ಗುರುವಾರ, ನವೆಂಬರ್ 1, 2012

ಜ್ಞಾನೋದಯ

ಬೆಂಗಳೂರು, ಭಾರತ
೦೧.೧೧.೧೨

ಕನ್ನಡ ರಾಜ್ಯೋತ್ಸವದ ಸಂದರ್ಭದಂದು ಭಕ್ತ ವೃಂದಕ್ಕೆ ಪೂಜ್ಯ ಗುರೂಜಿಯವರು ನೀಡಿದ ಸಂದೇಶವಿದು.

ನ್ನಡ ತಿಳಿಯದವರು ಕನ್ನಡದ ಅಸಾಮಾನ್ಯ ಸಾಹಿತ್ಯ ರಚನೆಗಳು, ಕಾವ್ಯಗಳು ಮತ್ತು ಜ್ಞಾನವನ್ನು ಓದುವುದರಿಂದ ವಂಚಿತರಾಗಿದ್ದಾರೆ ಎಂದು ನನಗೆ ಯಾವತ್ತೂ ಅನ್ನಿಸುತ್ತಿತ್ತು. ಕನ್ನಡ ಒಂದು ಸರಳ ಹಾಗೂ ಮಧುರ ಭಾಷೆಯಾಗಿದ್ದರೂ, ಜನ ಈ ಭಾಷೆಯನ್ನು ಮರೆಯುತ್ತಿದ್ದಾರೆ, ಅಭಿಮಾನಶೂನ್ಯರಾಗುತ್ತಿದ್ದಾರೆ.

ನನಗೆ ನೆನಪಾಗುತ್ತಿದೆ, ಸುಮಾರು ೪೦-೪೫ ವರ್ಷಗಳ ಹಿಂದೆ ನಾನು ಶಾಲೆಗೆ ಬಸ್ಸಿನಲ್ಲಿ ಹೋದುತ್ತಿದ್ದಾಗ, ಕನ್ನಡವನ್ನು ಬಿಟ್ಟು ಬೇರೆ ಯಾವುದೇ ಭಾಷೆಯನ್ನು ಉಪಯೋಗಿಸದ ಒಬ್ಬ ನಿರ್ವಾಹಕರಿದ್ದರು. ನಾವು ಅವರನ್ನು ಆಮಂತ್ರಿಸಿ ಆದರಿಸಿದೆವು. ಅವರು ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದ ರೀತಿಯನ್ನು ಜನರು ಇಷ್ಟಪಡುತ್ತಿದ್ದರು, ಇದು ಮಕ್ಕಳನ್ನು, ಯುವಕರನ್ನು ಮತ್ತು ದೊಡ್ಡವರನ್ನು ಪ್ರೋತ್ಸಾಹಿಸುತ್ತಿತ್ತು. ಬಸ್ಸಿನಲ್ಲಿ ಕುಳಿತಿದ್ದ ಯಾರಿಗೂ ಗಂಭೀರ ಮುಖವಿರಲಿಲ್ಲ, ಎಲ್ಲರೂ ಮಂದಹಾಸದಿಂದ ನಿರ್ವಾಹಕರು ಮುಂದೇನು ಮಾತನಾಡುತ್ತಾರೆ ಎಂದು ಕೇಳಲು ಕಾಯುತ್ತಿರುತ್ತಿದ್ದರು.

ನಮ್ಮ ಸಂಸ್ಕೃತಿಯನ್ನುಳಿಸುವುದು ಹೇಗೆ ನಮ್ಮ ಕರ್ತವ್ಯವಾಗಿದೆಯೋ, ಅದೇ ರೀತಿಯಲ್ಲಿ ನಮ್ಮ ಭಾಷೆಯನ್ನು  ಉಳಿಸುವುದು ಹಾಗೂ ಬೆಳೆಸುವುದೂ ನಮ್ಮ ಕರ್ತವ್ಯವಾಗಿದೆ. ನಿಮಗೆ ಗೊತ್ತೇ ಲೆಕ್ಕ ಮಾಡುವಾಗ ನಾನಿನ್ನೂ ಕನ್ನಡ ಅಂಕೆಗಳನ್ನು ಉಪಯೋಗಿಸುತ್ತೇನೆ? ನಾನು ಜಗತ್ತಿನಲ್ಲಿ ಬಹಳ ದೇಶಗಳನ್ನು ಸುತ್ತಿದ್ದರೂ, ನಾನು ಯಾವತ್ತೂ ಆಂಗ್ಲದಲ್ಲಿ ಸಂಖ್ಯೆ ಎಣಿಸುವುದಿಲ್ಲ, ನನ್ನ ಲೆಕ್ಕ ಮತ್ತು ಆಲೋಚನೆ ಕನ್ನಡದಲ್ಲಿ ಹುಟ್ಟುತ್ತವೆ. ನಾನು ಸಮಯವನ್ನೂ ಕನ್ನಡದಲ್ಲೇ ಅನುಸರಿಸುತ್ತೇನೆ. ನಾನು ಬಹಳ ಸಣ್ಣ ವಯಸ್ಸಿನಿಂದ ನನ್ನ ಮಾತೃ ಭಾಷೆಯಲ್ಲಿ ಕಲಿತಿದ್ದೇನೆ. ನಾನು ಕನ್ನಡದಲ್ಲಿ ಓದಿ ಬರೆಯುತ್ತಿದ್ದುದು.

ನಾನು ಮೊದಲು ಆಂಗ್ಲದ ಅನುಭವ ಪಡೆದದ್ದು ಏಳನೇ ತರಗತಿಯಲ್ಲಿ. ನಾವು ಆಂಗ್ಲವನ್ನು ಬರೆದ ರೀತಿಯಲ್ಲಿ ಉಚ್ಚರಿಸುವುದಿಲ್ಲ, ಉಚ್ಚರಿಸುವ ರೀತಿಯಲ್ಲಿ ಬರೆಯುವುದಿಲ್ಲ. ಉದಾಹರಣೆಗೆ, ’know’ ಎಂಬ ಪದವನ್ನು ’ನೊ’ ಎಂದು ಉಚ್ಚರಿಸುತ್ತೇವೆ; ಇದು ನಮಗೆ ಬಹಳ ಗೊಂದಲವನ್ನುಂಟುಮಾಡುತ್ತಿತ್ತು. 

ಹಾಗಾಗಿ ನಾವು ಆಂಗ್ಲ ಪದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೆವು. ಕನ್ನಡದಲ್ಲಿ ನಾವು ಬರೆಯುವ ರೀತಿಗನುಗುಣವಾಗಿ ಉಚ್ಚರಣೆ ಮಾಡುತ್ತೇವೆ, ಇದು ಕನ್ನಡದ ಸೌಂದರ್ಯ. ತಮಿಳಿನಲ್ಲಿ ಹೀಗಿಲ್ಲ ಎಂದು ನಾನು ಕೇಳಿದ್ದೇನೆ. ನಾನು ತಮಿಳು ಮಾತನಾಡುತ್ತೇನೆ, ಆದರೆ ನನಗೆ ತಮಿಳು ಓದುವುದರಲ್ಲಿ ಅಥವಾ ಬರೆಯುವುದರಲ್ಲಿ ಹೆಚ್ಚು ಅನುಭವವಿಲ್ಲ.
ತಮಿಳಿನಲ್ಲಿ ಅವರು ’ಕ’ ಮತ್ತು ’ಗ’ ಎನ್ನಲು ಒಂದೇ ಅಕ್ಷರವನ್ನು ಉಪಯೋಗಿಸುತ್ತಾರೆ; ಕಣಪತಿ ಮತ್ತು ಗಣಪತಿ ಎರಡೂ ತಮಿಳಿನಲ್ಲಿ ಒಂದೇ ಆಗಿವೆ. ಹೇಗಿದ್ದರೂ ಕನ್ನಡದಲ್ಲಿ, ಅಕ್ಷರಮಾಲೆಯು ಸಂಪೂರ್ಣವಾಗಿವೆ. ಕನ್ನಡವನ್ನು ಕಲಿತಿರುವವರಿಗೆ ಉಳಿದ ಭಾಷೆಗಳನ್ನು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ.

ಆರು ಕೋಟಿ ಕನ್ನಡಿಗರಿಗೆ ನನ್ನ ಸಂದೇಶವೆಂದರೆ, ನಿಮ್ಮ ಮಕ್ಕಳೊಂದಿಗೆ ನಿಮ್ಮ ಮಾತೃಭಾಷೆಯಲ್ಲೇ ಮಾತನಾಡಿ. ಸಾಧ್ಯವಾದಷ್ಟು, ಐದು ಅಥವಾ ಆರನೇ  ತರಗತಿಯ ತನಕನಿಮ್ಮಮಕ್ಕಳು ವಿದ್ಯಾಭ್ಯಾಸವೂ ಮಾತೃಭಾಷೆಯಲ್ಲಿ ಪಡೆಯುವಂತೆ ನೋಡಿಕೊಳ್ಳಿ. ಇಂದಿನ ದಿನಗಳಲ್ಲಿ ನಾವು ’ಬಾಬಾ ಬ್ಲ್ಯಾಕ್ ಷೀಪ್’ (ಆಂಗ್ಲ ಪ್ರಾಸ ಚುಟುಕು) ಎಂದು ಸಣ್ಣ ವಯಸ್ಸಿನಲ್ಲೇ ಶುರು ಮಾಡುತ್ತೇವೆ.  ಮಕ್ಕಳು ಬೇರೆ ಭಾಷೆಯಲ್ಲಿ ಲೆಕ್ಕ ಮಾಡಲು ಶುರು ಮಾಡಿದಾಗ ಅವರ ಪ್ರತಿಭೆಗಳು ಅಷ್ಟೊಂದು ಅರಳುವುದಿಲ್ಲ. ಜಗತ್ತಿನಾದ್ಯಂತ ಬಹಳ ಮಂದಿ ಮನೋವಿಜ್ಞಾನಿಗಳು ಹೇಳುವುದು, ಮಕ್ಕಳಿಗೆ ಮೊದಲ ಸ್ವಲ್ಪ ವರ್ಷಗಳ ಕಾಲ ತಮ್ಮ ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ನೀಡಿದರೆ ಅವರ ಪ್ರತಿಭೆಗಳು ಇನ್ನೂ ಚೆನ್ನಾಗಿ ಅರಳುತ್ತವೆ. 

ನಾನು ಶಾಲೆಗೆ ಹೋದಾಗ, ವಿದ್ಯಾಭ್ಯಾಸದ ಮಾಧ್ಯಮವು ಕನ್ನಡವಾಗಿತ್ತು. ಕರ್ನಾಟಕದ ಜನರಿಗೆ ನನ್ನ ಸಂದೇಶವೆಂದರೆ, ಕನ್ನಡದ ಬಗ್ಗೆ ಹೆಮ್ಮೆಯಿಂದಿರಿ ಮತ್ತು ಅದನ್ನು ಮಕ್ಕಳಿಗೆ ಕಲಿಸಿ. ಮನೆಯಲ್ಲಿ ಮಾತೃಭಾಷೆಯನ್ನು ಮಾತ್ರ ಉಪಯೋಗಿಸಿ. ಈ ಭಾಷೆಯಲ್ಲಿ ಆಧರಿತವಾಗಿರುವ ಬಹಳ ನೀತಿ ಪಾಠಗಳಿವೆ.

ಕನ್ನಡದಲ್ಲಿ ಹೀಗೊಂದು ಮಾತಿದೆ, ’ವೇದ ಸುಳ್ಳಾದರೂ ಗಾದೆ ಸುಳ್ಳಾಗದು’.

ಇದು ಗಾದೆಗಳ ಬಗ್ಗೆ ಒಂದು ಗಾದೆ. ಈಗಿನ ದಿನಗಳಲ್ಲಿ ಜನರು ಗಾದೆಗಳನ್ನು ಮರೆತಿದ್ದಾರೆ. ಮಕ್ಕಳಿಗೆ ಗಾದೆ ಎಂದರೇನು ಅಂತಲೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿದ್ದರೆ, ಮಕ್ಕಳು ನೈತಿಕ ಮೌಲ್ಯಗಳ ಅರಿವನ್ನು ಹೇಗೆ ಹೊಂದುತ್ತಾರೆ? ಮಕ್ಕಳು ತಮ್ಮ ಪೋಷಕರನ್ನು ’ಮಮ್ಮಿ’ ಮತ್ತು ’ಡ್ಯಾಡಿ’ ಎಂದು ಕರೆಯುವ ಬದಲು ಅವರು ತಮ್ಮ ಮಾತೃಭಾಷೆಯನ್ನು ಉಪಯೋಗಿಸಲಿ. ನಮ್ಮ ಮಾತೃಭಾಷೆಯನ್ನು ಉಳಿಸಿ, ಬೆಳೆಸಿ. ನೀವು ಬೇರೆ ಭಾಷೆಗಳನ್ನು ಕಲಿಯಬಾರದು ಎಂದಲ್ಲ. ಬೇರೆ ಭಾಷೆಗಳನ್ನು ಗೌರವಿಸಿ ಮತ್ತು ಕಲಿಯಿರಿ, ಆದರೆ ಈ ಏಳು ಬಿಲಿಯನ್ ನರಿರುವ ಜಗತ್ತಿನಲ್ಲಿ,  ಆರು ಮಿಲಿಯನ್ ಕನ್ನಡಿಗರು ಕನ್ನಡವನ್ನು ಉಳಿಸದಿದ್ದರೆ, ನನಗನ್ನಿಸುತ್ತದೆ ಅದು ನಿಧಾನವಾಗಿ ಕಾಣೆಯಾಗುತ್ತದೆ. ಹಾಗಾಗಿ ಇದು ನಿಮ್ಮೆಲ್ಲರಿಗೂ ಒಂದು ದೊಡ್ಡ ಜವಾಬ್ದಾರಿ.

೭೦೦ ಕೋಟಿ ಜನರಿರುವ ಈ ಜಗತ್ತಿನಲ್ಲಿ, ಆರು ಕೋಟಿ ಕನ್ನಡಿಗರ ಜನಸಂಖ್ಯೆ ನೂರರಲ್ಲಿ ಒಂದರಷ್ಟನ್ನೂ ಮುಟ್ಟುವುದಿಲ್ಲ. ಈ ಆರು ಕೋಟಿ ಜನರಲ್ಲಿ, ಎಲ್ಲರೂ ಕನ್ನಡವನ್ನು ಮಾತನಾಡುವುದಿಲ್ಲ. 

ಮೈಸೂರಿನಲ್ಲಿ ಮಾತನಾಡುವ ಕನ್ನಡವು ಕನ್ನಡದ ಅತ್ಯುತ್ತಮ ಮತ್ತು ಅತಿ ಮಧುರ ರೂಪವಾಗಿದೆ ಎಂದು ಹೇಳಲಾಗುತ್ತದೆ, ಯಾಕೆಂದರೆ ಮೈಸೂರು ಕರ್ನಾಟಕದ ಹಳೆಯ ಭಾಗಗಳಿಗೆ ಸೇರಿದ್ದು. ಮಂಗಳೂರಿನ ಕನ್ನಡ ಬೇರೆಯಾಗಿದ್ದು, ಅದರದೇ ಮಾಧುರ್ಯ ಹೊಂದಿದೆ. ಉತ್ತರ ಕನ್ನಡದಲ್ಲಿ ಬೇರೆಯೇ ರೀತಿ ಮಾತನಾಡಲಾಗುತ್ತದೆ ಮತ್ತು ಅದೂ ಕೇಳಲು ಮಧುರ; ಹೀಗೆ ವಿವಿಧ ಪ್ರದೇಶ ಭಾಷೆಗಳಿವೆ ಹಾಗೂ ನಾವು ಅವೆಲ್ಲವನ್ನೂ ಉಳಿಸಬೇಕಾಗಿದೆ. ನಾವು ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸೋಣ ಮತ್ತು ಜೀವನದಲ್ಲಿ ಆಧ್ಯಾತ್ಮಿಕತೆಯ ಕಂಪನ್ನು ಬೀರೋಣ.

ಪ್ರ: ಜನಕ ಮಹಾರಾಜ  ಮತ್ತು ಬುದ್ಧ ಇಬ್ಬರಿಗೂ ಜ್ಞಾನೋದಯವಾಯಿತು. ಅದರಲ್ಲಿ ಜನಕನು ಎಲ್ಲಾ ಸುಖಭೋಗಗಳೊಂದಿಗೆ ಜೀವನ ಮುಂದುವರಿಸಿದರೆ, ಬುದ್ಧನು ಒಬ್ಬ ಸನ್ಯಾಸಿಯ ಬದುಕನ್ನು ನಡೆಸಿದನು, ಹಾಗಾಗಿ ಇವರಲ್ಲಿ ವ್ಯತ್ಯಾಸವಿದೆಯೇ? ಆತ್ಮ-ಸಾಕ್ಷಾತ್ಕಾರದಲ್ಲಿ ವಿವಿಧ ಹಂತಗಳಿವೆಯೇ?

ಶ್ರೀ ಶ್ರೀ: ಇಲ್ಲವೇ ಇಲ್ಲ. ಅಲ್ಲಿ ವ್ಯತ್ಯಾಸವಿದ್ದರೆ, ಅದು ಜ್ಞಾನೋದಯ ಅಲ್ಲವೇ ಅಲ್ಲ. ಮನಸ್ಸು ನೀವು ಉಟ್ಟಿರುವ ಬಟ್ಟೆಯ ಮೇಲೆ ಅವಲಂಬಿತವಾಗಿಲ್ಲ. ನೀವು ಹೊರಗಡೆ ಏನೇ ಉಟ್ಟರೂ, ಒಳಗಡೆ ನೀವು ಒಂದೇ ಆಗಿರುತ್ತೀರಿ. ಹಾಗಾಗಿ ಆತ್ಮ ಸಾಕ್ಷಾತ್ಕಾರ ಎಂದರೆ ಒಳಗಿನ ಜಾಗೃತಿ, ಹೊರಗಿನ ನೋಟ ಅಥವಾ ಅಲಂಕಾರಕ್ಕೆ ಅದು ಸಂಬಂಧಿಸಿಲ್ಲ. ಈ ವಿಷಯದಲ್ಲಿ, ಒಬ್ಬ ರಾಜ, ಭಿಕ್ಷು ಅಥವಾ ಸನ್ಯಾಸಿ, ಎಲ್ಲರೂ ಒಂದೇ.

ಬುದ್ಧನು ಸನ್ಯಾಸಿಯಾದ, ಮತ್ತು ಎಲ್ಲರನ್ನೂ ಸನ್ಯಾಸಿಯನ್ನಾಗಿ ಮಾಡಿದ. ಆ ದಿನಗಳಲ್ಲಿ, ಭಾರತವು ತನ್ನ ಸಮೃದ್ಧಿಯಲ್ಲಿ ಉನ್ನತ ಸ್ಥಾನವನ್ನು ತಲುಪಿತ್ತು ಮತ್ತು ಭಿಕ್ಷುಕರಿರಲಿಲ್ಲ. ಈ ಕಾರಣದಿಂದಾಗಿ ಬುದ್ಧನು ಜನರಿಗೆ ಸನ್ಯಾಸಿಯಾಗಲು ಪ್ರೋತ್ಸಾ ನೀಡುತ್ತಿದ್ದ. ಅವನು ಜನರಿಗೆ ಸನ್ಯಾಸಿಯಾಗಲು ಮತ್ತು ತಮ್ಮ ಆಹಾರಕ್ಕಾಗಿ ಬೇಡಲು ಪ್ರೋತ್ಸಾಹಿಸುತ್ತಿದ್ದ, ಏಕೆಂದರೆ ಅಹಂಕಾರಿಗಳ ಅಹಂ ಬಿಡಿಸಲು ಇದಕ್ಕಿಂತ ಒಳ್ಳೆಯ ಮಾರ್ಗವಿಲ್ಲ.

ಒಬ್ಬ ಭಿಕ್ಷುಕ ಆಹಾರಕ್ಕಾಗಿ ಬೇಡಿದಾಗ, ಅದು ಸ್ವಾಭಾವಿಕ. ಆದರೆ ಒಬ್ಬ ಶ್ರೀಮಂತ ತನ್ನ ಆಹಾರಕ್ಕಾಗಿ ಬೇಡುವುದನ್ನು ಊಹಿಸಿಕೊಳ್ಳಿ, ಅದು ಅಸಾಧ್ಯವಾದುದನ್ನು ಮಾಡಿದಂತೆ ಮತ್ತು ಅಹಂಕಾರವನ್ನು ನೋಯಿಸುತ್ತದೆ. ಹಾಗಾಗಿ, ಅಹಂಕಾರವನ್ನು ನೋಯಿಸಲು, ಅವರನ್ನು ವಿರಕ್ತರನ್ನಾಗಿ ಮಾಡಲು ಬುದ್ಧನು ಎಲ್ಲಾ ಶ್ರೀಮಂತರನ್ನು ಸನ್ಯಾಸಿಗಳನ್ನಾಗಿ ಮಾಡಿದ.

ರಾಜಾ ಜನಕನ ಕಥೆ ಬೇರೆಯಾಗಿತ್ತು. ಜನಕನು ಮೊದಲಿನಿಂದಲೇ ವಿರಕ್ತಿಯಲ್ಲಿ ತೊಡಗಿದ್ದ. ವಿರಕ್ತಿಯಲ್ಲಿದ್ದುಕೊಂಡು, ಜ್ಞಾನೋದಯವಾಗಿದ್ದು ರಾಜ್ಯವನ್ನಾಳುವುದೂ ಒಂದು ರೀತಿಯ ತಪಸ್ಸು. ಅರ್ಜುನನೂ ಒಂದು ಸನ್ಯಾಸಿಯಾಗಿ ಕಾಡಿಗೆ ಹೋಗಬೇಕೆಂದಿದ್ದ; ಅವನಿಗೆ ಯುದ್ಧ ಮಾಡಲು ಇಷ್ಟವಿರಲಿಲ್ಲ. ಶ್ರೀ ಕೃಷ್ಣನು ಹೇಳಿದನು, ’ಇಲ್ಲ, ಕುಳಿತುಕೋ, ಒಂದು ಪಲಾಯನವಾದಿಯಾಗದಿರು.’

ಯೋಗಸ್ಥ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜ (ನಿನ್ನನ್ನು ನೀನು ಆತ್ಮನಲ್ಲಿ ತೊಡಗಿಸಿಕೊಂಡು ನಂತರ ಚಟುವಟಿಕೆಯಿಂದಿರು, ಸಮಾಜದಲ್ಲಿ ಕೆಲಸ ಮಾಡು. ಕೆಳಮಟ್ಟ ಅಥವಾ ಮೇಲ್ಮಟ್ಟದ ಜ್ಞಾನೋದಯವಿದೆಯೆಂದು ಯೋಚಿಸಬೇಡ).

ತ್ಯಾಗಮಯಿ ಮಹರ್ಷಿ ಸುಖದೇವರು ಮಹಾರಾಜ ಜನಕನ ಬಳಿಗೆ ಹೋದರು, ಜನಕನಿಂದ ಜ್ಞಾನವನ್ನು ಪಡೆಯಲು ಅವರು ಜನಕನ ದ್ವಾರದಲ್ಲಿ ಮೂರು ದಿನಗಳ ಕಾಲ ಕಾಯುತ್ತಿದ್ದರು. ಹಾಗಾಗಿ, ಆಶ್ರಮದಲ್ಲಿರುವ ವ್ಯಕ್ತಿಗೇ ಹೆಚ್ಚು ಜ್ಞಾನವಿದೆಯೆಂದು ತೀರ್ಮಾನಿಸುವುದರಲ್ಲಿ ಅರ್ಥವಲ್ಲ.

ಒಬ್ಬ ಬ್ರಹ್ಮಚಾರಿಯು ಸನ್ಯಾಸಿಗಿಂತ ಕಡಿಮೆ ಜ್ಞಾನವುಳ್ಳವನೆಂದು ಭಾವಿಸಲಾಗುವುದಿಲ್ಲ. ಅತ್ಯಂತ ಶ್ರೇಷ್ಠನಾದ ಸನ್ಯಾಸಿ ಸಹ ಒಂದು ಮಗುವಿನಿಂದ ಅಥವಾ ಬ್ರಹ್ಮಚಾರಿಯಿಂದ ಕಲಿಯಬೇಕಾದಂಥ ವಿಷಯಗಳಿರುತ್ತವೆ. ಒಂದೊಮ್ಮೆ ಓರ್ವನು ಆತ್ಮನಲ್ಲಿ ಸ್ಥಿರನಾದರೆ, ಹೊರಗಿನ ಪರಿಸ್ಥಿತಿಗಳು ಅಂತರವನ್ನುಂಟು ಮಾಡುವುದಿಲ್ಲ.

ಪ್ರ: ಗುರೂಜಿ, ಆಂತರ್ಯವು ಅಷ್ಟು ಸುಂದರವಾಗಿದ್ದರೂ ಈ ಚೈತನ್ಯವು ಬಹಿರ್ಮುಖವಾಗುವಂತೆ ಮಾಡುವುದೇನದು?

ಶ್ರೀ ಶ್ರೀ: ಪ್ರಕೃತಿಯು ನಮ್ಮ ಇಂದ್ರಿಯಗಳನ್ನು ಬಹಿರ್ಮುಖಿಯಾಗಿ ಸೃಷ್ಟಿಸಿದೆ. ಈ ಹೊರಗಿನ ಜಗತ್ತು ಇರುವುದು ಇಂದ್ರಿಯಗಳಿಗಾಗಿ. ಸುಂದರ ಪ್ರಕೃತಿಯು ಕಣ್ಣುಗಳಿಗಾಗಿ ಇವೆ, ಪರಿಮಳವು ಮೂಗಿಗಾಗಿ ಮತ್ತು ಅದೇ ರೀತಿಯಲ್ಲಿ ಬಾಯಿ ರುಚಿಗಾಗಿಯೂ, ತ್ವಚೆ ಸ್ಪರ್ಶದ ಸಲುವಾಗಿಯೂ ಇವೆ. ಆದರೆ ಮನಸ್ಸು ಈ ಇಂದ್ರಿಯಗಳಿಂದ ಹಿಂದಕ್ಕೆ ಸರಿದುಕೊಂಡು, ಆಲೋಚನೆಗಳು ಮತ್ತು ಭಾವನೆಗಳು ಉದಿಸುವಂಥ ತನ್ನದೇ ಮೂಲಕ್ಕೆ ಹೋಗಬಹುದಾದ ಪ್ರಕ್ರಿಯೆಯಿದೆ. ಹಾಗೆ ಈ ಮನಸ್ಸಿಗೆ ಆ ಸಾಮರ್ಥ್ಯವಿದೆ, ಮತ್ತು ಮನಸ್ಸು ತನ್ನದೇ ಮೂಲಕ್ಕೆ ಹೋಗುವುದರಲ್ಲಿ ಬುದ್ಧಿಯು (ವಿವೇಕ) ಬಹಳ ಸಹಕಾರಿಯಾಗಿದೆ. ಬುದ್ಧಿಯ ಸಹಕಾರವಿಲ್ಲದೇ ಅದು ಸಾಧ್ಯವಿಲ್ಲ. ಭೇದಗಳನ್ನು ಅರಿತು, ನಿರ್ಧರಿಸಿ ’ಹೌದು, ನಾನಿದನ್ನು ನೋಡಿದ್ದೇನೆ, ಇನ್ನು ಸಾಕು. ಈಗ ನಾನು ನನ್ನಾಳಕ್ಕೆ ಹೋಗಬೇಕು’ ಎಂದು ಹೇಳುವಂಥದ್ದು ವಿವೇಕ. 

ಬಹಳ ಪವಿತ್ರವಾದ ಮಂತ್ರಗಳಲ್ಲಿ ಒಂದಾಗಿರುವ ಗಾಯತ್ರಿ ಮಂತ್ರ ಹೇಳುವುದು, ’ಧಿಯೋ ಯೋನ ಪ್ರಚೋದಯಾತ್’, ಅಂದರೆ ನನ್ನ ಬುದ್ಧಿಯು ದವಿಕತೆಯಿಂದ ಪ್ರೇರಿಸಲ್ಪಡಲಿ, ನನ್ನ ಬುದ್ಧಿಯು ದೈವಿಕತೆಯಲ್ಲಿ ತನ್ಮಯವಾಗಲಿ, ಆ ಸ್ಫೂರ್ತಿ ಮತ್ತು ಅಂತರ್ದೃಷ್ಟಿ ನನ್ನ ಬುದ್ಧಿಯಲ್ಲಿ ಹರಿದು ಬರಲಿ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಇದು ಒಂದು ಮುಖ್ಯವಾದ ಪ್ರಾರ್ಥನೆಯಾಗಿದೆ. ’ಉಳಿದದ್ದೆಲ್ಲಾ ಆಮೇಲೆ, ಮೊದಲು ನನ್ನ ವಿವೇಕವು ಪ್ರಕಾಶಿಸಲಿ ಮತ್ತು ದೈವಿಕತೆಯನ್ನೂ, ತರ್ಕಾತೀತ ದಿವ್ಯ ಜ್ಞಾನವನ್ನೂ ಹೊರಹೊಮ್ಮಲಿ.

ಪ್ರ: ಗುರೂಜಿ, ನಾನು ಉದ್ಯೋಗಗಳನ್ನೂ ಸ್ಥಾನಗಳನ್ನು ಬದಲಾಯಿಸಿದ್ದೇನೆ, ಆದರೂ ನನ್ನ ಜೀವನದಲ್ಲಿ ಬಹಳ ಬೇಸರಿಕೆಯನ್ನು ಕಾಣುತ್ತೇನೆ. ದಯವಿಟ್ಟು ಉದಾಸೀನದಿಂದ ಹೇಗೆ ಹೊರಬರುವುದು ಎಂದು ಉಪದೇಶಿಸಿ.

ಶ್ರೀ ಶ್ರೀ: ನಿಮ್ಮ ಜೀವನದಲ್ಲಿ ಒಂದು ಮಹತ್ತರವಾದ ಉದ್ದೇಶಕ್ಕಾಗಿ ನಿಮ್ಮಲ್ಲಿ ಒಂದು ದಾಹ ಹಾಗೂ ಬದ್ಧತೆ ಇದ್ದರೆ, ಬೇಸರಿಕೆಯು ದೂರವಾಗುತ್ತದೆ. ಬೇಸರಿಕೆ ಬರುವುದು ಏಕೆಂದರೆ, ನೀವು ನಿಮ್ಮ ಸ್ವಂತ ಆನಂದದ ಬಗ್ಗೆ ಮಾತ್ರ ಗಮನಿಸುತ್ತಿದ್ದೀರಿ. ನೀವು ನಿಮ್ಮ ಬಗ್ಗೆ ಮಾತ್ರ ಯೋಚಿಸುತ್ತಿದ್ದರೆ, ನಿಮಗೆ ಎಷ್ಟು ಸುಖ ಅಥವಾ ಆನಂದ ಸಿಗುತ್ತದೆಂದು ಯೋಚಿಸುತ್ತಿದ್ದರೆ, ನೀವು ಬೇಸರಗೊಳ್ಳುತ್ತೀರಿ, ಯಾಕೆಂದರೆ ಅದು ನಿಮಗೆ ಎಲ್ಲೂ ಸಿಗುವುದಿಲ್ಲ. ಹೇಗಿದ್ದರೂ, ನಿಮ್ಮ ಹೃದಯವು ಇತರರಿಗಾಗಿ, ಇನ್ನೂ ಹೆಚ್ಚಿನ ಉದ್ದೇಶಕ್ಕಾಗಿ, ಇನ್ನೂ ಉತ್ತಮವಾದುದಕ್ಕಾಗಿ ಮತ್ತು ಇನ್ನೂ ಅರ್ಥಪೂರ್ಣವಾದುದಕ್ಕಾಗಿ ಮಿಡಿದಾಗ, ಅಲ್ಲಿ ಯಾವುದೇ ಬೇಸರಿಕೆಯಿರುವುದಿಲ್ಲ.

ನಮ್ಮ ಜೀವನದಲ್ಲಿ ಬದ್ಧತೆಯ ಮಟ್ಟವು ನಮ್ಮ ಉತ್ಸಾಹ ಅಥವಾ ಬೇಸರಿಕೆಯನ್ನು ಸೂಚಿಸುತ್ತದೆ. ನಮ್ಮ ಬದ್ಧತೆಯು ತಳದಲ್ಲಿದ್ದಾಗ, ಬೇಸರಿಕೆ ಅನಿವಾರ್ಯವಾಗಿ ಹುಟ್ಟುತ್ತದೆ. ನಮ್ಮ ಬದ್ಧತೆಯು ಉನ್ನತ ಮಟ್ಟದಲ್ಲಿದ್ದಾಗ, ಬೇಸರಿಕೆಯು ಯಾವ ಮೂಲೆಯಲ್ಲೂ ಸುಳಿಯುವುದಿಲ್ಲ. ಬೇಸರಿಕೆಯು ನಿಮ್ಮ ಸಮೀಪದಲ್ಲೆಲ್ಲೂ ಇರುವುದಿಲ್ಲ.

ಪ್ರ: ಪಂಚ ಪ್ರಾಣಗಳೇನು?

ಶ್ರೀ ಶ್ರೀ: ಪ್ರಾಣ, ಅಪಾನ, ಉದಾನ, ಸಮಾನ ಮತ್ತು ವ್ಯಾನ ಎಂಬ ಶರೀರದ ಐದು ಸ್ಥಿತಿಗಳಿಗೆ ಪಂಚಪ್ರಾಣವೆಂಬ ಉಲ್ಲೇಖವಿದೆ.

ಪ್ರಾಣವೆಂದರೆ ಶರೀರದ ಮೇಲ್ಭಾಗ, ಹೃದಯದಿಂದ ಮೇಲ್ಭಾಗದಲ್ಲಿನ ಶಕ್ತಿ. ಪ್ರಾಣವು ಅತಿ ಹೆಚ್ಚಾಗಿದ್ದಾಗ ಅಥವಾ ಅಸಮತೋಲನದಲ್ಲಿದ್ದಾ ನಿಮಗೆ ನಿದ್ರಿಸಲಾಗುವುದಿಲ್ಲ. ಅಪಾನ ವಾಯು ಎಂದರೆ ಶರೀರದ ಕೆಳಭಾಗದಲ್ಲಿನ ಶಕ್ತಿ. ಅಪಾನವು ಬಹಳ ಹೆಚ್ಚಿದಾಗ, ನೀವು ಆಯಾಸ, ನಿದ್ರಾಶೀಲತೆ ಮತ್ತು ಮಂಕುತನ ಅನುಭವಿಸುತ್ತೀರಿ. ಸಮಾನ ವಾಯು ಇರುವುದು ಹೊಟ್ಟೆಯ ಭಾಗದಲ್ಲಿ, ಇದು ಜೀರ್ಣಕ್ರಿಯೆಯಲ್ಲಿ ಸಹಾಯವಾಗುತ್ತದೆ. ಉದಾನ ವಾಯು ಇರುವುದು ಹೃದಯದ ಮೇಲ್ಭಾಗದಲ್ಲಿ ಮತ್ತು ಕಂಠ ಭಾಗದಲ್ಲಿ, ಇದು ಭಾವನೆಗಳಿಗೆ ಹೇತುವಾಗಿದೆ. ಉದಾನ ವಾಯು ಅಸಮತೋಲನದಲ್ಲಿದ್ದಾಗ, ನಿಮ್ಮಲ್ಲಿ ಭಾವನೆಗಳೇ ಇರುವುದಿಲ್ಲ, ನೀವು ಕಲ್ಲಿನಂತಾಗುತ್ತೀರಿ ಅಥವಾ ಬಹಳ ಭಾವುಕರಾಗಿ ನಿಶ್ಶಕ್ತರಾಗುತ್ತೀರಿ.
ವ್ಯಾನವು ಈ ಸಂಪೂರ್ಣ ಶರೀರದಲ್ಲಿದೆ, ಇದು ಗಂಟುಗಳಲ್ಲಿನ ಚಲನ, ಶರೀರದಲ್ಲಿ ರಕ್ತ ಸಂಚಲನಕ್ಕೆ ಕಾರಣವಾಗಿದೆ. ವ್ಯಾನ ಪ್ರಾಣ ಅಸಂತುಲಿತವಾದರೆ, ಸಂಚಲನ ವ್ಯವಸ್ಥೆ ಸಂತುಲನ ತಪ್ಪಿ ಗಂಟುಗಳಲ್ಲಿ ಚಲನೆ ಸೀಮಿತವಾಗಿ, ಬೇನೆಗಳು ಕಂಡುಬರುತ್ತವೆ.

ಪಂಚ ಪ್ರಾಣ ಎಲ್ಲರಲ್ಲೂ ಇದೆ ಮತ್ತು ವಿವಿಧ ಸಮಯಗಳಲ್ಲಿ ಬೇರೆ ಬೇರೆ ಪ್ರಾಣಗಳು ಆಳುತ್ತವೆ. ಪ್ರಾಣಗಳಲ್ಲಿನ ಅಸಮತೋಲನಗಳು ಪ್ರಾಣಾಯಾಮಗಳಲ್ಲಿ ಮತ್ತು ಸುದರ್ಶನ ಕ್ರಿಯೆಯಲ್ಲಿ ಸರಿಯಾಗುತ್ತವೆ. ಅದರಿಂದಲೇ, ಈ ಪಂಚಪ್ರಾಣಗಳು ಕ್ರಿಯಾಮುಖವಾಗುತ್ತಿದ್ದಂತೆ, ನಿಮಗೆ ಅಳು ಅಥವಾ ನಗು ಬರುತ್ತದೆ.

ಜ್ಞಾನವು ಒಂದು ಅರಿಯಲಾಗದ ಸಾಗರ, ಅಷ್ಟೊಂದು ಜ್ಞಾನವಿದೆ, ಆದರೆ ತಿಳಿಯಲು ಇಷ್ಟು ಸಾಕು: ಶರೀರದಲ್ಲಿ ಪಂಚ ಪ್ರಾಣಗಳಿವೆ ಹಾಗೂ ನಾವು ಪ್ರಾಣಾಯಾಮ ಧ್ಯಾನಗಳನ್ನು ಮಾಡಿದಾಗ ಎಲ್ಲಾ ಪ್ರಾಣಗಳು ಸಮತೋಲನ ಹೊಂದುತ್ತವೆ.

ಪ್ರ: ಒಬ್ಬ ವ್ಯಕ್ತಿ ತೀರಿಕೊಂಡಾಗ, ೧೨ ದಿನಗಳ ನಂತರ ಆತ್ಮ ಇನ್ನೊಂದು ಕಡೆಯಲ್ಲಿ ಮರುಜನ್ಮ ಪಡೆಯುತ್ತದೆ ಎಂದು ಹೇಳುತ್ತಾರೆ. ಆತ್ಮವು ಮರುಜನ್ಮ ಪಡೆದರೆ, ನಾವು ನಮ್ಮ ಪೂರ್ವಜರ ಚಿತ್ರವನ್ನು ತೂಗುಹಾಕಿ ಯಾಕೆ ಪೂಜಿಸುತ್ತೇವೆ?

ಶ್ರೀ ಶ್ರೀ: ಒಬ್ಬ ವ್ಯಕ್ತಿ ಮರುಜನ್ಮ ಪಡೆಯುವುದಾದರೆ, ನಾವು ಶ್ರಾದ್ಧವನ್ನು ಏಕೆ ಮಾಡಬೇಕು? ನೀನು ಹೇಳುತ್ತಿರುವುದು ಸರಿಯಲ್ಲ. ಪ್ರಾಚೀನ ದಿನಗಳಲ್ಲಿ, ಜನರು ಆತ್ಮ ಜಾಗೃತರಾಗಿದ್ದರು, ಹಾಗಾಗಿ ಇಂಥ ವ್ಯಕ್ತಿ ಮರುಜನ್ಮ ಹೊಂದಿದ್ದಾನೆ ಎಂದು ಅವರಿಗೆ ತಿಳಿಯುತ್ತಿತ್ತು ಮತ್ತು ಅವರು ಶ್ರಾದ್ಧ ಮಾಡುವುದನ್ನು ನಿಲ್ಲಿಸುತ್ತಿದ್ದರು. 

ಈಗ ನಿಮಗೆ ತಿಳಿದಿಲ್ಲ, ನೀವು ಯೋಗಿಯಲ್ಲ, ಅಲ್ಲದೇ ಒಬ್ಬ ವ್ಯಕ್ತಿ ಮರುಜನ್ಮ ಪಡೆದಿದ್ದಾನೆಯೇ ಇಲ್ಲವೇ ಎಂದು  ನಿಮಗೆ ಅರ್ಥವಾಗುವುದಿಲ್ಲ. ಹಾಗಾಗಿ, ಆಶೀರ್ವಾದ ಪಡೆಯಲು, ಜನರು ಈ ಕ್ರಿಯಾ ವಿಧಿಗಳನ್ನು ಮುಂದುವರೆಸಿದ್ದಾರೆ.
ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ, ಒಬ್ಬ ನಿರ್ದಿಷ್ಟ ವ್ಯಕ್ತಿ ಮರುಜನ್ಮ ಪಡೆದಾಗ ಜನರಿಗೆ ತಿಳಿಯುತ್ತಿತ್ತು ಮತ್ತು ಅವರು ಶ್ರಾದ್ಧಗಳನ್ನು ನಿಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ.  ಶ್ರಾದ್ಧದ ಅರ್ಥ, ಒಬ್ಬ ವ್ಯಕ್ತಿಯನ್ನು ಸಂಪೂರ್ಣ ಶ್ರದ್ಧೆಯಿಂದ ನೆನಪಿಸಿಕೊಳ್ಳುವುದು.

ಪ್ರ: ಗುರೂಜಿ, ಬ್ರಹ್ಮ ಸೃಷ್ಟಿಕರ್ತ, ವಿಷ್ಣು ಪಾಲಕ ಮತ್ತು ಶಿವ ವಿನಾಶಕ. ನಾವು ವಿನಾಶಕನನ್ನೇ ಇಷ್ಟೊಂದು ಏಕೆ ಪ್ರಾರ್ಥಿಸುತ್ತೇವೆ?

ಶ್ರೀ ಶ್ರೀ: ಸೃಷ್ಟಿಕರ್ತನು ತನ್ನ ಕೆಲಸವನ್ನು ಮುಗಿಸಿದ್ದಾನೆ, ಹಾಗಾಗಿ ಯಾರೂ ಅವನನ್ನು ಕೇಳುವುದಿಲ್ಲ. ಪಾಲಕನು ಅಗತ್ಯವಾಗಿರುವವನು ಮತ್ತು ವಿನಾಶಕನ ಬಗ್ಗೆ ಎಲ್ಲರೂ ಭಯಪಡುತ್ತಾರೆ!

ಇಲ್ಲ, ಅದು ಹಾಗಲ್ಲ. ಎಲ್ಲಾ ದೇವತೆಗಳ ದೇವನೆಂದರೆ ಶಿವ, ಮಹಾದೇವ, ಹಾಗಾಗಿ ಎಲ್ಲರೀ ಮಹಾದೇವನನ್ನು ಪ್ರಾರ್ಥಿಸುತ್ತಾರೆ. ಬ್ರಹ್ಮನು ವಿಷ್ಣುವಿನಿಂದ ಜನಿಸಿದ್ದ. ಈ ರೀತಿಯಲ್ಲಿ, ಎಲ್ಲಾ ವಿವಿಧ ಸಂಪ್ರದಾಯಗಳಲ್ಲಿ ವಿವಿಧ ನಂಬಿಕೆಗಳಿವೆ, ನೀವೇನು ಇಷ್ಟಪಡುತ್ತೀರೋ ಅದನ್ನು ನಂಬಿ.