ಶನಿವಾರ, ನವೆಂಬರ್ 3, 2012

ಅಭಿವ್ಯಕ್ತಿ


೩ ನವೆಂಬರ್ ೨೦೧೨
ಬೆಂಗಳೂರು, ಭಾರತ

ಪ್ರಶ್ನೆ: ಗುರುದೇವ, ನಿಮ್ಮಿಂದ ಬೇಷರತ್ತಾದ ಪ್ರೀತಿಯನ್ನು ಪಡೆಯುವುದು ನನಗೆ ಎಷ್ಟರಮಟ್ಟಿಗೆ ಅಭ್ಯಾಸವಾಗಿಬಿಟ್ಟಿದೆ ಎಂದರೆ, ನಾನೊಂದು ಸಂಬಂಧ ಕಂಡುಕೊಂಡಾಗಲೆಲ್ಲಾ, ಇನ್ನೊಬ್ಬ ವ್ಯಕ್ತಿಯಲ್ಲಿ ನಾನು ಅದೇ ಪ್ರೀತಿಯನ್ನು ಹುಡುಕುತ್ತೇನೆ ಮತ್ತು ಯಾವುದೇ ಸಂಬಂಧವೂ ನನಗೆ ಸರಿಹೋಗುವುದಿಲ್ಲ. ನಾನೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನಿಜವಾಗಿ, ಸಂಬಂಧಗಳ ರಹಸ್ಯದ ಬಗ್ಗೆ ಮಾತನಾಡಲು ಬೇಕಾದ ಅರ್ಹತೆ ನನಗಿಲ್ಲ! ಹೀಗಿದ್ದರೂ, ನಾನು ನಿನಗೆ ಇದನ್ನು ಹೇಳುವೆನು, ನೀನು ನಿನ್ನೆಲ್ಲಾ ಪ್ರೀತಿಯನ್ನು ಒಬ್ಬರ ಮೇಲೆ ಎರೆಯಬಹುದು, ಆದರೆ ಅವರು ಎಷ್ಟು ಪ್ರೀತಿಯನ್ನು ತೆಗೆದುಕೊಳ್ಳಬಲ್ಲರು ಎಂಬುದನ್ನು ಕೂಡಾ ನೀನು ನೋಡಬೇಕು.

ನೀರು ಬಹಳ ರಭಸದಿಂದ ಬೀಳುತ್ತಿರುವಾಗ, ನೀನು ಅದರ ಕೆಳಗೆ ನಿಲ್ಲಲು ಸಾಧ್ಯವಿಲ್ಲ, ನೀನು ನಿನ್ನ ತಲೆಯನ್ನು ಕಳೆದುಕೊಳ್ಳುವೆ. ಅದಕ್ಕಾಗಿ, ನೀನು ನಲ್ಲಿಯನ್ನು ನಿಯಂತ್ರಿಸಬೇಕಾಗುತ್ತದೆ. ನೀನು ನಲ್ಲಿಯನ್ನು ಸಂಪೂರ್ಣ ರಭಸದೊಂದಿಗೆ ತೆರೆದು ಅದರ ಅಡಿಯಲ್ಲಿ ಒಂದು ಖಾಲಿ ಬಾಟಲಿಯನ್ನಿಟ್ಟರೆ, ಬಾಟಲಿಯು ಖಾಲಿಯಾಗಿ ಉಳಿಯುವುದು. ನೀನು ನಲ್ಲಿಯನ್ನು, ಬಾಟಲಿ ತುಂಬಲು ಎಷ್ಟು ಬೇಕೋ ಅಷ್ಟೇ ತೆರೆಯಬೇಕು. ನಿನಗೆ ಈ ಅನುಭವವಾಗಿದೆಯೇ?

ಅದೇ ರೀತಿಯಲ್ಲಿ, ನೀನು ಯಾರನ್ನಾದರೂ ಬೇಷರತ್ತಾಗಿ ಪ್ರೀತಿಸುವಾಗ, ಅದನ್ನೆಲ್ಲಾ ಒಂದೇ ಸಾರಿಗೆ ವ್ಯಕ್ತಪಡಿಸಬೇಡ. ಅವರು ಓಡಿ ಹೋಗುವರು. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?

ಭಗವದ್ಗೀತೆಯಲ್ಲಿ ಒಂದು ಮಾತಿದೆ, ’ಸಮಃಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋಹೋ.’  (ಯಾರು ಶತ್ರುವಿನೊಂದಿಗೂ, ಮಿತ್ರನೊಂದಿಗೂ, ಹಾಗೆಯೇ ಮಾನದಲ್ಲೂ ಅಪಮಾನದಲ್ಲೂ ಸಮಾನವಾಗಿರುವರೋ, ಛಳಿಯಲ್ಲೂ ಸೆಖೆಯಲ್ಲೂ, ಸಂತೋಷದಲ್ಲೂ ನೋವಿನಲ್ಲೂ ಯಾರು ಸಮಾನವಾಗಿರುವರೋ, ಯಾರು ಮೋಹದಿಂದ ಮುಕ್ತರಾಗಿರುವರೋ)

ಒಬ್ಬ ಯೋಗಿಯು ಮಿತ್ರರೊಂದಿಗೆ ಮತ್ತು ಶತ್ರುಗಳೊಂದಿಗೆ ಹೇಗೆ ವ್ಯವಹರಿಸುವನು? ಮಿತ್ರರಾಗಿರಲಿ ಅಥವಾ ಶತ್ರುಗಳಾಗಿರಲಿ, ಯೋಗಿಯು ಅವರನ್ನೆಲ್ಲಾ ಒಂದು ಬುಟ್ಟಿಯಲ್ಲಿ ಹಾಕುತ್ತಾನೆ ಮತ್ತು ಒಂದು ಸಮಚಿತ್ತತೆಯ ಮನೋಸ್ಥಿತಿಯನ್ನಿಟ್ಟುಕೊಳ್ಳುತ್ತಾನೆ. ಇದು ಯಾಕೆಂದರೆ, ಒಬ್ಬ ಮಿತ್ರನು ಯಾವಾಗ ಒಬ್ಬ ಶತ್ರುವಾಗುವನೆಂದೂ, ಒಬ್ಬ ಶತ್ರುವು ಯಾವಾಗ ಒಬ್ಬ ಬಹಳ ಒಳ್ಳೆಯ ಮಿತ್ರನಾಗುವನೆಂದೂ ನಿಮಗೆ ಯಾವತ್ತಿಗೂ ತಿಳಿಯದು. ಇದೊಂದು ವಾಸ್ತವವಾಗಿದೆ.

ನಮ್ಮ ಪೂರ್ತಿ ಜೀವನವು ಯಾವುದೋ ವಿಚಿತ್ರ ಕರ್ಮಾನುಸಾರ, ಯಾವುದೋ ವಿಚಿತ್ರ ಪ್ರಾಕೃತಿಕ ನಿಯಮಗಳನುಸಾರ ಕೆಲಸ ಮಾಡುತ್ತದೆ. ಹಾಗಾಗಿ ನೀವು ಕೇವಲ ನಿಮ್ಮನ್ನೇ ಅವಲಂಬಿಸಿ, ಸ್ವಾವಲಂಬನೆ ಎಂಬುದರ ಅರ್ಥ ಇದುವೇ. ಮತ್ತೆ, ಯಾರಿಗೂ ಕೆಟ್ಟದನ್ನು ಬಯಸಬೇಡಿ.

ಹೆಚ್ಚಾಗಿ, ಒಬ್ಬರು ಇನ್ನೊಬ್ಬರನ್ನು ದ್ವೇಷಿಸುವಾಗ, ಅವರು ಅವರನ್ನು ಶಪಿಸಲು ತೊಡಗುತ್ತಾರೆ. ಏನೇ ಬರಲಿ, ಯಾರನ್ನೂ ಶಪಿಸಬೇಡಿ. ಹೆಚ್ಚೆಂದರೆ, ಅವರು ಒಂದು ಒಳ್ಳೆಯ ಮನಸ್ಸನ್ನು ಹೊಂದುವಂತೆ ನಾವವರಿಗೆ ಹಾರೈಸಬೇಕು, ’ಅವರ ಬುದ್ಧಿಯು ಸರಿಯಾಗಲಿ.’

ಹಿಂದಿಯಲ್ಲಿ ನಾವು, ’ಭಗವಾನ್, ಇನ್‌ಕೋ ಸದ್ಬುದ್ಧಿ ದೋ’ (ದೇವರೇ, ಅವರಿಗೆ ಒಳ್ಳೆಯ ಬುದ್ಧಿಯನ್ನು ನೀಡಿ) ಎಂದು ಹೇಳುತ್ತೇವೆ.  ಇದು ಭಾರತದಲ್ಲಿ ಸಾಮಾನ್ಯವಾಗಿರುವ ಒಂದು ಪ್ರಾರ್ಥನೆಯಾಗಿದೆ. ಇದೊಂದು ಬಹಳ ಒಳ್ಳೆಯ ಪ್ರಾರ್ಥನೆ ಹಾಗೂ ಜೀವನದಲ್ಲಿಟ್ಟುಕೊಳ್ಳಲು ಒಂದು ಒಳ್ಳೆಯ ಮನೋಭಾವವೂ ಆಗಿದೆ.

ಜೀವನದಲ್ಲಿ ಹೊಂದಲು ಉತ್ತಮವಾದ ನಾಲ್ಕು ರೀತಿಯ ಮನೋಭಾವಗಳಿವೆ:

೧) ಸ್ನೇಹಪರತೆ: ಸಂತೋಷವಾಗಿರುವ ಜನರೊಂದಿಗೆ ಸ್ನೇಹಪರತೆಯಿಂದಿರಿ. ಸಂತೋಷವಾಗಿರುವ ಜನರೊಂದಿಗೆ ನೀವು ಸ್ನೇಹಪರತೆಯಿಂದಿಲ್ಲದಿದ್ದರೆ, ನಿಮ್ಮಲ್ಲಿ ಮಾತ್ಸರ್ಯವುಂಟಾಗುವುದು. ಇದು ಯಾಕೆಂದರೆ, ನಿಮ್ಮ ಶತ್ರುವು ಸಂತೋಷವಾಗಿರುವರೆಂದು ನೀವು ಯೋಚಿಸುವಿರಿ ಮತ್ತು ನಿಮ್ಮ ಶತ್ರುವು ಸಂತೋಷವಾಗಿರುವುದನ್ನು ನೀವು ಸಹಿಸುವುದಿಲ್ಲ. ಆದುದರಿಂದ, ಸಂತೋಷವಾಗಿರುವ ಜನರೊಂದಿಗೆ ಕೈಗಳನ್ನು ಕುಲುಕಿ. ಅಂತಹ ಒಂದು ಮನೋಭಾವವು ನಿಮ್ಮ ಮನಸ್ಸಿಗೆ ಬಹಳಷ್ಟು ಒಳ್ಳೆಯದನ್ನು ಮಾಡುತ್ತದೆ.

೨) ಸಹಾನುಭೂತಿ: ದುಃಖಿತರಾಗಿರುವ ಜನರೊಂದಿಗೆ ಸ್ನೇಹಪರತೆಯಿಂದಿರಬೇಡಿ, ಬದಲಾಗಿ, ಅವರ ಕಡೆಗೆ ಸಹಾನುಭೂತಿ ಹೊಂದಿ. ಅಸಂತುಷ್ಟರಾಗಿರುವ ಜನರೊಂದಿಗೆ ನೀವು ಸ್ನೇಹಪರತೆಯಿಂದಿದ್ದರೆ, ನೀವು ಅಸಂತುಷ್ಟರಾಗುವಿರಿ ಮತ್ತು ನೀವು ಅಸಂತುಷ್ಟರಾದರೆ, ಅವರ ದುಃಖದಿಂದ ಹೊರಬರುವಲ್ಲಿ ನೀವು ಅವರಿಗೆ ಯಾವತ್ತೂ ಸಹಾಯ ಮಾಡಲಾರಿರಿ. ಹೀಗಾಗಿ, ಅವರೊಂದಿಗಿನ ನಿಮ್ಮ ಸಂಬಂಧದಲ್ಲಿ ವಿಭಿನ್ನವಾದೊಂದು ರುಚಿಯಿರುತ್ತದೆ.

ಅಸಂತುಷ್ಟರಾದ ಜನರೊಂದಿಗೆ ಸ್ನೇಹಪರತೆಯಿಂದಿದ್ದು, ಹಲವಾರು ಜನರು ಕಷ್ಟದಲ್ಲಿ ಸಿಲುಕಿದ್ದಾರೆ; ಇಬ್ಬರೂ ದುಃಖಿತರಾಗುತ್ತಾರೆ. ಅದು, ಒಬ್ಬ ರೋಗಿಯ ಬಳಿಗೆ ಹೋಗುವ ವೈದ್ಯನೂ ರೋಗಿಯಾಗುವಂತೆ. ವೈದ್ಯ ಕೂಡಾ, ’ನಾನು ಮಾತ್ರ ಆರೋಗ್ಯವಂತನಾಗಿರಲು ಹೇಗೆ ಸಾಧ್ಯ? ನಾನು ಕೂಡಾ ರೋಗಿಯ ದುಃಖವನ್ನು ಹಂಚಿಕೊಳ್ಳುತ್ತೇನೆ’ ಎಂದು ಯೋಚಿಸಿದರೆ, ಆಗ ರೋಗಿಗೆ ಯಾರು ಸಹಾಯ ಮಾಡುವರು? ಆದುದರಿಂದ, ದುಃಖಿತರಾಗಿರುವ ಜನರ ಕಡೆಗಿರಬೇಕಾದ ಮನೋಭಾವವೇನು? ಸಹಾನುಭೂತಿ, ಕರುಣೆಯಲ್ಲ.

೩) ಸಂತೋಷ: ಒಳ್ಳೆಯ ಕೆಲಸವನ್ನು ಮಾಡುತ್ತಿರುವ ಜನರಿಗಾಗಿ ಅಥವಾ ಜಗತ್ತಿನಲ್ಲಿ ಯಶಸ್ವಿಯಾಗಿರುವ ಜನರಿಗಾಗಿ; ನೀವೇ ಅದನ್ನು ಮಾಡುತ್ತಿರುವಿರೇನೋ ಎಂಬಂತೆ ನೀವು ಸಂತೋಷಪಡಬೇಕು.

ಉದಾಹರಣೆಗೆ, ಒಬ್ಬರು ಒಳ್ಳೆಯ ಗಾಯಕರು ಹಾಡುತ್ತಾ ಎಲ್ಲರಿಗೂ ಆನಂದವನ್ನು ತರುತ್ತಾರೆ. ಅವರನ್ನು ನೋಡಿ ನೀವು ಯೋಚಿಸಬೇಕು, ’ಈ ವ್ಯಕ್ತಿಯು ಅಷ್ಟೊಂದು ಚೆನ್ನಾಗಿ ಹಾಡಿ ಎಲ್ಲರನ್ನೂ ಸಂತೋಷಪಡಿಸುತ್ತಿರುವುದಕ್ಕಾಗಿ ನನಗೆ ಬಹಳ ಸಂತೋಷವಾಗುತ್ತಿದೆ.’

ಒಬ್ಬರು ಒಳ್ಳೆಯ ಮನೋರಂಜನೆ ನೀಡುವವರಾಗಿದ್ದು, ಅವರು ಎಲ್ಲರ ಮನರಂಜಿಸುತ್ತಿದ್ದರೆ, ನೀವು ಅದರ ಬಗ್ಗೆ ಸಂತೋಷಪಡಬೇಕು. ಒಬ್ಬರು ಮಹಾನ್ ವಾಸ್ತುಶಿಲ್ಪಿಯಾಗಿದ್ದು, ಸುಂದರವಾದ ಕಟ್ಟಡಗಳನ್ನು ಕಟ್ಟಿದರೆ, ನೀವು ಅದರ ಬಗ್ಗೆ ಸಂತೋಷಪಡಬೇಕು. ಯಾವಾಗೆಲ್ಲಾ ಒಬ್ಬರು ಒಂದು ಒಳ್ಳೆಯ ಕೆಲಸವನ್ನು ಮಾಡುವರೋ, ಆಗ ಅವರೊಂದಿಗೆ ಆ ಸಂತೋಷವನ್ನು ಹಂಚಿಕೊಳ್ಳಿ; ನಮ್ಮಲ್ಲಿ ಈ ಮನೋಭಾವವಿರಬೇಕಾಗಿದೆ.

೪) ಅನಾಸಕ್ತಿ: ಸಮಾಜದಲ್ಲಿ ಭೀಕರ ಕೆಲಸಗಳನ್ನು ಮಾಡುತ್ತಾ ತಮ್ಮನ್ನೇ ನಶಿಸುತ್ತಿರುವವರ ಮೇಲೆ ನಾವು ಸಾಧಾರಣವಾಗಿ ಕೋಪಗೊಳ್ಳುತ್ತೇವೆ. ನೀವು ಕೋಪಗೊಳ್ಳುವಾಗ, ನಿಮ್ಮ ಮನಸ್ಸಿಗೆ ಭಾರೀ ನಷ್ಟವುಂಟಾಗುತ್ತದೆ. ನೀವು ಬಹಳಷ್ಟು ಶಕ್ತಿಯನ್ನು ಕಳೆದುಕೊಳ್ಳುತ್ತೀರಿ, ನೀವು ನಿಮ್ಮ ಒಳ್ಳೆಯ ಮನಸ್ಥಿತಿಯನ್ನು ಮತ್ತು ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತೀರಿ. ಶಕ್ತಿ ಮತ್ತು ಉತ್ಸಾಹಗಳು ನಿಮ್ಮಿಂದ ದೂರಹೋಗುವಾಗ, ನೀವು ಕೋಪಗೊಳ್ಳುತ್ತೀರಿ ಮತ್ತು ಆಗ ನೀವು ಇನ್ನೊಬ್ಬ ವ್ಯಕ್ತಿಗಿಂತ ಉತ್ತಮರೇನೂ ಆಗಿರುವುದಿಲ್ಲ. ನೀವೇನು ಮಾಡುತ್ತಿರುವಿರೆಂಬುದು ನಿಮಗೆ ತಿಳಿಯುವುದಿಲ್ಲ. ಆದುದರಿಂದ, ಅಂತಹ ಒಂದು ಸಂದರ್ಭದಲ್ಲಿ ನೀವೇನು ಮಾಡಬೇಕು? ನಿಮ್ಮ ಮನಸ್ಸಿನಲ್ಲಿ ಒಂದು ರೀತಿಯ ಅನಾಸಕ್ತಿಯನ್ನುಹೊಂದಿ. ಉದಾಹರಣೆಗೆ, ಪ್ರಪಂಚದಲ್ಲಿ ಕಳ್ಳರಿದ್ದಾರೆ; ಅವರಿದ್ದಾರೆ, ಅವರ ಬಗ್ಗೆ ನೀವೇನು ಮಾಡಲು ಸಾಧ್ಯ? ಮೊದಲು ಸ್ವೀಕರಿಸಿ, ಅನಾಸಕ್ತರಾಗಿ. ಹೀಗಿದ್ದರೂ, ನೀವು ಯಾವುದೇ ಕ್ರಮ ತೆಗೆದುಕೊಳ್ಳಬಾರದೆಂಬುದು ಇದರ ಅರ್ಥವಲ್ಲ. ನಿಮ್ಮ ಮನಸ್ಸು ಅನಾಸಕ್ತವಾಗಿರುತ್ತದೆ (ಪ್ರಭಾವಿತವಾಗದೆ ಇರುತ್ತದೆ), ಆದರೆ ನೀವು ಅದರ ಮೇಲೆ ಕ್ರಮ ಕೈಗೊಳ್ಳುವಿರಿ.

ಇವುಗಳು, ನಮ್ಮ ಮನಸ್ಸನ್ನು ಕಾಪಾಡಲು ನಮಗೆ ಸಹಾಯ ಮಾಡುವ ನಾಲ್ಕು ಮನೋಭಾವಗಳಾಗಿವೆ. ಇದನ್ನೇ ನಾವು ಮಾಡಬೇಕಾದುದು, ಯಾವುದೇ ಬೆಲೆ ತೆತ್ತಾದರೂ ನಮ್ಮ ಮನಸ್ಸನ್ನು ಸಂರಕ್ಷಿಸಿಕೊಳ್ಳುವುದು.

ಪ್ರಶ್ನೆ: ಗುರುದೇವ, ನಮ್ಮ ಜೀವನದಲ್ಲಿ ಆಗ್ರಹ, ನಿಗ್ರಹ ಮತ್ತು ಅನುಗ್ರಹಗಳ ಪ್ರಸಕ್ತತೆಯೇನು?

ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದಕ್ಕೂ ತನ್ನದೇ ಆದ ಸ್ಥಾನ ಮತ್ತು ಮಹತ್ವಗಳಿವೆ. ಜೀವನವು ಅನುಗ್ರಹ, ಆಶೀರ್ವಾದದಿಂದ ನಡೆಯುತ್ತದೆ. ನಿಗ್ರಹ, ಅಂದರೆ ಸಂಯಮವು ನಿಮಗೆ ಜೀವನದಲ್ಲಿ ಆನಂದ ಮತ್ತು ಸಂತೋಷವನ್ನು ನೀಡುತ್ತದೆ. ಕೆಲವೊಮ್ಮೆ ನಮ್ಮಲ್ಲಿ ಆಗ್ರಹ ಅಥವಾ ಒತ್ತಾಯ ಕೂಡಾ ಇರಬೇಕು. ಒಬ್ಬಳು ತಾಯಿಯು ಒತ್ತಾಯಿಸದಿದ್ದರೆ, ಮಕ್ಕಳು ಸರಿಯಾದ ದಾರಿಯಲ್ಲಿ ನಡೆಯುವುದಿಲ್ಲ. ಒಬ್ಬ ತಂದೆಯು ಒತ್ತಾಯಿಸದಿದ್ದರೆ ಅಥವಾ ತನ್ನ ಮಕ್ಕಳಿಗೆ ತಿಳಿಹೇಳದಿದ್ದರೆ, ಆಗ ಅವರಿಗೆ ಜೀವನದಲ್ಲಿ ಯಾವುದೇ ಸರಿದಾರಿ ಸಿಗುವುದಿಲ್ಲ. ಈ ರೀತಿಯಲ್ಲಿ ಆಗ್ರಹ ಕೂಡಾ ಮುಖ್ಯವಾಗಿದೆ.

ಅದೇ ರೀತಿಯಲ್ಲಿ, ತಿಳುವಳಿಕೆಯುಳ್ಳ ಜನರು ಅನ್ಯಾಯದ ವಿರುದ್ಧ ಎದ್ದುನಿಲ್ಲುವುದರ ಬಗ್ಗೆ ಪಟ್ಟು ಹಿಡಿಯದಿದ್ದರೆ, ಆಗ ಸಮಾಜದಲ್ಲಿ ಅನ್ಯಾಯವು ಹರಡುವುದು ಮುಂದುವರಿಯುತ್ತದೆ. ಅಜ್ಞಾನವನ್ನು ವಿರೋಧಿಸುವುದದ ಬಗ್ಗೆ ನಾವು ಒತ್ತಿಹೇಳದಿದ್ದರೆ, ಆಗ ಅಜ್ಞಾನವು ಬೆಳೆಯುವುದು. ಆದುದರಿಂದ, ಅನ್ಯಾಯ ಮತ್ತು ಅಜ್ಞಾನವನ್ನು ಸಮಾಜದಿಂದ ತೆಗೆದುಹಾಕುವುದನ್ನು ಆಗ್ರಹಿಸುವುದು ಮುಖ್ಯವಾಗಿದೆ.

ಒಬ್ಬರು ನಿಗ್ರಹವನ್ನು; ಮನಸ್ಸಿನ ಮೇಲೆ ಸಂಯಮವನ್ನು ಅಭ್ಯಾಸ ಮಾಡಬೇಕಾಗಿದೆ. ಸಾವಿರಾರು ಯೋಚನೆಗಳು ಮನಸ್ಸಿಗೆ ಬರುತ್ತವೆ. ಕೆಲವೊಮ್ಮೆ ಜನರಿಗೆ, ತಮ್ಮದೇ ಮನಸ್ಸಿಗೆ ಬರುವ ಯೋಚನೆಗಳಿಂದ ತೊಂದರೆಯಾಗುತ್ತದೆ. ಮನಸ್ಸಿಗೆ ಬರುವ ಯೋಚನೆಗಳನ್ನು ನಿಗ್ರಹಿಸುವ ಅಭ್ಯಾಸ ಮಾಡದಿದ್ದರೆ, ಆಗ ನೀವು ಹುಚ್ಚರಾಗುವಿರಿ ಮತ್ತು ಒಂದು ಮಾನಸಿಕ ಆಸ್ಪತ್ರೆಗೆ ಭರ್ತಿ ಮಾಡಲ್ಪಡುವಿರಿ. ಹಾಗಾಗಿ ನಿಗ್ರಹವು ಬಹಳ ಆವಶ್ಯಕವಾಗಿದೆ.

ನಾವು ನಮ್ಮ ಇಂದ್ರಿಯಗಳ ಮೇಲೆ ಕೂಡಾ ನಿಗ್ರಹವನ್ನು ಅಭ್ಯಾಸ ಮಾಡಬೇಕಾಗಿದೆ.

ಉದಾಹರಣೆಗೆ, ನಮ್ಮ ಹೊಟ್ಟೆಯು ತಾನು ತುಂಬಿರುವೆನೆಂದು ಹೇಳಿದರೂ, ನಮ್ಮ ಮನಸ್ಸು ಹೆಚ್ಚು ತಿನ್ನುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಇದು ಹಲವಾರು ಸಲ ಆಗುತ್ತದೆ. ಬುಲಿಮಿಯಾ ಎಂದು ಕರೆಯಲ್ಪಡುವ ಒಂದು ಖಾಯಿಲೆಯಿದೆ. ಅದು ಹೊರದೇಶಗಳಲ್ಲಿ ವ್ಯಾಪ್ತವಾಗಿದೆ, ಭಾರತದಲ್ಲಿ ಅಷ್ಟೊಂದಿಲ್ಲ. ಬುಲಿಮಿಯಾದಲ್ಲಿ, ಒಬ್ಬರು ಮೊದಲು ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ನಂತರ ಅವರು ಮತ್ತೆ ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ಈ ರೀತಿಯಲ್ಲಿ ಅವರು ಆರು ಅಥವಾ ಹೆಚ್ಚು ಸಾರಿ ಊಟ ಮಾಡುತ್ತಾರೆ ಮತ್ತು ಅದನ್ನೆಲ್ಲಾ ಹೊರಕ್ಕೆ ವಾಂತಿ ಮಾಡುತ್ತಾರೆ. ದೀರ್ಘಾವಧಿಯಲ್ಲಿ ಆಹಾರ ನಳಿಕೆಯು ಸಂಪೂರ್ಣವಾಗಿ ಹಾನಿಗೊಳ್ಳುತ್ತದೆ ಮತ್ತು ಸುಟ್ಟುಹೋಗುತ್ತದೆ.

ಈ ಖಾಯಿಲೆಯಿರುವ ಜನರು ಒಳಗಿನಿಂದ ಬಹಳ ಕದಡಿದ ಮನಸ್ಸಿನವರಾಗಿ ಉಳಿಯುತ್ತಾರೆ. ಪ್ರಾಣಾಯಾಮ, ಧ್ಯಾನ ಮತ್ತು ನಿಯಮಿತವಾಗಿ ಸುದರ್ಶನ ಕ್ರಿಯೆ ಮಾಡುವುದರಿಂದ ಹಲವಾರು ಜನರಿಗೆ ಇದರಿಂದ ಹೊರಬರಲು ಸಾಧ್ಯವಾಗಿದೆ. ಹೀಗೆ, ಬುಲಿಮಿಯಾವೆಂದರೆ, ತಿನ್ನಲಿರುವ ಬಯಕೆಯು ಬಹಳಷ್ಟು ಹೆಚ್ಚಾಗಿದ್ದರೂ ಮನಸ್ಸಿನಲ್ಲಿ ಯಾವುದೇ ತೃಪ್ತಿಯಿರದ ಒಂದು ಖಾಯಿಲೆಯಾಗಿದೆ. ಇದಕ್ಕಾಗಿಯೇ ಇಂದ್ರಿಯಗಳ ಮೇಲಣ ನಿಗ್ರಹದ ಅಭ್ಯಾಸ ಮಾಡುವುದು ಆವಶ್ಯಕವಾಗಿರುವುದು.

ಒಬ್ಬ ವ್ಯಕ್ತಿಯು ತನ್ನ ಇಂದ್ರಿಯಗಳ ಮೇಲೆ ನಿಗ್ರಹವನ್ನು ಅಭ್ಯಾಸ ಮಾಡದಿರುವಾಗ, ಅವನು ಖಾಯಿಲೆಯೊಂದಿಗೆ ಒಂದು ಆಸ್ಪತ್ರೆಯನ್ನು ಸೇರುತ್ತಾನೆ ಅಥವಾ ಜೈಲನ್ನು ಸೇರುತ್ತಾನೆ. ನಿಗ್ರವನ್ನು ಅಭ್ಯಾಸ ಮಾಡುವುದು ಒಬ್ಬರನ್ನು ಈ ಎರಡೂ ಪರಿಸ್ಥಿತಿಗಳಿಂದ ಕಾಪಾಡಬಹುದು.

ಅನುಗ್ರಹವು ಜೀವನದಲ್ಲಿ ತೃಪ್ತಿಯನ್ನು ತರುತ್ತದೆ. ನೀವು ಜೀವನದಲ್ಲಿ ಯಾವುದಾದರೂ ಆನಂದ ಅಥವಾ ಸುಖವನ್ನು ಅನುಭವಿಸಿರುವುದಾದರೆ, ಅದು ಬಂದಿರುವುದು ಅನುಗ್ರಹದ ಮೂಲಕ ಮಾತ್ರ. ನಮ್ಮಲ್ಲಿ ಜ್ಞಾನವು ಉದಯಿಸುವಾಗ, ನಮಗೆ ನಮ್ಮ ಜೀವನದಲ್ಲಿರುವ ಅನುಗ್ರಹವನ್ನು ಗುರುತಿಸಲು ಮತ್ತು ಅದರ ಬಗ್ಗೆ ಅರಿವು ಹೊಂದಲು ಸಾಧ್ಯವಾಗುತ್ತದೆ.

ಜೀವನದಲ್ಲಿ ಇವತ್ತು ನಾವು ಏನನ್ನೇ ಪಡೆದಿದ್ದರೂ, ಎಲ್ಲೇ ಇದ್ದರೂ, ಇದೆಲ್ಲವೂ ಬಂದಿರುವುದು ಅನುಗ್ರಹದಿಂದ ಮಾತ್ರ. ಈ ಭಾವನೆಯು ಜೀವನಕ್ಕೆ, ಪೂರ್ಣತೆಯ ಒಂದು ಭಾವವನ್ನು ಒದಗಿಸುತ್ತದೆ.

ಪ್ರಶ್ನೆ: ಗುರುದೇವ, ಕಲಾವಿದರು ಕೃಷ್ಣ ಪರಮಾತ್ಮನ ವಿಶ್ವರೂಪವನ್ನು, ಹಲವಾರು ತಲೆ ಹಾಗೂ ಕೈಗಳಿರುವ ಒಬ್ಬ ವ್ಯಕ್ತಿಯಾಗಿ ಚಿತ್ರಿಸುತ್ತಾರೆ. ಅದರ ನಿಜವಾದ ಅರ್ಥವೇನು?
ಶ್ರೀ ಶ್ರೀ ರವಿ ಶಂಕರ್: ವಿಶ್ವರೂಪವೆಂದರೆ ಎಲ್ಲದರಲ್ಲೂ ದೇವರನ್ನು  ನೋಡುವುದು. ಇಲ್ಲಿ ರೂಪವೆಂದರೆ ಸಾರ್ವತ್ರಿಕ ರೂಪವೆಂದು ಅರ್ಥ; ಸಂಪೂರ್ಣ ವಿಶ್ವವನ್ನು ಒಂದು ದೈವಿಕತೆಯ ರೂಪವಾಗಿ ನೋಡುವುದೇ ಇದರ ಅರ್ಥವಾಗಿದೆ, ಆದರೆ ಕಲಾವಿದನು ಅದನ್ನು ವಿಭಿನ್ನವಾಗಿ ತೋರಿಸಿರುವನು. ಅದರ ಬಗ್ಗೆ, ಕಲಾವಿದನು ಅದನ್ನು ಪ್ರಸ್ತುತ ಪಡಿಸಿರುವ ರೀತಿಯಲ್ಲಿ; ಪರಮಾತ್ಮನನ್ನು, ಹಲವಾರು ತಲೆಗಳು ಮತ್ತು ಕೈಗಳಿರುವ ಒಬ್ಬ ವ್ಯಕ್ತಿಯಂತೆ ಯೋಚಿಸಬೇಡಿ, ಇಲ್ಲ.

ಅರ್ಜುನನಿಗೆ, ಎಲ್ಲರೂ ಒಂದು ಎಂಬ ಅನುಭವವು ಹಾಗೆಯೇ ಆಯಿತು. ನೂರಾರು ಮತ್ತು ಸಾವಿರಾರು ತಲೆಗಳು ಒಬ್ಬ ವ್ಯಕ್ತಿಯದಾಗಿರಲಿಲ್ಲ. ಅದು ಹಾಗಲ್ಲ. ಅದರ ಅರ್ಥವೇನೆಂದರೆ ಒಂದು ಪ್ರಜ್ಞೆಯಿರುವುದು, ಅದು ಈ ಎಲ್ಲಾ ತಲೆಗಳಲ್ಲಿದೆ.  ಏಕತ್ವದ ಆ ಅನುಭವವನ್ನು ಹೊಂದಿರುವುದು, ನೀರು, ಭೂಮಿ, ಮೋಡಗಳು, ಪ್ರಾಣಿಗಳು ಮತ್ತು ಮರಗಳೊಂದಿಗೆ ಏಕತ್ವದ ಭಾವನೆಯನ್ನು ಹೊಂದಿರುವುದು. ನಿಜವಾಗಿ ವಿಶ್ವರೂಪವೆಂದರೆ ಅದುವೇ.

ಪ್ರಶ್ನೆ: ಗುರುದೇವ, ಪುರುಷ ಎಂಬುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಪುರ ಎಂದರೆ ನಗರವೆಂದು ಅರ್ಥ. ಆದುದರಿಂದ, ಒಂದು ನಗರದಲ್ಲಿ ವಾಸಿಸುವವನು ಒಬ್ಬ ಪುರುಷ.
ನಮ್ಮ ಶರೀರ ಕೂಡಾ ಒಂದು ನಗರದಂತೆ. ನಮ್ಮ ಶರೀರದೊಳಗೆ ಎಷ್ಟೊಂದು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳಿವೆಯೆಂಬುದು ನಿಮಗೆ ಗೊತ್ತೇ? ಕರುಳಿನಲ್ಲಿ ಮಾತ್ರವಾಗಿ ಸುಮಾರು ೫೦,೦೦೦ ರೀತಿಯ ಬ್ಯಾಕ್ಟೀರಿಯಾ ಇವೆ. ನಿಮಗೆ ಅತಿಸಾರವಾದಾಗ, ಈ ಬ್ಯಾಕ್ಟೀರಿಯಾದ ಒಂದು ಪ್ರವಾಹವಿರುತ್ತದೆ. ನಿಮ್ಮ ಹೊಟ್ಟೆಯೊಳಗೆ ಶಬ್ದವಾಗುವಾಗ, ಅದು ಈ ಬ್ಯಾಕ್ಟೀರಿಯಾ ಅಲ್ಲಾಡುವುದಾಗಿದೆ; ಅಲ್ಲೊಂದು ಭೂಕಂಪವಾಗಿದೆಯೇನೋ ಎಂಬಂತೆ!

ನೀವು ವಾಯುಪೀಡೆಯಿಂದ ಬಳಲುವಾಗ, ಅದು ಬ್ಯಾಕ್ಟೀರಿಯಾವು ಒಂದು ಬಿರುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ. ಹೀಗೆ, ನಿಮ್ಮೊಳಗೆ ಒಟ್ಟಿನಲ್ಲಿ ಒಂದು ಭಿನ್ನವಾದ ಪ್ರಪಂಚವಿದೆ.

ಅದೇ ರೀತಿಯಲ್ಲಿ, ನಮ್ಮ ನರ ನಾಡಿಗಳಲ್ಲಿ ಕೂಡಾ ಹಲವಾರು ಬ್ಯಾಕ್ಟೀರಿಯಾ ಇವೆ. ನಮ್ಮ ಹಣೆಯ ಮೇಲೆ ಮೂರು ರೀತಿಯ ಮೈಟ್ ಎಂಬ ಸೂಕ್ಷ್ಮಜೀವಿಗಳಿವೆ ಎಂದು ಹೇಳಲಾಗಿದೆ. ಮೈಟ್‌ಗಳು ಕೂಡಾ ಒಂದು ರೀತಿಯ ಬ್ಯಾಕ್ಟೀರಿಯಾ. ಒಂದು ರೀತಿಯದ್ದು ಕಣ್ಣ ಹುಬ್ಬುಗಳ ಬಳಿ ವಾಸಿಸುತ್ತವೆ, ಇನ್ನೊಂದು ರೀತಿಯದ್ದು ಹುಬ್ಬುಗಳ ಮೇಲಿರುವ ಪ್ರದೇಶದಲ್ಲಿ ಮತ್ತು ಮೂರನೆಯ ರೀತಿಯದ್ದು ಹಣೆಯ ಮೇಲ್ಭಾಗದಲ್ಲಿ ವಾಸಿಸುತ್ತವೆ. ಅವುಗಳೆಲ್ಲವೂ ಪರಸ್ಪರ ವಿಭಿನ್ನವಾಗಿವೆ ಮತ್ತು ತಮ್ಮದೇ ಆದ ಸೀಮೆಗಳನ್ನು ಹೊಂದಿವೆ.

ಮೇಲಿನ ಭಾಗದಲ್ಲಿರುವವು ಕೆಳಭಾಗಕ್ಕೆ ದಾಟುವುದಿಲ್ಲ, ಕೆಳಗಿರುವವು ಮೇಲಿನ ಭಾಗಕ್ಕೆ ದಾಟುವುದಿಲ್ಲ ಮತ್ತು ಮಧ್ಯದಲ್ಲಿರುವವು ಅವುಗಳೆಲ್ಲಿರುವುವೋ ಅಲ್ಲಿಯೇ ಉಳಿಯುವುವು. ಹೀಗೆ ಈ ಸೂಕ್ಷ್ಮಜೀವಿಗಳು ತಮ್ಮ ಪ್ರದೇಶಗಳಿಗೆ ಸೀಮಿತವಾಗಿ ಉಳಿಯುತ್ತವೆ. ಪ್ರಾಚೀನ ಭಾರತದಲ್ಲಿ, ಕೈಗಳ ಮೂರು ಬೆರಳುಗಳನ್ನುಪಯೋಗಿಸಿ ಹಣೆಯ ಮೇಲೆ ವಿಭೂತಿಯ ಮೂರು ಗೆರೆಗಳನ್ನು ಎಳೆಯುವ ಒಂದು ಪದ್ಧತಿಯಿತ್ತು. ಅವರು ಹಾಗೆಯೇ ಕೇವಲ ಒಂದೇ ಗೆರೆಯನ್ನು ಎಳೆಯಬಹುದಿತ್ತು,

ಆದರೆ ಅವರು ಮಧ್ಯೆ ಜಾಗ ಬಿಟ್ಟುಕೊಂಡು ನಿಜವಾಗಿ ಮೂರು ಗೆರೆಗಳನ್ನು ಎಳೆಯುತ್ತಿದ್ದರು. ಹಣೆಯ ಮೇಲೆ ಮೂರು ಗೆರೆಗಳಲ್ಲಿ ನಿರ್ದಿಷ್ಟ ರೀತಿಯ ಸೂಕ್ಷ್ಮಜೀವಿಗಳಿವೆ ಎಂಬುದು ಬಹುಶಃ ಅವರಿಗೆ ಗೊತ್ತಿತ್ತು.

ಅದೇ ರೀತಿಯಲ್ಲಿ, ನಮ್ಮ ಚರ್ಮದಲ್ಲಿ ಕೂಡಾ ಬ್ಯಾಕ್ಟೀರಿಯಾ ಇವೆ. ನಮ್ಮ ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಕೈಗಳನ್ನು ಕುಲುಕುವ ಪದ್ಧತಿಯಿರಲಿಲ್ಲ. ಬ್ಯಾಕ್ಟೀರಿಯಾವು ಸಂಪರ್ಕಕ್ಕೆ ಬರುವುದನ್ನು ತಡೆಗಟ್ಟುವುದು ಇದರ ಉದ್ದೇಶವಾಗಿತ್ತು.

ಬದಲಾಗಿ, ಕೈಗಳನ್ನು ಮಡಚಿ ಪ್ರಣಾಮವನ್ನು ಮಾಡುವುದರ ಮೂಲಕ ಅವರು ಪರಸ್ಪರರಿಗೆ ಅಭಿವಂದಿಸುತ್ತಿದ್ದರು.

ಇವತ್ತು ಕೂಡಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ, ತಮ್ಮ ಶರೀರಗಳಲ್ಲಿ ಒಂದು ವಿಶೇಷ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿದ ಒಂದು ಬುಡಕಟ್ಟಿನ ಜನರಿದ್ದಾರೆ. ಭಾರತ ಸರಕಾರದಿಂದ ಅವರಿಗೆ ರಕ್ಷಣೆ ಮತ್ತು ಕಾನೂನು ಮೂಲಕ ಪ್ರತ್ಯೇಕತೆಗಳನ್ನು ನೀಡಲಾಗಿದೆ. ಅವರಿಗೆ ಇತರ ಜನರನ್ನು ಭೇಟಿಯಾಗಲು ಅನುಮತಿಯಿಲ್ಲ. ಅವರು ಇತರ ಜನರನ್ನು ಭೇಟಿಯಾದರೆ, ಅವರು ಬ್ಯಾಕ್ಟೀರಿಯಾವನ್ನು ವಿನಿಮಯ ಮಾಡಿಕೊಳ್ಳುವರು, ಅದೊಂದು ಅಸಮತೋಲನವನ್ನುಂಟುಮಾಡಬಹುದು. ಆದುದರಿಂದ ಅವರನ್ನು ನಾಗರೀಕತೆಯಿಂದ ದೂರ ಇರಿಸಲಾಗಿದೆ.

ಅದೇ ರೀತಿಯಲ್ಲಿ, ಆಫ್ರಿಕಾದಲ್ಲಿ ಕಾಡುಗಳಲ್ಲಿ ವಾಸಿಸುವ ಜನರು ನಗರದ ಜನರೊಂದಿಗೆ ಸಂಪರ್ಕಕ್ಕೆ ಬರಲು ಅನುಮತಿಯಿಲ್ಲ. ಅವರ ಶರೀರ ರಚನೆಯು ನಗರದ ಜನರದಕ್ಕಿಂತ ಸಾಕಷ್ಟು ಭಿನ್ನವಾಗಿದೆ. ಅವರು ನಗರಕ್ಕೆ ಬಂದರೆ, ಅವರು ಖಾಯಿಲೆ ಬೀಳುತ್ತಾರೆ ಮತ್ತು ನಮ್ಮಂತಹ ಜನರು ಅವರ ಜಾಗಕ್ಕೆ ಹೋದರೆ, ಆಗ ನಾವು ಖಾಯಿಲೆ ಬೀಳುವೆವು. ಅವರ ಶರೀರದ ರೀತಿಯು ಹೇಗಿದೆಯೆಂದರೆ, ಕಾಡಿನಲ್ಲಿನ ಆ ಜಾಗಗಳಲ್ಲಿ ವಾಸಿಸಲು ಅವರಿಗೆ ಅಭ್ಯಾಸವಾಗಿಬಿಟ್ಟಿದೆ.

ನಮ್ಮ ಶರೀರದೊಳಗೆ ಹಲವಾರು ಸೂಕ್ಷ್ಮಜೀವಿಗಳು ವಾಸಿಸುತ್ತಿವೆಯೆಂಬುದು ಒಂದು ವೈಜ್ಞಾನಿಕ ಸತ್ಯವಾಗಿದೆ; ಪ್ರತಿದಿನವೂ ಹಲವಾರು ಸಾಯುತ್ತವೆ ಮತ್ತು ಹೊಸತು ಹುಟ್ಟುತ್ತವೆ. ಇದಕ್ಕಾಗಿಯೇ ನಮ್ಮ ಶರೀರವನ್ನು ಒಂದು ನಗರವಾಗಿ(ಪುರ) ಕೂಡಾ ಪರಿಗಣಿಸಬಹುದು. ಮಾನವ ಶರೀರದಲ್ಲಿ ಹಲವಾರು ವಿದ್ಯುತ್ ವಾಹಕಗಳು ಮತ್ತು ವ್ಯವಸ್ಥೆಗಳಿವೆ. ವಿವಿಧ ಸಂಕೇತಗಳನ್ನು ಸ್ವೀಕರಿಸುವ ಒಂದು ನರಮಂಡಲವಿದೆ. ಶರೀರದ ಪ್ರತಿಯೊಂದು ಜೀವಕೋಶವೂ ಮೆದುಳಿನೊಂದಿಗೆ ಒಂದು ದೂರವಾಣಿ ಸಂಪರ್ಕವನ್ನು ಹೊಂದಿದೆ. ಇದು ಜೀವಕೋಶಗಳ ಮೇಲೆ ಆಜ್ಞೆಯನ್ನು ಕೂಡಾ ಹೇರುತ್ತದೆ ಮತ್ತು ಒಂದು ನಿರ್ದಿಷ್ಟ ರೀತಿಯಲ್ಲಿ ಕೆಲಸ ಮಾಡುವಂತೆ ಅವುಗಳಿಗೆ ನಿರ್ದೇಶಿಸುತ್ತದೆ. ಜೀವಕೋಶಗಳು ಮೆದುಳಿನ ಆಜ್ಞೆಯನ್ನು ಅನುಸರಿಸದಿರುವಾಗ, ಅವುಗಳು ಖಾಯಿಲೆ ಬೀಳುತ್ತವೆ.

ನಮ್ಮ ಶರೀರವು ಅಸಾಮಾನ್ಯವಾದುದಾಗಿದೆ. ನೀವು ಮಾನವ ಶರೀರದ ಕಡೆಗೆ ಕೂಲಂಕುಷವಾಗಿ ಪರಿಶೀಲಿಸಿದರೆ, ನಿಮಗೆ ಬಹಳ ಅಚ್ಚರಿಯಾಗುವುದು. ಇದಕ್ಕಾಗಿಯೇ ಶರೀರದೊಳಗೆ ವಾಸಿಸುತ್ತಿರುವ ಆತ್ಮವೂ ಕೂಡಾ ಪುರುಷನೆಂದು ಉಲ್ಲೇಖಿಸಲ್ಪಡುವುದು.

ನಂತರ ಇರುವುದು ವಿರಾಟ ಪುರುಷ. ನಮ್ಮ ಶರೀರದೊಳಗೆ ಒಂದು ಆತ್ಮವಿರುವಂತೆಯೇ, ಅದೇ ರೀತಿಯಲ್ಲಿ, ಸಂಪೂರ್ಣ ಸೃಷ್ಟಿಯನ್ನು ವ್ಯಾಪಿಸಿರುವ ಒಂದು ಸಾರ್ವತ್ರಿಕ ಆತ್ಮ ಅಥವಾ  ಚೇತನವಿದೆ. ಅದು ವಿಶ್ವಾತ್ಮವೆಂದು ಕರೆಯಲ್ಪಡುತ್ತದೆ.

ನಂತರ ಇರುವುದು ಪರಮಾತ್ಮ; ವೈಯಕ್ತಿಕ ಆತ್ಮ ಮತ್ತು ವಿಶ್ವಾತ್ಮಗಳಿಗೆ ಕೊಡಲಾಗಿರುವ ಸಾಮೂಹಿಕ ಹೆಸರು. ಈ ಪ್ರಪಂಚ ಮತ್ತು ಪರಮಾತ್ಮರ ನಡುವೆ ಯಾವುದೇ ವ್ಯತ್ಯಾಸವಿಲ್ಲ; ಈ ಸೃಷ್ಟಿಯು ಪರಮಾತ್ಮನಲ್ಲದೆ ಬೇರೇನೂ ಅಲ್ಲ ಮತ್ತು ಪರಮಾತ್ಮನೆಂದರೆ ಸೃಷ್ಟಿಯೇ; ಇಷ್ಟನ್ನು ನಾವು ಅರ್ಥಮಾಡಿಕೊಳ್ಳಬೇಕು. ನಂತರ ಸುಮ್ಮನೆ ವಿಶ್ರಾಮ ಮಾಡಿ, ಆತ್ಮನಲ್ಲಿ ವಿರಮಿಸಿ.

ಪ್ರಶ್ನೆ: ಗುರುದೇವ, ನಿಮಗೆ ಆತ್ಮೀಯವಾದ ರೀತಿಯ ಪ್ರೇಮದ ಗುಣಗಳು ಯಾವುವು?

ಶ್ರೀ ಶ್ರೀ ರವಿ ಶಂಕರ್: ಜ್ಞಾನದೊಂದಿಗಿನ ಪ್ರೇಮ. ಸಹನೆಯೊಂದಿಗಿನ ಪ್ರೇಮ. ಕೆಲಸದಲ್ಲಿನ ಪ್ರೇಮ, ಅಂದರೆ ಸೇವೆ.
ನೀವು ಯಾರಿಗಾದರೂ, ’ಓ, ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ಆದರೆ ನಾನು ನಿನಗಾಗಿ ಏನನ್ನೂ ಮಾಡಲಾರೆ’ ಎಂದು ಹೇಳಲು ಸಾಧ್ಯವಿಲ್ಲ.

ನೀವು ಯಾರನ್ನಾದರೂ ಪ್ರೀತಿಸುವುದಾದರೆ, ನೀವದನ್ನು ಕ್ರಿಯಾರೂಪಕ್ಕೆ ತರಲೇಬೇಕು ಮತ್ತು ಅದುವೇ ಸೇವೆ. ಪ್ರೇಮವನ್ನು, ’ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀವು ಹಲವಾರು ಸಲ ಹೇಳುತ್ತಾ ಇರುವ,  ಕೇವಲ ಒಂದು ಭಾವನೆಯಾಗಿ ಅಥವಾ ಒಂದು ಬಹಳ ಮೆತ್ತಮೆತ್ತಗಿನ ವಿಷಯವಾಗಿ ಯೋಚಿಸಬೇಡಿ.

ಹದಿಹರೆಯದವರು ಯಾರೊಂದಿಗಾದರೂ ಪ್ರೇಮದಲ್ಲಿ ಬೀಳುವಾಗ, ಅವರು ಆ ವ್ಯಕ್ತಿಯ ಹೆಸರನ್ನು ಒಂದು ನೂರು ಸಾರಿ, ಎಲ್ಲಾ ಕಡೆಗಳಲ್ಲಿ ಬರೆಯುವರು. ಅದು ಪ್ರೇಮದ ಸ್ವಭಾವವಾಗಿದೆ; ಅದನ್ನು ಒಂದು ಸಾರಿ ಹೇಳುವುದು ಸಾಕಾಗುವುದಿಲ್ಲ, ನೀವದನ್ನು ಹಲವಾರು ಸಾರಿ ಹೇಳಲು ಮತ್ತು ಬರೆಯಲು ಬಯಸುತ್ತೀರಿ. ಪ್ರೇಮವೆಂದರೆ ಕೇವಲ ಒಂದು ಅಲ್ಪಾವಧಿಯವರೆಗೆ ಉಳಿಯುವ ಆ ಮೆತ್ತಮೆತ್ತಗಿನ, ಹದಿಹರೆಯದ ಭಾವನೆಯಲ್ಲ. ಪ್ರೇಮವೆಂಬುದು ನಮ್ಮ ಅಸ್ತಿತ್ವವೇ ಆಗಿದೆ. ನೀವದರಿಂದ ಯಾವತ್ತೂ ಹೊರಗಿರಲು ಸಾಧ್ಯವಿಲ್ಲ. ಅದು ಅಲ್ಲಿ ಇಲ್ಲಿ ಸ್ವಲ್ಪ ವಿಕೃತಿಗೊಳ್ಳುವುದು ಮಾತ್ರ. ಜ್ಞಾನವಿರುವಾಗ,
ವಿಕೃತಿಯುಂಟಾಗುವುದಿಲ್ಲವೆಂಬುದನ್ನು ನೀವು ಕಾಣುವಿರಿ. ಪ್ರೇಮವು ತನ್ನ ಶುದ್ಧವಾದ ರೂಪದಲ್ಲಿ ಉಳಿಯುತ್ತದೆ.

ಪ್ರಶ್ನೆ: ಗುರುದೇವ, ನಮ್ಮ ವೈಯಕ್ತಿಕ ಸಂಕಲ್ಪ ಮತ್ತು ಸಾರ್ವತ್ರಿಕ ಸಂಕಲ್ಪಗಳ ನಡುವೆ ಒಂದು ಹೊಂದಾಣಿಕೆಯಿದೆಯೇ ಎಂಬುದನ್ನು ನಾವು ಹೇಗೆ ತಿಳಿಯಬಹುದು?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಬಯಕೆಯು ನೆರವೇರಲು ತೊಡಗುವಾಗ ನೀವದನ್ನು ತಿಳಿಯುವಿರಿ.
ನಿಮ್ಮ ಇಚ್ಛೆಯು ನೆರವೇರದಿದ್ದರೆ, ಆಗ ಅದರರ್ಥವೇನೆಂದರೆ, ನಿಮ್ಮ ಇಚ್ಛೆಯು ವಿಶ್ವದ ಇಚ್ಛೆಯೊಂದಿಗೆ ಸಾಮರಸ್ಯದಿಂದಿಲ್ಲವೆಂದು.

ಪ್ರಶ್ನೆ: ಗುರುದೇವ, ಗುರು ಪೂಜೆ ಸಂಪ್ರದಾಯದಲ್ಲಿ, ನಾವು ಉಚ್ಛರಿಸುವ ಹೆಸರುಗಳಲ್ಲಿ ಪ್ರತಿಯೊಂದಕ್ಕೆ ಒಂದು ನಿರ್ದಿಷ್ಟ ಮಹತ್ವವಿದೆ; ಋಷಿ ಪರಾಶರರ ಮಹತ್ವವೇನು?

ಶ್ರೀ ಶ್ರೀ ರವಿ ಶಂಕರ್: ಈ ಋಷಿಗಳಲ್ಲಿ ಪ್ರತಿಯೊಬ್ಬರೂ ಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಋಷಿ ಪರಾಷರರ ಗೌರವಾರ್ಥವಾಗಿ, ಪರಾಷರ-ಸ್ಮೃತಿ ಎಂದು ಕರೆಯಲ್ಪಡುವ ಶ್ಲೋಕಗಳ ಒಂದು ಸಮೂಹವಿದೆ. ಬಹಳಷ್ಟು ಕೃತಿಗಳು ಋಷಿ ಪರಾಷರರಿಂದ ನೀಡಲ್ಪಟ್ಟವು, ಕೇವಲ ಒಂದೆರಡಲ್ಲ. ಆದರೆ ನನಗೆ ಅದರ ಬಗ್ಗೆ ತಿಳಿದಿರುವುದು ಸ್ವಲ್ಪವೇ ಸ್ವಲ್ಪ.

ಈ ಮಹಾನ್ ಸಂತರಿಂದ ಬಹಳಷ್ಟು ಜ್ಞಾನ ಮತ್ತು ಅರಿವು  ನೀಡಲ್ಪಟ್ಟಿದೆ.