
ಇಪ್ಪತ್ತು, ನೂರು ವಯೋಮಾನದ ನಮ್ಮ ಶರೀರದ ರೂಪುರೇಷೆಯನ್ನು ಅರಿತು ನಾವು ತರುಣರು, ವೃದ್ಧರೆಂಬ ತೀರ್ಮಾನಕ್ಕೆ ಬರುತ್ತೇವೆ. ಆದರೆ ಪ್ರಕೃತಿ ನಿರ್ದೇಶಿಸಿರುವ ನಮ್ಮ ಕರ್ತವ್ಯ ಯಾವುದೆಂದು ಅರಿಯುವುದು, ಆಯಾ ಜನ್ಮದ ಕರ್ತವ್ಯಾಂಶವನ್ನು ಯಶಸ್ವಿಯಾಗಿ ಮುನ್ನಡೆಸುವುದು ಅಷ್ಟು ಸುಲಭವಲ್ಲ. ನಾವು ಬೆಳೆಯುವ ಪರಿಸರ, ನಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನ ಮತ್ತಿತರ ಬಹಿರಾಕರ್ಷಣೆಗಳ ಹಿಂದೆ ನಮ್ಮ ಬದುಕಿನ ನಿಜವಾದ ಕರ್ತವ್ಯ ಅಗೋಚರವಾಗಿಬಿಟ್ಟಿರುತ್ತದೆ. ಆ ಕರ್ತವ್ಯವನ್ನು ಶೀಘ್ರದಲ್ಲಿ ಗುರ್ತಿಸುವಷ್ಟು ಅದೃಷ್ಟಶಾಲಿಗಳಾಗಿದ್ದರೆ, ಗಿನ್ನೆಸ್ ದಾಖಲೆ ಸ್ಥಾಪಿಸಿದ ಹದಿಹರೆಯದವನೆಂ/ಳೆಂಬ ಗೌರವ ನಮ್ಮದಾಗಬಹುದು. ಆ ಕರ್ತವ್ಯ ಅರಿಯುವಲ್ಲಿ ಏರ್ಪಡುವ ವಿಳಂಬದಿಂದ ನಾವು ಅನಾಮಿಕರಾಗಿ ಸಾಯಲೂಬಹುದು.
ಬದುಕಿನ ಕ್ರಮವನ್ನು ಚುರುಕುಗೊಳಿಸಬಲ್ಲಂಥ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಆರ್ಟ್ ಆಫ಼್ ಲಿವಿಂಗ್ ಮತ್ತಿತರ NGOಗಳು ರೂಪಿಸಿವೆ. ಈ ತರಬೇತಿಗಳಲ್ಲಿ ಭಾಗವಹಿಸಿದರೆ ನಮಗೆ ನಮ್ಮ ಪ್ರಕೃತಿ ನಿರ್ದೇಶಿತ ಕರ್ತವ್ಯದ ಶೀಘ್ರ ಅರಿವು ಮೂಡಬಹುದು. ಆರ್ಟ್ ಆಫ಼್ ಲಿವಿಂಗ್ ಬೆಂಗಳೂರು ಕೇಂದ್ರ, ತಾನು ನಿರೂಪಿಸಿದ ಹಲವು ವಿಧದ ತರಬೇತಿಗಳು ಬೀರಬಲ್ಲ ಪರಿಣಾಮವೆಂಥದ್ದು ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುವಂಥ Face2Face with Sri Sri ಎಂಬ facebook ಸಹಭಾಗಿತ್ವದ ಜಾಗತಿಕ ಅಂತರ್ಜಾಲ ಸಮಾವೇಶವನ್ನು ಇತ್ತೀಚೆಗೆ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲೆಡೆಯಲ್ಲಿ ಕೆಳಕಂಡ ಚಿತ್ರಿಕೆಗಳು ಕಾಣಿಸಿಕೊಂಡು ಜನ ಸಮುದಾಯದಲ್ಲಿ ಸಾತ್ವಿಕ ಮನೋಭಾವ ಅಂಕುರಿಸಲು ಕಾರಣವಾದವು.
ಟೈಮ್ಸ್ ಆಫ಼್ ಇಂಡಿಯಾದ ಸಹೋದರ ಪತ್ರಿಕೆ 'ವಿಜಯ ಕರ್ನಾಟಕ' ಈ ಸಮಾವೇಶವನ್ನು ಕುರಿತ ವರದಿಯನ್ನು ಪ್ರಕಟಿಸಿತು. ಆ ವರದಿಯ ಕ್ಲಿಪ್ಪಿಂಗ್ ಕೆಳಕಂಡಂತಿತ್ತು.