ಬುಧವಾರ, ಜನವರಿ 23, 2013

ತಾಳ್ಮೆ ಯೋಗಿಯ ಒ೦ದು ಅ೦ತಃಸತ್ವ

೨೩ ಜನವರಿ ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ಕಲಿಯುಗದಲ್ಲಿ ತಪಸ್ಸಿನ ಸಾಮಂಜಸ್ಯವೇನು ಮತ್ತು ನಾವದನ್ನು ಹೇಗೆ ಅರ್ಥೈಸಿಕೊಳ್ಳಬೇಕು?
ಶ್ರೀ ಶ್ರೀ ರವಿ ಶಂಕರ್: ತಪವು ಶರೀರದ ಎಲ್ಲಾ ಅಂಗಗಳನ್ನು ಶುದ್ಧಪಡಿಸುವಲ್ಲಿ ಮತ್ತು ಅವುಗಳಲ್ಲಿನ ಅಶುಚಿತ್ವವನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. ಸಂಪೂರ್ಣ ಶರೀರವು ಸ್ವಚ್ಛವಾಗುತ್ತದೆ ಮತ್ತು ಎಲ್ಲಾ ಜ್ಞಾನೇಂದ್ರಿಯಗಳು ತಪದೊಂದಿಗೆ ಬಲಗೊಳ್ಳುತ್ತವೆ.
ದೇವರನ್ನು ಸಂತೋಷಪಡಿಸಲು ಅಥವಾ ಆತ್ಮ ಸಾಕ್ಷಾತ್ಕರ ಹೊಂದಲು ತಪಸ್ಸು ಮಾಡುವುದಲ್ಲ, ಆದರೆ ಅದನ್ನು ಮಾಡುವುದು ಶರೀರ ಮತ್ತು ಮನಸ್ಸನ್ನು ಬಲಪಡಿಸಲು.
ಹಲವಾರು ಸಂತರು, ವಿಶೇಷವಾಗಿ ಜೈನರಲ್ಲಿ ಸಂತರು ಬಹಳ ಕಠೋರ ತಪಸ್ಸುಗಳನ್ನು ಮಾಡುವುದನ್ನು ನೀವು ನೋಡಿರಬೇಕು. ಜೈನ ಸಂತರು ಬಹಳ ದೂರಗಳ ವರೆಗೆ ಬರಿಗಾಲಿನಲ್ಲಿ ನಡೆಯಬಲ್ಲರು. ಅವರಿಗೆ ಚಳಿಗಾಲಗಳಲ್ಲಿ ಬಹಳ ಚಳಿಯಾಗಲೀ ಅಥವಾ ಬೇಸಿಗೆಗಳಲ್ಲಿ ಅತಿಯಾದ ಸೆಖೆಯಾಗಲೀ ಆಗುವುದಿಲ್ಲ. ತಮ್ಮ ತಪಸ್ಸಿನ ಕಾರಣದಿಂದ ಅವರು ವಿಪರೀತ ಹವಾಮಾನ ಪರಿಸ್ಥಿತಿಗಳಿಗೆ ಒಂದು ಪ್ರತಿರೋಧವನ್ನು ವೃದ್ಧಿಸಿರುತ್ತಾರೆ. ಆದುದರಿಂದ ಇದು ತಪಸ್ಸನ್ನು ಮಾಡುವುದರಿಂದ ಸಿಗುವ ಲಾಭಗಳಲ್ಲೊಂದು. ಆದರೆ ನೀವಿದನ್ನು ಎಳೆಯುವುದಾಗಲೀ ಅಥವಾ ಅತಿಯಾಗಿ ಮಾಡುವುದಾಗಲೀ ಮಾಡಲೇಬಾರದು. ಅತಿಯಾಗಿ ತಪಸ್ಸು ಮಾಡುವುದು ಮತ್ತು ನಿಮ್ಮದೇ ಶರೀರಕ್ಕೆ ತೊಂದರೆ ನೀಡುವುದನ್ನು ಮಾಡಲೇ ಬಾರದು. ಹಾಗೆ ಮಾಡುವುದು ತಪ್ಪು.
ಕೆಲವು ಜನರಿದ್ದಾರೆ, ಅವರು ತಮ್ಮ ನಾಲ್ಕು ಸುತ್ತಲೂ ಮತ್ತು ತಲೆಯ ಮೇಲೆ  ಬೆಂಕಿಯನ್ನು ಹೊತ್ತಿಸಿಕೊಂಡು ಕುಳಿತುಕೊಂಡು ಧ್ಯಾನ ಮಾಡುತ್ತಾರೆ. ಇದು ಪಂಚಾಗ್ನಿ ತಪಸ್ಸು ಎಂದು ಕರೆಯಲ್ಪಡುತ್ತದೆ. ಇದೆಲ್ಲಾ ಅಗತ್ಯವಿಲ್ಲ. ಈ ರೀತಿಯಲ್ಲಿ ಶರೀರವನ್ನು ಹಿಂಸಿಸುವುದು ತಪ್ಪು ಮತ್ತು ಹಾಗೆ ಮಾಡಬಾರದು. ಆದರೆ ಸ್ವಲ್ಪ ಪ್ರಮಾಣದ ತಪಸ್ಸು ಆವಶ್ಯಕವಾಗಿದೆ. ’ತಪೋವೈ ದ್ವಂದ್ವ ಸಹನಂ’ ಎಂದು ಹೇಳಲಾಗಿದೆ. ಅಂದರೆ, ದ್ವಂದ್ವವನ್ನು ಸಹಿಸುವುದು ತಪಸ್ಸಾಗಿದೆ.
ನೀವು ಎಲ್ಲಿಗಾದರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಿರೆಂದು ಇಟ್ಟುಕೊಳ್ಳೋಣ ಮತ್ತು ಅದೊಂದು ೧೨ ಗಂಟೆಗಳ ಕಾಲದ ಪ್ರಯಾಣ, ಅಷ್ಟು ಹೊತ್ತು ನೀವು ಕುಳಿತುಕೊಳ್ಳಬೇಕು. ಆಗ ಅದು ಕೂಡಾ ಒಂದು ರೀತಿಯ ತಪಸ್ಸು.
ಸಮಚಿತ್ತತೆಯ ಒಂದು ಸ್ಥಿತಿಯಲ್ಲಿರುವುದು ಮತ್ತು ಏನು ಬರುವುದೋ ಅದನ್ನು ಸಹಿಸುವುದು; ಅದು ಸೆಖೆಯಾಗಲೀ ಅಥವಾ ಚಳಿಯಾಗಲೀ, ಒಳ್ಳೆಯದಾಗಲೀ ಅಥವಾ ಕೆಟ್ಟದಾಗಲೀ, ಹೊಗಳಿಕೆಯಾಗಲೀ ಅಥವಾ ಟೀಕೆಯಾಗಲೀ - ಅದು ತಪಸ್ಸು.
ನೀವು ಹೊಗಳಿಕೆಗಳನ್ನು ಆಲಿಸುವಾಗಿನ ಅದೇ ಸಮಚಿತ್ತತೆಯೊಂದಿಗೆ ನಿಮಗೆ ಒಂದು ತೆಗಳಿಕೆಯನ್ನು ಕೇಳಿಸಿಕೊಳ್ಳಲು ಸಾಧ್ಯವೇ? ಅದು ತಪಸ್ಸು. ಒಬ್ಬರು ನಿಮ್ಮನ್ನು ಹೊಗಳುವಾಗ, ನೀವದನ್ನು ಒಂದು ಮುಗುಳ್ನಗೆಯೊಂದಿಗೆ ಕೇಳಿಸಿಕೊಳ್ಳುವಿರಿ. ಒಬ್ಬರು ನಿಮ್ಮ ಬಗ್ಗೆ ಟೀಕೆ ಮಾಡುವಾಗ, ನೀವದನ್ನು ಅದೇ ಮುಗುಳ್ನಗೆ ಮತ್ತು ಸಮಚಿತ್ತತೆಯೊಂದಿಗೆ ಕೇಳಿಸಿಕೊಳ್ಳಬಲ್ಲಿರೇ ಮತ್ತು ನಿಮ್ಮೊಳಗೆ ಏನು ನಡೆಯುತ್ತಿದೆಯೆಂಬುದನ್ನು ನೋಡಬಲ್ಲಿರೇ? ಅದು ತಪಸ್ಸು.
ನೀವು ಏನನ್ನಾದರೂ ಇಷ್ಟಪಡದೇ ಇರುವಾಗ, ಆದರೆ ಅದನ್ನು ಅನುಭವಿಸಲು ನಿಮಗೆ ಸಾಧ್ಯವಾದಾಗ, ಅದು ತಪಸ್ಸು.
ನೀವು ಏನನ್ನಾದರೂ ಇಷ್ಟಪಡಲು ಸಾಧ್ಯವಾದರೆ, ನೀವದಕ್ಕೆ ಒಂದು ಸಾಕ್ಷಿಯಾಗಬಲ್ಲಿರೇ ಮತ್ತು ಅದರ ಬಗ್ಗೆ ಜ್ವರವಿಲ್ಲದೇ ಇರಬಲ್ಲಿರೇ? ಆಗ ಅದು ತಪಸ್ಸು.
ವಿರೋಧಾತ್ಮಕಗಳನ್ನು ಸಹಿಸುವುದನ್ನು ತಪಸ್ಸು ಎಂದು ಕರೆಯುತ್ತಾರೆ, ಮತ್ತು ಅದು ಜೀವನದಲ್ಲಿ ಆವಶ್ಯಕವಾಗಿದೆ. ಎಷ್ಟರ ಮಟ್ಟಿಗೆ ನಾವು ಜೀವನದಲ್ಲಿ ತಪಸ್ಸನ್ನು ಅನುಸರಿಸುತ್ತೇವೋ, ಅಷ್ಟರ ಮಟ್ಟಿಗೆ ನಾವು ಪ್ರಬಲರೂ ಸ್ಥಿರವೂ ಆಗುತ್ತೇವೆ.

ಪ್ರಶ್ನೆ: ಗುರುದೇವ, ಜ್ಞಾನವನ್ನು ಸಾಬೂನಿನಂತೆ ಉಪಯೋಗಿಸಬೇಕೆಂದು ನೀವು ಹೆಚ್ಚಾಗಿ ಹೇಳಿರುವಿರಿ. ಆದರೆ ಅದನ್ನು ತೊಳೆದು ಹಾಕಬೇಕಾಗಿದ್ದರೆ, ಅದು ನಮ್ಮ ನಿಜವಾದ ಸ್ವಭಾವದ ಸಂಕೇತವಾಗಿರಲು ಹೇಗೆ ಸಾಧ್ಯ? ಹಾಗಾದರೆ ಅದರರ್ಥ ಜ್ಞಾನವು ನಮ್ಮ ನಿಜವಾದ ಸ್ವಭಾವವಲ್ಲವೆಂದೇ?
ಶ್ರೀ ಶ್ರೀ ರವಿ ಶಂಕರ್: ಎರಡು ರೀತಿಯ ಜ್ಞಾನಗಳಿವೆ.
ಒಂದನೆಯದು ಆತ್ಮದ ಜ್ಞಾನ, ಇದು ನಮ್ಮ ನಿಜವಾದ ಸ್ವಭಾವ. ಮತ್ತು ಇನ್ನೊಂದು ರೀತಿಯ ಜ್ಞಾನವು ಯಾವುದೆಂದರೆ, ಯಾವುದು ಸಾಬೂನಿನಂತೆ ಬಳಸಲ್ಪಡುವುದೋ ಅದು.
ಜ್ಞಾನವನ್ನು ಒಂದು ಸಾಬೂನಿನಂತೆ ಬಳಸಬೇಕೆಂದು ಹೇಳಿರುವುದು ಯಾಕೆಂದು ನಿನಗೆ ತಿಳಿದಿದೆಯೇ? ಜ್ಞಾನವನ್ನು ಹೊಂದಿರುವುದರ ಬಗ್ಗೆ ನೀನು ಅಹಂಕಾರಿಯಾಗದಿರಲೆಂದು. "ನನಗೆ ಬಹಳಷ್ಟು ತಿಳಿದಿದೆ; ನನಗೆ ಎಲ್ಲವೂ ತಿಳಿದಿದೆ" ಎಂದು ನೀನು ಯೋಚಿಸಬಾರದು. ನೀನು ಜ್ಞಾನದ ಬಗ್ಗೆ ದುರಹಂಕಾರ ಪಡಬಾರದು. ಆದುದರಿಂದ ಅಂತಹ ಒಂದು ಅಹಂನ್ನು ತೊಲಗಿಸುವುದಕ್ಕಾಗಿ, ಜ್ಞಾನವನ್ನು ಒಂದು ಸಾಬೂನಿನಂತೆ ಬಳಸಬೇಕೆಂದು ಹೇಳಲಾಗಿದೆ. ಇದು ನಿಜವಾದ ಅರ್ಥ.

ಪ್ರಶ್ನೆ: ಪ್ರೀತಿಯ ಗುರುದೇವ, ಸುಪ್ತ ಮನಸ್ಸಿನ ಶಕ್ತಿಯೇನು ಮತ್ತು ನಾನದನ್ನು ಉಪಯೋಗಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜಾಗೃತ ಮನಸ್ಸು ನಿಜವಾಗಿ ನಿಮ್ಮ ಸುಪ್ತ ಮನಸ್ಸಿನ ಕೇವಲ ಹತ್ತರಲ್ಲಿ ಒಂದು ಭಾಗದಷ್ಟು ಮಾತ್ರ ಇರುವುದು. ಆದುದರಿಂದ ಸುಪ್ತ ಮನಸ್ಸಿಗೆ ಬಹಳಷ್ಟು ಶಕ್ತಿಯಿದೆ. ನೀವೊಂದು ಪೈಜಾಮ ಪಾರ್ಟಿಯಲ್ಲಿರುವಿರೆಂಬುದಾಗಿ ಊಹಿಸಿ. ನೀವು ಎಂಟು ಮಂದಿ ನಿದ್ರಿಸುತ್ತಿರುವಿರಿ ಮತ್ತು ಯಾರೋ ಒಬ್ಬರು ನಿಮ್ಮ ಹೆಸರನ್ನು ಕರೆಯುತ್ತಾರೆ, ನೀವು ಮಾತ್ರ ಪ್ರತಿಕ್ರಿಯಿಸುವಿರಿ. ಇತರರು ಗಾಢನಿದ್ರೆಯಲ್ಲಿ ಮುಂದುವರೆಯುತ್ತಾರೆ. ಅದು ಹಾಗಲ್ಲವೇ? ನೀವಿದನ್ನು ಗಮನಿಸಿರುವಿರೇ? ನಿಮ್ಮ ಹೆಸರು ಕೂಡಾ ನಿಮ್ಮ ಸುಪ್ತ ಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿದೆಯೆಂಬುದನ್ನು ಇದು ಸೂಚಿಸುತ್ತದೆ. ಸುಪ್ತ ಮನಸ್ಸು ಹೆಚ್ಚು ಹೆಚ್ಚು ಜಾಗೃತವಾಗುವಂತೆ ಮಾಡಲಿರುವ ಮಾರ್ಗವು ಧ್ಯಾನವಾಗಿದೆ.

ಪ್ರಶ್ನೆ: ಗುರುದೇವ, ನಮ್ಮ ಸಾಮರ್ಥ್ಯಗಳ ವರ್ಧನೆಯು, ನಮ್ಮ ಕೆಲಸವನ್ನು ಸಾಧಿಸುವಲ್ಲಿ ಮತ್ತು ಪೂರೈಸುವಲ್ಲಿ ಸಹಾಯಕವಾಗುತ್ತದೆಯೆಂದು ನೀವು ಹೇಳಿರುವಿರಿ. ನಾವು ನಮ್ಮ ಸಾಮರ್ಥ್ಯಗಳನ್ನು ಹೇಗೆ ಹೆಚ್ಚಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಧ್ಯಾನ ಮತ್ತು ಮೌನದ ಅಭ್ಯಾಸಗಳು ಒಬ್ಬನ ಸಾಮರ್ಥ್ಯವನ್ನು, ದಕ್ಷತೆಗಳನ್ನು ಹಾಗೂ ಕುಶಲತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಹುದು. ನಿಮಗೇನು ಬೇಕೋ ಅದನ್ನು ಸಾಧಿಸಲು ಕುಶಲತೆಯು ಕೂಡಾ ಆವಶ್ಯಕವಾಗಿದೆ.
ನೀವು ವಿಶ್ರಮಿಸುವಾಗ ಮತ್ತು ನೀವು ಮೌನದಲ್ಲಿ ಹಾಗೂ ಧ್ಯಾನದಲ್ಲಿ ಆಳವಾಗಿ ಒಳಹೋದಾಗ ಈ ಎಲ್ಲಾ ಮೂರು ವರ್ಧಿಸುತ್ತವೆ.
ಚಟುವಟಿಕೆ ಮತ್ತು ವಿಶ್ರಾಂತಿಯನ್ನು ಮಿತವಾಗಿ ಪಾಲಿಸುವುದು  ಮುಖ್ಯವಾಗಿದೆ.
ಸುಮ್ಮನೇ ಊಹಿಸಿ, ಒಬ್ಬ ವ್ಯಕ್ತಿಯು ವಿಶ್ರಾಂತಿಯನ್ನೇ ತೆಗೆದುಕೊಳ್ಳದಿದ್ದರೆ, ಏನನ್ನು ಮಾಡಲೂ ಅವನಲ್ಲಿ ಸಾಕಷ್ಟು ಶಕ್ತಿ ಉಳಿಯಲಾರದು. ಅದೇ ಸಮಯದಲ್ಲಿ, ದಿನವಿಡೀ ಕೇವಲ ವಿಶ್ರಾಮ ಮಾಡುವುದರಿಂದ ಯಾವುದೇ ಸಹಾಯವಾಗಲಾರದು. ನೀವು ಕೆಲಸ ಮಾಡಬೇಕು, ವ್ಯಾಯಾಮ ಮಾಡಬೇಕು ಮತ್ತು ವಿಶ್ರಾಂತಿಯನ್ನೂ ತೆಗೆದುಕೊಳ್ಳಬೇಕು. ಧ್ಯಾನವು ನಿಮಗೆ ಒಂದು ಹೆಚ್ಚು ಆಳವಾದ ವಿಶ್ರಾಂತಿಯನ್ನು ನೀಡುತ್ತದೆ. ಅದರಲ್ಲಿ ನಿಮ್ಮ ಮನಸ್ಸು ಸಂಪೂರ್ಣವಾಗಿ ಜಾಗರೂಕತೆಯಿಂದಿರುತ್ತದೆ, ಹಾಗಿದ್ದರೂ ನಿಮ್ಮ ಶರೀರವು ಆಳವಾದ ವಿಶ್ರಾಂತಿಯನ್ನು ಪಡೆಯುತ್ತದೆ. ಅಂತಹ ಒಂದು ಸ್ಥಿತಿಯಲ್ಲಿ, ನಿಮ್ಮಲ್ಲಿ ಕುಶಲತೆಯು ವೃದ್ಧಿಸುತ್ತದೆ ಮತ್ತು ದಕ್ಷತೆಯೂ ಕೂಡಾ ನಿಮ್ಮಲ್ಲಿ ಅರಳುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಬುದ್ಧಿಯನ್ನು ಬಿಟ್ಟು ಮುಗ್ಧತೆಗೆ ಮರಳಿ ಹೋಗುವುದು ಹೇಗೆ?ಹಾಗೆ ಮಾಡುವುದರಿಂದ, ಅದು ನಟನೆಯಾಗುವುದಿಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಬುದ್ಧಿಯು ಪಕ್ವವಾದಾಗ, ನೀವು ಮುಗ್ಧರಾಗುವಿರಿ. ಹಾಗೆಯೇ ಭಾವನೆಗಳು ಅಧಿಕಾರ ವಹಿಸಿದಾಗ ಕೂಡಾ ನೀವು ಮುಗ್ಧತೆಯ ಕಡೆಗೆ ಸಾಗುವಿರಿ.
ಮುಗ್ಧತೆಯು ನಿಮ್ಮ ಜೀವನದ ಒಂದು ಮಗ್ಗಲು ಮತ್ತು ಪ್ರತಿಯೊಬ್ಬರಲ್ಲೂ ಅದು ಇದೆ. ದಾರಿಯಲ್ಲಿ ಅಡ್ಡ ಬರುವುದೇನೆಂದರೆ ಬುದ್ಧಿಯಲ್ಲಿನ ಕಲ್ಪನೆಗಳು; ಉದಾಹರಣೆಗೆ ತೀರ್ಮಾನಗಳು, ಅಥವಾ "ನನಗೆ ಇದೆಲ್ಲಾ ತಿಳಿದಿದೆ" ಅಥವಾ "ನನಗೆ ಇದು ಹೆಚ್ಚು ತಿಳಿದಿದೆ" ಮೊದಲಾಗಿ ಯೋಚಿಸುವುದು. ಬುದ್ಧಿಯು ಸಂಪೂರ್ಣವಾಗಿ ಪಕ್ವವಾಗುವುದರಿಂದ ತಡೆಯುವುದು ಇದೇ.
ಧ್ಯಾನ ಮತ್ತು ಪ್ರಾಣಾಯಾಮಗಳು, ಬುದ್ಧಿಯಿಂದ ಮರಳಿ ನಿಮ್ಮ ಮುಗ್ಧತೆಯ ಕಡೆಗಿರುವ ಪ್ರಯಾಣವನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಹಾಗೆಯೇ, ನಿಮಗಿಂತ ಬಹಳ ಹೆಚ್ಚು ತಿಳಿದ ಜನರಿರುವಾಗ ಮತ್ತು ನೀವು, "ಓ, ನನಗೆ ಬಹಳ ಕಡಿಮೆ ತಿಳಿದಿದೆ" ಎಂದು ಯೋಚಿಸುವಾಗ ಕೂಡಾ ನಿಮ್ಮಲ್ಲಿ ಮುಗ್ಧತೆಯು ಹಾಗೆಯೇ ಬರುತ್ತದೆ.
ನಿಮ್ಮ ಬಗ್ಗೆ ನೀವೊಂದು ತಪ್ಪಾದ ನಿರ್ಧಾರವನ್ನು ಮಾಡಿದಾಗ, ಅದು ನಿಮ್ಮಲ್ಲಿ ಮುಗ್ಧತೆಯು ಇಲ್ಲದಿರುವ ಭಾವನೆಯನ್ನು ತರಲೂಬಹುದು.

ಪ್ರಶ್ನೆ: ಗುರುದೇವ, ದಯವಿಟ್ಟು ಅನುರಾಗ ಮತ್ತು ಅನುರಾಗದ ಕೊರತೆಯ ಬಗ್ಗೆ ಮಾತನಾಡಿ.
ಶ್ರೀ ಶ್ರೀ ರವಿ ಶಂಕರ್: ಜೀವನದಲ್ಲಿ ಅನುರಾಗವು ಆವಶ್ಯಕವಾಗಿದೆ, ಆದರೆ ಅದು ಸ್ಥಿರವಾಗಿರಲು ಸಾಧ್ಯವಿಲ್ಲ.
ಅನುರಾಗದಲ್ಲಿ ಯಾವತ್ತೂ ಏಳು ಬೀಳುಗಳಿರುತ್ತವೆ. ಅನುರಾಗದ ತೀವ್ರತೆಯು ಕೆಲವೊಮ್ಮೆ ಹೆಚ್ಚಾಗುತ್ತದೆ ಮತ್ತು ನಂತರ ಕಡಿಮೆಯಾಗುತ್ತದೆ, ಮತ್ತು ನಂತರ ಪುನಃ ಹೆಚ್ಚಾಗುತ್ತದೆ ಮತ್ತು ಅದು ಆರೋಗ್ಯಕರ.
ಸಾಧಾರಣವಾಗಿ ಏನಾಗುತ್ತದೆಯೆಂದರೆ, ಯಾವುದಾದರೂ ವಿಷಯದ ಕಡೆಗಿರುವ ನಿಮ್ಮ ಅನುರಾಗವು ಕಡಿಮೆಯಾದಾಗ ನಿಮಗೆ ಬಹಳ ದುಃಖವಾಗುತ್ತದೆ; ನೀವು ಏನನ್ನೋ ಕಳೆದುಕೊಂಡಿರುವಿರೇನೋ ಎಂಬಂತೆ. ನಿಮ್ಮಲ್ಲೇನೋ ಕೊರತೆಯಿದೆಯೆಂದು ನಿಮಗೆ ಅನ್ನಿಸಲು ತೊಡಗುತ್ತದೆ ಮತ್ತು ಏನು ಮಾಡಬೇಕೆಂದು ಚಿಂತಿಸಲು ತೊಡಗುತ್ತೀರಿ. ನಾನು ಹೇಳುವುದೇನೆಂದರೆ, ಕೇವಲ ವಿಶ್ರಾಮ ಮಾಡಿ. ನೋಡಿ, ಅನುರಾಗದಲ್ಲಿ ಸ್ವಲ್ಪ ಮಟ್ಟಿನ ತೃಪ್ತಿ ಕೂಡಾ ಇರಬೇಕು. ಕೆಲವೊಮ್ಮೆ, ತೃಪ್ತಿ ಬರುವಾಗ, ಅನುರಾಗವು ಕಡಿಮೆಯಾಗುತ್ತದೆ.
ತೃಪ್ತಿಯಲ್ಲಿ ಕೂಡಾ ಅನುರಾಗದ ಒಂದು ಎಳೆ ಇರಬೇಕು, ಇಲ್ಲದಿದ್ದರೆ ತೃಪ್ತಿಯು ಜಡತೆಗೆ ಮತ್ತು ಒಂದು ಉದಾಸೀನತೆಗೆ ಜಾರಬಹುದು. ಆದುದರಿಂದ ತೃಪ್ತಿಯು ಜಡತೆಗೆ ಜಾರುವುದನ್ನು ತಡೆಯಲು, ನಿಮ್ಮಲ್ಲಿ ಸ್ವಲ್ಪ ಅನುರಾಗವಿರಬೇಕು. ಮತ್ತು ಅನುರಾಗವು ಅತಿಯಾಗಿ ಜ್ವರವಾಗದಿರಲು ಮತ್ತು ನಿಮ್ಮನ್ನು ಎಲ್ಲಾ ಸಮಯದಲ್ಲೂ ಅಶಾಂತರನ್ನಾಗಿ ಮಾಡದಿರಲು, ನಿಮ್ಮಲ್ಲಿ ತೃಪ್ತಿಯಿರಬೇಕು. ಇದು ನಿಮಗೆ ಸರಿಯಾದ ಸಂತುಲನವನ್ನು ನೀಡುವುದು.

ಪ್ರಶ್ನೆ: ಗುರುದೇವ, ನನ್ನ ಜೀವನದಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಿವೆ. ಅವುಗಳಲ್ಲಿ ಕೆಲವು ಒಳ್ಳೆಯವು ಮತ್ತು ಕೆಲವು ಕೆಟ್ಟವು. ಬದಲಾವಣೆಯನ್ನು ನಾನು ನಿಭಾಯಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಬದಲಾವಣೆಗಳು ಜೀವನದಲ್ಲಿ ಮತ್ತು ಪ್ರಪಂಚದಲ್ಲಿ ಅನಿವಾರ್ಯ. ಪ್ರಪಂಚವೆಂದರೆ ಬದಲಾವಣೆಗಳು ಎಂದು ಅರ್ಥ. ಆದರೆ ನಿನ್ನೊಳಗೆ ಆಳದಲ್ಲಿ ಬದಲಾಗದೇ ಇರುವ ಏನೋ ಒಂದಿದೆ ಮತ್ತು ನೀನು ಅದರ ಮೇಲೆ ಭದ್ರವಾಗಿ ನೆಲೆಯೂರಬೇಕು. ಅದು ಭಕ್ತಿ.

ಪ್ರಶ್ನೆ: ಗುರುದೇವ, ನೀವು ಆಹಾರ ಮತ್ತು ಉಸಿರಿನ ಬಗ್ಗೆ ಬಹಳಷ್ಟು ಮಾತನಾಡಿರುವಿರಿ. ಬಟ್ಟೆಯ ಬಗ್ಗೆ ಕೂಡಾ ನೀವು ಏನನ್ನಾದರೂ ಹೇಳಲು ಬಯಸುವಿರೇ? ನಾವು ಸಾಂಪ್ರದಾಯಿಕ ಬಟ್ಟೆಗಳನ್ನು ಮಾತ್ರ ಧರಿಸಬೇಕೇ?
ಶ್ರೀ ಶ್ರೀ ರವಿ ಶಂಕರ್: ಆರಾಮದಾಯಕ ಬಟ್ಟೆಗಳನ್ನು ಧರಿಸಿ, ಆದರೆ ನೀವು ಬಹಳಷ್ಟು ಹಣ ಕೊಟ್ಟು ಖರೀದಿಸುವ ಆ ಹರಿದ ಬಟ್ಟೆಗಳು ಮತ್ತು ಜೀನ್ಸನ್ನು ಧರಿಸುವುದಕ್ಕೆ ನಾನು ಆದ್ಯತೆ ನೀಡುವುದಿಲ್ಲ. ಅದು ಬಹಳ ಕೊಳಕಾಗಿ ಕಾಣಿಸುತ್ತದೆ.
ಜೀನ್ಸಿನಲ್ಲಿ ತೂತುಗಳಿದ್ದರೆ, ಅದಕ್ಕೆ ನೀವು ಹೆಚ್ಚು ಹಣ ನೀಡಬೇಕಾಗುತ್ತದೆಯೆಂಬುದಾಗಿ ನಾನು ಕೇಳಿದ್ದೇನೆ! ಇದನ್ನು ನೀವು ಮಾಡಬಾರದು.
ಹತ್ತಿಯು ಅತ್ಯುತ್ತಮವಾದ ಬಟ್ಟೆಯಾಗಿದೆ. ಅದು ಸ್ವಲ್ಪ ಪ್ರಮಾಣದ ಪೋಲಿಸ್ಟರಿನೊಂದಿಗೆ ಮಿಶ್ರಿತವಾಗಿದ್ದರೆ, ಅದು ಕೂಡಾ ಪರವಾಗಿಲ್ಲ. ಆದರೆ ಕೇವಲ ಪೋಲಿಸ್ಟರನ್ನು ದೂರವಿರಿಸಬೇಕು.
ಜನರು ಚರ್ಮವನ್ನು ದೂರವಿರಿಸಬೇಕೆಂದು ನಾನು ಬಯಸುತ್ತೇನೆ. ನಿಮಗೆ ಗೊತ್ತಾ, ಕೇವಲ ಚರ್ಮಕ್ಕಾಗಿ ಹಲವಾರು ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಇದೆಲ್ಲವನ್ನೂ ದೂರ ಮಾಡಬೇಕು. ’ಅಹಿಂಸಾ ಪರಮೋ ಧರ್ಮ’ ಎಂದು ಹೇಳಲಾಗಿದೆ. (ಎಲ್ಲಾ ಕ್ರಿಯೆಯಲ್ಲಿ ಅಹಿಂಸೆಯನ್ನು ಪಾಲಿಸುವುದು ಪರಮ ಧರ್ಮ ಅಥವಾ ಕರ್ತವ್ಯವಾಗಿದೆ). ಪ್ರತಿಯೊಬ್ಬರೂ ಅಹಿಂಸೆಯ ಮಾರ್ಗದಲ್ಲಿ ನಡೆಯಬೇಕು ಮತ್ತು ಒಬ್ಬ ಸಸ್ಯಾಹಾರಿಯಾಗಬೇಕು. ಇದು ಬಹಳ ಆವಶ್ಯಕವಾಗಿದೆ. ಆಗ ಮಾತ್ರ ನಿಮಗೆ ಚೆನ್ನಾಗಿ ಧ್ಯಾನ ಮಾಡಲು ಸಾಧ್ಯ.

ಪ್ರಶ್ನೆ: ಗುರುದೇವ, ಮೊದಲಿನ ಪ್ರಶ್ನೆಯನ್ನೂ ಸೇರಿದಂತೆ ನನ್ನಲ್ಲಿ ಬೇರೆ ಎರಡು ಪ್ರಶ್ನೆಗಳಿವೆ. ಮೊದಲನೆಯದು: ರೇಷ್ಮೆ ಸೀರೆಗಳನ್ನು ತಯಾರಿಸುವಾಗ ರೇಷ್ಮೆ ಹುಳಗಳು ಸಾಯುತ್ತವೆಯಾದ್ದರಿಂದ ನಾವು ರೇಷ್ಮೆ ಸೀರೆಗಳನ್ನು ಉಡಬಹುದೇ? ಅದೊಂದು ಪಾಪವೇ?
ಶ್ರೀ ಶ್ರೀ ರವಿ ಶಂಕರ್: ನೀವದನ್ನು ಆ ರೀತಿಯಲ್ಲಿ ನೋಡಿದರೆ, ನೀವೊಂದು ಬಾಳೆಗಿಡವನ್ನು ಅಥವಾ ಅದರ ಭಾಗವನ್ನು ಬಟ್ಟೆ ಮಾಡಲಿಕ್ಕಾಗಿ ಕತ್ತರಿಸುವಾಗ, ಆಗ ಕೂಡಾ ಅದೊಂದು ಪಾಪವೆಂದು ನೀವು ಯೋಚಿಸಬಹುದು, ಯಾಕೆಂದರೆ ಅದು ಕೂಡಾ ಒಂದು ಜೀವ.
ನೀವು ನಿಜವಾಗಿ ಪ್ರಯತ್ನಿಸಬೇಕಾದುದೆಂದರೆ, ಇತರ ಜೀವಿಗಳಿಗೆ ಕನಿಷ್ಠ ಮಟ್ಟದ ನೋವುಂಟುಮಾಡುವುದು. ನೀವದನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ. ಆದುದರಿಂದ ರೇಷ್ಮೆಯನ್ನು ಧರಿಸುವುದು ಪರವಾಗಿಲ್ಲ. ವಿವಿಧ ರೀತಿಯ ರೇಷ್ಮೆಗಳಿವೆ. ರೇಷ್ಮೆ ಹುಳಕ್ಕೆ ತೊಂದರೆಯನ್ನುಂಟುಮಾಡದೆಯೇ ಮಾಡಲ್ಪಡುವ ಒಂದು ನಿರ್ದಿಷ್ಟ ರೀತಿಯ ರೇಷ್ಮೆಯಿದೆ. ಅಹಿಂಸಾ ರೇಷ್ಮೆ ಕೂಡಾ ಲಭ್ಯವಿದೆ. ಇದರಲ್ಲಿ ಅವರು ರೇಷ್ಮೆ ಗೂಡುಗಳನ್ನು ಕುದಿಸುವುದಿಲ್ಲ, ಆದರೆ ಹುಳಗಳಿಗೆ ತೊಂದರೆಯನ್ನುಂಟುಮಾಡದೆಯೇ ರೇಷ್ಮೆಯನ್ನು ಸಂಗ್ರಹಿಸುತ್ತಾರೆ.