ಶನಿವಾರ, ಜೂನ್ 1, 2013

ಬೆರಗುಗೊಳಿಸುವ ರಹಸ್ಯ


ಜೂನ್ ೧, ೨೦೧೩
ಬೆಂಗಳೂರು, ಭಾರತ


ಯಾವುದು ಸಾಮಾನ್ಯವಲ್ಲವೋ ಅದನ್ನು ನಾವು ಅದ್ಭುತ ಅಥವಾ ಆಶ್ಚರ್ಯಕರವೆಂದು ಕರೆಯುತ್ತೇವೆ. ಆದರೆ ಅದೇ ಘಟನೆಯು ಪ್ರತಿದಿನವೂ ಆಗುತ್ತಿದ್ದರೆ, ಆಗ ನಾವು ಅದನ್ನು ಒಂದು ಆಶ್ಚರ್ಯವೆಂದು ಕರೆಯುವುದಿಲ್ಲ ಯಾಕೆಂದರೆ ನಮಗೆ ಅದರಲ್ಲೇನೂ ನಿಜವಾದ ಅದ್ಭುತ ಕಾಣಿಸುವುದಿಲ್ಲ. 

ನೀವು ಸಾಧಾರಣವಾಗಿ ಏನನ್ನು ನೋಡುವಿರೋ ಅದಕ್ಕೆ ವಿಭಿನ್ನವಾದುದನ್ನೇನೋ ಇದ್ದಕ್ಕಿದ್ದಂತೆ ನೋಡುವಾಗ ನೀವು, "ಓ! ಇದು ಆಶ್ಚರ್ಯಕರವಾದುದು! ಇದೊಂದು ಅಚ್ಚರಿ" ಎಂದು ಹೇಳುತ್ತೀರಿ. 

ಒಂದು ರಹಸ್ಯ ಕೂಡಾ ಹಾಗೆಯೇ. ಅದು ಅಸಾಮಾನ್ಯ.

ಒಂದು ಮಾವಿನ ಮರವು ಕೇವಲ ಮಾವಿನ ಹಣ್ಣುಗಳನ್ನು ಮಾತ್ರ ಬಿಡುತ್ತವೆ. ಇದರಲ್ಲೇನೂ ರಹಸ್ಯವಿಲ್ಲ. ತೆಂಗಿನ ಮರವು ಕೇವಲ ತೆಂಗಿನಕಾಯಿಗಳನ್ನು ಬಿಡುತ್ತದೆ. ಅದರಲ್ಲೇನಾದರೂ ರಹಸ್ಯವಿದೆಯೇ? ಆದರೆ ಒಂದು ದಿನ ಒಂದು ತೆಂಗಿನ ಮರದಲ್ಲಿ ಒಂದು ಮಾವಿನಹಣ್ಣು ಬೆಳೆಯುವುದನ್ನು ನೀವು ನೋಡಿದರೆ, ಆಗ ಅದೊಂದು ಅಚ್ಚರಿ. "ಇದೊಂದು ಪವಾಡ! ಇದು ಅಷ್ಟೊಂದು ಅದ್ಭುತ ವಿಷಯ. ಇದು ಅಸಾಮಾನ್ಯವಾದುದು" ಎಂದು ನೀವು ಹೇಳುವಿರಿ. 

ನೀವು ಎಚ್ಚರಿಕೆಯಿಂದ ಗಮನಿಸಿದರೆ, ಹಲವಾರು ಅದ್ಭುತವಾದ ಘಟನೆಗಳು ಈ ಸೃಷ್ಟಿಯಲ್ಲಿ ಮತ್ತು ಪ್ರಕೃತಿಯಲ್ಲಿಡೀ ಎಲ್ಲಾ ಸಮಯದಲ್ಲೂ ಮತ್ತು ಎಲ್ಲೆಡೆಯೂ ಆಗುತ್ತಿವೆ. ಆದರೆ ಈ ಅದ್ಭುತ ಘಟನೆಗಳನ್ನು ನೋಡಲು ಸಾಧ್ಯವಾಗಲು ನಿಮಗೊಂದು ವಿಶೇಷ ರೀತಿಯ ದೃಷ್ಟಿ ಬೇಕು. 

ನಾವು ವಿಷಯಗಳನ್ನು ನೋಡುವ ರೀತಿಯನ್ನು ನಾವು ಬದಲಾಯಿಸಬೇಕು. ಅದು ಯೋಗವೆಂದು ಕರೆಯಲ್ಪಡುತ್ತದೆ. 

ಈ ಸೃಷ್ಟಿಯನ್ನು ನೀವು ಯೋಗದ ದೃಷ್ಟಿಯಿಂದ ನೋಡಿದಾಗ, ನಿಮಗೆ ಎಲ್ಲವೂ ಬಹಳ ಅಚ್ಚರಿದಾಯಕವಾಗಿ, ಬಹಳ ಅದ್ಭುತವಾಗಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಇದಕ್ಕಿಂತ ಇನ್ನೂ ಹೆಚ್ಚು ಅದ್ಭುತವಾದುದೆಂದರೆ, ಈ ಸೃಷ್ಟಿಯಲ್ಲಿರುವ ಎಲ್ಲವೂ, ನೋಡಲು ಸಾಧ್ಯವಾಗದೇ ಇರುವುದರ ಒಂದು ಆವಿರ್ಭಾವವಾಗಿರುವುದು ಹೇಗೆ ಎಂಬುದು; ಅವ್ಯಕ್ತ ಚೇತನದ ಒಂದು ಆವಿರ್ಭಾವ!

ಈ ಸೃಷ್ಟಿಯಲ್ಲಿ ಎಲ್ಲವೂ ಖಾಲಿ ಆಕಾಶದಿಂದ ಬಂದಿದೆ.

ಇದಕ್ಕಾಗಿಯೇ ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುವುದು,

’ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ I
ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನ: II (೯.೫)

ಶ್ರೀಕೃಷ್ಣ ಪರಮಾತ್ಮನು ಹೀಗೆಂದು ಹೇಳುತ್ತಾನೆ, "ಓ ಅರ್ಜುನ! ಈ ಸೃಷ್ಟಿಯಲ್ಲಿರುವ ಎಲ್ಲವೂ ನನ್ನೊಳಗೆ ವಿಶ್ರಾಂತಿ ಮಾಡುತ್ತವೆ, ಆದರೂ ನಾನು ಅವುಗಳಲ್ಲಿಲ್ಲ. ಪಂಚಭೂತಗಳು ನನ್ನಿಂದ ಹುಟ್ಟಿವೆ ಮತ್ತು ನನ್ನಲ್ಲಿ ಆಶ್ರಯ ಪಡೆಯುತ್ತವೆ, ಆದರೂ ನಾನು ಅವುಗಳಲ್ಲಿಲ್ಲ. ಯೋಗದ ಈ ಅಪೂರ್ವ ಭವ್ಯತೆಯ ಕಡೆಗೆ ನೋಡು."

ಉದಾಹರಣೆಗೆ, ನಿಮ್ಮ ಶರೀರವು ಪಂಚಭೂತಗಳಿಂದ ಸಂಯೋಜಿಸಲ್ಪಟ್ಟಿದೆ ಮತ್ತು ನಿಮ್ಮ ಶರೀರವು ನಿಮ್ಮ ಮನಸ್ಸಿನಿಂದ ಆವರಿಸಲ್ಪಟ್ಟಿದೆ. ಮತ್ತು ನಿಮ್ಮ ಮನಸ್ಸಿನಲ್ಲಿ ನೀವು, ಪಂಚಭೂತಗಳ ಬಗ್ಗೆ, ಬಿಸಿಯಾಗ ಬೇಸಿಗೆಗಾಲದ ಬಗ್ಗೆ ಮತ್ತು ತಂಪಾದ ಚಳಿಗಾಲದ ಬಗ್ಗೆ, ಅಹಾರ ಮತ್ತು ಆಶ್ರಯಗಳು ಮೊದಲಾದವುಗಳ ಬಗ್ಗೆ ಯೋಚಿಸುತ್ತೀರಿ. ಆದರೆ ಆಹಾರವನ್ನು ತಿನ್ನುವುದು ಮನಸ್ಸೇ?  

ನೀವು ಆಗಾಗ್ಗೆ ಒಂದು ಗುಲಾಬ್ ಜಾಮೂನ್ ಅಥವಾ ರಸಗುಲ್ಲಾದ ಬಗ್ಗೆ ಯೋಚಿಸುತ್ತೀರಿ, ಆದರೆ ಮನಸ್ಸಿಗೆ ಈ ಸಿಹಿತಿಂಡಿಗಳನ್ನು ತಿನ್ನಲು ಸಾಧ್ಯವೇ? ಇಲ್ಲ, ತಿನ್ನುವುದು ಶರೀರ, ಆದರೆ ಆಹಾರದ ಯೋಚನೆಯು ಮನಸ್ಸಿನಲ್ಲಿ ಬರುತ್ತದೆ.
ನಿಮ್ಮ ಮನಸ್ಸಿಗೆ ಒಂದು ರಸಗುಲ್ಲಾವನ್ನು ಹಿಡಿದುಕೊಳ್ಳಲು ಸಾಧ್ಯವಿದೆಯೇ? ಅದು ಸಾಧ್ಯವಿಲ್ಲ. ಆದರೆ ಒಂದು ರಸಗುಲ್ಲಾದ ಯೋಚನೆಗಳು ಮತ್ತು ಭಾವನೆಗಳು ಮನಸ್ಸಿನಲ್ಲಿ ಏಳುತ್ತವೆ. 

ಅದೇ ರೀತಿಯಲ್ಲಿ, ದೇವರು ಈ ಸಂಪೂರ್ಣ ಸೃಷ್ಟಿಯಲ್ಲಿರುವನು. ಮತ್ತು ಅದು ಹೇಗೆ? ಇದನ್ನು ಶ್ರೀಕೃಷ್ಣ ಪರಮಾತ್ಮನು ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ,

’ಯಥಾಕಾಶಸ್ಥಿತೋ ನಿತ್ಯಂ ವಾಯುಃ ಸರ್ವತ್ರಗೋ ಮಹಾನ್ I
ತಥಾ ಸರ್ವಾಣಿ ಭೂತಾನಿ ಮತ್‌ಸ್ಥಾನೀತ್ಯುಪಧಾರಯ II(೯.೬)

ಅವನು ಹೀಗೆಂದು ಹೇಳುತ್ತಾನೆ, "ಹೇಗೆ ವಾಯು ತತ್ವವು ಆಕಾಶದಲ್ಲಿಡೀ, ಎಲ್ಲೆಡೆಯೂ ಇರುವುದೋ, ಅದೇ ರೀತಿಯಲ್ಲಿ ಈ ಸಂಪೂರ್ಣ ಸೃಷ್ಟಿಯು ನನ್ನೊಳಗೆ ವಾಸಿಸುತ್ತದೆ. ನೀನು ನಿನ್ನ ಸುತ್ತಲೂ ಏನನ್ನೆಲ್ಲಾ ನೋಡುವೆಯೋ ಅದೆಲ್ಲವೂ ನನ್ನಲ್ಲಿ ವಿಶ್ರಮಿಸುತ್ತದೆ ಮತ್ತು ನನ್ನಿಂದ ಹೊರತಾಗಿರುವುದು ಯಾವುದೂ ಇಲ್ಲ’. 

ಎಂಟು ಅಥವಾ ಹತ್ತು ವರ್ಷ ವಯಸ್ಸಿನ ಒಬ್ಬ ಚಿಕ್ಕ ಹುಡುಗನು ತನ್ನ ತಂದೆಯಲ್ಲಿ ಹೀಗೆಂದು ಕೇಳುತ್ತಾನೆ, "ದೇವರೆಂದರೇನು? ಅವನು ಹೇಗೆ ಕಾಣಿಸುತ್ತಾನೆ? ಅವನು ಎಲ್ಲಿದ್ದಾನೆ?"

ತಂದೆಯು ಮಗುವಿನ ಕೈಹಿಡಿದು ಮನೆಯ ಹೊರಗೆ ಕರೆದೊಯ್ಯುತ್ತಾನೆ. ಅವನು ಮಗುವಿನಲ್ಲಿ ಕೇಳುತ್ತಾನೆ, "ನನ್ನ ಪ್ರಿಯನೇ! ನನಗೆ ಹೇಳು, ಈ ಮನೆಯನ್ನು ಕಟ್ಟುವ ಮೊದಲು ಇಲ್ಲೇನಿತ್ತು?"

ಮಗುವು, "ಅಲ್ಲಿ ಏನೂ ಇರಲಿಲ್ಲ. ಅದೆಲ್ಲವೂ ಖಾಲಿ ಜಾಗವಾಗಿತ್ತು" ಎಂದು ಉತ್ತರಿಸುತ್ತಾನೆ. 

ತಂದೆಯು, "ಹಾಗಾದರೆ ಈಗ ಈ ಮನೆಯನ್ನು ಎಲ್ಲಿ ಕಟ್ಟಲಾಗಿದೆ?" ಎಂದು ಕೇಳುತ್ತಾನೆ. 

ಮಗುವು, "ಅದನ್ನು ಖಾಲಿ ಜಾಗದಲ್ಲಿ ಕಟ್ಟಲಾಗಿದೆ" ಎಂದು ಹೇಳುತ್ತಾನೆ. 

ಆಗ ತಂದೆಯು, "ಹಾಗಾದರೆ ನಾವು ಈ ಮನೆಯನ್ನು ಮುರಿದರೆ ಏನು ಉಳಿಯುವುದು?" ಎಂದು ಕೇಳುತ್ತಾನೆ. 

ಮಗುವು, "ಮತ್ತೊಮ್ಮೆ ಅಲ್ಲಿ ಕೇವಲ ಖಾಲಿ ಜಾಗ(ಆಕಾಶ)ವಿರುವುದು" ಎಂದು ಹೇಳುತ್ತಾನೆ. 

ಹಾಗಾಗಿ ಇದರರ್ಥವೆಂದರೆ ಖಾಲಿ ಜಾಗ(ಆಕಾಶ)ವು ಅಲ್ಲಿ ಹಿಂದೆ ಇತ್ತು, ಅದು ಅಲ್ಲಿ ಈಗ ಇದೆ ಮತ್ತು ಮುಂದೆ ಕೂಡಾ ಇರುವುದು. ಅದು ಬದಲಾಗದೇ ಮತ್ತು ಎಲ್ಲದರಿಂದಲೂ ಅಪ್ರಭಾವಿತವಾಗಿ ಉಳಿಯುತ್ತದೆ. ದೇವರೆಂದರೆ ಆ ಆಕಾಶ. 

ಉಪನಿಷತ್ತುಗಳಲ್ಲಿ ಒಂದು ಪ್ರಶ್ನೆಯಿದೆ, ’ಕಿಂ ಬ್ರಹ್ಮಯೇತಿ?’ (ಅರ್ಥ: ಬ್ರಹ್ಮನೆಂದರೇನು? ಅಥವಾ ಬ್ರಹ್ಮನು ಏನೆಲ್ಲವನ್ನು ಒಳಗೊಂಡಿರುವನು?) ಅದಕ್ಕೆ ನೀಡಲಾಗಿರುವ ಉತ್ತರವೆಂದರೆ, ’ಖಂ! ಖಂ ಬ್ರಹ್ಮಯೇತಿ!’ (ಅರ್ಥ: ಆಕಾಶ! ಆಕಾಶ ಮತ್ತು ಅದು ಒಳಗೊಂಡಿರುವುದೆಲ್ಲಾ ಬ್ರಹ್ಮನಾಗಿರುವನು!)

ಹಾಗಾಗಿ, ಹೇಗೆ ಆಕಾಶ ತತ್ವವು ಎಲ್ಲೆಡೆಯೂ ಮತ್ತು ಎಲ್ಲದರಲ್ಲೂ ಇರುವುದೋ, ಅದೇ ರೀತಿಯಲ್ಲಿ ಬ್ರಹ್ಮ ಅಥವಾ ದೇವರು ಎಲ್ಲೆಡೆಯೂ ಇರುವನು. 

ಇದಕ್ಕಾಗಿಯೇ ನಾವು ದೇವರನ್ನು ನೆನಪಿಸಿಕೊಳ್ಳುವಾಗಲೆಲ್ಲಾ, ನಾವು ಹೀಗೆಂದು ಉಚ್ಛರಿಸುವುದು,

’ನಮಾಮೀಶಮೀಶಾನ್ ನಿರ್ವಾಣರೂಪಂ
ವಿಭುಂ ವ್ಯಾಪಕಂ ಬ್ರಹ್ಮವೇದಸ್ವರೂಪಂ I
ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ
ಚಿದಾಕಾಶಮಾಕಾಶವಾಸಂ ಭಜೇsಹಂ II
ನಿರಾಕಾರಮೋಂಕರಮೂಲಂ ತುರೀಯಂ
ಗಿರಾಜ್ಞಾನಗೋತೀತಮೀಶಂ ಗಿರೀಶಂ I
ಕರಾಲಂ ಮಹಾಕಾಲಕಾಲಂ ಕೃಪಾಲಂ
ಗುಣಾಗಾರಸಂಸಾರಪಾರಂ ನತೋsಹಂ II

(ರುದ್ರಾಷ್ಟಕಂನ ಆರಂಭದ ಶ್ಲೋಕಗಳು - ಶ್ರೀ ಗೋಸ್ವಾಮಿ ತುಳಸೀದಾಸರಿಂದ ಬರೆಯಲ್ಪಟ್ಟ, ಭಗವಾನ್ ಶಿವನ ವೈಭವವನ್ನು ಹಾಡುವ ಒಂದು ಕವಿತೆ.)

ಇದರರ್ಥವೆಂದರೆ, ದೇವರು ಚೇತನದ ವ್ಯಾಪಕವಾದ, ಅಂತ್ಯವಿಲ್ಲದ ಆಕಾಶವಾಗಿರುವನು.   

ಭಗವಾನ್ ದಕ್ಷಿಣಾಮೂರ್ತಿಯನ್ನು ಹಾಡಿ ಹೊಗಳುವ ಒಂದು ಶ್ಲೋಕವಿದೆ (ಎಲ್ಲಾ ಜ್ಞಾನದ ಸಾಕಾರವಾಗಿರುವಂತೆ, ಭಗವಾನ್ ಶಿವನ ಒಂದು ದಯಾಳು ರೂಪ). ಅದು ಹೀಗೆಂದು ಹೇಳುತ್ತದೆ, ’ವ್ಯೋಮವದ್ ವ್ಯಾಪ್ತದೇಹಾಯ ಶ್ರೀ ದಕ್ಷಿಣಾಮೂರ್ತಯೇ ನಮಃ’.

(ಅರ್ಥ: ಆಕಾಶದುದ್ದಕ್ಕೂ ವ್ಯಾಪ್ತವಾಗಿರುವ ಪರಮಾತ್ಮನ ಸಾಕಾರ ರೂಪವಾಗಿರುವ ಭಗವಾನ್ ದಕ್ಷಿಣಾಮೂರ್ತಿಗೆ ವಂದನೆಗಳು.)

ಇದರರ್ಥ, ದೇವರ ಶರೀರವು ಹೇಗೆ ಕಾಣಿಸುತ್ತದೆ? ಅದು ಆಕಾಶದಂತೆ ವ್ಯಾಪಕವೂ, ಕೊನೆಯಿಲ್ಲದುದೂ ಆಗಿದೆ. 

ಶ್ರೀಕೃಷ್ಣ ಪರಮಾತ್ಮ ಕೂಡಾ ಅದನ್ನೇ ಹೇಳುತ್ತಾನೆ, "ಆಕಾಶದಾದ್ಯಂತ ವಾಯು ಇರುವಂತೆಯೇ, ಅದೇ ರೀತಿಯಲ್ಲಿ, ಸೃಷ್ಟಿಯಲ್ಲಿರುವ ಎಲ್ಲಾ ಜೀವಿಗಳೂ ಮತ್ತು ಎಲ್ಲವೂ ನನ್ನೊಳಗೆ ವಾಸಿಸುತ್ತವೆ. ಹಾಗಾಗಿ ಎಲ್ಲಾ ಜೀವಿಗಳು, ಪಂಚಭೂತಗಳು, ಪ್ರಕೃತಿ; ಸಂಪೂರ್ಣವಾಗಿ ಎಲ್ಲವೂ ನನ್ನೊಳಗೆ ಆಶ್ರಯ ಪಡೆಯುತ್ತವೆ."

ಈಗ, ಎಲ್ಲೆಡೆಯೂ ಇರುವುದನ್ನು ಯಾರಾದರೂ ಹುಡುಕಿಕೊಂಡು ಹೋಗುತ್ತಾರೆಯೇ? ತನ್ನಿಂದ ಹೊರಗಡೆ ಯಾರು ಹುಡುಕಿಕೊಂಡು (ದೇವರನ್ನು) ಹೋಗುವನೋ ಅವನೊಬ್ಬ ಮೂರ್ಖ. ಯಾರು ತನ್ನೊಳಗೆ ಹೋಗಿ ತನ್ನೊಳಗೆಯೇ ವಿಶ್ರಾಂತಿ ಪಡೆದುಕೊಳ್ಳುವನೋ ಅವನು ತನ್ನನ್ನೇ (ದೇವರನ್ನು) ಪಡೆಯುತ್ತಾನೆ ಮತ್ತು ಅವನು ಬುದ್ಧಿವಂತನು. 

ನೀವು ಕೈಲಾಶ್-ಮಾನಸರೋವರಗಳಂತಹ (ಹಿಮಾಲಯಗಳಲ್ಲಿರುವ ಭಗವಾನ್ ಶಿವನ ಒಂದು ಪವಿತ್ರ ಕ್ಷೇತ್ರ) ತೀರ್ಥಕ್ಷೇತ್ರಗಳನ್ನು ಒಂದರ ನಂತರ ಇನ್ನೊಂದರಂತೆ ಸಂದರ್ಶಿಸುತ್ತಾ ಇದ್ದರೂ, ನಿಮಗೆ ಭಗವಾನ್ ಶಿವನು ಕಾಣಿಸುವುದಿಲ್ಲ.   

ನೀವೆಲ್ಲೇ ಇದ್ದರೂ, ನೀವು ಸುಮ್ಮನೇ ಮೌನವಾಗಿ ನಿಮ್ಮೊಳಗೆಯೇ ಹೋದಾಗ, ಆ ಕ್ಷಣದಲ್ಲೇ ನಿಮಗೆ ದೇವರು ಕಾಣಿಸುವನು. 

ಭಗವಾನ್ ಶಿವನು ಎಲ್ಲೆಡೆಯೂ ಇರುವನು, ಚಿದಾಕಾಶವಾಗಿ: ಎಲ್ಲೆಡೆಯೂ ಹರಡಿರುವ ಚೇತನದ ಆಕಾಶವಾಗಿ. ದೇವರು ಆಕಾಶದಂತೆ. ಆಕಾಶವು ಕಾಣಿಸುತ್ತದೆಯೇ? ನೀವು ಆಕಾಶವನ್ನು ನೋಡಬಲ್ಲಿರಾ? ಹೌದು ಮತ್ತು ಇಲ್ಲ. 

ಹೀಗಾಗಿ, ದೇವರು ಎಲ್ಲೆಡೆಯೂ ಇರುವನೆಂದು ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿರಬೇಕು. ದೇವರ ಹಿಂದೆ ಓಡಬೇಡಿ. ದೇವರನ್ನು ನೋಡಲು ಜ್ವರತೆಯಿಂದಿರಬೇಡಿ (ಅಂದರೆ, ದೇವರನ್ನು ಒಂದು ರೂಪದಲ್ಲಿ ನೋಡುವ ಬಯಕೆ). 

ಸಂತ ಕಬೀರದಾಸನ ಒಂದು ಸುಂದರವಾದ ದ್ವಿಪದಿಯಿದೆ,

’ಹರಿ ಹರಿ ಕೆಹತಾ ಮೈ ಫಿರಾ, ಪರ್ ಹರಿ ನಹೀ ಮಿಲೆ
ಜಬ್ ಮೈ ಟೆಹೆರ್ ಕರ್ ಚುಪ್ ಹೋ ಗಯಾ, ತೋ ಹರಿ ಲಾಗೆ ಪೀಛೆ ಕೆಹತ್ ಕಬೀರ್! ಕಬೀರ್!’

(ಅರ್ಥ: ಹರಿ ಹರಿ ಎನ್ನುತ್ತ ನಾನು ಅಲೆದಾಡಿದೆ. ಆದರೆ ಹರಿ ದೊರೆಯಲಿಲ್ಲ. ಅಲೆತವನ್ನು ನಿಲ್ಲಿಸಿ ಯಾವಾಗ ನಾನು ಸುಮ್ಮನಾದೆನೋ, ಆಗ ಹರಿಯು ಕಬೀರ್! ಕಬೀರ್! ಎಂದೆನ್ನುತ್ತ ನನ್ನನ್ನು ಹಿಂಬಾಲಿಸತೊಡಗಿದ.)