ಬುಧವಾರ, ಜನವರಿ 26, 2011

ಮನಸ್ಸಿನ, ಮನೋಭಾವನೆಯ ಹಾಗೂ ಸಮಯದ ಸುಂದರ ವಿಜ್ಞಾನ

ಜನವರಿ ೨೬, ೨೦೧೧, ಬೆಂಗಳೂರು ಆಶ್ರಮ
ಪ್ರಶ್ನೆ;-  ಗುರೂಜಿ, ಒಂದು ಗುರುವನ್ನು ಆಯ್ದುಕೊಂಡ ನಂತರ ಇತರ ಗುರುಗಳ ಬೋಧನೆಗಳನ್ನು ನಾವು ಪಾಲಿಸಬಾರದೆಂದು ಅರ್ಥವೆ? ಒಂದಕ್ಕಿಂತಲೂ ಹೆಚ್ಚು ಗುರುಗಳನ್ನು ಹೊಂದಬಹುದೆ?

ಶ್ರೀ ಶ್ರೀ;- ಓ ಒಂದು ಗುರುವನ್ನು ನಿಭಾಯಿಸುವುದೇ ಎಷ್ಟು ಕಷ್ಟ! ನೀವು ಹೇಗೆ... (ನಗು) ಅದು ಸುಲಭವಾದ ವಿಷಯವಲ್ಲ. ಎಲ್ಲರನ್ನೂ ಗೌರವಿಸಿ, ಆದರೆ ಒಂದು ಮಾರ್ಗವನ್ನು ಅನುಸರಿಸಿ. ಎಲ್ಲರನ್ನೂ ಸನ್ಮಾಸಿ.  ಆಗ ಎಲ್ಲಾ ಗುರಗಳೂ ಒಂದನ್ನೇ ಹೇಳಿದ್ದಾರೆಂದು ನೀವು ತಿಳಿದುಕೊಳ್ಳುವಿರಿ. ಇರುವುದು ಒಂದೇ ಸತ್ಯ  ಆದ್ದರಿಂದ ಒಂದನ್ನೇ ಹೇಳಿದ್ದಾರೆ, ಆದರೆ ಕಾಲಕ್ಕೆ ತಕ್ಕ ಹಾಗೆ ಅವರ ರೀತಿಗಳು ಬೇರೆ ಬೇರೆಯಾಗಿರುತ್ತದೆಯಷ್ಟೆ.

ಈ ಪಥದಲ್ಲಿ ನೀವಿರುವಾಗ ಯಾವ ಗೊಂದಲವನ್ನೂ ಹೊಂದಬೇಡಿ.  ನೀವು ಯಾವುದೇ ಪಥದಲ್ಲಿ ಇದ್ದಿದ್ದರೂ ಸಹ, ಅವರೆಲ್ಲರೂ ನಿಮ್ಮನ್ನು ಆಶೀರ್ವದಿಸಿದ್ದಾರೆ. ಅದರಿಂದಾಗಿಯೇ ನೀವು ಇಲ್ಲಿಗೆ ಬಂದಿರುವುದು. ಆ ಪಥಗಳ, ಆ ಗುರುಗಳ, ಆ ಶಿಕ್ಷಕರ ಸೇವೆಯನ್ನು ನೀವು ಮಾಡಿದ್ದರಿಂದ, ಅವರ ಆಶೀರ್ವಾದವು ನಿಮ್ಮನ್ನು ಇಲ್ಲಿಗೆ ಕರೆತಂದಿದೆ. ಈ ನಂಬಿಕೆಯನ್ನಿಟ್ಟುಕೊಂಡು ಮುನ್ನಡೆಯಿರಿ. ಸರಿಯೆ?

ಎಲ್ಲವನ್ನೂ ನೀವು ಮಾಡುತ್ತಾ ಹೋದರೆ ನೀವು ಪೂರ್ಣ ಗೊಂದಲದಲ್ಲಿರುತ್ತೀರಿ, ಅಷ್ಟೆ. ಆದ್ದರಿಂದ ನಾವು ಹೇಳುವುದು, ಒಂದನ್ನು ಎಲ್ಲರಲ್ಲೂ ಕಾಣಿ ಮತ್ತು ಎಲ್ಲರನ್ನೂ ಒಂದರಲ್ಲೇ ಕಾಣಿ. ಇದೇ ನಿಯಮ. ಎಲ್ಲರನ್ನೂ ಸನ್ಮಾನಿಸಿ, ಒಂದೇ ಪಥದಲ್ಲಿ ನಡೆಯಿರಿ.

ಪ್ರಶ್ನೆ;-  ನಮ್ಮ ಗುರುಗಳು ನಮ್ಮ ಮೇಲೆ ಅತೃಪ್ತರಾದರೆ ಏನು ಮಾಡುವುದು?

ಶ್ರೀ ಶ್ರೀ;- ಬೇಗನೆ ಅಭಿವೃದ್ಧಿ ಹೊಂದುತ್ತೀರಿ! ನಿಮ್ಮ ಅಭಿವೃದ್ಧಿಯ ಬಗ್ಗೆ ಗುರುಗಳು ಅತೃಪ್ತರಾಗಿದ್ದಾರೆ. ಬೇಗನೆ ಸಿದ್ಧರಾಗಿ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿ. ಬೇಗ ಓಡಿ!

ಪ್ರಶ್ನೆ;-  ಗುರೂಜಿಯವರೆ, ಮನೋಭಾವನೆಗೂ ಮತ್ತು ದಿನದ ಸಮಯಕ್ಕೂ ಏನಾದರೂ ಸಂಬಂಧವಿದೆಯೆ? ಬೇರೆ ಬೇರೆ ಸಮಯಗಳಲ್ಲಿ ನಮಗೆ ಬೇರೆ ರೀತಿಯಾಗಿ ಅನಿಸುತ್ತದೆ. ರಾತ್ರಿ ವೇಳೆ ಕೇಳಗಿಳಿದಂತೆ ಅನಿಸುತ್ತದೆ.

ಶ್ರೀ ಶ್ರೀ;- ಹೌದು ಹೌದು ಸಮಯ ಮತ್ತು ಮನಸ್ಸಿನ ನಡುವೆ ಸಂಬಂಧವಿದೆ. ಇದರ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಬೇಕು. ಸಮಯ ಮತ್ತು ಮನಸ್ಸು ಒಂದೇ. ಎಂಟು ತತ್ತ್ವಗಳಿವೆ. ವೈಶೇಷಿಕ ದರ್ಶನದಲ್ಲಿ ಕನಾಡರು ಮತ್ತು ಇತರರು "ದೇಶ ಕಾಲ ಮನಃ" ಎಂದಿದ್ದಾರೆ. ದೇಶ ಎಂದರೆ ಸ್ಥಳ. ಕಾಲ ಎಂದರೆ ಸಮಯ. ಮನಃ ಎಂದರೆ ಮನಸ್ಸು. ಇವೆಲ್ಲವೂ ತತ್ತ್ವಗಳು ಮತ್ತು ಈ ಎಲ್ಲಾ ತತ್ತ್ವಗಳೂ ಒಂದಕ್ಕೋದು ಸಂಬಂಧಪಟ್ಟಿವೆ. ಆಕಾಶ ಮತ್ತು ಸಮಯ ಸಂಬಂಧಪಟ್ಟಿವೆ. ಭೂಮಿಯ ಮೇಲೆ ಈ ಒಂದು ದಿನ ಇನ್ನೊಂದು ಗ್ರಹದಲ್ಲಿ, ಚಂದ್ರಗ್ರಹದಲ್ಲಿ ಆಗಲೇ ಬಹಳಷ್ಟು ದಿನಗಳಾಗಿರುತ್ತದೆ. ನೀವು ಗುರುಗ್ರಹದಲ್ಲಿದ್ದರೆ ಮಾನವರ ಒಂದು ವರ್ಷ ಅವರಿಗೆ ಒಂದು ತಿಂಗಳು. ಗುರು ಗ್ರಹದಲ್ಲಿ ನೀವು ಒಂದು ವರ್ಷವನ್ನು ಅನುಭವಿಸಬೇಕೆಂದಿದ್ದರೆ, ಅದಕ್ಕೆ ಭೂಮಿಯ ಹನ್ನೆರಡು ವರ್ಷಗಳು ಹಿಡಿಯುತ್ತದೆ.  ಗುರು ಗ್ರಹವು ಸೂರ್ಯನ ಸುತ್ತಲೂ ಒಂದು ಸುತ್ತು ಸುತ್ತಲು ಹನ್ನೆರಡು ವರ್ಷಗಳು ತೆಗೆದುಕೊಳ್ಳುತ್ತದೆ. ಮತ್ತೆ ಶನಿಗ್ರಹಕ್ಕೆ ಭೂಮಿಯ ಮೂವತ್ತು ವರ್ಷಗಳು, ಅದರ ಒಂದು ವರ್ಷ! 

ಅದೇ ರೀತಿಯಾಗಿ ಪಿತೃಗಳಿಗೆ, ಎಂದರೆ ಮರಣಿಸಿದವರಿಗೆ ನಮ್ಮ ಒಂದು ಮಾನವ ವರ್ಷ, ಒಂದು ದಿನ.  ನಮ್ಮ ಅರು ತಿಂಗಳು ಅವರಿಗೆ ಹಗಲು ಮತ್ತುಳಿದ ಆರು ತಿಂಗಳು ಅವರಿಗೆ ರಾತ್ರಿ. ಆದ್ದರಿಂದ, ದೇಹವನ್ನಗಲಿದ ಆತ್ಮಕ್ಕೆ ನಮ್ಮ ಇಡೀ ಒಂದು ವರ್ಷ ಒಂದು ದಿನವಾಗುತ್ತದೆ.  ಬೇರೆ ಬೇರೆ ಆಯಾಮಗಳಲ್ಲಿ ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಸಮಯವು ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ಕಾಲ ಮತ್ತು ಆಕಾಶ ಸಂಬಂಧಪಟ್ಟಿದೆ.  ಇದ್ದನ್ನು ಕಾಲ-ಆಕಾಶದ ಕ್ರತೆ ಎಂದು ಕರೆಯುತ್ತಾರೆ.  ಮೂರನೆಯ ಆಯಾಮವಾದ ಮನಸ್ಸಿನ ವಿಷಯಕ್ಕೂ ಇದು ಅನ್ವಯಿಸುತ್ತದೆ. ಮನಸ್ಸಿಲ್ಲದಿರುವ ಸ್ಥಿತಿಗೆ, ಪರಮ ಚೈತನ್ಯಕ್ಕೆ ಮಹಾಕಾಲ, ಶಿವ, ತುರಿಯಾವಸ್ಥೆ ಎಂದು ಕರೆಯುತ್ತಾರೆ.

ಮಹಾಕಾಲ ಎಂದರೆ ಮಹತ್ತಾದ ಕಾಲ, ಮನಸ್ಸೇ ಇಲ್ಲದಿರುವ ಸ್ಥಿತಿ. ಬೆಳಿಗ್ಗೆ ೪.೩೦ಯಿಂದ ೬.೩೦ಯವರೆಗೆ, ಸೂರ್ಯೋದಯದ ಮೊದಲು, ಅರುಣೋದಯದ ಮೊದಲು ಅತೀ ಸೃಜನಾತ್ಮಕವಾದ ಸಮಯವೆನ್ನುತ್ತಾರೆ.  ಅದೇ ಬ್ರಹ್ಮಮುಹೂರ್ತ. ನಂತರ ಪ್ರತೀ ಎರಡು ಗಂಟೆಗಳನ್ನು ಲಗ್ನ ಎಂದು ಕರೆಯುತ್ತಾರೆ, ಲಗ್ನ ಎಂದರೆ ಕಾಲದ ಒಂದು ಮಾತ್ರ, ಪ್ರಮಾಣ. ಈ ಮಾತ್ರವು ಮನಸ್ಸಿನ ಸ್ಥಿತಿಗೆ ಸಮಬಂಧಪಟ್ಟಿದೆ.  ಮತ್ತೆ ಇದು ಚಂದ್ರನ ಮತ್ತು ಸೂರ್ಯನ ಸ್ಥಿತಿಗೆ ಸಂಬಂಧಪಟ್ಟಿದೆ. ಎಷ್ಟೊಂದು ಅಂಶಗಳಿವೆ. ಒಂದು ದಿನ ಸಮಯ ಅಥವಾ ಕೆಲವು ಗಂಟೆಗಳು ಮಾತ್ರವಲ್ಲದೆ ದಿನಗಳ ಗುಣಮಟ್ಟವೂ ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತದೆ.  ಹತ್ತು ಬೇರೆ ಬೇರೆ ಅಂಶಗಳು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ. ಮನಸ್ಸು ಪ್ರತಿ ಎರಡೂವರೆ ದಿನಗಳಿಗೊಮ್ಮೆ ಬದಲಾಯಿಸುತ್ತದೆ, ಮನೋಭಾವನೆಗಳು ಬದಲಾಯಿಸುತ್ತವೆ. ನಿಮಗೆ ದುಃಖವಾಗಿದ್ದರೆ ಗರಿಷ್ಠ ಮಟ್ಟ, ಎಂದರೆ ಎರಡೂವರೆ ದಿನಗಳವರೆಗೆ ಮುಂದುವರಿಯುತ್ತದೆ.  ಭಾವನೆಯು ಒಂದು ಗರಿಷ್ಠ ಮಟ್ಟಕ್ಕೆ ಏರಿ ಕುಸಿಯುತ್ತದೆ.  ಎರಡೂವರೆ ದಿನಗಳ ನಂತರ ಅದೇ ಭಾವನೆಯು, ಅಷ್ಟೇ ತೀವ್ರತೆಯನ್ನು ಹೊಂದಿರುವುದಿಲ್ಲ. ಸಾಧ್ಯವೇ ಇಲ್ಲ.  ಖಂಡಿತ ಬದಲಾಯಿಸುತ್ತದೆ. ಮನಸ್ಸು, ಮನೋಭಾವನೆಗಳು ಮತ್ತು ಸಮಯ ಹೇಗೆ ಸಂಬಂಧಪಟ್ಟಿವೆ ಎಂಬುದು ಅತೀ ದೊಡ್ಡ ವಿಜ್ಞಾನ.

ಜ್ಯೋತಿಷ್ಯಶಾಸ್ತ್ರವು ಇದರ ಬಗ್ಗೆ ಹೆಚ್ಚು ಒಳನೋಟವನ್ನು ಹೊಂದಿದೆ. ಜ್ಯೋತಿಷಿಗಳು ವಾರಭವಿಷ್ಯವನ್ನು ನುಡಿಯುತ್ತಾರೆ, "ಓ ಸಂಬಂಧಗಳಿಗೆ ಒಳ್ಳೆಯ ಸಮಯ, ಹಣ ಸಂಪಾದನೆಗೆ ಒಳ್ಳೆಯ ಸಮಯ, ಅದು, ಇದು" ಎಂದು, ಇವೆಲ್ಲವನ್ನೂ ಬರೆಯುತ್ತಾರೆ" (ನಗು). ಎಲ್ಲಾ ವಿಷಯಗಳನ್ನೂ ಸಾಮಾನ್ಯವಾಗಿ ಮಾಡಿಬಿಡುತ್ತಾರೆ. "ನೀವು ಈ ಸಮಯದಲ್ಲಿ ಹುಟ್ಟಿದ್ದರೆ ನಿಮಗಿದು ಒಳ್ಳೆಯದು.  ಇದನ್ನು ಮಾಡಿ" ಎನ್ನುತ್ತಾರೆ.  ಇವರು ಮಾಡುವುದೆಲ್ಲಾ ಹಣವನ್ನು ಸಂಪಾದಿಸುವ ಸಲುವಾಗಿಯೇ.  ಅದು ಪೂರ್ಣವಾಗಿ ಸುಳ್ಳಲ್ಲ. ಅದರಲ್ಲಿ ಸ್ವಲ್ಪ ಸತ್ಯಾಂಶವೂ ಇದೆ. ಅದರ ತಳಹದಿಯಲ್ಲಿ ಸತ್ಯವಿದೆ. ಮನಸ್ಸು ಮತ್ತು ಸಮಯ ಸಂಬಂಧಪಟ್ಟಿವೆ ಎಂಬ ಸಿದ್ಧಾಂತವು ನಿಜವಾದದ್ದು. 

ಮನಸ್ಸು ಎಂದರೆ ಮನೋಭಾವನೆಗಳು, ಆಲೋಚನೆಗಳು, ಅಭಿಪ್ರಾಯಗಳು, ವಿಚಾರಗಳು, ನಾವು ಶೇಖರಿಸಿಕೋಳ್ಳುವ ಎಲ್ಲವೂ. ಮನಸ್ಸಿಲ್ಲದಿರುವಿಕೆಯೇ ಧ್ಯಾನ. ನೀವು ಧ್ಯಾನ ಮಾಡಿದಾಗ ಮನಸ್ಸಿನ ಪ್ರಭಾವದಿಂದ ಹೊರಬರುತ್ತೀರಿ ಮತ್ತು ಆತ್ಮದೊಳಗೆ ಹೋಗುತ್ತೀರಿ. ಆತ್ಮವೇ ಶಿವತತ್ತ್ವ. ಶಿವತತ್ತ್ವ ವೆಂದರೆ ಸದಾ ಮಂಗಳಮಯವಾಗಿರುವಂತದ್ದು, ಆದರಿಸುವಂತದ್ದು, ಉತ್ಥಾಪಿಸುವಂತದ್ದು, ಪ್ರೇಮಮಯಿಯಾದಂತದ್ದು. ನಿಮ್ಮ ಆಳದಲ್ಲಿರುವ ಆ ಪ್ರೇಮಮಯಿಯಾದ, ಆದರಣೀಯ, ಉತ್ಥಾಪನಮಯವಾದ ಮತ್ತು ಮಂಗಳಮಯವಾದ ಚೈತನ್ಯವು ಮನಸ್ಸಿನ ಮತ್ತು ಕಾಲದ ಎಲ್ಲಾ ನಕಾರಾತ್ಮಕ ಪ್ರಭಾವಗಳನ್ನೂ ಇಲ್ಲವಾಗಿಸಿಬಿಡುತ್ತದೆ. ಆದ್ದರಿಂದ ಭಾರತದಲ್ಲಿರುವ ನಂಬಿಕೆಯೆಂದರೆ, 

"ಕೆಟ್ಟಕಾಲ ಬಂದಾಗ ಸುಮ್ಮನೆ "ಓಂ ನಮಃ ಶಿವಾಯ" ಎನ್ನಿರಿ, ಎಲ್ಲವೂ ಹೊರಟುಹೋಗುತ್ತದೆ." ಎಲ್ಲಾ ಕೆಟ್ಟಕಾಲವೂ ಹೊರಟುಹೋಗುತ್ತದೆ.

"ಮನಃ" ಎಂಬ ಪದವನ್ನು ತಿರುಗುಮುರುಗಾಗಿಸಿ ಓದಿದಾಗ ಅದು "ನಮಃ" ಆಗುತ್ತದೆ. "ಮನಃ" ಎಂದರೆ ಬಹಿರ್ಮುಖವಾದ, ಜಗತ್ತಿನಲ್ಲಿ ತಲ್ಲೀನವಾಗಿರುವ ಚೈತನ್ಯ. "ನಮಃ" ಎಂದರೆ ಅಂತರ್ಮುಖವಾದ ಚೈತನ್ಯ. "ಶಿವಾಯ" ಎಂದರೆ ಶಿವತತ್ತ್ವಕ್ಕೆ, ಚೈತನ್ಯದ ತುರಿಯಾವಸ್ಥೆಗೆ, ಅಸ್ತಿತ್ವದ ಅತೀ ಸೂಕ್ಷ್ಮವಾದ ಅಂಶಕ್ಕೆ ನಮಸ್ಕಾರ. "ನಮಃ" ಎಂದರೆ ಮನಸ್ಸು ಸೃಷ್ಟಿಯ ಮೂಲದೆಡೆಗೆ ತೆರಳುತ್ತದೆ. ಇದರಿಂದ ಎಲ್ಲವೂ ಮಂಗಳಮಯವಾದ ಅನುಭವಗಳಾಗಿಬಿಡುತ್ತವೆ.

ಪ್ರಶ್ನೆ:- ಎಲ್ಲಾ ಪ್ರಶ್ನೆಗಳಿಗೂ ನಿಮ್ಮ ಬಳಿ ಹೇಗೆ ಉತ್ತರವಿರುತ್ತದೆ? 

ಶ್ರೀ ಶ್ರೀ;- ಈ ಪ್ರಶ್ನೆಗೆ ನಮ್ಮ ಬಳಿ ಉತ್ತರವಿಲ್ಲ!