ಭಾನುವಾರ, ಜೂನ್ 23, 2013

ದುರಂತ ಸಮಯದಲ್ಲಿ ದೇವರನ್ನು ನಂಬುವುದೆಂತು?

ಬೆಂಗಳೂರು, ಭಾರತ
23ನೇ ಜೂನ್ 2013

ಪ್ರ: ಪ್ರೀತಿಯ ಗುರೂಜೀ, ಇತ್ತೀಚೆಗೆ ಜರ್ಮನಿ ಮತ್ತಿತರ ಯೂರೋಪ್ ದೇಶಗಳಲ್ಲಿ ವಿನಾಶಕಾರಿ ಪ್ರವಾಹವನ್ನೆದುರಿಸಿದೆವು. ಪರಿಸರದ ಬಗ್ಗೆ ನಮ್ಮ ಕರ್ತವ್ಯವೇನು ಮತ್ತು ಇದರಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರವೇನು?

ಶ್ರೀಶ್ರೀರವಿಶಂಕರ್: ಪ್ರಕೃತಿ ವಿಕೋಪಗಳು ನಡೆಯುತ್ತವೆ ಮತ್ತು ಮಾನವನ ದುಷ್ಕೃತ್ಯಗಳು ಅದನ್ನು ಹೆಚ್ಚಿಸುತ್ತದೆ.  ಇಂತಹ ಪ್ರಕೃತಿ ವಿಕೋಪಗಳು ಸಂಭವಿಸುವ ಪ್ರದೇಶಗಳಲ್ಲಿ ನಮ್ಮ ಸಿದ್ಧತೆಯು ಬಹಳ ಕಡಿಮೆ. ಇದು ನನ್ನನ್ನು ಚಿಂತೆಗೊಳಪಡಿಸುತ್ತದೆ.

ಕೇದಾರನಾಥದ ಅತ್ಯಂತ ವಿನಾಶಕಾರಿ ಪ್ರವಾಹದಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಇದಕ್ಕೆ ಕಾರಣ ಭಾಗಶಃ ಪರಿಸರದ ಬಗ್ಗೆ ನಮಗಿರುವ ನಿರ್ಲಕ್ಷ್ಯ. ಪರಿಸರವನ್ನು ನಾವು ಹೇಗೆ ರಕ್ಷಣೆ ಮಾಡಬೇಕೋ ಹಾಗೆ ರಕ್ಷಣೆ ಮಾಡುತ್ತಿಲ್ಲ. ಹಿಮಾಲಯದಲ್ಲಿ ಕಾಡಿನ ನಾಶ ಅತಿ ದೊಡ್ಡ ಸಮಸ್ಯೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುತ್ತಿದ್ದೇವೆ. ಹೆಚ್ಚಿನ ಅಧಿಕಾರವನ್ನು ಪಡೆಯುವುದಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದೇವೆ, ಅವುಗಳನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದಾಗಿತ್ತು.
ಎರಡನೆಯದಾಗಿ ಭಾರತದ ಯಾತ್ರಾರ್ಥಿಗಳನ್ನು ನಿರ್ಲಕ್ಷಿಸಲಾಗಿದೆ. ಪ್ರತಿವರ್ಷ ಸಾವಿರಾರು ಜನರು ತೀರ್ಥಕ್ಷೇತ್ರಗಳಿಗೆ ಹೋಗುತ್ತಾರೆ. ಈ ಸ್ಥಳಗಳಲ್ಲಿ ಉತ್ತಮ ರಸ್ತೆ ಮತ್ತು ಪರ್ಯಾಯ ರಸ್ತೆಗಳನ್ನು ನಿರ್ಮಿಸಬೇಕಾಗಿತ್ತು, ಆಗ ರಸ್ತೆ ಖಾಲಿ ಮಾಡಿಸಲು ಅನುಕೂಲವಾಗುತಿತ್ತು. ಪ್ರವಾಹ ಬರುತ್ತದೆ, ವಿನಾಶವುಂಟಾಗುತ್ತದೆ, ಆದರೆ ಜನರ ಪ್ರಾಣವನ್ನು ರಕ್ಷಿಸಬಹುದು.
ಕ್ಯಾಲ್‍ಗರಿ ಮತ್ತು ಯೂರೋಪಿನಲ್ಲಿ ಜನರ ಪ್ರಾಣಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಸುನಾಮಿಯ ನಂತರ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಪ್ರಾಣಹಾನಿಯಾಗಿರಲಿಲ್ಲ. ಇದು ಹಿಮಾಲಯದ ಸುನಾಮಿ. ಅಲ್ಲಿ ನಮ್ಮ ಆರ್ಟ್ ಆಫ್ ಲಿವಿಂಗ್‍ನ ಸ್ವಯಂಸೇವಕರು ಸಂತ್ರಸ್ತರಿಗೆ ನೆರವಿನ ಸಾಮಗ್ರಿಗಳನ್ನು ಒದಗಿಸುತಿದ್ದಾರೆ. ಜರ್ಮನಿ ಹಾಗೂ ಕ್ಯಾಲ್‍ಗರಿಯಲ್ಲೂ ನಮ್ಮ ಸ್ವಯಂಸೇವಕರು ಕಾರ್ಯನಿರ್ವಹಿಸುತಿದ್ದಾರೆ.

ಅವರಲ್ಲಿಗೆ ಹೋಗಿ ನೆರವಿನ ಕಾರ್ಯದಲ್ಲಿ ತೊಡಗಲು ನಾನು ಹೇಳಿರಲಿಲ್ಲ. ನಮ್ಮ ಚೈತನ್ಯವು ಅರಳಿದಾಗ ಹೀಗೆ ಸ್ವಯಂ ಕಾರ್ಯತತ್ಪರರಾಗುವೆವು. ಮಾನವ ಮೌಲ್ಯಗಳನ್ನು ನಮ್ಮ ಹೃದಯವು ಅನುಭವಿಸುವುದು. ಇಂತಹ ಸಂದರ್ಭಗಳಲ್ಲಿ ಸಹಜವಾಗಿ ಪ್ರತಿಕ್ರಯಿಸುತ್ತದೆ ಮತ್ತು ಜನರು ಯೋಚಿಸದೇ ತಮ್ಮ ಸಹಬಾಂಧವರಿಗೆ ಸಾಧ್ಯವಾದಷ್ಟು ಸಹಾಯ ಮಾಡುವರು.
ಇಂತಹ ಸನ್ನಿವೇಶಗಳೇ ನಮ್ಮ ಮಾನವೀಯತೆಯನ್ನು ಪರೀಕ್ಷಿಸುವುದು; ನೀವು ನಿಜವಾಗಲೂ ಮಾನವರೇ ಅಥವಾ ರೋಬೋಟ್‍ಗಳೇ ಎಂದು. ಆ ದುರ್ದೈವಿಗಳಿಗೆ ನಮ್ಮ ಸಹಾಯ ಹಸ್ತವನ್ನು ಚಾಚಬೇಕು. ಯಾವಾಗಲಾದರೂ, ಎಲ್ಲಿಯಾದರೂ ಪ್ರಕೃತಿ ವಿಕೋಪಗಳುಂಟಾದಾಗ ಜನರು ಅಧಿಕ ಸಂಖ್ಯೆಯಲ್ಲಿ ಮುಂದೆ ಬಂದು ತಮ್ಮ ಯೋಗದಾನವನ್ನು ನೀಡಬೇಕು.

ಸರ್ಕಾರವು ಇತ್ತ ಗಮನ ಹರಿಸಬೇಕು. ಇಂತಹ ವಿಕೋಪಗಳನ್ನು ಮುಂಚಿತವಾಗಿ ಕಂಡುಹಿಡಿಯಲು ಹಾಗೂ ಜನರ ಪ್ರಾಣಗಳನ್ನು ರಕ್ಷಿಸಲು ಮೀಟಿಯರಲಾಜಿಕಲ್ ಇಲಾಖೆ ಇದೆ. ಈ ನಿಟ್ಟಿನಲ್ಲಿ ಹೆಚ್ಚು ಕೆಲಸಗಳನ್ನು ಮಾಡಬಹುದಾಗಿದೆ. ವಿಪತ್ತು ನಿರ್ವಹಣೆ ವಿಜ್ಞಾನವೇ ಆಗಿದೆ. ಸದ್ಭಾವನೆಯುಳ್ಳವರು ಇಂತಹ ಸಂದರ್ಭಗಳಲ್ಲಿ ಎಚ್ಚೆತ್ತು ಯೋಗದಾನ ನೀಡಬೇಕು; ಅವರು ನೀಡುತಿದ್ದಾರೆ ಕೂಡ. ದುರಂತ ಪೀಡಿತರ ಜೀವನವನ್ನು ಉತ್ತಮಗೊಳಿಸಲು ಶ್ರಮಿಸುತ್ತಿರುವರೆಲ್ಲರಿಗೂ ನನ್ನ ಧನ್ಯವಾದಗಳು.
ಇಲ್ಲಿಯೂ ಕೂಡ ತಮ್ಮ ಪ್ರಾಣ ಒತ್ತೆಯಿಟ್ಟು ಜನರನ್ನು ರಕ್ಷಿಸಿದ ಭಾರತದ ಸೇನಾಪಡೆ ಮತ್ತು ಸೈನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಸಮರ್ಪಣೆ ಮತ್ತು ನೆರವು ಅತ್ಯಮೂಲ್ಯ. ಅವರ ಪರಿಶ್ರಮಕ್ಕೆ ನಾವೆಲ್ಲರೂ ಕೃತಜ್ಞತೆಯನ್ನು ಸಲ್ಲಿಸಬೇಕು.

ಪ್ರ: ಹಿಂದೆಂದೂ ಕಂಡಿಲ್ಲದ ದುರಂತ ಕೇದಾರನಾಥದಲ್ಲಿ ಸಂಭವಿಸಿತು. ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡರು ಮತ್ತು ಸ್ಥಳಾಂತರಗೊಂಡಿದ್ದರು. ಪ್ರಾರ್ಥನೆ ಸಲ್ಲಿಸಲೆಂದು ತೀರ್ಥಕ್ಷೇತ್ರಕ್ಕೆ ತೆರಳಿದವರು ದುರಂತವನ್ನೆದುರಿಸಿದರು. ಈ ಹಂತದಲ್ಲಿ ಅನೇಕರ ವಿಶ್ವಾಸ ಅಲುಗಾಡಿರಬಹುದು. ಇದನ್ನು ಹೇಗೆ ನಿಭಾಯಿಸುವುದು?

ಶ್ರೀಶ್ರೀರವಿಶಂಕರ್: ಮೊದಲಿಗೆ, ದೇವರು ನಿಷ್ಪಕ್ಷಪಾತಿಯೆಂದು ತಿಳಿಯೋಣ. ಪ್ರಕೃತಿ ನನ್ನದು ನಿಮ್ಮದೆಂದು ನೋಡುವುದಿಲ್ಲ. ಕೇದಾರನಾಥದಲ್ಲೇ ದೇವರು ನೆಲೆಸಿಲ್ಲ. ಅವನು ಸರ್ವವ್ಯಾಪಿ. ನಿಮ್ಮ ಹೃದಯದಲ್ಲಿ ವಾಸವಾಗಿದ್ದಾನೆ, ಸರ್ವಾಂತರ್ಯಾಮಿ.
ಹೆಚ್ಚಿಗೆ ಭೇಟಿ ನೀಡುವ ತೀರ್ಥಕ್ಷೇತ್ರಗಳಿಗೆ ಅಗತ್ಯವಿರುವ ಸೌಲಭ್ಯವಿಲ್ಲ. ದೇಶದೆಲ್ಲೆಡೆ ತೀರ್ಥಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದಾರೆ. ಅಲ್ಲಿ ಉತ್ತಮ ಸೌಕರ್ಯ, ರಸ್ತೆ, ಸಂಪರ್ಕ ವ್ಯವಸ್ಥೆಯ ಅಗತ್ಯವಿದೆ. ಈ ಬಗ್ಗೆ ಎಷ್ಟರ ಮಟ್ಟಿಗೆ ಕಾರ್ಯತತ್ಪರರಾಗಬೇಕೋ ಅಷ್ಟು ನಿರ್ವಹಿಸುತ್ತಿಲ್ಲ.

ಅನೇಕ ಘಟನೆಗಳು ನಮ್ಮ ವಿಶ್ವಾಸವನ್ನು ಅಲುಗಾಡಿಸಲು ಬರುತ್ತವೆ. ಆದರೆ ಏನೇ ಬರಲಿ ಸತ್ಯಕ್ಕೆ ಜಯ ಮತ್ತು ಒಳ್ಳೆಯದಕ್ಕೆ ಅವಕಾಶವಿದೆಯೆಂಬ ವಿಶ್ವಾಸವಿರಬೇಕು. ಇದು ಪ್ರಾರ್ಥನೆಯ ಸಮಯ. ದುರ್ಘಟನೆಗಳು ಸಂಭವಿಸಿದಾಗ, ಭಯ ನಮ್ಮ ಮನಸ್ಸನ್ನು ಆವರಿಸಿದಾಗ, ಪ್ರಾರ್ಥನೆ ಸಹಾಯಕವಾಗುತ್ತದೆ. ಭರವಸೆಯನ್ನು ಕಳೆದುಕೊಳ್ಳಬೇಡಿ. ಪ್ರತಿಯೊಂದು ಸ್ಥಳವೂ ದೇವರಿಗೆ ಸೇರಿದ್ದು. ವಿಕೋಪಗಳುಂಟಾಗುವುದು. ಇಂತಹ ಸಮಯದಲ್ಲಿ ನಿಮ್ಮ ನಂಬಿಕೆಯು ಪರೀಕ್ಷೆಗೊಳಪಡುವುದು. ನಿಮ್ಮ ನಂಬಿಕೆಯು ಅಚಲವಾಗಿರಲಿ. ನಿಮ್ಮ ಸುತ್ತಮುತ್ತಲಿರುವವರಿಗೆ ನೀವೇನು ಸಹಾಯ ಮಾಡಬಲ್ಲಿರೆಂದು ಯೋಚಿಸಿ.
ಅನೇಕ ಜನರನ್ನು ರಕ್ಷಿಸಲಾಗಿದೆ.ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಹಾಗೂ ಅವರ ಕುಟುಂಬದವರಿಗೆ ಶಾಂತಿ ಸಿಗಲೆಂದು ಪ್ರಾರ್ಥಿಸಿ. ಈ ದುರಂತದಿಂದ ದುಃಖತಪ್ತರಾದ ಅವರ ಕುಟುಂಬವರ್ಗದವರು ಹೊರಬರಲಿ. ಇದನ್ನು ನಿಭಾಯಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಹೀಗೆ ಪ್ರಾರ್ಥಿಸಿ. ಬದುಕುಳಿದವರ ಕುರಿತು ಪ್ರಾರ್ಥಿಸಿ ಮತ್ತು ಈ ದುರ್ಘಟನೆಯನ್ನು ಅನುಭವಿಸಿದ ಜನರನ್ನು ರಕ್ಷಿಸಿದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ.

ಮಾನವ ದುರಂತವನ್ನು ವರ್ಣಿಸಲು ಪದಗಳೇ ಇಲ್ಲ. ಈ ಪ್ರದೇಶ ದುರ್ಗಮ ಹಾಗೂ ಕಷ್ಟಕರವೆಂದು ತಿಳಿದು ಈಗಲಾದರೂ ನಾವು ಎಚ್ಚೆತ್ತು ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕು. ಸರಿಯಾದ ರಸ್ತೆ, ಸಾರಿಗೆ ಹಾಗೂ ಸಂಪರ್ಕ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಇದು ತುರ್ತಾಗಿ ಆಗಬೇಕಾಗಿದೆ. ಬಹಳ ಕಾಲದಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಈ ದುರಂತದಿಂದ ಅಲ್ಲಿಗೆ ಭೇಟಿ ನೀಡುವುದನ್ನು ನಿಲ್ಲಿಸಲಾಗದು.

ಈ ದುರ್ಘಟನೆಯಿಂದ ಪಾಠ ಕಲಿಯೋಣ. ಮಾನವ ನಿರ್ಲಕ್ಷ್ಯದಿಂದ ಸಂಭವಿಸಿದ ಈ ದುರಂತ ಭೂಮಿಯ ಇನ್ಯಾವುದೇ ಸ್ಥಳದಲ್ಲಿ ಸಂಭವಿಸುವುದು ಬೇಡ. ಇದಕ್ಕಿಂತ ಮೀರಿ ಯಾವ ಮುನ್ಸೂಚನೆಯನ್ನು ನೀಡಲಾಗುವುದಿಲ್ಲ ಅಥವಾ ಹೇಳಲಾಗುವುದಿಲ್ಲ. ಆದ್ದರಿಂದ ನಮ್ಮ ನಿರ್ಲಕ್ಷ್ಯವನ್ನು ಆದಷ್ಟು ಕಡಿಮೆ ಮಾಡಿಕೊಳ್ಳೋಣ.

ಪ್ರ: ಬ್ರೆಜಿಲ್‍ನಲ್ಲಿ ಇತ್ತೀಚಿನ ಪ್ರತಿಭಾಟನಾ ಮೆರವಣಿಗೆಗಳಿಂದ ಜೀವನದ ಎಲ್ಲಾ ವಿಷಯಾಂಶಗಳ ಮೇಲೆ ಪರಿಣಾಮ ಬೀರಿದೆ. ಇದನ್ನು ಹೇಗೆ ನಿಭಾಯಿಸುವುದು?

ಶ್ರೀಶ್ರೀರವಿಶಂಕರ್: ಜನರಿಗೆ ನ್ಯಾಯ ಸಿಗದಿದ್ದಾಗ ಅಥವಾ ಸಮಾಜದಲ್ಲಿ ಭ್ರಷ್ಟಾಚಾರದಿಂದ ಬೇಸೆತ್ತಾಗ ಸಹಜವಾಗಿ ಉದ್ವಿಗ್ನರಾಗುತ್ತಾರೆ. ಜನರು ಪ್ರತಿಭಟಿಸಲು, ಚಳುವಳಿ ಹೂಡಲು ಒಟ್ಟಾಗುತ್ತಾರೆ. ಅವರು ಎಚ್ಚೆತ್ತುಕೊಳ್ಳುತ್ತಿರುವುದು ಶುಭ ಸಂಕೇತ.

ಒಂದು ಉಪಾಯವೆಂದರೆ ಎಲ್ಲವನ್ನೂ ಹೇಗಿದೆಯೋ ಹಾಗೆಯೇ ಸ್ವೀಕರಿಸಿ, ತಲೆಕೆಡಿಸಿಕೊಳ್ಳದೇ, ಲಂಚಕೋರತನದ ಒಂದು ಭಾಗವಾಗಿರುವುದು. ಇನ್ನೊಂದು ಮಾರ್ಗವೆಂದರೆ ಲಂಚಕೋರತನದ ವಿರುದ್ಧ ಮತ್ತು ಅನ್ಯಾಯದ ವಿರುದ್ಧ ಎದ್ದು ನಿಲ್ಲುವುದು. ಇದು ಸ್ವಾಗತಾರ್ಹ ಮನೋಭಾವ. ಇದನ್ನು ಖಂಡಿತವಾಗಿ ಶ್ಲಾಘಿಸಬೇಕು.

ಒಂದು ವಿಷಯವೇನೆಂದರೆ ಜನಸ್ತೋಮವು ಸಮಾಜದ ವಿರೋಧಿಯಾಗದಂತೆ ಮತ್ತು ಹಿಂಸಾಚರಣೆಗೆ ತಿರುಗದಂತೆ ಕಾರ್ಯನಿರ್ವಹಿಸಬೇಕು. ಪ್ರತಿಭಟನೆಗಳು ಶಾಂತಿಯುತವಾಗಿ ನಡೆಯುವಂತೆ ಜಾಗ್ರತೆವಹಿಸಬೇಕು. ಪ್ರತಿಭಟನೆಗಳನ್ನು ಹೂಡುವುದು ಯಾವುದೋ ಒಂದು ಕಾರಣಕ್ಕಾಗಿ ಹೊರತು ವ್ಯಕ್ತಿಗತವಲ್ಲ ಎಂಬುದನ್ನು ಗಮನಿಸಬೇಕು, ಏಕೆಂದರೆ ಜನರು ಬದಲಾಗುತ್ತಾರೆ ಮತ್ತು ಎಲ್ಲರಲ್ಲೂ ಪರಿವರ್ತನೆಗೊಳ್ಳುವಂತಹ ಸಾಮರ್ಥ್ಯವಿದೆ. ಇದನ್ನು ನಾವು ಗುರುತಿಸಬೇಕು. ಪ್ರತಿಭಟನೆ ಹಾಗೂ ಚಳುವಳಿಗಳ ಔಚಿತ್ಯವನ್ನು ಶಾಂತಿ ಹಾಗೂ ಉದ್ದೇಶಗಳೊಂದಿಗೆ ಕಾಪಾಡಬೇಕು.

ಶಾಂತಿಯಿಂದ ಇಲ್ಲದಿದ್ದಾಗ ಉದ್ದೇಶ ಮತ್ತು ಗುರಿಯನ್ನು ಕಳೆದುಕೊಳ್ಳುತ್ತೇವೆ. ಯಾವುದೇ ಪ್ರತಿಭಟನೆಯಲ್ಲಿ ಅಹಿಂಸೆ ಮಾರ್ಗದರ್ಶಕ ಶಕ್ತಿಯಾಗಬೇಕು. ವ್ಯಕ್ತಿಗತವಾಗಿಲ್ಲದೇ ಒಂದು ಸಮುಚಿತ ಕಾರಣಕ್ಕೆ ನಿರ್ದೇಶಿತವಾಗಿರಬೇಕು. ಪ್ರಾಣ ಅಥವಾ ಆಸ್ತಿಗಳಿಗೆ ಹಾನಿಯುಂಟು ಮಾಡಬಾರದು. ಇಂತಹ ಮಾರ್ಗಸೂಚಿ ಇರಬೇಕು.

ಸದುದ್ದೇಶವುಳ್ಳವರು ಪ್ರತಿಭಟನೆಯನ್ನು ಪ್ರಾರಂಭಿಸುವರು. ನಂತರ ಲಕ್ಷ್ಯದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುವುದು ಕಾರಣ ಸಮಾಜ ವಿರೋಧಿಗಳು ಪ್ರವೇಶಿಸಿ ಹಿಂಸಾಚಾರಗಳನ್ನು ನಡೆಸುವರು. ಇಲ್ಲಿ ಜನರು ಹಿಂಸೆ ಮತ್ತು ವಿನಾಶಕಾರಿ ಪರಿಣಾಮಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಅಹಿಂಸೆಯನ್ನು ಮುಂಚೂಣಿಯಲ್ಲಿಟ್ಟುಕೊಂಡು ಪ್ರತಿಭಟನೆ ಹಾಗೂ ಪ್ರದರ್ಶನಗಳನ್ನು ನಡೆಸಿದಾಗ ಅದನ್ನು ಸ್ವಾಗತಿಸಬೇಕು. ಹಿಂಸೆಯ ಕೃತ್ಯಗಳು ನಡೆದಾಗ ಬಲ ಪ್ರಯೋಗಿಸದೇ ಅದನ್ನು ಅಡಗಿಸಲು ಅನ್ಯ ಮಾರ್ಗವಿರುವುದಿಲ್ಲ. ಬಹಳ ಕಷ್ಟವಾಗುವುದು. ಶಾಂತಿಯುತವಾದ, ಅಹಿಂಸಾಯುತ ಆಂದೋಲನಗಳು ನಡೆಯಲಿ ಎಂದು ಮತ್ತೆ ಒತ್ತಿ ಹೇಳುತ್ತೇನೆ. ಇಂದಿನ ಸಂದರ್ಭದಲ್ಲಿದು ಅತ್ಯವಶ್ಯಕ.

ಪ್ರ: ಪ್ರೀತಿಯ ಗುರೂಜೀ, ನಮ್ಮ ಪೌರ ಹಾಗೂ ಪ್ರಜಾಪ್ರಭುತ್ವದ ಹಕ್ಕುಗಳನ್ನು ಹಿಂಸಾಚಾರವಿಲ್ಲದೇ ಹೇಗೆ ಕಾಪಾಡುವುದು? ಸರ್ಕಾರವು ಭಿನ್ನತೆಯನ್ನು ಸೃಷ್ಟಿಸಿ ಒಡೆದು ಆಳುವ ನೀತಿಯನ್ನು ಬಳಸುತ್ತಿರಬೇಕಾದರೆ ಸಮಾಜದಲ್ಲಿ ಆತ್ಮೀಯತೆಯನ್ನು ಹೇಗೆ ಬೆಳೆಸುವುದು?

ಶ್ರೀಶ್ರೀರವಿಶಂಕರ್:  ಒಂದು ಮಹತ್ ಕಾರ್ಯಕ್ಕೆ ಅನೇಕ ಅಡಚಣೆಗಳು ಹಾಗೂ ಸವಾಲುಗಳು ಬರುತ್ತವೆ. ಸವಾಲುಗಳು ದೊಡ್ಡದಾಗಿದ್ದರೆ ನಮ್ಮ ಮೌಲ್ಯಗಳಿಗೆ ಅಂಟಿಕೊಳ್ಳಬೇಕು. ಅನ್ಯಾಯವಿದ್ದಾಗ, ಮುಖ್ಯವಾಗಿ ಹಿಂಸಾಚರಣೆಯಿದ್ದಾಗ, ಶಾಂತಿಯಿಂದಿರಲು ಅಸಾಧ್ಯವೆಂದು ಬಲ್ಲೆ. ಅತೀ ಜಾಗರೂಕತೆಯಿಂದ ಹಾಗೂ ಉತ್ಸಾಹದಿಂದ ಇದನ್ನು ನಿಭಾಯಿಸಬಹುದು. ಏನೇ ಬರಲಿ ನಮ್ಮ ಗುರಿ ಪ್ರಜಾಪ್ರಭುತ್ವದ ಹಕ್ಕುಗಳ ಮೇಲಿರಲಿ.

ನಿಮ್ಮ ನಿರ್ಧಾರದಲ್ಲಿ ಬಲಶಾಲಿಯಾಗಿದ್ದಾಗ, ನೀವು ಎದುರಿಸುವ ಸಣ್ಣ ಪುಟ್ಟ ತೊಂದರೆಗಳು ಏನೂ ಅಲ್ಲ. ನೀವು ಆಗಲೂ ಮುನ್ನಡೆಯುವಿರಿ.

ನ್ಯಾಯ ಬಯಸುವುದು, ಮಾನವ ಹಕ್ಕುಗಳು ಮತ್ತು ಮೌಲ್ಯಗಳನ್ನು ಪಡೆಯಲಿಚ್ಛಿಸುವುದು ಸುಲಭವಲ್ಲ. ಅದು ಸುದೀರ್ಘ ಮಾರ್ಗ. ಸಮಾಜದಲ್ಲಿ ಕೆಲವು ಪಟ್ಟಭದ್ರಹಿತಾಸಕ್ತಿಗಳುಂಟು ಮತ್ತು ಕೆಲವರು ಅಧಿಕಾರವನ್ನು ಹಿಡಿದುಕೊಂಡಿರಲು ಬಯಸುತ್ತಾರೆ. ಕೆಲವರು ಯೋಚಿಸದೇ ಕೃತ್ಯಗಳನ್ನು ಮಾಡುವರು, ಅವರಿಗೆ ಒಂದೇ ಭಾಷೆ ತಿಳಿದಿರುವುದು, ಅದು ಹಿಂಸೆಯ ಭಾಷೆ. ಇಂತಹ ಸಂದರ್ಭದಲ್ಲಿ ಅತಿ ಜಾಗರೂಕರಾಗಿದ್ದು, ನಮ್ಮ ಗುರಿಯನ್ನು ತಲುಪಲು ಶಾಂತಿ ಮತ್ತು ಅಹಿಂಸಾ ಮಾರ್ಗದಲ್ಲಿ ಮುನ್ನಡೆಯಬೇಕು.

ಸತ್ಯಕ್ಕೆ ಸದಾ ಜಯವೆಂದು ನಮ್ಮ ಜನರಿಗೆ ನೈತಿಕ ಬಲ ನೀಡಬೇಕು. ಈ ನಂಬಿಕೆ ನಿಮ್ಮಲ್ಲಿದ್ದಾಗ ಧೈರ್ಯದಿಂದ ಮತ್ತು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ, ಮುಂದೆ ಸಾಗುವಿರಿ.

ನಾವು ಗೊಂದಲದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ಮತ್ತು ಕೋಪದಲ್ಲಿದ್ದಾಗ, ನಮ್ಮೊಳಗೆಲ್ಲೋ ಒಂದು ಕಡೆ ಅಲುಗಾಡಿಸಿದಂತಾಗಿ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಯಾವುದೇ ಬೃಹತ್ ಕೆಲಸವನ್ನೆತ್ತಿಕೊಳ್ಳಲು ಅಗಾಧ ಶಕ್ತಿಯ ಅಗತ್ಯವಿರುತ್ತದೆ. ಈ ಅಗಾಧ ಶಕ್ತಿಯು ನಮ್ಮೊಳಗಿನ ಶಾಂತತೆಯಿಂದ ಬರುತ್ತದೆ.

ಎರಡನೆಯದಾಗಿ, ಮಾತುಕತೆಗೆ ಸದಾ ಸಿದ್ಧವಾಗಿರಿ.

ಮೂರನೆಯದಾಗಿ, ಯಾವುದೇ ವ್ಯಕ್ತಿ ಅಥವಾ ವ್ಯವಸ್ಥೆಯನ್ನು ಕೆಟ್ಟದ್ದೆಂದು ಪಟ್ಟಿ ಹಚ್ಚುವುದು ಬೇಡ. ಹಾಗೆ ಹಣೆಪಟ್ಟಿ ಹಚ್ಚಿದರೆ, ಸಂಪರ್ಕಕ್ಕೆ ಬಾಗಿಲು ಮುಚ್ಚಿದಂತಾಗುತ್ತದೆ. ಮಹಾತ್ಮಾ ಗಾಂಧೀಜೀಯವರು ಎಂದೂ ಬ್ರಿಟಿಷರನ್ನು ಕೆಟ್ಟವರೆಂದು ಪಟ್ಟಿ ಹಚ್ಚಲಿಲ್ಲ. ಅವರೊಂದಿಗೆ ಸದಾ ಸಂಪರ್ಕದ ಕೊಂಡಿಯನ್ನು ಮುಕ್ತವಾಗಿಟ್ಟಿಟ್ಟುಕೊಂಡಿದ್ದರು. ಅನೇಕ ದುಷ್ಕೃತ್ಯಗಳು ನಡೆದ ಮೇಲೂ ಸಹ ಅವರೊಡನೆ ಸಂವಾದಿಸಲು ಮತ್ತೆ ಮತ್ತೆ ಭೇಟಿ ನೀಡಿದರು. ಬೇರೆಯವರು ಅಥವಾ ಸರ್ಕಾರ ಜನಪರವಾಗಿಲ್ಲವೆಂದು ಯೋಚಿಸಬಾರದು. ಆಗ ಇನ್ನಷ್ಟು ಸಿಟ್ಟಾಗಿ, ಆ ಸಿಟ್ಟಿನಲ್ಲಿ ನಮ್ಮ ಶಕ್ತಿಯನ್ನು ಮತ್ತಷ್ಟು ಕಳೆದುಕೊಳ್ಳುತ್ತೇವೆ.

ಸಂಪರ್ಕದ ಕೊಂಡಿಯನ್ನು ಸದಾ ಮುಕ್ತವಾಗಿಟ್ಟುಕೊಂಡಿರುವುದು ಉತ್ತಮ. ನ್ಯಾಯ, ಪ್ರಜಾಪ್ರಭುತ್ವದ ಹಕ್ಕುಗಳು, ಶಾಂತಿ, ಸಮೃದ್ಧಿ ಹಾಗೂ ಪ್ರಗತಿಯ ಕುರಿತು ಸ್ಥಿರವಾದ ಮಾರ್ಗವನ್ನು ಅನುಸರಿಸಿ. ದೃಢನಿಶ್ಚಯವನ್ನು ಹೊಂದಿರಿ ಮತ್ತು ಜನರನ್ನು ದೃಢತೆ ಹಾಗೂ ಶಾಂತಿಯಿಂದ ಪ್ರತಿಭಟಿಸಲು ಪೆÇ್ರೀತ್ಸಾಹಿಸಿ. ಇದು ಹೇಳಲು ಸುಲಭವೆಂದು ನನಗೆ ಗೊತ್ತು, ಆದರೂ ಸಹ ಇದೇ ನಿಟ್ಟಿನಲ್ಲಿ ನಾವು ಮುಂದುವರೆದರೆ ಜಯ ನಮ್ಮದಾಗುವುದು.

ಪ್ರ: ಪ್ರೀತಿಯ ಗುರೂಜೀ, ಪಾಕಿಸ್ತಾನದ ಮುಸ್ಲಿಮರು ಶಾಂತಿ ಬಯಸುವವರು. ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಹೇಗೆ ತೊಲಗಿಸುವುದು?

ಶ್ರೀಶ್ರೀರವಿಶಂಕರ್: ಭಯೋತ್ಪಾದನೆಯನ್ನು ತಡೆಗಟ್ಟಲು, ಭಯೋತ್ಪಾದಕರೊಡನೆ ಸಂಪರ್ಕವನ್ನು ಹೇಗೆ ಸ್ಥಾಪಿಸುವುದು ಮತ್ತು ಅವರ ಮನಸ್ಸಿನಲ್ಲಿ ಹೇಗೆ ವಿವೇಚನೆಯನ್ನು ತರುವುದೆಂದು ಆಲೋಚಿಸುವುದು ಆವಶ್ಯಕ.

ಎರಡನೆಯದಾಗಿ, ವೈವಿಧ್ಯತೆಯನ್ನು ಅಂಗೀಕರಿಸಿ, ಆನಂದಿಸುವುದು. ವೈವಿಧ್ಯತೆಯು ಸಂಘರ್ಷ ಅಥವಾ ವಿವಾದಾಸ್ಪದ ವಿಷಯವಲ್ಲ. ಅದು ಉತ್ಸವಾಚರಣೆಯ ವಿಷಯ.

ಎಲ್ಲರೂ ಭಿನ್ನವಾಗಿದ್ದೇವೆ. ಪ್ರತಿಯೊಬ್ಬರೂ ಬೇರೆ ಬೇರೆ ಉಡುಪುಗಳನ್ನು ಧರಿಸಿದ್ದೀರ, ಪ್ರತಿಯೊಬ್ಬರ ಜೀವನಶೈಲಿಯೂ ಭಿನ್ನವಾಗಿದೆ. ಈ ವಿಭಿನ್ನತೆಯನ್ನು ಒಪ್ಪಿಕೊಂಡು ಜಾಗತಿಕ ಪರಿವಾರದ ದೃಷ್ಟಿಕೋನವನ್ನು ಹೊಂದಿರಬೇಕು. ನಾವೆಲ್ಲರೂ ವಿವಿಧ ಭಾಷೆ, ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರಗಳನ್ನೊಳಗೊಂಡಿರುವ ಒಂದು ವಿಶ್ವ ಪರಿವಾರದವರು. ಈ ವೈವಿಧ್ಯತೆ ಕುರಿತ ಹೆಮ್ಮೆಯನ್ನು ಯುವಜನಾಂಗದ ಮನಸ್ಸಿನಲ್ಲಿ ಮೂಡಿಸಬೇಕು. ಒಮ್ಮೆ ಇದನ್ನು ತಿಳಿದರೆ, ಅವರೆಂದಿಗೂ ತೀವ್ರವಾದಿ ಅಥವಾ ಭಯೋತ್ಪಾದಕರಾಗುವುದಿಲ್ಲ.

ಭಯೋತ್ಪಾದಕ ಹಾಗೂ ತೀವ್ರವಾದಿಗಳ ಮನಸ್ಥಿತಿ ಇರುವವರೊಂದಿಗೆ ನಾನು ವ್ಯವಹರಿಸಿದ್ದೇನೆ. ಎರಡು ಬಗೆಯ ತೀವ್ರವಾದಿಗಳಿದ್ದಾರೆ, ಒಂದು ಧಾರ್ಮಿಕ ಹಾಗೂ ಇನ್ನೊಂದು ಸೈದ್ಧಾಂತಿಕ ತೀವ್ರವಾದಿಗಳು. ಭಾರತದಲ್ಲಿನ ಮಾವೋಗಳು ಒಂದು ಗುರಿಯನ್ನು ಹೊಂದಿದ್ದಾರೆ ಮತ್ತು ಅದಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಡಲು ಸಿದ್ಧವಾಗಿರುತ್ತಾರೆ. ಅವರು ಅರಿಯದ ಒಂದೇ ಒಂದು ವಿಷಯವೆಂದರೆ ಇನ್ನೊಬ್ಬರಿಗೆ ನೋವು ಮತ್ತು ಕಷ್ಟಗಳನ್ನು ನೀಡಿ ತಮ್ಮ ಗುರಿಯನ್ನು ತಲುಪಲಾಗದು ಅಥವಾ ಆದು ಸಂತೋಷ ಕೊಡುವುದಿಲ್ಲವೆಂದು ತಿಳಿದಿಲ್ಲ. ನಾವು ಜನರಿಗೆ ಈ ವೈವಿಧ್ಯತೆಯ ಶಿಕ್ಷಣವನ್ನು ನೀಡಬೇಕು, ಅವರೊಂದಿಗೆ ಮುಕ್ತ ಸಂಪರ್ಕವನ್ನು ಹೊಂದಿರಬೇಕು ಮತ್ತು ‘ನಾನೇ ಸರಿ ಮತ್ತಿನ್ನೆಲ್ಲರೂ ತಪ್ಪು' ಎನ್ನುವ ಧೋರಣೆಗೆ ಬೀಳದಂತೆ ನಿಗಾ ವಹಿಸಬೇಕು.

ಇವರೆಲ್ಲರೂ ಸ್ವಲ್ಪ ಉಸಿರಾಟ ಪ್ರಕ್ರಿಯೆ ಮತ್ತು ವಿಶ್ರಾಮ ಮಾಡಿದರೆ, ಸೃಷ್ಟಿಯ ರಮ್ಯತೆಯನ್ನು ನೋಡಿದರೆ, ವೈವಿಧ್ಯತೆಯಲ್ಲಿರುವ ಸೌಂದರ್ಯವನ್ನು ಗುರುತಿಸಿದರೆ, ಖಂಡಿತವಾಗಿಯೂ ಬದಲಾಗುವರು. ನಾನು ನೋಡಿದ್ದೇನೆ ಅನೇಕ ಜನರು ತಮ್ಮ ಯೋಚನಾಲಹರಿಯನ್ನು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ತಪ್ಪು ಕಲ್ಪನೆಗಳಿರುತ್ತವೆ, ಯಾವುದೋ ಅವ್ಯಕ್ತ ಭಯವಿರುತ್ತದೆ, ಅಥವಾ ಯಾವುದೋ ಬಗೆಯ ಹಿಂಸೆಗೆ ಗುರಿಯಾಗಿರುತ್ತಾರೆ. ಅವರು ತಮ್ಮನ್ನು ತಾವೇ ನಾಶಮಾಡಿಕೊಳ್ಳುವಂತಹ ತೀವ್ರ ತೆರನಾದ ಸಿದ್ಧಾಂತವನ್ನು ಸ್ವೀಕರಿಸಲು ಇದೇ ಕಾರಣವಿರಬಹುದು.

ಪ್ರ: ಅರ್ಜೆಂಟೀನಾ ದೇಶದ ರಾಜಕೀಯ ವರ್ಗದವರಿಗೆ ಸಮಾಜವನ್ನು ಬೆಳೆಸಲು ಶಾಂತಿಯೇ ಉತ್ತಮ ಮಾರ್ಗವೆಂದು ಹೇಗೆ ಅರಿವು ಮೂಡಿಸುವುದು?

ಶ್ರೀಶ್ರೀರವಿಶಂಕರ್: ರಾಜಕೀಯವನ್ನು ಆಧ್ಯಾತ್ಮಿಕತೆಯನ್ನಾಗಿ, ವ್ಯಾಪಾರವನ್ನು ಸಾಮಾಜಿಕತೆಗೂ ಹಾಗೂ ಧರ್ಮವನ್ನು ಜಾತ್ಯಾತೀತತೆಗೆ ಪರಿವರ್ತಿಸಬೇಕು. ಇದೇ ಉಪಾಯ. ಜಾತ್ಯಾತೀತತೆ ಎಂದರೆ ಧಾರ್ಮಿಕರು ಇಡೀ ವಿಶ್ವದ ಕುರಿತು ಆಲೋಚಿಸಬೇಕು, ಕೇವಲ ತಮ್ಮ ಧರ್ಮ ಅಥವಾ ತಮ್ಮ ಸಮುದಾಯವನ್ನಷ್ಟೇ ಅಲ್ಲ. ಸಾಮಾನ್ಯವಾಗಿ ಒಬ್ಬ ಧಾರ್ಮಿಕ ಮುಖಂಡನು ತನ್ನ ಧರ್ಮವನ್ನು ಅನುಸರಿಸುವವರೊಂದಿಗೆ ಮಾತ್ರ ಆತ್ಮೀಯತೆಯನ್ನು ಹೊಂದಿರುತ್ತಾನೆ. ಅಂತಹ ಪ್ರತಿಬಂಧದಿಂದ ಹೊರಬಂದು, ಇಡೀ ವಿಶ್ವವನ್ನು ಕುರಿತು ಪ್ರಾರ್ಥಿಸಬೇಕು.

ಹಾಗೆಯೇ, ಪ್ರತಿಯೊಬ್ಬ ವ್ಯಾಪಾರಿಯು ಸ್ವಲ್ಪ ಮಟ್ಟಿಗೆ ಸಾಮಾಜಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಸಮಾಜದ ಒಂದು ಭಾಗವಾಗಿರಬೇಕು.

ರಾಜಕಾರಣಿಗಳು ದೇಶದ ಬಗ್ಗೆ ಮೊದಲು ಆಲೋಚಿಸಿ, ನಂತರ ತಮ್ಮ ಪಕ್ಷ, ತದನಂತರ ತಮ್ಮ ಬಗ್ಗೆ ಆಲೋಚಿಸಬೇಕು. ಇವತ್ತು ಏನಾಗುತ್ತಿದೆಯೆಂದರೆ ಮೊದಲು ತಮ್ಮ ಬಗ್ಗೆ ಆಲೋಚಿಸುವರು, ನಂತರ ಪಕ್ಷ ಮತ್ತು ಇನ್ನೇನ್ನಾದರೂ ಉಳಿದಿದ್ದರೆ ಆಗ ರಾಷ್ಟ್ರ. ಈ ಪ್ರವೃತ್ತಿಯನ್ನು ಹಿಂದುಮುಂದಾಗಿಸಬೇಕು.

ಸಮಾಜದಲ್ಲಿ ಹೆಚ್ಚಿನ ಜನರ ಒಳಿತಿಗಾಗಿ ಕಾಳಜಿವಹಿಸಿದಾಗ ತಾನೆ ತಾನಾಗಿ ಆಧ್ಯಾತ್ಮಿಕರಾಗುತ್ತಾರೆ, ಸಹಜವಾಗಿ ಶಾಂತಿಯನ್ನು ಬಯಸುತ್ತಾರೆ ಮತ್ತು ದೂರದೃಷ್ಟಿಯಿಲ್ಲದೇ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಮಾಯವಾಗುವುದು.

ಅಧಿಕಾರ ಮತ್ತು ಹಣ ಬರುತ್ತದೆ, ಹೋಗುತ್ತದೆ. ಆದರೆ ನಮ್ಮ ಧೋರಣೆಯಿಂದ ಹಾಗೂ ಕೆಲಸಗಳಿಂದ ಒಳ್ಳೆಯತನವು ಚಿರಸ್ಥಾಯಿಯಾಗಿರುತ್ತದೆ. ಇದನ್ನು ರಾಜಕಾರಣಿಯು ತಿಳಿಯಬೇಕು. ಅವರು ಸಂಕುಚಿತ ಮನೋಭಾವವಿಟ್ಟುಕೊಳ್ಳದೇ ದೀರ್ಘಾವಧಿಯಲ್ಲಿ ಹೆಚ್ಚಿನ ಜನರಿಗೆ ಲಾಭವಾಗುವುದರ ಬಗ್ಗೆ ಆಲೋಚಿಸಬೇಕು. ಇದನ್ನೇ ತಮ್ಮ ಕಾರ್ಯಸೂಚಿಯನ್ನಾಗಿಸಿಕೊಳ್ಳಬೇಕು. ಇದೇ ಉತ್ಕೃಷ್ಟವಾಗಿರುವಂತಹದು.

ಶಾಂತಿಯು ಅತ್ಯಗತ್ಯ. ನಾವು ಶಾಂತಿಯಿಂದ ಇದ್ದಾಗ, ವಿಚಾರಗಳು ಮೂಡುತ್ತವೆ. ಅಶಾಂತಿ ನೆಲೆಸಿದಾಗ, ಅಸಮಾಧಾನಗೊಂಡು, ಆಲೋಚನೆ ಹಗೂ ಕಾರ್ಯಗಳಲ್ಲಿ ಇನ್ನಷ್ಟು ಗೊಂದಲವನ್ನು ತರುತ್ತೇವೆ ಹೊರತು ಶಾಂತಿಯನ್ನಲ್ಲ. ಆದ್ದರಿಂದ ಎಲ್ಲರೂ ಧ್ಯಾನ ಮಾಡಬೇಕು!

ಪ್ರ: ಶಾಂತಿಯೆಂದರೇನು ಮತ್ತು ಅದರ ತತ್ವಗಳನ್ನು ನಮ್ಮ ಜೀವನದಲ್ಲಿ, ಧರ್ಮ, ಸಂಸ್ಕೃತಿ ಮತ್ತು ಪರಿವಾರದಲ್ಲಿ, ಮತ್ತು ಶಿಶುವಿಹಾರದಾರಭ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಹೇಗೆ ಅಳವಡಿಸಿಕೊಳ್ಳುವುದು?

ಶ್ರೀಶ್ರೀರವಿಶಂಕರ್: ಮಕ್ಕಳಿಂದ ನಾವು ಬಹಳ ಕಲಿಯಬೇಕಾಗಿದೆ. ಪ್ರತಿದಿನ ಒಬ್ಬ ಹೊಸ ಸ್ನೇಹಿತನನ್ನು ಮಾಡಿಕೊಳ್ಳಬೇಕೆಂದು ತಿಳಿಸಬೇಕು.

ಒಂದು ತರಗತಿಯಲ್ಲಿ ನಲವತ್ತರಿಂದ ಐವತ್ತು ಮಕ್ಕಳಿದ್ದರೆ, ಅವರಲ್ಲಿ ನಿಮಗೆಷ್ಟು ಜನ ಸ್ನೇಹಿತರೆಂದು ಕೇಳಿದರೆ, ಸಾಮಾನ್ಯವಾಗಿ ಬೆರಳೆಣಿಸುವಷ್ಟಿರುತ್ತಾರೆ, ಮತ್ತು ಆ ಸ್ನೇಹಿತರೊಂದಿಗೆ ಮಾತ್ರ ವರ್ಷವಿಡೀ ಕಳೆಯುತ್ತಾರೆ. ಅವರ ಸ್ನೇಹಪರತೆಯನ್ನು ಹೊರತರಬೇಕು. ಇದಕ್ಕಾಗಿ ಪ್ರತಿದಿನ ಒಬ್ಬನನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕೆಂದು ಹೇಳಬೇಕು. ನಿಮ್ಮನ್ನು ಅವಹೇಳನ ಮಾಡಿದರೂ ಪರವಾಗಿಲ್ಲ. ನಕ್ಕುಬಿಡಿ. ಹಾಸ್ಯ ಹಾಗೂ ವಿನೋದ ಭಾವವಿರಲಿ. ವೈವಿಧ್ಯತೆಯನ್ನು ಆರಾಧಿಸಿ.

ಯಾರಾದರೂ ವಿಭಿನ್ನ ರೀತಿಯಲ್ಲಿ ಉಡುಪು ಧರಿಸಿದ್ದರೆ ಅಥವಾ ಭಿನ್ನವಾಗಿ ಕಾಣುತ್ತಿದ್ದರೆ ಅಥವಾ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರನ್ನು ಅಪರಿಚಿತರಂತೆ ಕಾಣದೇ ನಿಮ್ಮದೇ ಒಂದು ಭಾಗವೆಂದು ಮನವರಿಕೆ ಮಾಡಿಸಿ. ಈ ಕೆಲವು ಮೌಲ್ಯಗಳನ್ನು ಮಕ್ಕಳಲ್ಲಿ ಪ್ರೇರೇಪಿಸಬಹುದು.

ಜೀವನದಲ್ಲಿ ಪ್ರೀತಿ ಮತ್ತು ಶಾಂತಿಯನ್ನು ತರುವುದೇ ಧರ್ಮದ ಗುರಿ. ಆ ವಿಶ್ವ ಸತ್ಯಕ್ಕೆ, ವಿಶ್ವ ಚೈತನ್ಯಕ್ಕೆ ಮತ್ತು ವಿಶ್ವ ಪ್ರೀತಿಗೆ ಸಂಪರ್ಕ ಹೊಂದಿರುವುದು ಮತ್ತು ಸಹಬಾಂಧವರಿಗೆ ಸಹಾಯ ಮಾಡುವುದೇ ಧರ್ಮದ ಗುರಿ. ದಿವ್ಯತೆ, ಜ್ಯೋತಿ ಮತ್ತು ಪ್ರೀತಿಯ ಆಂತರಿಕ ಅನುಭವವೇ ಧರ್ಮದ ತಿರುಳು. ಇದನ್ನೇ ನಮ್ಮ ಗುರಿಯನ್ನಾಗಿರಿಸಿಕೊಳ್ಳಬೇಕು, ಇದರ ಮೇಲೇ ಕೇಂದ್ರೀಕರಿಸಬೇಕು.

ಎರಡನೆಯದಾಗಿ ಸಾಂಸ್ಕೃತಿಕ ವೈವಿಧ್ಯತೆ. ಪ್ರತಿ ಕೆಲವು ಕಿಲೋಮೀಟರುಗಳಿಗೂ ಸಂಸ್ಕೃತಿ ಬದಲಾಗುತ್ತದೆ. ನೂರು ಕಿಲೋಮೀಟರ್ ಸಾಗಿದರೆ, ಆಡುಭಾಷೆ ಬದಲಾಗುತ್ತದೆ, ಆಹಾರ ಪದ್ಧತಿ ಬದಲಾಗುತ್ತದೆ ಮತ್ತು ಈ ವೈವಿಧ್ಯತೆಯೇ ನಮ್ಮ ಸೃಷ್ಟಿಯ ಸೌಂದರ್ಯ. ಇದನ್ನು ಪ್ರಶಂಸಿಸಬೇಕು. ಇದನ್ನು ವಿವಾದಾಸ್ಪದ ವಿಷಯವನ್ನಾಗಿ ತಿರುಗಿಸದೇ ಉತ್ಸವದ ಅವಕಾಶವನ್ನಾಗಿ ಮಾರ್ಪಡಿಸಬೇಕು. ಇದು ಬಹಳ ಮುಖ್ಯ. ಇದನ್ನು ಕಾರ್ಯಗತಗೊಳಿಸಲು ಶಕ್ತಿ ಅಗತ್ಯ.

ನಾವು ಒತ್ತಡದಲ್ಲಿದ್ದಾಗ ಶಕ್ತಿ ಎಲ್ಲಿಂದ ಬರುತ್ತದೆ? ಅದಕ್ಕಾಗಿಯೇ ಸ್ವಲ್ಪ ಉಸಿರಾಟ ಪ್ರಕ್ರಿಯೆಗಳನ್ನು ಮಾಡಬೇಕು, ಹಿತಮಿತವಾದ ಆಹಾರ ಮತ್ತು ಹಾಸ್ಯ ಮನೋಭಾವವಿರಬೇಕು, ಅತಿ ಮುಖ್ಯವಾಗಿ ಪ್ರತಿದಿನ ಹತ್ತು ನಿಮಿಷ ವಿಶ್ರಮಿಸಲು ಅಥವಾ ಧ್ಯಾನ ಮಾಡಲು ಸಮಯ ವಿನಿಯೋಗಿಸಿ.  ಎಲ್ಲರಿಗೂ ಇದನ್ನೇ ಹೇಳುವುದು. ಹತ್ತರಿಂದ ಹದಿನೈದು ನಿಮಿಷಗಳ ಸಮಯ ಕುಳಿತು ವಿಶ್ರಮಿಸಿ, ನಿಮ್ಮ ಮನಸ್ಸು, ಬುದ್ಧಿಗಳನ್ನು ವಿಶ್ರಮಿಸಿ, ಆಂತರ್ಯದೊಳಗೆ ಹೋಗಿ, ನಿಮ್ಮ ಉಸಿರಾಟವನ್ನು ಗಮನಿಸಿ, ನೀವೊಂದು ಶಕ್ತಿಯ ಕಾರಂಜಿ, ಪ್ರೀತಿಯ ಸಾಗರ ಮತ್ತು ವಿಚಾರಗಳ ಪರ್ವತವೆಂದು ತಿಳಿಯುವಿರಿ.

ಪ್ರ: ಕೊರಿಯಾದಲ್ಲಿ ಆತ್ಮಹತ್ಯೆಯ ಸಂಖ್ಯೆ ಅತಿ ಹೆಚ್ಚಾಗಿದೆ. ಇಲ್ಲಿನ ಮಕ್ಕಳು ಅತಿ ಹೆಚ್ಚು ಸ್ಪರ್ಧೆ, ಅತಿ ಕಡಿಮೆ ಸಂಸ್ಕೃತಿ ಮತ್ತು ಆಧ್ಯಾತ್ಮದ ವಾತಾವರಣದಲ್ಲಿ ಬೆಳೆಯುತ್ತಿದ್ದಾರೆ. ನಿಮ್ಮ ಜ್ಞಾನ ಸಂದೇಶವನ್ನು ಕಳುಹಿಸಿಕೊಡಿ.

ಶ್ರೀಶ್ರೀರವಿಶಂಕರ್: ನಿಮ್ಮ ಪ್ರಾಣಶಕ್ತಿಯು ಕಡಿಮೆಯಾದಾಗ ಖಿನ್ನತೆಗೊಳಗಾಗುವಿರಿ. ಇನ್ನೂ ಕ್ಷೀಣಿಸಿದಾಗ ಆತ್ಮಹತ್ಯೆಯ ಪ್ರವೃತ್ತಿಗಳೇಳುತ್ತವೆ. ಸರಿಯಾದ ಉಸಿರಾಟ ಪ್ರಕ್ರಿಯೆ, ಧ್ಯಾನ ಮತ್ತು ಸುಸಂಗತದಲ್ಲಿ ಪ್ರಾಣಶಕ್ತಿಯು ಹೆಚ್ಚುತ್ತದೆ.

ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳೆದ್ದಾಗ, ಅದನ್ನು ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ, ಅವರು ನಮ್ಮ ನಕಾರಾತ್ಮಕತೆಯನ್ನು ಕರಗಿಸುವ ಬದಲು ಅದನ್ನು ಬಲಪಡಿಸುತ್ತಾರೆ. ‘ಹೌದು. ನೀವು ಹೇಳುತ್ತಿರುವುದು ಸರಿ. ಎಲ್ಲವೂ ನಿರಾಶಾದಾಯಕವಾಗಿದೆ’ಎನ್ನುವರು. ಅವರ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸಬೇಕು.

ಬಡವರಷ್ಟೇ ಅಲ್ಲ ಶ್ರೀಮಂತರೂ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ ಏಕೆಂದರೆ ಈ ಆತ್ಮಹತ್ಯೆ ಪ್ರವೃತ್ತಿಗೆ ಕಾರಣ ಮಾನಸಿಕ ಸ್ಥಿತಿ. ಆತ್ಮಹತ್ಯೆಗೂ ಲೌಕಿಕ ವಸ್ತುಗಳ ಗಳಿಕೆಗೂ ಸಂಬಂಧವಿಲ್ಲ. ಇಂತಹ ಪ್ರವೃತ್ತಿಯುಳ್ಳವರನ್ನು ಕರೆದು ಧ್ಯಾನ ಹಾಗೂ ಉಸಿರಾಟ ಪ್ರಕ್ರಿಯೆಗಳನ್ನು ಮಾಡಿಸಿ, ಶಕ್ತಿಯನ್ನು ವೃದ್ಧಿಸುವವರ ಬಳಿ ಕಳುಹಿಸಬೇಕು.

ಸ್ವಹಿಂಸೆ ಪರಹಿಂಸೆಯಷ್ಟೇ ಕೆಟ್ಟದ್ದು. ಆದ್ದರಿಂದ ಪ್ರಪಂಚವು ಒಂದೆಡೆ ಸಾಮಾಜಿಕ ಹಿಂಸೆ ಇನ್ನೊಂದೆಡೆ ಆತ್ಮಹತ್ಯೆ ಪ್ರವೃತ್ತಿಯ ನಡುವೆ ಸಿಕ್ಕಿಹಾಕಿಹೊಂಡಿದೆ. ಈ ಇಬ್ಬದಿಗಳಿಂದ ಸಮಾಧಾನ ತರುವುದು, ಕೇಂದ್ರಕ್ಕೆ ತರುವುದು ಆಧ್ಯಾತ್ಮ.

ಯಾರಿಗಾದರೂ ಆತ್ಮಹತ್ಯೆಯ ಪ್ರವೃತ್ತಿಯಿದೆಯೆಂದು ತಿಳಿದರೆ, ದಯವಿಟ್ಟು ಅವರಿಗೆ ಯೋಗ ಮಾಡಲು ಹೇಳಿ. ಅವರನ್ನು ಸುಸಂಗತಕ್ಕೆ ಸೇರಿಸಿ, ಹಾಡಿಸಿ, ನೃತ್ಯ ಮಾಡಿಸಿ, ಜೀವನ ಕೆಲವು ಲೌಕಿಕ ವಸ್ತುಗಳ ಗಳಿಕೆಯಷ್ಟೇ ಅಲ್ಲ ಎಂಬುದನ್ನು ಅರ್ಥ ಮಾಡಿಸಿ. ಜೀವನ ಇನ್ನೊಬ್ಬರ ತೆಗಳಿಕೆ ಅಥವಾ ಹೊಗಳಿಕೆಗಿಂತ ದೊಡ್ಡದು, ಸಂಬಂಧ ಅಥವಾ ಕೆಲಸಕ್ಕಿಂತ ಹಿರಿದು.

ಆತ್ಮಹತ್ಯೆಗೆ ಕಾರಣ ಸಂಬಂಧಗಳಲ್ಲಿ ಹಾಗೂ ಕೆಲಸಗಳಲ್ಲಿ ಸೋಲು ಮತ್ತು ಬಯಸಿದ್ದನ್ನು ಪಡೆಯಲಾಗದೇ ಇರುವುದು. ನಿಮ್ಮ ಚೇತನದಲ್ಲಿ ಮೂಡುವ ಚಿಕ್ಕ ಚಿಕ್ಕ ಆಸೆಗಳಿಗಿಂತ ಜೀವನ ಬಹಳ ವಿಸ್ತಾರವಾದುದು. ವಿಶಾಲ ದೃಷ್ಟಿಕೋನವನ್ನು ಹೊಂದಿದ್ದು, ಸಾಮಾಜಿಕ ಚಟುವಟಿಕೆ ಅಥವಾ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ.

ಸೇವೆಯು ಜನರನ್ನು ಸ್ವಸ್ಥವಾಗಿರಿಸುತ್ತದೆ ಮತ್ತು ಖಿನ್ನತೆಯಿಂದ ದೂರವಿಡುತ್ತದೆ. ಮಾನಸಿಕ ಖಿನ್ನತೆಯು ಆರ್ಥಿಕ ಕುಸಿತಕ್ಕಿಂತ ನಿಕೃಷ್ಟವಾದುದು. ಇದನ್ನು ದಾಟಿ ಮುಂದೆ ಹೋಗಲು ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ಸುತ್ತಮುತ್ತಲಿನವರಿಗೂ ಸಹಾಯ ಮಾಡಬೇಕು. ಆರ್ಟ್ ಆಫ್ ಲಿವಿಂಗ್ ಇಂತಹವರೊಂದಿಗೆ ಕೆಲಸ ಮಾಡುತ್ತಿದೆ. ಇವರೊಂದಿಗೆ ಇನ್ನೂ ಹೆಚ್ಚು ಜನರು ಸೇರಿ ಖಿನ್ನತೆ ಹಾಗೂ ಆತ್ಮಹತ್ಯೆ ಪ್ರವೃತ್ತಿಯ ಸಮಸ್ಯೆಯನ್ನು ನಿರ್ಮೂಲನೆ ಮಾಡಲು ಕಾರ್ಯನಿರ್ವಹಿಸಬೇಕು.

ಪ್ರ: ಸಮಾಜದಲ್ಲಿ ಮಾದಕ ವಸ್ತುಗಳ ಚಟವೆಂಬುದು ತೀವ್ರತೆರನಾದ ಸಮಸ್ಯೆ. ಇದರಿಂದ ಹೊರಬರುವುದು ಹೇಗೆ?

ಶ್ರೀಶ್ರೀರವಿಶಂಕರ್: ತಂದೆ-ತಾಯಂದಿರು ಮಕ್ಕಳ ಮನಸ್ಸಿನಲ್ಲಿ ಮಾದಕ ವಸ್ತುಗಳನ್ನು ಮುಟ್ಟಬಾರದು, ಅದು ಚಟಕ್ಕೆ ತಿರುಗಿ, ಹಾನಿಯುಂಟು ಮಾಡುವುದೆಂದು ನಿರ್ಬಂಧಿಸಬೇಕು. ಅವುಗಳ ಬಗ್ಗೆ ಪ್ರತಿಕೂಲ ಭಾವನೆಯನ್ನು ಬೆಳಸಬೇಕು. ಆ ಕಡೆ ನೋಡದಂತೆ ಒಂದು ಮಾನಸಿಕ ನಿರ್ಬಂಧವನ್ನು ನಿರ್ಮಿಸಬೇಕು. ಇದು ಅತ್ಯವಶ್ಯಕ.

ಹೇಗೆ ಬೆಳೆಯುವ ಗಿಡವನ್ನು ರಕ್ಷಿಸಲು ಸುತ್ತ ಬೇಲಿಯನ್ನು ಹಾಕುತ್ತೇವೋ ಹಾಗೆಯೇ ಈ ಯುವಮನಸ್ಸನ್ನು ಕೆಲವು ಮಾನಸಿಕ ನಿರ್ಬಂಧಗಳಿಂದ ರಕ್ಷಿಸಬೇಕು. ಇದು ಅವಶ್ಯಕ. ಆ ಕಡೆ ಒಂದಿಂಚೂ ಚಲಿಸದಂತೆ ಕೆಲವು ಪರಿಕಲ್ಪನೆಗಳನ್ನು ನೀಡಬೇಕು.

ಈಗಾಗಲೇ ಮಾದಕ ಸೇವನೆಯ ಚಟದಲ್ಲಿರುವವರಿಗೆ ಅದರಿಂದ ಹೊರಗೆ ಬರಲು ಮೂರು ದಾರಿಗಳುಂಟು: ಪ್ರೀತಿ, ಲೋಭ ಮತ್ತು ಭಯ. ಅವರು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅವರ ಮೇಲೆ ಶಪಥ ಮಾಡಿಸಿ, ಆ ಮಾದಕ ವಸ್ತುವನ್ನು ಎಂದಿಗೂ ಮುಟ್ಟುವುದಿಲ್ಲವೆಂದು ಅಥವಾ ಅವುಗಳನ್ನು ಮುಟ್ಟದಿದ್ದರೆ ಬಹಳ ಅದೃಷ್ಟ ಖುಲಾಯಿಸುವುದೆಂದು ಹೇಳಿ.

ಆ ಚಟದಿಂದ ಹೊರಬರಲು ಯಾವುದೇ ರೀತಿಯಲ್ಲಾಗಲೀ ಸಹಾಯ ಮಾಡಿ. ಹೋಮಿಯೋಪತಿ ಮತ್ತು ಆಯುರ್ವೇದಗಳಲ್ಲಿ ಅನೇಕ ಉಪಶಮನಗಳಿವೆ. ಯೋಗ ಮತ್ತು ಧ್ಯಾನ ಕೂಡ ಬಹಳ ಒಳ್ಳೆಯದು. ಮಿಲಿಯನ್ ಜನರು ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ ಮಾದಕ ವಸ್ತುಗಳ ಚಟದಿಂದ ಹೊರಬಂದಿರುವುದನ್ನು ಕಂಡಿದ್ದೇನೆ.

ಪ್ರ: ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಜಾತ್ಯಾತೀತವಲ್ಲ ಎಂದು ಯಾರಾದರೂ ಭಾವಿಸಿದರೆ, ಅವರಿಗೆ ನಿಮ್ಮ ಸಲಹೆಯೇನು?

ಶ್ರೀಶ್ರೀರವಿಶಂಕರ್: ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಯಾರು ಮಾಡಿಲ್ಲವೋ ಅವರು ಹೀಗೆ ಅಭಿಪ್ರಾಯವನ್ನಿಟ್ಟುಕೊಂಡಿರುತ್ತಾರೆ. ಎಲ್ಲರಿಗೂ ವ್ಯಾಯಾಮ ಅಥವಾ ತಂತ್ರ ಕೆಲಸ ಮಾಡುತ್ತದೆ. ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸೃಜನಾತ್ಮಕತೆಗೆ ಸಹಕಾರಿಯಾಗಿದೆ. ಆದ್ದರಿಂದ ಮೊದಲು ಇದನ್ನು ಪ್ರಯತ್ನಿಸಿ, ನಂತರ ತಿಳಿಯುತ್ತದೆ ಇದು ಜಾತ್ಯಾತೀತ ಮತ್ತು ಸರ್ವವ್ಯಾಪಿಯಾಗಿದೆಯೆಂದು.

ಧರ್ಮ ಅಥವಾ ನಂಬಿಕೆಗಳನ್ನು ಯೋಗ ವಿರೋಧಿಸುವುದಿಲ್ಲ. ಒಮ್ಮೆ ಇದನ್ನು ಅಭ್ಯಾಸ ಮಾಡಿದರೆ ಈ ತಪ್ಪು ಅಭಿಪ್ರಾಯವನ್ನು ಸುಲಭವಾಗಿ ತೊಡೆದುಹಾಕಬಹುದು.

ಪ್ರ: ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ. ವಿಭಜನೆಗೆ ಕಾರಣ ಧರ್ಮವೇ ಅಥವಾ ಧರ್ಮ ಒಂದುಗೂಡಿಸುತ್ತದೆಯೇ?

ಶ್ರೀಶ್ರೀರವಿಶಂಕರ್: ಜ್ಞಾನವಿಲ್ಲದೇ, ವಿವೇಕವಿಲ್ಲದೇ ಧರ್ಮ ಜನರನ್ನು ವಿಭಜಿಸುವಂತೆ ಗೋಚರಿಸುತ್ತದೆ; ಸ್ವಸ್ವರೂಪದ ಪ್ರಮುಖ ಅಥವಾ ಏಕಮಾತ್ರ ಸಂಕೇತವಾಗುತ್ತದೆ.

ಮೊದಲು ಬೇರೆ ಬೇರೆ ಧರ್ಮಗಳ ನಡುವೆ ಘರ್ಷಣೆಗಳು ಉದ್ಭವಿಸುತ್ತವೆ. ನಂತರ ಧರ್ಮದೊಳಗೆ ಘರ್ಷಣೆಗಳು ಉಂಟಾಗುವವು, ತದನಂತರ ಪಂಗಡಗಳುಂಟಾಗುವವು. ವಿವೇಕವಿಲ್ಲದೇ ತಿಳುವಳಿಕೆಯಿಲ್ಲದೇ ಇವೆಲ್ಲ ಸಂಭವಿಸುವವು.

ಜ್ಞಾನಿಯಾದವನು ಎಲ್ಲ ಧರ್ಮಗಳಿಂದ ಲಾಭ ಪಡೆಯುತ್ತಾನೆ. ಧರ್ಮವು ಜೀವನದ ಮೌಲ್ಯವನ್ನು ವೃದ್ಧಿಸುತ್ತದೆ. ಈ ವಿವೇಕವಿಲ್ಲದೇ ಕೇವಲ ನಿಮ್ಮ ಗುರುತಿಗಾಗಿಯಷ್ಟೇ ಧರ್ಮವನ್ನು ಆಚರಿಸುತ್ತಿದ್ದರೆ, ನಿಮ್ಮ ವಿಕಾಸಕ್ಕಾಗಿ ಅಲ್ಲದಿದ್ದರೆ, ಆಗ ಅದು ಖಂಡಿತ ವಿಭಜಿಸುತ್ತದೆ.

ನಾವು ಒಂದು ಬೆಳಕಿನ ಭಾಗವೆಂದು ಮೊದಲು ಗುರುತಿಸಿಕೊಳ್ಳಬೇಕು. ಎರಡನೆಯದಾಗಿ ಒಂದು ಸಮಾಜ, ಒಂದು ಜಾಗತಿಕ ಪರಿವಾರದ ಭಾಗವೆಂದು ಗುರುತಿಸಿಕೊಳ್ಳುವುದು. ಮೂರನೆಯದು ರಾಷ್ಟ್ರ ಅಥವಾ ಭಾಷೆಯಾಗಿರಬಹುದು. ನಾಲ್ಕನೆಯದು ಧರ್ಮವಾಗಬಹುದು. ಮತ್ತು ಐದನೆಯದು ನಿಮ್ಮ ಪರಂಪರೆ ಅಥವಾ ಪರಿವಾರವಾಗಬಹುದು.

ಇನ್ನಿತರ ಗುರುತುಗಳನ್ನು ಇಟ್ಟುಕೊಳ್ಳಬಹುದು. ಆದರೆ ಒಂದು ಮಾನವ ಸಮಾಜದ, ಒಂದು ವಿಶ್ವ ಪ್ರಕಾಶದ ಭಾಗವೆಂದು ಮರೆತರೆ, ಆಗ ಧರ್ಮ ಸಮಾಜವನ್ನು ವಿಭಜಿಸುವುದು ಮತ್ತು ನಮ್ಮನ್ನು ನಾಶಗೊಳಿಸುವುದು. ವಿವೇಕದಿಂದ ವೈವಿಧ್ಯತೆಯನ್ನು ಉತ್ಸವದಂತೆ ಆಚರಿಸಿ. ಉತ್ತಮ ಮಾನವನಾಗಿ ರೂಪುಗೊಳ್ಳಲು ಎಲ್ಲ ಧರ್ಮಗಳಿಂದಲೂ ಉತ್ತಮವಾದುದನ್ನು ತೆಗೆದುಕೊಳ್ಳಿರಿ.

ಪ್ರ: ಶ್ರೀಶ್ರೀಗಳೇ ನಮ್ಮೆಲ್ಲರಿಗೂ ನಿಮ್ಮ ಸಂದೇಶವೇನು?

ಶ್ರೀಶ್ರೀರವಿಶಂಕರ್: ಈ ಭೂಮಿಯ ಮೇಲಿನ ಪ್ರತಿಯೊಂದು ಮುಖವೂ ವಿಶ್ವ ಗ್ರಂಥ, ದೇವರ ಗ್ರಂಥ. ಎಲ್ಲರೂ ಪ್ರೀತಿಯ ಚಿಲುಮೆಯೇ. ಪ್ರೀತಿಯು ಅಭಿವ್ಯಕ್ತವಾಗಲಿ, ಕಾರಂಜಿಯಂತೆ ಹರಿಯಲಿ ಮತ್ತು ಈ ಸಮಯದಲ್ಲಿ ನಮ್ಮ ಭೂಮಿಯನ್ನು ಸಂಪನ್ನಗೊಳಿಸಲಿ. ನಿಮ್ಮೆಲ್ಲರಿಗೂ ನನ್ನ ಪ್ರೀತಿ ಮತ್ತು ಆಶೀರ್ವಾದಗಳು.