ಶನಿವಾರ, ಜೂನ್ 1, 2013

ಸಕಲ ವಿದ್ಯಮಾನಗಳ ಮೂಲತತ್ವ

ಜೂನ್ ೧, ೨೦೧೩
ಬೆಂಗಳೂರು, ಭಾರತ

ಮುಂದಿನ ಶ್ಲೋಕಗಳು ಹೀಗಿವೆ,

’ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್ I
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ II’ (೯.೭)
’ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ I
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ II’ (೯.೮)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಪ್ರಕೃತಿಯು ನಿರ್ದಿಷ್ಟ ನಿಯಮಗಳನ್ನು ಅನುಸರಿಸುತ್ತದೆ ಮತ್ತು ಅದು ಆ ನಿಯಮಗಳಿಂದ ಚಲಿಸುತ್ತದೆ. ಒಂದು ಹೂ ಒಂದು ಮರದಲ್ಲಿ ಅರಳುತ್ತದೆ ಮತ್ತು ಸ್ವಲ್ಪ ಸಮಯದ ಬಳಿಕ ಅದು ಬಿದ್ದು ಹೋಗುತ್ತದೆ. ಅದು ಕೊಳೆತು ಗೊಬ್ಬರವಾಗುತ್ತದೆ. ಭೂಮಿಯಲ್ಲಿನ ಅದೇ ಗೊಬ್ಬರವು ಅದೇ ಮರದಿಂದ ಪುನಃ ಒಂದು ಹೂವಾಗಿ ಬೆಳೆಯುತ್ತದೆ. ಹೀಗೆ ಇದು ಪ್ರಕೃತಿಯ ದೈವಿಕ ನಿಯಮವಾಗಿದೆ. ಸೃಷ್ಟಿಯಲ್ಲಿನ ಎಲ್ಲವೂ ನನ್ನಿಂದ ಬಂದಿದೆ ಮತ್ತು ಅದೆಲ್ಲವೂ ಒಂದು ದಿನ ನನ್ನಲ್ಲಿ ವಿಲೀನವಾಗುವುದು. ಕಾಲದಿಂದ ಕಾಲಕ್ಕೆ, ನಾನು ಈ ಸೃಷ್ಟಿಯನ್ನು ಸೃಷ್ಟಿಸುತ್ತೇನೆ ಮತ್ತು ಕಾಲದಿಂದ ಕಾಲಕ್ಕೆ ನಾನು ಈ ಸೃಷ್ಟಿಯನ್ನು ನನ್ನೊಳಗೆಯೇ ವಿಲೀನಗೊಳಿಸುತ್ತೇನೆ."

ನೀವು ನಿಮ್ಮ ಮುಂದೆ ನೋಡುವ ಒಬ್ಬ ಸಾಮಾನ್ಯ ವ್ಯಕ್ತಿಯು ಒಂದು ದಿನ ಸಾಯುತ್ತಾನೆ ಮತ್ತು ಮಾಯವಾಗುತ್ತಾನೆ ಹಾಗೂ ಈ ವ್ಯಕ್ತಿಯು ಎಲ್ಲಿ ಹೋದನೆಂದು ನೀವು ಅಚ್ಚರಿಪಡುತ್ತೀರಿ! ಅವನ ಶರೀರವು ಇನ್ನೂ ಅಲ್ಲೇ ಇದ್ದರೂ ಸಹ, ಅವನ ಚೇತನವು ಎಲ್ಲಿ ಹೋಯಿತು?

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಸಾವಿನ ಬಳಿಕ ಅದು (ಒಬ್ಬ ವ್ಯಕ್ತಿಯ ಚೇತನ) ನನ್ನಲ್ಲಿ ಒಂದಾಗುತ್ತದೆ (ಆತ್ಮವು ಭಗವಂತನೊಂದಿಗೆ ಲೀನವಾಗುತ್ತದೆ). ಅದು ನನ್ನಲ್ಲಿ ವಿಲೀನವಾಗುತ್ತದೆ ಮತ್ತು ಸೂಕ್ತ ಸಮಯ ಬಂದಾಗ, ಮತ್ತೆ ನಾನು ಆತ್ಮಕ್ಕೆ, ಅದರ ಕರ್ಮಗಳ ಸ್ವಭಾವಕ್ಕೆ ಸರಿಯಾಗಿ ಜೀವವನ್ನು ಮತ್ತು ಒಂದು ಭೌತಿಕ ಶರೀರವನ್ನು ದಯಪಾಲಿಸುತ್ತೇನೆ. ನಂತರ ನಾನು ಅದನ್ನು, ಮತ್ತೊಮ್ಮೆ ಹುಟ್ಟುವುದಕ್ಕಾಗಿ ಸೂಕ್ತವಾದ ಗರ್ಭದಲ್ಲಿ ಇರಿಸುತ್ತೇನೆ. ಹೀಗೆ ನನ್ನ ವಸ್ತು ಸ್ವರೂಪದ ಮೂಲಕ ನಾನು ಮತ್ತೆ ಮತ್ತೆ ಈ ಬ್ರಹ್ಮಾಂಡ ಸೃಷ್ಟಿಯನ್ನು ಸೃಷ್ಟಿಸುತ್ತೇನೆ".

ಅವನು ಹೀಗೆಂದು ಹೇಳುತ್ತಾನೆ, "ಯಾವುದರಿಂದ ಸೃಷ್ಟಿಯಲ್ಲಿರುವ ಎಲ್ಲವೂ ಜನ್ಮ ತಾಳಿತೋ ಮತ್ತು ಯಾವುದರೊಳಕ್ಕೆ ಸೃಷ್ಟಿಯಲ್ಲಿರುವ ಎಲ್ಲವೂ ಮತ್ತೆ ಮತ್ತೆ ವಿಲೀನವಾಗುವುದೋ, ಆ ಮೂಲ ತತ್ವವು ಪರಮಾತ್ಮ ತತ್ವವಾಗಿದೆ (ಅತ್ಯಂತ ಮೂಲಭೂತವಾದ ಮೂಲವಸ್ತು ಅಥವಾ ತತ್ವ)."

ಇವತ್ತು ವಿಜ್ಞಾನಿಗಳು ಕಪ್ಪು ರಂಧ್ರ (ಬ್ಲ್ಯಾಕ್ ಹೋಲ್)ದ ಬಗ್ಗೆ ಮಾತನಾಡುತ್ತಾರೆ(ಆಕಾಶದಲ್ಲಿರುವ ಒಂದು ಪ್ರದೇಶ ಅಥವಾ ವಸ್ತು, ಅದು ತನ್ನ ಉನ್ನತ ಗುರುತ್ವಾಕರ್ಷಣೆಯಿಂದ, ಅದಕ್ಕೆ ಸಮೀಪಿಸಿದ ಎಲ್ಲಾ ವಸ್ತುಗಳನ್ನು ನುಂಗಿ ಬಿಡುತ್ತದೆ). ಈ ಬ್ಲ್ಯಾಕ್ ಹೋಲ್ ಯಾವುದರಿಂದ ಮಾಡಲ್ಪಟ್ಟಿದೆ ಮತ್ತು ಅದು ನಿಜಕ್ಕೂ ಎಷ್ಟು ಆಳವಾಗಿದೆ ಎಂಬುದು ಅವರಿಗೆ ತಿಳಿಯದು. ಅದರ ಸಮೀಪಕ್ಕೆ ಬರುವ ಎಲ್ಲವೂ ಅದರೊಳಕ್ಕೆ ಹೀರಲ್ಪಡುತ್ತದೆ ಮತ್ತು ಅದು ಎಲ್ಲಿಗೆ ಹೋಗುತ್ತದೆಯೆಂಬುದು ಯಾರಿಗೂ ತಿಳಿಯದು. ವಿಶ್ವದಲ್ಲಿ ನೂರು ಸಾವಿರಾರು ಅಂತಹ ಬ್ಲ್ಯಾಕ್ ಹೋಲ್‌ಗಳಿವೆಯೆಂದು ಹೇಳಲಾಗುತ್ತದೆ.

ಅದೇ ರೀತಿಯಲ್ಲಿ ಇವತ್ತು ವಿಜ್ಞಾನಿಗಳು ಗಾಢ ವಸ್ತು ಮತ್ತು ಗಾಢ ಚೈತನ್ಯದ ಬಗ್ಗೆ ಮಾತನಾಡುತ್ತಾರೆ. ಸಂಪೂರ್ಣ ಪ್ರಪಂಚವು ಈ ಗಾಢ ವಸ್ತು ಮತ್ತು ಗಾಢ ಚೈತನ್ಯದಿಂದ ಮಾಡಲ್ಪಟ್ಟಿದೆಯೆಂದು ಅವರು ಹೇಳುತ್ತಾರೆ.

ಸೂರ್ಯನು ಗೋಳಾಕಾರದಲ್ಲಿ ಯಾಕೆ ಕಾಣಿಸುತ್ತದೆಯೆಂಬುದು ನಿಮಗೆ ಗೊತ್ತೇ? ಅದು ಯಾಕೆಂದರೆ, ಎಲ್ಲಾ ಬದಿಗಳಿಂದಲೂ ಅಧಿಕ ಪ್ರಮಾಣದಲ್ಲಿ ಚೈತನ್ಯದ ಒತ್ತಡವಿರುವುದರಿಂದ. ಸೂರ್ಯನ ಸುತ್ತಲಿರುವ ಖಾಲಿ ಜಾಗದಲ್ಲಿ ಚೈತನ್ಯವಿದೆ ಮತ್ತು ಅದು ಸೂರ್ಯನಕ್ಕಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ. ಈ ಪ್ರಪಂಚದಲ್ಲಿ ಯಾವುದೇ ವಸ್ತು ಗೋಳಾಕಾರದಲ್ಲಿ ಕಾಣಿಸಿದರೂ ಅದು, ಅದರ ಸುತ್ತಲಿರುವ ಜಾಗದಲ್ಲಿರುವ ಅದೃಶ್ಯ ಶಕ್ತಿಗಳಿಂದಾಗಿ ಮತ್ತು ಈ ಶಕ್ತಿಗಳು ಆ ವಸ್ತುವಿಗಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿವೆ.

ಹೀಗೆ ಸೂರ್ಯನ ಸುತ್ತಲಿರುವ ಖಾಲಿ ಜಾಗದಲ್ಲಿರುವ ಶಕ್ತಿಗಳು ಸೂರ್ಯನಿಗಿಂತ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿವೆ, ಮತ್ತು ಈ ಜಾಗವನ್ನೇ ವಿಜ್ಞಾನಿಗಳು ಗಾಢ ವಸ್ತು ಹಾಗೂ ಗಾಢ ಚೈತನ್ಯವೆಂದು ಕರೆದಿರುವುದು.

ಈ ಗಾಢ ವಸ್ತು ಹಾಗೂ ಗಾಢ ಚೈತನ್ಯ ಎಷ್ಟು ಶಕ್ತಿಶಾಲಿಯೆಂದರೆ, ಅದು ಸೂರ್ಯನನ್ನು ನಿಮಿಷಗಳಲ್ಲಿ ಸಂಪೂರ್ಣವಾಗಿ ನುಂಗಬಲ್ಲದು.

ಹೀಗೆ ಯಾವುದು ಕಾಣಿಸುವುದಿಲ್ಲವೋ ಅದು, ಯಾವುದನ್ನು ನಾವು ನೋಡುವೆವೋ ಅದಕ್ಕಿಂತ ನಿಜವಾಗಿಯೂ ಹೆಚ್ಚು ಶಕ್ತಿಶಾಲಿಯಾದುದು. ಇದನ್ನೇ ನಮ್ಮ ಪೂರ್ವಿಕರು ಅದೃಷ್ಟ ಎಂದು ಕರೆದುದು.

ಪ್ರಕಟವಾಗಿಲ್ಲದ ಹಾಗೂ ಅದೃಶ್ಯ ಅಂಶವು, ನಾವು ನೋಡಬಹುದಾದ ಪ್ರಕಟವಾಗಿರುವ ವಸ್ತುವಿಗಿಂತ ಎಷ್ಟೋ ಹೆಚ್ಚು ಶಕ್ತಿಶಾಲಿಯಾಗಿದೆ.

ಇವತ್ತು ವಿಜ್ಞಾನಿಗಳಾಡುವ ಅದೇ ವಿಷಯವು ಶ್ರೀಕೃಷ್ಣ ಪರಮಾತ್ಮನಿಂದ ಸಾವಿರಾರು ವರ್ಷಗಳ ಹಿಂದೆ ಹೇಳಲ್ಪಟ್ಟಿತು. ಇದಕ್ಕಾಗಿಯೇ ಅವನು ಹೀಗೆಂದು ಹೇಳುವುದು, "ನಾನು ಸೃಷ್ಟಿಯನ್ನು ಮತ್ತೆ ಮತ್ತೆ ಸೃಷ್ಟಿಸುತ್ತೇನೆ. ಪ್ರಕೃತಿಯಲ್ಲಿರುವ ಎಲ್ಲಾ ಪರಮಾಣುಗಳು ಮತ್ತು ಅಣುಗಳು ನಿರಂತರವಾಗಿ ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ಪರಿವರ್ತನೆಗೊಳ್ಳುತ್ತವೆ ಹಾಗೂ ಅಂತಿಮವಾಗಿ ನನ್ನಲ್ಲಿ ವಿಲೀನವಾಗುತ್ತವೆ".

ಎಲೆಗಳು, ಹಣ್ಣುಗಳು ಮತ್ತು ಮರಗಳು ಸತ್ತ ಬಳಿಕ ಅಂತಿಮವಾಗಿ ವಿಲೀನವಾಗುತ್ತವೆ. ಅವುಗಳು ಮರಳಿ ಪ್ರಕೃತಿಯಲ್ಲಿ ವಿಲೀನವಾಗುತ್ತವೆ, ಅಲ್ಲಿಂದ ಅವುಗಳು ಮತ್ತೊಮ್ಮೆ ಜನಿಸುತ್ತವೆ. ಅದೇ ರೀತಿಯಲ್ಲಿ, ಮಾನವ ಶರೀರ ಕೂಡಾ ನಶಿಸುತ್ತದೆ ಮತ್ತು ವಿಲೀನವಾಗುತ್ತದೆ ಹಾಗೂ ನಂತರ, ಅದರ (ಆತ್ಮದ) ಕರ್ಮಗಳ ಸ್ವಭಾವಕ್ಕನುಸಾರವಾಗಿ ಮತ್ತೊಮ್ಮೆ ಒಂದು ಹೊಸ ಶರೀರವನ್ನು ಪಡೆಯುತ್ತದೆ. ಈ ರೀತಿಯಲ್ಲಿ ಪ್ರಕೃತಿಯ ಚಕ್ರವು ಮುಂದುವರಿಯುತ್ತದೆ.

ಮುಂದಿನ ಶ್ಲೋಕಗಳು ಹೀಗಿವೆ,

’ನ ಚ ಮಾಂ ತಾನಿ ಕರ್ಮಾಣಿ ನಿಬಧ್ನಂತಿ ಧನಂಜಯ I
ಉದಾಸೀನವದಾಸೀನಮಸಕ್ತಂ ತೇಷು ಕರ್ಮಸು II’ (೯.೯)
’ಮಯಾಧ್ಯಕ್ಷೇಣ ಪ್ರಕೃತಿಃ ಸೂಯತೇ ಸಚರಾಚರಮ್ I
ಹೇತುನಾನೇನ ಕೌಂತೇಯ ಜಗದ್ ವಿಪರಿವರ್ತತೇ II’ (೯.೧೦)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಈ ಸಂಪೂರ್ಣ ಸೃಷ್ಟಿಯು ನನ್ನಿಂದ ಬರುವುದಾದರೆ ಮತು ಇವುಗಳೆಲ್ಲದರ ಕರ್ತೃವು ನಾನಾಗಿದ್ದರೆ, ಆಗ ಸ್ಪಷ್ಟವಾಗಿಯೂ, ಈ ಕರ್ಮದ ಫಲಗಳು ಕೂಡಾ ನನಗೆ ಪ್ರಾಪ್ತಿಯಾಗಬೇಕು. ಆದರೆ ಇದು ನಿಜವಾಗಿಯೂ ಹಾಗಲ್ಲ. ಓ ಅರ್ಜುನ! ಪ್ರಕೃತಿಯ ಮೂಲಕ ಎಲ್ಲಾ ಸೃಷ್ಟಿಯು ನನ್ನಿಂದ ಸೃಷ್ಟಿಯಾಗಿ ನಿರ್ವಹಿಸಲ್ಪಟ್ಟರೂ ಹಾಗೂ ಪ್ರಕೃತಿಯು ನನ್ನಲ್ಲಿ ವಾಸಿಸುತ್ತಿದ್ದರೂ ಸಹ, ಸೃಷ್ಟಿಯನ್ನು ಸೃಷ್ಟಿಸುವ ಕಾರ್ಯ ಹಾಗೂ ಫಲಗಳಿಂದ ನಾನು ಅಪ್ರಭಾವಿತನಾಗಿರುವೆನು".

ಈಗ, ಇದು ಹೇಗೆ ಸಾಧ್ಯ? ಉದಾಹರಣೆಗೆ, ಯಾರಾದರೂ ಆಕಾಶ ತತ್ವವನ್ನು ಮಲಿನಗೊಳಿಸಲು ಸಾಧ್ಯವೇ? ಅದು ಸಾಧ್ಯವಿಲ್ಲ.

ಪೃಥ್ವಿ, ಜಲ, ಅಗ್ನಿ ಮತ್ತು ವಾಯುವನ್ನು ಕೂಡಾ ನೀವು ಮಲಿನಗೊಳಿಸಬಹುದು. ಆದರೆ ನಿಮಗೆ ಆಕಾಶವನ್ನು ಮಲಿನಗೊಳಿಸಲು ಸಾಧ್ಯವಿದೆಯೇ? ಇಲ್ಲವೇ ಇಲ್ಲ! ವಾಯುವು ಕೊಳೆಯಾಗಿದ್ದು ಮಲಿನಗೊಂಡಿದ್ದರೆ, ನೀವು ಫ್ಯಾನ್ ಹಾಕಬಹುದು ಮತ್ತು ಎಲ್ಲಾ ಮಲಿನ ವಾಯುವು ಹೊರಟುಹೋಗುತ್ತದೆ. ಆದರೆ ಆಕಾಶ ತತ್ವವು ಯಾವತ್ತೂ ಅದಿರುವಂತೆಯೇ ಇರುತ್ತದೆ, ಶುದ್ಧ ಹಾಗೂ ಬದಲಾಗದೇ.

ಹಾಗಾಗಿ ಅದೇ ರೀತಿಯಲ್ಲಿ ಶ್ರೀಕೃಷ್ಣ ಪರಮಾತ್ಮನು, "ಆಕಾಶ ತತ್ವವು ಅಪ್ರಭಾವಿತವಾಗಿ ಉಳಿಯುವಂತೆಯೇ, ಅದೇ ರೀತಿಯಲ್ಲಿ ನಾನು ಕೂಡಾ, ಎಲ್ಲಾ ಕರ್ಮವು ನನ್ನೊಳಗೆ ಮತ್ತು ನನ್ನ ಮೂಲಕ ನಡೆಯುವುದಿದ್ದರೂ ಸಹ ಎಲ್ಲದರಿಂದಲೂ ಅಪ್ರಭಾವಿತನಾಗಿರುವೆನು. ನಾನು ಯಾವುದೇ ಕರ್ಮ ಅಥವಾ ಅದರ ಫಲಗಳಿಂದ ಬಂಧಿತನಾಗಿಲ್ಲ" ಎಂದು ಹೇಳುತ್ತಾನೆ.
  
ಇದಕ್ಕಾಗಿಯೇ, ಒಬ್ಬ ಜ್ಞಾನಿಯು ಏನನ್ನಾದರೂ ಮಾಡುವಾಗ, ಅವನು ಆ ಕರ್ಮದ ಫಲಗಳಿಂದ ಅಪ್ರಭಾವಿತನಾಗಿ ಉಳಿಯುತ್ತಾನೆ. ಅವನು ತನ್ನ ಕರ್ಮಗಳ ಯಾವುದೇ ದುಷ್ಪರಿಣಾಮಗಳನ್ನು ಅನುಭವಿಸುವುದಿಲ್ಲ.

ಒಬ್ಬ ಶಸ್ತ್ರಚಿಕಿತ್ಸಾ ವೈದ್ಯನು ಒಬ್ಬ ರೋಗಿಯ ಶಸ್ತ್ರಚಿಕಿತ್ಸೆ ನಡೆಸುತ್ತಾನೆ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ರೋಗಿಯು ಸಾಯುತ್ತಾನೆಂದಿಟ್ಟುಕೊಳ್ಳೋಣ. ರೋಗಿಯ ಸಾವಿಗೆ ವೈದ್ಯನು ದೂಷಿಸಲ್ಪಡುವನೇ? ಇಲ್ಲ; ಅವನು ಬೇಜವಾಬ್ದಾರಿಯಿಂದ ವರ್ತಿಸಿ, ಅಜಾಗ್ರತೆಯಿಂದ ಶಸ್ತ್ರಚಿಕಿತ್ಸೆ ನಡೆಸುತ್ತಾ ಇಲ್ಲದಿದ್ದಲ್ಲಿ. ಹಾಗಾಗಿ, ಒಬ್ಬ ವೈದ್ಯನ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಕೆಲವೊಮ್ಮೆ ಒಂದು ಆಪರೇಷನ್‌ನ ಸಂದರ್ಭದಲ್ಲಿ ರೋಗಿಗಳು ಸಾಯುತ್ತಾರೆ. ಅಲ್ಲವೇ? ರೋಗಿಯ ಸಾವಿಗೆ ವೈದ್ಯನು ದೂಷಿಸಲ್ಪಡಲು ಸಾಧ್ಯವಿಲ್ಲ.

ಆದರೆ ಒಬ್ಬ ಡಕಾಯಿತನು ಯಾರನ್ನಾದರೂ ಒಂದು ಚಾಕುವಿನಿಂದ ಚುಚ್ಚಿ ಆ ವ್ಯಕ್ತಿಯು ಸತ್ತರೆ, ಡಕಾಯಿತನು, ಒಬ್ಬನನ್ನು ಕೊಂದ ಕೆಟ್ಟ ಕರ್ಮಕ್ಕೆ ಈಡಾಗುವನೇ? ಹೌದು!

ಒಬ್ಬ ಡಕಾಯಿತನ ಚಾಕುವು ಒಬ್ಬ ವೈದ್ಯನ ಚಾಕುವಿಗಿಂತ ಬಹಳ ಭಿನ್ನವಾಗಿದೆ. ಎರಡೂ ಚಾಕುಗಳು ಮೂಲಭೂತವಾಗಿ ಒಂದೇ ಕೆಲಸವನ್ನು ಮಾಡುವುದಾಗಿದೆ.  ಅವುಗಳು ಒಬ್ಬ ಮನುಷ್ಯನ ಶರೀರವನ್ನು ತುಂಡರಿಸುತ್ತವೆ. ಆದರೆ, ಒಬ್ಬ ವ್ಯಕ್ತಿಯು ಒಬ್ಬ ವ್ಯಕ್ತಿಯನ್ನು ತುಂಡರಿಸಿ ತೆರೆದಾಗ(ಅವನಿಗೆ ಚಿಕಿತ್ಸೆ ನೀಡಲು), ನಾವು ಅವನಿಗೆ ಅವನ ಪ್ರಯತ್ನಗಳಿಗಾಗಿ ಧನ್ಯವಾದವನ್ನರ್ಪಿಸುತ್ತೇವೆ; ಒಬ್ಬ ಡಕಾಯಿತನು ತನ್ನ ಚಾಕುವನ್ನು ಬಳಸಿದಾಗ, ಅವನನ್ನು ಜೈಲಿಗೆ ಕಳುಹಿಸಲಾಗುತ್ತದೆ. ಹೀಗೆ ಡಕಾಯಿತನು ತನ್ನ ಕೆಟ್ಟ ಕರ್ಮಗಳ ಫಲಗಳನ್ನು ಅನುಭವಿಸುತ್ತಾನೆ.

ಹೀಗೆ ಇಲ್ಲಿ ಶ್ರೀಕೃಷ್ಣ ಪರಮಾತ್ಮನು, "ನಾನು ಎಲ್ಲಾ ಕರ್ಮ ಮತ್ತು ಅದರ ಫಲಗಳಿಂದ ಸೋಕದೇ ಉಳಿಯುತ್ತೇನೆ" ಎಂದು ಹೇಳುತ್ತಾನೆ. ಒಂದು ರೈಲಿನಲ್ಲಿ ಕುಳಿತುಕೊಂಡು ಕಿಟಿಕಿಯಿಂದ ಹೊರಗೆ ನೋಡುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ಯೋಚಿಸಿ.

ಕಿಟಿಕಿಯಿಂದ ಕಾಣುವ ದೃಶ್ಯವು ಬದಲಾಗುತ್ತಾ ಇರುತ್ತದೆ, ಆದರೆ ಈ ವ್ಯಕ್ತಿಯು ಸುಮ್ಮನೇ ಕುಳಿತುಕೊಂಡು, ಅದೆಲ್ಲವೂ ಸಾಗಿಹೋಗುವುದನ್ನು ನೋಡುತ್ತಾನೆ. ನಿಲ್ದಾಣಗಳು ಒಂದರ ನಂತರ ಇನ್ನೊಂದರಂತೆ ಬರುತ್ತಾ ಇರುತ್ತವೆ. ಆದರೂ ಈ ವ್ಯಕ್ತಿಯು ಸುಮ್ಮನೇ ಕುಳಿತುಕೊಂಡು ಅದೆಲ್ಲವನ್ನೂ ಗಮನಿಸುತ್ತಿದ್ದಾನೆ. ಹೊರಗಡೆ ಆಗುತ್ತಿರುವ ಬದಲಾವಣೆಗಳಲ್ಲಿ ಅವನು ಹಸ್ತಕ್ಷೇಪ ಮಾಡುವುದಿಲ್ಲ. "ಓ, ಈ ದೃಶ್ಯವು ಅಲ್ಲಿರಬಾರದು" ಎಂದು ಅವನು ಹೇಳುವುದಿಲ್ಲ. ಇದನ್ನು ಹೇಳುವುದರಿಂದ ಯಾವುದೇ ಉಪಯೋಗವಿಲ್ಲವೆಂಬುದು ಅವನಿಗೆ ತಿಳಿದಿರುತ್ತದೆ, ಯಾಕೆಂದರೆ ಅದು ಹೊರಗಡೆ ನಡೆಯುತ್ತಿರುವುದನ್ನು ಬದಲಾಯಿಸದು. ಹಾಗಾಗಿ, ಈ ರೀತಿಯಲ್ಲಿ, ಅವನು ಕುಳಿತುಕೊಂಡು ಎಲ್ಲವನ್ನೂ ಅನಾಸಕ್ತಿಯ ಒಂದು ಭಾವನೆಯೊಂದಿಗೆ ಗಮನಿಸುತ್ತಾನೆ.    

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಪ್ರಕೃತಿಯು ತನ್ನ ಕೆಲಸವನ್ನು ಮಾಡುತ್ತಾ ಹೋದಂತೆ, ನಾನು ಎಲ್ಲವನ್ನೂ (ಎಲ್ಲಾ ಕರ್ಮಗಳನ್ನು) ಅನಾಸಕ್ತಿಯ ಒಂದು ಭಾವನೆಯೊಂದಿಗೆ ಗಮನಿಸುತ್ತೇನೆ. ಆಗುತ್ತಿರುವ ಯಾವುದಕ್ಕೂ ನಾನು ಅಂಟಿಕೊಂಡಿಲ್ಲ, ಯಾಕೆಂದರೆ ಮೂರು ಗುಣಗಳ (ಸತ್‌ಗುಣ, ರಜೋಗುಣ ಮತ್ತು ತಮೋಗುಣ) ಸ್ವಭಾವವು ನನಗೆ ತಿಳಿದಿದೆ.

ಈ ಮೂರು ಗುಣಗಳು ಮತ್ತು ಅವುಗಳ ಸ್ವಭಾವಗಳನ್ನು ಸೃಷ್ಟಿಸಿದುದು ನಾನೇ. ನನ್ನಿಂದ ವಿನ್ಯಾಸಗೊಳಿಸಲ್ಪಟ್ಟ ದೈವಿಕ ನಿಯಮಗಳ ಅನುಸಾರವಾಗಿ ಅವುಗಳು ಕಾರ್ಯನಿರ್ವಹಿಸುತ್ತವೆ. ಹೀಗೆ ಅವುಗಳು ಅವುಗಳ ಆಡಳಿತ ನಡೆಸುವ ನಿಯಮಗಳನುಸಾರವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಅವುಗಳ ಕಾರ್ಯದಲ್ಲಿ ನಾನು ಯಾಕೆ ಹಸ್ತಕ್ಷೇಪ ಮಾಡಬೇಕು?

ಹಾಗಾಗಿ ಮೂರು ಗುಣಗಳ ಆಟದಿಂದ ನಾನು ಬೇರೆಯಾಗಿ ಉಳಿಯುತ್ತೇನೆ ಮತ್ತು ಆಗುತ್ತಿರುವುದೆಲ್ಲವನ್ನೂ ಸುಮ್ಮನೇ ಗಮನಿಸುತ್ತೇನೆ".

ಪ್ರತಿಯೊಬ್ಬ ವ್ಯಕ್ತಿಯೊಳಗೂ ಆಳದಲ್ಲಿ ಚೇತನವಿದೆ. ಈ ಚೇತನದ ಕಾರಣದಿಂದಾಗಿ ಎಲ್ಲವೂ ಕಾರ್ಯನಿರ್ವಹಿಸುತ್ತಿದೆ. ಅದಕ್ಕಾಗಿಯೇ, ನಾವೇನೇ ಮಾಡಿದರೂ, ಆ ಕಾರ್ಯಕ್ಕೆ ನಾವೊಂದು ಸಾಕ್ಷಿ ಕೂಡಾ ಆಗಿದ್ದೇವೆ (ಇದು ಯಾಕೆಂದರೆ, ಎಲ್ಲಾ ಕರ್ಮಗಳ ಮೂಲ ಕಾರಣವು ಚೇತನವಾಗಿದೆ). ಇದೆಲ್ಲವೂ ಸುಮ್ಮನೇ ಆಗುತ್ತಿದೆ ಎಂಬ ಈ ಭಾವನೆಯು ಅಲ್ಲಿರುತ್ತದೆ.

ಯಾವಾಗೆಲ್ಲಾ ನೀವು ಬಹಳ ಒಳ್ಳೆಯ ಕೆಲಸವನ್ನು ಮಾಡುವಿರೋ, ನಿಮಗೆ, "ನಾನೇನೂ ಮಾಡಲಿಲ್ಲ. ಎಲ್ಲವೂ ಸುಮ್ಮನೇ ಅದಾಗಿಯೇ ಆಯಿತು (ನನ್ನ ಮೂಲಕ)" ಎಂದು ಅನ್ನಿಸುತ್ತದೆ.

ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

(ಸಭಿಕರಲ್ಲಿ ಹಲವರು ತಮ್ಮ ಕೈಗಳನ್ನೆತ್ತುತ್ತಾರೆ).

ಉದಾಹರಣೆಗೆ, ನೀವೊಂದು ಮಹತ್ತರವಾದ ಕಾರ್ಯವನ್ನು ಸಾಧಿಸಿರುವಿರಿ ಮತ್ತು ಎಲ್ಲರೂ ಅದನ್ನು ಪೂರ್ಣಗೊಳಿಸಿದುದಕ್ಕಾಗಿ ನಿಮ್ಮನ್ನು ಹೊಗಳುತ್ತಾರೆ. ಆದರೂ ನಿಮಗೆ, ’ನಾನೇನನ್ನೂ ಮಾಡಲಿಲ್ಲ. ಅದೆಲ್ಲವೂ ಅದಾಗಿಯೇ ಸಂಭವಿಸಿತು. ಎಲ್ಲವನ್ನೂ ಮಾಡಿದುದು ದೇವರು’ ಎಂದು ಅನ್ನಿಸುತ್ತದೆ.

ನಿಮಗೆ ಯಾವತ್ತಾದರೂ ಈ ರೀತಿ ಅನ್ನಿಸಿದೆಯೇ?

ಅದೇ ರೀತಿಯಲ್ಲಿ, ನೀವು ಯಾವುದೇ ಜೈಲಿಗೆ ಹೋಗಿ ಅಲ್ಲಿರುವ ಅತ್ಯಂತ ಕೆಟ್ಟ ಅಪರಾಧಿಯಲ್ಲಿ, "ಅಂತಹ ಒಂದು ಅಪರಾಧವನ್ನು ನೀನು ಹೇಗೆ ಮಾಡಿದೆ? ನೀನದನ್ನು ಮಾಡುವಂತೆ ಮಾಡಿದುದು ಯಾವುದು? " ಎಂದು ಕೇಳಿದರೆ, ಅವನು, "ನಾನದನ್ನು ಮಾಡಲಿಲ್ಲ. ಅದು ಸುಮ್ಮನೇ ಆಗಿ ಹೋಯಿತು (ನನ್ನ ಮೂಲಕ)" ಎಂದು ಹೇಳುವನು. ಒಬ್ಬ ವ್ಯಕ್ತಿಯು ತಮೋಗುಣದ ಒಂದು ಬಲವಾದ ಪ್ರಭಾವಕ್ಕೆ ಒಳಗಾಗುತ್ತಾನೆ ಮತ್ತು ಒಂದು ಅಪರಾಧವನ್ನು ಮಾಡುತ್ತಾನೆ. ನಂತರ ಅವನು, "ನಾನದನ್ನು ಮಾಡಲಿಲ್ಲ. ಅದು ಸುಮ್ಮನೆ ಆಗಿ ಹೋಯಿತು. ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದು ಹೇಳುತ್ತಾನೆ.

ಆದರೆ, ಅವನು ಕೇಳುವ ಕ್ಷಮೆಯಲ್ಲಿ ಸ್ವಲ್ಪ ಪ್ರಾಮಾಣಿಕತೆಯಿದೆ ಯಾಕೆಂದರೆ ಅವನು, ’ನಾನು ಅಪರಾಧವನ್ನು ಮಾಡಲಿಲ್ಲ. ಅದು ಹೇಗೆ ಆಯಿತೆಂದು ನನಗೆ ಅಚ್ಚರಿಯಾಗುತ್ತಿದೆ’ ಎಂದು ಯೋಚಿಸುವುದನ್ನು ಮುಂದುವರಿಸುತ್ತಾನೆ.

ತಮ್ಮನ್ನು ನಿರ್ದೋಷಿಯೆಂದು ಯೋಚಿಸುವ ಹಲವಾರು ಅಪರಾಧಿಗಳಿದ್ದಾರೆ.

ಒಮ್ಮೆ ನಾನು ಒಂದು ಜೈಲಿಗೆ ಅಲ್ಲಿರುವ ಖೈದಿಗಳನ್ನುದ್ದೇಶಿಸಿ ಮಾತನಾಡಲು ಹೋಗಿದ್ದಾಗ ನಾನು ಅವರೆಲ್ಲರಲ್ಲಿ ಕೇಳಿದೆ, "ನನಗೆ ಹೇಳಿ, ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ನೀವು ನಿರ್ದೋಷಿಗಳೆಂದು ಯೋಚಿಸುತ್ತೀರಿ? ನಿಮ್ಮ ಕೈಗಳನ್ನು ಮೇಲೆತ್ತಿ".

ಅವರಲ್ಲಿ ಪ್ರತಿಯೊಬ್ಬರೂ ತಮ್ಮ ಕೈಗಳನ್ನು ಮೇಲೆತ್ತಿದರು! (ನಗು)

ಸೆರೆಮನೆ ಅಧಿಕಾರಿಯು ನಂತರ ನನ್ನ ಬಳಿ ಬಂದು, "ಗುರುದೇವ, ಇಲ್ಲಿರುವ ಪ್ರತಿಯೊಬ್ಬರೂ ಹಾಗೆ ಹೇಳುವರು" ಎಂದು ಹೇಳಿದರು. ಹೀಗೆ ಪ್ರತಿಯೊಬ್ಬ ಅಪರಾಧಿಯೂ, "ನಾನು ನಿರ್ದೋಷಿ. ಬೇರೊಬ್ಬರಿಂದ ನನ್ನ ಮೇಲೆ ಈ ಅಪರಾಧದ ಸುಳ್ಳು ಆರೋಪ ಹೊರಿಸಲಾಗಿದೆ. ನನ್ನ ಮೇಲೆ ತಪ್ಪು ಆರೋಪ ಹೊರಿಸಿ ಇಲ್ಲಿ ಜೈಲಿಗೆ ಕರೆತರಲಾಗಿದೆ" ಎಂದು ಹೇಳುವನು.

ಅಪರಾಧವನ್ನು ಮಾಡುವವರು ಕೂಡಾ, "ಅದು ಹೇಗಾಯಿತೆಂದು ನನಗೆ ಗೊತ್ತಿಲ್ಲ" ಎಂದು ಹೇಳುವರು.

ಆದುದರಿಂದ ಇದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು, "ಎಲ್ಲಾ ಕರ್ಮಗಳು ಪ್ರಕೃತಿಯಿಂದಾಗಿ ಆಗುತ್ತವೆ, ಆದರೆ ಅಂತಹ ಕರ್ಮಗಳು ನನ್ನನ್ನು ಬಂಧಿಸುವುದಿಲ್ಲ. ನಾನು ಅವುಗಳಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಉಳಿಯುತ್ತೇನೆ; ಕುಳಿತುಕೊಂಡು ಎಲ್ಲವನ್ನೂ ಅನಾಸಕ್ತಿಯಿಂದ ಗಮನಿಸುವ ಒಬ್ಬ ಭಾವಶೂನ್ಯನಾದ ವ್ಯಕ್ತಿಯ ಹಾಗೆಯೇ" ಎಂದು ಹೇಳುತ್ತಾನೆ.

ಅವನು ಹೀಗೆಂದು ಹೇಳುತ್ತಾನೆ, "ನಾನು ನಿರಾಸಕ್ತನು ಅಥವಾ ದುಃಖಿತನು ಎಂದು ಯೋಚಿಸಬೇಡ, ಅಲ್ಲ! ಆದರೆ ಒಬ್ಬ ಅನಾಸಕ್ತ ವ್ಯಕ್ತಿಯು ವೈರಾಗ್ಯದ ಒಂದು ಭಾವನೆಯಿಂದ ಕುಳಿತುಕೊಳ್ಳುವಂತೆಯೇ, ನಾನು ಎಲ್ಲಾ ಕರ್ಮಗಳನ್ನು, ಅವುಗಳಿಗೆ ಅಂಟಿಕೊಳ್ಳದೆಯೇ ಅಥವಾ ಅವುಗಳಿಂದ ಪ್ರಭಾವಿತನಾಗದೆಯೇ ಗಮನಿಸುತ್ತೇನೆ."