ಶುಕ್ರವಾರ, ನವೆಂಬರ್ 30, 2012

ಜಿಜ್ಞಾಸೆ

೩೦ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆಗಳನ್ನು ಕೇಳುವ ಆರು ರೀತಿಯ ಜನರಿರುತ್ತಾರೆ.
ಪ್ರಶ್ನೆಗಳನ್ನು ಕೇಳುವ ಮೊದಲನೆಯ ರೀತಿಯ ವ್ಯಕ್ತಿಯೆಂದರೆ, ಯಾರು ದುಃಖಿತನಾಗಿರುವನೋ ಅಥವಾ ಅಸಂತೋಷದಲ್ಲಿರುವನೋ ಅವನು. ಅಸಂತೋಷದಲ್ಲಿರುವ ಜನರು ಪ್ರಶ್ನೆಗಳನ್ನು ಕೇಳುತ್ತಾರೆ ಆದರೆ ಅವರು ಉತ್ತರಗಳನ್ನು ಕೇಳಿಸಿಕೊಳ್ಳುವುದಿಲ್ಲ. ಇದೊಂದು ವಾಸ್ತವ, ನೀವಿದನ್ನು ಅನುಭವಿಸಲಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ನಿಮ್ಮ ಜೀವನದಲ್ಲಿ ಅನುಭವಿಸಿರುವಿರಿ? (ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ವಯಸ್ಸಾದವರು, ವಿಶೇಷವಾಗಿ ಅವರಿಗೆ ವಯಸ್ಸಾಗಿ ಮನೆಯಲ್ಲಿರುವಾಗ, ಯಾತನೆ ಪಡುವಾಗ, ಅವರನ್ನುತ್ತಾರೆ, "ಓ ನನಗೆ ಈ ಸಮಸ್ಯೆಯಿದೆ, ದೇವರಿಗೆ ಯಾಕೆ ನನ್ನ ಮೇಲೆ ಕರುಣೆಯಿಲ್ಲ? ಈ ಸಮಸ್ಯೆ ಯಾಕೆ?"
ಅವರು ಈ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ. ಅದಕ್ಕಾಗಿ ಅವರು ನಿಮ್ಮಿಂದ ಒಂದು ಉತ್ತರವನ್ನು ನಿರೀಕ್ಷಿಸುವುದು ಕೂಡಾ ಇಲ್ಲ. ನೆನಪಿದೆಯೇ?! ಅವರು ಸುಮ್ಮನೇ ಪ್ರಶ್ನೆಗಳನ್ನು ಕೇಳುತ್ತಾರೆ, "ನಾನು ಯಾಕೆ ಯಾತನೆ ಪಡುತ್ತಿರುವೆ? ನಾನು ಎಲ್ಲಾ ಒಳ್ಳೆಯದನ್ನೇ ಮಾಡಿದೆ, ಈ ಯಾತನೆ ಯಾಕೆ ನನಗೆ?"
ಆದುದರಿಂದ, ದುಃಖದಲ್ಲಿದ್ದರೂ ಅಥವಾ ಅಸಂತೋಷವಾಗಿದ್ದರೂ ಜನರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ಅವರು ಒಂದು ಉತ್ತರವನ್ನು ನಿರೀಕ್ಷಿಸುತ್ತಿಲ್ಲ, ಮತ್ತು ನೀವೊಂದು ಉತ್ತರವನ್ನು ನೀಡಿದರೆ ಆಗ ನೀವು ಮೂರ್ಖರು. ನೀವು ಸುಮ್ಮನಿರಬೇಕು. ಕೇವಲ ಅವರಿಗೆ ಮುಗುಳ್ನಗೆ ಬೀರಿ. ನೀವು ಕೇವಲ ಅವರೊಂದಿಗಿರುವುದಷ್ಟೇ ಸಾಕು ಅವರಿಗೆ.
ಒಂದು ಕುಟುಂಬದಲ್ಲಿ ಒಂದು ಸಾವುಂಟಾದಾಗ, ಜನರು ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ, "ಇದು ಯಾಕಾಯಿತು?" ಮತ್ತು ನಿಮಗೆ ಹೇಳಲು ಏನೂ ಇರುವುದಿಲ್ಲ. ನಿಮಗೇನಾದರೂ ಹೇಳಲು ಇರುತ್ತದೆಯೇ? ಇಲ್ಲ, ಹೇಳಲು ಏನೂ ಇರುವುದಿಲ್ಲ. ಆದುದರಿಂದ ನಿಮ್ಮ ಸರಳವಾದ ಸಾನ್ನಿಧ್ಯವಿದ್ದರೆ ಸಾಕು. ಅವರ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಡಿ, ತಿಳಿಯಿತೇ?!
ಹಾಗೆಯೇ, ದೇವರ ಪರ ವಕೀಲರಾಗಬೇಡಿ ಅಥವಾ ಅವರು ದೇವರ ವಿರುದ್ಧವಾಗುವಂತೆ ಮಾಡಬೇಡಿ. ಸಾಧಾರಣವಾಗಿ ಜನರು, "ದೇವರು ನಿನ್ನೊಂದಿಗೆ ಕ್ರೂರವಾಗಿದ್ದಾನೆ, ಪ್ರಕೃತಿಯು ನಿನ್ನೊಂದಿಗೆ ಬಹಳ ಕಠೋರವಾಗಿದೆ, ಇದು ಆಗಬಾರದಾಗಿತ್ತು" ಈ ಎಲ್ಲವನ್ನೂ ಹೇಳುತ್ತಾರೆ. ಅದು ಅವರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ.
ಆದುದರಿಂದ ದುಃಖಿತರಾದ ಮತ್ತು ದೀನರಾದ ಜನರು ಪ್ರಶ್ನೆಗಳನ್ನು ಕೇಳುವಾಗ, ನೀವು ಹಾಗೆಯೇ ಸುಮ್ಮನಿರಬೇಕು.
ಪ್ರಶ್ನೆಗಳನ್ನು ಕೇಳುವ ಎರಡನೆಯ ರೀತಿಯ ಜನರು ಯಾರೆಂದರೆ, ಕ್ರೋಧದಲ್ಲಿರುವವರು; ತಮಗೆ ಅನ್ಯಾಯವಾಗಿದೆಯೆಂದು ಯಾರಿಗೆ ಅನ್ನಿಸುವುದೋ ಅವರು. ಅವರು ಬಹಳ ಕೋಪದಲ್ಲಿರುತ್ತಾರೆ ಮತ್ತು ಅವರು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಯಾವುದೇ ಉತ್ತರವನ್ನು ಕೇಳಿಸಿಕೊಳ್ಳಲು ತಯಾರಿರುವುದಿಲ್ಲ, ಯಾಕೆಂದರೆ ಒಬ್ಬ ವ್ಯಕ್ತಿಯು ಕೋಪದಲ್ಲಿರುವಾಗ ಮನಸ್ಸು ಅದಾಗಲೇ ಮುಚ್ಚಿರುತ್ತದೆ. ಬುದ್ಧಿಯು ಕೆಲಸ ಮಾಡುತ್ತಿರುವುದಿಲ್ಲ. ಭಾವನೆಯು ಅಧಿಕಾರದಲ್ಲಿರುತ್ತದೆ. ಆ ಪರಿಸ್ಥಿತಿಯಲ್ಲಿ, ಅವರನ್ನು ಶಾಂತರಾಗಲು ಬಿಡುವುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗದಿರುವುದು ಒಳ್ಳೆಯದು. ಒಬ್ಬ ಕ್ರೋಧದಲ್ಲಿರುವ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸುವುದು ನಿಷ್ಪ್ರಯೋಜಕ.
ಪ್ರಶ್ನೆಗಳನ್ನು ಕೇಳುವ ಮೂರನೆಯ ರೀತಿಯ ಜನರು ಯಾರೆಂದರೆ, ತಮ್ಮ ಇರುವಿಕೆಯನ್ನು ತೋರಿಸಲಿಕ್ಕಾಗಿ ಮಾತ್ರ ಪ್ರಶ್ನೆಗಳನ್ನು ಕೇಳುವವರು, ಅವರಿಗೆ ಒಂದು ಉತ್ತರದಲ್ಲಿ ಆಸಕ್ತಿಯಿಲ್ಲ. "ನಾನಿಲ್ಲಿರುವೆನು, ನೀವು ನನ್ನನ್ನು ಗುರುತಿಸಿರುವಿರಾ?", ಅವರು ತಿಳಿಯಲು ಬಯಸುವುದು ಅದನ್ನು ಮಾತ್ರ, ಅವರಿಗೆ ಒಂದು ಉತ್ತರದಲ್ಲಿ ಆಸಕ್ತಿಯೇ ಇಲ್ಲ. ನೀವು ಅವರ ಪ್ರಶ್ನೆಗೆ ಉತ್ತರಿಸಿದರೆ, ಅವರು ಬೇರೆಲ್ಲೋ ನೋಡುತ್ತಾರೆ, ಅಥವಾ ಅವರು ಬೇರೇನನ್ನೋ ಮಾಡುತ್ತಿರಬಹುದು. ಯಾಕೆಂದರೆ ಅವರಿಗೆ ತಮ್ಮ ಇರುವಿಕೆಯನ್ನು ವ್ಯಕ್ತಪಡಿಸುವುದು ಬಹಳ ಮುಖ್ಯವಾಗುತ್ತದೆಯಾದುದರಿಂದ ಅವರೊಂದು ಪ್ರಶ್ನೆಯನ್ನು ಕೇಳುತ್ತಾರೆ. ಇವರು ಮೂರನೆಯ ರೀತಿಯ ಜನರು.
ನೀವೊಬ್ಬರು ಶಾಲಾ ಶಿಕ್ಷಕರಾಗಿದ್ದರೆ ನಿಮಗೆ ಈ ಅನುಭವವಿರಬಹುದು. ಒಬ್ಬರು ಕಾಲೇಜು ಶಿಕ್ಷಕರು ಇದರ ಬಗ್ಗೆ ಬರೆದಿದ್ದಾರೆ, ಕಾಲೇಜಿನಲ್ಲಿ ಕೆಲವೊಮ್ಮೆ ಜನರು ತಾವು ಬುದ್ಧಿವಂತರೆಂಬುದನ್ನು ಹಾಗೂ ತಾವು ತರಗತಿಯಲ್ಲಿ ಇರುವೆವೆಂಬುದನ್ನು ತೋರಿಸುವುದಕ್ಕಾಗಿ ಮಾತ್ರ ಎದ್ದು ನಿಲ್ಲುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ಐ.ಐ.ಟಿಯಲ್ಲಿ ಇದು ಯಾವಾಗಲೂ ಆಗುವುದಿಲ್ಲವೇ? ಒಬ್ಬರು ಸುಮ್ಮನೇ ಎದ್ದು ನಿಂತು ಪ್ರಶ್ನಿಸುತ್ತಾರೆ.
ನಾಲ್ಕನೆಯ ರೀತಿಯ ಜನರೆಂದರೆ, ತಮಗೆ ಉತ್ತರ ತಿಳಿದಿದೆಯೆಂದು ಭಾವಿಸುವವರು ಆದರೆ, ಇನ್ನೊಬ್ಬನಿಗೆ ಉತ್ತರ ತಿಳಿದಿದೆಯೇ ಇಲ್ಲವೇ ಎಂದು ಪರೀಕ್ಷಿಸುವುದಕ್ಕಾಗಿ ಮಾತ್ರ ಬರುವವರು. "ನನಗೆ ಎಲ್ಲಾ ಉತ್ತರಗಳು ತಿಳಿದಿವೆ, ಆದರೆ ಈ ವ್ಯಕ್ತಿಗೆ ಉತ್ತರ ತಿಳಿದಿದೆಯೇ ಇಲ್ಲವೇ ಎಂದು ನಾನು ಅವನನ್ನು ಪರೀಕ್ಷಿಸಲು ಬಯಸುತ್ತೇನೆ" ಎಂಬಂತೆ. ಅಂತಹ ಜನರೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ.
ಪ್ರಶ್ನೆಗಳನ್ನು ಕೇಳುವ ಐದನೆಯ ರೀತಿಯ ಜನರೆಂದರೆ, ಅವರಿಗೆ ಒಂದು ಆಳವಾದ ಅನುಭವವಾಗಿದೆ ಮತ್ತು ಅವರು ಅದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. "ನಾನು ಧ್ಯಾನ ಮಾಡಿದೆ ಮತ್ತು ಈ ಎಲ್ಲಾ ಸಂವೇದನೆಗಳಾಗುವುದನ್ನು ಅನುಭವಿಸಿದೆ. ಅದೇನಾಗಿತ್ತು? ನಾನು ಅದರ ಬಗ್ಗೆ ಹೆಚ್ಚು ತಿಳಿಯಲು ಬಯಸುತ್ತೇನೆ."
"ನಾನು ಧ್ಯಾನ ಮಾಡಿದಾಗ ನಾನು ಪ್ರಕಾಶವನ್ನು ನೋಡಿದೆ ಮತ್ತು ಅಲ್ಲಿ ಈ ಸುಂದರವಾದ ಪರಿಮಳವಿತ್ತು. ನಾನು ಇದರ ಬಗ್ಗೆ ತಿಳಿಯಲು ಬಯಸುತ್ತೇನೆ. ನಾನು ಪ್ರಕ್ರಿಯೆಯನ್ನು ಸರಿಯಾಗಿ ಮಾಡುತ್ತಿರುವೆನೇ ಎಂಬುದನ್ನು ನಾನು ತಿಳಿಯಲು ಬಯಸುತ್ತೇನೆ. ಈ ಅನುಭವದ ಅರ್ಥವೇನು?"
ಒಂದು ಅನುಭವವಾದ ನಂತರ ಪ್ರಶ್ನೆಗಳನ್ನು ಕೇಳುವುದು, ಯಾಕೆಂದರೆ ಅನುಭವ ಮತ್ತು ತಿಳಿದುಕೊಳ್ಳುವುದು ಜೊತೆಯಲ್ಲಿ ಸಾಗಬೇಕು. ಕೆಲವು ಜನರಿಗೆ ಮೊದಲ ಸಾರಿ ಅನುಭವವಾದಾಗ ಅವರು ಅದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ ಮತ್ತು ಅದಕ್ಕಾಗಿ ಅವರು ಪ್ರಶ್ನೆಗಳನ್ನು ಕೇಳುತ್ತಾರೆ.
ಪ್ರಶ್ನೆಗಳನ್ನು ಕೇಳುವ ಆರನೆಯ ವಿಧದ ಜನರನ್ನು ಜಿಜ್ಞಾಸುಗಳೆಂದು ಕರೆಯುತ್ತಾರೆ. ಅವರ ಮನಸ್ಸಿನಾಳದಲ್ಲಿ ಸತ್ಯವನ್ನು ತಿಳಿಯುವ, ವಾಸ್ತವವನ್ನು ತಿಳಿಯುವ ಒಂದು ತೀವ್ರ ದಾಹವಿರುತ್ತದೆ ಮತ್ತು ಯಾರಲ್ಲಿ ತಾವು ಪ್ರಶ್ನೆಗಳನ್ನು ಕೇಳುತ್ತಿರುವೆವೋ ಅವರಲ್ಲಿ ಅವರಿಗೆ ನಂಬಿಕೆಯಿರುತ್ತದೆ; ಈ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬುದಾಗಿ ಹಾಗೂ ಅದರಿಂದಾಗಿ ಅವರು ಅವರಲ್ಲಿಗೆ ಹೋಗಿ ಪ್ರಶ್ನೆ ಕೇಳುತ್ತಾರೆ.
ಔಷಧಿಗೆ ಸಂಬಂಧಿಸಿದ ಪ್ರಶ್ನೆಯನ್ನು ನೀವು ಮನೆ ಕೆಲಸದಾಕೆಯಲ್ಲಿ ಕೇಳುವುದಿಲ್ಲ. ಒಬ್ಬಳು ನಿಮ್ಮ ನೆಲವನ್ನು ಗುಡಿಸುತ್ತಿರುತ್ತಾಳೆ ಮತ್ತು ಅವಳು ನಿಮ್ಮ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುತ್ತಾಳೆ, ನೀವು ಹೋಗಿ ಅವಳಲ್ಲಿ ನೀವು ಯಾವ ಔಷಧಿಯನ್ನು ತೆಗೆದುಕೊಳ್ಳಬೇಕೆಂದು ಕೇಳುವುದಿಲ್ಲ ಯಾಕೆಂದರೆ ಅವಳಿಗೆ ತಿಳಿದಿರಲಾರದು ಎಂಬುದು ನಿಮಗೆ ತಿಳಿದಿದೆ. ನಿಮಗೆ ಖಾಯಿಲೆ ಬಂದಾಗ, ನೀವೊಬ್ಬರು ವೈದ್ಯರ ಬಳಿಗೆ ಹೋಗುತ್ತೀರಿ ಮತ್ತು ಅವರಲ್ಲಿ ಕೇಳುತ್ತೀರಿ ಯಾಕೆಂದರೆ ಅವರಿಗೆ ತಿಳಿದಿದೆಯೆಂಬುದು ನಿಮಗೆ ತಿಳಿದಿದೆ.
ಆದುದರಿಂದ ಆ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬ ವಿಶ್ವಾಸ ನಿಮ್ಮಲ್ಲಿರುವಾಗ ಮತ್ತು ನೀವು ನಿಮ್ಮ ಪ್ರಶ್ನೆಯನ್ನು ಆ ವ್ಯಕ್ತಿಗೆ ಕೇಳಲು ಬಯಸುವಾಗ, ಉತ್ತರವನ್ನು ತೆಗೆದುಕೊಳ್ಳಲು ನೀವು ಸಿದ್ಧರಿರುವಿರಿ.
ನಿಮಗೆ ತಿಳಿಯದು, ನೀವು ತಿಳಿಯಲು ಬಯಸುವಿರಿ ಮತ್ತು ಯಾವ ವ್ಯಕ್ತಿಯಲ್ಲಿ ನೀವು ಪ್ರಶ್ನೆಯನ್ನು ಕೇಳಬೇಕೆಂದಿರುವಿರೋ ಆ ವ್ಯಕ್ತಿಗೆ ಉತ್ತರ ತಿಳಿದಿದೆಯೆಂಬುದು ನಿಮಗೆ ಖಚಿತವಿದೆ - ಇಂತಹ ಒಂದು ಪರಿಸ್ಥಿತಿಯಲ್ಲಿ; ಈ ಮೂರು ಅಂಶಗಳು ಇರುವಾಗ, ಅಲ್ಲಿ ಜಿಜ್ಞಾಸೆಯಿರುತ್ತದೆ - ವಿಚಾರಿಸುವ ನಿಜವಾದ ಉತ್ಸಾಹ.
ವಿಮಾನ ನಿಲ್ದಾಣಕ್ಕೆ ಹೋಗುವುದು ಹೇಗೆಂದು ನೀವೊಬ್ಬ ಕಸಗುಡಿಸುವವನಲ್ಲಿ ಕೇಳುವುದಿಲ್ಲ. ಒಂದು ವಾಹನ ಚಲಾಯಿಸುವುದು ಹೇಗೆಂದು ಅಥವಾ ಒಂದು ಔಷಧಿಯನ್ನು ಕೊಡುವುದು ಹೇಗೆಂದು ನೀವೊಬ್ಬ ತೋಟಗಾರನ ಬಳಿಗೆ ಹೋಗಿ ಕೇಳುವುದಿಲ್ಲ. ಅವರಿಗೆ ತಿಳಿಯದೆಂಬುದು ನಿಮಗೆ ತಿಳಿದಿರುತ್ತದೆ ಯಾಕೆಂದರೆ, ಅವರಿಗೆ ಏನು ತಿಳಿದಿರುತ್ತದೆಯೆಂಬುದರ ಬಗ್ಗೆ ನಿಮಗೊಂದು ಕಲ್ಪನೆಯಿರುತ್ತದೆ. ನೀವೊಬ್ಬ ತೋಟಗಾರನ ಬಳಿಗೆ ಹೋಗಿ ಅವನಲ್ಲಿ ಅವನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಕೇಳುವಾಗ, ಅವನಿಗೆ ಉತ್ತರ ತಿಳಿದಿರುತ್ತದೆಯೆಂಬುದು ನಿಮಗೆ ತಿಳಿದಿರುತ್ತದೆ.
ಆದುದರಿಂದ, ಈ ವ್ಯಕ್ತಿಗೆ ಉತ್ತರ ತಿಳಿದಿದೆ ಮತ್ತು ನನಗೆ ಉತ್ತರ ತಿಳಿದಿಲ್ಲವೆಂಬುದನ್ನು ತಿಳಿದುಕೊಂಡು, ನಂತರ ಪ್ರಶ್ನೆ ಕೇಳುವುದು - ಅವನೊಬ್ಬ ನಿಜವಾದ ಅನ್ವೇಷಕ. ಇದು ಪ್ರಶ್ನೆಗಳನ್ನು ಕೇಳುವ ಜನರಲ್ಲಿನ ಆರನೆಯ ವಿಧ.
ಭಾರತದಲ್ಲಿರುವ ನಮ್ಮ ಶಾಸ್ತ್ರಗಳೆಲ್ಲಾ, ನಮ್ಮ ಧರ್ಮಗ್ರಂಥಗಳೆಲ್ಲಾ ಒಂದು ಪ್ರಶ್ನೆಯೊಂದಿಗೆ ಪ್ರಾರಂಭವಾಗಿವೆ. ಯಾವ ರೀತಿಯ ಪ್ರಶ್ನೆ? ಮೊದಲನೆಯ ರೀತಿಯದಲ್ಲ, ಎರಡನೆಯ ರೀತಿಯದಲ್ಲ, ಮೂರನೆಯ ರೀತಿಯದಲ್ಲ, ನಾಲ್ಕನೆಯ ರೀತಿಯದಲ್ಲ, ಐದನೆಯ ರೀತಿಯದಲ್ಲ, ಆದರೆ ಆರನೆಯ ರೀತಿಯ ಪ್ರಶ್ನೆ - ನನಗೆ ತಿಳಿಯದು, ನಾನು ತಿಳಿಯಲು ಬಯಸುತ್ತೇನೆ ಮತ್ತು ಈ ವ್ಯಕ್ತಿಗೆ ತಿಳಿದಿದೆ, ಆದುದರಿಂದ ನಾನು ಅವನಲ್ಲಿ ಪ್ರಶ್ನೆಯನ್ನು ಕೇಳುತ್ತೇನೆ. ಧರ್ಮಗ್ರಂಥಗಳಲ್ಲಿನ ಎಲ್ಲಾ ಜ್ಞಾನವೂ ವಿಚಾರಣೆಯ ಒಂದು ನಿಜವಾದ ಉತ್ಸಾಹದಿಂದ, ಪ್ರಶ್ನೆಗಳ ಮೂಲಕ ಪ್ರಾರಂಭವಾದವು.
ಒಮ್ಮೆ ಒಬ್ಬರು ಒಂದು ರೈಲು ನಿಲ್ದಾಣದಲ್ಲಿ ನಿಂತಿದ್ದರು ಮತ್ತು ಬಂದು ಹೋದ ಪ್ರತಿಯೊಂದು ರೈಲಿನ ಬಗ್ಗೆಯೂ ಟಿಕೆಟ್ ಕಲೆಕ್ಟರರಲ್ಲಿ ಕೇಳುತ್ತಾ ಇದ್ದರು. ಟಿಕೆಟ್ ಕಲೆಕ್ಟರರು ಮೂರರಿಂದ ನಾಲ್ಕು ಸಾರಿ ಅವರಿಗೆ ಉತ್ತರಿಸಿದರು ಮತ್ತು ಕಡೆಗೆ ಅವರಿಗೆ ಎಷ್ಟೊಂದು ಬಳಲಿತೆಂದರೆ ಅವರು, "ಬನ್ನಿ, ನಿಮಗೆ ಎಲ್ಲಿಗೆ ಹೋಗಬೇಕೆಂದು ಮಾತ್ರ ಹೇಳಿ" ಎಂದು ಹೇಳಿದರು. ಆ ವ್ಯಕ್ತಿಯಂದರು, "ಎಲ್ಲಿಗೂ ಇಲ್ಲ, ನಾನು ಕೇವಲ ಇನ್ನೊಂದು ಬದಿಗೆ ದಾಟಬೇಕು." ಆದುದರಿಂದ, ನಿಮಗೆ ಕೇವಲ ಇನ್ನೊಂದು ಬದಿಗೆ ದಾಟಬೇಕಿದ್ದರೆ, ನೀವು ಅಪ್ರಸ್ತುತ ಪ್ರಶ್ನೆಗಳನ್ನು ಕೇಳುತ್ತಾ ಇರುವುದು ನಿರರ್ಥಕ. ಬಹುತೇಕ ಜನರು ಮಾಡುವುದು ಇದನ್ನೇ, ಕೇವಲ ಸಮಯ ಕಳೆಯುವುದಕ್ಕಾಗಿ ಅಸಂಬದ್ಧ ವಿಷಯಗಳನ್ನು ಕೇಳುವುದು.
ಆದುದರಿಂದ, ನಾನು ಏನೆಲ್ಲಾ ಹೇಳಿರುವೆನೋ, ಅದರ ಬಗ್ಗೆ ವಿಚಾರ ಮಾಡಿ. ಅದರ ಬಗ್ಗೆ ಪುನಃ ಪುನಃ ಯೋಚಿಸಿ!
ಒಮ್ಮೆ ಕೆನಡಾದಲ್ಲಿ, ಸತ್ಸಂಗದಲ್ಲಿ ನಾನಂದೆ, ’೨+೧=೦’. ಇದರ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆ ನಡೆಯಿತು. ಅಲ್ಲಿ ಐ.ಐ.ಟಿ. ಯಂತಹ ಸ್ಥಳಗಳಿಂದ ಬಂದ ಎಲ್ಲಾ ಅಗ್ರ ಪ್ರಾಧ್ಯಾಪಕರಿದ್ದರು. ಅದು ಪ್ರತಿಯೊಬ್ಬರಿಗೂ ಅಷ್ಟೊಂದು ಮೋಜಿನ ವಿಷಯವಾಗಿತ್ತು - ಗುರುದೇವರು ’೨+೧=’, ಹೀಗೆ ಹೇಳಲು ಹೇಗೆ ಸಾಧ್ಯ?
ನೋಡಿ, ಅದು ಯಾರು ಹೇಳುತ್ತಾರೆಂಬುದರ ಮೇಲೆ ಕೂಡಾ ಅವಲಂಬಿಸಿದೆ. ಒಂದು ಮಗುವು ’೨+೧=೦’ ಎಂದು ಹೇಳಿದರೆ, ಆಗ ನಾವು ಅದು ತಪ್ಪೆಂದು ಹೇಳಬಹುದು. ಆದರೆ ಒಬ್ಬರು ಮಹಾನ್ ಪ್ರಾಧ್ಯಾಪಕರು ’೨+೧=೦’ ಎಂದು ಹೇಳಿದರೆ ಆಗ ನಾವು, ’ಇಲ್ಲ, ಇದು ಸರಿಯಲ್ಲ’ ಎಂದು ಹೇಳಲು ಸಾಧ್ಯವಿಲ್ಲ.
ನೀವು ಇದರ ಬಗ್ಗೆ ವಿಚಾರ ಮಾಡಬೇಕು. ನೀವು ಇದರ ಬಗ್ಗೆ ಯೋಚಿಸಬೇಕು. ಇದರ ಹಿಂದೆ ಏನೋ ರಹಸ್ಯವಿರಬಹುದು ಮತ್ತು ಅದಕ್ಕಾಗಿಯೇ ಅವರು ಹಾಗೆ ಹೇಳಿದರು. ಅದನ್ನು ಹಾಗೆಯೇ ಸುಮ್ಮನೇ ಹೇಳಲು ಅವರೊಬ್ಬರು ಮೂರ್ಖರಲ್ಲ.
ಮೇಲಿನಿಂದ ನೀವು ಅದರ ಕಡೆಗೆ ನೋಡಿದಾಗ ಅದು ಅಸಾಧ್ಯವೆಂದು ನಿಮಗನ್ನಿಸಬಹುದು, ಆದರೆ ಪ್ರತಿಯೊಂದು ಅಸಾಧ್ಯತೆಯಲ್ಲೂ ಸ್ವಲ್ಪ ಸಾಧ್ಯತೆಯಿರುತ್ತದೆ. ಹಲವಾರು ಹೊಸ ಸಾಧ್ಯತೆಗಳು ತೆರೆಯುವುದು ನೀವು ಕುಳಿತುಕೊಂಡು ವಿಚಾರ ಮಾಡಿದಾಗ.
ಆದುದರಿಂದ ಆ ದಿನ, ಕೇವಲ ’೨+೧=೦’ ಆಗುವುದು ಹೇಗೆಂದು ಯೋಚಿಸುವ ಮೂಲಕ ಬಹಳಷ್ಟು ಜ್ಞಾನವು ತೆರೆದುಕೊಂಡಿತು. ಇದರೊಂದಿಗೆ ನಾವು ಒಂದು ಸಂಪೂರ್ಣ ಚಿತ್ರ ಸುರುಳಿಯನ್ನು ಮುಗಿಸಿದೆವು. ಅದು ಬಹಳ ಹಾಸ್ಯಾತ್ಮಕವಾಗಿತ್ತು. ಇಡಿಯ ಎರಡೂವರೆ ಗಂಟೆಗಳ ಉದ್ದಕ್ಕೂ ಎಲ್ಲರೂ ನಗುತ್ತಿದ್ದರು.
ಜ್ಞಾನವನ್ನು ಯಾರು ನೀಡುತ್ತಿದ್ದಾರೆ, ಯಾರು ಅದನ್ನು ಹೇಳುತ್ತಿದ್ದಾರೆ ಎಂಬುದರ ಮೇಲೆ ಅದು ಅವಲಂಬಿಸಿದೆ. ಒಬ್ಬ ಬಹಳ ಬುದ್ಧಿವಂತ ವ್ಯಕ್ತಿಯು ’೨+೧=೦’ ಎಂದು ಹೇಳಿದರೆ, ನೀವದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನೀವು ಅದರೊಳಗೆ ಹೋಗಬೇಕು ಮತ್ತು ವಿಮರ್ಶೆ ಮಾಡಬೇಕು. ಇದು ಕೋನ್ (ಧ್ಯಾನಕ್ಕೆ ಸಹಾಯ ಮಾಡಲು ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಲಿರುವ ಒಂದು ದಾರಿಯಾಗಿ ಜ಼ೆನ್ ಬೌದ್ಧಧರ್ಮದಲ್ಲಿ ಉಪಯೋಗಿಸಲಾಗುವ ಒಂದು ಗೊಂದಲದ, ವಿರೋಧಾಭಾಸದ ಹೇಳಿಕೆ ಅಥವಾ ಕಥೆ) ಎಂದು ಕರೆಯಲ್ಪಡುತ್ತದೆ. ಹಿಂದಿಯಲ್ಲಿ ಇದು ಪಹೇಲಿ (ಒಗಟು) ಎಂದು ಕರೆಯಲ್ಪಡುತ್ತದೆ.
ನೋಡಿ, ಜೀವನವು ಒಂದು ಒಗಟಿನಂತೆ ಮತ್ತು ಹಲವು ಸಲ ಜ್ಞಾನವೂ ಕೂಡಾ ನಮ್ಮ ಬಳಿಗೆ ಒಂದು ಒಗಟಿನ ರೂಪದಲ್ಲಿ ಬರುತ್ತದೆ. ಒಳಗೆ ಅಡಗಿರುವ ರಹಸ್ಯಗಳನ್ನು; ಒಳಗೆ ಅಡಗಿರುವ ಅರ್ಥಗಳನ್ನು ತಿಳಿಯಲು, ಬುದ್ಧಿಯ ತೀಕ್ಷ್ಣತೆಯನ್ನು ಉಪಯೋಗಿಸಿಕೊಂಡು ನಾವು ಜ್ಞಾನವನ್ನು ವಿಮರ್ಶೆ ಮಾಡಬೇಕು ಮತ್ತು ಅದನ್ನು ಅಗಿಯಬೇಕು.
ಭಾರತದಲ್ಲಿ, ಅಂತಹ ಹಲವಾರು ಮಹಾನ್ ಶಿಕ್ಷಕರಿದ್ದರು ಮತ್ತು ಈ ಶಿಕ್ಷಕರು, ಬಹಳ ಬುದ್ಧಿವಂತರಾದವರಿಗೆ ಎಲ್ಲವನ್ನೂ ಒಗಟುಗಳ ರೂಪದಲ್ಲಿ ತಿಳಿಸುತ್ತಿದ್ದರು. ಆದುದರಿಂದ ಅವರು ಜ್ಞಾನವನ್ನು ಪಡೆಯಬೇಕಾದರೆ, ಅವರು ಮೊದಲು ಯೋಚಿಸಿ ಒಗಟನ್ನು ಬಿಡಿಸಬೇಕಾಗಿತ್ತು. ನಂತರ ಅವರು ಜ್ಞಾನವನ್ನು ಪಡೆಯುತ್ತಿದ್ದರು.
ನೀವು ವಿಕ್ರಮಾದಿತ್ಯ ಮತ್ತು ಬೇತಾಳನ ಬಗ್ಗೆ ಕೇಳಿರಬಹುದು; ಮಕ್ಕಳಿಗೆ ಬಹಳ ಲಾಭದಾಯಕವಾಗುವ ಅಂತಹ ಹಲವಾರು ಒಗಟುಗಳು ನಮ್ಮ ದೇಶದಲ್ಲಿವೆ. ಅದು ಅವರ ಬುದ್ಧಿಯನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಅವರ ಆಲೋಚನಾ ಸಾಮರ್ಥ್ಯವೂ ಕೂಡಾ ಬಹಳ ತೀಕ್ಷ್ಣವಾಗುತ್ತದೆ.
ಕೃಷ್ಣ ಪರಮಾತ್ಮನೇ, ಅರ್ಜುನನಿಗೆ ಎಲ್ಲಾ ಜ್ಞಾನವನ್ನು ನೀಡಿದ ಬಳಿಕ ಅಂದನು, "ನನಗೆ ಏನೆಲ್ಲಾ ಹೇಳಬೇಕಾಗಿತ್ತೋ ಅದನ್ನೆಲ್ಲಾ ನಾನು ಹೇಳಿರುವೆನು, ಈಗ ನೀನು ಅದರ ಬಗ್ಗೆ ಯೋಚಿಸು. ಅದರೊಳಕ್ಕೆ ಆಳವಾಗಿ ಹೋಗು, ಚಿಂತನೆ ಮಾಡು ಮತ್ತು ಅದು ಸರಿಯೆಂದು ನಿನಗೆ ಅನ್ನಿಸಿದರೆ, ಆಗ ನೀನು ಅದನ್ನು ಸ್ವೀಕರಿಸು."
ಆದುದರಿಂದ ಕೇಳಿಸಿಕೊಂಡ ಬಳಿಕ ನೀವು ಚಿಂತನೆ ಮಾಡಬೇಕು. ಕೇವಲ ಕೇಳಿಸಿಕೊಳ್ಳುವುದಷ್ಟೇ ಸಾಲದು, ಅದನ್ನು ಜೀರ್ಣಿಸಿಕೊಳ್ಳುವುದು ಕೂಡಾ ಮುಖ್ಯ. ಅದರ ಬಗ್ಗೆ ಪುನಃ ಪುನಃ ಯೋಚಿಸಿ. ಅರ್ಥದ ಹಿಂದಿರುವ ಅರ್ಥವನ್ನು ತಿಳಿಯಿರಿ, ಮತ್ತು ಅದರ ಬಗ್ಗೆ ಚಿಂತನೆ ಮಾಡದೆಯೇ ನೀವದನ್ನು ಸ್ವೀಕರಿಸಲೂಬಾರದು ತಿರಸ್ಕರಿಸಲೂಬಾರದು. ನೀವದನ್ನು ತಿರಸ್ಕರಿಸಿದರೆ, ಆಗ ಅದು ತಪ್ಪು ಮತ್ತು ನೀವದನ್ನು ಸುಮ್ಮನೇ ಸ್ವೀಕರಿಸಿಕೊಂಡು ಕುಳಿತರೆ, ಅದು ಕೂಡಾ ತಪ್ಪು.
ನೀವು ಕೇಳಿಸಿಕೊಳ್ಳಬೇಕು, ಚಿಂತನೆ ಮಾಡಬೇಕು ಮತ್ತು ನಂತರ ಸ್ವೀಕರಿಸಬೇಕು. ಆಗ ಜ್ಞಾನವು ನಿಮ್ಮೊಳಗೆ ಸ್ಥಾಪಿತವಾಗುತ್ತದೆ.
ನೀವದನ್ನು ಕೇಳಿಸಿಕೊಂಡ ಕೂಡಲೇ ಸ್ವೀಕರಿಸಿದರೆ, ಆಗ ಅಲ್ಲಿ ಅದರ ಬಗ್ಗೆ ವಿಚಾರ ಮಾಡುವ ಅವಕಾಶವಿರುವುದಿಲ್ಲ, ಮತ್ತು ನೀವು, "ಇಲ್ಲ, ಇದು ತಪ್ಪು" ಎಂದು ಹೇಳುತ್ತಾ ಕೂಡಲೇ ಅದನ್ನು ತಿರಸ್ಕರಿಸಿದರೆ, ಆಗ ಕೂಡಾ ಅಲ್ಲಿ  ಚಿಂತನೆ ಇರುವುದಿಲ್ಲ.
ಆದುದರಿಂದ ಮೊದಲು ಕೇಳಿಸಿಕೊಳ್ಳಿ, ಸ್ವೀಕರಿಸಿ ಮತ್ತು ನಂತರ ಅದರ ಬಗ್ಗೆ ಚಿಂತನೆ ಮಾಡಿ, ಹಾಗೂ ಅದರ ಬಗ್ಗೆ ಚಿಂತನೆ ಮಾಡಿದ ಬಳಿಕ ಅದನ್ನು ಸ್ವೀಕರಿಸಿ.