ಮಂಗಳವಾರ, ಜನವರಿ 1, 2013

ಧ್ಯಾನದ ಐದು ಹಂತಗಳು


೦೧ ಜನವರಿ ೨೦೧೩
ಬರ್ಲಿನ್, ಜರ್ಮನಿ

ನಿಮಗೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
ಹೊಸ ವರ್ಷವನ್ನು ಧ್ಯಾನದೊಂದಿಗೆ ಆಚರಿಸುವುದು ಉತ್ತಮ.
ಧ್ಯಾನ ಎಂದರೇನು? ಯಾವ ಸ್ಥಿತಿಯಿಂದ ಎಲ್ಲವೂ ಬಂದಿರುವುದೋ ಮತ್ತು ಲೀನವಾಗುವುದೋ ಅದೇ ಧ್ಯಾನ. ಯಾವುದರಿಂದ ಸುಖ, ಸಂತೋಷ, ಶಾಂತಿ ಇತ್ಯಾದಿಗಳನ್ನು ಅನುಭವಿಸುವಿರೋ ಆ ಆಂತರ್ಯದ ಮೌನವೇ ಧ್ಯಾನ.
ನಿಮಗೆ ಗೊತ್ತೇ, ಮೂರು ಬಗೆಯ ಜ್ಞಾನವಿದೆ.
ಮೊದಲನೆಯದು ನಮ್ಮ ಇಂದ್ರಿಯಗಳ ಮೂಲಕ ಪಡೆಯುವ ಜ್ಞಾನ. ಪಂಚೇಂದ್ರಿಯಗಳು ಜ್ಞಾನವನ್ನು ನೀಡುತ್ತದೆ. ನೋಡುವುದರ ಮೂಲಕ, ಕೇಳುವುದರ ಮೂಲಕ, ಸ್ಪರ್ಶದಿಂದ, ಆಘ್ರಾಣಿಸುವುದರಿಂದ ಮತ್ತು ರುಚಿಯಿಂದ ಜ್ಞಾನವನ್ನು ಪಡೆಯುತ್ತೇವೆ.
ಆದ್ದರಿಂದ ಇಂದ್ರಿಯಗಳ ಮುಖಾಂತರ ಜ್ಞಾನವನ್ನು ಪಡೆಯುತ್ತೇವೆ. ಇದು ಒಂದು ಹಂತದ ಜ್ಞಾನ.

ಎರಡನೆಯದು ಬುದ್ಧಿಯ ಮೂಲಕ ಜ್ಞಾನ.
ಇಂದ್ರಿಯಗಳಿಂದ ಪಡೆಯುವ ಜ್ಞಾನಕ್ಕಿಂತ ಬುದ್ಧಿಯ ಮೂಲಕ ಪಡೆಯುವ ಜ್ಞಾನ ಶ್ರೇಷ್ಠವಾದುದು.
ಸೂರ್ಯ ಹುಟ್ಟುವುದು ಮತ್ತು ಮುಳುಗುವುದನ್ನು ನೋಡುತ್ತೀವಿ ಆದರೆ ಬುದ್ಧಿಶಕ್ತಿಯ ಮೂಲಕ ನಾವು ತಿಳಿಯುತ್ತೇವೆ ಅದು ಹುಟ್ಟುವುದೂ ಇಲ್ಲ ಮುಳುಗುವುದೂ ಇಲ್ಲವೆಂದು.
ಒಂದು ಪೆನ್ ಅನ್ನು ನೀರಿನಲ್ಲಿಟ್ಟಾಗ ಅದು ಬಾಗಿದಂತೆ ಕಾಣಿಸುತ್ತದೆ. ಆದರೆ ಬುದ್ಧಿಯ ಜ್ಞಾನದಿಂದ ತಿಳಿಯುತ್ತೇವೆ ಅದು ಬಾಗಿಲ್ಲ, ಕೇವಲ ದೃಷ್ಟಿಭ್ರಮೆಯೆಂದು.
ಆದ್ದರಿಂದ ಬುದ್ಧಿಯ ಜ್ಞಾನವು ಶ್ರೇಷ್ಠ.

ನಂತರ ಮೂರನೆಯ ಹಂತದ ಜ್ಞಾನ, ಮತ್ತಷ್ಟು ಉನ್ನತವಾದುದು, ಅಂತರ್ಬೋಧೆ. ನಿಮ್ಮ ಹೊಟ್ಟೆಯಿಂದ ಏನನ್ನೋ ತಿಳಿಯುವಿರಿ.
ಆಳವಾದ ಮೌನದಿಂದ ಏನನ್ನೋ ತಿಳಿಯುವಿರಿ, ಸೃಜನತೆ ಮೂಡುವುದು ಅಥವಾ ಯಾವುದನ್ನೋ ಅನ್ವೇಷಿಸುವಿರಿ. ಇವೆಲ್ಲವೂ ಆ ಮೂರನೆಯ ಹಂತದ ಜ್ಞಾನ, ಚೇತನದಿಂದ ಸಾಧ್ಯ.
ಧ್ಯಾನ ಮೂರನೆಯ ಹಂತದ ಜ್ಞಾನಕ್ಕೆ ದ್ವಾರವನ್ನು ತೆರೆಯುವುದು. ಮತ್ತು ಮೂರನೆಯ ಹಂತದ ಆನಂದಕ್ಕೂ ದ್ವಾರ ತೆರೆಯುವುದು.

ಆನಂದದಲ್ಲಿ ಮೂರು ವಿಧ.

ನಮ್ಮ ಇಂದ್ರಿಯಗಳು ವಿಷಯ ವಸ್ತುಗಳಲ್ಲಿ ಆಸಕ್ತಿಯುಳ್ಳದ್ದಾಗಿದ್ದರೆ, ಅಂದರೆ ನಿಮ್ಮ ಕಣ್ಣುಗಳು ನೋಡುವುದರಲ್ಲಿ ಆಸಕ್ತಿ ಹೊಂದಿದ್ದರೆ, ನಿಮ್ಮ ಕಿವಿಗಳು ಕೇಳುವುದರಲ್ಲಿ ಆಸಕ್ತಿ ಹೊಂದಿದ್ದರೆ, ನಮಗೆ ನೋಡುವುದರಿಂದ, ಕೇಳುವುದರಿಂದ, ರುಚಿಯಿಂದ ಅಥವಾ ಸ್ಪರ್ಶದಿಂದ ಸಂತೋಷ ಸಿಗುತ್ತದೆ. ಇಂದ್ರಿಯಗಳಿಂದ ಸ್ವಲ್ಪ ಸಂತೋಷ ಪಡೆಯುತ್ತೇವೆ, ಆದರೆ ಇಂದ್ರಿಯಗಳ ಮೂಲಕ ಸಂತೋಷಿಸುವ ಸಾಮಥ್ರ್ಯ ಸೀಮಿತವಾಗಿದೆ.
ನೋಡಿ, ಮೊದಲ ಮಿಠಾಯಿ ತಿನ್ನುವಾಗ ಬಹಳ ರುಚಿಯಾಗಿರುತ್ತದೆ. ಎರಡನೆಯದು ಪರವಾಗಿಲ್ಲ. ಮೂರನೆಯದು ಹೆಚ್ಚೆನಿಸುತ್ತದೆ, ಮತ್ತು ನಾಲ್ಕನೆಯದು ಯಾತನೆಯೆನಿಸುತ್ತದೆ.
ಏಕೆ? ಎಲ್ಲವೂ ಒಂದೇ ಬೇಕರಿಯಿಂದ ತಯಾರಿಸಲ್ಪಟ್ಟಿರುತ್ತದೆ ಆದರೆ ಸಂತೋಷಿಸುವ ಸಾಮಥ್ರ್ಯ ಕ್ಷೀಣವಾಗುತ್ತದೆ. ಹಾಗೆಯೇ ಇಂದ್ರಿಯಗಳ ವಿಷಯದಲ್ಲೂ- ದೃಷ್ಟಿ, ಸ್ಪರ್ಶ, ಘ್ರಾಣ, ರುಚಿ ಮತ್ತು ಶ್ರವಣ; ಇವುಗಳಿಂದ ಪಡೆಯುವ ಸಂತೋಷ ಸೀಮಿತವಾಗಿರುತ್ತದೆ. ಅಲ್ಲವೇ?

ಎರಡನೆಯ ಹಂತದ ಸಂತೋಷ ನೀವು ಸೃಜನಾತ್ಮಕವಾದುದನ್ನು ಮಾಡಿದಾಗ; ಒಳ್ಳೆಯದನ್ನು ಅನ್ವೇಷಿಸಿದಾಗ, ಇಲ್ಲವೇ ಕವಿತೆಯನ್ನು ರಚಿಸಿದಾಗ, ಅಥವಾ ಹೊಸ ತಿಂಡಿಯನ್ನು ತಯಾರಿಸಿದಾಗ.
ಯಾವುದು ಸೃಜನಶೀಲತೆಯಿಂದ ಬರುವುದೋ ಅದು ನಿರ್ದಿಷ್ಟವಾದ ಸಂತೋಷವನ್ನುಂಟು ಮಾಡುತ್ತದೆ.
ಶಿಶುವೊಂದು ಜನಿಸಿದಾಗ, ಅದು ಮೊದಲನೆಯದಾಗಿರಲಿ ಅಥವಾ ಮೂರನೆಯದಾಗಿರಲಿ ನಿರ್ದಿಷ್ಟವಾದ ಸಂಭ್ರಮವನ್ನುಂಟು ಮಾಡುತ್ತದೆ; ಒಂದು ನಿರ್ದಿಷ್ಟವಾದ ಆನಂದವನ್ನು ತರುತ್ತದೆ.

ಇನ್ನು ಮೂರನೆಯ ಬಗೆಯ ಸಂತೋಷ. ಎಂದಿಗೂ ಕುಂದದ, ಇಂದ್ರಿಯಗಳಿಂದ ಅಥವಾ ಸೃಜನತೆಯಿಂದ ಜನಿಸದ, ಆದರೆ ಆಳವಾದ ಮತ್ತು ನಿಗೂಢತೆಯಿಂದ ಬರುವ ಆನಂದ.
ಹಾಗೆಯೇ, ಶಾಂತಿ, ಜ್ಞಾನ ಮತ್ತು ಆನಂದ, ಈ ಮೂರು ಬೇರೊಂದು ಸ್ತರದಿಂದ ಬರುವುದು.
ಮತ್ತು ಅದು ಎಲ್ಲಿಂದ ಬರುವುದೋ, ಅದರ ಮೂಲ, ಧ್ಯಾನ.

ಧ್ಯಾನಕ್ಕೆ ಐದು ಮುಖ್ಯವಾದ ನಿಯಮಗಳಿವೆ.

ಆ ನಿಯಮಗಳು ಯಾವುದೆಂದರೆ, ಮುಂದಿನ ಹತ್ತು ನಿಮಿಷಗಳು ಧ್ಯಾನದಲ್ಲಿ ಕುಳಿತಿರುವಾಗ ನನಗೇನು ಬೇಡ, ನಾನೇನ್ನೂ ಮಾಡಬೇಕಾಗಿಲ್ಲ ಮತ್ತು ನಾನು ಏನೂ ಅಲ್ಲ. ಈ ಮೂರು ಮುಖ್ಯವಾದ ನಿಯಮಗಳನ್ನು ಅನುಸರಿಸಿದರೆ ಆಳವಾದ ಧ್ಯಾನಕ್ಕೆ ಹೋಗಲು ಸಾಧ್ಯ.

ಆರಂಭದಲ್ಲಿ ಧ್ಯಾನವನ್ನು ಕೇವಲ ವಿಶ್ರಾಂತಿಗಾಗಿ ಮಾಡುತ್ತೀರ. ಎರಡನೆಯ ಹಂತದಲ್ಲಿ, ಧ್ಯಾನ ನಿಮಗೆ ಶಕ್ತಿಯನ್ನು ನೀಡುತ್ತದೆ; ಶಕ್ತಿಯುತರಾಗುತ್ತೀರ. ಮೂರನೆಯ ಹಂತದಲ್ಲಿ ಧ್ಯಾನ ಸೃಜನತೆಯನ್ನು ತರುತ್ತದೆ. ನಾಲ್ಕನೆಯ ಹಂತದಲ್ಲಿ ಧ್ಯಾನ ಉತ್ಸಾಹವನ್ನು ಮತ್ತು ಆನಂದವನ್ನು ನೀಡುತ್ತದೆ. 

ಐದನೆಯ ಹಂತದಲ್ಲಿ ಧ್ಯಾನ ಆವರ್ಣನೀಯ, ವಿವರಿಸಲಾಗದು. ಅದು ಆ ಏಕತೆಯ ಭಾವ; ನೀವು ಮತ್ತು ಇಡೀ ವಿಶ್ವವೇ ಒಂದು. ಇದು ಐದನೆಯ ಹಂತದ ಧ್ಯಾನ, ಇದಕ್ಕೆ ಮೊದಲು ಧ್ಯಾನವನ್ನು ನಿಲ್ಲಿಸಬೇಡಿ. ನಾನು ಇದನ್ನು ಸಾಮಾನ್ಯವಾಗಿ ಸ್ಪೇನ್ ಅಥವಾ ಇಟಲಿಯ ಬೀಚಿಗೆ ಹೋಗುವವರೊಂದಿಗೆ ಹೋಲಿಸುತ್ತೇನೆ. ಕೆಲವರು ಒಂದು ವಾಕ್‍ಗೆ ಹೋಗುತ್ತಾರೆ ಮತ್ತು ಅದರಿಂದ ಸಂತೋಷಗೊಳ್ಳುತ್ತಾರೆ. ಇನ್ನು ಕೆಲವರು ಈಜುವ ಸಲುವಾಗಿ ಹೋಗುತ್ತಾರೆ ಮತ್ತು ಉಲ್ಲಸಿತರಾಗುತ್ತಾರೆ, ಅದರಿಂದಲೇ ಸಂತೋಷಪಡುತ್ತಾರೆ. ಕೆಲವರು ಮೀನು ಹಿಡಿಯಲು ಹೋದರೆ, ಮತ್ತೆ ಇನ್ನು ಕೆಲವರು ಸ್ಕೂಬಾ ಡೈವಿಂಗ್‍ಗೆ ಹೋಗಿ ಸುಂದರವಾದ ಜೀವಿಗಳನ್ನು ನೋಡಿ ಆನಂದಿಸುತ್ತಾರೆ. ಇನ್ನು ಕೆಲವರು ಸಮುದ್ರದಿಂದ ಮುತ್ತು, ರತ್ನಗಳನ್ನು ತರುತ್ತಾರೆ; ಅವರು ಆಳಕ್ಕೆ ಹೋಗುತ್ತಾರೆ. ಜ್ಞಾನವು ಇವೆಲ್ಲ ಆಯ್ಕೆಗಳನ್ನು ನಿಮ್ಮ ಮುಂದಿಡುತ್ತದೆ.

ಧ್ಯಾನವನ್ನು ಕೇವಲ ವಿಶ್ರಾಂತಿ, ಸಂತೋಷ, ಉಲ್ಲಾಸ ಅಥವಾ ನಿಮ್ಮ ಆಸೆಗಳ ಪೂರೈಸುವಿಕೆಗಷ್ಟೇ ನಿಲ್ಲಿಸಬೇಡಿ.
ನಿಮಗೆ ಗೊತ್ತೇ, ಧ್ಯಾನವು ನಿಮ್ಮ ಸಂತೋಷಿಸುವ ಸಾಮರ್ಥ್ಯ ಮತ್ತು ಆಸೆಗಳನ್ನು ಪೂರೈಸುವ ಸಾಮರ್ಥ್ಯನ್ನು ಹೆಚ್ಚಿಸುತ್ತದೆ, ಮತ್ತು ನಿಮಗೇನೂ ಬೇಡವೆಂದರೆ, ಇತರರ ಆಸೆಗಳನ್ನು ಪೂರೈಸುವ ಶಕ್ತಿಯಿರುತ್ತದೆ. ಇದು ಬಹಳ ಉತ್ತಮವಾಗಿದೆ. ಆದ್ದರಿಂದ ಇದಕ್ಕೆ ಮೊದಲು ನಿಲ್ಲಿಸಬೇಡಿ, ಧ್ಯಾನವನ್ನು ಮುಂದುವರಿಸುತ್ತಿರಿ..