ಭಾನುವಾರ, ಜೂನ್ 2, 2013

ನಿಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳಿ

ಬೆಂಗಳೂರು, ಭಾರತ
೨ ಜೂನ್ ೨೦೧೩

’ಔಷಧಿ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳಲಾಗಿದೆ. ಇದರರ್ಥವೇನೆಂದರೆ, ನಾವೊಂದು ಔಷಧಿಯನ್ನು ತೆಗೆದುಕೊಳ್ಳುವಾಗ, ನಾವದನ್ನು ಪವಿತ್ರವೆಂದು ಪರಿಗಣಿಸಬೇಕು, ಗಂಗಾ ನದಿಯ ನೀರಿನಂತೆ.

ನೀವು ಗಂಗಾ ನದಿಯ ನೀರನ್ನು (ಗಂಗಾಜಲ) ಕುಡಿಯುವಾಗ, ನಿಮಗೆ ಹೇಗನ್ನಿಸುವುದು? ನೀವದನ್ನು ಒಂದು ಪವಿತ್ರತೆಯ ಭಾವನೆಯೊಂದಿಗೆ ಮತ್ತು ಶ್ರದ್ಧೆಯೊಂದಿಗೆ ಕುಡಿಯುತ್ತೀರಿ. ಸಾಮಾನ್ಯ ನೀರು ಮತ್ತು ಗಂಗಾಜಲದ ನಡುವೆ ಇರುವ ವ್ಯತ್ಯಾಸವೆಂದರೆ ಅದು. ನೀವು ಶ್ರದ್ಧೆಯೊಂದಿಗೆ ಕುಡಿಯುವಾಗ, ನೀರು ತೀರ್ಥವಾಗುತ್ತದೆ. ಒಂದು ಔಷಧಿಯನ್ನು ಇದೇ ಭಾವನೆಯೊಂದಿಗೆ ತೆಗೆದುಕೊಳ್ಳಬೇಕು, ಆಗ ಅದು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಅದು ಕೇವಲ ಒಂದು ಮಾತ್ರೆಯನ್ನು ನಿಮ್ಮ ಬಾಯಿಯೊಳಕ್ಕೆ ಹಾಕಿ ನೀರು ಕುಡಿಯುವುದಲ್ಲ.

’ವೈದ್ಯೋ ನಾರಾಯಣೋ ಹರಿಃ’, ಅಂದರೆ ಒಬ್ಬರು ವೈದ್ಯರನ್ನು ಭಗವಾನ್ ನಾರಾಯಣನ ಒಂದು ರೂಪವಾಗಿ ನೋಡಬೇಕು.

ಈ ಚರಣಕ್ಕೆ ಎರಡು ಅರ್ಥಗಳಿವೆ. ಒಂದನೆಯದೆಂದರೆ, ನಿಜವಾದ ವೈದ್ಯನು ಭಗವಾನ್ ನಾರಾಯಣನಾಗಿರುವನು ಮತ್ತು ನಿಜವಾದ ಔಷಧಿಯು ಗಂಗಾ ನದಿಯ ನೀರಾಗಿದೆ.

ಇನ್ನೊಂದು ಎಂದರೆ, ಒಂದು ಔಷಧಿಯು ಗಂಗಾ ನದಿಯ ನೀರಿನಷ್ಟೇ ಪವಿತ್ರವಾಗಿ ಪರಿಗಣಿಸಲ್ಪಡಬೇಕು ಮತ್ತು ಒಬ್ಬ ವೈದ್ಯನು ಭಗವಾನ್ ನಾರಾಯಣನ ಒಂದು ರೂಪವಾಗಿ ನೋಡಲ್ಪಡಬೇಕು.

ನಿಮ್ಮ ಆರೋಗ್ಯವನ್ನು ಕಾಪಾಡಲು ಒಳ್ಳೆಯ ಅಭ್ಯಾಸಗಳ ಅಗತ್ಯವಿದೆ. ಇಲ್ಲಿ ಮನಸ್ಸು ಕೂಡಾ ಒಂದು ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ. ನಾವು ದುರಭ್ಯಾಸಗಳಿಂದ ಮುಕ್ತರಾಗಲು ಬಯಸುವುದಾದರೆ, ನಮ್ಮ ಮನಸ್ಸು ಪ್ರಸನ್ನವಾಗಿರಬೇಕು ಮತ್ತು ನಾವು ಶ್ರದ್ಧೆಯನ್ನು ಹೊಂದಿರಬೇಕು.

ಒಂದು ರೋಗವು ಗುಣಹೊಂದಬೇಕಾದರೆ ಮೂರು ವಿಷಯಗಳು: ಒಳ್ಳೆಯ ಅಭ್ಯಾಸಗಳು, ಒಳ್ಳೆಯ ಯೋಚನೆಗಳು ಮತ್ತು ಔಷಧಿಗಳು ಬೇಕಾಗುತ್ತವೆಯೆಂದು ನಮ್ಮ ಪೂರ್ವಿಕರು ಹೇಳಿರುವರು. ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಮನಸ್ಸನ್ನು ಪ್ರಸನ್ನವಾಗಿಯೂ ಶಾಂತವಾಗಿಯೂ ಇಟ್ಟುಕೊಳ್ಳಬೇಕು ಮತ್ತು ನಾವು ಶ್ರದ್ಧೆಯನ್ನು ಹೊಂದಿರಬೇಕು.

ಆಯುರ್ವೇದವು ಗಂಗಾನದಿಯ ತಟದಲ್ಲಿ ಹುಟ್ಟಿಕೊಂಡಿತು. ನೀವು ಋಷಿಕೇಶ ಮತ್ತು ಹರಿದ್ವಾರಗಳಿಗೆ ಹೋದರೆ, ನಿಮಗೆ ಅಲ್ಲಿ ಹಲವಾರು ಆಯುರ್ವೇದ ಅಂಗಡಿಗಳು ಕಾಣಸಿಗುತ್ತವೆ. ಅದು ಈಗ ಭಾರತದಾದ್ಯಂತ ಹರಡಿದೆ.

ನಿಮ್ಮ ಆರೋಗ್ಯವನ್ನು ನಿಯಮಿತ ಅಂತರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ.

ನಾವು ತಿನ್ನುತ್ತಾ ಇರುತ್ತೇವೆ ಮತ್ತು ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತೇವೆ. ಹಲವು ಜನರು ವ್ಯಾಯಾಮವನ್ನು ಮಾಡುವುದೂ ಇಲ್ಲ. ಮೊದಲು, ಜನರು ಬಹಳ ಕಷ್ಟಪಟ್ಟು ದುಡಿಯುತ್ತಿದ್ದರು.

ಸುಮಾರು ೬ ಅಂಗುಲಗಳಷ್ಟಿರುವ ಒಂದು ತುಂಡು ಕಬ್ಬನ್ನು ತಿನ್ನಲು ನಾವು ಬಹಳಷ್ಟು ಪ್ರಯತ್ನವನ್ನು ಹಾಕಬೇಕಾಗುತ್ತದೆ ಮತ್ತು ನೀವು ಕಬ್ಬನ್ನು ಬಹಳಷ್ಟು ಪ್ರಯತ್ನದೊಂದಿಗೆ ತಿನ್ನುವಾಗ, ಅದು ಸುಲಭವಾಗಿ ಜೀರ್ಣವಾಗುತ್ತದೆ ಕೂಡಾ. ಈಗ ಸುಮ್ಮನೆ ಊಹಿಸಿ, ಯಾರಾದರೂ ನಿಮ್ಮಲ್ಲಿ ಒಂದು ಹತ್ತು ಅಡಿಗಳಷ್ಟು ಉದ್ದದ ಕಬ್ಬನ್ನು ತಿನ್ನಲು ಹೇಳಿದರೆ, ನೀವು ಎಷ್ಟು ಬಳಲುವಿರಿ ಎಂದರೆ, ಅದರ ನಂತರ ಯಾವುದನ್ನೂ ತಿನ್ನಲು ನಿಮಗೆ ಸಾಧ್ಯವಾಗದು.

ನಿಮಗೆ ಗೊತ್ತೇ, ಒಂದು ಚಮಚ ಸಕ್ಕರೆಯು, ಹತ್ತು ಅಡಿಗಳಷ್ಟು ಉದ್ದದ ಕಬ್ಬಿನ ರಸದಿಂದ ಮಾಡಲಾಗಿರುತ್ತದೆ ಎಂಬುದು?

ಒಂದು ದಿನದಲ್ಲಿ ನಾವು ಹಲವಾರು ಚಮಚಗಳಷ್ಟು ಸಕ್ಕರೆಯನ್ನು ತಿನ್ನುತ್ತೇವೆ. ಈಗ, ಯಾವುದೇ ವ್ಯಾಯಾಮವಿಲ್ಲದೆಯೇ ನಾವು ಅಷ್ಟೊಂದು ಸಕ್ಕರೆಯನ್ನು ತಿಂದರೆ, ಶರೀರಕ್ಕೆ ಅದನ್ನು ತಡೆಯಲು ಹೇಗೆ ಸಾಧ್ಯ? ನಲುವತ್ತು ವರ್ಷದ ಮೇಲಿನ ವಯಸ್ಸಿನ ಜನರು ಆಸ್ಟಿಯೋಪೋರೋಸಿಸ್‌ಗೆ (ಎಲುಬುಗಳು ಟೊಳ್ಳಾಗುವಿಕೆಯ ರೋಗ) ತುತ್ತಾಗುತ್ತಿದ್ದಾರೆ, ಅವರಿಗೆ ಕೀಲುನೋವುಗಳು ಮತ್ತು ಎಲುಬುಗಳಲ್ಲಿ ಕ್ಯಾಲ್ಸಿಯಂನ ನಷ್ಟವಾಗುತ್ತಿವೆ. ಇದೆಲ್ಲವೂ ಬಿಳಿ ಸಕ್ಕರೆಯಿಂದಾಗಿ. ಬ್ರಿಟಿಷರು ಬೆಲ್ಲವನ್ನು ತೆಗೆದುಹಾಕಿ, ನಮಗೆ ಬಿಳಿ ಸಕ್ಕರೆಯನ್ನು ಕೊಟ್ಟರು ಮತ್ತು ಅಂದಿನಿಂದ ನಾವು ಬಿಳಿ ಸಕ್ಕರೆಯನ್ನು ತಿನ್ನುತ್ತಾ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ.

ನೀವು ಸಕ್ಕರೆಯನ್ನು ತಿಂದರೆ, ಅದಕ್ಕನುಸಾರವಾಗಿ ನೀವು ವ್ಯಾಯಾಮ ಮಾಡಬೇಕು. ಸಿಹಿಮೂತ್ರದಂತಹ ರೋಗಗಳು ಬರುವುದು ಯಾಕೆಂದರೆ ನಾವು ಆಹಾರದ ಬಗ್ಗೆ ಗಮನ ನೀಡಿಲ್ಲ. ನೀವು ನಿಮ್ಮ ಆಹಾರದ ಅಭ್ಯಾಸದ ಕಡೆಗೆ ಕಾಳಜಿ ವಹಿಸಬೇಕು. ನೀವಿದನ್ನು ಮಾಡಿದಾಗ, ನಿಮಗೆ ನಿಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯು ಕಾಣಿಸುವುದು.

ಬಿಳಿ ಸಕ್ಕರೆಯನ್ನು ಬಳಸುವುದನ್ನು ನಿಲ್ಲಿಸಿ ಮತ್ತು ಅದಕ್ಕೆ ಬದಲಾಗಿ ಬೆಲ್ಲವನ್ನು ಬಳಸಿ. ಬೆಲ್ಲದಲ್ಲಿ ಸತು, ಮೆಗ್ನೀಷಿಯಂ, ಪೊಟಾಷಿಯಂ ಮತ್ತು ಇತರ ಖನಿಜಗಳಿವೆ. ಅವುಗಳು ಶರೀರವನ್ನು ಬಲಗೊಳಿಸುವುದರಲ್ಲಿ, ರಕ್ತವನ್ನು ಉತ್ಪಾದಿಸುವುದರಲ್ಲಿ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರಲ್ಲಿ ಸಹಾಯ ಮಾಡುತ್ತವೆ. ಬಿಳಿ ಸಕ್ಕರೆಯು ಸಲ್ಫರನ್ನು (ಗಂಧಕ) ಒಳಗೊಂಡಿರುತ್ತದೆ, ಅದು ಶರೀರದಲ್ಲಿನ ಕ್ಯಾಲ್ಸಿಯಂನ್ನು ಬರಿದಾಗಿಸುತ್ತದೆ. ಅದಕ್ಕಾಗಿಯೇ ಜನರು ಆಸ್ಟಿಯೋಪೋರೋಸಿಸ್‌ನಂತಹ ಖಾಯಿಲೆಗಳಿಗೆ ತುತ್ತಾಗುತ್ತಿರುವುದು.

ಆದುದರಿಂದ, ಬಿಳಿ ಸಕ್ಕರೆಯನ್ನು ಒಳಗೊಂಡಿರುವಂತಹ ಸಿಹಿತಿಂಡಿಗಳನ್ನು ತಿನ್ನುವುದನ್ನು ನಿಲ್ಲಿಸಿ ಮತ್ತು ಬೆಲ್ಲದಿಂದ ಮಾಡಿದಂತಹ ಸಿಹಿತಿಂಡಿಗಳನ್ನು ತಿನ್ನಿ. ಆಗ ನಿಮ್ಮ ಆರೋಗ್ಯವು ಉತ್ತಮವಾಗುವುದನ್ನು ನೀವು ನೋಡುವಿರಿ.