ಶುಕ್ರವಾರ, ಜೂನ್ 7, 2013

ಸ್ವಧರ್ಮ

ಬೆಂಗಳೂರು, ಭಾರತ
೭ ಜೂನ್ ೨೦೧೩

ಪ್ರಶ್ನೆ: ಗುರುದೇವ ಸ್ವಧರ್ಮವೆಂದರೇನು ಮತ್ತು ನನ್ನ ಸ್ವಧರ್ಮ ಯಾವುದೆಂಬುದನ್ನು ನಾನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಸ್ವಧರ್ಮವೆಂದರೆ, ಯಾವ ಕೆಲಸವು ನಿಮ್ಮ ಸ್ವಭಾವಕ್ಕನುಗುಣವಾಗಿ ಇರುವುದೋ ಅದು. ಅದು, ನಿಮ್ಮ ಕುಶಲತೆಗಳಿಗೆ ಮತ್ತು ಪ್ರತಿಭೆಗಳಿಗೆ; ನಿಮ್ಮದೇ ಸ್ವಭಾವಕ್ಕನುಗುಣವಾಗಿ ಹಾಗೂ ಯಾವುದಕ್ಕೆ ನೀವು ಜವಾಬ್ದಾರರಾಗಿರುವಿರೋ ಅದಕ್ಕನುಗುಣವಾಗಿ ಪ್ರವರ್ತಿಸುವುದಾಗಿದೆ. ನೀವು ಭಯಬೀತರಾಗುವಂತೆ ಅಥವಾ ಚಡಪಡಿಸುವಂತೆ ಮಾಡದಿರುವ ಯಾವುದೇ ಕ್ರಿಯೆಯು ಸ್ವಧರ್ಮವಾಗಿದೆ. ಯಾವ ಕೆಲಸವನ್ನು ಮಾಡಲೇಬೇಕೆಂದು ನಿಮಗನಿಸುವುದೋ, ಯಾವುದನ್ನು ಮಾಡದಿರುವುದರಿಂದ ನಿಮಗೆ ಚಡಪಡಿಕೆಯಾಗುವುದೋ ಅದು ಸ್ವಧರ್ಮವಾಗಿದೆ.

ಈಗ ಇದನ್ನು ಅಪಾರ್ಥ ಮಾಡಿಕೊಂಡು, ’ನನಗೆ ಮದ್ಯಪಾನ ಮಾಡದಿದ್ದರೆ ಚಡಪಡಿಕೆಯಾಗುತ್ತದೆ’ ಎಂದು ಹೇಳಬೇಡಿ. ಅಲ್ಲ! ಅಲ್ಲವೇ ಅಲ್ಲ. ಪ್ರತಿಸಲವೂ ನಿಮಗೆ ಚಡಪಡಿಕೆಯಾದಾಗ, ಅದು ಯಾವತ್ತೂ ಸ್ವಧರ್ಮದ ಕಾರಣದಿಂದಾಗಿಯಲ್ಲ. ಆದರೆ ಅದೇ ವೇಳೆ, ನಿಮ್ಮ ಸ್ವಧರ್ಮವನ್ನು ಅನುಸರಿಸದೇ ಇರುವುದು ಯಾವತ್ತೂ ನೀವು ಚಡಪಡಿಸುವಂತೆ ಮಾಡುತ್ತದೆ. ಅದಕ್ಕಾಗಿಯೇ ಭಗವದ್ಗೀತೆಯಲ್ಲಿ ಹೀಗೆಂದು ಹೇಳಿರುವುದು,

’ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ II’  (೩.೩೫)

ನಾವು ಯಾವುದನ್ನಾದರೂ ಪ್ರಾಮಾಣಿಕತೆಯಿಲ್ಲದೆ ಮಾಡುವಾಗ, ಕೇವಲ ಇನ್ನೊಬ್ಬ ವ್ಯಕ್ತಿಗೆ ತೋರಿಸುವುದಕ್ಕೋಸ್ಕರ ಮಾಡುವಾಗಲೇ ನಮಗೆ ಭಯವಾಗುವುದು ಯಾಕೆಂದರೆ, ಅಂತಹ ಕೆಲಸವು ಅಸಲಿಯಾಗಿರುವುದಿಲ್ಲ, ಅದು ಹೃದಯದಿಂದ ಬಂದಿರುವುದಿಲ್ಲ. ಆದರೆ ನಾವು ಪ್ರಾಮಾಣಿಕವಾಗಿ ಮತ್ತು ಹೃದಯದಿಂದ ಏನನ್ನಾದರೂ ಮಾಡುವಾಗ, ಅಲ್ಲಿ ಯಾವುದೇ ಭಯವಿರುವುದಿಲ್ಲ.

ಒಬ್ಬರು ಸುಳ್ಳು ಹೇಳುವಾಗ, ಅವರಿಗೆ ಖಂಡಿತವಾಗಿಯೂ ಒಳಗಡೆಯೆಲ್ಲೋ ಭಯವೆನಿಸುತ್ತದೆ. ಆದರೆ ಸತ್ಯವನ್ನು ಹೇಳುವವನೊಬ್ಬನಿಗೆ ಭಯವೆನಿಸುವುದೇ ಇಲ್ಲ. ವಾಸ್ತವವಾಗಿ, ಸತ್ಯವನ್ನು ಹೇಳುವುದು ಮತ್ತು ಅದನ್ನು ಪಾಲಿಸುವುದು ನಿಮಗೆ ಬಹಳಷ್ಟು ಶಕ್ತಿಯನ್ನು ತರುತ್ತದೆ, ಅಲ್ಲವೇ? ಅದುವೇ ಸ್ವಧರ್ಮ.

ನಮ್ಮ ಜೀವನದಲ್ಲಿ ಯಾವುದು ನಮಗೆ ಸಹಜವಾಗಿ ಬರುವುದೋ ಅದನ್ನು ನಾವು ಅನುಸರಿಸುವಾಗ ಅದು ನಮಗೆ ಸಮೃದ್ಧಿ ಮತ್ತು ಏಳಿಗೆಯನ್ನು ತರುತ್ತದೆ. ನಾವು ನಮ್ಮ ಸ್ವಭಾವಕ್ಕನುಸಾರವಾಗಿ ನಡೆಯುವಾಗ, ನಾವು ಒಳಗಡೆಯಿಂದ ಬೆಳೆಯುತ್ತೇವೆ. ನಮ್ಮನ್ನು ಮೇಲೆತ್ತುವ ಯಾವುದೇ ಕೆಲಸವು ನಮ್ಮ ಸ್ವಧರ್ಮವಾಗಿದೆ. ಧರ್ಮವೆಂದರೆ, ಯಾವುದು ಮನಸ್ಸು, ಬುದ್ಧಿ, ಸ್ಮರಣೆ ಮತ್ತು ನಮ್ಮ ಅಂತರಾತ್ಮಗಳನ್ನು ಜೊತೆಯಲ್ಲಿ ಸಾಮರಸ್ಯದಿಂದ ಹಿಡಿದಿಟ್ಟುಕೊಳ್ಳುವುದೋ ಅದು. ಬೆಳವಣಿಗೆಯುಂಟಾಗುವುದು ನಾವು ನಮ್ಮ ಸ್ವಧರ್ಮವನ್ನು ಅನುಸರಿಸುವಾಗ.

ಪ್ರಶ್ನೆ: ಗುರುದೇವ, ದೇವರು ಎಲ್ಲೆಡೆಯಲ್ಲೂ ಇರುವರು ಎಂಬುದಾಗಿ ಗೀತೆಯಲ್ಲಿ ನೀವು ಹೇಳಿರುವಿರಿ. ಆದರೆ ದೈನಂದಿನ ಜೀವನದಲ್ಲಿ ಇದನ್ನು ಒಬ್ಬರು ಪ್ರಾಯೋಗಿಕವಾಗಿ ಹೇಗೆ ಅನುಭವಿಸಬಹುದು?

ಶ್ರೀ ಶ್ರೀ ರವಿ ಶಂಕರ್: ನೋಡು, ಇವುಗಳು ಜ್ಞಾನಕ್ಕಿರುವ ಎರಡು ಮಗ್ಗಲುಗಳು. ಒಂದನೆಯದು ಬೋಧ - ಅಂದರೆ ಜ್ಞಾನವೇ ಮತ್ತು ಇನ್ನೊಂದು ವ್ಯವಹಾರ - ಅಂದರೆ ಜ್ಞಾನವನ್ನು ಅನುಸರಿಸುವುದು ಮತ್ತು ಅದನ್ನು ಪ್ರಾಯೋಗಿಕವಾಗಿ ಅನುಭವಿಸುವುದು.

ನಿನ್ನ ಮನೆಯಲ್ಲಿ ಬಾಗಿಲುಗಳು, ಮೇಜುಗಳು ಮತ್ತು ಕುರ್ಚಿಗಳೆಲ್ಲಾ ಮರದಿಂದ ಮಾಡಲ್ಪಟ್ಟಿವೆಯೆಂಬುದು ನಿನಗೆ ತಿಳಿದಿದೆ. ಆದರೆ ಒಂದು ಕುರ್ಚಿಯಾಗಿ ನೀನು ಒಂದು ಮೇಜನ್ನು ಬಳಸಲು ಸಾಧ್ಯವಿಲ್ಲ, ಒಂದು ಬಾಗಿಲಿನ ಸ್ಥಾನದಲ್ಲಿ ನಿನಗೆ ಕುರ್ಚಿಯನ್ನು ಬಳಸಲೂ ಸಾಧ್ಯವಿಲ್ಲ, ಅಲ್ಲವೇ? ಮಂಚ, ಬಾಗಿಲು ಮತ್ತು ಮೇಜುಗಳೆಲ್ಲವೂ ಒಂದೇ ವಸ್ತುವಿನಿಂದ ಮಾಡಲ್ಪಟ್ಟಿರುವುದಾದರೂ ಸಹ, ಒಂದರ ಜಾಗದಲ್ಲಿ ಇನ್ನೊಂದನ್ನು ಬಳಸಲು ನಿನಗೆ ಸಾಧ್ಯವಿಲ್ಲ, ಯಾಕೆಂದರೆ ಪ್ರಾಯೋಗಿಕವಾಗಿ ಅವುಗಳಲ್ಲಿ ಪ್ರತಿಯೊಂದೂ ಇನ್ನೊಂದರಿಂದ ವ್ಯತ್ಯಸ್ತವಾಗಿದೆ ಮತ್ತು ತಮ್ಮದೇ ಆದ ಉಪಯೋಗಗಳನ್ನು ಹೊಂದಿವೆ.

ಅದೇ ರೀತಿಯಲ್ಲಿ, ಯುವಕರಲ್ಲಿ ಮತ್ತು ವಯಸ್ಸಾದವರಲ್ಲಿ ಇಬ್ಬರಲ್ಲೂ ಒಬ್ಬರೇ ದೇವರಿರುವುದು. ಆದರೆ ನೀನು, ಅವರೆಲ್ಲರೂ ಒಂದೇ ಎಂದು ಹೇಳುತ್ತಾ, ಚಿಕ್ಕ ಮಕ್ಕಳ ಪಾದಗಳನ್ನು ಮುಟ್ಟಲು ಮತ್ತು ವಯಸ್ಸಾದವರಿಗೆ ಆಶೀರ್ವದಿಸಲು ತೊಡಗಿದರೆ, ಆಗ ನಿನಗೆ ಹುಚ್ಚುಹಿಡಿದಿದೆಯೆಂದು ಅವರಂದುಕೊಳ್ಳುವರು. ನಿನಗೇನೋ ಆಗಿದೆಯೆಂದು ಅವರು ಯೋಚಿಸುವರು.

ಆದುದರಿಂದ ನೀವು ವರ್ತಿಸುವ ರೀತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬೇಕು. ನೀವು ಎಲ್ಲರೊಂದಿಗೂ ಒಂದೇ ರೀತಿಯಲ್ಲಿ ವರ್ತಿಸಲು ಸಾಧ್ಯವಿಲ್ಲ. ಆದರೆ ನಿಮ್ಮಲ್ಲಿ ಒಂದು ಸಮಭಾವದ ಭಾವನೆಯಿರಬೇಕು - ಅಂದರೆ, ನಿಮ್ಮ ಸುತ್ತಲಿರುವ ಎಲ್ಲರಲ್ಲೂ ಮತ್ತು ಎಲ್ಲದರಲ್ಲೂ ಒಂದು ದೈವತ್ವವನ್ನು ನೋಡುವುದು.

ಅದ್ವೈತದ ಈ ಜ್ಞಾನವನ್ನು ನೀವು ಅರ್ಥಮಾಡಿಕೊಂಡಾಗ ಮತ್ತು ಅದನ್ನು ನಿಮ್ಮ ಹೃದಯದಲ್ಲಿರಿಸಿದಾಗ ನೀವು ಆತ್ಮನಲ್ಲಿ ಹೆಚ್ಚು ದೃಢವಾಗಿ ಸ್ಥಾಪಿತರಾಗುವಿರಿ. ಆಗ ಮಾತ್ರ ನೀವು, ಎಲ್ಲರೊಳಗೆ ಮತ್ತು ಎಲ್ಲದರೊಳಗೆ ಒಂದೇ ಚೇತನವಿರುವುದಾದರೂ, ಎಲ್ಲವನ್ನೂ ನೀವು ಅದರದ್ದೇ ಆದ ಸ್ವಭಾವಕ್ಕನುಸಾರವಾಗಿ ನೋಡಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರುವಿರಿ.

ಪ್ರಶ್ನೆ: ಗುರುದೇವ, ನಾನು ನನ್ನ ಪತಿಯನ್ನು ಸಂತೋಷಪಡಿಸಲು ಏನೇ ಮಾಡಿದರೂ ಅವರು ಯಾವತ್ತೂ ಸಂತೋಷಗೊಳ್ಳುವುದಿಲ್ಲ. ಅವರು ನನ್ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತಿರುತ್ತಾರೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಅದು ಅವರ ಅಭ್ಯಾಸವೆಂಬುದು ನಿನಗೆ ತಿಳಿದಿರುವುದಾದರೆ, ಮತ್ತೆ ಯಾಕೆ ನೀನು ಅಷ್ಟೊಂದು ವ್ಯಾಕುಲಳಾಗುವೆ? ಅವರನ್ನು ಸ್ವೀಕರಿಸು ಮತ್ತು ಮುಂದೆ ಸಾಗು. ನಿನ್ನನ್ನು ಸಂತೋಷವಾಗಿರಿಸು. ಅವರ ವರ್ತನೆಯಿಂದ ನೀನು ವ್ಯಾಕುಲಳಾಗದೇ ಇದ್ದರೆ, ಆಗ ಅವರು ಬದಲಾಗಲು ತೊಡಗುವರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದಲ್ಲ ಒಂದು ನಕಾರಾತ್ಮಕ ಗುಣವಿರುತ್ತದೆ ಮತ್ತು ಈ ನಕಾರಾತ್ಮಕ ಗುಣಗಳು ನಿನ್ನನ್ನು ಜಾಗೃತಗೊಳಿಸಲಿಕ್ಕಾಗಿಯೂ(ನಿನ್ನ ಸಹನೆಯನ್ನು ಪರೀಕ್ಷಿಸಲು) ಕೂಡಾ ಇರುವುದಾಗಿದೆ; ಅದರಿಂದಾಗಿ ನೀನು ಬಲಶಾಲಿಯಾಗಲೆಂದು. ಒಮ್ಮೆ ನೀನು ಬಲಶಾಲಿಗಳಾದ ಮೇಲೆ, ಅವರು ಬದಲಾಗಲು ತೊಡಗುವರು.

ಜೀವನದಲ್ಲಿ ಎಲ್ಲವೂ ಬದಲಾಗುತ್ತದೆ ಮತ್ತು ಬದಲಾಗದಿರುವ ಕೆಲವು ವಿಷಯಗಳಿವೆ. ಈ ಎರಡೂ ಪರಿಸ್ಥಿತಿಗಳನ್ನು ನಾವು ಸ್ವೀಕರಿಸಬೇಕಾಗಿದೆ.

ಪ್ರಶ್ನೆ: ಗುರುದೇವ, ಭಾರತದಲ್ಲಿ ಗೋ ಹತ್ಯೆಯು ಹೆಚ್ಚುತ್ತಿದೆ. ಇದನ್ನು ನಿಷೇಧಿಸುವಂತಹ ಯಾವುದಾದರೂ ಕಠಿಣ ಕಾನೂನನ್ನು ಸಂಸತ್ತಿನಲ್ಲಿ ಜಾರಿಗೆ ತರಲು ಸಾಧ್ಯವಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇವತ್ತು ಭಾರತದಲ್ಲಿರುವ ಹಸುಗಳ ಸಂಖ್ಯೆಯು, ಸ್ವಾತಂತ್ರ್ಯದ ಮೊದಲಿದ್ದುದರ ಕೇವಲ ೨೦% ಮಾತ್ರವೆಂಬುದು ದುರದೃಷ್ಟಕರ. ನಮ್ಮ ದೇಶದ ಪ್ರಾಣಿ ಸಂಪತ್ತು ಒಂದು ದೊಡ್ಡ ಮಟ್ಟಿಗೆ ಇಳಿಮುಖವಾಗಿದೆ ಮತ್ತು ಮೊದಲು ಎಷ್ಟಿತ್ತೋ ಅದಕ್ಕಿಂತ ಇವತ್ತು ಬಹಳಷ್ಟು ಕಡಿಮೆಯಾಗಿದೆ.

ದೇಶದ ಹಲವಾರು ಜಾಗಗಳಲ್ಲಿ ನಾವು ಹಾಲಿನ ಒಂದು ದೊಡ್ಡ ಕೊರತೆಯನ್ನು ಎದುರಿಸುತ್ತಿದ್ದೇವೆ. ಉತ್ತರ ಭಾರತದ ಕೆಲವು ಮಾರುಕಟ್ಟೆಗಳಲ್ಲಿ ಮಾರಲಾಗುವ ಸಿಹಿತಿಂಡಿಗಳು ಸೇವಿಸುವುದಕ್ಕೇ ಸುರಕ್ಷಿತವಾದುದಲ್ಲ ಎಂಬುದನ್ನು ನೀವು ಕೇಳಿರಬೇಕು. ಸಿಹಿತಿಂಡಿಗಳನ್ನು ಉತ್ಪಾದಿಸಲು ಅವರು ಯೂರಿಯಾ ಮತ್ತು ಬೇರೆ ಯಾವುದೋ ರಾಸಾಯನಿಕಗಳನ್ನು ಮಿಶ್ರ ಮಾಡುತ್ತಾರೆ. ಅಂತಹ ಜಾಗಗಳಲ್ಲಿ ಬಹಳಷ್ಟು ಕಲಬೆರಕೆ ಆಗುತ್ತಿದೆ. ಖೋವಾ (ಸಿಹಿತಿಂಡಿಗಳನ್ನು ಗಟ್ಟಿಗೊಳಿಸಲು ಅವುಗಳಿಗೆ ಸೇರಿಸುವ, ಹಾಲಿನಿಂದ ಮಾಡುವ ಒಂದು ಪದಾರ್ಥ)ವನ್ನು ಮಾಡಲು ಜನರು ರಾಸಾಯನಿಕಗಳನ್ನು ಸೇರಿಸುತ್ತಾರೆ. ಅದನ್ನು ಅವರು ನಂತರ ಮಿಠಾಯಿಗಳನ್ನು ಮಾಡಲು ಬಳಸುತ್ತಾರೆ. ಇದರಿಂದಾಗಿ ಬಹಳಷ್ಟು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೂ ಅನೇಕ ಜನರು ನರಳುತ್ತಿದ್ದಾರೆ. ಜನರು ಕಲಬೆರಕೆಯನ್ನು ಅವಲಂಬಿಸುವುದು, ಕಚ್ಚಾ ಪದಾರ್ಥಗಳ ಕೊರತೆಯಿದ್ದಾಗ ಮಾತ್ರ. ಕೊರತೆಯಿಲ್ಲದಿದ್ದರೆ, ಅಲ್ಲಿ ಯಾವುದೇ ಕಲಬೆರಕೆಯಿರಲಾರದು. ಆಗ ಕಲಬೆರಕೆಯನ್ನು ಮಾಡುವುದು ಹೆಚ್ಚು ದುಬಾರಿಯಾಗುವುದು.

ನಮ್ಮ ದೇಶದ ಪ್ರಾಣಿ ಸಂಪತ್ತನ್ನು ಹೆಚ್ಚಿಸಲು ನಾವು ಪ್ರಯತ್ನಪಡಬೇಕು ಮತ್ತು ನಮ್ಮ ಪ್ರಾಣಿ ಸಂಕುಲದಲ್ಲಿ ಹಸುಗಳ ಸಂಖ್ಯೆಯನ್ನು ಹೆಚ್ಚಿಸಲು ಕಠಿಣ ಪರಿಶ್ರಮ ಪಡಬೇಕಾಗಿದೆ.

ಇತ್ತೀಚೆಗೆ, ನಾನೊಂದು ಸಂಶೋಧನೆಯ ಬಗ್ಗೆ ತಿಳಿದೆ. ಅದರಲ್ಲಿ ಅವರು, ಭಾರತೀಯ ಹಸುಗಳ ಹಾಲು ಮತ್ತು ಯುರೋಪಿನಿಂದ ಆಮದುಗೊಳಿಸಲಾದ ಹಸುಗಳ ಹಾಲಿನ ನಡುವಣ ವ್ಯತ್ಯಾಸವನ್ನು ಗುರುತಿಸಿದ್ದಾರೆ.

ಆಮದುಗೊಳಿಸಲಾದ ಹಸುಗಳ ಹಾಲಿನಲ್ಲಿರುವ ಪ್ರೊಟೀನ್ ಎ೧ ಪ್ರೊಟೀನ್ ಎಂದು ಕರೆಯಲ್ಪಡುತ್ತದೆ. ಎ೧ ಪ್ರೊಟೀನ್ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯದ ಸಮಸ್ಯೆಗಳು, ಮೊದಲಾದವುಗಳಿಗೆ ಕಾರಣವಾಗುತ್ತದೆ. ಹಲವಾರು ರೋಗಗಳು ಉಂಟಾಗುವುದು ಎ೧ ಪ್ರೊಟೀನ್‌ನಿಂದಾಗಿ. ಇನ್ನೊಂದು ಬದಿಯಲ್ಲಿ, ಇನ್ನೊಂದು ರೀತಿಯ ಪ್ರೊಟೀನ್ ಕೂಡಾ ಇದೆ. ಅದು ಎ೨ ಪ್ರೊಟೀನ್ ಎಂದು ಕರೆಯಲ್ಪಡುತ್ತದೆ.

ಎ೨ ಪ್ರೊಟೀನ್ ತಾಯಿಯ ಹಾಲಿನಲ್ಲಿ ಕಂಡುಬರುತ್ತದೆ ಹಾಗೂ ಅದು ಭಾರತೀಯ ಹಸುಗಳ ಹಾಲಿನಲ್ಲಿ ಮತ್ತು ಮೇಕೆಹಾಲಿನಲ್ಲಿ ಕೂಡಾ ಕಂಡುಬರುತ್ತದೆ. ಹಾಗಾಗಿ, ತಾಯಿಯ ಹಾಲು, ಮೇಕೆಯ ಹಾಲು ಮತ್ತು ಭಾರತೀಯ ಹಸುಗಳ ಹಾಲು ಒಂದೇ ಆಗಿವೆ (ಸಂಯೋಜನೆಯಲ್ಲಿ).

ಹೇಗೆಂದು ನಿಮಗೆ ಗೊತ್ತಾ? ಭಾರತದಲ್ಲಿ, ಹಲವಾರು ವರ್ಷಗಳವರೆಗೆ ಹಸುವನ್ನು ಒಬ್ಬ ತಾಯಿಯಂತೆ ಗೌರವಿಸಲಾಗಿದೆ ಮತ್ತು ಆದರಿಸಲಾಗಿದೆ. ಹೀಗೆ ನಮ್ಮ ಸಂಪ್ರದಾಯದಲ್ಲಿನ ಈ ಪ್ರಜ್ಞೆ ಅಥವಾ ಯೋಚನೆಯು, ಎ೧ ಪ್ರೊಟೀನ್‌ನ ಬದಲಾಗಿ ಎ೨ ಪ್ರೊಟೀನ್‌ನ್ನು ಉತ್ಪಾದಿಸುವಂತೆ ಹಸುವಿನ ಡಿ.ಎನ್.ಎ.ಯನ್ನು ಬದಲಾಯಿಸಿದೆ. ಭಾರತೀಯ ಹಸುಗಳ ಹಾಲು ಎಷ್ಟೊಂದು ಪ್ರಬಲ ಮತ್ತು ಉಪಯುಕ್ತವಾದುದೆಂದರೆ, ಅದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಒಂದು ಔಷಧಿಯಾಗಿ ಕೂಡಾ ಬಳಸಲ್ಪಡುತ್ತದೆ.

ಆದುದರಿಂದ ಯಾವುದೇ ಬೆಲೆ ತೆತ್ತಾದರೂ ಗೋಹತ್ಯೆಯನ್ನು ನಿಲ್ಲಿಸಬೇಕಾಗಿದೆ. ಇದರ ವಿರುದ್ಧವಾಗಿ ಒಂದು ಕಟ್ಟುನಿಟ್ಟಾದ ಕಾನೂನನ್ನು ಜಾರಿಗೆ ತರಬೇಕು, ಆದರೆ ಹೆಚ್ಚು ಮುಖ್ಯವಾಗಿ, ಜನರು ಈ ನಿಜಸಂಗತಿಗಳ ಬಗ್ಗೆ ಹೆಚ್ಚು ಹೆಚ್ಚು ಅರಿಯುವಂತೆ ಕೂಡಾ ಮಾಡಬೇಕು.  

ಪ್ರಶ್ನೆ: ಗುರುದೇವ, ದೇವರು ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತಾರೆಂದು ನಿನ್ನೆ ನೀವು ಹೇಳಿದಿರಿ. ಹಾಗಾದರೆ ಬಡತನವಿರುವುದು ಯಾಕೆ, ನೆರೆಗಳು ಬರುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಪ್ರಪಂಚದಲ್ಲಿ ಯಾವುದೇ ಸಮಸ್ಯೆಗಳಿರದ ಒಂದು ಪರಿಸ್ಥಿತಿಯನ್ನು ಕಲ್ಪಿಸಿಕೋ.

ನೀನೊಂದು ಸಿನೆಮಾ ನೋಡಲು ಹೋಗುವೆ ಮತ್ತು ಆ ಸಿನೆಮಾದಲ್ಲಿ ಯಾವುದೇ ಸಮಸ್ಯೆಗಳಿರುವುದಿಲ್ಲ ಮತ್ತು ಯಾವುದೇ ಒತ್ತಡವಿರುವುದಿಲ್ಲ. ಒಬ್ಬ ವ್ಯಕ್ತಿ ಏಳುತ್ತಾನೆ, ತಿನ್ನುತ್ತಾನೆ, ಕೆಲಸಕ್ಕೆ ಹೋಗುತ್ತಾನೆ, ಮನೆಗೆ ಬರುತ್ತಾನೆ ಮತ್ತು ಮಲಗುತ್ತಾನೆ ಹಾಗೂ ಪ್ರತಿದಿನವೂ ಇದನ್ನೇ ಮಾಡುತ್ತಿರುತ್ತಾನೆ. ನೀನು ಹೋಗಿ ಅಂತಹ ಒಂದು ಚಲಚಿತ್ರವನ್ನು ನೋಡುವೆಯಾ? ಅಂತಹ ಒಂದು ಚಲನಚಿತ್ರವನ್ನು ನೀನು ಆನಂದಿಸುವೆಯಾ?

ಒಂದು ಚಲನಚಿತ್ರವನ್ನು ನೀನು ಆನಂದಿಸುವುದು ಯಾವಾಗ? ಅದರಲ್ಲೊಬ್ಬ ಖಳನಾಯಕನಿರುವಾಗ ಅಥವಾ ಸ್ವಲ್ಪ ಬಿಗಿತ ಇರುವಾಗ ಅಥವಾ ಅದರಲ್ಲಿ ಸ್ವಲ್ಪ ಸಮಸ್ಯೆಗಳಿರುವಾಗ. ಆಗ ನೀನು ಹೊರಬಂದು, ’ಇದೊಂದು ಬಹಳ ಒಳ್ಳೆಯ ಸಿನೆಮಾ’ ಎಂದು ಹೇಳುವೆ.

ಅದೇ ರೀತಿಯಲ್ಲಿ, ಈ ಪ್ರಪಂಚವು ದೇವರಿಗೆ ಒಂದು ಸಿನೆಮಾದಂತೆ. ಹೇಗಿದ್ದರೂ ನೆರೆಗಳಿಂದ ಯಾರೂ ಸಾಯುವುದಿಲ್ಲ. ಅವರೆಲ್ಲರೂ ಇನ್ನೊಂದು ಶರೀರದಲ್ಲಿ ತಿರುಗಿ ಬರುತ್ತಾರೆ.

ನಮಗೂ ಮಾಡಲು ಏನಾದರೂ ಬೇಕು. ಪ್ರಪಂಚದಲ್ಲಿ ಯಾವುದೇ ಸಮಸ್ಯೆಗಳಿಲ್ಲವೆಂದು ಸುಮ್ಮನೆ ಕಲ್ಪಿಸಿಕೊಳ್ಳಿ, ಎಲ್ಲರೂ ಆರೋಗ್ಯವಾಗಿ ಮತ್ತು ಸಂತೋಷವಾಗಿದ್ದಾರೆ, ಆಗ ಅಲ್ಲಿ ಸಹಾನುಭೂತಿಗೆ ಯಾವುದೇ ಜಾಗವಿರದು. ಯಾರ ಕಡೆಗೆ ನೀವು ಸಹಾನುಭೂತಿ ಹೊಂದುವಿರಿ? ಸಹಾನುಭೂತಿ ಮತ್ತು ಇತರ ಎಲ್ಲಾ ಮೌಲ್ಯಗಳು ಮಾಯವಾಗುವುವು.

ಹಾಗಾಗಿ, ಈ ಪ್ರಪಂಚದಲ್ಲಿ ಸಮಸ್ಯೆಗಳಿರುವುದು ಯಾಕೆಂದರೆ, ಈ ಪ್ರಪಂಚದಲ್ಲಿ ನಮ್ಮ ಉದ್ದೇಶವನ್ನು ನಾವು ಅರಿತುಕೊಳ್ಳಲೆಂದು.

ಪ್ರಶ್ನೆ: ನಾನು ನನ್ನ ಪ್ರೇಮಾಸಕ್ತಿಗಳಿಂದ ಹೊರಬರುವುದು ಹೇಗೆ? ಒಬ್ಬರನ್ನು ಇಷ್ಟಪಡುವುದು ನನಗೆ ಬಹಳ ಸುಲಭವಾಗುತ್ತದೆ ಮತ್ತು ಅದು ನನಗೆ ತೊಂದರೆ ನೀಡುತ್ತದೆ.

ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ಬಹಳಷ್ಟು ಬಿಡುವಿನ ವೇಳೆಯಿದೆಯೆಂದು ನನಗನ್ನಿಸುತ್ತದೆ. ನೀನು ಕೆಲಸದಲ್ಲಿ ವ್ಯಸ್ತನಾಗಬೇಕು. ಪ್ರೇಮಾಸಕ್ತಿಗಳಲ್ಲಿ ಬೀಳಲು ಇದು ತುಂಬಾ ಚಿಕ್ಕ ವಯಸ್ಸು. ನೀನಿನ್ನೂ ಒಂದು ಹೂವಿನಂತೆ ಅರಳಿಲ್ಲ, ಈಗಲೂ ನೀನೊಂದು ಮೊಗ್ಗಾಗಿರುವೆ. ಯಾರೂ ನಿನ್ನನ್ನು ಈಗ ಹೊಸಕಿಹಾಕಲು ಬಿಡಬೇಡ. ಅದಕ್ಕೆ ಒಂದು ಸಮಯವಿದೆ. ಈಗ ನಿನ್ನ ಓದಿನ ಮೇಲೆ ಮಾತ್ರ ಗಮನವಿಡು. ಎಲ್ಲರನ್ನೂ ಮೋಡಿಮಾಡು ಆದರೆ ನಿಲ್ಲಬೇಡ, ಮುಂದೆ ಸಾಗು, ಅದು ಸೂತ್ರ.

ಪ್ರಶ್ನೆ: ಗುರುದೇವ, ’ಯೋಗಿಯ ಆತ್ಮಕಥೆ’ ಎಂಬ ಒಂದು ಪುಸ್ತಕದಲ್ಲಿ ಒಮ್ಮೆ ನಾನು, ಯಾವುದೋ ವಿಶೇಷ ತಂತ್ರವನ್ನುಪಯೋಗಿಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವ ಯೋಗಿಗಳು ಹಿಮಾಲಯಗಳಲ್ಲಿರುವರೆಂದು ಓದಿದ್ದೆ. ಇದು ನಿಜವೇ? ಹೌದಾದರೆ, ನಾವದನ್ನು ಅನುಭವಿಸಬಹುದೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಅಂತಹದ್ದೇನೂ ಇಲ್ಲ. ನೀನು ಹಿಮಾಲಯಗಳಿಗೆ ಹೋಗಿ ಅಲ್ಲೆಲ್ಲಾ ಹುಡುಕು, ಆದರೆ ನಿನಗೆ ಅಂತಹದ್ದೇನೂ ಸಿಗದು.

ಪ್ರಶ್ನೆ: ನಾವು ನಿಮಗೆ ಕೆಲವು ರಾಪಿಡ್ ಫಯರ್ ಪ್ರಶ್ನೆಗಳನ್ನು ಕೇಳಬಹುದೇ?

ಶ್ರೀ ಶ್ರೀ ರವಿ ಶಂಕರ್: ಸರಿ, ಮುಂದುವರೆಸಿ.

ನೀವು ಯಾರು?

ನಿಮ್ಮನ್ನೇ ಕೇಳಿಕೊಳ್ಳಲು ಒಳ್ಳೆಯ ಪ್ರಶ್ನೆ.

ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಯಾರಾಗಿದ್ದಿರಿ?

ಅದೊಂದು ರಹಸ್ಯ, ನಾನು ನಿಮಗೆ ಬೇರೆ ಯಾವತ್ತಾದರೂ ಹೇಳುವೆನು.

ದೇವರೆಂದರೆ ಏನು ಮತ್ತು ಯಾರು?

ಯಾವುದು ಮತ್ತು ಯಾರು ದೇವರಲ್ಲ.

ನಾವು ದೇವರನ್ನು ಹೇಗೆ ಅನುಭವಿಸಬೇಕು?

ಸುಮ್ಮನೆ ಮೌನವಾಗಿರಿ. ಅವನ ಬಗ್ಗೆ ಚಿಂತಿಸಬೇಡಿ, ಅವನು ನಿಮ್ಮ ಬಗ್ಗೆ ಚಿಂತಿಸಲು ಬಿಡಿ.

ಪ್ರಪಂಚವು ಹಿಂಸಾ-ಮುಕ್ತವೂ, ಒತ್ತಡ-ಮುಕ್ತವೂ ಹೇಗಾಗಬಲ್ಲದು?

ಆರ್ಟ್ ಆಫ್ ಲಿವಿಂಗ್‌ನ್ನು ಹರಡುವುದರಿಂದ.

ಭೂಮಿಯ ಭವಿಷ್ಯವೇನು?

ನಿಮ್ಮಂತಹ ಜನರಿಂದ ಉಜ್ವಲವಾಗಿದೆ.

ಧರ್ಮವೆಂದರೇನು?

ಯಾವುದು ನಿಮ್ಮನ್ನು ಸರಿಯಾದ ದಾರಿಯಲ್ಲಿ ಇಡುವುದೋ ಅದು ಧರ್ಮ.

ಯಾವುದು ಸತ್ಯ?

ಯಾವುದನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲವೋ ಮತ್ತು ಯಾವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಅದು.

ಧನಾತ್ಮಕ ಯಾವುದು ಮತ್ತು ಋಣಾತ್ಮಕ ಯಾವುದು?

ಯಾವುದು ನಿಮ್ಮನ್ನು ಮೇಲಕ್ಕೇರಿಸುವುದೋ ಅದು ಧನಾತ್ಮಕ ಮತ್ತು ಯಾವುದು ನಿಮ್ಮನ್ನು ಕೆಳಕ್ಕಿಳಿಸುವುದೋ ಅದು ಋಣಾತ್ಮಕ.

ಗುರುವೆಂದರೆ ಯಾರು?

ಈ ಪ್ರಶ್ನೆಗೆ ಉತ್ತರಿಸುವವರು.

ಮನಸ್ಸೆಂದರೇನು?

ಯಾವುದು ಪ್ರಶ್ನೆಯನ್ನು ಕೇಳುತ್ತಿದೆಯೋ ಅದು.

ಓದಿನ ಸಮಯದಲ್ಲಿ ನಿಮಗೆ ಒತ್ತಡದ ಅನುಭವವಾದಾಗ, ಸುಮ್ಮನೆ ವಿಶ್ರಾಮ ಮಾಡಿ. ಮತ್ತೆ, ಎಲ್ಲಾ ವಿದ್ಯಾರ್ಥಿಗಳು ಕ್ಯಾರೆಟ್ ತಿನ್ನಬೇಕು. ವಿಶೇಷವಾಗಿ ಕನ್ನಡಕಗಳನ್ನು ಧರಿಸಿರುವವರು, ನಿಮಗೆ ವಿಟಮಿನ್ ಎ ಬೇಕು ಮತ್ತು ಅದು ಕ್ಯಾರೆಟ್‌ಗಳೊಂದಿಗೆ ಬರುತ್ತದೆ. ಹಾಗಾಗಿ ಹೆಚ್ಚು ಕ್ಯಾರೆಟ್‌ಗಳನ್ನು ತಿನ್ನಲು ಶುರು ಮಾಡಿ.

ಸರಿಯಾದ ಆಹಾರವು ಬಹಳ ಆವಶ್ಯಕವಾಗಿದೆ. ನೀವು ಸರಿಯಾಗಿ ತಿಂದರೆ ನೀವು ಖಾಯಿಲೆ ಬೀಳಲಾರಿರಿ. ನಾವು ಖಾಯಿಲೆ ಬೀಳುವುದು ಯಾಕೆಂದರೆ ನಾವು ಚೆನ್ನಾಗಿ ತಿನ್ನುವುದಿಲ್ಲ. ಹೆಚ್ಚಾಗಿ ನಾವು ರುಚಿಕರವಾದ ಆಹಾರವನ್ನು ತಿನ್ನಲು ಬಯಸುತ್ತೇವೆ ಮತ್ತು ಯಾವ ಆಹಾರ ಶರೀರಕ್ಕೆ ಒಳ್ಳೆಯದೋ ಅದನ್ನಲ್ಲ. ಶರೀರಕ್ಕೆ ಒಳ್ಳೆಯದಾದ ಆಹಾರವನ್ನು ನಾವು ತಿನ್ನಬೇಕು.

ಒಂದು ವಾರಕ್ಕೆ ಎರಡು ಅಥವಾ ಮೂರು ಸಲ, ಒಂದು ಅಥವಾ ಎರಡು ನೀಮ್(ಬೇವು) ಗುಳಿಗೆಗಳನ್ನು ತೆಗೆದುಕೊಳ್ಳಿ. ಅದು ಹೊಟ್ಟೆಗೆ ಮತ್ತು ನರಮಂಡಲಕ್ಕೆ ಬಹಳ ಒಳ್ಳೆಯದು. ನಿಮಗೆ ಗೊತ್ತಾ, ಮಹಾತ್ಮಾ ಗಾಂಧಿಯವರ ಆಶ್ರಮದಲ್ಲಿ ಅವರು ಪ್ರತಿದಿನವೂ ಬೇವಿನ ಚಟ್ನಿಯನ್ನು ಇಡುತ್ತಿದ್ದರು, ಯಾಕೆಂದರೆ ಅದು ಮನಸ್ಸು, ಶರೀರ ಮತ್ತು ಹೊಟ್ಟೆಗೆ ಒಳ್ಳೆಯದು. ಅದು ಶರೀರದ ರೋಗನಿರೋಧಕಾ ವ್ಯವಸ್ಥೆಯನ್ನೂ ಬಲಪಡಿಸುತ್ತದೆ.

ತ್ರಿಫಲವೂ ಕೂಡಾ ಶರೀರಕ್ಕೆ ಬಹಳ ಒಳ್ಳೆಯದು. ತ್ರಿಫಲದೊಂದಿಗೆ ಶರೀರದಲ್ಲಿನ ಎಲ್ಲಾ ಅಸಮತೋಲನಗಳೂ ದೂರವಾಗುತ್ತವೆ.

ಹಾಗಾಗಿ, ನಾವು ಈ ಆಯುರ್ವೇದ ಔಷಧಿಗಳಲ್ಲಿ ಕೆಲವನ್ನು ತೆಗೆದುಕೊಳ್ಳಬೇಕು, ಅವುಗಳು ಶರೀರಕ್ಕೆ ಒಳ್ಳೆಯದು. ಮತ್ತು ನಾವು ಸ್ವಲ್ಪ ಜಪವನ್ನು ಕೂಡಾ ಮಾಡಬೇಕು.

ಓಂ ಎಂಬುದು ಕೇವಲ ಒಂದು ಮಂತ್ರವಲ್ಲ, ಅದೊಂದು ಔಷಧಿ ಕೂಡಾ ಎಂಬುದನ್ನು ಇವತ್ತು ನಾನೊಂದು ಲೇಖನದಲ್ಲಿ ಓದಿದೆ. ಆದುದರಿಂದ ನಾವು ಪ್ರತಿದಿನವೂ ಓಂನ್ನು ಉಚ್ಛರಿಸಬೇಕು; ಕಡಿಮೆಯೆಂದರೆ ಮೂರು ಸಲ.

ಓಂ ನಮೋ ನಾರಾಯಣ ಅಥವಾ ಓಂ ನಮಃ ಶಿವಾಯ ಎಂದು ಪ್ರತಿದಿನವೂ ಜಪಿಸಿ. ಇವುಗಳು ಮಹಾ ಮಂತ್ರಗಳೆಂದು ಕರೆಯಲ್ಪಡುತ್ತವೆ. ನಾವು ಪ್ರತಿದಿನವೂ ಮಂತ್ರಗಳನ್ನು ಜಪಿಸಬೇಕು.

ಹೀಗೆ, ಒಳ್ಳೆಯ ಆಹಾರ ಸೇವಿಸಿ, ಔಷಧಿಯನ್ನು ಬಳಸಿ, ಮಂತ್ರಗಳನ್ನು ಜಪಿಸಿ ಮತ್ತು ಮುಗುಳ್ನಗುತ್ತಾ ಇರಿ. ಸಮಸ್ಯೆಗಳು ಎಲ್ಲರ ಜೀವನದಲ್ಲೂ ಇವೆ. ಅವುಗಳು ಬರುತ್ತವೆ, ಹೋಗುತ್ತವೆ. ಯಾವುದೇ ಸಮಸ್ಯೆಯೂ ಶಾಶ್ವತವಾಗಿ ಉಳಿಯುವುದಿಲ್ಲ. ನನಗೇನು ಬೇಕೋ ಅದು ನನಗೆ ಸಿಗುವುದು ಎಂಬ ಈ ವಿಶ್ವಾಸವನ್ನು ಹೊಂದಿ ಮತ್ತು ಮುಂದಕ್ಕೆ ಸಾಗುತ್ತಾ ಇರಿ.