ನು ಹಂಚಿಕೊಂಡ. ಅವನು ಅಡ್ವಾನ್ಸ್ ಕೋರ್ಸ್ ನಲ್ಲಿದ್ದಾಗ, ಮನೆಯಲ್ಲಿದ್ದ ಹೆಂಡತಿಯೊಂದಿಗೆ ಅವನು ಮಾತನಾಡಬೇಕಿತ್ತು. ಅವನ ಫ಼ೋನ್‍ನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ತರಲು ಮರೆತಿದ್ದ. ಅದಕ್ಕಾಗಿ ಅವನು ಫ಼ೋನ್ ಅನ್ನು ನನ್ನ ಫ಼ೋಟೋ ಮುಂದಿಟ್ಟು, ‘ಗುರೂಜೀ, ನನ್ನ ಫ಼ೋನ್ ಚಾರ್ಜ್ ಆಗಲಿ’ ಎಂದು ಕೇಳಿಕೊಂಡನು.
ಮರುದಿನ ಬೆಳಿಗ್ಗೆ ಅವನೆದ್ದು ನೋಡಿದಾಗ ಅವನ ಫ಼ೋನ್ ಚಾರ್ಜ್ ಆಗಿತ್ತು.
ಆ ಹುಡುಗ ಅವನ ಫ಼ೋನ್ ತೋರಿಸಿ ಹೇಳಿದ, ‘ನೋಡಿ, ಕಳೆದ ಒಂದೂವರೆ ವರ್ಷದಿಂದ ನಾನು ಚಾರ್ಜರ್ ಅನ್ನು ಬಿಸಾಕಿ, ಫ಼ೋನ್ ಅನ್ನು ನಿಮ್ಮ ಭಾವಚಿತ್ರದ ಮುಂದಿಡುತ್ತಿದ್ದೇನೆ, ಅದು ಚಾರ್ಜ್ ಆಗುತ್ತೆ.’
ಚಾರ್ಜರ್ ಅನ್ನು ಬಿಸಾಕಿದ್ದಾನೆ!
ನಾನು ನುಡಿದೆ, ‘ಇದೊಂದು ಅಚ್ಚರಿಯ ಸಂಗತಿ. ನನ್ನ ಫ಼ೋನಿಗೂ ಚಾರ್ಜರ್ ಬೇಕು, ಆದರೆ ನನ್ನ ಭಕ್ತ ತನ್ನ ಫ಼ೋನ್ ಅನ್ನು ನನ್ನ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡುತ್ತಾನೆ.’
ನೋಡಿ, ಭಕ್ತರು ಎಷ್ಟು ಬಲಶಾಲಿಗಳಾಗಬಹುದೆಂದು.
ಇದನ್ನು ಏಕೆ ಹೇಳುತ್ತಿರುವೆನೆಂದರೆ ನಮ್ಮ ಭಾವನೆಗಳು, ನಮ್ಮ ಭಕ್ತಿ ಮತ್ತು ಪ್ರೀತಿಯೇ ಇದನ್ನು ಸೃಷ್ಟಿಸಲು ಸಾಧ್ಯ.
ನಿಮ್ಮೊಂದಿಗೆ ಇನ್ನೊಂದು ಕತೆಯನ್ನು ಹಂಚಿಕೊಳ್ಳುತ್ತೇನೆ. ನಾನು ದಕ್ಷಿಣ ಆಫ್ರಿಕಾದಲ್ಲಿ ಮತ್ತೊಬ್ಬರ ಮನೆಯಲ್ಲಿ ಅತಿಥಿಯಾಗಿ ತಂಗಿದ್ದೆ. ಹತ್ತು ವರ್ಷಗಳ ಹಿಂದಿನ ಕತೆಯಿದು. ಜೋಹಾನ್ಸ್‍ಬರ್ಗ್‍ನಿಂದ ತೆರಳುವಾಗ, ಲಗ್ಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿರುವಾಗ, ಹಠಾತ್ತನೆ ಭಕ್ತರು ತಂಗಿದ್ದ ಕೊಠಡಿಗೆ ಹೋಗಿ, ಅಲ್ಲಿ ಅತ್ತಿಂದಿತ್ತ ಹುಡುಕಾಡ ತೊಡಗಿದೆ. ಸಾಮಾನ್ಯವಾಗಿ ನಾನೆಂದೂ ಬೇರೆಯವರ ಕೊಠಡಿಗೆ ಹೋಗುವುದಿಲ್ಲ. ಗುರುಗಳು ತಮ್ಮ ಕೊಠಡಿಗೆ ಏಕೆ ಬಂದರೆಂದು ಜನರಿಗೆ ಗಾಬರಿ ಮತ್ತು ಆಶ್ಚರ್ಯವಾಯಿತು. ಸ್ವಲ್ಪ ಯೋಚಿಸಿ, ನಾನು ನಿಮ್ಮ ಹೋಟಲ್ ನ ಕೊಠಡಿಗೆ ಆಕಸ್ಮಿಕವಾಗಿ ಬಂದರೆ, ನಿಮಗೆ ಗಾಬರಿಯಾಗುತ್ತದೆ.
ಅವರಿಗೆ ಗಾಬರಿ, ‘ಗುರೂಜೀ ಏಕೆ ಇಲ್ಲಿಗೆ ಬಂದ್ದಿದ್ದಾರೆ ಮತ್ತು ಗೊಂದಲದಲ್ಲಿದ್ದಾರೆ, ಏನನ್ನು ಹುಡುಕುತ್ತಿದ್ದಾರೆ?’
ಆಗ ಅಲ್ಲೊಂದು ಟೀ ಪೊಟ್ಟಣ ಕಾಣಿಸಿತು, ‘ಇದು ಯಾರದು?’ ಎಂದು ಕೇಳಿದೆ.
ಅವರು, ‘ನಮಗೆ ಗೊತ್ತಿಲ್ಲ. ಯಾರದೋ ಇರಬಹುದು’ ಎಂದರು.
ನಾನು ಯಾವತ್ತೂ ಟೀ ಕುಡಿಯುವುದಿಲ್ಲ, ಆದರೂ ಟಿ ಪೊಟ್ಟಣ ತೆಗೆದುಕೊಂಡು ನನ್ನ ಸೂಟ್‍ಕೇಸ್ ನಲ್ಲಿ ಹಾಕಿಕೊಂಡೆ. ನಂತರವೇ ಉಸಿರಾಡಲು ಸಾಧ್ಯವಾಯಿತು.
ಆ ಟೀ ಪೊಟ್ಟಣ ಸಿಗುವ ತನಕ ನಾನು ಬಹಳ ಚಡಪಡಿಸುತ್ತಿದ್ದೆ. ಜನರಿಗೆ ಇದು ಸ್ವಲ್ಪ ವಿಚಿತ್ರವೆನಿಸಿತು, ಗುರುಜೀ ಹೇಗೆ ಒಂದು ಟೀ ಪೊಟ್ಟಣವನ್ನು ಕದ್ದುಕೊಂಡು ಹೋದರು, ಅದು ನಮ್ಮದಲ್ಲವೆಂದು, ಬೇರೆಯವರದೆಂದು ತಿಳಿದ ಮೇಲೂ.
ಡರ್ಬನ್‍ನಿಂದ ಜೋಹಾನ್ಸ್‍ಬರ್ಗ್‍ಗೆ ಇಳಿದ ಮೇಲೆ, ಒಬ್ಬ ಹಿರಿಯ ಸಜ್ಜನರು ವಿಮಾನ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೇಳಿದರು, ‘ಗುರೂಜೀ, ನಾನು ಕಳುಹಿಸಿದ ಟೀ ಪೊಟ್ಟಣ ನಿಮಗೆ ತಲುಪಿತೇ? ಅದು ವಿಶಿಷ್ಠವಾದ ಟೀ. ನಾನು ಖುದ್ದಾಗಿ ನಿಂತು ಆರಿಸಿದ್ದು, ಅದನ್ನು ನಿಮಗೆ ನೀಡಬೇಕೆಂದು ಬಯಸಿದೆ. ಡರ್ಬನ್‍ಗೆ ಬರಲು ನನಗೆ ಸಾಧ್ಯವಾಗದೇ ಇದ್ದುದ್ದರಿಂದ ಬೇರೊಬ್ಬರ ಕೈಯಲ್ಲಿ ಕಳುಹಿಸಿದೆ.’
ಹೀಗೆ ಅದನ್ನು ಬೇರೆಯವರ ಕೈಯಲ್ಲಿ ಕಳುಹಿಸಿದ್ದರು ಮತ್ತು ಅದನ್ನು ಇನ್ನೊಂದು ಕೊಠಡಿಯಲ್ಲಿಟ್ಟಿದ್ದರು ಏಕೆಂದರೆ ನಾನು ಟೀ ಕುಡಿಯುವುದಿಲ್ಲವೆಂದು ಗೊತ್ತಿದ್ದರಿಂದ ನನಗೆ ಈ ವಿಷಯವನ್ನು ತಿಳಿಸಲಿಲ್ಲ. ನಂತರ ನಾನು, ‘ಹೌದು, ನನಗೆ ಆ ಟೀ ಪೊಟ್ಟಣ ತಲುಪಿದೆ’ ಎಂದು ನುಡಿದೆ.
ಇದರ ಅರ್ಥ ನಿಮ್ಮ ಭಾವನೆ ಮತ್ತು ಉದ್ವೇಗಗಳು ಬಹಳ ತೀಕ್ಷ್ಣವಾಗಿದ್ದರೆ, ನಾನು ಕೈ ಗೊಂಬೆಯಾಗುತ್ತೇನೆ. ಆದ್ದರಿಂದ ನಾನು ಆ ಟೀ ಪೊಟ್ಟಣವನ್ನು ಪಡೆಯಬೇಕಿತ್ತು.
ನಾನು ಹೇಗೆ ಟೀ ಪೊಟ್ಟಣವನ್ನು ಕದಿಯಬೇಕಾಯಿತೆಂಬ ಕತೆ ಇದು, ನಿಜವಾದ ಕಳ್ಳತನವಲ್ಲ. ಅದು ನನಗೆ ಸೇರಿದ್ದು, ಆದರೆ ಆ ಕ್ಷಣದಲ್ಲಿ ಇತರರಿಗೆ ನಾನೇನನ್ನೋ ಕದಿಯುತ್ತಿರುವಂತೆ ಭಾಸವಾಯಿತು.
ಈ ರೀತಿ ಅನೇಕ ಘಟನೆಗಳಿವೆ.
ನೋಡಿ, ಒಮ್ಮೆ ದೆಹಲಿಯಲ್ಲಿ ಒಂದು ವಿಶಾಲವಾದ ಸಭಾಂಗಣದಲ್ಲಿದ್ದೆ. ಅಲ್ಲಿ ಭಾರಿ ಜನ ಸಂದಣಿಯಿತ್ತು. ಕಾರ್ಯಕ್ರಮದ ಬಳಿಕ ಅವರೆಲ್ಲರೂ ಸಾಲಾಗಿ ಹೋಟಲ್ ಲಾಭಿಯಲ್ಲಿ ನಿಂತಿದ್ದರು.
ನನ್ನ ಬೆಂಗಾವಲಾಗಿ ಬರಬೇಕಿದ್ದ ಜನರಿಗೆ ಅನಿಸಿತು, ‘ಓಹ್, ಬಹಳ ಜನ ಸಂದಣಿಯಿದೆ. ತುಂಬಾ ಸಮಯ ಹಿಡಿಯಬಹುದು ಮತ್ತು ಗುರೂಜೀಯವರು ಇನ್ನೊಂದು ವಿಮಾನ ಹತ್ತಬೇಕಾಗಿದೆ.’
ಅದಕ್ಕಾಗಿ ಅವರು ಜನರನ್ನು ಕೌಶಲ್ಯದಿಂದ ನಿಭಾಯಿಸಲು ನಿರ್ಧರಿಸಿ, ನನ್ನನ್ನು ನೆಲಮಾಳಿಗೆಯಿಂದ ನೇರವಾಗಿ ಕಾರ್ ಸಮೀಪಕ್ಕೆ ಕರೆದುಕೊಂಡು ಹೋಗಿ, ಅಲ್ಲಿಂದ ಹೊರಟೆವು.
ನಾನಿರದ ಕಾರಣ ಅಲ್ಲಿ ನೆರೆದಿದ್ದ ಸಾವಿರಾರು ಜನರಿಗೆ ನಿರಾಸೆಯಾಯಿತು ಮತ್ತು ನಾನು ಅಸ್ವಸ್ಥನಾದೆನು.
ಜನರು ಸಿಟ್ಟಾದರು, ಘಾಸಿಗೊಂಡರು ಮತ್ತು ಆ ಇಡೀ ದಿನ ನನಗೆ ತಲೆ ಸಿಡಿತವಾಗಿ ಅಸ್ವಸ್ಥನಾದೆನು. ನನ್ನನ್ನು ನೇರವಾಗಿ ಕಾರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋದ ಜನರನ್ನು ಕೇಳಿದೆ, ‘ಏಕೆ ಹೀಗೆ ಮಾಡಿದಿರಿ? ನಾನು ಯಾರನ್ನೂ ನಿರಾಶೆಗೊಳಿಸಲು ಬಯಸುವುದಿಲ್ಲ. ನಾನು ಎಂದೂ ಯಾರನ್ನೂ ನಿರಾಶೆಗೊಳಿಸಿಲ್ಲ.’
ಇದನ್ನು ನಾನೇಕೆ ಹೇಳುತ್ತಿರುವೆನೆಂದರೆ ನಿಮ್ಮ ಭಾವನೆ ಮತ್ತು ಪ್ರೀತಿಯು ಬಹಳ ಬಲವಾಗಿದ್ದರೆ, ಕಲ್ಲನ್ನು ಕೂಡ ಕರಗಿಸಬಹುದು, ತಿಳಿಯಿತೇ?
ಹೀಗೆ ಅನೇಕ ಕತೆಗಳಿವೆ.
ಆದ್ದರಿಂದಲೇ ಧ್ಯಾನವನ್ನು ಅಭ್ಯಾಸ ಮಾಡುವವರು ಬಹಳ ಜಾಗರೂಕರಾಗಿರಬೇಕು. ಎಂದಿಗೂ ಯಾರನ್ನೂ ನಿಂದಿಸಬಾರದು. ಯಾವ ಕೆಟ್ಟ ಮಾತುಗಳನ್ನೂ ಆಡಬೇರಾದು. ನಿಮ್ಮ ಬಾಯಿಂದ ಯಾವ ಕೆಟ್ಟ ಮಾತು ಬರಬಾರದು.
ನಿಮಗೆ ಗೊತ್ತೇ ನಾನು ನನ್ನ ಇಡೀ 56 ವರ್ಷಗಳಲ್ಲಿ ಒಂದು ಕೆಟ್ಟ ಮಾತನ್ನೂ ಆಡಿಲ್ಲ, ಎಂದಿಗೂ ಇಲ್ಲ. ಅದಕ್ಕೆ ಪ್ರಶಂಸೆ ತೆಗೆದುಕೊಳ್ಳಲಾರೆ; ಅದು ಸುಮ್ಮನೆ ಬರುವುದಿಲ್ಲ.
ಕೆಟ್ಟದೇನಾದರೂ ಆಡಿರುವುದೆಂದರೆ, ‘ನೀನೊಬ್ಬ ಮೂರ್ಖ’ ಎಂದಷ್ಟೇ.
ನಾನು ಯಾರನ್ನಾದರೂ ನಿಂದಿಸಿರುವುದನ್ನು ನೀವೆಂದಿಗೂ ನೋಡಿರಲಾರಿರಿ, ನನ್ನ ಮನಸ್ಸಿನಲ್ಲೂ ಕೂಡ ನಿಂದಿಸಿಲ್ಲ.
ಧ್ಯಾನವನ್ನು ಅಭ್ಯಾಸಿಸುವವರು ಸಾಧ್ಯವಾದಷ್ಟು ನಿಮ್ಮ ಮಾತುಗಳನ್ನು ನಿಂದನೆಯಿಂದ ಮುಕ್ತಗೊಳಿಸಿ. ಏಕೆಂದರೆ ನಿಮ್ಮ ಮಾತುಗಳಲ್ಲಿ ಶಕ್ತಿಯಿರುತ್ತದೆ. ನೀವು ಧ್ಯಾನ ಮಾಡಿದಂತೆ ಹರಸುವ ಮತ್ತು ಶಪಿಸುವ ಸಾಮರ್ಥ್ಯವನ್ನು ಗಳಿಸುವಿರಿ.
ಮೊದಲಿಗೆ ಶಪಿಸುವ ಸಾಮಥ್ರ್ಯ ಪಡೆಯುವಿರಿ ನಂತರ ಹರಸುವ ಸಾಮಥ್ರ್ಯವನ್ನು ಪಡೆಯುವಿರಿ. ಆದ್ದರಿಂದಲೇ ಧ್ಯಾನವನ್ನು ಅಭ್ಯಾಸಿಸುವರು ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬಾರದು, ಯಾರನ್ನೂ ನಿಂದಿಸಬಾರದು ಮತ್ತು ಸಕಾರಾತ್ಮಕವಾಗಿರಬೇಕೆಂಬ ನಿಯಮವಿದೆ.
ಎಂದೂ ಕೋಪ ಮಾಡಿಕೊಳ್ಳಲೇಬಾರದೆಂದು ಹೇಳುತ್ತಿಲ್ಲ. ಕೋಪವು ಜೀವನದ ಒಂದು ಭಾಗವಾಗಿದೆ. ಆದರೆ ನೀವು ಕೋಪಗೊಂಡಾಗಲೂ ನಿಮ್ಮ ತುಟಿ ಮತ್ತು ನಾಲಿಗೆ ನಿಮ್ಮ ಹತೋಟಿಯಲ್ಲಿರಲಿ.
ಕೆಲವು ಬಾರಿ ಅನಿವಾರ್ಯವಾಗಿ ನೀವು ಸಿಟ್ಟಾಗಬೇಕಾಗಬಹುದು, ಆದರೆ ನಿಮ್ಮ ಬಾಯಿಂದ ಕೆಟ್ಟ ಪದಗಳು ಹೊರ ಬರಲು ಬಿಡಬೇಡಿ.
ಏಕೆ?
ನೀವು ಕೆಟ್ಟ ಮಾತುಗಳನ್ನಾಡಿದಾಗ ನಿಮ್ಮ ಉತ್ತಮ ಶಕ್ತಿಯನ್ನು ಹೆಚ್ಚಾಗಿ ಕಳೆದುಕೊಳ್ಳುತ್ತೀರ.
ಸ್ವಲ್ಪ ಯೋಚಿಸಿ, ಕೆಲವೇ ಕೆಲವು ಮಾತುಗಳಿಂದ ನಿಮ್ಮ ಒಂದು ತಿಂಗಳ ಧ್ಯಾನದ ಶಕ್ತಿಯನ್ನು ಕಳೆದುಕೊಳ್ಳುತ್ತೀರ. ಇದು ಲಾಭದಾಯಕವಾಗಿರುವುದೇ? ಒಂದು ಡಾಲರ್ ಮೌಲ್ಯದ ಕೋಕ್ ಪಾನೀಯವನ್ನು ಪಡೆಯಲು ಒಂದು ಸಾವಿರ ಡಾಲರುಗಳನ್ನು ವೆಚ್ಚ ಮಾಡಿದಂತೆ.
ಆದ್ದರಿಂದ ನಿಮ್ಮ ಶಕ್ತಿ, ಬಲ ಮತ್ತು ಸಂಕಲ್ಪವನ್ನು ಕಡೆಗಾಣಿಸಬೇಡಿ. ಧ್ಯಾನ ಮಾಡಿದಾಗ ನಿಜವಾಗಿಯೂ ನೀವು ಹೆಚ್ಚು ಶಕ್ತಿಯನ್ನು ಪಡೆಯುತ್ತೀರ. ಆದ್ದರಿಂದಲೇ ಪುರಾತನ ಭಾರತದಲ್ಲಿ ಋಷಿಗಳು ಮತ್ತು ಗುರುಗಳೆಲ್ಲರೂ ಶಿಷ್ಯರನ್ನು ಸೇರಿಸಿಕೊಳ್ಳುತ್ತಿರಲಿಲ್ಲ, ಅವರು ಬಲಶಾಲಿಗಳಾಗುತ್ತಾರೆಂಬ ಕಾರಣಕ್ಕಾಗಿ. ಮತ್ತು ಅವರು ನಿಯಮಗಳನ್ನು ಪಾಲಿಸದಿದ್ದರೆ, ಅದು ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ಜ್ಞಾನವನ್ನು ಎಲ್ಲರಿಗೂ ನೀಡುತ್ತಿರಲಿಲ್ಲ. ಅನೇಕ ಪರೀಕ್ಷೆಗಳನ್ನೊಡ್ಡಿ, ಅದರಲ್ಲಿ ಉತ್ತೀರ್ಣರಾದರೆ, ನಂತರ ಧ್ಯಾನ ಮತ್ತಿತರ ಜ್ಞಾನವನ್ನು ನೀಡುತ್ತಿದ್ದರು.