ಶನಿವಾರ, ಫೆಬ್ರವರಿ 2, 2013

ನೀವು ಉತ್ಸಾಹದ ಚಿಲುಮೆಗಳಾಗಿರಿ!

ಫ಼ೆಬ್ರವರಿ ೦೨, ೨೦೧೩
ನವದೆಹಲಿ, ಭಾರತ

(ಫ಼ೆಬ್ರವರಿ ೦೨, ೨೦೧೩ ರಂದು, ಆರ್ಟ್ ಆಫ್ ಲಿವಿಂಗಿನ ಮೂಲಕ ಪ್ರಾರಂಭವಾದ ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಅಭಿಯಾನವು ನವದೆಹಲಿಯಲ್ಲಿ ಒಂದು ರಾಷ್ಟ್ರೀಯ ಯುವ ಸಮ್ಮೇಳನವನ್ನು ನಡೆಸಿತು. ಹೆಚ್.ಐ.ವಿ. ಮತ್ತು ಏಡ್ಸ್, ಇಳಿಮುಖವಾಗುತ್ತಿರುವ ಮಕ್ಕಳ ಲಿಂಗ ಅನುಪಾತ, ಲೈಂಗಿಕ-ಪ್ರತ್ಯುತ್ಪಾದನಾ ಆರೋಗ್ಯ ಮತ್ತು ಹಕ್ಕುಗಳು, ಮಾದಕ ದ್ರವ್ಯ ಮತ್ತು ಮದ್ಯ, ಭ್ರಷ್ಟಾಚಾರ, ಸಹಸ್ರಮಾನದ ಅಭಿವೃದ್ಧಿ ಗುರಿಗಳು, ಹುಡುಗಿಯರ ಸುರಕ್ಷತೆ ಮತ್ತು ಉದ್ಯಮಶೀಲತಾ ಅವಕಾಶಗಳನ್ನು ಮನದಟ್ಟು ಮಾಡುವುದು ಈ ಸಮ್ಮೇಳನದ ಗುರಿಯಾಗಿತ್ತು.
ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ರವಿ ಶಂಕರರು ಮಾಡಿದ ಭಾಷಣದ ಅನುವಾದ ಕೆಳಗಿನಂತಿದೆ.)

(ಶ್ರೀ ಶ್ರೀಯವರು ಕಿವಿಗಡಚಿಕ್ಕುವ ಚಪ್ಪಾಳೆಯೊಂದಿಗೆ ಮಾತನಾಡಲು ಪ್ರಾರಂಭಿಸುತ್ತಾರೆ)

ವ್ಹಾ! ನೀವೆಲ್ಲರೂ ಬಹಳ ಚೈತನ್ಯಭರಿತರಾಗಿ ಕಾಣಿಸುತ್ತಿರುವಿರಿ. ಇದು ನೋಡಲು ಬಹು ಅಪರೂಪ, ವಿಶೇಷವಾಗಿ ಒಂದು ಸಮ್ಮೇಳನದಲ್ಲಿ. ೨-೩ ಗಂಟೆಗಳ ಒಂದು ಕಾರ್ಯಾಗಾರದ ಬಳಿಕ ಸಾಮಾನ್ಯವಾಗಿ ಜನರು ಅರೆನಿದ್ರೆಯಲ್ಲಿರುತ್ತಾರೆ ಅಥವಾ ಅಲ್ಲಿ ಇಲ್ಲಿ ನೋಡುತ್ತಿರುತ್ತಾರೆ, ಮತ್ತು ಇಲ್ಲಿ ನಾನು ಎಷ್ಟೊಂದು ಶೋಭೆಯನ್ನು ನೋಡುತ್ತಿದ್ದೇನೆ. ಇದು ಅನನ್ಯವಾದುದು!

ನಾನಿಲ್ಲಿ ಬಹಳ ಸುಪ್ರಸಿದ್ಧ ಜನರ ಮಧ್ಯೆ ಇದ್ದೇನೆ; ವೇದಿಕೆಯ ಮೇಲಿರುವ ಜನರು, ಮತ್ತು ಖಂಡಿತವಾಗಿಯೂ ಸಭಿಕರು. ನಾವು ಮಾಡಬೇಕಾಗಿರುವುದೇನೆಂದರೆ, ನಾವೊಂದು ಉತ್ತಮ ಭಾರತವನ್ನು ಹೊಂದುವುದು ಹೇಗೆ ಎಂಬುದರ ಬಗ್ಗೆ ಮತ್ತು ಅದಕ್ಕಾಗಿ ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದು. ಪ್ರಧಾನವಾಗಿ, ಪ್ರಪಂಚದಲ್ಲಿ ನಾವು ನೋಡಲು ಬಯಸುವ ಬದಲಾವಣೆಯನ್ನು ಮೊದಲು ನಾವು ನಮ್ಮೊಳಗೆಯೇ ಪ್ರಾರಂಭಿಸಿರುವ ಕಾರಣದಿಂದ  ಒಟ್ಟಾಗಿ, ನಾವೆಲ್ಲರೂ ಒಂದು ಬದಲಾವಣೆಯನ್ನು ತರಬಹುದು. ಪ್ರಥಮವಾಗಿ ನಮ್ಮೊಳಗೆಯೇ ನಾವು ಶಾಂತಿ, ಶಕ್ತಿ ಮತ್ತು ಬದ್ಧತೆಗಳನ್ನು ಕಂಡುಕೊಳ್ಳುತ್ತಿದ್ದೇವೆ, ಮತ್ತು ಇದರಿಂದಾಗಿ ನಮ್ಮ ಸುತ್ತಲಿರುವ ಸಮಾಜಕ್ಕೂ ಅದನ್ನು ತರುವುದರ ಬಗ್ಗೆ ನಮಗೆ ಖಾತ್ರಿಯಿದೆ.

ಈಗ, ನಾವು ಯೋಚಿಸಬೇಕಾದುದೇನೆಂದರೆ, ಇದನ್ನು ನಾವು ಹೇಗೆ ಹಲವು ಪಟ್ಟುಗಳಷ್ಟು ಹೆಚ್ಚಿಸಬಹುದು? ಇತರ ಎಲ್ಲಾ ಯುವಕರನ್ನು ನಾವು ಹೇಗೆ ತಲಪಬಹುದು? ನಾವು ನೋಡಬೇಕಾಗಿರುವುದು ಈ ಸವಾಲಿನ ಕಡೆಗೆ.

ಕೈಗೆತ್ತಿಕೊಳ್ಳಲಾದ ಹಾಗೂ ಚರ್ಚಿಸಲಾದ ಈ ಎಲ್ಲಾ ಜ್ವಲಂತ ಸಮಸ್ಯೆಗಳನ್ನು (ಏಡ್ಸ್, ಕನ್ಯಾ ಭ್ರೂಣಹತ್ಯೆ, ಮಾದಕದ್ರವ್ಯಗಳು ಮತ್ತು ಮದ್ಯ ವಿಪತ್ತು, ಭ್ರಷ್ಟಾಚಾರ, ಸ್ತ್ರೀಯರ ಸುರಕ್ಷತೆ, ಗ್ರಾಮೀಣ ಅಭಿವೃದ್ಧಿ, ಮೊದಲಾದವು) ಒಟ್ಟಾರೆಯಾಗಿ ತೆಗೆದುಕೊಂಡು ಸಂಭೋಧಿಸುವುದರ ಅಗತ್ಯವಿದೆ.

ಹಲವು ಜನರು ಹೇಳುತ್ತಾರೆ, "ನಡೆಯುತ್ತದೆ, ಹೇಗಾದರೂ ನಿಮಗೇನು ಮಾಡಲು ಸಾಧ್ಯ?" ನಿಮ್ಮ ಉತ್ಸಾಹವನ್ನು ಹತ್ತಿಕ್ಕುವ ಒಂದು ಪ್ರಯತ್ನವಿರುತ್ತದೆ. ನೀವೊಂದು ಕಲ್ಪನೆಯೊಂದಿಗೆ, ಒಂದು ಕನಸಿನೊಂದಿಗೆ ಹೋಗುವಾಗ ನಿಮ್ಮ ಉತ್ಸಾಹದ ಮೇಲೆ ತಣ್ಣೀರೆರೆಯಲು ಬಯಸುವವರು ಹಲವರಿರುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ಇಲ್ಲಿರುವ ಸವಾಲೆಂದರೆ, ಇದನ್ನು ಎದುರಿಸಿ ನಿಮ್ಮ ಉತ್ಸಾಹವನ್ನು ಕಾಪಾಡುವುದಾಗಿದೆ, ಮತ್ತು ನೀವು ನಿಮ್ಮ ಉತ್ಸಾಹವನ್ನು ಕಾಪಾಡಿಕೊಂಡರೆ, ಅದು ನಿಧಾನವಾಗಿ ಇತರರಿಗೆ ಹರಡುತ್ತದೆ. ಜನರು ಅದನ್ನು ಹಿಡಿದುಕೊಳ್ಳುತ್ತಾರೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಾದ್ಯಂತದ ಸಮಸ್ಯೆಗಳ ಬಗ್ಗೆ ನಾವು ಕಾರ್ಯನಿರತರಾಗಿದ್ದೇವೆ. ನಾವು ತಿನ್ನುವ ಆಹಾರದಲ್ಲಿ ಅಷ್ಟೊಂದು ವಿಷ ಹೇಗಿದೆಯೆಂಬುದು ನಿಮಗೆ ತಿಳಿದಿದೆಯೇ? ನಾವು ನಮ್ಮ ಆಹಾರ ಉತ್ಪಾದನೆಯನ್ನು ಸುಧಾರಿಸಬೇಕು ಮತ್ತು ಅದು ನಮಗೆ ಸಾಧ್ಯವಿದೆ.

"ಜೈಸಾ ಅನ್ ವೈಸಾ ಮನ್" ಎಂಬ ಒಂದು ಮಾತಿದೆ (ಅನ್ನದಂತೆ ಮನಸ್ಸು). ಎಲ್ಲಾ ಬದಲಾವಣೆಗಳು ನಿಮ್ಮಿಂದಲೇ ಪ್ರಾರಂಭವಾಗಬೇಕು. ನಮ್ಮ ಮೆದುಳಿನ ಮೇಲೆ, ನಮ್ಮ ಓದಿನ ಮೇಲೆ ಮತ್ತು ನಮ್ಮ ಮನಸ್ಥಿತಿಗಳ ಮೇಲೆ ಪ್ರಭಾವ ಬೀರುವ ಹಲವಾರು ವಿಷ ಪದಾರ್ಥಗಳು ಆಹಾರದಲ್ಲಿವೆ. ಅದು ನಮ್ಮ ಜೀವನ ಮತ್ತು ವರ್ತನೆಗಳ ಮೇಲೆ ಪ್ರಭಾವ ಬೀರುತ್ತದೆ.

ಇದುವೇ ಮದ್ಯಕ್ಕೂ ಅನ್ವಯಿಸುತ್ತದೆ. ಕುಡಿದಿರುವ ಜನರು ಯಾವುದೇ ಅಪರಾಧವನ್ನಾದರೂ ಎಸಗಬಲ್ಲರು, ಯಾಕೆಂದರೆ ಅವರಲ್ಲಿ ವಿವೇಚನೆ ಇರುವುದಿಲ್ಲ. ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ, ಆದರೆ ಅಪರಾಧಗಳನ್ನೆಸಗಿದ ಜನರಿಗೆ ಶಿಕ್ಷೆ ನೀಡುವುದರ ಬಗ್ಗೆ ನಾವು ಮಾತನಾಡುತ್ತಿದ್ದೇವೆ.

ನಾನು ಈಗಷ್ಟೇ ತಿಹಾರ್ ಜೈಲಿಗೆ ಭೇಟಿ ನೀಡಿ ಮರಳುತ್ತಿದ್ದೇನೆ. ಅಲ್ಲೊಂದು ಕುಶಲತಾ ಅಭಿವೃದ್ಧಿ ಕೇಂದ್ರವನ್ನು ನಾವು ಪ್ರಾರಂಭಿಸಿದೆವು. ಅಲ್ಲಿರುವ ಜನರು ನಿಮ್ಮ ಮತ್ತು ನನ್ನಂತೆಯೇ ಇರುವರು. ಹೇಗೋ ಒಂದು ಕ್ಷಣದ, ಕೋಪದ ಒಂದು ಮನಸ್ಥಿತಿಯಿಂದ ಅವರು ತಮ್ಮ ವಿವೇಚನೆಯನ್ನು ಕಳಕೊಂಡರು. ಯಾವುದು ಸರಿ ಯಾವುದು ಸರಿಯಲ್ಲ ಎಂಬುದರ ಬಗೆಗಿನ ಪ್ರಜ್ಞೆಯನ್ನು ಅವರು ಕಳಕೊಂಡರು ಮತ್ತು ಅವರೊಂದು ಅಪರಾಧವನ್ನೆಸಗಿದರು. ಅವರಲ್ಲಿ ಕೆಲವರು ಅಮಲಿನ ಪ್ರಭಾವದಡಿಯಲ್ಲಿದ್ದರು ಮತ್ತು ಅಂತಹ ಘೋರ ಅಪರಾಧವನ್ನು ಮಾಡಿದರು. ಅದಕ್ಕಾಗಿ ಅವರು ಈಗ ವಿಷಾದಿಸುತ್ತಿದ್ದಾರೆ.

ಈಗ, ಅವರು ಧ್ಯಾನವನ್ನು ಅನುಭವಿಸಿದ ಬಳಿಕ, ಅವರಲ್ಲಿ ಜೀವನದ ಕಡೆಗೊಂದು ಬೇರೆಯ ದೃಷ್ಟಿಕೋನ ಬಂತು. ಅವರು ಸಂಪೂರ್ಣವಾಗಿ ಪರಿವರ್ತಿತರಾಗಿದ್ದಾರೆ. ಅವರ ಉತ್ಸಾಹವು ಅದ್ಭುತವಾಗಿತ್ತು. ಅವರು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಟೀ-ಷರ್ಟುಗಳನ್ನು ಧರಿಸಿದ್ದರು ಮತ್ತು ಅವರು ಸ್ವಯಂಸೇವೆ ಹಾಗೂ ಸಮಾಜ ಸೇವೆ ಮಾಡಲು ಬಯಸಿದ್ದರು. ಸ್ತ್ರೀಯರ ಮತ್ತು ಮಕ್ಕಳ ವಿರುದ್ಧ ಹಿಂಸೆಯಂತಹ ಅಪರಾಧಗಳು ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಹೋರಾಡಲು ಅವರು ಬಯಸುತ್ತಾರೆ.

ಜಾಗೃತಿಯ ಕಿಡಿಯನ್ನು ಹಚ್ಚಿದರೆ ಮಾತ್ರ ಈ ಸಮಸ್ಯೆಗಳಿಗೆ ನಾವೊಂದು ಕೊನೆಯನ್ನು ಹಾಕಲು ಸಾಧ್ಯ, ಯಾಕೆಂದರೆ ಪ್ರತಿಯೊಬ್ಬ ಮಾನವನ ಒಳಗೂ ಅಲ್ಲೊಂದು ಸುಂದರವಾದ ಆತ್ಮವಿದೆ, ಒಂದು ಸುಂದರವಾದ ಅಸ್ತಿತ್ವವಿದೆ; ಅಲ್ಲೊಂದು ಸುಂದರವಾದ ಮನಸ್ಸಿದೆ. ಈ ಮನಸ್ಸನ್ನು ಸ್ವಲ್ಪ ತೊಳೆಯಬೇಕಷ್ಟೆ. ಬ್ರೈನ್ ವಾಷಿಂಗ್ ಅಲ್ಲ, ಆದರೆ ಮೈಂಡ್ ವಾಷಿಂಗ್.

ಒಂದು ಉತ್ತಮವಾದ, ಸುರಕ್ಷಿತವಾದ ಮತ್ತು ಒಂದು ಸುಂದರವಾದ ಸಮಾಜವನ್ನು ಕಟ್ಟಲು ನಮಗೆ ಸಾಧ್ಯವಿದೆ. ಒಂದು ಶೋಭೆಯುಳ್ಳ ಮತ್ತು ಫಲದಾಯಕ ಸಮಾಜವನ್ನು ಕಟ್ಟಲು ನಮಗೆ ಸಾಧ್ಯವಿದೆ. ಆದರೆ ಹಲವು ಜನರು ಯಾವುದೇ ಉತ್ಪಾದಕಾ ಮನೋಭಾವವಿಲ್ಲದೇ ಇದ್ದಾರೆ.

ನೀವೆಲ್ಲರೂ ಚಿಕ್ಕ ಗುಂಪುಗಳಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ. ಈ ಕಾರ್ಯಾಗಾರಗಳು ಕಾರ್ಯವಾಗಿ ಮಾರ್ಪಾಡಾಗಬೇಕು. ಅದರ ಬಗ್ಗೆ ಯೋಚಿಸಿ.

ಒಂದು ಚಿಕ್ಕ ಕಥೆಯೊಂದಿಗೆ ನಾನು ಮುಕ್ತಾಯಗೊಳಿಸುತ್ತೇನೆ.

ಒಬ್ಬ ಹಳ್ಳಿಯವನು ತನಗೆ ತಲೆ ನೋಯುತ್ತಿರುವುದಾಗಿ ದೂರಿದನು, ಮತ್ತು ಅದಕ್ಕಾಗಿ ಅವನು ತನ್ನ ಮಿತ್ರನಲ್ಲಿ ಕೇಳಿದನು, "ನಾನೇನು ಮಾಡಬೇಕು?"

ಅವನ ಮಿತ್ರನು ಅವನಿಗಂದನು, "ಸುಮ್ಮನೇ ಸ್ವಲ್ಪ ಮದ್ಯವನ್ನು ಕುಡಿ."

ಅವನಿಗೆ ಅಚ್ಚರಿಯಾಯಿತು. ಅವನಂದನು, "ಮದ್ಯ ಕುಡಿದರೆ ನನ್ನ ತಲೆನೋವು ಹೋಗುವುದೇ?"

ಅವನ ಮಿತ್ರನಂದನು, "ಅದು ಯಾಕೆ ಹೋಗದು? ನನ್ನ ಜಮೀನು ಹೋಯಿತು, ನನ್ನ ನೌಕರಿ ಹೋಯಿತು ಮತ್ತು ನನ್ನ ಪತ್ನಿಯ ಆಭರಣ ಕೂಡಾ ಹೋಯಿತು. ಮದ್ಯದಿಂದ ಎಲ್ಲವೂ ಹೋಗಿದೆ, ಒಂದು ತಲೆನೋವು ದೊಡ್ಡ ಸಂಗತಿಯಲ್ಲ!"

ಆದುದರಿಂದ, ಜೀವನದಲ್ಲಿ, ನಾವು ಏನನ್ನೇ ಕಳಕೊಂಡರೂ ಪರವಾಗಿಲ್ಲ, ನಾವು ನಮ್ಮ ಉತ್ಸಾಹವನ್ನು ಯಾವತ್ತೂ ಕಳಕೊಳ್ಳಬಾರದು.

ನಿಮ್ಮ ಉತ್ಸಾಹವನ್ನು ಕಳೆದುಕೊಳ್ಳಬೇಡಿ, ಮತ್ತು ನಿಮಗೆಲ್ಲರಿಗೂ ಎಲ್ಲವೂ ಒಳ್ಳೆಯದಾಗಲಿ.