ಗುರುವಾರ, ಜನವರಿ 24, 2013

ಅ೦ತಿಮ ಸ್ಮರಣೆಯ ಮಹತ್ವ


೨೪ ಜನವರಿ ೨೦೧೩
ಬೆಂಗಳೂರು

ಪ್ರಶ್ನೆ: ಗುರುದೇವ, ನಮ್ಮ ಜೀವನದ ಕೊನೆಯ ಕ್ಷಣಗಳಲ್ಲಿ ನಾರಾಯಣನ ಹೆಸರನ್ನು ಜಪಿಸುವುದರಿಂದ ಮೋಕ್ಷ ಸಿಗುವುದೆಂದು ಹೇಳಲಾಗುತ್ತದೆ. ನಮ್ಮ ಮುಂದಿನ ದಾರಿಯನ್ನು ನಿರ್ಧರಿಸುವಲ್ಲಿ, ನಮ್ಮ ಜೀವನದ ಕೊನೆಯ ಕ್ರಿಯೆಯು ಪ್ರಬಲವಾದುದು ಎಂಬುದು ಸರಿಯೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಅದು ಸರಿ. ಮನಸ್ಸು ಶರೀರದಿಂದ ಬೇರ್ಪಡುವುದು ಮೃತ್ಯುವಿನ ಸಮಯದಲ್ಲಾಗಿದೆ. ಆದುದರಿಂದ ಈ ಸಮಯದಲ್ಲಿ, ಒಬ್ಬನು ಮನಸ್ಸಿನಲ್ಲಿ ಯಾವುದೇ ಅಚ್ಚನ್ನು ಉಳಿಸಿಕೊಂಡಿದ್ದರೂ, ಅದು ಮುಂದಿನ ಜನ್ಮಕ್ಕೆ ಕಾರಣವಾಗುತ್ತದೆ. ಇದೊಂದು ವೈಜ್ಞಾನಿಕ ಸತ್ಯವಾಗಿದೆ.
ನೀವಿದನ್ನು ನೀವಾಗಿಯೇ ಕಂಡುಕೊಳ್ಳಬಹುದು. ನೀವು ಗಮನಿಸಿದರೆ, ಬೆಳಗ್ಗೆ ನೀವು ಏಳುವಾಗ ನಿಮ್ಮ ಮನಸ್ಸಿನಲ್ಲಿ ಬರುವ ಮೊದಲನೆಯ ಯೋಚನೆಯು, ನೀವು ಹಿಂದಿನ ರಾತ್ರಿ ನಿದ್ರಿಸುವ ಮುನ್ನ ಯೋಚಿಸಿದುದೇ ಆಗಿರುತ್ತದೆ.
ಈಗ, ಸಾಧಾರಣವಾಗಿ ನಿಮ್ಮ ಮನಸ್ಸು ಒಂದಲ್ಲ ಒಂದು ಯೋಚನೆಯೊಂದಿಗೆ ಎಷ್ಟು ನಿರತವಾಗಿರುತ್ತದೆಯೆಂದರೆ, ಸಾವಿನ ಸಮಯದಲ್ಲಿ ನಾರಾಯಣ ಎಂದು ಜಪ ಮಾಡಲೂ ಕೂಡಾ ನಿಮಗೆ ನೆನಪಾಗದಿರಬಹುದು. ಅದಕ್ಕಾಗಿಯೇ ಪ್ರಾಚೀನ ಜನರು ಹೇಳಿದುದು, ಅವನ ಹೆಸರನ್ನು ಜಪಿಸುವುದರ ಮೂಲಕ ದೇವರನ್ನು ಎಲ್ಲಾ ಸಮಯವೂ ನೆನಪಿಸುತ್ತಾ ಇರಿ ಎಂದು. ಪ್ರತಿ ರಾತ್ರಿಯೂ ಮಲಗುವ ಮುನ್ನ ಅವನನ್ನು ನೆನಪಿಸಿಕೊಳ್ಳಿ; ನೀವು ಸ್ನಾನ ಮಾಡುವಾಗ; ನಿಮ್ಮ ಊಟವನ್ನು ಮಾಡುವಾಗಲೂ ಅವನನ್ನು ನೆನಪಿಸಿಕೊಳ್ಳಿ ಮತ್ತು ನೀವು ಪಡೆಯುವ ಆಹಾರಕ್ಕಾಗಿ ಅವನಿಗೆ ಧನ್ಯವಾದಗಳನ್ನರ್ಪಿಸಿ. ಹೊಸತು ಏನನ್ನಾದರೂ ಪ್ರಾರಂಭಿಸುವ ಮೊದಲು, ಅದನ್ನೊಂದು ಮಂಗಳಕರವಾದ ಆರಂಭವನ್ನಾಗಿ ಮಾಡಲು ಅವನನ್ನು ನೆನಪಿಸಿಕೊಳ್ಳಿ.
ಪ್ರಾಚೀನ ಜನರು ಬಹಳ ಬುದ್ಧಿವಂತರಾಗಿದ್ದರು ಮತ್ತು ಅವರು ಇದನ್ನೊಂದು ಪದ್ಧತಿಯನ್ನಾಗಿ ಮಾಡಿದರು. ಆದುದರಿಂದ, ಯಾವಾಗೆಲ್ಲಾ ಒಬ್ಬನು ಒಂದು ಹೊಸ ಅಂಗಡಿಯನ್ನು ತೆರೆಯುವನೋ ಆಗ ಅವನು ಮಾಡಬೇಕಾದ ಮೊದಲನೆಯ ಕೆಲಸವೆಂದರೆ ನಾಮ ಸ್ಮರಣೆ (ದೇವರ ಹೆಸರನ್ನು ನೆನಪಿಸಿಕೊಳ್ಳುವುದು), ಮತ್ತು ನಂತರ ಅವರು ಅಂಗಡಿಯನ್ನು ಪ್ರಾರಂಭಿಸುತ್ತಾರೆ. ಒಬ್ಬರು ಏನಾದರೂ ಹೊಸತನ್ನು ಖರೀದಿಸಿದರೆ ಅವರು ನಾರಾಯಣನನ್ನು ನೆನಪಿಸಿಕೊಳ್ಳಬೇಕು ಮತ್ತು ನಂತರ ಪ್ರಾರಂಭಿಸಬೇಕು. ನಾವೆಲ್ಲರೂ ಇದನ್ನು ಮಾಡುತ್ತೇವೆ, ಅಲ್ಲವೇ? ನಾವಿದನ್ನು ಇವತ್ತು ಕೂಡಾ ಮಾಡುತ್ತೇವೆ.
ನೀವೊಂದು ಪರೀಕ್ಷೆ ಬರೆಯುವವರಿದ್ದರೆ, ನೀವು ದೇವರ ಬಗ್ಗೆ ಯೋಚಿಸುತ್ತೀರಿ ಮತ್ತು ಪರೀಕ್ಷೆಯಲ್ಲಿ ಪ್ರಶ್ನೆಗಳು ಸುಲಭವಾಗಿರಲೆಂದು ಹಾಗೂ ನಿಮಗೆ ಉತ್ತರಗಳನ್ನು ಸರಿಯಾಗಿ ಬರೆಯಲು ಸಾಧ್ಯವಾಗಲೆಂದು ಪ್ರಾರ್ಥಿಸುತ್ತೀರಿ.
ಪ್ರತಿಯೊಬ್ಬರೂ ಪ್ರಾರ್ಥಿಸುತ್ತಾರೆ; ಮಕ್ಕಳಾಗಲೀ, ದೊಡ್ಡವರಾಗಲೀ ಅಥವಾ ವಯಸ್ಸಾದವರಾಗಲೀ; ಅವರೆಲ್ಲರೂ ಪ್ರಾರ್ಥಿಸುತ್ತಾರೆ. ಆದರೆ ಅವರು ಅದನ್ನು ಭಯದಿಂದ ಮಾಡುತ್ತಾರೆ. ನಾನು ಹೇಳುವುದೇನೆಂದರೆ, ಅದನ್ನು ಭಯದಿಂದ ಮಾಡಬೇಡಿ, ಬದಲಿಗೆ ಪ್ರೀತಿಯಿಂದ ಮಾಡಿ; ಕೃತಜ್ಞತೆಯ ಒಂದು ಆಳವಾದ ಭಾವನೆಯಿಂದ ಮಾಡಿ. ನೀವು ಅರಳುವುದು ಯಾವಾಗ ಎಂದರೆ, ನೀವು ಪ್ರೀತಿ ಮತ್ತು ಶ್ರದ್ಧೆಯಿಂದ ಪ್ರಾರ್ಥಿಸಿದಾಗ.
ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದರ ಮೊದಲು ದೇವರನ್ನು ನೆನಪಿಸಿಕೊಳ್ಳಲು ಕಷ್ಟವೇನಿದೆ? ನಿಮಗೆ ಇಷ್ಟವಾಗುವಂತೆ ಏನನ್ನೇ ಹೇಳುವುದರ ಮೂಲಕವಾದರೂ ನೀವು ಜಪ ಮಾಡಬಹುದು ಅಥವಾ ದೇವರನ್ನು ಸ್ಮರಿಸಬಹುದು. ನೀವು ನಾರಾಯಣ ಅಥವಾ ಜೈ ಗುರುದೇವ್ ಅಥವಾ ಓಂ ನಮಃ ಶಿವಾಯ ಎಂದು ಕೂಡಾ ಹೇಳಬಹುದು. ನಿಮಗೆ ಇಷ್ಟವಾಗುವ ಯಾವುದೇ ಹೆಸರಾದರೂ ಸರಿ, ಅದನ್ನು ಹೇಳಿ.
ಇಲ್ಲದಿದ್ದರೆ ಸ್ನಾನ ಮಾಡುವಾಗ ಅಥವಾ ಊಟ ಮಾಡುವಾಗ ನೀವು ಎಲ್ಲಾ ರೀತಿಯ ಹಾಡುಗಳನ್ನು ನಿಮ್ಮ ಮನಸ್ಸಿನಲ್ಲಿ ಹಾಡುತ್ತಿರುತ್ತೀರಿ; ’ಡಫ್ಲಿವಾಲೇ ಡಫ್ಲಿ ಬಜಾ’ (ಓ ಡೋಲು ಬಾರಿಸುವ ಹುಡುಗನೇ, ಡೋಲು ಬಾರಿಸು!) ಡೋಲನ್ನಲ್ಲದೆ ಒಬ್ಬ ಡೋಲಿನ ಹುಡುಗನು ನಿಮಗಾಗಿ ಏನನ್ನು ಬಾರಿಸುವನು? ಇದೊಂದು ಹಾಡೇ?
ಈಗ, ನನಗೆ ಸಮಯ ಸಿಕ್ಕಿಲ್ಲವಾದ್ದರಿಂದ ನಾನು ಇತ್ತೀಚೆಗಿನ ಹಾಡುಗಳಲ್ಲಿ ಯಾವುದನ್ನೂ ಕೇಳಿಲ್ಲ. ಆದರೆ ಯಾವುದೇ ಅರ್ಥವಿಲ್ಲದ ಕೆಲವು ಹಾಡುಗಳು ಇತ್ತೀಚೆಗೆ ಬಂದಿರಲೇಬೇಕು.
’ಕೊಲವೆರಿ ಡಿ ' ಎಂಬ ಒಂದು ಹಾಡಿದೆ. ಅದು ಬಹಳ ಜನಪ್ರಿಯವಾದಂತೆ ತೋರುತ್ತದೆ. ಹಲವು ಜನರಿಗೆ ಆ ಹಾಡಿನ ಅರ್ಥ ಕೂಡಾ ತಿಳಿಯದು. ಅದರ ಅರ್ಥವೇನೆಂದು ನಿಮಗೆ ತಿಳಿದಿದೆಯೇ? ತಮಿಳಿನಲ್ಲಿ ’ಕೊಲವೆರಿ ಡಿ ’ ಎಂಬ ಶಬ್ದಪ್ರಯೋಗಕ್ಕೆ, ’ನನಗೆ ಯಾರನ್ನಾದರೂ ಕೊಲ್ಲಬೇಕೆಂದು ಅನ್ನಿಸುತ್ತಿದೆ ’ ಎಂದು ಅರ್ಥವಿದೆ.
ನಿಮಗೆ ಯಾರನ್ನಾದರೂ ಕೊಲ್ಲಬೇಕೆಂದು ಅನ್ನಿಸುತ್ತದೆಯೆಂಬ ಅರ್ಥವಿರುವ ಇದು ಒಂದು ಒಳ್ಳೆಯ ಹಾಡೇ? ಅದಕ್ಕಾಗಿಯೇ ನಾನು ಹೇಳುವುದು, ಕೇವಲ ನಾಮ ಸ್ಮರಣೆ ಮಾಡಿ. ಓಂ ನಮಃ ಶಿವಾಯ ಅಥವಾ ಓಂಕಾರ ಮಂತ್ರವನ್ನು ಜಪಿಸಿ. ನಿಮಗೆ ಇಷ್ಟವಿರುವ ಯಾವುದನ್ನೇ ಆದರೂ ಭಕ್ತಿಯ ಒಂದು ಭಾವನೆಯೊಂದಿಗೆ ಜಪಿಸಿ.
ನೋಡಿ, ನಾನು ಯಾವುದೇ ಹಾಡನ್ನು ಅವಮಾನಗೊಳಿಸುತ್ತಿಲ್ಲ. ನಿಮಗೆ ಹಾಡಬೇಕಿದ್ದರೆ, ಪರವಾಗಿಲ್ಲ, ಕೊಲವೆರಿ ಡಿ ಕೂಡಾ ಹಾಡಬಹುದು; ತೊಂದರೆಯಿಲ್ಲ. ಆದರೆ ಕೆಲವೊಮ್ಮೆ ಇಂತಹ ಒಂದು ಆಕರ್ಷಕ ರಾಗವು ನಿಮ್ಮ ಮನಸ್ಸಿನಲ್ಲಿ ಓಡುತ್ತಾ ಇರುತ್ತದೆ ಮತ್ತು ಅದು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಬಹುತೇಕ ಜನರಿಗೆ ಹಾಡಿನ ಅರ್ಥ ತಿಳಿಯದು, ಅದು ಒಳ್ಳೆಯದು. ಅವರಿಗೆ ಅರ್ಥ ತಿಳಿದಿದ್ದುಕೊಂಡು, ಅರ್ಥದೊಂದಿಗೆ ಹಾಡನ್ನು ಹಾಡಿರುತ್ತಿದ್ದರೆ, ಆಗ ಅಲ್ಲಿ ಸಮಸ್ಯೆಗಳಾಗುತ್ತಿದ್ದವು. ಅದು ಇನ್ನೊಂದು ಭಾಷೆಯಲ್ಲಿದೆ; ಅದು ತಮಿಳಿನಲ್ಲಿದೆ.
ನಿಮಗೊಂದು ಭಜನೆಯ ಅರ್ಥ ತಿಳಿದಿದ್ದು, ನೀವದನ್ನು ಕೃತಜ್ಞತೆ ಮತ್ತು ಭಕ್ತಿಯ ಒಂದು ಭಾವನೆಯೊಂದಿಗೆ ಹಾಡುವಾಗ, ಅದು ನಿಮ್ಮ ಜೀವನದ ಮೇಲೆ ಒಂದು ಅಗಾಧವಾದ ಪರಿಣಾಮವನ್ನು ಬೀರುತ್ತದೆ. ಪ್ರತಿಯೊಂದು ಶಬ್ದಕ್ಕೂ ತನ್ನದೇ ಆದ ಕಂಪನವಿದೆ, ಮತ್ತು ನಾವು ಒಳ್ಳೆಯ ಶಬ್ದಗಳನ್ನು ಮಾತನಾಡುವಾಗ, ಆ ಶಬ್ದದಿಂದ ಬರುವ ಕಂಪನಗಳಿಗೆ ಮನಸ್ಸನ್ನು ಶುದ್ಧಗೊಳಿಸುವ ಮತ್ತು ಜೀವನವನ್ನು ಶುದ್ಧಗೊಳಿಸುವ ಶಕ್ತಿಯಿರುತ್ತದೆ.
ಜಪ ಮಾಡುವುದರಿಂದ ಮತ್ತು ಸಕಾರಾತ್ಮಕವಾಗಿ ಮಾತನಾಡುವುದರಿಂದ, ಮನಸ್ಸು ಹಾಗೂ ಶರೀರ ಎರಡೂ ಚೈತನ್ಯಭರಿತವಾಗುತ್ತವೆ. ಅದಕ್ಕಾಗಿಯೇ ನಾಮ ಸ್ಮರಣೆ ಮಾಡಬೇಕೆಂದು ಹೇಳಲಾಗಿರುವುದು. ಕನಿಷ್ಠಪಕ್ಷ ದಿನದಲ್ಲಿ ಎರಡು ಸಾರಿಯಾದರೂ ಅದನ್ನು ಮಾಡಿ. ನಾನು ಹೇಳಿದಂತೆ, ಬೆಳಗ್ಗೆ ದಿನದ ಮೊದಲ ಊಟವನ್ನು ಮಾಡುವ ಮೊದಲು, ದೇವರ ಹೆಸರನ್ನು ಜಪಿಸುವುದರ ಮೂಲಕ ಅವನನ್ನು ಸ್ಮರಿಸಿ.
ನಾನು ಎಲ್ಲರಲ್ಲೂ ಹೇಳುತ್ತಿರುತ್ತೇನೆ: ಊಟ ಮಾಡುವ ಮೊದಲು ’ಅನ್ನದಾತ ಸುಖೀ ಭವ’ ಎಂಬ ಮಂತ್ರವನ್ನು ಜಪಿಸಿ ಎಂದು. ಇದರರ್ಥವೇನೆಂದರೆ, ಈ ಆಹಾರವನ್ನು ನನಗೆ ನೀಡಿದವರು, ಶಾಂತಿ ಮತ್ತು ಸಂತೋಷದಿಂದ ಹರಸಲ್ಪಡಲಿ. ಆದುದರಿಂದ ನಿಮ್ಮ ಹೃದಯಪೂರ್ವಕವಾಗಿ ಈ ಆಶೀರ್ವಾದವನ್ನು ನೀಡಿ. ಈ ಮಂತ್ರವನ್ನು ಜಪಿಸುವುದರ ಮೂಲಕ, ಅಡಿಗೆ ಮಾಡಿ ಆಹಾರವನ್ನು ನಿಮಗೆ ಬಡಿಸಿದ ಮನೆಯ ಹೆಂಗಸು ಶಾಂತಿ ಮತ್ತು ಸಂತೋಷದಿಂದ ಹರಸಲ್ಪಡಲಿ ಎಂದು ನೀವು ಪ್ರಾರ್ಥಿಸುವಿರಿ. ಹಾಗೆಯೇ, ಆಹಾರದ ಧಾನ್ಯಗಳನ್ನು ಖರೀದಿಸಿ ನಿಮ್ಮ ಮನೆಗೆ ತಲಪಿಸಿದ ವ್ಯಾಪಾರಿ; ಅವನು ಹರಸಲ್ಪಡಲಿ ಮತ್ತು ಕೊನೆಯದಾಗಿ ನೀವು, ಯಾರಿಂದ ನಿಮಗೆ ನಿಮ್ಮ ಆಹಾರ ದೊರಕಿತೋ; ಕೃಷಿ ಮಾಡಿ ಬೆಳೆಯನ್ನು ಬೆಳೆದ ರೈತನಿಗೆ ಹರಸುವಿರಿ. ಆದುದರಿಂದ ಈ ಮಂತ್ರವನ್ನು ಹೇಳುವುದರಿಂದ ನೀವು ಅವನನ್ನೂ ಹರಸುವಿರಿ. ಇದು ಎಷ್ಟೊಂದು ಒಳ್ಳೆಯ ಸಂಗತಿ!
ಅದೇ ರೀತಿಯಲ್ಲಿ, ಬೆಳಗ್ಗೆ ಮೊದಲನೆಯದಾಗಿ ನೀವು ಏಳುವಾಗ, "ಓಂ ನಮೋ ನಾರಾಯಣ" ಅಥವಾ "ಓಂ ನಮಃ ಶಿವಾಯ" ಎಂದು ಹೇಳಿ.
ಏನಾದರೂ ಆಗಬಾರದ್ದು ಆದಲ್ಲಿ "ಹೇ ರಾಮ್!" ಎಂದು ಹೇಳಿ.
ಯಾರಾದರೂ ನಿಧನರಾದರೆ, "ರಾಮ್ ನಾಮ್ ಸತ್ಯ ಹೈ" ಎಂದು ಜಪಿಸಿ (ಭಗವಂತ ರಾಮನ ಹೆಸರು ಮಾತ್ರ ಪರಮ ಸತ್ಯವಾದುದು).
ದೇವರ ಹೆಸರನ್ನು ಸುಮ್ಮನೇ ಸ್ಮರಿಸಿಕೊಳ್ಳಲು ಕಷ್ಟವೇನಿದೆ? ಯಾವುದೇ ಕಷ್ಟವೂ ಇಲ್ಲ.
ನೀವು ಕಾರನ್ನು ಹತ್ತುವಾಗ "ಓಂ ನಮೋ ನಾರಾಯಣ" ಎಂದು ಹೇಳಿ ಮತ್ತು ನಂತರ ಕಾರಿನಲ್ಲಿ ಕುಳಿತುಕೊಳ್ಳಿ. ಕಾರಿನಿಂದ ಹೊರಗೆ ಇಳಿಯುವ ಮೊದಲು ಕೂಡಾ ನಾಮ ಸ್ಮರಣೆ ಮಾಡಿ ಮತ್ತು ನಂತರ ಹೊರಬನ್ನಿ.
ಈ ರೀತಿಯಲ್ಲಿ, ನಾಮ ಸ್ಮರಣೆ ಮಾಡುವುದನ್ನು ನೀವೊಂದು ಅಭ್ಯಾಸವನ್ನಾಗಿ ಮಾಡಿಕೊಳ್ಳುವಿರಿ, ಅಲ್ಲವೇ? ಆದುದರಿಂದ ನಿಮ್ಮ ಕೊನೆಯ ಕ್ಷಣಗಳಲ್ಲಿ, ಮರಣದ ಸಮಯದಲ್ಲಿ, ಪ್ರಾಣವು ನಿಮ್ಮ ಶರೀರವನ್ನು ತ್ಯಜಿಸಲಿರುವಾಗ ಕೂಡಾ ನೀವು ನಾಮ ಸ್ಮರಣೆ ಮಾಡುವಿರಿ ಯಾಕೆಂದರೆ ಆ ಸಮಯದಲ್ಲಿ ಅದು ನಿಮಗೆ ಸಹಜವಾಗಿ ಬರುತ್ತದೆ ಮತ್ತು ಇದು ನಿಮ್ಮನ್ನು ಒಂದು ಉತ್ತಮ ರೀತಿಯಲ್ಲಿ ಮೇಲಕ್ಕೆತ್ತುವುದು.

ಪ್ರಶ್ನೆ: ಗುರುದೇವ, ನನ್ನ ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ನಾನು ಎಲ್ಲಿಯ ವರೆಗೆ ಪ್ರಗತಿ ಹೊಂದಿರುವೆನೆಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ಈ ದಿನಗಳಲ್ಲಿ ನಾನು ನಿಮ್ಮ ಕಾರಿನ ಹಿಂದೆ ಓಡುವುದನ್ನು ಕೂಡಾ ನಿಲ್ಲಿಸಿದ್ದೇನೆ. ಇದರರ್ಥ ನಾನು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೊಂದಿರುವೆನೆಂದೇ ಅಥವಾ ಇದರರ್ಥ ನಿಮ್ಮ ಕಡೆಗಿರುವ ನನ್ನ ಭಕ್ತಿಯು ಕಡಿಮೆಯಾಗಿರುವುದೆಂದೇ?
ಶ್ರೀ ಶ್ರೀ ರವಿ ಶಂಕರ್: ಇದನ್ನು ನೀನು ಮಾತ್ರ ತಿಳಿಯಬಲ್ಲೆ.
ಒಮ್ಮೆ ನೀವು ಈ ದಾರಿಗೆ ಬಂದರೆ, ನೀವು ಪ್ರಗತಿ ಹೊಂದುವಿರಿ. ನೀವು ಮುಂದಕ್ಕೆ ಮಾತ್ರ ಸಾಗುವಿರಿ.
ನೋಡಿ, ನೀವು ನನ್ನ ಕಾರಿನ ಹಿಂದೆ ಓಡುವಿರೇ ಇಲ್ಲವೇ ಎಂಬುದರ ಮೇಲೆ ನಿಮ್ಮ ಬೆಳವಣಿಗೆಯನ್ನು ಅಳೆಯಬೇಡಿ. ಹಾಗೆ ಯಾವತ್ತೂ ಮಾಡಬೇಡಿ. ನೀವು ಎಷ್ಟು ಕೇಂದ್ರಿತರಾಗಿರುವಿರಿ? ಇದನ್ನು ನೀವು ನೋಡಬೇಕಾಗಿರುವುದು. ನೀವು ಹೆಚ್ಚು ಕೇಂದ್ರಿತರಾದಷ್ಟೂ, ನೀವು ಈ ಪಥದಲ್ಲಿ ಹೆಚ್ಚು ಪ್ರಗತಿ ಹೊಂದಿರುವಿರಿ. ನೀವೆಲ್ಲೇ ಇದ್ದರೂ, ಅಲ್ಲಿರಿ ಮತ್ತು ಸ್ಥಿರವಾಗಿರಿ. ನಿಮ್ಮ ಮನಸ್ಸನ್ನು ಆತ್ಮದ ಕಡೆಗೆ ತನ್ನಿ.
ನೀವು ನೆನಪಿನಲ್ಲಿಡಬೇಕಾದುದೇನೆಂದರೆ, ನಿಮ್ಮಲ್ಲಿ ಭಕ್ತಿಯ ಯಾವುದೇ ಕೊರತೆಯೂ ಇಲ್ಲ. ನಿಮ್ಮಲ್ಲಿ ಸಾಕಷ್ಟು ಭಕ್ತಿಯಿಲ್ಲವೆಂಬುದಾಗಿ ಯೋಚಿಸಲೂ ಬೇಡಿ. ಹೌದು, ಕೆಲವೊಮ್ಮೆ ಭಕ್ತಿಯು ಅಡಗಿಹೋಗಬಹುದು, ಆದರೆ ಅದು ಕೇವಲ ಸ್ವಲ್ಪ ಸಮಯದ ವರೆಗೆ ಮಾತ್ರ, ಬೇಗನೇ ಅದು ಪುನಃ ಮೇಲೆ ಬರುವುದು.
ಭಾವನೆಗಳು ಯಾವತ್ತೂ ಸ್ಥಿರವಾಗಿರಲು ಸಾಧ್ಯವಿಲ್ಲ. ನಮ್ಮ ಅನುರಾಗವು ಕೂಡಾ ಎಲ್ಲಾ ಸಮಯದಲ್ಲೂ ಒಂದೇ ಆಗಿರುವುದಿಲ್ಲ. ಅಲ್ಲಿ ಏಳು ಬೀಳುಗಳು ಇರುತ್ತವೆ. ಭಾವನೆಗಳು ಕಲ್ಲುಗಳಂತಲ್ಲ, ಅವುಗಳು ನೀರಿನಂತೆ. ನೀರಿನಲ್ಲಿ ಹೇಗೆ ತರಂಗಗಳು ಏಳುತ್ತವೆಯೋ, ಅದೇ ರೀತಿಯಲ್ಲಿ ಅದು ಭಾವನೆಗಳಿಗೆ ಕೂಡಾ ಅನ್ವಯಿಸುತ್ತದೆ. ಭಾವನೆಗಳು ಏಳುತ್ತವೆ ಮತ್ತು ನಂತರ ಅವುಗಳು ನೆಲೆನಿಲ್ಲುತ್ತವೆ, ಹಾಗೂ ನಂತರ ಪುನಃ ಅವುಗಳು ಏಳುತ್ತವೆ. ಇದು ಕೇವಲ ಸ್ವಾಭಾವಿಕವಾದುದು. ಅದಕ್ಕಾಗಿಯೇ ಪ್ರೀತಿ ಮತ್ತು ಹಾತೊರೆತಗಳು ಯಾವತ್ತೂ ಜೊತೆಯಲ್ಲಿ ಸಾಗುವುದು. ನಿಮಗೆ ಕೆಲವೊಮ್ಮೆ ತೀವ್ರವಾದ ಹಾತೊರೆತದ ಅನುಭವವಾಗುತ್ತದೆ ಮತ್ತು ಕೆಲವೊಮ್ಮೆ ನಿಮಗೆ ಹೇರಳವಾದ ಪ್ರೀತಿಯ ಅನುಭವವಾಗುತ್ತದೆ. ನಂತರ ನಿಮಗೆ ಪುನಃ ಹಾತೊರೆತದ ಅನುಭವವಾಗುತ್ತದೆ ಮತ್ತು ನಂತರ ಉತ್ಕಟ ಪ್ರೇಮ. ಇದು ಜೀವನದಲ್ಲಿ ಆಗುತ್ತಾ ಇರುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ಮೂರು ರೀತಿಯ ಭಕ್ತರ ಬಗ್ಗೆ ಮಾತನಾಡಿರುವಿರಿ. ಗುರುಗಳು ಕೂಡಾ ವಿವಿಧ ಸ್ವಾದಗಳಲ್ಲಿರುವರೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಖಂಡಿತವಾಗಿ!
ಚರಿತ್ರೆಯು ಹಲವಾರು ವಿವಿಧ ರೀತಿಯ ಗುರುಗಳನ್ನು ನೋಡಿದೆ. ವಾಸ್ತವವಾಗಿ ಅವರೆಲ್ಲರೂ ಬಹಳ ಅನನ್ಯರು ಮತ್ತು ಪ್ರತಿಯೊಬ್ಬರೂ ವ್ಯತ್ಯಸ್ತರು. ಸ್ವಲ್ಪ ಹೆಚ್ಚು ರಾಜಸಿಕ ಗುಣವಿರುವವರು ಮತ್ತು ಸ್ವಲ್ಪ ತಾಮಸಿಕ ಗುಣವಿರುವವರು ಇದ್ದಾರೆ, ಅದೇ ವೇಳೆಯಲ್ಲಿ ಕೆಲವರು ಹೆಚ್ಚು ಸಾತ್ವಿಕರು.
ಒಂದು ದಿನ ನಾನು ಪ್ರಸ್ತಾಪಿಸಿದ್ದೆ, ಬಹಳ ಹಿಂದೆ ಎಂಭತ್ತರ ಆರಂಭದಲ್ಲಿ, ನಾನು ಕೇವಲ ೨೩ ಅಥವಾ ೨೪ ವರ್ಷ ವಯಸ್ಸಿನವನಾಗಿದ್ದಾಗ, ದಿಲ್ಲಿಯ ಹೊರವಲಯದಲ್ಲಿ ಒಬ್ಬರು ಸಂತರನ್ನು ನಾನು ಭೇಟಿಯಾದೆ. ಈ ಸಂತರು ನನ್ನಲ್ಲಿ ಹೇಳಿದರು, "೨೪ ಕ್ಯಾರೆಟ್ ಚಿನ್ನವಾದರೆ ನಿಮಗೆ ಅದರಿಂದ ಯಾವುದೇ ಆಭರಣವನ್ನು ತಯಾರಿಸಲು ಸಾಧ್ಯವಿಲ್ಲ. ನೀವದಕ್ಕೆ ಸ್ವಲ್ಪ ತಾಮ್ರ ಅಥವಾ ಏನನ್ನಾದರೂ ಸೇರಿಸಬೇಕಾಗುತ್ತದೆ, ಆಗ ಮಾತ್ರ ಅದೊಂದು ಆಭರಣವಾಗುತ್ತದೆ." ಅವರಂದರು, "ನೀನು ಕೂಡಾ ಏನನ್ನಾದರೂ ಸೇರಿಸಬೇಕು. ನೀನು ೨೪ ಕ್ಯಾರೆಟ್ ಚಿನ್ನವಾಗಲು ಸಾಧ್ಯವಿಲ್ಲ, ಇಲ್ಲದಿದ್ದರೆ ಎಲ್ಲರಿಗೂ ಪ್ರಯೋಜನಕಾರಿಯಾಗಲು ನಿನಗೆ ಸಾಧ್ಯವಿಲ್ಲ."
ನಾನಂದೆ, "ಇಲ್ಲ ಬಾಬಾ, ನಾನು ೨೪ ಕ್ಯಾರೆಟ್ ಆಗಿಯೇ ಇರುತ್ತೇನೆ ಬಿಡಿ. ಏನಾಗುವುದೋ ಅದಾಗಲಿ."
ಅವರಂದರು, "ನೀನು ಬಹಳ ವೇಗವಾಗಿ ಹರಡಬಹುದು. ನೀನು ಯಾಕೆ ತಂತ್ರದ ಬಗ್ಗೆ ಕಲಿಯಬಾರದು. ಕೆಲವು ಆತ್ಮಗಳ ಬಗ್ಗೆ ಕಲಿ ಮತ್ತು ನಂತರ ನೀನು ಕೆಲವು ಆತ್ಮಗಳನ್ನು ನಿಯಂತ್ರಿಸಬಹುದು ಹಾಗೂ ಸ್ವಲ್ಪ ಜಾದೂ ಮಾಡಬಹುದು."
ನಾನಂದೆ, "ನನಗೆ ಇವುಗಳಲ್ಲಿ ಯಾವುದನ್ನೂ ಮಾಡಬೇಕಾದ ಅಗತ್ಯವಿಲ್ಲ. ಅವುಗಳು ನಿಮ್ಮನ್ನು ಅತ್ಯುನ್ನತವಾದುದರ ಕಡೆಗೆ ಒಯ್ಯುವುದಿಲ್ಲವೆಂಬುದು ನನಗೆ ಗೊತ್ತು."
ಹೀಗೆ, ಇಂತಹ ಪವಾಡಗಳನ್ನು ಸ್ವಲ್ಪ ಮಾಡುವ ಜನರಿದ್ದಾರೆ, ಆದರೆ ಅದು ಕೇವಲ ಅಲ್ಪಾವಧಿಯವರೆಗೆ ಮಾತ್ರ ಇರುತ್ತದೆ. ಆಮೇಲೆ ಏನಾಗುತ್ತದೆಯೆಂದರೆ, ಯಾರಿಂದ ನೀವು ಕೆಲಸ ಮಾಡಿಸುವಿರೋ ಆ ಆತ್ಮಗಳು ನಿಮ್ಮ ಮೇಲೆ ಅಧಿಕಾರವನ್ನು ಸಾಧಿಸುತ್ತವೆ. ಇದೆಲ್ಲವೂ ಒಂದು ಬಹಳ ಅಲ್ಪ ಕಾಲಾವಧಿಯ ವರೆಗೆ ಮಾತ್ರ ಇರುತ್ತದೆ, ಅದು ನಿಮ್ಮೊಂದಿಗೆ ಉಳಿಯುವಂತಹದ್ದಲ್ಲ.
ಅದಕ್ಕಾಗಿಯೇ, ಶುದ್ಧವಾದ ಸಾತ್ವಿಕ ಜ್ಞಾನ, ಸಮರಸವಾದ ಜ್ಞಾನ ಅತ್ಯುತ್ತಮವಾದುದು ಮತ್ತು ಅದು ದೀರ್ಘ ಕಾಲ ಇರುವಂತಹದ್ದು. ಅದರಲ್ಲಿ ಯಾವುದೇ ತಮೋ ಗುಣ ಅಥವಾ ರಜೋ ಗುಣವಿಲ್ಲ. ಪ್ರಭಾವವು ಶಾಶ್ವತವೂ, ದೀರ್ಘ ಕಾಲ ಉಳಿಯುವಂತಹದ್ದೂ ಆಗಿರುತ್ತದೆ ಮತ್ತು ಅದು ನಿಮ್ಮನ್ನು ಅತ್ಯುನ್ನತವಾದುದರ ಕಡೆಗೆ ಒಯ್ಯುತ್ತದೆ; ಅತ್ಯುನ್ನತವಾದುದಕ್ಕಿಂತ ಕಡಿಮೆಯಾಗಿರುವ ಯಾವುದರ ಕಡೆಗೂ ಅಲ್ಲ.
ಈ ಸಂತರು ಬಹಳ ಒಳ್ಳೆಯ ಸಂತರಾಗಿದ್ದರು, ಅವರು ಕೆಟ್ಟವರಾಗಿದ್ದರೆಂದಲ್ಲ. ಅವರು ಬಹಳ ಒಳ್ಳೆಯ ವ್ಯಕ್ತಿಯಾಗಿದ್ದರು. ಆ ದಿನಗಳಲ್ಲಿ ಅವರು ತಮ್ಮ ೭೦ರ ವಯಸ್ಸಿನಲ್ಲೇನೋ ಇದ್ದರು, ಮತ್ತು ಅವರು ಕೇವಲ ಒಂದು ಸಲಹೆ ನೀಡಿದರಷ್ಟೆ. ನಾನು ಇಲ್ಲವೆಂದು ಹೇಳಿದಾಗ, ಅವರು ಅದನ್ನು ನಿಜವಾಗಿ ಮೆಚ್ಚಿಕೊಂಡರು. ಅವರಂದರು, "ಹೌದು, ಇದು ಒಳ್ಳೆಯದು."
ಬಹುಶಃ ಅವರು ನನ್ನನ್ನು ಪರೀಕ್ಷಿಸಲು ಬಯಸಿದ್ದಿರಬಹುದು, ಏನಾದರೂ ಮಾಡಲು ನನಗೆ ಆಮಿಷವೊಡ್ಡಲು ಸಾಧ್ಯವೇ ಎಂದು.

ಪ್ರಶ್ನೆ: ನಾವು ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾಗುವಾಗ, ಅಭಿಪ್ರಾಯಗಳು ಮತ್ತು ತೀರ್ಮಾನಗಳು ಸ್ವಾಭಾವಿಕವಾಗಿ ರೂಪುಗೊಳ್ಳುತ್ತವೆ. ಒಬ್ಬರನ್ನು ನಾವು ಮೊದಲ ಭೇಟಿಯಲ್ಲಿ ಇಷ್ಟಪಡುತ್ತೇವೆ ಮತ್ತು ಕೆಲವು ಜನರನ್ನು ನಾವು ಯಾವುದೇ ಕಾರಣವಿಲ್ಲದೆಯೇ ಇಷ್ಟಪಡದೇ ಇರುತ್ತೇವೆ. ಅದು ಯಾಕೆ ಹಾಗೆ ಗುರುದೇವ?
ಶ್ರೀ ಶ್ರೀ ರವಿ ಶಂಕರ್: ಅದು ಹಾಗೆಯೇ. ಪ್ರಪಂಚವು ಕಂಪನಗಳಿಂದ ಕಾರ್ಯನಿರ್ವಹಿಸುತ್ತದೆ ಮತ್ತು ನಾವೆಲ್ಲರೂ ಕಂಪನದಿಂದ ಕೆಲಸ ಮಾಡುತ್ತೇವೆ. ಕೆಲವು ಜನರ ಕಂಪನಗಳು ಹೆಚ್ಚು ಆಹ್ಲಾದಕರವಾಗಿರುತ್ತವೆ ಮತ್ತು ನೀವು ಅದಕ್ಕೆ ಸುಲಭವಾಗಿ ಪ್ರತಿಕ್ರಿಯಿಸುತ್ತೀರಿ. ಇತರ ಕೆಲವರ ಕಂಪನಗಳು ಸ್ವಲ್ಪ ಅನಾಕರ್ಷಕವಾಗಿರುತ್ತವೆ.
ನೀವು ಬಹಳ ಕೇಂದ್ರಿತರಾದಾಗ, ಯಾರೊಂದಿಗೂ ಅನಾಕರ್ಷಕ ಕಂಪನದ ಅನುಭವವಾಗುವುದಿಲ್ಲ ಮತ್ತು ನಿಮ್ಮನ್ನು ನಿಮ್ಮ ಕೇಂದ್ರದಿಂದ ಅಲ್ಲಾಡಿಸುವವರು ಯಾರೂ ಇರುವುದಿಲ್ಲ. ಅದು ಅತ್ಯಂತ ಹೆಚ್ಚು ಅಪೇಕ್ಷಣೀಯ ಸ್ಥಿತಿ - ಎಲ್ಲಿ ಯಾವುದೇ ಕಡುಬಯಕೆಗಳಾಗಲೀ ತಿರಸ್ಕಾರಗಳಾಗಲೀ ಇರುವುದಿಲ್ಲವೋ; ಯಾವುದೇ ಅನಾಕರ್ಷಣೆಯಾಗಲೀ ಅಥವಾ ಯಾವುದೇ ನಿರ್ಬಂಧವಾಗಲೀ ಅಥವಾ ಆಕರ್ಷಣೆಯಾಗಲೀ ಇರುವುದಿಲ್ಲವೋ ಅದು. ಆಗ ಎಲ್ಲವೂ ಮನೋಹರವಾಗಿ ಕಾಣಿಸುತ್ತದೆ. ಎಲ್ಲರೂ ನಿಮ್ಮೊಂದಿಗೆ ಸಾಮರಸ್ಯದಲ್ಲಿರುತ್ತಾರೆ ಮತ್ತು ಎಲ್ಲವೂ ನಿಮ್ಮೊಂದಿಗೆ ಸಾಮರಸ್ಯದಲ್ಲಿರುತ್ತದೆ. ಅದುವೇ ನಿಮ್ಮ ಸುತ್ತಲೂ ವಿಸ್ತರಿಸಿರುವ ಆಂತರಿಕ ಆನಂದ.

ಪ್ರಶ್ನೆ: ಗುರುದೇವ, ನಿದ್ರೆಯ ಜ್ಞಾನವು ಮುಕ್ತಿಯನ್ನು ತರುತ್ತದೆಯೆಂದು ನೀವು ಹೇಳಿರುವಿರಿ. ಇದರರ್ಥವೇನು?
ಶ್ರೀ ಶ್ರೀ ರವಿ ಶಂಕರ್: ನಿದ್ರೆ ಮತ್ತು ಕನಸುಗಳ ಜ್ಞಾನವು ನಿಮ್ಮನ್ನು ಸಮಾಧಿಯ ಒಂದು ಬೇರೆಯ ಸ್ಥಿತಿಯೊಳಕ್ಕೆ ಒಯ್ಯಬಹುದು. ಇದು, ಯೋಗಸೂತ್ರದಲ್ಲಿ ಪತಂಜಲಿ ಋಷಿಯಿಂದ ಹೇಳಲ್ಪಟ್ಟ ವಿಧಾನಗಳಲ್ಲೊಂದು.
ಮಹಾಋಷಿ ಪತಂಜಲಿಯು, ’ಸ್ವಪ್ನನಿದ್ರಜ್ಞಾನಾಲಂಬನಂ ವ’ ಎಂಬ ಸೂತ್ರವನ್ನು ಹೇಳಿದ್ದಾರೆ.
ಇದು ಅವರು ವಿವಿಧ ರೀತಿಯ ಸಮಾಧಿಗಳನ್ನು ವಿವರಿಸುವಾಗ ಹೇಳುವ ಸಮಾಧಿಗಳಲ್ಲೊಂದು.
ನಿದ್ರೆ ಮತ್ತು ಎಚ್ಚರದ ಸ್ಥಿತಿಗಳ ನಡುವೆ ನಿದ್ರೆಯು ಮನಸ್ಸಿನಲ್ಲಿ ಹೇಗೆ ಏಳುತ್ತದೆಯೆಂಬುದು ನಿನಗೆ ತಿಳಿದಿದ್ದರೆ, ಅಲ್ಲಿ ಸಂಪೂರ್ಣ ಸ್ಥಿರತೆಯ ಒಂದು ಕಿಡಿಯಿದೆ. ಸ್ಥಿರತೆಯ ಕಿಡಿ ಮಾತ್ರವೆಂದು ನಾನು ಹೇಳುತ್ತಿದ್ದೇನೆ ಯಾಕೆಂದರೆ ಸ್ಥಿರತೆಯು ಬಹಳ ಕ್ರಿಯಾಶೀಲವಾದುದು, ಬಹಳ ಜೀವಂತವಾದುದು. ಅದರ ಬಗ್ಗೆಯೇ ಅವರು ಮಾತನಾಡುತ್ತಿರುವುದು.
ಆದುದರಿಂದ ನೀವು ಗಮನಿಸಿದರೆ, ನಿದ್ರೆಗೆ ಜಾರುವುದಕ್ಕೆ ಸ್ವಲ್ಪ ಮುನ್ನ ಅಥವಾ ನೀವು ಎಚ್ಚರವಾದ ತಕ್ಷಣ, ನೀವು ಸಂಪೂರ್ಣವಾಗಿ ನಿದ್ರೆಯಲ್ಲಿಯೂ ಇರುವುದಿಲ್ಲ ಸಂಪೂರ್ಣವಾಗಿ ಎಚ್ಚರದಲ್ಲಿಯೂ ಇರುವುದಿಲ್ಲ. ಆ ಅಂತರದಲ್ಲಿ ಅಲ್ಲಿ ನಿರ್ದಿಷ್ಟವಾದ ಶಾಂತಿಯಿರುತ್ತದೆ, ಪ್ರಜ್ಞೆಯ ಒಂದು ನಿರ್ದಿಷ್ಟ ಗುಣಮಟ್ಟವಿರುತ್ತದೆ, ಅದು ಬಹಳ ಸುಂದರವಾಗಿರುತ್ತದೆ, ಬಹಳ ಹಿತವಾಗಿರುತ್ತದೆ ಮತ್ತು ಬಹಳ ಶಮನಕಾರಿಯಾಗಿರುತ್ತದೆ. ಅದನ್ನೇ ಅಲ್ಲಿ ಹೇಳಿರುವುದು.

ಪ್ರಶ್ನೆ: ಗುರುದೇವ, ಕೆಲವೊಮ್ಮೆ ಹಾತೊರೆತವು ತೀವ್ರವಾದಾಗ, ಅದು ಕ್ರೋಧ ಅಥವಾ ನಿರಾಶೆಯ ಭಾವನೆಯೊಂದಿಗೆ ಕೊನೆಯಾಗುತ್ತದೆ. ಅದನ್ನು ನಿರ್ವಹಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹಾತೊರೆತವನ್ನು ಅಂತರ್ಮುಖವಾಗಿಸಿಕೊಳ್ಳಬೇಕಾಗಿದೆ. ನೀನು ಧ್ಯಾನದಲ್ಲಿ ಆಳಕ್ಕೆ ಹೋಗಬೇಕು. ಅಥವಾ ಅದಕ್ಕೊಂದು ಸೃಜನಾತ್ಮಕ ರೂಪವನ್ನು ಕೊಡು; ಕೆಲವು ಕವಿತೆಗಳನ್ನು ಅಥವಾ ಬರಹಗಳನ್ನು ಬರೆ. ಬರವಣಿಗೆಯು ಸಹಾಯ ಮಾಡಬಹುದು.
ನಿಮಗೆ ಗೊತ್ತಾ, ಬಹಳಷ್ಟು ಮಹಾನ್ ಕೃತಿಗಳು ಹಾತೊರೆತದಿಂದ ಬಂದಿವೆ; ಅದು ಚಿತ್ರಕಲೆಯಾಗಿರಲಿ, ಸಂಗೀತವಾಗಿರಲಿ, ನಾಟಕವಾಗಿರಲಿ, ಸಾಹಿತ್ಯವಾಗಿರಲಿ, ಇವುಗಳೆಲ್ಲವೂ ಆಳವಾದ ಹಾತೊರೆತದಿಂದ ಹೊರಬಂದಿವೆ.
ಆದುದರಿಂದ ನಿನ್ನ ಹಾತೊರೆತಕ್ಕೆ ಒಂದು ಸೃಜನಾತ್ಮಕ ದಿಕ್ಕನ್ನು ಕೊಡು ಅಥವಾ ಅದನ್ನು ಅಂತರ್ಮುಖವಾಗಿಸು, ಧ್ಯಾನದಲ್ಲಿ ಆಳಕ್ಕೆ ಹೋಗು.

ಪ್ರಶ್ನೆ: ಗುರುದೇವ, ಅಧಿಕಾರವು ಭ್ರಷ್ಟರನ್ನಾಗಿಸುತ್ತದೆ ಎಂದು ಹೇಳಲಾಗಿದೆ. ಒಬ್ಬನು ಅಧಿಕಾರವನ್ನು ನಿರ್ವಹಿಸಬಹುದಾದ ರೀತಿಯ ಕುರಿತು ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಉದ್ದೇಶಗಳು ಸರಿಯಿಲ್ಲದಿರುವಾಗ ಅಧಿಕಾರವು ಭ್ರಷ್ಟರನ್ನಾಗಿಸುತ್ತದೆ. ನಿಮ್ಮ ಉದ್ದೇಶಗಳು ಸರಿಯಿಲ್ಲದಿರುವಾಗ ನೀವು ಒಂದು ಭ್ರಷ್ಟವಾದ ರೀತಿಯಲ್ಲಿ ಅಧಿಕಾರವನ್ನು ಸಂಪಾದಿಸಲು ಪ್ರಯತ್ನಿಸುವಿರಿ.
ಕೆಲವರನ್ನುತ್ತಾರೆ, ಅಧಿಕಾರವು ವಿಷವೆಂದು. ಅದನ್ನು ನೀವು ನಿಮ್ಮ ಸ್ವಾರ್ಥದ ಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದಾದರೆ, ನಾನದನ್ನು ಒಪ್ಪುತ್ತೇನೆ. ಆದರೆ ನೀವು ಅಧಿಕಾರವನ್ನು ಸೇವೆಗಾಗಿ ಬಳಸುತ್ತಿರುವುದಾದರೆ, ಆಗ ಅದೊಂದು ಸಲಕರಣೆ. ನಿಮ್ಮ ಉದ್ದೇಶವು ಜನರಿಗೆ ಸೇವೆ ಮಾಡುವುದಾದರೆ, ಅಧಿಕಾರವು ಕೇವಲ ಒಂದು ಸಲಕರಣೆಯಾಗಿದೆ.

ಪ್ರಶ್ನೆ: ಗುರುದೇವ, ಸಂಗತಿಗಳು ಚೆನ್ನಾಗಿ ನಡೆಯುತ್ತಿರುವಾಗ ಕೃತಜ್ಞನಾಗಿರುವುದು ಬಹಳ ಸುಲಭ. ಸಂಗತಿಗಳು ಚೆನ್ನಾಗಿ ನಡೆಯದಿರುವಾಗ ಕೃತಜ್ಞತೆಯನ್ನು ಅನುಭವಿಸುವುದು ಹಾಗೂ ನಿಮ್ಮ ಅನುಗ್ರಹದ ಬಗ್ಗೆ ತಿಳಿದಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹಿಂದೆ ಹೇಗೆ ಕಷ್ಟಕಾಲಗಳು ಸುಲಭವಾಗಿ ಹೋದವು ಎಂಬುದನ್ನು ಸ್ಮರಿಸಿಕೊಳ್ಳಿ. ನೀವು ಕಷ್ಟಕಾಲಗಳ ಮೂಲಕ ತೇಲಿಹೋದಿರಿ. ಅದು ನಿಮಗೆ ವಿಶ್ವಾಸವನ್ನು ನೀಡುತ್ತದೆ ಮತ್ತು ನಿಮ್ಮಲ್ಲಿ ಬಲವಾದ ನಂಬಿಕೆಯನ್ನು ತುಂಬುತ್ತದೆ.

ಪ್ರಶ್ನೆ: ಗುರುದೇವ, ತಂತ್ರಜ್ಞಾನವು ಸುಖವನ್ನು ತರುತ್ತದೆ, ಆದರೆ ಅದು ಮಾಲಿನ್ಯವನ್ನು ಕೂಡಾ ಹೆಚ್ಚಿಸುತ್ತದೆ. ಸುಖಕ್ಕೆ ಪ್ರತಿಯಾಗಿ ಪರಿಸರ, ಅಭಿವೃದ್ಧಿಗಿರುವ ಮಾನದಂಡಗಳು ಯಾವುವಾಗಿರಬೇಕು?  
ಶ್ರೀ ಶ್ರೀ ರವಿ ಶಂಕರ್: ತಂತ್ರಜ್ಞಾನವು ಯಾವತ್ತೂ ಪರಿಸರಕ್ಕೆ ವಿರುದ್ಧವಾಗಿರಬೇಕಾಗಿಲ್ಲ. ಇವತ್ತು ತಂತ್ರಜ್ಞಾನವು ಹೆಚ್ಚು ಹೆಚ್ಚು ಪರಿಸರ ಸ್ನೇಹಿಯಾಗುವತ್ತ ಮುಂದುವರಿಯುತ್ತಿದೆ. ಆದುದರಿಂದ ನಾವು ತಂತ್ರಜ್ಞಾನವನ್ನು ಹೊಂದಬಹುದು ಮತ್ತು ಆಗಲೂ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಬಹುದು, ಆದರೆ ಪರಿಸರವು ಬಹಳ ಪ್ರಧಾನವಾದುದು. ಅದು ಹೆಚ್ಚು ಮುಖ್ಯವಾದುದು.

ಪ್ರಶ್ನೆ: ಗುರುದೇವ, ಒಂದು ಸಂಬಂಧದಲ್ಲಿ ಒಬ್ಬ ವ್ಯಕ್ತಿಯು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದರ ಬಗ್ಗೆ ಚಿಂತಿಸಬೇಡ, ಅದು ಬಹಳ ಸ್ವಾಭಾವಿಕ. ಜನರು ನಿಮ್ಮನ್ನು ಲಘುವಾಗಿ ತೆಗೆದುಕೊಳ್ಳುತ್ತಾರೆ ಯಾಕೆಂದರೆ ನೀವು ಈಗಾಗಲೇ ಅವರಿಗೆ ಸೇರಿದವರು ಎಂದು ಅವರು ಯೋಚಿಸುತ್ತಾರೆ, ಮತ್ತು ಇದರಿಂದಾಗಿ ಅವರು ಅತಿಥಿಗಳಾಗಿರುವ ಜನರಿಗೆ ಮಾತ್ರ ಗಮನ ನೀಡುತ್ತಾರೆ. ನೀವು ಕುಟುಂಬದ ಒಂದು ಭಾಗ, ಯಾರಾದರೂ ನಿಮ್ಮಲ್ಲಿ "ನಿನಗೆ ಕಾಫಿಯಾಯಿತೇ? ನೀನೀಗ ತಿನ್ನುವೆಯಾ?" ಎಂದು ಯಾಕೆ ಕೇಳಬೇಕು? ಅದು ಸಹಜವಲ್ಲ! ಯಾರಾದರೂ ಸ್ವಲ್ಪ ಹೆಚ್ಚೇ ಪ್ರಶ್ನೆಗಳನ್ನು ಕೇಳಿದರೆ, ಆಗ ಕೂಡಾ ನೀವು ಸಂಶಯಿಸುವಿರಿ, "ಅವರು ಯಾಕೆ ನನಗೆ ಅಷ್ಟೊಂದು ಗಮನವನ್ನು ನೀಡುತ್ತಿದ್ದಾರೆ. ಏನೋ ಇರಬೇಕು ." ನೀವು ಸಂಶಯಿಸಲು ತೊಡಗುತ್ತೀರಿ.
ಒಂದು ದಿನ ಒಬ್ಬ ಸಜ್ಜನನು ನನ್ನಲ್ಲಿ ಅಂದನು, "ಗುರುದೇವ, ನಾನು ನನ್ನ ಪತ್ನಿಯ ಕಡೆಗೆ ಗಮನ ನೀಡುವಾಗ ಮತ್ತು ಅವಳೊಂದಿಗೆ ಸ್ವಲ್ಪ ಚೆನ್ನಾಗಿರುವಾಗ ಅವಳು ಸಂಶಯಿಸಲು ತೊಡಗುತ್ತಾಳೆ. ಏನೋ ತಪ್ಪಿದೆಯೆಂದು ಅವಳು ಹೇಳುತ್ತಾಳೆ ಮತ್ತು ನನ್ನಲ್ಲಿ ಕೇಳುತ್ತಾಳೆ "ಏನು ವಿಷಯ? ನೀವು ಏನೋ ತಪ್ಪು ಮಾಡಿರಬೇಕು. ನೀವು ಪ್ರಾಮಾಣಿಕರಾಗಿಲ್ಲ" ಎಂದು. ನಾನು ಸಾಮಾನ್ಯವಾಗಿರುವಂತೆ ಇದ್ದರೆ, ನಾನವಳನ್ನು ನಿರ್ಲಕ್ಷಿಸುತ್ತೇನೆಂದು ಅವಳು ಹೇಳುತ್ತಾಳೆ. ಏನು ಮಾಡುವುದು ಗುರುದೇವ?"
ಹೀಗೆ ಒಬ್ಬರು ನಿಮ್ಮ ಬಗ್ಗೆ ಸಂಶಯಿಸಲು ಬಯಸುವಾಗ, ಹೇಗಿದ್ದರೂ ಅವರು ನಿಮ್ಮ ಬಗ್ಗೆ ಸಂಶಯಿಸಲು ತೊಡಗುವರು.
ಅವನಂದನು, "ಇದು ಬಹಳ ಕಷ್ಟ. ನಾನು ಅರ್ಧ ಗಂಟೆ ತಡವಾಗಿ ಬಂದರೆ, ಅವಳು ಒಂದು ತನಿಖಾ ಆಯೋಗಕ್ಕೆ ಕುಳಿತುಕೊಳ್ಳುತ್ತಾಳೆ, "ನೀವೆಲ್ಲಿಗೆ ಹೋದಿರಿ? ನೀವು ಎಷ್ಟು ಗಂಟೆಗೆ ಕಛೇರಿಯನ್ನು ಬಿಟ್ಟಿರಿ? ಏನಾಯಿತು? ಅವಳು ನನ್ನಲ್ಲಿ ಈ ಎಲ್ಲಾ ಪ್ರಶ್ನೆಗಳನ್ನು ಕೇಳುತ್ತಾಳೆ."
ಅದಕ್ಕಾಗಿಯೇ ನಾನು ಹೇಳುವುದು, ನಾವು ನಮ್ಮದೇ ಮನಸ್ಸನ್ನು ನಿರ್ವಹಿಸುವುದು ಹೇಗೆಂಬುದನ್ನು ಕಲಿಯಬೇಕು. ನಿಮ್ಮ ಮೇಲೆ ಅಷ್ಟೊಂದು ಆಟಗಳನ್ನು ಆಡುವುದು ಮನಸ್ಸಾಗಿದೆ. ನಿಮ್ಮ ಪ್ರಭುತ್ವದಲ್ಲಿದ್ದರೆ, ನಿಮ್ಮ ಮನಸ್ಸು ನಿಮ್ಮ ಅತ್ಯುತ್ತಮ ಮಿತ್ರನಾಗಬಲ್ಲದು ಮತ್ತು ನೀವು ನಿಮ್ಮದೇ ಮನಸ್ಸಿನ ಪ್ರಭಾವದ ಅಡಿಯಲ್ಲಿದ್ದರೆ, ಅದು ನಿಮ್ಮ ಕೆಟ್ಟ ಶತ್ರು.

ಪ್ರಶ್ನೆ: ಗುರುದೇವ, ಕೃಷ್ಣ ಪರಮಾತ್ಮನು ಎಲ್ಲಿಗೆಲ್ಲಾ ಹೋಗುತ್ತಿದ್ದನೋ ಅಲ್ಲೆಲ್ಲಾ ಜಗಳಗಳು ಮತ್ತು ಹೋರಾಟಗಳು ಪ್ರಾರಂಭವಾಗುತ್ತಿದ್ದವು. ಆದರೆ ನೀವು ಎಲ್ಲಿಗೆಲ್ಲಾ ಹೋಗುವಿರೋ, ವ್ಯತ್ಯಾಸಗಳು ಕೊನೆಯಾಗುತ್ತವೆ.
ಶ್ರೀ ಶ್ರೀ ರವಿ ಶಂಕರ್: ಹೌದು, ನಾನು ಅವರ ನಗರಕ್ಕೆ ಅಥವಾ ಪಟ್ಟಣಕ್ಕೆ ಬರುತ್ತಿರುವೆನೆಂಬ ಸಮಾಚಾರ ಜನರಿಗೆ ಸಿಕ್ಕಿದಾಗ, ಅದುವೇ ಜನರ ನಡುವೆ ಹಲವಾರು ಜಗಳಗಳನ್ನು ಸೃಷ್ಟಿಸುತ್ತದೆ. ಒಬ್ಬನು ಹೇಳುತ್ತಾನೆ, "ಗುರುದೇವ ನನ್ನ ಕಾರಿನಲ್ಲಿ ಪ್ರಯಾಣಿಸುವರು." ಇನ್ನೊಬ್ಬನು ಹೇಳುತ್ತಾನೆ, "ಅವರು ನನ್ನ ಮನೆಯಲ್ಲಿ ಇರುತ್ತಾರೆ." ಮೂರನೆಯವನು ಹೇಳುತ್ತಾನೆ, "ಅವರು ನನ್ನ ಮನೆಯಲ್ಲಿ ಊಟ ಮಾಡುತ್ತಾರೆ." ಇದೆಲ್ಲದರಿಂದಾಗಿ, ಜಗಳಗಳು ಆಗಲು ತೊಡಗುತ್ತವೆ. ಆದರೆ ನನ್ನ ಭೇಟಿಯ ನಂತರ, ಜನರು ಸಂತೋಷಗೊಳ್ಳುತ್ತಾರೆ. ನಾನವರನ್ನು ಸಂತೋಷಗೊಳಿಸುವುದನ್ನು ನಾನು ಖಾತ್ರಿಪಡಿಸುತ್ತೇನೆ.

ಪ್ರಶ್ನೆ: ಗುರುದೇವ, ಪತಿ ಮತ್ತು ಪತ್ನಿಯರ ಒಂದು ಸಾಮಾನ್ಯ ಸಂಬಂಧವಾಗಿರುವುದಕ್ಕೆ ಬದಲಾಗಿ, ನಾನು ನನ್ನ ವೈವಾಹಿಕ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಇಬ್ಬರೂ ಜೊತೆಯಲ್ಲಿ ಮುಂದೆ ಸಾಗಬೇಕು ಮತ್ತು ಪರಸ್ಪರರನ್ನು ಆಧರಿಸಬೇಕು.
ಕೆಲವೊಮ್ಮೆ, ಒಬ್ಬ ಸಂಗಾತಿಯು ಒಂದು ವೈವಾಹಿಕ ಸಂಬಂಧದಲ್ಲಿನ ಆಸಕ್ತಿಯನ್ನು ಕಳೆದುಕೊಳ್ಳಬಹುದು, ಅದೇ ಸಮಯದಲ್ಲಿ ಇನ್ನೊಬ್ಬ ಸಂಗಾತಿಯು ಇನ್ನೂ ಆಸಕ್ತಿಯಲ್ಲಿರಬಹುದು; ಹೀಗಾಗಬಹುದು. ಆಗ, ವಿಷಯಗಳು ಸರಿಯಾಗಿ ನಡೆಯುತ್ತಿಲ್ಲವೆಂದು ತೋರಬಹುದು. ಇದಾಗಬಹುದು. ಆದರೆ ಆಗಲೂ ಕೂಡಾ, ನೀವು ಪರಸ್ಪರರನ್ನು ಆಧರಿಸಬೇಕು. ಇಬ್ಬರೂ ಜೊತೆಯಲ್ಲಿ ಮುಂದೆ ಸಾಗಬೇಕು.