ಸೋಮವಾರ, ಜನವರಿ 7, 2013

ಹೃದಯ ಮತ್ತು ಮನಸ್ಸಿನ ಸಂತುಲನ

೭ ಜನವರಿ ೨೦೧೩
ಕೊಚ್ಚಿ, ಕೇರಳ

ಒಂದು ಮನೆಯಲ್ಲಿ ನಿಜವಾದ ಮುಂದಾಳು ಯಾರೆಂಬುದು ನಿಮಗೆ ಗೊತ್ತೇ? ತಂದೆಯು ಮನೆಯ ಮುಂದಾಳುವೇ ಅಥವಾ ಮಗುವೇ? ಮನೆಯನ್ನು ಮುನ್ನಡೆಸುವುದು ಮಗುವೆಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇಡಿಯ ಕುಟುಂಬವು ಸುತ್ತುವುದು ಮಗುವಿನ ಸುತ್ತಲೂ, ಅಲ್ಲವೇ?! ಅದಕ್ಕಾಗಿಯೇ, ನಾನು ನನ್ನನ್ನೇ ಒಂದು ಮಗುವೆಂದು; ಒಬ್ಬ ಬಾಲಕನೆಂದು ಪರಿಗಣಿಸುತ್ತೇನೆ.
ಒಬ್ಬ ನಿಜವಾದ ಮುಂದಾಳುವಿನಲ್ಲಿ ಈ ಎರಡು ಗುಣಗಳು ಇರಬೇಕು, ಒಂದು ತಲೆಯದ್ದು ಮತ್ತು ಇನ್ನೊಂದು ಹೃದಯದ್ದು - ತಿಳುವಳಿಕೆ ಮತ್ತು ಸೂಕ್ಷ್ಮತೆ. ಹೆಚ್ಚಾಗಿ ನಾವು ಏನನ್ನು ನೋಡುತ್ತೇವೆ, ಬಹಳ ತಿಳಿವನ್ನು ಹೊಂದಿದ ಜನರು ಸೂಕ್ಷ್ಮವಾಗಿರುವುದಿಲ್ಲ, ಯಾಕೆಂದರೆ ಅವರು ತರ್ಕದ ಮೇಲೆ ಬಹಳ ಗಮನವನ್ನಿರಿಸುತ್ತಾರೆ; ವಿವೇಕದಿಂದ ಮತ್ತು ತಾರ್ಕಿಕವಾಗಿ ಇರುವುದರ ಮೇಲೆ, ಮತ್ತು ನಂತರ ಕೆಲವರು ಎಷ್ಟೊಂದು ಸೂಕ್ಷ್ಮವಾಗಿರುತ್ತಾರೆಂದರೆ, ಒಂದು ಟೋಪಿ ಕೆಳ ಬೀಳುವ ಹೊತ್ತಿಗೆ ಅವರ ಕಣ್ಣುಗಳಲ್ಲಿ ನೀರು ಬರುತ್ತದೆ, ಆದರೆ ಅವರು ಸಾಕಷ್ಟು ವಿವೇಕಿಗಳಾಗಿರುವುದಿಲ್ಲ. ಇವರಿಬ್ಬರಲ್ಲಿ ಯಾರೂ ಒಬ್ಬ ಒಳ್ಳೆಯ ಮುಂದಾಳುವಾಗಲು ಸಾಧ್ಯವಿಲ್ಲ, ಯಾಕೆಂದರೆ ನಿಮ್ಮಲ್ಲಿ ಎರಡರದ್ದೂ ಒಂದು ಸಂತುಲನವಿರಬೇಕು - ವಿವೇಕ ಮತ್ತು ಸೂಕ್ಷ್ಮತೆ; ಹೃದಯ ಮತ್ತು ಮನಸ್ಸು, ಯಾಕೆಂದರೆ ನಾವೆಲ್ಲರೂ ನಮ್ಮ ಜೀವನದ ಈ ಎರಡು ಬಹಳ ಪ್ರಧಾನವಾದ ಅಂಶಗಳಿಂದ ಮಾಡಲ್ಪಟ್ಟಿರುವೆವು. ಬುದ್ಧಿವಂತಿಕೆಗೆ ಅದರದ್ದೇ ಆದ ಸ್ಥಾನವಿದೆ ಮತ್ತು ನಮ್ಮ ಭಾವನೆಗಳಿಗೂ ಕೂಡಾ.
ಕಳೆದ ಶತಮಾನದಲ್ಲಿ, ಮಹತ್ವವನ್ನು ಕೇವಲ ಬುದ್ಧಿಗೆ ಮಾತ್ರ ನೀಡಲಾಗಿತ್ತು. ಒಬ್ಬ ಪುರುಷನ ಕಣ್ಣುಗಳಲ್ಲಿ ಕಣ್ಣೀರು ಬರುವುದನ್ನು ಏನೋ ವಿಚಿತ್ರವಾಗಿ ಪರಿಗಣಿಸಲಾಗಿತ್ತು. ಒಬ್ಬ ಪುರುಷನು ಹೇಗೆ ಅಳಲು ಸಾಧ್ಯ?! ಮತ್ತು ಒಬ್ಬಳು ಸ್ತ್ರೀಯು ಮೈಕ್ ಹಿಡಿದು ನಿಂತುಕೊಂಡು ಮಾತನಾಡುವುದು ಅಥವಾ ತನ್ನ ಹಕ್ಕಿಗಾಗಿ ಹೋರಾಡುವುದು ವಿಚಿತ್ರವೆಂದು ಪರಿಗಣಿಸಲಾಗುತ್ತಿತ್ತು. ಸಮಾಜವಿದ್ದುದೇ ಹಾಗೆ. ಸ್ತ್ರೀಯರು ಮುಂದಾಳುವಾಗಲು ಸಾಧ್ಯವಿರಲಿಲ್ಲ! ಖಂಡಿತಾ, ಕೇರಳದಲ್ಲಲ್ಲ. ಕೇರಳದಲ್ಲಿ ಒಂದು ಬೇರೆಯ ಪದ್ಧತಿಯಿತ್ತು. ಆದರೆ ಪ್ರಪಂಚದಾದ್ಯಂತ, ಮಾತನಾಡುವ ಆ ಬೌದ್ಧಿಕ ಶಕ್ತಿಯನ್ನು ಸ್ತ್ರೀಯರಿಗೆ ನೀಡಿರಲಿಲ್ಲ, ಯಾಕೆಂದರೆ ಅವಳನ್ನು ಹೆಚ್ಚು ನ್ಯಾಯಯುತ ಹಾಗೂ ಸೂಕ್ಷ್ಮವಾದ ವಂಶವೆಂದು ಬದಿಗೆ ತಳ್ಳಲಾಗಿತ್ತು. ಇವತ್ತು, ಚಿತ್ರಣವು ಬದಲಾಗಿದೆ. ಇವತ್ತು ನಮಗೆ ವಿವೇಕ ಮತ್ತು ಸೂಕ್ಷ್ಮತೆ ಬೇಕು. ಪ್ರತಿಯೊಬ್ಬ ಮುಂದಾಳುವಿನಲ್ಲೂ ನಮಗೆ ಒಂದು ಹೆಣ್ಣಿನ ಆ ಮೃದುತ್ವವು ಬೇಕಾಗಿದೆ ಹಾಗೂ ಪ್ರತಿಯೊಬ್ಬಳು ಸ್ತ್ರೀಯಲ್ಲೂ ಒಬ್ಬ ಗಂಡಿನ ಸಾಮರ್ಥ್ಯ ಮತ್ತು ಅವಿರತವಾದ ಯತ್ನ ಇರಬೇಕು, ಆಗ ಒಬ್ಬರಿಗೆ ಯಾವುದೇ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯವಿದೆ. ನೀವೇನು ಹೇಳುವಿರಿ?!
ನಾನು ನಿಮಗೆ ಏನೋ ಬಹಳ ಪ್ರಧಾನವಾದುದನ್ನು ಹೇಳಲು ಬಯಸುತ್ತೇನೆ. ಯಾವಾಗೆಲ್ಲಾ ನಾವು ನಾಯಕತ್ವದ ಬಗ್ಗೆ ಅಥವಾ ನಮ್ಮ ಹೃದಯಗಳಿಗೆ ಬಹಳ ಪ್ರಿಯವಾದ ಯಾವುದೇ ವಿಷಯದ ಬಗ್ಗೆ ಚರ್ಚಿಸಬೇಕಾದಾಗ ನಾವು ಒಂದು ಬಹಳ ಅನೌಪಚಾರಿಕ ವಾತಾವರಣದಲ್ಲಿ ಇರಬೇಕು. ಆದುದರಿಂದ, ನಾವು ಯಾಕೆ, ನಮ್ಮ ಹಿಂದಿರುವ, ನಮ್ಮ ಮುಂದಿರುವ, ನಮ್ಮ ಬದಿಗಳಲ್ಲಿರುವ ವ್ಯಕ್ತಿಗಳೊಂದಿಗೆ, "ನಾನು ನಿನಗೆ ಸೇರಿದವನು!" ಎಂದು ಹೇಳುತ್ತಾ ಅಭಿವಂದಿಸಲು ಕೇವಲ ಅರ್ಧ ನಿಮಿಷಗಳನ್ನು ತೆಗೆದುಕೊಳ್ಳಬಾರದು?
ಆಯಿತೇ?! ನೀವು ನಿಮ್ಮ ಪಕ್ಕದಲ್ಲಿರುವ ಜನರನ್ನು ಅಭಿವಂದಿಸಿದಿರೇ? ನಿಮ್ಮಲ್ಲಿ ಕೆಲವರಿಗೆ, ಇತರರಿಗೆ ’ನಮಸ್ಕಾರ’ ಎಂದು ಹೇಳಲೂ ಕೂಡಾ ಬಹಳ ನಾಚಿಕೆಯಾಯಿತು.
ಹಲವು ಸಲ ನಾವು, ಮುಂದಾಳುಗಳು ಅಂತಹ ಒಂದು ಪರಿಸ್ಥಿತಿಯಲ್ಲಿರುವುದನ್ನು ಕಾಣುತ್ತೇವೆ. ಅವರು ಜನರ ಕಡೆಗೆ ನೋಡುವುದಿಲ್ಲ, ಅವರು ಬೇರೆಲ್ಲೋ ನೋಡುತ್ತಾರೆ ಮತ್ತು ಮಾತನಾಡುತ್ತಾ ಇರುತ್ತಾರೆ. ಅವರು ಜನರಲ್ಲಿ ಒಂದಾಗಲು ಸಾಧ್ಯವಿಲ್ಲ, ಅಲ್ಲವೇ?! ಹಾಗಾದರೆ, ನೀವು ನಿಮ್ಮ ಸುತ್ತಲಿನ ಜನರಿಗೆ, "ನಾನು ನಿನಗೆ ಸೇರಿದವನು" ಎಂದು ನಿಜವಾಗಿ ಹೇಳಿದಿರೇ ಅಥವಾ ನೀವದನ್ನು ಒಂದು ಔಪಚಾರಿಕತೆಯಿಂದ ಮಾಡಿದಿರೇ?
ನೀವು ಗಮನಿಸಿರಬೇಕು, ನೀವು ವಿಮಾನದಿಂದ ಕೆಳಗಿಳಿಯುವಾಗ, ಗಗನಸಖಿಯು, ’ಶುಭ ದಿನ!" ಎಂದು ಹೇಳುತ್ತಾ ನಿಮಗೆ ಅಭಿವಂದಿಸುತ್ತಾಳೆ. ಅವರು ಇಷ್ಟನ್ನು ಹೇಳುತ್ತಾರೆ, ಆದರೆ ಅವರದನ್ನು ನಿಜವಾದ ಅರ್ಥದಲ್ಲಿ ಹೇಳುವುದಿಲ್ಲ. ಅದೇ ರೀತಿಯಲ್ಲಿ, ನಮ್ಮ ದೈನಂದಿನ ಜೀವನದಲ್ಲಿ ನಾವು ಅದಲು ಬದಲು ಮಾಡಿಕೊಳ್ಳುವ ವಂದನೆಗಳಲ್ಲಿ ಬಹಳಷ್ಟು ಆ ಹಂತದಿಂದ ಬಂದವು. ನಾವು, ’ಹಾಯ್’ ಅಥವಾ ’ಸ್ವಾಗತ’ ಎಂದು ಹೇಳುತ್ತೇವೆ, ಆದರೆ ಒಬ್ಬರನ್ನು ಸ್ವಾಗತಿಸುವ ಹೃದಯವಂತಿಕೆ  ಅಲ್ಲಿರುವುದಿಲ್ಲ. ಆದರೆ ಅದೇ ಶಬ್ದಗಳು, ನಿಮಗೆ ಬಹಳ ಪ್ರಿಯರಾದ ಒಬ್ಬರಿಂದ; ನಿಮ್ಮ ತಾಯಿ ಅಥವಾ ನಿಮ್ಮ ಸಹೋದರಿ ಅಥವಾ ಆತ್ಮೀಯ ಸ್ನೇಹಿತರಿಂದ ಬಂದಾಗ, ಅದು ಸ್ವಲ್ಪ ಕಂಪನಗಳನ್ನು ಒಯ್ಯುತ್ತದೆ.
ನಾವು ಸಂಪರ್ಕಿಸುವುದರಲ್ಲಿ ಹೆಚ್ಚಿನದು ಕಂಪನಗಳ ಮೂಲಕ, ಮತ್ತು ಶಬ್ದಗಳು ಅದರಲ್ಲಿ ಒಂದು ಬಹಳ ಚಿಕ್ಕ ಪಾತ್ರವನ್ನು ವಹಿಸುತ್ತವೆ. ನಿಮ್ಮ ಕಂಪನಗಳು, ನಿಮ್ಮ ಬಾಯಿಯಿಂದ ಶಬ್ದಗಳು ಹೊರಬರುವುದಕ್ಕೂ ಮೊದಲೇ, ಹೆಚ್ಚು ಸಂದೇಶಗಳನ್ನು ಕಳುಹಿಸುತ್ತವೆ. ಒಬ್ಬ ಮುಂದಾಳುವು ತನ್ನ ಶಬ್ದಗಳ ಮೇಲೆ ಅವಲಂಬಿತನಾದಾಗ, ತನ್ನ ಮಾತನ್ನು ನೆಚ್ಚಿಕೊಳ್ಳಲಾಗುವುದಿಲ್ಲ ಎಂಬುದರ ಬಗ್ಗೆ ಖಚಿತವಾಗಿ ತಿಳಿದಿರಬೇಕು. ನೀವು ಮಾತಿನ ಮೇಲೆ ಅಷ್ಟೊಂದು ಅವಲಂಬಿತರಾಗಿದ್ದರೆ, ಜನರು ನಿಮ್ಮ ಮಾತಿನ ಮೇಲೆ ಅವಲಂಬಿಸರು. ಅದು ಒಳಗೆ ಆಳದಿಂದ ಬರಬೇಕು. ಅದನ್ನೇ ಪ್ರಾಮಾಣಿಕತೆ ಎಂದು ಕರೆಯುವುದು; ನಿಮ್ಮ ಕಂಪನಗಳು, ನಿಮ್ಮ ಭಾವನೆಗಳು ಮತ್ತು ನಿಮ್ಮ ಮಾತುಗಳ ನಡುವೆ ಸಂಬಂಧವಿರುವಾಗ.
ನೀವು ನನ್ನಲ್ಲಿ ಹೇಳಬಹುದು, "ಗುರುದೇವ, ಈ ಮೂರನ್ನು ಸರಿಹೊಂದಿಸುವುದು ಬಹಳ ಕಷ್ಟ. ಅದು ಹೇಗೆ ಸಾಧ್ಯ?! ಪ್ರತಿಯೊಬ್ಬರಿಗೂ ಈ ಮೂರನ್ನು ಸರಿಹೊಂದಿಸಲು ಸಾಧ್ಯವಾದರೆ, ಪ್ರತಿಯೊಬ್ಬರೂ ಒಬ್ಬ ಸಂತರಾಗುವರು. ಅದು ಪ್ರಾಯೋಗಿಕವಲ್ಲ!" ನಾನು ಹೇಳುತ್ತೇನೆ, ಸರಿ, ನಾನು ನೀವು ಹೇಳುವುದನ್ನು ಒಪ್ಪುತ್ತೇನೆ. ನಿಮಗದನ್ನು ೧೦೦% ಸರಿಹೊಂದಿಸಲು ಸಾಧ್ಯವಿಲ್ಲ, ಆದರೆ ಕನಿಷ್ಠಪಕ್ಷ ನೀವು ೨೫% ಆದರೂ ಸರಿಹೊಂದಿಸಬಲ್ಲಿರಾ? ಅಷ್ಟನ್ನು ನೀವು ಮಾಡಬಹುದು, ಯಾಕೆಂದರೆ ಜನರಿಗೆ ಅದರ ಅನುಭವವಾಗುತ್ತದೆ; ಅದನ್ನು ಗ್ರಹಿಸಬಲ್ಲರು. ಆದುದರಿಂದ, ನಾವು ನಮ್ಮ ಮಾತಿನ ಮೂಲಕ ತಿಳಿಯಪಡಿಸುವುದಕ್ಕಿಂತ ಹೆಚ್ಚಾಗಿ ನಮ್ಮ ಕಂಪನಗಳ ಮೂಲಕ ತಿಳಿಯಪಡಿಸುತ್ತೇವೆ. ಶಬ್ದಗಳು ಮುಖ್ಯ, ಆದರೆ ಅದಕ್ಕೆ ಆ ಉಪಸ್ಥಿತಿಯ ಅಗತ್ಯವಿದೆ.
ಜನರು ಬುದ್ಧಿವಂತರು, ನೀವು ಯಾವಾಗ ನಿಜವಾಗಿ ಯಾರನ್ನಾದರೂ ಸ್ವಾಗತಿಸುವಿರಿ ಮತ್ತು ಯಾವಾಗ ನೀವು ಅದನ್ನು ಔಪಚಾರಿಕವಾಗಿ ಮಾಡುವಿರಿ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಲ್ಲರು.
ಸರಿ, ನನ್ನಲ್ಲಿ ನಿಮಗಾಗಿ ಇನ್ನೊಂದು ವ್ಯಾಯಾಮವಿದೆ. ನೀವದನ್ನು ಮಾಡುವಿರೇ? ನೀವು ಸಿದ್ಧರಿರುವಿರೇ? ನೀವು ನಿಮ್ಮ ಪಕ್ಕದಲ್ಲಿರುವ ವ್ಯಕ್ತಿಯ ಕಡೆಗೆ ತಿರುಗಿ ಅವರ ಬಳಿ, "ನಾನು ನಿಮ್ಮನ್ನು ನಂಬುವುದಿಲ್ಲ!" ಎಂದು ಹೇಳುವಿರೇ? ನಿಮ್ಮ ಸಂಗಾತಿಯು ನಿಮ್ಮ ಪಕ್ಕದಲ್ಲಿದ್ದರೆ, ಇದೊಂದು ಅವಕಾಶ! (ನಗು)
ನೀವೆಲ್ಲರೂ ಅದನ್ನು ಅಷ್ಟು ತ್ವರಿತವಾಗಿ ಮಾಡಿದಿರೇ?! ಅದನ್ನು ಮಾಡುವುದು ಸುಲಭವಲ್ಲವೆಂಬುದನ್ನು ನೀವು ಗಮನಿಸಿದಿರೇ? ನೀವು ಯಾರೊಂದಿಗಾದರೂ, "ನಾನು ನಿಮ್ಮನ್ನು ನಂಬುವುದಿಲ್ಲ" ಎಂದು ಹೇಳುತ್ತಾ ನಗಲು ಪ್ರಾರಂಭಿಸಿದುದು ಮತ್ತು ಅವರು ಕೂಡಾ ನಗಲು ಪ್ರಾರಂಭಿಸಿದುದು ಇದೇ ಮೊದಲ ಬಾರಿಗಿರಬೇಕು. ಪರಿವರ್ತನೆಯು ಆರಂಭವಾಗಿದೆ. ನೀವು ಅವರ ಮಾತಿನ ಮೇಲೆ ಅವಲಂಬಿತರಾಗಿರಲಿಲ್ಲ ಮತ್ತು ಅವರು ನಿಮ್ಮ ಮಾತಿನ ಮೇಲೆ ಅವಲಂಬಿತರಾಗಿರಲಿಲ್ಲ, ಅಲ್ಲವೇ?!
ಕೇವಲ ಒಂದು ನಿಮಿಷ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಯಾರೂ ನಿಮ್ಮನ್ನು ನಂಬುವುದಿಲ್ಲವೆಂದು ಸುಮ್ಮನೇ ಕಲ್ಪಿಸಿ. ಪ್ರತಿಯೊಬ್ಬರೂ ನಿಮ್ಮಲ್ಲಿ, "ನಾನು ನಿನ್ನನ್ನು ನಂಬುವುದಿಲ್ಲ" ಎಂದು ಹೇಳುತ್ತಿದ್ದಾರೆ. ನೀವು ನಿಮ್ಮ ಕಣ್ಣುಗಳನ್ನು ತೆರೆಯಬಹುದು. ನಿಮಗೆ ಹೇಗನ್ನಿಸುತ್ತಿದೆ? ನೆಮ್ಮದಿಯಾಯಿತೇ?!  ಭಯಾನಕವಾಗಿತ್ತೇ?!
(ಸಭಿಕರು: ಭಯಾನಕ; ಸಂಕಟಕರ; ಅಹಿತಕರ; ಹತಾಶೆ; ದುಃಖ; ಭೀಕರ; ವ್ಯಾಕುಲತೆ)
ನಿಮಗೆ ಗೊತ್ತಾ, ನಮ್ಮಲ್ಲಿ, "ನಾನು ಯಾರನ್ನೂ ನಂಬುವುದಿಲ್ಲ" ಎಂಬ ಮನೋಭಾವವಿರುವಾಗ ನಾವು ಹುಟ್ಟಿಸುವುದು ಇದನ್ನೇ. ನಾವು ಎಂತಹ ಕಂಪನವನ್ನು ಸೃಷ್ಟಿಸುತ್ತೇವೆಯೆಂದರೆ, ಯಾರಾದರೂ ನಮ್ಮ ಸಮೀಪ ಬಂದರೆ, ನಮಗೆ ಹಾಗೆ ಅನ್ನಿಸುವುದೆಂದು ಅವರಿಗೆ ಅನ್ನಿಸುತ್ತದೆ, ಮತ್ತು ನಂತರ ಸಮಾಜದಲ್ಲಿ ಅಪನಂಬಿಕೆಯುಂಟಾಗುತ್ತದೆ. ಹೀಗೆಯೇ ಸಮಾಜವು ಅಧಃಪತನ ಹೊಂದಲು ತೊಡಗುವುದು ಮತ್ತು ಘರ್ಷಣೆಗಳು ಏಳುವುದು.
ನಿಮಗೆ ಗೊತ್ತಾ, ನಂಬಿಕೆಯ ಒಪ್ಪಂದದ ಬಗ್ಗೆ ಗಮನ ಹರಿಸಿದರೆ ಹೆಚ್ಚಿನ ಘರ್ಷಣೆಗಳನ್ನು ಬಹಳ ಪ್ರಾರಂಭದಲ್ಲಿಯೇ ಪರಿಹರಿಸಬಹುದು. ನೋಡಿ, ಯಾರೂ ನಿಮ್ಮನ್ನು ನಂಬುವುದಿಲ್ಲವೆಂದು ನಿಮಗನ್ನಿಸುವಾಗ, ನಿಮಗೆ ಬಹಳ ದುಃಖವಾಗುತ್ತದೆ ಮತ್ತು ನಿಮ್ಮ ಸುತ್ತಲೂ ಬಹಳ ಕೆಟ್ಟ ಕಂಪನದ ಅನುಭವವಾಗುತ್ತದೆ. ಇದು ಎಂತಹ ಒಂದು ವಾತಾವರಣವನ್ನು ಸೃಷ್ಟಿಸುವುದೆಂದರೆ, ಅದು ನಿಮಗೆ ಅಥವಾ ಬೇರೆ ಯಾರಿಗಾದರೂ ಒಳ್ಳೆಯದಲ್ಲ. ನೀವು ಬೋಳರಾಗಿರಬೇಕೆಂಬುದು ನನ್ನ ಮಾತಿನ ಅರ್ಥವಲ್ಲ, ಆದರೆ ಅದೇ ಸಮಯದಲ್ಲಿ ನೀವು ನಂಬಿಕೆಯ ಈ ಮಗ್ಗುಲಿನ ಕಡೆಗೆ ನೋಡಬೇಕೆಂದು ನಾನು ಬಯಸುತ್ತೇನೆ. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರದ ಒಂದು ಸಮಾಜವು ಯಾವುದೇ ಲೆಕ್ಕದಲ್ಲಿಯೂ ಸಮೃದ್ಧಿ ಹೊಂದಲು, ಪ್ರಗತಿ ಹೊಂದಲು ಅಥವಾ ಸೃಜನಶೀಲವಾಗಲು ಸಾಧ್ಯವಿಲ್ಲ. ಇದು ನನ್ನ ತೀರ್ಮಾನ.
ಈಗ ನೀವು ಕೇಳಬಹುದು, "ಸ್ವಯಂ-ಅನುಮಾನದ ಬಗ್ಗೆಯೇನು? ನನಗೆ ಇತರರಲ್ಲಿ ನಂಬಿಕೆಯಿದೆ ಆದರೆ ನಾನು ನನ್ನನ್ನೇ ನಂಬುವುದಿಲ್ಲ." ಇದು ಅದೇ ರೋಗದ ಇನ್ನೊಂದು ರೂಪ. ನಿಮ್ಮನ್ನೇ ನಂಬುವುದರ ಕೊರತೆಯು, ಇತರರ ಮೇಲಿರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇತರರ ಮೇಲಿರುವ ನಂಬಿಕೆಯ ಕೊರತೆಯು ಸಮಾಜದ ಮೌಲ್ಯಗಳ ಮೇಲಿರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇದು ತಿರುಗಿ ತನ್ನ ಮೇಲೆಯೇ ಇರುವ ನಂಬಿಕೆಯ ಕೊರತೆಗೆ ದಾರಿಮಾಡುತ್ತದೆ. ಇದನ್ನು ಸರಿಪಡಿಸಬೇಕಾಗಿದೆ, ಮತ್ತು ಇದನ್ನು ಸರಿಪಡಿಸುವ ಯಾವುದನ್ನೇ ಆದರೂ ಸ್ವಾಗತಿಸಬೇಕು. ಸಮುದಾಯಗಳ ನಡುವಿನ ನಂಬಿಕೆ, ಒಂದೇ ಕುಟುಂಬದ ಸದಸ್ಯರ ನಡುವಿನ ನಂಬಿಕೆ ಮುಖ್ಯವಾಗಿದೆ. ನಾನು ಹೇಳುವುದೇನೆಂದರೆ, ಅಪನಂಬಿಕೆಗೆ ಕಾರಣವಾಗಿರುವುದು ಒತ್ತಡ.
ಪ್ರತಿಯೊಬ್ಬರೂ ಒಬ್ಬ ಮೋಸಗಾರರೆಂದು ಯೋಚಿಸಬೇಡಿ. ಭೂಮಿಯ ಮೇಲೆ ಒಳ್ಳೆಯ ಜನರಿದ್ದಾರೆ ಮತ್ತು ಅವರ ಸಂಖ್ಯೆ ಬಹಳ ಹೆಚ್ಚಿದೆ. ಪ್ರಪಂಚವು ಇವತ್ತು ಕೆಟ್ಟದಾಗಿರುವುದು ಕೆಲವು ಕೆಟ್ಟ ಜನರಿಂದಾಗಿಯಲ್ಲ, ಆದರೆ ಅನಾನುಕೂಲ ಪರಿಸ್ಥಿತಿಗಳನ್ನು ಸೃಷ್ಟಿಸಿರುವುದು ಒಳ್ಳೆಯ ಜನರ ಮೌನವಾಗಿದೆ. ಈಗ ಇದನ್ನು ಬದಲಾಯಿಸುವುದು ನಮ್ಮ ಕೈಗಳಲ್ಲಿದೆ. ನಿಮ್ಮಲ್ಲಿ ಪ್ರತಿಯೊಬ್ಬರೂ ಒಬ್ಬ ಮುಂದಾಳು, ಒಬ್ಬ ಮುಂದಾಳುವಿಗಾಗಿ ಹುಡುಕಾಡಬೇಡಿ. ಮುಖ್ಯವಾದುದೇನೆಂದರೆ ಹಿಂದೆ ನಿಂತು ಮುನ್ನಡೆಸುವುದು. ಒಬ್ಬ ನಿಜವಾದ ಮುಂದಾಳುವೆಂದರೆ, "ನಾನು ಮುಂದಾಳು, ನೀವು ನನ್ನನ್ನು ಹಿಂಬಾಲಿಸಬೇಕು" ಎಂದು ಒತ್ತಿ ಹೇಳುವವನಲ್ಲ, ಬದಲಾಗಿ ಅವನು, "ಮುಂದಕ್ಕೆ ಹೋಗಿ" ಎಂದು ಹೇಳುತ್ತಾನೆ ಮತ್ತು ಅವನು ಇತರರನ್ನು ಮುಂದಕ್ಕೆ ತಳ್ಳುತ್ತಾನೆ. "ನಾನಿಲ್ಲಿ ನಿಮ್ಮೊಂದಿಗಿದ್ದೇನೆ, ಆದುದರಿಂದ ನೀವು ಓಡಿ"; ಒಂದು ಓಟದ ಪಂದ್ಯದಲ್ಲಿ ತನ್ನ ಕಡೆಯಿಂದ ಭಾಗವಹಿಸುವವನಿಗೆ ಸಹಾಯ ಮಾಡುವ ಒಬ್ಬ ತರಬೇತುದಾರನಂತೆ ಅಥವಾ ನಿಮಗೆ ಈಜಲು ಕಲಿಸುವ ಒಬ್ಬ ತರಬೇತುದಾರನಂತೆ. ಒಬ್ಬರು ವಾದ ಮಾಡುತ್ತಾರೆ, ನನಗೆ ಈಜಲು ತಿಳಿದಿಲ್ಲದಿರುವಾಗ ನಾನು ನೀರಿನೊಳಕ್ಕೆ ಹಾರುವುದು ಹೇಗೆ? ಆದರೆ ನೀವು ನೀರಿನೊಳಕ್ಕೆ ಇಳಿಯದೆ, ನಿಮಗೆ ಈಜುವುದನ್ನು ಕಲಿಯಲು ಹೇಗೆ ಸಾಧ್ಯ?! ನಿಮಗೆ ಗಾಳಿಯಲ್ಲಿ ಈಜಲು ಸಾಧ್ಯವಿಲ್ಲ. ಆದುದರಿಂದ ಆ ಮಾರ್ಗದರ್ಶನವು ಒಬ್ಬನ ಸ್ವಂತ ಜೀವನದ ಅನುಭವದಿಂದ ಬರಬೇಕು.
ಭಾರತದಲ್ಲಾಗಿರುವ ದೊಡ್ಡ ಗಲಭೆಯನ್ನು ನೀವು ನೋಡಿರುವಿರಿ. ಕೊನೆಗೂ ಜನರು ಮಹಿಳೆಯರ ದುರವಸ್ಥೆಯ ವಿಷಯವಾಗಿ ಎಚ್ಚೆತ್ತಿದ್ದಾರೆ. ಒಬ್ಬಳು ಮಹಿಳೆಯು ಕಿರುಕುಳಕ್ಕೊಳಗಾಗಿರುವುದು ಇದು ಮೊದಲನೆಯ ಸಲವಲ್ಲ, ಅದು ಹಲವಾರು ವರ್ಷಗಳಿಂದ ಮತ್ತು ಹಲವಾರು ಜಾಗಗಳಲ್ಲಿ ನಡೆಯುತ್ತಿದೆ. ಜನರು ಎಚ್ಚೆತ್ತಿದ್ದಾರೆ, ಮತ್ತು ಆ ಜನರನ್ನು ಶಿಕ್ಷಿಸಬೇಕೆಂಬುದಾಗಿ ಎಲ್ಲರೂ ಬೇಡಿಕೆಯನ್ನೊಡ್ಡುತ್ತಿದ್ದಾರೆ, ಆದರೆ ಅವರು ಒಬ್ಬ ವ್ಯಕ್ತಿಯನ್ನು ಬಿಡುತ್ತಿದ್ದಾರೆ; ಶ್ರೀಮಾನ್. ಮದ್ಯಸಾರ. ಈ ವ್ಯಕ್ತಿಗಳು ಮದ್ಯಪಾನ ಮಾಡದೇ ಇರುತ್ತಿದ್ದರೆ, ಬಹುಶಃ ಅವರು ತಮ್ಮ ಪ್ರಜ್ಞೆ ಕಳೆದುಕೊಳ್ಳುತ್ತಿರಲಿಲ್ಲ. ಮತ್ತು ಈ ವ್ಯಕ್ತಿಗಳು ಪ್ರಜ್ಞೆಯಲ್ಲಿರುತ್ತಿದ್ದರೆ, ಬಹುಶಃ ಅವರು ಅಂತಹ ಒಂದು ಅಪರಾಧವನ್ನೆಸಗುತ್ತಿರಲಿಲ್ಲ. ಆದರೆ ಅವರು ಸಂಪೂರ್ಣವಾಗಿ ಪಾನಮತ್ತರಾಗಿದ್ದರು. ಅಲ್ಲವೇ! ಮೊದಲ ದೋಷಿಯಾಗಿರುವುದು ಮದ್ಯಸಾರ.
ನಾನಿದನ್ನು ಪ್ರತಿದಿನವೂ ಕೇಳುತ್ತಿರುತ್ತೇನೆ; ಪ್ರತಿಯೊಂದು ದಿನವೂ. ಗಂಡಸರು ರಾತ್ರಿಯಲ್ಲಿ ಕುಡಿಯುತ್ತಾರೆ ಮತ್ತು ನಂತರ ಹೋಗಿ ತಮ್ಮ ಪತ್ನಿಯರನ್ನು ಹೊಡೆಯುತ್ತಾರೆ. ಬೆಳಗ್ಗೆ ಅವರು ತಮ್ಮ ಪತ್ನಿಯ ಕ್ಷಮಾಪಣೆ ಕೇಳುತ್ತಾರೆ ಮತ್ತು ಅವಳು ಅವನನ್ನು ಕ್ಷಮಿಸುತ್ತಾಳೆ ಹಾಗೂ ಜೀವನವು ಮುಂದುವರಿಯುತ್ತದೆ.

ಪ್ರಶ್ನೆ: ದಿಲ್ಲಿಯ ಸಾಮೂಹಿಕ ಅತ್ಯಾಚಾರದ ಘಟನೆಯ ಹಿಂದಿನ ಪ್ರಧಾನ ಕಾರಣ ಮದ್ಯಸಾರವೆಂದು ನೀವು ಈಗಷ್ಟೇ ಹೇಳಿದಿರಿ. ಆದರೆ ಇವತ್ತು, ಚಿಕ್ಕ ಹುಡುಗಿಯರು ತಮ್ಮ ಸ್ವಂತ ತಂದೆಯರಿಂದ ಅತ್ಯಾಚಾರಕ್ಕೊಳಗಾಗುವ ಪ್ರಕರಣಗಳಾಗುತ್ತಿವೆ. ಅಂತಹ ಪ್ರಕರಣಗಳಲ್ಲಿ, ಅದು ಕೇವಲ ಮದ್ಯಸಾರವಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆ ಯಾವುದು?
ಶ್ರೀ ಶ್ರೀ ರವಿ ಶಂಕರ್: ಸರಿ, ಈ ಪ್ರಕರಣದ ಹಿಂದಿನ ಪ್ರಧಾನ ಕಾರಣ ಮದ್ಯಸಾರವಲ್ಲ.
ಲೈಂಗಿಕ ಅಪರಾಧಿಗಳಲ್ಲಿ ಪ್ರಾಥಮಿಕವಾಗಿ ಮೂರು ಸಮಸ್ಯೆಗಳಿವೆ. ಒಂದನೆಯದು ಹಾರ್ಮೋನ್ ಸಮಸ್ಯೆಗಳು; ಇಲ್ಲಿ ಅವರಲ್ಲಿ ಸ್ವಲ್ಪ ಗಂಭೀರವಾದ ಹಾರ್ಮೋನ್ ಅಸಮತೋಲನಗಳಿರಬಹುದು. ಎರಡನೆಯದು ಭಾವನಾತ್ಮಕ ತುಮುಲಗಳು. ವ್ಯಕ್ತಿಯು ಯಾವುದಾದರೂ ರೀತಿಯಲ್ಲಿ, ತನ್ನೊಳಗೆಯೇ ಒಬ್ಬ ಬಲಿಪಶುವಾಗಿರಬಹುದು ಮೂರನೆಯದು, ಮಾನವೀಯ ಮೌಲ್ಯಗಳ ಸಂಪೂರ್ಣ ಅವನತಿ.
ಆದುದರಿಂದ, ಈ ಮೂರು ವಿಷಯಗಳು ಒಟ್ಟು ಸೇರಿ ಒಬ್ಬ ವ್ಯಕ್ತಿಯು, ತಾನೇ ಪಶ್ಚಾತ್ತಾಪ ಪಡುವಂತಹ ಅಪರಾಧಗಳನ್ನು ಎಸಗುವಂತೆ ಮಾಡಬಹುದು. ತಾವೇನೋ ಉತ್ತಮವಾದುದನ್ನು ಸಾಧಿಸಿದ್ದೇವೆಂದು ಅವರು ಸಂತೋಷಪಡಬಹುದೆಂದಲ್ಲ. ಅವರು ಒಂದು ಚಿಕ್ಕ ಮಗುವಿನೊಂದಿಗೆ ಅಂತಹ ಒಂದು ಕೆಟ್ಟ ಕೆಲಸವನ್ನು ಮಾಡುತ್ತಾರೆ. ತಮ್ಮ ರೋಗಪೀಡಿತ ಮನಸ್ಸಿನಿಂದಾಗಿ, ಅಸಮತೋಲನಗೊಂಡ ಭಾವನೆಗಳು ಮತ್ತು ಹಾರ್ಮೋನುಗಳಿಂದಾಗಿ ಅವರು ಬಲವಂತಕ್ಕೊಳಗಾಗುತ್ತಾರೆ. ಆದುದರಿಂದ ಈ ರೀತಿಯ ಜನರಿಗೆ ಶುಶ್ರೂಷೆಯ ಅಗತ್ಯವಿದೆ. ಅವರಿಗೆ ಖಂಡಿತವಾಗಿ ಸಲಹೆಯ ಅಗತ್ಯವಿದೆ, ಮತ್ತು ಸಮಾಜವು ಯಾವುದೇ ನಿಂದನೆಯನ್ನು ಮಾಡದೇ ಅವರಿಗೆ ಈ ರೀತಿಯ ಸಲಹೆಯನ್ನು ಒದಗಿಸಬೇಕು.
ನಿಮಗೆ ಗೊತ್ತಾ, ಇದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲ, ವಾಸ್ತವವಾಗಿ, ಎಲ್ಲಾ ಮುಂದುವರಿದ ದೇಶಗಳಲ್ಲಿ ಇದು ಹೆಚ್ಚಾಗಿದೆ. ಪ್ರಪಂಚದ ಎಲ್ಲೆಡೆಯಲ್ಲಿ, ಮಗುವಿನ ಪೀಡನೆಯ ಈ ಸಮಸ್ಯೆಯು ಪ್ರಬಲವಾಗಿದೆ. ಅಂತಹ ಹಲವಾರು ಪ್ರಕರಣಗಳಿವೆ. ತಂದೆಯು ತನ್ನ ಸ್ವಂತ ಮಗಳಿಗೆ ಲೈಂಗಿಕ ಕಿರುಕುಳ ನೀಡುವುದು, ಭಾರತದಲ್ಲಿ ನಾವು ಇಂತಹುದನ್ನು ಕೇಳಿದುದು ತೀರಾ ಇತ್ತೀಚೆಗಷ್ಟೇ, ಆದರೆ ಅಮೇರಿಕಾದಲ್ಲಿ ಇದು ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಎಲ್ಲಾ ದೂರದರ್ಶನ ಕಾರ್ಯಕ್ರಮಗಳಿಂದ ಅದು ಯಾವ ಮಟ್ಟಕ್ಕೆ ಹೋಗಿದೆಯೆಂದರೆ, ಕೆಲವೊಮ್ಮೆ ಮಕ್ಕಳು, "ಓ, ಬಹುಶಃ ನನ್ನ ತಂದೆಯು ನನಗೆ ಈ ರೀತಿ ಮಾಡಿರಬೇಕು" ಎಂದು ಸಂಶಯಿಸಲು ತೊಡಗುತ್ತಾರೆ.
ಅಂತಹ ಒಂದು ಪ್ರಕರಣವನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಒಬ್ಬರು ಹಿರಿಯ ದಂಪತಿಗಳು ನನ್ನ ಬಳಿಗೆ ಬಂದರು. ಆ ಸಮಯದಲ್ಲಿ ಅದಾಗಲೇ ೩೮ ವರ್ಷ ವಯಸ್ಸಾಗಿದ್ದ ಅವರ ಮಗಳು ಈ ಎಲ್ಲಾ ಚರ್ಚಾ ಕಾರ್ಯಕ್ರಮಗಳನ್ನು ನೋಡಿದ ಬಳಿಕ ಅಚಾನಕ್ಕಾಗಿ, ತಾನೊಬ್ಬಳು ಬಲಿಪಶುವೆಂದು; ತಾನು ಚಿಕ್ಕವಳಿರುವಾಗ ತನ್ನ ತಂದೆಯು  ತನ್ನೊಂದಿಗೆ ಹೀಗೆ ಮಾಡಿದರು ಎಂದು ಯೋಚಿಸಿದಳು. ಆದುದರಿಂದ ಅಚಾನಕ್ಕಾಗಿ, ಈ ದೂರದರ್ಶನ ಕಾರ್ಯಕ್ರಮದ ಬಳಿಕ, ಹೆತ್ತವರು ಮತ್ತು ಮಗಳ ನಡುವಿನ ಸಂಬಂಧ ಬಹಳಷ್ಟು ಕೆಟ್ಟದಾಯಿತು. ತಂದೆಯು, "ಯಾವತ್ತಾದರೂ ಅಂತಹ ಒಂದು ಅಪರಾಧವನ್ನು ನಾನು ಮಾಡಲು ಹೇಗೆ ಸಾಧ್ಯ? ನನ್ನ ಮಗಳಿಗೆ ನಾನು ಈ ರೀತಿ ಮಾಡಿರುವೆನೆಂದು ಅವಳಂದುಕೊಂಡಿದ್ದಾಳೆ" ಎಂದು ಹೇಳುತ್ತಾ ಅಳುತ್ತಿದ್ದರು. ಹೀಗೆ, ಈ ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲವು, ಕುಟುಂಬವನ್ನು ನಾಶಗೊಳಿಸುವ ಇಂತಹ ಪ್ರಭಾವವನ್ನು ಕೂಡಾ ಬೀರಬಲ್ಲದು. ನಾನು ಹೇಳುತ್ತಿರುವುದೇನೆಂದು ನಿಮಗೆ ಅರ್ಥವಾಗುತ್ತಿದೆಯೇ? ಅವರನ್ನೆಲ್ಲಾ ಒಟ್ಟಿಗೆ ಕೂರಿಸಿ, ಸಲಹೆ ನೀಡಲು, ಅವರು ಧ್ಯಾನ ಮಾಡುವಂತೆ ಮಾಡಲು, ಮತ್ತು ಅದಕ್ಕೆಲ್ಲಾ ನನಗೆ ಸಾಕಷ್ಟು ಸಮಯ ಹಿಡಿಯಿತು. ಖಂಡಿತಾ, ಕೊನೆಗೆ ಕುಟುಂಬವು ಒಟ್ಟಾಯಿತು, ಅವರಿಗೆ ಈ ನೆನಪುಗಳನ್ನು ಬಿಟ್ಟು ಬಿಡಲು ಸಾಧ್ಯವಾಯಿತು.
ಹಲವು ಸಲ ಜನರು ಹೆಚ್ಚು ಗಮನವನ್ನು ಸೆಳೆಯುವುದಕ್ಕಾಗಿ ತಮ್ಮನ್ನು ಬಲಿಪಶುಗಳೆಂದು ಪರಿಗಣಿಸುತ್ತಾರೆ. ಸಮಾಜದಲ್ಲಿ ಇಂತಹ ಸಂಗತಿಗಳೂ ನಡೆಯುತ್ತವೆ.
ಯಾವುದೇ ಬೆಲೆ ತೆತ್ತಾದರೂ ನಾವು ಮಹಿಳೆಯರ ಮತ್ತು ಮಕ್ಕಳ ವಿರುದ್ಧವಾಗುವ ಅಪರಾಧಗಳನ್ನು ಕೊನೆಗೊಳಿಸಬೇಕು. ಸಮಾಜವು ಹೆಚ್ಚು ಆಧ್ಯಾತ್ಮಿಕ, ಹೆಚ್ಚು ಮಾನವೀಯ ಮತ್ತು ಹೆಚ್ಚು ಸೂಕ್ಷ್ಮವಾದಾಗ ಮಾತ್ರ ಇದಾಗಲು ಸಾಧ್ಯ.

ಪ್ರಶ್ನೆ: ಸರಕಾರವು ಭ್ರಷ್ಟವಾಗಿದ್ದರೆ, ದೇಶವು ಒಳ್ಳೆಯ ಆಡಳಿತವನ್ನು ಸೃಷ್ಟಿಸಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್: ಸರಕಾರಕ್ಕೆ ವ್ಯಕ್ತಿತ್ವವಿಲ್ಲ, ಭ್ರಷ್ಟರಾಗುವುದು ಸರಕಾರದಲ್ಲಿರುವ ಜನರು. ಭ್ರಷ್ಟರಾಗದೇ ಇರಲು ಸಾಧ್ಯವಾಗುವುದು ಕೂಡಾ ಜನರಿಗೆ.
ನೋಡಿ, ಎಲ್ಲಿ ಆತ್ಮೀಯತೆಯ ಭಾವವು ಕೊನೆಗೊಳ್ಳುವುದೋ ಅಲ್ಲಿ ಭ್ರಷ್ಟಾಚಾರವು ಪ್ರಾರಂಭವಾಗುತ್ತದೆ. ಯಾರನ್ನು ತಮಗೆ ಸೇರಿದವರೆಂದು ಅಂದುಕೊಳ್ಳುವರೋ ಅವರೊಂದಿಗೆ ಭ್ರಷ್ಟರಾಗಿರಲು ಯಾರಿಗೂ ಸಾಧ್ಯವಿಲ್ಲ. ಅವರು ತಮ್ಮ ಮಿತ್ರರು ಮತ್ತು ಕುಟುಂಬದವರಿಂದ ಲಂಚವನ್ನು ತೆಗೆದುಕೊಳ್ಳಲಾರರು. ಯಾರನ್ನು ತಮ್ಮ ಆತ್ಮೀಯತಾ ಭಾವದಿಂದ ಹೊರಗಿರುವವರೆಂದು ಅವರು ಅಂದುಕೊಳ್ಳುವರೋ ಅವರಿಂದ ಮಾತ್ರ ಅವರು ಲಂಚವನ್ನು ತೆಗೆದುಕೊಳ್ಳುವರು. ಆದುದರಿಂದ, ಭ್ರಷ್ಟಾಚಾರ ಮತ್ತು ಅಪರಾಧ, ಈ ಎರಡು ವಿಷಯಗಳನ್ನು ನಿರ್ಮೂಲನ ಮಾಡಬೇಕು, ಅಲ್ಲದಿದ್ದರೆ ಸರಕಾರವು ಪ್ರಭಾವಶಾಲಿಯಾಗಲು ಸಾಧ್ಯವಿಲ್ಲ.
ಸರಕಾರದಲ್ಲಿ ಅಪರಾಧಿ ಅಂಶಗಳಿರುವುದು ಒಂದು ಭೀಕರ ಸಂಗತಿ. ಪ್ರತಿಯೊಂದು ಪಕ್ಷವೂ ಈ ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ಯಾಕೆ ನೀಡುತ್ತದೆಯೆಂಬುದು ನಿಮಗೆ ತಿಳಿದಿದೆಯೇ? ಅದು ಯಾಕೆಂದರೆ ಅವರ ಬಳಿ ಮತಗಳ ಬ್ಯಾಂಕ್ ಇರುತ್ತದೆ. ನೀವು, ಒಳ್ಳೆಯ ಜನರು ನಿಮ್ಮದೇ ಆದ ಮತಗಳ ಬ್ಯಾಂಕುಗಳನ್ನು ಮಾಡಲು ಶುರು ಮಾಡಿದರೆ ನೀವು ಪ್ರತಿಯೊಂದು ಪಕ್ಷದವರಿಗೂ, "ನೀವು ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ನೀಡಿದರೆ, ನಾವು ನಿಮಗೆ ಮತ ನೀಡಲಾರೆವು" ಎಂದು ಹೇಳುತ್ತಾ ಅವರನ್ನು ನಿಯಂತ್ರಿಸಬಹುದು. ಆಗ ಯಾವ ಪಕ್ಷವೂ ಸಮಾಜದಲ್ಲಿನ ಭ್ರಷ್ಟ ಜನರಿಗೆ ಅಥವಾ ಅಪರಾಧಿ ಅಂಶಗಳಿಗೆ ಟಿಕೆಟುಗಳನ್ನು ನೀಡುವ ಧೈರ್ಯವನ್ನು ಮಾಡಲಾರವು.
ಅದಕ್ಕಾಗಿಯೇ ನಾನು ಹೇಳಿದುದು, ನಾವೆಲ್ಲರೂ ಒಟ್ಟಾಗಿ ಸಮಾಜದಲ್ಲಿನ ಮಾನವೀಯ ಮೌಲ್ಯಗಳಿಗಾಗಿ ಎದ್ದುನಿಲ್ಲಬೇಕು, ಒಗ್ಗಟ್ಟಾಗಿ. ವೈಯಕ್ತಿಕವಾಗಿ ನಾವೆಲ್ಲರೂ ಮೌಲ್ಯಗಳಿಗಾಗಿ ಎದ್ದುನಿಲ್ಲುತ್ತೇವೆ, ಆದರೆ ನಾವು ಒಗ್ಗಟ್ಟಾಗಿದ್ದುಕೊಂಡು ಎದ್ದುನಿಲ್ಲಬೇಕು.
ಕೊಚ್ಚಿಯಲ್ಲಿರುವ ಒಳ್ಳೆಯ ಜನರೆಲ್ಲರೂ ಎದ್ದುನಿಂತು, "ಕೊಚ್ಚಿಯು ಕಲುಷಿತವಾಗಲು ನಾವು ಬಿಡುವುದಿಲ್ಲ. ನಮ್ಮ ನಗರದಲ್ಲಿ ಶುಚಿತ್ವವನ್ನು ಕಾಪಾಡಲು ನಾವು ಎದ್ದುನಿಲ್ಲುತ್ತೇವೆ" ಎಂದು ಹೇಳಿದರೆ ಸಂಗತಿಗಳು ಬದಲಾಗಲು ಶುರುವಾಗುತ್ತವೆ.
ಇದು ಆವಶ್ಯಕವೆಂದು ನನಗನಿಸುತ್ತದೆ.

ಪ್ರಶ್ನೆ: ಸಾಮಾಜಿಕ ಹೊಣೆಗಾರಿಕೆಗಳಿಗೆ ಕೈಹಾಕುತ್ತಿರುವ ಹಲವಾರು ನಿಗಮಗಳಿವೆ, ಆದರೆ ಇತ್ತೀಚೆಗೆ ಇದನ್ನು ನಿಗಮಗಳ ಮೇಲೆ ದೂಡುವಂತಹ ಕೆಲವು ನೀತಿಗಳನ್ನು ಸರಕಾರವು ಪರಿಚಯಿಸಿದೆ. ಇದರ ಬಗ್ಗೆ ನೀವು ಏನು ಹೇಳುವಿರಿ?
ಶ್ರೀ ಶ್ರೀ ರವಿ ಶಂಕರ್: ಸಂಸ್ಥೆಗಳು ತಮ್ಮ ಲಾಭದ ೩% ವನ್ನು ಸಾಮಾಜಿಕ ಹೊಣೆಗಾರಿಕೆಯ ಮೇಲೆ ಖರ್ಚು ಮಾಡಬೇಕೆಂದು ಸರಕಾರವು ಹೇಳುವುದಾದರೆ, ಒಂದು ಒಳ್ಳೆಯ ಸಂಸ್ಥೆಯು ತನ್ನ ಲಾಭದ ೪% ವನ್ನು ಖರ್ಚು ಮಾಡಬಹುದು, ಮತ್ತು ಸರಕಾರದ ಮಾರ್ಗಸೂಚಿಗಳ ಪ್ರಕಾರ ೩% ಕ್ಕೆ ಸೀಮಿತಗೊಳಿಸದು. ಸರಕಾರವು ಅಂತಹ ಒಂದು ಮಾರ್ಗಸೂಚಿಯನ್ನು ನೀಡಿರುವುದು ಒಳ್ಳೆಯ ವಿಷಯ. ಕನಿಷ್ಠಪಕ್ಷ ೨% ದಿಂದ ೩% ವನ್ನು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಕಡೆಗೆ ನೀಡಬೇಕು.
ಸರಕಾರದ ಈ ನಿರ್ಧಾರದಲ್ಲಿ ಯಾವುದೇ ತಪ್ಪಿದೆಯೆಂದು ನನಗನಿಸುವುದಿಲ್ಲ. ಪ್ರತಿಯೊಂದು ಸಂಸ್ಥೆಯೂ ತಮ್ಮ ಲಾಭದಲ್ಲಿ ಕನಿಷ್ಠಪಕ್ಷ ಸ್ವಲ್ಪ ಶೇಕಡಾವನ್ನಾದರೂ ಇತರರ ಕ್ಷೇಮಕ್ಕಾಗಿ ಖರ್ಚು ಮಾಡಬೇಕೆಂಬ ಈ ಒಂದು ನಿರ್ಧಾರ ಬಹಳ ಒಳ್ಳೆಯದೆಂದು ನನಗನಿಸುತ್ತದೆ. ಇದನ್ನು ನಮ್ಮ ಧರ್ಮಶಾಸ್ತ್ರಗಳಲ್ಲಿ ಕೂಡಾ ಹೇಳಲಾಗಿದೆ. ಏನಾದರೂ ಲಾಭವನ್ನು ಗಳಿಸುವ ಯಾರೇ ಆದರೂ ಅದರಲ್ಲಿ ಒಂದು ಶೇಕಡಾವಾರನ್ನು ಸಮಾಜದ ಕ್ಷೇಮಕ್ಕಾಗಿ ಹಂಚಬೇಕು.

ಪ್ರಶ್ನೆ: ನೀವು ಉದ್ಯಮಶೀಲತೆಯ ಬಗ್ಗೆ ಏನಾದರೂ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ಉದ್ಯಮವು ಸೃಜನಶೀಲತೆಯ ಒಂದು ಪ್ರಕ್ಷೇಪಣೆ(ಮುಂದೆ ಚಾಚಿದ ಭಾಗ)ಯಾಗಿದೆ. ಸೃಜನಶೀಲತೆಯ ಒಂದು ಮಗ್ಗುಲು. ಒಬ್ಬ ಉದ್ಯಮಿಯು ಅವನ ಅಥವಾ ಅವಳ ಆರಾಮ ವಲಯದಿಂದ ಹೊರಬರಬೇಕು. ಒಬ್ಬನು, "ನಾನು ನನ್ನ ಆರಾಮ ವಲಯದಲ್ಲಿರಲು ಬಯಸುತ್ತೇನೆ ಮತ್ತು ನಾನೊಬ್ಬ ಉದ್ಯಮಿಯಾಗಲು ಬಯಸುತ್ತೇನೆ" ಎಂದು ಹೇಳಲು ಸಾಧ್ಯವಿಲ್ಲ, ಅದು ಕೆಲಸ ಮಾಡದು. ಉದ್ಯಮಶೀಲತೆಯು ಯಾವಾಗಲೂ ಅಪಾಯಗಳನ್ನು ಮತ್ತು ಕಷ್ಟದ ಪರಿಸ್ಥಿತಿಯ ಮೂಲಕ ಹಾದುಹೋಗುವ ಸಾಮರ್ಥ್ಯವನ್ನೊಳಗೊಂಡಿರ ಬೇಕಾಗುತ್ತದೆ.

ಪ್ರಶ್ನೆ: ಸಂಸ್ಥೆಗಳಲ್ಲಿ ಮುಂದಾಳುತ್ವದ ಸಂಸ್ಕೃತಿಯ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಒಬ್ಬ ಮುಂದಾಳುವು ನುಡಿದಂತೆ ನಡೆಯಬೇಕು. ವಿವೇಕವುಳ್ಳವನೂ, ಸೂಕ್ಷ್ಮತೆಯುಳ್ಳವನೂ ಮತ್ತು ಸಹೃದಯನೂ ಆಗಿರಬೇಕು. ನಮಗೆ ಜೀವನದಲ್ಲಿ ಮೂರು ವಿಷಯಗಳು ಬೇಕು, ಅನುರಾಗ, ನಿರ್ಲಿಪ್ತತೆ ಮತ್ತು ಸಹೃದಯತೆ. ನಿಮ್ಮಲ್ಲಿ ಕೇವಲ ಅನುರಾಗವಿರಲು ಸಾಧ್ಯವಿಲ್ಲ, ಆಗ ನಿಮಗೆ ಬಹಳ ಒತ್ತಡವಾಗುತ್ತದೆ. ನಿಮ್ಮಲ್ಲಿ ನಿರ್ಲಿಪ್ತತೆಯಿರಬೇಕು, ಬಿಟ್ಟುಬಿಡುವುದು ಹೇಗೆಂಬುದು ನಿಮಗೆ ತಿಳಿದಿರಬೇಕು. ವಿಷಯಗಳು ಹೇಗಿದ್ದರೂ ನಿಮ್ಮ ಕೈಬಿಟ್ಟು ಹೋಗಿರುವಾಗ ನೀವು ಅವುಗಳನ್ನು ಹಿಡಿದಿಟ್ಟುಕೊಂಡರೆ, ನಿಮಗೆ ಹೆಚ್ಚು ಒತ್ತಡವುಂಟಾಗುವುದಷ್ಟೆ, ಮತ್ತು ಒಬ್ಬ ಒತ್ತಡಭರಿತ ವ್ಯಕ್ತಿಯು ತನಗೆ, ಸಮಾಜಕ್ಕೆ ಮತ್ತು ಎಲ್ಲರಿಗೂ ಒಂದು ಹೊರೆಯಾಗುತ್ತಾನೆ. ಒಬ್ಬ ಒತ್ತಡಭರಿತ ವ್ಯಕ್ತಿಯು ಹಾನಿಕಾರಕ ಹಾಗೂ ವಿಷಕಾರಿಯಾಗುತ್ತಾನೆ.
ಯಾವುದೇ ಸಂಸ್ಥೆಯಲ್ಲಿ, ಒತ್ತಡದಲ್ಲಿರುವವರನ್ನು ನೀವು ಗುರುತಿಸಬೇಕು. ಒತ್ತಡದಲ್ಲಿರುವವರೊಬ್ಬರು ಬೇಗನೇ ವಿಷಕಾರಿಯಾಗುವರು. ಆದುದರಿಂದ, ವ್ಯಕ್ತಿಯು ತನ್ನ ಸಂಪೂರ್ಣ ಮನೋಭಾವವನ್ನು ಬದಲಾಯಿಸುವಂತೆ ಮತ್ತು ಆ ವ್ಯಕ್ತಿಗೆ ತನ್ನ ಬಗ್ಗೆ ಉತ್ತಮ ಮನೋಭಾವ ಬರುವಂತೆ ನೋಡಿಕೊಳ್ಳಿ.
ಜನರು ಒತ್ತಡದಿಂದ ಬಿಡುಗಡೆ ಹೊಂದಿದಾಗ, ಬದಲಾವಣೆಯ ಒಂದು ಅಲೆಯು ಏಳುವುದನ್ನು ನೀವು ನೋಡುವಿರಿ. ಇದೊಂದು ಬಹಳ ಸುಲಭವಾದ ಕೆಲಸವಲ್ಲ. ಒಬ್ಬರು ತಮ್ಮ ಒತ್ತಡವನ್ನು ಕಳೆಯುಲು ಇಚ್ಛಿಸದಿದ್ದರೆ, ಅವರು ಅದನ್ನು ಕಳೆಯುವಂತೆ ಮಾಡಲು ನಿಮಗೆ ಸಾಧ್ಯವಿಲ್ಲ. ಆದುದರಿಂದ ಇದೊಂದು ಕಷ್ಟದ ಕೆಲಸ ಮತ್ತು ನೀವದನ್ನು ಮಾಡಬೇಕು.

ಪ್ರಶ್ನೆ: ಮಹಿಳೆಯರು ಸಹಜವಾಗಿ ಒಳ್ಳೆಯ ಮುಂದಾಳುಗಳೆಂದು ನೀವು ಈಗಾಗಲೇ ಹೇಳಿರುವಿರಿ, ಆದರೆ ಸಾಕಷ್ಟು ಮಹಿಳಾ ಮುಂದಾಳುಗಳು ಇಲ್ಲ. ಒಬ್ಬ ಒಳ್ಳೆಯ ಮುಂದಾಳುವಾಗಲು ಇರುವ ತಡೆಗಳು ಯಾವುವು ಎಂದು ನೀವು ನಮಗೆ ಹೇಳುವಿರೇ?
ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ ಪ್ರಪಂಚದ ಬೇರೆ ಯಾವುದೇ ಭಾಗದಲ್ಲಿರುವುದಕ್ಕಿಂತ ಹೆಚ್ಚು ಮಹಿಳಾ ಮುಂದಾಳುಗಳಿರುವರೆಂದು ನಾನು ನಿನಗೆ ಹೇಳಲು ಬಯಸುತ್ತೇನೆ. ನಿನಗದು ತಿಳಿದಿದೆಯೇ? ನಮ್ಮಲ್ಲಿ ಹಲವು ಮಹಿಳಾ ಸಂಸತ್ ಸದಸ್ಯರಿದ್ದಾರೆ, ಶಾಸನ ಸಭೆಯಲ್ಲಿ ಹಲವು ಮಹಿಳೆಯರಿದ್ದಾರೆ ಮತ್ತು ಮಹಿಳೆಯರಿಂದ ಆಳಲ್ಪಡುವ ಹಲವು ರಾಜ್ಯಗಳಿವೆ. ಇಡಿಯ ದೇಶವು ಹಲವಾರು ದಶಕಗಳ ವರೆಗೆ ಮಹಿಳೆಯರಿಂದ ಆಳಲ್ಪಟ್ಟಿತು. ಆದುದರಿಂದ ನೀವು ಒಬ್ಬರಿಂದ ಸಶಕ್ತಗೊಳ್ಳಬೇಕೆಂದು ಯಾವತ್ತೂ ಯೋಚಿಸಬೇಡಿ. ಇಲ್ಲಿ, ಭಾರತದಲ್ಲಿ, ಮಹಿಳೆಯರು ಈಗಾಗಲೇ ಸಶಕ್ತರಾಗಿರುವರು. ಅಮೇರಿಕಾವು ಅದನ್ನು ಕಲಿಯಬೇಕಾಗಿದೆ. ಮಹಿಳಾ ಸಶಕ್ತೀಕರಣದ ವಿಷಯದಲ್ಲಿ ಹೇಳುವುದಾದರೆ, ಅಮೇರಿಕಾವು ಇನ್ನೂ ಆ ಹಂತಕ್ಕೆ ಬಂದಿಲ್ಲ.

ಪ್ರಶ್ನೆ: ನನ್ನ ಕೆಲಸದ ಪರಿಸರದಲ್ಲಿ ನಾನು ವಿವಿಧ ರೀತಿಯ ಜನರನ್ನು ಭೇಟಿಯಾಗುತ್ತೇನೆ ಮತ್ತು ಅವರಲ್ಲಿ ಕೆಲವರೊಂದಿಗೆ ಮಾತನಾಡಲು ನನಗೆ ಇಷ್ಟವಿಲ್ಲದಿರಬಹುದು. ಅವರನ್ನು ಸಮೀಪಿಸುವಾಗ ನನ್ನ ಕಾರ್ಯವಿಧಾನದಲ್ಲಿ ನಾನು ವ್ಯವಹಾರಕುಶಲತೆಯಿಂದಿರುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಇದೊಂದು ಬಹಳ ಯುಕ್ತಿಯುತ ಪ್ರಶ್ನೆ. ಕೆಲವೊಮ್ಮೆ ನೀವು ಮಾತಿನಲ್ಲಿ ನೇರವಾಗಿರದಿದ್ದರೆ ಮತ್ತು ನೀವದನ್ನು ಅವರ ಮುಖಕ್ಕೆ ನೇರವಾಗಿ ಹೇಳದಿದ್ದರೆ, ನೀವವರಿಗೆ ಒಂದು ಸೂಕ್ಷ್ಮ ರೀತಿಯಲ್ಲಿ ಬೇರೆ ಯಾವುದೋ ಸೂಚನೆಗಳನ್ನು ನೀಡುತ್ತಿರುವಿರೆಂದು ಅಥವಾ ತಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ನೀವು ದೃಢೀಕರಿಸುತ್ತಿರುವಿರೆಂದು ಅವರು ಯೋಚಿಸುತ್ತಾರೆ. ಅದೇ ಸಮಯದಲ್ಲಿ, ನಿಮ್ಮ ಅಭಿಪ್ರಾಯಗಳನ್ನು ಅಥವಾ ಆಲೋಚನೆಗಳನ್ನು ಮುಂದಿಡಲು ಬಯಸುವಾಗ ನೀವು ನಿಷ್ಠುರವಾಗಿರಬೇಕಾಗಿಲ್ಲ. ಆದುದರಿಂದ, ಇದು ನಿಜವಾಗಿ ಸಂತುಲನವನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದಾಗಿದೆ. ಅಲ್ಲಿ ಯಾವುದೇ ನಿರ್ದಿಷ್ಟ ಸೂತ್ರವಿಲ್ಲ. ಪೂರ್ವಯೋಜನೆಯಿಲ್ಲದೇ ಸಮಯೋಚಿತವಾಗಿ ನೀವು ವ್ಯವಹರಿಸಬೇಕು. ವ್ಯವಹಾರಕುಶಲತೆಯಿಂದಿರುವುದು ಹೇಗೆ - ಇದನ್ನು ಈಗ ಕಲಿಸಿ, ಆಮೇಲೆ ಅನ್ವಯಿಸಲು ಸಾಧ್ಯವಿಲ್ಲ. ಅದು ಆ ಕ್ಷಣದಲ್ಲಿ ನಿಮ್ಮಿಂದ ಸ್ವಾಭಾವಿಕವಾಗಿ ಹೊರಬರಬೇಕು.