ಮಂಗಳವಾರ, ಜನವರಿ 4, 2011

ಯಾವುದೇ ತಪ್ಪನ್ನು ಕೋಪದಿಂದ ಸರಿ ಮಾಡಲು ಸಾಧ್ಯವಿಲ್ಲ. ಕೇವಲ ಅರಿವಿನಿಂದ ಮಾತ್ರ ಯಾವದನ್ನೇ ಆಗಲಿ, ಸರಿಪಡಿಸಲು ಸಾಧ್ಯ.

ಜನವರಿ ೪, ೨೦೧೧, ಬೆಂಗಳೂರು ಆಶ್ರಮ
ಪ್ರಶ್ನೆ;-ನಾವು ಸೇವೆ ಮಾಡುತ್ತಿರುವಾಗ, ಅದರಲ್ಲೂ ಯುವಕರು ಸೇವೆ ಮಾಡುತ್ತಿರುವಾಗ ಸೇವೆಯನ್ನು, ಓದನ್ನು ಮತ್ತು ಸಂಸಾರವನ್ನು ಹೇಗೆ ಸರಿದೂಗಿಸುವುದು?.
ಶ್ರೀ ಶ್ರೀ;- ಒಂದು ಬೈಸೈಕಲನ್ನು ಹೇಗೆ ನಡೆಸುತ್ತೀರಿ? ಒಂದು ಕಡೆಗೇ ಬಿದ್ದು ಹೋಗುತ್ತೀರೆ?  ಒಂದು ಕಡೆಗೆ ಹೆಚ್ಚಾಗಿ ವಾಲುತ್ತಿದ್ದಂತೆಯೇ ಸಮತೋಲನವನ್ನು ತಂದುಕೊಳ್ಳುತ್ತೀರಿ.  ಆದರೆ ಒಂದು ಧೃಡ ನಂಬಿಕೆಯಿರಲೇ ಬೇಕು- "ನಾನು ಸೇವೆ ಮಾಡುತ್ತೇನೆ, ಓದುತ್ತೇನೆ, ನನ್ನ ಸಂಸಾರವನ್ನೂ ನೋಡಿಕೊಳ್ಳುತ್ತೇನೆ ಮತ್ತು ಹಿರಿಯರನ್ನು ಗೌರವಿಸುತ್ತೇನೆ". ಇವೆಲ್ಲವೂ ಒಂದಕ್ಕೊಂದು ವಿರೋಧವಾಗಿಲ್ಲ, ಬದಲಾಗಿ ಒಂದಕ್ಕೊಂದು ಪೂರಕವಾಗಿವೆ.
ನೀವು ಸೇವೆ ಮಾಡಿದಾಗ ನಿಮಗೆ ಶಕ್ತಿ ಬರುತ್ತದೆ ಮತ್ತು ಪುಣ್ಯವನ್ನು ಸಂಪಾದಿಸುತ್ತೀರಿ ಮತ್ತು ಇದರಿಂದ ನಿಮಗೆ ಸೌಭಾಗ್ಯವುಂಟಾಗುತ್ತದೆ.  ಆದ್ದರಿಂದ, ಆಧ್ಯಾತ್ಮಿಕತೆಯು ನಿಮ್ಮಲ್ಲಿ ಶಕ್ತಿ ತರುತ್ತದೆ. ಧ್ಯಾನದಿಂದ ನೀವು ಈ ಜಗತ್ತಿನಲ್ಲಿ ಪ್ರಗತಿಯನ್ನು ಹೊಂದುತ್ತೀರಿ.  " ನಾನು ಎಲ್ಲವನ್ನೂ ಮಾಡುತ್ತೇನೆ" ಎಂಬ ದೃಢ ನಂಬಿಕೆಯಿಂದಾಗಿ ಅನೇಕ ಪವಾಡಗಳು ನಡೆಯುತ್ತವೆ. 
ನಿಮ್ಮಲ್ಲಿ ಏನಾದರೂ ಸಂಶಯವಿದ್ದರೆ ಅದ್ದು ತತ್ಕಾಲಿಕವಾದದ್ದು ಎಂದು ತಿಳಿದುಕೊಳ್ಳಿ.  ಮುಖ್ಯವಾದ ವಿಷಯವೆಂದರೆ ಬಲಿಷ್ಠವಾದ ವ್ಯಕ್ತಿತ್ತವನ್ನು ಬೆಳೆಸಿಕೊಳ್ಳುವುದು.  ಸುಮ್ಮನೆ ಕಾಲೇಜಿಗೆ ಹೋಗುವುದು, ತಲೆಯತುಂಬಾ ಮಾಹಿತಿಯನ್ನು ತುಂಬಿಕೊಳ್ಳುವುದು ಮತ್ತು ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು, ಇಷ್ಟೇ ಜೀವನವೆ? ಇಲ್ಲ. ಎಷ್ಟು ಶಕ್ತಿಯನ್ನು ಮತ್ತು ವಿನಮ್ರತೆಯನ್ನು ನೀವು ಪಡೆದುಕೊಂಡಿದ್ದೀರಿ? ಪೂರ್ಣ ವ್ಯಕ್ತಿಯಾಗಿ ಅರಳುತ್ತಿದ್ದೀರೆ? ಇದನ್ನು ನೋಡಿಕೊಳ್ಳುವುದು ಬಲು ಮುಖ್ಯ.  ಉತ್ಸಾಹದೊಡನೆ ಅರಿವು. ಎಲ್ಲಾ ರೀತಿಯ ಜನರೊಡನೆಯೂ ಹೇಗೆ ವ್ಯವಹರಿಸುವುದೆಂಬ ಕುಶಲತೆಯು ನಿಮಗೆ ಸೇವೆಯಿಂದ ಬರುತ್ತದೆ.  ಮೃದುತನ ಮತ್ತು ಆಳವು ನಿಮ್ಮಲ್ಲುಂಟಾಗುತ್ತದೆ.  ಉತ್ಸಾಹದೊಡನೆ ಅರಿವೂ ಸಹ ಇರುತ್ತದೆ.  ಎಲ್ಲವನ್ನೂ ಒಂದೇ ದಾರದಲ್ಲಿ ಹಾಕಿ ಪೋಣಿಸಬಹುದು.


ಪ್ರಶ್ನೆ;-ಭಗವಂತ ಮುಗ್ಧರನ್ನು ಪ್ರೀತಿಸುತ್ತಾನ್ನೆನುತ್ತಾರೆ ಮತ್ತು ಅದೃಷ್ಟವು ಮುಗ್ಧರ ಪರ ವಹಿಸುತ್ತದೆನ್ನುತ್ತಾರೆ.  ನಾನು ಮುಗ್ಧವಾಗಲು ಏನು ಮಾಡಬೇಕು?
ಶ್ರೀ ಶ್ರೀ;-ಮುಗ್ಧವಾಗಿರಲು ಕುಟಿಲತೆಯನ್ನು ಬಿಡಬೇಕು.  ಮುಗ್ಧತೆಯು ಎಲ್ಲರಲ್ಲೂ ಸಹಜವಾಗೇ ಇದೆ.  ಅದನ್ನು ಅರಳಲು ನೀವು ಬಿಡಬೇಕಷ್ಟೆ.  ಅದನ್ನು ಹೇಗೆ ಮಾಡುವುದು? ಸುಮ್ಮನೆ ಧ್ಯಾನದಲ್ಲಿರಿ   "ನಾನು ಏನೂ ಅಲ ಅಕಿಂಚ, ನನಗೇನೂ ಬೇಡ ಮತ್ತು ಎಲ್ಲರೂ ನನಗೇ ಸೇರಿದವರು". ಎಲ್ಲರೂ ನಿಮ್ಮನ್ನು ಸ್ವೀಕರಿಸುತ್ತಾರೆ ಎಂದು ನೀವು ತಿಳಿದುಕೊಂಡಾಗ, ಸಹಜತೆಯಿಂದ ಮುನ್ನಡೆಯುತ್ತೀರಿ. ನೀವು ಹೇಗಿದ್ದೀರೋ ಆ ರೀತಿಯಲ್ಲಿ ಜನರು ನಿಮ್ಮನ್ನು ಸ್ವೀಕರಿಸುತ್ತಿಲ್ಲ ಎಂದು ನೀವಂದುಕೊಂಡಾಗ, ಆಗ ಸ್ವೀಕೃತಿ ಪಡೆಯಲು ಏನು ಮಾಡಬೇಕೆಂದು ನೀವು ಯೋಚಿಸತೊಡಗುತ್ತೀರಿ ಮತ್ತು ಅಸಹಜವಾಗತೊಡಗುತ್ತೀರಿ.

ಪ್ರಶ್ನೆ;- ನಾನು ಸದಾ ಭಗವಂತನನ್ನು ಏನಾದರೊಂದನ್ನು ಕೇಳುತ್ತಲೇ ಇರುತ್ತೇನೆ. ಇದು ನನಗೆ ಕೆಲವೊಮ್ಮೆ ಹಿಡಿಸುವುದಿಲ್ಲ. 
ಶ್ರೀ ಶ್ರೀ;- ನೀವೇನಾದರೂ ಕೇಳಿದ ನಂತರ ನಿಮಗದು ದೊರಕಿದರೆ, ಆಗ ನಿಮ್ಮಲ್ಲಿ ವಿಶ್ವಾಸ ಬೆಳೆಯುತ್ತದೆ.  ಆಗ ನೀವು ಕೇಳದೆಯೇ ನಿಮಗೇನು ಬೇಕೋ ಅದೆಲ್ಲವೂ ನಿಮಗೆ ಸಿಗಲು ಪ್ರಾರಂಭವಾಗುತ್ತದೆ.


ಪ್ರಶ್ನೆ;- ಸಾಕ್ಷಾತ್ಕಾರಕ್ಕಾಗಿ ಸ್ವ-ಪ್ರಯತ್ನ ಅವಶ್ಯಕ. ಆದರೆ ಪ್ರಯತ್ನರಹಿತತೆಯೇ ಅತೀ ಮುಖ್ಯವೆಂದು ನೀವು ಹೇಳುತ್ತೀರಿ.  ಇದೊಂದು ವಿಪರ್ಯಾಸ. ಆದ್ದರಿಂದ, ದಾರಿ ಯಾವುದು? 
ಶ್ರೀ ಶ್ರೀ;- ಎರಡೂ ಮುಖ್ಯ. ಟ್ರೇನಿನೊಳಗೆ ಹತ್ತಲು ನೀವು ಪ್ರಯತ್ನ ಪಡಬೇಕು. ನಿಮ್ಮ ಸಾಮಾನನ್ನು ಹೊತ್ತುಕೊಂಡು ಸರಿಯಾದ ಪ್ಲಾಟ್‌ಫಾರ್ಮಿಗೆ ಹೋಗಬೇಕು. ಆದರೆ ಒಮ್ಮೆ ಟ್ರೇನನ್ನು ಹತ್ತಿದ ನಂತರ ನಿಮ್ಮ ಸಾಮಾನನ್ನು ಪಕ್ಕಕ್ಕಿಟ್ಟು ವಿಶ್ರಮಿಸಿ. 


ಪ್ರಶ್ನೆ;- ನಾವೆಷ್ಟು ಪ್ರಯತ್ನಪಟ್ಟರೂ ನಮ್ಮ ಕೆಲವು ಕನಸ್ಸುಗಳು ನನಸಾಗುವುದೇ ಇಲ್ಲ. ಆಗ ನಾವೇನು ಮಾಡಬೇಕು? 
ಶ್ರೀ ಶ್ರೀ ;- ನಿಮ್ಮ  ಪ್ರಯತ್ನವನ್ನು ಮಾಡುತ್ತಲೇ ಇರಿ. ಒಂದು ಗಾದೆಯಿದೆ- "ಮತ್ತೆ ಮತ್ತೆ ಪ್ರಯತ್ನ ಮಾಡಿ. ಕೊನೆಗೊಮ್ಮೆ ಯಶಸ್ವಿಯಾಗುತ್ತೀರಿ" ಎಂದು. ಒಂದು ಅಥವಾ ಎರಡನೆಯ ಸಲ ನೀವು ಯಶಸ್ಸನ್ನು ಕಾಣದೇ ಇರಬಹುದು. ಆದರೆ ನಿಮ್ಮ ಸಂಕಲ್ಪ ಬಲಿಷ್ಠವಾಗಿದ್ದರೆ ಅದು ಆಗುತ್ತದೆ. 


ಪ್ರಶ್ನೆ;- ಶರಣಾಗತಿಯ ಭಾವವನ್ನು ಹೇಗೆ ಬೆಳೆಸಿಕೊಳ್ಳುವುದು?
ಶ್ರೀ ಶ್ರೀ;- ಆ ಭಾವವು ಆಗಲೇ ಇದೆಯೆಂದು ಸುಮ್ಮನೆ ಅಂದುಕೊಳ್ಳಬಿಡಬೇಕಷ್ಟೆ. ಪ್ರಯತ್ನ ಮಾಡಬೇಡಿ. ಶರಣಾಗತಿ ಈಗಾಗಲೇ ಇದೆಯೆಂದುಕೊಂಡು ಮುನ್ನಡೆಯಿರಿ.


ಪ್ರಶ್ನೆ;- ನನ್ನ ಬಾಲ್ಯದಿಂದಲೂ ಸಹ, ಮಾಂಸಾಹಾರವನ್ನು ತಿಂದರೆ ಅದು ಪಾಪದ ವಿಷಯ, ಏಕೆಂದರೆ ನಾವು ಒಂದು ಅಸಹಾಯಕ ಪ್ರಾಣಿಯನ್ನು ಕೊಲ್ಲುತ್ತಿದ್ದೇವೆ ಎಂದು ಹೇಳಲಾಗಿದೆ. ಇದು ನಿಜವೆ? 
ಶ್ರೀ ಶ್ರೀ;- ಮಾಂಸಾಹಾರ ಮಾಡುವವರೆಲ್ಲರೂ ಪಾಪಿಷ್ಠರು ಎಂದುಕೊಳ್ಳುವುದು ಬೇಡ. ಮಾಂಸಾಹಾರ ಮಾಡಿದಾಗ ನಮ್ಮ ತಾಮಸಿಕ ಪ್ರವೃತ್ತಿಗಳಿಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ಸಿಗುತ್ತದೆಯಷ್ಟೆ. ಇದರಿಂದ ಅವರಿಗೂ ಒಳ್ಳೆಯದಲ್ಲ, ಜಗತ್ತಿಗೂ ಮತ್ತು ಸಮಾಜಕ್ಕೂ ಒಳ್ಳೆಯದಲ್ಲ. ನನ್ನ ಮಗುವೇ ನಿನ್ನ ಹೊಟ್ಟೆಯನ್ನು ಒಂದು ಸ್ಮಶಾನವಾಗಿ ಮಾಡಿಬಿಡಬೇಡ.


ಪ್ರಶ್ನೆ;- ಜ್ಞಾನವು ವಿಶ್ವಾಸವಿಲ್ಲದೆಯೇ ಇರಲು ಸಾಧ್ಯವೇ ಅಥವಾ ಅವೆರಡೂ ಒಂದುಕ್ಕೊಂದು ಸಂಬಂಧಪಟ್ಟಿದೆಯೆ? 
ಶ್ರೀ ಶ್ರೀ;- ಜ್ಞಾನ ಮತ್ತು ವಿಶ್ವಾಸ ಸಂಬಂಧಪಟ್ಟಿವೆ. ಜ್ಞಾನವಿದ್ದಾಗ ವಿಶ್ವಾಸವಿರುತ್ತದೆ ಮತ್ತು ವಿಶ್ವಾಸವಿದ್ದಾಗ ಜ್ಞಾನವಿರುತ್ತದೆ. ಮತ್ತು ನಿಮ್ಮಲ್ಲಿ ವಿಶ್ವಾಸವಿರುವುದರಿಂದಲೇ ಈ ಪ್ರಶ್ನೆಯನ್ನು ನೀವು ಕೇಳುತ್ತಿರುವಿರಿ. ನಾವು ಈ ಪ್ರಶ್ನೆಗೆ ಉತ್ತರಿಸುತ್ತೇವೆ ಮತ್ತು ಕೊಟ್ಟ ಉತ್ತರವನ್ನು ನೀವು ಸ್ವೀಕರಿಸುತ್ತೀರಿ ಎಂಬ ವಿಶ್ವಸವೂ ಇದೆ ನಿಮ್ಮಲ್ಲಿ. ಆದ್ದರಂದ, ಜ್ಞಾನ ಮತ್ತು ವಿಶ್ವಾಸ ಒಂದಕ್ಕೊಂದು ಸಂಬಂಧಪಟ್ಟಿವೆ. 

ಪ್ರಶ್ನೆ;- ಒಬ್ಬರ ವಿಧಿಯು ನಿಶ್ಚಯವಾಗಿಬಿಟ್ಟಿದೆಯೇ ಅದನ್ನು ಅದು ಬದಲಾಯಿಸಬಹುದೆ? 
ಶ್ರೀ ಶ್ರೀ;- ವಿಧಿಯ ಸ್ವಲ್ಪ ಭಾಗ ನಿಶ್ಚಯವಾಗಿಬಿಟ್ಟಿದೆ ಮತ್ತು ಕೆಲವು ವಿಷಯಗಳನ್ನು ಬದಲಾಯಿಸಬಹುದು.


ಪ್ರಶ್ನೆ;- ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಬಲು ಕಷ್ಟ.  ನಾನು ಕೋಪ ಮಾಡಿಕೊಳ್ಳದೆ ಇರುವುದಕ್ಕಾಗಿ ಏನು ಮಾಡಬೇಕು?
ಶ್ರೀ ಶ್ರೀ;- ಮೊದಲನೆಯದಾಗಿ, ಕೋಪವನ್ನು ಹತೋಟಿಗೆ ತರಬೇಕು.  ಇದನ್ನು ತಿಳಿದುಕೊಳ್ಳಿ. ಮನಸ್ಸು ಬಹಳ ಸಂತೋಷದಿಂದಿದ್ದಾಗ ಮತ್ತು ತೃಪ್ತಗೊಂಡಿದ್ದಾಗ, ನೀವು ಧ್ಯಾನದಲ್ಲಿದ್ದಾಗ, ಮತ್ತು ತಪ್ಪುಗಳಿಗಾಗಿ ಹಾಗೂ ಅಪರಿಪೂರ್ಣತೆಗಳಿಗಾಗಿ ಸ್ವಲ್ಪ ಸ್ಥಾನವನ್ನು ಬಿಟ್ಟುಕೊಟ್ಟಾಗ ನಿಮಗೆ ಕೋಪ ಬರುವುದಿಲ್ಲ.  ಯಾವುದೇ ತಪ್ಪನ್ನು ಕೋಪದಿಂದ ತಿದ್ದಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.  ಕೇವಲ ಅರಿವಿನಿಂದ ಮಾತ್ರ ಯಾವುದನ್ನೇ ಆಗಲಿ, ಸರಿಪಡಿಸಬಹುದು.