ಭಾನುವಾರ, ನವೆಂಬರ್ 4, 2012

ಕಾರಣ ಮತ್ತು ಪರಿಣಾಮ


೪ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ಗುರೂಜಿ, ಇದನ್ನೆಲ್ಲಾ ನೀವು ಯಾರಿಂದ ಕಲಿತಿರಿ? ನಿಮಗೆ ಧ್ಯಾನವನ್ನು ಯಾರು ಕಲಿಸಿದರು?
ಶ್ರೀ ಶ್ರೀ ರವಿ ಶಂಕರ್: ನೀನೊಬ್ಬ ಕವಿಯಲ್ಲಿ ಅಥವಾ ಒಬ್ಬ ಬರಹಗಾರನಲ್ಲಿ, ಅವರು ಯಾರಿಂದ ಕಲಿತರೆಂದು ಕೇಳುವೆಯಾ? ಅವರು ತಾವಾಗಿಯೇ ಬರೆಯುತ್ತಾರೆ, ಅಲ್ಲವೇ? ಒಬ್ಬ ಕವಿ ಅಥವಾ ಒಬ್ಬ ಬರಹಗಾರನು ವಿಷಯವನ್ನು ಇಲ್ಲಿಂದ ಅಲ್ಲಿಂದ ನಕಲು ಮಾಡಿದರೆ, ಅದು ತಮ್ಮದೇ ಸೃಷ್ಟಿಯೆಂದು ಅವರಿಗೆ ಹೇಳಲು ಸಾಧ್ಯವೇ? ಅದೇ ರೀತಿಯಲ್ಲಿ, ಒಬ್ಬನು ಧ್ಯಾನ ಮಾಡುವಾಗ, ಇವೆಲ್ಲವೂ ಅದೇ ಮೂಲದಿಂದ ಅಂತಃಸ್ಫುರಣೆಯಾಗಿ ಬರುತ್ತವೆ.

ಪ್ರಶ್ನೆ: ಕೆಲವು ಹಬ್ಬಗಳ ಸಮಯದಲ್ಲಿ, ನಾವು ಎಲ್ಲಾ ರೀತಿಯ ಧಾನ್ಯಗಳನ್ನು ದಾನವಾಗಿ ಕೊಡುತ್ತೇವೆ. ಒಬ್ಬರು ಧಾನ್ಯಗಳೊಂದಿಗೆ ಉಪ್ಪನ್ನು ದಾನವಾಗಿ ಕೊಡಬಾರದೆಂದು ಯಾಕೆ ಹೇಳಲಾಗಿದೆ?
ಶ್ರೀ ಶ್ರೀ ರವಿ ಶಂಕರ್: ಅದು ಕೇವಲ ಒಂದು ರೂಢಿ. ಶಾಸ್ತ್ರಗಳಲ್ಲಿ ಇದನ್ನು ಉಲ್ಲೇಖಿಸಿಲ್ಲ. ಅದರ ಬಗ್ಗೆ ಚಿಂತೆ ಮಾಡಬೇಡ.
ಉಪ್ಪಿಲ್ಲದ ಯಾವುದೇ ಭಕ್ಷ್ಯವಿಲ್ಲ. ಪ್ರತಿಯೊಂದೂ ಸ್ವಲ್ಪ ಪ್ರಮಾಣದಲ್ಲಿ ಉಪ್ಪನ್ನು ಒಳಗೊಂಡಿದೆ. ಒಂದು ಶಾಸ್ತ್ರದ ಸಂದರ್ಭದಲ್ಲಿ ಅರ್ಪಿಸುವ ಪ್ರತಿಯೊಂದೂ ಸ್ವಲ್ಪ ಉಪ್ಪನ್ನು ಒಳಗೊಂಡಿರುತ್ತದೆ. ತೆಂಗಿನಕಾಯಿ ನೀರು ಉಪ್ಪನ್ನೊಳಗೊಂಡಿದೆ. ಹಣ್ಣುಗಳು ಕೂಡಾ ಉಪ್ಪನ್ನೊಳಗೊಂಡಿರುತ್ತವೆ ಎಂದು ಹೇಳಲಾಗಿದೆ. ನೀವು ಉಸಿರಾಡುವ ಗಾಳಿಯಲ್ಲಿ ಉಪ್ಪಿದೆ.
ಎಣ್ಣೆ, ಉಪ್ಪು, ಮೆಣಸಿನಕಾಯಿ ಮತ್ತು ನೀರನ್ನು ಒಬ್ಬರಿಗೆ ನೇರವಾಗಿ ಕೊಡಬಾರದೆಂಬ ಒಂದು ಹೇಳಿಕೆಯಿದೆಯಷ್ಟೆ. ಅದಕ್ಕಾಗಿಯೇ ಅವರು ಅವುಗಳನ್ನು ನೆಲದ ಮೇಲೆ ಇಡುತ್ತಿದ್ದರು. ಈ ವಸ್ತುಗಳನ್ನು ನೇರವಾಗಿ ಕೊಟ್ಟರೆ ಒಬ್ಬ ವ್ಯಕ್ತಿಯ ಕಂಪನಗಳು ಇನ್ನೊಬ್ಬ ವ್ಯಕ್ತಿಗೆ ಹೋಗುತ್ತದೆ ಎಂಬ ಒಂದು ನಂಬಿಕೆಯಿದೆ.
ಒಂದು ವೇಳೆ ಇನ್ನೊಬ್ಬ ವ್ಯಕ್ತಿಯ ಕಂಪನಗಳ ಪ್ರಭಾವವು ನಿಮ್ಮ ಮೇಲಾಗುತ್ತಿದೆಯೆಂದು ನಿಮಗನ್ನಿಸಿದರೆ, ಭಜನೆಗಳನ್ನು ಹಾಡಿ ಅಥವಾ ಓಂ ನಮಃ ಶಿವಾಯ ಜಪ ಮಾಡಿ ಮತ್ತು ಪ್ರಾಣಾಯಾಮ ಮಾಡಿ. ಎಲ್ಲಾ ನಕಾರಾತ್ಮಕ ಪರಿಣಾಮಗಳು ದೂರ ಹೋಗುತ್ತವೆ.

ಪ್ರಶ್ನೆ: ನನ್ನಲ್ಲಿ ಯೋಗ ವಾಸಿಷ್ಠದಿಂದ ಒಂದು ಪ್ರಶ್ನೆಯಿದೆ. ಭೃಗು ಮಹರ್ಷಿಯ ಮಗನಾದ ಶುಕ್ರಾಚಾರ್ಯನು ಪವಿತ್ರ ನೀರನ್ನು ಸಿಂಪಡಿಸುವುದರ ಮೂಲಕ ಮತ್ತು ಮಂತ್ರಗಳನ್ನುಚ್ಛರಿಸುವುದರ ಮೂಲಕ ಸತ್ತ ಒಬ್ಬ ವ್ಯಕ್ತಿಯನ್ನು ಪುನಃ ಜೀವಂತಗೊಳಿಸುತ್ತಾನೆ. ಇದು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಯೋಗ ವಾಸಿಷ್ಠದಲ್ಲಿರುವ ಕಥೆಗಳಿಗೆ ಬಹಳಷ್ಟು ಆಳವಾದ ಗೂಢಾರ್ಥಗಳಿವೆ. ಅದನ್ನು ಒಂದು ಸಲ ಓದಿದರೆ ಸಾಕಾಗುವುದಿಲ್ಲ. ನೀವದನ್ನು ಪುನಃ ಪುನಃ ಓದಿದಾಗ, ಆ ಪುಸ್ತಕದಲ್ಲಿ ಅಡಗಿರುವ ರಹಸ್ಯಗಳು ನಿಮಗೆ ಅರ್ಥವಾಗಲು ತೊಡಗುತ್ತವೆ.

ಪ್ರಶ್ನೆ: ನಾವು ಮಂತ್ರಗಳನ್ನು ಉಚ್ಛರಿಸುವಾಗ, ಅವುಗಳು ಪರಿಸರ, ಜನರು ಮತ್ತು ಸಂಪೂರ್ಣ ಪ್ರಪಂಚದ ಮೇಲೆ ಹೇಗೆ ಪ್ರಭಾವ ಬೀರುತ್ತವೆ?
ಶ್ರೀ ಶ್ರೀ ರವಿ ಶಂಕರ್: ವಿಶ್ವದಲ್ಲಿರುವ ಪ್ರತಿಯೊಂದು ವಸ್ತುವೂ ಇತರ ಎಲ್ಲದರ ಮೇಲೆ ಪ್ರಭಾವ ಬೀರುತ್ತದೆ. ಆದುದರಿಂದ, ನೀವು ಜಪ ಮಾಡುವಾಗ, ನೀವು ಹವನ ಮಾಡುವಾಗ, ಅದರ ಪ್ರಭಾವವು ಪರಿಸರದ ಮೇಲೆ ಬಹಳ ಸಕಾರಾತ್ಮಕವಾಗಿರುತ್ತದೆ. ಅದು ನಿಮಗೆ ಒಳ್ಳೆಯ ಕಂಪನಗಳನ್ನು ಕೂಡಾ ತರುತ್ತದೆ ಮತ್ತು ಸಂಪೂರ್ಣ ವಾತಾವರಣದಲ್ಲಿ ಧನಾತ್ಮಕ ಕಣಗಳನ್ನು ಕೂಡಾ ವರ್ಧಿಸುತ್ತದೆ.

ಪ್ರಶ್ನೆ: ದಕ್ಷಿಣಾಮೂರ್ತಿಯು (ಶಿವನ ಗುರು ರೂಪ) ಸಾಮವೇದಪ್ರಿಯನೆಂದು ಹೇಳಲಾಗುತ್ತದೆ. ಯಾಕೆ ಹಾಗೆ?
ಶ್ರೀ ಶ್ರೀ ರವಿ ಶಂಕರ್: ಅದನ್ನು ಸಾಮವೇದಕ್ಕೆ ಸಂಬಂಧಪಟ್ಟ ಜನರು ಬರೆದಿದ್ದಿರಬೇಕು. ಋಗ್ವೇದದ ಜನರು ಬರೆದರೆ, ಅವರು ಋಗ್ವೇದಪ್ರಿಯ ಎಂದು ಕರೆಯುವರು. ಯಜುರ್ವೇದಕ್ಕೆ ಸಂಬಂಧಪಟ್ಟ ಜನರು, ಅದು ಎಲ್ಲಾ ವೇದಗಳಲ್ಲಿ ಶ್ರೇಷ್ಠವಾದುದು ಎಂದು ಹೇಳುವರು.
ಕೃಷ್ಣ ಪರಮಾತ್ಮನು ಹೇಳಿದ್ದಾನೆ, ’ವೇದಾನಾಂ ಸಾಮವೇದೋಸ್ಮಿ’ (ಭಗವದ್ಗೀತೆ, ಅಧ್ಯಾಯ ೧೦, ಶ್ಲೋಕ ೨೨). ಅದು ಯಾಕೆಂದರೆ, ಸಾಮವೇದವು ಭಕ್ತಿ ಮತ್ತು ಸಂಗೀತಕ್ಕೆ ಪ್ರಾಮುಖ್ಯತೆಯನ್ನು ಕೊಡುತ್ತದೆ. ಮೆದುಳಿನ ಎರಡು ಗೋಳಾರ್ಧಗಳಲ್ಲಿ, ಎಡಭಾಗಕ್ಕಿರುವುದು ತರ್ಕ ಮತ್ತು ಬಲಭಾಗಕ್ಕಿರುವುದು ಸಂಗೀತ. ಸಾಮವೇದವು ತರ್ಕ ಮತ್ತು ಸಂಗೀತ ಎರಡನ್ನೂ ಒಳಗೊಂಡಿರುವುದರಿಂದ, ಈ ಮಾತುಗಳು ಅಲ್ಲಿಂದ ಬಂದಿರುವ ಸಾಧ್ಯತೆಯಿದೆ.

ಪ್ರಶ್ನೆ: ಕನ್ನಡ ಭಾಷೆಯನ್ನು ಕಸ್ತೂರಿಗೆ ಹೋಲಿಸಲಾಗಿದೆ, ಯಾಕೆ?
ಶ್ರೀ ಶ್ರೀ ರವಿ ಶಂಕರ್: ನೀನದನ್ನು ಮಲ್ಲಿಗೆಯೊಂದಿಗೆ ಹೋಲಿಸಲು ಬಯಸಿದರೆ, ನೀನು ಹಾಗೆ ಮಾಡಬಹುದು! ಕವಿಗಳು ಅದನ್ನು ಕಸ್ತೂರಿ ಕನ್ನಡ ಎಂದು ಕರೆದರು. ಅದನ್ನು ಅವರು ಯಾಕೆ ಹಾಗೆ ಹೆಸರಿಸಿದರೆಂದು ನೀನು ಕೇಳಲು ಸಾಧ್ಯವಿಲ್ಲ. ಉದಾಹರಣೆಗೆ, ಒಬ್ಬಳು ಸುಂದರವಾದ ಸ್ತ್ರೀಯನ್ನು ’ಚಂದ್ರಮುಖಿ’ ಎಂದು ಕರೆಯುತ್ತಾರೆ, ಅಂದರೆ ಯಾರ ಮುಖವು ಚಂದ್ರನಂತಿದೆಯೋ ಅವಳು ಎಂದು. ಈಗ, ಚಂದ್ರನಲ್ಲಿ ಬಹಳಷ್ಟು ಕಲೆಗಳಿವೆ. ಹಾಗಾದರೆ, ಮುಖವನ್ನು ಚಂದ್ರನಿಗೆ ಹೋಲಿಸುವುದು ಯಾಕೆ? ಹಸಿದವನೊಬ್ಬನಿಗೆ ಚಂದ್ರನು ಹೋಳಿಗೆಯಂತೆ ಕಾಣಿಸುತ್ತದೆ ಎಂಬ ಮಾತೊಂದಿದೆ.
ಕಸ್ತೂರಿಗೆ ಬಹಳ ಒಳ್ಳೆಯ ಪರಿಮಳವಿದೆ. ಆದುದರಿಂದ, ಕವಿಗಳು ಕನ್ನಡವನ್ನು ಒಂದು ಬಹಳ ಸಿಹಿಯಾದ ಭಾಷೆಯಾಗಿ ಬಣ್ಣಿಸಿದ್ದಾರೆ.

ಪ್ರಶ್ನೆ: ಈ ದಿನಗಳಲ್ಲಿ ನಮ್ಮ ದೇಶವು ಬಹಳಷ್ಟು ಬರಗಳನ್ನು ಎದುರಿಸುತ್ತಿದೆ. ಗಂಗಾ ಮತ್ತು ಕಾವೇರಿ ನದಿಗಳನ್ನು ನಾವು ಜೋಡಿಸಿದರೆ, ಅದು ನೀರಾವರಿಯಲ್ಲಿ ಸಹಾಯಕವಾಗುತ್ತದೆ. ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರಾಜಕಾರಣಿಗಳೊಂದಿಗೆ ನೀವು ದಯವಿಟ್ಟು ಮಾತನಾಡುವಿರೇ?
ಶ್ರೀ ಶ್ರೀ ರವಿ ಶಂಕರ್: ನಮ್ಮ ದೇಶದಲ್ಲಿರುವ ಎಲ್ಲಾ ನದಿಗಳಿಗೆ ನಾವು ಅಣೆಕಟ್ಟುಗಳನ್ನು ಕಟ್ಟಿ ನೀರು ಸಮುದ್ರಕ್ಕೆ ಹೋಗುವುದನ್ನು ತಡೆಗಟ್ಟಿದರೆ, ಸಂಪೂರ್ಣ ಭಾರತವು ಎರಡು ಅಡಿ ನೀರಿನಿಂದ ಆವರಿಸುವುದು ಖಚಿತವೆಂದು ವಿಜ್ಞಾನಿಗಳು ಹೇಳುತ್ತಾರೆ. (ನೀರಾವರಿಗೆ ಲಭ್ಯವಿರುವ ನೀರಿನ ಪ್ರಮಾಣವನ್ನು ಉಲ್ಲೇಖಿಸಿ)
ಸಮುದ್ರದೊಳಕ್ಕೆ ಹರಿದು, ನದಿಗಳಿಂದ ಬಹಳಷ್ಟು ನೀರು ವ್ಯರ್ಥವಾಗುತ್ತಿದೆ. ನಾವು ನದಿಗಳ ನೀರನ್ನು ಸರಿಯಾಗಿ ಉಪಯೋಗಿಸಬೇಕು. ನೀರಿಗೇನೂ ಬರವಿಲ್ಲ. ಪ್ರಪಂಚದಲ್ಲಿ ಅತೀ ಹೆಚ್ಚು ಮಳೆ ಬೀಳುವುದರಲ್ಲಿ ಭಾರತಕ್ಕೆ ಎರಡನೆಯ ಸ್ಥಾನವಿದೆ. ಹೀಗಿದ್ದರೂ, ನಾವು ಈ ನೀರನ್ನು ಸರಿಯಾಗಿ ಸಂಗ್ರಹಿಸುವುದಿಲ್ಲ.
ಗುಂಪುಗಳನ್ನು ರೂಪಿಸಿ ಮತ್ತು ಮಳೆ ನೀರನ್ನು ಉಳಿಸಲು ಸಣ್ಣ ಅಣೆಕಟ್ಟುಗಳನ್ನು ಕಟ್ಟಿ.

ಪ್ರಶ್ನೆ: ವೈದಿಕ ಜ್ಞಾನ ಕಾರ್ಯಕ್ರಮವನ್ನು ಯುರೋಪಿಯನ್ನರಿಗೆ ಮಾತ್ರವಾಗಿ, ಮತ್ತು ವಿಶೇಷವಾಗಿ ೨೦೧೨ ರಲ್ಲಿ  ಸಂಘಟಿಸಿದುದಕ್ಕೆ ಯಾವುದಾದರೂ ಕಾರಣವಿದೆಯೇ?
ಶ್ರೀ ಶ್ರೀ ರವಿ ಶಂಕರ್: ನಾವದನ್ನು ಉತ್ತರ ಮತ್ತು ದಕ್ಷಿಣ ಅಮೇರಿಕಾಗಳಿಗೆ ತೆರೆದಿರುತ್ತಿದ್ದರೆ, ಗುಂಪು ಬಹಳ ದೊಡ್ಡದಾಗಿಬಿಡುತ್ತಿತ್ತು. ನಾವು ಸುಮಾರು ನೂರ ಐವತ್ತು ಜನರ ಒಂದು ಚಿಕ್ಕ ಗುಂಪನ್ನಿಡಲು ಬಯಸಿದೆವು. ಆದುದರಿಂದ, ಸದ್ಯಕ್ಕೆ ನಾವದನ್ನು ಕೇವಲ ಯುರೋಪಿನವರಿಗೆ ಮಾತ್ರ ಪ್ರಕಟಿಸಿದೆವು. ನಾವದನ್ನು ಪ್ರಪಂಚದಾದ್ಯಂತದ ಜನರಿಗೆ ಪ್ರಕಟಿಸಿರುತ್ತಿದ್ದರೆ, ಅದು ಸಾವಿರದ ಐನೂರು ಜನರ ಗುರು ಪೂಜೆ ಶಿಬಿರದಂತೆ ಬಹಳ ದೊಡ್ಡದಾಗಿರುತ್ತಿತ್ತು. ಈಗ ಇಲ್ಲಿ ಅಷ್ಟೊಂದು ಜಾಗವಿಲ್ಲದುದರಿಂದ ನಾವದನ್ನು ಚಿಕ್ಕ ಗುಂಪುಗಳಲ್ಲಿ ಮಾಡೋಣವೆಂದು ನನಗನಿಸಿತು.
ಈ ವರ್ಷ, ಜ್ಞಾನದ ಒಂದು ಹೊಸ ಅಲೆಯ ಅಗತ್ಯವಿತ್ತು, ಮತ್ತು ಅದು ಬರುತ್ತದೆ. ನಿಮಗೆಲ್ಲರಿಗೂ ಮಾಡಲು ಒಂದು ದೊಡ್ಡ ಕೆಲಸವಿದೆ. ಇವತ್ತು, ಸಂಪೂರ್ಣ ಪ್ರಪಂಚವು ಪುರಾತನ ಜ್ಞಾನಕ್ಕೆ ತಯಾರಾಗಿದೆ.  ಆದುದರಿಂದ, ವೈದಿಕ ಜ್ಞಾನ ಕಾರ್ಯಕ್ರಮದಲ್ಲಿರುವ ನೀವೆಲ್ಲರೂ ಈ ಜ್ಞಾನವನ್ನು ತೆಗೆದುಕೊಂಡು, ಲಕ್ಷಾಂತರ ಜನರ ಜೀವನದಲ್ಲಿ ಬೆಳಕು ಮತ್ತು ನಗೆಯನ್ನು ತರಬಹುದು.

ಪ್ರಶ್ನೆ: ಥೈರೋಯಿಡ್ ಸಮಸ್ಯೆಯಿಂದ ಬಳಲುತ್ತಿರುವ ಸ್ತ್ರೀಯರ ಸಂಖ್ಯೆಯು ಹೆಚ್ಚುತ್ತಿದೆ. ಇದಕ್ಕಿರುವ ಪರಿಹಾರವೇನು?
ಶ್ರೀ ಶ್ರೀ ರವಿ ಶಂಕರ್: ಅದು ನಮ್ಮ ಆಹಾರದಲ್ಲಿರುವ ಕ್ರಿಮಿನಾಶಕ ಔಷಧಿ ಮತ್ತು ರಾಸಾಯನಿಕಗಳಿಂದಾಗಿಯೆಂದು ನನಗನಿಸುತ್ತದೆ.