ಬುಧವಾರ, ಜನವರಿ 5, 2011

ಧ್ಯಾನದ ಒಳಗುಟ್ಟು

ಜನವರಿ ೫, ೨೦೧೧, ಬೆಂಗಳೂರು

ಪ್ರಶ್ನೆ : ನಮ್ಮ ಆಧುನಿಕ ಸಮಾಜದಲ್ಲಿ ಜನರೇಕೆ ಧ್ಯಾನ ಮಾಡಬೇಕು?
ಶ್ರೀ ಶ್ರೀ : ಧ್ಯಾನದಿಂದ ನಮ್ಮ ಜೀವನದಲ್ಲುಂಟಾಗುವ ಲಾಭಗಳನ್ನು ನೋಡಿದರೆ, ಧ್ಯಾನ ನಮಗೆ ಇನ್ನೂ ಹೆಚ್ಚು ಪ್ರಸಕ್ತ ಎನಿಸುತ್ತದೆ. ಪ್ರಾಚೀನ ಕಾಲಗಳಲ್ಲಿ ಧ್ಯಾನವನ್ನು ಆತ್ಮಸಾಕ್ಷಾತ್ಕಾರಕ್ಕಾಗಿ ಬಳಸುತ್ತಿದ್ದರು, ಜ್ಞಾನೋದಯಕ್ಕಾಗಿ ಧ್ಯಾನ ಮಾಡುತ್ತಿದ್ದರು. ದುಃಖಗಳಿಂದ ಮತ್ತು ಬವಣೆಗಳಿಂದ ಹೊರಬರಲು ಧ್ಯಾನ ಒಂದು ಮಾರ್ಗವಾಗಿತ್ತು. ಧ್ಯಾನದಿಂದ ನಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಬಹುದು.
ಬೇಕಿದ್ದರೆ ಮೋಕ್ಷ ಪಡೆಯುವುದನ್ನು ಪಕ್ಕಕ್ಕಿಟ್ಟುಬಿಡಿ. ಇಂದಿನ ದಿನದ ಒತ್ತಡದ ಮತ್ತು  ಉದ್ವೇಗದ ನಿವಾರಣೆಗಾಗಿ ಧ್ಯಾನ ಬೇಕು. ನೀವು ಹೆಚ್ಚು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರೆ, ಹೆಚ್ಚಿನ ಧ್ಯಾನ ಅವಶ್ಯಕ. ನಿಮ್ಮಲ್ಲಿ ಜವಾಬ್ದಾರಿಗಳು ಮತ್ತು ಹೆಬ್ಬಯಕೆಗಳು ಹೆಚ್ಚಾಗಿದ್ದಷ್ಟೂ ನೀವು ಹೆಚ್ಚಿನ ಧ್ಯಾನ ಮಾಡುವ ಅವಷ್ಯಕತೆಯಿದೆ. ಇದೇಕೆಂದರೆ, ಧ್ಯಾನದಿಂದ ನಿಮ್ಮ ಒತ್ತಡದ ಮತ್ತು ಉದ್ವೇಗದ ನಿವಾರಣೆಯಾಗುವುದಲ್ಲದೆ, ಧ್ಯಾನದಿಂದ ನಿಮ್ಮ ಸಾಮರ್ಥ್ಯಗಳು ಹೆಚ್ಚುತ್ತವೆ, ನಿಮ್ಮ ನರವ್ಯವಸ್ತೆ ಮತ್ತು ನಿಮ್ಮ ಮನಸ್ಸು ಬಲಿಷ್ಠವಾಗುತ್ತದೆ. ಒತ್ತಡದ ನಿವಾರಣೆ ಮಾತ್ರವಲ್ಲದೆ ನಿಮ್ಮ ದೇಹದಿಂದ ವಿಷಕಾರಿ ಪದಾರ್ಥಗಳನ್ನೆಲ್ಲಾ ತೆಗೆದುಹಾಕಿ ಮನಸ್ಸಿಗೆ ಆರಾಮವನ್ನು ಕೊಡುತ್ತದೆ. ಎಲ್ಲಾ ವಿಧದಲ್ಲೂ ನಿಮ್ಮನ್ನು ಹೆಚ್ಚು ಯೋಗ್ಯರನ್ನಾಗಿ ಮಾಡುತ್ತದೆ, ನಿಮ್ಮ ಸರ್ವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇನ್ನೇನು ಬೇಕು ನಿಮಗೆ? ನೀವು ಸಂತೊಷದಿಂದ ಮತ್ತು ಆರೋಗ್ಯವಂತರಾಗಿರಬೇಕೆಂದರೆ ನೀವು ಧ್ಯಾನ ಮಾಡಲೇಬೇಕು.
ಪ್ರಶ್ನೆ : ಧ್ಯಾನದ ಕಲೆಯು ಮನಸ್ಸಿಗೆ, ದೇಹಕ್ಕೆ, ಆಧ್ಯಾತ್ಮಿಕ ಆಕಾಂಕ್ಷೆಗಳಿಗೆ, ಸಂಬಂಧಗಳಿಗೆ ಮತ್ತು ಇಡೀ ಸಮಾಜಕ್ಕೆ ಯಾವ ರೀತಿಯಾಗಿ ಸಹಾಯಕವಾಗಿರುತ್ತದೆ?
ಶ್ರೀ ಶ್ರೀ : ಧ್ಯಾನದಿಂದ ನಿಮ್ಮ ದೃಷ್ಟಿಕೋನ ಬದಲಾಗುತ್ತದೆ.  ವಿಷಯಗಳನ್ನು ನೀವು ಗ್ರಹಿಸುವ ರೀತಿಯನ್ನು ಬದಲಾಯಿಸುತ್ತದೆ. ಮನಸ್ಸಿನಲ್ಲಿ ಸ್ಪಷ್ಟತೆಯನ್ನು ತರುತ್ತದೆ. ನಿಮ್ಮ ಸುತ್ತಲೂ ಇರುವ ಜನರೊಡನೆ ನಿಮ್ಮ ವ್ಯವಹಾರ ಸುಧಾರಿಸುತ್ತದೆ - ನೀವೇನು ಹೇಳುತ್ತೀರಿ, ಪ್ರತಿಕ್ರಿಯಿಸುತ್ತೀರಿ  ಮತು ಬೇರೆ ಬೇರೆ ಪರಿಸ್ಥಿತಿಗಳಲ್ಲಿ ಹೇಗೆ ಕ್ರಿಯಾತ್ಮಕವಾಗುತ್ತೀರಿ. ಅರಿವು ಹೆಚ್ಚಾಗುತ್ತದೆ. ಒತ್ತಡ-ರಹಿತ ಸಮಾಜ, ವ್ಯಕ್ತಿಗಳಲ್ಲಿ ಶಾಂತಿ ಮತ್ತು ಆರೋಗ್ಯ, ಹಿಂಸಾ-ರಹಿತ ಸಮಾಜ ಮತ್ತು ದುಃಖ ರಹಿತವಾದ ಆತ್ಮ ಇವೆಲ್ಲವೂ ಧ್ಯಾನದಿಂದ ಉಂತಾಗುವ ಲಾಭಗಳು. 
ಪ್ರಶ್ನೆ : ಸಹಜ ಸಮಾಧಿ ಧ್ಯಾನವು ಅಷ್ಟೊಂದು ಅನುಪಮವಾದ ಧ್ಯಾನವೇಕಾಗಿದೆ.
ಶ್ರೀ ಶ್ರೀ : ಅದು ಅತೀ ಸರಳವಾದದ್ದು ಮತ್ತು ಗಹನವಾದದ್ದು. ಸಾಮಾನ್ಯವಾಗಿರುವ ಧಾರಣೆಯೆಂದರೆ, ಗಹನವಾಗಿರುವಂತದ್ದು ಕ್ಲಿಷ್ಟಕರವಾಗಿರಬೇಕು ಮತ್ತು ಸರಳವಾಗಿರುವಂತದ್ದು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಸಹಜ ಸಮಾಧಿಯು ಸರಳತೆಯ, ಗಹನತೆಯ ಮತ್ತು ಆಳದ ಒಂದು ಸಮ್ಮಿಳಣ.
ಪ್ರಶ್ನೆ : ಈ ಜ್ಞಾನವನ್ನು ಸಾವಿರಾರು ವರ್ಷಗಳಿಂದ ಜನರು ಈ ಜ್ಞಾನದ ತಂತ್ರವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ಬಹಳಷ್ಟು ಗುರುಗಳು ಧ್ಯಾನವನ್ನು ಹೇಳಿಕೊಡುವ ಮೊದಲು ಓರ್ವ ವಿದ್ಯಾರ್ಥಿಯನ್ನು ಪರೀಕ್ಷಿಸುತ್ತಾರೆ. ಯಾರು ಅರ್ಹರೋ ಅವರಿಗೆ ಮಾತ್ರ ಈ ಜ್ಞಾನವನ್ನು ಕೊಡುತ್ತಿದ್ದರು. ಈ ಜ್ಞಾನವನ್ನು ಕೊಡಲು ಸರಿಯಾದ ವಿದ್ಯಾರ್ಥಿಯು ಬರಲಿ ಎಂದು ಕಾಯುತ್ತಿದ್ದರು. ಪ್ರಾಚೀನ ಕಾಲದಲ್ಲಿ ಬಹಳ ಕಷ್ಟ. ಗುರುಗಳಿಂದ ಏನಾದರು ಪಡೆಯುವ ಮೊದಲು ಗುರುಗಳನ್ನು ಮೆಚ್ಚಿಸಬೇಕಾಗುತ್ತಿತ್ತು. ಈಗ ವಿಷಯಗಳು ಬದಲಾಗಿವೆ. ಗುರುಗಳೇ ಎಲ್ಲರನ್ನೂ ಮೆಚ್ಚಿಸಬೇಕಾದ ಪರಿಸ್ಥಿತಿ..
ನಾವು ಬೇರೆಯ ನಿಲುವನ್ನೇ ತಾಳಿದೆವು. ಎಲ್ಲಾ ಕದಗಳನ್ನು ತೆರೆದು, ಎಲ್ಲರಿಗೂ ಕೊಟ್ಟುಬಿಟ್ಟಿದ್ದೇವೆ, ಎಲ್ಲರೂ ಅವರವರ ಸಾಮರ್ಥ್ಯಕ್ಕೆ ತಕ್ಕ ಹಾಗೆ ಮತ್ತು ಪ್ರಾಮಾಣಿಕತೆಗೆ ತಕ್ಕಂತೆ ಅಭಿವೃದ್ಧಿ ಹೊಂದಲಿ ಎಂದು.