ಶುಕ್ರವಾರ, ನವೆಂಬರ್ 30, 2012

ಐದು ಅನುಭವಗಳು

೩೦ ನವೆಂಬರ್ ೨೦೧೨
ಬೆಂಗಳೂರು

ನಿಮ್ಮ ಜೀವನದಲ್ಲಿ ನಿಜವಾಗಿ ಅರಳುವುದಕ್ಕಾಗಿ ಐದು ದಿನಗಳು ಮತ್ತು ಅನುಭವಗಳು ಬೇಕು.
ಒಂದು ದಿನವನ್ನು ನೀವು ರೈತರೊಂದಿಗೆ ಕಳೆಯಬೇಕು. ಬೆಳಗ್ಗಿನಿಂದ ರಾತ್ರಿಯ ವರೆಗೆ, ದಿನವನ್ನು ರೈತರೊಂದಿಗೆ ಕಳೆಯಿರಿ ಮತ್ತು ಅವರು ಬೀಜಗಳನ್ನು ಹೇಗೆ ಬಿತ್ತುವರು, ಗಿಡಗಳಿಗೆ ಹೇಗೆ ನೀರೆರೆಯುವರು ಮತ್ತು ಗಿಡಗಳ ಆರೈಕೆಯನ್ನು ಹೇಗೆ ಮಾಡುವರು ಎಂಬುದನ್ನು ನೋಡಿ. ಇದಕ್ಕೆ ಸಾಕ್ಷಿಯಾಗುವುದರಿಂದ ಜೀವನವು ಸಮೃದ್ಧಗೊಳ್ಳುವುದು. ಆಹಾರವನ್ನು ಹೇಗೆ ಬೆಳೆಯಲಾಗುವುದು ಮತ್ತು ರೈತರು ಎಷ್ಟೊಂದು ಶ್ರಮವಹಿಸುವರು ಎಂಬುದು ನಿಮಗೆ ತಿಳಿದಾಗ, ನೀವು ಆಹಾರವನ್ನು ಗೌರವಿಸುವಿರಿ, ನೀವು ಗಿಡಗಳನ್ನು ಗೌರವಿಸುವಿರಿ ಮತ್ತು ನೀವು ಪರಿಸರವನ್ನು ಗೌರವಿಸುವಿರಿ. ಆದುದರಿಂದ ಒಂದು ದಿನವನ್ನು ರೈತರೊಂದಿಗೆ ಕಳೆಯುವುದು ಆವಶ್ಯಕವಾಗಿದೆ.
ಒಂದು ದಿನವನ್ನು ನೀವು ಸೆರೆಮನೆಯಲ್ಲಿ ಕಳೆಯಬೇಕು. ಒಬ್ಬನು ಹೇಗೆ ತಪ್ಪಿತಸ್ಥನಾದನು ಎಂಬುದನ್ನು ನೀವು ತಿಳಿಯುವಿರಿ ಮತ್ತು ಪ್ರತಿಯೊಬ್ಬ ತಪ್ಪಿತಸ್ಥನೂ ಒಂದು ರೀತಿಯಲ್ಲಿ ಒಬ್ಬ ಬಲಿಪಶುವಾಗಿರುವನು ಎಂಬುದು ನಿಮಗೆ ತಿಳಿಯುವುದು. ಅವರಲ್ಲಿ ಯಾವುದೇ ಜ್ಞಾನವಿರಲಿಲ್ಲ, ಅವರೊಂದು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು ಮತ್ತು ಹಾಗಾಗಿ ಅವರೊಂದು ಅಪರಾಧವನ್ನೆಸಗಿದರು. ನಿಮಗೆ ಅವರ ಬಗ್ಗೆ ಬಹಳಷ್ಟು ಕರುಣೆ ಮತ್ತು ಕ್ಷಮಾಪಣಾ ಭಾವ ಉಂಟಾಗುತ್ತದೆ.
ಒಂದು ದಿನವನ್ನು ನೀವು ಒಂದು ಆಸ್ಪತ್ರೆಯಲ್ಲಿ ಕಳೆಯಬೇಕು. ಜನರು ಹೇಗೆ ಯಾತನೆಯನ್ನು ಅನುಭವಿಸುತ್ತಿರುವರು ಎಂಬುದು ನಿಮಗೆ ತಿಳಿಯುವುದು, ಆಗ ನೀವು ನಿಮ್ಮ ಸ್ವಂತ ಜೀವನವನ್ನು ಮೆಚ್ಚಿಕೊಳ್ಳುವಿರಿ. ನೀವೆಷ್ಟು ಅದೃಷ್ಟವಂತರು ಎಂಬುದನ್ನು ನೀವು ಗೌರವಿಸುವಿರಿ. ನಿಮ್ಮಲ್ಲಿ ಕರುಣೆ ಬರುವುದು ಮತ್ತು ನಿಮ್ಮ ಜೀವನವನ್ನು ಉತ್ತಮ ಬಳಕೆಗಾಗಿ ಮುಡಿಪಾಗಿಡಬೇಕೆಂಬುದನ್ನು ನೀವು ನೋಡುವಿರಿ. ನೀವು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗುವಿರಿ. ಆದುದರಿಂದ, ಒಂದು ದಿನ ಆಸ್ಪತ್ರೆಯಲ್ಲಿ ಇರುವುದು ನಿಮಗೆ ಅದನ್ನು ನೀಡುತ್ತದೆ.
ಒಂದು ದಿನವನ್ನು ನೀವು ಮಾನಸಿಕ ಆಸ್ಪತ್ರೆಯಲ್ಲಿ ಕಳೆಯಬೇಕು. ನೀವು ಒಂದು ದಿನವನ್ನು ಮಾನಸಿಕ ಆಸ್ಪತ್ರೆಯಲ್ಲಿ ಕಳೆದರೆ, ಅವರು ನಿಮ್ಮನ್ನು ಹೇಗೆ ಬಯ್ಯುವರು ಮತ್ತು ಅವರು ನಿಮ್ಮೊಂದಿಗೆ ಹೇಗೆ ಮಾತನಾಡುವರು ಎಂಬುದನ್ನು ನೀವು ನೋಡುವಿರಿ. ನಿಮ್ಮ ತಪ್ಪಿಲ್ಲದೆಯೇ ನೀವು ಬೈಗುಳವನ್ನು ಪಡೆಯುವಾಗ, ಸಂಪೂರ್ಣ ಪ್ರಪಂಚವಿರುವುದೇ ಹೀಗೆ ಎಂಬುದು ನಿಮಗೆ ಅರ್ಥವಾಗುತ್ತದೆ. ಆಗ ನಿಮಗೆ ಕೋಪ ಬರುವುದಿಲ್ಲ. ’ನಾನು’, ’ನನಗೆ’, ’ಅದು ನನಗೆ ತಿಳಿದಿದೆ’ ಎಂದು ಹೇಳುವ ಆ ಅಹಂಕಾರವು ಹಾಗೆಯೇ ಕರಗುತ್ತದೆ. ಕೇವಲ ಒಂದು ದಿನದ ಮಟ್ಟಿಗೆ ನೀವೊಬ್ಬ ಹುಚ್ಚನಂತೆ ವರ್ತಿಸಿದರೆ, ನೀವು ಬಹಳ ಸಹಜವಾಗುವಿರಿ. ’ನಾನು ಇಂತಿಂತಹವನು' ಎಂಬುದಾಗಿ ನೀವು ನಿಮ್ಮ ಸುತ್ತಲೂ ಕಟ್ಟಿರುವ ಅಹಂಕಾರದ ಎಲ್ಲಾ ಗೋಡೆಗಳೂ ಹಾಗೆಯೇ ಬಿದ್ದು ಹೋಗುವುವು. ನಂತರ ನಿಮಗೆ ಜನರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದು ಮತ್ತು ನೀವು ಎಲ್ಲರೊಂದಿಗೆ ಬೆರೆಯುವಿರಿ. ಯಾರಿಗೂ ನಿಮ್ಮನ್ನು ಕಂಗೆಡಿಸಲು ಸಾಧ್ಯವಾಗದು, ಯಾಕೆಂದರೆ, ಪ್ರಪಂಚವು ಒಂದು ಮಾನಸಿಕ ಆಸ್ಪತ್ರೆಯಂತೆ ಎಂಬುದು ನಿಮಗೆ ತಿಳಿದಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಪ್ರಪಂಚದಲ್ಲಿ ಜೀವಿಸುತ್ತಿರುತ್ತಾರೆ ಮತ್ತು ತಾವು ಮಾತ್ರ ಸರಿಯೆಂದು ಅವರು ಯೋಚಿಸುತ್ತಾರೆ.
ನೀವು ಇಸ್ರೇಲಿಗೆ ಹೋದರೆ, ಇಸ್ರೇಲಿನ ಮಾನಸಿಕ ಆಸ್ಪತ್ರೆಗಳಲ್ಲಿ ’ಜೆರುಸಲೇಂ ಖಾಯಿಲೆ’ ಎಂದು ಕರೆಯಲ್ಪಡುವ ಒಂದು ವಿಭಾಗವಿರುವುದು  ನಿಮಗೆ ಕಂಡುಬರುತ್ತದೆ. ಕೆಲವೊಮ್ಮೆ ಜನರು ಯಾತ್ರಿಗಳಾಗಿ ಬರುವಾಗ, ಅವರು ಜೆರುಸಲೇಂಗೆ ಬರುತ್ತಾರೆ ಹಾಗೂ ಇದ್ದಕ್ಕಿದ್ದಂತೆ ಅವರಿಗೆ ತಾವು ಯೇಸುಕ್ರಿಸ್ತನೆಂದು ಅಥವಾ ತಾವು ಮೇರಿ ಮ್ಯಾಗ್ದಲೀನ್ ಎಂದು ಅಥವಾ ಅಂತಹ ಒಂದು ಪಾತ್ರವೆಂದು ಅನ್ನಿಸುತ್ತದೆ ಮತ್ತು ಹಾಗೆ ವರ್ತಿಸಲು ತೊಡಗುತ್ತಾರೆ. ಅದಕ್ಕಾಗಿ ಈ ಜನರನ್ನು ’ಜೆರುಸಲೇಂ ಖಾಯಿಲೆ’ ಎಂದು ಕರೆಯಲ್ಪಡುವ ಈ ವಿಭಾಗಕ್ಕೆ ಸೇರಿಸಲಾಗುತ್ತದೆ. ಅವರು ಹುಚ್ಚರಂತಾಗಿಬಿಡುತ್ತಾರೆ.
ಆದುದರಿಂದ ನೀವು ಮಾನಸಿಕ ಆಸತ್ರೆಗೆ ಹೋದಾಗ, ನಿಮಗೆ ನಿಮ್ಮದೇ ಮನಸ್ಸಿನ ಬಗ್ಗೆ ಹೆಚ್ಚು ಅರ್ಥವಾಗುತ್ತದೆ. ಈ ಅನುಭವವು ನಿಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ. ನೀವು ಟೀಕೆಗೆ ಪ್ರತಿರೋಧಕ ಶಕ್ತಿಯನ್ನು ಪಡೆಯುವಿರಿ. ಯಾರಾದರೂ ನಿಮ್ಮನ್ನು ಟೀಕಿಸಿದರೆ, ನೀವು ಕುಸಿದು ಬೀಳಲಾರಿರಿ. ಹೆಚ್ಚಾಗಿ ಜನರಿಗೆ ಟೀಕೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರಪಂಚದಲ್ಲಿರುವ ಜನರು ಹುಚ್ಚರೆಂಬುದು ಅವರಿಗೆ ಅರ್ಥವಾಗುವುದಿಲ್ಲ. ಆದುದರಿಂದ ಒಂದು ಮಾನಸಿಕ ಆಸ್ಪತ್ರೆಯಲ್ಲಿ ಕೇವಲ ಒಂದು ದಿನ ಇರುವುದರಿಂದ, ನೀವು ಎದುರಿಸುವ ಎಲ್ಲಾ ಟೀಕೆಗಳಿಗೂ ಕಿರುನಗೆ ಬೀರುವ ಸಾಮರ್ಥ್ಯವು ನಿಮಗೆ ದೊರಕುತ್ತದೆ.
ನಂತರ, ನೀವು ಒಂದು ದಿನವನ್ನು ಒಂದು ಶಾಲೆಯಲ್ಲಿ ಕಳೆಯಬೇಕು. ಒಂದು ಶಾಲೆಯಲ್ಲಿ ಒಂದು ದಿನ; ನೀವು ಎಲ್ಲಿಂದ ಎಲ್ಲಿಗೆ ಹೋಗಿರುವಿರಿ ಎಂಬುದು ನಿಮಗೆ ತಿಳಿಯುವುದು. ನೀವು ನಿಮ್ಮದೇ ಬೆಳವಣಿಗೆಯನ್ನು ಮರುಮಾಪನ ಮಾಡುವಿರಿ. ನೀವು ತಾಳ್ಮೆಯನ್ನು ಕಲಿಯುವಿರಿ. ಮಕ್ಕಳೊಂದಿಗೆ ಎಷ್ಟು ತಾಳ್ಮೆಯಿಂದ ವ್ಯವಹರಿಸಬೇಕು ಎಂಬುದನ್ನು ನೀವು ನೋಡುವಿರಿ ಮತ್ತು ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸುವಿರಿ. ಮಕ್ಕಳೊಂದಿಗೆ ನೀವು ಹೇಗೆ ವ್ಯವಹರಿಸುವಿರೋ, ಹಾಗೆಯೇ ನೀವು ಪ್ರಪಂಚದಲ್ಲಿರುವ ಎಲ್ಲಾ ಜನರೊಂದಿಗೂ ವ್ಯವಹರಿಸಬೇಕು.
ಆದುದರಿಂದ, ನಿಮ್ಮ ಜೀವನದ ಈ ಐದು ದಿನಗಳು ನಿಮಗೆ ಬಹಳ ಸಮೃದ್ಧವಾದ ಒಂದು ಅನುಭವವಾಗಬಹುದು.
ನಿಮಗೆ ಈ ಐದು ದಿನಗಳನ್ನು ಮಾಡಲು ಸಾಧ್ಯವಿಲ್ಲವಾದರೆ, ಆಶ್ರಮದಲ್ಲಿ ಒಂದು ದಿನವಿದ್ದರೆ ಸಾಕು. ನೀವು ಸುತ್ತಮುತ್ತ ನಡೆದಾಡಿ ಮತ್ತು ನಿಮಗೆ ಹಲವಾರು ಹುಚ್ಚರು ಕಂಡುಬರುವರು.
ಇಲ್ಲೊಂದು ಶಾಲೆಯಿದೆ, ಇಲ್ಲಿ ರೈತರಿದ್ದಾರೆ, ನೀವು ಹೋಗಿ ಸ್ವಲ್ಪ ವ್ಯವಸಾಯ ಮಾಡಬಹುದು. ಇಲ್ಲಿ ಆಸ್ಪತ್ರೆಯಿದೆ, ನೀವು ಹೋಗಿ ಅಲ್ಲಿರುವ ಜನರ ಆರೈಕೆ ಕೂಡಾ ಮಾಡಬಹುದು ಮತ್ತು ನಿಮಗೆ ಬೇಕಿದ್ದರೆ, ನೀವೊಂದು ಸೆರೆಮನೆಯಲ್ಲಿರುವುದಾಗಿ ಭಾವಿಸಲೂಬಹುದು.
ಆದುದರಿಂದ, ಸೆರೆಮನೆಯನ್ನು ಹೊರತುಪಡಿಸಿ, ಇತರ ಎಲ್ಲಾ ನಾಲ್ಕು ಅನುಭವಗಳು ನಿಮಗೆ ಇಲ್ಲಿ ಸಿಗಬಹುದು. ಒಂದು ದಿನ ಸಾಕು.
ಮುಂಚಿನ ದಿನಗಳಲ್ಲಿ, ನಾವು ಆಶ್ರಮವನ್ನು ಪ್ರಾರಂಭಿಸಿದಾಗ, ನೀವು ಒಮ್ಮೆ ಆಶ್ರಮಕ್ಕೆ ಬಂದರೆ ನಗರಕ್ಕೆ ಮರಳಿ ಹೋಗಲು ಯಾವುದೇ ವಾಹನ ಸೌಕರ್ಯ ಇರಲಿಲ್ಲ. ಈ ಮಾರ್ಗದಲ್ಲಿ ಕೇವಲ ಎರಡೇ ಬಸ್ಸುಗಳು ಚಲಿಸುತ್ತಿದ್ದವು. ಒಂದು ಬೆಳಗ್ಗೆ ೧೧ ಗಂಟೆಗೆ ಮತ್ತು ಇನ್ನೊಂದು ಬಸ್ಸು ಸಂಜೆ ೫ ಗಂಟೆಗೆ. ಯಾವುದೇ ಆಟೋ ರಿಕ್ಷಾಗಳಿರಲಿಲ್ಲ, ಯಾವುದೇ ಬಾಡಿಗೆ ಕಾರುಗಳಿರಲಿಲ್ಲ, ಏನೂ ಇರಲಿಲ್ಲ. ಆರಂಭದ ದಿನಗಳಲ್ಲಿ ಆಶ್ರಮಕ್ಕೆ ಬರುತ್ತಿದ್ದವರಿಗೆ ಸಿಕ್ಕಿಬಿದ್ದಂತೆ ಅನ್ನಿಸುತ್ತಿತ್ತು. ಬೆಳಗ್ಗೆ ನೀವು ೧೧ ಗಂಟೆಗೆ ಬಂದಿರುವಿರಿ ಮತ್ತು ನಿಮಗೆ ಸಂಜೆಯಾಗುವಲ್ಲಿಯ ವರೆಗೆ ಮರಳಿ ಹೋಗಲು ಸಾಧ್ಯವಿಲ್ಲ ಯಾಕೆಂದರೆ, ಯಾವುದೇ ಬಸ್ಸುಗಳಾಗಲೀ ಅಥವಾ ಬಾಡಿಗೆ ಕಾರುಗಳಾಗಲೀ ಅಥವಾ ಯಾವುದೇ ಸಾರಿಗೆ ಸೌಕರ್ಯವಾಗಲೀ ಇರಲಿಲ್ಲ.
ಹಾಗೆಯೇ, ಕೇವಲ ಚಹಾ ಮಾತ್ರ ಮತ್ತು ಬಹುಶಃ ಕಾಫಿಯನ್ನು ಕೂಡಾ ಒದಗಿಸುತ್ತಿದ್ದ ಒಂದು ಚಿಕ್ಕ ಚಹಾ ಅಂಗಡಿಯನ್ನು ಬಿಟ್ಟರೆ, ಇಲ್ಲಿ ಸುತ್ತುಮುತ್ತಲೆಲ್ಲೂ ಯಾವುದೇ ಅಂಗಡಿಗಳಿರಲಿಲ್ಲ. ಆಶ್ರಮದ ಹೊರಗೆ ಒಂದು ಚಿಕ್ಕ ಹುಲ್ಲು ಛಾವಣಿಯಿತ್ತು, ಅಷ್ಟೇ. ಬೇರೇನೂ ಲಭ್ಯವಿರಲಿಲ್ಲ. ಒಂದೇ ಒಂದು ಅಂಗಡಿಯೂ ಇರಲಿಲ್ಲ. ಆದರೆ ನೀವು ಆ ಅವಕಾಶವನ್ನು ತಪ್ಪಿಸಿಕೊಂಡಿರಿ. ತುಂಬಾ ತಡವಾಯಿತು!