ಮಂಗಳವಾರ, ಜನವರಿ 8, 2013

ಎಂಟು ರೀತಿಯ ಶುದ್ಧೀಕರಣ

ಆಲಪ್ಪುಝ, ಕೇರಳ
೮ ಜನವರಿ ೨೦೧೩

ನ್ನದಾತ ಸುಖೀ ಭವ, ಯಾರು ನನಗೆ ಈ ಆಹಾರವನ್ನು ಒದಗಿಸುತ್ತಿರುವರೋ, ಅವರು ಸಂತೋಷವಾಗಿರಲಿ. ನೀವೆಲ್ಲರೂ ಪ್ರತಿದಿನವೂ ನಿಮ್ಮ ಊಟದ ಮೊದಲು ಈ ಒಂದು ಮಂತ್ರವನ್ನು ಹೇಳುವಿರಾ?

ನೀವಿದನ್ನು ಹೇಳುವಾಗ, ನೀವು ಮೂರು ಜನರಿಗೆ ಸಮೃದ್ಧಿಯನ್ನು ಹಾರೈಸುತ್ತೀರಿ. ಒಂದನೆಯದು ರೈತನಿಗೆ, ಎರಡನೆಯದು ರೈತರಿಂದ ಖರೀದಿಸಿ ಉತ್ಪನ್ನವನ್ನು ಮಾರುವ ವ್ಯಾಪಾರಿಗೆ ಮತ್ತು ಮೂರನೆಯದು ಆಹಾರವನ್ನು ಅಡಿಗೆ ಮಾಡಿ ನಿಮಗೆ ಬಡಿಸುವ ಸ್ತ್ರೀಗೆ.

ಮೊದಲನೆಯದಾಗಿ, ನಾವು ರೈತರಿಗೆ ಒಳ್ಳೆಯದನ್ನು ಹಾರೈಸುತ್ತೇವೆ. ರೈತರು ಸಂತೋಷವಾಗಿರುವಾಗ, ಯಾರು ಆಹಾರವನ್ನು ತಿನ್ನುವರು ಅವರು ಕೂಡಾ ಸಂತೋಷವಾಗಿರುವರು. ಆದರೆ ರೈತರು ದುಃಖಿತರಾಗಿದ್ದರೆ ಮತ್ತು ಅವರು ಕಣ್ಣೀರು ಹಾಕಿಕೊಂಡು ನಮಗೆ ಆಹಾರವನ್ನು ನೀಡುತ್ತಿರುವುದಾದರೆ, ಆಗ ನಾವು ಆ ಆಹಾರವನ್ನು ತಿನ್ನುವಾಗ ನಾವು ರೋಗಿಗಳಾಗುತ್ತೇವೆ. ಆದುದರಿಂದ, ನೀವು ರೈತರಿಗೆ ಒಳ್ಳೆಯ ಆರೋಗ್ಯ ಮತ್ತು ಸಂತೋಷವನ್ನು ಹಾರೈಸಬೇಕು.

ಈ ದೇಶದಲ್ಲಿ ನಾವು ರೈತರನ್ನು ಕಡೆಗಣಿಸುತ್ತಿದ್ದೇವೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಯಾಕೆಂದರೆ, ಅವರು ದುಃಖಿತರಾಗಿರುವರು ಹಾಗೂ ಅಸಂತೋಷದಿಂದಿರುವರು. ಅವರು ದುಃಖಿತರಾಗಿರುವಾಗ, ಅವರು ಉತ್ಪಾದಿಸುವ ಆಹಾರವು ನಮಗೆ ಕೇವಲ ದುಃಖವನ್ನು ತರುತ್ತದೆ. ಆದುದರಿಂದ, ನೀವೆಲ್ಲರೂ ಅವರಿಗೆ ಸಂತೋಷವನ್ನು ಹಾರೈಸಬೇಕು.

ಎರಡನೆಯದಾಗಿ, ನಾವು ವ್ಯಾಪಾರಿಗಳಿಗೆ ಒಳ್ಳೆಯದನ್ನು ಹಾರೈಸಬೇಕು. ವ್ಯಾಪಾರಿಗಳು, ಲೋಭಿಗಳಾಗದಿರುವ ಮೂಲಕ ಮತ್ತು ವಸ್ತುಗಳ ಶೇಖರಣೆ ಮಾಡದೇ ಇರುವುದರ ಮೂಲಕ ತಮ್ಮ ಕೆಲಸವನ್ನು ಸರಿಯಾಗಿ ಮಾಡಿದರೆ, ಆಗ ದೇಶದಲ್ಲಿ ಆಹಾರಕ್ಕೆ ಯಾವುದೇ ಅಭಾವ ಇರಲಾರದು. ನಮ್ಮ ದೇಶದಲ್ಲಿ ಒಂದು ಸಮಸ್ಯೆಯಿರುವುದಾದರೆ, ಅದು ಸರಕಾರದ ತಪ್ಪಾದ ನೀತಿಗಳು ಹಾಗೂ ವ್ಯಾಪಾರಿಗಳ ಶೇಖರಣಾ ಮನೋಭಾವದಿಂದಾಗಿ. ಇದರ ಫಲವಾಗಿ, ಅತ್ಯಂತ ಹೆಚ್ಚು ಕಷ್ಟಕ್ಕೀಡಾಗುವುದು ರೈತರಾಗಿದ್ದಾರೆ.

ನೀವು ಕಲ್ಪಿಸಿಕೊಳ್ಳಬಲ್ಲಿರೇ, ಎರಡು ವರ್ಷಗಳ ಮೊದಲು, ಆಹಾರದ ಕಂಪನಿಗಳು ೩೦೦% ಲಾಭವನ್ನು ಪಡೆಯುತ್ತಿದ್ದವು, ಅದೇ ವೇಳೆ ರೈತರು ದಿವಾಳಿಯಾಗುತ್ತಿದ್ದರು ಎಂಬುದನ್ನು? ನಮ್ಮ ವ್ಯವಸ್ಥೆಯಲ್ಲಿ ಒಂದು ಗಂಭೀರವಾದ ನ್ಯೂನತೆಯಿದೆ ಎಂಬುದನ್ನು ಇದು ತೋರಿಸುತ್ತದೆ, ಅದರ ಕಡೆಗೆ ನಾವು ಗಮನ ಹರಿಸಬೇಕು. ಶೇಖರಿಸಿಡುವುದು ಅತ್ಯಂತ ದೊಡ್ಡ ಅಪರಾಧವಾಗಿದೆ.

ಮೂರನೆಯದಾಗಿ, ಅಡಿಗೆ ಮಾಡಿ ಆಹಾರವನ್ನು ನಮಗೆ ಬಡಿಸುವ, ಮನೆಯಲ್ಲಿನ ಸ್ತ್ರೀಯರಿಗೆ ನಾವು ಒಳ್ಳೆಯದನ್ನು ಹಾರೈಸಬೇಕು. ಆಹಾರವನ್ನು ಅಡಿಗೆ ಮಾಡುವ, ಮನೆಯ ಸ್ತ್ರೀಯ ಕಣ್ಣುಗಳಲ್ಲಿ ಕಣ್ಣೀರಿರಬಾರದು. ಅದು ನಿಮಗೆ ಯಾವುದೇ ಒಳಿತನ್ನು ಮಾಡುವುದಿಲ್ಲ.

ಹಾಗಾಗಿ, ನೀವು ಪ್ರತಿದಿನವೂ ಅನ್ನದಾತ ಸುಖೀ ಭವ ಎಂದು ಹೇಳುವಾಗ, ಮನೆಯ ಮಹಿಳೆಯು ಸಂತೋಷವಾಗಿರುವಂತೆ ನೀವು ಪ್ರಾರ್ಥಿಸುತ್ತಿರುತ್ತೀರಿ; ವ್ಯಾಪಾರಿಯು ತನ್ನ ವ್ಯಾಪಾರವನ್ನು ಒಂದು ನ್ಯಾಯೋಚಿತವಾದ ರೀತಿಯಲ್ಲಿ (ಲೋಭದಿಂದಲ್ಲ) ಮಾಡುವಂತೆ ನೀವು ಪ್ರಾರ್ಥಿಸುತ್ತಿರುತ್ತೀರಿ ಮತ್ತು ನೀವು ರೈತನಿಗೆ ಒಂದು ಸಂತೋಷಕರವಾದ ಜೀವನವನ್ನು ಹಾರೈಸುತ್ತಿರುತ್ತೀರಿ. ಈ ಮೂವರು ಸಂತೋಷವಾಗಿದ್ದರೆ, ಆಗ ಸಮಾಜವು ಸಂತೋಷವಾಗಿರುತ್ತದೆ.

ಕೇರಳದಾದ್ಯಂತ ಸಂತೋಷದ ಒಂದು ದೊಡ್ಡ ಅಲೆಯನ್ನು ನಾವು ಸೃಷ್ಟಿಸಬೇಕಾಗಿದೆ. ಅದು ಕೇರಳದಿಂದ ಪ್ರಾರಂಭವಾಗಬೇಕು ಮತ್ತು ಸಂಪೂರ್ಣ ರಾಷ್ಟ್ರಕ್ಕೆ ಹರಡಬೇಕು. ನೀವು ಇತರರಿಗೆ ಸಂತೋಷವನ್ನು ಬಯಸಿದಾಗ, ಸಂತೋಷವು ನಿಮ್ಮ ಬಳಿಗೆ ಬರುತ್ತದೆ. ಇದು ಪ್ರಕೃತಿಯ ನಿಯಮ. ನೀವು ಇತರರಿಗೆ ಒಳ್ಳೆಯದನ್ನು ಬಯಸಿದಾಗ, ಒಳ್ಳೆಯ ವಿಷಯಗಳು ನಿಮ್ಮ ಬಳಿಗೆ ತಿರುಗಿ ಬರುತ್ತವೆ. ನೀವು ಇತರರಿಗೆ ಕೆಟ್ಟದನ್ನು ಬಯಸಿದಾಗ, ಕೇವಲ ಕೆಟ್ಟ ವಿಷಯಗಳು ನಿಮ್ಮ ಬಳಿಗೆ ಬರುತ್ತವೆ. ಯಾರೂ ತಮಗೆ ಕೆಟ್ಟದಾಗುವುದನ್ನು ಬಯಸುವುದಿಲ್ಲ, ಸರಿಯಾ? ನೀವು ನಿಮ್ಮ ಹೃದಯವನ್ನು ಶುದ್ಧವಾಗಿಯೂ ನಿರ್ಮಲವಾಗಿಯೂ ಇಟ್ಟುಕೊಳ್ಳಬೇಕಾದುದು ಈ ಕಾರಣಕ್ಕಾಗಿಯೇ.

ನಾವು ಸಂತೋಷದ ಅಲೆಗಳನ್ನು ಸೃಷ್ಟಿಸಬೇಕಾಗಿದೆ. ಅದನ್ನು ಮಾಡುವುದಕ್ಕಾಗಿ, ಭಾರತವನ್ನು ಉತ್ತಮಗೊಳಿಸುವುದಕ್ಕಾಗಿ ನಾವೆಲ್ಲರೂ ದಿನದಲ್ಲಿ ಒಂದು ಗಂಟೆಯನ್ನು ಕೊಡಬೇಕು. ಈ ದೇಶದಿಂದ, ಎಲ್ಲಾ ಹಂತಗಳಿಂದಲೂ ನಾವು ಭ್ರಷ್ಟಾಚಾರವನ್ನು ತೊಡೆದುಹಾಕಬೇಕಾಗಿದೆ. ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ದೇಶದಲ್ಲಿರುವ ಭ್ರಷ್ಟಾಚಾರದಿಂದ ಬಳಲಿ ಹೋಗಿದ್ದೀರಿ ಮತ್ತು ಒಂದು ಬದಲಾವಣೆಯನ್ನು ಬಯಸುವಿರಿ?

(ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ನಾವೊಂದು ವ್ಯತ್ಯಾಸವನ್ನು ಮಾಡಬೇಕಾಗಿದೆ. ಇದನ್ನು ಮಾಡಲು ಸಾಧ್ಯವಾಗುವುದು ಯಾರಿಗೆಂದರೆ, ಈ ದೇಶದ ಯುವಕರಿಗೆ; ಕೇವಲ ವಯಸ್ಸಿನಲ್ಲಿ ಮಾತ್ರವಲ್ಲ ಆದರೆ ಚೈತನ್ಯದಲ್ಲಿ. ಒಟ್ಟಾಗಿ, ಒಂದು ಅಪರಾಧ-ಮುಕ್ತ ಮತ್ತು ಭ್ರಷ್ಟಾಚಾರ-ಮುಕ್ತ ಭಾರತದ ಕನಸನ್ನು ನನಸಾಗಿಸಲು ನಮಗೆ ಸಾಧ್ಯವಿದೆ.

ಇವತ್ತು, ನೀವು ಅದರ ಬಗ್ಗೆ ಯೋಚಿಸಿ. ನಾವು ಮಾಡಲು ಬಯಸುವುದು ಏನನ್ನು? ನಮ್ಮ ದೇಶದ ಯುವಕರು ನಮ್ಮ ಸಮಾಜದಲ್ಲಿ ಒಂದು ವ್ಯತ್ಯಾಸವನ್ನು ಹೇಗೆ ಮಾಡಬಹುದು?

ನಾನು ಮೊದಲನೆಯ ಸಲ ಕೇರಳಕ್ಕೆ ಬಂದಾಗ, ೧೯೭೧ರಲ್ಲಿ, ನಾನೊಬ್ಬ ವಿದ್ಯಾರ್ಥಿಯಾಗಿದ್ದೆ. ಆ ಸಮಯದಲ್ಲಿ, ನಮಗೆ ನೀಡಲಾಗಿದ್ದ ಆಹಾರವೆಂದರೆ ಇಡೀ ಕುಚ್ಚುಲಕ್ಕಿಯಾಗಿತ್ತು ಮತ್ತು ಕರ್ನಾಟಕದಲ್ಲಿ ನಾವು ಕುಚ್ಚುಲಕ್ಕಿ ಅನ್ನವನ್ನು ಊಟ ಮಾಡುತ್ತಲೇ ಇರಲಿಲ್ಲ. ನಾವು ಬೆಳ್ತಿಗೆ ಅನ್ನವನ್ನು ಮಾತ್ರ ಊಟ ಮಾಡುತ್ತಿದ್ದೆವು. ಆರು ದಿನಗಳ ವರೆಗೆ ನಮಗೆ ಯಾವುದೇ ಬೆಳ್ತಿಗೆ ಅನ್ನ ಸಿಗಲಿಲ್ಲ, ನಮಗೆ ಕೇವಲ ಕುಚ್ಚುಲಕ್ಕಿ ಅನ್ನ ಮಾತ್ರ ಸಿಕ್ಕಿತು ಮತ್ತು ಆಗ ಅದೊಂದು ಸಮಸ್ಯೆಯಾಗಿತ್ತು! ಕೇರಳಕ್ಕೆ ಬರುತ್ತಿದ್ದ ಯಾರಿಗಾದರೂ ಕೇವಲ ಕುಚ್ಚುಲಕ್ಕಿ ಅನ್ನ ಅಥವಾ ಕೆಂಪು ಅನ್ನ ಮಾತ್ರ ಸಿಗುತ್ತಿತ್ತು. ಭಾರತದ ಇತರ ಯಾವುದೇ ಭಾಗಗಳಿಗಿಂತಲೂ ಕೇರಳವು ಬಹಳಷ್ಟು ಹೆಚ್ಚು ಆರೋಗ್ಯವಂತವಾಗಿತ್ತು.

ಇವತ್ತು, ನಾನು ಕೇಳುತ್ತಿರುವುದೇನೆಂದರೆ, ದೇಶದ ಇತರ ಭಾಗಗಳಿಗೆ ನಾವು ಕುಚ್ಚುಲಕ್ಕಿ ಹರಡುವುದರ ಬದಲು, ನಾವು ಕೂಡಾ ಬೆಳ್ತಿಗೆಯನ್ನು ಉಪಯೋಗಿಸುವ ದೇಶದ ಇತರ ಭಾಗಗಳಂತೆ ಆಗಿಬಿಟ್ಟಿದ್ದೇವೆ. ಇಲ್ಲ, ನೀವು ನಿಮ್ಮ ಕೇರಳದ ಶೈಲಿಯ ಆಹಾರಕ್ಕೆ ತಿರುಗಿ ಹೋಗಬೇಕು, ಯಾಕೆಂದರೆ ಕುಚ್ಚುಲಕ್ಕಿಯಲ್ಲಿ ವಿಟಾಮಿನ್ ಬಿ ಮತ್ತು ಇತರ ಖನಿಜಗಳಿವೆ.

ಕುಚ್ಚುಲಕ್ಕಿಯನ್ನು ಊಟ ಮಾಡಿದರೆ ನಿಮಗೆ ಸಿಹಿಮೂತ್ರ ಖಾಯಿಲೆ ಬರಲಾರದು, ಆದರೆ ಬಹಳಷ್ಟು ಪಾಲಿಷ್ ಮಾಡಿದ ಬೆಳ್ತಿಗೆ ಅಕ್ಕಿಯು ಕೇವಲ ಪಿಷ್ಟ ಮಾತ್ರವಾಗಿದೆ. ಅದನ್ನು ತಿಂದು ಜನರು ರೋಗಿಷ್ಠರಾಗುತ್ತಿದ್ದಾರೆ. ಆದುದರಿಂದ, ನಾವು, ಕುಚ್ಚುಲಕ್ಕಿ ತಿನ್ನುವ ನಮ್ಮ ಮೂಲ ಆಹಾರ ಕ್ರಮಕ್ಕೆ ತಿರುಗಿ ಹೋಗಬೇಕು; ಇವುಗಳು ಬಹಳ ಆರೋಗ್ಯಕರ.

ಅದೇ ರೀತಿಯಲ್ಲಿ, ಮೊದಲು ನಾವು ಕೇವಲ ಬೆಲ್ಲವನ್ನು ಬಳಸುತ್ತಿದ್ದೆವು, ಆದರೆ ಈಗ ನಾವು ಬಿಳಿ ಸಕ್ಕರೆಯನ್ನು ಬಳಸುತ್ತಿದ್ದೇವೆ.
ಬಿಳಿ ಸಕ್ಕರೆಯಲ್ಲಿ ಗಂಧಕ ಇದೆಯೆಂಬುದು ನಿಮಗೆ ತಿಳಿದಿದೆಯೇ? ಸಕ್ಕರೆಯಲ್ಲಿರುವ ಗಂಧಕದ ಅಂಶದಿಂದಾಗಿ, ನಮ್ಮ ಶರೀರದಲ್ಲಿರುವ ಕ್ಯಾಲ್ಸಿಯಂ ಬರಿದಾಗುತ್ತದೆ ಮತ್ತು ಅದು ಜನರು ಓಸ್ಟಿಯೋಪೋರೋಸಿಸ್ (ಎಲುಬುಗಳ ಟೊಳ್ಳಾಗುವಿಕೆಯ ರೋಗ) ಹೊಂದುವುದಕ್ಕೆ ಕಾರಣವಾಗುತ್ತದೆ.

ಕೇರಳದಲ್ಲಿ ಶರ್ಕರವನ್ನು ಉಪಯೋಗಿಸುತ್ತಿದ್ದರು. ಅದರಲ್ಲಿ ಬಹಳಷ್ಟು ಖನಿಜಗಳು, ಸತು, ಕಬ್ಬಿಣ ಮತ್ತು ಮೆಗ್ನೀಷಿಯಂ ಲೋಹಗಳಿವೆ. ಇವುಗಳು ನಮ್ಮ ಶರೀರಕ್ಕೆ ಮತ್ತು ನಮ್ಮ ಬುದ್ಧಿಗೆ ಬಹಳ ಒಳ್ಳೆಯದು. ಅದರ ಬದಲು ನಾವು ಬಿಳಿ ಸಕ್ಕರೆಯನ್ನು ಬಳಸುತ್ತಿದ್ದೇವೆ. ಅದು ಗಮನದ ಕೊರತೆಯ ಖಾಯಿಲೆ (ಅಟೆನ್ಷನ್ ಡಿಫಿಶಿಯನ್ಸಿ ಸಿಂಡ್ರೋಮ್) ಮತ್ತು ಇತರ ಹಲವಾರು ರೋಗಗಳಿಗೆ ಕಾರಣವಾಗುತ್ತದೆ.

ಆದುದರಿಂದ, ನಾವೆಲ್ಲರೂ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು.

ಮೊದಲನೆಯದು, ಅನ್ನ ಶುದ್ಧಿ, ಧಾನ್ಯಗಳ ಶುದ್ಧೀಕರಣ. ಒಳ್ಳೆಯ ಆಹಾರ, ಪೌಷ್ಟಿಕ ಆಹಾರ ಮತ್ತು ಸರಿಯಾದ ಪ್ರಮಾಣದ ಆಹಾರ ಮುಖ್ಯವಾಗಿದೆ.

ಎರಡನೆಯದು, ಪ್ರತಿದಿನವೂ ಸ್ವಲ್ಪ, ಸರಿಯಾದ ವ್ಯಾಯಾಮವು ಮುಖ್ಯವಾಗಿದೆ. ನೀವೊಂದು ಕಾರು ಅಥವಾ ಮೋಟಾರ್ ಬೈಕನ್ನು ಹೊಂದಿದ್ದರೂ ಕೂಡಾ, ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ನೀವು ನಡೆಯಲೂಬೇಕು. ಪ್ರತಿದಿನವೂ, ಕಡಿಮೆಯೆಂದರೆ ೨೦ ನಿಮಿಷಗಳವರೆಗಾದರೂ ನಡೆಯುವುದನ್ನು ಅಥವಾ ಯಾವುದಾದರೂ ದೈಹಿಕ ವ್ಯಾಯಾಮ ಮಾಡವುದನ್ನು ಪ್ರಾರಂಭಿಸಿ.

ಮೂರನೆಯದು, ವಾಕ್ಯ ಶುದ್ಧಿ,  ಮಾತಿನ ಶುದ್ಧೀಕರಣ. ಇದು ಬಹಳ ಮುಖ್ಯವಾದುದು. ನೀವು ಬಳಸುವ ಶಬ್ದಗಳು ಇತರ ಜನರಿಗೆ ನೋವುಂಟುಮಾಡದಂತೆ ನೀವೆಲ್ಲರೂ ನೋಡಿಕೊಳ್ಳಬೇಕು. ಯಾರಿಗಾದರೂ ನೋವುಂಟುಮಾಡುವಂತೆ  ನೀವು ಏನನ್ನಾದರೂ ಹೇಳಿದ್ದರೆ ಮತ್ತು ಅವರು ಅಳುತ್ತಿರುವುದಾದರೆ, ಆಗ ಅದು ಎಲ್ಲೋ ನಿಮ್ಮ ಮೇಲೆ ಪರಿಣಾಮ ಬೀರಲಿದೆ.

ನಾಲ್ಕನೆಯದು, ಕರ್ಮ ಶುದ್ಧಿ. ನಾವು ಸೇವೆ ಮಾಡಬೇಕು. ಸೇವೆಯೊಂದಿಗೆ ನಮ್ಮ ಕರ್ಮಗಳು ಶುದ್ಧವಾಗುತ್ತವೆ.

ಐದನೆಯದು, ಧನ ಶುದ್ಧಿ, ಅಂದರೆ, ಸಂಪತ್ತಿನ ಶುದ್ಧೀಕರಣ. ನಾವು ಎಷ್ಟು ಸಂಪಾದಿಸುತ್ತೇವೋ ಅದರಲ್ಲಿ ಕಡಿಮೆಯೆಂದರೆ ಮೂರು ಶೇಕಡಾವನ್ನು ನಾವು ಬದಿಗಿರಿಸಬೇಕು ಮತ್ತು ಅದನ್ನು ಸಮಾಜಕ್ಕಾಗಿ ಬಳಸಬೇಕು. ಆಗ ನಾವು ಸಂಪಾದಿಸುವ ಹಣವು ಶುದ್ಧವಾಗುವುದು. ನಾವು ಸಂಪಾದಿಸುವುದನ್ನೆಲ್ಲಾ ನಾವು ನಮಗಾಗಿಯೇ ಬಳಸಿದರೆ, ಆಗ ಅದು ಹಣದ ಅತ್ಯುತ್ತಮ ಬಳಕೆಯಲ್ಲ. ಆದುದರಿಂದ, ನಾವು ನಮ್ಮ ಸಂಪಾದನೆಯ ಒಂದು ಚಿಕ್ಕ ಭಾಗವನ್ನು ಸಮಾಜಕ್ಕಾಗಿ ಬಳಸಬೇಕು.

ಆರನೆಯದು, ಶರೀರ ಶುದ್ಧಿ. ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ, ನಿಮ್ಮ ಶರೀರವನ್ನು ಶುದ್ಧೀಕರಿಸಲು ಸ್ವಲ್ಪ ತ್ರಿಫಲ ಅಥವಾ ಯಾವುದಾದರೂ ಆಯುರ್ವೇದದ ಉತ್ಪನ್ನಗಳನ್ನು ತೆಗೆದುಕೊಳ್ಳಿ.

ಏಳನೆಯದು, ಭಾವ ಶುದ್ಧಿ, ಅಂದರೆ ಭಾವನೆಗಳ ಶುದ್ಧೀಕರಣ. ಸ್ವಲ್ಪ ಸಮಯದವರೆಗೆ ಸ್ವಲ್ಪ ಸತ್ಸಂಗ ಮಾಡಿ; ಅದು ಭಾವನೆಗಳನ್ನು ಶುದ್ಧೀಕರಿಸುವುದರಿಂದ ಅದು ಆವಶ್ಯಕ.

ಎಂಟನೆಯದು, ಬುದ್ಧಿ ಶುದ್ಧಿ. ಜ್ಞಾನದೊಂದಿಗೆ ಬುದ್ಧಿಯು ಶುದ್ಧವಾಗುತ್ತದೆ. ನೀವು ಜೀವನದ ಕಡೆಗೆ ಒಂದು ವಿಶಾಲ ದೃಷ್ಟಿಕೋನದಿಂದ ನೋಡುವಾಗ ಒಂದು ಶುದ್ಧವಾದ ಬುದ್ಧಿ ಬರುತ್ತದೆ. ನಾನು ಯಾರು? ಈ ವಿಶ್ವವೇನು? ನಾನು ಎಲ್ಲಿಗೆ ಹೋಗುತ್ತಿದ್ದೇನೆ?

ಪ್ರಶ್ನೆ: ಗುರುದೇವ, ಮಕ್ಕಳ ಮೇಲೆ ಹೆಚ್ಚುತ್ತಿರುವ ಒತ್ತಡದೊಂದಿಗೆ, ತಮ್ಮ ವಿದ್ಯಾರ್ಥಿಗಳು ಮಾದಕವಸ್ತುಗಳನ್ನು ಬಳಸುತ್ತಾರೆಂಬುದನ್ನು ಹಲವಾರು ಶಾಲೆಗಳು ಅರಿತಿವೆ. ಆದರೂ, ಅವರು ಯೋಗ ಮತ್ತು ಧ್ಯಾನ ಕಲಿಯುವುದನ್ನು ತಡೆಯುತ್ತಾರೆ. 

ಶ್ರೀ ಶ್ರೀ ರವಿ ಶಂಕರ್: ಅದು ಮೂರ್ಖತನ. ಮಾದಕವಸ್ತುಗಳಿಂದ, ಮದ್ಯದಿಂದ ಮತ್ತು ಇತರ ದುರುಪಯೋಗಗಳಿಂದ ಮಕ್ಕಳನ್ನು ಅವರು ತಡೆಯಬೇಕು. ಒಂದು ಶಾಲೆಯು ಇದರಿಂದ ಮುಕ್ತವಾಯಿತು ಎಂಬುದು ಒಂದು ದೊಡ್ಡ ಸುದ್ದಿಯಾದುದನ್ನು ಓದಿ ನನಗೆ ಬಹಳ ಬೆರಗಾಯಿತು. ನಾವು ೧೪ ಶಾಲೆಗಳನ್ನು ಹೊಂದಿದ್ದೇವೆ, ನಮ್ಮ ಶಾಲೆಗಳಲ್ಲಿ ಯಾವುದೂ ಮದ್ಯ ಅಥವಾ ಮಾದಕವಸ್ತುಗಳಿಗೆ ಹತ್ತಿರವೂ ಇಲ್ಲ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ.

ಇವತ್ತು, ನಮ್ಮ ಶಾಲೆಯು ಮದ್ಯಸಾರ ಮತ್ತು ಮಾದಕವಸ್ತುಗಳಿಂದ ಮುಕ್ತವಾಗಿದೆ ಎಂದು ಹೇಳುವುದು ಒಂದು ಹೆಮ್ಮೆಯ ವಿಷಯವಾಗಿದೆ; ಅದರರ್ಥವೇನೆಂದರೆ, ಅದು ಅಷ್ಟೊಂದು ಸಾಮಾನ್ಯ ವಿಷಯವಾಗಿದೆಯೆಂದು! ಜನರು ಮದ್ಯಸಾರ ಮತ್ತು ಮಾದಕ ವಸ್ತುಗಳ ವಿರುದ್ಧ ಹೋರಾಡಬೇಕು, ಯೋಗ ಮತ್ತು ಧ್ಯಾನಗಳ ವಿರುದ್ಧವಲ್ಲ. ಯೋಗ ಮತ್ತು ಧ್ಯಾನಗಳು ಜನರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತವೆ.

ಪ್ರಶ್ನೆ: ಸಮತಾವಾದ (ಕಮ್ಯುನಿಸಮ್) ಮತ್ತು ಆಧಾತ್ಮಗಳ ನಡುವೆ ಸಾಮಾನ್ಯವಾದುದು ಏನಾದರೂ ಇದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು. ಸಮತಾವಾದವೆಂದರೇನು? ಸಮತಾವಾದದ ಸಾರವೆಂದರೆ, ಎಲ್ಲರೂ ಸಮಾನರು ಎಂಬುದು. ಆಧ್ಯಾತ್ಮವೂ ಅದನ್ನೇ ಹೇಳುತ್ತದೆ. ಕೃಷ್ಣ ಪರಮಾತ್ಮನು ಮೊದಲನೆಯ ಸಮತಾವಾದಿಯಾಗಿದ್ದನು. ಅವನಂದನು, ’ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ| ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ’. ಯಾರು ಎಲ್ಲರಲ್ಲೂ ನನ್ನನ್ನು ಮತ್ತು ಎಲ್ಲರನ್ನೂ ನನ್ನಲ್ಲಿ ನೋಡುವನೋ, ಅವನು ಜ್ಞಾನಿ.

’ಸಮನ್ ಸರ್ವೇಶು ಭೂತೇಶು ತಿಷ್ಠಂತಂ ಪರಮೇಶ್ವರಂ ಪರಿಶತಿ’, ಅಂದರೆ ಎಲ್ಲರನ್ನೂ ಸಮಾನವಾಗಿ ಯಾರು ನೋಡುವನೋ ಅವನು.

’ಶುನಿ ಚೈವ ಶ್ವಪ ಪಕೇ ಚ ಪಂಡಿತಾ ಸಮ  ದರ್ಶಿನಾ’. ಒಬ್ಬ ಪಂಡಿತನು ಯಾರು? ಸಮ ದರ್ಶಿನಾ, ಯಾರು ಎಲ್ಲವನ್ನೂ ಸಮಾನತೆಯೊಂದಿಗೆ ನೋಡುವನೋ ಅವನು ಒಬ್ಬ ಪಂಡಿತನು.

ನೀವು ಭಗವದ್ಗೀತೆಯನ್ನು ತೆರೆದರೆ, ಅದು ಈ ಜ್ಞಾನದಿಂದ ತುಂಬಿದೆಯೆಂಬುದು ನಿಮಗೆ ತಿಳಿಯುವುದು. ಎಲ್ಲರನ್ನೂ ಸಮಾನವಾಗಿ ನೋಡಿ; ಅದು ಸಮತಾವಾದದ ಸಾರವಾಗಿದೆ. ಆಧ್ಯಾತ್ಮವೂ ಕೂಡಾ ಅದೇ ವಿಷಯವನ್ನು ಕಲಿಸುತ್ತದೆ. ವಾಸ್ತವವಾಗಿ, ಆಧ್ಯಾತ್ಮದಲ್ಲಿ, ಅದು ಪ್ರಾಯೋಗಿಕವಾಗುತ್ತದೆ, ಇಲ್ಲದಿದ್ದರೆ ಅದು ಕೇವಲ ಬೌದ್ಧಿಕವಾಗಿ ಉಳಿಯುತ್ತದೆ.

’ನೀವು ಎಲ್ಲರನ್ನೂ ಸಮಾನವಾಗಿ ಯಾಕೆ ನೋಡಬೇಕು?’ ಈ ಪ್ರಶ್ನೆ ಏಳುತ್ತದೆ. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯು ಉತ್ತರವನ್ನು ತಿಳಿದಿರುತ್ತಾನೆ. ಯಾಕೆಂದರೆ, ಎಲ್ಲರಲ್ಲೂ ಇರುವುದು ಒಂದು ದೈವಿಕತೆಯಾಗಿದೆ. ಆದುದರಿಂದ, ನೀವು ಯಾರಿಗಾದರೂ ನೋವುಂಟುಮಾಡುತ್ತಿರುವುದಾದರೆ, ನೀವು ದೇವರಿಗೆ ನೋವುಂಟುಮಾಡುತ್ತಿರುತ್ತೀರಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಯಾರನ್ನೂ ನೋಯಿಸಬಾರದು. ಹೀಗೆ, ನೀವು ಎಲ್ಲರಲ್ಲೂ ಸಮಾನತೆಯನ್ನು ಕಾಣುವಿರಿ.

ಮೌಲ್ಯಗಳು ತಮ್ಮ ನಿಜವಾದ ಶಕ್ತಿಯನ್ನು ಪಡಕೊಳ್ಳುವುದು ಕೇವಲ ಆಧ್ಯಾತ್ಮಿಕ ಜ್ಞಾನದೊಂದಿಗೆ ಮಾತ್ರ. ಇಲ್ಲದಿದ್ದರೆ, ನಾವು ಕೇವಲ ಮೌಲ್ಯಗಳ ಬಗ್ಗೆ ಮಾತನಾಡುತ್ತಿರುತ್ತೇವೆ, ಆದರೆ ಅದು ನಿಜವಾಗಿ ಒಳಕ್ಕೆ ಹೋಗುವುದಿಲ್ಲ. ನಮ್ಮ ಹೃದಯವು ತೆರೆದುಕೊಳ್ಳಬೇಕು.

ನಿಮ್ಮನ್ನು ಪ್ರಾಮಾಣಿಕರನ್ನಾಗಿ ಮಾಡುವುದು, ನಿಮ್ಮ ಹೃದಯವು ತೆರೆದುಕೊಳ್ಳುವಂತೆ ಮಾಡುವುದು ಆಧ್ಯಾತ್ಮವಾಗಿದೆ. ಜನರು ಮಾದಕ ವಸ್ತುಗಳತ್ತ ಅಥವಾ ಮದ್ಯಸಾರದತ್ತ ಅಥವಾ ಇತರ ಪಾಪಗಳತ್ತ ಹೋಗುವಂತೆ ಮಾಡುವುದು ಆಧ್ಯಾತ್ಮದ ಕೊರತೆಯಾಗಿದೆ.