ಸೋಮವಾರ, ಡಿಸೆಂಬರ್ 31, 2012

ಶ್ರೀ ಶ್ರೀಯವರ ಹೊಸ ವರ್ಷದ ಸಂದೇಶ

೩೧ ದಶಂಬರ, ೨೦೧೨
ಬರ್ಲಿನ್, ಜರ್ಮನಿ

೦೧೨ ಬಹಳ ವೇಗವಾಗಿ ಸಾಗುತ್ತಿದೆ. ನಾವು ಪುನರ್ಸ್ಮರಣೆ ಮಾಡಿಕೊಳ್ಳೋಣ!
ಈ ವರ್ಷ ಆರಂಭವಾದಾಗ, ೨೧ ದಶಂಬರ ೨೦೧೨ರ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಪ್ರಪಂಚವು ಕೊನೆಯಾಗುವುದೆಂಬ ವದಂತಿಗಳಿದ್ದವು, ಮತ್ತು ವದಂತಿಗಳನ್ನು ನಂಬುವ ಹಲವಾರು ಜನರಿದ್ದಾರೆ; ಕನಿಷ್ಠಪಕ್ಷ ಕೆಲವು ಜನರಾದರೂ ವದಂತಿಗಳನ್ನು ಬಲವಾಗಿ ನಂಬುತ್ತಾರೆ. ಆದುದರಿಂದ ಜನರು ಪ್ರಳಯದಿನ ಬಂದೆರಗುವುದನ್ನು ಕಾಯುತ್ತಾ, ತಮ್ಮ ನೆಲಮಾಳಿಗೆಗಳಲ್ಲಿ ಆಹಾರವನ್ನು ಸಂಗ್ರಹಿಸಲು ತೊಡಗಿದರು.
ಅಂತಹದ್ದೇನೂ ಸಂಭವಿಸುವುದಿಲ್ಲವೆಂದು ನಾನು ಯಾವತ್ತೂ ಹೇಳುತ್ತಾ ಇದ್ದೆ. ಖಂಡಿತವಾಗಿಯೂ, ಬಹುತೇಕ ಪ್ರತಿವರ್ಷದಂತೆ ಈ ವರ್ಷ ನಾವು ಹಲವಾರು ವಿಪತ್ತುಗಳನ್ನು ಕಂಡಿದ್ದೇವೆ. ಬಹುಶಃ ಸ್ವಲ್ಪ ಹೆಚ್ಚೇ ಇರಬಹುದು. ಯು.ಎಸ್. ನಲ್ಲಿ ಒಂದು ದೊಡ್ಡ ವಿಪತ್ತು ಸಂಭವಿಸಿತು, ಜಪಾನಿನಲ್ಲಿ ಸಮಸ್ಯೆಗಳುಂಟಾದವು ಮತ್ತು ಪ್ರಪಂಚದ ಇತರ ಹಲವು ಭಾಗಗಳಲ್ಲಿ ಕೂಡಾ ಸಮಸ್ಯೆಗಳಿದ್ದವು; ಪ್ರಕೃತಿ ವಿಕೋಪ.
ಅದೇ ಸಮಯದಲ್ಲಿ, ಪರಿಸ್ಥಿತಿಯನ್ನು ನಿಜವಾಗಿಯೂ ಇನ್ನೂ ಹದಗೆಡಿಸಬಹುದೆಂದು ಜನರು ಅಂದುಕೊಂಡಿದ್ದ ಆರ್ಥಿಕ ಹಿನ್ನಡೆಯನ್ನು ಕೂಡಾ ನಿರ್ವಹಿಸಲಾಯಿತು. ಇನ್ನೂ ಎಲ್ಲವೂ ಚೆನ್ನಾಗಿ ಕೆಲಸ ಮಾಡುತ್ತಿವೆ. ಜನರು ಬದುಕುತ್ತಿದ್ದಾರೆ. ಖಂಡಿತವಾಗಿಯೂ ಸಂಗತಿಗಳು ಉತ್ತಮಗೊಳ್ಳಬೇಕು ಮತ್ತು ಅದು ಈಗಾಗಲೇ ಉತ್ತಮಗೊಳ್ಳಲು ಆರಂಭವಾಗಿದೆ.
ಈ ಬರುವ ವರ್ಷ, ೨೦೧೩ ಹೆಚ್ಚು ಉತ್ತಮವಾಗಿರುವುದು.
ಇವತ್ತು ಜನರಲ್ಲಿ ಒಂದು ದೊಡ್ಡ ಅರಿವಿದೆ; ಪರಿಸರದ ಕಡೆಗೆ, ಸ್ತ್ರೀಯರು ಮತ್ತು ಮಕ್ಕಳ ಸುರಕ್ಷತೆಯ ಕಡೆಗೆ. ನಾವು ಹಲವಾರು ವರ್ಷಗಳಿಂದ ಹೇಳುತ್ತಿರುವಂತೆ, ಇವತ್ತು ಹಲವಾರು ಜನರು ಎಚ್ಚೆತ್ತುಕೊಂಡು, "ನಮಗೆ ಇನ್ನೂ ಹೆಚ್ಚು ಮಾನವೀಯ ಮೌಲ್ಯಗಳು ಬೇಕು, ಹಿಂಸೆಯು ಕೊನೆಗೊಳ್ಳಬೇಕೆಂಬುದು ನಮ್ಮ ಬಯಕೆ" ಎಂದು ಹೇಳುತ್ತಿರುವರು.
ಈ ವರ್ಷ, ಒಂದು ಉತ್ತಮ ಸಮಾಜವನ್ನು ಮಾಡಲು ಕೆಲಸ ಮಾಡುವುದಾಗಿ ನಾವೆಲ್ಲರೂ ನಿರ್ಧರಿಸೋಣ; ಹಿಂಸೆಯಿಂದ ಮುಕ್ತವಾದ ಒಂದು ಸಮಾಜ, ಅಪರಾಧ ಮತ್ತು ಭ್ರಷ್ಟಾಚಾರ ಮುಕ್ತವಾದ ಸಮಾಜ, ಸುರಕ್ಷಿತ ಹಾಗೂ ನ್ಯಾಯವಾದ ಒಂದು ಸಮಾಜ ಮತ್ತು ಸಂರಕ್ಷಣೆ ಮಾಡುವ ಒಂದು ಪ್ರಪಂಚ.
ಎಲ್ಲದಕ್ಕಿಂತ ಮಿಗಿಲಾಗಿ ನಾವು ಆಧ್ಯಾತ್ಮಿಕ ಉನ್ನತಿ ಮತ್ತು ಆಧ್ಯಾತ್ಮಿಕ ಜಾಗೃತಿಗಳ ಕಡೆಗೆ ಕೆಲಸ ಮಾಡಬೇಕು, ಮತ್ತು ಅದು ಆಗುವುದು. ವಾಸ್ತವವಾಗಿ, ಅದು ಈಗಾಗಲೇ ಆಗುತ್ತಿದೆ. ಹೆಚ್ಚು ಹೆಚ್ಚು ಜನರು ಆಧ್ಯಾತ್ಮಿಕ ಜಾಗೃತಿಯಲ್ಲಿ ಆಸಕ್ತರಾಗಿದ್ದಾರೆ.
ಆರ್ಟ್ ಆಫ್ ಲಿವಿಂಗ್ ಒಂದು ದೊಡ್ಡ ಕೆಲಸ ಮಾಡಲಿದೆ. ಈ ವರ್ಷ ನಾವು ಎರಡು ಹೊಸ ಕ್ರಿಯೆಗಳನ್ನು ಕಲಿಸಲಿದ್ದೇವೆ. ಅವುಗಳು ಜನರ ಜೀವನವನ್ನು ಎಷ್ಟೋ ಹೆಚ್ಚು ಆನಂದದಾಯಕವಾಗಿಸಲಿವೆ. ಜನರು ಬಹಳ ಅಧಿಕ ಆನಂದವನ್ನನುಭವಿಸುವರು, ಬಹಳ ಅಧಿಕ ಕ್ರಿಯಾಶೀಲತೆಯನ್ನನುಭವಿಸುವರು, ಬಹಳ ಅಧಿಕ ಬದ್ಧತೆ, ಸಹಾನುಭೂತಿ ಮತ್ತು ಸೃಜನಾತ್ಮಕತೆಯನ್ನು ಅನುಭವಿಸುವರು.
ಸಮಯವು ಸವಾಲುಗಳನ್ನೊಡ್ಡುತ್ತದೆ. ನೀವು ಈ ಸವಾಲುಗಳಿಂದ ಹೇಗೆ ಲಾಭ ಪಡೆಯಬಹುದು ಎಂದು ನೋಡುವುದು ನಿಮಗೆ ಬಿಟ್ಟದ್ದು. ಪ್ರತಿಸಲವೂ ನಿಮ್ಮ ಮುಂದೆ ಒಂದು ಸವಾಲು ಇರುವಾಗ, ಈ ಸವಾಲನ್ನು ನಿಮ್ಮ ಸ್ವಂತ ಬೆಳವಣಿಗೆಗೆ ಇರುವ ಒಂದು ಅವಕಾಶವನ್ನಾಗಿ ನೀವು ಹೇಗೆ ಮಾಡಿಕೊಳ್ಳಬಹುದು ಎಂದು ನೋಡಿ. ಅದನ್ನು ನೀವು ಹೇಗೆ ಬದಲಾಯಿಸಬಹುದು ಮತ್ತು ಅದನ್ನು ನಿಮ್ಮ ಸ್ವಂತ ಬೆಳವಣಿಗೆಗಾಗಿ ಹೇಗೆ ಉಪಯೋಗಿಸಬಹುದು ಎಂದು ನೋಡಿ. ನೀವು ಮಾಡಬೇಕಾಗಿರುವುದು ಇದನ್ನೇ.
ನೀವು ಈ ವರ್ಷದ ಅಂತ್ಯಕ್ಕೆ ಬರುತ್ತಿರುವಂತೆ, ನಿಮಗೆದುರಾದ ಆ ಎಲ್ಲಾ ಸವಾಲುಗಳ ಬಗ್ಗೆ ಮತ್ತು ಅವುಗಳು ನಿಮ್ಮ ಬೆಳವಣಿಗೆಗೆ ಹೇಗೆ ತಮ್ಮ ಕೊಡುಗೆಯನ್ನು ನೀಡಿವೆ ಎಂಬುದರ ಬಗ್ಗೆ ಯೋಚಿಸಿ. ಈ ಸವಾಲುಗಳನ್ನು ನೀವು ಹೇಗೆ ನಿರ್ವಹಿಸಿದಿರಿ, ಅವುಗಳನ್ನು ನಿರ್ವಹಿಸುವಾಗ ನೀವು ಯಾವ ತಪ್ಪುಗಳನ್ನು ಮಾಡಿದಿರಿ ಮತ್ತು ಆ ತಪ್ಪುಗಳಿಂದ ನೀವು ಯಾವ ಪಾಠಗಳನ್ನು ಕಲಿತಿರಿ ಎಂಬುದರ ಬಗ್ಗೆ ಯೋಚಿಸಿ. ಇದು ಮೊದಲನೆಯ ಹೆಜ್ಜೆ.
ಎರಡನೆಯದು, ಕಳೆದ ವರ್ಷವು ನಿಮಗೆ ನೀಡಿರುವ; ನಿಮ್ಮ ಜೀವನದಲ್ಲಿ ತಂದಿರುವ ಉಡುಗೊರೆಗಳ ಬಗ್ಗೆ ಹಾಗೂ ಭೂಮಿಯಲ್ಲಿ ಜೀವಿಗಳ ಒಳಿತಿಗಾಗಿ ನೀವು ಈ ಉಡುಗೊರೆಗಳನ್ನು ಹೇಗೆ ಉಪಯೋಗಿಸುವಿರಿ ಎಂಬುದರ ಬಗ್ಗೆ ಯೋಚಿಸಿ.
ನೋಡಿ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಪ್ರತಿಭೆ, ಒಂದಲ್ಲ ಒಂದು ಉಡುಗೊರೆಯನ್ನು ಕೊಡಲಾಗಿದೆ. ಈ ಪ್ರತಿಭೆಗಳನ್ನು ನೀವು ಹೇಗೆ ಉಪಯೋಗಿಸುತ್ತಿರುವಿರಿ ಎಂಬುದನ್ನು ನೀವು ನೋಡಬೇಕಾಗಿದೆ. ನೀವು ಅವುಗಳ ಉಪಯೋಗವನ್ನಾದರೂ ಮಾಡುತ್ತಿರುವಿರೇ? ಇದನ್ನೇ ನೀವು ಗುರುತು ಮಾಡಬೇಕಾಗಿರುವುದು.
ಈ ವರ್ಷಕ್ಕಾಗಿ ಯೋಜನೆಯನ್ನು ಹಾಕಿಕೊಳ್ಳಿ; ಮುಂದಿನ ೧೨ ತಿಂಗಳುಗಳಲ್ಲಿ, ಪ್ರತಿದಿನವೂ ನೀವು ಏನನ್ನು ಮಾಡಲಿರುವಿರಿ?!
ಪ್ರತಿದಿನವೂ, ಧ್ಯಾನ ಮಾಡಿ. ಪ್ರತಿ ಮೂರರಿಂದ ನಾಲ್ಕು ತಿಂಗಳುಗಳಿಗೊಮ್ಮೆ ಸ್ವಲ್ಪ ಸಮಯ ಬಿಡುವು ತೆಗೆದುಕೊಂಡು ಧ್ಯಾನದಲ್ಲಿ ಆಳಕ್ಕೆ ಹೋಗಿ ಮತ್ತು ಮೌನವನ್ನು ಪಾಲಿಸಿರಿ. ಕನಿಷ್ಠಪಕ್ಷ ವರ್ಷದಲ್ಲಿ ಒಮ್ಮೆ ನೀವು ಮೌನದಲ್ಲಿದ್ದು ಧ್ಯಾನ ಮಾಡಬೇಕು (ಉನ್ನತ ಶಿಬಿರ) ಮತ್ತು ಸಮಾಜಕ್ಕಾಗಿ ಹಾಗೂ ಭೂಮಿಯ ಮೇಲಿರುವ ಎಲ್ಲರಿಗಾಗಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡುತ್ತಾ ಸ್ವಲ್ಪ ಸಮಯ ಕಳೆಯಬೇಕು.
ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚಿಸಬೇಡಿ, ಆದರೆ ಏನಾದರೂ ಸೇವಾ ಕಾರ್ಯವನ್ನು ಮಾಡಿ. ಆಗ, ನಿಮಗಾಗಿ ನೀವು ಏನನ್ನೆಲ್ಲಾ ಬಯಸುವಿರೋ, ಅದನ್ನು ನೀವು ಕೇಳಿ ಮತ್ತು ಅದು ನಿಮ್ಮ ಬಳಿಗೆ ಬರುತ್ತದೆ ಎಂಬುದನ್ನು ನೀವು ನೋಡುವಿರಿ. ಮೊದಲು ನೀವು ಏನನ್ನಾದರೂ ಮಾಡಬೇಕು, ನಂತರ ನೀವು ಕೇಳಿಕೊಂಡಾಗ ನಿಮಗೆ ಸಿಗುವುದು.
ನೀವು, "ನನಗಾಗಿ ಮಾತ್ರ ಬೇಕು, ನಾನು ಏನನ್ನೂ ಮಾಡಲು ಬಯಸುವುದಿಲ್ಲ" ಎಂದು ಹೇಳಿದರೆ, ಇಲ್ಲ, ಅದು ಕೆಲಸ ಮಾಡುವುದಿಲ್ಲ. ನೀವು ಸಮಾಜದಲ್ಲಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು, ಜನರ ಮುಖದಲ್ಲಿ ನಗೆಯನ್ನು ತರಬೇಕು ಮತ್ತು ಸ್ವಲ್ಪ ಪುಣ್ಯ ಗಳಿಸಿಕೊಳ್ಳಬೇಕು. ಇತರರ ಮುಖಗಳ ಮೇಲೆ ನೀವು ನಗೆಯನ್ನು ತಂದರೆ ಆಗ, ನಿಮಗಾಗಿ ಏನಾದರೂ ಬೇಡಿಕೆಯನ್ನೊಡ್ಡುವ ಅಧಿಕಾರ ನಿಮಗಿದೆ. ನಾನು ಏನು ಹೇಳುತ್ತಿರುವೆನೆಂಬುದು ನಿಮಗೆ ಅರ್ಥವಾಗುತ್ತಿದೆಯೇ? ಇದು ನಿಜವಾದ ಹಣ.
ನೋಡಿ, ನಿಮ್ಮ ಬಳಿ ಹಣವಿದ್ದರೆ, ಆಗ ನಿಮಗೆ ಸಾಮಾನು ಕೊಳ್ಳಲು ಹೋಗಲು ಸಾಧ್ಯ. ನಿಮ್ಮ ಬಳಿ ಹಣವಿಲ್ಲದಿದ್ದರೆ, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೆ ಮತ್ತು ನೀವು ಸಾಮಾನು ಕೊಳ್ಳಲು ಹೋದರೆ, ಯಾರು ನಿಮಗೆ ಏನನ್ನಾದರೂ ಕೊಡುವರು? ಮೊದಲು ನಿಮ್ಮಲ್ಲಿ ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ ಇರಬೇಕು, ಅಲ್ಲವೇ? ಆದುದರಿಂದ, ನೀವು ಸೇವೆ ಮಾಡಿದಾಗ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಮೇಲಕ್ಕೇರುತ್ತದೆ. ಆಗ ನೀವು ಬಯಸಿದುದೇನನ್ನಾದರೂ ನೀವು ಕೇಳಿದಾಗ, ನಿಮಗದು ಸಿಗುತ್ತದೆ.
ನಿಮ್ಮಲ್ಲಿ ಸಾಕಷ್ಟು ಪಾಯಿಂಟುಗಳಿದ್ದರೆ, ನಿಮಗೆ ಇಡೀ ಅಂಗಡಿಯನ್ನು ಖರೀದಿಸಲು ಸಾಧ್ಯವಿದೆ. ಆದುದರಿಂದ, ಸಮಾಜದಲ್ಲಿ ಏನಾದರೂ ಒಳ್ಳೆಯದನ್ನು ಮಾಡಲು ತೀರ್ಮಾನಿಸೋಣ ಮತ್ತು ನಮಗೇನು ಬೇಕೋ ಅದು ನಮಗೆ ಸಿಗುತ್ತದೆ; ನಮಗೆ ಕೊಡಲಾಗುತ್ತದೆ ಎಂಬ ವಿಶ್ವಾಸವನ್ನಿಟ್ಟುಕೊಳ್ಳೋಣ. ನಮ್ಮ ಇಚ್ಛೆಯು ಖಂಡಿತವಾಗಿ ನೆರವೇರುತ್ತದೆ. ನಾವು ಏನನ್ನಾದರೂ ಇಚ್ಛಿಸಿದಾಗ, ಅದು ಕೊಡಲ್ಪಡುತ್ತದೆ.
ಮುಂದಿನದು, ಜೀವನದಲ್ಲಿ ಹೊಸ ಪಾಠಗಳನ್ನು ಕಲಿಯಲು ನೀವು ಸಿದ್ಧರಿರಬೇಕು. ಜೀವನದ ಪಯಣದುದ್ದಕ್ಕೂ ಸಂತೋಷ, ಆನಂದ ಮತ್ತು ನಗುವನ್ನು ಇರಿಸಿಕೊಳ್ಳಿ. ತಿಳಿಯಿತೇ? ನೋಡಿ, ಪ್ರತಿಯೊಬ್ಬರೂ ನಡೆಯುತ್ತಿದ್ದಾರೆ. ಕೆಲವರು ಕಿರುಚುತ್ತಾ, ಅಳುತ್ತಾ ನಡೆಯುತ್ತಿದ್ದಾರೆ ಹಾಗೂ ಕೆಲವರು ನಗುತ್ತಾ ನಡೆಯುತ್ತಿದ್ದಾರೆ. ಎಲ್ಲರೂ ಒಂದು ಕನ್ವೇಯರ್ ಬೆಲ್ಟಿನ ಮೇಲಿದ್ದಾರೆ ಮತ್ತು ಬೆಲ್ಟ್ ಚಲಿಸುತ್ತಿದೆ. ಕೆಲವರು ಅಳುತ್ತಿದ್ದಾರೆ, ಕೆಲವರು ನಗುತ್ತಿದ್ದಾರೆ, ಆದರೆ ಕನ್ವೇಯರ್ ಬೆಲ್ಟ್ ಹೇಗಿದ್ದರೂ ಚಲಿಸುತ್ತಿದೆ. ಆದುದರಿಂದ, ಅದು ನಿಮ್ಮ ಆಯ್ಕೆ; ಸಮಯವೆಂಬ ಈ ಕನ್ವೇಯರ್ ಬೆಲ್ಟಿನ ಮೇಲೆ ನೀವು ಹೇಗೆ ಚಲಿಸಲು ಬಯಸುವಿರಿ ಎಂಬುದು.
ನೋಡಿ, ಒಂದು ಕಾರಿನಲ್ಲಿ, ಹಿಂದಿನದನ್ನು ನೋಡುವ ಕನ್ನಡಿ (ರೇರ್ ವ್ಯೂ ಮಿರರ್) ಇರುತ್ತದೆ, ಅಲ್ಲವೇ?! ಒಂದು ದೊಡ್ಡ ವಿಂಡ್ ಶೀಲ್ಡ್ ಇರುತ್ತದೆ (ಕಾರಿನ ಮುಂಭಾಗದಲ್ಲಿರುವ ದೊಡ್ಡ ಗಾಜು) ಮತ್ತು ಒಂದು ಚಿಕ್ಕ ರೇರ್ ವ್ಯೂ ಮಿರರ್ ಇರುತ್ತದೆ. ನಿಮ್ಮ ಕಾರಿನ ರೇರ್ ವ್ಯೂ ಮಿರರ್, ವಿಂಡ್ ಶೀಲ್ಡಿನಷ್ಟು ದೊಡ್ಡದಾಗಿದೆಯೆಂದು ಮತ್ತು ವಿಂಡ್ ಶೀಲ್ಡ್ ರೇರ್ ವ್ಯೂ ಮಿರರಿನಷ್ಟು ಚಿಕ್ಕದಾಗಿದೆಯೆಂದು ಸುಮ್ಮನೇ ಊಹಿಸಿಕೊಳ್ಳಿ, ನಿಮಗೇನಾಗಬಹುದು? ನಿಮಗೆ ಕಾರು ಚಲಾಯಿಸಲು ಸಾಧ್ಯವಿದೆಯೇ? ಇಲ್ಲ!
ನಿಮ್ಮ ಕಾರು ನಿಮಗೊಂದು ಪಾಠವನ್ನು ಕಲಿಸಬಲ್ಲದು. ಪಾಠ ಯಾವುದು? ನೀವು ಹಿಂದಕ್ಕೆ ನೋಡಬೇಕಾಗಿರುವುದು ಕೇವಲ ಸ್ವಲ್ಪ ಮಾತ್ರ, ಆ ಚಿಕ್ಕ ಕನ್ನಡಿಯಂತೆ. ರೇರ್ ವ್ಯೂ ಮಿರರ್ ಭೂತಕಾಲವನ್ನು ಪ್ರತಿನಿಧಿಸುತ್ತದೆ ಮತ್ತು ವರ್ತಮಾನವು ವಿಂಡ್ ಶೀಲ್ಡ್ ಆಗಿದೆ. ಭವಿಷ್ಯವು ಬದಿಗಳನ್ನು ನೋಡುವ ಕನ್ನಡಿಗಳಂತೆ. ಆದುದರಿಂದ ನೀವು ಕಾರು ಚಲಾಯಿಸುವಾಗ, ನೀವು ಬದಿಗಳನ್ನು ಮತ್ತು ಹಿಂದೆ ಕೂಡಾ ನೋಡಬೇಕಾಗುತ್ತದೆ. ಆದರೆ ಹೆಚ್ಚಿನ ಸಮಯ ನೀವು ಮುಂದೆ ನೋಡಬೇಕು. ಕಾರು ಚಲಾಯಿಸುವಾಗ ನೀವು ಕೇವಲ ಬದಿಯಲ್ಲಿರುವ ಕನ್ನಡಿಗಳನ್ನು ಮಾತ್ರ ನೋಡುತ್ತಿದ್ದರೆ, ನಿಮಗೆ ಅಪಘಾತ ಸಂಭವಿಸುತ್ತದೆ.
ಆದುದರಿಂದ ನೀವು ಮುಂದೆ ನೋಡಬೇಕು, ಆದರೆ ಕೆಲವೊಮ್ಮೆ ಬದಿಗಳಲ್ಲಿರುವ ಕನ್ನಡಿಗಳನ್ನು ನೋಡಬೇಕು ಮತ್ತು ಕೆಲವೊಮ್ಮೆ ರೇರ್ ವ್ಯೂ ಮಿರರನ್ನು ನೋಡಬೇಕು. ಭೂತಕಾಲ ಮತ್ತು ಭವಿಷ್ಯದ ಕಡೆಗೆ ಸ್ವಲ್ಪ ನೋಡಿ, ಆದರೆ ಹೆಚ್ಚಾಗಿ ವರ್ತಮಾನದಲ್ಲಿರಿ.
ನೀವೇನು ಹೇಳುವಿರಿ?
ಸಮಯವು ಬಂದಿದೆ, ಒಳ್ಳೆಯ ಜನರ ಧ್ವನಿಗಳು ಈಗ ಹೆಚ್ಚು ಶಕ್ತಿಯುತವಾಗುವುವು. ಕೆಟ್ಟ ಕೆಲಸಗಳನ್ನು ಮಾಡುವ ಆ ಜನರೆಲ್ಲರೂ ಬೆಳಕಿಗೆ ಬರುವರು ಮತ್ತು ಅವರ ಮನಸ್ಸುಗಳು ಬದಲಾಗುವುವು. ಆಧ್ಯಾತ್ಮಿಕತೆಯ ಅಲೆಗಳು ಜನರನ್ನು ಪರಿವರ್ತಿಸಲು ತೊಡಗುವುವು. ಮುಂಬರುವ ವರ್ಷಗಳಲ್ಲಿ ಇದು ಆಗುವುದು. ಈ ಅಲೆಯು ಬಹಳ ಹೆಚ್ಚು ಪ್ರಬಲವಾಗುವುದು. ಇತರರನ್ನು ಮೋಸಗೊಳಿಸುತ್ತಿರುವ ಜನರೆಲ್ಲರೂ ತಮ್ಮ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವರು, ಮತ್ತು ನಂತರ ಅವರ ಬಣ್ಣ ಬಯಲಾಗುವುದು. ಇತರರನ್ನು ಮೋಸಗೊಳಿಸುತ್ತಿರುವ ಜನರ ಬಣ್ಣ ಬಯಲಾಗುವುದು, ಇದು ಆಗುವುದು.
ಆದುದರಿಂದ, ಒಳ್ಳೆಯ ಕಾಲವು ನಮ್ಮ ಮುಂದಿದೆ.