ಭಾನುವಾರ, ಫೆಬ್ರವರಿ 3, 2013

ಭಾರತ ಬದಲಾವಣೆಯತ್ತ ಸಾಗುವ ಸಮಯ ಇದೋ ಬಂದಿದೆ


ದೆಹಲಿ, ಭಾರತ
೩ ಫೆಬ್ರುವರಿ, ೨೦೧೩

ಬೆಂಕಿಯಿರಬೇಕು, ಆದರೆ ಅದು ತಮ್ಮ ಮನೆಯನ್ನೇ ಸುಟ್ಟುಹಾಕಬಾರದು ಎಂಬುದನ್ನು ಸರಿಯಾಗಿಯೇ ಹೇಳಲಾಗಿದೆ.

ಒಂದು ರೀತಿಯಲ್ಲಿ, ಭಾರತದ ಯುವಕರು ಎಚ್ಚೆತ್ತುಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಈಗ ಜನರು ನಮ್ಮನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ಯುವಕರು ಎಚ್ಚೆತ್ತಿದ್ದಾರೆ.

ನಮಗೆ ಭ್ರಷ್ಟಾಚಾರದ ಬಗ್ಗೆ ಅರಿವಾಗಿದೆ ಮತ್ತು ನಾವು ಅದರ ವಿರುದ್ಧ ನಮ್ಮ ಧ್ವನಿ ಎತ್ತಿದ್ದೇವೆ. ಪ್ರತಿದಿನವೂ ಭ್ರಷ್ಟಾಚಾರ ಮತ್ತು ಇತರ ರೀತಿಯ ಅಪರಾಧಗಳ ವಿರುದ್ಧ ಧ್ವನಿ ಎತ್ತಲಾಗುತ್ತಿದೆ.

’ಇನ್ನು ಮುಂದೆ ನಾವು ಅಪರಾಧವನ್ನು ಸಹಿಸೆವು ಮತ್ತು ನಮಗೆ ಕಟ್ಟುನಿಟ್ಟಾದ ಕಾನೂನುಗಳು ಬೇಕು’, ಇದಕ್ಕಾಗಿ ದಿಲ್ಲಿಯ ಯುವಕರು ತಮ್ಮ ದನಿ ಎತ್ತಿದ್ದಾರೆ ಮತ್ತು ಇಡೀ ದೇಶದ ಯುವಕರು ಇದಕ್ಕೆ ಸೇರಿಕೊಂಡಿದ್ದಾರೆ.

ಬೆಂಕಿಯನ್ನು ಹಚ್ಚಲಾಗಿದೆ ಮತ್ತು ಅದು ಒಳ್ಳೆಯದು, ಆದರೆ ನಾವಿದನ್ನು ಹಿಂಸೆಯ ಕಡೆಗೆ ತೆಗೆದುಕೊಂಡು ಹೋಗದಿರುವಂತೆ ನಾವು ಖಾತ್ರಿಪಡಿಸಿಕೊಳ್ಳಬೇಕು.

ನಮ್ಮನ್ನು ಎಚ್ಚರಗೊಳಿಸಲು ಕ್ರೋಧವು ಆವಶ್ಯಕವಾಗಿದೆ. ಆದರೆ ನಂತರ ಅದು ಅತಿಯಾದರೆ ಮತ್ತು ಸರಿಯಾದ ಮನೋಭಾವ ಹಾಗೂ ಒಂದು ಕ್ರಿಯಾ ಯೋಜನೆಯಿಲ್ಲದೆಯೇ ನಾವು ಕೇವಲ ಕ್ರೋಧಗೊಂಡಿದ್ದರೆ, ಆಗ ಆ ಕ್ರೋಧವು ನಮ್ಮನ್ನು ಸುಟ್ಟು ಹಾಕಲಿದೆ. ಯಾವುದೇ ರಚನಾತ್ಮಕ ಚಟುವಟಿಕೆಯ ಬದಲಾಗಿ ಅದು ಕೇವಲ ವಿನಾಶವನ್ನು ಮಾತ್ರ ತರುವುದು. ಕ್ರೋಧವು ಆವಶ್ಯಕವಾಗಿದೆ ಮತ್ತು ನಾವು ಆ ಕ್ರೋಧವನ್ನು, ಆ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಬೇಕಾಗಿದೆ.

ಇದು ಭಾರತದ ವಿಶೇಷತೆ. ನಾವೆಲ್ಲರೂ ಒಂದು ಕ್ರಾಂತಿಯನ್ನು ಬಯಸುತ್ತೇವೆ, ಆದರೆ ಒಂದು ಶಾಂತಿಪೂರ್ಣವಾದ ರೀತಿಯಲ್ಲಿ. ನಾವೆಲ್ಲರೂ ನಮ್ಮ ತಲೆಗಳನ್ನು ಎತ್ತಿಹಿಡಿದು ನಿಲ್ಲಲು ಮತ್ತು ಪರಸ್ಪರರನ್ನು ದೂಷಿಸದೆಯೇ ಆಗಬೇಕಾಗಿರುವ ಎಲ್ಲಾ ಕೆಲಸವನ್ನು ಮಾಡಲು ತಯಾರಿದ್ದೇವೆ.

ಯುವಜನರಲ್ಲಿ ಬಹಳಷ್ಟು ಶಕ್ತಿಯಿದೆ. ಸಮಾಜವು ದೊಡ್ಡ ಪ್ರಗತಿಯನ್ನು ಹೊಂದುವುದು ಈ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವಂತೆ ಮಾಡಿದಾಗಲೇ.

ಇವತ್ತು ನಾವು ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬ ಈ ಬ್ಯಾನರಿನ ಅಡಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದೇವೆ, ಯಾಕೆಂದರೆ ವಿವಿಧ ಜನರು ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ.

ಈ ಕ್ರಾಂತಿಯು ಕೇವಲ ಒಂದು ಸಂಸ್ಥೆಯ ಕೆಲಸವಲ್ಲ. ಇದು ಇಡೀ ದೇಶದ ಕೆಲಸವಾಗಿದೆ. ಈ ಚಳುವಳಿಯನ್ನು ಬೆಂಬಲಿಸಿ ಈಗಾಗಲೇ ಇದರೊಂದಿಗೆ ಸೇರಿಕೊಂಡಿರುವ ಹಲವಾರು ಸಂಸ್ಥೆಗಳು ಮತ್ತು ಸಂಯುಕ್ತ ರಾಷ್ಟ್ರ ಸಂಸ್ಥೆಗಳಿವೆ ಹಾಗೂ ಇದರಲ್ಲಿ ಸೇರಿಕೊಳ್ಳಲು ನಾವು ಸರಕಾರದ ಜನರನ್ನೂ ಸ್ವಾಗತಿಸುತ್ತೇವೆ. ನಾವು ಎಲ್ಲರೂ ಬಂದು ಈ ಚಳುವಳಿಯಲ್ಲಿ ನಮ್ಮೊಂದಿಗೆ ಸೇರಿಕೊಳ್ಳಲು ಸ್ವಾಗತಿಸುತ್ತೇವೆ. ಭಾರತವನ್ನು ಒಂದು ಸುಂದರ ಮತ್ತು ಸುರಕ್ಷಿತ ದೇಶವನ್ನಾಗಿ ನೋಡಲು, ನಾವೆಲ್ಲರೂ ಜೊತೆಯಲ್ಲಿ ಸಮಗ್ರತೆಯೊಂದಿಗೆ ಕೆಲಸ ಮಾಡೋಣ.

ಇವತ್ತು, ಜನರಲ್ಲಿ ಸುರಕ್ಷಿತವಾಗಿರುವ ಭಾವನೆಯಿಲ್ಲ. ಪ್ರಪಂಚದ ಯಾವುದೇ ಭಾಗದ ಜನರನ್ನಾದರೂ ಸ್ವೀಕರಿಸುವ ಒಂದು ದೇಶವೆಂಬುದಾಗಿ ಭಾರತವು ಯಾವತ್ತೂ ತಿಳಿಯಲ್ಪಡುತ್ತಿತ್ತು. ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅವರು ಭಾರತಕ್ಕೆ ಬರುತ್ತಿದ್ದರು ಮತ್ತು ಸುರಕ್ಷತೆಯನ್ನು ಅನುಭವಿಸುತ್ತಿದ್ದರು. ಈಗ ನಮ್ಮದೇ ದೇಶದಲ್ಲಿ, ನಾವು ಸುರಕ್ಷಿತವಾಗಿರುವೆವೆಂದು ನಮಗೆ ಅನ್ನಿಸುವುದಿಲ್ಲ!

ಸ್ತ್ರೀಯರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮಕ್ಕಳು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಕಲಾವಿದರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ದಲಿತರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ, ಮುಸ್ಲಿಮರು ಸುರಕ್ಷತೆಯನ್ನು ಅನುಭವಿಸುತ್ತಿಲ್ಲ ಮತ್ತು ಬ್ರಾಹ್ಮಣರು ಕೂಡಾ ಈಗ ಸುರಕ್ಷತೆಯನ್ನು ಅನುಭವಿಸುತ್ತಿಲ್ಲ. ಪ್ರತಿಯೊಂದು ಜಾತಿ, ಪ್ರತಿಯೊಂದು ಒಳಪಂಗಡದ ಜನರ ಮನಸ್ಸುಗಳಲ್ಲೂ ಭಯ ಉತ್ಪತ್ತಿಯಾಗಿದೆ.    

ಇದರ ಹಿಂದಿರುವ ಕಾರಣವೇನು? ನಾವು ಇದರ ಮೂಲ ಕಾರಣದ ಕಡೆಗೆ ಹೋಗಬೇಕಾಗಿದೆ.

ನಿನ್ನೆಯಷ್ಟೇ ನಾನು ತಿಹಾರ್ ಜೈಲಿಗೆ ಹೋದೆ. ಸಾಧಾರಣವಾಗಿ, ಜನರು ರಾಮ್ ಲೀಲಾ ಮೈದಾನಕ್ಕೆ ಮೊದಲು ಬಂದು ನಂತರ ತಿಹಾರ್ ಜೈಲಿಗೆ ಹೋಗುತ್ತಾರೆ, ಆದರೆ ನಾನು ತಿಹಾರ್ ಜೈಲಿಗೆ ಮೊದಲು ಹೋಗಿ ನಂತರ ಇಲ್ಲಿಗೆ ಬಂದೆ.

ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕೆಂದು ಸಾಮಾನ್ಯವಾಗಿ ನಾವು ಹೇಳುತ್ತೇವೆ. ಹೌದು, ಖಂಡಿತವಾಗಿ ನಾವು ಕೊಡಬೇಕು. ಅಪರಾಧಿಗಳಿಗೆ ನಾವು ಅತ್ಯಂತ ಕಠಿಣ ಶಿಕ್ಷೆಗಳನ್ನು ಕೊಡಬೇಕು. ಆದರೆ ಈ ಅಪರಾಧಗಳನ್ನು ಅವರು ಮೊದಲನೆಯದಾಗಿ ಯಾಕೆ ಮಾಡಿದರು ಎಂಬುದರ ಕಡೆಗೆ ಕೂಡಾ ನಾವು ಆಳವಾಗಿ ನೋಡಬೇಕು.

ನಿನ್ನೆ ತಿಹಾರ್ ಜೈಲಿನಲ್ಲಿ ನಾವು ಒಂದು ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ನಿಮಗೆ ಗೊತ್ತಾ, ನೀವು ಒಂದು ದಿನವನ್ನು ಜೈಲಿನಲ್ಲಿ ಅಪರಾಧಿಗಳೊಂದಿಗೆ ಕಳೆದರೆ, ನಿಮ್ಮ ಹೃದಯವು ಕರಗುವುದು. ನ್ಯೂಯೋರ್ಕ್ ಜೈಲಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಅವನು ಹಲವಾರು ಲೈಂಗಿಕ ಅಪರಾಧಗಳನ್ನೆಸಗಿದ್ದ ಮತ್ತು ಹಲವಾರು ಮಹಿಳೆಯರನ್ನು ಕೊಂದಿದ್ದ. ಗಲ್ಲಿಗೇರಿಸುವುದಕ್ಕೆ ಸ್ವಲ್ಪ ಮೊದಲು, ಅವನ ಕೊನೆಯ ಆಸೆಯೇನೆಂದು ಅವನಲ್ಲಿ ಕೇಳಿದಾಗ ಅವನಂದನು, "ಲಭ್ಯವಿರುವ ಎಲ್ಲಾ ಅಶ್ಲೀಲತಾ ತಾಣಗಳನ್ನು ತೆಗೆದುಹಾಕಬೇಕು. ಆ ಅಂತರ್ಜಾಲ ತಾಣಗಳನ್ನು ನೋಡಿ ನನ್ನ ಮನಸ್ಸು ಭ್ರಷ್ಟವಾಯಿತು ಮತ್ತು ಆ ಎಲ್ಲಾ ಅಪರಾಧಗಳನ್ನು ಮಾಡಿದಾದ ನಾನು ನನ್ನ ಪ್ರಜ್ಞೆಯಲ್ಲಿರಲಿಲ್ಲ. ನಾನೇನು ಮಾಡುತ್ತಿದ್ದೆನೆಂಬ ಎಲ್ಲಾ ಪ್ರಜ್ಞೆಯನ್ನು ನಾನು ಕಳೆದುಕೊಂಡಿದ್ದೆ."

ಯಾವುದೆಲ್ಲಾ ಅಪರಾಧಗಳು ಸಂಭವಿಸುತ್ತಿವೆಯೋ, ಅವುಗಳು ಸಂಭವಿಸುವುದು ಜನರು ತಮ್ಮ ಪ್ರಜ್ಞೆಯಲ್ಲಿ ಇಲ್ಲದಿರುವಾಗ, ಮತ್ತು ಅಪರಾಧದ ದೊಡ್ಡ ಪ್ರೋತ್ಸಾಹಕವೆಂದರೆ ಮದ್ಯಸಾರ.

ಪ್ರತಿಯೊಂದು ಹಳ್ಳಿಯಲ್ಲಿ ಮದ್ಯಸಾರವು ಲಭ್ಯವಿದೆ ಮತ್ತು ಅದನ್ನು ಶುದ್ಧ ದೇಶೀ ಮದ್ಯವಾಗಿ ಮಾರಲಾಗುತ್ತದೆ ಅಥವಾ ಸ್ಥಳೀಯ ಮದ್ಯವೆಂದು ಲೇಬಲ್ ಹಚ್ಚಲಾಗುತ್ತದೆ.

ಒಬ್ಬನು ಒಮ್ಮೆ ಒಂದು ದೊಡ್ದ ತಲೆನೋವಿನಿಂದ ನರಳುತ್ತಿದ್ದನು. ಹಾಗೆ ಅವನು ಇನ್ನೊಬ್ಬನಲ್ಲಿ ಕೇಳಿದನು, "ಎಲ್ಲಾ ಭಾಷಣಗಳನ್ನು ಕೇಳಿ ನನಗೆ ಇಷ್ಟೊಂದು ಭಯಾನಕ ತಲೆನೋವು ಬಂದಿದೆ. ನಾನೇನು ಮಾಡುವುದು?"

ಅವನ ಮಿತ್ರನಂದನು, "ನೀನು ಒಂದು ಬಾಟಲಿ ಮದ್ಯ ಕುಡಿ, ನೀನು ಸರಿಹೋಗುವೆ."

ಆ ವ್ಯಕ್ತಿ ಕೇಳಿದನು, "ಮದ್ಯಪಾನ ಮಾಡುವುದರಿಂದ ತಲೆನೋವು ಹೇಗೆ ಗುಣವಾಗುವುದು?"

ಅವನ ಮಿತ್ರನಂದನು, "ಮದ್ಯಪಾನ ಮಾಡಿದುದರಿಂದ, ನಾನು ನನ್ನ ನೆಲ, ನನ್ನ ನೌಕರಿ ಕಳೆದುಕೊಂಡೆ ಮತ್ತು ನನ್ನ ಪತ್ನಿ ನನ್ನನ್ನು ಬಿಟ್ಟಳು. ನಾನು ಎಲ್ಲವನ್ನೂ ಕಳೆದುಕೊಂಡೆ. ಮದ್ಯಪಾನದೊಂದಿಗೆ, ನಾನು ಎಲ್ಲವನ್ನೂ ಕಳೆದುಕೊಂಡಿರುವಾಗ, ಅದಕ್ಕೆ ಹೋಲಿಸಿದರೆ ಒಂದು ತಲೆನೋವು ಯಾವ ಸಂಗತಿ? ನಿನ್ನ ತಲೆನೋವು ಯಾಕೆ ಹೋಗುವುದಿಲ್ಲ? ಮದ್ಯಸಾರಕ್ಕೆ ಎಷ್ಟೊಂದು ಶಕ್ತಿಯಿದೆಯೆಂದರೆ, ಅದು ಎಲ್ಲವನ್ನೂ ನಿನ್ನಿಂದ ದೂರ ತೆಗೆದುಕೊಂಡು ಹೋಗುವುದು."

ದಿಲ್ಲಿಯಲ್ಲಿ ನಡೆದ ಅಪರಾಧಗಳು ಕ್ಷಮಿಸಲು ಅನರ್ಹವಾಗಿದ್ದವು ಮತ್ತು ಈ ಅಪರಾಧಗಳನ್ನೆಸಗಿದವರೆಲ್ಲರೂ ಮದ್ಯಪಾನ ಮಾಡಿದ್ದರು. ಆದರೆ ಮುಖ್ಯ ಅಪರಾಧಿಯಾಗಿರುವ ಮದ್ಯಸಾರದ ಕಡೆಗೆ ಯಾರೂ ಬೆರಳು ಮಾಡುತ್ತಿಲ್ಲ.

ಮದ್ಯಪಾನ ಮಾಡಿರುವ ಒಬ್ಬ ವ್ಯಕ್ತಿಯು ಪ್ರಜ್ಞೆಯಲ್ಲಿರುವುದಿಲ್ಲ; ತಾನೇನು ಮಾಡುತ್ತಿರುವೆನೆಂಬ ಅರಿವಿರುವುದಿಲ್ಲ. ಆ ಸಮಯದಲ್ಲಿ ಅವನಿಗೆ ಕಾನೂನಿನ ಬಗ್ಗೆ ಯಾವುದೇ ಅರಿವಿರುವುದಿಲ್ಲ.

ಇದೇ ರೀತಿಯಲ್ಲಿ, ಮಾದಕ ದ್ರವ್ಯಗಳ ಸಮಸ್ಯೆ. ದೇಶದ ದೊಡ್ಡ ನಗರಗಳಲ್ಲಿ ಹಲವುದರಲ್ಲಿ ಡ್ರಗ್ ಮಾಫಿಯಾವು ಹುಚ್ಚೆದ್ದು ಓಡುತ್ತಿದೆ. ದೇಶವನ್ನು ಅಧೋಗತಿಗೆ ತರುತ್ತಿರುವ ಮಾದಕ ದ್ರವ್ಯಗಳು ಮತ್ತು ಇತರ ಎಲ್ಲಾ ರೀತಿಯ ಅಮಲೇರಿಸುವ ವಸ್ತುಗಳ ಪದಾರ್ಥಗಳ ವಿರುದ್ಧ ನಾವು ಎದ್ದುನಿಲ್ಲಬೇಕು.

ಇವತ್ತು ದೇಶದಲ್ಲಿ ಮಾನವೀಯ ಮೌಲ್ಯಗಳು ಮತ್ತು ನೈತಿಕತೆಗಳ ಒಂದು ದೊಡ್ಡ ಅವನತಿಯಾಗುತ್ತಿದೆ ಮತ್ತು ನಾನು ನಿಮಗೆ ಹೇಳುತ್ತೇನೆ ಕೇಳಿ, ಮದ್ಯಸಾರ ಮತ್ತು ಈ ಎಲ್ಲಾ ಇತರ ಅಮಲು ಪದಾರ್ಥಗಳು ಇದಕ್ಕಿರುವ ಪ್ರಧಾನ ಕಾರಣಗಳಲ್ಲಿ ಒಂದಾಗಿದೆ.

ಅಪರಾಧಿಗಳು ಹೆಚ್ಚಾಗಿ ಹಾರ್ಮೋನುಗಳ ಅಸಮತೋಲನವನ್ನು ಅನುಭವಿಸುತ್ತಿರುತ್ತಾರೆ. ಅದು, ಅವರು ಹಿಂಸಾತ್ಮಕವಾಗಿ ವರ್ತಿಸಲು ಕಾರಣವಾಗುತ್ತದೆ. ಒಂದು ಸಹಾಯವಾಣಿಯನ್ನು ಪ್ರಾರಂಭಿಸಬೇಕೆಂದು ನಾನು ಹೇಳಿದುದು ಅದಕ್ಕಾಗಿಯೇ. ಸಮಾಜ-ವಿರೋಧಿ ಪ್ರವೃತ್ತಿಗಳು ಅಥವಾ ಹಿಂಸಾತ್ಮಕ ವರ್ತನೆಗಳಿರುವ ಒಬ್ಬ ಹುಡುಗ ಅಥವಾ ಒಬ್ಬಳು ಹುಡುಗಿಯನ್ನು ನೀವು ನೋಡಿದರೆ, ಆಗ ಆ ವ್ಯಕ್ತಿಗೆ ಚಿಕಿತ್ಸೆ ಮತ್ತು ಸಹಾಯದ ಅಗತ್ಯವಿದೆ ಹಾಗೂ ನಾವು ಅವರಿಗೆ ಸಹಾಯ ಮಾಡಬೇಕಾಗಿದೆ. ಅದಕ್ಕಾಗಿಯೇ ನಾವು ಇದಕ್ಕೆ ಒಂದು ಸಹಾಯವಾಣಿಯನ್ನು ಪ್ರಾರಂಭಿಸಿದ್ದೇವೆ.

ನೀವಿರುವ ಜಾಗದಲ್ಲಿ, ಇಂತಹ ರೀತಿಯ ಸಹಾಯದ ಅಗತ್ಯವಿರುವ ಯಾರನ್ನಾದರೂ ನೀವು ನೋಡಿದರೆ, ಅವರಿಗೆ ಖಂಡಿತವಾಗಿಯೂ ಸಹಾಯ ಸಿಗಬೇಕು. ಹಾರ್ಮೋನಿನ ಅಸಮತೋಲನಗಳಿರುವ ಮತ್ತು ಈ ರೀತಿಯ ಅಪರಾಧಗಳಲ್ಲಿ ಸೇರಿಕೊಳ್ಳುತ್ತಿರುವ ಜನರಿಗೆ ನಾವು ಸಲಹೆಯನ್ನು ನೀಡಬೇಕಾಗಿದೆ.

ನಿರ್ಭಯ (ದಿಲ್ಲಿಯಲ್ಲಿ ಬಲಾತ್ಕಾರಕ್ಕೊಳಪಟ್ಟ ಹುಡುಗಿ) ಮತ್ತು ಅವಳ ಮಿತ್ರ ರಸ್ತೆಯ ಮೇಲೆ ಬಿದ್ದಿದ್ದರು. ಹಲವಾರು ಜನರು ಅವರನ್ನು ನೋಡಿದರು ಮತ್ತು ಸುಮ್ಮನೆ ತಮ್ಮ ದಾರಿ ಹಿಡಿದುಕೊಂಡು ಹೋದರು! ಯಾವುದಾದರೂ ಮನುಷ್ಯನು ಹೀಗೆ ಮಾಡಬಲ್ಲನೇ? ಜನರು ಅವರಿಗೆ ಸಹಾಯ ಮಾಡಲು ಯಾಕೆ ಬರಲಿಲ್ಲ? ಇದು ಯಾಕೆಂದರೆ, ’ನಾನು ಈ ದೇಶಕ್ಕಾಗಿರುವ ಒಬ್ಬ ಸ್ವಯಂಸೇವಕ ಮತ್ತು ಎಲ್ಲರೂ ನನಗೆ ಸೇರಿದವರು’ ಎಂಬ ಆಳವಾದ ಭಾವನೆ ಅಥವಾ ನಿರ್ಧಾರ ಅವರಲ್ಲಿರಲಿಲ್ಲ.  ಇದುವೇ ಆಧ್ಯಾತ್ಮವೆಂಬುದು.

ಈ ಪರಿಸ್ಥಿತಿಯನ್ನು ಬದಲಾಯಿಸುವುದು, ಕಾನೂನುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಕಾನೂನುಗಳು ಆವಶ್ಯಕ, ಅದರಲ್ಲಿ ಸಂಶಯವಿಲ್ಲ, ಆದರೆ ಮನುಷ್ಯರ ಮನಸ್ಸುಗಳನ್ನು ಕಾನೂನುಗಳಿಂದ ಪರಿವರ್ತಿಸಲು ಸಾಧ್ಯವಿಲ್ಲ. ಜನರ ಮನಸ್ಸುಗಳನ್ನು ಪರಿವರ್ತಿಸಲು, ನೀವು ಮತ್ತು ನಾನು ಕೆಲಸ ಮಾಡಬೇಕು. ಇದನ್ನು ಮಾಡಲು ನಾವೆಲ್ಲರೂ ಒಟ್ಟಿಗೆ ಎದ್ದೇಳಬೇಕು. ನಾವು ಎಲ್ಲರನ್ನೂ ಪ್ರೇಮದೊಂದಿಗೆ ಅಪ್ಪಿಕೊಳ್ಳಬೇಕು. ಪ್ರೇಮವು, ಅತ್ಯಂತ ಕಠಿಣವಾದ ಕಲ್ಲನ್ನು ಕೂಡಾ ಕರಗಿಸಬಲ್ಲದು, ಅದಕ್ಕೆ ಒಂದು ಮನುಷ್ಯನನ್ನು ಪರಿವರ್ತಿಸಲು ಸಾಧ್ಯವಿಲ್ಲವೇ?

ನಮ್ಮ ದೇಶ, ನಮ್ಮ ಸಮಾಜ ಹೇಗಿತ್ತೆಂದರೆ, ಪ್ರತಿಯೊಂದು ಕಣದಲ್ಲೂ ಮಾನವೀಯತೆಯು ಕಾಣುತ್ತಿತ್ತು. ಆದರೆ ಈಗ ಮಾನವೀಯತೆಯ ಆ ಭಾವವು ಎಲ್ಲೋ ಹುದುಗಿ ಹೋಗಿದೆ ಮತ್ತು ಅದು ಧೂಳಿನಿಂದ ಮುಚ್ಚಿಹೋಗಿದೆ. ಇದನ್ನು ಮತ್ತೊಮ್ಮೆ ಮೇಲಕ್ಕೆ ತರುವುದು ನಮ್ಮಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ನಿಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಸ್ವಯಂಸೇವಕರಾಗಬೇಕು. ೨೪ ಗಂಟೆಗಳಲ್ಲಿ, ನಿಮ್ಮ ಸಮಯದ ಒಂದು ಗಂಟೆಯನ್ನು ನೀವು ದೇಶಕ್ಕೆ ನೀಡಬೇಕು.

ಒಬ್ಬ ಯುವಕನು ಒಮ್ಮೆ ನನ್ನಲ್ಲಿ ಕೇಳಿದನು, "ಗುರುದೇವ, ನಾವು ದೇಶಕ್ಕೆ ಒಂದು ಗಂಟೆಯನ್ನು ಕೊಟ್ಟರೆ, ಆಗ ನಾವು ನಮ್ಮ ಶಿಕ್ಷಣದ ಬಗ್ಗೆ ಏನು ಮಾಡುವುದು? ಸ್ವಯಂಸೇವೆ ಮಾಡುವುದರ ಬದಲಾಗಿ ಹೆಚ್ಚು ಓದಬೇಕೆಂದು ಹೆತ್ತವರು ನಮ್ಮಲ್ಲಿ ಹೇಳುತ್ತಿದ್ದಾರೆ."

ನಾನು ಹೇಳುತ್ತೇನೆ ಕೇಳಿ, ನಿಮ್ಮ ಓದಿನ ಸಮಯವನ್ನು ಕಸಿದುಕೊಳ್ಳಬೇಡಿ. ನಿಮ್ಮ ಓದನ್ನು ಪೂರ್ಣಗೊಳಿಸಿ. ಆದರೆ ಪ್ರತಿದಿನವೂ ಮನೋರಂಜನೆಗೆಂದು ನೀವು ಸ್ವಲ್ಪ ಸಮಯವನ್ನು ಬದಿಗಿರಿಸುವುದಿಲ್ಲವೇ? ನೀವು ಸ್ವಲ್ಪ ಸಮಯವನ್ನು ಮನೋರಂಜನೆಗೆಂದು ಬದಿಗಿರಿಸುತ್ತೀರಿ; ಉದಾಹರಣೆಗೆ ಇಂಟರ್ನೆಟ್ ಸರ್ಫ್ ಮಾಡುವುದು, ಟಿವಿ ನೋಡುವುದು ಅಥವಾ ಆಟಗಳನ್ನು ಆಡುವುದು, ಮೊದಲಾದವು, ಅಲ್ಲವೇ? ಹಾಗಾದರೆ, ಆ ಬಿಡುವಿನ ಸಮಯದಿಂದ ಅರ್ಧ ಗಂಟೆಯನ್ನು ತೆಗೆದುಕೊಳ್ಳಿ. ಒಂದು ದಿನದಲ್ಲಿ ಒಂದು ಗಂಟೆ ಸಾಕು.

ಒಂದು ವಾರದಲ್ಲಿ ನಾವು ಏಳು ಗಂಟೆಗಳನ್ನು ಸಮಾಜಕ್ಕಾಗಿ ವ್ಯಯಿಸಿದರೆ, ಅಥವಾ ಹೀಗೆ ಹೇಳೋಣ, ಭಾನುವಾರದಂದು ಏಳು ಗಂಟೆಗಳನ್ನು ಕಳೆದರೂ ಕೂಡಾ, ಅದು ಸಾಕಾಗುವುದು.

ಇಲ್ಲಿ ಹಲವಾರು ಸ್ವಯಂಸೇವಕರಿದ್ದಾರೆ ಮತ್ತು ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ. ಕೇವಲ ಎರಡು ತಿಂಗಳುಗಳಲ್ಲಿ, ಅವರಿಂದ ಒಂದು ಸಾವಿರ ಸೇವಾ ಯೋಜನೆಗಳು ಕೈಗೆತ್ತಲ್ಪಟ್ಟವು ಮತ್ತು ಪೂರ್ಣಗೊಳಿಸಲ್ಪಟ್ಟವು ಕೂಡಾ. ಇದರೊಂದಿಗೆ, ದೇಶವು ಇನ್ನೂ ನಿದ್ದೆ ಮಾಡುತ್ತಿಲ್ಲ, ಆದರೆ ಬದಲಿಗೆ ಇದು ಎಚ್ಚೆತ್ತುಕೊಳ್ಳುತ್ತಿದೆ ಎಂಬ ಆಶಾಕಿರಣವು ಎದ್ದಿದೆ.

ದೇಶದ ಯುವಕರು ಎಚ್ಚೆತ್ತಾಗ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ಕಾನೂನಿಗೂ ಅವರನ್ನು ತಡೆದು ನಿಲ್ಲಿಸಲು ಸಾಧ್ಯವಿಲ್ಲ, ಅವರು ಮುಂದೆ ಸಾಗುತ್ತಾ ಇರುವರು.

ನಮ್ಮ ದೇಶವು ಒಂದು ಸುರಕ್ಷಿತ ಸ್ಥಳವಾಗಬೇಕೆಂದು ನಾವೆಲ್ಲರೂ ಬಯಸುತ್ತೇವೆ. ನಮ್ಮ ಸ್ವಂತ ದೇಶದಲ್ಲಿ ಸುರಕ್ಷತೆಯನ್ನು ಅನುಭವಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಬಯಸುತ್ತೇವೆ. ಇದಕ್ಕಾಗಿ, ನಾವು ಈಗ ಕೆಲಸ ಮಾಡಲು ಪ್ರಾರಂಭಿಸದಿದ್ದರೆ ಮತ್ತು ನಾವು ಈಗ ತೊಡಗಿಸಿಕೊಳ್ಳದೇ ಹೋದರೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ನಮ್ಮನ್ನು ಕ್ಷಮಿಸಲಾರರು.

ಒಂದು ತಪ್ಪನ್ನು ಮಾಡುವುದು ಸ್ವಾಭಾವಿಕ. ಒಂದು ಗಾದೆಯಿದೆ, ’ತಪ್ಪು ಮಾಡುವುದು ಮಾನವ ಗುಣ '. ಹಾಗೆ, ತಪ್ಪುಗಳು ಸಂಭವಿಸುತ್ತವೆ. ಆದರೆ ನಾವು ತಪ್ಪು ಮಾಡುವಾಗ, ಸಮಾಧಾನ ತಂದುಕೊಂಡು,  ಪರಿಹಾರ ನೀಡುವತ್ತ ಗಮನ ಕೊಡಬೇಕು.
ನಾನೊಂದು ತಪ್ಪು ಮಾಡಿದರೂ ಕೂಡಾ, ನಾನು ಅದನ್ನು ಮನಗಂಡು, ಅದರಿಂದ ಕಲಿತುಕೊಳ್ಳುತ್ತೇನೆ - ಯುಗಗಳಿಂದ ಭಾರತದಲ್ಲಿನ ಸಂಪ್ರದಾಯ ಇದಾಗಿದೆ. ಭಾರತದಲ್ಲಿ, ತಮ್ಮ ತಪ್ಪುಗಳನ್ನು ಸ್ವೀಕರಿಸಿ, ಅವುಗಳಿಂದ ಕಲಿತು, ಅವುಗಳಿಗೆ ಅಗತ್ಯವಾದ ಪರಿಹಾರಗಳನ್ನು ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದವರು ಸುಶಿಕ್ಷಿತರು ಮತ್ತು ಕಲಿತವರು ಎಂದು ಕರೆಯಲ್ಪಡುತ್ತಿದ್ದರು.

ತಮ್ಮ ತಪ್ಪಿಗೆ, ನ್ಯಾಯವೆಂದು ತೋರಿದ ಒಂದು ಶಿಕ್ಷೆಯನ್ನು ಅವರು ಸ್ವಯಂ ವಿಧಿಸಿಕೊಳ್ಳುತ್ತಿದ್ದರು ಮತ್ತು ಅದನ್ನು ಪೂರೈಸುತ್ತಿದ್ದರು. ಈ ದೇಶದ ಜನರ ಮೌಲ್ಯಗಳು ಹಾಗಿದ್ದವು. ಈ ರೀತಿಯ ಮನೋಭಾವವನ್ನು ನಾವು ಮತ್ತೊಮ್ಮೆ ಜೀವಿತಗೊಳಿಸಬೇಕಾಗಿದೆ. ವಿಶೇಷವಾಗಿ ನಮ್ಮ ದೇಶದ ರಾಜಕಾರಣಿಗಳು ಇದನ್ನು ಅನುಸರಿಸಬೇಕಾಗಿದೆ. ದೇಶದಲ್ಲಿರುವ ಎಲ್ಲಾ ರಾಜಕಾರಣಿಗಳು, ಅವರು ಯಾವುದೇ ಪಕ್ಷಕ್ಕಾದರೂ ಸೇರಿರಲಿ, ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಂಡು ಅವುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅದಕ್ಕಾಗಿ ಪರಿಹಾರಗಳನ್ನು ಮಾಡಿಕೊಳ್ಳಲು ತಾವು ಸಿದ್ಧರಿರುವುದಾಗಿ ತೋರಿಸಬೇಕು. ಅವರಿದನ್ನು ಮಾಡಿದರೆ, ಇದಕ್ಕಾಗಿ ದೇಶದ ಜನರು ಅವರನ್ನು ಗೌರವಿಸುವರು. ಅಧಿಕಾರದ ಸ್ಥಾನದಲ್ಲಿರುವುದನ್ನು ಮುಂದುವರಿಸುವುದಕ್ಕಾಗಿ ಅವರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಬಾರದು.

ಈ ದಿನಗಳಲ್ಲಿ, ಎಲ್ಲಾ ರಾಜಕೀಯ ಪಕ್ಷಗಳು ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡುತ್ತವೆ. ಇದನ್ನು ನಿಲ್ಲಿಸಬೇಕು. ಅಪರಾಧಿಗಳಿಗೆ ಚುನಾವಣೆಯ ಟಿಕೆಟುಗಳನ್ನು ಕೊಡಬೇಡಿ.

ನೀವು ಹೇಳಬಹುದು, "ಗುರುದೇವ, ನಿಮ್ಮ ಒಂದೇ ಕೆಲಸವೆಂದರೆ ಧ್ಯಾನ ಕಲಿಸುವುದು. ಮತ್ತೆ ಯಾಕೆ ನೀವು ಈಗ ಈ ಎಲ್ಲಾ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವಿರಿ? ನೀವು ರಾಜಕೀಯದ ಬಗ್ಗೆ ಯಾಕೆ ಮಾತನಾಡುತ್ತಿರುವಿರಿ?"

ನಾವು ಮಾತನಾಡುತ್ತಿರುವುದು ರಾಜನೀತಿಯ ಬಗ್ಗೆಯಲ್ಲ; ಇದು ರಾಷ್ಟ್ರನೀತಿ (ದೇಶದ ಅಭಿವೃದ್ಧಿಗಾಗಿರುವ ತಂತ್ರ). ಇದು ಮಾನವ ನೀತಿ (ಮಾನವ ಕುಲಕ್ಕಾಗಿ ನ್ಯಾಯ).

ನಾನು ರಾಜನೀತಿಯಿಂದ ದೂರವಿರುತ್ತೇನೆ. ಆದರೆ, ಜನರ ನೋವಿಗೆ ಮತ್ತು ದೇಶದ ಜನರಿಗೆ ಕಳಕಳಿಯಿರುವ ಪ್ರತಿಯೊಂದು ವಿಷಯಕ್ಕಾಗಿ ನಾನು ಎದ್ದು ನಿಲ್ಲುವೆನು. ನನ್ನ ಪ್ರತಿ ಕಣವೂ ಈ ದೇಶಕ್ಕಾಗಿ ಕೆಲಸ ಮಾಡಲು ಸಿದ್ಧವಿದೆ. ಈ ದೇಶಕ್ಕಾಗಿ ಒಂದು ಸುಂದರವಾದ ಕನಸನ್ನು ಹೊಂದಿದವರಲ್ಲಿ ನಾನು ಒಬ್ಬನಾಗಿದ್ದೇನೆ.

ಕೆಲವು ಜನರು ಹೇಳಬಹುದು, "ಓ ಹೌದು, ಇದೆಲ್ಲವೂ ಕೇಳಲು ಚೆನ್ನಾಗಿದೆ. ಆದರೆ ಇದೆಲ್ಲವೂ ಕೆಲವು ದಿನಗಳ ವರೆಗೆ ಇರುವುದು ಮತ್ತು ನಂತರ ಮಾಯವಾಗುವುದು. ಇದೆಲ್ಲದರ ಪ್ರಯೋಜನವೇನು?"

ಎಲ್ಲಾ ಕಡೆಗಳಲ್ಲಿ ಹತಾಶೆಗೆ ಕಾರಣವಾಗಿರುವುದು ಈ ರೀತಿಯ ಯೋಚನೆಯೇ. ಎಲ್ಲೆಡೆಯೂ ನಾವು ಒಂದೋ ಕ್ರೋಧವನ್ನು ಅಥವಾ ನಿರಾಶೆಯನ್ನು ನೋಡುತ್ತೇವೆ. ಒಂದು ಕೊನೆಯಲ್ಲಿ ಕ್ರೋಧ ಮತ್ತು ಇನ್ನೊಂದು ಕೊನೆಯಲ್ಲಿ ನಿರಾಶೆ. ಒಂದು ಸುಂದರ ಭಾರತದ ನಮ್ಮ ಕನಸನ್ನು ಈಡೇರಿಸಲು ನಾವು ಇವುಗಳೆರಡನ್ನು ದಾಟಿಹೋಗಬೇಕು. ನಾವು ಈ ದಿಕ್ಕಿನಲ್ಲಿ ಮುಂದೆ ಸಾಗಬೇಕು.

ಇಲ್ಲಿರುವ ಗೌರವಾನ್ವಿತ ಭಾಷಣಕಾರರಲ್ಲಿ ಒಬ್ಬರಾಗಿರುವ ಶ್ರೀ ವಾಯುದ್ದೀನ್ ಅವರು, ಈ ರಾಷ್ಟ್ರದ ಚಾರಿತ್ರ್ಯವನ್ನು ನಿರ್ಮಿಸುವತ್ತ ನಾವು ಕೆಲಸ ಮಾಡಬೇಕಾಗಿದೆಯೆಂದು ಉಲ್ಲೇಖಿಸಿದರು. ಇದಕ್ಕಾಗಿ, ದೇಶದಲ್ಲಿ ಹೊಣೆಗಾರಿಕೆಯ ಸ್ಥಾನಗಳನ್ನು ಹಿಡಿದಿಡಲು ನಮಗೆ ಉತ್ತಮ ಚಾರಿತ್ರ್ಯದ ಜನರ ಅಗತ್ಯವಿದೆ. ಈಗ, ಎಲ್ಲೋ ಕುಳಿತಿದ್ದು ದೇಶವನ್ನು ನಿರ್ವಹಿಸಲು ಪ್ರಯತ್ನಿಸುವ ಕೇವಲ ಒಬ್ಬ ವ್ಯಕ್ತಿಯಿಂದ ಇದಾಗಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ದೇಶದ ಚಾರಿತ್ರ್ಯ ನಿರ್ಮಾಣದ ಕಡೆಗೆ ಹೆಚ್ಚು ಅರಿವುಳ್ಳವರಾಗಬೇಕು.

ಪ್ರತಿಯೊಂದು ಪ್ರದೇಶದಲ್ಲಿ ಜನರು ಒಂದಾಗಬೇಕು ಮತ್ತು ಕಳ್ಳತನಗಳು ಹಾಗೂ ಹಿಂಸೆಗಳಿಂದ ಪ್ರದೇಶವನ್ನು ಸುರಕ್ಷಿತಗೊಳಿಸಬೇಕು. ಇದಕ್ಕಾಗಿ ಜನರು ಸಿದ್ಧರಿರಬೇಕು ಮತ್ತು ಕ್ರಮವನ್ನು ತೆಗೆದುಕೊಳ್ಳಬೇಕು. ಆಗ ಮಾತ್ರ ನಾವು ಏನನ್ನಾದರೂ ಸಾಧಿಸಿದಂತಾಗುವುದು. ಆಗ ಮಾತ್ರ ನಮ್ಮ ಸ್ವಯಂಸೇವೆಯು ಯಶಸ್ವಿಯಾಗುವುದು.

ಆದುದರಿಂದ ನಾನು ನಿಮ್ಮೆಲ್ಲರಲ್ಲೂ ಮತ್ತೊಮ್ಮೆ ಮನವಿ ಮಾಡುತ್ತೇನೆ. ನಾವೆಲ್ಲರೂ ಒಟ್ಟುಸೇರಿ ಭಾರತವನ್ನು ಒಂದು ಸುರಕ್ಷಿತ, ಸುಂದರ ಮತ್ತು ಸಾಕ್ಷರ ದೇಶವನ್ನಾಗಿ ಮಾಡಲು ಸಾಧ್ಯವಾಗಲು, ನಮ್ಮೊಂದಿಗೆ ಸೇರಿಕೊಂಡು ಸ್ವಯಂಸೇವೆ ಮಾಡುವಂತೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಇನ್ನೂ ಒಂದು ನೂರು ಜನರನ್ನು ಪ್ರೇರೇಪಿಸಿ. ೧೦೦% ಸಾಕ್ಷರತೆ ಇರಬೇಕು.
ಮಕ್ಕಳಿಗೆ ಕಲಿಸಲು ಕೊಳಗೇರಿಗಳಿಗೆ ಹೋದ, ಇವತ್ತು ಇಲ್ಲಿರುವ ಸ್ವಯಂಸೇವಕರನ್ನು ನಾನು ಪುನಃ ಅಭಿನಂದಿಸಲು ಬಯಸುತ್ತೇನೆ. ದೈಹಿಕ ದುಡಿಮೆ ಮಾಡುತ್ತಿದ್ದ ಮಕ್ಕಳನ್ನು ಅಲ್ಲಿಂದ ದೂರ ಒಯ್ದು ಶಿಕ್ಷಣವನ್ನು ನೀಡಲಾಯಿತು. ಇದೊಂದು ಸುಲಭದ ಕೆಲಸವಲ್ಲ, ಆದರೆ ಅವರಿದನ್ನು ಮಾಡಿದರು.

ಸಮಾಜಕ್ಕಾಗಿ ನಾವು ಸೇವೆಯಲ್ಲಿ ತೊಡಗುವಾಗ, ನಾವು ಹಲವು ಸಲ ಟೀಕೆಯನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಜನರು ತಪ್ಪುಗಳನ್ನು ಕಂಡುಹುಡುಕಲು, ನಿಮ್ಮ ಇಮೇಜನ್ನು(ಸ್ಥಾನಮಾನ) ಹಾಳುಮಾಡಲು ಮತ್ತು ನಿಮ್ಮನ್ನು ಅವರು ಹೇಗೆ ಪತನಗೊಳಿಸಬಹುದು ಎಂಬುದನ್ನು ನೋಡಲು ಕಾಯುತ್ತಿರುತ್ತಾರೆ. ಅವರದನ್ನು ಮಾಡಲಿ ಬಿಡಿ, ಅವರು ತಪ್ಪುಗಳನ್ನು ಕಂಡುಹುಡುಕಲಿ ಬಿಡಿ. ನಮ್ಮ ಹೃದಯವು ಸ್ವಚ್ಛವಾಗಿಯೂ ಶುದ್ಧವಾಗಿಯೂ ಇದೆ, ಆದುದರಿಂದ ನಾವು ನಮ್ಮ ಕೆಲಸ ಮಾಡುವುದನ್ನು ಮುಂದುವರಿಸುವೆವು ಮತ್ತು ಮುಂದೆ ಸಾಗುವೆವು. ಯಾರೆಲ್ಲಾ ಏನಾದರೂ ಹೇಳಲು ಬಯಸುವರೋ, ಅವರು ಹೇಳಲಿ ಬಿಡಿ. ನಾವು ಭಾರತಕ್ಕಾಗಿ ಎದ್ದು ನಿಂತಿದ್ದೇವೆ.

ಪರಮಾತ್ಮನು ಎಲ್ಲೋ ಮೇಲೆ ಸ್ವರ್ಗದಲ್ಲಿ ಇಲ್ಲ. ಅವನು ನಮ್ಮೆಲ್ಲರೊಳಗಿದ್ದಾನೆ. ಅವನು ಪ್ರತಿಯೊಂದು ಅಣುವಿನಲ್ಲೂ ಇದ್ದಾನೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು, ’ದೇಶದ ಸೇವೆಯೇ ದೇವರ ಸೇವೆ.’

ದೇವರ ಕಡೆಗಿರುವ ಮತ್ತು ದೇಶದ ಕಡೆಗಿರುವ ಭಕ್ತಿಯು ಒಂದೇ ನಾಣ್ಯದ ಎರಡು ಮುಖಗಳಾಗಿವೆ.

ದೇವರ ಕಡೆಗಿರುವ ಭಕ್ತಿ ಬೇರೆ ಮತ್ತು ದೇಶದ ಕಡೆಗಿರುವ ಭಕ್ತಿ ಬೇರೆ ಎಂದು ಯೋಚಿಸಬೇಡಿ. ನೀವು ದೇವರನ್ನು ಪ್ರೀತಿಸುವುದಾದರೆ, ಆಗ ನೀವು ಅವನ ಸೃಷ್ಟಿಯನ್ನು ಕೂಡಾ ಪ್ರೀತಿಸುವಿರಿ. ಪರಿಸರದ ಬಗ್ಗೆ ನಾವು ತಿಳಿದಿರುವುದು ಮುಖ್ಯವಾಗಿದೆ. ಆದುದರಿಂದ ಇವತ್ತು, ಪರಿಸರವನ್ನು ಸಂರಕ್ಷಿಸುವುದಕ್ಕಾಗಿ ನಾವು ಎದ್ದು ನಿಲ್ಲೋಣ. ಸ್ತ್ರೀಯರ ಸುರಕ್ಷತೆಗಾಗಿ ನಾವು ದೃಢವಾಗಿ ನಿಲ್ಲೋಣ. ನೀವೆಲ್ಲರೂ ಸಿದ್ಧರಿರುವಿರಾ?

ಇವತ್ತು ನಿಮಗೆಲ್ಲರಿಗೂ ಒಂಭತ್ತು ಅಂತಹ ಪ್ರತಿಜ್ಞೆಗಳನ್ನು ನೀಡಲಾಗುವುದು. ನೀವು ಸಿದ್ಧರಿರುವಿರಾ? ನಿಮ್ಮಲ್ಲಿ ಎಷ್ಟು ಮಂದಿ ಸಿದ್ಧರಿರುವಿರಿ? ನಿಮ್ಮ ಕೈಗಳನ್ನು ಮೇಲೆತ್ತಿ. (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)

ಇವತ್ತು ಅತ್ಯಂತ ಅಗತ್ಯವಾಗಿರುವುದೇನೆಂದರೆ ಬದಲಾವಣೆ; ನಮ್ಮ ಮನಸ್ಸಿನಲ್ಲಿ ಬದಲಾವಣೆ, ನಮ್ಮ ವರ್ತನೆಯಲ್ಲಿ ಬದಲಾವಣೆ ಮತ್ತು ಸಮಾಜದಲ್ಲಿ ಬದಲಾವಣೆ. ಇದು ಬಹಳ ಮುಖ್ಯವಾದುದು.

ಒಬ್ಬರ ಕಡೆಗೆ ಬೆರಳು ಮಾಡಿ, ಇಂತಿಂತ ವ್ಯಕ್ತಿ ತಪ್ಪು ಮಾಡಿರುವನೆಂದು ಹೇಳುವುದು ಬಹಳ ಸುಲಭ. ನಾವು ಮರೆತುಬಿಡುವುದೇನೆಂದರೆ, ಇತರ ಮೂರು ಬೆರಳುಗಳು ತಿರುಗಿ ನಮ್ಮ ಕಡೆಗೆ ಮುಖಮಾಡುತ್ತಿರುತ್ತವೆ. ಒಂದು ಶುದ್ಧವಾದ ಮನಸ್ಸು ಮತ್ತು ಹೃದಯದೊಂದಿಗೆ ನಾವು ಯಾವುದಾದರೂ ಕೆಲಸವನ್ನು ಪ್ರಾರಂಭಿಸಿದರೆ, ಪ್ರಕೃತಿ ಕೂಡಾ ಅದನ್ನು ಹೇಗೆ ಬೆಂಬಲಿಸುವುದು ಎಂಬುದನ್ನು ಸುಮ್ಮನೆ ನೋಡಿ.

ಎರಡು ದಿನಗಳ ಮೊದಲು, ಈ ಕಾರ್ಯಕ್ರಮದ ಸಂಘಟಕರು ನನ್ನ ಬಳಿಗೆ ಬಂದು, ಮುಂಬರುವ ದಿನಗಳಲ್ಲಿ ಒಂದು ಆಲಿಕಲ್ಲು ಚಂಡಮಾರುತ ಮತ್ತು ಭಾರೀ ಮಳೆಯಾಗುವುದೆಂದು ಹವಾಮಾನ ಮುನ್ಸೂಚನೆ ಹೇಳುತ್ತದೆಯೆಂದು ಹೇಳಿದರು. ಇವತ್ತಿಗೂ ಕೂಡಾ ಮುನ್ಸೂಚನೆ ಅದೇ ಆಗಿತ್ತು. ಹೀಗಾಗಿ ಅವರಂದರು, "ಗುರುದೇವ, ದಯವಿಟ್ಟು ಏನಾದರೂ ಮಾಡಿ".

ನಾನು ಅವರಿಗಂದೆ, "ಯಾವಾಗಲೆಲ್ಲಾ ನಾವು ಯಾವುದೇ ಹೆಜ್ಜೆಯನ್ನು ನಿಸ್ವಾರ್ಥವಾಗಿ ಮತ್ತು ಒಂದು ಶುದ್ಧವಾದ ಹೃದಯದೊಂದಿಗೆ ತೆಗೆದುಕೊಳ್ಳುವೆವೋ, ಪ್ರಕೃತಿಯು ಅದನ್ನು ಬೆಂಬಲಿಸುವುದು." ನಮ್ಮಲ್ಲಿರುವ ಒಂದೇ ಒಂದು ವಿಷಯವೆಂದರೆ, ಒಂದು ಶುದ್ಧವಾದ ಹೃದಯ. ಹಾಗಾಗಿ, ಏನೂ ಆಗದೆಂದು ನಾನು ಸಂಘಟಕರಿಗೆ ಹೇಳಿದೆ. ಮತ್ತು ನೋಡಿ, ಎಲ್ಲರೂ ಈಗ ಬಹಳ ಆರಾಮವಾಗಿ ಕುಳಿತಿದ್ದಾರೆ.

ದೇಶವು ಈಗಲೂ ಜಾತಿ ಮತ್ತು ಧರ್ಮಗಳಿಂದ ವಿಭಾಗಿಸಲ್ಪಟ್ಟಿದೆ ಮತ್ತು ಸತ್ಯದಿಂದ ಸಂಪರ್ಕ ಕಳೆದುಕೊಂಡಿದೆ. ಹಿಂಸಾತ್ಮಕ ಕ್ರಿಯೆಗಳನ್ನು ಮಾಡಿಕೊಂಡು ಸಾಯಲು ಹಲವರು ಸಿದ್ಧರಿದ್ದಾರೆ. ದೇಶವನ್ನು, ಜನರನ್ನು ಇದೆಲ್ಲದರಿಂದ ನಾವು ದೂರ ಕೊಂಡೊಯ್ಯಬೇಕಾಗಿದೆ.

ಮಹಾತ್ಮಾ ಗಾಂಧಿಯವರ ಕಾಲದಲ್ಲಿ, ಅಹಿಂಸೆಯೊಂದಿಗೆ ಮಹಾನ್ ಹೆಮ್ಮೆಯು ಜೋಡಿಕೊಂಡಿತ್ತು. ಆದರೆ ಇವತ್ತು, ಹೆಮ್ಮೆಯು ಹಿಂಸೆಯೊಂದಿಗೆ ಸಂಬಂಧ ಹೊಂದಿದೆ. ಇವತ್ತು ಆಕ್ರಮಣಶೀಲತೆಯು ಹೆಮ್ಮೆಯೊಂದಿಗೆ ತನ್ನನ್ನು ತಾನು ಸೇರಿಸಿಕೊಂಡಿದೆ. ಒಬ್ಬರು ಬಹಳ ಆಕ್ರಮಣಶೀಲರಾಗಿರುವಾಗ, ಅವನು ಒಬ್ಬ ನಾಯಕನೆಂದು ಪರಿಗಣಿಸಲ್ಪಡುತ್ತಾನೆ. ಆದರ್ಶ ವ್ಯಕ್ತಿಗಳು ಬಹಳ ಆಕ್ರಮಣಶೀಲರಾಗಿರಬೇಕೆಂದು ಮತ್ತು ಆಗ ಅವರು ಒಳ್ಳೆಯವರು ನಿರೀಕ್ಷಿಸಲಾಗುತ್ತದೆ. ಇಲ್ಲ, ನಾವಿದನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಅಹಿಂಸೆಯು ನಮ್ಮ ಜೀವನರೇಖೆಯಾಗಿರಬೇಕು.

ನಾವು ಅಹಿಂಸೆಯ ಪಥವನ್ನು ತುಳಿಯುತ್ತೇವೆ, ಹಾಗಿದ್ದರೂ ನಾವು ಬಹಳ ದೃಢವಾಗಿದ್ದೇವೆ, ನಾವು ಬಹಳ ಬಲಶಾಲಿಗಳಾಗಿದ್ದೇವೆ ಮತ್ತು ನಮ್ಮ ಉದ್ದೇಶವು ಫಲದಾಯಕವಾಗುವುದನ್ನು ನಾವು ಕಾಣುವೆವು. ಹಾಗಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಅಭಿನಂದಿಸುತ್ತೇನೆ; ದೂರ ದೂರದ ಸ್ಥಳಗಳಿಂದ ಬಂದಿರುವವರು, ಹಾಗೆಯೇ ದಿಲ್ಲಿಯ ಎಲ್ಲಾ ಭಾಗಗಳಿಂದ ಬಂದಿರುವವರು ಮತ್ತು ಭಾರತದ ವಿವಿಧ ಭಾಗಗಳಿಂದ ಇದನ್ನು ವೀಕ್ಷಿಸುತ್ತಿದ್ದ ನಿಮ್ಮೆಲ್ಲರಿಗೂ. ಇದು ಕೇವಲ ಆರಂಭವಷ್ಟೇ. ನಾವು ಒಂದಾಗಿ ಕೆಲಸ ಮಾಡೋಣ ಮತ್ತು ದೇಶಕ್ಕಾಗಿ ಪ್ರತಿದಿನವೂ ಒಂದು ಗಂಟೆಯನ್ನು ನೀಡೋಣ. ದೇವರು ನಿಮಗೆಲ್ಲರಿಗೂ ಸದ್ಬುದ್ಧಿಯನ್ನು ಕೊಟ್ಟು ಆಶೀರ್ವದಿಸಲಿ. ಅವನು ಈಗಾಗಲೇ ಮಾಡಿದ್ದಾನೆ, ಆದರೆ ಯಾರಿಗೆ ಇದು ತಿಳಿದಿಲ್ಲವೋ, ಅವರು ಇದನ್ನು ಅರಿತುಕೊಳ್ಳಲೆಂದು ನಾನು ಪ್ರಾರ್ಥಿಸುತ್ತೇನೆ. ಇದರೊಂದಿಗೆ, ನಾನು ನನ್ನ ಮಾತನ್ನು ಇಲ್ಲಿಗೆ ಮುಕ್ತಾಯಗೊಳಿಸುತ್ತೇನೆ.