ಸೋಮವಾರ, ನವೆಂಬರ್ 5, 2012

ನಿಮಗೆ ಆಶೀರ್ವಾದ ಲಭ್ಯವಾಗಿದೆ

೫ ನವೆ೦ಬರ್ ೨೦೧೨ 

ಬೆಂಗಳೂರು, ಭಾರತ


ಪ್ರ: ‘ಪಾದಪೂಜೆ’ (ಅತಿಥಿಗಳ ಪಾದವನ್ನು ನೀರಿನಿಂದ ತೊಳೆದು ಹೂಗಳನ್ನು ಅರ್ಪಿಸಿ ಸ್ವಾಗತಿಸುವ ಪ್ರಾಚೀನ ಭಾರತದ ಒಂದು ಪದ್ಧತಿ) ಯನ್ನು ಏಕೆ ಮಾಡುತ್ತೇವೆ? ಅದರ ಮಹತ್ವವೇನು?
ಶ್ರೀಶ್ರೀರವಿಶಂಕರ್: ಹಿಂದಿನ ಕಾಲದಲ್ಲಿ ಗೌರವಾನ್ವಿತ ಅತಿಥಿಗಳನ್ನು ಮನೆಗೆ ಬರಮಾಡಿಕೊಂಡಾಗ ಅವರ ಪಾದಗಳನ್ನು ತೊಳೆಯುತ್ತಿದ್ದರು. ಅವರು ನಡೆದು ಬರುತ್ತಿದ್ದು, ಕಾಲು ಕೊಳಕಾಗಿರುತ್ತಿದ್ದ ಕಾರಣ ಮೊದಲು ಕಾಲು ತೊಳೆಯುತ್ತಿದ್ದರು. ನಮ್ಮ ನಮ್ರತೆಯನ್ನು ಈ ಮೂಲಕ ವ್ಯಕ್ತಪಡಿಸುತ್ತಿದ್ದೆವು.
ಕೆಲವು ಬಾರಿ ಅತಿಥಿಗಳು ನಮ್ಮ ಮನೆಗೆ ಬಂದಾಗ ಅವರನ್ನು ಹೂವಿನ ಹಾರದೊಂದಿಗೆ ಅಥವಾ ಹೂವು ಇಲ್ಲವೇ ಬುಕೆಯನ್ನು ಕೊಟ್ಟು ಆದರಿಸುತ್ತೇವೆ. ಒಂದಾನೊಂದು ಕಾಲದಲ್ಲಿ ಪ್ರಪಂಚದಾದ್ಯಂತ ಅತಿಥಿಗಳನ್ನು ಈ ರೀತಿಯಲ್ಲಿ ಸತ್ಕರಿಸುತ್ತಿದ್ದರು.
ಹಿರಿಯರ ಕಾಲುಗಳನ್ನು ತೊಳೆಯುವುದರ ಹಿಂದೆ ಕೈಕಾಲುಗಳಿಂದ ಶಕ್ತಿಯು ಪ್ರಸರಿಸುವುದೆಂಬ ಕಾರಣವೂ ಇತ್ತು. ಆದ್ದರಿಂದಲೇ ಜನರು ‘ದಯವಿಟ್ಟು ನಿಮ್ಮ ಕೈಗಳನ್ನು ನನ್ನ ತಲೆಯ ಮೇಲಿಟ್ಟು ಆಶೀರ್ವದಿಸಿ’ ಎಂದು ಕೇಳಿಕೊಳ್ಳುತ್ತಿದ್ದರು.
ಭಾರತದಲ್ಲಿ ಕಾಲುಗಳನ್ನು ಮುಟ್ಟಿ ಆಶೀರ್ವಾದ ಪಡೆಯುವುದು ವಾಡಿಕೆ. ಆದರೆ ಶಕ್ತಿ ಅಥವಾ ಕಂಪನಗಳು ಪಾದಗಳಿಂದಲೇ ಪ್ರಸರಿಸುವುದೆಂಬುದು ನಿಜವಲ್ಲ, ಇಡೀ ಶರೀರದಿಂದ ಅದು ಪ್ರಸರಿಸುವುದು. ದೃಷ್ಟಿ ಹಾಗೂ ಮಾತುಗಳಿಂದ ಅದೇ ಫಲವನ್ನು ಪಡೆಯಬಹುದು. ಇದು ಆಶೀರ್ವಾದದ ಮಹತ್ವ.
ಹಿರಿಯರನ್ನು ನೆನೆಯುವುದರಿಂದಲೇ ಆಶೀರ್ವಾದವನ್ನು ಪಡೆಯುತ್ತೇವೆ. 
ಆಲೋಚನೆ, ಮಾತು, ದೃಷ್ಟಿ ಹಾಗೂ ಸ್ಪರ್ಶದಿಂದ ಆಶೀರ್ವಾದವನ್ನು ಪಡೆಯುತ್ತೇವೆ.
ದರ್ಶನ, ಸ್ಪರ್ಶ ಮತ್ತು ದೃಷ್ಟಿಯಿಂದ ಆಶೀರ್ವಾದವನ್ನು ಪಡೆಯುತ್ತೇವೆ.
ಹಾಗೆಂದ ಮಾತ್ರಕ್ಕೆ, ನೀವು, ‘ಗುರೂಜೀ, ನನ್ನ ತಲೆಯನ್ನು ಸ್ಪರ್ಶಿಸಿ ಆಶೀರ್ವದಿಸಿ’ ಎಂದು ಕೇಳಬಾರದು. ಇತ್ತೀಚೆಗೆ ಕೆಲವು ಭಕ್ತರು ಹರಸುವುದು ಹೇಗೆಂದು ಗುರುಗಳಿಗೇ ಕಲಿಸಲು ಮುಂದಾಗುತ್ತಾರೆ. ಅನುಗ್ರಹ ಮತ್ತು ಆಶೀರ್ವಾದಗಳು ತಂತಾನೆ ಬರುವುದು. ನನ್ನ ಪಾದಗಳನ್ನು ಸ್ಪರ್ಶಿಸುವುದರಿಂದ ಅಥವಾ ನಿಮ್ಮ ತಲೆಯ ಮೇಲೆ ಕೈಯಿಡಲು ಕೇಳಿಕೊಳ್ಳುವ ಅವಶ್ಯಕತೆಯಿಲ್ಲ. ಕೇವಲ ದರ್ಶನ ಅಥವಾ ಧ್ವನಿ ಆಲಿಸುವುದರಿಂದಲೇ ಆಶೀರ್ವಾದ ದೊರೆಯಿತೆಂದು ಭಾವಿಸಿರಿ.
ನೀವೆಲ್ಲೇ ಕುಳಿತಿರಿ, ಮನಸ್ಸಿನಲ್ಲಿ ಆಶೀರ್ವದಿಸುವಂತೆ ಬೇಡಿಕೊಳ್ಳಿ, ನಿಮಗೆ ಆಶೀರ್ವಾದ ದೊರೆಯುವುದು.
ಇದೇ ರೀತಿಯಲ್ಲಿ ಶ್ರಾದ್ಧವನ್ನು ಆಚರಿಸುವುದು (ಪಿತೃಗಳನ್ನು ಗೌರವಿಸುವ ಒಂದು ಸಂಪ್ರದಾಯ). ಒಂದು ಕಡೆ ಕುಳಿತು ಇನ್ನೊಂದು ಕಡೆಗೆ ದಾಟಿರುವವರನ್ನು (ಮೃತರಾದವರನ್ನು) ಸ್ಮರಿಸಿಕೊಂಡು, ಹರಸುವಂತೆ ಅವರಲ್ಲಿ ಪ್ರಾರ್ಥಿಸಿಕೊಳ್ಳುವುದು. ಹೀಗೆ ಆಲೋಚಿಸುವುದರಿಂದಲೇ ನಮಗೆ ಕಂಪನಗಳು ಮೂಡುವುದು.
ಇದು ಹೇಗೆ ಸಾಧ್ಯವೆಂದು ನೀವು ಕೇಳಬಹುದು. ಕಾಮವಾಸನೆಯು ಹೇಗೆ ಉಂಟಾಗುವುದು? ಕೇವಲ ಆಲೋಚನೆಯಿಂದಲೇ ಅಲ್ಲವೇ? ನಂತರ ಹಾರ್ಮೋನುಗಳು ಹೆಚ್ಚಾಗಿ ಉತ್ಪತ್ತಿಯಾಗುವುದು.
ನಿಮಗೆ ಕೋಪ ಹೇಗೆ ಬರುವುದು? ಕೇವಲ ಆಲೋಚನೆಯಿಂದಲೇ.
ದ್ವೇಷ ಹೇಗೆ ಉಂಟಾಗುವುದು? ನೀವು ಯಾರನ್ನು ಇಷ್ಟಪಡುವುದಿಲ್ಲವೋ ಅವರ ಬಗ್ಗೆ ಆಲೋಚಿಸುವುದರಿಂದ. ನಿಮಗೆ ಯಾರು ಇಷ್ಟವಿಲ್ಲವೋ ಅವರನ್ನು ಕುರಿತು ಆಲೋಚಿಸಿ, ನಿಮ್ಮ ಶರೀರವು ಕಂಪಿಸಲು ಶುರುವಾಗುವುದು.
ಭಯ ಹೇಗೆ ಉಂಟಾಗುವುದು? ಆಲೋಚಿಸುವುದರಿಂದ.
ಆದ್ದರಿಂದ, ಕೇವಲ ಆಲೋಚಿಸುವುದರಿಂದ, ಕಾಮ, ಕೋಪ, ಭಯ, ದ್ವೇಷ ಉಂಟಾಗುವುದಾದರೆ, ಆಶೀರ್ವಾದವೂ ಉಂಟಾಗುವುದಲ್ಲವೇ? ಆಶೀರ್ವಾದವು ಅಷ್ಟು ಪರಿಣಾಮಕಾರಿಯಲ್ಲವೆಂದೇ, ಅಥವಾ ಅದಕ್ಕಾಗಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಅದು ಲಭ್ಯವಾಗುವುದೆಂದು ಭಾವಿಸಿರುವಿರೇ? ಇಲ್ಲ! ನೀವೇನನ್ನೂ ಮಾಡುವ ಅಗತ್ಯವಿಲ್ಲ. ಕೇವಲ ಆಲೋಚನೆಯನ್ನು ಮಾಡುವುದರಿಂದಲೇ ನಿಮಗೆ ಆಶೀರ್ವಾದ ಪ್ರಾಪ್ತಿಯಾಗುವುದು.
ಅದಕ್ಕಾಗಿಯೇ, ದುರ್ಗಾ ಸಪ್ತಶತಿಯಂತಹ ಹಲವಾರು ಧರ್ಮ ಗ್ರಂಥಗಳಲ್ಲಿಹೇಳಿರುವುದು- ಕೇವಲ ಪಠಣೆ ಮಾಡುವುದರಿಂದಲೇ ನಿಮಗೆ ಸಂತೋಷವುಂಟಾಗುವುದು. ಇದರ ಉದ್ದೇಶ, ದೇವರ ಆಲೋಚನೆಯಿಂದಲೇ ಆಶೀರ್ವಾದವನ್ನು ಪಡೆಯಬಹುದೆಂದು. ಹೀಗೆಯೇ …
ಆದ್ದರಿಂದ ಎಂದಾದರೂ ನಿಮಗೆ ಧನ್ಯತಾ ಭಾವವುಂಟಾದರೆ ಅದರೊಂದಿಗೆ ಆಶೀರ್ವಾದವೂ ಬಂದಿರುವುದೆಂದು ತಿಳಿಯಿರಿ.

ಪ್ರ: ಶರಣಾಗತಿಯಿಂದ ಎಲ್ಲವನ್ನೂ ಪಡೆಯಬಹುದೆಂದು ಹೇಳುತ್ತಾರೆ; ಹಾಗಾದರೆ ಯಾರು ಎಲ್ಲವನ್ನೂ ಪಡೆದಿಲ್ಲವೋ ಅವರು ಸಂಪೂರ್ಣವಾಗಿ ಶರಣಾಗತರಾಗಿಲ್ಲವೆಂದು ತಿಳಿಯಬಹುದೇ?
ಶ್ರೀಶ್ರೀರವಿಶಂಕರ್: ಎಲ್ಲವನ್ನೂ ಬೇಡುವ ಮೊದಲು ಎಚ್ಚರವಹಿಸುವುದೂ ಅಗತ್ಯ. ನೀವು ಎಲ್ಲವನ್ನೂ ಬೇಡಿದರೆ, ಅದು ಒಳ್ಳೆಯದು, ಕೆಟ್ಟದ್ದು ಎರಡನ್ನೂ ಹೊಂದಿರುತ್ತದೆ. ಸಂತೋಷ, ದುಃಖ, ಸಮಸ್ಯೆಗಳು, ಇವೆಲ್ಲವೂ ಸೇರಿರುತ್ತದೆ. ಇವೆಲ್ಲವೂ ಜೀವನದ ಒಂದು ಭಾಗವಾಗಿದೆ.
ನೋಡಿ, ನಿಮ್ಮ ಮನಸ್ಸಿನಲ್ಲಿ ಸ್ಪಷ್ಟತೆಯಿಲ್ಲ. ನಿಮಗೇನು ಬೇಕೆಂದು ನಿಮಗೇ ಅರಿವಿಲ್ಲ. ಒಂದು ದಿನ ಎಲ್ಲಿಯಾದರೂ ಆರಾಮವಾಗಿ ಕುಳಿತುಕೊಂಡು ನಿಜವಾಗಲೂ ನಿಮಗೆ ಏನು ಬೇಕೆಂದು ಆಲೋಚಿಸಿರಿ. ನಿಮಗೆ ಅನೇಕ ಆಸೆಗಳಿರುವುದು, ನಿಮ್ಮ ಮನಸ್ಸು ಅದರೊಡನೆ ಸಿಕ್ಕಿಹಾಕಿಕೊಳ್ಳುವುದು; ಇದು ಸರಿಯಲ್ಲ. ಒಂದು ಆಸೆಯನ್ನು ಇಟ್ಟುಕೊಂಡು ಅದನ್ನು ಗಮನಿಸಿ. ತಮ್ಮ ಯಾವುದೇ ಆಸೆಗಳು ಪೂರ್ಣವಾಗಿಲ್ಲವೆಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗೆಯೇ ತಮ್ಮೆಲ್ಲಾ ಆಸೆಗಳು ಶೇ.100 ರಷ್ಟು ಈಡೇರಿರುವುದೆಂದು ಹೇಳಲು ಸಾಧ್ಯವಿಲ್ಲ.
ಸತ್ವ ಹೆಚ್ಚಾದಷ್ಟು ಪೂರ್ಣತೆಯ ಭಾವ ಹೆಚ್ಚಾಗುವುದು ಮತ್ತು ನೀವು ಯತ್ನಿಸುವ ಕಾರ್ಯ ಈಡೇರುವುದು.
ಹೆಚ್ಚು ಆನಂದದ ಸ್ಥಿತಿಯಲ್ಲಿದ್ದರೆ, ಹೆಚ್ಚು ಕೆಲಸ ಪೂರ್ಣಗೊಳ್ಳುವುದು. ಆಸೆಗಳು ಪೂರ್ಣಗೊಳ್ಳುವ ತೀವ್ರತೆಯು ಕಡಿಮೆಯಿದ್ದಷ್ಟೂ ನಿಮ್ಮ ಆಸೆಗಳು ನೆರೆವೇರುವುದು.
ಪ್ರತಿ ಕ್ಷಣವೂ ಹೊಸದೊಂದು ಬಯಕೆಯೊಂದಿಗೆ ನೀವು ಕುಳಿತರೆ, ಆಗ ಗಣಕಯಂತ್ರದಂತಿರುವ ನಮ್ಮ ಪ್ರಜ್ಞೆಗೆ ಗೊಂದಲವಾಗುವುದು - ಹೇಗೆ ನೀವು ಸಾಮಾನ್ಯವಾಗಿ ‘ಹ್ಯಾಂಗ್’ ಆಯಿತೆಂದು ಹೇಳುವಿರೋ, ಹಾಗೆಯೇ ಕೂಡಲೇ ಪ್ರಜ್ಞೆಯು ಕೆಲಸಗಳನ್ನು ಸ್ಥಗಿತಗೊಳಿಸುವುದು.
ನಿಮ್ಮ ಸೆಲ್‍ಫೆÇೀನ್ ಸಹ ಅನೇಕ ಕೆಲಸಗಳನ್ನು ಒಂದೇ ಬಾರಿಗೆ ನಿರ್ವಹಿಸಲು ತೊಡಗಿದರೆ, ಅದು ಕೆಲಸ ಮಾಡುವುದನ್ನು ನಿಲ್ಲಿಸುವುದು. ಸೆಲ್‍ಫೆÇೀನ್ ನಂತೆ ನಮ್ಮ ಪ್ರಜ್ಞೆಯೂ ಕೂಡ ಒಂದು ದೊಡ್ಡ ಗಣಕಯಂತ್ರದಂತೆ. ಅದಕ್ಕಾಗಿಯೇ, ಬಯಸುವುದೂ ಒಂದು ಕಲೆ, ಮತ್ತು ಬಯಕೆಯನ್ನು ಪೂರ್ಣಗೊಳಿಸುವುದೂ ಒಂದು ಕಲೆ.
ಇದರ ನಂತರ, ಬಯಸದೇ ಆಸೆಗಳನ್ನು ಈಡೇರಿಸಿಕೊಳ್ಳುವುದು ಅದಕ್ಕಿಂತಲೂ ದೊಡ್ಡ ಕಲೆ. ಇದನ್ನೇ ಸಿದ್ಧಿ ಎಂದು ಕರೆಯುವುದು (ಅಸಾಧಾರಣವಾದ ಅಥವಾ ಪರಿಪೂರ್ಣತೆಯ ಸಾಮಥ್ರ್ಯ).
ಎಷ್ಟು ಜನಕ್ಕೆ ಹೀಗೆ ಬಯಸುವ ಮುನ್ನವೇ ನಿಮ್ಮ ಅವಶ್ಯಕತೆಗಳು ಪೂರ್ಣವಾಗಿರುವುದರ ಅನುಭವವಾಗಿರುವುದು? (ಸಭಿಕರಲ್ಲಿ ಅನೇಕ ಮಂದಿ ಕೈ ಎತ್ತುವರು).
ನೋಡಿ, ಹಲವಾರು ಸಿದ್ಧರು (ಪರಿಪೂರ್ಣಿತರು) ಇಲ್ಲಿ ಕುಳಿತಿರುವರು. ನೀವು ಬಯಸುವ ಮೊದಲೇ ನಿಮ್ಮೆಲ್ಲಾ ಕೆಲಸ-ಕಾರ್ಯಗಳು ನಡೆಯುವುದಾದರೆ ಅದು ಪ್ರಶಂಸೆಗೆ ಅರ್ಹವಾಗಿದೆ.

ಪ್ರ: ಗುರುದೇವ, ಜ್ಞಾನೋದಯವನ್ನು ಪಡೆದ ನಂತರವೂ ಜೀವಂತವಾಗಿರುವುದು ಜನಕ ಮಹಾರಾಜನ ತಪಸ್ಸಾಗಿತ್ತೆಂದು ತಿಳಿಸಿರುವಿರಿ. ಜ್ಞಾನೋದಯದ ನಂತರವೂ ತಪಸ್ಸನ್ನಾಚರಿಸಲು ಸಾಧ್ಯವೇ?
ಶ್ರೀಶ್ರೀರವಿಶಂಕರ್: ಜ್ಞಾನೋದಯದ ನಂತರ ಭೋಗಿಸುವುದು ತಪಸ್ಸೆಂದು ನಾನು ಹೇಳಿರುವುದು. ಜ್ಞಾನೋದಯದ ನಂತರ ಜೀವಿಸುವ ಬಗ್ಗೆ ನಾನು ಮಾತನಾಡಿಲ್ಲ. ಜ್ಞಾನೋದಯಕ್ಕೆ ಮೊದಲು ಯೋಗವೇ ತಪಸ್ಸು, ಜ್ಞಾನೋದಯದ ನಂತರ ಭೋಗವೇ ತಪಸ್ಸು.

ಪ್ರ: ಶಿವನ ಪರಿವಾರದ ಅನೇಕ ವಾಹನಗಳು ಅಂದರೆ ಶಿವನ ಪರಿವಾರವು- ಸಿಂಹ, ನಂದಿ, ಹಾವು, ಇಲಿ ಇತ್ಯಾದಿಗಳು ಬದ್ಧವೈರಿಗಳು. ಇದರ ಹಿಂದಿರುವ ರಹಸ್ಯವೇನು?
ಶ್ರೀಶ್ರೀರವಿಶಂಕರ್: ವಿರುದ್ಧಾರ್ಥಕ ಮೌಲ್ಯಗಳು ಒಂದಕ್ಕೊಂದು ಪೂರಕವಾಗಿರುತ್ತದೆ. ಎಲ್ಲಿ ಶಿವನಿರುವನೋ ಅಲ್ಲಿ ಎಲ್ಲರೂ ಒಟ್ಟಾಗಿರುತ್ತಾರೆ. ಎಲ್ಲಿ ಆಧ್ಯಾತ್ಮವು ಬೆಳೆಯುವುದೋ ಅಲ್ಲಿ ವಿವಿಧ ರೀತಿಯ ಜನರು ಒಟ್ಟಿಗೆ ಸೇರುವರು. ಎಲ್ಲಿ ಶಿವ ತತ್ವ ಅಥವಾ ಗುರು ತತ್ವವಿರುವುದೋ, ಅಲ್ಲಿ ಒಂದೇ ಬಗೆಯ ಜನರನ್ನು ಕಾಣಲು ಸಾಧ್ಯವಿಲ್ಲ, ಬದಲಾಗಿ ಅನೇಕ ಬಗೆಯ ಜನರು ಒಟ್ಟಾಗಿ ಸಾಮರಸ್ಯದಿಂದಿರುವುದನ್ನು ಕಾಣಬಹುದು. ಇದೇ ವೈಶಿಷ್ಟ್ಯ.

ಪ್ರ: ಕಲಿಯುಗದಲ್ಲಿ ತಾಮಸವೇ ಎಲ್ಲೆಡೆ ವ್ಯಾಪಿಸುವುದು; ಆದರೆ ಸಾಧಕನಿಗೆ ಬಹಳ ಒಳ್ಳೆಯ ಸಮಯವೆಂದು ಕೇಳಿದ್ದೇನೆ. ತಾಮಸವೇ ಪ್ರಧಾನವಾಗಿರುವ ಕಾಲದಲ್ಲಿ ಸಾಧಕನಿಗೆ ಹೇಗೆ ಒಳೆಯದಾಗಿರುವುದು?
ಶ್ರೀಶ್ರೀರವಿಶಂಕರ್: ನೋಡಿ, ನೀವು ಸಾಧಕನಾದ ಬಳಿಕ ಎಲ್ಲಾ ಕಾಲವನ್ನು ಶುಭ ಹಾಗೂ ಫಲಕಾರಿಯೆಂದು ತಿಳಿಯಿರಿ. ಸಂತೋಷ ಮತ್ತು ದುಃಖ ಎರಡಕ್ಕೂ ತನ್ನದೇ ಆದ ಉದ್ದೇಶವಿದೆ. ಎಲ್ಲಾ ಬಗೆಯ ಸಂದರ್ಭಗಳನ್ನು ಅನುಕೂಲಕರವಾದುದೆಂದು, ಅವುಗಳು ನಿಮ್ಮ ಸಾಧನೆಗೆ ನೆರವಾಗುವ ಅಂಶವೆಂದು ತಿಳಿಯಬೇಕು.

ಪ್ರ: ಗುರುದೇವ, ನಿಮ್ಮ ಅನುಗ್ರಹವು ಎಲ್ಲರ ಮೇಲೂ ಸರಿಸಮನಾಗಿರುವಾಗ, ಕೆಲವು ಸಾಧಕರು ಅತ್ಯಂತ ಕಷ್ಟ ಅನುಭವಿಸುವರು ಮತ್ತು ಇನ್ನು ಕೆಲವರು ಕಷ್ಟಪಡಬೇಕಾಗಿರುವುದಿಲ್ಲ. ಇದು ಏಕೆ?
ಶ್ರೀಶ್ರೀರವಿಶಂಕರ್: ಎಲ್ಲರೂ ಒಂದೇ ರೀತಿಯಾಗಿರುವುದಿಲ್ಲ. ದೇವರು ಎಲ್ಲರನ್ನೂ ಒಂದೇ ತರಹ ಸೃಷ್ಟಿಸಿಲ್ಲ. ವಿವಿಧ ಸಾಮಥ್ರ್ಯಗಳೊಂದಿಗೆ, ಪೆÇೀಷಣೆ, ಬಗೆಬಗೆಯ ಆಲೋಚನಾಲಹರಿ, ಬೇರೆ ಬೇರೆ ಸಂಸ್ಕಾರಗಳನ್ನು ಹೊತ್ತಿರುವ ವಿವಿಧ ರೀತಿಯ ಜನರಿದ್ದಾರೆ.
ನೀವೊಬ್ಬ ಸಾಧಕರೆಂದು ಭಾವಿಸುವುದಾದರೆ, ನಿಮ್ಮನ್ನು ಯಾರೊಂದಿಗೂ ಹೋಲಿಸಿಕೊಳ್ಳಬೇಡಿ. ನಿಮ್ಮನ್ನು ಅದ್ವಿತೀಯರೆಂದು ಭಾವಿಸಿ. ಎಲ್ಲರೂ ತಮ್ಮನ್ನು ಅದ್ವಿತೀಯರೆಂದು ಭಾವಿಸಬೇಕು. ಬೇರೆಯವರೊಂದಿಗೆ ನಿಮ್ಮನ್ನು ಹೋಲಿಸಿ ನೋಡಿದಾಗ, ಬಹಿರ್ಮುಖವಾಗಿ ದೃಷ್ಟಿ ಹೊರಳುವುದು, ಮತ್ತು ತೀವ್ರ ಹಂಬಲ ಹಾಗೂ ತಿರಸ್ಕಾರಗಳಲ್ಲಿ ಸಿಲುಕಿ ನಿಮ್ಮನ್ನು ನೀವೇ ಗೊಂದಲದಲ್ಲಿ ಕಳೆದುಕೊಳ್ಳುವಿರಿ.
ಪ್ರ: ಗುರುದೇವ, ನೀವು ಅಂತರ್ಯಾಮಿ. ನಿಮಗೆ ಸರ್ವಸ್ವವೂ ತಿಳಿದಿದೆ. ದಯವಿಟ್ಟು ನನ್ನ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗೆ ಉತ್ತರಿಸಿ.
ಶ್ರೀಶ್ರೀರವಿಶಂಕರ್: ನಾನು ನಿಮಗೆ ಅಲ್ಲೇ ಉತ್ತರಿಸುವೆ, ನಿಮ್ಮ ಮನಸ್ಸಿನಲ್ಲೇ. ನಿಮ್ಮ ಮನಸ್ಸಿನಲ್ಲಿ ಒಂದೇ ಪ್ರಶ್ನೆಯಿದ್ದಿದ್ದರೆ ಅದು ಬೇರೆಯಾಗಿರುತ್ತಿತ್ತು. ಆದರೆ ಅಲ್ಲಿ ಬಹಳಷ್ಟು ಇವೆ. ಪ್ರಶ್ನೆಗಳ ಸರಮಾಲೆಯೇ ಇದೆ. ಶಾಂತವಾಗಿರಿ ಹಾಗೂ ವಿಶ್ರಮಿಸಿ. ನೀವೇ ನೋಡುವಿರಂತೆ ತಂತಾನೆ ನಿಮಗೆ ಉತ್ತರಗಳು ದೊರೆಯುವುದು.

ಪ್ರ: ಗುರುದೇವ, ಪುರುಷ ಮತ್ತು ಪ್ರಕೃತಿಯು ಹೇಗೆ ಜನಿಸಿದರು? ಇವರಿಬ್ಬರ ನಡುವೆ ಯಾವ ರೀತಿಯ ಸಂಬಂಧವಿದೆ?
ಶ್ರೀಶ್ರೀರವಿಶಂಕರ್: ಯಾವಾಗ ಅವರ ಜನನವಾಯಿತೆಂದು ನನಗೆ ತಿಳಿಯದು. ಮೊದಲನೆಯದಾಗಿ ಅವರು ಎಂದಾದರೂ ಜನಿಸಿದ್ದರೆ ಎನ್ನುವುದೂ ತಿಳಿಯದು. ಅನಾದಿ ಕಾಲದಿಂದಲೂ ಅವರು ಅಸ್ತಿತ್ವದಲ್ಲಿರುವರು.