ಗುರುವಾರ, ಜನವರಿ 3, 2013

ಮಕ್ಕಳನ್ನು ಬೆಳೆಸುವ ಕಲೆ


೩ ಜನವರಿ ೨೦೧೩
ಬರ್ಲಿನ್, ಜರ್ಮನಿ

ಪ್ರಶ್ನೆ: ಕೆಲವೊಮ್ಮೆ ಕಷ್ಟಕರವಾದಂತಹ ಈ ಪ್ರಪಂಚದಲ್ಲಿ ನಮ್ಮ ಮಕ್ಕಳು ಸಂತೋಷವಾಗಿ ಬೆಳೆಯುವುದು ಅಪೂರ್ವ ಸಂಗತಿ. ಧ್ಯಾನ ಮಾಡಲು ಅವರು ಇನ್ನೂ ಬಹಳ ಚಿಕ್ಕವರಾಗಿರುವಾಗ, ಬಹಳಷ್ಟು ಪ್ರೀತಿಯ ಹೊರತಾಗಿ ನಾವವರಿಗೆ ಏನನ್ನು ನೀಡಬಹುದು?
ಶ್ರೀ ಶ್ರೀ ರವಿ ಶಂಕರ್: ಅವರೊಂದಿಗೆ ಕೇವಲ ಆಟವಾಡಿ. ಎಲ್ಲಾ ಸಮಯದಲ್ಲೂ ಅವರಿಗೆ ಶಿಕ್ಷಕರಾಗಲು ಪ್ರಯತ್ನಿಸಬೇಡಿ ಮತ್ತು ಅವರಿಗೆ ಕಲಿಸಲು ತೊಡಗಬೇಡಿ. ವಾಸ್ತವವಾಗಿ, ಅವರಿಂದ ಕಲಿಯಿರಿ ಮತ್ತು ಅವರನ್ನು ಗೌರವಿಸಿ. ಮಕ್ಕಳೊಂದಿಗೆ ಬಹಳ ಗಂಭೀರವಾಗಬೇಡಿ.
ಒಬ್ಬ ಮಗುವಾಗಿ ನನಗೆ ನೆನಪಿದೆ, ನನ್ನ ತಂದೆಯವರು ಸಂಜೆ ಮನೆಗೆ ಬರುವಾಗ ಅವರು ಸುಮ್ಮನೇ ಚಪ್ಪಾಳೆ ತಟ್ಟಿ ನಾವು ನಗುವಂತೆ ಮಾಡುತ್ತಿದ್ದರು. ನನ್ನ ತಾಯಿಯವರು ಬಹಳ ಕಟ್ಟುನಿಟ್ಟಾಗಿದ್ದರು, ಆದರೆ ನನ್ನ ತಂದೆ, ನಾವೆಲ್ಲರೂ ರಾತ್ರಿಯ ಊಟಕ್ಕೆ ಹೋಗುವುದರ ಮೊದಲು ಸುಮ್ಮನೇ ಚಪ್ಪಾಳೆ ತಟ್ಟಿ ಎಲ್ಲರೂ ನಗುವಂತೆ ಮಾಡುತ್ತಿದ್ದರು. ಎಲ್ಲರೂ ಒಟ್ಟಿಗೆ ಕೂತು ತಿನ್ನಬೇಕಾಗಿತ್ತು. ಅದರ ಮೊದಲು ಅವರು ಸುಮ್ಮನೇ ಚಪ್ಪಾಳೆ ತಟ್ಟಿ ಎಲ್ಲರನ್ನೂ ಮನೆಯೊಳಗೆ ಸುತ್ತಲೂ ಓಡಿಸುತ್ತಿದ್ದರು. ನಾವು ಊಟಕ್ಕೆ ಕುಳಿತುಕೊಳ್ಳುವ ಮೊದಲು ಪ್ರತಿಯೊಬ್ಬರೂ ನಗಬೇಕಾಗಿತ್ತು.
ಆದುದರಿಂದ ಎಲ್ಲಾ ಸಮಯದಲ್ಲೂ ಅವರಿಗೆ ಕಲಿಸುತ್ತಾ ಇರಬೇಡಿ, ಕೇವಲ ಅವರೊಂದಿಗೆ ಆಚರಿಸಿ, ಅವರೊಂದಿಗೆ ಆಟವಾಡಿ, ಅವರೊಂದಿಗೆ ಹಾಡಿ. ಇದು ಅತ್ಯುತ್ತಮವಾದುದು. ನೀವು ಯಾವತ್ತೂ ಒಂದು ಕೋಲು ತೆಗೆದುಕೊಂಡು, "ಇದನ್ನು ಮಾಡಬೇಡ, ಅದನ್ನು ಮಾಡಬೇಡ" ಎಂದು ಹೇಳಿದರೆ, ಅದು ಒಳ್ಳೆಯದಲ್ಲ.
ನನಗನ್ನಿಸುತ್ತದೆ, ಮಕ್ಕಳೊಂದಿಗೆ ನೀವು ಹೆಚ್ಚು ಆಟವಾಡಬೇಕು ಮತ್ತು ಕೆಲವೊಮ್ಮೆ ಅವರಿಗೆ ಕಥೆಗಳನ್ನು ಹೇಳಬೇಕು. ನಾವು ಮಕ್ಕಳಾಗಿದ್ದಾಗ ನಾವು ಬಹಳಷ್ಟು ಒಳ್ಳೆಯ ಕಥೆಗಳನ್ನು ಕೇಳುತ್ತಿದ್ದೆವು. ಪ್ರತಿದಿನವೂ ಒಂದು ಕಥೆ. ಈ ರೀತಿಯಲ್ಲಿ ಮೌಲ್ಯಗಳೊಂದಿಗೆ ಮಕ್ಕಳನ್ನು ಬೆಳೆಸುವುದು ಒಳ್ಳೆಯದು. ನೀವು ಅವರಿಗೆ ಒಳ್ಳೆಯ ಆಸಕ್ತಿಕರ ಕಥೆಗಳನ್ನು ಹೇಳಿದರೆ, ಆಗ ಅವರು ತಮ್ಮನ್ನು ದೂರದರ್ಶನಕ್ಕೆ ಅಂಟಿಸಿಕೊಂಡು ಯಾವತ್ತೂ ಅಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಮಕ್ಕಳಿಗಾಗಿ ಹಲವಾರು ಕಥೆಗಳಿವೆ; ಪಂಚತಂತ್ರವಿದೆ. ನಮ್ಮ ಭಕ್ತರಲ್ಲೊಬ್ಬರು ಪಂಚತಂತ್ರದ ಕಾರ್ಟೂನುಗಳನ್ನು ಕೂಡಾ ಮಾಡುತ್ತಿದ್ದಾರೆ. ಬೇಗನೇ ಅದು ಹೊರಬರಲಿದೆ.
ಆದುದರಿಂದ, ಹೆತ್ತವರು ಮಕ್ಕಳೊಂದಿಗೆ ಕುಳಿತುಕೊಂಡು ಅವರಿಗೆ ನೀತಿಗಳಿರುವ ಕಥೆಗಳನ್ನು ಹೇಳುವುದು ಒಳ್ಳೆಯದು. ಒಂದು ನೀತಿಯಿರುವ ಕಥೆಯು ಒಳ್ಳೆಯದು, ಮತ್ತು ನೀವು ನಿಮ್ಮ ಮಕ್ಕಳೊಂದಿಗೆ ಒಂದು ಗಂಟೆ ಅಥವಾ ಅರ್ಧ ಗಂಟೆಯ ಗುಣಮಟ್ಟದ ಸಮಯವನ್ನು ಕಳೆದರೆ, ಅದು ಸಾಕು.
ಹಾಗೆಯೇ, ಐದರಿಂದ ಆರು ಗಂಟೆಗಳ ಕಾಲ ಅವರೊಂದಿಗೆ ಕುಳಿತುಕೊಂಡು ಅವರ ಉಸಿರುಗಟ್ಟಿಸಬೇಡಿ. ೪೫ ನಿಮಿಷಗಳಿಂದ ಒಂದು ಗಂಟೆಯ ವರೆಗಿನ ಗುಣಮಟ್ಟದ ಸಮಯವು ಒಳ್ಳೆಯದು, ಮತ್ತು ಈ ಸಮಯವು ಬಹಳ ಆಸಕ್ತಿಕರವಾಗಿರಬೇಕು. ಅವರು ನಿಮ್ಮೊಂದಿಗೆ ಕುಳಿತು ಕಥೆಗಳನ್ನು ಕೇಳುವುದಕ್ಕೆ ಎದುರುನೋಡುತ್ತಿರಬೇಕು.
ನನಗೆ ನೆನಪಿದೆ, ನನಗೊಬ್ಬರು ಮಾವನಿದ್ದರು. ಅವರು ಬಹಳ ದಪ್ಪಗೆ, ಬೆಳ್ಳಗಿದ್ದರು ಹಾಗೂ ಉರುಟು ಮುಖವನ್ನು ಹೊಂದಿದ್ದರು. ಪ್ರತಿ ಭಾನುವಾರ ಅವರು ನಮ್ಮ ಮನೆಗೆ ಬರುತ್ತಿದ್ದರು ಮತ್ತು ನಮಗೆ ಕಥೆಗಳನ್ನು ಹೇಳುತ್ತಿದ್ದರು. ನಾವೆಲ್ಲರೂ ಅವರೊಂದಿಗೆ ಕುಳಿತುಕೊಳ್ಳುತ್ತಿದ್ದೆವು ಮತ್ತು ಅವರು ನಮಗೆ ಒಳ್ಳೆಯ ಕಥೆಗಳನ್ನು ಹೇಳುತ್ತಿದ್ದರು ಹಾಗೂ ಮುಂದಿನ ಸಲ, ಮುಂದೇನಾಗುವುದೆಂದು ತಿಳಿಯಲು ನಾವು ಬಹಳ ಕುತೂಹಲಿಗಳಾಗಿರಲೆಂದು ಅವರು ಕೊನೆಯಲ್ಲಿ ಸ್ವಲ್ಪ ಅನಿಶ್ಚಿತ ಸ್ಥಿತಿಯನ್ನು ಬಿಡುತ್ತಿದ್ದರು.
ಹೀಗೆ ನಮ್ಮ ನಡುವೆ ಅಂತಹ ವ್ಯಕ್ತಿತ್ವಗಳಿವೆ. ಇಲ್ಲದಿದ್ದರೆ, ನಿಮ್ಮದೇ ಮಗು ಹೋಗಿ ಬೇರೆ ಕೆಲವು ಮಕ್ಕಳಿಗೆ ಕಥೆಗಳನ್ನು ಹೇಳಬಹುದು. ಅವರ ಹೆತ್ತವರು ಕೂಡಾ ಬಹಳ ಸಂತೋಷಗೊಳ್ಳುವರು. ಮಕ್ಕಳನ್ನು ಕುಳ್ಳಿರಿಸಲು ಅವರಿಗೆ ಯಾರಾದರೂ ಸಿಗುತ್ತಾರೆ ಮತ್ತು ಅದು ನಿಮ್ಮ ಸೇವಾ ಕಾರ್ಯ ಕೂಡಾ ಆಗಬಹುದು.
ಆದುದರಿಂದ, ಆ ಮಾನವ ಸ್ಪರ್ಶದ ಅಗತ್ಯವಿದೆ.
ಇವತ್ತು ಮಕ್ಕಳು, ಬೆಳಗ್ಗೆ ಏಳುವ ಸಮಯದಿಂದ ಹಿಡಿದು ಟಿವಿಯ ಮುಂದೆ ಒಂದು ಭಾಗವಹಿಸದಿರುವ ಸಾಕ್ಷಿಯಂತೆ ಕುಳಿತುಕೊಳ್ಳುತ್ತಾರೆ; ಅಲ್ಲವೇ? ಮಕ್ಕಳು ಟಿವಿಯ ಮುಂದೆ ಕುಳಿತುಕೊಂಡು ಚ್ಯಾನೆಲ್ ಬದಲಾಯಿಸುತ್ತಾ ಹೋಗುತ್ತಾರೆ. ತಾಯಿಯು ಬಂದು ಹೇಳುತ್ತಾಳೆ, "ತಿಂಡಿ ತಿನ್ನಲು ಬಾ", ಮತ್ತು ಅವರು ಮಿಸುಕಾಡುವುದೇ ಇಲ್ಲ. ಕೆಲವೊಮ್ಮೆ, ತಾಯಿಯು ಅವರ ತಿಂಡಿಯನ್ನು ಟಿವಿಯ ಮುಂದೆ ತರಬೇಕಾಗುತ್ತದೆ. ಈ ರೀತಿಯ ಸಂಸ್ಕೃತಿಯು ಒಳ್ಳೆಯದಲ್ಲ. ನಿಮಗೇನನ್ನಿಸುತ್ತದೆ? ನಿಮ್ಮಲ್ಲಿ ಎಷ್ಟು ಮಂದಿ ನಾನು ಹೇಳುವುದನ್ನು ಒಪ್ಪುತ್ತೀರಿ?
ಮಕ್ಕಳಿಗೆ ಒಂದು ಗಂಟೆಗಿಂತ ಹೆಚ್ಚು ಕಾಲ ಟಿವಿ ತೋರಿಸಬಾರದು. ಟಿವಿಯ ಸಮಯವನ್ನು ನೀವು ಸೀಮಿತಗೊಳಿಸಬೇಕು, ಇಲ್ಲದಿದ್ದರೆ ಮಕ್ಕಳಿಗೆ ಈ ಗಮನದ ಕೊರತೆಯ ಖಾಯಿಲೆ ಬರುತ್ತದೆ. ಮೆದುಳಿನ ಮೇಲೆ ಈ ಎಲ್ಲಾ ಚಿತ್ರಗಳ ಸುರಿಮಳೆ ಎಷ್ಟೊಂದಾಗುವುದೆಂದರೆ, ಬೇರೆ ಏನನ್ನಾದರೂ ನೋಂದಾಯಿಸಿಕೊಳ್ಳಲು ಅದು ವಿಫಲವಾಗುತ್ತದೆ ಮತ್ತು ನಂತರ ಮಕ್ಕಳು ಬಹಳಷ್ಟು ಮಂಕಾಗುತ್ತಾರೆ. ಅವರಿಗೆ ಯಾವುದಕ್ಕೂ ಗಮನ ನೀಡಲು ಸಾಧ್ಯವಾಗುವುದಿಲ್ಲ. ದೇವರ ದಯೆ, ನಾವು ಮಕ್ಕಳಾಗಿರುವಾಗ ನಮ್ಮ ಬಳಿ ಟಿವಿಯಿರಲಿಲ್ಲ. ನಿಮ್ಮಲ್ಲಿ ಎಷ್ಟು ಮಂದಿ ಟಿವಿಯಿಲ್ಲದೆ ಬೆಳೆದಿರಿ? ನಾವೆಲ್ಲರೂ ಟಿವಿಯಿಲ್ಲದೆ ಬೆಳೆದೆವು.
ಆದುದರಿಂದ ಹೆಚ್ಚು ಟಿವಿಯೊಂದಿಗೆ ಬೆಳೆಯುವ ಮಕ್ಕಳು ಅಷ್ಟೊಂದು ಬುದ್ಧಿವಂತರಾಗಿರುವಂತೆ ಕಾಣಿಸುವುದಿಲ್ಲ. ನೀವು ಟಿವಿಯನ್ನು ಒಂದು ದಿನದಲ್ಲಿ ಹೆಚ್ಚೆಂದರೆ ಎರಡು ಗಂಟೆಗಳಿಗೆ ಸೀಮಿತಗೊಳಿಸಬೇಕು.
ದೊಡ್ಡವರಿಗೆ ಕೂಡಾ, ಒಂದು ಅಥವಾ ಎರಡು ಗಂಟೆಗಳು ಸಾಕು, ಅದಕ್ಕಿಂತ ಹೆಚ್ಚು ಬೇಡ. ದೊಡ್ಡವರಿಗೆ ಕೂಡಾ ಅದು ಅತಿಯಾಗುತ್ತದೆ. ನಿಮಗೆ ಗೊತ್ತಾ, ಅತಿಯಾಗಿ ಟಿವಿ ನೋಡುವುದರಿಂದ ಮೆದುಳಿನಲ್ಲಿರುವ ಈ ಎಲ್ಲಾ ನರಗಳು ಬಹಳಷ್ಟು ಬಳಲುತ್ತವೆ.
ಕೆಲವೊಮ್ಮೆ ಜನರು, "ಗುರುದೇವ, ಇದು ಬಹಳ ಚೆನ್ನಾಗಿದೆ" ಎಂದು ಹೇಳುತ್ತಾ ಟಿವಿ ನೋಡಲು ನನ್ನನ್ನು ಒತ್ತಾಯಪಡಿಸುತ್ತಾರೆ. ಅರ್ಧ ಗಂಟೆಯಿಂದ ಒಂದು ಗಂಟೆಗಿಂತ ಹೆಚ್ಚು ಕಾಲ ನೋಡಲು ನನಗೆ ಸಾಧ್ಯವಾಗುವುದಿಲ್ಲ. ಅದು ನಿಜವಾಗಿ ಮನಸ್ಸನ್ನು ಬಳಲಿಸುತ್ತದೆ. ಜನರು ಒಂದು ವಾರಕ್ಕೆ ಎರಡರಿಂದ ಮೂರು ಸಿನೆಮಾಗಳನ್ನು ಹೇಗೆ ನೋಡುತ್ತಾರೆ ಎಂದು ನನಗೆ ಅಚ್ಚರಿಯಾಗುತ್ತದೆ. ನಿಜವಾಗಿ ನಾವು ನಮ್ಮ ಮೆದುಳಿನ ಕೋಶಗಳನ್ನು ಹಾಳುಮಾಡುತ್ತಿದ್ದೇವೆ.
ಚಿತ್ರಮಂದಿರಗಳಿಂದ ಹೊರಬರುವ ಜನರನ್ನು ನೋಡಿ, ಅವರು ಸಮೃದ್ಧವಾಗಿ, ಚೈತನ್ಯಭರಿತವಾಗಿ ಮತ್ತು ಸಂತೋಷವಾಗಿರುವಂತೆ ಕಾಣಿಸುತ್ತಾರೆಯೇ? ಅವರು ಚಿತ್ರಮಂದಿರಗಳ ಒಳಗೆ ಹೋಗುವ ರೀತಿ ಹೇಗಿರುತ್ತದೆ, ಅವರು ಹೊರಗೆ ಬಂದಾಗ ಹೇಗೆ ಕಾಣಿಸುತ್ತಾರೆ? ಚಲನಚಿತ್ರವು ಎಷ್ಟೇ ಒಳ್ಳೆಯದಿದ್ದರೂ, ಅವರು ಬಳಲಿಹೋದಂತೆ; ಸಂಪೂರ್ಣವಾಗಿ ದಣಿದಂತೆ ಮತ್ತು ಮಂಕಾದಂತೆ ಕಾಣಿಸುತ್ತಾರೆ, ಅಲ್ಲವೇ?
ನೀವು ಗಮನಿಸಿರದಿದ್ದರೆ, ಒಂದು ಚಿತ್ರಮಂದಿರದ ಹೊರಗಡೆ ಸುಮ್ಮನೇ ನಿಂತುಕೊಳ್ಳಿ. ಜನರು ಚಿತ್ರಮಂದಿರದ ಒಳಗೆ ಹೋಗುವಾಗ ಮತ್ತು ಅವರು ಹೊರಗೆ ಬರುವಾಗ ನೀವು ನೋಡಬೇಕು. ನಿಮಗೊಂದು ಸ್ಪಷ್ಟ ವ್ಯತ್ಯಾಸವು ಕಾಣಿಸುತ್ತದೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಗಮನಿಸಿದ್ದೀರಿ? ನಿಮ್ಮಲ್ಲಿ ಕೂಡಾ. ಯಾವುದೇ ಮನೋರಂಜನಾ ವಿನೋದವು ನಿಮ್ಮನ್ನು ಚೈತನ್ಯಗೊಳಿಸಬೇಕು, ಆದರೆ ಚಲನಚಿತ್ರಗಳನ್ನು ನೋಡುವುದರೊಂದಿಗೆ ಅದು ಆ ರೀತಿ ಆಗುವುದಿಲ್ಲ.
ನೀವೊಂದು ನೇರವಾದ ಕಾರ್ಯಕ್ರಮಕ್ಕೆ ಹೋಗುವಿರಿ ಎಂದಿಟ್ಟುಕೊಳ್ಳೋಣ, ಇದು ಅದಕ್ಕಿಂತ ಸ್ವಲ್ಪ ಹೆಚ್ಚು ಒಳ್ಳೆಯದು, ನಿಮಗೆ ಅಷ್ಟೊಂದು ದಣಿವಾಗುವುದಿಲ್ಲ. ನೀವೊಂದು ನೇರವಾದ ಸಂಗೀತ ಕಾರ್ಯಕ್ರಮಕ್ಕೆ ಹೋಗುವಿರಿ, ಅದು ಅಷ್ಟೊಂದು ಮಾಡುವುದಿಲ್ಲ. ನಿಮಗೆ ದಣಿವಾಗುತ್ತದೆ, ಆದರೆ ಅಷ್ಟೊಂದಲ್ಲ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಗಮನಿಸಿರುವಿರಿ? ಮತ್ತು ನೀವು ಸತ್ಸಂಗಕ್ಕೆ ಬರುವಾಗ, ಅದು ತದ್ವಿರುದ್ಧ. ನೀವು ಒಳಕ್ಕೆ ಬರುವಾಗ ನಿಮಗೆ ಬೇರೆಯ ಅನುಭವವಾಗುತ್ತದೆ, ಮತ್ತು ನೀವು ಹೊರಕ್ಕೆ ಹೋಗುವಾಗ ನಿಮಗೆ ನಿಮ್ಮಲ್ಲಿ ಚೈತನ್ಯ ಬಂದ ಅನುಭವವಾಗುತ್ತದೆ.

ಪ್ರಶ್ನೆ: ಚಿಕ್ಕ ಮಕ್ಕಳಿಗೆ ಭಯಾನಕವಾದ ಕಾಲ್ಪನಿಕ ಕಥೆಗಳನ್ನು ಹೇಳಬೇಕೆಂದು ನಿಮಗನಿಸುತ್ತದೆಯೇ, ಯಾಕೆಂದರೆ ಭಯಾನಕವಾಗಿರುವ ಕೆಲವು ಜರ್ಮನಿಯ ಕಥೆಗಳಿವೆ ಮತ್ತು ಅವುಗಳನ್ನು ಅವರಿಗೆ ಹೇಳಬಾರದೆಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. 
ಶ್ರೀ ಶ್ರೀ ರವಿ ಶಂಕರ್: ಕಾಲ್ಪನಿಕ ಕಥೆಗಳನ್ನು ಮಿತವಾಗಿಟ್ಟುಕೊಳ್ಳಬೇಕು. ಒಂದು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಯಾವುದೇ ಭಯಾನಕ ಕಥೆಗಳನ್ನು ಹೇಳಲಿಲ್ಲವೆಂದಿಟ್ಟುಕೊಳ್ಳಿ, ನಂತರ ಅವರು ಬೆಳೆದು ದೊಡ್ಡವರಾಗಿ ಅವುಗಳ ಬಗ್ಗೆ ತಿಳಿದಾಗ, ಅದು ಅವರಿಗೆ ಇನ್ನೂ ಹೆಚ್ಚು ಭಯವನ್ನುಂಟುಮಾಡುವುದು. ಅದು ಅವರನ್ನು ಬಹಳ ದುರ್ಬಲರನ್ನಾಗಿ ಮಾಡುವುದು.
ಅದೇ ಸಮಯದಲ್ಲಿ ನೀವು ಅವರಿಗೆ ಅತಿಯಾಗಿ ಭಯಾನಕ ವಿಷಯಗಳನ್ನು ಹೇಳಿದರೆ, ಆಗ ಅವರು ಭಯದೊಂದಿಗೆ ಗೀಳಿಗೆ ಬೀಳಬಹುದು. ಎರಡೂ ವಿಪರೀತಗಳನ್ನು ತಡೆಯಬೇಕು. ಸ್ವಲ್ಪ ಭಯಾನಕ ವಿಷಯಗಳು ಇರಬಹುದು ಆದರೆ ಅತಿಯಾಗಿ ಅಲ್ಲ; ವಿಶೇಷವಾಗಿ ವಿಡಿಯೋ ಗೇಮುಗಳು. ವಿಡಿಯೋ ಗೇಮುಗಳು ಹಿಂಸಾತ್ಮಕವಾಗಿರಬಾರದೆಂದು ನನಗನಿಸುತ್ತದೆ. ಮಕ್ಕಳು ವಿಡಿಯೋ ಪರದೆಯಲ್ಲಿ ಗುಂಡುಹೊಡೆಯುತ್ತಾರೆ ಮತ್ತು ಅದು ಕೇವಲ ಒಂದು ಆಟವೆಂದು ಯೋಚಿಸುತ್ತಾರೆ ಹಾಗೂ ನಂತರ ನಿಜಜೀವನದಲ್ಲಿ ಅವರು ಜನರಿಗೆ ಗುಂಡು ಹೊಡೆಯಲು ಶುರು ಮಾಡುತ್ತಾರೆ, ಯಾಕೆಂದರೆ ತಾತ್ವಿಕ (ವರ್ಚುವಲ್) ಪ್ರಪಂಚ ಮತ್ತು ನಿಜ ಪ್ರಪಂಚದ ನಡುವೆ ಅವರಿಗೆ ವ್ಯತ್ಯಾಸ ಕಾಣಿಸುವುದಿಲ್ಲ. ಇದೊಂದು ಸಮಸ್ಯೆ. ಆದುದರಿಂದ ಮಕ್ಕಳಲ್ಲಿ ಹಿಂಸಾತ್ಮಕ ವಿಡಿಯೋ ಗೇಮುಗಳಿರಬಾರದೆಂಬುದು ನನ್ನ ಅಭಿಪ್ರಾಯ.

ಪ್ರಶ್ನೆ: ಎಲ್ಲಾ ಸಂಬಂಧಗಳು ಪೂರ್ವ ಕರ್ಮವನ್ನು ಆಧರಿಸಿವೆಯೇ?
ಶ್ರೀ ಶ್ರೀ ರವಿ ಶಂಕರ್: ಹೌದು. ನಿಮಗೆ ಗೊತ್ತಾ, ಕೆಲವೊಮ್ಮೆ ಜಗತ್ತಿಗೆ ಬರಲು ಬಯಸುವ ಒಂದು ಆತ್ಮವು ಒಬ್ಬ ಪುರುಷ ಮತ್ತು ಒಬ್ಬಳು ಸ್ತ್ರೀಯನ್ನು ಆಯ್ಕೆ ಮಾಡುತ್ತದೆ ಹಾಗೂ ನಂತರ ಅವರ ನಡುವೆ ಬಹಳಷ್ಟು ಆಕರ್ಷಣೆಯನ್ನು ಸೃಷ್ಟಿಸುತ್ತದೆ. ಹಾಗೆ ಈ ಇಬ್ಬರು ವ್ಯಕ್ತಿಗಳು ಹತ್ತಿರ ಬರುತ್ತಾರೆ ಮತ್ತು ಅವರಿಗೆ ಮೊದಲನೆಯ ಮಗುವಾದ ಕ್ಷಣದಲ್ಲಿಯೇ ಇದ್ದಕ್ಕಿದ್ದಂತೆ ಅವರ ನಡುವಿನ ಎಲ್ಲಾ ಪ್ರೀತಿ ಮಾಯವಾಗುತ್ತದೆ. ಅಂತಹ ಸಂಗತಿ ಆಗುವುದನ್ನು ನಿಮ್ಮಲ್ಲಿ ಎಷ್ಟು ಮಂದಿ ನೋಡಿರುವಿರಿ?
ಆದುದರಿಂದ ಮೊದಲನೆಯ ಮಗುವಿನ ನಂತರ, ಆತ್ಮದ ಕೆಲಸವು ಮುಗಿದ ಕಾರಣ; ಅದು ಜಗತ್ತಿಗೆ ಬಂದ ಕಾರಣ, ನಂತರ ಅದು ಹೆತ್ತವರು ಏನು ಮಾಡುತ್ತಾರೆ ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಆದುದರಿಂದ ಇದ್ದಕ್ಕಿದ್ದಂತೆಯೇ ಮೊದಲನೆಯ ಮಗುವಿನ ಬಳಿಕ, ದಂಪತಿಗಳು ಎಲ್ಲಾ ಆಕರ್ಷಣೆಯನ್ನು ಕಳೆದುಕೊಳ್ಳುತ್ತಾರೆ.
ಯಾವತ್ತೂ ಅಲ್ಲ. ಎಲ್ಲರಿಗೂ ಯಾವತ್ತೂ ಹೀಗೆ ಎಂದು ಯೋಚಿಸಬೇಡಿ. ಕೆಲವು ಪ್ರಕರಣಗಳಲ್ಲಿ ಹೀಗೆ ಆಗುತ್ತದೆ. ಕೆಲವೊಮ್ಮೆ ಅದು ಮೂರನೆಯ ಅಥವಾ ಐದನೆಯ ಮಗುವಿನ ಬಳಿಕ ಕೂಡಾ ಆಗುತ್ತದೆ. ಇದ್ದಕ್ಕಿದ್ದಂತೆಯೇ ಅವರಿಗೆ ಪರಸ್ಪರರನ್ನು ಸಹಿಸಲು ಸಾಧ್ಯವಾಗುವುದಿಲ್ಲ, ಯಾಕೆಂದರೆ, ಜಗತ್ತಿಗೆ ಬರಲು ಬಯಸಿದ ಆತ್ಮದಿಂದ ಅವರ ವ್ಯಕ್ತಿತ್ವಗಳನ್ನು ಕೃತಕವಾಗಿ ಹತ್ತಿರ ತರಲಾಯಿತು.
ಹೀಗೆ ಇದು ಆಗುತ್ತಿದೆ, ಆದರೆ ಯಾವತ್ತೂ ಅಲ್ಲ; ಸುಮಾರು ೩೦% ಎಂದು ಹೇಳಬಹುದು, ಮತ್ತು ಅವರು ಖಂಡಿತವಾಗಿ ವಿಚ್ಛೇದನ ಪಡೆಯುತ್ತಾರೆ ಯಾಕೆಂದರೆ ಈ ಪ್ರಕರಣಗಳಲ್ಲಿ ಆ ಇಬ್ಬರು ವ್ಯಕ್ತಿಗಳಲ್ಲಿ ಹೊಂದಾಣಿಕೆ ಇರುವುದೇ ಇಲ್ಲ. ಅವರ ನಡುವೆ ಯಾವ ಹೊಂದಾಣಿಕೆಯೂ ಇರುವುದಿಲ್ಲ. ಇದ್ದಕ್ಕಿದ್ದಂತೆಯೇ ಒಬ್ಬರಿಗೆ ತೋರುತ್ತದೆ, "ಓ, ನಾವು ಜೀವನದ ಆತ್ಮಸಂಗಾತಿಗಳೆಂದು ನಾವು ಯೋಚಿಸಿದೆವು ಮತ್ತು ಏನಾಯಿತು? ನಾನು ಸಂಪೂರ್ಣವಾಗಿ ವಿಭಿನ್ನ ಮತ್ತು ನಾವು ಯಾವತ್ತಿಗೂ ಪರಸ್ಪರ ಹೊಂದಾಣಿಕೆಯಾಗಲು ಸಾಧ್ಯವಿಲ್ಲ." ಈ ವಿಷಯ ಏಳುತ್ತದೆ.
ಜೀವನವೆಂದರೆ ಹಾಗೆ, ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ. ನೀವು ಒಬ್ಬರಿಗೆ ಯಾವುದೇ ಒಳ್ಳೆಯದನ್ನೂ ಮಾಡಲಿಲ್ಲ ಮತ್ತು ಅವರು ನಿಮಗೆ ಒಳ್ಳೆಯದನ್ನು ಮಾಡಲು ತೊಡಗಿದ್ದಾರೆ.
ಆದುದರಿಂದ ಮಿತ್ರರು ಅಥವಾ ಶತ್ರುಗಳು, ಅದೊಂದು ವಿಷಯವಲ್ಲ. ನಿಮ್ಮ ಜೀವನವು ಕರ್ಮದ ಯಾವುದೋ ಬೇರೆಯ ನಿಯಮಗಳಿಂದ ನಡೆಯುತ್ತದೆ. ಅದಕ್ಕಾಗಿಯೇ, ನಿಮ್ಮ ಎಲ್ಲಾ ಮಿತ್ರರು ಮತ್ತು ಶತ್ರುಗಳನ್ನು ಒಂದು ಬುಟ್ಟಿಯಲ್ಲಿ ಹಾಕಿ, ಯಾಕೆಂದರೆ ಒಂದು ಹತ್ತು ವರ್ಷಗಳ ಗೆಳೆತನವು ಶತ್ರುತ್ವವಾಗಿ ಬದಲಾಗಬಲ್ಲದು ಮತ್ತು ಒಬ್ಬ ಶತ್ರುವು ಯಾವುದೇ ಸಮಯದಲ್ಲೂ ನಿಮ್ಮ ಒಬ್ಬ ಉತ್ತಮ ಮಿತ್ರನಾಗಬಲ್ಲನು. ಅದೆಲ್ಲವೂ ನಿಮ್ಮ ಮೇಲೆ ಮತ್ತು ನಿಮ್ಮ ಕರ್ಮದ ಮೇಲೆ ಅವಲಂಬಿಸಿದೆ.

ಪ್ರಶ್ನೆ: ಒಬ್ಬರು ಪ್ರೀತಿಪಾತ್ರರ ಸಾವನ್ನು ಸ್ವೀಕರಿಸಲಿರುವ ಒಂದು ಒಳ್ಳೆಯ ಮಾರ್ಗ ಯಾವುದು?
ಶ್ರೀ ಶ್ರೀ ರವಿ ಶಂಕರ್: ಸಮಯವು ತನ್ನದೇ ಆದ ಪಥವನ್ನು ತೆಗೆದುಕೊಳ್ಳುತ್ತದೆ. ಸ್ವೀಕರಿಸಲು ಅಥವಾ ಏನನ್ನಾದರೂ ಮಾಡಲು ಪ್ರಯತ್ನಿಸಬೇಡಿ. ಅಲ್ಲಿ ಆ ಚುಚ್ಚುವಿಕೆ ಇದ್ದರೆ, ಅದು ಇದೆ, ಅದು ಹೋಗುತ್ತದೆ. ಸಮಯವು ಅತ್ಯಂತ ದೊಡ್ದ ವೈದ್ಯನಾಗಿದೆ. ಸಮಯ ಕಳೆದಂತೆಲ್ಲಾ ಅದು ನಿಮ್ಮನ್ನು ಕೇವಲ ಮುಂದು ಮುಂದಕ್ಕೆ ಒಯ್ಯುತ್ತದೆ. ಆದುದರಿಂದ ಏನನ್ನಾದರೂ ಮಾಡಲು ಪ್ರಯತ್ನಿಸಬೇಡಿ, ಸಮಯವು ಅದನ್ನು ನೋಡಿಕೊಳ್ಳುತ್ತದೆ. ಅಥವಾ ಎಚ್ಚೆತ್ತುಕೊಳ್ಳಿ ಮತ್ತು ಪ್ರತಿಯೊಬ್ಬರೂ ಒಂದು ದಿನ ಹೋಗಲಿದ್ದಾರೆ ಎಂಬುದನ್ನು ನೋಡಿ. ಅವರೊಂದು ಮುಂಚಿತವಾದ ವಿಮಾನವನ್ನು ಹತ್ತಿದರು, ನೀವೊಂದು ನಂತರದ ವಿಮಾನವನ್ನು ಹತ್ತಲಿರುವಿರಿ. ಅಷ್ಟೇ.
ಆದುದರಿಂದ ಈಗಾಗಲೇ ಹೋಗಿರುವ ಜನರಿಗೆ, "ಸ್ವಲ್ಪ ವರ್ಷಗಳ ನಂತರ ನಾನು ನಿಮ್ಮನ್ನು ಅಲ್ಲಿ ಭೇಟಿಯಾಗುವೆನು" ಎಂದು ಹೇಳಿ. ಈಗಿನ ಮಟ್ಟಿಗೆ ಟಾಟಾ ಎಂದು ಹೇಳಿ. ನೀವವರನ್ನು ಆನಂತರ ಇನ್ನೊಂದು ಜಾಗದಲ್ಲಿ ಭೇಟಿಯಾಗುವಿರಿ.

ಪ್ರಶ್ನೆ: ನನಗೆ ಯಾವುದೇ ಕುಟುಂಬವಿಲ್ಲ, ಒಬ್ಬಂಟಿತನದ ಅನುಭವ ಕಡಿಮೆಯಾಗಲು ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ನಾನು ನಿನಗೆ ಅಷ್ಟೊಂದು ದೊಡ್ಡ ಕುಟುಂಬವನ್ನು, ಒಂದು ನಿಜವಾದ ಕುಟುಂಬವನ್ನು ಮತ್ತು ನಿನ್ನ ಬಗ್ಗೆ ನಿಜವಾದ ಕಾಳಜಿ ತೆಗೆದುಕೊಳ್ಳುವ ಒಂದು ಕುಟುಂಬವನ್ನು ನೀಡಿದ್ದೇನೆ. ನಿನಗೆ ಯಾವುದೇ ಕುಟುಂಬವಿಲ್ಲವೆಂದು ಯಾವತ್ತಿಗೂ ಅಂದುಕೊಳ್ಳಬೇಡ, ನಾನು ನಿನ್ನ ಕುಟುಂಬ. ಅದಕ್ಕಾಗಿಯೇ ನಾನು ಪ್ರತಿವರ್ಷವೂ ಕ್ರಿಸ್ಮಸ್ ಮತ್ತು ಹೊಸ ವರ್ಷದಂದು ಇಲ್ಲಿಗೆ ಬರುವುದು. ಅಲ್ಲದಿದ್ದರೆ ನಾನು ಯಾಕೆ ಬರಬೇಕು?!

ಪ್ರಶ್ನೆ: ನಿಮ್ಮನ್ನು ಸಂತೋಷಗೊಳಿಸಲಿರುವ ಅತ್ಯುತ್ತಮ ವಿಧಾನ ಯಾವುದು?
ಶ್ರೀ ಶ್ರೀ ರವಿ ಶಂಕರ್: ನೀನು ಸಂತೋಷವಾಗಿರುವುದು ಮತ್ತು ಇತರರು ಸಂತೋಷವಾಗಿರುವಂತೆ ಮಾಡುವುದು. ನೀನು ಪ್ರಯತ್ನಿಸಿ ನಾನು ಸಂತೋಷಪಡುವಂತೆ ಮಾಡಬೇಕಾಗಿಲ್ಲ, ನಾನು ಹೇಗಿದ್ದರೂ ಸಂತೋಷವಾಗಿದ್ದೇನೆ. ಆದರೆ ನೀನು ಇತರರಿಗೆ ಸಹಾಯ ಮಾಡಬಲ್ಲೆಯಾದರೆ ನಾನು ಹೆಚ್ಚು ಸಂತೋಷಪಡುತ್ತೇನೆ. ಕೇವಲ ಅವರಿಗೆ ಸ್ವಲ್ಪ ಉಡುಗೊರೆಗಳನ್ನು ಕೊಡುವುದರಿಂದಲೋ ಅಥವಾ ಅವರಿಗೆ ಒಂದು ಔತಣಕೂಟವನ್ನು ಏರ್ಪಡಿಸುವುದರಿಂದಲೋ ಅಲ್ಲ, ಆದರೆ ಅವರಿಗೆ ಜ್ಞಾನವನ್ನು ನೀಡಿ, ಅವರನ್ನು ಬಹಳ ಶಕ್ತಿಶಾಲಿಗಳನ್ನಾಗಿ ಮಾಡುವುದರಿಂದ. ನೀನು ಜನರನ್ನು ಈ ಜ್ಞಾನದ ಕಡೆಗೆ ತರಬಲ್ಲೆಯಾದರೆ, ಅದು ಅತ್ಯುತ್ತಮವಾದುದು.  
ಜನರು ಅಷ್ಟಾವಕ್ರ ಗೀತೆಯನ್ನು ಕೇಳುವಾಗ, ತಮ್ಮ ಜೀವನವು ಪರಿವರ್ತನೆಯಾಯಿತೆಂದು ಅವರು ಹೇಳುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ) ನೀವು ಅಷ್ಟಾವಕ್ರ ಗೀತೆಯನ್ನು ಕೇಳುವಾಗ, ಜೀವನದ ಕಡೆಗಿರುವ ನಿಮ್ಮ ಸಂಪೂರ್ಣ ಹೊರನೋಟ ಬದಲಾಗುತ್ತದೆ.