ಶುಕ್ರವಾರ, ಜನವರಿ 14, 2011

ಕೋಲಾಹಲದಿಂದ ಆನಂದವುಂಟಾಗುತ್ತದೆ ಮತ್ತು ಕೋಲಾಹಲವನ್ನು ಆನಂದಿಸಬಲ್ಲ ಸಾಮರ್ಥ್ಯವೇ ಸಾಕ್ಷಾತ್ಕಾರ


ಜನವರಿ ೧೪, ೨೦೧೧, ಮುಂಬಯಿ, ಭಾರತ
 
ಪ್ರಶ್ನೆ;- ವಾಲ್ಮೀಕಿಯವರ ಮಹತ್ವದ ಬಗ್ಗೆ ಮತ್ತು ಆ ಕಾಲದ ಬಗ್ಗೆ ಸ್ವಲ್ಪ ಹೇಳುತ್ತೀರೆ? 
ಶ್ರೀ ಶ್ರೀ;- ವಾಲ್ಮೀಕಿಯವರು ಶ್ರೀರಾಮನ ಸಮಕಾಲೀನರು. ಗುರುವಿನ ದೈಹಿಕ ಇರುವಿಕೆಯು ಇಲ್ಲವಾದ ಬಹಳ ವರ್ಷಗಳ ನಂತರ ಜಗತ್ತಿನ ಅನೇಕ ಗ್ರಂಥಗಳು ಬರೆಯಲ್ಪಟ್ಟವು. ಆದರೆ ರಾಮಾಯಣ ನಡೆದ ಕಾಲದಲ್ಲೇ ವಾಲ್ಮೀಕಿಯವರು ಆ ಗ್ರಂಥವನ್ನು ರಚಿಸಿದರು. ಆ ಕಾಲದಲ್ಲಿ ಸಮಾಜದಲ್ಲಿ ಜಾತಿಭೇದಗಳಿರಲಿಲ್ಲ. ಆಗಿನ ಕಾಲದಲ್ಲಿ ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಮತ್ತು ಸ್ವಕೀಯ ಭಾವನೆಯು ಬಹಳ ಆಳವಾಗಿ ಬೇರುಬಿಟ್ಟಿದ್ದವು. 

ಪ್ರಶ್ನೆ;- ಧಾರ್ಮಿಕ ಮತಾಂಧತೆಯಿಂದ ಈ ಜಗತ್ತು ಬಹಳ ಕಷ್ಟ ಪಡುತ್ತಿದೆ. ಇದರ ಬಗ್ಗೆ ಮಾತನಾಡಬಲ್ಲಿರೆ? ಇದರ ಬಗ್ಗೆ ನಾವು ಯಾವ ರೀತಿಯ ನಿಲುವನ್ನು ತಾಳಬೇಕು?
ಶ್ರೀ ಶ್ರೀ;-  ಒಂದಾನೊಂದು ಕಾಲದಲ್ಲಿ, ಎಲ್ಲರೂ ವೈವಿಧ್ಯತೆಯನ್ನು ಆಚರಿಸಿ, ಜೀವಿಸುತ್ತಿದ್ದ ಒಂದು ಸುಂದರವಾದ ಸ್ಥಳವಾಗಿತ್ತು ಈ ಭೂಮಿ ಎಂದು ನಿಮಗೆ ಗೊತ್ತೆ? ಆದರೆ ಇಷ್ಟೊಂದು ವಿಭಜನೆ ಉಂಟಾಗುವುದಕ್ಕೆ ಏನು ಕಾರಣವಾಯಿತು?  ಎಲ್ಲರೂ ವ್ಯತ್ಯಾಸಗಳ ಮೇಲೇಳಿ ಮುನ್ನಡೆಯಬೇಕೆಂಬುದೇ ನಮ್ಮ ಇಚ್ಛೆ. ಬಾಹ್ಯದಲ್ಲಿ ನಾವು ಯಾವುದೇ ಧೋರಣೆಯನ್ನು ಹೊಂದಿದ್ದರೂ, ಒಳಗೆ ಎಲ್ಲರೂ ಸಹಜತೆಯನ್ನು ಹೊಂದಿ. ಎಲ್ಲರೊಡನೆಯೂ ಸ್ವಕೀಯ ಭಾವನೆ ಬೆಳೆಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿ. 

ಪ್ರಶ್ನೆ;- ಕೆಲವೊಮ್ಮೆ ನಮಗೆ ಅದೃಷ್ಟವಿಲ್ಲದೆ, ಸತ್ವದ ಪ್ರಭಾವವಿಲ್ಲದಿರುವುದರಿಂದ ನಮ್ಮ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಇದನ್ನು ಹೇಗೆ ಹೆಚ್ಚಿಸಿಕೊಳ್ಳಬಹುದೆಂಬುದರ ಬಗ್ಗೆ ಮಾತನಾಡಿತ್ತೀರೆ? ಒಮ್ಮೆ ಸಮಾಜದಲ್ಲಿ ಅಂತಹ ಸಾಮರಸ್ಯವಿತ್ತೆಂದು ನೀವೇ ಹೇಳಿದಿರಿ. ಅದನ್ನು ಹೇಗೆ ಮರುತರಿಸುವುದು?
ಶ್ರೀ ಶ್ರೀ;- ನಿಮ್ಮ ಬಳಿ ಒಂದು ಸೆಲ್‌ಫೋನ್ ಇದೆಯೇ? ಅದು ಹೇಗೆ ಕೆಲಸ ಮಾಡುತ್ತದೆ? ಮೊಟ್ಟಮೊದಲನೆಯದಾಗಿ ಅದರಲ್ಲಿ  ಪೂರ್ಣವಾಗಿ ಚಾರ್ಜಿರಬೇಕು. ಆದರೆ ಚಾರ್ಜು ಮಾತ್ರವಿದ್ದು ಅದರಲ್ಲಿ ಸಿಮ್ ಕಾರ್ಡ್ ಇಲ್ಲದಿದ್ದರೆ? ಸಿಮ್ ಕಾರ್ಡ್ ಬೇಕು ಮತ್ತು ಮೊಬೈಲ್ ಟವರ್‌ನ ಕ್ಷೇತ್ರದ ವ್ಯಾಪ್ತಿಯಲ್ಲಿರಬೇಕು. ಈ ಮೂರು ಇದ್ದಾಗ ಮಾತ್ರವೇ ಸೆಲ್ ಫೋನ್ ಸರಿಯಾಗಿ ಕೆಲಸ ಮಾಡುತ್ತದೆ.
ಅದೇ ರೀತಿಯಾಗಿ, ಜೀವನ ಯಶಸ್ವಿಯಾಗಲು ಮೂರು ವಿಷಯಗಳು ಬೇಕು;- ಸೇವ, ಸತ್ಸಂಗ ಮತ್ತು ಕೃಪೆ. ನಿಮ್ಮ ಬಳಿ  ಅಪಾರ ಕೃಪೆಯಿದೆಯೆಂದು ತಿಳಿದುಕೊಳ್ಳಿ ಮತ್ತು ಭಗವಂತ ನಿಮ್ಮವನೇ ಎಂಬುದನ್ನು ಅರ್ಥಮಾಡಿಕೊಳ್ಳಿ. ಸತ್ಸಂಗವೇ ಚಾರ್ಜು. ಸೇವೆಯೇ ಸಿಮ್‌ಕಾರ್ಡ್. ಸೇವೆಯಿಂದ ಏನಾಗುತ್ತದೆ? ಸೇವೆ ಮಾಡಿದಾಗ ಆಶೀರ್ವಾದಗಳು ಲಭ್ಯವಾಗುತ್ತದೆ. ಈ ಆಶೀರ್ವಾದದಿಂದ ಜೀವನದಲ್ಲಿ ಶಕ್ತಿ ಹೆಚ್ಚುತ್ತದೆ. ನಂತರ ಸಾಧನೆ, ಅಭ್ಯಾಸಗಳು. ಸಾಧನೆ ಎಂದರೇನು? ಯಾವುದು ನಿಮ್ಮ ಆತ್ಮದೊಡನೆ ಸಂಪರ್ಕ ಕಲ್ಪಿಸುತ್ತದೋ, ಭಗವಂತನೊಡನೆ, ಆ ಅನಂತ ಶಕ್ತಿಯೊಡನೆ ಸಂಪರ್ಕ ಕಲ್ಪಿಸುತ್ತದೋ, ಅದು. 

ಪ್ರಶ್ನೆ;- ಭಗವಂತನ ಬಗ್ಗೆ ಸ್ವಲ್ಪ ಮಾತನಾಡುತ್ತೀರೆ? ದಿವ್ಯತೆಯೊಡನೆ ನಾನು ಹೇಗೆ ಸಂಬಂಧ ಕಲ್ಪಿಸಿಕೊಳ್ಳುವುದು? 
ಶ್ರೀ ಶ್ರೀ ;- ಭಗವಂತ ಯಾರೇ ಆಗಿರಲಿ, ಭಗವಂತನಿಗೆ ನಾನು ಸೇರಿದ್ದೇನೆ ಎಂಬ ನಂಬಿಕೆ. ದಿವ್ಯತೆಯು ಎಲ್ಲೋ ಆಕಾಶದಲ್ಲಿಲ್ಲ. ದಿವ್ಯತೆಯು ನಿಮ್ಮೊಳಗೆಯೇ, ನಿಮ್ಮ ಚೈತನ್ಯ ರೂಪದಲ್ಲಿದೆ.

ಪ್ರಶ್ನೆ;- ಸಮಾಜವನ್ನು ಸುಭದ್ರವಾಗಿಸಲು ಯಾವ ಸ್ತಂಭಗಳು ಅವಶ್ಯಕ? 
ಶ್ರೀ ಶ್ರೀ;- ಸಮಾಜದ ನಾಲ್ಕು ಸ್ತಂಭಗಳು ಎಂದರೆ, ಮೊದಲನೆಯದಾಗಿ ಆರ್ಥಿಕ ವ್ಯವಸ್ಥೆ-ಕೈಗಾರಿಕೆ ಮತ್ತು ವ್ಯಪಾರ. ಎರಡನೆಯದಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ತಳಹದಿ ಮತ್ತು ಮೂರನೆಯದು ರಾಜಕೀಯ. ಇನ್ನೂ ಒಂದಿದೆ .. .. ಯಾವುದದು? ನೀವೆಲ್ಲಾ ಅದರ ಬಗ್ಗೆ ಯೋಚಿಸಲಿ ಎಂದು ನಿಮಗೆ ಬಿಟ್ಟಿದ್ದೇವೆ. 

ಪ್ರಶ್ನೆ;- ಈ ಜಗತ್ತಿನಲ್ಲಿ ಹೆಚ್ಚು ಹೆಚ್ಚಿನ ಜ್ಞಾನವನ್ನು ಹೇಗೆ ಪಡೆದುಕೊಳ್ಳುವುದು?
ಶ್ರೀ ಶ್ರೀ;- ಪ್ರತೀ ಕ್ಷಣವೂ ಈ ಜಗತ್ತಿನಿಂದ ಏನಾದರೊಂದನ್ನು ಪಡೆದುಕೊಳ್ಳುತ್ತಲೇ ಇರುತ್ತೇವೆ. ಅದಕ್ಕಾಗಿ ಬೇಕಾಗಿರುವುದೆಲ್ಲಾ ಕೇವಲ ಅರಿವು. ಪ್ರತಿಯೊಂದು ವ್ಯಕ್ತಿಯೂ ಸಹ ಭಗವಂತನಿಂದ ರಚಿಸಲಾದ ಒಂದು ಸುಂದರವಾದ ಗ್ರಂಥ.  ನಿಮ್ಮ ಮನಸ್ಸನ್ನೇ ತಿಳಿದುಕೊಳ್ಳಿ ಮತ್ತು ನಿಮ್ಮ ಸುತ್ತಲೂ ಇರುವ ಜನರ ಮನಸ್ಸನ್ನು ಗಮನಿಸಿ. ನಾವೇನು ಮಾಡುತ್ತೇವೆ? ನಮ್ಮ ಮನಸ್ಸನ್ನು ಗಮನಿಸದೆ ಇತರರ ಮನಸ್ಸಿನ ಬಗ್ಗೆ ತೀರ್ಪು ನೀಡುವುದರಲ್ಲೇ ಎಲ್ಲಾ ಸಮಯವನ್ನೂ ವ್ಯರ್ಥ ಮಾಡುತ್ತಿರುತ್ತೇವೆ.  ಮೊದಲು ನಿಮ್ಮ ಮನಸ್ಸನ್ನು ಅರ್ಥಮಾಡಿಕೊಳ್ಳಿ. ಆಗ ದೊಡ್ಡ ಮನಸ್ಸಿನಲ್ಲಿ, ಎಲ್ಲರ ಮನಸ್ಸಿನಲ್ಲಿ ಏನು ನಡೆಯುತ್ತಿದೆಯೆಂದು ನೀವು ಅರ್ಥ ಮಾಡಿಕೊಳ್ಳಬಹುದು.
 ಈ ಜಗತ್ತಿನಲ್ಲಿ ಯಾರನ್ನೇ ಭೇಟಿ ಮಾಡಲಿ, ಎಲ್ಲರೊಡನೆಯೂ ಸ್ವಕೀಯ ಭಾವನೆಯನ್ನು ಅನುಭವಿಸುತ್ತೇವೆ. ಯಾರನ್ನು ಭೇಟಿ ಮಾಡಿದರೂ, ಅವರನ್ನು ಮೊದಲ ಸಲ ಭೇಟಿ ಮಾಡುತ್ತಿದ್ದೇವೆ ಎಂದು ನಮಗೆ ಅನಿಸುವುದೇ ಇಲ್ಲ. ಈ ಜಗತ್ತಿನಲ್ಲಿ ಬಹಳ ಸಲ ಬಂದಿದ್ದೇವೆ. ನಮಗೆ ಸ್ವಲ್ಪ ನೆನಪಿದೆ. ಆದರೆ ನೀವು ಮರೆತುಬಿಟ್ಟಿದ್ದೀರಿ. ಈ ಸಲ ನಗುತ್ತಲೇ ಇರಿ.  

ಪ್ರಶ್ನೆ;- ನಾನು ಸಾಮಾಜಿಕ ಪರಿವರ್ತನೆಯನ್ನು ತರಲು ಬಯಸುತ್ತೇನೆ. ಈ ಕೆಲಸವನ್ನು ಮಾಡಲು ವ್ಯಕ್ತಿಗಳ ಬೇರಿಗೇ ಹೊಕ್ಕಬೇಕು ಮತ್ತು ಇದು ಬದಲಿಸುತ್ತಲೇ ಇದೆಯೆಂದು ನನಗೆ ತಿಳಿದಿದೆ. ಆದರೆ ಇದನ್ನು ಹೇಗೆ ಮಾಡುವುದೆಂದು ನನಗೆ ತಿಳಿದಿಲ್ಲ. "ಆರ್ಟ್ ಆಫ್ ಲಿವಿಂಗ್" ಉಂಟು ಮಾಡುತ್ತಿರುವ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಜಾಗೃತಿಯನ್ನು ನಾನು ಮೆಚ್ಚುತ್ತೇನೆ. ಆದರೆ ನಾನು ಇದಕ್ಕೆ ಹೊಸಬನಾದ್ದರಿಂದ ಈ ದಿಶೆಯಲ್ಲಿ ಹೇಗೆ ಮುನ್ನಡೆಯುವುದೆಂದು ತಿಳಿಸುವಿರೆ?
ಶ್ರೀ ಶ್ರೀ ;- ಹೌದು, ನೀವು ಸಾಮಾಜಿಕ ಪರಿವರ್ತನೆಯನ್ನು ತರಬಹುದು. ಚೈತನ್ಯವನ್ನು ಬಲಿಷ್ಠವಾಗಿಸಿಕೊಳ್ಳಬೇಕು.  ನಿಮ್ಮ ಚೈತನ್ಯ ಪ್ರಾಚೀನವಾದದ್ದು ಮತ್ತು ಅದರ ಬಗ್ಗೆಯೂ ನಿಮ್ಮ ಗಮನವನ್ನು ಸ್ವಲ್ಪ ಹರಿಸಿ. ಆಧ್ಯಾತ್ಮಿಕ ಜ್ಞಾನವಿಹೀನರಾದವರು ಅಪೌಷ್ಠಿಕವಾಗಿರುವ ವ್ಯಕ್ತಿಗಳಂತೆ. ನಿಮ್ಮ ಆದ್ಯತೆಗಳ ಪಟ್ಟಿಯಲ್ಲಿ ನಿಮ್ಮ ಬೇರುಗಳನ್ನು ಆಳವಾಗಿಸಿಕೊಳ್ಳುವುದು ಮೊದಲಾಗೀರಬೇಕು ಮತ್ತು ನಮ್ಮ ಮೂಲದ ಬಗ್ಗೆ ಹೆಮ್ಮೆಯನ್ನು ಹೊಂದಿರಬೇಕು. 

ಪ್ರಶ್ನೆ;- ಕೆಲವು ಮಕ್ಕಳ ಮನಸ್ಸಿನಲ್ಲಿ ಅನೇಕ ಧೋರಣೆಗಳಿವೆ. ಇದು ಬಹುಶಃ ಕೆಲವು ಐತಿಹಾಸಿಕ ಘಟನೆಗಳಿಂದೆಲೋ ಅಥವಾ ಪೂರ್ವ ಜನ್ಮಗಳಿಂದಾಗಿಯೋ ಇರಬಹುದು. ಇದರ ಬಗ್ಗೆ ಮಾತನಾಡುತ್ತೀರೆ?
ಶ್ರೀ ಶ್ರೀ;- ನಿಮ್ಮ ಬಗ್ಗೆ ನೀವು ಒಳ್ಳೆಯದಾಗಿ ಅಂದುಕೊಂಡಾಗ, ಇತರರು ಸರಿಯಿಲ್ಲ ಎಂದುಕೊಳ್ಳುತ್ತೀರಿ. ಇತರರು ಒಳ್ಳೆಯವರಲ್ಲ  ಎಂದು ನೀವಂದುಕೊಂಡಾಗ, ನೀವು ಸರಿಯಿಲ್ಲ ಎಂದುಕೊಳ್ಳುತ್ತೀರಿ. ಇಂತಹ ಧೋರಣೆಗಳು ಇಂದು ಅನೇಕ ಮಕ್ಕಳಲ್ಲಿವೆ. ನಾನೂ ಕೆಟ್ಟ ವ್ಯಕ್ತಿಯಲ್ಲ, ಇತರರೂ ಕೆಟ್ಟವರಲ್ಲ ಎಂಬ ಧೋರಣೆಯನ್ನು ಹೊಂದಿದಾಗ ಎಲ್ಲರನ್ನೂ ಸ್ವೀಕರಿಸುವ ಮನೋಭಾವವುಂಟಾಗುತ್ತದೆ ಮತ್ತು ತಮ್ಮನ್ನೂ ಸ್ವೀಕರಿಸುತ್ತಾರೆ. ಸಾಧನೆ ಮಾಡುವುದರಿಂದ ಗತದ ಎಲ್ಲಾ ಸಂಸ್ಕಾರಗಳನ್ನೂ ಅಳಿಸಿಬಿಡಬಹುದು.