ಗುರುವಾರ, ನವೆಂಬರ್ 29, 2012

ಆರಾಧನೆ


೨೯ ನವೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ದಯವಿಟ್ಟು ನಮಗೆ ಹನುಮಂತನ ಬಗ್ಗೆ ಸ್ವಲ್ಪ ಹೇಳಿ.
ಶ್ರೀ ಶ್ರೀ ರವಿ ಶಂಕರ್: ರಾಮಾಯಣವು ನಿಮ್ಮದೇ ಶರೀರದಲ್ಲಿ ಆಗುತ್ತಿದೆಯೆಂದು ಹೇಳಲಾಗಿದೆ. ನಿಮ್ಮ ಆತ್ಮವು ರಾಮ, ನಿಮ್ಮ ಮನಸ್ಸು ಸೀತೆ, ನಿಮ್ಮ ಉಸಿರು ಅಥವಾ ಪ್ರಾಣ-ಶಕ್ತಿ ಹನುಮಂತ, ನಿಮ್ಮ ಅರಿವು ಲಕ್ಷ್ಮಣ ಮತ್ತು ನಿಮ್ಮ ಅಹಂಕಾರವು ರಾವಣ. ಮನಸ್ಸು ರಾವಣ(ಅಹಂಕಾರ)ನಿಂದ ಅಪಹರಿಸಲ್ಪಟ್ಟಾಗ ಆತ್ಮದಲ್ಲಿ ಚಡಪಡಿಕೆಯುಂಟಾಯಿತು. ಈಗ, ಆತ್ಮವು ತಾನಾಗಿಯೇ ಮನಸ್ಸನ್ನು ತಲುಪಲು ಸಾಧ್ಯವಿಲ್ಲ, ಅದು ಪ್ರಾಣದ ಸಹಾಯವನ್ನು ತೆಗೆದುಕೊಳ್ಳಲೇಬೇಕು. ಪ್ರಾಣದ ಸಹಾಯದೊಂದಿಗೆ ಮನಸ್ಸು ಆತ್ಮದೊಂದಿಗೆ ಮತ್ತೆ ಒಂದಾಯಿತು ಮತ್ತು ಅಹಂಕಾರವು ಮಾಯವಾಯಿತು. ಇದು ಕಥೆಯ ಆಧ್ಯಾತ್ಮಿಕ ಮಹತ್ವ.
ಇಲ್ಲದಿದ್ದರೆ, ಹನುಮಂತನು ಒಬ್ಬ ಕೋತಿಯಾಗಿದ್ದನು ಮತ್ತು ಆ ದಿನಗಳಲ್ಲಿ ಕೋತಿಗಳು ಕೂಡಾ ಬಹಳ ಬುದ್ಧಿಶಾಲಿ ಹಾಗೂ ಬಹಳ ದೊಡ್ಡ ಭಕ್ತರಾಗಿದ್ದವು. ಭಕ್ತರು ಗುರುವಿಗಿಂತಲೂ ಎಷ್ಟೋ ಹೆಚ್ಚು ಶಕ್ತಿಶಾಲಿಗಳು. ಇದೊಂದು ವಾಸ್ತವ. ನಿಜವಾದ ಭಕ್ತರು ದೇವರಿಗಿಂತಲೂ ಬಹಳ ಹೆಚ್ಚು ಶಕ್ತಿಶಾಲಿಗಳು.

ಪ್ರಶ್ನೆ: ಗುರುದೇವ, ನಾವು ಭಗವಂತ ರಾಮನ ಹಾಗೂ ಕೃಷ್ಣ ಪರಮಾತ್ಮನ ಸಂಪೂರ್ಣ ಶರೀರವನ್ನು ಆರಾಧಿಸುತ್ತೇವೆ, ಆದರೆ ನಾವು ಭಗವಂತ ಶಿವನ ಲಿಂಗವನ್ನು ಮಾತ್ರ ಪೂಜಿಸುತ್ತೇವೆ, ಇದು ಯಾಕೆ ಹೀಗೆ?
ಶ್ರೀ ಶ್ರೀ ರವಿ ಶಂಕರ್: ಲಿಂಗವು ಭಗವಂತ ಶಿವನ ಒಂದು ಸಾಂಕೇತಿಕ ನಿರೂಪಣೆ ಅಥವಾ ಸ್ವರೂಪ. ಮೊದಲಿಗೆ, ಲಿಂಗವೆಂದರೇನು ಎಂಬುದನ್ನು ನೀನು ತಿಳಿ. ಲಿಂಗವು ಒಂದು ಗುರುತು.
ಜನನಾಂಗಗಳು ಕೂಡಾ ಲಿಂಗವೆಂದು ಕರೆಯಲ್ಪಡುವುದು ಯಾಕೆ? ಅದು ಯಾಕೆಂದರೆ, ಒಂದು ಮಗುವು ಗಂಡೋ ಅಥವಾ ಹೆಣ್ಣೋ ಎಂದು ಒಬ್ಬರು ತಿಳಿಯಬಹುದಾದುದು ಈ ಚಿಹ್ನೆಯ ಮೂಲಕ. ಒಂದು ಮಗುವು ಜನಿಸಿದಾಗ, ಅದು ಗಂಡೋ ಹೆಣ್ಣೋ ಎಂಬುದನ್ನು ಗುರುತಿಸಲು ನೀವು ಕೇವಲ ಒಂದೇ ಒಂದು ಪ್ರದೇಶವನ್ನು ನೋಡುವಿರಿ. ಆದುದರಿಂದ ಅದೊಂದು ಗುರುತಿನ ಚಿಹ್ನೆ.
ಭಗವಂತ ಶಿವನು ಬ್ರಹ್ಮಾಂಡದಲ್ಲಿಡೀ ವ್ಯಕ್ತವಾಗಿರುವನು, ಹಾಗಾದರೆ ಒಬ್ಬನು ಅವನನ್ನು ಗುರುತಿಸುವುದು ಅಥವಾ ಅವನೊಂದಿಗೆ ಸಂಬಂಧ ಕಲ್ಪಿಸುವುದು ಹೇಗೆ? ಇದಕ್ಕಾಗಿಯೇ ಪ್ರಾಚೀನ ದಿನಗಳಲ್ಲಿ, ಬುದ್ಧಿವಂತ ಋಷಿಗಳು ಒಂದು ಪಿಂಡವನ್ನು ಅಥವಾ ಒಂದು ಉರುಟಾದ ಅಥವಾ ಅಂಡಾಕಾರದ ಕಲ್ಲಿನ ತುಂಡನ್ನು ಇರಿಸುತ್ತಿದ್ದರು ಮತ್ತು ಅದನ್ನು ಭಗವಂತ ಶಿವನೊಂದಿಗೆ ಗುರುತಿಸಿಕೊಳ್ಳುತ್ತಿದ್ದರು.
ಹೀಗೆ, ಲಿಂಗ ಮತ್ತು ಯೋನಿ (ಇಲ್ಲಿ, ಕಲ್ಲು ಅಥವಾ ಲಿಂಗವು ಯಾವುದರ ಮೇಲೆ ಕುಳಿತಿದೆಯೋ, ಶಿವಲಿಂಗದ ಆ ಆಧಾರದ ಬಗ್ಗೆ)ಗಳನ್ನಿರಿಸಲಾಯಿತು, ಯಾಕೆಂದರೆ ಇದರಿಂದ ಗಂಡು ಮತ್ತು ಹೆಣ್ಣನ್ನು ಗುರುತಿಸಲಾಯಿತು.
ಈಗ, ನಿರಾಕಾರನಾದ, ಬ್ರಹ್ಮಾಂಡದ ಪ್ರಭುವನ್ನು ನೀವು ಹೇಗೆ ವಿವರಿಸುವಿರಿ? ಪ್ರಾಚೀನ ಕಾಲದಲ್ಲಿ, ಭಗವಂತ ಶಿವನು ಒಂದು ತ್ರಿಶೂಲವನ್ನು ಹಿಡಿದ ಅಥವಾ ಹಾಗಿರುವ ಯಾವುದೇ ರೂಪವಿರಲಿಲ್ಲ. ಪ್ರಾಚೀನ ದಿನಗಳಲ್ಲಿ, ಕೇವಲ ಒಂದು ಪಿಂಡವನ್ನು ಇಟ್ಟಿರಲಾಗುತ್ತಿತ್ತು ಮತ್ತು ನಂತರ ಮಂತ್ರಗಳನ್ನು ಉಚ್ಛರಿಸುವುದರೊಂದಿಗೆ ಚೈತನ್ಯ ಶಕ್ತಿಯನ್ನು ಪಿಂಡದಲ್ಲಿ ಜಾಗೃತಗೊಳಿಸಲಾಗುತ್ತಿತ್ತು ಮತ್ತು ಪ್ರಕಟಗೊಳಿಸಲಾಗುತ್ತಿತ್ತು. ಪೂಜಿಸಲಾಗುತ್ತಿದ್ದುದು ಹೀಗೆ. ಮೂರ್ತಿಗಳು ಸೃಷ್ಟಿಸಲ್ಪಟ್ಟುದು ಬಹಳ ಸಮಯದ ನಂತರ ಮಾತ್ರ.
ನಂತರ ಏನಾಯಿತು? ಪಿಂಡದ ಮೇಲೆ ಜನರು ಕಣ್ಣುಗಳು, ಮುಖ, ಮೊದಲಾದವುಗಳನ್ನು ಚಿತ್ರಿಸಲು ಪ್ರಾರಂಭಿಸಿದರು. ಪಿಂಡದ ಮೇಲೆ ಒಂದು ಮುಖವನ್ನು ಚಿತ್ರಿಸುವ ಪದ್ಧತಿಯು ಮೊದಲಿಗೆ ಇರಲಿಲ್ಲ. ಅದೇ ರೀತಿಯಲ್ಲಿ ಭಗವಂತ ವಿಷ್ಣುವನ್ನು, ಅವನ ಪಾದಗಳಿಗೆ ಪೂಜೆ ಮಾಡುವುದರ ಮೂಲಕ ಆರಾಧಿಸಲಾಗುತ್ತಿತ್ತು. ನೀವು ಗಯೆಗೆ ಹೋದರೆ (ಬಿಹಾರದ ಎರಡನೆಯ ಅತ್ಯಂತ ದೊಡ್ಡ ನಗರ) ಅಲ್ಲಿನ ಜನರು ಹೇಳುವರು, ’ವಿಷ್ಣು ಪಾದ’, ಕೇವಲ, ಭಗವಂತ ವಿಷ್ಣುವಿನ ಪಾದಗಳು ಮಾತ್ರ ಪೂಜಿಸಲ್ಪಡುತ್ತವೆ.
ಮೂರ್ತಿಗಳಿಗಿಂತ ಹೆಚ್ಚು ಪ್ರಧಾನವಾದುದು ಯಂತ್ರ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ದೇವತೆಗೂ ಒಂದು ಯಂತ್ರ ಮತ್ತು ಒಂದು ಮಂತ್ರ ಮೀಸಲಾಗಿದೆ ಮತ್ತು ಅವರನ್ನು ಪೂಜಿಸುವ ವಿಧಾನ ಅಥವಾ ಶಾಸ್ತ್ರವು ತಂತ್ರವೆಂದು ಕರೆಯಲ್ಪಡುತ್ತದೆ. ಅದರ ಯಂತ್ರವನ್ನು ಪ್ರತಿಷ್ಠಾಪಿಸುವ ವರೆಗೆ ಮೂರ್ತಿಗೆ ಅದರ ಆಧ್ಯಾತ್ಮಿಕ ಶಕ್ತಿಯು ದೊರೆಯುವುದಿಲ್ಲ, ಮತ್ತು ಮಂತ್ರಗಳ ಉಚ್ಛಾರಣೆಯ ಮೂಲಕ ಶಕ್ತಿಯನ್ನು ಕೊಡುವಲ್ಲಿ ವರೆಗೆ ಯಂತ್ರಕ್ಕೆ ಯಾವುದೇ ಶಕ್ತಿಯಿರುವುದಿಲ್ಲ. ಅದಕ್ಕಾಗಿಯೇ ಪ್ರತಿಯೊಂದು ದೇವಾಲಯದಲ್ಲಿ ಮೊದಲನೆಯದಾಗಿ ಒಂದು ಯಂತ್ರವನ್ನು ಪ್ರತಿಷ್ಠಾಪಿಸಲಾಗುತ್ತದೆ, ಮತ್ತು ನಂತರ ಅದರ ಮೇಲೆ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ. ದೇವಾಲಯವನ್ನು ಸಂದರ್ಶಿಸುವವರಲ್ಲಿ ಭಕ್ತಿಯ ಒಂದು ಆಳವಾದ ಭಾವನೆಯನ್ನು ಆವಾಹನೆ ಮಾಡುವುದಕ್ಕಾಗಿ ಇದನ್ನು ಮಾಡಲಾಗುತ್ತದೆ.
ಮೊದಲಲ್ಲಿ ಕೂಡಾ, ಸನಾತನ ಧರ್ಮದಲ್ಲಿ (ಹಿಂದೂ ಧರ್ಮದ ಮೊದಲ ಹೆಸರು) ಯಾವುದೇ ಮೂರ್ತಿಗಳಾಗಲೀ ಅಥವಾ ಮೂರ್ತಿ ಪೂಜೆಯಾಗಲೀ ಇರಲಿಲ್ಲ, ಆದರೆ ಕೇವಲ ಹವನಗಳು ಮಾಡಲ್ಪಡುತ್ತಿದ್ದವು ಮತ್ತು ಭಗವಂತ ಶಿವನ ಸಾನ್ನಿಧ್ಯವನ್ನು ಸ್ಥಾಪಿಸಲು ಅವನ ಪಿಂಡವನ್ನು ಇರಿಸಲಾಗುತ್ತಿತ್ತು. ಅಷ್ಟೇ, ಬೇರೇನನ್ನೂ ಮಾಡುತ್ತಿರಲಿಲ್ಲ. ಮೂರ್ತಿಗಳನ್ನು ಸ್ಥಾಪಿಸುವ ಪದ್ಧತಿಯು ಬಂದುದು ಆನಂತರವಷ್ಟೇ.
ಭಗವಂತ ಗಣೇಶನನ್ನು ಒಂದು ಅಡಿಕೆಯಲ್ಲಿ ನೋಡಲಾಗುತ್ತಿತ್ತು, ಭಗವಂತ ಶಿವನನ್ನು ಒಂದು ಪಿಂಡದಲ್ಲಿ ನೋಡಲಾಗುತ್ತಿತ್ತು ಮತ್ತು ದೇವಿಯನ್ನು ಒಂದು ಕಲಶದ ಮೇಲೆ ತೆಂಗಿನಕಾಯಿಯನ್ನಿಟ್ಟು ಪೂಜಿಸಲಾಗುತ್ತಿತ್ತು. ಸನಾತನ ಧರ್ಮದ ಪ್ರಕಾರ ಇದಾಗಿತ್ತು ವಿಧಾನ.
ಇವತ್ತು ಕೂಡಾ ಒಂದು ಮೂರ್ತಿಯನ್ನು ಕಲಶವಿಲ್ಲದೆಯೇ ಪೂಜಿಸುವುದಕ್ಕೆ ಯಾವುದೇ ಮಹತ್ವವಿಲ್ಲ. ಕಲಶದಲ್ಲಿನ ನೀರನ್ನು ಮೂರ್ತಿಯ ಮೇಲೆ ಸುರಿಯಲಾಗುತ್ತದೆ. ಇದು ಪದ್ಧತಿ.
ಈಗ, ಮೂರ್ತಿಗಳನ್ನಿರಿಸುವ ಅಭ್ಯಾಸವು ಯಾಕೆ ಪ್ರಾರಂಭವಾಯಿತು?
ಇದು ಯಾಕೆಂದರೆ, ಮೂರ್ತಿಯನ್ನು ನೋಡುವುದರಿಂದ ಭಕ್ತಿಯ ಒಂದು ಭಾವನೆಯು ಒಳಗಿನಿಂದ ಏಳುವುದು.
ಇನ್ನೊಂದು ಕಾರಣವೆಂದರೆ, ಬೌದ್ಧರು ಮತ್ತು ಜೈನರು ತಮ್ಮ ದೇವಾಲಯಗಳನ್ನು ಮಾಡಿದಾಗ ಪೂಜಾವೇದಿಕೆಯಲ್ಲಿ ಅವರು ಬಹಳ ಸುಂದರವಾದ ಮೂರ್ತಿಗಳನ್ನು ಇಡುತ್ತಿದ್ದರು. ಆಗ, ಸನಾತನ ಧರ್ಮವನ್ನು ಅನುಸರಿಸುತ್ತಿದ್ದವರು, ತಾವು ಕೂಡಾ ಇಂತಹುದನ್ನೇನಾದರೂ ಮಾಡಬೇಕೆಂದು ಅಂದುಕೊಂಡರು. ಆದುದರಿಂದ ಅವರು ಕೂಡಾ ಇದನ್ನೇ ಅನುಸರಿಸಿದರು ಮತ್ತು ಭಗವಂತ ವಿಷ್ಣು, ಭಗವಂತ ರಾಮ ಹಾಗೂ ಭಗವಂತ ಕೃಷ್ಣನ ವಿವಿಧ ಮೂರ್ತಿಗಳನ್ನು ಸ್ಥಾಪಿಸಲು ತೊಡಗಿದರು. ಭಗವದ್ಗೀತೆ ಅಥವಾ ರಾಮಾಯಣದಲ್ಲಿ, ಪೂಜೆಗಾಗಿ ಮೂರ್ತಿಗಳನ್ನು ಸ್ಥಾಪಿಸುವ ಒಂದು ಅಭ್ಯಾಸದ ಬಗ್ಗೆ ಯಾವುದೇ ಉಲ್ಲೇಖವೂ ನಿಮಗೆ ಸಿಗುವುದಿಲ್ಲ. ಕೇವಲ ಶಿವಲಿಂಗವು ಸ್ಥಾಪಿಸಲ್ಪಟ್ಟಿತು. ಅದಕ್ಕಾಗಿಯೇ ಪ್ರಾಚೀನ ಕಾಲದಲ್ಲಿ ಕೇವಲ ಶಿವಲಿಂಗ ಮಾತ್ರವಿತ್ತು. ಅದು ಕೃಷ್ಣ ಪರಮಾತ್ಮ, ಭಗವಂತ ರಾಮ ಮತ್ತು ಇತರ ಎಲ್ಲರಿಂದಲೂ ಪೂಜಿಸಲ್ಪಟ್ಟಿತು.
ನಿಮಗೆ ಗೊತ್ತಾ, ಪವಿತ್ರ ಕಾಬಾದಲ್ಲಿರುವ (ಮೆಕ್ಕಾ, ಸೌದಿ ಅರೇಬಿಯಾದಲ್ಲಿರುವ ಪವಿತ್ರ ದೇವಾಲಯದ ಬಗ್ಗೆ) ಕಲ್ಲು ಕೂಡಾ ಭಗವಂತ ಶಿವನೆಂಬುದು?
ಭಗವಂತ ವಿಷ್ಣುವಿನ ಮೂರು ಹೆಜ್ಜೆಗಳ ಬಗ್ಗೆ (ಅವನ ಐದನೆಯ ಅವತಾರವಾದ ವಾಮನಾವತಾರದಲ್ಲಿ) ಭವಿಷ್ಯ ಪುರಾಣದಲ್ಲಿ ಒಂದು ಶ್ಲೋಕವಿದೆ. ಭಗವಂತನ ಮೊದಲ ಹೆಜ್ಜೆಯು ಗಯೆಯಲ್ಲಾಗಿತ್ತು ಮತ್ತು ಎರಡನೆಯ ಹೆಜ್ಜೆಯು ಮೆಕ್ಕಾದಲ್ಲಾಗಿತ್ತು. ಸಂತ ಮೊಹಮ್ಮದರು ಬರುವುದಕ್ಕೆ ಎಷ್ಟೋ ಮೊದಲು ಜನರು ಮೆಕ್ಕಾಕ್ಕೆ ತೀರ್ಥಯಾತ್ರೆ ಹೋಗುತ್ತಿದ್ದರು. ಅದಕ್ಕಾಗಿಯೇ ಯಾತ್ರಿಕರು ಹೋಗಿ ಕಲ್ಲಿಗೆ ಮುತ್ತು ಕೊಡುತ್ತಾರೆ ಮತ್ತು ಅದಕ್ಕೆ ಏಳು ಸಾರಿ ಸುತ್ತು ಬರುತ್ತಾರೆ. ಶಿವ ಮಂದಿರಗಳಲ್ಲಿ ಕೂಡಾ ಅದೇ ರೀತಿ ಮಾಡಲಾಗುತ್ತದೆ. ಅಲ್ಲಿ ಜನರು ಹೊಲಿಯದಿರುವ ಬಿಳಿಯ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಹೋಗಿ ಕಲ್ಲನ್ನು ಪೂಜಿಸುತ್ತಾರೆ.
ಇದು ಪ್ರಾಚೀನ ಕಾಲದಿಂದಲೂ ಅಭ್ಯಾಸ ಮಾಡುತ್ತಾ ಬಂದಿರುವಂತಹ ಪದ್ಧತಿಗಳಂತೆಯೇ. ಹೀಗೆ, ಗಯೆ ಮತ್ತು ಮೆಕ್ಕಾಗಳಲ್ಲಿ ಹೇಗೆ ಪೂಜೆ ಮಾಡುವರೋ ಅವುಗಳಲ್ಲಿ ಗಮನಾರ್ಹವಾದ ಹೋಲಿಕೆಗಳಿವೆ: ಒಂದೇ ರೀತಿಯ ಕಲ್ಲನ್ನು ಸ್ಥಾಪಿಸಲಾಗಿದೆ ಮತ್ತು ಪೂಜಿಸಲಾಗುತ್ತಿದೆ. ಸುತ್ತು ಬರುವಿಕೆಯನ್ನು ಒಂದೇ ರೀತಿ ಮಾಡಲಾಗುತ್ತದೆ ಮತ್ತು ಒಂದೇ ರೀತಿಯ ಹೊಲಿಯದಿರುವ ಬಟ್ಟೆಗಳನ್ನು ಧರಿಸಲಾಗುತ್ತದೆ.
ಇವುಗಳೆಲ್ಲವೂ ಒಂದಲ್ಲ ಒಂದು ಕಡೆಯಲ್ಲಿ ಜೊತೆಗೂಡಿವೆ ಮತ್ತು ಸಂಪರ್ಕ ಹೊಂದಿವೆ.

ಪ್ರಶ್ನೆ: ಶಿವಲಿಂಗವು ಯಾಕೆ ಒಂಟಿಯಾಗಿಯಲ್ಲದೆ, ಯೋನಿಯೊಂದಿಗೆ ಪೂಜಿಸಲ್ಪಡುತ್ತದೆ?
ಶ್ರೀ ಶ್ರೀ ರವಿ ಶಂಕರ್: ನಾನು ಮೊದಲೇ ಹೇಳಿದಂತೆ, ಎರಡನ್ನೂ ಶಿವ ಮತ್ತು ಶಕ್ತಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಅವುಗಳು ಪ್ರತ್ಯೇಕವಾಗಿ ಕೂಡಾ ಪೂಜಿಸಲ್ಪಡುತ್ತವೆ. ಕೇವಲ ಪಿಂಡ ಮಾತ್ರವಿರುವ ಹಲವಾರು ಸ್ಥಳಗಳಿವೆ.

ಪ್ರಶ್ನೆ: ಗುರುದೇವ, ವೈದಿಕ ಕಾಲದಲ್ಲಿ, ಭಗವಂತ ಬ್ರಹ್ಮ, ಭಗವಂತ ವಿಷ್ಣು ಮತ್ತು ಭಗವಂತ ಶಿವ, ಇವರು ಇದ್ದ ಬಗ್ಗೆ ಉಲ್ಲೇಖವಿಲ್ಲ. ೩೫೦೦ ಬಿ.ಸಿ ಮತ್ತು ೨೮೦೦ ಬಿ.ಸಿ ಗಳ ನಡುವಿನ ಕಾಲವನ್ನು ಭಾರತದ ಚರಿತ್ರೆಯಲ್ಲಿ ವೈದಿಕ ಕಾಲ ಎಂದು ಹೇಳಲಾಗುತ್ತದೆ. ೨೮೦೦ ಬಿ.ಸಿ ಮತ್ತು ೨೬೦೦ ಬಿ.ಸಿ ಗಳ ನಡುವಿನ ಕಾಲವನ್ನು ರಾಮಾಯಣದ ಯುಗವೆಂದು ಕರೆಯಲಾಗುತ್ತದೆ. ಈ ಸಂಪೂರ್ಣ ವ್ಯಾಪ್ತಿಯಲ್ಲಿ, ಭಗವಂತ ಶಿವನ ಪೂಜೆಯ ಬಗ್ಗೆ ಯಾವುದೇ ಉಲ್ಲೇಖವಾಗಲೀ ಅಥವಾ ಪುರಾವೆಯಾಗಲೀ ಇಲ್ಲ. ಹಾಗದರೆ, ಭಗವಂತ ಶಿವನನ್ನು ಲಿಂಗ ಮತ್ತು ಯೋನಿಯ ರೂಪದಲ್ಲಿ ಪೂಜಿಸುವ ಪದ್ಧತಿಯು ಆರಂಭವಾದುದು ನಿಜವಾಗಿ ಯಾವಾಗ, ಮತ್ತು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಭಾರತ್ ಗ್ಯಾನ್ ಎಂಬ ಒಂದು ಪುಸ್ತಕವಿದೆ, ಅದನ್ನು ನೀನು ಓದಬೇಕು. ನೀನು ಹೇಳುತ್ತಿರುವ ೨,೮೦೦ ವರ್ಷಗಳ ಕಾಲವು ನಿಖರವಾಗಿಲ್ಲ. ಕೃಷ್ಣ ಪರಮಾತ್ಮನು ಸುಮಾರು ೫,೨೦೦ ವರ್ಷಗಳ ಹಿಂದೆ ಇದ್ದನು ಮತ್ತು ಭಗವಂತ ರಾಮನು ಸುಮಾರು ೭,೫೦೦ ವರ್ಷಗಳ ಹಿಂದೆ ಇದ್ದನು, ಮತ್ತು ಅದಕ್ಕಿಂತ ಕನಿಷ್ಠಪಕ್ಷ ೧೦,೦೦೦ ವರ್ಷಗಳ ಮೊದಲು ವೇದಗಳನ್ನು ಕಲ್ಪಿಸಲಾಯಿತು ಮತ್ತು ಬರೆಯಲಾಯಿತು.
ನನ್ನ ಸಲಹೆಯೆಂದರೆ, ನೀನು ಭಾರತ್ ಗ್ಯಾನ್ ವಿಭಾಗವನ್ನು ಸಂಪರ್ಕಿಸು ಅಥವಾ ಡಾ. ಡಿ.ಕೆ. ಹರಿ ಅವರನ್ನು ಭೇಟಿಯಾಗು. ಅವರು ನಿನಗೆ ಇದರ ಬಗ್ಗೆ ಎಲ್ಲವನ್ನೂ ಹೇಳುವರು. ಅವರು ಈ ಕ್ಷೇತ್ರದಲ್ಲಿ ವ್ಯಾಪಕವಾದ ಸಂಶೋಧನೆಯನ್ನು ಮಾಡಿದ್ದಾರೆ, ಆದುದರಿಂದ ಅವರು ನಿನ್ನ ಪ್ರಶ್ನೆಗಳಿಗೆ ಉತ್ತರಿಸಬಲ್ಲರು.

ಪ್ರಶ್ನೆ: ಗುರುದೇವ, ನಾವು ನಾಲ್ಕು ಯುಗಗಳ ಬಗ್ಗೆ ಓದಿದ್ದೇವೆ - ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ ಮತ್ತು ಕಲಿ ಯುಗ. ಆದರೂ, ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಕಲಿಸಲಾಗುವ ಚರಿತ್ರೆಯು, ಕಾಲಮಾನವನ್ನು ವಿಭಜಿಸುವ ಈ ಪದ್ಧತಿಯನ್ನು ಅನುಸರಿಸುವುದಿಲ್ಲ ಮತ್ತು ಅದನ್ನು ಪೂರ್ಣವಾಗಿ ವಜಾ ಮಾಡುತ್ತದೆ. ಭಾರತಕ್ಕೆ ಆರ್ಯ ಜನಾಂಗದ ಆಗಮನವು ಸುಮಾರು ೫,೫೦೦ ವರ್ಷಗಳ ಹಿಂದೆ ಆಯಿತೆಂದು ಹೇಳಲಾಗುತ್ತದೆ. ಈ ವೈಷಮ್ಯವನ್ನು ನಾವು ಅರ್ಥ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಈ ಎಲ್ಲಾ ಸಿದ್ಧಾಂತಗಳನ್ನು ಹೊರಕ್ಕೆಸೆಯಲಾಗಿದೆ. ಕಲಿಸಲಾಗುತ್ತಿರುವ ಆರ್ಯರ ಆಕ್ರಮಣ ಸಿದ್ಧಾಂತವು ತಪ್ಪೆಂದು ಸಾಬೀತುಪಡಿಸಲಾಗಿದೆ.
ಪ್ರಪಂಚದ ವಯಸ್ಸು ಸುಮಾರು ೨೮ ಬಿಲಿಯನ್ ವರ್ಷಗಳು ಅಥವಾ ೧೯ ಬಿಲಿಯನ್ ವರ್ಷಗಳು ಎಂದು ಹೇಳಲಾಗುತ್ತದೆ. ಇದು ನಮ್ಮ ಪಂಚಾಂಗದಲ್ಲಿ ಹೇಳಿರುವುದಕ್ಕೆ ಸರಿಸುಮಾರು ನಿಖರವಾಗಿ ತಾಳೆಯಾಗುತ್ತದೆ.
ವೈದಿಕ ಕಾಲಕ್ಕನುಗುಣವಾಗಿ ಪಂಚಾಂಗವು ವರದಿ ಮಾಡುವ, ವಿಶ್ವದ ವಯಸ್ಸು, ಅಧುನಿಕ ವಿಜ್ಞಾನಿಗಳು ಹೇಳುವುದರೊಂದಿಗೆ ನಿಕಟವಾಗಿ ಒಪ್ಪುವುದು ಮತ್ತು ಹೊಂದಿಕೆಯಾಗುವುದು. ಅದಕ್ಕಾಗಿಯೇ ನಾನು ನಿನ್ನಲ್ಲಿ, ಭಾರತ್ ಗ್ಯಾನ್ ವಿಭಾಗದವರೊಂದಿಗೆ ಕುಳಿತುಕೊಂಡು ಸಂಶೋಧನೆಯನ್ನು ಅಧ್ಯಾಯನ ಮಾಡಲು ಹೇಳುತ್ತಿರುವುದು.
ತಾನು ಬರೆದಿರುವುದು ತಪ್ಪೆಂಬುದಾಗಿ ರೊಮಿಲಾ ಥಾಪರ್ ಸ್ವತಃ ಒಪ್ಪಿಕೊಂಡಿದ್ದಾಳೆ. ಚರಿತ್ರೆಯ ಪುಸ್ತಕಗಳನ್ನು ಬರೆಯುವಾಗ, ಎಲ್ಲವೂ ೬,೦೦೦ ವರ್ಷಗಳ ಹಿಂದಿನ ಕಾಲದ ನಂತರ ಆಯಿತೆಂದು ಹೇಳಲಾಯಿತು. ಅವಳಂತಹ ವಿದ್ವಾಂಸರು ಸಂಸ್ಕೃತವನ್ನೂ ಕಲಿತಿಲ್ಲ, ನಮ್ಮ ಪ್ರಾಚೀನ ದಾಖಲೆಗಳಲ್ಲಿ ಯಾವುದನ್ನೂ ಓದಲೂ ಇಲ್ಲ. ಕೇವಲ ಆಂಗ್ಲ ಸಿದ್ಧಾಂತಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅವರು ಎಲ್ಲವನ್ನೂ ೬,೦೦೦ ವರ್ಷಗಳ ಕಾಲಾವಧಿಯಲ್ಲಿ ಹೊಂದಿಸಲು ಪ್ರಯತ್ನಿಸಿದರು. ಅವರು ಭಾರತದ ಚರಿತ್ರೆಯನ್ನು ಸಂಪೂರ್ಣವಾಗಿ ತಿರುಚಿದ್ದಾರೆ.
ಇಲ್ಲಿ ಹಲವಾರು ಶೋಧನೆಗಳನ್ನು ಮಾಡಲಾಯಿತು. ಹಲವಾರು ಹೊಸ ತತ್ವಗಳು ಮತ್ತು ಅನ್ವೇಷಣೆಗಳು ಹೊರಬಂದವು. ಇವುಗಳೆಲ್ಲದರ ಲೇಖಕಿಯಾಗಿರುವ ರೊಮಿಲಾ ಥಾಪರ್, ಆರ್ಯರ ಆಕ್ರಮಣ ಸಿದ್ಧಾಂತದ ಬಗ್ಗೆ ನಾವು ಮರುಯೋಚನೆ ಮಾಡಬೇಕಾಗಿದೆ ಎಂದು ಸ್ವತಃ ಹೇಳಿದ್ದಾಳೆ. ಇದೇ ಕಾರಣಕ್ಕಾಗಿ ನಾನು ನಿನಗೆ, ಅದನ್ನು ನೋಡಿ ಇಲ್ಲಿರುವ ಭಾರತ್ ಗ್ಯಾನ್ ವಿಭಾಗದೊಂದಿಗೆ ಸಮಾಲೋಚಿಸಲು ಸಲಹೆ ನೀಡುತ್ತಿದ್ದೇನೆ.

ಪ್ರಶ್ನೆ: ಗುರೂಜಿ, ನಮಗೆ ತಿಳಿಯದಿರುವ ವಿಷಯಗಳ ಬಗ್ಗೆ ತಿಳಿಯುವುದು ಹೇಗೆ? ತಿಳಿಯದಿರುವ ವಿಷಯಗಳು ಹಲವಾರಿವೆ. ಕೆಲವೊಮ್ಮೆ ನನಗೆ ಬಹಳ ವೇದನೆಯಾಗುತ್ತದೆ ಮತ್ತು ತಿಳಿಯದಿರುವುದನ್ನು ತಿಳಿಯದಿರುವುದಕ್ಕೆ ನಾನು ಅಳಲು ಶುರು ಮಾಡುತ್ತೇನೆ.
ಶ್ರೀ ಶ್ರೀ ರವಿ ಶಂಕರ್: ನನಗೆ ನಿನ್ನ ಕಷ್ಟವು ಅರ್ಥವಾಗುತ್ತದೆ. ಏನೋ ಒಂದನ್ನು ತಿಳಿಯಲು ಬಯಸುವ ತೀವ್ರವಾದ ಅನ್ವೇಷಣೆಯು ಇದೆ, ಆದರೆ ಆ ಏನೋ ಒಂದು ಏನು, ಅದು ನಿನಗೆ ತಿಳಿಯದು. ಅಲ್ಲಿ ಏನೋ ಒಂದು ಇದೆ ಎಂಬುದು ನಿನಗೆ ತಿಳಿದಿದೆ, ಆದರೆ ಅಸ್ತಿತ್ವದಲ್ಲಿರುವ ಆ ಏನೋ ಒಂದನ್ನು ತಿಳಿಯುವುದು ಹೇಗೆಂಬುದು ನಿನಗೆ ತಿಳಿಯದು. ಅದಲ್ಲವೇ! ಕೇವಲ ವಿಶ್ರಾಮ ಮಾಡು ಮತ್ತು ಧ್ಯಾನ ಮಾಡು. ಅಲ್ಲಿಗೆ ಹೋಗಲಿರುವ ದಾರಿ ಅದು.

ಪ್ರಶ್ನೆ: ಗುರುದೇವ, ಅಸುರರು ಮತ್ತು ದೇವತೆಗಳ ಬಗ್ಗೆ ನೀವು ನಮಗೆ ದಯವಿಟ್ಟು ಏನಾದರೂ ಹೇಳುವಿರಾ. ಅಸುರರು ಕೆಟ್ಟ ಜನರಾಗಿದ್ದರೇ?
ಶ್ರೀ ಶ್ರೀ ರವಿ ಶಂಕರ್: ಅಸುರರೆಂದರೆ ಯಾರು ಆತ್ಮದ ಬಗ್ಗೆ ಯೋಚಿಸುವುದಿಲ್ಲವೋ ಅವರು, ಅವರು ಕೇವಲ ದೇಹಕ್ಕೆ ಕಟ್ಟುಬಿದ್ದಿರುತ್ತಾರೆ ಅಥವಾ ಭೂಮಿಗೆ ಕಟ್ಟುಬಿದ್ದಿರುತ್ತಾರೆ. ದೇವತೆಗಳು ಆತ್ಮಕ್ಕೆ ಕಟ್ಟುಬಿದ್ದವರು. ನಿಜವಾಗಿ ಇಬ್ಬರೂ, ಅಸುರರು ಮತ್ತು ದೇವತೆಗಳು ಒಬ್ಬನೇ ವ್ಯಕ್ತಿಯ ಮಕ್ಕಳು. ಪ್ರಜಾಪತಿಗೆ ಇಬ್ಬರು ಪತ್ನಿಯರಿದ್ದರು; ಅದಿತಿ ಮತ್ತು ದಿತಿ. ದಿತಿಯಿಂದ ಅಸುರರು ಬಂದರು ಮತ್ತು ಅದಿತಿಯಿಂದ ದೇವತೆಗಳು ಬಂದರು. ಕಥೆ ಬರುವುದು ಹೀಗೆ.