ಗುರುವಾರ, ನವೆಂಬರ್ 8, 2012

ಯೋಗ ವಿಸ್ಮಯ ಶಕ್ತಿ

ಅಮೃತಬಿ೦ದು’ ಸರಣಿಯ ಬರಹಗಳು

ಒ೦ಭತ್ತನೆಯ ಕ೦ತು

ತಾಳ್ಮೆ ಇರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೯/೦೪/೨೦೦೩ರ೦ದು ಪ್ರಕಟವಾಗಿತ್ತು)

ಜಾಗೃತಿ, ಸ್ವಪ್ನ, ಸುಷುಪ್ತಿ ಈ ಮೂರು ಅವಸ್ಥೆಗಳು ಬರುತ್ತಿರುತ್ತವೆ.
ಧೈರ್ಯದಿಂದ ಈ ಮೂರು ಅವಸ್ಥೆಗಳನ್ನು ಅನುಭವಿಸುವಂಥವನು ವೀರೇಶ.
ಹೀಗೆಯೇ ಜ್ಞಾನ, ಪ್ರವೃತ್ತಿ, ಮೋಹ ಜೀವನದಲ್ಲಿ ಉಂಟಾಗುತ್ತಲೇ ಇರುತ್ತವೆ.

"ತೃತೀಯ ಭೋಕ್ತಾ ವೀರೇಶಃ"
ನಮ್ಮಲ್ಲುಂಟಾಗುವ ಭಾವನೆಗಳೆಲ್ಲವನ್ನು ಆತ್ಮಗ್ಲಾನಿಗೊಳಗಾಗದೇ, ಧೈರ್ಯವಾಗಿ ಸಾಕ್ಷೀಭಾವದಿಂದ ನೋಡತಕ್ಕವನು ವೀರೇಶ! ಇದು ಬಹಳ ಸೂಕ್ಷ್ಮವಾದ ಜ್ಞಾನ, ಧೈರ್ಯದಿಂದ, ತಾಳ್ಮೆಯಿಂದ, ಸಹನೆಯಿಂದ ಇರಬೇಕು.

ಒಂದು ದಿನ ಪ್ರಾಣಾಯಾಮ, ಆಸನ ಮಾಡಿಬಿಟ್ಟು ನಾಳೆಯಿಂದಲೇ ಸರಿಯಾಗಿರ್ತೀನಿ ಅಂದರೆ...ನಿಮ್ಮ ಮನಸ್ಸು ಅಷ್ಟು ಬೇಗ ಬದಲಾಯಿಸುವುದಿಲ್ಲ. ಹಾ! ಅದಕ್ಕೂ ಸಮಯ ಬೇಕಾಗುತ್ತದೆ. ಎಷ್ಟೋ ವರ್ಷಗಳಿಂದ ನೀನು ಮನಸ್ಸನ್ನು ಒಂದು ತರದ ಸ್ವಭಾವದಲ್ಲಿ ರೂಢಿಸಿಕೊಂಡು ಬಂದಿದ್ದೀಯ. ಬದಲಾಯಿಸಿಕೊಳ್ಳುವುದಕ್ಕೆ ಅದಕ್ಕೆ ಸ್ವಲ್ಪ ಸಮಯಾವಕಾಶ ಕೊಡು. ಒಂದು ವೇಳೆ ಕೋಪ, ರಾಗ, ಕಾಮ, ಮೋಹ ಯಾವ ಭಾವನೆಯೇ ಬಂದರೂ ಯಾವ ಅವಿವೇಕವೇ ಉಂಟಾದರೂ ತಾಳ್ಮೆ ವಹಿಸು, ಧೈರ್ಯದಿಂದಿರು, ಆತ್ಮನಿಂದೆ ಮಾಡಬೇಡ. ನೀನು ಮಾಡುವ ಪ್ರಾಣಾಯಾಮ, ಧ್ಯಾನ ಮುಂತಾದ ಸಾಧನೆಗಳಲ್ಲಿ ನಂಬಿಕೆ ಕಳೆದುಕೊಳ್ಳಬೇಡ. ನಾನು ಸತ್ಸಂಗ ಮಾಡಿಯೂ ಪ್ರಯೋಜನವಾಗಲಿಲ್ಲವಲ್ಲ ಎಂದು ನಿನ್ನನ್ನು ನೀನು ಹಳಿದುಕೊಳ್ಳಬೇಡ. ಉತ್ಸಾಹವನ್ನು ಹಾಳು ಮಾಡಿಕೊಳ್ಳಬೇಡ. ಜಾಗೃತಾವಸ್ಥೆಯನ್ನು, ಸ್ವಪ್ನವನ್ನು, ಸುಷುಪ್ತಿಯನ್ನು ಅನುಭವಿಸುವ ನೀನು ಇವೆಲ್ಲದರಿಂದಲೂ ಬೇರೆಯೇ ಆಗಿದ್ದೀಯ. ಇದನ್ನು ಕಂಡುಹಿಡಿದುಕೊಳ್ಳಬೇಕಾದರೆ ಸ್ವಲ್ಪ ಸಮಯ ಬೇಕು. ಒಂದೇ ದಿನಕ್ಕೆ ಆಗುವುದಿಲ್ಲ. ನಿರಂತರವಾಗಿ ಧ್ಯಾನ ಮಾಡುತ್ತಿದ್ದಾಗ, ನಿನಗೆ ಅನುಭವಕ್ಕೆ ಬರುತ್ತದೆ. ಈ ಅನುಭವ ಆಗುತ್ತಿದ್ದಂತೆಯೇ ಪ್ರಸನ್ನತೆ, ಪ್ರೇಮ, ವಾತ್ಸಲ್ಯ..ನಿನ್ನ ಸಹಜ ಸ್ವಭಾವ ಮರುಕಳಿಸಿ ಮತ್ತೆ ಮೇಲಕ್ಕೆ ಬರುತ್ತೆ. ಹೀಗೆ ಆಗಿಲ್ಲವೋ ವೀರೇಶ, ಧೈರ್ಯವಾಗಿರು, ಆಗುತ್ತದೆ, ತಾಳ್ಮೆ ವಹಿಸು!

* * * * *

ಯೋಗ ಭೂಮಿಕಾ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೩೦/೦೪/೨೦೦೩ರ೦ದು ಪ್ರಕಟವಾಗಿತ್ತು)

ಮುಂದಿನ ಸೂತ್ರ ಹೇಳುತ್ತಾರೆ..."ವಿಸ್ಮಯೋ ಯೋಗ ಭೂಮಿಕಾಃ"
ಈ ಪ್ರಪಂಚದಲ್ಲಿ ಒಂದು ಕ್ರಾಂತಿಕಾರಿಯಾದ ಸೂತ್ರ ಇದು.ಇದೊಂದು ಸೂತ್ರವನ್ನು ಚೆನ್ನಾಗಿ ತಿಳಿದುಕೊಂಡುಬಿಟ್ಟರೆ ಸಾಕು. ಇದುವರೆಗೂ ನಾವು ನಮ್ಮ ಶರೀರ, ಉಸಿರು, ಮನಸ್ಸು ಈ ಎಲ್ಲದರ ಸಾಮರಸ್ಯದಿಂದ ಯೋಗ ಉಂಟಾಗಿ ನಾವು ಅ೦ತರ್ಮುಖಿಗಳಾಗಲು, ಆತ್ಮಸ್ಥರಾಗಲು ಸೂತ್ರಗಳ ಮೂಲಕ ಅನೇಕ ಪ್ರಕ್ರಿಯೆಗಳನ್ನು ಅರಿತುಕೊಂಡೆವು. ಈಗ ಕೊಡತಕ್ಕಂಥ ಪ್ರಕ್ರಿಯೆ ಅತ್ಯಂತ ಮಹತ್ವಪೂರ್ಣವಾದುದು.

"ವಿಸ್ಮಯೋ ಯೋಗ ಭೂಮಿಕಾಃ"

ಒಂದು ಭೂಮಿಕೆ ಇಲ್ಲದಿದ್ದರೆ ಏನು ಮಾಡಲು ಸಾಧ್ಯ? ಪಾಯ ಎಲ್ಲಿ ಹಾಕ್ತೀರಾ? ಗೋಡೆ ಎಲ್ಲಿ ಎಬ್ಬಿಸ್ತೀರ? ಮನೆ ಎಲ್ಲಿ ಕಟ್ತೀರ? ನಡೀತೀರಾ.. ಎಲ್ಲಿ? ಕಾಲೆಲ್ಲಿ ಇಡ್ತೀರಾ, ಭೂಮಿ ಇದ್ದರಲ್ವಾ? ನಿಮ್ಮ ಅಸ್ತಿತ್ವವೇ ಭೂಮಿಕೆ! ಆ ಅಸ್ತಿತ್ವ ಯಾವುದು?ಯೋಗಕ್ಕೆ ಅಸ್ತಿತ್ವ ಯಾವುದು? ಯೋಗ ಎಲ್ಲಿ ಪ್ರಾರಂಭವಾಗುತ್ತದೆ? ವಿಸ್ಮಯದಿಂದ! ವಿಸ್ಮಯ ಎಂದರೆ ಆಶ್ಚರ್ಯಪಡುವುದು.

ಒಂದು ಚಿಕ್ಕ ಮಗೂನ ನೋಡಿದೀರಾ? ಆರು ತಿಂಗಳ ಮಗುವನ್ನು ಗಮನಿಸಿದ್ದೀರಾ? ತನ್ನ ಕೈಯನ್ನು ಆಶ್ಚರ್ಯಚಕಿತವಾಗಿ ನೋಡುತ್ತಾ ಇರುತ್ತದೆ, ತನ್ನ ಕೈ ಬೆರಳುಗಳನ್ನೆಲ್ಲಾ ನೋಡುತ್ತಾ ಇರುತ್ತೆ. ಅರೆರೆ!  ಏನೋ ಆಶ್ಚರ್ಯ, ಪ್ರಪಂಚದಲ್ಲಿ ಅದ್ಭುತ ಕಂಡುಬಿಟ್ಟ ಹಾಗೆ.ಅದು ನೋಡ್ತಾ ಇರೋದು ತನ್ನ ಕೈಯನ್ನೇ! ಈ ಪ್ರಪಂಚದಲ್ಲಿ ಜ್ಞಾನ ಉಂಟಾದ ಕೂಡಲೇ, ಜ್ಞಾನದ ಜೊತೆಗೆ ವಿಸ್ಮಯ ಉಂಟಾಗದೇ ಇದ್ದರೆ ಆ ಜ್ಞಾನ ಮೂರು ಕಾಸಿಗೆ ಪ್ರಯೋಜನವಿಲ್ಲ. ಆ ಜ್ಞಾನ ಅಜ್ಞಾನವೇ ಎಂದುಕೊಳ್ಳಬೇಕು. ಯಾವ ಜ್ಞಾನದಿಂದ ವಿಸ್ಮಯ ಉಂಟಾಗುವುದೋ ಅದೇ ನಿಜವಾದ ಜ್ಞಾನ. ನಾವು ಯಾವುದನ್ನು ಜ್ಞಾನ ಅಂತ ತಿಳಿದುಕೊಳ್ತೀವೋ ಅದು ನಮ್ಮಲ್ಲಿರುವ ವಿಸ್ಮಯವನ್ನೆಲ್ಲಾ ಕಳೆದುಹಾಕಿಬಿಡುತ್ತೆ. ಚಚ್ಚಿ ಚೂರು ಚೂರು ಮಾಡಿ ಹಾಕಿಬಿಡುತ್ತೆ. ಜೀವನದಲ್ಲಿ ವಿಸ್ಮಯವೇ ಹೋಗಿಬಿಟ್ಟರೆ ಬೇರೆ ಏನಿದೆ? ’ವಿಸ್ಮಯ-ಆಶ್ಚರ್ಯ’, ಜೀವನದ ಚಿಲುಮೆ ಅದರ ಲಕ್ಷಣ! ವಿಸ್ಮಯದಿಂದಲೇ ನಮಗೆ ಯೋಗ ಉಂಟಾಗುತ್ತದೆ. ಯೋಗದ ಭೂಮಿಕೆಯೇ ವಿಸ್ಮಯ! ಯಾವುದನ್ನು ಕಂಡರೂ ಅದು ಆಶ್ಚರ್ಯಜನಕವಾಗುತ್ತದೆ. ಇದರ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.

* * * * *

ವಿಸ್ಮಯ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೧/೦೫/೨೦೦೩ರ೦ದು ಪ್ರಕಟವಾಗಿತ್ತು)

ಒಂದು ಮಗುವನ್ನು ನೋಡಿ. ಎಲೆ ನೋಡಿದರೆ ’ಈ ಎಲೆ ಯಾಕೆ ಹಸುರಾಗಿದೆ?’ ಅದಕ್ಕೆ ನೀವೇನೋ ಒಂದು ಉತ್ತರ ಕೊಡ್ತೀರ. ’ಆಕಾಶ ನೀಲಿ ಯಾಕೆ ಆಗಿದೆ?’, ’ಆನೆಗೆ ಸೊಂಡಿಲು ಯಾಕಿದೇಪ್ಪಾ - ಕುದುರೆಗೆ ಯಾಕಿಲ್ಲ ಸೊಂಡಿಲು?’ ಅಂತ ಹಲವಾರು ತರಹದ ಪ್ರಶ್ನೆ ಕೇಳ್ತಾರೆ ಮಕ್ಕಳು.

’ಈ ಆಕಾಶದಲ್ಲಿ ಮೋಡ ಎಲ್ಲ ಹೋಗ್ತಾ ಇದೆಯಲ್ಲ ಎಲ್ಲಿಗೆ ಹೋಗುತ್ತೆ?’.. ಎಷ್ಟೋ ಸಲ ತಂದೆ, ತಾಯಿಗೇ ಉತ್ತರ ಗೊತ್ತಿರಲ್ಲ! ಆ ಮಕ್ಕಳು ಕೇಳಿಬಿಟ್ಟು ಸುಮ್ಮನಾಗಿಬಿಡುತ್ತವೆ, ಪಾಪ! ’ಈ ನಕ್ಷತ್ರದ ಮೇಲೆ ಹೋದರೆ ಎಲ್ಲಿಗೆ ಹೋಗ್ತೀವಿ?’ ವಿಶ್ವಾಸ ಇದೆ, ನಮ್ಮಪ್ಪ ನಕ್ಶತ್ರದ ಮೇಲೆ ಹೋಗಿದ್ದಾನೆ, ಇವನಿಗೆ ಗೊತ್ತಿರುತ್ತೆ, ಅಣ್ಣಂಗೆ ಗೊತ್ತಿರುತ್ತೆ, ಚಿಕ್ಕಪ್ಪಂಗೆ ಗೊತ್ತಿರುತ್ತೆ... ಇವರು ಹೇಳ್ತಾರೆ ಅಂತ ಶ್ರದ್ಧೆ. ಅವರಿಗೇನು ಗೊತ್ತಿರುತ್ತೆ! ಆ ಮಗೂಗೆ ಏನೋ ಒಂದಷ್ಟು ಹೇಳಿಬಿಟ್ಟು ’ಸುಮ್ಮನಿರು, ನನ್ನ ತಲೆ ತಿನ್ನಬೇಡ’ ಅಂತ ಬೈದು ಕಳಿಸುತ್ತಾರೆ. ತಲೆ ಇದ್ದರಲ್ವಾ ತಿನ್ನೋಕೆ?

ಮಕ್ಕಳಲ್ಲಿ ವಿಸ್ಮಯ ಇದೆ. ಇದು ನಮ್ಮ ಹುಟ್ಟು ಗುಣ. ಜೀವನದ ಲಕ್ಷಣ, ವಿಸ್ಮಯ. ಹಾಗೆಯೇ ಒಬ್ಬ ನಿಜವಾದ ವಿಜ್ಞಾನಿ, ವೈಜ್ಞಾನಿಕ ದೃಷ್ಟಿಕೋನ ಇರುವಂಥಹವನು - ಅವನಿಗೂ ಎಲ್ಲಾ ಗೊತ್ತು. ಆದರೆ ಎಲ್ಲಾ ತಿಳಿದಿದೆ ಎನ್ನುವ ಭಾವನೆ ಇರುವುದಿಲ್ಲ. ತಿಳಿಯಬೇಕಾದ್ದು ತುಂಬಾ ಇದೆ, ತಿಳಿದುಕೊಂಡಷ್ಟೂ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆಂಬ ಕುತೂಹಲ ಇರುತ್ತದೆ, ಅದು ನಿಜವಾದ ಜ್ಞಾನ.
ಈ ಅರ್ದಂಬರ್ಧ ತಿಳಿದುಕೊಂಡಿರುವವರದೇ ತಲೆಹರಟೆ, ತಕರಾರು. ಎಲ್ಲಾ ತರಹದ ಸಮಸ್ಯೆ, ಸಂದಿಗ್ಧತೆ ಉಂಟುಮಾಡುವವರು ಇವರೇ. ಪ್ರಪಂಚದಲ್ಲಿ ಆಗುವ ಎಲ್ಲಾ ತಾಪತ್ರಯ, ಉಪದ್ರವ ಉಂಟಾಗುವುದೂ ಇವರಿಂದಲೇ. ಏನೂ ತಿಳಿಯದೇ ಇರುವವರು ಹಾಗೂ ಚೆನ್ನಾಗಿ ತಿಳಿದುಕೊಂಡಿರುವವರು ಯಾರಿಗೂ ಉಪದ್ರವ ಉಂಟುಮಾಡುವುದಿಲ್ಲ. ಈ ಮಧ್ಯದವರು ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಆದರೆ, ಎಲ್ಲಾ ತಮಗೆ ತಿಳಿದುಬಿಟ್ಟಿದೆ ಎನ್ನುವಂತೆ ವ್ಯವಹಾರ ಮಾಡುತ್ತಾರೆ. ಅವರಲ್ಲಿ ವಿಸ್ಮಯ ಅನ್ನುವುದೇ ಇಲ್ಲ. ಅದಕ್ಕೇ ಯೋಗದ ಭೂಮಿಕೆಯೇ ಇಲ್ಲ. ಇನ್ನು ಯೋಗ ಉಂಟಾಗುವುದು ಹೇಗೆ? ಎಲೆ ನೋಡಿದರೆ ’ಅಯ್ಯೋ, ಇದು ಎಲೇರಿ, ಎಲೆ ಏನು ನೋಡೋದು!’ ಹೂವು? - ’ಹಾ! ಇದು ಹೂವು ಅಷ್ಟೇ, ಅದನ್ನೇನು ನೋಡೋದು’ ಅಂದುಬಿಡ್ತಾರೆ. ಪ್ರತಿಯೊಂದನ್ನೂ ಹೊಸದೃಷ್ಟಿಯಿಂದ ನೋಡಿದರೇ ವಿಸ್ಮಯ ಉಂಟಾಗುವುದು. ಆ ವಿಸ್ಮಯದಿಂದಾನೇ ಯೋಗ ಉಂಟಾಗುವುದು.

* * * * *

ಯೋಗ ಉಂಟಾಗುವ ಬಗೆ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೨/೦೫/೨೦೦೩ರ೦ದು ಪ್ರಕಟವಾಗಿತ್ತು)

ಯೋಗ ಎಂದರೇನು?
ಯೋಗ ಅಂದರೆ ಬರೀ ಆಸನ, ಪ್ರಾಣಾಯಾಮ, ಭಾಸ್ತ್ರಿಕ ಮಾಡುವುದಲ್ಲ. ಯೋಗ ತರಗತಿ ಎಂದರೆ ಯೋಗಾಸನಗಳನ್ನು ಕಲಿಯುವುದು; ಆಸನಗಳನ್ನು ಮಾಡುವುದಷ್ಟೇ ಯೋಗ ಎಂದುಕೊಂಡಿದ್ದೇವೆ - ಸಾಮಾನ್ಯವಾಗಿ. ನಾವು ಯೋಗವನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಹಾ...ಆಸನದಿಂದ ಶರೀರ ಶುದ್ಧಿಯಾಗುತ್ತದೆ, ಬಲಿಷ್ಠವಾಗುತ್ತದೆ, ರೋಗ ನಿವಾರಣೆಯಾಗುತ್ತದೆ, ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಬರೀ ಇಷ್ಟೇ ಯೋಗ ಅಲ್ಲ. ವಿಸ್ಮಯಪೂರ್ಣವಾದ ಚೇತನವೇ ಯೋಗಕ್ಕೆ ಭೂಮಿಕೆಯಾಗುತ್ತದೆ. ವಿಸ್ಮಯಪೂರ್ಣವಾದ ಚೇತನದಲ್ಲಿ ಮತ್ತೆ ಮುಗ್ಧತೆ ಬರುತ್ತದೆ.

’ವಿಸ್ಮಯೋ ಯೋಗ ಭೂಮಿಕಾ’

ಸೂರ್ಯಾಸ್ತ ಸಮಯದಲ್ಲಿ ನೋಡಿ - ಸೂರ್ಯ ಮುಳುಗುತ್ತಿರುತ್ತಾನೆ, ಚಂದ್ರ ಉದಯವಾಗುತ್ತಿರುತ್ತಾನೆ. ಆಕಾಶವನ್ನೂ, ಸೂರ್ಯನನ್ನೂ ನೋಡಿ. ಪ್ರಕೃತಿಯಲ್ಲಿರುವ ಪ್ರತಿಯೊಂದೂ ವಿಸ್ಮಯಜನಕವಾಗಿದೆ. ವಿಸ್ಮಯಪೂರ್ಣವಾಗಿದೆ! ನಮ್ಮ ಶರೀರದಲ್ಲಿ ಎಂತೆಂಥಹ ನಾಡಿಗಳೆಲ್ಲಾ ಇವೆ. ಹೇಗೆಲ್ಲಾ ಇದೆ ಶರೀರ ರಚನೆ! ಈ ರಚನಾ ಕ್ರಮವನ್ನು ನೋಡಿದರೇ ವಿಸ್ಮಯಜನಕವಾಗಿದೆ. ಎಷ್ಟು ತರಹದ ಕೀಟಾಣುಗಳಿವೆ ಪ್ರಪಂಚದಲ್ಲಿ!

ಮಕ್ಕಳನ್ನು ನೋಡಿ. ಒಂದು ಜೇನು ದುಂಬಿ ಹೋಗುತ್ತಿದ್ದರೆ ಅದನ್ನು ಬೆಂಕಿಪೊಟ್ಟಣದಲ್ಲಿ ಹಾಕಿ ಎಷ್ಟು ವಿಸ್ಮಯಪೂರ್ಣವಾಗಿ ಅದನ್ನುನೋಡ್ತಾ ಇರ್ತಾರೆ. ಅದೇ ಧ್ಯಾನ! ಅಲ್ಲೇ ಶರಣಾಗತಿಯಾಗಿದೆ.

ಈ ಪ್ರಪಂಚದಲ್ಲಿರತಕ್ಕಂಥ ಎಷ್ಟೊಂದು ವೈವಿಧ್ಯತೆಯೆಲ್ಲವನ್ನೂ ವಿಧ ವಿಧ ವಸ್ತುಗಳನ್ನು, ಪ್ರಾಣಿಗಳನ್ನು, ಮನುಷ್ಯರನ್ನು, ಕೀಟಗಳನ್ನು ವಿಸ್ಮಯಪೂರ್ಣವಾದ ದೃಷ್ಟಿಯಿಂದ, ಹೊಸ ಕಣ್ಣಿನಿಂದ, ಹೊಸ ದೃಷ್ಟಿಯಿಂದ ನೋಡಬೇಕು. ತಿಳಿದುಕೊಂಡುಬಿಟ್ಟಿದ್ದೀನಿ ಎನ್ನುವ ಭಾವನೆಯಿಂದಲ್ಲ. ಆಗಲೇ ನಮ್ಮ ಚೇತನ ಯೋಗಕ್ಕೆ ಭೂಮಿಕೆಯಾಗುತ್ತದೆ.

* * * * *


ಹೊಸ ದೃಷ್ಟಿ


(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೩/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೂರು ತರಹದ ಭಾವನೆಯಾಗುತ್ತದೆ..
ಒಂದು ’ನಾನು ತಿಳಿದುಕೊಂಡಿದ್ದೀನಿ’ ಅಂತ. ಇನ್ನೊಂದು ’ನಾನು ತಿಳಿದುಕೊಂಡಿಲ್ಲ’ ಅಂತ. ಮೂರನೆಯದು ’ತಿಳಿಯಲಿಕ್ಕೆ ಆಗದೇ ಇರುವಂತಹುದು’ ಅಂತ.
ಸಂಸ್ಕೃತದಲ್ಲಿ - ’ಜ್ಞಾತ’ - ತಿಳಿದದ್ದು, ’ಅಜ್ಞಾತ’ - ತಿಳಿಯದೆ ಇರತಕ್ಕಂಥಹುದು, ’ಅಜ್ಞೇಯ’ - ತಿಳಿಯುವುದಕ್ಕೆ ಆಗದೇ ಇರತಕ್ಕಂಥಹುದು. ತಿಳಿಯುವುದಕ್ಕಾಗದೇ ಇರುವುದಕ್ಕೆ ಕರೆದುಕೊಂಡು ಹೋಗಬೇಕಾದರೆ, ಜ್ಞಾತ, ಅಜ್ಞಾತ - ತಿಳಿದದ್ದೂ, ತಿಳಿಯದೇ ಇರೋದೂ ಸೇರಿ, ಇವೆರಡರಿಂದಲೂ ವಿಸ್ಮಯ ಉಂಟಾದಾಗ ಅಜ್ಞೇಯದ ಹತ್ತಿರ ನಾವು ಹೋಗ್ತೀವಿ. ಅಜ್ಞೇಯವೇ ಯೋಗ.

ನಮಗೆ ಪ್ರಪಂಚದಲ್ಲಿ ಇರುವಂಥಹ ಅತ್ಯಂತ ವಿಸ್ಮಯಜನಕವಾದ ಅತಿ ಸುಂದರವಾದ ಯಾವುದನ್ನೇ ಕಣ್ಮುಂದೆ ಇಟ್ಟರೂ ಆಸಕ್ತಿಯುಂಟಾಗುವುದಿಲ್ಲ, ತೋರಿಸಿದರೂ ವಿಸ್ಮಯ ಉಂಟಾಗುವುದಿಲ್ಲ.
ತಾಜಮಹಲ್ ಹತ್ತಿರ ಹೋದರೂ ಆಯ್ಕೆ. ’ಇದೇನು ಅದ್ಭುತ ಅ೦ತ ತಾಜಮಹಲ್ ನೋಡ್ತೀರ!’ ಅ೦ಬೋ ಟೀಕೆ. ಭೇಲ್ ಪುರಿ, ಕಡ್ಲೆಕಾಯಿ ತಗೊಂಡು ತಿನ್ನೋದು, ಅದರ ಬಗ್ಗೆ ಮಾತಾಡೋದು ಅಥವಾ ಯಾರ ಬಗ್ಗೇನೋ ದೂರು, ಚಿಂತೆ, ತಾಪತ್ರಯದ ಬಗ್ಗೆ ಮಾತನಾಡೋದು! ತಾಜಮಹಲ್ ಎಲ್ಲಿ ನೋಡಿದಿರಿ? ’ಹಾ! ನೋಡಿದ್ದಾಯ್ತು!’ ಕೆಲವರು ಬಸ್ಸಿನಲ್ಲೇ ಕೂತ್ಕೊಂಡು ನೋಡಿಬಿಟ್ಟು ’ಇನ್ನೇನಿದೆ ನೋಡೋದು? ಅಯ್ಯೋ ಅದೇರಿ ಬಿಳಿ ಕಲ್ಲು ಬಿಲ್ಡಿಂಗ್!’ ಎನ್ನುತ್ತಾರೆ.

ಮಕ್ಕಳನ್ನು ನೋಡಿ. ನದೀ ತೀರಕ್ಕೆ, ಸಮುದ್ರ ತೀರಕ್ಕೆ, ಅಲ್ಲಿಗೆ ಇಲ್ಲಿಗೆ ಕರೆದುಕೊಂಡು ಹೋದಾಗ ಮಕ್ಕಳು ಕಲ್ಲುಗಳನ್ನು ಆರಿಸಿ ತರುತ್ತಾರೆ. ನೀವು ಬೈತೀರಾ, ಅವಕ್ಕೆ ಅದೇ ಬೆಳ್ಳಿ ಬಂಗಾರ. ಏನೋ ಮುತ್ತು ರತ್ನ ಸಿಕ್ಕಿಬಿಟ್ಟ ಹಾಗೆ!
ಮಕ್ಕಳಿಗೆ ಅದೇ ಏನೋ ಸಂತೋಷ, ಆಹ್ಲಾದ, ಉತ್ಸಾಹ! ’ಸುಮ್ಮನೆ ಕವಡೆ ಸೇರಿಸ್ತೀರಾ’ ಅಂತ ನೀವು ಮಕ್ಕಳನ್ನು ಬೈಯುತ್ತೀರಾ.

"ವಿಸ್ಮಯೋ ಯೋಗ ಭೂಮಿಕಾ", ಈ ಪ್ರಪಂಚದಲ್ಲಿ ಎಷ್ಟು ವೈವಿಧ್ಯತೆ ಇದೆ ನಿಮಗೆ ವಿಸ್ಮಯ ಉಂಟುಮಾಡುವುದಕ್ಕೋಸ್ಕರ! ಇಲ್ಲಿರುವ ಒಂದೊಂದು ವಸ್ತು ನೋಡ್ತಾ ಇದ್ದ ಹಾಗೇನೇ ಅದರಲ್ಲಿ ಹೊಸತು ಕಣ್ಣಿಗೆ ಗೋಚರವಾಗುತ್ತೆ. ಇಡೀ ಜೀವನ ಸಾಲದು ಹೊಸತನವನ್ನು ಅನುಭವಿಸಲು. ಹೊಸತಿನ ಜೊತೆಗೆ ಒಂದಾಗುವುದೇ ಯೋಗ, ಯಾವುದು ಹೊಸತೆನಿಸುವುದೋ ಅದರಿಂದಲೇ ವಿಸ್ಮಯ ಉಂಟಾಗುತ್ತದೆ.

* * * * *

ಜೀವನ ನಿತ್ಯ ನೂತನ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೪/೦೫/೨೦೦೩ರ೦ದು ಪ್ರಕಟವಾಗಿತ್ತು)

ಜೀವನ ಘಳಿಗ ಘಳಿಗೆಗೂ ಹೊಸದು. ನಿತ್ಯ ನೂತನ ಜೀವನ. ಅದಕ್ಕೇ ಹೇಳೋದು ವಿಸ್ಮಯೋ ಯೋಗ ಭೂಮಿಕಾ - ವಿಸ್ಮಯದಿಂದ ತುಂಬಿಬಿಡಿ! ಬಹಳ ಸರಳವಾದ ಉಪಾಯ. ವಯಸ್ಸಾದಷ್ಟೂ, ದೊಡ್ಡವರಾದಷ್ಟೂ, ಎಲ್ಲಾ ತಿಳಿದುಕೊಂಡಷ್ಟೂ ನಮ್ಮಲ್ಲಿ ವಿಸ್ಮಯ ಪೂರ್ಣ ಸತ್ತೇ ಹೋಗಿಬಿಟ್ಟಿರುತ್ತದೆ. ಅದನ್ನು ಪುನರುಜ್ಜೀವನಗೊಳಿಸಬೇಕು. ಪ್ರತಿ ಕ್ಷಣವನ್ನೂ, ಪ್ರತಿ ದಿನವನ್ನೂ ಹೊಸದಾಗಿ ನೋಡಬೇಕು.

’ಅಯ್ಯೋ ಅದೇ ಸತ್ಸಂಗ, ಅದೇ ಹಾಡು, ಭಜನೆ’; ಅದೇ ದಸರಾನಾ, ಅದೇ ವಸ್ತುಪ್ರದರ್ಶನವೇನ್ರೀ. ಯಾರ್ರೀ ನೋಡ್ತಾರೆ?’ ನಿರುತ್ಸಾಹ! ಅಂದರೆ ಮಾಡಿದ್ದನ್ನೇ ಮಾಡ್ತಾ ಇರಿ ಅಂತ ಅಲ್ಲ! ದಿನಾ ವಸ್ತು ಪ್ರದರ್ಶನದಲ್ಲಿ ಹೋಗಿ ಕುಳಿತುಕೊಳ್ಳಿ ಅಂತ ಹೇಳ್ತಾ ಇಲ್ಲ ನಾವು. ವಿಸ್ಮಯ ನಮ್ಮಲ್ಲಿ ಜಾಗೃತವಾಗಿರಬೇಕು.

ಈ ಅರಿವಿನ ’ಅಜ್ಞೇಯ’ ಸ್ವಭಾವ ಯಾವುದಿದೆ... ಅದನ್ನು ಜಾಗೃತ ಮಾಡಿಕೊಳ್ಳೋಣ. ನಮ್ಮಲ್ಲಿ ನಿಮ್ಮನ್ನು ನೀವು ನೋಡಿ ವಿಸ್ಮಯ ಪಡೀಪ್ಪ!
ನಿಮ್ಮ ಮನಸ್ಸು ನೋಡಿ ಎಂತೆಂಥಾ ಚೇಷ್ಟೆ ಮಾಡುತ್ತೆ, ಏನೆಲ್ಲಾ ಆಲೋಚನೆ ಮಾಡ್ತೀರಾ! ಬೇರೇನು ಬೇಕು ಹೇಳಿ ನಿಮ್ಮ ಮನಸ್ಸು ಸಾಲದೆ? ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರೋದಿಲ್ಲ. ಒಂದು ಕ್ಷಣ ಬರುವ ವಿಚಾರ ಬೇರೆ ಕ್ಷಣ ಇರೋದಿಲ್ಲ. ಮನಸ್ಸು ಹೇಗೆಲ್ಲಾ ಆಟ ಆಡ್ತದೆ! ಈ ನಮ್ಮ ಮನಸ್ಸನ್ನು ನೋಡಿ ವಿಸ್ಮಯ ಪಡಿ ಸಂತೋಷ ಆಗುತ್ತೆ.

ಅದೇ ಕ್ಷಣದಲ್ಲಿ ’ನಮಃ ಶ್ರೀ ಶಂಭವೇ ಸ್ವಾತ್ಮಾನಂದ ಪ್ರಕಾಶ ವಪುಷೇ’...

ಪುನಃ ಸ್ವಾತ್ಮಾನಂದದಲ್ಲಿ ಮುಳುಗಲು ಆರಂಭವಾಗುತ್ತೆ. ಬೇರೇನೂ ಬೇಡ ವಿಸ್ಮಯ ಒಂದರಿಂದಲೇ ಯೋಗಾರೂಢವಾಗುತ್ತೆ ಮನಸ್ಸು, ಯೋಗದಲ್ಲಿ ನೆಲೆಯುಂಟಾಗುತ್ತದೆ.

* * * * *

ಯಾವುದು ಶಕ್ತಿ?

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೫/೦೫/೨೦೦೩ರ೦ದು ಪ್ರಕಟವಾಗಿತ್ತು)

ಲಹೀನನಾದ ವ್ಯಕ್ತಿ ಆಶ್ಚರ್ಯ ಅಥವಾ ವಿಸ್ಮಯವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ಉತ್ಸಾಹ, ಆನಂದ, ಸಂತೋಷ, ವಿಸ್ಮಯ ಇವನ್ನು ಅನುಭವಿಸಬೇಕಾದರೆ ಶಕ್ತಿ ಬೇಕು.
ಮುಂದಿನ ಸೂತ್ರ "ಸ್ವಪದಂ ಶಕ್ತಿಃ"

ಜೀವನದಲ್ಲಿ ಯಾರು ಏನು ಮಾಡಿದರೂ, ದುಡಿದರೂ ಶಕ್ತಿ ಸಂಪಾದನೆಗಾಗಿಯೇ. ಆದರೆ, ದುಡಿಯೋದರಲ್ಲೇ ಶಕ್ತಿ ಎಲ್ಲಾ ಕಳೆದು ಹೋಗಿಬಿಡುತ್ತೆ. ಧನ ಸಂಪಾದಿಸ್ತೀರಿ ಯಾಕೆ? ಗಟ್ಟಿ ಮುಟ್ಟಾಗಿರಬೇಕು ಅಂತ. ಶಕ್ತಿ ಸಂಪಾದನೆಗಾಗಿಯೇ ಧನದ ಸಂಪಾದನೆಯೂ ಆಗ್ತಾ ಇದೆ, ಹೌದಲ್ಲ? ಯಶಸ್ಸು, ಕೀರ್ತಿ ಏತಕ್ಕೆ ಬೇಕು? ಅದರಲ್ಲೇನೋ ಶಕ್ತಿ ಇದೆ!

ಮನೆಯಲ್ಲಿ, ತೆಪ್ಪಗಿರುವ ಮಕ್ಕಳು ಯಾರೋ ಅತಿಥಿಗಳು ಬಂದಾಗ, ನೀವು ಅವರೊಂದಿಗೆ ಮಾತನಾಡ್ತಾ ಇರುವಾಗ ನಿಮ್ಮ ಮುಂದೆ ಬಂದು ಕೂತ್ಕೊಂಡು ನಿಮ್ಮ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ, "ಅಪ್ಪ ಇದು ಮಾಡಿದೆ ನೋಡು", "ಅಮ್ಮ ಅದು ಮಾಡಿದೆ" ಚಿತ್ರ ಬರೆದು ತಂದು ತೋರಿಸೋದು, ಆಟದ ಸಾಮಾನೆಲ್ಲಾ ತಂದು ಹಾಕೋದು..ಏಕೆ ಮಕ್ಕಳು ಹಾಗೆ ಮಾಡ್ತಾರೆ? ನಿಮ್ಮ ಗಮನ ಸೆಳೆಯುವುದರಿಂದ ಅವರಿಗೇನು ಸಿಗುತ್ತೆ? ಶಕ್ತಿ ಸಿಗುತ್ತೆ, ಬಲ ಸಿಗುತ್ತೆ. ಬಲ ಇಲ್ಲದಿದ್ದರೆ ಜೀವನದಲ್ಲಿ ಯಾವ ಅನುಭವವನ್ನೂ ಮಾಡುವುದಕ್ಕಾಗುವುದಿಲ್ಲ. ಜೀರ್ಣಶಕ್ತಿ ಇಲ್ಲದವನಿಗೆ ಅಜೀರ್ಣ! ಯಾವುದೂ ರುಚಿಕರವಾಗಿರುವುದಿಲ್ಲ, ತಿನ್ನಲು ಮನಸ್ಸಾಗುವುದಿಲ್ಲ.

ಜ್ವರ, ಮೈ ಕೈ ನೋವು, ಕಣ್ಣು ಬಿಡುವುದಕ್ಕೂ ಆಗದವನಿಗೆ ಎಂಥ ಒಳ್ಳೆಯ ದೃಶ್ಯದ ಹತ್ತಿರ ಕರೆದುಕೊಂಡು ಹೋದರೂ ಕಣ್ಣು ಎಳೆದುಕೊಂಡು ಹೋಗಿ ಬಿಡುತ್ತೆ - ನಿದ್ರೆ ಹೋಗಿ ಬಿಡುತ್ತಾನೆ. ನಿದ್ರೆಯಿಂದ ಏನು ಸಿಗುತ್ತೆ? ಶಕ್ತಿ ಸಿಗುತ್ತೆ.

ಆದರೆ, ಯಾವುದನ್ನು ನಾವು ಶಕ್ತಿ ಅಂತ ತಿಳಿದುಕೊಳ್ಳುತ್ತೇವೋ, ಯಾವುದರಿಂದ ಎಲ್ಲಿಂದ ನಮಗೆ ಶಕ್ತಿ ಸಿಗುತ್ತೆ ಅಂತ ತಿಳಿದುಕೊಳ್ಳುತ್ತೀವೋ, ಅಲ್ಲಿ ಶಕ್ತಿಯ ವ್ಯಯ ಆಗುತ್ತಿದೆ. ಕೂಲಂಕಷವಾಗಿ ಪ್ರತಿಯೊಂದು ಘಟನೆಯನ್ನು ನೋಡಿದಾಗ ಎಂಥವರಿಗಾದರೂ ಇದು ಮನದಟ್ಟಾಗಿಯೇ ಆಗುತ್ತದೆ. ಇದರ ಬಗ್ಗೆ ವಿವರವಾಗಿ ಮುಂದೆ ವಿಚಾರ ಮಾಡೋಣ.

* * * * *

ಆಂತರ್ಯದಲ್ಲಿ ವಿಶ್ರಾಂತಿ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೬/೦೫/೨೦೦೩ರ೦ದು ಪ್ರಕಟವಾಗಿತ್ತು)

ಕ್ತಿ ಎಲ್ಲಿದೆ? ನಿನಗೆ ಶಕ್ತಿ ಯಾವಾಗ ಸಿಗುತ್ತದೆ?
ನೀನೇ ಶಕ್ತಿ! ನಿನ್ನ ಕೇಂದ್ರವೇ ಶಕ್ತಿ! "ಸ್ವಪದಂ ಶಕ್ತಿಃ" ನಿನ್ನಲ್ಲಿ ನೀನು ವಿಶ್ರಮಿಸಿದಾಗ ಶಕ್ತಿ ಸಂಚಯವಾಗುತ್ತದೆ, ಶಕ್ತಿಯ ಸ್ಫುರಣವಾಗುತ್ತದೆ.

ಬೇರೆಯವರು ನಿನ್ನ ಕಡೆ ಗಮನ ಕೊಡಲಿ, ಕೊಡದೆ ಇರಲಿ, ನೀನು ನಿನ್ನ ಕಡೆ ಗಮನ ಹರಿಸು. ನೀನು ಬೇರೆಯವರಿಗೋಸ್ಕರ ನಿನ್ನ ಗಮನ ಹರಿಸ್ತೀಯ; ಅಥವಾ ಬೇರೆಯವರು ನಿನ್ನ ಬಗ್ಗೆ ಏನು ಯೋಚನೆ ಮಾಡ್ತಾರೆ ಅಂತ ನೀನು ನಿನ್ನ ಬಗ್ಗೆ ಯೋಚನೆ ಮಾಡ್ತೀಯ. ಅದನ್ನು ಬಿಟ್ಟುಬಿಟ್ಟು ನಿನಗಾಗಿ ನೀನು ನಿನ್ನ ಬಗ್ಗೆ ಏನು ಮಾಡ್ಬೇಕು ಅಂತ ಕೂತ್ಕೊಂಡು ಚಿಂತನೆ ಮಾಡಿದರೆ ಅದೇ ಶಕ್ತಿಸ್ಥಾನವಾಗುತ್ತೆ. ಯಾವ ಸುಖಕ್ಕಾಗಿ ನಾವು ಎಲ್ಲಾ ಕಡೆ ಹಾರಾಡುತ್ತೀವೋ, ಆ ಸುಖ ನಮ್ಮ ಸ್ವರೂಪವೇ ಆಗಿದೆ. ಯಾವ ಶಕ್ತಿಯ ಸಂಚಯಕ್ಕೋಸ್ಕರ ಎಲ್ಲಾ ಕಡೆ ಓಡಾಡ್ತೀರೋ ಆ ಶಕ್ತಿಯ ಸಂಚಯ ನೀವೇ ಆಗಿದ್ದೀರ.

ಶಕ್ತಿಯ ಆಸೆಯಿಂದ, ಶಕ್ತಿಯ ಸಂಚಯ ಮಾಡಿಕೋಬೇಕು ಅಂತ ತಾವು ಬಲಿಷ್ಠರಾಗಬೇಕೆಂಬ ಆಸೆಯಿಂದ ದುರ್ಬಲರಾಗುತ್ತಾರೆ ಜನ. ಮನಸ್ಸಿನಲ್ಲಿ ಎಷ್ಟು ಹೆಚ್ಚು ಮಹತ್ವಾಕಾಂಕ್ಷೆಗಳಿರುತ್ತವೋ, ವ್ಯಕ್ತಿ ಅಷ್ಟೇ ಬಲಹೀನನಾಗಿರುತ್ತಾನೆ ನೋಡಿ. ಅಳುಕು ಮನಸ್ಸು ಎಲ್ಲಿರುತ್ತದೆಯೋ ಅಲ್ಲಿ ಶಕ್ತಿ ಇಲ್ಲ. ಶಕ್ತಿ ಇದ್ದರೆ ಮನಸ್ಸಿಗೆ ಅಳುಕು ಬರುವುದಿಲ್ಲ. ನಿನ್ನನ್ನು ಬಲಹೀನವಾಗಿ ಮಾಡೋದು ಬೇರೆ ಏನೂ ಅಲ್ಲ, ನಿನ್ನ ಆಸೆಯೇ ಆಗಿದೆ. ನಿನ್ನನ್ನು ಭಿಕಾರಿಯನ್ನಾಗಿ ಮಾಡೋದು ನಿನ್ನ ಆಸೆಯೇ! ಮರಳಿ ಬಾನಿನ್ನ ಪಥಕ್ಕೆ, ನಿನ್ನ ಸ್ಥಾನಕ್ಕೆ ಬಾ, ನಿನ್ನಲ್ಲಿ ನೀನಿರು. "ಸ್ವಪದಂ ಶಕ್ತಿ:" - ನೀನೇ ಶಕ್ತಿಯಾಗಿದ್ದೀಯ!

ಸ್ಥಾನಕ್ಕೆ ಪ್ರಾಧಾನ್ಯವಿದೆ, ಒಂದು ದೇವಸ್ಥಾನದಲ್ಲಿ ಗೋಪುರದ ಮೇಲೂ ವಿಷ್ಣುವಿನ ವಿಗ್ರಹ ಇರುತ್ತೆ, ದ್ವಾರಪಾಲಕರ ಸ್ಥಾನದಲ್ಲೂ ಅದೇ ರೀತಿಯ ವಿಷ್ಣುವಿನ ವಿಗ್ರಹವಿರುತ್ತೆ. ಪ್ರಾಕಾರ ಸುತ್ತಿ ಬರ್ತೀರಾ, ಅಲ್ಲಿಯೂ ಅದೇ ಇದೆ. ಆದರೆ ಪೂಜೆ ಆಗುವುದು ಯಾವುದಕ್ಕೆ? ಯಾವುದು ಕೇಂದ್ರ ಸ್ಥಳವಾದ ಗರ್ಭಗುಡಿಯಲ್ಲಿದೆಯೋ ಅದಕ್ಕೆ. ಸ್ಥಾನ! ’ಪದ’ ಮುಖ್ಯ. ಏಕೆಂದರೆ ಅಲ್ಲಿದ್ದಾಗಲೇ ಬೆಲೆ ಬರುತ್ತದೆ. ಅದಕ್ಕೇ "ಸ್ವಪದಂ ಶಕ್ತಿಃ" ಎಂದು ಹೇಳಿದರು. ನಿನ್ನ ಕೇಂದ್ರವಾದ ಆತ್ಮನಲ್ಲಿ, ನಿನ್ನ ಆಂತರ್ಯದಲ್ಲಿ ವಿಶ್ರಮಿಸು, ನೀನೇ ಶಕ್ತಿ!

* * * * *

ಸ್ವಪದಂ ಶಕ್ತಿಃ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೭/೦೫/೨೦೦೩ರ೦ದು ಪ್ರಕಟವಾಗಿತ್ತು)

ಜೀವನದಲ್ಲಿ ನಾವು ಎಲ್ಲಾ ಘಟನೆಗೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಕೆಲವಕ್ಕೆ ಜವಾಬ್ದಾರಿ ತೆಗೆದುಕೊಳ್ತೀವಿ, ಕೆಲವಕ್ಕೆ ತೆಗೆದುಕೊಳ್ಳುವುದಿಲ್ಲ. ಎಲ್ಲಾ ನಮಗೆ ಸರಿಯಾಗಿ ಆದರೆ ಜವಾಬ್ದಾರಿ ತೆಗೆದುಕೊಳ್ಳೋದು, ’ನಾನು ಮಾಡಿದೆ’ ಅನ್ನೋದು ಇಲ್ಲದಿದ್ದರೆ ’ಅವರು ಮಾಡಿದರು, ಇವರು ಮಾಡಿದರು’ ಅಂತ ಬೇರೆಯವರ ಮೇಲೆ ಹಾಕೋದು.

ಒಂದು ಕಂಪನಿಯಲ್ಲಿ ಒಬ್ಬ ಮ್ಯಾನೇಜರ್ ಇದ್ದಾರೆ ಅಂತಿಟ್ಟುಕೊಳ್ಳೋಣ. ಅವನ ಕೆಳಗೆ ಇಬ್ಬರು ಸಹಾಯಕರು ಇದ್ದಾರೆ.
ಒಬ್ಬ ಸಹಾಯಕ ಯಾವ ಕೆಲಸ ಮಾಡಿದರೂ, ತನ್ನ ಕೆಳಗಿನವರು ಮಾಡಿದ ಕೆಲಸದಲ್ಲಿ ತಪ್ಪುಗಿಪ್ಪು ಇದ್ದರೆ ಸೀದಾ ಹೋಗಿ ಮ್ಯಾನೇಜರರಿಗೆ ದೂರು ಹೇಳ್ತಿದ್ದ. ’ನನ್ನ ಕೆಳಗಿನವರು ಹಾಗೆ ಮಾಡಿಲ್ಲ, ಹೀಗೆ ಮಾಡಿಲ್ಲ’ ಅಂತ. ಕಡೆಗೆ ಮ್ಯಾನೇಜರರಿಗೆ ಬೇಸರ ಬಂದು ಇವನನ್ನು ಬಿಟ್ಟು, ಇವನ ಕೆಳಗಿನ ಕೆಲಸಗಾರರನ್ನೇ ನೇರವಾಗಿ ಮಾತನಾಡಿಸತೊಡಗಿದರು.

ಇನ್ನೊಬ್ಬ ಸಹಾಯಕ..ತನ್ನ ಕೆಳಗಿರುವವರು ಏನು ತಪ್ಪು ಮಾಡಿದರೂ, ಸರಿ ಮಾಡಿದರೂ ಜವಾಬ್ದಾರಿ ತಾನು ತೆಗೆದುಕೊಂಡ, ’ನಾನು ನೋಡಿಕೊಳ್ತೀನಿ’ ಅಂತ. ಈ ತರಹ ಇರುವವನಿಗೆ ಮುಂದೆ ಪ್ರೊಮೋನ್ ಸಿಕ್ಕಿತು.

ಎಷ್ಟೋ ಜನ ದೂರು ಹೇಳುವುದರಲ್ಲಿ ತಮ್ಮ ಬಲ ಕಂಡುಕೊಳ್ಳುತ್ತಾರೆ. ದೂರು ಹೇಳಿದರೆ ಅಥವಾ ತಪ್ಪು ಕಂಡುಹಿಡಿದರೆ ನಾವು ತುಂಬಾ ಬಲಶಲಿಗಳಾಗ್ತೀವಿ ಅಂತ. ಭ್ರಮೆ!

ನಮ್ಮ ಶಕ್ತಿ ಎಲ್ಲಿದೆ ಅಂತ ನಾವು ಕಂಡುಕೊಂಡಿಲ್ಲ. ಅದು ನಾವೇ ಆಗಿದ್ದೀವಿ. ಶಕ್ತಿ ಇದ್ದಾಗಲೇ ನೀವು ಮುಗ್ಧತೆಯಿಂದ ಇರಲುಸಾಧ್ಯ. ಶಕ್ತಿಯಿದ್ದಾಗಲೇ ನೀವು ಪ್ರೇಮದಿಂದ ಇರಲು ಸಾಧ್ಯ. ಶಕ್ತಿಯ ಸೂಚನೆ ಅದು. ಮಗುವಿನ ಹಾಗೆ ನಿನ್ನ ಮನಸ್ಸಿರಬೇಕಾದರೆ "ಸ್ವಪದಂ ಶಕ್ತಿಃ". ನಿನ್ನ ಸ್ಥಾನದಲ್ಲಿ ನೀನಿರಬೇಕು. ನಿನ್ನ ಪದದಲ್ಲಿ ನೀನಿದ್ದಾಗಲೇ ಅದು ಸಾಧ್ಯವಾಗುವುದು.

* * * * *

ಕುತರ್ಕ

(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೦೮/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೂರು ತರಹದ ತರ್ಕವಿದೆ. ತರ್ಕ, ಕುತರ್ಕ, ವಿತರ್ಕ. ತರ್ಕ ಇಲ್ಲದ ಜೀವನ ಇರುವುದಕ್ಕೆ ಸಾಧ್ಯವೇ ಇಲ್ಲ. ತರ್ಕ ಬೇಕು. ಆದರೆ ಆ ತರ್ಕ ಕುತರ್ಕವಾಗದೇ ಇರುವ ಹಾಗೆ ನೋಡಿಕೋಬೇಕು. ಕುತರ್ಕವೆಂದರೆ - ಎಲ್ಲದರಲ್ಲೂ ದೋಷ ಕಂಡುಹಿಡಿಯುವುದು. ಒಂದು ಒಳ್ಳೆಯ ಉದ್ದೇಶದಲ್ಲಿಯೂ, ಒಳ್ಳೆಯ ಕಾರ್ಯದಲ್ಲಿಯೂ ದುರುದ್ದೇಶವನ್ನು ನೋಡುವುದು, ಇದು ಕುತರ್ಕ. ಕುತರ್ಕ ನಿನಗೆ ಅಶಾಂತಿ ಉಂಟುಮಾಡುತ್ತದೆ.

ಈಗ ಯಾರಿಗೋ ನಿಮ್ಮ ಜೊತೇನೋ ಯಾರ ಜೊತೇನೋ ಮನಸ್ಸಿಗೆ ವಿರಸವಾಗಿದೆ, ಬೇಜಾರಾಗಿದೆ ಅಂತಿಟ್ಟುಕೊಳ್ಳಿ. ಅವರು ತಮ್ಮ ತಪ್ಪನ್ನು ತಿಳಿದುಕೊಂಡು ಮುಂದೆ ಬಂದು ’ನಂದು ತಪ್ಪಾಗಿದೆ’ ಅಂತ ಸರಿಮಾಡಿಕೊಳ್ಳಲು ಸ್ವೀಟ್ ಅದೂ ಇದೂ ತೆಗೆದುಕೊಂಡು ಬರ್ತಾರೆ ಮನೇಗೆ ಅಂದುಕೊಳ್ಳಿ. ಆಗ ಕುತರ್ಕ - ’ಇದನ್ನೆಲ್ಲ ತೆಗೆದುಕೊಂಡು ಬಂದಿದ್ದಾರಲ್ಲ, ಓ! ಏನೋ ಇರಬೇಕು, ಏನೋ ಹೊಂಚು ಹಾಕ್ತಾ ಇರಬೇಕು. ಇಲ್ಲದಿದ್ದರೆ ಸುಮ್ಮಸುಮ್ಮನೆ ತರ್ತಾರಾ, ಅಂತ ತರ್ಕ ಮಾಡೋದು ಮನಸ್ಸಿನಲ್ಲಿ.

ಇಲ್ಲದಿದ್ದರೆ, ಇವರು ಯಾಕೆ ಇವತ್ತು ತುಂಬ ಚೆನ್ನಾಗಿ ಮಾತಾಡ್ತಾ ಇದ್ದಾರಲ್ಲ, ಏನೋ ಹೊಂಚು ಹಾಕ್ತಾ ಇದ್ದಾರೆ ಇವರು ಅಂದುಕೊಳ್ಳೋದು. ಎಲ್ಲಾ ಒಳ್ಳೆಯ ಸ್ವಭಾವದಲ್ಲೂ, ಯಾವುದೇ ಒಳ್ಳೆಯ ಕೆಲಸದಲ್ಲಿಯೂ ಎಲ್ಲದರಲ್ಲೂ ಅದರಲ್ಲೇನೋ ಒಂದು ದೋಷ ಇದೆ ಅಂತ ಹುಡುಕೋದು. ಇದು ಕುತರ್ಕದಿಂದ ಉಂಟಾಗುತ್ತೆ.

ಮುಂದಿನ ಸೂತ್ರ "ವಿತರ್ಕ ಆತ್ಮ ಜ್ಞಾನಂ". ಮುಂಬರುವ ದಿನಗಳಲ್ಲಿ ಈ ಬಗ್ಗೆ ಅರಿತುಕೊಳ್ಳೋಣ.