ಗುರುವಾರ, ಜೂನ್ 6, 2013

ಮೂರ್ತಿಪೂಜೆಯ ಔಚಿತ್ಯ

ಬೆಂಗಳೂರು, ಭಾರತ
೦೬.೦೬.೧೩

ಪ್ರ: ಪೂಜ್ಯ ಗುರೂಜಿ, ನನ್ನ ಪ್ರಶ್ನೆ, ಹಿಂದೂ ಧರ್ಮದಲ್ಲಿನ ಮೂರ್ತಿ ಪೂಜೆಯ ಬಗ್ಗೆ. ಕ್ರೈಸ್ತರಿಗೆ ಎಲ್ಲ ಕಡೆಯಲ್ಲಿ ಇಗರ್ಜಿಗಳಿಲ್ಲ. ಮಸೀದಿ ಮತ್ತು ಗುರುದ್ವಾರಗಳೂ ಎಲ್ಲ ಕಡೆಯಲ್ಲಿಲ್ಲ. ಹಾಗಿದ್ದರೆ ಹಿಂದೂಗಳಿಗೆ ದೇವಾಲಯ ಯಾಕೆ ಎಲ್ಲ ಕಡೆಯಲ್ಲಿವೆ? ಪ್ರತಿ ಮರದ ಕೆಳಗು ಮತ್ತು ಪ್ರತಿ ಮೂಲೆಯಲ್ಲೂ ಒಂದು ದೇವಸ್ಥಾನ ನೋಡಬಹುದು. ಮೂರ್ತಿಪೂಜೆಯನ್ನು ಎಷ್ಟರ ಮಟ್ಟಿಗೆ ಒಪ್ಪಬಹುದು?

ಶ್ರೀ ಶ್ರೀ: ಕ್ರೈಸ್ತ ಧರ್ಮದಲ್ಲಿ ಮೂರ್ತಿಪೂಜೆ ಇಲ್ಲ ಎಂದು ಯಾರು ಹೇಳುತ್ತಾರೆ? ಕ್ರೈಸ್ತ ಧರ್ಮವೂ ಮೂರ್ತಿ ಪೂಜೆಗೆ ಪ್ರಾಮುಖ್ಯ ನೀಡುತ್ತದೆ. ಅವರು ಶಿಲುಬೆಯ ಚಿಹ್ನೆಯನ್ನು ಎಲ್ಲಾದರೂ ಹಾಕುತ್ತಾರೆ, ರಸ್ತೆಯ ಮೇಲೂ, ಅಥವಾ ಗುಡ್ಡದ ಮೇಲೆ, ಅಲ್ಲವೇ? ಬಹಳ ಮಸೀದಿಗಳನ್ನೂ ಬಹಳ ಸ್ಥಳಗಳಲ್ಲಿ ನಿರ್ಮಿಸಲಾಗುತ್ತಿದೆ.

ಈಗ ಹಿಂದೂ ಧರ್ಮದಲ್ಲಿ ಮೂರ್ತಿಪೂಜೆ ಎಷ್ಟರ ಮಟ್ಟಿಗೆ ಸ್ವೀಕಾರಾರ್ಹ? ಇದು ವಿಚಾರಮಾಡಲು ಯೋಗ್ಯ ಪ್ರಶ್ನೆ.

ಎಲ್ಲೆಲ್ಲಿ ಮೂರ್ತಿ ಪೂಜೆಯನ್ನು ಜನರು ವಿರೋಧಿಸಿದ್ದಾರೋ, ಅಲ್ಲಲ್ಲಿ ಇನ್ನ್ಯಾವುದೋ ರೀತಿಯ ಸಾಂಕೇತಿಕತೆ ಹುಟ್ಟಿಕೊಂಡಿದೆ.

ಮೂರ್ತಿ ಅಂದರೇನು? ಅದು ಒಂದು ಸಂಕೇತ/ಚಿಹ್ನೆ. ನಿರಾಕಾರ ದೈವಿಕತೆ, ಯಾವುದನ್ನು ವರ್ಣಿಸಲಾಗುವುದಿಲ್ಲವೋ ಅಥವಾ ನೋಡುವುದಾಗಲಿ ಮುಟ್ಟುವುದಾಗಲಿ ಸಾಧ್ಯವಿಲ್ಲವೋ, ಅಂಥ ದೈವಿಕತೆಯನ್ನು ಅನುಭವಿಸಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಮಾಧ್ಯಮ ಬೇಕು. ಮತ್ತು ಆ ಮಾಧ್ಯಮವನ್ನು ನಾವು ಮೂರ್ತಿ/ವಿಗ್ರಹ ಎಂದು ಕರೆಯುತ್ತೇವೆ.

ದೇವರು ಆ ವಿಗ್ರಹದಲ್ಲಿ ವಾಸವಾಗಿಲ್ಲ, ಆದರೆ ವಿಗ್ರಹವು ದೇವರತ್ತ ನಿಮ್ಮ ಗಮನಹರಿಸುತ್ತದೆ.

ನೋಡಿ, ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜನ ಛಾಯಾಚಿತ್ರವು ಗೋಡೆಯ ಮೇಲಿದೆ. ಈಗ ಯಾರಾದರೂ ’ನಿಮ್ಮ ಅಜ್ಜ ಯಾರು?’ ಎಂದು ನಿಮ್ಮನ್ನು ಕೇಳಿದರೆ, ನೀವು ಅವರ ಚಿತ್ರದತ್ತ ಬೆರಳ್ತೋರಿಸುತ್ತೀರಿ. ಆ ಚಿತ್ರ ನಿಮ್ಮ ಅಜ್ಜನೇ? ಅಲ್ಲ. ನಿಮ್ಮ ಅಜ್ಜ ಈಗಿಲ್ಲ, ಆದರೆ ಯಾರಾದರೂ ಕೇಳಿದರೆ ನೀವು ಅವರ ಚಿತ್ರದತ್ತ ಕೈತೋರಿಸಿ ’ಇದು ನನ್ನ ಅಜ್ಜ’ ಎಂದು ಹೇಳುತ್ತೀರಿ.

ಹಾಗೆ, ಒಂದು ಚಿತ್ರ (ಅಥವಾ ಮೂರ್ತಿ) ಒಂದು ಮಾಧ್ಯಮ ಅಥವಾ ಒಂದು ಸಂಕೇತ, ಆದ್ದರಿಂದಲೇ ಅದನ್ನು ಪ್ರತಿಮಾ ಎಂದು ಕರೆಯುತ್ತಾರೆ.ಇದು ದೇವರು ಎಂದು, ಕೇವಲ ಒಂದೇ ಚಿಹ್ನೆ ಅಥವಾ ಆಕೃತಿಯಿರದೇ ಇರುವುದು ಒಳ್ಳೆಯದೇ. ಇಲ್ಲದಿದ್ದರೆ ಜನರು ಅದು ಮಾತ್ರ ದೇವರು ಎಂದು ಯೋಚಿಸುತ್ತಿದ್ದರು. ಹಾಗಾಗಿಯೇ ಭಾರತದಲ್ಲಿ ದೇವರ ಸಾವಿರ ವಿವಿಧ ರೂಪಗಳು ಇವೆ. ನೀವು ದೇವರನ್ನು ನಿಮಗಿಷ್ಟವಾದ ಈ ಯಾವುದೇ ರೂಪದಲ್ಲಿ ನೋಡಬಹುದು (ಇಷ್ಟ ದೇವತೆ ಅಂದರೆ ಒಬ್ಬ ವ್ಯಕ್ತಿ ಅಥವಾ ಗುಂಪೊಂದು ಅಕ್ಕರೆಯಿಂದ ಪೂಜಿಸುವಂಥ ನಿರ್ದಿಷ್ಟವಾದ ಒಬ್ಬ ದೇವತೆ).

ಎಲ್ಲಾ ಕಿರಣಗಳು ಒಂದೇ ಸೂರ್ಯನಿಂದ ಬರುವುವಾದರೂ, ಆ ಕಿರಣಗಳಿಗೆ ಏಳು ವಿವಿಧ ಬಣ್ಣಗಳಿವೆ. ಆದ್ದರಿಂದಲೇ ನಮ್ಮಲ್ಲಿ ಪಂಚ ದೇವತೆಗಳಿದ್ದಾರೆ (ಎಲ್ಲಾ ಪೂಜೆ ಪುನಸ್ಕಾರಗಳನ್ನೊಳಗೊಳ್ಳುವ ಐದು ಮೂಲ ದೇವತೆಗಳಾದ ಭಗವಾನ್ ಶಿವ, ಭಗವತೀ ಪಾರ್ವತೀ, ಶ್ರೀ ವಿಷ್ಣು, ಶ್ರೀ ಗಣೇಶ ಮತ್ತು ಸೂರ್ಯ ದೇವ) ಮತ್ತು ಸಪ್ತ ಮಾತೃಕೆಯರಿದ್ದಾರೆ (ದೇವಿ ಮಾತೆಯ ಏಳು ವಿವಿಧ ರೂಪಗಳು: ಬ್ರಹ್ಮಾಣಿ, ನಾರಾಯಣಿ, ಇಂದ್ರಾಣಿ, ಮಹೇಶ್ವರಿ, ವಾರಾಹಿ, ಕೌಮಾರಿ ಮತ್ತು ಚಾಮುಂಡ).

ಅದೇ ರೀತಿಯಲ್ಲಿ ದೇವರು ಒಬ್ಬ, ಆದರೆ ನಮ್ಮ ಪೂರ್ವಜರು ದೇವರಿಗೆ ವಿವಿಧ ಹೆಸರುಗಳನ್ನೂ ರೂಪಗಳನ್ನೂ ನೀಡಿದ್ದಾರೆ.

ಮತ್ತೆ ದೇವತೆಯ ಒಂದು ವಿಗ್ರಹವನ್ನು ಮಂತ್ರ ಪಠಣ ಹಾಗೂ ಪೂಜೆ ಮಾಡಿ ಸ್ಥಾಪಿಸುವ ಒಂದು ಸಂಪ್ರದಾಯವಿದೆ.ಪೂಜೆ ಮತ್ತು ಭಕ್ತಿಯಿಂದ ಸ್ಥಾಪಿಸಲ್ಪಟ್ಟು ಮಾನ್ಯ ಪೀಠದಲ್ಲಿಡಲ್ಪಟ್ಟ ಯಾವುದೇ ರೂಪವು ಮಾನ್ಯವಾಗುತ್ತದೆ.

ನೋಡಿ, ಗುರು ಗ್ರಂಥ ಸಾಹಿಬ್ (ಸಿಖ್ ಜನರ ಮುಖ್ಯ ಧರ್ಮ ಗ್ರಂಥ) ಅಥವಾ ಭಗವದ್ಗೀತೆಯನ್ನು ಒಬ್ಬರು ಎಲ್ಲಾದರೂ ಇಡಬಹುದು. ಆದರೆ ನೀವದನ್ನು ಆರಾಧಿಸಿದಾಗ, ಅದರ ಮುಂದೆ ವಂದಿಸಿ, ಸೇವೆ ಹಾಗೂ ನೈವೇದ್ಯಗಳನ್ನು ಸಮರ್ಪಿಸಿದರೆ, ಆಗ ಅದಕ್ಕೆ ಬೇರೆ ಅರ್ಥವಿದೆ. ಮತ್ತು ಆ ರೂಪಕ್ಕೆ ನೀವೊಂದು ಆಕಾರವನ್ನೂ ಅಥವಾ ಮುಖವನ್ನು ನೀಡಿದಾಗ ಅದು ನಿಮ್ಮೊಳಗೆ ಇನ್ನೂ ಭಕ್ತಿಯನ್ನು ಉಂಟುಮಾಡುತ್ತದೆ.

ಉದಾಹರಣೆಗೆ, ಕೇವಲ ಶ್ರೀ ಕೃಷ್ಣನ ಮುಖವನ್ನು ನೋಡುತ್ತಿದಂತೆ, ಮೀರಾ ಬಾಯಿ ಅವನಲ್ಲಿ ಅಷ್ಟೊಂದು ಆಳ ಪ್ರೀತಿಯನ್ನು ಹೊಂದಿದಳು. ಶ್ರೀ ಚೈತನ್ಯ ಮಹಾಪ್ರಭು(ಮಹಾ ಸಂತರು ಮತ್ತು ಶ್ರೀ ಕೃಷ್ಣನ ಭಕ್ತರು) ಅವರು ಶ್ರೀ ಕೃಷ್ಣನ ರೂಪವನ್ನು (ಕೈಯಲ್ಲಿ ಕೊಳಲನ್ನು ಹಿಡಿದು, ನವಿಲುಗರಿಯ ಕಿರೀಟವನ್ನು ಧರಿಸಿ, ಹೊಳೆಯುವ ಹಳದಿ ಬಣ್ಣದ ವಸ್ತ್ರವನ್ನುಟ್ಟು  ಮರವೊಂದರ ಕೆಳಗಡೆ ನಿಂತಿದ್ದ ಶ್ರೀ ಕೃಷ್ಣನ ಚಿತ್ರ) ನೋಡುತ್ತಿದ್ದಂತೆ ಚೈತನ್ಯದ ಅತ್ಯುನ್ನತ ಮಟ್ಟವನ್ನು ತಲುಪಿದರು.

ವಿಗ್ರಹದ ಅಗತ್ಯವಿದ್ದವರು ಅದನ್ನು ದೈವಿಕತೆ ತಲುಪುವುದಕ್ಕಾಗಿ ಒಂದು ಮೆಟ್ಟಿಲಾಗಿ ಉಪಯೋಗಿಸಬಹುದು. ಆದರೆ ವಿಗ್ರಹಕ್ಕೆ ಅಂಟಿಕೊಳ್ಳಬೇಡಿ. ಯಾವತ್ತೂ ದೆವರು ನಿಮ್ಮೊಂದಿಗೆ ಇದ್ದಾನೆ ಎಂದು ನೆನಪಿನಲ್ಲಿಟ್ಟುಕೊಳ್ಳಿ.

ಆದ್ದರಿಂದಲೇ ಹಿಂದಿನ ದಿನಗಳಲ್ಲಿ, ದೇವಸ್ಥಾನಕ್ಕೆ ಹೋಗುವ ಉದ್ದೇಶವೆಂದರೆ ವಿಗ್ರಹವನ್ನು ನೋಡಿದ ನಂತರ ಸ್ವಲ್ಪ ಹೊತ್ತು ತಮ್ಮೊಂದಿಗೇ ಸಮಯ ಕಳೆಯುವುದಾಗಿತ್ತು. ದೇವಸ್ಥಾನಕ್ಕೆ ಹೋದಾಗ ಅಲ್ಲಿ ಸ್ವಲ್ಪ ಹೊತ್ತು ಕಳೆಯದೇ ಹೊರಡಬಾರದು.

ಇತ್ತೀಚಿನ ದಿನಗಳಲ್ಲಿ ಜನರು ಏನು ಮಾಡುತ್ತಾರೆಂದರೆ ಕುಳಿತುಕೊಳ್ಳುವ ಸಲುವಾಗಿ ಕೆಲವು ಕ್ಷಣಕಾಲು ಕುಳಿತು ಮತ್ತೆ ಎದ್ದು ಹೊರಡುತ್ತಾರೆ. ಇದು ನಿಮ್ಮನ್ನು ನೀವೇ ಮೋಸಗೊಳಿಸುವುದು.

ಹಿಂದಿನ ದಿನಗಳಲ್ಲಿ, ವಿಗ್ರಹವನ್ನು ಗರ್ಭಗುಡಿಯಲ್ಲಿ ಕತ್ತಲಿನಲ್ಲಿಡುತ್ತಿದ್ದರು, ದೇವರ ಮುಖವನ್ನು ನಿಮಗೆ ಹಣತೆಯ ಬೆಳಕಿನಿಂದ ಮಾತ್ರ ನೋಡಲಾಗುತ್ತಿತ್ತು.

ಇದರ ಸಂಕೇತವೆಂದರೆ ದೇವರು ನಿಮ್ಮ ಹೃದಯದ ಗುಹೆಯಾಳದಲ್ಲಿ ವಾಸವಾಗಿದ್ದಾನೆ ಎಂದು ನೆನಪಿಸಿಕೊಳ್ಳುವುದಾಗಿದೆ. ನೀವು ದೇವರನ್ನು ಆತ್ಮ-ಜ್ಞಾನದ ಬೆಳಕಿನಿಂದ ನೋಡಬೇಕಾಗಿದೆ. ಇದು ನಿಜವಾದ ತತ್ತ್ವ.

ಹಿಂದಿನ ದಿನಗಳಲ್ಲಿ ಜನರು ವಿಗ್ರಹಗಳನ್ನು ಬಹಳ ಸುಂದರವಾಗಿ ಅಲಂಕರಿಸುತ್ತಿದ್ದರು, ಯಾಕೆಂದರೆ ನಿಮ್ಮ ಮನಸ್ಸು ಅಲ್ಲಿ ಇಲ್ಲಿ ಅಲೆದಾಡದೆ ನೀವು ಸಂಪೂರ್ಣವಾಗಿ ದೈವಿಕತೆಯಿಂದ ಚಿತ್ತಾಕರ್ಷಿತವಾಗಿರಲಿ ಎಂದು. ಜನರು ಅಮೃತಶಿಲೆಯ(ಮಾರ್ಬಲ್) ಸುಂದರ ವಿಗ್ರಹಗಳನ್ನು ಮಾಡುತ್ತಿದ್ದರು, ಮತ್ತು ಅದನ್ನು ಸುಂದರ ಬಟ್ಟೆಗಳಿಂದಲೂ ಒಡವೆಗಳಿಂದಲೂ ಶೃಂಗರಿಸುತ್ತಿದ್ದರು.

ಇದು ವಿಂಡೊ ಶಾಪಿಂಗ್ ನಂತೆ(ಮಾಲ್, ಬೃಹತ್ ಅಂಗಡಿ ಮಳಿಗೆಗಳಲ್ಲೇನಿದೆ ಎಂದು ಒಂದು ಸುತ್ತು ನೋಡಿ ಬರುವಂತೆ). ಇಂದೂ ಬಹಳ ಮಂದಿ ವಿಂಡೋ ಶಾಪಿಂಗ್ ಗೆ ಹೋಗುತ್ತಾಎ, ಅಲ್ಲವೇ. ಜನರು ಎಲ್ಲಾ ಒಳ್ಳೊಳ್ಳೆ ಸಾಮಾನುಗಳನ್ನು ನೋಡಿ ಸಂತೋಷ ಪಡುತ್ತಾರೆ. ಯಾಕೆ? ಯಾಕೆಂದರೆ ಮನಸ್ಸು ಚಂದದ ಬಟ್ಟೆಗಳಿಗೆ, ಒಳ್ಳೆ ಪರಿಮಳಕ್ಕೆ, ಹೂಗಳಿಗೆ, ಹಣ್ಣುಗಳಿಗೆ ಮತ್ತು ಒಳ್ಳೆಯ ಆಹಾರಕ್ಕೆ ಆಕರ್ಷಿತಗೊಳ್ಳುತ್ತದೆ.

ನಮ್ಮ ಪೂರ್ವಜರು ಇದನ್ನು ತಿಳಿದುಕೊಂಡಿದ್ದರು, ಮತ್ತು ಅದಕ್ಕಾಗಿ ಅವರು ಮನಸ್ಸು ಈ ಐದು ಇಂದ್ರಿಯಗಳ ಮೂಲಕ ಈ ದಿಕ್ಕಿನಲ್ಲಿ ಸ್ಥಾಪಿತವಾಗಿದ್ದು ದೈವಿಕತೆಯ ಕಡೆ ಗಮನಹರಿಸುವಂತೆ ಈ ವಸ್ತುಗಳನ್ನು ವಿಗ್ರಹದ ಸುತ್ತ ಇಡುತ್ತಿದ್ದರು.

ಬೋಧಿ ಜನರೂ ಮನಸ್ಸನ್ನು ವಶಪಡಿಸಲು ಈ ತಂತ್ರವನ್ನು ಉಪಯೋಗಿಸುತ್ತಿದ್ದರು. ಇದಕ್ಕಾಗಿಯೇ ಅವರು ಭಗವಾನ್ ಬುದ್ಧನ ವಿಗ್ರಹಗಳನ್ನು ಹಾಗು ಬೋಧಿಸತ್ತ್ವಗಳನ್ನು ಮರಕತ, ಇಂದ್ರನೀಲಮಣಿ, ಬಂಗಾರ ಮತ್ತು ಬೆಳ್ಳಿಯಿಂದ ಬಹಳ ಸುಂದರವಾಗಿ ತಯಾರಿಸುತ್ತಿದ್ದರು. ಮನಸ್ಸು ಈ ಐದು ಇಂದ್ರಿಯಗಳ ಸಹಿತವಾಗಿ ದೈವಿಕತೆಯಲ್ಲಿ ಕೇಂದ್ರೀಕೃತವಾಗಿರಲಿ ಎಂದು ಅವರು ವಿಗ್ರಹದ ಮುಂದೆ ಹಣ್ಣು, ಹೂವು, ಧೂಪ ಮತ್ತು ಮಿಠಾಯಿಗಳನ್ನು ಇಡುತ್ತಾರೆ.

ಒಮ್ಮೆ ಮನಸ್ಸು ಶಾಂತವಾದ ಮೇಲೆ, ಅವರು ನಿಮಗೆ ಕಣ್ಣುಗಳನ್ನು ಮುಚ್ಚಿ ಧ್ಯಾನ ಮಾಡಲು ಹೇಳುತ್ತಾರೆ. ಇದು ಎರಡನೆಯ ಹೆಜ್ಜೆ. ಧ್ಯಾನದಲ್ಲಿ ನೀವು ನಿಮ್ಮೊಳಗೇ ದೇವರನ್ನು ಪಡೆಯುತ್ತೀರಿ.

ಒಂದು ಬಹಳ ಸುಂದರವಾದ ಉಕ್ತಿಯಿದೆ,

’ಮನುಷ್ಯಾಣಾಂ ಅಪ್ಸು ದೇವತಾ ಮನೀಷೀಣಾಂ ದಿವಿ ದೇವತಾ |
ಬಾಲಾನಾಂ ತೋಷಕಾಷ್ಟೇಷು ಜ್ಞಾನಿನೋ ಆತ್ಮನಿ ದೇವತಾ || ’
(ವೇದಾಂತಗಳಲ್ಲಿ ಬರುವ ಶೃತಿಗಳಿಂದ ಆಯ್ದ ಒಂದು ಶ್ಲೋಕ)

ಒಬ್ಬರು ’ದೇವರೆಲ್ಲಿದ್ದಾರೆ?’ ಎಂದು ಕೇಳಿದಾಗ, ವಿವೇಕಿಗಳು ಈ ಶ್ಲೋಕದಿಂದ ಉತ್ತರಿಸುತ್ತಾರೆ. ಇದರ ಅರ್ಥ, ’ಮನುಷ್ಯರಿಗೆ, ಪ್ರೀತಿಯೇ ದೇವರು; ಬಹಳ ಪಾಂಡಿತ್ಯದವರಿಗೆ, ಅವರು ದೈವೀ ಶಕ್ತಿಗಳಲ್ಲಿ ಹಾಗೂ ದೈವೀ ಗುಣಗಳಲ್ಲಿ ದೇವರನ್ನು ನೋಡುತ್ತಾರೆ; ಸ್ವಲ್ಪ ಕಡಿಮೆ ಬುದ್ಧಿವಂತರು ದೇವರನ್ನು ಮರದ ಅಥವಾ ಕಲ್ಲಿನ ಮೂರ್ತಿಗಳಲ್ಲಿ ನೋಡುತ್ತಾರೆ; ಆದರೆ ವಿವೇಕಿಗಳು, ದೇವರನ್ನು ತಮ್ಮ ಆತ್ಮನಲ್ಲಿ ನೋಡುತ್ತಾರೆ.’

ನಾಳೆ ನಾವು ಆಶ್ರಮದಲ್ಲಿ ಚತುರ್ದಶಿ ಹವನವನ್ನು ಇಡುತ್ತೇವೆ. ನೀವೆಲ್ಲರೂ ಅದರಲ್ಲಿ ಪಾಲ್ಗೊಳ್ಳಬಹುದು. ಮಂತ್ರ ಪಠಣ ಆಗುತ್ತಿದ್ದಂತೆ ನೀವೆಲ್ಲರೂ ಧ್ಯಾನ ಮಾಡಬಹುದು.

ನೋಡಿ, ಪೂಜೆಗೆಂದು ನಿಯಮಿಸಲ್ಪಟ್ಟ ದೀರ್ಘ ಪದ್ಧತಿಗಳಿವೆಯಾದರೂ, ನಾವು ಅವನ್ನು ನಿಜವಾಗಿಯೂ ಮಾಡಬೇಕಾಗಿಲ್ಲ,

ಯಾಕೆಂದರೆ ನಾವು ಧ್ಯಾನ ಮಾಡುವಾಗ ಎಲ್ಲವೂ ದೇವರು ಎಂದು ನೋಡುತ್ತೇವೆ. ಆದರೆ, ಪ್ರಾಚೀನ ಸಂಪ್ರದಾಯ ಹಾದು ಪದ್ಧತಿಗಳನ್ನು ಉಳಿಸಿಕೊಳ್ಳುವುದರ ಸಲುವಾಗಿ, ನಾವು ಈ ಎಲ್ಲಾ ವಿಧಿ ಮತ್ತು ಕ್ರಮಗಳನ್ನು ಆಚರಿಸಬೇಕು. ಅದಕ್ಕಾಗಿಯೇ ನಾವು ನಿಯತವಾಗಿ ದೀಪ ಬೆಳಗಬೇಕು, ದೇವರಿಗೆ ಹೂಗಳನ್ನು ಅರ್ಪಿಸಬೇಕು, ನಮ್ಮ ಮಕ್ಕಳು ಇದರಿಂದ ಕಲಿತುಕೊಳ್ಳುವುದಕ್ಕಾಗಿ ಮತ್ತು ಭವಿಷ್ಯದ ಪೀಳಿಗೆಗಳು ನಮ್ಮ ಪ್ರಾಚೀನ ಸಂಪ್ರದಾಯಗಳು ಹಾಗೂ ಶ್ರೀಮಂತ ಸಾಂಪ್ರದಾಯಿಕ ಪರಂಪರೆಗೆ ಪರಿಚಿತವಾಗಿರುವುದಕ್ಕಾಗಿ.

ನಾವು ದೀಪಾವಳಿಯನ್ನು ಏಕೆ ಆಚರಿಸುತ್ತೇವೆ? ಅದನ್ನು ಆಚರಿಸುವ ನಿಜವಾದ ಅಗತ್ಯವಿಲ್ಲ. ಆದರೆ ನಾವು ಆಚರಿಸದಿದ್ದರೆ, ನಾವು ಮುಂದಿನ ಪೀಳಿಗೆಗಳಿಗೆ ಆ ಹಬ್ಬದ ಸಾಂಪ್ರದಾಯಿಕ ಹಾಗೂ ಪೌರಾಣಿಕ ಮಹತ್ತ್ವವನ್ನು ಮತ್ತು ನಮ್ಮ ಪೂರ್ವಜರು ಅದನ್ನು ಹೇಗೆ, ಯಾಕೆ ಆಚರಿಸುತ್ತಿದ್ದರು ಎಂದು ಹೇಗೆ ತಿಳಿಸುವುದು. ಹಾಗಾಗಿ ನಾವು ಇದೆಲ್ಲವನ್ನೂ ಮಾಡದಿದ್ದರೆ, ಆಗ ಒಂದು ಪ್ರಾಚೀನ ಪದ್ಧತಿ ಮತ್ತು ಒಂದು ದಿವ್ಯ ಸಂಪ್ರದಾಯ ಕಳೆದುಹೋಗುತ್ತದೆ.

ನೀವು ಇದೆಲ್ಲದರ ಆಳಕ್ಕೆ ಇಳಿದಾಗ, ಇದೆಲ್ಲವೂ ಎಷ್ಟು ಅದ್ಭುತವಾಗಿದೆ ಎಂದು ನೀವು ನೋಡುತ್ತೀರಿ. ಆದ್ದರಿಂದಲೇ ಶ್ರೀ ಕೃಷ್ಣನು ಹೇಳುವುದು, ’ಎಲ್ಲವೂ ನಾನು’. ಹಾಗಾಗಿ ನೀವು ಈ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಬಿಟ್ಟುಬಿಡಬೇಕಾಗಿಲ್ಲ.

ಪ್ರ: ಗುರೂಜಿ, ಇಂದಿನ ಟಿ.ವಿ. ಧಾರಾವಾಹಿಗಳಲ್ಲಿ ತೋರಿಸುವಂತ ಮಹಾದೇವ, ಪಾರ್ವತಿ, ಜಾಲಂಧರ ಹಾಗೂ ಇತರ ಪಾತ್ರಗಳಲ್ಲಿ ನೈಜತೆಯಿದೆಯೇ? ದಯವಿಟ್ಟು ಇದರ ಮೇಲೆ ಸ್ವಲ್ಪ ಬೆಳಕುಹರಿಸಿ.

ಶ್ರೀ ಶ್ರೀ: ಹ್ಞಾಂ, ಇದು ನನಗೂ ಸಮಂಜಸವೆನಿಸುವುದಿಲ್ಲ.

ಅವರು ಪಾರ್ವತಿಯನ್ನು, ಒಬ್ಬ ಸದಾ ಕೋಪಿಸಿಕೊಳ್ಳುವ, ನಿತ್ಯವಾಗಿ ಸುಲಭದಿಂದ ಅಸಮಾಧಾನಪಟ್ಟುಕೊಳ್ಳುವ ಮತ್ತು ಆಗಾಗ ರೇಗಾಡುವವಳಂತೆ ತೋರಿಸುತ್ತಾರೆ. ಇವು ದೈವೀ ಗುಣಗಳಲ್ಲ. ಸಮಚಿತ್ತತ್ತ್ವ, ಆನಂದ, ಸಹಜತೆ, ಸರಳತೆ ಮತ್ತು ದೂರದರ್ಶಿತ್ವ, ಇವು ದೈವೀ ಗುಣಗಳು. ಇದು ತೋರಿಸಬೇಕಾಗಿರುವುದು.

ನೋಡಿ ಕೆಲವು ದೈವೀ ಶಕ್ತಿಗಳಿವೆ ಮತ್ತು ಕೆಲವು ಆಸುರೀ ಶಕ್ತಿಗಳಿವೆ. ಆದರೆ ಈ ಧಾರಾವಾಹಿಗಳು ಇದನ್ನು ನಿರ್ಲಕ್ಷಿಸಿ ಈ ದೈವೀ ಪಾತ್ರಗಳನ್ನು ಮನುಷ್ಯರಂತೆ ಮತ್ತು ಸಾಮಾನ್ಯ ಮನುಷ್ಯರಲ್ಲ ಆದರೆ ಭಾವುಕವಾಗಿಅಸ್ವಸ್ಥ ಅಥವಾ ನೇತ್ಯಾತ್ಮಕತೆ ಹಾಗೂ ದಾರಿದ್ರ್ಯವುಳ್ಳ ಜರಂತೆ ಚಿತ್ರೀಕರಿಸುತ್ತಾರೆ. ಹಾಗಾಗಿ ಇದು ವಿವೇಕಶೀಲ ಕೆಲಸ ಎಂದು ನಾನು ಯೋಚಿಸುವುದಿಲ್ಲ.ಇದು ಒಂದು ವಿಷಯ.

ಎರಡನೆಯದಾಗಿ, ನೀವು ಆ ಕಥೆಯನ್ನು ನಿಜ ವಾಸ್ತವ ಎಂದು ಪರಿಗಣಿಸಬಾರದು, ಆದರೆ ಆ ಕಥೆಗಳಲ್ಲಿ ಪ್ರಸ್ತುತಪಡಿಸಿದ ಆಳವಾದ ಅರ್ಥ-ಸಾರವನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಅದು ಇನ್ನೊಂದು ಬಗೆಯ ಮನರಂಜನೆಯಲ್ಲದೇ ಹೆಚ್ಚೇನೂ ಆಗುವುದಿಲ್ಲ.

ಉದಾಹರಣೆಗೆ, ಆ ಧಾರಾವಾಹಿಯಲ್ಲಿ ಜಾಲಂಧರ ಎಂಬ ಹೆಸರಿನ ಒಬ್ಬ ರಾಕ್ಷಸ ಉದ್ಭವಿಸಿದ. ಈಗ ಎಲ್ಲವೂ ಭಗವಾನ್ ಶಿವನಾಗಿರುವಾಗ ಈ ಆಸುರೀ ಶಕ್ತಿ ಎಲ್ಲಿಂದ ಉಂಟಾಯಿತು? ಭಗವಾನ್ ಶಿವನನ್ನು ಮೀರಿ ಏನೂ ಇಲ್ಲದಿರುವಾಗ, ಈ ಅಸುರನೂ ಶಿವನಿಂದ ಬಂದಿರಬೇಕು.

ಹಾಗಾಗಿ ಉದ್ಭವಿಸಿರುವ ಎಲ್ಲಾ ಅಸುರರು ಆ ಬ್ರಹ್ಮ ತತ್ತ್ವದ ಭಾಗವೇ ಹೊರತು ಅದರಿಂದ ಬೇರ್ಪಟ್ಟಿಲ್ಲ. ನೀವು ಮೊದಲು ಅರ್ಥ ಮಾಡಿಕೊಳ್ಳಬೇಕಾದುದು ಅದನ್ನೇ.

ಆ ಕಥೆ ಹೀಗೆ ವಿವರಿಸಲಾಗಿದೆ: ಭಗವಾನ್ ಶಿವನು ಇಂದ್ರನ ಅಹಂಕಾರದಿಂದ ಬಹಳ ಕ್ರೋಧಗೊಂಡನಂತೆ.

ಭಗವಾನ್ ಶಿವ ಶಾಂತಿಯ ವ್ಯಕ್ತರೂಪ ಮತ್ತು ಇಂದ್ರನು ಸಾಮೂಹಿಕ ಚೈತನ್ಯ ಅಥವಾ ದೊಂಬಿ-ಮನೋಭಾವದ ಪ್ರತೀಕ.
ಒಂದು ಇಂದ್ರ ೧೦೦೦ ಕಣ್ಣುಗಳಿಗೆ ಸಮಾನ ಎಂದು ಹೇಳುತ್ತಾರೆ, ಅಂದರೆ ೫೦೦ ಜನರ ಒಂದು ದೊಂಬಿಯ ಪ್ರತೀಕ. ಒಂದು ಗುಂಪು ಸಾಮಾನ್ಯವಾಗಿ ತನ್ನದೇ ಆದ ಚೈತನ್ಯ ಅಥವಾ ಮನಸ್ಸನ್ನು ಹೊಂದಿರುತ್ತದೆ, ಇದನ್ನು ಮಾಬ್ ಸೈಕಾಲಜಿ (ದೊಂಬಿ-ಮನೋಭಾವ) ಎನ್ನುತ್ತಾರೆ, ಇದು ಗರಿಷ್ಠ ಪಕ್ಷ ಹಾನಿಕಾರಕವಾಗಿರುತ್ತದೆ.

ಅವರು ಎಲ್ಲಾದರೂ ಹೋಗಿ ಸಾರ್ವಜನಿಕ ಸ್ವತ್ತನ್ನು ಸುಟ್ಟು ಅಥವಾ ಮುರಿದುಹಾಕಿ ಗದ್ದಲವೆಬ್ಬಿಸುತ್ತಾರೆ. ಈ ದೊಂಬಿ-ಮನೋಭಾವ ಯಾವತ್ತೂ ಒಂದು ವಿನಾಶಕಾರಕ ಪ್ರವೃತ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಶಿವ ತತ್ತ್ವವು (ಶುದ್ಧ ಚೈತನ್ಯ ಮತ್ತು ಪರಮಾನಂದದ ಮೂಲ ತತ್ತ್ವ) ಇಂದ್ರನ ವಿನಾಶಕಾರಕ ಚೈತನ್ಯದ ಮೇಲೆ ಕೋಪಗೊಳ್ಳುವುದು ಬಹಳ ಸಹಜವಾಗಿತ್ತು.

ಹಾಗೆ ಶಾಂತ ಶಿವ ತತ್ತ್ವದಿಂದ ಕ್ರೋಧ ಉಕ್ಕಿತು. ಆದರೆ ಆ ಸಿಟ್ಟು ಅಲ್ಲಿ ನಿಲ್ಲಲಿಲ್ಲ. ಭಗವಾನ್ ಶಿವನ ಕ್ರೋಧವು ಒಂದು ರಾಕ್ಷಸನ (ಭಗವಂತನ ಕ್ರೋಧದ ವಿನಾಶಕ ಶಕ್ತಿಯ ಸಶರೀರ ರೂಪ) ರೂಪ ತಳೆಯಿತು. ಸಿಟ್ಟು ಎಲ್ಲಿಂದಲೂ ಬಂದಿರಲಿ, ಭಗವಂತನಿಂದಲೇ ಬಂದಿದ್ದರೂ, ಅದು ನಿಖರವಾಗಿ ಪ್ರತಿಕ್ರಿಯೆ ಹೊಂದಿ ಮತ್ತೆ ಆ ವ್ಯಕ್ತಿಯ ಕಡೆಗೆ ಮರಳುತ್ತದೆ. ಎಲ್ಲಿ ತನ್ನ ಮೂಲವಿದೆಯೋ, ಕಟ್ಟಕಡೆಯದಾಗಿ ಎಲ್ಲವೂ, ಕೋಪವೂ ಸೇರಿ, ಅಲ್ಲಿಗೆ ಮರಳುತ್ತದೆ.

ಹಾಗೆ ಆ ಕ್ರೋಧವೂ (ಜಾಲಂಧರನಿಂದ ನಿರೂಪಿಸಿರುವಂಥದ್ದು) ತನ್ನ ಮೂಲವಾದ ಶಿವನಲ್ಲಿಗೆ ಮರಳಿ ಬರಬೇಕಿತ್ತು (ಮತ್ತು ಕರಗಿಹೋಗಬೇಕಿತ್ತು). ಭಗವಾನ್ ಶಿವನು ಜಾಲಂಧರನ ವಧೆಗಾಗಿ ಆದಿಶಕ್ತಿಯಲ್ಲಿ (ಮೊದಲಿನಿಂದಲೂ ಇರುವ ಶಕ್ತಿಯಾದ ಮಾತಾ ಭಗವತಿ) ಪ್ರಾರ್ಥಿಸುತ್ತಾನೆ.

ಭಗವಾನ್ ಶಿವನು ಚೈತನ್ಯದ ಶಾಂತ ತತ್ತ್ವವನ್ನು ನಿರೂಪಿಸುತ್ತಾನೆ, ಹಾಗೂ ಮಾತಾ ಭಗವತಿಯು ಈ ಸೃಷ್ಟಿಯಲ್ಲಿನ ಎಲ್ಲಾ ಚಟುವಟಿಕೆಗಳಿಗೆ ಹೇತುವಾಗಿರುವ ಶಕ್ತಿ. ಈಗ ಆದಿಶಕ್ತಿಯು ಮೂರು ಶಾಕ್ತಿಗಳ ಸಮ್ಮಿಲನ: ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಮತ್ತು ಇಚ್ಛಾ ಶಕ್ತಿ.

ಹಾಗೆ ಭಗವಾನ್ ಶಿವ ಮತ್ತು ಆದಿ ಶಕ್ತಿ ಒಂದಾದಾಗ, ಭಗವಂತನಿಂದ ಬಂದ ಶಕ್ತಿಯನ್ನು ಅವರು ಸೋಲಿಸಿದರು. ಈ ರೀತಿಯಲ್ಲಿ ಅವರು ಜಾಲಂಧರನನ್ನು, ಜನರನ್ನು ತನ್ನ ಶಕ್ತಿಗಳನ್ನುಪಯೋಗಿಸಿ ಭ್ರಾಂತಿಯ ಜಾಲದಲ್ಲಿ ಸಿಕ್ಕಿಹಾಕಿಸುತ್ತಿದ್ದ ಅಸುರನನ್ನು, ವಧಿಸಿದರು. ಇದು ಕಥೆಯ ಸಾರ.

ಪ್ರ: ಗುರುದೇವ, ನಾನು ಸರ್ಕಾರೀ ನೌಕರ. ನನ್ನ ಸಂಪಾದನೆ ಅಲ್ಪಪ್ರಮಾಣವಾದುದು. ನಾನು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೇ ಒಂದು ಯಶಸ್ವಿ ಹಾಗೂ ಸುಖಸಾಧನದ ಜೀವನವನ್ನು ನಡೆಸಲು ಆಗುವುದೇ?

ಶ್ರೀ ಶ್ರೀ: ನಿಮಗೆ ಶಾಂತಿಯಿಂದ ನಿದ್ರಿಸಬೇಕೇ? ನಿಮಗೆ ಅಂಜಿಕೆಯಿಲ್ಲದೇ ನಡೆಯಬೇಕೇ? ನಿಮಗೆ ಆತ್ಮ ವಿಶ್ವಾಸದಿಂದ ತಲೆ ಮೇಲೆತ್ತಿ ಬದುಕಬೇಕೇ?

ನಿಮಗೆ ಒಂದು ಪ್ರಾಮಾಣಿಕ ಬದುಕಿನಿಂದ ಸಿಗುವ ಆನಂದವು ಒಂದು ಅಪ್ರಾಮಾಣಿಕ ರೀತಿಯ ಜೀವನದಿಂದ ಸಿಗುವುದು ಎಂದೂ ಸಾಧ್ಯವಿಲ್ಲ. ನಿಮ್ಮ ಬಳಿ ಎಲ್ಲಾ ಯಂತ್ರೋಪಕರಣಗಳು ಹಾಗೂ ಸುಖಸಾಧನಗಳೂ ಇದ್ದಿರಬಹುದು, ಆದರೆ ನಿಮಗೆ ನೆಮ್ಮದಿಯಿಂದ ನಿದ್ರಿಸಲಾಗದಿದ್ದರೆ ಏನು ಪ್ರಯೋಜನ?

ಈಗ ನಿಮಗೇನು ಬೇಕೆಂದು ನೀವು ಆಯ್ದುಕೊಳ್ಳಿ. ನಿಮಗೆ ಶಾಂತಿಯಿಂದ ಬದುಕಿ, ಶಾಂತಿಯಿಂದ ನಿದ್ರಿಸಿ ತಲೆ ಮೇಲೆತ್ತಿ ಬದುಕಬೇಕೇ? ನಾನೊಂದು ಪ್ರಾಮಾಣಿಕ ಜೀವನ ನಡೆಸಿದ್ದೇನೆ ಎಂದ ನಿಮಗೆ ಧೈರ್ಯದಿಂದ ಹೇಳಲು ಸಾಧ್ಯವೇ? ಇದನ್ನು ಹೇಳಲು ಸಾಧ್ಯವಾದರೆ, ಬೇರೆ ಯಾವುದರಿಂದಲೂ ಸಾಧ್ಯವಾಗದ ಆನಂದ ಮತ್ತು ತೃಪ್ತಿಯನ್ನು ಇದು ನಿಮಗೆ ತಂದುಕೊಡುತ್ತದೆ.

ಪ್ರ: ಗುರೂಜಿ, ಈ ಜಗತ್ತಿನಲ್ಲಿ ಎಲ್ಲರೂ ಒಂದಿಲ್ಲೊಂದು ತೊಂದರೆಯಿಂದ ಪೀಡಿತರಾಗಿರುವಂತಿದೆ. ನಾವು ಈ ಲೋಕಕ್ಕೆ ತೊಂದರೆಗಳನ್ನು ಸುಧಾರಿಸುವುದಕ್ಕಾಗಿಯೇ ಬಂದಿದ್ದೇವಾ?

ಶ್ರೀ ಶ್ರೀ: ನೀವದನ್ನು ತೊಂದರೆ ಎಂದು ಪರಿಗಣಿಸಿದರೆ, ಅವು ನಿಮಗೆ ತೊಂದರೆಯಂತೆಯೇ ಕಾಣುತ್ತವೆ. ನೀವದನ್ನು ಒಂದು ಆಟ (ಭಗವಂತನದ್ದು) ಎಂದು ನೋಡಿದರೆ, ಅವು ನಿಮಗೆ ಆಟದಂತೆ ತೋರುತ್ತವೆ.

ಬಹಳ ಸಲ ನಾವು ತೊಂದರೆಗಳಿಗೆ ಎಷ್ಟು ಹೊಂದಿಕೊಳ್ಳುತ್ತೇವೆ ಅಂದರೆ, ಅವುಗಳಿಲ್ಲದೆ ನಾವು ಅವಿಶ್ರಾಂತರಾಗುತ್ತೇವೆ.

ತೊಂದರೆಗಳಿಲ್ಲದೇ ಇದ್ದರೆ, ನಾವು ಕೊಂಚ ತೊಂದರೆಗಳನ್ನು ನಮಗಾಗಿಯೇ ಸೃಷ್ಟಿಸಿಕೊಳ್ಳುತ್ತೇವೆ, ಮತ್ತು ನಮ್ಮ ಸುತ್ತಮುತ್ತಲಿನವರಿಗೆ ತೊಂದರೆಯಾಗುತ್ತೇವೆ. ಜೀವನದ ಯಥಾದೃಷ್ಟಿಯನ್ನು ನಾವು ಬದಲಿಸಬೇಕಾಗಿದೆ. ಒಂದು ವಿಶಾಲ ದೃಷ್ಟಿಯನ್ನು ಹೊಂದಿರಿ.

ಈ ಲೋಕ ವೈವಿಧ್ಯಗಳಿಂದ ತುಂಬಿದೆ, ಮತ್ತು ಪ್ರತಿ ವ್ಯಕ್ತಿಯೂ ಬೇರೆ ಸ್ವಭಾವವನ್ನು ಮತ್ತು ಬೇರೆ ವರ್ತನೆಯನ್ನು ಹೊಂದಿರುತ್ತಾನೆ. ನೀವಿದನ್ನು ಅರ್ಥಮಾಡಿಕೊಳ್ಳಬೇಕು.

ಪ್ರ: ಗುರೂಜಿ, ನನ್ನ ಪೋಷಕರ ವಿವಾಹವಾಗಿ ೨೫ ವರ್ಷಗಳಾಗಿವೆ ಆದರೆ ಅವರು ಪರಸ್ಪರ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ನಾನು ಅಪ್ಪನ ಬಳಿ ಹೋದಾಗ ಅವರು ಸರಿ ಎಂದು ಕಾಣುತ್ತದೆ, ಮತ್ತು ನಾನು ಅಮ್ಮನ ಬಳಿ ಹೋದಾಗ ಅವರು ಸರಿ ಎಂದು ಕಾಣುತ್ತದೆ. ನಾನೇನು ಮಾಡಲಿ?

ಶ್ರೀ ಶ್ರೀ: ನಿನಗೆ ನನ್ನ ಮೊದಲ ಉಪದೇಶವೆಂದರೆ ಇಬ್ಬರ ಬಳಿಯೂ ಹೋಗುತ್ತಲೇ ಇರು. ಇಬ್ಬರಲ್ಲಿಯೂ "ನೀವು ಸರಿ" ಎಂದು ಹೇಳುತ್ತಿರಿ ಮತ್ತು ಅವರ ನಡುವಿನ ಸ್ನೇಹವನ್ನು ಕಾಪಾಡಲು ಪ್ರಯತ್ನವನ್ನು ಮುಂದುವರಿಸಿ. ಬಿಟ್ಟುಬಿಡಬೇಡಿ. ನೀವು ನೂರು ಸಲ ಪ್ರಯತ್ನಿಸಿದರೆ, ಕನಿಷ್ಠ ಒಂದು ಸಲವಾದರೂ ಏನಾದರೂ ಒಳ್ಳೆಯದಾಗುತ್ತದೆ.

ನೋಡಿ, ಆಗಲೇ ೨೫ ವರ್ಷಗಳು ಕಳೆದಿವೆ, ಮತ್ತು ಮುಂದಿನ ೨೦-೨೫ ವರ್ಷಗಳು ಹಾಗೆ ಕಳೆಯುತ್ತವೆ. ಅದರ ನಂತರ ಏನಾಗುತ್ತದೆ ಎಂದು ನಾವು ಆಮೇಲೆ ನೋಡೋಣ.

ಅಂಥ ಪರಿಸ್ಥಿತಿಯಲ್ಲಿ ಶಾಂತಿ ಉಳಿಸಲು ಬಹಳ ಪ್ರಯತ್ನ ಮಾಡಬೇಡಿ. ವಸ್ತುಸ್ಥಿತಿ ಹೇಗಿದೆಯೋ ಅದನ್ನು ಸ್ವೀಕಾರ ಮಾಡಿ ವಿಶ್ರಮಿಸಿ. ಜನರ ಸ್ವಭಾವವನ್ನು ಬದಲಾಯಿಸುವುದು ಕಷ್ಟ. ಅವರು ಹೇಗಿದ್ದಾರೋ ಅವರನ್ನು ಹಾಗೆಯೇ ಬಿಡುವುದು ಒಳ್ಳೆಯದು. ಬೆಂಕಿ ಬಹಳ ಹೆಚ್ಚಿದಾಗ ಸ್ವಲ್ಪ ನೀರು ಸಿಂಪಡಿಸಿ. ಅವರು ಜಗಳ ಪ್ರಾರಂಭಿಸಿದರೆ ನಡುವಿನಲ್ಲಿ ನಿಲ್ಲಿ. ನೀವು ಪ್ರಜ್ಞಾವಂತ ಹಾಗೂ ಬಲಶಾಲಿಯಾಗಿರುವಿರಿ. ನಮ್ಮ ಸಮಾಜದಲ್ಲಿ ವಸ್ತುಸ್ಥಿತಿ ಇರುವುದು ಹಾಗೆ.

ಒಬ್ಬ ಮಹಾಶಯನನ್ನು ಯಾರೋ ಕೇಳಿದರು, ’ನೀವು ನಿಮ್ಮ ಪತ್ನಿಯೊಂದಿಗೆ ಏಕೆ ಜಗಳವಾಡುತ್ತೀರಿ?’

ಅವನು ಉತ್ತರಿಸಿದ, ’ನಿಮ್ಮ ಮಾತಿನ ಅರ್ಥವೇನು? ಅವಳು ನನ್ನ ಪತ್ನಿ ಮತ್ತು ನಾನವಳನ್ನು ಪ್ರೀತಿಸುತ್ತೇನೆ, ಹಾಗಿರುವಾಗ ನಾನು ಹೋಗಿ ಇನ್ನೊಬ್ಬರೊಂದಿಗೆ ಹೇಗೆ ಜಗಳವಾಡಲಿ? ಯಾರನ್ನು ನಾನು ಪ್ರೀತಿಸುತ್ತೇನೋ ಅವರೊಡನೆ ಮಾತ್ರ ನಾನು ಜಗಳವಾಡಬಲ್ಲೆ’.

ಅದು ಬಹಳ ನಿಜ.

ನೋಡಿ, ಅವರು ಈಗೊಮ್ಮೆ ಆಗೊಮ್ಮೆ ಜಗಳವಾಡುತ್ತಾರೆ, ಆದರೆ ನಂತರ ಅವರು ಜೊತೆಯಾಗುತ್ತಾರೆ ಮತ್ತು ಪರಸ್ಪರ ಪ್ರೀತಿಯಿಂದಲೂ ಇರುತ್ತಾರೆ. ಅದು ಅನುಮೋದನೀಯವೇ. ನಡುವಿನಲ್ಲಿ ಬಹಳ ತಲೆ ಹಾಕಬೇಡಿ ಮತ್ತು ಚಿಂತಿಸಬೇಡಿ.


ಈ ಬರಹದ ’ಸ್ಪೀಕಿಂಗ್ ಟ್ರೀ’ ಲಿಂಕ್:
http://www.speakingtree.in/spiritual-blogs/seekers/self-improvement/to-what-extent-is-idol-worship-acceptable