ಸೋಮವಾರ, ಜನವರಿ 24, 2011

ಧ್ಯಾನದಿಂದ ನೀವು ವಿಶ್ವಾತ್ಮಕ ಚೈತನ್ಯದೊಡನೆ ಸಂಬಂಧವನ್ನು ಪಡೆಯುವಿರಿ


ಸೋಮವಾರಜನವರಿ ೨೪, ೨೦೧೧
೬೦೦ನೆಯ ಸಾಮ್ ಬುದ್ಧ ಜಯಂತಿ, ಕೊಲಂಬೊ, ಶ್ರೀಲಂಕ
ಬುದ್ದ ಜಯಂತಿಯ ೨೬೦೦ ವರ್ಷಗಳ ಸಂದರ್ಭದಲ್ಲಿ ಸಂಗೀತ ಸಂಜೆಯನ್ನು ಆಯೋಜಿಸಲಾಗಿದೆ. ಸಮಾಜದಲ್ಲಿ ಮತ್ತೆ "ಧರ್ಮ"ವನ್ನು ತರಬೇಕೆಂಬುದೇ ಇದರ ಉದ್ದೇಶ. "ಧರ್ಮ"ದ ಮೌಲ್ಯವು ಸಮಾಜದಲ್ಲಿ ಇಲ್ಲವಾದಾಗ ಜಗತ್ತಿನಲ್ಲಿ ದುಃಖವಿರುತ್ತದೆ. ಮೌಲ್ಯಗಳನ್ನೆಲ್ಲಾ ನಾವು ಮರೆತು ಹೋಗಿರುವುದೇ ಇದಕ್ಕೆ ಕಾರಣ. ನಿಮ್ಮೊಡನೆ ಇಲ್ಲಿ ಇರಲು ನಾವು ಬಹಳ ಹರ್ಷಿಸುತ್ತೇವೆ. ನೀವೇ ಶ್ರೀಲಂಕಾದ ಆಶಾಕಿರಣ. (ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಸಂಗೀತ ಹಾಗೂ ಸಾಂಸ್ಕೃತಿಕ ಗುಂಪುಗಳನ್ನು ನೋಡಿ ಪರಮ ಪೂಜ್ಯ ಗುರೂಜಿಯವರು ಹೇಳಿದರು). ನಮ್ಮ ಬೇರುಗಳನ್ನು ಆಳವಾಗಿಸಿಕೊಂಡು, ನಮ್ಮ ದೃಷ್ಟಿಕೋನವನ್ನು ವಿಶಾಲವಾಗಿಸಿಕೊಳ್ಳಬೇಕು.
ಅರ್ಧಮವು ಪ್ರಧಾನವಾದಾಗ ಜನರು ಧರ್ಮದ ನಿಜವಾದ ಸಾರವನ್ನು ಮರೆತುಬಿಟ್ಟರು. ಭಗವಾನ್ ಬುದ್ಧರು ಧರ್ಮವನ್ನು ಪುನರ್ ಸ್ಥಾಪಿಸುವ ಸಲುವಾಗಿ ಬಂದರು. ಅವರು ಹರಡಿದ ಸಂದೇಶವೇ- "ಅಹಿಂಸಾ ಪರಮೋ ಧರ್ಮಃ". ಇಂದು ಶ್ರೀಲಂಕಾದಲ್ಲಿ ನಿರ್ಭಯತೆಯಿರುವುದನ್ನು ಕಂಡು ನಮಗೆ ಬಹಳ ಸಂತೋಷವಾಗುತ್ತಿದೆ. ಜನರೀಗ ಎಲ್ಲಾ ಕಡೆಯೂ ಓಡಾಡಬಲ್ಲರು. ಎಲ್ಲಾ ಚೆಕ್ ಪೋಸ್ಟ್‌ಗಳನ್ನೂ ತೆಗೆದು ಹಾಕಲಾಗಿದೆ ಮತ್ತು ಜನಸಂಚಾರವೀಗ ಸುಲಭವಾಗಿದೆ.
ಎಲ್ಲಾ ಪಂಗಡಗಳ ಜನರೂ - ತಮಿಳರು, ಸಿಂಗಳರು, ಮುಸಲ್ಮಾನರು, ಕ್ರೈಸ್ತ ಮತದವರು ಮತ್ತು ಬೌದ್ಧರೆಲ್ಲರೂ ಇಂದು ಒಂದಾಗಿದ್ದಾರೆ. ಸಮಾಜಕ್ಕೆ ಇನ್ನೂ ಹೆಚ್ಚಿನ ಸಂತೋಷ ಬರಬೇಕು. ಎಲ್ಲಾ ಯುವಕರು ಕ್ರಿಯಾತ್ಮಕರಾದಾಗ ದೇಶದ ಪ್ರಗತಿಗಾಗಿ ಹೆಚ್ಚಿನ ಕಾಣಿಕೆಯನ್ನು ನೀಡಬಹುದು. ಅಭಿವೃದ್ಧಿಗಾಗಿ ವಚನಬದ್ಧತೆ ಮತ್ತು ಸಂಶೋಧನೆಗಾಗಿ ತೆರೆದ ಮನಸ್ಸನ್ನು ಹೊಂದಿರಬೇಕು.
 ಒಬ್ಬ ಹಿರಿಯ ವಿಜ್ಞಾನಿಯು, ತಾವು ನಲವತ್ತು ವರ್ಷಗಳ ಕಾಲ ಭೌತಶಾಸ್ತ್ರವನ್ನು ಅಧ್ಯಯನ ಮಾಡಿ, ಭೌತವಸ್ತುವೆಂಬುದೇ ಇಲ್ಲವೆಂದು ಅರಿತೆ ಎಂದು ನಮಗೆ ಹೇಳಿದರು. ಕ್ವಾನ್‌ಟಮ್ ಫಿಸಿಕ್ಸ್‌ನ ಬಗ್ಗೆ ಅವರು ಯಾವುದೇ ಭಾಷಣೆ ನೀಡಲಿ, ಅದರ ಸಾರ ಹೀಗಿರುತ್ತದೆ - "ಭೌತಿಕ ವಸ್ತುವೆಂಬುದಿಲ್ಲ," ಇದನ್ನೇ ಬೌದ್ಧ ಧರ್ಮದಲ್ಲಿ ಮತ್ತು ವೇದಾಂತದಲ್ಲಿ ಹೇಳಲಾಗಿದೆ.
ಯುವಕರಿಗೆ ಧ್ಯಾನದ ಅವಶ್ಯಕತೆಯಿದೆಯೆ?
ಈ ಪ್ರಶ್ನೆಯನ್ನು ಅನೇಕರು ಕೇಳುತ್ತಾರೆ.
ಪೂರ್ಣ ವ್ಯಕ್ತಿತ್ವವನ್ನು ಹೊಂದಲು ನೀವೆಲ್ಲರೂ ಬಯಸುತ್ತೀರೆ? ಹೊಂದಬೇಕೆಂದಿದ್ದರೆ ಮತ್ತು ಸಂತೋಷವಾಗಿರಲು, ಆರೋಗ್ಯದಿಂದಿರಲು, ಕರುಣಾಮಯಿಗಳಾಗಿರಲು, ಪ್ರೇಮಮಯಿಗಳಾಗಿರಲು ಮತ್ತು ಹಾಸ್ಯ ಪ್ರವೃತ್ತಿಯುಳ್ಳವರಾಗಿರಲು ಧ್ಯಾನವು ಬೇಕೇ ಬೇಕು. ಈ ಎಲ್ಲಾ ಮಾನವೀಯ ಗುಣಗಳೂ ಧ್ಯಾನದಿಂದ ಅರಳುತ್ತವೆ.
ಧ್ಯಾನಕ್ಕೆ ಮೂರು ನಿಯಮಗಳಿವೆ. ಮೊದಲನೆಯ ಕೇವಲ ೧೦ ನಿಮಿಷಗಳಿಗಾಗಿ, "ನನೆಗೇನೂ ಬೇಡ". ಎಂದು ಹೇಳುವುದು. ಹೀಗೆ ಹೇಳಬಲ್ಲಿರೆ? ನಿಮ್ಮ ಅವಶ್ಯಕತೆಗಳೆಲ್ಲವನ್ನೂ ಒಂದು ಟೋಪಿಯನ್ನು ತೆಗೆದಂತೆ ಪಕ್ಕಕ್ಕೆ ತೆಗೆದಿಟ್ಟು, ಕೇವಲ ಹತ್ತು ನಿಮಿಷಗಳಾಗಿ ಕುಳಿತುಕೊಳ್ಳಿ. ನಂತರ ಎರಡನೆಯ ನಿಯಮ;-
"ನಾನೇನೂ ಮಾಡುವುದಿಲ್ಲ". ಒಬ್ಬ ಪಂಡಿತನು ಬುದ್ಧನ ಬಳಿಗೆ ಬಂದಾಗ ಬುದ್ಧರು ಆತನಿಗೆ, "ಸುಮ್ಮನೆ ವಿಶ್ರಮಿಸು. ಖಾಲಿ ಮತ್ತು ಟೊಳ್ಳಾಗು" ಎಂದರು.
"ಮುಂದಿನ ಹತ್ತು ನಿಮಿಷಗಳಲ್ಲಿ ನಾನೇನೂ ಮಾಡುವುದಿಲ್ಲ.  ಯಾವುದರ ಮೇಲೂ ಏಕಾಗ್ರತೆಯನ್ನು ಮಾಡುವುದಿಲ್ಲ. ಯಾವ ಆಲೋಚನೆಗೂ ಪ್ರಾಮುಖ್ಯತೆ ಕೊಡುವುದಿಲ್ಲ. ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆ, ಯಾವುದಾದರೂ ಬರಲಿ, ಹೋಗಲಿ. ನಾನೇನೂ ಮಾಡುವುದಿಲ್ಲ. ಆಲೋಚನೆಗಳನ್ನು ಸ್ವಾಗತಿಸುವುದೂ ಇಲ್ಲ ಅಥವಾ ತಳ್ಳಿ ಹಾಕುವುದೂ ಇಲ್ಲ" ಎನ್ನಬೇಕು.
ಮೂರನೆಯ ನಿಯಮ;-
"ನಾನೂ ಯಾರು ಅಲ್ಲ" ಮುಂದಿನ ಕೆಲವು ನಿಮಿಷಗಳವರೆಗೆ ನೀವು ಒಬ್ಬ ವಿದ್ಯಾರ್ಥಿ, ಉದ್ಯಮಿ, ಗಂಡು, ಹೆಣ್ಣು... ಇತ್ಯಾದಿ ಮುದ್ರೆಗಳನ್ನೆಲ್ಲಾ ತೆಗೆದುಹಾಕಿ. ಈಗ ಧ್ಯಾನ ಮಾಡೋಣ.
(ಹದಿನೈದು ನಿಮಿಷಗಳವರೆಗೆ ಧ್ಯಾನ ನಡೆಯಿತು. ನಂತರ)
ಇಲ್ಲಿ ನಿಮಗೆಷ್ಟು ಜನರಿಗೆ ೧೫ ನಿಮಿಷಗಳು ಧ್ಯಾನ ಮಾಡಿದ್ದೀರಿ ಎಂದೆನಿಸಿತು? ನಿಮಗೆ ತಾಜಾತನದ ಅನುಭವವಾಗುತ್ತಿದೆಯೆ ? ಎಷ್ಟು ಜನರಿಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ? ನೋಡಿ, ಅದೇ ಧ್ಯಾನ. ಧ್ಯಾನವೆಂದರೆ ನಿಮಗೆ ಸಮಯದ ಅರಿವಾಗದಿರುವುದು, ವಿಶ್ವಾತ್ಮಕ ಚೈತನ್ಯದೊಡನೆ ಸಂಬಂಧವುಂಟಾಗುವುದು.
ಒಂದು ಗುಂಪಿನಲ್ಲಿ ಮಾಡಿದಾಗ ಬಹಳ ಒಳ್ಳೆಯದು. ಒಂದು ಗುಂಪಿನೊಡನೆ, ಸಂಘದೊಡ ಮಾಡಬೇಕು. ಬೆಳಿಗ್ಗೆ ನಿಮ್ಮ ಶಾಲಾ ಪ್ರಾರ್ಥನೆ ಮುಗಿದ ನಂತರ ಸ್ವಲ್ಪ ಸಮಯ ಕಣ್ಣು ಮುಚ್ಚಿ ಕುಳಿತು ಧ್ಯಾನ ಮಾಡಿ. ಧ್ಯಾನದಿಂದ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮೊಡನೆ ಇರಲು ನಮಗೆ ಬಹಳ ಸಂತೋಷವಾಗುತ್ತಿದೆ. ಕುಶಲತೆಯುಳ್ಳ, ಕರುಣಾಮಯಿಗಳಾದ ವಿಶ್ವಮಾನವರಾಗಿ. ಜಗತ್ತಿನ ಪ್ರತಿಯೊಂದು ಭಾಗದಿಂದಲೂ ಒಳ್ಳೆಯ ವಿಷಯಗಳನ್ನು ಕಲಿತುಕೊಳ್ಳಿ.
ಭಾರತದ ಪ್ರತಿಯೊಂದು ಮಗುವೂ ಸಹ ತಮ್ಮ ಬಾಲ್ಯದಲ್ಲಿ ಕೇಳುವ ಮೊದಲ ವಿದೇಶದ ಹೆಸರೆಂದರೆ, ಶ್ರೀಲಂಕ. ಆ ಶ್ರೀಲಂಕ ಹೇಗಿತ್ತು? ಸುರ್ವಣಮಯವಾಗಿತ್ತು. ಭಗವಾನ್ ಶ್ರೀ ರಾಮನೇ "ಸುರ್ವಣಮಯ  ಶ್ರೀಲಂಕ" ಎಂದು ಹೇಳುತ್ತಾನೆ. ಆದ್ದರಿಂದ ಪ್ರತಿಯೊಂದು ಯುವಕ/ಯುವತಿಯೂ ಸಹ ಕುಶಲತೆಯುಳ್ಳ, ಹೊಳೆಯುತ್ತಿರುವ, ಕರುಣಾಮಯಿಗಳಾಗಿರುವಂತಹ ಸುವರ್ಣಮಯವಾದ ಶ್ರೀಲಂಕೆಯ ಬಗ್ಗೆ ಕನಸು ಕಾಣಬೇಕೆಂದು ನಾವು ಇಚ್ಛಿಸುತ್ತೇವೆ. ಇದು ಬಹಳ ಬಹಳ ಮುಖ್ಯ
ಭಗವಂತ ನಿಮ್ಮೆಲ್ಲರನ್ನೂ ಆಶೀರ್ವದಿಸಲಿ.
(ಬುದ್ಧಂ ಶರಣಂ ಗಚ್ಛಾಮಿ ಎಂಬ ಘೋಷಣೆಯಿಂದ ಆ ಕಾರ್ಯಕ್ರಮ ಮುಗಿಯಿತು).