ಸೋಮವಾರ, ಜನವರಿ 31, 2011

"ನಾದ ವೈಭವಂ- ನಮ್ಮನ್ನೆಲ್ಲಾ ಬೆಸೆಯುವ ಶಕ್ತಿ ಸಂಗೀತ.

ಜನವರಿ ೩೧, ೨೦೧೧. ಚೆನ್ನೈ. 
ಸಂಗೀತದ ಉದ್ದೇಶ ನಿಮ್ಮ ಆಳದಲ್ಲಿ ಮೌನವನ್ನುಂಟು ಮಾಡುವುದು. ಮೌನದ ಉದ್ದೇಶ ಜೀವನದಲ್ಲಿ ಕ್ರಿಯಾತ್ಮಕತೆಯನ್ನು ತರುವುದು. ಆದ್ದರಿಂದ, ಕ್ರಿಯಾತ್ಮಕತೆಯನ್ನು ತರದ ಮೌನ ಯಾವ ಪ್ರಯೋಜನಕ್ಕೂ ಬಾರದು ಮತ್ತು ಮೌನವನ್ನು, ಶಾಂತಿಯನ್ನು, ಸಾಮರಸ್ಯವನ್ನು ನಮ್ಮೊಳಗೆ ತರದಂತಹ ಸಂಗೀತವೂ ಸಹ ಯಾವ ಪ್ರಯೋಜನಕ್ಕೂ ಬಾರದು. ಇಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ನಾವೆಲ್ಲರೂ ಸೇರಿ ಒಂದಾಗಿ, ನಮ್ಮನ್ನೆಲ್ಲಾ ಬೆಸೆಯುವಂತಹ ಸಂಗೀತವನ್ನು ಹಾಡುತ್ತಿರುವುದು ಒಂದು ದೊಡ್ಡ ಯಜ್ಞ. ಪ್ರೇಮದ ಹೊರತಾಗಿ ಎಲ್ಲಾ ಧರ್ಮದವರನ್ನೂ, ಪಂಥದವರನ್ನೂ, ದ್ವೀಪದವರನ್ನೂ ಒಂದಾಗಿಸುವ ಶಕ್ತಿಯೆಂದರೆ ಸಂಗೀತ. ಸಂಗೀತ ಎಲ್ಲರ ಹೃದಯವನ್ನೂ ಮುಟ್ಟುತ್ತದೆ. ಆದ್ದರಿಂದ  ನೀವು ಸಂಗೀತಗಾರರಾಗಿರಲ್ಲಿ, ಇಲ್ಲದಿರಲಿ ಎಲ್ಲರೂ ಹಾಡಲೇ ಬೇಕು. ನೀವು ಹಾಡಲು ಪ್ರಾರಂಭಿಸಿದಾಗ ನೀವು ಸಂಗೀತಗಾರರಾಗಿ. 

  ಸಂಗೀತವು ನಿಮ್ಮ ಭಾವನೆಗಳನ್ನು ಶುದ್ಧ ಮಾಡುತ್ತದೆ, ನಿಮ್ಮ ಭಾವನೆಗಳನ್ನು ಹಗುರವಾಗಿಸುತ್ತದೆ. ಭಾವನೆಗಳು ಶುದ್ಧವಾದಾಗ ಆಲೋಚನೆಗಳು ಶುದ್ಧವಾಗುತ್ತವೆ. ನಿಮಗೆ ಸರಿಯಾದ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ನಿಮ್ಮಲ್ಲಿ ಅಂತಪೂರ್ಣೆ ಎಚ್ಚರಗೊಳ್ಳುತ್ತದೆ ಮತ್ತು ಇದೇ ಆಧ್ಯಾತ್ಮಿಕತೆ. ಸಂಗೀತ ಮತ್ತು ಆಧ್ಯಾತ್ಮಿಕತೆ ಒಂದಕ್ಕೊಂದು ಎಷ್ಟೊಂದು ಬೆಸೆದಿದೆಯೆಂದರೆ, ಅದರಲ್ಲೂ ಈ ದೇಶದಲ್ಲಿ ಸಂಗೀತ ಮತ್ತು ಆಧ್ಯಾತ್ಮಿಕತೆಯನ್ನು ಎಂದಿಗೂ ಬೇರೆ ಬೇರೆಯಾಗಿ ಪರಿಗಣಿಸಲಾಗೇ ಇಲ್ಲ. 

ಈ ವೇದಿಕೆಯ ಮೇಲೆ ೫,೭೦೦ ಸಂಗೀತಗಾರರಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತಗಾರರು ಭಾಗವಹಿಸಲು ಇಚ್ಛೆಪಟ್ಟರು, ಆದರೆ ಈ ವೇದಿಕೆಯ ಸಾಮರ್ಥ್ಯವಿರುವುದೇ ಇಷ್ಟು, ಇನ್ನೂ ಹೆಚ್ಚನ ಸಂಖ್ಯೆ ಬೇಡವೆಂದು ನಾವು ಹೇಳಿದೆವು.  ಉಳಿದ ಜನರೂ ಇಲ್ಲಿ ಉಪಸ್ಥಿತರಾಗಿ ವೇದಿಕೆಯ ಕೆಳಗೆ ಕುಳಿತು ಹಾಡುತ್ತಿದ್ದಾರೆ. (ದೂರದರ್ಶನದ ಈ ಕಾರ್ಯಕ್ರಮ ಪ್ರಸಾರದೊಂದಿಗೆ ಹಾಡುತ್ತಿದ್ದಾರೆ). ಅದಲ್ಲದೆ ಜಗತ್ತಿನ ಇತರ ಸಂಗೀತಗಾರರೂ ಇವರೊಡನೆಯೇ ಹಾಡುತ್ತಿದ್ದರು. 

    ದೈವವಿದ್ದಾಗ ಎಲ್ಲವೂ ಸಾಧ್ಯ. ಭಗವಂತನ ಕೃಪೆಯಿಂದ ಇದೆಲ್ಲವೂ ಸಾಧ್ಯ ಮತ್ತು ನಿಮ್ಮ ಆಳದೊಳಗೆ ಹೊಕ್ಕು ವಿಶ್ರಮಿಸಲು ಸಂಗೀತವು ಒಂದು ಮಾರ್ಗ. ಭೂಮಿಯ ಮೇಲಿರುವ ಎಲ್ಲಾ ಜೀವಿಗಳಲ್ಲೂ, ಮರಗಿಡಗಳಲ್ಲೂ, ಪಶು, ಪಕ್ಷಿಗಳಲ್ಲೂ ಒಂದೇ ಒಂದು ಶಕ್ತಿಯಿದೆ. ನಮ್ಮೆಲ್ಲರೊಳಗಿರುವ ಆ ಶಕ್ತಿಯು, ನಿಮ್ಮ ಹೃದಯ ತುಂಬಿ ಹಾಡಿದಾಗ ನರ್ತಿಸಲು ಪ್ರಾರಂಭಿಸುತ್ತದೆ. 

    ಸಂಗೀತವಿರುವ ಸ್ಥಳದಲ್ಲಿ, ಕಲೆಯಿರುವ ಸ್ಥಳದಲ್ಲಿ, ನೃತ್ಯ, ಯೋಗ ಮತ್ತು ಧ್ಯಾನವಿರುವ ಸ್ಥಳದಲ್ಲಿ ಹಿಂಸೆಯಿರಲು ಹೇಗೆ ಸಾಧ್ಯ?

  ಯೋಗ, ಪ್ರಾಣಾಯಾಮ, ಧ್ಯಾನ, ಆಯುರ್ವೇದ ಮತ್ತು ರಾಸಾಯನ ರಹಿತ ಆಹಾರವನ್ನು ನಮ್ಮ
ಜೀವನ ಶೈಲಿಯಾಗಿಸಿಕೊಳ್ಳಬೇಕು.

    ಈಗೊಂದು ಚಿಕ್ಕ ಧ್ಯಾನವನ್ನು ಮಾಡೋಣವೆ?
ಧ್ಯಾನವೆಂದರೆ ಏಕಾಗ್ರತೆಯಲ್ಲ, ತಿಳಿಯಿತೆ? ಏಕಾಗ್ರತೆಯನ್ನು ಬಿಟ್ಟು, ಆಳವಾಗಿ ವಿಶ್ರಮಿಸುವುದು. ಧ್ಯಾನವೆಂದರೆ ಚಲನೆಯಿಂದ ಸ್ತಬ್ಧತೆಯೆಡೆಗೆ ಮತ್ತು ಶಬ್ದದಿಂದ ಮೌನದೆಡೆಗೆ ಪಯಣ. ನಮ್ಮ ಸಂತೋಷಕ್ಕಾಗಿ ನಾವೇ ಜವಾಬ್ದಾರರು. ನಮ್ಮ ಉತ್ಸಾಹ, ಸಂತೋಷವನ್ನು ಎತ್ತರವಾಗಿರಿಸಲು ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಇದಕ್ಕಾಗಿ ನೀವು ಇದನ್ನೆಲ್ಲಾ ಮತ್ತು ಧ್ಯಾನವನ್ನು ಮತ್ತು ಪ್ರಾಣಾಯಾಮವನ್ನು ಹಾಗೂ ಸಮಾಜ ಸೇವೆಯನ್ನು ಮಾಡಬೇಕು.