ಗುರುವಾರ, ಜನವರಿ 13, 2011

ಈ ಜಗತ್ತು ಪ್ರಾಣಶಕ್ತಿಯ ಲೀಲೆ ಮತ್ತು ಪ್ರದರ್ಶನ

ಜನವರಿ ೧೩, ೨೦೧೧, ಮುಂಬಯಿ

ಇಂದಿನ ದಿನ ನಾವು ಒತ್ತಡದ ಬಗ್ಗೆ ಮತ್ತು ಒತ್ತಡ ನಿವಾರಣೆಯ ಬಗ್ಗೆ ಮಾತನಾಡುವುದಿಲ್ಲ. ಸಂಬಂಧಗಳ ಬಗ್ಗೆಯೂ ಬೇಡ. ಅದಕ್ಕಿಂತಲೂ ಹೆಚ್ಚು ಆಳವಾಗಿರುವುದರ ಬಗ್ಗೆ ಮಾತನಾಡೋಣ.
ನಿಮ್ಮ ವಯಸ್ಸು ನೆನಪಿದೆಯೇ? ೨೫ ಅಥವಾ ೩೦ ವರ್ಷಗಳಿರಬಹುದು, ಅಲ್ಲವೇ? ೨೫-೩೦ ವರ್ಷಗಳಿಗಿಂತಲೂ ಹಿಂದೆ ನೀವೆಲ್ಲಾ ಎಲ್ಲಿದ್ದಿರಿ? ೫೦-೬೦ ವರ್ಷಗಳ ನಂತರ ಅಥವಾ ೧೦೦ ವರ್ಷಗಳ ನಂತರ ಎಲ್ಲಿರುತ್ತೀರಿ? ನೀವು ಜನಿಸುವ ಮೊದಲೂ ಮುಂಬಯಿ ಇತ್ತು. ಈ ಸಮುದ್ರ ಆಗಲೂ ಇತ್ತು.
ನಿಮ್ಮ ತಾಯಿಯ ಗರ್ಭವನ್ನು ಹೇಗೆ ಪ್ರವೇಶಿಸಿದಿರಿ ಎಂಬ ನೆನಪಿದೆಯೆ ನಿಮಗೆ? ಈ ಜಗತ್ತಿನೊಳಗೆ ಹೇಗೆ ಬಂದಿರಿ ಎಂಬ ನೆನಪಿದೆಯೆ ನಿಮಗೆ?
೫ ವರ್ಷಗಳವರೆಗೆ ಮಗುವು ತನ್ನ ಪೂರ್ವ ಜನ್ಮವನ್ನು ನೆನಪಿನಲ್ಲಿಟ್ಟುಕೊಂಡಿರುತ್ತದೆ. ಮಗುವು ಬಣ್ಣಗಳನ್ನು ಗುರುತಿಸುತ್ತದೆ ಅಥವಾ ಕೆಲವು ವಿಷಯಗಳನ್ನು ಹೇಳುತ್ತದೆ. ಆದರೆ ಹಿರಿಯರು ಅದರ ಬಗ್ಗೆ ಹೆಚ್ಚು ಗಮನವನ್ನು ಕೊಡುವುದಿಲ್ಲ.
ಇಡೀ ವಿಶ್ವವು ಪ್ರಾಣಶಕ್ತಿಯ ಒಂದು ಲೀಲೆ. ಇಲ್ಲಿರುವ ಪ್ರತಿಯೊಂದರಲ್ಲೂ ಪ್ರಾಣಶಕ್ತಿಯಿದೆ. ಆದರೆ ಪ್ರಾಣದ ಪ್ರಮಾಣವು ಮಾತ್ರ ಬೇರೆಯಾಗಿರುತ್ತದೆ.
ಕಲ್ಲಿಗೆ ೧ ಮಾತ್ರದ ಪ್ರಾಣವಿದೆ
ನೀರಿಗೆ ೨ ಮಾತ್ರದ ಪ್ರಾಣವಿದೆ
ಬೆಂಕಿಗೆ ೩ ಮಾತ್ರದ ಪ್ರಾಣವಿದೆ
ಗಾಳಿಗೆ ೪ ಮಾತ್ರದ ಪ್ರಾಣವಿದೆ
ಆಕಾಶಕ್ಕೆ ೫ ಮಾತ್ರದ ಪ್ರಾಣವಿದೆ
ಪ್ರಾಣಿಗಳಿಗೆ ಮತ್ತು ಮರಗಳಿಗೆ ೬ ರಿಂದ ೭ ಮಾತ್ರದಷ್ಟು ಪ್ರಾಣವಿದೆ
ಮನುಷ್ಯರಿಗೆ ೮ ಮಾತ್ರದಷ್ಟು ಪ್ರಾಣವಿದೆ
ಆದ್ದರಿಂದ ಮನುಷ್ಯನನ್ನು "ಅಷ್ಟ ವಸು" ಎಂದು ಕರೆಯುತ್ತಾರೆ. ಆದರೆ ಮಾನವರು ಪೂರ್ಣವಾಗಿ ಅರಳುವ ಸ್ಥಿತಿಯನ್ನು ಹೊಂದುವ ಸಾಧ್ಯತೆಯೊಡನೆ ಜನಿಸುತ್ತಾರೆ. ಭಗವಾನ್ ಕೃಷ್ಣನಿಗೆ ಅತೀ ಗರಿಷ್ಠ ಮಟ್ಟದ ಪ್ರಾಣ -೧೬ ಮಾತ್ರಗಳು. ಆದ್ದರಿಂದಲೇ ಅವನನ್ನು "ಪೂರ್ಣಾವತಾರಿ" ಎಂದು ಕರೆಯುತ್ತಾರೆ.
ಪ್ರತಿಯೊಂದು ದೇವ/ದೇವತೆಯು ಒಂದೊಂದು ಪ್ರಾಣಿಯ ಮೇಲೆ ಪಯಣಿಸುವುದನ್ನು ಚಿತ್ರದಲ್ಲಿ ನೋಡಿರುತ್ತೀರಿ. ದುರ್ಗಾ ಮಾತೆಯು ಹುಲಿಯ ಮೇಲೆ ಪಯಣಿಸುತ್ತಾಳೆ. ಇದು ಒಂದು ಕಲ್ಪನೆಯಂತೆಯೇ ತೋರುತ್ತದೆ. ಬುದ್ಧಿಗೆ ಇದು ಹೊಳೆಯುವುದಿಲ್ಲ, ಆದರೆ ಇದು ಅತೀ ವೈಜ್ಞಾನಿಕ್. ಪ್ರತಿಯೊಂದು ಪ್ರಾಣಿಯೂ ಸಹ ಈ ಭೂಮಿಯ ಮೇಲೆ ದಿವ್ಯ ತರಂಗಗಳನ್ನು ತರುತ್ತದೆ. ಉದಾಹರಣೆಗೆ ನವಿಲು ಸರಸ್ವತಿ ಮಾತೆಯ, ಜ್ಞಾನದ ದೇವಿಯ ತರಂಗಗಳನ್ನು ಭೂಮಿಗೆ ತರುತ್ತದೆ. ಎತ್ತಿನ ದೇಹವು ಶಿವ ಚೈತನ್ಯವನ್ನು ಹೊರ ಸೂಸುತ್ತದೆ. ಶಿವ ಎಂದರೆ ಪ್ರಕೃತಿಯ ಪರಿವರ್ತಕ ಹಾಗೂ ಧ್ಯಾನಸ್ಥವಾದ ಅಂಶ. ಈಗ ಎಲ್ಲಾ ದೇವತೆಗಳು ಈ ಚೈತನ್ಯದಲ್ಲಿದ್ದಾರೆ. ಎಲ್ಲಾ ವಿಧಧ ಶಕ್ತಿಗಳೂ ಈ ಚೈತನ್ಯದಲ್ಲಿವೆ. ಎಲ್ಲಾ ಮಂತ್ರಗಳೂ ಈ ಮಂಗಳ ಮಯವಾದ ತರಂಗಗಳನ್ನು ಆಹ್ವಾನಿಸುತ್ತವೆ.
ತಿಂಗಳುಗಳ ಹೆಸರಿನ ಅರ್ಥ ನಿಮಗೆಲ್ಲಾ ತಿಳಿದಿದೆಯೇ?
ಜನವರಿ, ಫೆಬ್ರವರಿ......ನವೆಂಬರ್, ಡಿಸೆಂಬರ್
ತಿಂಗಳುಗಳ ಹೆಸರು ಹೇಳುತ್ತಲೇ ಇರುತ್ತೀರಿ, ಆದರೆ ಅದರ ಅರ್ಥವನ್ನು ಮಾತ್ರ ತಿಳಿದುಕೊಂಡಿಲ್ಲ ನೀವು.
ಸೆಪ್ಟೆಂಬರ್ ಎಂದರೆ ಸಪ್ತ+ಅಂಬರ, ಎಂದರೆ ಏಳನೆಯ ಆಕಾಶ.
ನವೆಂಬರ್ ಎಂದರೆ ನವ+ಅಂಬರ, ಎಂದರೆ ಒಂಭತ್ತನೆಯ ಆಕಾಶ.   
ಈ ತಿಂಗಳುಗಳ ಹೆಸರು ಯಾವ ಭಾಷೆಗೆ ಸೇರಿದ್ದೆಂದು ನಿಮಗೆ ಗೊತ್ತೇ?
ಸಭಿಕರು : ಆಂಗ್ಲ ಭಾಷೆ.
ಶ್ರೀ ಶ್ರೀ : ಇಲ್ಲ, ಎಲ್ಲವೂ ಸಂಸ್ಕೃತ ಭಾಷೆಯಿಂದ ಉದ್ಭವಿಸಿವೆ. ಈ ಪ್ರಪಂಚದ ಪ್ರಾರಂಭದಲ್ಲಿದ್ದ ಒಂದೇ ಮೂಲಭೂತ ಭಾಷೆಯೆಂದರೆ ಸಂಸ್ಕೃತ.
ಫ಼ೆಬ್ರವರಿ ಎಂದರೆ "ಫ಼ಾಗ್ ಎಂಡ್", ಎಂದರೆ "ಕೊನೆಯ" ಎಂದರ್ಥ
ಮಾರ್ಚ್ ಎಂದರೆ "ಮುನ್ನಡೆಯಿರಿ".
ಇರಾಕ್, ಇರಾನ್ , ಕುರ್ಡಿಸ್ತಾನದಲ್ಲೆಲ್ಲಾ ಹೊಸವರ್ಷವನ್ನು ಮಾರ್ಚ್ ತಿಂಗಳಲ್ಲಿ ಆಚ್ರಿಸುತ್ತಾರೆ.
ಭಾರತದ ಕೆಲವು ಭಾಗಗಳಲ್ಲೂ ಇದು ನಡೆಯುತ್ತದೆ.
ಡಿಸೆಂಬರ್ ಎಂದರೆ ದಶ+ಅಂಬರ, ಎಂದರೆ ಹತ್ತನೆಯ ಆಕಾಶ.
ತಿಂಗಳುಗಳ ಹೆಸರುಗಳಿಗಿಂತಲೂ ನೀವು ಪ್ರಾಚೀನರು. ಆಳವಾದ ಧ್ಯಾನದೊಳಗೆ ಹೊಕ್ಕು ಇದನ್ನೆಲ್ಲಾ ಅನುಭವಿಸಿರಿ. ನನ್ನ ವಯಸ್ಸಿಗಿಂತಲೂ ನಾನು ದೊಡ್ಡವನು / ದೊಡ್ಡವಳು ಎಂಬ ವಿಷಯವನ್ನು ಮನಸ್ಸಿನಲ್ಲಿ ಒಂದು ಕಡೆ ಇಟ್ಟುಕೊಳ್ಳಿ.
ಈ ವಿಷಯದ ಅನುಭವ ಜೀವನದಲ್ಲಿ ಎಂದೋ ಒಮ್ಮೆ ಆಗುತ್ತದೆ.
ನಾವು ಈಗಲಾದರೂ ನಮ್ಮ ಟೋಪಿಯನ್ನು ತೆಗೆಯಬಹುದೇ? ( ಪ್ರವಚನದ ಆರಂಭದಲ್ಲಿ ಗುರೂಜಿಯವರು ಒಂದು ಸುಂದರವಾದ ಟೋಪಿಯನ್ನು ಧರಿಸಿದ್ದರು ಮತ್ತು ಅದನ್ನು ತೆಗೆಯ ಬಾರದೆಂದು ಸಭಿಕರೆಲ್ಲಾ ವಿನಂತಿಸಿದ್ದರಿಂದ ಗುರೂಜಿಯವರು ಆ ಟೋಪಿಯನ್ನು ಧರಿಸಿಕೊಂಡೇ ಪ್ರವಚನವನ್ನು ನೀಡಿದರು.)
(೧೦-೧೫ ನಿಮಿಷಗಳ ಧ್ಯಾನವು ಕೆಲವೇ ಕ್ಷಣಗಳಂತೆ ಹಾರಿ ಹೋಗಿ, ಮನಮಿಡಿಯುವ ಭಜನೆಗಳೊಂದಿಗೆ ಅಂದಿನ ಸತ್ಸಂಗ ಮುಗಿಯಿತು.)