ಬುಧವಾರ, ಫೆಬ್ರವರಿ 6, 2013

ಪ್ರತಿ ಜೀವಿಯ ಅಸ್ತಿತ್ವವೂ ಜಗತ್ತಿಗೆ ಅತ್ಯಗತ್ಯ


೬ ಫೆಬ್ರುವರಿ ೨೦೧೩
ಬೆಂಗಳೂರು

ಪ್ರಶ್ನೆ: ಸೇವಿಸುವ ಮುನ್ನ ಆಹಾರವನ್ನು (ಪ್ರಸಾದ) ದೇವರಿಗೆ ಅರ್ಪಿಸುವುದರ ಪ್ರಾಮುಖ್ಯತೆಯ ಬಗ್ಗೆ ದಯವಿಟ್ಟು ನಮಗೆ ತಿಳಿಸಿ. ಹಾಗೆಯೇ ಆಹಾರವನ್ನು ಅರ್ಪಿಸುವುದರ ಸರಿಯಾದ ರೀತಿಯ ಬಗ್ಗೆ ಕೂಡಾ ದಯವಿಟ್ಟು ನಮಗೆ ತಿಳಿಸಿ. ಯಾವುದಾದರೂ ಮಂತ್ರದ ಅಗತ್ಯವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಭಾರತದಲ್ಲಿ, ವೈಶ್ವ ದೇವ ಎಂದು ಕರೆಯಲ್ಪಡುವ ಒಂದು ಸಂಪ್ರದಾಯವಿದೆ. ಒಬ್ಬಳು ಮಹಿಳೆಯು ಮನೆಯಲ್ಲಿ ಅಡಿಗೆ ಮಾಡುವಾಗ ಅವಳು ಮಾಡುವ ಮೊದಲ ಕೆಲಸವೆಂದರೆ ಒಂದು ಹಿಡಿ ಅಕ್ಕಿ ಅಥವಾ ಬೇಳೆ ಅಥವಾ ಅವಳೇನನ್ನು ಬೇಯಿಸುವಳೋ ಅದನ್ನು ತೆಗೆದು ಪಕ್ಷಿಗಳಿಗಾಗಿ, ಇರುವೆಗಳಿಗಾಗಿ ಮತ್ತು ಜೀವಿಗಳಿಗಾಗಿ ಹೊರಗೆ ತೋಟದಲ್ಲಿಡುವುದು. ಇದರ ಮಹತ್ವವೆಂದರೆ, ಪರಿಸರವನ್ನು ಗೌರವಿಸಬೇಕೆಂದು ಹೇಳುವುದು.
ಹಾಗೆಯೇ, ಹಲವು ಜನರು, ತಾವು ಊಟ ಮಾಡುವ ಮೊದಲು, ಕೆಲವು ಕಾಳುಗಳನ್ನು ತಮ್ಮ ತಟ್ಟೆಯ ಹೊರಗೆ ಇಡುತ್ತಾರೆ ಮತ್ತು ನಂತರ ಅವರು ಅವುಗಳನ್ನು ಪ್ರಾಣಿ ಪಕ್ಷಿಗಳಿಗೆ ನೀಡುತ್ತಾರೆ.
ನಿಮಗೆ ಗೊತ್ತಾ, ಪಕ್ಷಿಗಳು ವಿಶ್ವದ ಎಷ್ಟೊಂದು ಅವಿಭಾಜ್ಯ ಅಂಗವಾಗಿವೆಯೆಂದು. ಆದುದರಿಂದ ನಾವು ಪಕ್ಷಿಗಳ ಬಗ್ಗೆ ಕಾಳಜಿ ವಹಿಸಬೇಕು; ನಾವು ಇರುವೆಗಳ ಬಗ್ಗೆ ಕಾಳಜಿ ವಹಿಸಬೇಕು; ನಾವು ಪ್ರತಿಯೊಂದು ಜೀವಿಯ ಬಗ್ಗೆಯೂ ಕಾಳಜಿ ವಹಿಸಬೇಕು. ಯಾವುದೇ ಒಂದು ಜೀವಿ ವಿಶ್ವದಿಂದ ಕಣ್ಮರೆಯಾದರೂ, ವಿಶ್ವಕ್ಕೆ ತನ್ನನ್ನು ತಾನು ನಡೆಸಿಕೊಂಡು ಬರಲು ಸಾಧ್ಯವಿಲ್ಲ.
ಪ್ರಸಾದವೆಂದರೆ, ನೀವು ಪಡೆಯುವ ಆಹಾರವನ್ನು ನೀವೊಂದು ಉಡುಗೊರೆಯಂತೆ; ಒಂದು ಆಶೀರ್ವಾದದಂತೆ ತೆಗೆದುಕೊಳ್ಳುವುದು. ಪ್ರಸಾದವೆಂದರೆ ಕೇವಲ, ದೇವರ ಒಂದು ಆಶೀರ್ವಾದವೆಂದು ಅರ್ಥ. ಆಹಾರವು ಒಂದು ಆಶೀರ್ವಾದ, ಜೀವನವು ಒಂದು ಆಶೀರ್ವಾದ, ಸಮಯವು ಒಂದು ಆಶೀರ್ವಾದ, ನಮ್ಮ ಉಸಿರು ಒಂದು ಆಶೀರ್ವಾದ. ಇವುಗಳೆಲ್ಲಾ ಉಡುಗೊರೆಗಳಾಗಿವೆ.

ಪ್ರಶ್ನೆ: ಭಾರತೀಯ ಪುರಾಣವು ಎಲ್ಲಾ ಶಕ್ತಿಗಳಿಗೆ ರೂಪಗಳನ್ನು ನೀಡಿದುದು ಯಾಕೆ? ಎಲ್ಲಾ ಪೌರಾಣಿಕ ಕಥೆಗಳು ನಿಜವೇ? ಋಷಿಗಳು ಆತ್ಮ ಸಾಕ್ಷಾತ್ಕಾರ ಹೊಂದಿದ್ದರೆ, ಅವರು ತಮ್ಮ ನಿಯಂತ್ರಣವನ್ನು ಕಳೆದು ಶಾಪ ನೀಡಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್: ವಿಶ್ವವು ನಾಮಗಳಿಂದ ಮತ್ತು ರೂಪಗಳಿಂದ ತುಂಬಿದೆ. ನೀವೊಂದು ಹೆಸರನ್ನು ನೀಡಿದ ಕ್ಷಣವೇ ಅದರೊಂದಿಗೆ ರೂಪವೂ ಬರುತ್ತದೆ, ಮತ್ತು ಈ ರೂಪಗಳಲ್ಲಿ ಹಲವು ಸೂಕ್ಷ್ಮದಲ್ಲಿ ಗುರುತಿಸಲ್ಪಟ್ಟವು. ಆದುದರಿಂದ ಅವುಗಳು ಸೂಕ್ಷ್ಮಲೋಕದಲ್ಲಿ ಮುಂದುವರಿಯುತ್ತವೆ.
ಈಗ, ಋಷಿಗಳು ಯಾಕೆ ಕೋಪಗೊಂಡರು ಮತ್ತು ಶಪಿಸಿದರು, ನನಗೆ ತಿಳಿಯದು. ಸಾಧಾರಣವಾಗಿ ಎಲ್ಲಾ ಋಷಿಗಳೂ ಹೀಗೆ ಮಾಡುವುದಿಲ್ಲ. ಹೀಗೆ ಮಾಡಿದ ಕೆಲವೇ ಕೆಲವು ಋಷಿಗಳಿದ್ದರಷ್ಟೆ. ಆದರೆ ಪ್ರತಿ ಸಲವೂ ಅವರು ಶಪಿಸಿದಾಗ, ಅವರ ಶಾಪದಿಂದ ಕೂಡಾ ಏನೋ ಉತ್ತಮವಾದುದೇ ಆಯಿತು. ಅದಕ್ಕಾಗಿಯೇ ಹೇಳಿರುವುದು, ಆತ್ಮ ಸಾಕ್ಷಾತ್ಕಾರ ಹೊಂದಿದವರ ಕೋಪ ಕೂಡಾ, ಸಮಾಜಕ್ಕೆ ಏನೋ ಒಳ್ಳೆಯದನ್ನು ಮಾಡುವುದು. ಅದೇ ವೇಳೆ, ಒಬ್ಬ ಅಜ್ಞಾನಿಯ ಪ್ರೇಮವೂ ಕೂಡಾ ಸ್ವಲ್ಪ ತೊಂದರೆಯನ್ನುಂಟುಮಾಡುತ್ತದೆ. ಒಬ್ಬ ಜ್ಞಾನಿಯ ಕೋಪ ಕೊಡಾ ಲಾಭದಾಯಕವಾಗಿದೆ. ಅವನು ಯಾವುದೇ ತೊಂದರೆಯನ್ನುಂಟುಮಾಡಲು ಸಾಧ್ಯವಿಲ್ಲ, ಅವನು ಸಮಾಜಕ್ಕೆ ಕೇವಲ ಒಳಿತನ್ನು ಮಾತ್ರ ಮಾಡುತ್ತಾನೆ.
ಆದುದರಿಂದ, ಪ್ರತಿಸಲವೂ ಒಬ್ಬ ಋಷಿ ಶಪಿಸಿದಾಗ, ಅದು ಜನತೆಗೆ ಒಂದು ದೊಡ್ಡ ವರವಾಗಿ ಪರಿಣಮಿಸಿತು.

ಪ್ರಶ್ನೆ: ಸ್ವಾತಂತ್ರ್ಯವು ಬಹಳ ಸಾಪೇಕ್ಷವಾದುದು ಎಂದು ನನಗನಿಸುತ್ತದೆ. ಕೆಲವೊಮ್ಮೆ ನನ್ನ ಸ್ವಾತಂತ್ರ್ಯವು ಬೇರೊಬ್ಬರ ಸ್ವಾತಂತ್ರ್ಯಕ್ಕೆ ವಿರೋಧಾತ್ಮಕವಾಗಿರುತ್ತದೆ. ’ಸಂಪೂರ್ಣ ಸ್ವಾತಂತ್ರ್ಯ’ ಎಂಬುದೇನಾದರೂ ಇದೆಯೇ? ಅಥವಾ ಅದು ಅಸ್ತವ್ಯಸ್ತತೆಯಾಗಿರಬಹುದೇ? 
ಶ್ರೀ ಶ್ರೀ ರವಿ ಶಂಕರ್: ಬಂಧನ ಮತ್ತು ಮುಕ್ತಿ, ಎರಡೂ ಮನಸ್ಸಿನಲ್ಲಿ ಆಗುವುದು, ಮತ್ತು ನಿಮ್ಮ ದೃಷ್ಟಿಯು ಸೀಮಿತವಾದಾಗ ನಿಮಗೆ ಹಲವಾರು ಬಂಧನಗಳು ಕಾಣಿಸುತ್ತವೆ. ನಿಮ್ಮ ದೃಷ್ಟಿಯು ವಿಸ್ತಾರವಾದಂತೆಲ್ಲಾ, ಕೇವಲ ಸ್ವಾತಂತ್ರ್ಯ ಮಾತ್ರ ಇರುವುದೆಂಬುದನ್ನು ನೀವು ತಿಳಿಯಲು ತೊಡಗುವಿರಿ.

ಪ್ರಶ್ನೆ: ಬಾಂಧವ್ಯ ಮತ್ತು ತೊಡಕುಗಳಿಂದ ದೂರವುಳಿಯಲಿರುವ ಅತ್ಯಂತ ಸುಲಭ ಮಾರ್ಗ ಯಾವುದು?
ಶ್ರೀ ಶ್ರೀ ರವಿ ಶಂಕರ್: ಕೇಂದ್ರಿತನಾಗಿರು. ಇದೆಲ್ಲವೂ ಒಂದು ಕನಸು ಮತ್ತು ಎಲ್ಲವೂ ಕೊನೆಯಾಗಲಿದೆ ಎಂಬುದನ್ನು ತಿಳಿ. ಪ್ರತಿಯೊಬ್ಬರೂ ಕೊನೆಯಾಗಲಿದ್ದಾರೆ ಮತ್ತು ಒಂದು ದಿನ ಎಲ್ಲವೂ ಮುಗಿಯಲಿದೆ.
ಹಿಂದೆ ತಿರುಗಿ ನೋಡು, ನೀವು ಸುಮಾರು ೩೦ರಿಂದ ೫೦ ವರ್ಷಗಳನ್ನು ಈ ಭೂಮಿಯ ಮೇಲೆ ಕಳೆದಿರುವಿರಿ. ಆ ಎಲ್ಲಾ ಘಟನೆಗಳಿಗೇನಾಯಿತು? ಎಲ್ಲವೂ ಹೋಗಿದೆ, ಸರಿಯಾ!ಕೇವಲ ಎಚ್ಚೆತ್ತುಕೊಳ್ಳಿ!

ಪ್ರಶ್ನೆ: ಗುರುದೇವ, ಆಯ್ಕೆಯಿಂದ ಆಯ್ಕೆಯಿಲ್ಲದಿರುವೆಡೆಗೆ ಸಾಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಒಳ್ಳೆಯದು ಮತ್ತು ಕೆಟ್ಟದರ ನಡುವೆ ಯಾವುದೇ ಆಯ್ಕೆಯಿಲ್ಲ. ಆಯ್ಕೆಯಿರುವುದು ಯಾವತ್ತೂ ಕೆಟ್ಟದು ಮತ್ತು ಅದಕ್ಕಿಂತ ಕೆಟ್ಟದರ ನಡುವೆ; ಅಥವಾ ಒಳ್ಳೆಯದು ಮತ್ತು ಉತ್ತಮವಾದುದರ ನಡುವೆ. ನೀನಿದನ್ನು ಅರ್ಥ ಮಾಡಿಕೊಂಡರೆ, ಆಗ ಅಲ್ಲಿ ಯಾವುದೇ ಆಯ್ಕೆಯಿಲ್ಲವೆಂಬುದನ್ನು ನೀನು ಕಾಣುವೆ.

ಪ್ರಶ್ನೆ: ನಾನು ನಿಮ್ಮೊಂದಿಗೆ ಇರಲು ಸಾಧ್ಯವಿಲ್ಲದಿರುವಾಗ, ಕೆಲವೊಮ್ಮೆ ನಿಮ್ಮ ಮೇಲಿರುವ ನನ್ನ ಪ್ರೀತಿಯು ನನಗೆ ದುಃಖವನ್ನು ತರುತ್ತದೆ. ನೀವು ಎಲ್ಲೆಡೆಯೂ ಇರುವಿರಿ ಎಂದು ನನ್ನ ಮನಸ್ಸು ಹೇಳುತ್ತದೆ, ಆದರೆ ನನ್ನ ಹೃದಯವನ್ನು ಸುಲಭವಾಗಿ ಸಮಾಧಾನಿಸಲು ಸಾಧ್ಯವಾಗುವುದಿಲ್ಲ. ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಕೇವಲ ವಿಶ್ರಾಮ ಮಾಡು ಮತ್ತು ನಿನ್ನನ್ನು ನೀನು ನಿರಂತರವಾಗಿ ಕ್ರಿಯಾಶೀಲವಾಗಿರಿಸು. ಪ್ರಪಂಚದಲ್ಲಿ ಎಷ್ಟೊಂದು ಸೇವೆಯ ಅಗತ್ಯವಿದೆ, ಆದುದರಿಂದ ಅದರಲ್ಲಿ ತೊಡಗು. ಹಾತೊರೆತವು ಸೃಜನಶೀಲತೆಯಾಗಿ ಪರಿವರ್ತನೆಗೊಳ್ಳಬೇಕು. ನಿನ್ನಲ್ಲಿರುವ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗಳನ್ನು ಹೊರತರುವಲ್ಲಿ ಹಾತೊರೆತವು ಒಂದು ಮಾಧ್ಯಮವಾಗಬಹುದು, ಒಂದು ವೇಗವರ್ಧಕವಾಗಬಹುದು. ಆದುದರಿಂದ ಇದನ್ನು ಅದಕ್ಕಾಗಿ ಬಳಸಿ.

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನನ್ನನ್ನು ಮತ್ತು ನಾನು ಮಾಡುವುದೆಲ್ಲವನ್ನೂ ತಿಳಿದಿರುವಿರೇ?
ಶ್ರೀ ಶ್ರೀ ರವಿ ಶಂಕರ್: ನಿನಗೇನನ್ನಿಸುವುದು? ನೀನು ಮಾಡುವುದೆಲ್ಲವನ್ನೂ ನಾನು ಯಾಕೆ ತಿಳಿಯಬೇಕು? ನನಗದರ ಅಗತ್ಯವಿಲ್ಲ.

ಪ್ರಶ್ನೆ: ಸರಿಯಾದ ರೀತಿಯ ಆಡಳಿತ ಯಾವುದು? ಇದು ಆಧ್ಯಾತ್ಮಿಕ ರೀತಿಯ ಆಡಳಿತಕ್ಕಿರುವ ಸಮಯವಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಬಂಡವಾಳಶಾಹಿ, ಸಮತಾವಾದ, ಜಾತ್ಯಾತೀತತೆ, ಇವುಗಳೆಲ್ಲವೂ ಯಾವುದಕ್ಕೂ ಪ್ರಯೋಜನವಿಲ್ಲ. ವಾಸ್ತವವಾಗಿ, ಮಾನವೀಯತೆಯಿಲ್ಲದೇ ಹೋದರೆ ಅವುಗಳೆಲ್ಲವೂ ವಿಫಲವಾಗಬಹುದು. ಮತ್ತು ಮಾನವೀಯತೆಯನ್ನು ಹೊರ ತರುವುದು ಹೇಗೆ? ಅದು ಆಧ್ಯಾತ್ಮದ ಮೂಲಕ.

ಪ್ರಶ್ನೆ: ಗುರುದೇವ, ಹೃದಯವು ಶರೀರದ ಎಡಭಾಗದಲ್ಲಿದೆ. ಇದಕ್ಕೆ ಏನಾದರೂ ಆಧ್ಯಾತ್ಮಿಕ ಕಾರಣವಿದೆಯೇ?
ಶ್ರೀ ಶ್ರೀ ರವಿ ಶಂಕರ್: ಅಂತಹ ಹಲವಾರು ಪ್ರಶ್ನೆಗಳಿವೆ. ಮೂಗಿನಲ್ಲಿ ಎರಡು ಹೊಳ್ಳೆಗಳು ಯಾಕಿವೆ. ಎರಡು ಕಣ್ಣುಗಳೂ ಒಂದೇ ಕಡೆ ಯಾಕಿವೆ, ಒಂದು ಮುಂದೆ ಮತ್ತು ಒಂದು ಹಿಂದೆ ಇರಬಹುದಿತ್ತು.
ಹೃದಯವು ಎಡಭಾಗದಲ್ಲಿ ಯಾಕಿದೆಯೆಂಬುದಕ್ಕೆ ಒಬ್ಬನು ಏನನ್ನು ಹೇಳಲು ಸಾಧ್ಯ? ಯಾವುದಾದರೊಂದು ಎಲ್ಲಾದರೂ ಇರಲೇಬೇಕು. ನಿನಗೆ ಕೇಳಲು ಯಾವುದಾದರೂ ಉತ್ತಮ ಪ್ರಶ್ನೆ ಸಿಗಲಿಲ್ಲವೆಂದು ನನಗನಿಸುತ್ತದೆ. ನೀನು ಜೀವನದಲ್ಲಿನ ಇತರ ವಿಷಯಗಳ ಬಗ್ಗೆ ಅಚ್ಚರಿಪಡಬೇಕೆಂದು ನನಗನಿಸುತ್ತದೆ. ನಾವು ಮಾಡಬೇಕಾಗಿರುವ ಹಲವಾರು ವಿಷಯಗಳಿವೆ. ಪ್ರಪಂಚಕ್ಕೆ ನಿನ್ನಿಂದ ಹೆಚ್ಚು ಗಮನ ಮತ್ತು ಹೆಚ್ಚು ಸೇವೆ ಬೇಕಾಗಿದೆ.