ಭಾನುವಾರ, ಜೂನ್ 23, 2013

ಮನಸ್ಸಿದ್ದಲ್ಲಿ ಮಾರ್ಗವಿದೆ

ಮುಖಾಮುಖಿ

ಬೆಂಗಳೂರು, ಭಾರತ
೨೩ ಜೂನ್ ೨೦೧೩

ಪ್ರಶ್ನೆ: ಗುರೂಜಿ, ನಿಮ್ಮ ದೈವಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ನೀವೋರ್ವ ಮಹಾನ್ ಮಾನವತಾವಾದಿಯಾಗುತ್ತೀರೆಂಬ ಕನಸು ನಿಮ್ಮ ಮನದಲ್ಲಿತ್ತೇ?

ಶ್ರೀ ಶ್ರೀ ರವಿ ಶಂಕರ್:  ನಾನು ಬೆಳೆದಿಲ್ಲವೆಂದು ಆಶಿಸುತ್ತೇನೆ (ನಗುತ್ತಾರೆ), ಮತ್ತು ನಾನು ಈಗಲೂ ಹದಿಹರೆಯದ, ಬೆಳೆಯಲು ನಿರಾಕರಿಸುವ ವ್ಯಕ್ತಿಯೆಂದು ಭಾವಿಸುತ್ತೇನೆ. ನಾನು ಹದಿಹರೆಯದವನಿದ್ದಾಗ, ಜಗಳಗಳನ್ನು ಒಪ್ಪುತ್ತಿರಲಿಲ್ಲ. ನಾನು ಎಂದಿಗೂ ಶಾಂತಿಯನ್ನು ತರಲು ಬಯಸುತ್ತಿದ್ದೆ. ಯಾವಗಾಲಾದರೂ, ಯಾರಾದರೂ ಜಗಳಮಾಡುತ್ತಿದ್ದರೆ, ನಾನು ಮಧ್ಯ ಪ್ರವೇಶಿಸಿ ಏನಾದರೂ ಮಾಡುತ್ತಿದ್ದೆ. ಆಂತರಿಕ ಶಾಂತಿಯು ಯಾರೂ ನೋಡದ, ಅರಿಯದ ಪ್ರಪಂಚದ ಬಾಗಿಲನ್ನು ತೆರೆಯುತ್ತದೆ, ಅಲ್ಲಿ ಅತಿ ಹೆಚ್ಚು ಹಂತಗಳ ಸತ್ಯವು ಬಹಿರಂಗಗೊಳ್ಳುತ್ತದೆ. ಆದರೆ ಶಾಂತಿಯು ಎಲ್ಲದರ ಮೂಲ ತತ್ವ. ಹಾಗಾಗಿ ನನ್ನ ಸಮಸ್ಯೆಯು, ನಿಮ್ಮೊಳಗೆ ಇದಕ್ಕಿಂತ ಹೆಚ್ಚಿನ ಆಯಾಮವೊಂದಿದೆ ಹಾಗೂ ನೀವು ನಿಮ್ಮೊಡನೆ ಶಾಂತಿ ಮತ್ತು ನಿರ್ಮಲತೆಯಿಂದ ಇದ್ದಾಗ ಅದನ್ನು ಪಡೆಯಬಹುದು ಎಂಬುದನ್ನು ತಿಳಿಯಪಡಿಸುವುದಾಗಿತ್ತು.

ಪ್ರಶ್ನೆ: ನಿಮ್ಮ ಬಾಲ್ಯದಲ್ಲಿ ನೀವು ಯಾರನ್ನು ಆದರ್ಶರನ್ನಾಗಿ ನೋಡಿದ್ದಿರಿ ಅಥವಾ ಯಾರಿಂದ ಸ್ಫೂರ್ತಿಗೊಂಡಿದ್ದಿರಿ?

ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ ನನ್ನ ತಾಯಿ. ನಾನು ಇನ್ನೂ ಉತ್ತಮವಾಗಬಹುದು ಎಂದು ಅವರು ಯಾವತ್ತೂ ಹೇಳುತ್ತಿದ್ದರು. ನನಗೆ, ಅವರು ಪರಿಪೂರ್ಣತೆಯ ಸಾಕಾರವಾಗಿದ್ದರು. ಅವರೇನೇ ಮಾಡಿದರೂ ಅದರಲ್ಲಿ ಅವರು ಪರಿಪೂರ್ಣರಾಗಿದ್ದರು.

ಎರಡನೆಯದಾಗಿ ನನ್ನ ಶಿಕ್ಷಕರು. ಅವರು ಮಹಾತ್ಮಾ ಗಾಂಧಿಯವರ ಶಿಕ್ಷಕರೂ ಆಗಿದ್ದರು, ಪಂಡಿತ್ ಸುಧಾಕರ ಚತುರ್ವೇದಿ. ಅವರು ಇನ್ನೂ ಜೀವಂತವಾಗಿದ್ದಾರೆ ಮತ್ತು ಅವರಿಗೆ ೧೧೮ ವರ್ಷ ವಯಸ್ಸು. ನನ್ನ ಶಾಲಾ ದಿನಗಳಲ್ಲಿ, ನನ್ನ ಬಿಡುವಿನ ವೇಳೆಯಲ್ಲಿ ನಾನು ಅವರಿಂದ ಕೆಲವು ವೈದಿಕ ಸ್ತೋತ್ರಗಳನ್ನು ಕಲಿತೆ. ಅವರೊಬ್ಬರು ಮಹಾನ್ ಪ್ರೇರಣಾತ್ಮಕ ವ್ಯಕ್ತಿ. ಅವರು ತಮ್ಮ ಜೀವನವನ್ನು ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟರು ಮತ್ತು ಸುಮಾರು ನಲುವತ್ತು ವರ್ಷಗಳನ್ನು ಮಹಾತ್ಮಾ ಗಾಂಧಿಯವರೊಂದಿಗೆ ಕಳೆದರು.

ಅವರೊಬ್ಬರು ಬ್ರಹ್ಮಚಾರಿಯಾಗಿದ್ದಾಗ, ಅವರು ಎಂಟು ದಲಿತ ಮತ್ತು ಹರಿಜನ ಮಕ್ಕಳನ್ನು ದತ್ತುಪಡೆದುಕೊಂಡರು, ಅವರನ್ನು ಬೆಳೆಸಿದರು ಮತ್ತು ಅವರನ್ನು ಐ.ಎ.ಎಸ್. ಅಧಿಕಾರಿಗಳನ್ನಾಗಿ ಮಾಡಿದರು. ಅವರ ಜೀವನ ಮತ್ತು ಮನುಕುಲಕ್ಕಿರುವ ಸಮರ್ಪಣೆಯು ಒಂದು ಮಹತ್ತರ ಸ್ಫೂರ್ತಿಯಾಗಿದೆ.

ಪ್ರಶ್ನೆ: ಶ್ರೀ ಶ್ರೀಯವರೆ, ಆರ್ಟ್ ಆಫ್ ಲಿವಿಂಗ್ ೩೨ ವರ್ಷಗಳಷ್ಟು ಹಳೆಯ ಒಂದು ಸಂಸ್ಥೆಯಾಗಿದೆ, ಅದು ೧೫೨ ದೇಶಗಳಲ್ಲಿ ಹರಡಿದೆ ಮತ್ತು ೩೭೦ ದಶಲಕ್ಷ ಜನರ ಜೀವನವನ್ನು ಸ್ಪರ್ಷಿಸಿದೆ. ನೀವು ಎದುರಿಸಬೇಕಾಗಿ ಬಂದ ಅತ್ಯಂತ ದೊಡ್ಡ ಸವಾಲು ಯಾವುದು?

ಶ್ರೀ ಶ್ರೀ ರವಿ ಶಂಕರ್: ಈ ಸವಾಲುಗಳು ನಿಜವಾಗಿ ನನಗೆ ನೆನಪಿಗೆ ಬರುತ್ತಿಲ್ಲ ಅಥವಾ ನಾನು ಅವುಗಳ ಲೆಕ್ಕ ಇಟ್ಟುಕೊಳ್ಳುವುದಿಲ್ಲ. ಹಲವಾರು ಸವಾಲುಗಳು ಬರುತ್ತವೆ, ಆದರೆ ನಿಮಗೆ ನಿಮ್ಮ ಗುರಿ ಸ್ಪಷ್ಟವಾಗಿರುವಾಗ ನೀವು ನಡೆಯುತ್ತಾ ಇರುವಿರಿ.

ಮೂಲಭೂತವಾದಿಗಳು ಇದನ್ನು ಇಷ್ಟಪಡುವುದಿಲ್ಲ ಯಾಕೆಂದರೆ, ಜನರು ಹೆಚ್ಚು ಸ್ವೀಕರಿಸುವವರೂ, ಹೆಚ್ಚು ವಿಶಾಲ ದೃಷ್ಟಿಯವರೂ ಆಗುವುದರಿಂದ ಅದು ಅವರ ನೆಲೆಯನ್ನು ಕಿರಿದಾಗಿಸುತ್ತದೆ. ಕೆಲವು ಜನರು ಕೇವಲ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ; ಸಣ್ಣ ಕೆಲಸಗಳನ್ನು ಮಾಡುವುದರಿಂದ ತಮಗೇನು ಲಾಭವಿದೆಯೆಂದು ಮತ್ತು ವಿವಿಧ ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ. ಧರ್ಮದ ವಿರುದ್ಧ ಅವರು ಬೇರೆ ಬೇರೆ ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ.

ಆರಂಭದಲ್ಲಿ ನಾನು ಧ್ಯಾನ ಕಲಿಸುತ್ತಾ ಹೋಗುತ್ತಿದ್ದಾಗ, ಕೆಲವು ಜನರು ಯೋಚಿಸಿದರು ಅದು ವೂಡೂವಿನಂತೆ; ಒಬ್ಬ ಸಾಮಾನ್ಯ ವ್ಯಕ್ತಿಗೆ ಇರುವಂತಹದ್ದಲ್ಲ ಎಂದು. ಯಾರಾದರೂ ಧ್ಯಾನ ಮಾಡಿದರೆ, ಆಗ ಅವರು ಯಾರೋ ಅತಿರೇಕಿ ಎಂದು ಅವರು ಯೋಚಿಸಿದರು. ಇವತ್ತು ಕಾಲ ಬದಲಾಗಿದೆ. ಪಕ್ಷಪಾತವು ಕಡಿಮೆಯಾಗಿದೆ.

ಮೊದಲು, ನಾನು ಧರಿಸುತ್ತಿದ್ದ ಉಡುಪು ಮತ್ತು ನಾನು ಕಾಣಿಸುತ್ತಿದ್ದ ರೀತಿ, ಜಾತಿ ಮತ್ತು ಧರ್ಮ, ಎಲ್ಲವೂ ಗಣ್ಯವಾಗಿದ್ದವು. ಒಂದು ಕಾಲದಲ್ಲಿ ಎಲ್ಲವೂ ಒಂದು ಅಡ್ಡಿಯಾಗಿತ್ತು, ಯಾಕೆಂದರೆ ಅದೊಂದು ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ರೂಢಿಯಾಗಿರಲಿಲ್ಲ. ಆದರೆ ಈಗ ಭೇದಭಾವವು ಬಹಳಷ್ಟು ಕಡಿಮೆಯಾಗಿದೆ.

ಪ್ರಶ್ನೆ: ನೀವು ದಿನದಲ್ಲಿ ೨೦ ಗಂಟೆ ಕೆಲಸ ಮಾಡುತ್ತೀರೆಂಬುದನ್ನು ನಾವು ಕೇಳಿದ್ದೇವೆ. ನಿಮಗೆ ಪ್ರೇರಣೆ ಮತ್ತು ಸ್ಫೂರ್ತಿ ಸಿಗುವುದು ಎಲ್ಲಿಂದ?

ಶ್ರೀ ಶ್ರೀ ರವಿ ಶಂಕರ್: ನೀವು ಯಾವುದಾದರೂ ಕೆಲಸ ಮಾಡಲು ಬಯಸುವಾಗ, ಅಲ್ಲಿ ಶಕ್ತಿಯಿರುತ್ತದೆ. ಒಂದು ಹಳೆಯ ಮಾತಿದೆ, ’ಮನಸ್ಸಿದ್ದಲ್ಲಿ ಮಾರ್ಗವಿದೆ’ ಎಂದು. ನಾನು ಯಾವತ್ತೂ ನಂಬಿಕೆಯಿರಿಸಿದ ಒಂದು ವಿಷಯವೆಂದರೆ, ಯಾವುದು ನಿಮ್ಮ ಸ್ವಭಾವದಲ್ಲಿಲ್ಲವೋ, ಯಾವುದು ನಿಮಗೆ ಸಹಜವೆಂದು ಅನ್ನಿಸುವುದಿಲ್ಲವೋ ಅದನ್ನು ಮಾಡಬೇಡಿ ಎಂಬುದು. ನಾನು ಕೆಲಸ ಮಾಡುವಾಗ, ನಾನು ಆಗಲೂ ನನ್ನ ಪರಮಾತ್ಮನೊಂದಿಗೆ ಸಂಪರ್ಕದಲ್ಲಿರುತ್ತೇನೆ. ಹಾಗಾಗಿ ಬಹುಶಃ ನನಗೆ ಅಷ್ಟೊಂದು ಸುಲಭವಾಗಿ ಬಳಲಿಕೆಯೆನ್ನಿಸುವುದಿಲ್ಲ.

ಪ್ರೇಮವೆಂಬುದು ಭೂಮಿಯ ಮೇಲಿನ ಅತ್ಯಂತ ದೊಡ್ಡ ಶಕ್ತಿಯೆಂದು ನನಗನ್ನಿಸುತ್ತದೆ ಮತ್ತು ನಾವು ನಮ್ಮೊಂದಿಗೆ ಸಂಬಂಧ ಹೊಂದಿದಾಗ, ನಮಗೆ ನಮ್ಮೊಳಗೆ ಒಂದು ಅಗಾಧವಾದ ಚೈತನ್ಯದ ಮೂಲವು ಕಾಣಸಿಗುತ್ತದೆ ಹಾಗೂ ನಂತರ ಕಾರ್ಯವು ಸಹಜವಾಗಿಯೇ ಆಗುತ್ತದೆ, ಅದೊಂದು ಪ್ರಯತ್ನವಾಗಿರುವುದಿಲ್ಲ. ಯಾವಾಗೆಲ್ಲಾ ಪ್ರಯತ್ನವಿರುವುದೋ, ಆಗ ಅದು ಶಕ್ತಿಯನ್ನು ಬರಿದುಮಾಡುತ್ತದೆ. ಆದರೆ, ಕಾರ್ಯವು ಸಹಜವಾಗಿ ಆಗುವಾಗ, ಉತ್ಸಾಹ ಮತ್ತು ಶಕ್ತಿಯು ಯಾವಾಗಲೂ ನಿಮ್ಮೊಂದಿಗಿರುವುದನ್ನು ನೀವು ನೋಡುವಿರಿ.

ಪ್ರಶ್ನೆ: ಶ್ರೀ ಶ್ರೀಯವರೆ, ಯಶಸ್ಸಿನ ಪರಿಕಲ್ಪನೆಯನ್ನು ನಾನು ನನ್ನ ಮಕ್ಕಳಿಗೆ ಸರಳವಾದ ನೇರ ಶಬ್ದಗಳಲ್ಲಿ ವಿವರಿಸುವುದು ಹೇಗೆ? 

ಶ್ರೀ ಶ್ರೀ ರವಿ ಶಂಕರ್: ಮಕ್ಕಳು ಯಶಸ್ಸು ಅಥವಾ ಸೋಲಿನ ಬಗ್ಗೆ ತಲೆಕೆಡಿಸುವುದಿಲ್ಲ. ನಾನು ಹೇಳುವುದೇನೆಂದರೆ, ಮಕ್ಕಳನ್ನು ಅವರಿರುವಂತೆಯೇ ಬಿಡಿ ಮತ್ತು ಅವರ ಮನಸ್ಸಿನಲ್ಲಿ ಯಶಸ್ಸು ಅಥವಾ ಸೋಲಿನ ಪರಿಕಲ್ಪನೆಯನ್ನು ಹಾಕಲು ಪ್ರಯತ್ನಿಸಬೇಡಿ. ಅವರು ಜೀವನವನ್ನು ಅದರ ಸಂಪೂರ್ಣತೆಯಲ್ಲಿ ಅನುಭವಿಸಲು ಬಿಡಿ; ಅದು ಅವರಲ್ಲಿಗೆ ಹೇಗೆ ಬರುವುದೋ ಹಾಗೆ.

ದೊಡ್ಡವರಿಗೆ ನನ್ನಲ್ಲೊಂದು ಬೇರೆಯ ಸೂತ್ರವಿದೆ. ದೊಡ್ಡವರು, ನಿಮ್ಮ ಯಶಸ್ಸನ್ನು, ನೀವು ನಗುವ ಗಂಟೆಗಳ ಸಂಖ್ಯೆಗಳಲ್ಲಿ ಅಳೆಯಿರಿ. ನಿಮ್ಮ ನಗು ಮತ್ತು ನಿಮ್ಮ ವಿಶ್ವಾಸವು ನಿಮ್ಮ ಯಶಸ್ಸನ್ನು ಸೂಚಿಸುತ್ತವೆ. ನಿಮ್ಮಲ್ಲಿರುವ ನಿರ್ಭಯತೆ ಮತ್ತು ಜನರೊಂದಿಗೆ ಹಂಚುವ ಹಾಗೂ ಅವರ ಬಗ್ಗೆ ಕಾಳಜಿ ವಹಿಸುವ ಸಾಮರ್ಥ್ಯವು ನಿಮ್ಮ ಯಶಸ್ಸನ್ನು ಸೂಚಿಸುತ್ತವೆ.

ಮಕ್ಕಳ ಬಗ್ಗೆ ಹೇಳುವುದಾದರೆ, ಫಲಿತಾಂಶವು ಏನೇ ಆಗಿರಲಿ, ಅದು ಪರವಾಗಿಲ್ಲವೆಂದು ಅವರಿಗೆ ಹೇಳಿ. ಅವರೊಂದು ಬಹುಮಾನವನ್ನು ಗೆಲ್ಲಲಿ ಅಥವಾ ಅವರು ಕಳೆದುಕೊಳ್ಳಲಿ, ಅದು ಪರವಾಗಿಲ್ಲ. ಅವರೊಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಲಿ ಅಥವಾ ಅವರು ಅಷ್ಟೊಂದು ಚೆನ್ನಾಗಿ ಮಾಡಿಲ್ಲದೇ ಇರಲಿ, ಅದು ಪರವಾಗಿಲ್ಲ. ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು, ಸ್ವಲ್ಪ ಹೆಚ್ಚು ಓದಬೇಕು ಮತ್ತು ಸ್ವಲ್ಪ ಹೆಚ್ಚು ಪ್ರಯತ್ನವನ್ನು ಹಾಕಬೇಕು ಎಂಬುದನ್ನು ಸುಮ್ಮನೆ ಅವರಿಗೆ ನೆನಪಿಸಿ. ಅವರು ಜೀವನದಲ್ಲಿ ಯಶಸ್ವಿಯಾಗಬೇಕೆಂಬ ಈ ಪರಿಕಲ್ಪನೆಯನ್ನು ಹೇರಲು ಪ್ರಯತ್ನಿಸಬೇಡಿ. ಇದೊಂದು ದೊಡ್ಡ ಒತ್ತಡವಾಗಬಲ್ಲದು. ಹಲವಾರು ಹದಿಹರೆಯದವರಿಗೆ, ಯಶಸ್ವಿಯಾಗುವ ಈ ಅಗಾಧವಾದ ಒತ್ತಡವಿರುತ್ತದೆ ಮತ್ತು ಅವರು ಹಲವಾರು ಮನೋದೈಹಿಕ ಅಸ್ವಸ್ಥತೆಗಳಿಗೆ ತುತ್ತಾಗುತ್ತಾರೆ. ಹಾಗಾಗಿ ನಾನು ಹೇಳುವುದೇನೆಂದರೆ, ಮಕ್ಕಳಲ್ಲಿರುವ ಸ್ವಾಭಾವಿಕ ಹಾಗೂ ಸೃಜನಾತ್ಮಕ ಪ್ರವೃತ್ತಿಯನ್ನು ಸಂರಕ್ಷಿಸಬೇಕು.

ಪ್ರಶ್ನೆ: ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಾನು ನನ್ನನ್ನು ಹೇಗೆ ಸಜ್ಜುಗೊಳಿಸಬಹುದು?

ಶ್ರೀ ಶ್ರೀ ರವಿ ಶಂಕರ್: ಚುರುಕಿನ ಕೆಲಸ, ಕಠಿಣ ಪರಿಶ್ರಮ ಮತ್ತು ಹೊಸ ವಿಚಾರಗಳಿಗೆ ಮನಸ್ಸನ್ನು ತೆರೆದಿರುವುದು ಹಾಗೂ ಯಾವುದೇ ವಿಚಾರಕ್ಕೆ ಜೋತುಬೀಳಬೇಡ. ಇವುಗಳೆಲ್ಲದರಲ್ಲಿ ಅತ್ಯಂತ ಹೆಚ್ಚು ಪ್ರಮುಖವಾದುದೆಂದರೆ ಒಳಗೆ ಆಳದಲ್ಲಿ ನಿರಾಳವಾಗಿರುವುದು.

ಪ್ರಶ್ನೆ: ನನಗೆ ನಿಕಟವಾಗಿರುವ ಜನರು ಯಶಸ್ಸಿನ ಬಗ್ಗೆ ನನಗಿರುವುದಕ್ಕಿಂತ ಒಂದು ವಿಭಿನ್ನವಾದ ಪರಿಕಲ್ಪನೆಯನ್ನು ಹೊಂದಿದ್ದರೆ ಏನು ಮಾಡುವುದು? 

ಶ್ರೀ ಶ್ರೀ ರವಿ ಶಂಕರ್: ಅವರು ಅವರದ್ದೇ ಆದ ಪರಿಕಲ್ಪನೆಯನ್ನು ಹೊಂದಲಿ ಬಿಡು. ಯಾರಿಗೆ ಬೇಕಾದರೂ ಯಶಸ್ಸಿನ ಬಗ್ಗೆ ತಮ್ಮದೇ ಆದ ಪರಿಕಲ್ಪನೆಯಿರಲು ಸಾಧ್ಯವಿದೆ. ಯಶಸ್ಸಿನ ಬಗ್ಗೆ ಇರುವ ಅವರ ಪರಿಕಲ್ಪನೆಯನ್ನು ಬದಲಾಯಿಸಲು ನಿನಗೆ ಸಾಧ್ಯವಿಲ್ಲ. ನೀನು ನಿನ್ನ ಕಲ್ಪನೆ, ನಿನ್ನ ದೃಷ್ಟಿಕೋನಕ್ಕೆ ಕಟ್ಟುಬಿದ್ದಿರು. ಜೀವನದಲ್ಲಿ ನೀನು ಏನನ್ನಾದರೂ ಸಾಧಿಸಲು ಬಯಸುವೆ ಎಂದಿಟ್ಟುಕೊಳ್ಳೋಣ; ಒಂದು ನಿರ್ದಿಷ್ಟವಾದ ಗುರಿ. ನೀನು ಹಲವಾರು ಸೋಲುಗಳನ್ನು ಎದುರಿಸಲೂಬಹುದು, ಚಿಂತಿಸಬೇಡ. ನಿನ್ನ ಗುರಿಯು ಮುಖ್ಯವಾದುದು ಮತ್ತು ನೀನು ಅದರ ಕಡೆಗೆ ಕೆಲಸ ಮಾಡುತ್ತಾ ಇರಬೇಕು. ಪ್ರತಿಯೊಂದು ಸೋಲೂ ಯಶಸ್ಸಿನ ಕಡೆಗಿರುವ ಮೆಟ್ಟಿಲಾಗಿದೆ.

ನಾವು ಯಶಸ್ಸಿನ ಬಗ್ಗೆ ಅತಿಯಾಗಿ  ಕಾತುರರಾಗಿರಬಾರದು, ಆಗ ಅದು ಯಶಸ್ವಿಯಾಗಲು ಒಂದು ಅಡ್ಡಿಯಾಗುತ್ತದೆ. ನಿಮ್ಮ ಕಾರ್ಯದಲ್ಲಿನ, ನಿಮ್ಮ ಪ್ರವೃತ್ತಿಯಲ್ಲಿನ ಪರಿಪೂರ್ಣತೆಯನ್ನು ಸುಧಾರಿಸಿಕೊಳ್ಳಿ ಮತ್ತು ತನ್ನಿಂತಾನೇ, ಅನಾಯಾಸವಾಗಿ ಅಲ್ಲಿ ಫಲಿತಾಂಶ ಸಿಗುವುದನ್ನು ನೀವು ಕಾಣುವಿರಿ.

ಪ್ರಶ್ನೆ: ಯಶಸ್ವಿಯಾಗಲು ಅಪಾಯವನ್ನು ತೆಗೆದುಕೊಳ್ಳುವುದು ಅಷ್ಟೊಂದು ಆವಶ್ಯಕವಾಗಿರುವಾಗ, ಒಬ್ಬರಿಗೆ ಜೀವನದಲ್ಲಿ ಸುರಕ್ಷತೆಯ ಅನುಭವವಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ವಿಶ್ವಾಸ, ಮತ್ತು ಒಳಕ್ಕೆ ಆಳವಾಗಿ ಹೋಗುವುದರಿಂದ ನೀವು ವಿಶ್ವಾಸವನ್ನು ಪಡೆಯುತ್ತೀರಿ. ಕೆಲವು ನಿಮಿಷಗಳ ಧ್ಯಾನವು ನಿಮಗೆ ಆ ವಿಶ್ವಾಸವನ್ನು ನೀಡುವುದು. ನಿಮ್ಮದೇ ಜೀವನದ ಕಡೆಗೆ ತಿರುಗಿ ನೋಡಿ. ಒಂದು ನಿರ್ದಿಷ್ಟ ಪರಿಸ್ಥಿತಿಯಿಂದ ನೀವು ಹೇಗೆ ಹೊರಬರಬಲ್ಲಿರಿ ಎಂಬುದರ ಬಗ್ಗೆ ನೀವು ಚಿಂತಿತರಾಗಿದ್ದ ಹಲವಾರು ಸನ್ನಿವೇಶಗಳು ನಿಮಗೆದುರಾಗಿದ್ದವು ಮತ್ತು ಅವುಗಳೆಲ್ಲವನ್ನೂ ಸಾಕಷ್ಟು ಯಶಸ್ವಿಯಾಗಿ ದಾಟಲು ನಿಮಗೆ ಸಾಧ್ಯವಾಯಿತು. ನೀವು ನಿಮ್ಮ ಗತಕಾಲದ ಕಡೆಗೆ ನೋಡಿದರೆ, ಪ್ರತಿಯೊಂದು ಘಟನೆಯೂ ನಿಮ್ಮನ್ನು ಬಲಶಾಲಿಗಳನ್ನಾಗಿಸಿದೆ. ಕೆಟ್ಟ ಘಟನೆಗಳು ಎಲ್ಲೋ ನಿಮ್ಮ ಆಂತರಿಕ ಶಕ್ತಿಗೆ ಸಹಾಯ ಮಾಡಿವೆ ಮತ್ತು ಒಳ್ಳೆಯ ಘಟನೆಗಳು, ನಿಮ್ಮ ಸಾಮರ್ಥ್ಯದಲ್ಲಿ ಮತ್ತು ನಿಮ್ಮ ಸೃಜನಶೀಲತೆಯಲ್ಲಿ ನಿಮಗೆ ಇನ್ನೂ ಹೆಚ್ಚಿನ ವಿಶ್ವಾಸವನ್ನು ನೀಡಿವೆ.

ಹಾಗಾಗಿ ನಾವು ಕೇವಲ ಪರಿಸ್ಥಿತಿಗಳನ್ನು; ಒಳ್ಳೆಯದಿರಲಿ ಅಥವಾ ಕೆಟ್ಟದಿರಲಿ; ನಮ್ಮ ಪ್ರಗತಿಗಾಗಿ ಉಪಯೋಗಿಸಬೇಕು ಮತ್ತು ನಾನು ಹೇಳುತ್ತೇನೆ ಕೇಳಿ, ಅದು ನಮ್ಮ ಬೆಳವಣಿಗೆಗಾಗಿ.

ಪ್ರಶ್ನೆ: ಯಾವುದರಲ್ಲಾದರೂ ನಾವು ನಮ್ಮ ಅತ್ಯುತ್ತಮ ಪ್ರಯತ್ನ ನೀಡಿದ್ದೇವೆಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್:  ನಿನ್ನ ಹೊಟ್ಟೆ ತುಂಬಿದಾಗ ನಿನಗೆ ಹೇಗೆ ತಿಳಿಯುತ್ತದೆ? ನೀನು ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ಓಡಿದೆಯೆಂಬುದು ನಿನಗೆ ಹೇಗೆ ತಿಳಿಯುತ್ತದೆ? ಅದು ಸ್ಪಷ್ಟವಾಗಿರುತ್ತದೆ! ಅದು ನಿನ್ನ ಕಾಲಿನಲ್ಲಿರುವ ನೋವಿನಂತೆ, ಮತ್ತು ನಿನ್ನ ಕಾಲಿನಲ್ಲಿ ನೋವಿದೆಯೆಂದು ನಿನಗೆ ಬೇರೆ ಯಾರೂ ಹೇಳಬೇಕಾಗಿಲ್ಲ! ನೀನು ಸಾಕಷ್ಟು ತಿಂದಿರುವೆಯೆಂದು ನಿನಗೆ ಬೇರೆ ಯಾರೂ ಹೇಳಬೇಕಾಗಿಲ್ಲ. ಅದೇ ರೀತಿಯಲ್ಲಿ, ನೀನು ನಿನ್ನ ನೂರು ಶೇಕಡಾವನ್ನು ಹಾಕಿದಾಗ, ಒಳಗಿನಿಂದ ಒಂದು ನಿರ್ದಿಷ್ಟವಾದ ತೃಪ್ತಿಯು ಸಿಗುತ್ತದೆ ಮತ್ತು "ನಾನು ನನ್ನಿಂದ ಸಾಧ್ಯವಿದ್ದುದನ್ನು ಮಾಡಿರುವೆನು ಮತ್ತು ಇನ್ನೂ ಹೆಚ್ಚಿಗೆ ಮಾಡಲು ನನಗೆ ಸಾಧ್ಯವಿಲ್ಲ" ಎಂದು ಹೇಳಲು ನಿನಗೆ ಸಾಧ್ಯವಾಗುತ್ತದೆ.

ಆದರೆ ನಿನ್ನ ಕಾರ್ಯದಲ್ಲಿ, ನಿನ್ನ ಉತ್ಪಾದನೆಯಲ್ಲಿ ಏನಾದರೂ ಕೊರತೆಯಿದ್ದರೆ ಆಗ ನಿನ್ನ ಮನಸ್ಸು, "ನಾನು ಇನ್ನೂ ಸ್ವಲ್ಪ ಉತ್ತಮವಾಗಿ ಮಾಡಬೇಕಾಗಿತ್ತು" ಎಂದು ಹೇಳುತ್ತದೆ. ಕುಳಿತುಕೊಂಡು ಭೂತಕಾಲದ ಬಗ್ಗೆ ಕೊರಗುವ ಬದಲು ನೀನು ಸುಮ್ಮನೇ ಮುಂದಕ್ಕೆ ಸಾಗಬೇಕು, ಆಗಿಹೋದುದನ್ನು ಸ್ವೀಕರಿಸಬೇಕು ಮತ್ತು ಮುಂದಿನ ಸಲ ನೀನು ನಿನ್ನ ನೂರು ಶೇಕಡಾವನ್ನು ಹಾಕುವೆಯೆಂಬುದಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ನೂರು ಶೇಕಡಾವನ್ನು ಹಾಕುವ ಈ ಸಂಕಲ್ಪವೇ, ನೀನು ಆ ನೂರು ಶೇಕಡಾವನ್ನು ಹಾಕುವಂತೆ ಮಾಡುತ್ತದೆ.

ಪ್ರಶ್ನೆ: ನಿಜವಾದ ಪ್ರೇಮದ ಸಂಕೇತಗಳೇನು?

ಶ್ರೀ ಶ್ರೀ ರವಿ ಶಂಕರ್: ಅದಕ್ಕೆ ಯಾವುದೇ ಪ್ರಮಾಣ ಬೇಕಾಗಿಲ್ಲ. ಪ್ರೇಮವನ್ನು ಕೇವಲ ಹೃದಯದಲ್ಲಿ ಅನುಭವಿಸಬಹುದು, ತಲೆಯಲ್ಲಿ ವಿವರಿಸಲು ಸಾಧ್ಯವಿಲ್ಲ. ಪ್ರೇಮವೆಂದರೆ ಅಡಗಿಸಿಡಲು ಅಥವಾ ವ್ಯಕ್ತಪಡಿಸಲು ಸಾಧ್ಯವಿಲ್ಲದಂತಹದ್ದು. ಪ್ರಪಂಚದ ಸುತ್ತಲಿರುವ ಪ್ರೇಮಿಗಳ ನೋವು ಇದುವೇ, ಅವರಿಗೆ ಅದನ್ನು ನೂರು ಶೇಕಡಾ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ ಮತ್ತು ಹಾಗಾಗಿ ಅವರು ಅಸಂಪೂರ್ಣತೆಯನ್ನು ಅನುಭವಿಸುತ್ತಾರೆ. ಹಾಗೂ ಅವರಿಗೆ ಅದನ್ನು ಮುಚ್ಚಿಡಲೂ ಸಾಧ್ಯವಾಗುವುದಿಲ್ಲ, ಅದು ಹಾಗೆಯೇ ಕಾಣಿಸಿಕೊಳ್ಳುತ್ತದೆ. ನೀವದನ್ನು ಅಡಗಿಸಿಡಲು ಹೆಚ್ಚು ಪ್ರಯತ್ನಿಸಿದಷ್ಟೂ, ಅದು ನಿಮ್ಮ ಕಾರ್ಯಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಪ್ರಶ್ನೆ: ಆಳವಾದ ಪ್ರೇಮದೊಂದಿಗೆ ನಾವು ಪ್ರೇಮಿಸುವ ವ್ಯಕ್ತಿಯನ್ನು ಕಳೆದುಕೊಳ್ಳುವ ಭಾವನೆ ಬರುತ್ತದೆ. ಇದನ್ನು ಜಯಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಎಲ್ಲೋ ಪ್ರೇಮ, ಭಯ ಮತ್ತು ದ್ವೇಷ ಇವುಗಳೆಲ್ಲವೂ ಸಂಬಂಧ ಹೊಂದಿವೆ. ಜ್ಞಾನದ ಮೂಲಕ ಮಾತ್ರ ನಿಮಗೆ ಪ್ರೇಮವನ್ನು ಪರಿಶುದ್ಧವಾಗಿಡಲು ಸಾಧ್ಯ; ಅದನ್ನು ದ್ವೇಷವಾಗಿ ಅಥವಾ ಭಯವಾಗಿ ತಿರುಗಿಸದೇ ಇರುವ ಮೂಲಕ. ಅದಕ್ಕಾಗಿಯೇ ಜ್ಞಾನ, ತಿಳುವಳಿಕೆ ಮತ್ತು ಆಧ್ಯಾತ್ಮಿಕತೆಗಳು ಆವಶ್ಯಕವಾಗಿರುವುದು. ತಲೆ ಮತ್ತು ಹೃದಯ ಇವುಗಳೆರಡನ್ನೂ ತಮ್ಮ ತಮ್ಮ ಸರಿಯಾದ ಜಾಗಗಳಲ್ಲಿರಿಸಲು ಅವುಗಳು ಸಹಾಯ ಮಾಡುತ್ತವೆ.

ಪ್ರಶ್ನೆ: ಶ್ರೀ ಶ್ರೀಯವರೆ, ಪ್ರೇಮವು ನಮ್ಮ ಅಸ್ತಿತ್ವವಾಗಿದ್ದರೆ, ಕೇವಲ ಕೆಲವೇ ಜನರ ಕಡೆಗೆ ನಾವು ಪ್ರೇಮವನ್ನು ಅನುಭವಿಸುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಪ್ರೇಮದ ಅಭಿವ್ಯಕ್ತಿಯು ಬೇರೆ ಬೇರೆ ವಯಸ್ಸಿನ ಗುಂಪುಗಳೊಂದಿಗೆ ಬೇರೆ ಬೇರೆಯಾಗಿದೆ. ಮಕ್ಕಳೊಂದಿಗೆ ನಿಮ್ಮ ಪ್ರೇಮವು ಬೇರೆಯಾಗಿದೆ, ದೊಡ್ಡವರೊಂದಿಗೆ ನಿಮ್ಮ ಪ್ರೇಮವು ವಿಭಿನ್ನವಾಗಿದೆ ಮತ್ತು ಹಿರಿಯರೊಂದಿಗೆ ನಿಮ್ಮ ಪ್ರೇಮ ವಿಭಿನ್ನವಾಗಿದೆ. ಪ್ರೇಮಕ್ಕೆ ಹಲವಾರು ವರ್ಣಗಳಿವೆ. ದೇವರ ಕಡೆಗಿರುವ ಪ್ರೇಮ, ದೇಶ ಪ್ರೇಮ, ಭೂಮಿಯ ಮೇಲಿನ ಪ್ರೇಮ, ಮರಗಳ ಮೇಲಿನ ಪ್ರೇಮ, ಇವುಗಳೆಲ್ಲವೂ ನಿಮ್ಮ ಅಸ್ತಿತ್ವವೇ ಆಗಿರುವ ಒಂದೇ ವಿಷಯದ ಬೇರೆ ಬೇರೆ ಅಭಿವ್ಯಕ್ತಿಗಳಾಗಿವೆ; ಅದುವೇ ಪ್ರೇಮವಾಗಿದೆ.

ಪ್ರಶ್ನೆ: ಶ್ರೀ ಶ್ರೀಯವರೆ, ಹೆಚ್ಚಾಗಿ ವಿವಾಹವಾಗಿ ಕೆಲವು ವರ್ಷಗಳ ಬಳಿಕ ಪ್ರೇಮವು ಸತ್ತುಹೋಗುತ್ತದೆ. ಎಂದೆಂದಿಗೂ ಪ್ರೇಮದಲ್ಲಿರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಸಂಗಾತಿಯ ಪ್ರೀತಿಯ ಬಗ್ಗೆ ಯಾವತ್ತೂ ಸಂಶಯಿಸಬೇಡಿ ಅಥವಾ ಅವರಿಗೆ ನಿಮ್ಮ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸಲು ಅವರಲ್ಲಿ ಕೇಳಬೇಡಿ. ಏನನ್ನಾದರೂ ಸಾಬೀತುಪಡಿಸಲಿರುವ ಭಾರವು ಬಹಳ ದೊಡ್ಡದಾಗಿದೆ, ಅದು ಭಯಾನಕವಾದುದು. ಯಾರಾದರೂ ನಿಮ್ಮಲ್ಲಿ, ನೀವು ಅವರನ್ನು ನಿಜವಾಗಿಯೂ ಪ್ರೀತಿಸುತ್ತೀರೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಹೇಳಿದರೆ, ಅದು ನಿಮ್ಮ ಹೃದಯದ ಮೇಲೆ ಬಹಳ ಭಾರ ಹಾಕುತ್ತದೆ. ಒಬ್ಬರ ಪ್ರೀತಿಯ ಬಗ್ಗೆ ಯಾವತ್ತೂ ಸಾಕ್ಷ್ಯವನ್ನು ಕೇಳಬೇಡಿ.

ಕೆಲವೊಮ್ಮೆ ಅವರ ಅಭಿವ್ಯಕ್ತಿಗಳು ಬದಲಾಗಲೂಬಹುದು, ಅದು ಸ್ವಲ್ಪ ಬೇರೆ ರೀತಿಯಾಗಲೂಬಹುದು. ನಿಮ್ಮ ಕಡೆಗಿರುವ ಅವರ ಗಮನವು ಕಡಿಮೆಯಾಗುತ್ತಿದೆಯೆಂದು ನಿಮಗನ್ನಿಸಿದರೆ, ಅವರು ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ದೂರುವ ಬದಲು, "ನೀನು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವೆ?" ಎಂದು ಅವರಲ್ಲಿ ಕೇಳಿ. ಆಗ, ಅವರು ನಿಮ್ಮನ್ನು ಅಷ್ಟೊಂದು ಪ್ರೀತಿಸುತ್ತಿಲ್ಲವಾದರೂ ಸಹ ಅವರು ನಿಮ್ಮನ್ನು ಹೆಚ್ಚು ಪ್ರೀತಿಸಲು ತೊಡಗುವರು. ಪ್ರೇಮದ ಅಭಿವ್ಯಕ್ತಿಯ ಕಡೆಗೆ ಒಬ್ಬರು ಒಂದು ಧನಾತ್ಮಕ ಮೇಲ್ನೋಟವನ್ನು ಹೊಂದಬೇಕು. ಇದೊಂದು ಸೂಕ್ಷ್ಮ ಸಂಗತಿಯಾಗಿದೆ. ಒಬ್ಬರು ನಿಮ್ಮನ್ನು ಪ್ರೀತಿಸುವಂತೆ ನೀವು ಬಲವಂತಪಡಿಸಲು ಸಾಧ್ಯವಿಲ್ಲ. ಅದು ಅಸಾಧ್ಯ. ಒಬ್ಬರನ್ನು ಪ್ರೀತಿಸುವಂತೆ ನಿಮ್ಮನ್ನು ನೀವೇ ಬಲವಂತಪಡಿಸುವುದು ಕೂಡಾ ಅಸಾಧ್ಯವಾದುದು. ಅದೆಲ್ಲವೂ ನಿಮ್ಮೊಳಗಿನಿಂದ ಒಂದು ಸಹಜವಾದ ಮತ್ತು ಸೂಕ್ಷ್ಮವಾದ ರೀತಿಯಲ್ಲಿ ಉದಯಿಸಬೇಕಾಗಿದೆ. ಇಲ್ಲಿಯೇ ನಿಮಗೆ ಕುಶಲತೆಯ ಅಗತ್ಯವಿರುವುದು ಮತ್ತು ಕುಶಲತೆಯು ನಿಮಗೆ ಜ್ಞಾನದಿಂದ ಬರುತ್ತದೆ.